ಹೃದಯಶಿವ ಅಂಕಣ

ನಾನು,ಗುರಿ ಮತ್ತು ಅಶ್ವಿನಿ ಸ್ಟುಡಿಯೋ: ಹೃದಯಶಿವ ಅಂಕಣ

ಆಗಿನ್ನೂ  ನಾನು  ಅವಕಾಶಗಳ  ಹುಡುಕಾಟದಲ್ಲಿದ್ದೆ. ಗುರುಕಿರಣ್  ಬೆನ್ನು ಬಿದ್ದಿದ್ದೆ. ಅಶ್ವಿನಿಸ್ಟುಡಿಯೋ  ಮುಂದೆ  ಕೆ.ಎ.19ರಿಂದ  ಶುರುವಾಗುವ  ನಂಬರ್  ಪ್ಲೇಟುಳ್ಳ, ಹಿಂಬದಿಯ  ಗ್ಲಾಸಿನ  ಮೇಲೆ  ಕಂಟ್ರಿಕ್ಲಬ್ಬಿನ  ಸ್ಟಿಕ್ಕರುಳ್ಳ  ಒಂದು  ಸ್ಯಾಂಟ್ರೋ ಕಾರು  ಅಲ್ಲಿ  ನಿಂತಿತ್ತು  ಅಂದ್ರೆ  ಗುರುಕಿರಣ್ ಸ್ಟುಡಿಯೋ  ಒಳಗಡೆ  ಇದ್ದಾರೆ  ಅಂತ ಅರ್ಥ. ಅವರು  ಹೊರಗೆ  ಬರುವವರೆಗೂ  ನಾನು  ಕಾಯಬೇಕು. ಎಷ್ಟು  ಹೊತ್ತಿಗೆ  ಬರುತ್ತಾರೋ  ಯಾರಿಗೆ ಗೊತ್ತು?  ಒಂದು  ವೇಳೆ  ಕೆಲಸದ  ಗುಂಗಿನಲ್ಲಿ  ಬರದೇ  ಅಲ್ಲೇ ಉಳಿದುಬಿಟ್ಟರೆ  ಏನು ಗತಿ? 

ನನ್ನ  ಬಾಡಿಗೆಮನೆ  ಇರೋದು  ಬನ್ನೇರುಘಟ್ಟ ರೋಡಿನ  ತುದಿಯಲ್ಲಿ. ತಡವಾದರೂ  ಹೇಗೋ  ಮೆಜೆಸ್ಟಿಕ್ಕು  ಸೇರಬಹುದು. ಅಲ್ಲಿಂದಾಚೆಗೆ  ಏನು ಮಾಡೋದು?  ರಾತ್ರಿ  ಹತ್ತೂವರೆಯ  ನಂತರ  ಆ ರೂಟಿಗೆ ಹೆಚ್ಚಾಗಿ ಬಸ್ಸುಗಳಿಲ್ಲ. ಬಿಲವಾರದಹಳ್ಳಿ ಬಸ್ಸು  ಬಂದರೆ ಬಂತು, ಬರದಿದ್ರೆ ಇಲ್ಲ.   ಎಷ್ಟೋ ಸಲ  ಹೊಸೂರು ರೋಡಿನ  ಕಡೆ  ಹೋಗುವ  ಬಸ್ಸುಗಳನ್ನು ಹತ್ತಿ  ಡೈರಿ ಸರ್ಕಲ್ಲಿನವರೆಗೂ  ಹೋಗಿ, ಅಲ್ಲಿಂದ  ಮಧ್ಯರಾತ್ರಿ  ನಡೆದುಕೊಂಡೇ ಮನೆಗೆ ಹೋಗಿದ್ದುಂಟು. ಆ ಮೀನಾಕ್ಷಿ ದೇವಸ್ಥಾನಕ್ಕೂ ಸ್ವಲ್ಪ ಹಿಂದೆ ನಾಯಿಗಳ ಕಾಟ ಬೇರೆ. ಒಂದು ಸಲವಂತೂ ನಾಲ್ಕೈದು ನಾಯಿಗಳು ತಮ್ಮ ಮುಂಗಾಲುಗಳನ್ನೆತ್ತಿ ಏಕ್ದಂ ನನ್ನ ಎದೆಯಮೇಲೆ ಇಟ್ಟುಕೊಂಡು ನಿಂತಿದ್ದವು. ಅವುಗಳ ನಾಲಿಗೆ ಹೆಚ್ಚೂ ಕಮ್ಮಿ ನನ್ನ ಮೂಗಿಗೋ, ಬಾಯಿಗೋ ತಾಗುವಂತಿತ್ತು. ಪುಣ್ಯಕ್ಕೆ ಭರ್ರನೆ ಹಾದುಹೋದ ಯಾವುದೋ ಕಾರಿನ ಸದ್ದಿಗೆ ಬೆಚ್ಚಿದ ನಾಯಿಗಳು ಓಟ ಕಿತ್ತಿದ್ದವು.ನನ್ನ ಹೊಕ್ಕಳ ಸುತ್ತ ಇಂಜೆಕ್ಷನ್ನು ಬೀಳುವುದು ತಪ್ಪಿಹೋಯಿತು. 

ಚಂದ್ರಾಲೇಔಟ್ ನಲ್ಲಿರುವ ನೆಂಟ ಶಿವಮರಿಗೌಡನ ಮನೆಗೆ ಎಷ್ಟು ಸಲ ಹೋಗೋದು?  ಹೋದಹೋದಾಗೆಲ್ಲ ಬೇಜಾರು ಮಾಡಿಕೊಳ್ಳದೆ ಹೊತ್ತೂ ಗೊತ್ತು ನೋಡದೆ ನಿದ್ದೆಗಣ್ಣಿನಲ್ಲೆ ಮುದ್ದೆ ಮಾಡಿಕೊಟ್ಟಿದ್ದಾನೆ. ಮಂದಲಿಗೆ ಹಾಸಿ, ದಿಂಬು ಹಾಕಿ, ಅದರ ಮೇಲೊಂದು ವಲ್ಲಿಬಟ್ಟೆ ಹೊದಿಸಿ, ತಾನು ಹೊದ್ದುಕೊಂಡಿದ್ದ ರಗ್ಗನ್ನು ನನಗೆ ಕೊಟ್ಟು "ನನಗೆ ಸೆಕೆ… ನೀನೆ ಒದ್ಕೋ ಶಿವಪ್ಪ" ಅನ್ನುವ ಮೂಲಕ ಕರುಳು ಹಿಂಡಿ,ರೆಪ್ಪೆ ತೇವಗೊಳಿಸಿದ್ದಾನೆ. ಸಿನಿಮಾ ಆಸೆಗೆ ಬಿದ್ದು ಇದ್ದೊಂದು ಕೆಲಸ ಬಿಟ್ಟು ಬಂದ ನಾನು ಒಮ್ಮೊಮ್ಮೆ ಬಸ್ ಚಾರ್ಜಿಗೂ ಕಾಸಿಲ್ಲದೇ ಪರದಾಡುವಾಗ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಕೇಳುವ ಮೊದಲೇ ಅನೇಕ ಸಲ ಐವತ್ತು,ನೂರು ಕೊಟ್ಟು ಪುಣ್ಯ ಕಟ್ಟಿಕೊಂಡಿರೋ ಈ ವ್ಯಕ್ತಿಗೆ ಪದೇ ಪದೇ ತೊಂದರೆ ಕೊಡುವುದು ಸರಿಯಲ್ಲ. ಮಾಗಡಿರೋಡಿನಲ್ಲಿರೋ ಸಣ್ಣ ವಹಿವಾಟಿನ  ಕೋ-ಆಪರೇಟಿವ್ ಸೊಸೈಟಿಯಲ್ಲಿ ತೀರಾ ಕಡಿಮೆ ಸಂಬಳಕ್ಕೆ ಕೆಲಸ ಮಾಡುವಾತ. ಸಂಜೆ ತನ್ನ ಸೈಕಲ್ಲು ಹತ್ತಿ ಮೂಡಲಪಾಳ್ಯ, ತಿಮ್ಮೇನಹಳ್ಳಿ, ಚಂದ್ರಾ ಲೇಔಟ್ , ನಾಗರಬಾವಿ, ವಿಜಯನಗರದ ಸುತ್ತ ಮುತ್ತ ಪಿಗ್ಮಿ ಕಲೆಕ್ಷನ್ನು ಮಾಡಿದರೆ ಮಾತ್ರ ಒಂದಿಷ್ಟು ಎಕ್ಸ್ಟ್ರಾದುಡ್ಡು ಸಿಗೋದು. ಬದುಕು ಸಾಗೋದು.ಇಂಥ ಜೀವಿಗೆ ಉಪದ್ರವ  ಕೊಟ್ಟರೆ ಎಷ್ಟು ಸರಿ? 

ಅಂಥ ಕರಾಳ ರಾತ್ರಿಯಲ್ಲಿ ಮತ್ತೆಲ್ಲಿಗೆ ಹೋಗಲು ಸಾಧ್ಯ? ಕೆಲವು ಸಾರಿ ಸೀದಾ ಮೆಜೆಸ್ಟಿಕ್ಕಿಗೆ ಹೋಗಿ ಬಸ್ ಸ್ಟ್ಯಾಂಡಿನಲ್ಲಿ ಕೂತು, ನಿಂತು, ತೂಕಡಿಸಿ ಬೆಳಕು ಹರಿದ ಮೇಲೆ ಮನೆಗೆ ಹೋಗಿದ್ದೂ ಉಂಟು. ಕೆಎಸ್ಸಾರ್ಟಿಸಿ ಬಸ್ ಸ್ಟಾಂಡಿನ ಯಾವುದೋ ಒಂದು ಫ್ಲಾಟ್ಪಾರಮ್ಮಿನಲ್ಲಿ ಕೂರೋದು. ಯಾವುದೋ ಬಸ್ಸನು ಕಾಯುತ್ತಿರುವಂತೆ ನಟಿಸೋದು. ಆಗಾಗ ಎದ್ದು ಹೋಗಿ ಆ ಕಡೆ ಮುಖ ಮಾಡಿ ನಿಂತಿರುವ ಬಸ್ಸುಗಳ ಬೋರ್ಡುಗಳನ್ನು ನೋಡೋದು. ನಾನು ಎಲ್ಲಿಗೋ ಹೋಗಬೇಕಾಗಿಯೂ, ಆ ಬಸ್ಸು ಇನ್ನೂ ಬಂದಿಲ್ಲವೆಂದು ಖಚಿತಪಡಿಸಿಕೊಂಡಂತೆಯೂ ಮತ್ತೆ ಬಂದು ಒಂದು ಕಡೆ ಕೂತುಬಿಡೋದು. ಯಾರಾದರು ನನ್ನನ್ನು ಅನುಮಾನಾಸ್ಪದವಾಗಿ ನೋಡುತ್ತಿದ್ದಾರೆ ಅಂತ ನನಗೇ ಡೌಟು ಬಂದರೆ ಅವರನ್ನೇ ಹೋಗಿ ಟೈಮು ಕೇಳೋದು. "ಹಗರಿ ಬೊಮ್ಮನಹಳ್ಳಿಗೆ ಒಂಭತ್ತೋ, ಒಂಭತ್ತೂವರೆಗೂ ಇರೋ ಬಸ್ಸು ಬಿಟ್ಟರೆ ಆಮೇಲೆ ಬಸ್ಸೇ ಇಲ್ಲ ನೋಡಿ"  ಅಂತ ಏನನ್ನೂ ಒದರೋದು. ಆತ, ಟೈಮ್ ಪಾಸಿಗೆ ಧರ್ಮಸ್ಥಳಕ್ಕೆ ಹೋಗಿ ಬರೋಣ ಅಂತ ಮನೆಯಿಂದ ಹೊರಟವನು ಮೆಜೆಸ್ಟಿಕ್ಕಿಗೆ ಬರುವಷ್ಟರಲ್ಲಿ ಮೂಡು ಚೇಂಜಾಗಿ ಮಂತ್ರಾಲಯಕ್ಕೆ ಹೋಗಬೇಕಾಗಿ ನಿರ್ಧರಿಸಿರುವುದಾಗಿ ಹೇಳೋದು! ಅಲ್ಲಿಗೆ ಆತ ನನ್ನನ್ನು ಡೌಟಿನಿಂದ ನೋಡ್ತಾ ಇಲ್ಲ ಅಂತ ಗ್ಯಾರಂಟಿಪಡಿಸಿಕೊಂಡು ಅಲ್ಲಿಂದ ಹೊರಟು ರೈಲ್ವೆ ಸ್ಟೇಷನ್ನಿನ ಕಡೆ ಬರೋದು. 

ಕೆಂಪೇಗೌಡ ಬಸ್ ಸ್ಟ್ಯಾಂಡಿಗೂ ರೈಲ್ವೆ ಸ್ಟೇಶನ್ನಿಗೂ ನಡುವೆ ಇರುವ ರೋಡ್ ಡಿವೈಡರಿನ ಕಂಬಿಗಳನ್ನು ದಾಟಿ ಹೋಗೋದೇ ಒಂಥರಾ ಮಜವಾಗಿತ್ತು. ಅಲ್ಲೊಂದಿಷ್ಟು ಸುತ್ತಾಟ. ಎಲ್ಲೆಲ್ಲಿಗೆ, ಎಷ್ಟು ಹೊತ್ತಿಗೆ ರೈಲುಗಳು ಹೋಗುತ್ತವೆಂಬ ವೇಳಾಪಟ್ಟಿಯನ್ನು ನೋಡಿಕೊಂಡು ಸ್ವಲ್ಪ ಹೊತ್ತು ನಿಲ್ಲೋದು. ಸುಮ್ಮನೆ, ಓದಿ ಹೋಗಿ " ಡೆಲ್ಲಿಗೆ ಎಷ್ಟು ಗಂಟೆಗೆ ರೈಲಿದೆ? ವಾಪಸ್ ಬರೋಕೂ ರಿಟರ್ನ್ ಟಿಕೇಟು ಸಿಗುತ್ತಾ?  ಅಂತ ಒಂದಕ್ಕೊಂದು ಸಂಬಂಧವಿಲ್ಲದ ಪ್ರಶ್ನೆಗಳನ್ನು ವಿಚಾರಣಾ ಕೌಂಟರಿನಲ್ಲಿ ಕೇಳೋದು. ಅವರು ಏನನ್ನೋ ಹೇಳೋದು. ಒಂದು ಸಲ ಹೀಗೇ ತಮಾಷೆಗೆ ಕೇಳಲು ಹೋಗಿ ಬಾಂಬೆಗೆ ಹೋಗುವ ರೈಲು ಹತ್ತಿಬಿಟ್ಟಿದ್ದೆ. ಕುರ್ಲಾದ ಸ್ಲಮ್ಮು ನೋಡಿ  "ಇದೇನು ಬಾಂಬೆ ಶ್ರೀರಾಂಪುರ ಇದ್ದಂಗಿದೆ?"  ಅಂದುಕೊಂಡು ಅಲ್ಲೆಲ್ಲೆಲ್ಲೋ ಸುತ್ತಾಡಿ ಕೊನೆಗೆ ವಾಪಾಸ್ ಬೆಂಗಳೂರಿಗೆ ಬರುವಾಗ ಎಲ್ಲೋ ಒಂದು ಕಡೆ ಸಿಕ್ಕಿಹಾಕೊಂಡು "ಮಲಗಿದ್ದಾಗ ಯಾರೋ ಬ್ಯಾಗು ಕದ್ದುಬಿಟ್ಟಿದ್ದಾರೆ. ಮಲಗುವ ಮುನ್ನ ತಲೆ ಕೆಳಗೆ ಇಟ್ಟುಕೊಂಡಿದ್ದೆ. ನೀವು ಎಬ್ಬಿಸಿದ ಮೇಲಷ್ಟೇ ಗೊತ್ತಾಗಿದ್ದು ಕಳೆದು ಹೋಗಿದೆ ಅಂತ. ನಾಲ್ಕು ಜೊತೆ ಬಟ್ಟೆ, ಒಂದು ಟೂತ್ ಬ್ರಶ್, ಒಂದು ಮೆಡಿಮಿಕ್ಸ್ ಸೋಪು, ಒಂದು ಕೆಂಪು ಟವೆಲ್ಲು, ಒಂದು ಬಿಳಿಪಂಚೆ, ಒಂದು ವಿಭೂತಿ ಗಟ್ಟಿ ಒಂದು ಶಾಲು, ಒಂದೆರಡು ಒಳಉಡುಪುಗಳು, ಮೂರು ಕಿತ್ತಳೆ ಹಣ್ಣು, ಒಂದು ನೀರಿನ ಬಾಟಲು, ಗಾಂಧೀಜಿ ಜೀವನಚರಿತ್ರೆ ಸೇರಿದಂತೆ ಅನೇಕ ವಸ್ತುಗಳು ಅದರಲ್ಲಿದ್ದವು. ಟಿಕೇಟೂ ಕೂಡ ಅದರಲ್ಲೇ ಇತ್ತು ಸಾಬ್ ! ಜನರಲ್ ಬೋಗಿಯಲ್ಲಿ ಓಡಾಡುವ ನನ್ನಂಥವರಿಗೆ ಭದ್ರತೆಯ ಕೊರತೆ ಎದ್ದು ಕಾಣುತ್ತಿದೆ. ಇದರ ಕುರಿತು ಸಂಬಂಧಪಟ್ಟವರಿಗೆ ತಿಳಿಸಿ ಉಪಕಾರ ಕಟ್ಟಿಕೊಳ್ಳಿ" ಅಂದುಬಿಟ್ಟಿದ್ದೆ. ನನ್ನ ಮಾತಿಗೆ ದನಿಗೂಡಿಸುವಂತೆ ಒಬ್ಬ ಬೊಚ್ಚುಬಾಯಿಯ ತಾತ, " ಯಾರೋ ಪಾಪಿಗಳು ನನ್ನ ಕನ್ನಡಕಾನು ಬಿಟ್ಟಿಲ್ಲ ಸಾಬ್ " ಅಂತ ಹಿಂದಿಯಲ್ಲಿ ಹೇಳಿದ. ಇದನ್ನೆಲ್ಲಾ ಗಮನಿಸುತ್ತಿದ್ದಂಥ ಒಂದು ಮುಸ್ಲಿಂ ಹೆಂಗಸು ನಿದ್ದೆ ಹೋಗಿದ್ದ ತನ್ನ ಪುಟ್ಟ ಮಗುವನ್ನು ರಪ್ಪನೆ ಅಪ್ಪಿಕೊಂಡು ಗಾಬರಿಯಿಂದ ಕಣ್ಣು ಬಿಟ್ಟಿತು. ಟಿಕೇಟು ಚೆಕ್ಕು ಮಾಡುವ ವ್ಯಕ್ತಿ ನನ್ನನ್ನೇ ದುರುಗುಟ್ಟಿ ನೋಡುತ್ತಿದ್ದವನು ಅದೇಕೋ ಮುಂದಕ್ಕೆ ಹೊರಟು ಹೋದ. ನಿಜಕ್ಕೂ ನನ್ನ ಬಳಿ ಬ್ಯಾಗಿರಲಿಲ್ಲ. ಟಿಕೆಟ್ಟು ಇರಲೇ ಇಲ್ಲ. ಕಾಸಿಲ್ಲವೆಂಬ ನನ್ನ ಮನಸಿನ ಗಾಯಕ್ಕೆ, ನನ್ನ ದೇಶದಲ್ಲಿ ಓಡಾಡಲು ನಾನೇಕೆ ಟಿಕೆಟ್ಟು ತಗೋಬೇಕು ಅನ್ನುವ ಹುಂಬತನ  ಮುಲಾಮು ಸವರಿತ್ತು. 

ಹೀಗೆಲ್ಲಾ ಏಕಾಗುತ್ತದೆ?  ಒಂದು ವೇಳೆ ನಾನು ಸಿನಿಮಾಗೆ ಹಾಡು ಬರೆದಿಲ್ಲ ಅಂದರೆ ಏನು ಲಾಸಗುತ್ತೆ? ಸಿನಿಮಾಗೆ ಹಾಡು ಬರೆಯೋದೊಂದೇ ಮಹಾಸಾಧನೆಯಾ?  ಗುರುಕಿರಣ್ ಭೇಟಿಗಾಗಿ ಅಷ್ಟೆಲ್ಲ ಯಾಕೆ ಕಷ್ಟ ಪಡಬೇಕು?  ಮಧ್ಯರಾತ್ರಿಯವರೆಗೂ ಯಾಕೆ ಕಾಯಬೇಕು? ಬಂದು ಮೀಟು ಮಾಡುವಂತೆ ಹಿಂದಿನ ಸಲ ಹೇಳಿದ್ರಲ್ಲಾ, ಅದಕ್ಕಾಗಿ ಕಾಯಬೇಕಾ? ನನಗಿರಬಹುದಾದ ಸಮಯಪ್ರಜ್ಞೆಯನ್ನು ಅವರು ಪರೀಕ್ಷಿಸುವ ಸಲುವಾಗಿ ಸ್ಟುಡಿಯೋ ಒಳಗಿದ್ದುಕೊಂಡೇ ಕಾಯಿಸಿದ್ರಾ? ಸರಿ, ಒಂದು ಸಿನಿಮಾಗೆ ಹಾಡು ಬರೆಸಿದರು ಅಂತಿಟ್ಟುಕೊಳ್ಳಿ. ಏನು ಬಂತು?  ನನಗಿಂತ ಮುಂಚೆ ಯಾರೂ ಹಾಡು ಬರೆದಿಲ್ಲವಾ?  ಯಾರೋ ತುಳಿದ ಹಾದಿಯನ್ನೇ ತಾನೇ ನಾನೂ ತುಳಿಯುತ್ತಿರೋದು?  ಇಷ್ಟಕ್ಕೂ ಸಿನಿಮಾಗೆ ಬರೆದರೆ ಮಾತ್ರ ಸಾಧಿಸಿದಂತೆಯಾ? ಕುವೆಂಪು, ಬೇಂದ್ರೆ, ಅಡಿಗರು ಸಿನಿಮಾಗೆ ಬರೆದು ತಮ್ಮ ಪ್ರತಿಭೆ ತೋರಿಸಿದವರಾ? ಇಲ್ಲ. ಇಷ್ಟಾಗಿಯೂ ನಾನೇಕೆ ಹಾಡು ಬರೆಯಲು ಇಷ್ಟು ಪ್ರಯತ್ನ ಪಡಬೇಕು? ಸತತ ಮೂರ್ನಾಲ್ಕು ವರ್ಷಗಳ ಕಾಲ ಗುರುಕಿರಣ್ ಹಿಂದೆ ಅಲೆಯಬೇಕು? 

ಇದರ ಹಿಂದೆ ಒಂದು ಮಾನಸಿಕ ಸ್ಥಿತಿ ಇದೆ. ಇದು ಕೆಲವ ಚಿತ್ರಗೀತೆ ಬರೆಯುವುದಕ್ಕಷ್ಟೇ ಸೀಮಿತವಲ್ಲ. ಪ್ರತಿಯೊಂದು ಗುರಿಯ, ಪ್ರತಿಯೊಂದು ಪ್ರಯತ್ನದ ಹಿಂದೆ ಇದಕ್ಕೆ ಬೇರೆ ಬೇರೆ ತೆರನಾದ ವ್ಯಾಖ್ಯಾನಗಳು ಸಿಗುತ್ತವೆ. ಕೆಲವರಿಗೆ ಚಿಕ್ಕದೊಂದು ಪ್ರಾವಿಷನ್ ಸ್ಟೋರ್  ಇಡುವುದೇ ಗುರಿಯಾಗಿರುತ್ತದೆ. ಕೆಲವರಿಗೆ ಗಾಜುಗಳಿಂದ ಕೂಡಿದ ಸುಸಜ್ಜಿತ ಕಟಿಂಗು ಶಾಪು. ಕೆಲವರಿಗೆ ತಮ್ಮದೊಂದು ಪುಸ್ತಕ ಬಿಡುಗಡೆ ಮಾಡೋದು. ಕೆಲವರಿಗೆ ಸ್ವತಂತ್ರವಾಗಿ ಒಂದು ಸಿನಿಮಾ ನಿರ್ದೆಶಿಸೋದು. ಕೆಲವರಿಗೆ ಪುಟ್ಟದೊಂದು ಪಾತ್ರದಲ್ಲಿ ಪರದೆ ಮೇಲೆ ಕಾಣಿಸಿಕೊಳ್ಳೋದು. ಕೆಲವರಿಗೆ ಸಿನಿಮಾವೊಂದಕ್ಕೆ ಒಂದು ಹಾಡು ಹಾಡೋದು. ಇವುಗಳನ್ನೂ ಮೀರಿ ಸಾಧಿಸುವ ಅವಕಾಶಗಳಿದ್ದರೂ ಯಾಕೋ ಮನಸು ಮಾಡಲ್ಲ ಅಷ್ಟೇ. ಇಲ್ಲಿ ಯಾವುದೋ ಉತ್ಕೃಷ್ಟವಲ್ಲ.  ಯಾವುದೋ ಕನಿಷ್ಟವಲ್ಲ. ಅಮೆರಿಕಾದ ಕಂಪ್ಯೂಟರಿನೆದುರು ಕೂರುವ ಬದಲಾಗಿ ಬೆಂಗಳೂರಿನಲ್ಲೇ ಕುಳಿತು ಸಾಧಿಸಬಹುದು. ಪತ್ರಿಕೆಗಳಲ್ಲಿ ಪ್ರಕಟವಾದ ಮಾತ್ರಕ್ಕೆ ಬರಹಗಳ ತೂಕ ಹೆಚ್ಚಿಬಿಡಲ್ಲ. ಪುಸ್ತಕ ರೂಪದಲ್ಲಿ ಹೊರಬಂದ ಮಾತ್ರಕ್ಕೆ ಅವೆಲ್ಲವನ್ನೂ ಶ್ರೇಷ್ಠ ಸಾಹಿತ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ. ಬ್ಲಾಗುಗಳಲ್ಲಿ ಬರೆಯಬಹುದು. ಸಿನಿಮಾಗೆ ಹಾಡು ಬರೆಯದೆಯೂ ಕವಿತೆ ಬರೆದುಕೊಂಡು ಸುಖವಾಗಿರಬಹುದಾದ ಹಾಗೆ!

ಹೀಗೇ ಈಗೆಲ್ಲಾ ಅನ್ನಿಸುತ್ತಿದ್ದರೂ ಆಗ ಮಾತ್ರ ಹಾಗೆ ಅನ್ನಿಸುತ್ತಿತ್ತು. ಗುರಿಯ ಬೆನ್ನಟ್ಟಿ ಹೊರಟಿದ್ದ ಮನಸ್ಸು ರಾಜಿಗೆ ಸಿದ್ಧವಿರಲಿಲ್ಲ. ಅಶ್ವಿನಿ ಸ್ಟುಡಿಯೋ ಮುಂದೆ ಈಗಲೂ ಹೋದಾಗ ಎಲ್ಲವೂ ನೆನಪಾಗುತ್ತದೆ. ಕೊನೆಗೊಂದು ದಿನ ಹೊರಗೆ ಬಂದು ಹೆಗಲ ಮೇಲೆ ಕೈ ಹಾಕಿಕೊಂಡು ಒಳಕ್ಕೆ ಕರೆದುಕೊಂಡು ಹೋದ ಗುರುಕಿರಣ್ ಕೂಡ ನೆನಪಾಗುತ್ತಾರೆ. ಅವರು ಕೊಟ್ಟಂಥ ಟ್ಯೂನು, ಅದಕ್ಕೆ ನಾನು ಬರೆದ ಸಾಲುಗಳು. ಅದು ಓಕೆ ಆದಾಗ ಆದಂಥ ಖುಷಿ. ಎಲ್ಲವೂ ನೆನಪಾಗುತ್ತದೆ. ನಾನು, ನಿರ್ದೇಶಕ ಓಂ ಪ್ರಕಾಶ್ ರಾವ್ ರನ್ನು ಮಾತಾಡಿಸಲು ಮುಂದಾದಾಗ "ಇಲ್ಲೆಲ್ಲಾ ಬರಬಾರದು ಆ ಕಡೆ ಹೋಗಿ ನಿಂತುಕೋ" ಅಂತ ಅಶ್ವಿನಿ ಸ್ಟುಡಿಯೋದ ಮಾಲೀಕ ರಾಮ್ ಪ್ರಸಾದ್ ನನಗೆ ಹೇಳಿದ್ದೂ ನೆನಪಾಗುತ್ತದೆ. ಅದೇ ರಾಮ್ ಪ್ರಸಾದ್ ಮುಂದೊಂದು ದಿನ ತಮ್ಮದೊಂದು ಸಿನಿಮಾಗೆ ಹಾಡು ಬರೆಯುವಂತೆ ನನಗೆ ಹೇಳಿದ್ದೂ, ಚೇರು ತರಿಸಿ ಕೂರಿಸಿ ಟೀ ಕುಡಿಸಿದ್ದೂ ನೆನಪಾಗುತ್ತದೆ.

ಅಂದಹಾಗೆ ನಾನು,"ಗುರುಕಿರಣ್ ಮನೆಗೆ ಹೋಗಿ ಹತ್ತಿರಹತ್ತಿರ ಎರಡು ವರ್ಷಯಾಯಿತು…" ಅಂತ ಮೊನ್ನೆ ವಿಜಯನಗರದ ಇಂದ್ರಪ್ರಸ್ಥದಲ್ಲಿ ರವಾದೋಸೆ ತಿನ್ನುತ್ತ ಶಿವಮರಿಗೌಡನಿಗೆ ಹೇಳುತ್ತಿದ್ದ ನೆನಪು.


ಕನ್ನಡದ ಬರಹಗಳನ್ನು ಹಂಚಿ ಹರಡಿ

14 thoughts on “ನಾನು,ಗುರಿ ಮತ್ತು ಅಶ್ವಿನಿ ಸ್ಟುಡಿಯೋ: ಹೃದಯಶಿವ ಅಂಕಣ

  1. ಅಭದ್ರತೆ ನಡುವೆಯೂ ಆತ್ಮವಿಶ್ವಾಸ ಹೇಗೆ ಜತೆಗಿರುತ್ತದೆ ಎನ್ನಲು ಮತ್ತದು ದೃಢವಾಗಿರುತ್ತದೆ ಎಂದು ತಮ್ಮ ಈ ಜೀವನದ ಪ್ರಸಂಗ ಹೇಳುತ್ತದೆ ….. ಬಹಳ ಮೆಚ್ಚುಗೆ ಆಯಿತು ಶಿವೂ ಸರ್ ….

  2. ಅಬ್ಬಬ್ಬಾ ಏನೆಲ್ಲ  ಕಷ್ಟ…! ಪ್ರಾಮಾಣಿಕ ಪ್ರಯತ್ನಗಳಿಗೆ ಇಂದಲ್ಲ ನಾಳೆ ಫಲ ಸಿಕ್ಕೇ ಸಿಗುತ್ತೆ ಅನ್ನುವುದಕ್ಕೆ ನೀವೇ ಮಾದರಿ..
    ಅಂತಹ ಪರಿಸ್ಥಿತಿಯಲ್ಲಿ ನಿಮಗಿರುವ ತಾಳ್ಮೆ, ದೃಡಸಂಕಲ್ಪ ಮೆಚ್ಚುವಂತದ್ದು. ಅಲ್ಲದೆ ನಮ್ಮಂತವರಿಗೆ ಮಾದರಿ ಆಗಲಿ ನಿಮ್ಮ ಅನುಭವ ಕಥನ..

    ರುಕ್ಮಿಣಿ ಎನ್.

     

  3. ಕವಿತೆಯಲ್ಲಿ ಅಡಗಿ ಕುಳಿತ  ಅಕ್ಷರಗಳು ಈಗ ನೆನಪಾಗಿ ಹರಿಯುತ್ತಿವೆ.
    ಚೆನ್ನಾಗಿದೆ. ವಿಜಯನಗರ , ಇಂದ್ರಪ್ರಸ್ಥ  ನನಗೂ ಇಷ್ಟ

  4. ಹೀಗೆಲ್ಲಾ ಏಕಾಗುತ್ತದೆ?  ಒಂದು ವೇಳೆ ನಾನು ಸಿನಿಮಾಗೆ ಹಾಡು ಬರೆದಿಲ್ಲ ಅಂದರೆ ಏನು ಲಾಸಗುತ್ತೆ? ಸಿನಿಮಾಗೆ ಹಾಡು ಬರೆಯೋದೊಂದೇ ಮಹಾಸಾಧನೆಯಾ?  ಗುರುಕಿರಣ್ ಭೇಟಿಗಾಗಿ ಅಷ್ಟೆಲ್ಲ ಯಾಕೆ ಕಷ್ಟ ಪಡಬೇಕು?  ಮಧ್ಯರಾತ್ರಿಯವರೆಗೂ ಯಾಕೆ ಕಾಯಬೇಕು? ಬಂದು ಮೀಟು ಮಾಡುವಂತೆ ಹಿಂದಿನ ಸಲ ಹೇಳಿದ್ರಲ್ಲಾ, ಅದಕ್ಕಾಗಿ ಕಾಯಬೇಕಾ? ನನಗಿರಬಹುದಾದ ಸಮಯಪ್ರಜ್ಞೆಯನ್ನು ಅವರು ಪರೀಕ್ಷಿಸುವ ಸಲುವಾಗಿ ಸ್ಟುಡಿಯೋ ಒಳಗಿದ್ದುಕೊಂಡೇ ಕಾಯಿಸಿದ್ರಾ? ಸರಿ, ಒಂದು ಸಿನಿಮಾಗೆ ಹಾಡು ಬರೆಸಿದರು ಅಂತಿಟ್ಟುಕೊಳ್ಳಿ. ಏನು ಬಂತು?  ನನಗಿಂತ ಮುಂಚೆ ಯಾರೂ ಹಾಡು ಬರೆದಿಲ್ಲವಾ?  ಯಾರೋ ತುಳಿದ ಹಾದಿಯನ್ನೇ ತಾನೇ ನಾನೂ ತುಳಿಯುತ್ತಿರೋದು?  ಇಷ್ಟಕ್ಕೂ ಸಿನಿಮಾಗೆ ಬರೆದರೆ ಮಾತ್ರ ಸಾಧಿಸಿದಂತೆಯಾ? ಕುವೆಂಪು, ಬೇಂದ್ರೆ, ಅಡಿಗರು ಸಿನಿಮಾಗೆ ಬರೆದು ತಮ್ಮ ಪ್ರತಿಭೆ ತೋರಿಸಿದವರಾ? ಇಲ್ಲ. ಇಷ್ಟಾಗಿಯೂ ನಾನೇಕೆ ಹಾಡು ಬರೆಯಲು ಇಷ್ಟು ಪ್ರಯತ್ನ ಪಡಬೇಕು? ಸತತ ಮೂರ್ನಾಲ್ಕು ವರ್ಷಗಳ ಕಾಲ ಗುರುಕಿರಣ್ ಹಿಂದೆ ಅಲೆಯಬೇಕು?  ಸಿನಿಮಾಗೆ ಹಾಡು ಬರೆಯದೆಯೂ ಕವಿತೆ ಬರೆದುಕೊಂಡು ಸುಖವಾಗಿರಬಹುದಾದು
     
    ಗುರಿಯ ಬೆನ್ನಟ್ಟಿ ಹೊರಟಿದ್ದ ಮನಸ್ಸು ರಾಜಿಗೆ ಸಿದ್ಧವಿರಲಿಲ್ಲ. .
    ಗುರಿಮುಟ್ಟಲಿರುವ    ನಿಮ್ಮ  ಹಟಸಾಧನೆಯನ್ನು , ಮನದ  ತುಮುಲವನ್ನು  ಎತ್ತಿ  ಹಿಡಿಯುವ  ವಾಕ್ಯಗಳು..
    ಅದಿರಲಿ  ನೀವು ಆಗ ಬರೆದ  ಸಿನಿಮಾ  ಹಾಡು  ಯಾವುದು…?
    ಹೃದಯಶಿವ  avare..

  5. ಸಖತ್ತಾಗಿದೆ ಶಿವಣ್ಣ.. ಪ್ರತೀ ಯಶಸ್ಸಿನ ಹಿಂದೆ ಕಷ್ಟಗಳ ನಿನ್ನೆ ಇದ್ದೇ ಇರುತ್ತೆ ಅನ್ನೋದನ್ನ ಮತ್ತೊಮ್ಮೆ ನೆನಪಿಸಿದ ಹಾಗಾಯ್ತು.. ಇವತ್ತು ಶಿವಣ್ಣ ಎಷ್ಟು ಸಖತ್ತಾಗಿ ಬರಿತಾರೆ ಅನ್ನೋದೊಂದೇ ನೋಡೋ ಜನರಿಗೆ ಅದರ ಹಿಂದೆ ನೀವು ಪಟ್ಟ ಕಷ್ಟಗಳು, ಗುರಿಯನ್ನು ಬಿಡದೇ ಅದಕ್ಕಾಗಿ ನಡೆಸಿದ ಪ್ರಯತ್ನಗಳು ಕಾಣೋದೇ ಇಲ್ಲ.. ಬೆಂಗಳೂರಿಗೆ ಬಂದ ಹೊಸತರಲ್ಲಿ ಯಾರದೋ ಮನೆಯಲ್ಲಿ ಉಳಿದು ಹೀಗೇ ದಿನಗಟ್ಟಲೇ ಸುತ್ತಿದ್ದು ನೆನಪಾಯಿತು..

    ಮಧ್ಯಾಹ್ನ ಮೂರು, ನಾಲ್ಕು ಘಂಟೆಯಾದರೂ ಊಟವಿಲ್ಲ.. ಹೊರಗೆ ದಿನಾ ತಿನ್ನೋಕೆ ಕೈಯಲ್ಲಷ್ಟು ದುಡ್ಡಿಲ್ಲ. ಮನೆಯಲ್ಲಿ ಹೇಳಿದರೆ ಬೇಜಾರು.. ಎಲ್ಲಾದರೂ ನೆಂಟರ ಮನೆಗೆ ಹೋಗಬಹುದು. ಆದರೆ ದೀನಾವಸ್ಥೆಯಲ್ಲಿ ಅವರ ಮುಂದೆ ಕೈ ಚಾಚೋದಕ್ಕಿಂತ ಹಸಿವಿಂದಲೇ ಇರೋದೇ ಎಷ್ಟೋ ಮೇಲು ಅನಿಸಿದ್ದುಂಟು. ಮೆಜೆಸ್ಟಿಕ್ಕಲ್ಲಿ ಬಾಳೆಹಣ್ಣು ತಿಂದೋ, ನೀರು ಕುಡಿದೋ ಸಂಜೆ ತನಕ ಅಲೆದು, ರಾತ್ರಿ ವೇಳೆಗೆ ಮನೆ ಮುಟ್ಟಿದ್ದುಂಟು.. ನೂರೆಂಟು ಉಪದೇಶದ ಜನರ ನಡುವೆ ನಮ್ಮ ಪಾಡು.. ಸಾಕಪ್ಪಾ ಸಾಕು ಅನಿಸಿಹೋಗಿದ್ದರೂ ಏನಾದರೊಂದು ಸಾಧಿಸಬೇಕೆನ್ನೋ ಛಲ ದಿನಾ ಮತ್ತೆ ಅಲೆಸುತ್ತಿತ್ತು..

  6. ಗುರಿಯ ಬೆನ್ನಟ್ಟಿ ಹೊರಟ ಮನಸು ರಾಜಿಯಾಗದೇ ಮುನ್ನಡೆಯಬೇಕು ಅಲ್ವಾ….
    ಅಂದಾಗಲೇ ಹೃದಯದೊಳಗಿನಿಂದ ಶಿವ ಉದ್ಭವಿಸೋದು….
    ಹಿಂದಿರುಗಿ ನೋಡಿದಾಗ
    ಅಬ್ಬಾ !!!!
    ನಾ ಸಾಗಿ ಬಂದ
    ದಾರಿ ಇದೇನಾ….
    ಎನ್ನುವ ವಿಸ್ಮಯ
    ಮೊಗದಲ್ಡಿ ಮೂಡಿದಾಗ
    ಸಾರ್ಥಕ್ಯ ಭಾವ

  7. ಶಿವ,
    ನಿಜವಾದ ಸಾಧಕರು ನೀವು…. 
    Followed your dreams with all the Odds…. 

     

  8. ಇಷ್ಟವಾಯಿತು, ಗುರಿಯೆಡೆಗಿನ ತುಡಿತದೆದುರು & ಸಾಧನೆಯೆದುರು ಉಳಿದೆಲ್ಲ ಸಮಸ್ಯೆಗಳು ಗೌಣವಾಗುತ್ತಲ್ಲ, ಅದು ಮೆಚ್ಚುಗೆಗೆ ಕಾರಣ..

  9. ಶಿವ ಅವರೆ ನಿಮ್ಮ ಸರಣಿ ಬರಹಗಳನ್ನ ತಪ್ಪದೆ ಓದುತ್ತಿದ್ದೇನೆ. ನಿಮ್ಮ ಜೀವನದ ಅನುಭವಗಳನ್ನ ಓದಿ ನಿಮ್ಮಲ್ಲಿಯ ಆತ್ಮವಿಶ್ವಾಸ ನನ್ನನ್ನು ಬೆರಗುಗೊಳಿಸುತ್ತೆ.
    ನೀವು ಅಂದುಕೊಂಡಿದದನ್ನೆಲ್ಲಾ ಯಶಸ್ವಿಯಾಗಿ ಸಾಧಿಸುವಂತಾಗಲಿ ಎಂದು ಮನಃಸ್ಪೂರ್ತಿಯಾಗಿ ಹಾರೈಸುತ್ತೇನೆ. ಅಭಿನಂದನೆಗಳು….. ಸುಮನ್ ದೇಸಾಯಿ………….

  10. ಕಾಲವೆ ಹಾಗೆ ! ಬದಲಾಗುತ್ತದೆ ಇರುತ್ತದೆ ! ನಮ್ಮ ಪರಿಚಯದ ಮನೆಯವರೊಬ್ಬರ ಮನೆಯ ಗೋಡೆಯಲ್ಲಿ ಒಂದೆ ಸಾಲಿನ ಸ್ಟಿಕರ್ ಇದೆ 
    "ಹೀಗೆ ಇರೋಲ್ಲ
    ನಾನು ಹೇಳುತ್ತೇನೆ ಅದು ಹೇಗೂ ಆಗುತ್ತೆ ಅಂತ  ಕಷ್ಟವೆನ್ನುವುದು ಹಾಗೆ ಇರೋಲ್ಲ ಕೊರಗಬಾರದು
    ಹಾಗೆ ಸುಖವೆನ್ನುವುದು ಶಾಶ್ವತವಲ್ಲ ಮೆರೆಯಬಾರದು !

Leave a Reply

Your email address will not be published. Required fields are marked *