ನಾಡ ಭಾಷೆ, ಇತಿಹಾಸವೂ ನಮ್ಮ ಅಭಿಮಾನಶೂನ್ಯತೆಯು: ಪ್ರಶಸ್ತಿ

ಅಪಾರ ಕೀರ್ತಿಯಿಂದ ಮೆರೆವ ದಿವ್ಯ ನಾಡಿದು, ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು.ಅಪಾರ ಕೀರ್ತಿಯೇ.. ಮಯೂರ ಚಿತ್ರದ ಈ ಹಾಡು, ಅದಕೆ ಹಿಮ್ಮೇಳವೆಂಬಂತೆ ನಾಗೋ ಕುದುರೆಯ ಪುಟಿತದ ಟಕ್, ಟಕ್, ಟಕ್ ಎಂಬ ಸದ್ದೂ ನಿಮ್ಮೆಲ್ಲರ ಮನಸ್ಸಲ್ಲೊಂದು ಭದ್ರ ಸ್ಥಾನ ಪಡೆದಿರಬಹುದು. ಚಾಲುಕ್ಯ, ಹೊಯ್ಸಳ, ವಿಜಯನಗರ, ಕೆಳದಿ ಸಾಮ್ರಾಜ್ಯ ಹೀಗೆ ಇಲ್ಲಿನ ನೆಲವಾಳಿದ ರಾಜರೆಲ್ಲಾ ಕಲೆ, ಸಂಸ್ಕೃತಿ, ಭಾಷೆಯ ಬೆಳವಣಿಗೆಗೆ ಕೊಟ್ಟ ಪ್ರೋತ್ಸಾಹದ ಪರಿಯನ್ನು ನಮ್ಮ ಸುತ್ತೆಲ್ಲಾ ಈಗಲೂ ಕಾಣಬಹುದು, ಹೆಮ್ಮೆಪಡಬಹುದು. ಭಾಷೆ, ಜಾತಿ, ಧರ್ಮವೆಂಬ ಯಾದ ಬೇಧವೂ ಇಲ್ಲದೇ ಬಂದವರಿಗೆಲ್ಲಾ ಆಶ್ರಯವೀಯೋ ತಾಯಿ ಭಾರತಿಯ ಗುಣವನ್ನು ಚಾಚೂ ತಪ್ಪದೆ ಪಾಲಿಸಿದ ಕನ್ನಡಾಂಬೆಯ ನಾಡ ಕಲೆ, ಸಂಸ್ಕೃತಿಯಲ್ಲಿ ಹೊರನಾಡಿನ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯೂ ಅನೇಕ. ಆದರೆ ಕಲೆ, ಭಾಷೆಗಳ ಬೆಳವಣಿಗೆಯ ರಾಜರಾಳ್ವಿಕೆಯ ದಿನಗಳನ್ನೂ, ಈ ದಿನಗಳನ್ನೂ ಹೋಲಿಸಿ ನೋಡಿದಾಗ ಅನೇಕ ಕಡೆಗಳಲ್ಲಿ ಬೇಸರವಾಗುತ್ತದೆ. ನಮ್ಮ ನಾಡ ನುಡಿ, ಇತಿಹಾಸದ ಬಗ್ಗೆ ಇಷ್ಟೊಂದು ಅಭಿಮಾನಶೂನ್ಯರಾದೆವಾ ನಾವು ಅನಿಸಿಬಿಡುತ್ತದೆ. 

ಪ್ರಸಂಗ ೧: 
ಹಂಪೆಗೆ ಹೋದವರೆಲ್ಲಾ ಅಂಜನಾದ್ರಿಪರ್ವತ ಎಂಬ ಹೆಸರನ್ನು ಕೇಳಿಯೇ ಇರುತ್ತಾರೆ. ರಾಮಾಯಣದ ಕಿಷ್ಕಿಂದೆ ಇದುವೇ ಎಂದು ಹೇಳೋ, ಪುರಾಣಪುರುಷ ಭಜರಂಗಬಲಿ ಇಲ್ಲೇ ಜನಿಸಿದ್ದಾನೆಂದು ಹೇಳೋ ಈ ಅಂಜನಾದ್ರಿಗೆ ಹಂಪೆಗೆ ಹೋದ ಬಹುತೇಕರು ಹೋಗಿಯೇ ಇರುತ್ತಾರೆ. ತುಂಗಭದ್ರೆಯ ಆಚೆ ದಡದಲ್ಲಿರೋ ಅಂಜನಾದ್ರಿ ಪರ್ವತಕ್ಕೆ ಭೇಟಿ ಕೊಡೋ ಸಲುವಾಗಿಯೇ ಹತ್ತು ರೂ ನೀಡಿದರೆ ದಾಟಿಸೋ ಬೋಟಿನಲ್ಲಿ ತುಂಗಭದ್ರೆಯ ದಾಟಿ, ಅಲ್ಲಿಂದ ಇನ್ನೂರೈವತ್ತಕ್ಕೆ ಒಂದರಂತೆ ಬೈಕನ್ನೋ, ನಾನ್ನೂರರಿಂದ ಆರ್ನೂರವರೆಗೆ ಕೊಟ್ಟು ಆಟೋವನ್ನೋ, ನೂರಕ್ಕೊಂದರಂತೆ ಸಿಗೋ ಸೈಕಲ್ಲನ್ನೋ ಪಡೆದು ಅಂಜನಾದ್ರಿ, ಪಂಪಾಸರೋವರ, ಲಕ್ಷ್ಮೀ ದೇಗುಲ, ಆನೆಗುಂದಿ, ಚಿಂತಾಮಣಿ ಮೊದಲಾದ ಸ್ಥಳಗಳನ್ನು ದರ್ಶಿಸೋದು ರೂಢಿ. ಹುಲಿಗಿ ಕ್ಷೇತ್ರ ಮುಂತಾದವನ್ನು ದರ್ಶಿಸೋ ಅಭಿಲಾಶೆಯುಳ್ಳವರೂ ಗಂಗಾವತಿಗೆ ಸಾಗೋ ಈ ರಸ್ತೆಯಲ್ಲಿ ಬಂದು ಅಂಜನಾದ್ರಿಯನ್ನು ಗಮನಿಸಿರುತ್ತಾರೆ. ಹನುಮಂತನ ತಾಯಿ ಅಂಜನಾದೇವಿಯ ಹೆಸರಿನಲ್ಲಿರುವ ಈ ಪರ್ವತದ ಆರು ನೂರು ಚಿಲ್ಲರೆ ಮೆಟ್ಟಿಲು ಹತ್ತಿ ಕೇಸರಿವರ್ಣದ ಆಂಜನೇಯನ , ಪಕ್ಕದಲ್ಲೇ ಇರುವ ಅಂಜನಾದೇವಿಯ ಗುಡಿಯ ದರ್ಶನವನ್ನು ಪಡೆಯುವುದು, ಬೆಟ್ಟದ ಮೇಲಿಂದ ಸುತ್ತಣ ಹಂಪಿಯ ವಿಹಂಗಮ ನೋಟವನ್ನು ಸವಿಯೋದೇ ಒಂದು ಖುಷಿಯ ಅನುಭವ. ಹಂಪೆ ಕರ್ನಾಟಕದಲ್ಲಿರುವುದರಿಂದ ಹನುಮಂತ ಕನ್ನಡದವನೇ ಎಂದು ನಾವೆಲ್ಲಾ ಖುಷಿಯಿಂದ ಬೀಗಬಹುದಾದ ಜಾಗಕ್ಕೆ ಭೇಟಿ ಕೊಡುವ ಅವಕಾಶವನ್ನು ಯಾರು ತಾನೇ ತಪ್ಪಿಸಿಕೊಳ್ಳುತ್ತಾರೆ ? ಉರಿಬಿಸಿಲಿನಲ್ಲಿ ಬೆಟ್ಟ ಹತ್ತಿ ಬಂದ ಭಕ್ತರ ಸಲುವಾಗಿಯೇ ಇಲ್ಲಿನ ದೇಗುಲದವರು ನಡೆಸುತ್ತಿರುವ ಅನ್ನದಾನದ ಬಗ್ಗೆ ಒಳ್ಳೆಯ ಮಾತನಾಡದೇ ಇರಲು ಮನಸ್ಸಾಗೋದಿಲ್ಲ. ಅನ್ನ, ದಾಲನ್ನು ಪ್ರಸಾದ ಅಂತ ವಿತರಿಸೋ ಇಲ್ಲಿಯ ಪರಂಪರೆಯ ಬಗ್ಗೆ ಸ್ಥಳೀಕರೊಬ್ಬರ ಮಾತಲ್ಲೇ ಹೇಳೋದಾದ್ರೆ ಇದು ಪ್ರಸಾದ ರೀ, ಊಟ ಅಲ್ಲ. ಆದರೆ ಇಲ್ಲಿನ ಅರ್ಚಕರು ಮಾತಾಡೋದು, ಪೂಜೆ ಮಾಡೋದು, ಇಲ್ಲಿನ ಭೋಜನಶಾಲೆಯಲ್ಲಿ ಆಂಜನೇಯನ ಪರಾಕ್ರಮಗಳ ಸಾರೋ ಸಾಲು ಚಿತ್ರಗಳ ಬರಹವಿರೋದು ಕನ್ನಡದಲ್ಲಲ್ಲ ! ಗುಜರಾತಿ, ಬಿಹಾರಿ, ಮರಾಠಿ.. ಹೀಗೆ ಉತ್ತರದ ಬೇರೆ ಬೇರೆ ಭಾಗಗಳಿಂದ ಬಂದ ಅರ್ಚಕರು ಪೂಜೆಗೆ ಓದೋದು ಅವಧಿ ಭಾಷೆಯಲ್ಲಿರುವ ತುಲಸೀದಾಸ ವಿರಚಿತ ಹನುಮಾನ್ ಚಾಲೀಸವನ್ನ. ಇಲ್ಲಿಗೆ ಬರೋ ಭಕ್ತರಲ್ಲಿ ಉತ್ತರಭಾರತದವರ ಸಂಖ್ಯೆಯೂ ಗಮನಾರ್ಹವಾಗಿಯೇ ಇದೆ ಎನ್ನಬಹುದಾದರೂ ನಮ್ಮ ನಾಡಲ್ಲಿ ನಮ್ಮದಲ್ಲದ ಭಾಷೆಯಲ್ಲಿನ ಆಚರಣೆಗಳು ನನ್ನ  ಕೊಂಚ ವಿಚಲಿತನಾಗಿಸಿದ್ದು ಸುಳ್ಳಲ್ಲ. ನಾಡ ಹಲವು ಭಾಗಗಳಲ್ಲಿ ಸಂಸ್ಕೃತದ ಮಂತ್ರಗಳಲ್ಲಿ ಅರ್ಚನೆ ನಡೆಸುವುದು ತಪ್ಪಾಗದಿದ್ದರೆ ಇಲ್ಲಿನ ಕನ್ನಡೇತರ ಭಾಷೆ ಹೇಗೆ ತಪ್ಪಾಗುತ್ತೆ ಎಂಬ ಸಂದೇಹವಿರೋ ಅನೇಕ ಮಿತ್ರರಿಗಾಗಿ ಒಂದು ಮಾಹಿತಿ. ಅರ್ಚನೆ ಸಂಸ್ಕೃತದಲ್ಲಾದರೂ ಅರ್ಚಕರು ಸಂಬೋಧಿಸೋದು ಕನ್ನಡದಲ್ಲೇ. ಮಂದಿರದ ಬೋರ್ಡುಗಳಿಂದ, ಸೇವಾ ವಿವರಗಳವರೆಗೆ ಎಲ್ಲಾ ಮಾಹಿತಿಯ ಪ್ರಧಾನ ಭಾಷೆ ಕನ್ನಡ ! ನಿಮ್ಮಲ್ಲಿ ಕೆಲವರು ಕೋಲಾರದ ಅನೇಕ ದೇಗುಲಗಳಲ್ಲಿ, ಅಷ್ಟೇಕೆ ಬೆಂಗಳೂರ ಹಲವು ದೇಗುಲಗಳಲ್ಲೇ ತೆಲುಗಿನಲ್ಲಿ ಅರ್ಚನೆ ನಡೆಸುತ್ತಾರೆ ಭಟ್ಟರು, ಅದರಲ್ಲಿ ಇದೇನು ಮಹಾ ಎನ್ನಬಹುದು . ಮಹಾನ್ ಏನೂ ಇಲ್ಲ ಬಿಡಿ. ಎಲ್ಲರನ್ನೂ ಬರಮಾಡಿಕೊಳ್ಳೋ ಭರದಲ್ಲಿ ನಮ್ಮತನವ ಮರೆಯೋದೂ ಒಂದು ದೊಡ್ಡ ಗುಣವೇ ಬಿಡಿ ! ಅಂಜನಾದ್ರಿಯ ಅರ್ಚಕರಿಂದ ಸಿಬ್ಬಂದಿಯವರೆಗೆ ಎಲ್ಲರಿಗೂ ಕನ್ನಡ ಬರುವುದೂ, ಇಲ್ಲಿನ ಹಲ ಬೋರ್ಡುಗಳು ಕನ್ನಡದಲ್ಲೇ ಇರುವ ಬಗ್ಗೆ ಸದ್ಯಕ್ಕಂತೂ ಹೆಮ್ಮೆ ಪಟ್ಟುಕೊಳ್ಳಬಹುದು ನಾವು ! 

ಪ್ರಸಂಗ ೨:
ಅಂಜನಾದ್ರಿಯ ದರ್ಶನದ ನಂತರ ನಾವು ಭೇಟಿ ಕೊಟ್ಟಿದ್ದು ಪಂಪಾ ಸರೋವರ ಮತ್ತು ಲಕ್ಷ್ಮೀ ಮಂದಿರಕ್ಕೆ. ಈ ಕ್ಷೇತ್ರಕ್ಕೆ ಹೆಸರು ಬಂದ ಕಾರಣವೇನೆಂದು ಸ್ವಲ್ಪ ಕೆದಕಿದಾಗ ಸಿಕ್ಕ ಮಾಹಿತಿಯ ಪ್ರಕಾರ ಈ ಸ್ಥಳಕ್ಕೆ ಹೆಸರಿಟ್ಟ ಹಿರಿಮೆ  ಸ್ಕಂದಪುರಾಣದಲ್ಲಿ ಬರುವ ಪಂಪಾಮಹಾತ್ಮೆಗೆ ಸಲ್ಲುತ್ತದೆ. ಅದರ ಪ್ರಕಾರ ಬ್ರಹ್ಮನ ಮಗಳಾದ ಪಂಪಾದೇವಿಯು ಹೇಮಕೂಟದಿಂದ ಅರ್ಧಕ್ರೋಶದಷ್ಟು ಉತ್ತರಕ್ಕಿರುವ ವಿಪ್ರಕೂಟ ಎಂಬ ಪರ್ವತದ ಬಳಿಯ ಪಂಪಾಸರೋವರದ ಬಳಿ ಉಗ್ರ ತಪಸ್ಸನ್ನಾಚರಿಸುತ್ತಾಳೆ. ಅವಳ ತಪಸ್ಸಿಗೆ ಮೆಚ್ಚಿದ ಶಿವನು ಪ್ರತ್ಯಕ್ಷನಾಗುತ್ತಾನೆ. ಅವಳ ಇಚ್ಚೆಯ ಮೇರೆಗೆ ಅವಳನ್ನು ವಿವಾಹವಾಗಿ ಹಂಪಿಯಲ್ಲಿ ವಿರೂಪಾಕ್ಷನಾಗಿದ್ದವನು ಇಲ್ಲಿ ಪಂಪಾಪತಿ ಎನಿಸಿಕೊಳ್ಳುತ್ತಾನೆ. ಒಂದು ಕ್ರೋಶ ಅಂದರೆ ಸುಮಾರು ನಾಲ್ಕು ಕಿ.ಮೀ. ಅರ್ಧಕ್ರೋಶ ಅಂದರೆ ಸುಮಾರು ೨.ಕಿ.ಮೀ. 

 

 

ಆ ಮಾಹಿತಿಯನ್ನು ಈಗಿನ ಗೂಗಲ್ ದೂರದೊಂದಿಗೆ ತಾಳೆ ಹಾಕೋದಾದರೆ ವಿರೂಪಾಪುರಗಡ್ಡಿಯ ಮೂಲಕ ತುಂಗಭದ್ರೆಯನ್ನು ದಾಟಿ ಮುನ್ನಡೆಯುವವರಿಗೆ ಪಂಪಾ ಸರೋವರಕ್ಕಿರುವ ದೂರ ಸರಿ ಸುಮಾರು ಅಷ್ಟೇ ! ಈಗಿನ ದಾರಿ ಸ್ವಲ್ಪ ಸುತ್ತಿ ಬಳಸಿ ಸಾಗುತ್ತದಾದರೂ ಹಿಂದೆ ಸರಿ ಸುಮಾರು ೨.ಕಿ.ಮೀ ದೂರದೊಂದು ಶಾರ್ಟ್ ಕಟ್ ಇದ್ದಿರಬಹುದಾದ ಸಾಧ್ಯತೆ ಇಲ್ಲದಿಲ್ಲ.  ನಂತರ ಬರೋ ರಾಮಾಯಣ ಪ್ರಸಂಗದಲ್ಲೂ ಈ ಸ್ಥಳ ತಳುಕು ಹಾಕಿಕೊಳ್ಳುತ್ತದೆ. ಶಬರಿ ರಾಮನಿಗಾಗಿ ಕಾಯುತ್ತಿದ್ದ ಜಾಗವೆಂದು ಪ್ರಸಿದ್ದಿ ಪಡೆದ ಶಬರಿ ಗುಹೆಯೂ ಇಲ್ಲಿದೆ. ಅಂದು ಶಬರಿ ಶ್ರೀರಾಮನಿಗೆ ಒಳ್ಳೆಯ ಹಣ್ಣುಗಳನ್ನೇ ಕೊಡಬೇಕು ಅಂತ ಕಚ್ಚಿ ನೋಡಿ ಕೊಟ್ಟ ಬೋರೆ ಹಣ್ಣುಗಳು ಶ್ರೀರಾಮ, ಲಕ್ಷ್ಮಣರ ಹಸಿವೆಯನ್ನು ನೀಗಿಸಿದಂತೆಯೂ ಇಂದಿಗೂ ಇಲ್ಲಿ ನಡೆಯೂ ಮಧ್ಯಾಹ್ನದ ಅನ್ನ ಸಂತರ್ಪಣೆ ಭಕ್ತರ ಹಸಿವೆಯನ್ನು ನೀಗಿಸುತ್ತಿರುವುದು ಸುಳ್ಳಲ್ಲ.  ಶ್ರೀ ರಾಮನ ಪಾದುಕೆಯಿರೋ ಸಣ್ಣ, ಶಬರಿಯ ಪಾದುಕೆಗಳಿರೋ ಗುಹೆಯೆಂದು ಸ್ಥಳೀಯರು ನಂಬೋ ಈ ಸ್ಥಳ ಅನೇಕರ ಪಾಲಿನ ಪುಣ್ಯ ಸ್ಥಳ, ಯಾತ್ರಾ ಸ್ಥಳ. ಇಲ್ಲಿ ಮತ್ತೆ ಹಿಂದಿಯ ರಾಜ್ಯಭಾರ. ಬಂದ ಭಕ್ತರಿಗೆ ಆಪ್ ಕಹಾ ಸೇ ಹೋ ? ರಾಜಸ್ಥಾನ್. ರಾಜಸ್ಥಾನ್ ಮೇ ಕಹಾಂ ಎಂದೇ ಸಂಬೋಧಿಸೋ ಭಟ್ಟರ ನುಡಿ ಮತ್ತೆ ಕಸಿವಿಸಿಯನ್ನುಂಟು ಮಾಡಿದ್ದು ಸುಳ್ಳಲ್ಲ. ಹಿಂದಿನಂತೆಯೇ ಇಲ್ಲಿನ ಲಿಪಿ ದೇವನಾಗರಿನಲ್ಲಿ, ಬರುವವರ ಸಂಭಾಷಣೆ ಕನ್ನಡೇತರ ಭಾಷೆಗಳಲ್ಲಿ ! ಇದು ಸಂರಕ್ಷಿತ ಸ್ಮಾರಕ ಅನ್ನೋ ಪುರಾತತ್ವ ಇಲಾಖೆಯ ಬೋರ್ಡು ಪ್ರವೇಶಕ್ಕೆ ಮುಂಚೆ ಸಿಗುತ್ತೆ ಅನ್ನೋದನ್ನ ಬಿಟ್ಟರೆ ಇಲ್ಲಿನ ಸ್ಥಳ ಮಹಿಮೆಯನ್ನು ಸಾರೋ ಒಂದು ಬೋರ್ಡೂ ಇಲ್ಲವಿಲ್ಲಿ. ಪೂರ್ಣ ಹಸಿರುಗಟ್ಟಿ, ಕೊಳೆಯಿಂದ ರಾರಾಜಿಸುತ್ತಿರೋ ಪಂಪಾ ಸರೋವರದ ಸ್ಥಿತಿಯ ಬಗ್ಗೆಯೂ ಬೇಸರವಾಗದೇ ಇರಲಿಲ್ಲ. ನಮಾಮಿ ಗಂಗೆ ಎಂಬ ಹೆಸರಿನಲ್ಲಿ ಗಂಗೆಯ ಶುದ್ದೀಕರಣಕ್ಕೆ ನಡೆಯುತ್ತಿರೋ ಪ್ರಯತ್ನಗಳ ಬಗ್ಗೆ, ಯಮುನೆಯ ಶುಚಿತ್ವಕ್ಕೆ ಅಲ್ಲಿನ ಸರ್ಕಾರ ಕೈಗೊಳ್ಳುತ್ತಿರೋ ಕ್ರಮದ ಬಗ್ಗೆ ಓದೋ ನಾವು ನಮ್ಮಲ್ಲೇ ಇರೋ ಪಂಪಾಸರೋವರದಂತಹ ಸ್ಥಳಗಳ ಬಗ್ಗೆ ಗಮನಹರಿಸೋಲ್ಲವೇಕೆ ? ಹಂಪೆಯಲ್ಲಿನ ವಿರೂಪಾಕ್ಷ ದೇಗುಲದ ಪುಷ್ಕರಿಣಿಯ ಜೀರ್ಣೋದ್ದಾರದ ಕೆಲಸ ನಡೆಯುತ್ತಿರೋ ಪರಿಯಲ್ಲೇ ಹಂಪಿಯಲ್ಲಿನ ಅದೆಷ್ಟೋ ಹಸಿರುಗಟ್ಟಿದ ಪುಷ್ಕರಿಣಿಗಳ ಸ್ವಚ್ಛತೆಯ, ಸಂರಕ್ಷಣೆಯ ಕೆಲಸವೂ ಶೀರ್ಘವಾಗಿ ನಡೆಯಬೇಕಾದ ಅನಿವಾರ್ಯತೆಯಿದೆ. 

ಪ್ರಸಂಗ ೩: 
ಪಂಪಾಕ್ಷೇತ್ರದ ನಂತರ ನಾವು ಸಾಗಿದ್ದು ದುರ್ಗಾದೇವಿ ಮಂದಿರಕ್ಕೆ. ರಾಮಯಣದ ಕಿಷ್ಕಿಂದಾಕಾಂಡದಲ್ಲಿ ಬರೋ ವಾಲಿಯ ಗುಹೆಯೂ ಇಲ್ಲಿರೋದಿಂದ ಈ ಬೆಟ್ಟಕ್ಕೆ ವಾಲಿ ಪರ್ವತವೆಂದೂ, ಕಿಷ್ಕಿಂದ ಕ್ಷೇತ್ರವೆಂದೂ ಕರೆಯಲಾಗುತ್ತದೆ. ಇಲ್ಲೂ ಕೆಲವು ಬೋರ್ಡುಗಳು, ಕನ್ನಡವಿಲ್ಲದ ತೆಲುಗು ಹಿಂದಿಗಳಲ್ಲಿದ್ದರೂ ಇಲ್ಲಿನ ಪರಿಸ್ಥಿತಿ ಹಿಂದಿನೆರಡು ಸ್ಥಳಗಳಿಗಿಂತ ಪರವಾಗಿಲ್ಲ. ಶರನ್ನವರಾತ್ರಿಯ ಉತ್ಸವಕ್ಕೆ ಸಜ್ಜಾಗುತ್ತಿದ್ದ ಇಲ್ಲಿನ ಶ್ರೀ ದುರ್ಗಾಮಾತಾ ಭೋಜನಶಾಲೆ ದುರ್ಗಾದೇವಿಯ ಮಂದಿರದ ಬಲಭಾಗಕ್ಕೆ(ನಮ್ಮ ಎಡಭಾಗಕ್ಕೆ) ಗಣಪತಿ ದೇಗುಲದತ್ತ ಸಾಗುತ್ತಿದ್ದ ನಮ್ಮನ್ನು ಸ್ವಾಗತಿಸಿತು. ಪುಣ್ಯ ಕ್ಷೇತ್ರಗಳೆಂದರೆ ವ್ಯಾಪಾರವೆನ್ನೋ ಪರಿಸ್ಥಿತಿಯಿರೋ ಅನೇಕ ಸ್ಥಳಗಳಿಗೆ ಹೋಲಿಸಿದರೆ ಬಂದ ಭಕ್ತಾದಿಗಳ ದಾನದಿಂದಲೇ ನಡೆಯುತ್ತಿರೋ ಈ ದೇಗುಲಗಳ ಅನ್ನದಾನ ಸೇವೆ ಈ ನಾಡ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದ್ದು ಸುಳ್ಳಲ್ಲ. ಹಾಗೇ ಮುಂದೆ ಸಾಗಿದರೆ ಒಂದು ಊರಿನ, ಕೋಟೆಯ ಪ್ರವೇಶದ್ವಾರವಾಗಿದ್ದಿರಬಹುದಾದಂತ ರಚನೆ. ಭಾಗಶಃ ಬಿದ್ದುಹೋಗಿರೋ ಅದನ್ನು ದಾಟಿ ಮುಂದೆ ಹೋದವರಿಗೆ ಬಲಭಾಗದಲ್ಲಿ ಎತ್ತರೆತ್ತರದ ಬಂಡೆಗಳು, ಎಡಭಾಗದಲ್ಲೊಂದು ಬೃಂದಾವನ ಕಾಣಸಿಗುತ್ತೆ. ಅದನ್ನು ದಾಟಿ ಮುಂದೆ ಸಾಗಿದವರಿಗೆ ಬಲಭಾಗದಲ್ಲಿ ವಾಲಿಗುಹೆ, ಗಣಪತಿ ದೇವಸ್ಥಾನ, ಶಿವಾಲಯ ಎಂಬ ಬೋರ್ಡು ಕಾಣುತ್ತದೆ. ರಾಮಾಯಣವನ್ನೋದಿದವರಿಗೆ ವಾಲಿ, ಸುಗ್ರೀವ, ದುಂದುಭಿ ಮತ್ತು ಮಾತಂಗಮುನಿಯ ಶಾಪದ ಬಗ್ಗೆ ತಿಳಿದಿರುತ್ತದೆ. ಕಿಷ್ಕಿಂಧಾ ಕಾಂಡದಲ್ಲಿ ಬರೋ ವಿವರಣೆಯ ಪ್ರಕಾರ ದುಂಧುಬಿ ಎಂಬ ರಕ್ಕಸನನ್ನು ಕೊಂದ ವಾಲಿ ಆ ಶವವನ್ನು ಎತ್ತಿ ಎಸೆದಿರುತ್ತಾನೆ. ಆ ಶವ ದೂರದಲ್ಲಿ ಯಜ್ಞಗಯ್ಯುತ್ತಿರೋ ಮತಂಗ ಮುನಿಯ ಯಜ್ಞಕುಂಡದಲ್ಲಿ ಹೋಗಿ ಬಿದ್ದಿರುತ್ತದೆ. ಆಗ ಮತಂಗಮುನಿ ಈ ಕೆಲಸವನ್ನು ಮಾಡಿದವನು ಯಾವನೇ ಆಗಿರಲಿ, ಅವನು ಈ ಪ್ರದೇಶಕ್ಕೆ ಕಾಲಿಟ್ಟರೆ ಅವನ ತಲೆ ಹೋಳಾಗಲಿ ಎಂದು ಶಾಪವೀಯುತ್ತಾನೆ. ನಂತರದಲ್ಲಿ ಮಾಯಾವಿ ಎಂಬ ರಕ್ಕಸ ವಾಲಿಯನ್ನು ಕೆಣಕಿ ಒಂದು ಗುಹೆಯನ್ನು ಹೊಕ್ಕಿರುತ್ತಾನೆ. ಅವನನ್ನು ಕೊಲ್ಲಲು ಹೋದ ವಾಲಿ ತಿಂಗಳಾನುಗಟ್ಟಲೆ ಆದರೂ ಬಾರದೇ, ಆ ಗುಹೆಯಿಂದ ರಕ್ತ ಹೊರಗೆ ಬರಲು ವಾಲಿ ಸತ್ತಿರಬಹುದೆಂಬ ಭೀತಿಯಿಂದ , ವಾಲಿಯನ್ನು ಕೊಂದ ರಕ್ಕಸ ಹೊರಗೆ ಬಾರದಿರಲೆಂದು ಆ ಗುಹೆಗೆ ದೊಡ್ಡ ಬಂಡೆಯನ್ನು ಮುಚ್ಚಿದ ಸುಗ್ರೀವನು ರಾಜ್ಯಕ್ಕೆ ಮರಳುತ್ತಾನೆ. ತಿಂಗಳಾನುಗಟ್ಟಲೆ ಕಳೆದರೂ ಬಾರದ ಅಣ್ಣನ ಪರವಾಗಿ ರಾಜ್ಯವಾಳಲು ಪ್ರಾರಂಭಿಸುತ್ತಾನೆ. ನಂತರ ಆ ಬಂಡೆಯನ್ನೊಡೆದು ಹೊರಬರೋ ವಾಲಿ, ತಮ್ಮನ ಬಗ್ಗೆ ತಪ್ಪಾಗಿ ತಿಳಿದು ಅವನನ್ನು ರಾಜ್ಯದಿಂದ ಹೊರಹಾಕುತ್ತಾನೆ. ಅಣ್ಣನಿಂದ ಜೀವವುಳಿಸಿಕೊಳ್ಳಲು ಸುಗ್ರೀವನು ಇದೇ ಮಾತಂಗಪರ್ವತದ ತಪ್ಪಲಿನಲ್ಲಿ ಬಂದು ನೆಲೆಸುತ್ತಾನೆ. ಹಂಪಿಯ ಪಕ್ಕದಲ್ಲಿರೋ ಏಕಶಿಲಾ ನಂದಿಯ ಪಕ್ಕದಿಂದ ಶುರುವಾಗೋ ಮಾತಂಗಪರ್ವತಕ್ಕೂ , ಕಿಷ್ಕಿಂದೆಯ ಈ ಗುಹೆಗೂ ಹೆಚ್ಚಿನ ದೂರವೇನಿಲ್ಲ ! ಆದರೆ ಈ ಗುಹೆ ವಾಲಿ ದುಂದುಭಿಯ ಸಹೋದರ ಮಾಯಾವಿಯನ್ನು ಕೊಂದ ಗುಹೆಯೋ ಅಥವಾ ವಾಲಿ ವಾಸವಿದ್ದ ಗುಹೆಯೋ ಎಂಬುದರ ಬಗ್ಗೆ ಸ್ಥಳೀಕರಲ್ಲಿ ಮಾಹಿತಿ ಸಿಕ್ಕಲಿಲ್ಲ. ನಮ್ಮ ಇತಿಹಾಸದ ಬಗ್ಗೆ ನಮಗೇ ಇಲ್ಲದಿರುವ ಪ್ರಜ್ಞೆ, ಅಭಿಮಾನಶೂನ್ಯತೆ ಬೇಸರ ತರಿಸದೇ ಇದ್ದೀತೆ ? 

ಪ್ರಸಂಗ ೪:
ಹಂಪಿಯ ಸಾಸಿವೆಕಾಳು ಗಣೇಶನ ದೇಗುಲದಿಂದ ಕೆಳಗೆ ಸಾಗೋ, ಉಗ್ರ ನರಸಿಂಹನ ದೇಗುಲದತ್ತ ಕರೆದೊಯ್ಯೋ ರಸ್ತೆಯಲ್ಲಿ ಮೊದಲಿಗೆ ಸಿಕ್ಕಿದ್ದು ಶ್ರೀಕೃಷ್ಣ ದೇಗುಲ, ಕೆಳಗೆ ಕಾಣಿಸೋ ಕೃಷ್ಣ ಬಜಾರು ಮತ್ತು ಲೋಕಪಾವನಿ ಕೊಳ ಅಥವಾ ಪುಷ್ಕರಿಣಿ.  ಶ್ರೀ ಕೃಷ್ಣದೇವರಾಯನ ಸರಿಸುಮಾರಿನಲ್ಲಿ ಬಹುಪಾಲು ಆಂಧ್ರ, ತೆಲಂಗಾಣ ಮತ್ತು ಪೂರಾ ಒಡಿಸ್ಸಾ, ಇಂದಿನ ಪಶ್ಚಿಮ ಬಂಗಾಳ, ಜಾರಖಂಡ, ಛತ್ತೀಸ್ಗಡವನ್ನು ಆಳುತ್ತಿದ್ದುದು ಕಳಿಂಗದ ರಾಜ ಗಜಪತಿ ಪ್ರತಾಪ ರುದ್ರ ದೇವ.  ವಿಜಯನಗರ ಸೇನೆ ೧೫೧೨ರಲ್ಲಿ ಕಳಿಂಗ ರಾಜ್ಯಕ್ಕೆ ಸೇರಿದ್ದ ಉದಯಗಿರಿ ಕೋಟೆಗೆ ಮುತ್ತಿಗೆ ಹಾಕುತ್ತದೆ. ಅಲ್ಲಿ ವರ್ಷದ ತನಕದ ಯುದ್ದದಲ್ಲಿ ಹಸಿವೆಯಿಂದ ಕಳಿಂಗ ಸೇನೆ ಕಾಲ್ಕೀಳುತ್ತದೆ. ನಂತರ ಕೊಂಡವೀಡುರಾಜುವಿನಲ್ಲಿ ವಿಜಯನಗರ ಸೇನೆಯನ್ನು ಮುಖಾಮುಖಿಯಾಗೋ ಕಳಿಂಗ ಸೇನೆಯ ಮೇಲೆ ದಾಳಿಗಯ್ದ ವಿಜಯನಗರದ ತಿಮ್ಮರಸು ರಾಜಕುವರ ವೀರಭದ್ರನನ್ನು ಸೆರೆಹಿಡಿಯುತ್ತಾನೆ. ನಂತರ ತನ್ನ ಪುತ್ರಿ ರಾಜಕುಮಾರಿ ಅನ್ನಪೂರ್ಣ ದೇವಿಯನ್ನು, ಶ್ರೀಕೃಷ್ಣದೇವರಾಯನಿಗೆ ಮದುವೆ ಮಾಡಿಕೊಟ್ಟು ಶಾಂತಿ ಒಪ್ಪಂದವನ್ನು ಸಹಿಹಾಕೋ ವಿಜಯನಗರ, ಕಳಿಂಗಗಳೆಂಬ ರಾಜ್ಯಗಳಿಗೆ ಕೃಷ್ಣೆ ಗಡಿಯಾಗುತ್ತಾಳೆ.  ಶ್ರೀಕೃಷ್ಣ ದೇವರಾಯನು ಕಳಿಂಗದ ಗಜಪತಿಯ ಮೇಲಿನ ವಿಜಯದ ಸವಿನೆನಪಿಗೆ ೧೫೧೩ರಲ್ಲಿ ಉದಯಗಿರಿಯಿಂದ ತಂದ ಬಾಲಕೃಷ್ಣನ ವಿಗ್ರಹಕ್ಕೆ ಪ್ರಸಕ್ತ ಕೃಷ್ಣದೇಗುಲವನ್ನು ನಿರ್ಮಿಸುತ್ತಾನೆ ಎನ್ನುತ್ತದೆ ಇತಿಹಾಸ. ದ್ವಾರದಲ್ಲೇ ಶ್ರೀಕೃಷ್ಣದೇವರಾಯನ ಬರಹ ಎಂದು ಇಲ್ಲಿನ ಗೈಡುಗಳು ಪರಿಚಯಿಸೋ ಹಳೆಗನ್ನಡ ಲಿಪಿಯಿದೆ.ಒಳಗಿನ ದೇಗುಲದಲ್ಲಿ ದಶಾವತಾರ, ಭಾಗವತದ ಕೆತ್ತನೆಗಳಿವೆ. ಈ ಲಿಪಿಯನ್ನು ನೋಡಿ This is a mix of kannada, telugu ಅಂತ ಪರಿಚಯಿಸುತ್ತಿದ್ದರು ಒಬ್ಬರು ಅಲ್ಲಿ ಬಂದ ಹೊಸಬರಿಗೆ. It is halekannada, old form of kannada ಅಂದೆ. ಹಾಂ. ಸರಿ ಸರಿ ಅಂತ ಪೆಚ್ಚುಮೋರೆಯ ನಗುವನ್ನಿತ್ತ ಅವರು ಮುಂದೆ ಹೋದರು. ಅಷ್ಟರಲ್ಲೇ ಎದುರಾದ ಹಳೆಗನ್ನಡ ಲಿಪಿಯಲ್ಲಿ ಏನಿದೆ ?ಓದ್ತಿರಾ ಅಂತ ಸ್ಥಳೀಯ ಗೈಡೊಬ್ಬರಿಗೆ ವಿದೇಶಿಯರೊಬ್ಬರು ಕುತೂಹಲದಿಂದ ಪ್ರಶ್ನಿಸಿದರು. ಇಲ್ಲಿನ ಅಕ್ಷರಗಳು ಕೂಡಿಕೊಂಡಿದೆ , ನಾವು ಬರೆಯುವ ಹಾಗಿಲ್ಲ ಹಾಗಾಗಿ ಅದನ್ನು ಓದಲಾಗೋಲ್ಲ ಅಂತ ಪಿಳ್ಳೆ ನೆವ ಕೊಟ್ಟ ಆ ಪುಣ್ಯಾತ್ಮ ಅವರನ್ನು ಮುಂದೆ ಸಾಗಹಾಕಿದ. ನಮ್ಮ ಇತಿಹಾಸದ ಭಾಗವೇ ಆಗಿರೋ ಹಳೆಗನ್ನಡ ಲಿಪಿಯನ್ನು ಓದಲು ಬರೋಲ್ಲ ಅನ್ನೋದು ನಮಗೆಲ್ಲಾ ಅವಮಾನವಾಗಬೇಕಾದ ಸಂಗತಿಯಲ್ಲದೇ ಇನ್ನೇನು ?  ನಮ್ಮ ಇತಿಹಾಸದ ಬಗ್ಗೆ ಹೆಮ್ಮೆಯಿಲ್ಲದ, ಐತಿಹಾಸಿಕ ಸ್ಥಳಗಳಲ್ಲಿರೋ ಬರಹಗಳಲ್ಲಿ ಶಾಲಿವಾಹನ ಶಕೆ, ಶ್ರೀ, ರ, ಮ, ಯ ಮುಂತಾದ ಅಕ್ಷರಗಳನ್ನಾದರೂ ಓದಲು ಪ್ರಯತ್ನಿಸದ ನಮಗೆ ಆ ಸ್ಥಳಗಳಿಗೆ ಬರೋ ವಿದೇಶೀಯರ ಅರೆಬರೆ ಬಟ್ಟೆಗಳೊಂದೇ ಕಾಣುವಂತಾಗಿರೋದು ವಿಪರ್ಯಾಸ. 

ಇನ್ನಿತರ ಅದೆಷ್ಟೋ ಪ್ರಸಂಗಗಳು :
ಹಂಪಿಗೆ ಹೊಸಪೇಟೆಯಿಂದ ಬರುವವರು ಕಮಲಾಪುರದ ಮೇಲೆ ಅಥವಾ ಕಡ್ಡಿರಾಂಪುರದ ಮೇಲೆ ತೆರಳಬಹುದು ಅನ್ನೋದು ಅಲ್ಲಿಗೆ ಅಲ್ಲಿನ ಸಾಮಾನ್ಯ ಸಾರಿಗೆ ವಿಜಯರಥರಲ್ಲಿ ೧೩ ರೂ ಕೊಟ್ಟು ಸಾಗಿದವರಿಗೆ ತಿಳಿದಿದ್ದೇ. ಕಮಲಾಪುರ ಮಾರ್ಗದಲ್ಲಿ ಸಾಗುವಾಗ ಮೊದಲು ಸಿಗೋದು ಸರಸ್ವತಿ ಮಂದಿರ, ಚಂದ್ರಶೇಖರ ಮಂದಿರ ಮತ್ತು ಅಷ್ಟಭುಜ ಸ್ನಾನದ ಕೊಳಗಳೆಂಬ ಅಮೋಘ ರಚನೆಗಳು.

ಅಲ್ಲಿನ ಚಂದ್ರಶೇಖರ ದೇಗುಲದ ಎದುರು ಮಾಹಿತಿಫಲಕವಿದ್ದ ಕುರುಹಿನ ಬೋರ್ಡಿದೆಯಾದರೂ ಅದರಲ್ಲಿ ಮಾಹಿತಿಯಿಲ್ಲ. ಏನಣ್ಣ ಇದು ಎಂದು ಅಲ್ಲಿಗೆ ನಮ್ಮನ್ನ ಕರೆದೊಯ್ದಿದ್ದ ಆಟೋ ಚಾಲಕನಿಗೆ ಕೇಳಿದರೆ ಇಲ್ಲಿನ ಜನ ಹಂಗೇ ಸಾರ್. ಅಲ್ಯುಮಿನಿಯಂದು ಅಂತ ಇಲ್ಲಿನ ಫಲಕವನ್ನೂ ಬಿಟ್ಟಿಲ್ಲ ಅಂತಾ ಇದ್ದರೆ ನನಗೆ ಎದೆ ಧಸಕ್ಕಂತಾ ಇತ್ತು. ಇಲ್ಲೊಂದೇ ಅಲ್ಲ, ಹಂಪಿಯ ವಿರೂಪಾಕ್ಷ ದೇಗುಲವನ್ನು ಹೊರತುಪಡಿಸಿ ಗುಡ್ಡ ಬೆಟ್ಟಗಳಲ್ಲಿ ಕಣ್ಣು ಹಾಯಿಸಿದತ್ತೆಲ್ಲಾ ಕಾಣೋ ಅಸಂಖ್ಯಾತ ದೇಗುಲಗಳ ಗರ್ಭಗೃಹದಲ್ಲಿ ಕಾಣಸಿಕ್ಕಿದ್ದು  ಖಾಲಿ ಪಾಣಿ ಪೀಠವಷ್ಟೆ. ಅಲ್ಲಲ್ಲಿ ಬಿದ್ದುಹೋಗಿರೋ ಆ ದೇಗುಲಗಳಲ್ಲಿದ್ದ ಪೂಜಾ ವಿಗ್ರಹಗಳೆಲ್ಲಾ ಎಲ್ಲಿ ಹೋದವು ?  ಅಲ್ಲಿನ ಮೂಲೆ ಮೂಲೆಗಳೆಲ್ಲಾ ಖಾಲಿ ಖಾಲಿಯಾಗಿ ಬಾವಲಿಗಳ ಹಿಕ್ಕೆಗಳಿಗೆ, ಜೇಡರ ಬಲೆಗಳಿಗೆ, ಬ್ಯಾಟರಿಯಿಲ್ಲದೆ ಒಳಗೆ ಹೆಜ್ಜೆಯಿಕ್ಕಲೂ ಹೆದರಿಕೆ ಹುಟ್ಟಿಸೋ ಸ್ಥಿತಿಯಲ್ಲಿರೋದು ಏಕೆ ಅನ್ನೋ ಪ್ರಶ್ನೆಗಳು ಇಲ್ಲಿಗೆ ಭೇಟಿ ಕೊಡೋ ಯಾರಿಗಾದರೂ ಕಾಡದೇ ಇರೋಲ್ಲ. ಹಂಪಿಯಲ್ಲೇ ಎಲ್ಲೇ ಹಾದಿ ತಪ್ಪಿ ನಡೆದರೂ ಒಂದು ಕಿ.ಮೀ ಸಾಗೋ ಹೊತ್ತಿಗೆ ಯಾವುದಾದರೂ ಪಾಳು ಬಿದ್ದ ಗುಡಿಯೋ, ಗೋಪುರವೋ, ಕಂಬದ ಸಾಲೋ, ಪುಷ್ಕರಿಣಿಯೋ ಸಿಗೋದ್ರಲ್ಲಿ ಸಂಶಯವಿಲ್ಲ ! ಅದೆಷ್ಟೋ ಗುಡಿಗಳೆದುರು ಸಂರಕ್ಷಿತ ಸ್ಮಾರಕ ಎನ್ನುವ ಬೋರ್ಡಿದೆಯಾದರೂ ಅದ್ಯಾವ ಗುಡಿ, ಅದರ ಇತಿಹಾಸವೇನೆಂಬ ಕನಿಷ್ಟ ಮಾಹಿತಿಯೂ ಇಲ್ಲವೆನ್ನೋದು ಬೇಸರದ ಸಂಗತಿ. ಎದುರಿಗೋರೋ ಮುರಿದು ಬಿದ್ದ ನಂದಿಧ್ವಜವೋ, ಗರುಡಗಂಬದ ಮೇಲೆ , ಒಳಗಿನ ಒಂದಿಷ್ಟು ಮೂರ್ತಿಗಳ ಆಧಾರದ ಮೇಲೆ ಇದು ಶೈವ, ವೈಷ್ಣವ ದೇಗುಲವೆಂದು ವಿಂಗಡಿಸಬಹುದೇ ಹೊರತು ಅದರ ಬಗೆಗಿನ ಹೆಚ್ಚಿನ ಮಾಹಿತಿಯರಿಯೋದು ಜನ ಸಾಮಾನ್ಯನ ಪಾಲಿಗೆ ಪ್ರಯಾಸದಾಯಕವೇ. ಸಾಲದ್ದಕ್ಕೆ ಮುಖ್ಯ ದೇಗುಲಗಳತ್ತಲೇ ರೌಂಡ್ ಹೊಡೆಸೋ ಗೈಡುಗಳು ಸ್ಮಶಾನ ಭೈರವಿ ಎಂಬ ಹೊಯ್ಸಳ ಶೈಲಿಯ ದೇಗುಲಗಳಲ್ಲಿ ಅತೀ ಸಾಮಾನ್ಯವಾದ ಶಿಲ್ಪವನ್ನು ಇದು ಪಾತಾಳ ಭೈರವ ಎಂಬ ಪುರುಷ ಶಿಲ್ಪ ಎಂಬ ತಪ್ಪು ಮಾಹಿತಿ ಕೊಡ್ತಾ ಇದ್ದರೆ ಅದು ಯಾರ ತಪ್ಪು ? ಇತಿಹಾಸದ ಬಗೆಗಿನ ಅವಜ್ಞೆಯಿರೋ ಗೈಡುಗಳದೇ ಅಥವಾ ಇತಿಹಾಸವನ್ನು ಹಂತ ಹಂತವಾಗಿ ನಿರ್ಲಕ್ಷಿಸುತ್ತಾ ಬಂದಿರೋ ನಮ್ಮೆಲ್ಲರದೇ ? ಹಂಪಿಯ ಪುರಂದರ ಮಂಟಪದಲ್ಲೋ, ಏಕಶಿಲಾ ನಂದಿಯತ್ತ ಸಾಗೋ ದಾರಿಯಲ್ಲಿ ಎಡತಿರುವು ಪಡೆದು ನದಿಯತ್ತ ಸಾಗೋ ಕೆಂಪಭೂಪ ಮಾರ್ಗದಲ್ಲೋ ಸಾಗಿ ತುಂಗಭದ್ರೆಯ ಆಚೆಯ ದಡದತ್ತ ಕಣ್ಣು ಹಾಯಿಸಿದರೆ ಅಸಂಖ್ಯ ಕಲ್ಲ ಕಂಬಗಳು, ದೇಗುಲಗಳ ಪಳೆಯುಳಿಕೆಗಳು ಕಾಣಸಿಗುತ್ತೆ. ಅದೆಷ್ಟೋ ದೇಗುಲಗಳ ಗರ್ಭಗೃಹದಲ್ಲಿರೋ ಮೂರ್ತಿಗಳನ್ನ ಬಿಡಿ, ಆ ಗರ್ಭಗೃಹಕ್ಕಿದ್ದ ಕಳಸಗಳೂ ಇಲ್ಲದೇ ಅವೆಲ್ಲಾ ಬೆಳಕಿಂಡಿಗಳಾಗಿದೆ. ಶ್ರೀ ಮಂಜುನಾಥ ಸಿನಿಮಾದಲ್ಲಿ ಸೌಂದರ್ಯ ಶಿವನ ಮೇಲೆ ಪುಷ್ಪಾರ್ಚನೆಗಯ್ದ ಶೂಟಿಂಗ್ ನಡೆದ ಜಾಗವೆಂಬೋ ಕಾರಣಕ್ಕೋ ಮತ್ಯಾವ ಕಾರಣಕ್ಕೋ ಬಡವಿ ಲಿಂಗ ಮತ್ತದರ ಪಕ್ಕದಲ್ಲಿದ ಜಗದ್ವಿಖ್ಯಾತ ಲಕ್ಷ್ಮೀ ನರಸಿಂಹನ ಪ್ರಾಗಂಣ ಸ್ವಲ್ಪ ಶುಚಿಯಾಗಿದೆಯಾದರೂ ಉಳಿದ ದೇಗುಲಗಳ ಬಗ್ಗೆ ಈ ಮಾತು ಹೇಳುವಂತಿಲ್ಲ. ಉದ್ದಾನ ರಾಮಸ್ವಾಮಿ ದೇಗುಲದ ಪಕ್ಕದಲ್ಲಿರೋ ಚಂಡಿಕೇಶ್ವರನಿಗೆ ಹಗಲು, ರಾತ್ರಿಗಳೆನ್ನದೇ ಎಲ್ಲಾ ಸಮಯದಲ್ಲೂ ಬೀಗಯೋಗವಾದರೆ , ಅದಕ್ಕಿಂತ ಮುಂಚೆ ಸಿಗೋ ಭೂಗತ ಶಿವಾಲಯದಲ್ಲಿ ಗರ್ಭಗೃಹದವರೆಗೂ ನಿಂತ ಸುಮಾರು ಒಂದೂವರೆ ಅಡಿ ಮಳೆ ನೀರು !  ಆ ಮಳೆ ನೀರಲ್ಲಿ ಮೀನುಗಳು, ಕಪ್ಪೆಗಳು ಸಂಸಾರ ಹೂಡಿ ಈಜುತ್ತಾ ಇದ್ದರೆ ಪ್ರಯಾಸಪಟ್ಟು ಗರ್ಭಗೃಹದವರೆಗೆ ಆ ನೀರಲ್ಲೇ ಹೋಗಿಬಂದ ನಮಗೆ ಇತಿಹಾಸದ ಪುಟಗಳ ಕಣ್ಣೀರೇ ಈ ರೀತಿ ನಿಂತ ನೀರಾಗಿರಬಹುದೇ ಎಂಬ ಅನುಮಾನ ಒಮ್ಮೆ ಕಾಡಿದ್ದರೆ ಅದರಲ್ಲಿ ಅಚ್ಚರಿಯೇನಿರಲಿಲ್ಲ !  

ಪ್ರಶಸ್ತಿ
೪-ಅಕ್ಟೋಬರ್, ೨೦೧೫
ಬೆಂಗಳೂರು


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Rudrappa
Rudrappa
8 years ago

ನಿಮ್ಮ ಕಳಕಳಿ ಸರಿಯಾದುದ್ದೆ, ಭವ್ಯ ನಾಡು ಎಂದೆನೆಸಲು ಇತಿಹಾಸ ಪಠ್ಯದಲ್ಲಿ  ಉಳಿದರೆ  ಸಾಕಿಲ್ಲ. ಇತಿಹಾಸವ  ಮೆರೆಸುವ ಇಂತಹ ಸಾಕ್ಷ್ಯಗಳು ಬರಿ ಸಾಕ್ಷ್ಯ ಚಿತ್ರಗಳಲ್ಲೇ ಉಳಿದುಬಿಡುತ್ತವೇನೋ ಎಂಬ ಆತಂಕ ಬರಹದಲ್ಲಿ ಎದ್ದು ಕಾಣುತಿದೆ. 

1
0
Would love your thoughts, please comment.x
()
x