ಲೇಖನ

ನಾಡು, ನುಡಿಯ ಮೇಲಿನ ಅಭಿಮಾನ: ಕೃಷ್ಣವೇಣಿ ಕಿದೂರ್

ಛತ್ತೀಸ್ ಘಡದಲ್ಲಿ ಒಂದು  ಅಖಿಲ ಭಾರತ ಮಹಿಳಾ ಕಾನ್ ಫರೆನ್ಸಿಗೆ   ನಾವು ಬಂದಿದ್ದೆವು. ಭಾರತದ ಎಲ್ಲೆಡೆಯಿಂದ ಬಂದ ಮಹಿಳೆಯರು ಅಲ್ಲಿದ್ದರು. ವಿವಿಧ ಉಡುಗೆ ತೊಡುಗೆ, ವೈವಿಧ್ಯಮಯ ಆಹಾರ, ವಿವಿಧ ಭಾಷೆ ಎಲ್ಲವನ್ನೂ ಗಮನಿಸುತ್ತಿದ್ದೆವು. ನಾವು ಕೇರಳದವರು ನಾಲ್ಕು ಮಂದಿ ಒಟ್ಟಾಗಿದ್ದೆವು. ಕಾನ್ ಫರೆನ್ಸ್ ನ ಎರಡನೆಯ ದಿನ. ನಾವುಈ ಮೊದಲೇ ಮಾತಾಡಿಕೊಂಡ ಹಾಗೆ ಕೇರಳದ ಮಲಯಾಳಿ ಸೀರೆ ಉಟ್ಟಿದ್ದೆವು. ನಸು ಕ್ರೀಂ ಬಣ್ಣದ   ಖಾಲಿ(ಪ್ಲೈನ್)   ಸೀರೆಗೆ ಚಿನ್ನದ ಬಣ್ಣದ ಜರಿಯ ಅಂಚು, ಅದೇ ರೀತಿಯ ಜರಿಯ ಸೆರಗು. ತುಂಬ ಆಕರ್ಷಕ ಸೀರೆ. ನಮ್ಮ ರಾಜ್ಯದ ಸಾಂಪ್ರದಾಯಿಕ ಸೀರೆ ಅದು.   ಅದನ್ನುಟ್ಟು ನಾವು ಸಭಾಂಗಣಕ್ಕೆ ಬಂದು ಮೊದಲ ಸಾಲಿನಲ್ಲಿ ಕುಳಿತಿದ್ದೆವು. ಆ ದಿನ ವೇದಿಕೆಯಲ್ಲಿ ಮಾನ್ಯ ಸ್ಮೃತಿ ಇರಾನಿ ಅವರಿಂದ ಉಪನ್ಯಾಸವಿತ್ತು. ಆ ಸೆಷನ್ ಮುಗಿದ ಮೇಲೆ  ಸಭೆಯ ಹಿಂದೆ  ಆಸಕ್ತಿಯಿಂದ ಬಂದು ಕೂತು ಆಲಿಸುತ್ತಿದ್ದ ಕೆಲ ಮಹಿಳೆಯರು ನಮ್ಮತ್ತ ಬಂದರು. "ನೀವು ಕೇರಳದವರಾ?"  ಕೇಳಿದರು ಮಲಯಾಳದಲ್ಲಿ. ಹೌದು ಎಂಬ ನಮ್ಮ ಉತ್ತರ ಕೇಳಿ ಬಲು ಸಂತೋಷವಾಯಿತು ಅವರಿಗೆ. ತಮ್ಮ ಪರಿಚಯವನ್ನು ಮಾಡಿಕೊಟ್ಟರು. ಸಂಜೆ ಎಷ್ಟು ಘಂಟೆಗೆ ಮುಗಿಯುತ್ತದೆ ಎಂದು ವಿಚಾರಿಸಿದರು ಆ ಮೇಲೆ  ನಾವು ಸಂಜೆ ಐದು ಘಂಟೆಗೆ ಬಂದು ಹಿಂದೆ ಕುಳಿತಿರುತ್ತೇವೆ. ಆಗ ಭೇಟಿ ಆಗೋಣ. ಎಂದು ಹೇಳಿ  ವಾಪಸ್ ಹೋದರು.

ಸಂಜೆ ಕರಾರುವಾಕ್ಕಾಗಿ ಐದು ಘಂಟೆಗೆ ಮುಗಿಯಿತು. ಸೀಟಿನಿಂದ ಎದ್ದು ನಾವು ಹಿಂದೆ ಬರುತ್ತಿದ್ದ ಹಾಗೆ ಅಲ್ಲಿ ಕುಳಿತಿದ್ದ ಸುಮಾರು ಇಪ್ಪತ್ತೈದು ಮಂದಿ ಎದ್ದು ನಿಂತರು. ಬೆಳಗ್ಗೆ ಭೇಟಿಮಾಡಿದ ಸ್ತ್ರೀಯರೂ ಇದ್ದರು. ಕೈಮುಗಿದು  ತಾವೆಲ್ಲಾ ಛತ್ತೀಸ್ ಘಡದಲ್ಲಿ ವಾಸವಾಗಿರುವ ಕೇರಳಿಗರು ಎಂದು ಹೇಳಿ ನಮ್ಮ ಪರಿಚಯ , ಊರು ವಿಚಾರಿಸಿದರು. ಅಲ್ಲಿಯೇ ಕುರ್ಚಿ ಎಳೆದು ವರ್ತುಲಾಕಾರವಾಗಿ ಕುಳಿತು ಪ್ರತಿಯೊಬ್ಬರನ್ನೂ ಹೆಸರು, ಉದ್ಯೋಗ, ಕೇರಳದಲ್ಲಿನ ಊರು ಹೇಳಿದರು. ನಂತರ ನಮಗೆ ಸಿಟಿ ತೋರಿಸಲು ಕರೆದೊಯ್ದರು. ಆಗ ಸಂಜೆ ಆರು ಘಂಟೆಗೆ ಸಮೀಪವಾದ ಕಾರಣ ಮರುದಿನ ಪುನ ಬರುತ್ತೇವೆ. ನಾವೇ ನಿಮ್ಮನ್ನು ಎಲ್ಲಾ ಕಡೆಗೆ ಕರೆದೊಯ್ಯುತ್ತೇವೆ ಎಂದು ಒಪ್ಪಿಗೆ ಕೇ್ಳಿ ಹಿಂದಿರುಗಿದರು. ಮರುದಿನ ಸಂಜೆ  ಅವರ ವಾಹನ ತಂದು ನಮ್ಮನ್ನು ಅವರಿಲ್ಲಿ ನೆಲೆಸಿದ ನಂತರ ಸ್ಥಾಪಿಸಿದ ನಾರಾಯಣಗುರು ವಿದ್ಯಾಸಂಸ್ಥೆಗಳು, ಅಯ್ಯಪ್ಪ ಸ್ವಾಮಿ ಕ್ಷೇತ್ರಕ್ಕೆ ಮೊದಲಿಗೆ ಕರೆತಂದು ತೋರಿಸಿದರು. ವಿಶಾಲವಾದ ಜಾಗದಲ್ಲಿ ಸ್ಥಾಪನೆಯಾದ ಶಾಲೆಯಲ್ಲಿ ಶಿಶುವಿಹಾರದಿಂದ ಆರಂಭವಾಗಿ ಕಾಲೇಜಿನ ತನಕದ ವಿದ್ಯಾಭ್ಯಾಸದ ಸೌಕರ್ಯ ಇತ್ತು. ಶ್ರೀ ಅಯ್ಯಪ್ಪಸ್ವಾಮಿ ಕ್ಷೇತ್ರದ  ದೈವಿಕತೆ, ಪಾವಿತ್ರ್ಯ, ಭಕ್ತಿಭಾವ ಉದ್ದೀಪಿಸುವ ವಾತಾವರಣ ಕಂಡಾಗ ಅಲ್ಲಿ ಶಬರಿಮಲೆಯನ್ನೇ ಕಂಡ ಸಾರ್ಥಕತೆ ನಮ್ಮದು.  ದೇಗುಲದ ಕಮಿಟಿಯ ಮುಖ್ಯಸ್ಥರು  ಅಲ್ಲಿ ನೆಲೆಸಿದ  ಕೇರಳೀಯ ಮುಸ್ಲಿಂ ಬಾಂಧವರೊಬ್ಬರು. ಅವರೂ ಜೊತೆಗೆ ಇದ್ದರು. ತೀರಾ ಸರಳ ವ್ಯಕ್ತಿತ್ವದ  ಹಿರಿಯರು.

ಅಂದು ನಮ್ಮನ್ನು ಅವರೆಲ್ಲ ಇಡೀ ಛತ್ತೀಸ್ ಘಡ ತೋರಿಸಿ, ಕೆಲವರ ಮನೆ ಆತಿಥ್ಯ ನೀಡಿ ಸತ್ಕರಿಸಿದ ನೆನಪು ಅವಿಸ್ಮರಣೀಯ. ನಾವು ಹಿಂದಿರುಗುವ ದಿನ  ನಮ್ಮ ಕೈತುಂಬ ಅಲ್ಲಿನ ಸಿಹಿ, ಆಹಾರ, ಹಣ್ಣುಗಳು. ಅದೆಲ್ಲ ನಮ್ಮ ದಾರಿಯ ಖರ್ಚಿಗೆ ಅಂತ ಪ್ರೀತಿಯಿಂದ ಕೊಟ್ಟಿದ್ದು. ನಮ್ಮನ್ನು ಬೀಳ್ಕೊಡಲು ಬಂದು  ಪ್ರೀತಿ, ಅಭಿಮಾನದಿಂದ ವಿದಾಯ ಕೋರಿದ್ದರು. ಸಂಪೂರ್ಣವಾಗಿ ನಾವು ಅವರಿಗೆ ಅಪರಿಚಿತರು. ಹಾಗಿದ್ದರೂ ಕೇವಲ ಅವರುಗಳು ಹುಟ್ಟಿಬೆಳೆದ ಕೇರಳದ ನೆಲದಿಂದ ಬಂದವರು ಎಂಬ ಅಭಿಮಾನ ಆದರಗಳಿಂದ ನಮಗೆ ಸಲ್ಲಿಸಿದ ಆತಿಥ್ಯ, ಐದು ಘಂಟೆಗೆ ಮುಗಿಯುವ ಕಾನ್ ಫರೆನ್ಸ್ ಗೆ ನಾಲ್ಕು ಘಂಟೆಗೇ ತಲುಪಿ  ಒಂದು ಘಂಟೆ ಕಾಲ ಕಾದು ನಮ್ಮನ್ನು ನಗರ ತೋರಿಸಲು ಕರೆದೊಯ್ಯುತ್ತಿದ್ದ ಆತ್ಮೀಯತೆಗೆ ಬೆಲೆ ಕಟ್ಟಲು ಅಸಾಧ್ಯ. ನಮ್ಮನ್ನು ಒಟ್ಟಾಗಿಸಿದ್ದು ಕೇವಲ  ನೆಲ, ಭಾಷೆ, ಮುಖ್ಯವಾಗಿ   ಹೊನ್ನಿನ ಜರಿಯ ಮಲಯಾಳಿ ಸೀರೆ. ಅದೆಂಥಹ ಆತ್ಮೀಯತೆ  ಅಂದರೆ  ಅಲ್ಲಿನ  ಜನರ ಆದರ, ಪ್ರೀತಿ, ವಿಶ್ವಾಸ  ಮರೆಯಲುಂಟೇ!   ಬರಿಯ ನಾಲ್ಕು ದಿನಕ್ಕೆ ಬಂದ ನಮಗೆ ಅವರಿಗೆ ವಿದಾಯ ಕೋರಿ ಹೊರಡುವಾಗ  ಅದೇನೋ  ಕಳೆದುಕೊಂಡ  ಭಾವ  ಎದೆಯಾಳದಲ್ಲಿ   ಅಂದು ಮೂಡಿದ್ದು  ಆ ನೆನಪಾದಾಗೆಲ್ಲ ಇಂದಿಗೂ ಹಾಗೇ  ಎದ್ದು ಬರುತ್ತದೆ.

ಕೃಷ್ಣವೇಣಿ ಕಿದೂರ್, 


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *