ಕಲೆ-ಸಂಸ್ಕೃತಿ

ನಾಟ್ಯೋತ್ಪತ್ತಿ: ಕೆ.ಪಿ.ಎಂ.ಗಣೇಶಯ್ಯ

ಭವದ್ಭಿಃ ಶುಚಿಭಿರ್ಭೂತ್ವಾ ತಥಾವಹಿತಮಾನಸೈಃ| 
ಶ್ರೂಯತಾಂ ನಾಟ್ಯವೇದಸ್ಯ ಸಂಭವೋ ಬ್ರಹ್ಮನಿರ್ಮಿತಃ|

-ನಾಟ್ಯಶಾಸ್ತ್ರ 

ನಾಟ್ಯದ ಉತ್ಪತ್ತಿ ಎಂಬುದು ಹೇಗಾಯ್ತು? ನಾಟ್ಯ ವಿಶಾರದ ಭರತಮುನಿಯನ್ನು ಆತ್ರೇಯ ಮೊದಲಾದ ಋಷಿಗಳು ಪ್ರಶ್ನಿಸಿದರು. ಪೂರ್ವದಲ್ಲಿ ಸ್ವಾಯಂಭುವ ಮನ್ವಂತರದಲ್ಲಿ ಕೃತಯುಗ ಮುಗಿದು ವೈವಸ್ವತ ಮನ್ವಂತರದ ತ್ರೇತಾಯುಗ ಆರಂಭವಾಗುವ ಮಧ್ಯಂತರದಲ್ಲಿ ಜನರು ಕಾಮಲೋಭಗಳಲ್ಲಿ ಅಸಭ್ಯರಾಗಿ ವರ್ತಿಸುತ್ತಿದ್ದರು. ಇಂದ್ರನನ್ನು ಮುಂದೆ ಮಾಡಿಕೊಂಡ ದೇವತೆಗಳು ಬ್ರಹ್ಮನಲ್ಲಿಗೆ ಬಂದು ವೇದಗಳು ಶೂದ್ರಜಾತಿಗಳಿಗೆ ನಿಷಿದ್ಧವಾದುದರಿಂದ ಎಲ್ಲ ಜಾತಿ (ವರ್ಣ)ಗಳಿಗೆ ಲಭ್ಯವಾಗುವಂತಹ ಐದನೆಯ ವೇದವನ್ನು ರಚಿಸುವಂತೆ ಭಿನ್ನವಿಸಿದರು. ಅದರಂತೆ ಬ್ರಹ್ಮನು ಋಗ್ವೇದದಿಂದ ಸಂಭಾಷಣೆಗಳಿಂದ ಕೂಡಿದ ಸಾಹಿತ್ಯವನ್ನು ಸಾಮವೇದದಿಂದ ಗೀತವನ್ನು, ಯಜುರ್ವೇದದಿಂದ ಅಭಿನಯವನ್ನು, ಅಥರ್ವಣ ವೇದದಿಂದ ರಸಗಳನ್ನು ಆಯ್ದುಕೊಂಡು ಉಪವೇದಗಳ (ವೇದಗಳ ಅರ್ಥವನ್ನು ವಿವರಿಸುವ ಅದಕ್ಕೆ ಪೋಷಕವಾಗುವ ಗ್ರಂಥಗಳಿಗೆ ಉಪವೇದ ಎಂಬ ಹೆಸರು) ಸಹಿತವಾಗಿ ನಾಟ್ಯವೇದವನ್ನು ರಚಿಸಿದನು. ಮತ್ತು ಇಂದ್ರನಿಗೆ ದೇವತೆಗಳಲ್ಲಿ ಕುಶಲ, ಜಾಣ, ಚಾಣಾಕ್ಷ, ಪರಿಶ್ರಮ ಬಲ್ಲವರನ್ನು ಆರಿಸಿ ಪ್ರಯೋಗಿಸಬೇಕೆಂದನು. ಇಂದ್ರನು ಆ ಗ್ರಂಥವನ್ನು ಓದಿ ಅರಗಿಸಿಕೊಳ್ಳಲು, ಅರಿತು ಪ್ರಯೋಗಿಸಲು ದೇವತೆಗಳು ಅಸಮರ್ಥರು ಎನ್ನುತ್ತಾನೆ. ಬದಲಿಗೆ ವೇದಗಳ ರಹಸ್ಯ ಅರಿತ, ತೀಕ್ಷ್ಣವ್ರತ ನಿಯಮಗಳಲ್ಲಿ ನಿರತರಾದ ಮುನಿಗಳಿಗೆ ಹೇಳಬೇಕೆಂದರು. ಇಂದ್ರನ ಮಾತಿನಂತೆ ಬ್ರಹ್ಮನು ಭರತನಿಗೆ ತನ್ನ ನೂರು ಮಕ್ಕಳನ್ನು ಸೇರಿಸಿ ಪ್ರಯೋಗಿಸಲು ಆಜ್ಞೆಯಿತ್ತನು. ಬ್ರಹ್ಮನ ಆಣತಿಯಂತೆ ಭರತ ತನ್ನ ಶಾಂಡೀಲ್ಯಾದಿ ನೂರು ಮಕ್ಕಳನ್ನು ಸೇರಿಸಿ, ಯೋಗ್ಯಕ್ಕನುಗುಣವಾಗಿ ಪಾತ್ರಹಂಚಿ ಅಭಿನಯಸಿದನು. ದೇವಾಸುರ ಕಾಳಗವನ್ನು ಒಳಗೊಂಡ ಸಮುದ್ರಮಥನದ ಕಥೆ ಪ್ರಯೋಗಿಸುತ್ತಾರೆ. ಎರಡನೇಯದಾಗಿ ಪ್ರದರ್ಶನಗೊಂಡ ತ್ರಿಪುರ ಸಂಹಾರ ಮಾಡಿದ ಶಿವ ನಟರಾಜನಾದ ಬ್ರಹ್ಮನ ಅಭಿಪ್ರಾಯಕ್ಕೆ ಪ್ರಾಶಸ್ತ್ಯ ನೀಡಿ ಭರತಮುನಿ ನಾಟ್ಯಶಾಸ್ತ್ರವನ್ನು ಬರೆದಿದ್ದಾನೆ. ಭರತನ ಈ ನಾಟ್ಯಶಾಸ್ತ್ರವು ಜಗತ್ತಿನ ಕಲಾ ಪ್ರಕಾರಗಳಿಗೆ ಶಾಸ್ತ್ರೀಯತೆಯ ಚೌಕಟ್ಟನ್ನು ನೀಡುವ ಬೃಹತ್ಗ್ರಂಥವಾಗಿದೆ. 

ನಾಟ್ಯ ಎಂದರೆ ಭರತ ನಾಟ್ಯದಂತಹ ನೃತ್ಯಮಾತ್ರವಲ್ಲ. ಅದು ಲಿಖಿತ ಅಥವಾ ರಚಿತ ನಾಟಕವನ್ನು ರಂಗದ ಮೇಲೆ ಪ್ರಯೋಗಿಸುವ ಕ್ರಿಯೆಗೆ ನಾಟ್ಯ ಎನ್ನುತ್ತಾರೆ. 
ಕಾಳಿದಾಸಾದಿ ಸಂಸ್ಕೃತ ನಾಟಕಕಾರರು ರಸಾಭಿನಯಗಳ ಸಾರವನ್ನು ತಮ್ಮ ಕೃತಿಗಳಲ್ಲಿ ಮೂಡಿಸಿದ್ದಾರೆ. ಆ ನಾಟಕಗಳ ಓದು, ಪ್ರಯೋಗ ನಿರಂತರ ರಂಗಾಸಕ್ತರಿಗೆ ಎಟುಕುವಂತಾಗಬೇಕು. 

ಮಹಾಕವಿ ಕಾಳಿದಾಸ ತನ್ನ ಮಾಲವಿಕಾಗ್ನಿ ಮಿತ್ರಮ್ ನಾಟಕ ಕೃತಿಯಲ್ಲಿ (1-5) ನಾಟ್ಯದ ಮಹತ್ವವನ್ನು ಸಮರ್ಥಿಸಿಕೊಂಡಿದ್ದಾನೆ. 


ದೇವಾನಾಮಿದ ಮಾಮನಂತಿ ಮುನಯಃ, ಕಾಂತಂ ಕ್ರತುಂ ಚಾಕ್ಷುಷಂ ರುದ್ರೇಣೇದಮುಮಾಕೃತವ್ಯತಿಕರೇ, ಸ್ವಾಂಗೇ ವಿಭಕ್ತಂ ದ್ವಿಧಾ| 

ತ್ರೈಗುಣ್ಯೋದ್ಭವಮತ್ರ ಲೋಕ ಚರಿತಂ, ನಾನಾರಸಂ ದೃಶ್ಯತೇ

ನಾಟ್ಯಂ ಭಿನ್ನರುಚೇರ್ಜನಸ್ಯ, ಬಹುಧಾಪ್ಯೇಕಂ ಸಮಾರಾಧನಮ್|| 

ಅಂದರೆ, ಈ ನಾಟ್ಯವು ದೇವತೆಗಳ ಕಣ್ಣುಗಳಿಗೆ ತಂಪನ್ನೀಯುವ ಯಜ್ಞವಾಗಿದೆ. ಪಾರ್ವತಿಯೊಂದಿಗೆ ಮದುವೆಯಾದ ನಂತರ ಶಂಕರನು ತನ್ನ ಶರೀರವನ್ನು ಎರಡು ಭಾಗಮಾಡಿ, ಒಂದನ್ನು ಲಾಸ್ಯ ಎಂಬ ಹೆಸರಿನಿಂದಲೂ, ಮತ್ತೊಂದನ್ನು ತಾಂಡವ ಎಂಬ ಹೆಸರಿನಿಂದಲೂ ಕರೆದನು. ಉದ್ಧತ (ಉದ್ರೇಕಗೊಂಡ) ಹಾಗೂ ಆಕರ್ಷಕವಾದ ನೃತ್ಯವೇ ಶಂಕರನ ತಾಂಡವವಾಗಿದೆ. ಪಾರ್ವತಿಯ ನೃತ್ಯವೇ ಲಾಸ್ಯ ಇದು ಸುಕೋಮಲವೂ, ಮನೋಹರವಾದುದೂ ಆಗಿರುತ್ತದೆ. ಪ್ರಪಂಚದ ಮೂರು ಗುಣಗಳಿಂದ ಉತ್ಪನ್ನವಾದ ಅನೇಕ ರಸಗಳನ್ನು ಇಲ್ಲಿ ತೋರಿಸಲಾಗುತ್ತದೆ. ನಿಜ ಹೇಳಬೇಕೆಂದರೆ ಭಿನ್ನ ಅಭಿರುಚಿಯ ಜನಗಳಿಗಾಗಿ ಎಲ್ಲರಿಗೂ ಸಮಾನವಾದ ಆನಂದ ನೀಡುವ ನಾಟಕವೇ ಈ ಉತ್ಸವ. ನಾಟ್ಯದ ಅಲೌಕಿಕ ಸರಸತೆ ಸಾರ್ವಭೌಮತ್ವದ ಆಕರ್ಷಣೆ ಹಾಗೂ ಎಲ್ಲರಿಗೂ ಮನರಂಜನೆ ನೀಡುವುದಕ್ಕೆ ನಟರಾಜ ಶಂಕರನ ಮುಖಾಂತರ ಪ್ರದರ್ಶಿಸಲ್ಪಡುವ ನೃತ್ಯದ ಸನ್ನಿವೇಶವೇ ಕಾರಣವಾಗಿದೆ. ಶುದ್ಧ ಅಭಿನಯವನ್ನು ಚಿತ್ರ ಅಭಿನಯವನ್ನಾಗಿ ಪರಿವರ್ತಿಸಿದ ಶ್ರೇಯಸ್ಸು ಶಂಕರನಿಗೇ ಸೇರುತ್ತದೆ. ನಾಟ್ಯಶಾಸ್ತ್ರದಲ್ಲಿ ನೃತ್ಯದ ಪ್ರದರ್ಶನ ಕ್ರಿಯೆಯು ಅಂಗಹಾರಗಳ ಮುಖಾಂತರವೇ ನಡೆಯುತ್ತದೆ. 

ರಂಗಾಂತರಂಗದ ಗಣ್ಯ ಮಾನ್ಯರೇ ನಾಟಕ ಕುರಿತ ವಿಷಯಗಳು ಅನೇಕ, ಅವುಗಳ ಸಾಕಾರ ಲಭಿಸಬೇಕಾದರೆ ರಂಗಭೂಮಿಗೆ ಬನ್ನಿ, ಬದುಕಿನ ಕನ್ನಡಿ ರಂಗಭೂಮಿ. 

ಕೈಗನ್ನಡಿ ಅಭಿಲಾಷಿ
ಕೆ.ಪಿ.ಎಂ.ಗಣೇಶಯ್ಯ,
ರಂಗನಿರ್ದೇಶಕರು
ಚಿತ್ರದುರ್ಗ

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *