ನಾಟಿಯ ಪದಗಳು: ಹನಿಯೂರು ಚಂದ್ರೇಗೌಡ


ಜನಪದರ ಕಾಯಕಶಕ್ತಿಯೇ ಜಾನಪದ ಸಾಹಿತ್ಯಸೃಷ್ಟಿಗೆ ಮೂಲಕಾರಣವಾದುದು. ಕಾಯಕದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಕಾರಣದಿಂದಲೇ ಜಾನಪದ ಸಾಹಿತ್ಯ ಹೆಚ್ಚೆಚ್ಚು ಬೆಳೆಯುತ್ತಾ ಬಂದು, ಅದೀಗ ಸಂಪೂರ್ಣವಾಗಿ ಏಕಕಾಲದಲ್ಲಿ ಯಾರೊಬ್ಬನು ಮುಟ್ಟಲಾಗದ ಬೃಹದ್ ರಾಶಿಯಾಗಿದೆ. ಇಂತಹ ಜಾನಪದ ರಾಶಿಯಲ್ಲಿ ಕೃಷಿಹಾಡು, ಹಸೆಹಾಡು, ಸೋಬಾನೆಹಾಡು, ದೇವರಮೇಲಿನಹಾಡು, ಮಳೆಹಾಡು, ಕಳೆಕೀಳುವಾಗಿನಹಾಡು, ಮಗುಹುಟ್ಟಿದಹಾಡು, ಯಾರೋ ಸತ್ತರೆಹಾಡು, ಹಬ್ಬಕ್ಕೊಂದುಹಾಡು, ಹರುಷಕ್ಕೊಂದುಹಾಡು, ದುಃಖಕ್ಕೊಂದುಹಾಡು, ಸರಸಕ್ಕೊಂದುಹಾಡು, ವಿರಸಕ್ಕೊಂದುಹಾಡು, ಕೀಟಲೆಗೊಂದುಹಾಡು, ಕಿಚಾಯಿಸಲೊಂದುಹಾಡು, ಚುಡಾಯಿಸಲೊಂದುಹಾಡು, ರೇಗಿಸಲೊಂದುಹಾಡು, ಪ್ರಸ್ತಕ್ಕೊಂದುಹಾಡು, ಹೆಣ್ಣು,ಗಂಡನ ಮನೆಗೆ ಹೋಗುವಾಗೊಂದುಹಾಡು, ತವರುಮನೆಗೆ ಬರುವಾಗೊಂದುಹಾಡು, ಮಡಿಲುತುಂಬುವಾಗೊಂದುಹಾಡು, ಬಾಣಂತಿಗೊಂದುಹಾಡು, ಗರ್ಭಿಣಿಗೊಂದುಹಾಡು, ಮದುವಣಗಿತ್ತಿಯನ್ನು ಕರೆದೊಯ್ಯುವಾಗೊಂದುಹಾಡು, ಮನೆತುಂಬಿಸಿಕೊಳ್ಳವಾಗೊಂದುಹಾಡು, ಹಾದರಕ್ಕೊಂದುಹಾಡು, ಸದರಕ್ಕೊಂದುಹಾಡು, ಬಿತ್ತುವಾಗೊಂದುಹಾಡು, ಉಳುವಾಗೊಂದುಹಾಡು, ಸುಗ್ಗಿಗೊಂದುಹಾಡು….ಹೀಗೆ ಲೆಕ್ಕವಿಲ್ಲದಷ್ಟು ಹಾಡು-ಪಾಡುಗಳಿವೆ. 

ಇಂತಹ ಗೀತೆಗಳನ್ನು ಅನೇಕ ಜಾನಪದ ಸಂಶೋಧಕರು, ಜಾನಪದ ಆಸಕ್ತರು, ಉತ್ಸಾಹಿಗಳು, ವಿದ್ವಾಂಸರು ಗ್ರಾಮೀಣ ಭಾಗದ ಮೂಲೆಮೂಲೆಗಳಿಗೂ ಸುತ್ತುತ್ತಾ ಸಂಗ್ರಹಿಸುವಲ್ಲಿ ಶ್ರಮಿಸಿದ್ದಾರೆ. ಆ ಮೂಲಕ ಅಚ್ಚರಿ, ಅದ್ಭುತ, ಕಿವಿಗಿಂಪು ನೀಡುವ, ಸೊಗಸೆನಿಸುವ ಜಾನಪದ ಗೀತೆಗಳನ್ನು ಜನಪದರ ಬಾಯಿಯಿಂದ ಹೆಕ್ಕಿ ತೆಗೆದು, ಜಾನಪದ ಲೋಕಕ್ಕೆ ನೀಡಿದ್ದಾರೆ. ಅಲ್ಲದೆ ಅಸಂಖ್ಯ ಜನಪದಕಲಾವಿದರನ್ನು ಬೆಳಕಿಗೆ ತಂದಿದ್ದಲ್ಲದೆ, ಗೀತೆಗಳನ್ನು ಸ್ವತಃ ಅವರೇ ಹಾಡುವ ಮೂಲಕ ಗೀತೆ ಮತ್ತು ವಕ್ತೃಗಳನ್ನು ಜನಮನಕ್ಕೆ ತಲುಪಿಸಿದ್ದಾರೆ.  

ಅಂಥವರಲ್ಲಿ ಪ್ರಮುಖವಾಗಿ ಹೆಸರಿಸಬಹುದಾದವರಲ್ಲಿ ಹಿರಿಯ ತಲೆಮಾರಿನ ಜೀ.ಶಂ.ಪರಮಶಿವಯ್ಯ, ಮತ್ತಿಘಟ್ಟ ಕೃಷ್ಣಮೂರ್ತಿ, ಕ.ರಾ.ಕೃಷ್ಣಸ್ವಾಮಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ದೇಜಗೌ, ಎಚ್.ಎಲ್. ನಾಗೇಗೌಡ ಪ್ರಮುಖರು. ಇವರೆಲ್ಲಾ ದಕ್ಷಿಣ ಕರ್ನಾಟಕ ಭಾಗದವರಾದರೆ, ಉತ್ತರ ಕರ್ನಾಟಕದಲ್ಲಿ ಗದ್ದಗೀಮಠ ಉತ್ತಮ ಕೆಲಸ ಮಾಡಿದ್ದಾರೆ. ಇವರಲ್ಲಿ ಜನಪದ ಸಾಹಿತ್ಯದ ರಸಗ್ರಹಣ ಮಾಡಿಸಿದವರಲ್ಲಿ ಜಾನಪದ ವಿದ್ವಾಂಸರಾದ ಜೀ.ಶಂ.ಪರಮಶಿವಯ್ಯ, ಬೆಂಗಳೂರಿನ ಕ.ರಾ.ಕೃಷ್ಣಸ್ವಾಮಿ ಅಗ್ರಗಣ್ಯರು.

ಆದರೆ, ಈವರೆಗೆ ಜನಪದಗೀತೆಗಳನ್ನು ಸಂಗ್ರಹ ಮಾಡಿರುವವರಲ್ಲಿ  ಸಮಗ್ರವಾಗಿ ಗೀತೆಗಳನ್ನು ಸಂಗ್ರಹ ಮಾಡಿದ್ದಾರೆಯೇ ವಿನಾ ನಾಟಿಯ ಪದಗಳೆಂದು ವಿಶೇಷವಾಗಿ ಸಂಗ್ರಹಿಸಿಲ್ಲ. ಇದು ನಾಟಿಯಪದಗಳ ಬಗ್ಗೆ ಮಾತ್ರವೇ ಅಧ್ಯಯನ ಮಾಡಬಯಸುವವರಿಗೆ ಸರಿಯಾದ ನಾಟಿಯಪದಗಳ ಕೋಶ ಮತ್ತಿತರೆ ವಿಷಯವಸ್ತುಗಳ ಕೊರತೆ ಎದುರಾಗುತ್ತದೆ. ಆದುದರಿಂದ ನಾಟಿಯಪದಗಳ ಬಗ್ಗೆಯೇ ಒಂದು ಸಮಗ್ರವಾದ ಜನಪದಗೀತೆಗಳ ಕೋಶವೊಂದನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ.  

ಆದರೆ, ಆಶಾಕಿರಣ ಎಂಬಂತೆ ಅಲ್ಲೋ ಇಲ್ಲೊ ಒಬ್ಬಿಬ್ಬರು ಜಾನಪದ ಸಂಶೋಧಕರು ಹೋಸಗೀತೆಗಳ ಸಂಗ್ರಹಕಾರ್ಯದಲ್ಲಿ ಈವತ್ತಿಗೂ ತೊಡಗಿಸಿಕೊಂಡಿದ್ದು, ಸ್ವತಃ ಗಾಯಕರೂ ಆಗಿದ್ದಾರೆ. ತಂಡ ಕಟ್ಟಿಕೊಂಡು ಊರೂರು ತಿರುಗುತ್ತಾ ಜನಪದಗೀತೆಗಳನ್ನು ಜನಪದಮನದಿಂದ ಜನಮನಕ್ಕೆ ತಲುಪಿಸುತ್ತಿದ್ದಾರೆ. ಅಂಥವರಲ್ಲಿ ಮೈಸೂರಿನ ಜಾನಪದ ವಿದ್ವಾಂಸರೂ ಹಾಡುಗಾರರೂ ಆದ ಡಾ.ಪಿ.ಕೆ.ರಾಜಶೇಖರ್ ಒಬ್ಬರು. ಅವರು ಸದ್ಯ ಜನಪದ ಸಾಹಿತ್ಯ ಸಂಗ್ರಹದಲ್ಲಿ ನಿರತರಾಗಿರುವ ಅತ್ಯಂತ ಕ್ರಿಯಾಶೀಲರಾಗಿದ್ದಾರೆ. ಅವರನ್ನು ಕಿರಿಯ ತಲೆಮಾರಿನಲ್ಲಿ ಹೆಸರು ಹೇಳಲರ್ಹ ಸಂಶೋಧಕರು ಕಾಣಸಿಗುತ್ತಿಲ್ಲ ಎಂಬುದು ಜನಪದ ಸಾಹಿತ್ಯ ಸಂಗ್ರಹ ಕ್ಷೇತ್ರದ ದುರ್ದೈವ ಎನ್ನಬುದೇನೊ. ಆದರೆ, ಈಗಾಗಲೇ ಶೇ.೯೦ ರಷ್ಟು ಜನಪದ ಸಾಹಿತ್ಯ ಸಂಗ್ರಹ ಮುಗಿದಿದ್ದು, ಇನ್ನು ಕೇವಲ ಶೇ.೧೦ರಷ್ಟು ಮಾತ್ರ ಬಾಕಿಯಿದೆ ಎಂಬ ಮಾತು ಸಂಶೋಧಕವಲಯದಲ್ಲಿ ಚಾಲ್ತಿಯಲ್ಲಿರುವುದು ಮಾತ್ರ ಸತ್ಯ.

ಕೃಷಿಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಜನಪದ ಸಾಹಿತ್ಯದಲ್ಲಿ ನಾಟಿಪದಗಳದ್ದು ಪ್ರಮುಖ ಸ್ಥಾನ. ವಿವಿಧ ಧಾಟಿಯಲ್ಲಿ ಹಾಡಲ್ಪಡುವ ನಾಟಿಪದಗಳು, ಪ್ರಧಾನವಾಗಿ ಹಾಸ್ಯ, ಚುಡಾಯಿಸುವಿಕೆ, ಪ್ರೀತಿ-ಪ್ರೇಮ-ಪ್ರಣಯ-ಹಾದರ, ದೇವರ ಮೇಲಿನ ಹಾಡು, ನೋವು-ನಲಿವು, ಕಷ್ಟ-ನಷ್ಟ, ಗಂಭೀರ ಹಾಡು, ಪುರಾಣ ಕಥೆಯಾಧಾರಿತ ವಿಷಯ, ಗ್ರಾಮದೇವತೆಗಳ ಕುರಿತ ಹಾಡು, ಮನೆದೇವರ ಹಾಡು, ಪ್ರಕೃತಿ, ಗೆಳೆಯ-ಗೆಳತಿಯರ ಪೆದ್ದುತನವನ್ನು ಅಣಕಿಸುವ ಹಾಡು, ದಿನನಿತ್ಯದ ಆಗುಹೋಗುಗಳನ್ನೇ ವಿಷಯವಸ್ತುವಾಗಿಟ್ಟುಕೊಂಡಿರುತ್ತವೆ. ನಾಟಿಪದಗಳು, ಜನಪದ ಕಲಾಪ್ರಕಾರಗಳಲ್ಲಿ ಅತ್ಯಂತ ಮಹತ್ತನ್ನು ಹೊಂದಿರುವಂತಹವುಗಳಾಗಿವೆ. ವ್ಯವಸಾಯ ಪ್ರಧಾನವಾಗಿರುವ ಅದರಲ್ಲೂ ನೀರಾವರಿ ಸೌಲಭ್ಯವುಳ್ಳ ಪ್ರದೇಶಗಳಲ್ಲಿ ಹೆಚ್ಚಾಗಿ ನಾಟಿಪದಗಳು ಪ್ರಚಲಿತದಲ್ಲಿವೆ. ಮುಖ್ಯವಾಗಿ ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು, ಹಾಸನ, ಕೊಡಗು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಾಗೂ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಕೆಲವು ಭಾಗಗಳಲ್ಲಿ ನಾಟಿ ಪದಗಳು ಹೆಚ್ಚಾಗಿ ಲಭ್ಯ ಎಂಬುದನ್ನು ಅನೇಕ ಜಾನಪದ ಸಂಶೋಧಕರು ತಿಳಿಸಿದ್ದಾರೆ.

ನಾಟಿಪದಗಳ ವೈಶಿಷ್ಟ್ಯ/ಉದ್ದೇಶ:
ಜಾನಪದ ಗೀತೆಗಳಿಗೆ "ಫಂಕ್ಷನಲ್ ವ್ಯಾಲ್ಯೂ" ಇದ್ದು, ಈ ಮಾತಿಗೆ ನಾಟಿಪದಗಳನ್ನು ಮುಖ್ಯ ಉದಾಹರಣೆಯಾಗಿ ಕೊಡಬಹುದು. ಅದಕ್ಕಾಗಿಯೇ ಕ್ರಿಯೆ ಜೊತೆಯಲ್ಲಿ ಹಾಡಿದಾಗಲೇ ನಾಟಿಪದಗಳಿಗೆ "ವ್ಯಾಲ್ಯೂ" ಸಿಗುತ್ತದೆ. ಆದುದರಿಂದಲೇ ಜನಪದರು ಸುಮ್ಮನೆ ಕೂತಾಗ ಹಾಡುಗಳನ್ನು ಹಾಡಿ ಎಂದರೆ, ಹಾಡುವುದಿಲ್ಲ. ಅವರಿಗೊಂದು ಕೆಲಸ ಕೊಟ್ಟರೆ, ಅಥವಾ ಕೆಲಸದಲ್ಲಿ ಅವರು ತೊಡಗಿದಾಗಲೇ ಅವರಿಗೆ ಹಾಡು ಬರುವುದು. ಅದಕ್ಕಾಗಿಯೇ ಜಾನಪದ ಸಂಶೋಧಕರೊಬ್ಬರು ಒಂದೆಡೆ ಬರೆದುಕೊಳ್ಳುತ್ತಾರೆ, "ಕೆಲಸ(ಶ್ರಮ) ಎಂದರೆ ಹಾಡು- ಹಾಡು ಎಂದರೆ ಕೆಲಸ(ಶ್ರಮ)" ಎಂದು. ಒಟ್ಟಿನಲ್ಲಿ "ಕೆಲಸ ಮತ್ತು ಹಾಡು" ಒಂದನ್ನು ಬಿಟ್ಟು ಇನ್ನೊಂದು ಇರಲಾರದು. ಹಾಗಾಗಿಯೇ ಜನಪದರು ಕೆಲಸದಲ್ಲಿ ತೊಡಗಿಕೊಳ್ಳದೆ ಹಾಡುಗಳು ಅವರ ಕಂಠದಿಂದ ಹೊರಬರುವುದಿಲ್ಲ. ಇವೆರಡರ ನಡುವೆ ಅವಿನಾಭಾವ ಸಂಬಂಧವಿರುವುದನ್ನು ನಾಟಿಪದಗಳ ವಿಷಯದಲ್ಲಿ ಜನಪದರು ನಿಜವಾಗಿಸುತ್ತಾರೆ.

ನಾಟಿಪದಗಳ ಹುಟ್ಟು:
ಮನುಷ್ಯ ಮುಖ್ಯವಾಗಿ ಸಂಘಜೀವಿ. ಅದರಲ್ಲೂ ತಾನು ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳಲು ಗುಂಪನ್ನು ಬಯಸುತ್ತಾನೆ. ಅಂತೆಯೇ ಗುಂಪುಗೂಡಿ ಶ್ರಮ/ಕೆಲಸದಲ್ಲಿ ನಿರತನಾಗುತ್ತಾನೆ ಅಲ್ಲದೆ, ಆ ಶ್ರಮವನ್ನು ಮಾಡುವಾಗ ಆಗುವ ನೋವು, ಬೇಸರವನ್ನು ಹೋಗಲಾಡಿಸಲು ಮನೋರಂಜನೆಯ ಮೊರಹೋಗುವುದು ಆತನ ಸಹಜ ನಡವಳಿಕೆಯಲ್ಲೊಂದು. ಹಾಗಾಗಿ ತನ್ನ ಕೆಲಸ ನಡೆಯುವಾಗ ಮೌನವಾಗಿ ಮಾಡಲಾಗದು.  ಜೊತೆಗೆ ತನ್ನ ಕೆಲಸದ ವಾತಾವರಣವನ್ನು ಲವಲವಿಕೆಯಾಗಿಡಲು ಜನಪದರು ನಾಟಿಪದಗಳನ್ನು ಹಾಡುವ ಪರಿಪಾಠಕ್ಕೆ ಮೊರೆಹೋದ ಪರಿಣಾಮವಾಗಿಯೇ ಇಂದು ನಾಟಿಪದಗಳು ಜನಪದ ಕಲಾಲೋಕದಲ್ಲಿ ವಿಶಿಷ್ಟ ಸ್ಥಾನಗಳಿಸಿವೆ. 

ನಾಟಿಯಪದಗಳ ಮೂಲರೂಪ, ಆಶಯ:
ನಾಟಿಯಪದಗಳು ಮುಖ್ಯವಾಗಿ ದೀರ್ಘವೂ ಕಥನಶೈಲಿಯುಳ್ಳವೂ ಆಗಿರುತ್ತವೆ. ಕಾರಣ, ನಾಟಿಯನ್ನು ಮಾಡುವಾಗ ಕೃಷಿಕ ಮಹಿಳೆಯರು ದೀರ್ಘ ಸಮಯದ ತನಕ ಬಾಗಿಕೊಂಡೇ ಇರಬೇಕಾಗಿರುತ್ತದೆ. ಅಲ್ಲದೆ, ತಮ್ಮ ಸೊಂಟದ ನೋವು ಮತ್ತು ಕೆಲಸದ ಮೇಲಿರಬೇಕಾದ ಗಮನವನ್ನು ಏಕತ್ರವಾಗಿರಿಸಬೇಕಾಗುತ್ತದೆ. ಹಾಗಾಗಿ ಹಾಡುವ ಗೀತೆಗಳು ಆಸಕ್ತಿಕರವೂ ದೀರ್ಘವೂ ಆಗಿರುತ್ತದೆ. ಅಲ್ಲದೆ, ನಾಟಿಯನ್ನು ಮಾಡುವಾಗಿನ ಏಕತಾನತೆಯನ್ನು ಹೋಗಲಾಡಿಸಲು, ಶ್ರಮವನ್ನು ಮರೆಯಲು ಹಾಸ್ಯಮಿಶ್ರಿತ, ತಮಾಷೆಮಿಶ್ರಿತ ಮತ್ತು ಆಸಕ್ತಿಯನ್ನು ಕೆರಳಿಸುವ, ಮುಂದೇನಾಗುತ್ತದೆಂಬ ಕುತೂಹಲ ಮೂಡಿಸುವಂತಿರುತ್ತವೆ. ಅದಕ್ಕೆ ಜಾನಪದ ವಿದ್ವಾಂಸ ಡಾ.ಬಿ.ಎಸ್.ತಲ್ವಾಡಿ ಅವರು ಸಂಗ್ರಹಿಸಿರುವ ಹೆಂಗಸರ ಕಥನಗೀತೆಗಳು ಕೃತಿಯಲ್ಲಿನ ಕೆಲವು ಗೀತೆಗಳನ್ನಿಲ್ಲಿ ಉದಾಹರಿಸಬಹುದು.

ಅವುಗಳಲ್ಲಿ ಕೆಲವು ಗೀತೆಗಳನ್ನು ಉದಾಹರಣೆಯಾಗಿ ಕೊಡಬಹದು. ನಾಟಿಯಪದಗಳು ಮುಖ್ಯವಾಗಿ ಕಥನಗೀತೆಗಳ ರೂಪವನ್ನು ಹೊಂದಿದ್ದು, ಅವು ಇಂತಿವೆ.

ಸುವ್ವಿ ಸುವ್ವಮ್ಮಲಾಲಿ ಸುವ್ವನ್ನಾಲಿ//
ಎಳೆಯ ಬಿಲ್ಲಳರಾಯ ಸುವ್ವನ್ನಾಲಿ//ಸೊಲ್ಲು//
ನಮ್ಮ ತಂದೆ ಸಂಕರಲಿಂಗು//ಸುವ್ವನ್ನಾಲಿ//

ಇದು ಬಿಲ್ಲಳರಾಯ ಎಂಬ ದಾಯಾದಿ ಮಾತ್ಸರ್ಯದ ಪರಿಣಾಮವನ್ನು ತಿಳಿಸುವ ಕಾವ್ಯದಿಂದ ಆರಿಸಿಕೊಂಡ ಭಾಗವಾಗಿದೆ. ಈ ಗೀತೆಯು ಸುದೀರ್ಘವಾಗಿದ್ದು, ಪ್ರಸ್ತುತ ಸಮಾಜದಲ್ಲಿ ನಡೆಯುವ ಅಣ್ಣತಮ್ಮಂದಿರ ನಡುವಿನ ಆಸ್ತಪಾಸ್ತಿ ಜಗಳದ ಕಥೆಹೊಂದಿದ್ದು ಕುತೂಹಲಕಾರಿಯಾಗಿದೆ. ಇದು ನಾಟಿಯನ್ನು ಮಾಡುವಾಗ ಭಾವುಕತೆ ಜೊತೆಗೆ ಅದರೊಳಗೆ ಲೀನವಾಗುವಂತಿದೆ.

ಅಂತೆಯೇ ಬಾಣತಿಹಾಡು ಗೀತೆಯಲ್ಲಿನ ಈ ಗೀತೆ..
ಬಾಣತಿ ಬಾಗಿಲಾಗೆ ಬಾಳೆಚಪ್ಪರ ಊಡಿ
ಬಾಗಿ ಬಾರಯ್ಯಾ ಬಳೆಗಾರ ಸಿವನೆ//೨ಸಾರಿ//
ಬಾಣತಿಗೆ ಬಳೆಯ ಇಡುಬಾರೋ ಸೆಟ್ಟಿ 

ಇದು ಸೌಭಾಗ್ಯವತಿ ಹೆಣ್ಣೊಬ್ಬಳು ಮಗುವನ್ನು ಹಡೆದು  ಸಂಭ್ರಮಿಸುವ ದಿನಗಳಲ್ಲಿ ಯಮನ ಆಗಮನದಿಂದ ಆಕೆ ಆತಂಕಕ್ಕೊಳಗಾಗುತ್ತಾಳೆ. ಆಗ ಯಮ ಮತ್ತು ಶಿವನ ನಡುವೆ ಜಗಳವಾಗಿ ಕೊನೆಗೆ ಶಿವ, ಅವಳ ಪ್ರಾಣವನ್ನು ಹಿಂತಿರುಗಿ ಯಮನಿಂದ ಕೊಡಿಸಿಕೊಟ್ಟು, ಕಥೆಯನ್ನು ಸುಖಾಂತವಾಗಿಸುವ ಪರಿ ಅನನ್ಯ. ಹೀಗೆ ನಾಟಿಯ ಪದಗಳು ನೀಳ್ಗತೆಯಾಗಿದ್ದು ಕುತೂಹಲ, ಆಸಕ್ತಿಯನ್ನು ಹೊತ್ತಿರುತ್ತವೆ. 

ಸದ್ಯದ ಸವಾಲುಗಳು:
ಸದ್ಯ ಶೇ.೬೦ರಷ್ಟು ಬೇಸಾಯ ಚಟುವಟಿಕೆಗಳು ಕಡಿಮೆಯಾಗಿದ್ದು, ನಾಟಿಪದಗಳನ್ನು ಕಟ್ಟುವುದಾಗಲೀ ಅವುಗಳನ್ನು ಹಾಡುವ ಪ್ರಮೇಯವಾಗಲೀ ಕಂಡುಬರುತ್ತಿಲ್ಲ. ಇಂದು ನಾಟಿಪದಗಳನ್ನು ಹಾಡುವುದು ಮತ್ತು ಹಾಡುವವರು ವಿರಳವಾಗಿದ್ದಾರೆ.  "ನಿಜವಾದ ಜನಪದ ಕಲಾವಿದನಾದರೆ ಕೆಲಸದಲ್ಲಿ ತೊಡಗದೆ ಅವನು ಹಾಡಲಾರ. ಹಾಡಿದರೂ ಅದು ನೈಜವಾದ ಹಾಡಾಗಲಾರದು. ಈಗ ಕೃಷಿ/ಬೇಸಾಯ ಚಟುವಟಿಕೆಗಳು ಇಲ್ಲವಾಗುತ್ತಿರುವುದರಿಂದ ಹೊಸದಾದ ಜನಪದ ಹಾಡುಗಳು ಹುಟ್ಟುತ್ತಿಲ್ಲ. ಇದು ಜನಪದ ಸಾಹಿತ್ಯ ಸೊರಗಲು ಕಾರಣವಾಗಿದೆ" ಎನ್ನುತ್ತಾರೆ ಜಾನಪದ ವಿದ್ವಾಂಸ ಡಾ. ರಂಗಾರೆಡ್ಡಿ ಕೋಡಿರಾಂಪುರ ಅವರು.

ಉಪಸಂಹಾರ:
ಕೃಷಿಯ ನೆಲೆಯಲ್ಲಿ ಉದಯವಾದ ಜನಪದ(ನಾಟಿಯಪದ)ಗೀತೆಗಳು, ಕೃಷಿಕರ ಪಾಲಿಗೆ ಅತ್ಯಂತ ಮನೋರಂಜನೆಯ ರೂಪವಾಗಿದ್ದವುಗಳು. ಅವುಗಳು ಕೇವಲ ಮನಕ್ಕೆ ರಂಜನೆಯನ್ನು ನೀಡುವವುಗಳಾಗರದೆ ಆ ಪ್ರದೇಶದ ಸಂಸ್ಕೃತಿ, ಆಚಾರ-ವಿಚಾರ, ಆಚರಣೆ, ವೇಷ-ಭೂಷಣ, ಸಂಸ್ಕಾರವನ್ನು ಪ್ರತಿಬಿಂಬಿಸುವಂತಿದ್ದವು. ಇಂತಹ ಉನ್ನತ ಪರಂಪರೆಯುಳ್ಳ ನಾಟಿಯಪದಗಳು ಇಂದು ಕೃಷಿ ಚಟುವಟಿಕೆಗಳು ಕಣ್ಮರೆಯಾಗುವುದರೊಂದಿಗೆ ತೆರೆಮರೆಗೆ ಸರಿಯುತ್ತಿವೆಯೇನೋ ಎಂಬ ಭಾವನೆ ಜಾನಪದ ಕ್ಷೇತ್ರದಲ್ಲಿ ಆತಂಕಕ್ಕೀಡಾಗುವಂತೆ ಮಾಡಿದೆ. ಇಂದಿನ ಜಾನಪದ ಸಂಶೋಧಕರು (ಜನಪದ ಸಾಹಿತ್ಯ) ನಾಟಿಯಪದಗಳ ಸಂಗ್ರಹದ ಕುರಿತು ಆಸಕ್ತಿ ತೋರುತ್ತಿಲ್ಲದಿರುವುದು ಈ ಆತಂಕಕ್ಕೆ ಇಂಬು ನೀಡುವಂತಿದೆ. 

ಅದೇನೇ ಇರಲಿ, ಕೃಷಿಯನ್ನು ಉಳಿಸಿಕೊಳ್ಳುತ್ತಲೇ ಜನಪದ ಸಾಹಿತ್ಯದ ಹುಟ್ಟು-ಬೆಳವಣಿಗೆಗೆ ಕಾರಣರಾಗಿದ್ದ ನಮ್ಮ ಕೃಷಿಕರು ನಿಜಾರ್ಥದಲ್ಲಿ ಜನಪದರೇ ಹೌದು. ಅಂಥ ಮಹನೀಯರು ಕೊಟ್ಟ ಜನಪದ ಗೀತೆಗಳನ್ನು ಕಾಪಿಟ್ಟು, ಮುಂದಿನ ತಲೆತಲಾಂತರಕ್ಕೂ ದೊರೆಯುವಂತಾಗಿಸುವ ಕೆಲಸ ಅತ್ಯಗತ್ಯವಾಗಿ ಆಗಬೇಕಿದೆ.

ಇನ್ನು ಮುಂದಾದರೂ ವಿಶೇಷವಾಗಿ ನಾಟಿಯ ಪದಗಳ ಸಂಗ್ರಹ ಮತ್ತು ಸಂಶೋಧನೆ, ಅಧ್ಯಯನ ಮತ್ತು ಆಸಕ್ತಿ ಹುಟ್ಟಿಸುವಂತಹ ರೀತಿಯಲ್ಲಿ ಕೆಲಸಗಳು ಆಗಬೇಕಾದ ಜರೂರಿದೆ. ಆಗ ಮಾತ್ರ ನಾಟಿಯಪದಗಳು ಎಂಬ ವಿಶಿಷ್ಟ ಘಟಕವೊಂದರ ರಚನೆಗೆ ಕಾರಣವಾದೀತು ಹಾಗೂ ಆ ಕುರಿತು ಮುಂದಿನ ತಲೆಮಾರು ಹೆಚ್ಚು ಗಮನನೀಡುವ ಮೂಲಕ ಹೊಸ ದೃಷ್ಟಿ ದೊರೆತೀತು.

***** 

ಪರಾಮರ್ಶನ/ಆಧಾರ ಗ್ರಂಥಗಳು:
*ಗಂಧದ ಮಡುವ ಕಲಕೂತ-ಡಾ.ರಂಗಾರೆಡ್ಡಿ ಕೋಡಿರಾಂಪುರ-ತಳಗವಾದಿ ಪ್ರಕಾಶನ    ಮೈಸೂರು.
*ಹೆಂಗಸರ ಕಥನಗೀತೆಗಳು- ಡಾ.ಬಿ.ಎಸ್.ತಲ್ವಾಡಿ-ಶ್ರೀಅನ್ನಪೂರ್ಣ ಪ್ರಕಾಶನ,ಬೆಂಗಳೂರು.
*ಜನಪದ ಪ್ರೇಮಗೀತೆಗಳು-ಕ.ರಾ.ಕೃಷ್ಣಸ್ವಾಮಿ-ಗೀತಾ ಬುಕ್ ಹೌಸ್, ಮೈಸೂರು.
*ಹಳ್ಳಿಯ ಹಾಡುಗಳು-ಕ.ರಾ.ಕೃಷ್ಣಸ್ವಾಮಿ-ಸ್ವಪ್ರಕಾಶನ.
*ಕನ್ನಡ ಜನಪದಗೀತೆಗಳು-ಕ.ರಾ.ಕೃಷ್ಣಸ್ವಾಮಿ- ಗೀತಾ ಬುಕ್ ಹೌಸ್, ಬೆಂಗಳೂರು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
haniyuru chandregowda
9 years ago

thanks for publish….

1
0
Would love your thoughts, please comment.x
()
x