ಸ್ವಲ್ಪ ಮಟ್ಟಿಗೆ ಚಂದ್ರಹಾಸ ಕಥಾನಕವನ್ನು ಹೋಲುವ ಆದರೆ ಅದಕ್ಕಿಂತಲೂ ಸ್ವಲ್ಪ ಭಿನ್ನ ಸ್ವರೂಪವುಳ್ಳ ರಂಗಕೃತಿಯನ್ನಾಗಿ ‘ಕಾನೀನ’ವನ್ನು ಮಹಾಕವಿಗಳು ಸೃಷ್ಟಿಸಿರುವುದನ್ನು ಈ ಸಂಚಿಕೆಯಲ್ಲಿ ನೋಡೋಣ. ಮಹಾಭಾರತದ ಕರ್ಣನ ಸುತ್ತಲಿರುವ ನೂರಾರು ಗಂಟುಗಳನ್ನು ಕಥಾನಕದ ಒಳಗಿಟ್ಟುಕೊಂಡು ‘ಕಾನೀನ’ ರಂಗಕೃತಿಯು ರಚಿತವಾಗಿದೆಯೆಂದರೆ ಅತಿಶಯೋಕ್ತಿಯೇನಲ್ಲ. ದ್ರೋಣನು ಏಕಲವ್ಯನ ಹೆಬ್ಬರಳನ್ನು ಗುರುದಕ್ಷಿಣೆಯಾಗಿ ಬಲಿತೆಗೆದುಕೊಂಡ ಕಾರಣ ಮುಂದೆ ತನ್ನ ಕೊರಳನ್ನು ಬಲಿಕೊಡಬೇಕಾಗುತ್ತದೆ. ಅಂತಹ ಆಶಯವುಳ್ಳ ಮಹತ್ವದ ‘ಬೆರಳ್-ಗೆ-ಕೊರಳ್’ ರಂಗಕೃತಿಗೆ ಪ್ರತಿಕ್ರಿಯೆಯಾಗಿ ಬಂದ ರಂಗಕೃತಿಯಂತೆ ಭಾಸವಾಗುವ ‘ಕಾನೀನ’ ರಂಗಕೃತಿಯು ಪರಶುರಾಮನು ಕರ್ಣನಿಗೆ ಶಾಪವನ್ನು ಕೊಡದೆ ಹರಸುತ್ತಾನೆ. ‘ಜಾತಿಯಲ್ಲಿ ಶೂದ್ರ ಜನಾಂಗದವನು ತನ್ನ ಶಿಷ್ಯ’ ಎಂದು ಕೊಂಡಾಡುತ್ತಾನೆ. ವರ್ಣಾಶ್ರಮ ಧರ್ಮದ ಕುರಿತು ಈ ರಂಗಕೃತಿಯಲ್ಲಿ ಬರುವ ವಿವರಣೆಗಳು ‘ಶೂದ್ರ ತಪಸ್ವಿ’ ಕೃತಿಯೊಂದಿಗೆ ಹೋಲಿಸಲು ಸಾಧ್ಯವಾಗುವ ಚರ್ಚೆಗೆ ಮಹಾಕವಿಗಳು ಅವಕಾಶ ಕಲ್ಪಿಸಿದ್ದಾರೆನ್ನುವುದು ಸೂರ್ಯನ ಬೆಳಕಿನಷ್ಟೇ ಸತ್ಯವಾದ ಮಾತು. ಈ ರಂಗಕೃತಿಯು ಉದಯರವಿ ಪ್ರಕಾಶನದಲ್ಲಿ 1974ರಲ್ಲಿ ಮೊದಲ ಮುದ್ರಣ, 1987ರಲ್ಲಿ ಎರಡನೇಯ ಮುದ್ರಣ ಮತ್ತು ಇತ್ತೀಚಿನ ಪ್ರಕಟಣೆ 2004ರಲ್ಲಿ ಕಂಡಿದೆ.
ಕಾನೀನ (1974) :
ಈ ರಂಗಕೃತಿಯು ಮಹಾಭಾರತದ ಪಾತ್ರ ಕರ್ಣ ಮತ್ತು ಆತನ ಗುರುಗಳಾದ ಪರಶುರಾಮನ ನಡುವೆ ನಡೆಯುವ ಮನುಜ ಆಕಸ್ಮಿಕ ಜನನ, ಮನದೊಳಗಿನ ಆಶೆ-ಆಕಾಂಕ್ಷೆಗಳ ಕುರಿತು ಚರ್ಚಿಸುವ ರಂಗಕೃತಿಯಾಗಿದೆ. ಐದು ದೃಶ್ಯಗಳೊಂದಿಗೆ, ಕೊನೆಯ ದೃಶ್ಯವಾದ ಶ್ರೀಕೃಷ್ಣ ಮತ್ತು ಕರ್ಣನ ನಡುವೆ ನಡೆಯುವ ಸಂಭಾಷಣೆಯನ್ನು ತಮ್ಮ ಯೌವ್ವನದ ದಿನಗಳಲ್ಲಿ ರಚಿಸಿದ ಮತ್ತು ಮಹಾರಾಜಾ ಕಾಲೇಜು ಯುನಿಯನ್ ಹೊರಡಿಸುತ್ತಿದ್ದ ‘ಯೂನಿಯನ್ ಮ್ಯಾಗಜಿನ್’ದಲ್ಲಿ ಪ್ರಕಟಗೊಂಡ ದೃಶ್ಯವನ್ನು ಕುಮಾರವ್ಯಾಸ ಮಹಾಕವಿಯ ಕೃತಿಯಿಂದ ಸ್ಪೂರ್ತಿಗೊಂಡಿದ್ದಕ್ಕಾಗಿ ಈ ಕೊನೆಯ ದೃಶ್ಯದ ಆರಂಭದಲ್ಲಿ ಮಹಾಕವಿಗಳು ತಾವು ಕುಮಾರವ್ಯಾಸ ಮಹಾಕವಿಗೆ ಋಣಿಯಾಗಿರುವುದನ್ನು ಆಪ್ತವಾಗಿ ನಿವೇಧಿಸಿಕೊಳ್ಳುತ್ತಾರೆ.
ಈ ಮೊದಲು ನಾವು ನೋಡಿದ ಮಹಾಕವಿಗಳ ರಂಗಕೃತಿಗಳಲ್ಲಿ ಸಾಮಾನ್ಯ ರಂಗತಂತ್ರವೆಂಬಂತೆ ಪೀಠಿಕಾ ದೃಶ್ಯಗಳಲ್ಲಿ ಯಕ್ಷರು, ದೇವತೆಗಳು ಹೀಗೆ ವಿಭಿನ್ನ ಪಾತ್ರಗಳ ಮೂಲಕ ರಂಗಕೃತಿಯ ಆರಂಭಿಕ ದೃಶ್ಯವನ್ನು ಅಳವಡಿಸಿರುವಂತೆ ಇಲ್ಲಿಯೂ ಸಹ ‘ವಿಧಿವಾಣಿ’ ಎಂಬ ಕಾಲ(ಜ್ಞಾನಿ)ಭೈರವನಂತಹ ಪಾತ್ರದ ಮೂಲಕ ನಿರೂಪಣೆಯನ್ನು ಮಾಡಿಸುತ್ತಾರೆ. ಇಲ್ಲಿ ವಿಧಿವಾಣಿಯು ಮುಂದೆ ನಡೆಯಲಿರುವ ಮಹಾಭಾರತವು ತನ್ನ ಬಲಿಗಾಗಿ ಈಗಿನಿಂದಲೇ ತನಗೆ ಬೇಕಾದ ಪಾತ್ರಗಳನ್ನು ಸೃಷ್ಟಿಸಿಕೊಳ್ಳುತ್ತಿದೆ. ಶ್ರೀಹರಿಯು ಶ್ರೀಕೃಷ್ಣನ ಅವತಾರದಲ್ಲಿ ಆಗಮಿಸಿ ದುಷ್ಟರನ್ನು ಶಿಕ್ಷಿಸುತಾ, ಶಿಷ್ಟರನು ರಕ್ಷಿಸಲು ಭೂಮಿಯಲ್ಲಿ ಮೂಡುತ್ತಾನೆ ಎಂದು ನುಡಿಯುತ್ತಿರುವಾಗ ಲಕ್ಷ್ಯವು ದೂರ್ವಾಸ ಮುನಿಯು ಸುಂದರ ಕನ್ಯೆ ಕುಂತಿಭೋಜನ ಮಗಳಾದ ಕುಂತಿದೇವಿಗೆ ಐದು ವರಗಳನ್ನು ಕೊಡುತ್ತಿರುವಲ್ಲಿಗೆ ಹೋಗುತ್ತದೆ. ಗಂಗಾತೀರದ ಬನದಲ್ಲಿ ಕನ್ಯೆಯಾದ ಕುಂತಿದೇವಿಯು ಹೂವು-ಹಣ್ಣುಗಳನ್ನು ಅಯ್ದುಕೊಂಡು ಬರುತ್ತಿದ್ದಾಳೆ ಎಂಬಲ್ಲಿಂದ ಕಥಾನಕ ಆರಂಭಗೊಳ್ಳುತ್ತದೆ.
ಕಾಮದೇವನ ಸಿರಿಯ ಕಣ್ಣಿನಂದದ ಚೆಂದುಳ್ಳಿ ಚೆಲುವಿನ ಕನ್ಯೆಯಾಗಿರುವ ಕುಂತಿಯು ಗಂಗಾತೀರದಲ್ಲಿರುವ ಬನದಲ್ಲಿ ಹೂವುಗಳನು ಆಯ್ದುಕೊಳ್ಳುತ್ತಿರುವಾಗ ತನ್ನ ಗೆಳತಿಯರಿಂದ ಬೇರೆಯಾಗಿ ಏಕಾಂಗಿಯಾಗಿದ್ದಾಳೆ, ಇದೇ ಸುಸಮಯವೆಂದು ದೂರ್ವಾಸ ಮುನಿಗಳು ನೀಡಿದ ಐದು ವರಗಳಲ್ಲಿ ಒಂದನ್ನಾದರೂ ಪರೀಕ್ಷಿಸುವ ಕುತೂಹಲದಿಂದ ಸೂರ್ಯದೇವನ ಪೂಜೆ ಮಾಡಿ ಅಭಿಮಂತ್ರಿಸುತ್ತಾ ಕೈಗಳಿಂದ ಮೊಗವನ್ನು ಮುಚ್ಚಿಕೊಂಡು ಮೊಳಕಾಲೂರಿ ನಿಲ್ಲುತ್ತಾಳೆ. ಕಾಂತಿಯುತ ಬೆಳಕಿನಲ್ಲಿ ಸೂರ್ಯದೇವನು ಕೈಯಲ್ಲಿ ಶಿಶುವೊಂದನ್ನು ಹಿಡಿದುಕೊಂಡು ಪ್ರತ್ಯಕ್ಷನಾಗಿ :
ನಿನಗಾಗಿ ಮುದ್ದು ಕುವರನ ನಾನು ತಂದಿಹೆನು;
ಕಣ್ದರೆದು ನೋಡು, ಮೇಲೇಳು, ತೆಗೆದುಕೋ !
ನಿನ್ನ ಸೌಭಾಗ್ಯಕೆಣೆಯಿಲ್ಲ ; ಇವನಪ್ರತಿಮ
ಸಾಹಿಸಿ ! ಇವನೆದೆಯೊಳಮೃತಕಲಶವಿದೆ !
ಮೈಲಿ ದುರ್ಭೇದ್ಯವಹ ವಜ್ರ ಕವಚವಿದೆ !
ಈ ಎರಡು ಇವನೊಳಿರುವನ್ನೆಗಂ ಇವನೊಡನೆ
ಮಾರ್ಮಪೆವ ಪಟುಭಟರು ಮೂರುಲೋಕದೊಳಿಲ್ಲ.
ಮೊದಲು ನೀನೀತನನು ಕಣ್ಣಿಂದ ನೋಡದಲೆ
ಕಿವಿಯಿಂದ ಕೇಳಿರುವೆ, ಅದರಿಂದ ನೀನಿವನ
ಕರ್ಣದಿಂ ಪಡೆದಿರುವೆ, ತಿರೆಯೊಳೀತನ ಹೆಸರು
ಕರ್ಣನೆಂದೊಳ್ಜಸದಿ ಪ್ರಖ್ಯಾತವಾಗಿರಲಿ.
ಎಂದು ಹೇಳುತ್ತಾ ಮಗುವನ್ನು ಕುಂತಿಯ ಕೈಯಲ್ಲಿಡುತ್ತಾ ಅದೃಶ್ಯನಾಗುವನು. ಕುಂತಿಯು ನಾಚುತ್ತಾ ಮಗು ಕರ್ಣನನ್ನು ಪರಿಗ್ರಹಿಸುವಳು. ಮಗುವನ್ನು ಮುದ್ದಾಡುತ್ತಾ, ನಗುತ್ತಾ ನಾಚಿಕೊಳ್ಳುವಳು. ಕೊನೆಗೆ ತಾನು ಕನ್ಯೆಯಾಗಿದ್ದು, ಮಗುವನ್ನು ಪಡೆದುಕೊಂಡುದಕ್ಕೆ ಸುತ್ತಲೂ ನೋಡಿ ಬೆಚ್ಚುವಳು. ಮಗುದೊಮ್ಮೆ ಮಗು ಕರ್ಣ ಕುಮಾರನ ಪೆಂಪು, ರೂಪ, ಸೊಬಗು, ಹೊಳೆವ ಕಂಗಳನ್ನು ನೋಡಿ ಮುತ್ತಿಡುವಳು. ಆಗ ದೂರದಲ್ಲೆಲ್ಲೊ ಸಖಿಯರ ಧ್ವನಿಯು ಕೇಳಿದಂತಾಗಿ ‘ಅಯ್ಯೋ ಏನು ಮಾಡುವುದು?’ ಎಂದು ಯೋಚಿಸುತ್ತಾ ಲೋಕಾಪವಾದಕ್ಕೆ ಗುರಿಯಾಗುವೆನಲ್ಲಾ ಎಂದು ಹೆದರಿಕೊಳ್ಳುವಳು ಮತ್ತೊಮ್ಮೆ ‘ಹೇ ಸೂರ್ಯದೇವ, ನಿನಗೆ ಸಾವಿರ ನಮಸ್ಕಾರ ! ನನ್ನ ಕಂದನ ಮರಳಿ ಹಿಂದಕ್ಕೆ ತೆಗೆದುಕೊ !’ ಎಂದು ಪ್ರಾರ್ಥಿಸುತ್ತಾಳೆ. ‘ಕನ್ಯತನದಲ್ಲಿ ಹೆತ್ತು ಮಹದಪರಾಧವ ಮಾಡಿದೆನು. ನನ್ನನ್ನು ಮನ್ನಿಸು ಕಂದ’ ಎಂದು ಪಶ್ಚಾತ್ತಾಪಪಡುತ್ತಾಳೆ. ‘ಅಪಮಾನಕ್ಕಿಂತ ಸಾವೇ ಲೇಸು’ ಎಂದು ಬಗೆಯುತ್ತಾಳೆ. ತಕ್ಷಣವೇ ಉಪಾಯವೊಂದು ಹೊಳೆಯುತ್ತದೆ. ನಿರ್ಮಲವಾಗಿ ಹರಿಯುತ್ತಿರುವ ಪವಿತ್ರ ಗಂಗಾನದಿಯ ತಡಿಗೆ ಹೋಗಿ ಕೂಸಿನೊಡನೆ ಸಾಯಲು ಹಾರಲೆತ್ನಿಸುವಳು. ಆಗ ಗಂಗಾಮಾತೆಯು ಪ್ರತ್ಯಕ್ಷಳಾಗಿ ‘ದುಡುಕದಿರು, ನಿನ್ನ ಚಿಂತೆಯ ನಾನು ನೀಗುವೆನು’ ಎಂದು ತಡೆಯುವಳು. ಅಲ್ಲಿಯವರೆಗೂ ನಡೆದ ಕಥೆಯನ್ನು ಕುಂತಿಯು ಗಂಗಾಮಾತೆಯ ಹತ್ತಿರ ಹೇಳಿಕೊಂಡಾಗ, ಗಂಗಾಮಾತೆಯು ‘ಈಗ ನೀನು ಪಾರಾದರೂ ಮುಂದೆ ನೀನು ಈ ಪಾಪಕ್ಕೆ ಪಶ್ಚಾತ್ತಾಪ ಪಡಬೇಕಾಗುವುದು’ ಎಂದು ಹೇಳುತ್ತಾ :
ನಿನ್ನ ಕಂದನನೆನಗೆ ಕೆಯ್ಯೆಡೆಯಾಗಿ ಕೊಡು ;
ನಾನೀತನನು ಸಾಕಿ, ಸಲಹುವಂತೆಸಗುವೆನು
ಮಗುವನ್ನು ಕುಂತಿಯ ಕೈಯಿಂದ ಪಡೆಯುವಳು. ಇಲ್ಲಿ ಮಹಾಕವಿಗಳು ಗಂಗಾಮಾತೆಯ ಪಾತ್ರದಿಂದ
……………………ವಿಧಿಲೀ
ಮುಂದೆ ಬರುವಾ ಮಹಾಭಾರತದ ನಾಟಕಕೆ
ನಾಂದಿಯನು ಬರೆಯುತಿದೆ ಬಿದಿ. ನಾವೆಲ್ಲ
ಸೂತ್ರಧಾರನ ಕೈಲಿ ಬೊಂಬೆಗಳು. ಪಾತ್ರಗಳ
ವಹಿಸುವರು. ಕುಣಿಸಿದಂತೆಯೆ ಕುಣಿಯುತಿರುವೆವು.
ಎಂದು ಹೇಳಿಸುತ್ತಾರೆ. ಅಷ್ಟರಲ್ಲಿ ಮಿಂಗುಲಿಗ(ಮೀನುಗಾರ)ನು ಬರುವುದನ್ನು ಗಮನಿಸಿದ ಗಂಗಾಮಾತೆಯು ಮಗುವನ್ನಿಟ್ಟು ಮರೆಯಾಗುವಳು. ಆ ಸೂತ ಮೀನುಗಾರನಿಗೆ ಮಕ್ಕಳಿಲ್ಲವೆಂಬ ಚಿಂತೆಯ ಕೊರಗು ಒಂದೆಡೆಯಾದರೆ, ಮತ್ತೊಂದೆಡೆ ಅವನ ಬಲೆಯಲ್ಲಿ ಒಂದು ಮೀನು ಸಿಕ್ಕದೇ ಇರುವುದರಿಂದ, ಹೆಂಡತಿಯಿಂದ ಬೈಯಿಸಿಕೊಳ್ಳಬೇಕಾದಿತಲ್ಲವೆಂದು ಹೆದರಿಕೊಂಡಿರುವಾಗಲೇ ಶಿಶುವನ್ನು ನೋಡಿ ಬೆಚ್ಚಿ ಬೀಳುವನು. ಸುತ್ತಲೂ ನೋಡಿ ಯಾರಾದರೂ ಇರುವರೆ ಎಂದು ಕೂಗಿ ಕೇಳುವನು. ಮನೆಯಲ್ಲಿಯ ರಾಧೆಗೆ ಮಕ್ಕಳಿಲ್ಲವೆಂದು ದಿನವೂ ಬೈಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳುವ ಉಪಾಯವಾಗಿ ಮುದ್ದಾದ ಮಗುವನ್ನು ಎತ್ತಿಕೊಂಡು ಹೋಗಲು ತಯಾರಾದಾಗ ಆತನ ಹೆಂಡತಿ ರಾಧೆಯು ಗಂಡನನ್ನು ಹುಡುಕಿಕೊಂಡು ಅಲ್ಲಿಗೆ ಬರುತ್ತಾಳೆ. ಮಕ್ಕಳಿಲ್ಲದ ಕೊರಗಿನಲ್ಲಿದ್ದ ಅವರಿಬ್ಬರೂ ಮಗುವನ್ನು ಮುದ್ದಾಡುತ್ತಾ ಮನೆಗೆ ತೆಗೆದುಕೊಂಡು ಹೋಗುತ್ತಾರೆ.
ಹುಡುಗನಾದ ಕರ್ಣನು ಹಳ್ಳಿಯ ಹೊರಗಡೆಯ ಒಂದು ಸಣ್ಣ ಬನದಲ್ಲಿ ಕುಳಿತು ಚಿಂತಾಕ್ರಾಂತನಾಗಿರುವ ಸಂದರ್ಭದೊಂದಿಗೆ ಎರಡನೇಯ ದೃಶ್ಯದ ಆರಂಭವಾಗುವುದು. ಆತನ ಆತ್ಮವು ತಲ್ಲಣಗೊಂಡಿದೆ. ಹಳ್ಳಿಯ ವಾತಾವರಣವು ಆತನಿಗೆ ಕಿರಿದಾಗಿ ಕಾಣಿಸುತ್ತಿರುವಂತೆ ಭಾಸವಾಗುತ್ತಿದೆ. ಆತನ ಕನಸುಗಳಲ್ಲಿ ಅರಮನೆ, ರಾಜಕಾರಣ, ಯುದ್ಧಗಳು, ಬಿಲ್ಲು-ಬಾಣಗಳು, ನೃಪತಿಗಳು ಹೀಗೆ ಆತನ ಸ್ವಪ್ನಸಾಮ್ರಾಜ್ಯವು ಕಾಣಿಸಿಕೊಂಡು ಕಾಡುತ್ತಿದೆ. ಇಂತಹ ಹಳ್ಳಿಯಲ್ಲಿ ಹೇಗಿರಲಿ, ತಂದೆ-ತಾಯಿಯರನ್ನು ಒಪ್ಪಿಸಿ ಕನಸಿನಲ್ಲಿ ಹೆಗಲ ಮೇಲೆ ಕೊಡಲಿಯೊಂದಿಗೆ ಕಾಣಿಸಿಕೊಂಡ ತೇಜಸ್ವಿಯಾದ ವೃದ್ಧಮೂರ್ತಿಯ ಕಡೆಗೆ ತೆರಳುವೆನು ಎಂದು ಯೋಚಿಸುತ್ತಾ ಹೊರಡಲನುವಾದಾಗ ಆತನ ತಾಯಿ ರಾಧೆಯು ‘ಕೆಲವು ದಿನಗಳಿಂದ ಏನನ್ನೋ ಯೋಚಿಸುತ್ತಿರುವೆ, ಮೈಯಲ್ಲಿ ಹುಷಾರಿಲ್ಲವೇನು?’ ಎಂದು ಕಾಳಜಿ ತೋರುತ್ತಾಳೆ. ತನ್ನ ಕನಸಿನ ಚಿತ್ರಗಳನ್ನು ತಾಯಿಯ ಹತ್ತಿರ ಹೇಳುತ್ತಿರುವಾಗ ಆವಳು ಸಹ ಬೆಕ್ಕಸ ಬೆರಗಾಗಿ ಕೇಳುತ್ತಾ, ಮನದಲ್ಲಿಯೇ ‘ಯಾವ ಮಹಾ ಪುಣ್ಯ ಪುರುಷನ ಮಗನೋ ನಾ ಕಾಣೆ, ನಿನ್ನ ಮಹಾತ್ಮಕ್ಕೆ ನಮ್ಮ ಬಡ ಜೀವನದ ಕಳವಳಗಳು ಸಾಕಾಗುವವೇ?’ ಅಂದುಕೊಳ್ಳುತ್ತಾಳೆ. ಹೀಗೆ ತಾಯಿ-ಮಗ ಚರ್ಚಿಸುತ್ತಾ ‘ನನಗೆ ಬಿಲ್ಲಂಬುಗಳ ವಿದ್ಯೆಯನು ಕಲಿಯಬೇಕೆಂದು ಕುತೂಹಲ, ಅದಕ್ಕೆ ನಿನ್ನ ಮತ್ತು ತಂದೆಯ ಅಪ್ಪಣೆಯಾದರೆ ಸಾಕು’ ಎಂದು ವಿನಯವಾಗಿ ಕೇಳಿಕೊಳ್ಳುತ್ತಾನೆ. ‘ಆದರೂ ನೀನು ಬೇಸ್ತರವನು, ನಿನಗೆ ವಿದ್ಯೆ ಬೋಧಿಸÀಲಾರರು, ನೀನಿನ್ನೂ ಸಣ್ಣವ, ನನಗೆ ಈ ವ್ಯವಸ್ಥೆಯ ಕುರಿತು ಗೊತ್ತಿಲ್ಲ’ವೆಂದು ಹೇಳುತ್ತಾಳೆ. ‘ಗುರುಗಳಿಗೆ ನನ್ನ ಯೋಗ್ಯತೆಯನು ತೋರಿಸಿ. ಅವರನ್ನು ಮೆಚ್ಚಿಸುತ್ತಲೇ, ಅವರಿಂದ ವಿದ್ಯಾದಾನವನ್ನು ಪಡೆಯುವೆನು’ ಎಂದು ತನ್ನಲ್ಲಿರುವ ಉತ್ಸಾಹ, ಛಲವನ್ನು ವಿವರಿಸಿ ಹೇಳುತ್ತಾನೆ. ‘ಮಗು ನೀನಾರ ಬಳಿ ಹೋಗುವೆ? ನಿನಗೆ ಯಾರ ಪರಿಚಯವಿದೆ?’ ಎಂದು ತಾಯಿಯು ಕೇಳಿದಾಗ, ಈ ಮೊದಲು ಒಂದು ದಿನ ತೊರೆಯ ಹತ್ತಿರ ಶಿಷ್ಯರೊಂದಿಗೆ ಬಂದ ಮಹರ್ಷಿಯನ್ನು ನೋಡಿರುವುದನ್ನು ಹೇಳುತ್ತಾನೆ. ಅವರಲ್ಲಿಗೆ ಹೋಗಿ ವಿದ್ಯೆಯನ್ನು ಪಡೆಯುವೆನು ಎಂದು ಹೇಳುತ್ತಿರುವಾಗ ಆತನ ತಂದೆಯಾದ ಸೂತನು ಹೆಗಲ ಮೇಲೆ ಮೀನಿನ ಬಲೆಯನ್ನು ಹೊತ್ತುಕೊಂಡು, ಕೈಯಲ್ಲಿ ಧನುಸ್ಸನ್ನು ಮತ್ತು ಬಾಣಗಳನ್ನು ಹಿಡಿದುಕೊಂಡು ಇವರಿರುವಡೆಗೆ ಬರುತ್ತಾನೆ. ತಂದೆಯ ಕೈಯಲ್ಲಿಯ ಧನಸ್ಸು-ಭಾಣಗಳನ್ನು ಕರ್ಣನು ಅನಾಯಾಸವಾಗಿ ಹಿಡಿದುಕೊಂಡಿದ್ದನ್ನು ನೋಡಿದ ಸೂತನು ಬೆರಗಾಗುತ್ತಾನೆ. ಹುಮ್ಮಸ್ಸಿನಿಂದ ಕರ್ಣನು ಬಿಲ್ಲಿಗೆ ಬಾಣವನ್ನು ಹೂಡಿ ಸೇದಿ ಏಳೆಯುತ್ತಿರುವಾಗ ಸೂತನು ‘ಸಾಕು ! ಸಾಕು ಮಗು ಹೆಚ್ಚು ಎಳೆಯಬೇಡ !’ ಎಂದು ಆತಂಕದಿಂದ ಹೇಳುತ್ತಿರುವಾಗಲೇ, ಕರ್ಣನು ಕಿವಿಯವರೆಗೆ ಎಳೆದು ಒಂದು ಬಾಣವನ್ನು ಬಿಟ್ಟಾಗ ದೊಡ್ಡ ಮರದ ಕೊಂಬೆಯೊಂದು ಮುರಿದು ಬೀಳುತ್ತದೆ. ಆಗ ರಾಧೆಯು ಸೂತನಿಗೆ ‘ಅವನು ಬಿಲ್ಲುವಿದ್ಯೆಯನ್ನು ಕಲಿಯಲು ಹೋಗುತ್ತಾನಂತೆ’ ಎಂದು ತನ್ನ ಗಂಡನಲ್ಲಿ ಹೇಳುತ್ತಾಳೆ. ಆತನೂ ಸಹ ಸಂತೋಷದಿಂದ ಅದಕ್ಕೆ ತನ್ನದೇನೂ ತಡೆಯಿಲ್ಲವೆಂದು ಹೇಳಿದಾಗ ಖುಷಿಗೊಂಡ ಕರ್ಣನು ‘ನಾಳೆಯೇ ಹೊರಡುವೆನು’ ಎಂದು ಹೇಳುತ್ತಾನೆ.
ಮೂರನೇಯ ದೃಶ್ಯದಲ್ಲಿ ಮೂವರು ಬ್ರಹ್ಮಚಾರಿಗಳು ಅರಣ್ಯವೊಂದರಲ್ಲಿ ಸಮಿತ್ಪುಷ್ಪಗಳನ್ನು ಆಯ್ದುಕೊಳ್ಳಲು ಬಂದಿದ್ದಾರೆ. ಅವರನ್ನು ಹುಲಿಯೊಂದು ಅಟ್ಟಿಸಿಕೊಂಡು ಬಂದಾಗ ರಕ್ಷಣೆಗಾಗಿ ಕೂಗಿಕೊಂಡಾಗ, ಅಲ್ಲಿಗೆ ಆಗಮಿಸಿ ಕಾಡಿನ ಸೌಂದರ್ಯವನ್ನು ಸವಿಯುತ್ತಿರುವ ಕರ್ಣನು ತನ್ನಲ್ಲಿರುವ ಬಿಲ್ಲು-ಬಾಣಗಳಿಂದ ಆ ಹುಲಿಯನ್ನು ಸಂಹರಿಸುವನು. ಆಗ ಗಾಬರಿಯಾದ ಆ ಬ್ರಹ್ಮಚಾರಿಗಳು ವಿಚಾರಿಸಲಾಗಿ, ನಿಮ್ಮ ಗುರುಗಳಾದ ಪರಶುರಾಮರನ್ನು ಹುಡುಕಿಕೊಂಡು ಬಂದಿರುವುದಾಗಿ ಹೇಳುತ್ತಾನೆ. ನಂತರ ತಾನು ಶಾಸ್ತ್ರಾಭ್ಯಾಸ ಮಾಡಲು ಅವರಲ್ಲಿಗೆ ಬಂದಿರುವುದಾಗಿಯೂ ತಾನು ಬ್ರಾಹ್ಮಣನಲ್ಲ, ಕ್ಷತ್ರಿಯನಲ್ಲ, ಬೆಸ್ತರ ಕುಲದವನೆಂದು ಪ್ರಾಮಾಣಿಕವಾಗಿ ಅವರ ಮುಂದೆ ಹೇಳುತ್ತಾನೆ. ‘ನೀನು ಬೆಸ್ತರ ಕುಲದವನಂತೆ ಕಾಣುವುದಿಲ್ಲವಲ್ಲಾ!’ ಎಂದು ಅವರೆಲ್ಲರೂ ಗಾಬರಿ ವ್ಯಕ್ತಪಡಿಸುತ್ತಾರೆ. ‘ಆದರೂ ನಾನು ಬೆಸ್ತರ ಕುಲದವನೆ?’ ಎಂದು ಕರ್ಣನು ಸ್ವಾಭಿಮಾನದಿಂದ ಯಾವುದೇ ಹಿಂಜರಿಕೆಯಿಲ್ಲದೇ ನುಡಿಯುತ್ತಾನೆ. ಅವರಲ್ಲಿಯ ಬ್ರಹ್ಮಚಾರಿಯೊಬ್ಬ ‘ಕುಲವು ಜನನದೊಳಿಲ್ಲ ; ಗುಣದೊಳಿಹುದು ; ಎಂದು ಗುರುಗಳು ಅನೇಕ ಸಾರಿ ಹೇಳಿರುವರು. ನಿನ್ನ ಪುಣ್ಯದಿಂದ ಶಿಷ್ಯವೃತ್ತಿ ಲಭಿಸಬಹುದು, ಪ್ರಯತ್ನಿಸಿ ನೋಡೋಣ !’ ಎಂದು ಹೇಳುತ್ತಿರುವಾಗಲೇ ತನ್ನ ಇಬ್ಬರು ವಟುಗಳೊಂದಿಗೆ ಪರಶುರಾಮನು ಬರುತ್ತಾನೆ. ಕರ್ಣನು ಸಾಷ್ಟಾಂಗ ನಮಸ್ಕಾರ ಮಾಡುತ್ತಾನೆ. ನಂತರ ಶಿಷ್ಯಂದಿರು ತಮ್ಮೆಲ್ಲರನ್ನು ಕರ್ಣನು ಹುಲಿಯ ಬಾಯಿಯಿಂದ ರಕ್ಷಿಸಿರುವುದನ್ನು ವಿವರಿಸುತ್ತಾ ಕರ್ಣನನ್ನು ತೋರಿಸುತ್ತಾರೆ. ಈ ಮೊದಲು ಕರ್ಣನನ್ನು ನೋಡಿದ ನೆನಪಾಗಿ, ನಿಖರವಾಗಿ ತೋಚದಿದ್ದಾಗ ಪರಶುರಾಮನು ಹಳ್ಳಿಯ ತೊರೆಯೊಂದರ ಹತ್ತಿರ ತನ್ನನ್ನು ಮಾತಾಡಿಸಿ, ಪಾವನಗೊಳಿಸಿದ್ದನ್ನು ಕರ್ಣನು ನೆನಪಿಸುತ್ತಾ ‘ತಮ್ಮ ಬಳಿ ಶಿಷ್ಯವೃತ್ತಿಯನ್ನವಲಂಭಿಸಿ ಶಸ್ತ್ರಾಭ್ಯಾಸ ಮಾಡಬೇಕೆಂದು ಬಂದೆ. ನನ್ನನ್ನು ಅನುಗ್ರಹಿಸಬೇಕು’ ಎಂದು ಕೈಮುಗಿಯುತ್ತಾನೆ. ಆಗ ಶಿಷ್ಯರಲ್ಲೊಬ್ಬ ‘ಗುರುದೇವ, ಇವನು ಬೆಸ್ತರವನಂತೆ!’ ಎಂದು ಹೇಳಿದಾಗ, ಆತನ ಹೆಸರು ರಾಧೆಯ ಎಂಬುದನ್ನು ತಿಳಿದುಕೊಂಡು, ‘ಅರಿಗಳ ರುಂಡಗಳೆಂಬ ಮತ್ಸ್ಯಗಳನ್ನು ತನ್ನ ಶರಜಾಲದಲ್ಲಿ ಹಿಡಿಯುವ ಬೆಸ್ತನು !’ ಎಂದು ನುಡಿಯುತ್ತಾ ತನ್ನ ಶಿಷ್ಯರನ್ನು ಉದ್ದೇಶಿಸಿ ಮಾರ್ಮಿಕವಾಗಿ ಹೇಳುವುದನ್ನು ಇಲ್ಲಿ ಮಹಾಕವಿಗಳು ವಿಶ್ವಮಾನವತೆಯ ಮನುಜಮತದ ವಿಚಾರವನ್ನು ಪರಶುರಾಮನ ಪಾತ್ರದ ಮೂಲಕ ಹೇಳಿಸಿರುವುದನ್ನು ನೋಡಬಹುದು.
ವಟುಗಳಿರಾ, ಯಾವಾತನ ಮೊಗದಲ್ಲಿ ತೇಜಸ್ಸು
ತೋರುವುದೋ, ಯಾವನೊಳು ಬಾಂದಳದ ಗಾಂಭೀರ್ಯ
ಮೆರೆಯುವುದೋ, ಯಾವನು ಸದಾ ಸತ್ಯವಾಡುವನೊ,
ಅವನೆಲ್ಲಿಯೇ ಇರಲಿ, ಅವನಾರೆ ಆಗಿರಲಿ,
ಬ್ರಾಹ್ಮಣನು ! ಎಲ್ಲಿ ಔದಾರ್ಯವಿರುವುದೊ?
ಎಲ್ಲಿ ಸಾಮಥ್ರ್ಯ ಮೈದೊರುವುದೋ ? ಮೇಣೆಲ್ಲಿ
ವೀರರಸ ಉಕ್ಕುವುದೋ ಅವರೆಲ್ಲ ಕ್ಷತ್ರಿಯರು.
ರಾಧೇಯ, ನಿನ್ನ ಸಾಮಥ್ರ್ಯಕ್ಕೆ ಮೆಚ್ಚಿದೆನು.
ನಾನರಿತ ವಿದ್ಯೆಯನು ನಿನಗೆ ಸಂತಸದಿ
ಬೋಧಿಸುವೆ. ಸಂಪ್ರದಾಯವು ಯೋಗ್ಯತೆಯ ಮುಂದೆ
ಬಹುಕಾಲ ನಿಲ್ಲಲರಿಯದು, ಒಳಗಿಹ ಬೆಳಕು
ಹೊಳೆಯತೊಡಗಿದರೆ ಹೊರಗಿರುವ ಕತ್ತಲೆಯು
ತಡೆಯಲಾರದು ಅದನು, ನಿನ್ನ ಕಣ್ಣಿನ ಬೆಳಕೆ
ನಿನ್ನ ಕುಲವನು ಬಿಚ್ಚಿ ಹೇಳತಿದೆ, ಮುಂದೆಂದೂ
ರಾಧೆಯನೆಂಬುವನು ಪರಶುರಾಮನ ಶಿಷ್ಯ !
ಮುಂದಿನ ದೃಶ್ಯ ಆರಂಭವಾಗುವುದಕ್ಕಿಂತ ಮುಂಚೆ ನಿರೂಪಕನಂತೆ ‘ವಿಧಿವಾಣಿ’ ಪಾತ್ರದ ಮೂಲಕ ಮಹಾಭಾರತದ ಕಥೆಯಲ್ಲಿಯ ಕೌರವರು ಮತ್ತು ಪಾಂಡವರು ಜನಿಸಿದ್ದು, ಬೆಳದು ದೊಡ್ಡವರಾಗುತ್ತಿದ್ದು ಚಾಪಾಗಮಾಚಾರ್ಯ ದ್ರೋಣನಿಂದ ಶಸ್ತ್ರಶಾಸ್ತ್ರಾಭ್ಯಾಸವನು ಮಾಡುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ನಂದಗೋಕುಲದಲ್ಲಿ ಶ್ರೀಕೃಷ್ಣನು ವಸುದೇವ-ದೇವಕಿಯರ ಗರ್ಭದಲ್ಲಿ ಜನಿಸಿರುವುದು, ಇತ್ತಕಡೆ ಕರ್ಣನು ಬಿಲ್ವಿದ್ಯೆಯನು ಭಾರ್ಗವ ಪರಶುರಾಮನೆಂಬ ಮುನಿವರನ ಎಲೆವನೆಯ ಬಳಿಯ ಹೊರಬಯಲಿನಲಿ ಕಲಿಯುತ್ತಿರುವುದನ್ನು ಹೇಳಿಸುತ್ತಾರೆ.
ನಾಲ್ಕನೇಯ ದೃಶ್ಯದಲ್ಲಿ ಪರಶುರಾಮನ ಪರ್ಣಶಾಲೆಯ ಹೊರಭಾಗವೊಂದರಲ್ಲಿ ಕರ್ಣನು ಉತ್ಸಾಹದಿಂದ ಬಿಲ್ವಿದ್ಯೆಯನ್ನು ಅಭ್ಯಾಸ ಮಾಡುತ್ತಿದ್ದಾನೆ. ಪರಶುರಾಮನ ಬ್ರಹ್ಮಚಾರಿ ಶಿಷ್ಯಂದಿರು ಹಾಕುವ ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ಅಂದರೆ ಮರದ ನೆತ್ತಿಯಲ್ಲಿ ಕೆಂಪಾಗಿರುವ ಹೂವನ್ನು ಒಂದು ದಳವೂ ಕೂಡ ಅಲುಗಾಡದಂತೆ ಬೀಳಿಸುವ ಕರಚಾತುರ್ಯ, ಬ್ರಹ್ಮಚಾರಿ ಶಿಷ್ಯನು ಮೇಲೆಸದ ಕಲ್ಲನ್ನು ಅದು ನೆಲ ತಲುಪುವುದಕ್ಕಿಂತ ಮುಂಚೆ ಗಾಳಿಯಲ್ಲಿಯೇ ಪುಡಿ-ಪುಡಿಯಾಗುವಂತೆ ಬಾಣದಿಂದ ಮಾಡುವುದು ಇತ್ಯಾದಿ ಚತುರತೆ ಮತ್ತು ದೂರದಲ್ಲಿರುವ ದೊಡ್ಡಬಂಡೆಗೆ ಬಾಣ ಬಿಟ್ಟು ಪುಡಿಮಾಡುವಂತಹ ಶಕ್ತಿ ಕಾರ್ಯಚತುರತೆ, ಬಾಣ ಬಿಟ್ಟು ಬೆಂಕಿಯನ್ನು ಹೊತ್ತಿಸಿ, ಜಲಾಸ್ತ್ರದಿಂದ ಅದನು ಆರಿಸುವ ತಂತ್ರಗಳನ್ನು ತೋರಿಸುತ್ತಿರುವುದನ್ನು ಪರಶುರಾಮನು ದೂರದಲ್ಲಿ ನಿಂತು ನೋಡುತ್ತಿರುತ್ತಾನೆ. ಎಲ್ಲಾ ಬಿಲ್ವಿದ್ಯೆ ಕೌಶಲ್ಯವನ್ನು ತೋರಿಸುವುದು ಮುಗಿದ ನಂತರ ಪರಶುರಾಮನು ಮುಂದೆ ಬಂದು ಕರ್ಣನ ಬೆನ್ನು ತಟ್ಟಿ ‘ರಾಧೆಯ, ಇಂದಿಗೆ ನೀನು ಚಾಪಾಗಮ ಕೋವಿದನಾದೆ. ನೀನು ನನ್ನ ಕೀರ್ತಿಗೆ ಕಾಂತಿದಾಯಕಾನಗುವುದರಲ್ಲಿ ಸಂದೇಹವಿಲ್ಲ. ನಿನ್ನ ಭವಿಷ್ಯತ್ತು ಅತ್ಯಂತ ಮಹತ್ತಾದುದಾಗಿದೆ. ಕಲಿಯಬೇಕಾದುದೆಲ್ಲವನ್ನೂ ಕಲಿತಿರುವೆ. ನೀನಿನ್ನು ಹೊರಹೊರಟು ನಿನ್ನ ಸಾಮಥ್ರ್ಯದಿಂದ, ನಿನ್ನ ಅಲೌಕಿಕ ಪ್ರತಿಭೆಯಿಮದ ಜಗತ್ತನ್ನು ಬೆರಗುಗೊಳಿಸಿ ಕೀರ್ತಿವಂತನಾಗು’ ಎಂದು ಹಾರೈಸುವಲ್ಲಿಗೆ ಮಹಾಕವಿಗಳು ಗುರುವಿನ ವಿಶಾಲಹೃದಯವನ್ನು ಪರಿಚಯಿಸುವ ಸೊಬಗಿಗೆ ಅವರೇ ಸರಿಸಾಟಿ. ಅದಕ್ಕೆ ಪ್ರತಿಯಾಗಿ ಕರ್ಣನು ಸಹ ‘ಗುರುದೇವ,……….ನಾ ನಿಮಗೆ ಚಿರಋಣಿಯು ! ಏನು ಗುರುದಕ್ಷಿಣೆಯ ನೀಡುವೆನೊ ನಾನರಿಯೆ !’ ಎಂದು ಮುಗ್ದತೆಯಲ್ಲಿ ನುಡಿದಾಗ, ಭಾರ್ಗವ ಪರಶುರಾಮನು ಬೋಧಿಸುವ ಹಿತನುಡಿಗಳು ಸರ್ವಕಾಲಕೂ ಒಪ್ಪುವಂತಹ ನುಡಿಗಳು !
ನನ್ನಿಯುಳಿಯಬೇಡ ; ಸಲಹಿದೊಡೆಯಗೆ ಮರಳಿ
ದ್ರೋಹವನೆಣಿಸಬೇಡ ; ದೀನರನು ತುಳಿಯದಿರು
ಧೂರ್ತರಿಗೆ ಮಣಿಯದಿರು. ಕಾಳೆಗದೊಳಿರುವಾಗ
ಧರ್ಮಯುದ್ಧವನೆಂದೂ ನೀಗದಿರು. ಅರಿಗಳಿಗೆ
ಮೈಸೋತು ಹಿಮ್ಮೆಟ್ಟದಿರು. ಸಿಂಹದೊಲು ಬಾಳು!
ಅದುವೆ ನೀನೆನಗೀವ ಗುರುದಕ್ಷಿಣೆ !
ಎಂದು ಹೇಳುತ್ತಾನೆ. ಆಗ ಬ್ರಹ್ಮಚಾರಿ ಶಿಷ್ಯನೋರ್ವನು ಓಡಿ ಬಂದು ಭೀಷ್ಮನು ಆಗಮಿಸುತ್ತಿರುವುದನ್ನು ಪರಶುರಾಮನಿಗೆ ತಿಳಿಸುತ್ತಾನೆ. ನಂತರ ಭೀಷ್ಮನು ತನ್ನ ವಟುಗಳೊಂದಿಗೆ ಆಗಮಿಸಿ, ಉಭಯಕುಶಲೋಪರಿಯಾದ ನಂತರ ಕರ್ಣನನ್ನು ಗಮನಿಸಿದ ಭೀಷ್ಮರಿಗೆ ಕರ್ಣನನ್ನು ಪರಶುರಾಮನು ಪರಿಚಯಿಸಿಕೊಡುತ್ತಾ ಅಪ್ರತಿಮ ವೀರನಾಗಿರುವ ಇವನನ್ನು ಗಜಪುರಿಗೆ ಕರೆದಯ್ದು ಸಲುಹಿದರೆ, ಮುಂದೆ ನಿಮ್ಮ ರಾಜ್ಯದ ಬಲಕೆ ಬಲದ ಕೈಯಾಗುವನೆಂದು ವಿವರಿಸುತ್ತಾನೆ. ಅಷ್ಟರಲ್ಲಾಗಲೇ ಕರ್ಣನನ್ನು ಕಂಡು ಭೀಷ್ಮರ ಮನವು ಮೋಹಗೊಂಡಿದೆ. ಅದರಿಂದಾಗಿ ಪರಶುರಾಮನಲ್ಲಿ ‘ಗುರುದೇವ, ತಮ್ಮಾಜ್ಞೆಯಂತೆ ವರ್ತಿಸುವೆ, ನನ್ನ ಮೊಮ್ಮಕ್ಕಳೊಡನೀತನೂ ಕೂಡಿರಲಿ’ ಎಂದು ಬೇಡಿಕೊಳ್ಳುತ್ತಾನೆ. ಅದಕ್ಕೆ ಸಮ್ಮತಿಸಿದ ಪರಶುರಾಮನು ರಾಧೇಯ(ಕರ್ಣ)ನನ್ನು ಕಳಿಸಿಕೊಡುವಾಗ ಕರ್ಣನ ಪ್ರತಿಭೆಯ ಕುರಿತು ಹೇಳುವ ಮಾತು ಅಭಿಮಾನವುಕ್ಕಿಸುತ್ತದೆ.
ಗಾಂಗೇಯ, ಈ ವೀರ ಬಾಲಕನು ಸಾಮಾನ್ಯ-
ನೆಂದರಿಯಬೇಡ, ನೀನೊಂದು ವರ್ಷದಲಿ
ಕಲಿತುದನು ಇವನೊಂದು ತಿಂಗಳಲಿ ಅರಿತಿಹನು
……ಯಾವ ಚಿಪ್ಪಿನೊಳಾವ
ಮುತ್ತಿರುವುದೆಂಬುದನು ಬಲ್ಲವರೆ ಬಲ್ಲರು !
ದೃಶ್ಯ-5ರಲ್ಲಿ ಹಸ್ತಿನಾಪುರದ ಅರಮನೆಯ ಒಂದು ಭಾಗದಲ್ಲಿ ಕೌರವೇಂದ್ರ ದುರ್ಯೋಧನ ಮತ್ತು ಆತನ ಸೋದರ ದುಶ್ಯಾಸನರಿಬ್ಬರೂ ಕರ್ಣನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ ಕೌರವೇಂದ್ರನನ್ನು ಖಳನಾಯಕನಂತೆ ಎಲ್ಲರೂ ತಮ್ಮ ಕೃತಿಗಳಲ್ಲಿ ಚಿತ್ರಿಸಿರುತ್ತಾರೆ. ಆದರೆ ಮಹಾಕವಿಗಳು ಅದನ್ನು ಸುಳ್ಳು ಮಾಡುವಂತಹ ಪ್ರಗತಿಪರ ವಿಚಾರಗಳನ್ನು ಅಂತಹ ಪಾತ್ರಗಳಿಂದಲೇ ಹೇಳಿಸುವುದು ಅವರ ಮನೋವಿಶಾಲತೆಗೆ ಹಿಡಿದ ಹಲವಾರು ಉದಾಹರಣೆಗಳಲ್ಲಿ ಇದೂ ಒಂದು. ಇಲ್ಲಿ ‘ಅವನು ಸೂತಜನಾದರೇನು, ದುಶ್ಶಾಸನ?…..ಸೂತನೊಬ್ಬನು ಸಾಕಿ ಸಲುಹಿದ ಮಾತ್ರದಿಂ ರಾಧೇಯನಕುಲಜನೆ? ಅವನ ತೇಜಸ್ಸು ನಮ್ಮನಿಬರೊಳಗಾವನಲ್ಲಿಹುದು ನೀನೆ ಹೇಳು!…..’ ಎಂದು ಕರ್ಣನ ಕುರಿತು ಹೇಳುವ ಮಾತು ಅವನ ಹೃದಯವೈಶಾಲತೆಯನ್ನು ತೋರಿಸುತ್ತದೆ.
ಅಣ್ಣಾ, ನೀನೆಂದ ನುಡಿ ನನ್ನಿ. ನಮಗೇನು?
ಯಾರಾದರೇನಂತೆ, ವೀರನಾದರೆ ಸಾಕು.
ಸೂತನಾಗಲಿ, ಬೆಸ್ತನಾಗಲಿ ! ಆತ್ಮಕ್ಕೆ
ಸೂತತ್ವಮೆಲ್ಲಿಯದು ? ಬೆಸ್ತತನವೆಲ್ಲಿಯದು ?
ರಾಧೆಯನೆಮ್ಮೊಡನೆ ಸೇರಿದರೆ, ಭೀಮ
ಅರ್ಜುನರ ಬಲವೆಲ್ಲ ಉಡುಗುವುದು, ಕುಗ್ಗುವುದು
ಹೆಮ್ಮೆ, ಹೆಚ್ಚುವುದು ನಮ್ಮೆಡೆಯ ಸಾಮಥ್ರ್ಯ!
ಸಾಮಾನ್ಯ ಬಲಯುತನೆ ಪರಶುರಾಮನ ಶಿಷ್ಯನು?
ಬಿಲ್ವಿದ್ಯಯೆಲ್ಲವನು ಬಾಲ್ಯದಲ್ಲಿಯೆ ಅರಿತ
ರಾಧೆಯನಳವಿಗಳವೆಲ್ಲಿಯದು ? ಗುರುಗಳೋ-
ಪ್ಪಿದರಾಯ್ತು!
ಎಂದು ದುಶ್ಯಾಸನನು ಕರ್ಣನ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಾನೆ. ಇಲ್ಲಿ ದುಶ್ಯಾಸನನು ಸಹ ಪ್ರತಿಭೆಗೆ ಬೆಂಬಲಿಸುತ್ತಾ, ಜಾತ್ಯಾತೀತ ಧೋರಣೆಯುಳ್ಳ ವ್ಯಕ್ತಿತ್ವದವನು ಎಂಬುದನ್ನು ಮಹಾಕವಿಗಳು ಸೂಚ್ಯವಾಗಿ ಹೇಳಿಸಿದ್ದಾರೆ. ಆಗ ದೂತನೊಡಗುಡಿ ಕರ್ಣನು ಆಗಮಿಸಿದಾಗ ಕೌರವೇಂದ್ರನು ಸ್ನೇಹಿದಿಂದ ಕೈಹಿಡಿದು ಮಾತಾಡಿಸುವನು. ಕರ್ಣನು ಸಹ ಅಷ್ಟೇ ನಯ-ವಿನಯಪೂರ್ವಕವಾಗಿ ಗೌರವದಿಂದ ಮಾತಾಡುತ್ತಾನೆ. ಕೌರವೇಂದ್ರನ ಪರಿಚಯವಾದ ನಂತರ ತನ್ನ ಬದುಕಿಗೆ ಮಹತ್ತರ ತಿರುವು ಸಿಕ್ಕಿದ್ದು ತನ್ನ ಯೋಗ್ಯತೆಗೆ ಮೀರಿ ಹೋಗಿರುವುದನ್ನು ಕೃತಜ್ಞತಾಪೂರ್ವಕವಾಗಿ ಹೃದಯಂತರಾಳದ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ. ‘ರಾಧೆಯ ಮರೆತು ಬಿಡು ನೀನು ಸೂತಜನೆಂಬ ಚಿಂತೆಯನು’ ಎಂದು ಆತನಿಗೆ ಮಾನಸಿಕ ಸ್ಥೈರ್ಯ ನೀಡುವಲ್ಲಿಗೆ ಕೌರವೇಂದ್ರನ ಮತ್ತೊಂದು ಮಾನವೀಯ ಮುಖದ ಪರಿಚಯವಾಗುತ್ತದೆ. ನಿನ್ನೆ ನಡೆದ ಬಿಲ್ವಿದ್ಯೆಯಲ್ಲಿ ತೊಡಗಿದಾಗ, ತಪ್ಪಾಗಿ ಬಿಲ್ಲು ಹಿಡಿದವನು ಮತ್ತು ತನ್ನನ್ನು ನೋಡಿ ಪಿಸುಮಾತನಾಡಿದ ನಡತೆಯ ದಾಂಡಿಗ ವ್ಯಕ್ತಿ ಯಾರೆಂದು ಕರ್ಣನು ಕೇಳಿದಾಗ, ಅವರೆಲ್ಲರೂ ನಗುತ್ತಾ ಅರ್ಜುನ-ಭೀಮರು ಎಂದು ಹೇಳುತ್ತಾರೆ. ಕುತೂಹಲದ ಕೌರವೇಂದ್ರನ ಸೋದರನಾದ ದುಶ್ಯಾಸನನು ‘ರಾಧೇಯ, ನೀನವನ ಶಿಷ್ಯನಾದುದು ಹೇಗೆ? ಕೊಡಲಿಗೊರವನು ವಿಲಯದಗ್ನಿಯ ಕಿಡಿಯು ಎಂದು ಕೇಳಿರುವೆವು’ ಎಂದು ಭಾರ್ಗವ ಪರಶುರಾಮನ ಸಿಟ್ಟಿನ ವ್ಯಕ್ತಿತ್ವದ ಕುರಿತು ಕೇಳಿದಾಗ ಕರ್ಣನು ಕೊಡುವ ಉತ್ತರ ಬಹಳ ಮಾರ್ಮಿಕವಾಗಿದೆ. ಕೊನೆತನಕ ಗುರುವನ್ನು ಆರಾಧಿಸುವ ಯಾರಿಗಾದರೂ ಮನಮುಟ್ಟುವಂತಹ ಮಾತುಗಳನ್ನು ಮಹಾಕವಿಗಳು ಕರ್ಣನ ಮೂಲಕ ಹೇಳಿಸಿರುವುದು ಹೀಗಿದೆ :
ಸುಳ್ಳುಮಾತು ;
ಗುರುದೇವನನ್ನರಿಯದಿಹರಂತು ತಿಳಿಯುವರು
ಸಂಚರಿಸುತವನೊಡನೆ ಸೇವಿಸಿದರಾತನನು
ಅವನು ಕರುಣೆಯ ಗಣಿಯು ಎಂದು ಗೊತ್ತಾಗುವುದು.
ನನ್ನ ಬಿಲ್ಲೋಜನತಿಶಾಂತಚಿತ್ತನೆಂದರಿಯುವು
ಎಂದು ಗುರುವಿನ ಕುರಿತು ಹೇಳುವ ಮಾತು ಮನಮುಟ್ಟುವಂತಿದೆ. ನಂತರ ಹಳ್ಳಿಯಲ್ಲಿರುವ ಮಾತಾಪಿತೃಗಳನ್ನು ಇಲ್ಲಿಗೆ ಕರೆಸಿಕೊಂಡು, ದೊರೆಯ ಗೆಳೆಯನ ತಾಯಿ-ತಂದೆ ಬಡವರಂತೆ ಇರುವುದು ಬೇಡ, ಅವರೂ ನಮ್ಮೊಟಿಗೆ ಇರಲಿ ಎಂದು ಹೇಳುವುದು ಆತನು ಬಡವರ ಕುರಿತಾದ ಕಾಳಜಿಯ ಮನೋಭಾವ ಮತ್ತು ಸ್ನೇಹಭಾಂಧವ್ಯಗಳ ಉಚ್ಛ ಮಟ್ಟವನ್ನು ತೋರಿಸುತ್ತದೆ. ಅಷ್ಟರಲ್ಲಿ ಭೀಮಾರ್ಜುನರ ಕೂಗು ಕೇಳಿಸುವುದು. ಅವರು ಜಗಳಕ್ಕೆ ಬಂದರೆ ಅವರ ಎಲುಬುಗಳು ಪುಡಿಯಾಗುವವೆಂದು ಕೌರವನು ಗುಡುಗಿದರೆ, ಕೌರವೇಂದ್ರನೊಂದಿಗೆ ಕರ್ಣನು ಇರುವವರೆಗೂ ಕೌರವೇಂದ್ರನನ್ನು ಮುಟ್ಟುವ ಧೈರ್ಯ ಯಾರಿಗೂ ಇಲ್ಲ ಎಂದು ಹೇಳುವುದು ಸಹ ಉಪಕಾರ ಸ್ಮರಣೆಯಂತಿದೆ. ಅವರಿಬ್ಬರ ಸ್ನೇಹದ ಕುರಿತು ಕೇವಲ ಎರಡು ಮಾತುಗಳಲ್ಲಿ ಮಹಾಕವಿಗಳು ಕಟ್ಟಿಕೊಡುವ ಸನ್ನಿವೇಶ ಹೃದಯಂಗಮವಾಗಿದೆ.
ಕೌರವ : (ಕರ್ಣನನ್ನು ನೋಡುತ್ತಾ)
ರಾಧೇಯ, ಮುಂದೆ ಎಂದೆಂದಿಗೂ ನೀನೆನ್ನ
ಜೀವದುಸಿರೆಂದು ತಿಳಿಯುವೆನು.
ಕರ್ಣ : ಕೌರವೇಂದ್ರ,
ನೀ ಬೇರೆ ನಾ ಬೇರೆ ಎಂಬುದನು ಮರೆತೆ.
ನಿನ್ನುಸಿರೆ ಎನ್ನುಸಿರು ; ನಿನ್ನೆದೆಯೆ ಎನ್ನೆದೆಯು !
ನಿನ್ನಳಿವೆ ಎನ್ನಳಿವು ; ನಿನ್ನುಳಿವೆ ಎನ್ನುಳಿವು ! (ಅಪ್ಪುವರು).
ಕೊನೆಯ (ಕ್ಲೈಮಾಕ್ಸ್) ದೃಶ್ಯದಲ್ಲಿ ಗಂಗಾನದಿಯ ದಡದ ಬನದಲ್ಲಿ ಬೆಳಗಿನ ಸಮಯದಲ್ಲಿ ಶ್ರೀಕೃಷ್ಣ ಮತ್ತು ಕರ್ಣ ಇಬ್ಬರೂ ತಿರುಗಾಡುತ್ತಾ ಬರುತ್ತಿದ್ದಾರೆ. ಇಲ್ಲಿ ಸಂಧಾನಕ್ಕೆ ಆಗಮಿಸಿರುವ ಕೃಷ್ಣನು ಪೀಠಿಕೆಯಾಗಿ ಮೋಹಕ ಸೃಷ್ಟಿಯ ಸೊಬಗನ್ನು ವರ್ಣಿಸುವ ಪರಿಯನ್ನು ಪ್ರಕೃತಿಯ ಆರಾಧಕ ಮಹಾಕವಿಗಳು ಸುಂದರವಾಗಿ ವರ್ಣಿಸಿದ್ದಾರೆ. ಈ ದೃಶ್ಯದ ಆರಂಭಕ್ಕೆ ಮೊದಲು ಈ ದೃಶ್ಯಭಾಗವನ್ನು ಮಾತ್ರ ತಾವು ವಿದ್ಯಾರ್ಥಿಯಾಗಿದ್ದಾಗ ಕುಮಾರವ್ಯಾಸ ಮಹಾಕವಿಯಿಂದ ಸ್ಪೂರ್ತಿಗೊಂಡು ರಚಿಸಿರುವುದನ್ನು ಖುಷಿಯಿಂದ ಮಹಾಕವಿಗಳು ಇಲ್ಲಿ ಜ್ಞಾಪಿಸಿಕೊಂಡಿರುವ ಕುರಿತು ವಿವರಣೆಯಿದೆ. ಕೃಷ್ಣನು ಕಲ್ಲಿನ ಕಾಲ್ಮಣೆಯ ಮೇಲೆ ಕುಳಿತುಕೊಂಡು ದೂರದಲ್ಲಿ ನಿಂತಿರುವ ಕರ್ಣನಿಗೆ ಗುಟ್ಟೊಂದನ್ನು ಹೇಳುವೆನೆಂದು ಕುತೂಹಲ ಸೃಷ್ಟಿಸುತ್ತಾನೆ. ದೂರದಲ್ಲಿ ನಿಂತಿರುವ ಕರ್ಣನನ್ನು ಆತ್ಮೀಯವಾಗಿ ಕರೆದು ತನ್ನ ಹತ್ತಿರ ಕುಳ್ಳಿರಿಸಿಕೊಂಡಾಗ, ‘ಪರಿಹಾಸ ಸಾಕು, ಗುಟ್ಟೆನು?’ ಎಂದು ಕೇಳುತ್ತಾನೆ. ಕರ್ಣನ ಜನನದ ರಹಸ್ಯ ಈ ಭೂಮಿಯಲ್ಲಿ ಕೇವಲ ಐದು ಜನರಿಗೆ ಮಾತ್ರ ಗೊತ್ತು, ತಾನು (ಕೃಷ್ಣ), ಕುಂತಿ, ದುರ್ಯೋಧನ, ನಿನ್ನ ತಂದೆ ಸೂರ್ಯದೇವ, ನಿನ್ನನುಜ (ಸೋದರ) ಕಾಲಜ್ಞಾನಿ ಸಹದೇವ ಎಂದು ಕುತೂಹಲ ಇಮ್ಮಡಿಯಾಗುವಂತೆ ಅರುಹುತ್ತಾನೆ. ಅದನ್ನು ನಂಬದ ಕರ್ಣನು ‘ಕೌರವೇಂದ್ರನ ಸ್ನೇಹವನ್ನು ತಪ್ಪಿಸಲು ಕಲ್ಪನೆಯಲ್ಲಿ ಕಥೆ ಕಟ್ಟಿ ಕಪಟ ನಾಟಕ ಹೂಡಿರುವಿಯೇನು?’ ಎಂದು ಸಂಶಯ ವ್ಯಕ್ತಪಡಿಸುತ್ತಾನೆ. ‘ನನ್ನಾಣೆ, ಸೂರ್ಯದೇವನ ಆಣೆ, ಗಂಗೆಯಾಣೆ’ ಎಂದು ಕರ್ಣನ ಜನನದ ಹಿಂದೆ ನಡೆದಿರುವ ಘಟನಾವಳಿಗಳನ್ನು ವಿವರಿಸಿರುವುದನ್ನು ಸಾಕ್ಷಿಕರಿಸುತ್ತಾನೆ. ಆಗ ಅಶರೀರವಾಣಿಯೊಂದು ‘ಹೇ ಕರ್ಣ, ಕೌಂತೇಯ, ರವಿತನಯ, ಅಂಗಪತಿ, ವಾಸುದೇವನ ನುಡಿಯು ಸತ್ಯ! ಸತ್ಯ! ಸತ್ಯ!’ ಎಂದು ಕೇಳಿಸುತ್ತದೆ. ಇದನ್ನು ಕೇಳಿದ ಕರ್ಣನು ತಟಕ್ಕನೆ ಎದ್ದು ಚಿಂತಿಸುತ್ತ, ಕಂಬನಿ ಕರೆಯುತ್ತಾ, ಹರಿಯುವ ಗಂಗೆಯನ್ನು ನೋಡುತ್ತಾ ತನ್ನಲ್ಲಿ ತಾನೇ (ಸ್ವಗತ) ಹೇಳಿಕೊಳ್ಳುವ ಯೋಚನೆಗಳು ಆತ್ಮಾವಲೋಕನದೊಂದಿಗೆ ನೆಚ್ಚಿನ ಒಡೆಯನ ಋಣಭಾರವನ್ನು ನೆನೆಸಿಕೊಳ್ಳುವ ಕ್ರಿಯೆ ಎಂಥವರನ್ನು ಮನಕಲಕುವಂತಿದೆ.
ಅಯ್ಯೋ. ಕುರುಪತಿಯೆ ಕೇಡಾದುದೇ ನಿನಗೆ?
ನಿಜವನೆನಗರುಹಿ ಕೈಮುರಿದೆನ್ನ ಕೊಂದನೀ
ಕಮಲಾಕ್ಷ. ಜಗವೆಲ್ಲ ಸೂತಪುತ್ರನು ಎಂದು
ದಿಕ್ಕರಿಸಿ ಮೂಂಕುತಿರೆ, ಅಂಗರಾಜ್ಯವನಿತ್ತು
ನೀನೆನ್ನ ಕ್ಷತ್ರಿಯನ ಮಾಡಿರುವಿ. ನನ್ನನೇ
ನೆಚ್ಚಿರುವಿ ; ನಿನ್ನ ಜೀವದ ಜೀವ ನಾನೆಂದು
ಬಗೆದಿರುವೆ. ಒಡಲೆರಡು ಆಸುವೊಂದು ಎಂಬಂತೆ
ನೀನೆನ್ನ ಪೊರೆದಿರುವೆ. ವಜ್ರಕವಚವ ಮಿರ್ದ
ಅಂಗರಕ್ಷೆಯು ಇಮದು ಹುಡಿಯಾಯ್ತೆ ? ಮುರವೈರಿ
ಫಲುಗುಣರ ಸಾವಳಿದು ಹೋಯ್ತೆ? ಕೇಡಾಯ್ತೆ
ನನ್ನ ನೆಚ್ಚಿದ ನಿನಗೆ? ಕೌರವೇಂದ್ರನೆ, ನಿನ್ನ
ಮುಕುಟಮಣಿ ಸಡಿಲಿದುದೆ ? ಭಾರತವು ನಮ್ಮವರ
ಭಾಗಕ್ಕೆ ಬಯಲಾಯ್ತೆ ? ಹಾಕೃಷ್ಣ, ದನುಜಹರ,
ನಿನ್ನ ಚಕ್ರದ ಮಾನವಿಂದುಳಿಸಿಕೊಂಡೆಯಾ?
ಕ್ರೂಸತ್ಯವನರುಹಿ ಕೊಲೆಗಾರನಾದೆಯಾ?
ಎಂದು ದುಃಖಿಸುತ್ತಾನೆ. ಆಗಲೂ ಶ್ರೀಕೃಷ್ಣನು ನೀನು ಪಾಂಡವರೊಂದಿಗೆ ಸೇರಿಕೊಂಡರೆ ಅವರೆಲ್ಲರಿಗಿಂತ ಹಿರಿಯನಾದ ನಿನಗೆ ರಾಜಮುಕುಟ ಸಿಗುವುದು. ಆಗ ನಾನೂ ಸಹ ನಿನಗೆ ಕಿಂಕರನಾಗಿರುವೆನೆಂದು ಮುಂತಾಗಿ ಕರ್ಣನನ್ನು ಒಲಿಸಿಕೊಳ್ಳಲು ಮುಂದಾಗುವ ಲಾಭದ ಆಶೆಯನ್ನು ಹುಟ್ಟಿಸುತ್ತಾನೆ. ಅದಕ್ಕೂ ಕರ್ಣನು ತನ್ನ ಕೌರವ ನಿಷ್ಟೆಯನ್ನು ಬದಲಾಯಿಸುವುದಿಲ್ಲ. ದುಡುಕದೆ ಸಮಾಧಾನದಿಂದ ಯೋಚಿಸಿ ನೋಡೆಂದು ವಿವರಿಸಿದ ಶ್ರೀಕೃಷ್ಣನ ಮಾತುಗಳಿಗೆ ಬದಲಾಗುವುದಿಲ್ಲ.
.…………………
ನಿನ್ನ ಕೈಯಲಿ ಮಹಾಭಾರತದ ಕೀಲಿಹುದು
ನೆತ್ತರಿನ ಹೊಳೆ ಹರಿಯುವಂತೆ ಮಾಡುವುದು,
ಅದನು ತಡೆಯುವುದೆಲ್ಲ, ನಿನ್ನ ಕೈಯಲಿಹುದು!
ಸಲೆ ವಿಚಾರಿಸಿ ನೋಡು !
ಎಂದು ಕೃಷ್ಣನು ವಿವರಿಸಿದಾಗಲೂ ಆತನ ಮನದಲ್ಲಿ ಕೌರವೇಂದ್ರನ ಕುರಿತಾದ ನಿಷ್ಟೆಯ ಆಲೋಚನೆಗಳು ಹೆಚ್ಚಾಗುತ್ತವೆ.
ಪೊರೆದೆನ್ನ ಮಿತ್ರನನು
ಕೈಬಿಡುವುದನುಚಿತವು. ಕನಸಿನಲ್ಲಿಯು ನಾನು
ಅದನೆಣಿಸಲಾರೆ. ಕೊಲುವೆನೆಂದರೆ ಪಾಂಡು
ನಂದನರು ಒಡನೆಹುಟ್ಟಿದರೆಂಬ ಸತ್ಯವನು
ನಾನರಿತೆ. ಕೊಲ್ಲದಿರೆ ಕೌರಬಗೆ ಗತಿಯಿಲ್ಲ.
ಭೇದದಲಿ ಹೊಕ್ಕಿರಿದನೇ ಹರಿಯು ?
ಹೀಗೆ ಕರ್ಣನ ನಿಷ್ಟೆಯು ವ್ಯಕ್ತವಾಗುತ್ತಾ ಹೋದಂತೆ ಶ್ರೀಕೃಷ್ಣನು ಹೊಸ-ಹೊಸ ವಿಚಾರಗಳನ್ನು ಹೇಳುತ್ತಾ ಆತನ ಮನಸ್ಸನ್ನು ಗೊಂದಲಗೊಳಿಸಲು ಪ್ರಯತ್ನಿಸುತ್ತಾನೆ. ಇಷ್ಟೋತ್ತು ಮನದಲ್ಲಿ ಮಥಿಸಿಕೊಂಡ ವಿಚಾರಗಳನ್ನು ಈಗ ಕರ್ಣನು ನೇರವಾಗಿ ಕೃಷ್ಣನಿಗೆ ಹೇಳುವಾಗ ತನ್ನ ಧಣಿಯ ನಿಷ್ಟೆಯನ್ನು ಒಂದಿಷ್ಟು ಕಡಿಮೆಮಾಡಿಕೊಳ್ಳುವುದಿಲ್ಲ. ‘ಯುದ್ಧವಾಗುವುದರಿಂದ ನಿನ್ನ ಕಣ್ಣ ಮುಂದೆಯೇ ನಿನ್ನ ಸೋದರರ ಸಾವನ್ನು ಕಲ್ಪಿಸಿಕೋ, ನಿನ್ನ ತಾಯಿ ಕುಂತಿ ಬಂದು ಕರುಳು ಕಿತ್ತು ಬರುವಂತೆ ಗೋರಾಡಿ ಅಳುವುದನ್ನು ಕಲ್ಪಿಸಿಕೋ’ ಎಂದು ಭಾವನಾತ್ಮಕವಾಗಿ ಕೆರಳಿಸಲು ಪ್ರಯತ್ನಿಸಿದರೂ ‘ಚಿಕ್ಕ ಮಕ್ಕಳಿಗೆ ಹೆದರಿಸಿದಂತೆ ಹೆದರಿಸಬೇಡ, ಸಾವಿಗಂಜಲು ನಾನೇನು ಹೇಡಿಯಲ್ಲ’ ಎಂದು ತಿರುಗೇಟು ನೀಡುತ್ತಾ ಹೇಳುವ ಮಾತು ಮನೋಜ್ಞವಾಗಿದೆ.
………………………
ಸಲಹಿದ ಕೃತಜ್ಞತೆಗೆ, ಕುರುಪತಿಯ ಸಲುವಾಗಿ,
ರಣಭೂಮಿಯಲ್ಲೆನ್ನ ಕಾಯವನು ಬಲಿದಾನ
ಮಾಡುವೆನು. ನಿನ್ನ ನೆಚ್ಚಿನ ಧೀರರೈವರನು
ಸಾಯಿಸೆನು, ರಾಜೀವಸಖನಾಣೆ !
ಎಂದು ಕರ್ಣನು ಮುಲಾಜಿಗೆ ಬಿದ್ದು ಪ್ರಮಾಣ ಮಾಡುತ್ತಾನೆ. ಅದಕ್ಕೂ ಮತ್ತೊಂದು ವಿಚಾರವನ್ನು ಹೇಳಲು ಶ್ರೀಕೃಷ್ಣನು ಪ್ರಯತ್ನಿಸಿದಾಗ ‘ಕಾಲ ಮಿಂಚಿತು, ಕೃಷ್ಣ ಸಂಧಿಯ ಮಾತೇಕೆ?’ ಎಂದು ನಿರ್ಧಾರವಾಗಿ ಹೇಳಿ ಶ್ರಿಕೃಷ್ಣನಿಗೆ ಕರ್ಣನು ನಮಸ್ಕರಿಸಿ ತೆರಳಿದ ನಂತರ ಕೊನೆಯಲ್ಲಿ ಶ್ರೀಕೃಷ್ಣನು ಹೇಳುವ ಮಾತನ್ನು ಮಹಾಕವಿಗಳು ಕರ್ಣನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.
ಎಲೆ ದಿವಾಕರತನಯ, ಕೌಂತೇಯ, ಧನ್ಯಾತ್ಮ,
ಈ ಜಗದೊಳಿಂದು ನಿನ್ನನ್ನರತಿವಿರಳ!
ಕೌರವರ ಹಿಂಡಿನಲಿ, ಪಾಂಡವರ ಗುಂಪಿನಲಿ,
ಯಾದವರ ಬಳಗದಲಿ, ಮೇಣುಳಿದ ಅರಸರಲಿ,
ನಿನ್ನ ಹೊಲುವರೊಬ್ಬರೂ ಇಲ್ಲ! ಭಾರತದ
ಸಂಗ್ರಾಮರಂಗದಲಿ ನಿನ್ನ ನೆತ್ರಹೊಳೆಯೆ
ದಿವಿಜನದಿಯಾಗುವುದು. ಪಾಪಗಳ ಕೊಚ್ಚುವುದು !
ನನ್ನಿಯಲಿ, ಚಾಗದಲಿ, ಬೀರದಲಿ, ಭಕ್ತಿಯಲಿ,
ಕರುಣೆಯಲಿ, ನೇಹದಲಿ ಮೊತ್ತಮೊದಲಿಗ ನೀನು,
ತುತ್ತತುದಿಯೂ ನೀನೆ! ನಿನ್ ಜನನವ ನೀನು
ತಿಳಿಯದಿರೆ, ನಾಬಲ್ಲೆ, ಪಾಂಡವರಿಗಿನ್ನೊಮ್ಮೆ
ಮುಂದೆ ಎಂದೆಂದಿಗೂ ವನವಾಸವೇ ತುದಿಯ
ಗತಿಯಾಗುತ್ತಿತ್ತು. ನಿನ್ನ ಕತೆಯನು ಕೇಳಿ
ಕಂಬನಿಯ ಕರೆಯುವರು ; ಅತ್ಯಂತ ದುಃಖತಮ,
ಅತ್ಯಂತ ಧನ್ಯತಮವಾಗಿಹುದು ನಿನ್ನೀ
ಜೀವಮಾನದ ಯಾತ್ರೆ ! ಅಸಮನೈ ನೀನು!
ನನ್ನಲೀಲೆಗೆ ನೀನೆ ಮೂಲೆಗಲ್ಲಾಗಿರುವೆ.
ನನ್ನ ಲೀಲೆಯ ಮೈಮೆ ನಿನ್ನಿಂದ ಹೆಚ್ಚಿಹುದು.
ಕರ್ಣನಿಗೆ ಶತ್ರುವಾಗಲಿ ಮಿತ್ರನಾಗಿರಲಿ
ಹೆಮ್ಮೆಗದು ಕಾರಣವು! ನಿನಗಿದೋ ಮಣಿಯುವೆನು!
ಎಂದು ಕೃಷ್ಣನಿಂದ ಹೇಳಿಸುವ ಮಹಾಕವಿಗಳ ಲೇಖನಿಯಿಂದ ಹೊರಹೊಮ್ಮಿರುವ ಮಾತುಗಳು ಎಂತಹ ಕಟುಕ ಹೃದಯದವರಿಗೂ ಕನಿಕರ ಮೂಡಿಸುತ್ತದೆ ಮತ್ತು ಅವನ ದುರಂತಮಯ ಬದುಕಿಗೆ ಅವನ ಜನನ ಹೇಗೆ ಕಾರಣವಾಗುತ್ತದೆ ಎಂಬುದರ ಕುರಿತು ಯೋಚನೆಗೀಡು ಮಾಡುತ್ತದೆ.
nice article….Best Wishes Siddaram.
sogasaad lekhana.. mattondu prapanchavannu nodidanteye bhaasa
ಧನ್ಯವಾದಗಳು ಮೇಡಮ್ …ವಾಕ್ಯದಲ್ಲಿ ಎಲ್ಲವನ್ನೂ ಹೇಳಿದ್ದೀರಿ…ಶುಭದಿನ
ನನ್ನಿಯಲಿ , ಚಾಗದಲಿ, ಬೀರದಲಿ, ಭಕ್ತಿಯಲಿ
ಕರುಣೆಯಲಿ, ನೇಹದಲ್ಲಿ ಮೊಟ್ಟಮೊದಲಿಗ ನೀನು
ತುತ್ತತುದಿಯೂ ನೀನೆ!
ಕರ್ಣನಷ್ಟು ಹೃದಯಕ್ಕೆ ಆಪ್ತರಾಗುವವರು ಮಹಾಭಾರತದಲ್ಲಿ
ಮತ್ತೊಬ್ಬರಿಲ್ಲ. ಕರ್ಣನಿಗೆ ಕರ್ಣನೇ ಸಾಟಿ.
ಅದಕ್ಕೇ ಅಲ್ಲವೇ ಸರ್ ಪಂಪಾಮಹಾಕವಿ ಹೇಳಿದ್ದು;
'ನೆನೆಯದಿರಣ್ಣ ಭಾರತದೊಳಿನ್ ಪೆರರಾರನುಂ
ಒಂದೆಚಿತ್ತದಿಂ ನೆನೆದುದಾರ್ದೊಡೆ ಕರ್ಣನಂ ನೆನೆಯಾ'
ಮಹಾಕವಿಗಳು ಪರಶುರಾಮನಿಗೆ ಅಂಟಿಕೊಂಡಿರುವ ಕಳಂಕವನ್ನು
ತೊಡೆಯಲು ಯತ್ನಿರುವ ರೀತಿಗೆ, ಮತ್ತು ಅದರ ಹಿಂದಿರುವ ಕಳಕಳಿಗೆ
ಮನಸೋಲುತ್ತದೆ. ಎಲ್ಲರೂ ವಿಲನ್ ರೀತಿ ನೋಡುವ ಛಲದಂಕಮಲ್ಲನನ್ನು
ಮಹಾಕವಿಗಳು ಮೇಲೆ ಎತ್ತಿರುವ ಬಗೆ ಅವರ ಹೃದಯವೈಶಾಲ್ಯ, ಹೃದಯಕಾರುಣ್ಯಕ್ಕೆ
ಒಂದು ಉದಾಹರಣೆಯಾಗಿದೆ.
ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡುತ್ತಿದ್ದೀರಿ ಸರ್.
ಧನ್ಯವಾದಗಳು
ಡಾ.ಗವಿಸ್ವಾಮಿ ಸರ್…ನಿಮ್ಮ ವಾಕ್ಯಗಳಿಂದ ನನಗೆ ಮತ್ತಷ್ಟು ವಿಷಯಗಳು ದೊರಕಿದಂತಾಯಿತು ಜೊತೆಗೆ ಖುಷಿಯಾಯಿತು ! ಶುಭದಿನ !