ಹಿಪ್ಪರಗಿ ಸಿದ್ದರಾಮ್ ಅಂಕಣ

ನಾಟಕಕಾರರಾಗಿ ಕುವೆಂಪು (ಭಾಗ-6): ಹಿಪ್ಪರಗಿ ಸಿದ್ದರಾಮ್


ಅಲ್ಪನೋರ್ವ ಆಡಿದನೆಂಬ ಕೊಂಕು ಮಾತಿಗೆ ಕಿವಿಗೊಟ್ಟು ಅರಮನೆಯಿಂದಲೇ ಗರ್ಭಿಣಿಯಾಗಿದ್ದ ಅರ್ಧಾಂಗಿಯನ್ನು ಕಾಡಿಗಟ್ಟುವ ಭರತಖಂಡದ ಆದರ್ಶ ವ್ಯಕ್ತಿತ್ವದ ರಾಮನ ವಿವಾದಾಸ್ಪದ ವಿಚಾರದಿಂದ ನಡೆಯುವ ಪ್ರಸಂಗದಲ್ಲಿ ಭಾಗ್ಯಶಾಲಿಯಾದ ರಾಮಾಯಣದ ಪಾತ್ರವೆಂದರೆ ವಾಲ್ಮೀಕಿ ಮಹರ್ಷಿಗಳು. ಮಹಾಕವಿ ಕುವೆಂಪು ಅವರ ತರ್ಕದ ಹಿನ್ನಲೆಯು ಈ ಪ್ರಸಂಗಕ್ಕೆ ಸೂತ್ರಧಾರಕ ಶಕ್ತಿಯಂತೆ ತೋರುವುದರೊಂದಿಗೆ ‘ವಾಲ್ಮೀಕಿಯ ಭಾಗ್ಯವೇ !’ ಎಂದು ರಂಗಕೃತಿಯ ಪ್ರಸಂಗದ ಕೊನೆಯಲ್ಲಿ ಮಹರ್ಷಿಗಳ ಬಾಯಿಯಿಂದಲೇ ಹೇಳಿಸುವುದರೊಂದಿಗೆ ಮಹಾಕವಿಗಳು ಆಧುನಿಕ ರಂಗತಂತ್ರಗಳ ಝಲಕ್ ಎಂಬಂತೆ ಚಮಾತ್ಕಾರಿಕ ಸಂಭಾಷಣೆಯ ಅಂತ್ಯ ನೀಡಿರುವುದನ್ನು ಹಿಂದಿನ ಸಂಚಿಕಯಲ್ಲಿ ನೋಡಿದ್ದೇವೆ. ಈಗ ಮಹಾಕವಿಗಳ ಇನ್ನೊಂದು ಶ್ರೇಷ್ಟ ಮತ್ತು ಕರುನಾಡಿಗೆ ಹೆಚ್ಚು ಕ್ರಾಂತಿಯ ಕಂಪನ ನೀಡಿದ ಮತ್ತು ಸಾಮಾಜಿಕವಾಗಿ, ನೈತಿಕವಾಗಿ ವಿಚಾರ ಪ್ರಚೋಧಕತೆಯ ರಂಗಕೃತಿ ‘ಶೂದ್ರ ತಪಸ್ವಿ’ಯ ಕುರಿತು ವಿವೇಚಿಸೋಣ.

ಶೂದ್ರ ತಪಸ್ವಿ (1944) :

ಸಾಂಪ್ರದಾಯಿಕ ಉತ್ತರ ರಾಮಾಯಣದಲ್ಲಿ ಬರುವ ಶಂಭೂಕನ ಕಥೆಯ ಸಾಮಗ್ರಿಯನ್ನು ಹೊಸ ಶೈಲಿಯಲ್ಲಿ ಹೇಳಿರುವ ಮೂರು ದೃಶ್ಯಗಳ ನಾಟಕ. ಈ ರಂಗಕೃತಿಯ ಮುನ್ನುಡಿಯಲ್ಲಿ (02-01-1944) ಮಹಾಕವಿಗಳು ಕೃತಿಯ ರಚನೆಯ ಹಿನ್ನಲೆಯಲ್ಲಿ ಹೇಳಿರುವ ಮಾತುಗಳು ಬಹಳ ಅರ್ಥಪೂರ್ಣವಾಗಿವೆ. ‘ಉತ್ತಮ ಶಿಲ್ಪಿ ಕಟ್ಟಿದ ದೇವಾಲಯವು ಹಳತಾಗುತ್ತ ಬಂದಂತೆಲ್ಲ, ಇಲಿ, ಹಲ್ಲಿ, ಬಾವಲಿ ಮೊದಲಾದ ಅನಾಹೂತ ಜೀವಜಂತುಗಳು ಗೂ-ಬೀಡು ಮಾಡುವುದುಂಟು. ವಾಲ್ಮೀಕಿಯ ಮಹಾಕೃತಿಗೂ ಅಂತಹ ಗತಿ ಒದಗಿದರೆ ಅದು ಅವರ ಪುರಾತನತ್ವಕ್ಕೆ ಒಂದು ಅನಿವಾರ್ಯ ಲಕ್ಷಣವಾಗುತ್ತದೆ. ದೇವಾಲಯಕ್ಕೆ ಹೋಗುವ ಭಕ್ತಾದಿಗಳು ಅಲ್ಲಿ ಅನಾಹೂತ ಜೀವಿಗಳಿವೆಯೆಂದು ಹೇಗೆ ಪೂಜಿಸುವುದಿಲ್ಲವೋ ಹಾಗೆಯೇ ಮಹಾಕವಿಯ (ವಾಲ್ಮೀಕಿ ಮಹರ್ಷಿಗಳು) ಕೃತಿಯಲ್ಲಿ ಬಂದಳಿಕೆಗಳಂತೆ ಸೇರಿಕೊಂಡಿರುವ ಅಲ್ಪದೃಷ್ಟಿಯ ಕುಕವಿ ಕೃತವಾದ ಪ್ರಕ್ಷಪ್ತಗಳನ್ನು ತಿಳಿದವರು ಯಾರೂ ಗೌರವಿಸುವುದಿಲ್ಲ. ಶ್ರೀಮದ್ ರಾಮಾಯಣದಲ್ಲಿ, ಅದರಲ್ಲಿಯೂ ಉತ್ತರಕಾಂಡದಲ್ಲಿ, ಅಂತಹ ಪ್ರಕ್ಷಪ್ತಗಳು ಅನೇಕವಿವೆ. ಶಂಬೂಕ (ಶೂದ್ರ ತಪಸ್ವಿ) ವಧಪ್ರಸಂಗವೂ ಅಂತಹದೊಂದು’ ಎಂದು ತಮ್ಮ ಆಧುನಿಕ ವಿಚಾರವನ್ನು ಹೇಳುತ್ತಾರೆ. ಮುಂದುವರೆದು, ಶೂದ್ರತಪಸ್ವಿ ಕೃತಿಯನ್ನು ಓದುವವರಿಗೆ ಬಿನ್ನವಿಸಿಕೊಳ್ಳುತ್ತಾರೆ. ‘ಯಾವ ಕಾರಣದಿಂದಾಗಲಿ, ಯಾವ ರೂಪದಿಂದಾಗಲಿ, ಯಾವ ಪೂರ್ವಾಗ್ರಹದಿಂದಾಗಲಿ, ಯಾವ ದುರಾಗ್ರಹದಿಂದಾಗಲಿ ಹೃದಯ ಪ್ರವೇಶ ಮಾಡುವ ದಾರಿದ್ರ್ಯವನ್ನು ದೂರೀಕರಿಸಿ, ಶುದ್ಧ ಬುದ್ಧಿಯ ಸಹೃದಯ ಸಹಜವಾದ ಶ್ರೀಮಂತತೆಯಿಂದ ಅದನ್ನು ಓದಿದರೆ ಕೃತಿಗೂ, ಕೃತಿಕಾರನಿಗೂ ನ್ಯಾಯಮಾಡಿದಂತಾಗುತ್ತದೆ’ ಎಂದು ಹೇಳುತ್ತಾರೆ. 

ಕೃತಿ ಪ್ರಕಟಗೊಂಡ (1944) ನಂತರ ಕರುನಾಡಿನ ಸಾಹಿತ್ಯಲೋಕ ಮತ್ತು ಸಾಮಾಜಿಕ ಭೂಮಿಕೆಯಲ್ಲಿ ಹೆಚ್ಚಿನ ಕಂಪನವನ್ನುಂಟು ಮಾಡುತ್ತದೆ. ವಿಮರ್ಶಾವಿಧಾನಕ್ಕೆ ಹೊಸ ಬಗೆಯ ವಾಖ್ಯಾನವನ್ನು ಬರೆಯಿಸುತ್ತಾ ಕಟು ವಿಮರ್ಶೆಗೆ ಈಡಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ಮಡಿವಂತರೆನಿಸಿಕೊಂಡ ಸೋಕಾಲ್ಡ್ ಹಿರಿಯ ಬುದ್ಧಿಜೀವಿಗಳನ್ನು ಚಿಂತನೆಗೀಡು ಮಾಡಿ ಶುದ್ಧವಾದ ವಾತಾವರಣವನ್ನು ಹುಟ್ಟಿಸುತ್ತದೆ. ಸುಪ್ತ ಮನಸ್ಸಿನ ಕುಚೋಧ್ಯದ ಮನಸ್ಸುಗಳು ಈ ಕೃತಿಯ ಬಿರುಗಾಳಿಗೆ ಸಿಲುಕಿ ತರಗಲೆಗಳಂತೆ ಉದುರಿ, ಎಚ್ಚರಗೊಳ್ಳುವಂತಹ ಸನ್ನಿವೇಶವನ್ನುಂಟು ಮಾಡುತ್ತದೆ. ಮಡಿವಂತಿಕೆಯ ಢಾಂಭಿಕತೆಯ ವೇಷ ಕಳಚಿಸಿ ವಿಚಾರವಂತಿಕೆಯನ್ನು ಪ್ರಚೋಧಿಸಿ ಇರಿಸು-ಮುರಿಸುಂಟಾಗಿಸುತ್ತದೆ. ದೊಡ್ಡವರೆನಿಸಿಕೊಂಡವರ ರೀತಿ-ನೀತಿ ಜಿಜ್ಞಾಸೆ ಹಾಗೂ ಚಿಂತನ-ಮಂಥನವನ್ನು ಪ್ರಾಯೋಗಿಕ ವಿಮರ್ಶೆಗೆ ಒಳಪಡಿಸುತ್ತದೆ.

ಮೊದಲ ಆವೃತ್ತಿಯು ಪ್ರಕಟಗೊಂಡ ಮೂರು ವರ್ಷಗಳ ತರುವಾಯದ (24-07-1947) ಆವೃತ್ತಿಯ ಮಾರ್ನುಡಿಯಲ್ಲಿ ಮಹಾಕವಿ ಕುವೆಂಪುರವರು ಹೇಳುತ್ತಾರೆ. ‘…….ಈ ದೃಶ್ಯಕೃತಿ ಪ್ರಕಟವಾದಾಗ ವಾಚಕ ವರ್ಗದ ಹೃದಯಾಕಾಶದಲ್ಲಿ ಗಾಳಿಯೆದ್ದು ಮೋಡ ಕವಿದು ಗುಡುಗು ಮಿಂಚಾಡಿದಾ ಕ್ಷೋಬೆ ಅಂದಿನ ಪತ್ರಿಕಾ ಸರೋವರದಲ್ಲಿ ಪ್ರತಿಫಲಿತವಾಗಿತ್ತು. ಗಣ್ಯರು, ಗಣ್ಯರಲ್ಲದವರು, ಅಲ್ಪಗಣ್ಯರು ಎಲ್ಲರೂ ತಮತಮಗೆ ತೋಚಿದುದನ್ನು ತೋಚಿದಂತೆ ಅವಸರವಸರವಾಗಿ ಉದ್ರೇಕಪೂರ್ಣವಾಗಿ ಬರೆದರು. ಕೆಲವರ ಬರವಣಿಗೆ ‘ಅಸೂಯಾಸದನನ್ ಸುಖದೂರನ್. ಅವನ ಮಾತೇಕಿದರೊಳ್?’ ಎಂಬ ಹರಿಹರನ ಕಾವ್ಯೋಕ್ತಿಯನ್ನು ಮನಸ್ಸಿಗೆ ತರುವಂತಿದ್ದರೆ, ಮತ್ತೆ ಕೆಲವರದು ಹಳಸಲನ್ನೂ ಹೊಸತು ಮಾಡಿಸುವಂತಿತ್ತು’ ಎಂದು ಹೇಳುವುದರೊಂದಿಗೆ ಕೃತಿಯ ಕುರಿತಾದ ಅಸಮಾಧಾನದ ಉದ್ರೇಕಕ್ಕೆ ಮೂಲಕಾರಣ ಈ ಕೃತಿ ಜಾತಿ ಮಾತ್ಸರ್ಯದಿಂದ ಪ್ರೇರಿತವಾದ ಮೂದಲಿಕೆ ಎಂಬುದನ್ನು ಗುರುತಿಸುತ್ತಾರೆ. ಕೊನೆಯಲ್ಲಿ ಯಾವುದನ್ನಾಗಲೀ ಉದ್ರೇಕಕ್ಕೆ ಬಿಡದೆ ಸಮಾಧಾನದಿಂದ ಚರ್ಚಿಸುವ ಒಲುಮೆ ಬರಲಿ, ವಿಷಮಯ ವಾತಾವರಣ ಇಲ್ಲವಾಗಲಿ ಮತ್ತು ಅಂತಹ ದುರ್ಗತಿ ಕನ್ನಡಕ್ಕೆ ಒದಗಿ ಬಾರದಿರಲೆಂದು ಹೃದಯದ ಭಾಷೆಯಲ್ಲಿ ಪ್ರೀತಿಯಿಂದ ಬೆನ್ನುಸವರಿ ಹೇಳಿದಂತೆ ಆತ್ಮೀಯತೆಯಿಂದ ಮಹಾಕವಿಗಳು ಮಾರ್ಗದರ್ಶನವನ್ನು ನೀಡುತ್ತಾರೆ. ಈ ಕೃತಿಯ ಇತ್ತೀಚಿನ ಆವೃತ್ತಿಯು ಉದಯರವಿ ಪ್ರಕಾಶನದಲ್ಲಿ 2010ರಲ್ಲಿ ಒಂಬತ್ತನೇಯ ಆವೃತ್ತಿಯೊಂದಿಗೆ ಪ್ರಕಟವಾಗಿದೆ.

ಉತ್ತರ ರಾಮಾಯಣದಲ್ಲಿ (ಕೆಲವೆಡೆ ಉತ್ತರ ಕಾಂಡವೆಂತಲೂ ಕರೆಯುತ್ತಾರೆ) ಸೀತಾಪರಿತ್ಯಾಗದ ನಂತರದಲ್ಲಿ ನಡೆಯುವ ಪ್ರಸಂಗವಾಗಿದೆ. ಇಲ್ಲಿ ಮಹಾಕವಿಗಳು ಸಾಂಪ್ರದಾಯಿಕ ಮಹಾಕಾವ್ಯವೆಂದು ಖ್ಯಾತವಾಗಿರುವ ರಾಮಾಯಣದ ಕರ್ತೃ ವಾಲ್ಮೀಕಿಯ ಹೆಸರಿನಲ್ಲಿ ನುಗ್ಗಿರುವ ಈ ಕಥಾಪ್ರಸಂಗವನ್ನು ಆಧುನಿಕ ರಂಗಭೂಮಿಗೆ ಸರಿಹೊಂದುವಂತೆ ಮಾರ್ಪಡಿಸಿ ಹೊಸರೂಪದ ಸ್ಪರ್ಶ ನೀಡುವುದರೊಂದಿಗೆ ಬೆಕ್ಕಸ ಬೆರಗಾಗುವಂತೆ ಮಾಡಿ, ಉತ್ತಮ ಸಂದೇಶ ಸಾರುವಂತೆ ಆಗಿಸಿರುವುದು ಅವರ ಸೃಜನಶೀಲತೆಗೆ ಹಿಡಿದ ಕನ್ನಡಿ.

ಇಲ್ಲಿ ನಾಟಕದ ಕಥಾನಾಯಕ ಸ್ಥಾನದಲ್ಲಿ ಶೂದ್ರ ಶಂಭೂಕನು ಧರ್ಮಬಾಹಿರನಾಗಿ ತಪಸ್ಸನ್ನು ಮಾಡಿದ್ದರಿಂದ ಧರ್ಮದೇವತೆಯು ಮುನಿದು ತನ್ನ ಮಗನು ಅಕಾಲ ಸಾವನ್ನಪ್ಪಬೇಕಾಯಿತೆಂದು ವೃದ್ಧ ಬ್ರಾಹ್ಮಣನೊಬ್ಬ ಶ್ರೀರಾಮನ ಮುಂದೆ ಶವದೊಂದಿಗೆ ಆಗಮಿಸಿ ‘ಧರ್ಮದ್ರೋಹದಿಂದಾಗಿ ಹೀಗಾಗಿದೆ’ ಎಂದು ರೋಧಿಸುತ್ತಾನೆ. ಇದಕ್ಕೆ ಪರಿಹಾರವಾಗಿ ಆ ಶೂದ್ರ ತಪಸ್ವಿಯ ತಲೆಕಡಿದು ಹಾಕಿದರೆ ಆಗ ತನ್ನ ಮಗ ಮತ್ತೆ ಬದುಕುತ್ತಾನೆಂದು ಹೇಳಿದಾಗ ಅದರಂತೆ ಶ್ರೀರಾಮನು ಶೂದ್ರ ತಪಸ್ವಿ ಶಂಭೂಕನ್ನು ಹುಡುಕಿಕೊಂಡು ಹೋಗಿ ಹರಿತ ಖಡ್ಗ ಝಳಪಿಸಿ ಒಂದೇ ಏಟಿಗೆ ತಪಸ್ವಿಯ ತಲೆ ಕತ್ತರಿಸಿ ಹಾಕುತ್ತಾನೆ. ದೇವತೆಗಳು ಶ್ರೀರಾಮನಿಗೆ ಪುಷ್ಪವೃಷ್ಟಿ ಮಾಡುತ್ತಾರೆ. ಅಲ್ಲಿ ಶೂದ್ರ ತಪಸ್ವಿಯ ಶಿರಚ್ಛೇದದ ನಂತರ ಇಲ್ಲಿ ಬ್ರಾಹ್ಮಣನ ಮಗ ಬದುಕುತ್ತಾನೆ. ಇದು ಮೊದಲಿದ್ದ ಕಥಾಪ್ರಸಂಗ. ಇಂತಹ ಕಥೆಯನ್ನು ವಾಲ್ಮಕಿ ಋಷಿ ಬರೆದಿರಲು ಸಾಧ್ಯವೇ ? ಎಂಬುದು ಜಿಜ್ಞಾಸೆ. ಧರ್ಮಗುರುಗಳ/ಧರ್ಮಗ್ರಂಥಗಳ ಹೆಸರಿನಲ್ಲಿ ಕಟ್ಟುಕಥೆಯನ್ನು ಸೇರಿಸಿ, ಕಿಡಿಗೇಡಿಗಳು ವಿಷವರ್ತುಲವನ್ನು ಧಾರ್ಮಿಕ ಸೋಗಿನ ಆಷಾಢಭೂತಿಗಳು ನಿರ್ಮಿಸಿದ್ದಾರೆಂಬುದಕ್ಕೆ ಇದು ಉತ್ತಮ ಉದಾಹರಣೆ. ಸ್ವತಂತ್ರಶೀಲರಾದ ಮಹಾಕವಿ ಕುವೆಂಪುರವರನ್ನು ಆಕರ್ಷಿಸಿದ ಈ ಕಥೆಗೆ ಹೊಸತಿರುವು ನೀಡುವುದು ಗಮನ ಸೆಳೆಯುವಂತಿದೆ.

ರಂಗತಂತ್ರದ ಕುರಿತಾಗಿ ಹೇಳುವುದೆಂದರೆ, ಮಹಾಕವಿಗಳ ಇನ್ನುಳಿದ ನಾಟಕಗಳಲ್ಲಿ ಬರುವಂತೆ ಇಲ್ಲಿಯೂ ಆರಂಭದಲ್ಲಿ ಸೂತ್ರಧಾರರಂತೆ ಕಥಾನಕಕ್ಕೆ ಕಳೆಕಟ್ಟಲು ಭೈರವ ಮತ್ತು ಮೃತ್ಯುವಿನ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಈ ಸನ್ನಿವೇಶದಲ್ಲಿ ಮಹಾಕವಿಗಳು ಕಲ್ಪಿಸಿಕೊಳ್ಳುತ್ತಾ ಬರೆದಿರುವುದನ್ನು ಆಳವಾಗಿ ಓದುತ್ತಾ ಹೋದರೆ ಇಂದಿನ ಆಧುನಿಕ ವೈಜ್ಞಾನಿಕ ಕಾಲಮಾನದಲ್ಲಿ ಹಾಲಿವುಡ್ ಚಲನಚಿತ್ರಗಳಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್ ಬಳಸಿ ಪ್ಯಾಂಟಸಿ ದೃಶ್ಯಾವಳಿಗಳನ್ನು ಸೃಷ್ಟಿಸಿರುವಂತೆ ಇಲ್ಲಿ ಅಕ್ಷರರೂಪದಲ್ಲಿ ಹಿಡಿದಿಟ್ಟಿದ್ದಾರೆ. ಇಲ್ಲಿ ಇಂತಹ ದೃಶ್ಯಗಳನ್ನು ನಿರ್ವಹಿಸಿರುವ ರೀತಿ ಅದರಿಂದ ಸಾಧಿಸಿರುವ ಪರಿಣಾಮ ಮತ್ತು ಧ್ವನಿಸಿರುವ ಅರ್ಥಗಳು ಅಪೂರ್ವವಾದುವುಗಳು. ರಂಗಕೃತಿಯ ಆರಂಭದಿಂದಲೂ ಕೊನೆಯವರೆಗೂ ಕೊನೆಯಿಲ್ಲದಂತೆ ಹೊಗಳಿಸಿಕೊಳ್ಳುತ್ತಾ ಕೆಲವೆಡೆ ತಿರಸ್ಕಾರದ ನುಡಿಗಳನ್ನಾಡಿಸಿಕೊಳ್ಳುವ ಶಂಭೂಕ ಮುನಿಯ ಪಾತ್ರವು ನಾಟಕ ಮುಕ್ತಾಯಕ್ಕೆ ದೀರ್ಘತಪಸ್ಸಿನಲ್ಲರಿವ ಮುನಿಯ ಸುತ್ತಲೂ ಬೆಳೆದ ಹುತ್ತಿನ ಮಣ್ಣು ಸರಿದಾಡಿದಂತಾಗಿ ಕೇವಲ ತೋಳುಗಳೆರಡು ಹೊರಗೆ ಬಂದು ಆಶೀರ್ವಾದ ಮುದ್ರೆಯಲ್ಲಿ ನಿಲ್ಲುವುದು ತುಂಬಾ ಅರ್ಥಗರ್ಭಿತವಾಗಿದೆ. ಅಂದರೆ ಇಲ್ಲಿ ಶಂಭೂಕ ಮುನಿ ಅಗೋಚರನಾಗಿದ್ದರೂ, ಇಡೀ ದೇಹವನ್ನೆಲ್ಲಾ ವ್ಯಾಪಿಸಿರುವ ಆತ್ಮಶಕ್ತಿಯಂತೆ ಓದುಗರ/ನೋಡುವಗರ ಅನುಭವ ಲೋಕದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಪಾತ್ರವಾಗಿದೆ.

ಬ್ರಾಹ್ಮಣನ ಕೋರಿಕೆಯಂತೆ ಶಂಭೂಕನ್ನು ಸಂಹರಿಸಲು ಶ್ರೀರಾಮನು ಅವನೊಡನೆ ಪುಷ್ಪಕ ವಿಮಾಣದಲ್ಲಿ ಶಂಭೂಕಾಶ್ರಮಕ್ಕೆ ಬರುತ್ತಾನೆ. ಧರ್ಮಚ್ಯುತಿಯಾಗಿರಲು ತನ್ನ ಮಗನನ್ನು ರಕ್ಷಿಸಿ ಶೂದ್ರನನ್ನು ಶಿಕ್ಷಿಸಬೇಕೆಂಬ ಬ್ರಾಹ್ಮಣ ಕೋರಿಕೆಗೆ ಮಣಿದು ಮರ್ಯಾದಾ ಪುರುಷೋತ್ತಮ ಶ್ರೀರಾಮನು ಬ್ರಹ್ಮಾಶ್ತ್ರವನ್ನು ಪ್ರಯೋಗಿಸುತ್ತಾನಾದರೂ ಅದು ಶಂಭೂಕನ ಸುತ್ತ ಪ್ರದಕ್ಷಿಣೆ ಹಾಕಿ ನಮಸ್ಕರಿಸುತ್ತ ಅಡ್ಡ ಬೀಳುತ್ತದೆ ಅಂದರೆ ಶಂಭೂಕ ಮುನಿಯ ತಪಃಪ್ರಭಾವಲಕ್ಕೆ ಶರಣಾಗುತ್ತದೆ. ಅನಂತರ ಬ್ರಾಹ್ಮಣನತ್ತ ಧಾವಿಸಿದಾಗ ಶ್ರೀರಾಮನು ತನ್ನ ಅಭಯ ಹಸ್ತದಿಂದ ಬ್ರಾಹ್ಮಣನ್ನು ರಕ್ಷಿಸಲು ಸಾಧ್ಯವಿಲ್ಲವೆಂದು ಹೇಳುತ್ತಾನೆ. ಹೀಗೆ ಸಾಕ್ಷಾತ್ ಶ್ರೀರಾಮನು ಹೇಳಿದಾಗ ಗತ್ಯಂತರವಿಲ್ಲದೆ ಬ್ರಾಹ್ಮಣನು ಶೂದ್ರ ತಪಸ್ವಿ ಶಂಭೂಕನ ಪಾದಗಳನ್ನು ಹಿಡಿದು ಕ್ಷಮೆ ಕೇಳಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಅಂತಿಮವಾಗಿ ಶೂದ್ರ ತಪಸ್ವಿ ಶಂಭೂಕ ಮಹರ್ಷಿಗಳ ಕೃಪೆಯಿಂದ ಬ್ರಾಹ್ಮಣನು ಸತ್ತ ಮಗನ್ನು ಬದುಕಿಸಿಕೊಳ್ಳುತ್ತಾನೆ. ದೇವ ದುಂದುಬಿ ಮೋಳಗುತ್ತದೆ. ತಪಸ್ವಿಗಳ ಕುಟೀರ ಇರುವ ವನದ ವಾತಾವರಣವೇ ಬದಲಾಗುತ್ತದೆ. ಇಲ್ಲಿ ತಪಸ್ಸು ಮಾಡುವರು ಯಾರೇ ಆಗಿರಲಿ ಅವರು ಪೂಜ್ಯರು ಎಂದು ಹೇಳುವ ಶ್ರೀರಾಮನ ಮಾತು ನೆನಪಿನಲ್ಲಿ ಉಳಿಯುತ್ತದೆ. ಇಲ್ಲಿ ವರ್ಣಬೇಧ-ವರ್ಣದ್ವೇಷದ ಜ್ವಾಲೆಯಾಗಿ ವಿಷಯ ವಿಭಾಗವಾಗಿರುವುದನ್ನು ವಿಶ್ಲೇಷಿಸಲಾಗಿದೆ. ಧರ್ಮದ ಬಗೆಗಿರುವ ಕುರುಡು ನಂಬಿಕೆ ಅಳಿಯಬೇಕು ಎಂಬ ಸಂದೇಶವಿದೆ.

ಬ್ರಾಹ್ಮಣನು ಶ್ರೀರಾಮನ ಮುಂದೆ ಅಳುತ್ತಾ ತನ್ನ ಮಗನ ಸಾವಿಗೆ ಕಾರಣವಾಗಿರುವುದನ್ನು ಹೇಳುವುದು ಹೀಗಿದೆ : 

ಅಲ್ತಲ್ತು ರಾಮಚಂದ್ರ,

ಶೂದ್ರನ್ ತಪಂಗೆಯ್ವೊಂದು ಅಧರ್ಮಕ್ಕೆ,

ವರ್ಣಾಶ್ರಮ ಧರ್ಮದುಲ್ಲಂಘನೆಯ ಪಾಪಕ್ಕೆ,

ನಿನ್ನ ಬಾಲಪ್ರಜೆಯೊರ್ವನ್ ಬಲಿಯಾದನ್-

ಮುಂದಾವ ಮಹತ್ಕಾರ್ಯಮಂ ಗೆಯ್ಯಲಿರ್ದನೊ ?

ಆವ ಶಾಸ್ತ್ರವನೊರೆಯಲಿರ್ದನೊ ?

ಆವ ಕಬ್ಬಮಂ ಕಟ್ಟಲಿರ್ದನೊ ?

ಆವ ತಪದಿಂದಾವ ಸಿದ್ಧಿಯ ಪಡೆಯಲಿರ್ದನೊ ?

ಆ ಪ್ರಜೆ ಶೂದ್ರನ ತಪೋದುಷ್ಕøತಿಗೆ ಬೇಳ್ವೆಯಾದವನ್ !

ಪಾವಗಿದು ತೀರ್ದನ್ ! (ಅಳುತ್ತಾನೆ)

ಹಲವಾರು ತಲೆಮಾರುಗಳಿಂದ ಅನುಸರಿಸುತ್ತಾ ಬಂದಿರುವ ವರ್ಣಾಶ್ರಮ ಧರ್ಮವನ್ನು ದಿಕ್ಕರಿಸುವುದು ಅಧರ್ಮ, ಮಹಾಪಾರಾಧ, ಮಹಾಪಾಪ. ಹೀಗಿರುವಾಗ ತಪಸ್ಸಿಗೆ ಅರ್ಹನಲ್ಲದ ಶೂದ್ರನು ತಪಸ್ಸು ಮಾಡಿರುವುದರಿಂದ ತನ್ನ ಮಗನು ಬಲಿಯಾಗಬೇಕಾಯಿತೆಂಬ ಗೊಡ್ಡುವಾದವನ್ನು ಇನ್ನಷ್ಟು ಪರಿಣಾಮಕಾರಿಯಾಗಿರಲೆಂದು ರೋದಿಸುತ್ತಾ ಹೇಳುವುದು ಅವಿಚಾರದ ವಿಷಯವೆಂಬುದು ಜಾಗೃತ ಮನದ ಯಾವನಿಗಾದರೂ ತಿಳಿಯತಕ್ಕ ವಿಚಾರ. ಇಲ್ಲ ಬ್ರಾಹ್ಮಣನು ಖಳನಾಯಕನಾಗಿ, ಶ್ರೀರಾಮನು ಪರಿಸ್ಥಿಯ ಕೈಗೊಂಬೆಯಾಗಿ ನಂತರ ವಾಸ್ತವ ಅರಿವಾದ ನಂತರ ತಪದ ಮಹಿಮೆಯ ಶ್ರೇಷ್ಟತೆಯನ್ನು ಪಡೆದು ನಾಯಕನಾಗಿ ಗೋಚರಿಸುವುದು ಹೊಸ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಈ ಒಂದು ಪ್ರಸಂಗದಿಂದ ತಾನೇ ಶ್ರೇಷ್ಟ ಮತ್ತು ಎಲ್ಲದಕ್ಕೂ ತಾನು ಮಾತ್ರ ಯೋಗ್ಯನೆಂಬ ಅಹಂ ಹೊಂದಿದ್ದ ಬ್ರಾಹ್ಮಣನೋರ್ವನಿಗೆ ಪಾಠ ಕಲಿಸಿ ವಿವೇಕ ಮೂಡುವಂತೆ ಮಾಡಲು ಯತ್ನಿಸಿರುವುದು ಕುವೆಂಪುರವರ ಪ್ರತಿಭಾ ಪ್ರೌಢಿಮೆಯ ಹಿನ್ನಲೆಯಲ್ಲಿ ಉತ್ತಮವಾಗಿ ಮೂಡಿ ಬಂದಿದೆ.

ಧರ್ಮಾಧರ್ಮವನ್ನು ಸೂಕ್ತವಾಗಿ ಅರ್ಥ ಮಾಡಿಸುವುದು ಇಲ್ಲಿಯ ಉದ್ದೇಶವಾಗಿದೆ ಹೊರತು ಯಾರನ್ನೂ ಅವಮಾನಿಸುವಂತಹ ವಿಚಾರವೇ ಇಲ್ಲ. ಜಾತೀಯತೆಯ ಅರ್ಥಹೀನತೆ ವ್ಯಕ್ತವಾಗುತ್ತದೆ. ಶೂದ್ರನೋರ್ವ ತಪಸ್ಸು ಮಾಡಿದರೆ ಬ್ರಾಹ್ಮಣ ಅದರಲ್ಲೂ ಎಳೆಯ ಬ್ರಾಹ್ಮಣ ಸಾಯುತ್ತಾನೆಂಬ ಕುತರ್ಕದ ವರ್ಣದ್ವೇಷದ ಪರಮಾವಧಿಯಾಗಿದೆಯೆಂದರೆ ಅಡ್ಡಿಯಿಲ್ಲ.

ಶೂದ್ರ ತಪಸ್ವಿ ಶಂಭೂಕನ ತಪಸ್ಸಿನ ಪ್ರಭಾವಳಿಯಿಂದ ತನ್ನ ಬದುಕಿದ್ದನ್ನು ಕಂಡು ಆತ ತನ್ನ ತಪ್ಪಿನ ಅರಿವಾಗಿ, ಪಶ್ಚಾತ್ತಾಪದಿಂದ ಹೊಸಕಾಂತಿ ಮೂಡಿದಾಗ ಸಾರ್ಥಕ ಭಾವದಲ್ಲಿ ಬ್ರಾಹ್ಮಣನು ಶ್ರೀರಾಮನಲ್ಲಿ ಹೇಳುವುದು ಹೀಗೆ –

ಬೋಧಮಾಯ್ತೆನಗೀಗಳ್, ಮಹಾಪ್ರಾಜ್ಞ.

ಬುದ್ಧಿಗಲಿಸಿದಯ್ ಸಂಪ್ರದಾಯಬದ್ಧಂಗೆ,

ಶಾಸ್ತ್ರಮೂಢಂಗೆ, ಜಾತಿಗರ್ವಾಂಧನಂಗೆ.-

ಆವ ಜಾತಿಯ ತರುವೋ ? ಇಂಧನಕೆ ಹೊತುಂಟೆ ?

ಬೆಂಕೆಗೇಂ ಭೇದಮೆ ? ದಳ್ಳುರಿಗೆ ದಾಕ್ಷಿಣ್ಯವೇ ?

ಆರಾದರೇನ್ ? ಆರಾದ್ಯರ್ ತಪೋಧನರ್ !

ನಮಸ್ಕಾರಮೆ ಪುಣ್ಯಂ ; ತಿರಸಕಾರಮೆ ಪಾಪಂ !

ಎಂದು ಹೇಳುತ್ತಾನೆ.

ಈ ಮೊದಲು ಈ ಕೃತಿಯ ಕುರಿತು ಹೇಳಿರುವ ಹಲವರಲ್ಲಿಯ ಕೆಲವು ವಿಮರ್ಶಕರ ನುಡಿಗಳನ್ನು ಉಲ್ಲೇಖಿಸುವುದಾದರೆ, ‘ನಾಟಕೀಯ ವಂಗ್ಯವನ್ನು ಅದರ ರಚನಾತಂತ್ರದಲ್ಲಿಯೇ ಇಷ್ಟೋಂದು ಪರಿಣಾಮಕಾರಿಯಾಗಿ ಬಳಸಿಕೊಂಡಿರುವ ಮತ್ತೊಂದು ನಾಟಕ ಕನ್ನಡದಲ್ಲಿಲ್ಲವೆಂದರೆ ಸ್ವಲ್ಪವೂ ಅತಿಶಯೋಕ್ತಿಯಲ್ಲ !’

‘ಇಲ್ಲಿ ಪ್ರತಿಭಟನೆ ಸ್ಪಷ್ಟರೂಪ ಪಡೆದು ರೂಡಿಯ ಸನಾತನ ಮೌಲ್ಯಗಳನ್ನು ಪಲ್ಲಟಗೊಳಿಸಿ ಹೊಸ ಮೌಲ್ಯವನ್ನು ಸ್ಥಾಪಿಸುವ ಪ್ರಯತ್ನವಿದೆ’.

‘ಬ್ರಾಹ್ಮಣಿಕೆಯ ಬೂಟಾಟಿಕೆಯನ್ನು ಮತ್ತು ಶೂದ್ರವರ್ಗದ ನೋವುಗಳನ್ನು ತಮ್ಮ ಸಾಹಿತ್ಯ ವಾರಿಧಿಯ ಮೂಲಕ ತೆರೆದಿಟ್ಟರು’.

‘ಹಿರಿದಾದುರಲ್ಲಿ ಹಿರಿತನವನ್ನು ಕಾಣುವುದೇ ಶಂಭೂಕವಧೆ ಪ್ರಸಂಗದ ಸಾರಾಂಶ’.

ಕೊನೆಯಲ್ಲಿ ಹೇಳಬೇಕಾದ ಸಂಗತಿ ನನಗೆ ಗೋಚರಿಸಿದಂತೆ, ಶ್ರೀರಾಮನ ಘನವ್ಯಕ್ತಿತ್ವ, ಶಂಭೂಕನ ತಪಶ್ಚರ್ಯ, ಅಮಾಯಕ ಬ್ರಾಹ್ಮಣ ಬಾಲಕನ ಸಾವು ಇಲ್ಲಿ ಹೊಸ ಅರ್ಥವನ್ನು ಪಡೆದುಕೊಳ್ಳುತ್ತಾ ಹೃದಯವಂತಿಕೆಯನ್ನು ವಿಸ್ತರಿಸಿಕೆಗೆ ಪ್ರತಿಮೆಗಳಾಗಿ ಕಾಣಿಸಿಕೊಳ್ಳುತ್ತವೆ. ಪೌರಾಣಿಕ ಅಂಧಶ್ರದ್ಧೆಯ ಕಥೆಯೊಂದು, ಕವಿಯ ಪ್ರತಿಭಾಲೋಕದಲ್ಲಿ ಪ್ರವೇಶಗೊಂಡು ಹೇಗೆ ಪುನರ್ಜನ್ಮವನ್ನು ಪಡೆದು ಪ್ರಜ್ವಲವಾದ ಸುಜ್ಞಾನದ ಬೆಳಕನ್ನು ಬೀರಬಲ್ಲುದು ಎಂಬುದಕ್ಕೆ ಶೂದ್ರತಪಸ್ವಿ ಉತ್ತಮ ಉದಾಹರಣೆಯಾಗಿದೆ. ಇನ್ನೊಂದು ಅರ್ಥದಲ್ಲಿ ಕುಹಕಿ ಕಿಡಗೇಡಿಗಳು ಯಾವುದೋ ಕಾಲಮಾನದಲ್ಲಿ ರಾಮಾಯಣದ ಉತ್ತರಕಾಂಡದಲ್ಲಿ ಪ್ರಚೋಧನೆಗಾಗಿ ಒಂದು ವರ್ಗವನ್ನು ಉನ್ನತಿಗೇರಿಸುವ ವೈಭವದ ಭರದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನಿಗೆ ಅಂಟಿಸಿದ್ದ ಕಳಂಕದ ಸಂಕೋಲೆಯಿಂದ ಇಲ್ಲಿ ಮಹಾಕವಿಗಳು ಮುಕ್ತನನ್ನಾಗಿಸಿದ್ದಾರೆಂಬುದು ಸುಳ್ಳಲ್ಲ !

ದಿನಾಂಕ 24.12.12ರಂದು ಈ ರಂಗಕೃತಿಯು ವನರಂಗದಲ್ಲಿ ಹಿರಿಯ ರಂಗಕರ್ಮಿಗಳಾದ ಸಿ.ಬಸವಲಿಂಗಯ್ಯನವರ ನಿರ್ದೇಶನದಲ್ಲಿ  ಪ್ರದರ್ಶನಗೊಂಡಾಗ ಮೈಸೂರಿನ ರಂಗಾಯಣ ಕಲಾವಿದರು ತಮ್ಮ ಪ್ರಭುದ್ಧ ಅಭಿನಯದಿಂದ ಪ್ರೇಕ್ಷಕರ ಮನಸೂರೆಗೊಂಡರು. ಇಲ್ಲಿ ನಿರ್ದೇಶಕರು ಜೋಗತಿಯರು ಎಂಬ ಐದು ಪಾತ್ರಗಳನ್ನು ಸೃಷ್ಟಿಸಿದ್ದರು. ಹಲವು ಬೈರವರು, ಹಲವು ಮೃತ್ಯು ಪಾತ್ರಗಳೊಂದಿಗೆ ಬ್ರಹ್ಮಾಸ್ತ್ರವನ್ನು ಪಾತ್ರವನ್ನಾಗಿ ತೋರಿಸಿದ್ದು ಅಂದಿನ ಪ್ರದರ್ಶನದಲ್ಲಿ ನಿರ್ದೇಶಕರ ಜಾಣ್ಮೆಗೆ ತಲೆದೂಗುವಂತೆ ಮಾಡಿತು. ರಂಗದಲ್ಲಿಯೂ ಪ್ಯಾಂಟಸಿಯನ್ನು (ಕಂಪನಿ ನಾಟಕಗಳಲ್ಲಿ ರಂಗಚಮಾತ್ಕಾರವೆಂಬ ಪದಪ್ರಯೋಗವುಂಟು) ಪ್ರದರ್ಶಿಸಿ, ಪ್ರೇಕ್ಷಕ ಸಮುದಾಯವನ್ನು ದಂಗುಬಡಿಸಿದ್ದನ್ನು ಇಂದಿಗೂ ಮರೆಯುವಂತಿಲ್ಲ. 

(…ಮುಂದುವರೆಯುತ್ತದೆ)

ಕನ್ನಡದ ಬರಹಗಳನ್ನು ಹಂಚಿ ಹರಡಿ

6 thoughts on “ನಾಟಕಕಾರರಾಗಿ ಕುವೆಂಪು (ಭಾಗ-6): ಹಿಪ್ಪರಗಿ ಸಿದ್ದರಾಮ್

 1. ಶೂದ್ರತಪಸ್ವಿ ನನ್ನನ್ನು ಯಾವಾಗಲು ಕಾಡುವ ಪಾತ್ರ.  ಈ ನಾಟಕವನ್ನು ಮೊದಲು ಓದಿದಾಗ ಆದ ಹೇಳಿಕೊಳ್ಳಲಾಗದ ಅನುಭವವೇ ಮತ್ತೆ ನಿಮ್ಮ ಲೇಖನ ಓದಿ ಮರುಕಳಿಸಿದಂತಾಯಿತು.  ಒಳ್ಳೆಯ ಸರಣಿ ಬರಹ.
  ಪ್ರವೀಣ.

  1. ಧನ್ಯವಾದಗಳು….ಪ್ರವೀಣ ಅವರೇ…

 2. ಶಂಬೂಕನ ವಿಚಾರದಲ್ಲಿ ಈಗಲೂ ಶ್ರೀರಾಮನ ಬಗ್ಗೆ ಅದೇ ಅಪನಂಬಿಕೆಗಳೇ ಉಳಿದುಕೊಂಡಿರುವುದು ವಿಷಾದಕರ. ಮಹಾಕವಿಗಳು  ಅಪಪ್ರಚಾರಗಳನ್ನೆಲ್ಲಾ ಸುಳ್ಳು ಮತ್ತು ಕಾಲ್ಪನಿಕ  ಈ ನಾಟಕದ ಮೂಲಕ ಶ್ರುತಪಡಿಸಿದ್ದಾರೆ.
  ಮಹಾಕವಿಗಳ ನಾಟಕಗಳನ್ನು ಚೆನ್ನಾಗಿ  ವಿಶ್ಲೇಷಣೆ ಮಾಡುತ್ತಿದ್ದೀರಿ. ಈ ಮೂಲಕ ಓದುವ ಆಸಕ್ತಿಯನ್ನು ಹೆಚ್ಚಿಸುತ್ತಿದ್ದೀರಿ.
  ಧನ್ಯವಾದಗಳು ಸರ್.

   

  1. ಡಾ.ಗವಿಸ್ವಾಮಿಯವರೇ…ಮಹಾಕವಿಗಳ ಪ್ರತಿಭೆಗೆ ಮಹಾಕವಿಗಳೆ ಸರಿಸಾಟಿ…ಸಾಗರಕ್ಕೆ ಸಾಗರವೇ ಉಪಮೆ ! ಅಲ್ಲವೇ ? ಶುಭದಿನ !

Leave a Reply

Your email address will not be published. Required fields are marked *