ನಾಟಕಕಾರರಾಗಿ ಕುವೆಂಪು (ಭಾಗ-4):ಹಿಪ್ಪರಗಿ ಸಿದ್ದರಾಮ್

 

ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ.


ಈ ಮೊದಲಿನ ದೃಶ್ಯಗಳಲ್ಲಿ ಕೌರವಕುಲೇಂದ್ರನ್, ಕುರುಪತಿ, ಕೌರವೇಂದ್ರ, ಕುರುಚಕ್ರವರ್ತಿ, ದುರ್ಯೋಧನನೆಂದು ಪಾತ್ರಗಳ ಸಂಭಾಷಣೆಗಳಲ್ಲಿ ಉಲ್ಲೇಖವಾಗುತ್ತಿದ್ದ ಪಾತ್ರವು ರಂಗದಲ್ಲಿ ಬರುವುದರೊಂದಿಗೆ ನಾಟಕವು ಉತ್ತುಂಗಸ್ಥಿತಿಗೇರಿ ಕಳೆಕಟ್ಟಲಾರಂಭಿಸುವುದು ಆರನೇಯ ದೃಶ್ಯದಿಂದ, ರಣಭೂಮಿಯ ಕರಾಳತೆಯು ತುಂಬಿಕೊಂಡಿರುವ ವೈಶಂಪಾಯನ ಸರೋವರದ ದಡದಲ್ಲಿ ಕತ್ತಲೆ ಕವಿದಿರುವಾಗ ಗದಾಯುದ್ಧದಲ್ಲಿ ಕೃಷ್ಣನ ಕುತಂತ್ರದ ಫಲವಾಗಿ ಭೀಮನಿಂದ ತೊಡೆಮುರಿದುಕೊಂಡು ವಿಷಾದದ ನೋವಿನೊಂದಿಗೆ ನೆಲಕ್ಕುರುಳಿರುವ ಅಷ್ಟಾದಶಾಕ್ಷೋಹಿಣೀ ಒಡೆಯನಾಗಿ ಮೆರೆದಾಡಿದ್ದ ಚಕ್ರವರ್ತಿ ದುರ್ಯೋಧನ ಮಹಾರಾಜರು ದೇಸಿಗನಂತೆ ಹೊರಳಾಡುತ್ತಿದ್ದಾರೆ. ‘ಎಲವೋ ಅಗಸ್ತ್ಯ ನಕ್ಷತ್ರವೇ…’ಎಂಬರ್ಥದಲ್ಲಿ ಇದ್ದರೂ ಇಲ್ಲದವನಂತೆ ದ್ರೋಣಾರ್ಯರ ಸುಪುತ್ರ ಆನೆಬಲದ ಅಶ್ವತ್ಥಾಮ ಮುಗಿಲ ಕಡೆ ನೋಡುತ್ತಾ ನಿಂತಿದ್ದಾನೆ. ಈಗಾಗಲೇ ತನ್ನ ಒಡೆಯನಾದ ದುರ್ಯೋಧನನಿಗೆ ಮಾತು ಕೊಟ್ಟಂತೆ ಪಾಂಡವರ ತಲೆ ತರುವುದಾಗಿ ಪಾಂಡವರ ಬಿಡಾರಕ್ಕೆ ಹೋಗಿದ್ದವನು ; (ಭ್ರಮೆಯಿಂದ) ಗೊಂದಲದಿಂದ ಉಪ-ಪಾಂಡವರ ತಲೆಗಳನ್ನು ತಂದು ಶಿಶುಹತ್ಯಾದೋಷಕ್ಕೆ ಗುರಿಯಾಗಿ ತಪ್ಪಿತಸ್ಥ ಭಾವದೊಂದಿಗೆ ಪಶ್ಚಾತ್ತಾಪದಲ್ಲಿದ್ದಾನೆ. ಕೈಮುಗಿದು ಹೊರಡಲನುವಾದಾಗ ದುರ್ಯೋಧನನು ಭ್ರಮೆಯಿಂದ ತಪ್ಪೆಸಗಿದಂತೆ ‘ಇನ್ನೊಂದು ಕೊನೆಯಾಸೆಯ ಕೆಲಸ ಮಾಡುವೆಯಾ’ ಎಂದು ಮರುಗುವ ಧನಿಯಲ್ಲಿ ಕೇಳಿಕೊಂಡಾಗ ‘ಋಣಪಿಂಗಲೆಸಗುವೆನ್’ ಎಂದು ಅಶ್ವತ್ಥಾಮನ ಹೇಳಲು, 

ಕರ್ಣನನ್ ಎನ್ನೊಡನೆ ಚಿತೆಯಲಿ ಬೇಳ್ದಪೆಯಾ?
ನಾವಿರ್ವರೊಂದಾಗಿ ಭೂಮಿಯೊಳ್ ಬಾಳಿದೆವು ; 
ನಾವಿರ್ವರೊಂದಾಗಿ ಸಾಮ್ರಾಜ್ಯವಾಳಿದೆವು ;
ಸಾವಿನೊಳು ಇರ್ವರುಂ ಒಂದಾಗಿ ನಲಿಯುವೆವು.
ಸೂಡೊಳುಂ ನಾವಿರ್ವರೊಂದಾಗಲೆಳಸುವೆನ್ !
ನಮ್ಮಿರ್ವರಾ ಬೂದಿ ಎರಡರಿಯದಂತಿರ್ಕೆ !
ಇದನೊಂದನಾದರುಂ ಬೆಮೆಗೊಳ್ಳದೆಸಗುವೆಯಾ ?
 
ಎಂದು ಹೇಳುವಾಗ ದುರ್ಯೋಧನನ ಸ್ನೇಹ, ವಿಶ್ವಾಸ ಎಂತಹ ಉನ್ನತವಾಗಿದ್ದವು ಎಂಬುದನ್ನು ಮಹಾಕವಿಗಳು ಚಿತ್ರಿಸಿರುವುದು ಹೃದಯಂಗಮವಾಗಿದೆ. ರಾಜಾಜ್ಞೆಯೆಂದು ಅಶ್ವತ್ಥಾಮನು ಹೊರಟು ಹೋದ ಮೇಲೆ ದುರ್ಯೋಧನನಿಗೆ ಇಂದಿನ ಕರುಣಾಜನಕ ಸ್ಥಿತಿಗೆ ಕಾರಣವಾದ ತನ್ನ ಜೀವನದಲ್ಲಿ ನಡೆದ ಪ್ರಸಂಗಗಳನ್ನೆಲ್ಲಾ ಜ್ಞಾಪಿಸಿಕೊಳ್ಳುತ್ತಾನೆ. ಪಿತಾಮಹ ಭೀಷ್ಮ, ಗರುಡಿಯಾಚಾರ್ಯ ದ್ರೋಣ ಮುಂತಾದ ಅತಿರಥರನ್ನು ಅತಿಯಾಗಿ ನಂಬಿದ್ದಕ್ಕೆ, ನಂಬಿದವರು ಮೋಸ ಮಾಡಿದುದನ್ನು ನೆನೆದು ದುಃಖಿಸುತ್ತಿರುವಾಗ ಯುಗಪುರುಷ ದ್ವಾಪರನ ಪ್ರವೇಶವಾಗುತ್ತದೆ. ದ್ವಾಪರನು ‘ಚಕ್ರವರ್ತಿ’ ಎಂದು ದುರ್ಯೋಧನನ್ನು ಸಂಭೋಧಿಸಿ ಕರೆದಿರುವುದನ್ನು ಕೇಳಿ ಇಂಥಹ ಹೀನಾಯ ಸ್ಥಿತಿಯಲ್ಲಿ ನನ್ನನ್ನು ಹೀಗೆ ಕರೆಯುವರು ಯಾರೆಂದು ಕೇಳಿದಾಗ, ತನ್ನ ಹೆಸರು ಹೇಳಿಕೊಳ್ಳುವ ದ್ವಾಪರನು ‘ನನ್ನ ಆಳಿಕೆ ಕೊನೆಗೊಂಡಿದೆ, ನಿನ್ನಪ್ಪಣೆಯನು ಪಡೆದು ಹೋಗಲು ಬಂದೆ’ ಎಂದು ಹೇಳುವನು. ಆತ ಹೋದ ನಂತರವೂ ಮೌನವಾಗಿ ಧರ್ಮ ಮತ್ತು ಅಧರ್ಮಗಳ ಕುರಿತು ತನ್ನಲ್ಲಿಯೇ ವಿಶ್ಲೇಷಿಸಿಕೊಳ್ಳುತ್ತಾ ‘ತಾನು ಮಾಡಿದ್ದೆ ಸರಿ, ಇದಕ್ಕೆಲ್ಲಾ ಆ ಕೃಷ್ಣನ ಕುತಂತ್ರವೇ ಕಾರಣ’ವೆಂದು ಕೋಪದಲ್ಲಿ ‘ಎಲವೋ ಕೃಷ್ಣಾ ! ಕೃಷ್ಣಾ ! ಕೃಷ್ಣಾ !’ ಎಂದು ಕೂಗಿಕೊಂಡಾಗ ಕೃಷ್ಣನು ಫಕ್ಕನೆ ಪ್ರತ್ಯಕ್ಷನಾಗುತ್ತಾನೆ. ವರ್ಷಾನುಗಟ್ಟಲೇ ತಪಸ್ಸು ಮಾಡಿದರೂ ಭಕ್ತರ ಮುಂದೆ ಪ್ರತ್ಯಕ್ಷನಾಗದ ದೇವಾಧಿದೇವ ಈಗ ಕ್ಷಣಮಾತ್ರದಲ್ಲಿ ಪ್ರತ್ಯಕ್ಷನಾಗಿರುವುದನ್ನು ನೋಡಿ ಸಂಶಯದಿಂದ ‘ನಿನಗೆ ಯಾರು ಕರೆದರೆಂದು ಇಲ್ಲಿಗೆ ಬಂದೆ?’ ಎಂದು ಕರ್ಕಶ ಧನಿಯೊಂದಿಗೆ ಬುಸುಗುಡುತ್ತಾ ಸರ್ಪ ಹೆಡೆಯೆತ್ತುವಂತೆ ಅರ್ಧಮೇಲೆದ್ದು ಕೈಮೇಲೆ ಒರಗುತ್ತಾನೆ ಎಂಬ ಮಹಾಕವಿಗಳ ದೃಶ್ಯ ವಿವರಣೆ ಕುತೂಹಲ ಮೂಡಿಸುತ್ತದೆ. ಇಲ್ಲಿ ದುರ್ಯೋಧನನು ಸಮಚಿತ್ತ ಕಳೆದುಕೊಂಡು ಕೋಪಾಗ್ನಿಯಲ್ಲಿ ಬೇಯುತ್ತಿರುವಾಗ ಕೃಷ್ಣನಾಡುವ ಒಂದೊಂದು ಮಾತುಗಳು ಆತನಿಗೆ ರುಚಿಸುತ್ತಿಲ್ಲ. ಆದರೂ ಕೃಷ್ಣನು ಆತನ ಅಪರಾಧಗಳನ್ನು ಒಂದೊಂದಾಗಿ ವಿವರಿಸಿ, ನೆನಪಿಸುತ್ತಿರುವಾಗ ಕೌರವೇಂದ್ರನ ಸಿಟ್ಟು ಭೂಕಂಪನದ ಲಾವಾರಸದಂತೆ ಚಿಮ್ಮುತ್ತಿದೆ. 

ಓ ಮಾರಿ ! ಮಾಯಾವಿ ! 
ಎಲವೋ ಕೊಲೆಪಾತಕಾ, ರಣರಕ್ತ ರಾಕ್ಷಸಾ, 
ಗಳಪದಿರ್ ಎನ್ನೆದುರೀ ತಿಕ್ತವಾಕ್ಯಂಗಳಂ
ಎಲವೋ ಮಸಣಗಾಹಿ, ನಾನಲ್ತೆ ಕೊಂದವನ್ ?
 
ಎಂದು ಕೋಪಾಗ್ನಿಯಲ್ಲಿ ‘ಮಸಣಗಾಹಿ, ಪೆಣದಿನಿ, ಹುಟ್ಟುನೆತ್ತರುಣಿ’ ಎಂದು ಸಹಸ್ರ ನಾಮಾವಳಿ ಹೇಳುತ್ತಾನೆ. ‘ವೀರಕೌರವಾ, ತತ್ವಜ್ಞಾನಿ ಕೌರವಾ…’ ಎಂದು ಶ್ರೀಕೃಷ್ಣನು ತನ್ನ ಅಧಿಕಾರಯುತವಾದ ಮಂತ್ರವಾಣಿಯಿಂದ ಹೇಳುತ್ತಿರುವಾಗ ಕೋಪೋದ್ರಿಕ್ತ ಕೌರವನ ಸುವರ್ಣಸ್ವಪ್ನ ಸಿಡಿದೊಡೆಯುತ್ತದೆ. ಇದ್ದಕ್ಕಿದ್ದ ಹಾಗೆ ಕೌರವನ ಮುಖದಲ್ಲಿ ಶಾಂತ ಭಾವದೊಂದಿಗೆ ಮುಗುಳ್ನಗೆ ಸೂಸುತ್ತಾ ಕಣ್ಣರಳಿಸುತ್ತಾ ಪ್ರಸನ್ನ ಚಿತ್ತನಾಗಿ ಶ್ರೀಕೃಷ್ಣನನ್ನು ನೋಡುತ್ತಾನೆ. ಶ್ರೀಕೃಷ್ಣನು ಸಹ ಮುಗುಳ್ನಗುತ್ತಾನೆ. ಇಲ್ಲಿ ಶ್ರೀಕೃಷ್ಣನು ನಾಟಕದ ಸೂತ್ರಧಾರನಂತೆ (ಆಧುನಿಕ ಕಾಲದ ಹವ್ಯಾಸಿ ನಾಟಕಗಳ ನಿರ್ದೇಶಕನಂತೆ) ಕಂಡರೆ, ದುರ್ಯೋಧನನು ಕಥಾನಾಯಕ ಮತ್ತು ಸೂತ್ರಧಾರ ಹೇಳಿದಂತೆ ಅಭಿನಯಿಸುವ ನಟನಾಗಿ ತೋರುತ್ತಾರೆಂದು ಮಹಾಕವಿಗಳು ಪ್ರಸಂಗದ ವಿವರಣೆ ನೀಡುತ್ತಾ ಅನಿರೀಕ್ಷಿತ ತಿರುವು ನೀಡಿ ಓದುಗರಿಗೆ/ಪ್ರೇಕ್ಷಕರಿಗೆ ಚಕಿತಗೊಳಿಸುತ್ತಾರೆ. ‘ನಿನ್ನಭಿನಯಕೆ ನಾನೆ ಮಾರುವೋದೆನ್’ ಎಂದು ನಟನೆಯ ಕುರಿತಾಡುವ ಮೆಚ್ಚುಗೆಯ ಮಾತುಗಳು ಜಾಗೃತಾವಸ್ಥೆಯ ವಾಸ್ತವ ಪ್ರಪಂಚಕ್ಕೆ ಬಂದ ದುರ್ಯೋಧನ ಈಗ ಕೌರವೇಂದ್ರನಾಗಿ ಉಳಿದಿಲ್ಲ. ಆತನೂ ಸಹ ಕೃಷ್ಣನಂತಾಗಿ ಕೌರವಕೃಷ್ಣನಾಗಿ ತೋರುತ್ತಾನೆ. ಇಲ್ಲಿ ಮಹಾಕವಿಗಳು ಕೌರವನನ್ನು ಕೃಷ್ಣನ ಸ್ಥಾನಕ್ಕೇರಿಸುವುದರೊಂದಿಗೆ ಖಳನಾಯಕನ ಮನಸ್ಸನ್ನು ಸಹ ಪರಿವರ್ತಿಸಬಹುದು ಎಂದು ತೋರಿಸಿಕೊಟ್ಟಿರುವರು. ಅಷ್ಟರಲ್ಲಿ ಪರದೆಯ ಹಿಂದೆ ‘ಸಂಜಯಾ ದಾರಿ ತೋರು’ ಎಂಬ ಧನಿ ಕೇಳುವುದರೊಂದಿಗೆ ತನ್ನ ಸೂತ್ರಧಾರತ್ವದಲ್ಲಿ ನಡೆಯುತ್ತಿರುವ ನಾಟಕವನ್ನು ಬೇಗನೆ ಮುಗಿಸಬಾರದೆಂದು ಕೌರವನನ್ನು ಮತ್ತೇ ಮೊದಲಿನ ಸ್ಥಿತಿಗೆ ಕೃಷ್ಣನು ಕರೆದೊಯ್ಯುತ್ತಾನೆ. ಸಂಜಯ, ದೃತರಾಷ್ಟ್ರ, ಗಾಂಧಾರಿ, ಭಾನುಮತಿ ಮೊದಲಾದವರು ಅಲ್ಲಿಗೆ ಬರುವುದರೊಂದಿಗೆ ಕೌರವೇಂದ್ರನ ಸ್ಥಿತಿ ನೋಡಿ ಗೋಳಾಡುತ್ತಾರೆ. ಆ ಗೋಳಾಟದ ಧನಿ ಕಡಲಮೊರೆಯಾಗಿ ಹಬ್ಬುತ್ತದೆ. 
 
ಏಳು ಮತ್ತು ಎಂಟನೇಯ ದೃಶ್ಯಗಳಲ್ಲಿ ಕುರುಕ್ಷೇತ್ರದ ವಿವಿಧ ಭಾಗಗಳಲ್ಲಿ ಘಟನೆಗಳು ನಡೆದರೂ ಎರಡು ದೃಶ್ಯಗಳಲ್ಲಿ ತಾಯಂದಿರು (ಕುಂತಿ ಮತ್ತು ಮುದುಕಿ)  ಯುದ್ಧದಲ್ಲಿ ಮಡಿದು ವೀರಸ್ವರ್ಗ ಸೇರಿದ ಇದ್ದೊಬ್ಬ ಸುತನ ಶವ, ಅವರೊಂದಿಗೆ ಪತಿಯನ್ನು ಕಳೆದುಕೊಂಡ ‘ಮಾತೆ’ಯೊಬ್ಬಳು ಪತಿಯ ಶವವನ್ನು ಹುಡುಕುತ್ತಿರುವ ಸಂದರ್ಭಗಳು. ಅದರಂತೆ, ಏಳನೇಯ ದೃಶ್ಯದಲ್ಲಿ ಸಹದೇವನೊಂದಿಗೆ ಕುಂತಿಯು ಕರ್ಣನ ಮೃತದೇಹವನ್ನು ಹುಡುಕುತ್ತಾ ಬರುತ್ತಾಳೆ. ಸಹದೇವನಿಗೆ ಕುಂತಿಯು ಕರ್ಣನ ಮೃತದೇಹವನ್ನು ಹುಡುಕುತ್ತಿರುವ ಸಂಗತಿ ಮತ್ತು ಕರ್ಣನು ತನ್ನ ಹಿರಿಯಣ್ಣನೆಂಬುದು ಸಹ ಗೊತ್ತಿದ್ದು ಗೊತ್ತಿಲ್ಲದಂತಿದ್ದಾನೆ. ಮಾತಿಗೆ ಮಾತು ನಡೆದು ಕುಂತಿಯು ಸದರಿ ಸಂಗತಿಗಳನ್ನು ತಿಳಿಸಿದಾಗ ಅಚ್ಚರಿಯಾದಂತೆ ನಟಿಸುತ್ತಾ, ಕರ್ಣನ ಮೃತದೇಹವನ್ನು ಗುರುತಿಸಿ ತಾಯಿಗೆ ತೋರಿಸಿದಾಗ, ಅವಳು ಗೋಳಿಡುತ್ತಾ ಕರ್ಣನ ಶವದ ಮೇಲೆ ಗೋಳಾಡುವ ಉದ್ದವಾದ (ರಂಗದಲ್ಲಿ ಪಾತ್ರ ಮಾಡುವ ನಟರಿಗೆ ಚಾಲೆಂಜಿಗ್ ಆಗಿದೆ !) ಸಂಭಾಷಣೆಯೊಂದರಲ್ಲಿ ದುರಂತಜೀವಿ ಕರ್ಣನ ಜನನದಿಂದ ಮರಣ ಹೊಂದಿ ಶವವಾಗುವವರೆಗಿನ ಘಟನಾವಳಿಗಳನ್ನು ಹೇಳಿಸುತ್ತಾ ‘ನನ್ನ ಮಗುವನ್ ನಾನೆ ಸುಲಿದು ಕೊಂದೆನಲ್ತೆ !………. ‘ತೊಟ್ಟ ಸರಳನ್ ಮರಳಿ ತೊಡದಿರ್’ ಎಂದು ಸುರುಳಂ ಗೈವಂತೆ ಮಾಡಿದೆನ್ !’ ಎಂದು ಪಶ್ಚಾತ್ತಾಪ ಪಡುತ್ತಾ ‘ಓ ಕಂದಾ ! ಓ ಕರ್ಣಾ ! ಅಯ್ಯೋ’ ಎಂದು ಹಲಬುತ್ತಾಳೆ. ಮುಂದಿನ (ಎಂಟನೇಯ) ದೃಶ್ಯದಲ್ಲಿ ಮುದುಕಿಯ ಮಗನ ಶವ ಮತ್ತು ಮಾತೆಯ ಪತಿಯ ಶವಗಳು ಅಕ್ಕಪಕ್ಕ ಬಿದ್ದಿರುವುದನ್ನು ಮಹಾಕವಿಗಳು ಸತ್ತ ಭಟರು ಒಬ್ಬರನ್ನೊಬ್ಬರು ಭರ್ಜಿಗಳಿಂದ ತಿವಿದುಕೊಂಡು ಮಡಿದಿದ್ದಾರೆಂಬುದನ್ನು ಚಿತ್ರಿಸುತ್ತಾರೆ. ಇದನ್ನು ಕಂಡು ಮುದುಕಿ ಮತ್ತು ಮಾತೆ ಇಬ್ಬರೂ ‘ಯುದ್ಧ ಪೀಪಾಸುಗಳಾದ ಕೌರವರು ಹಾಳಾಗಲಿ, ಪಾಂಡವರು ಹಾಳಾಗಲಿ’ ಎಂದು ಶಾಪ ಹಾಕುತ್ತಾ ಬಿದ್ದು ಗೋಳಾಡುತ್ತಾರೆ. ರಾಜ್ಯವನ್ನಾಳುವ ಯಾರದೋ ಮಹತ್ವಾಕಾಂಕ್ಷೆಗೆ ಜನಸಾಮಾನ್ಯರು ಹೇಗೆ ಬಲಿಯಾಗುತ್ತಾರೆ ಮತ್ತು ಅವರನ್ನು ಅವಲಂಭಿಸಿದ ಸಂಬಂಧಿಕರು ದುರವಸ್ಥೆಯ ಕುರಿತಾದ ಸಾಮಾಜಿಕ ಚಿಂತನೆಯನ್ನು ಈ ಚಿಕ್ಕ ದೃಶ್ಯಾವಳಿಗಳೊಂದಿಗೆ ಮಹಾಕವಿಗಳು ಶ್ರೀಸಾಮಾನ್ಯರ ಬದುಕಿನ ಕುರಿತು ಪರೋಕ್ಷವಾಗಿ ಚಿಂತಿಸುತ್ತಾರೆ. 
 
ಪಾಂಡವ ಪಕ್ಷದ ಅಭಿಮನ್ಯು, ಘಟೋತ್ಕಚರ ಶವಗಳನ್ನು ಚಿತೆಗೇರಿಸಿ ದಫನ ಮಾಡುವ ಸನ್ನಿವೇಶವು ಒಂಬತ್ತನೇಯ ದೃಶ್ಯದಲ್ಲಿ ಮತ್ತು ರಂಗಕೃತಿಯ ಮಹತ್ವದ ಘಟ್ಟದಲ್ಲಿ ಬರುತ್ತದೆ. ಇಲ್ಲಿ ತಮ್ಮ ಸುತರನ್ನು ಕಳೆದುಕೊಂಡ ಭೀಮಾರ್ಜುನಾದಿಗಳು ಕರಳು ಕತ್ತರಿಸುವಂತೆ ರೋಧಿಸುತ್ತಿದ್ದಾರೆ. ಸಮಾಧಾನಿಸುವ ಧರ್ಮರಾಯನು ಚಿತೆಗೆ ಬೆಂಕಿ ಇಡಲು ಹೋಗುವಷ್ಟರಲ್ಲಿ ಕುಂತಿ-ಸಹದೇವರು ಕರ್ಣನ ಮೃತದೇಹವನ್ನು ಹೊತ್ತು ತಂದಿದ್ದಾರೆ. ಕುಂತಿಯು ಧರ್ಮರಾಯನಲ್ಲಿ ‘ಕರ್ಣನನ್ ಇದರೊಳೆ ದಹನಂ ಗೈವಂತೆನಗೆ ಕೃಪೆಮಾಡೈ’ ಎಂದು ವಿನಂತಿಸಿಕೊಳ್ಳುತ್ತಾಳೆ. ಧರ್ಮರಾಯನಂತೆ ಭೀಮಾರ್ಜುನರು ಸಹ ದುಃಖದಲ್ಲಿದ್ದರೂ ಕೋಪೋದ್ರಿಕ್ತರಾಗಿ ‘ಪಗೆಯ ಕೆಳೆ ! ಅಭಿಮನ್ಯುವನ್ ಘಟೋತ್ಕಚನನ್ ಮೋಸದಿಂದಿರಿದವನ್ !’ ಎಂದು ಕರ್ಣನ ಕುರಿತು ವಿವರಿಸುತ್ತಾ ದಫನ ಮಾಡಲು ಬಲವಾಗಿ ನಿರಾಕರಿಸುತ್ತಾರೆ. ಕುಂತಿಯು ‘ನನ್ನ ಮಕ್ಕಳಾದ ನೀವು ತಾಯಿಯಾದ ನನ್ನ ಆಶೆಯೊಂದನ್ನು ವಾದಿಸದೇ ನೆರವೇರಿಸಿರಿ’ ಎಂದು ಕೈಮುಗಿದು ಬೇಡಿಕೊಳ್ಳುತ್ತಿರುವಾಗ ಅಶ್ವತ್ಥಾಮನು ಆಗಮಿಸುತ್ತಾನೆ. ತನ್ನೊಡೆಯ ಕೌರವೇಂದ್ರನ ಕೊನೆಯಾಶೆಯ ಸಂದೇಶ ‘ಕೌರವೇಂದ್ರನ್ ಮಡಿವ ಮೊದಲೆನ್ನನ್ ಕರೆದು ಕರ್ಣನನ್ ತನ್ನೊಡನೆ ಸೂಡುಗೈಯಲ್ ಬೆಸಸಿ ಪೋದನ್, ಫೋದವರ ಬಯಕೆಯಂ ಇರ್ಪವರ್ ಕೈಗೂಡಿಪುದೆ ಧರ್ಮಂ !’ ಎಂದು ಹೇಳಿದಾಗ ಅನಾಯಾಸವಾಗಿ ತಾವಂದುಕೊಂಡಂತೆ ನಡೆಯುತ್ತಿರುವುದಕ್ಕಾಗಿ ಸಂತಸಗೊಂಡು ಭೀಮಾರ್ಜುನರು ಕರ್ಣನ ಮೃತದೇಹವನ್ನು ತೆಗೆದುಕೊಂಡು ಹೋಗಲು ಹೇಳುವುದನ್ನು ಕಂಡು ಕುಂತಿಯು ಅಶ್ವತ್ಥಾಮನಲ್ಲಿ ಶವವನ್ನು ತೆಗೆದುಕೊಂಡು ಹೋಗಬೇಡವೆಂದು ಹೇಳುತ್ತಾಳೆ. ‘ದೇವಿ, ಕೌರವನಾಶೆ ! ಮೇಣೆನ್ನ ಬಾಸೆ! ಕೈಮುಗಿದು ಕೇಳ್ವೆನ್; ಬೀಳ್ಕೊಡಿಂ ಕರ್ಣನನ್’ ಎಂದು ವಿನಂತಿಸಿಕೊಂಡ ನಂತರ ಕರ್ಣನ ಮೃತದೇಹವನ್ನು ಹೊತ್ತೊಯ್ಯುತ್ತಾನೆ. ಕುಂತಿ ತಿರುಗಿ ನೋಡಿ ಕರ್ಣನ ಕುರಿತು ಗೋರಾಡಿ (ಗೊಳಾಡುತ್ತಾ) ಅಳುತ್ತಾಳೆ. ಆ ದುಃಖದಲ್ಲಿ ‘ಓ ಕಂದಾ, ಓ ಕರ್ಣಾ, ನಿನ್ನನಿದಕಾಗಿಯೇ ಪೆತ್ತೆನೇನ್?’ ಎಂದು ತನ್ನ ಹೃದಯದಲ್ಲಿ ಬಚ್ಚಿಟ್ಟುಕೊಂಡಿದ್ದ ಆತನ ಜನನದ ರಹಸ್ಯವನ್ನು ಹೊರಗೆಡಹಿದಾಗ ಧರ್ಮರಾಯ, ಭೀಮಾರ್ಜುನಾದಿಗಳು ಸಿಡಿಲಿನಂತೆರಗಿದ ವಿಷಯಕ್ಕೆ ಉರಿದೇಳುತ್ತಾರೆ. . ಕಾಲಜ್ಞಾನದ ಮಾಹಿತಿಯುಳ್ಳ ಸಹದೇವನು ‘ಮನ್ನಿಸೆನ್ನನು, ಅಣ್ಣಾ ; ತಾಯಿಯೊಡಲೊಳೆ ಬಂದ ರಾಧೆಯನೆಮಗೆಲ್ಲ ಪಿರಿಯಣ್ಣನ್ !…..ನಾನ್ ಪೇಳ್ದದದು ದಿಟಂ!’ ಎಂದಾಗ ಕುಂತಿಯು ‘……ಮಗನ ಕೊಲೆಯಂಗೈದ ಕಡುಪಾಪಿ ಎಂದು ಪೇಸುವುದು !’ ಎಂದು ಅಳುತ್ತಾಳೆ. ‘ಓ ಕೃಷ್ಣಾ, ಪುಸಿವೇಳ್ದು ಕೊಲಿಸಿದೆಯಾ !’ ಎಂದು ಅರ್ಜುನ ಮತ್ತು ‘ಕಡೆಗುಂ ಪೊಲಸಾದುದೀ ಭಾರತ ಸಂಗ್ರಾಮಂ!’ ಎಂದು ಭೀಮನು ವಾಸ್ತವದ ಅರಿವಿಗೆ ಬರುತ್ತಾರೆ. ದೃಶ್ಯ ಮುಗಿಯುತ್ತದೆ.
 
ಕೊನೆಯ (ಹತ್ತನೇಯ) ದೃಶ್ಯದಲ್ಲಿ ಮಹಾಕವಿ ಕುವೆಂಪುರವರ ಸೃಜನಶೀಲತೆಯ ಪ್ರತಿಮೆಗಳು ಅಗಾಧತೆಯನ್ನು ಪಡೆಯುತ್ತವೆ. ಎಲ್ಲವೂ ಬಟ್ಟಬಯಲಾಗಿರುವ ಕತ್ತಲ ನೀರವತೆಯ ಶ್ಮಶಾನ ಸದೃಶ್ಯವಾದ ಕುರುಕ್ಷೇತ್ರದ ರಣಾಂಗಣದಲ್ಲಿ ಪಾಂಡವ ಮತ್ತು ಕೌರವ ಪಕ್ಷದ ವಿನಾಶದ ಪ್ರತಿನಿಧಿಯಂತಿರುವ ಒಂದೊಂದು ಭಸ್ಮ ಪರ್ವತದ ಮೇಲೆ ಒಂದೊಂದು ಕಾಲಿಟ್ಟುಕೊಂಡು ರುದ್ರಲಯ ಮೂರ್ತಿಯಾದ ಮಹಾದೇವನು ಉನ್ಮತ್ತನಾಗಿ ಭೀಮಾಕಾರನಾಗಿ ನಿಂತಿದ್ದು, ಅಲ್ಲಿರುವ ಬೂದಿಯ ರಾಶಿಗಳಿಂದ ಆಗಾಗ ಬೂದಿ ತೆಗೆದುಕೊಂಡು ಬಳಿದುಕೊಳ್ಳುತ್ತಾ, ಮಹಾಭಾರತದ ಒಬ್ಬೊಬ್ಬ ವೀರಪುರುಷರ ಹೆಸರನ್ನು ಕೂಗುತ್ತಿದ್ದಾನೆ. ಮುಸುಗಿನಲ್ಲಿರುವ ಅಸ್ಪಷ್ಟ ಆಕೃತಿಗಳು ಎರಡು ಪಕ್ಷವಾಗಿ ಬಂದು ನಿಂತುಕೊಳ್ಳುತ್ತವೆ. ದೂರದ ಗುಡುಗಿನಂತೆ ಗಂಭೀರವಾಗಿ ಶ್ಮಶಾನವನ್ನು ತೂಗಿ ಮಲಗಿಸುವ ಜೋಗುಳದಂತೆ ಆತನ ಧ್ವನಿಯು ಮೊಳಗಲು ಆರಂಭಿಸುತ್ತದೆ. 
 
ಎಲ್ಲ ದಾನಗಳು, ಎಲ್ಲ ಧರ್ಮಗಳು,
ಕಡೆಗಿಲ್ಲಿಗೇ-ಎನ್ನ ಬಳಿಗೆ !
ಎಲ್ಲ ಪಾಪಗಳು, ಎಲ್ಲ ಪುಣ್ಯಗಳು,
ಕಡೆಗೊಂದು ನನಗೇ – ಭಸ್ಮಮೆನಗೆ !
…………………… ……………. ………………….
ಎನ್ನ ಹುಚ್ಚಿನಿಂದುದಿಸಿದೀ ಸೃಷ್ಟಿ
ಕಡೆಗೆ ತುತ್ತಾಗುವುದು – ಎನ್ನ ಹುಚ್ಚಿಗೇ !
ಎನ್ನ ಹುಚ್ಚಿಗೇ ! ಎನ್ನ ಹುಚ್ಚಿಗೇ !
…………. ……….. …………. …………… ……….
ಇದೆ ಜಗದ ಕಟ್ಟಕಡೆ ನೆಚ್ಚಿಗೇ !
ಕಡೆ ನೆಚ್ಚಿಗೇ ! ಕಡೇ ನೆಚ್ಚಿಗೇ !
 
ಎಂದು ಧ್ಯಾನಮಗ್ನನಾಗುತ್ತಾನೆ. ಸೂತ್ರಧಾರ ಕೃಷ್ಣನು ಮೆಲ್ಲಗೆ ಹೆಜ್ಜೆಯಿಡುತ್ತ ಎಂದಿನ ತನ್ನ ಗಂಭೀರತೆಯ ನಸುನಗುವಿನೊಂದಿಗೆ ಆಗಮಿಸಿ ರುದ್ರನನ್ನು ನೋಡಿ ಕರೆಯುತ್ತಾನೆ. ಎಚ್ಚರಗೊಂಡ ರುದ್ರನು ‘ನಿನ್ನ ನಾಟಕಂ ನೇರಮಾದುದೇ?’ ಎಂದು ಕೇಳುತ್ತಾ ‘ರಸಿಕರ್ಗೆ ಗುರು ನೀನ್. ನಿನ್ನ ದೃಶ್ಯಕಾವ್ಯದ ಸೊಬಗುಮಂ ಗಂಭೀರಮುಮಂ ಬಣ್ಣಿಸಲರಿದು – ಪೂರ್ಣಂ ; ನವರಸ ಪರಿಪೂರ್ಣಂ !’ ಎಂದು ಹೊಗಳಿದಾಗ, ಕೃಷ್ಣನು ‘ನಿನ್ನೊಂದಾವೇಶಮಿರೆ ಸಫಲಂ ರುದ್ರಕಾವ್ಯಂ !’ ಎಂದು ಬಣ್ಣಿಸುತ್ತಾನೆ. ಕುತೂಹಲದಿಂದ ರುದ್ರನು ‘ವಾಸುದೇವ, ಮುಂದಾವ ಕಾವ್ಯಮಂ ಕಟ್ಟುವಯ್?’ ಎಂದು ಕೇಳಿದಾಗ ‘ಕಲಿಯುಗ ಮಹಾಕಾವ್ಯಮನ್ !’ ಎಂದು ಮುಂದಿನ ಯೋಜನೆಯನ್ನು (ಪ್ರಾಜೆಕ್ಟ್) ವಿವರಿಸುತ್ತಾನೆ. ಆ ಮಹಾಕಾವ್ಯದ ಕಥಾಸಂವಿಧಾನವನ್ನು (ಸಾರಲೇಖ) ರುದ್ರನು ನೋಡಲು ಅಪೇಕ್ಷಿಸಿದಾಗ, ಕೃಷ್ಣನು ಆ ಮಹಾಕಾವ್ಯದ (ಈಗಿನ ಸಿನೇಮಾ ಟ್ರೇಲರ್‍ದಂತೆ) ಕಾಲದ ಪರದೆಗಳಲಿ ಕೆಲವು ಪ್ರಮುಖ ದೃಶ್ಯಾವಳಿಗಳನ್ನು ತೋರಿಸುತ್ತಾನೆ. ಉಪನಿಷತ್ತುಗಳಿಂದ ಆರಂಭಿಸಿ ಬುದ್ಧ, ಅಶೋಕ, ಏಷ್ಯಾಖಂಡ, ಕ್ರಿಸ್ತ್, ಯವನದೇಶಂ, ರೋಮನ್ ಚಕ್ರಾಧಿಪತಿ, ಐರೋಪ್ಯ ಖಂಡಂ, ಅರಬ್ಬೀಸ್ಥಾನಂ, ಮಹಮ್ಮದನ್, ಕೇರಳ, ಆಚಾರ್ಯ ಶಂಕರ, ಮೊಗಲ ಸಾಮ್ರಾಜ್ಯಂ, ಕನ್ನಡದೇಶಂ, ಕವಿ ರನ್ನನ್, ವಿಜಯನಗರಂ, ಚೀನಾ ದೇಶಂ, ವಿಪಲ್ವಮತ ಪ್ರಚಾರಂ ಭಾರತ ವರ್ಷಂ, ದಾರಿದ್ರ್ಯಂ, ಶ್ರೀರಾಮಕೃಷ್ಣ ಪರಮಹಂಸನ್ ಹೀಗೆ ಸಾಗುತ್ತಿರಲು ರುದ್ರನು ಕೃಷ್ಣನಿಗೆ ನಮಸ್ಕರಿಸುವನು. ನಡುವೆ ಇಂಟರವೆಲ್‍ನ ಹಾಗೆ ನಿಲ್ಲಿಸಿ ಮತ್ತೇ ಮುಂದುವರೆಸುತ್ತಾನೆ. ಸ್ವತಂತ್ರ ಭಾರತಂ, ಸರ್ವಪ್ರಜಾಧಿಪತ್ಯಂ, ಮಾನವ ಸಂಸಾರಂ, ಸತಿಪತಿಗಳ ಶೃಂಗಾರಂ, ಮಕ್ಕಳಾಟಂ, ನೋಟಂ, ಕಾವ್ಯಂ, ಸುಮಧುರಂ, ದಿವ್ಯಂ…ಸುಶ್ರಾವ್ಯಂ!’ ಎಂಬಲ್ಲಿಗೆ ದೃಶ್ಯ ಮಾಯವಾಗುತ್ತದೆ. ಇಲ್ಲಿ ಶ್ರೀಕೃಷ್ಣನ ಸೃಷ್ಟಿಕಾರ್ಯದ ದಿಗ್ದರ್ಶನ, ರುದ್ರ-ಕೃಷ್ಣರ ಸಮ್ಮಿಳಿತ, ಲಯಮೂರ್ತಿ ಮತ್ತು ಸೃಷ್ಟಿಮೂರ್ತಿಗಳ ಮಿಶ್ರಣದ ನಗು ಶ್ಮಶಾನ ಮೌನದ ಗರ್ಭದಾಳದಿಂದ ಹೊರಹೊಮ್ಮಿ ವಿಶ್ವವ್ಯಾಪಿಯಾಗುತ್ತದೆ. ಹೇಳಿ ಮುಗಿಸಲಾರದಂತಹ ದೈವೀಕಲ್ಪನೆಯ ತಾತ್ವಿಕ ತಳಹದಿಯ ಮಹಾಪ್ರತಿಮೆಯು ರಂಗಕೃತಿಗೆ ವಿಶಾಲತೆಯನ್ನು ತಂದು ಕೊಟ್ಟಿದೆಯೆಂದರೆ ತಪ್ಪಾಗಲಾರದು. ಈಗಾಗಲೇ ನಾಡಿನ ಹಲವಾರು ನಾಟಕಕಂಪನಿಗಳು/ತಂಡಗಳು, ಹಲವಾರು ರಂಗನಿರ್ದೇಶಕರ ನಿರ್ದೇಶನದಲ್ಲಿ ವಿಭಿನ್ನ ರೀತಿಯಲ್ಲಿ ರಂಗಸ್ಥಳದಲ್ಲಿ ಪ್ರಯೋಗಗೊಂಡಿರುವ ಈ ರಂಗಕೃತಿಯು ಈಗ್ಗೆ ಕೆಲವರ್ಷಗಳ ಹಿಂದೆ ಧಾರವಾಡದ ಕರ್ನಾಟಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಭಿನಯಿಸಿದ ಈ ನಾಟಕದ ಅಂತ್ಯವನ್ನು ನಾಟಕದ ನಿರ್ದೇಶಕರು, ನಾಟಕ ಪ್ರಯೋಗದ ಕೊನೆಯಲ್ಲಿ ರುದ್ರನು ಮಹಾಭಾರತದ ಪ್ರತಿಯೊಂದು ಪಾತ್ರವನ್ನು ರಂಗಸ್ಥಳಕ್ಕೆ ಕರೆಯುವಂತೆ ಮಾಡುವುದರೊಂದಿಗೆ ಪಾತ್ರ ಮತ್ತು ಪಾತ್ರಧಾರಿಗಳ ಪರಿಚಯವನ್ನು ಮಾಡಿಸಿ ಪ್ರೇಕ್ಷಕರಲ್ಲಿ ಪುಳಕವನ್ನುಂಟು ಮಾಡಿದ್ದರು. ಆಗಿನ ಸಮಯದಲ್ಲಿ ಈ ರಂಗಕೃತಿಯು ಕರ್ನಾಟಕ ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪಠ್ಯವಾಗಿತ್ತು. ಈ ರಂಗಪ್ರಯೋಗ ನೋಡಿ ಎಷ್ಟೋ ವಿದ್ಯಾರ್ಥಿಗಳು ಪಠ್ಯವನ್ನು ಓದದೇ, ನಾಟಕಪ್ರಯೋಗ ನೋಡಿ ನೇರವಾಗಿ ಪರೀಕ್ಷೆ ಬರೆದು ಹೆಚ್ಚಿನ ಅಂಕ ಗಳಿಸಿರುವುದನ್ನು ಹಳೆಯ ವಿದ್ಯಾರ್ಥಿಗಳಿಂದ ಕೇಳಿದಾಗ ಮಹಾಕವಿ ಕುವೆಂಪುರವರ ರಂಗಸಾಹಿತ್ಯದ ಶಕ್ತಿ ಏನೆಂಬುದು ಅರಿವಾಗದೇ ಇರಲಾರದು. 
 
(…ಮುಂದುವರೆಯುತ್ತದೆ)
 
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
gaviswamy
11 years ago

ಚೆನ್ನಾಗಿದೆ ಸಾರ್.

ಧುರ್ಯೋಧನ ಕರ್ಣರ ಆ ಅಮರ ಸ್ನೇಹದ ಮುಂದೆ ಮಹಾಮಹಿಮ ಶ್ರೀಕೃಷ್ಣನೂ ಕುಬ್ಜನಂತೆ ಕಾಣುತ್ತಾನೆ.

ಹಿಪ್ಪರಗಿ ಸಿದ್ದರಾಮ್, ಧಾರವಾಡ
ಹಿಪ್ಪರಗಿ ಸಿದ್ದರಾಮ್, ಧಾರವಾಡ
11 years ago
Reply to  gaviswamy

ನಿಜ ಸರ್, ಅಂತಹ ಕಥಾನಕವನ್ನು ಮಹಾಕವಿಗಳು ಕಟ್ಟಿಕೊಡುವ ರೀತಿ ಅನನ್ಯ….ಅಲ್ವಾ?

Jyaprakash abbigeri
Jyaprakash abbigeri
11 years ago

ಸಿದ್ದರಾಮ್, ಬರು-ಬರುತ್ತಾ ನಿಮ್ಮ ಬರಹದಲ್ಲಿ ಗುಣಮಟ್ಟವನ್ನು ನಿರೀಕ್ಷಿಸುವ ಹಾಗೆ ಬರೆಯುತ್ತಿದ್ದೀರಿ…ಸಂತೋಷ…

Hipparagi Siddaram
Hipparagi Siddaram
11 years ago

ಧನ್ಯವಾದಗಳು…ಸರ್…ಶುಭದಿನ !

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
11 years ago

ಸುಧೀರ್ಘವಾದ ವಿಷ್ಲೇಶಣೆಯೊಂದಿಗೆ ಚೊಕ್ಕ ವಿಮರ್ಶೆಯನ್ನೂ ನಡೆಸುತ್ತಾ ನಾಟಕರಂಗ-ಚಿತ್ರಣವನ್ನು ಕಟ್ಟಿಕೊಡುತಿದ್ದೀರಿ. ಧನ್ಯವಾದಗಳು ಸರ್.

Hipparagi Siddaram
Hipparagi Siddaram
11 years ago

………..ಪ್ರಯತ್ನಿಸುತ್ತಿದ್ದೇನೆ… ಸಂಪೂರ್ಣವಾಗಿ ಓದಿ ಪ್ರತಿಕ್ರಿಯಿಸಿದ ನಿಮಗೂ ಸಹ ಅನಂತ ಧನ್ಯವಾದಗಳು….ದಿವ್ಯಾ ಮೇಡಮ್.ಜಿ…ಶುಭದಿನ !

6
0
Would love your thoughts, please comment.x
()
x