ಹೆಣ್ಣಿನ ಆತ್ಮವಿಶ್ವಾಸ, ಛಲ ಮತ್ತು ಅಸಾಧ್ಯವಾದುದನ್ನು ಸಾಧ್ಯಮಾಡುವ ಶಕ್ತಿಯ ದ್ಯೋತಕವಾದ ಮಹಾಕವಿ ಕುವೆಂಪುರವರ ‘ಯಮನ ಸೋಲು’ ರಂಗಕೃತಿಯಲ್ಲಿ ಪ್ರೇಮಾನುರಾಗವು ಧರ್ಮವನ್ನು ಮೀರಿದುದು ಎಂಬ ಮಾತನ್ನು ಸಾಧಿಸುವುದರೊಂದಿಗೆ ಪ್ರೇಮಮಯಿಯಾದ ಸಾವಿತ್ರಿಗೆ ಯಮರಾಯನು ಸೋತಿದ್ದು ಆಶ್ಚರ್ಯಕರ ಸಂಗತಿಯಲ್ಲ ಎನ್ನುವ ಆಶಾಭಾವದ ನುಡಿಯೊಂದಿಗೆ, ಇಲ್ಲಿ ಯಮರಾಯನ ಸೋಲು ಹೆಣ್ಣಿನ ಆತ್ಮವಿಶ್ವಾಸದ ಮೂಲಕ ಸಾಧ್ಯ ಎಂಬ ವಿಚಾರವನ್ನು ಮಹಾಕವಿಗಳು ಪ್ರಸ್ತುತಪಡಿಸಿರುವುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ. ಈಗ ಮಹಾಕವಿಗಳ ರಂಗಯಾತ್ರೆಯಲ್ಲಿಯ ಮತ್ತೊಂದು ಪೌರಾಣಿಕ ರಂಗಕುಸುಮ ಮತ್ತು ಕಳೆದ ಶತಮಾನದಲ್ಲಿ ಅನೇಕ ವೃತ್ತಿನಾಟಕ ಕಂಪನಿಯ ನಾಟಕರಚನಾಕಾರರಿಗೆ ಸ್ಪೂರ್ತಿಯನ್ನು ನೀಡಿದಂತಹ ಅಪೂರ್ವ ಮತ್ತು ಅಪರೂಪದ ರಂಗಕಲಾಕೃತಿ ‘ಶ್ಮಶಾನ ಕುರುಕ್ಷೇತ್ರಂ’ ಕುರಿತಾಗಿ ನೋಡೋಣ.
ಶ್ಮಶಾನ ಕುರುಕ್ಷೇತ್ರಂ (1931) :
ಮಹಾಕವಿ ಕುವೆಂಪುರವರು ಯುಗದ ಮಹಾನ್ ಮೇಧಾವಿ ಎಂಬ ವಿಚಾರ ಕರುನಾಡಿನ ಎಲ್ಲರ ಮನೆ-ಮನಗಳಲ್ಲಿ ಅವರು ಬದುಕಿರುವಾಗಲೇ ಶಾಶ್ವತ ಸ್ಥಾನ ಪಡೆದ ಮಹಾನುಭಾವಿಗಳು. ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳಲ್ಲಿನ ಪಾತ್ರಗಳು ಅವರ ಸೃಜನಶೀಲತೆಯ ಪ್ರತಿಭಾ ಮೂಸೆಯಲ್ಲಿ ನವ-ನವೀನ ಪೋಷಾಕು ತೊಟ್ಟು ವಿಚಾರಬಿಂಬಿತಗೊಂಡಿದ್ದು ಕನ್ನಡ ಸಾರಸ್ವತ ಲೋಕದ ಸುಧೈವವೇ ಸರಿ. ಪೌರಾಣಿಕ ಪಾತ್ರಗಳ ವೀರರಸಪ್ರಧಾನ ಸಂಭಾಷಣೆ ಶೈಲಿ, ಘನಗಾಂಭೀರ್ಯ, ಧೀರೋದಾತ್ತತೆ ಮತ್ತು ಮಣ್ಣಿನ ಸಂಸ್ಕøತಿಯ ಮಾನವೀಯತೆಯ ಮನೋಭಾವದೊಂದಿಗೆ ಲೋಕದಿವ್ಯವಾಗಿ ಬೆಳಗಿದವು. ಆ ಲೋಕದಿವ್ಯದ ಬೆಳಗು ನನ್ನಂಥಹ ರಂಗಪೀಪಾಸು, ರಂಗಾಸಕ್ತನಿಗೆ ಕಾಡಿದಂತೆ ಬಹುಷಃ ಶತ-ಶತಮಾನಗಳ ಕಾಲ ಕರುನಾಡಿಗೆ ಕಾಡದಿರಲಾರದು ಎಂದು ಹೇಳುವುದಕ್ಕಿಂತ ಕನ್ನಡವೆಂಬ ಕಸ್ತೂರಿ ಸುವಾಸನೆ ಈ ಭೂಮಂಡಲದಲ್ಲಿರುವ ತನಕ ಅವರು ಅಜರಾಮರವಾಗಿರುತ್ತಾರೆನ್ನುವ ಮಾತು ಸೂರ್ಯನ ಪ್ರಭೆಯಷ್ಟೇ ಸತ್ಯ. ಮಹಾಕವಿಗಳ ಮತ್ತೊಂದು ಮಹತ್ತರವಾದ ಮತ್ತು ಶ್ರೇಷ್ಟವಾದ ನಾಟಕಗಳಲ್ಲಿಯೇ ದ್ವಿತೀಯ ಸ್ಥಾನವನ್ನು ಪಡೆದುಕೊಳ್ಳುವ “ಶ್ಮಶಾನ ಕುರುಕ್ಷೇತ್ರಂ” ರಂಗಕೃತಿಯು ಯುದ್ಧದ ದುರಂತತೆ, ಅನ್ಯಾಯ, ಕ್ರೌರ್ಯ, ವಿನಾಶ, ಅವಿವೇಕ, ವಿಧಿ, ವಿಫಲತೆ, ಸಂಸ್ಕøತಿಯ ಸಾವು ಇವುಗಳನ್ನು ಪ್ರತಿಮಾ ದೃಷ್ಟಿಯಿಂದ ನೋಡುವ ಪೌರಾಣಿಕ ಮಹಾಕಾವ್ಯವಾದ ಮಹಾಭಾರತದ ವಸ್ತುವಾಧಾರಿತ ಹತ್ತು ದೃಶ್ಯಗಳ ನಾಟಕ. ಕಥಾಹಿನ್ನಲೆ ಮತ್ತು ವ್ಯಾಪ್ತಿಗಳೆರಡೂ ವಿಸ್ತಾರದಲ್ಲಿ ಹಿರಿದಾಗಿವೆ. ಯಾಕಂದರೆ ಮಹಾಕವಿಗಳ ಉಳಿದ ನಾಟಕಗಳನ್ನು ಹೊರತು ಪಡಿಸಿ ನೋಡಿದರೆ ಇಲ್ಲಿ ಪಾತ್ರಗಳು ಇಪ್ಪತೈದಕ್ಕಿಂತಲೂ ಹೆಚ್ಚಾಗಿವೆ ಮತ್ತು ಆ ಎಲ್ಲಾ ಪಾತ್ರಗಳ ಪೋಷಣೆ, ನಾಟಕದ ಮುಖ್ಯ ಉದ್ದೇಶದ ಕಡೆಗೆ ಕರೆದೊಯ್ಯುವ ರೀತಿ ಅದ್ಭುತವಾಗಿ ಕಂಡು ಬರುವುದರೊಂದಿಗೆ ಹೆಚ್ಚು ವಿಷಯಗಳು ರಂಗದಲ್ಲಿ ಮಂಡನೆಯಾಗುತ್ತವೆ ಮತ್ತು ಚರ್ಚೆಗೊಳಗಾಗುತ್ತವೆ. ವಿನಾಶದ ಗರ್ಭದಲ್ಲಿಯೇ ವಿನೂತನ ಸೃಷ್ಟಿಯ ಬೀಜಮಂತ್ರ ಅಡಗಿದೆ ಎನ್ನುವ ವಿಚಾರವನ್ನು ಪರಿಣಾಮಕಾರಿಯಾಗಿ ನಾಟಕಕಾರರು ಹೇಳಿದ್ದಾರೆ. ರಂಗಕೃತಿಯ ಆರಂಭಿಕ ಮತ್ತು ಮುಕ್ತಾಯದ ದೃಶ್ಯಾವಳಿಗಳು ಕಟ್ಟಿಕೊಡುವ ರಂಗಪ್ರತಿಮೆಗಳು ಉನ್ನತಮಟ್ಟದಲ್ಲಿವೆ. ಈ ರಂಗಕೃತಿಯು ರಾಮಮೋಹನ ಕಂಪೆನಿ, ಬೆಂಗಳೂರು ಪ್ರಕಾಶನದವರ ಮೂರು ನಾಟಕಗಳ ಸಂಪುಟದಲ್ಲಿ 1931ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿತು. ಈ ಕೃತಿಯ ಇತ್ತೀಚಿನ ಆವೃತ್ತಿಯನ್ನು ಮೈಸೂರಿನ ಉದಯರವಿ ಪ್ರಕಾಶನದಲ್ಲಿ ಪ್ರಕಟಿಸಲಾಗಿದೆ.
ಸದರಿ ಕೃತಿಯ ರಚನೆ ಮತ್ತು ಪ್ರಕಟಗೊಂಡ ಕಾಲಮಾನವನ್ನು ಅವಲೋಕಿಸಿ ಹೇಳುವುದಾದರೆ, ಮೊದಲನೆಯ ಜಾಗತಿಕ ಯುದ್ಧ ನಡೆದು ಅದರ ಘೋರ ದುರಂತದ ಪರಿಣಾಮಗಳು ವಿಶ್ವದ ಮೂಲೆ-ಮೂಲೆಗಳನ್ನು ಕಾಡುತ್ತಿದ್ದಂತಹ ಸಂದರ್ಭ. ಅದರ ನಂತರವೂ ನಡೆದ ಹಲವಾರು ಸಣ್ಣ-ಪುಟ್ಟ ಯುದ್ಧಗಳು ನೂರಾರು ಕಡೆಗಳಲ್ಲಿ ನಡೆಯುತ್ತಿರುವುದರಿಂದ ಜನಸಾಮಾನ್ಯರ ದೈನಂದಿನ ಜೀವನವನ್ನು ಭಯ, ಆತಂಕ, ತಲ್ಲಣ, ನೋವುಗಳಲ್ಲಿ ಮುಳುಗಿಸಿದೆ. ಆದ್ದರಿಂದಲೇ ಯುದ್ಧಕ್ಕೆ ಕಾರಣಗಳು, ಮಾನವನ ದುರಾಶೆ, ಸ್ವಾರ್ಥವು ಕೆಲಸ ಮಾಡುವ ವಿಧಾನಗಳು ಮಹಾಭಾರತವೆಂಬ ಕಥಾಸರಿತ್ಸಾಗರದಲ್ಲಿ ಇಂದಿಗೂ ವಿವಿಧ ಸಾಹಿತ್ಯ ಪ್ರಕಾರಗಳ ಮೂಲಕ ಕಾಣಿಸಿಕೊಳ್ಳುತ್ತಿವೆ. ಇಲ್ಲಿ ಮಹಾಭಾರತ ಕಾವ್ಯದ ಕ್ಲೈಮಾಕ್ಸ್ ಅಥವಾ ಅಂತಿಮ ಘಟ್ಟ ಅಂದರೆ ಕುರುಕ್ಷೇತ್ರದ ರಣಾಂಗಣ, ಸುಮಾರು ಹದಿನೆಂಟು ದಿನಗಳ ಕಾಲ ಹೋರಾಟ ನಡೆದು ಕೋಲಾಹಲದೊಂದಿಗೆ ಕುತೂಹಲವನ್ನುಂಟು ಮಾಡಿರುವ ಘೋರ ಸಮರದ ಕೊನೆಯ ರಾತ್ರಿ. ವೀರಾಧಿವೀರರೆಲ್ಲಾ ತಮ್ಮ ಸೈನ್ಯದೊಂದಿಗೆ ದೂಳಿಪಟವಾದ ಸಂದರ್ಭದಲ್ಲಿ ಶ್ಮಶಾನದಂತೆ ಕಾಣುವ ಕುರುಕ್ಷೇತ್ರದ ಯುದ್ಧಭೂಮಿಯ ರುದ್ರಭೀಕರ ವರ್ಣನೆಯು ದ್ವಾಪರ ಮತ್ತು ಕಲಿ ಪಾತ್ರಗಳ ಮದ್ಯದಲ್ಲಿ ಸಂವಾದವಾಗಿ ಇಂದಿನ ಕಾಲದಲ್ಲಿ ಅಂದರೆ ಜಾಗತೀಕರಣೋತ್ತರ ಸನ್ನಿವೇಶದಲ್ಲಿಯೂ ಅನುಸಂಧಾನ ಮಾಡುವಿಕೆಯು ಕುತೂಹಲ ಮೂಡಿಸುತ್ತಾ ನಾಟಕ ಆರಂಭವಾಗುತ್ತದೆ.
ದೃಶ್ಯದ ಆರಂಭಕ್ಕೆ ಸಂಪೂರ್ಣ ವಿವರಣೆಯನ್ನು ಕೊಡುವ ಮಹಾಕವಿಗಳು ಓದುಗನ ಮನದಲ್ಲಿ ರಣಭೂಮಿಯ ಕಾಲ್ಪನಿಕ ಚಿತ್ರ ಕಟ್ಟಿಕೊಡುತ್ತಾರೆ. ತನ್ನ ಯುಗಾಂತ್ಯ ಕಾಲದ ಬೇಸರಿಕೆಯಲ್ಲಿರುವ ದ್ವಾಪರದೇವನು ತನ್ನ ಯುಗದ ಕುರಿತು ವಿವರವಾಗಿ ಸ್ವಗತದಲ್ಲಿ ಹೇಳಿಕೊಳ್ಳುವ ದೊಡ್ಡ ಸಂಭಾಷಣೆಯು ಅಭಿನಯಿಸುವ ನಟರಿಗೆ ನಿಜವಾಗಿಯೂ ನೆನಪಿನ ಶಕ್ತಿಗೆ ಸ್ಪರ್ಧೆಯೊಡ್ಡುವಂತಿದೆ. ಎರಡೂ ಯುಗಶಕ್ತಿಗಳಿಗೆ ಒಂದೊಂದು ರೂಪವನ್ನಿತ್ತು ರಂಗದಲ್ಲಿ ತಂದಿರುವುದು ಮಹಾಕವಿಗಳ ಕಲ್ಪನಾಶಕ್ತಿಯ ಉತ್ಕøಷ್ಟತೆಗೆ ಉದಾಹರಣೆಯಾಗಿದೆ. ಇಲ್ಲಿ ಅಧಿಕಾರವನ್ನು ಗೌರವಾನ್ವಿತ ವ್ಯಕ್ತಿತ್ವದ ದ್ವಾಪರದೇವನು ತನ್ನ ಗಂಭೀರತೆಯಲಿ ಕಲಿಪುರುಷನಿಗೆ ಬಿಟ್ಟುಕೊಡುವ ಸಾಂಕೇತಿಕ ದೃಶ್ಯವಿದಾಗಿದೆ. ಅಧಿಕಾರ ಬಿಟ್ಟುಕೊಡುವ ಮುನ್ನ ಕೊನೆಯ ಮಾತುಗಳೆಂಬಂತೆ ತನ್ನ ಯುಗದಲ್ಲಿಯ ವಾಯುಜವಾಣಿ, ಸರ್ಪಕೇತನನ ಹರಿಕಂಠ, ಗಾಂಡೀವಧ್ವನಿ, ಪಾಂಚಜನ್ಯಗಳನ್ನು ಮತ್ತು ಅಳಿದು ಹೋದ ಮಹಾನ್ ವ್ಯಕ್ತಿತ್ವಗಳನ್ನು ಸ್ಮರಿಸಿಕೊಳ್ಳುತ್ತಾನೆ.
ಎನ್ನಾಳ್ವಿಕೆಯ ತುತ್ತತುದಿಯೋಳೆ ವೀರಾತ್ಮರ್
ಎನಿತಳಿದು ಪೋಗಿಹರ್ ? ಶಿವಶಿವಾ, ಮಸಣಮೆನಗೆ
ಈ ಚರಮ ಸೋಪಾನಮಾದುದೆ? – ನೆತ್ತರಲಿ
ಕಾಲ್ದೊಳೆಯುವಂತಾಯ್ತೆ ತಿರೆಯನಗಲುವ ಮುನ್ನಂ !
ಚಲದಂಕಮಲ್ಲರೆನಿತಳಿದಿಹರ್ ? ಪುಣ್ಯಾತ್ಮರ್
ಎನಿತಳಿದಿಹರ್ ? ತರುಣನಿಬರ್ ಮಡಿದಿಹರ್ ?
ದ್ವಾಪರಯುಗದ ಮಹಾವ್ಯಕ್ತಿಗಳ್ : ಆಚಾರ್ಯ
ಭೀಷ್ಮನ್, ಕರ್ಣನ್, ಅಭಿಮನ್ಯು
ಮಹಾವೀರರನಿಬರುಂ ಸಮರ ಹುತವಹನಿಂದ
ಬೇಳ್ದ ಕಂಗೊಳಿನೊಲ್ ಬುದಿಯಾಗಿರ್ಪರ್.
ಎಂದು ನಿಟ್ಟುಸಿರಿನೊಂದಿಗೆ ದುಃಖ ಉಮ್ಮಳಿಸಿ ಬರುತ್ತದೆ. ಆಗ ಪ್ರವೇಶಿಸುವ ಕಲಿಪುರುಷನ ಮಾತುಗಳನ್ನು ಕೇಳಿಸದಷ್ಟು ಅಂತರ್ಮುಖಿಯಾಗಿರುತ್ತಾನೆ. ಕಲಿಪುರುಷ ಎಚ್ಚರಿಸಿ, ಸಮಾಧಾನದ ಮಾತುಗಳನ್ನಾಡುತ್ತಾನೆ. ಸಮಾಧಾನಗೊಳ್ಳದ ದ್ವಾಪರದೇವನು
……………………………………….ಎನಿತೆನಿತೊ
ಬರಿಸಗಳ ಗೆಯ್ಮೆಯಿಂ ಗಳಿಸಿರ್ದ ಸಂಸ್ಕೃತಿಯ
ಚೆಲ್ವಿಕೆ ತುತ್ತತುದಿಯಲಿ ಪುಚ್ಚಳಿದು ಪೋಯ್ತೆ?
ನಿನಗೆನ್ನ ಕಾಲಸಾಮ್ರಾಜ್ಯಮಂ ಮರಳೀವ
ಸಮಯದಲಿ, ಆವ ಪೆರ್ಮೆಯೊಳಾವ ಮೆಚ್ಚುಗೆಯ
ವಸ್ತುವನ್ ಎನ್ನಕೃತಿ ಎಂದಾನು ತೋರಿಸಲಿ?
ಎಂದು ದುಃಖಪಡುತ್ತಾನೆ. ಇದಕ್ಕಾಗಿ ದುಃಖಪಡುವುದು ಅನುಚಿತವೆಂದು, ಶಾಶ್ವತ ಶಕ್ತಿಯೊಂದು ಈ ವಿಶ್ವವನ್ನು ತನ್ನಲ್ಲಿ ವಿಲೀನಮಾಡಿಕೊಳ್ಳುವುದರೊಂದಿಗೆ ವ್ಯಕ್ತಪಡಿಸುತ್ತದೆ ಎಂಬುದು ಕಲಿಪುರುಷನ ಸಮಾಧಾನಕರ ಉತ್ತರ.
…..ರಸಪೂರ್ಣ ಶೂನ್ಯದಿಂದೊಗೆತಂದುದೀ
ವಿಶ್ವಂ ; ಅದರೊಳೆ ವಿಲೀನಮಾಗಡಗುವುದು ತಾನ್.
ಆದೊಡೆನ್ ? ಮರಳಿ ಬೇರೊಂದಾಕೃತಿಯ ತಳೆದು,
ಬೇರೊಂಧು ಕಟ್ಟಳೆಗೆ ತಲೆಬಾಗಿ, ಬೇರೊಂದು
ಕಾಳದಲಿ ಮೂಡುವುದು, ಲೀಲೆಯೆಂಬುವುದೆಲ್ಲ
ಮುಡುವುದು ಮುಳುಗುವುದರಲ್ಲಿಹುದು, ಅದಕೇಕೆ
ಮರುಗುವುದು?
ಎಂದು ಸಮಾಧಾನಿಸುತ್ತಾನೆ. ಆದರೂ ದ್ವಪರನಿಗೆ ಸಂದೇಹ ಬಂದು ತನ್ನಾಳಿಕೆಯ ಯುಗದಲ್ಲಿ ಹುಟ್ಟಿದ ವೀರರು ಮತ್ತೆ ಹುಟ್ಟುವರೇ? ಎಂದು ಕೇಳುವ ದ್ವಾಪರದೇವನಿಗೆ, ‘ಅವರನ್ನೂ ಮೀರಿಸುವ ದೀರ್ಘದೇಹಿಗಳು ತಮ್ಮ ಪೂರ್ವಜರ ಭುಜದ ಮೇಲೇರಿ ನಿಂತು ಅವರಿಗಿಂತಲೂ ಎತ್ತರದ ದೃಷ್ಟಿಯನ್ನು ಪಡೆಯುವರು ನನ್ನ ಯುಗದಲ್ಲಿ’ ಎಂದು ಹೇಳುವ ಕಲಿಪುರುಷನು ‘ಸಾವೆ ಹೊಸಬಾಳಿಗಾಧಾರಮಾಗಿರ್ಪುದು, ನಾಶಮೇ ನವಸೃಷ್ಟಿಗುತ್ಸಾಹಮಾದಪುದು !’ ಎಂದು ಮುಂದುವರೆಸುತ್ತಾ ‘ಪೂರ್ವಯುಗದನುಭವದ ತಳಹದಿಯ ಮೇಲೆಯೇ ಬರುವ ಕಾಲದ ಭವ್ಯಮಂದಿರವ ನಿರ್ಮಿಪೆನ್’ ಎಂಬ ಉತ್ಸಾಹದ ನುಡಿಗೆ ಸಂತಸಗೊಳ್ಳುವ ದ್ವಾಪರದೇವ ತನ್ನ ಯುಗಾಂತ್ಯದ ಕಿರೀಟವೆಂಬ ಅಧಿಕಾರವನ್ನು ಕಲಿಪುರುಷನಿಗೆ ತೊಡಿಸುವುದರೊಂದಿಗೆ ವಹಿಸಿಕೊಡುವುದರೊಂದಿಗೆ ನವಯುಗ ನವಚಕ್ರವರ್ತಿ ಕಲಿದೇವನಿಗೆ ಮಂಗಳ ಕೋರುತ್ತಾನೆ.
ಸಾಂಕೇತಿಕವಾದ ಈ ದೃಶ್ಯದ ಮೂಲಕ ಮಹಾಕವಿಗಳು ವಿವರಿಸುವಂತೆ, ಯುಗ-ಯುಗಗಳನ್ನು ದಾಟಿ ಬಂದಂತೆ ಧರ್ಮಗ್ಲಾನಿಯಾಗುತ್ತಾ ಬಂದು ಕಲಿಯುಗದಲ್ಲಿ ಒಂದೇ ಕಾಲಿನಲ್ಲಿ ಕುಂಟುತ್ತಾ ಸಾಗುತ್ತದೆ ಎಂಬ ಇತರರ ನಿರಾಶೆಯ ಮಾತುಗಳಿಗೆ ಇಲ್ಲಿ ಸಮರ್ಥವಾಗಿ ನಿರಾಕರಣೆಯನ್ನು ಕಲಿದೇವನೆಂಬ ಪಾತ್ರದ ಮೂಲಕ ವ್ಯಕ್ತಪಡಿಸಿದ್ದಾರೆ. ನಿಜವಾಗಿ ನೋಡಿದರೆ ಧರ್ಮವೆಂಬುದು ಯುಗದಿಂದ ಯುಗಕ್ಕೆ ಬೆಳೆಯುತ್ತ ನಡೆದಿದೆ. ಹಿಂದಿನವರ ಅನುಭವಾಮೃತದ ಮಾರ್ಗದರ್ಶನದಂತೆ ಅದಕ್ಕಿಂತಲೂ ಹೆಚ್ಚಿನ ಎತ್ತರಕ್ಕೇರುವಂತಹ ವಿಕಾಸ ಅಥವಾ ಅಭಿವೃದ್ಧಿಯೆಂಬ ಮಹಾಮಂತ್ರದ ಮೂಲಕ ಸೃಷ್ಟಿಕಾರ್ಯ ನಡೆಯುತ್ತಿದೆ. ಸೃಷ್ಟಿಯಲ್ಲಿ ವಿಫಲತೆಯೆಂಬುದಿಲ್ಲ ; ಇಂದಿನ ವಿಫಲತೆ ಮುಂದಿನ ಸಫಲತೆಗೆ ನಾಂದಿ ಮತ್ತು ಜಗದ ಪೂರ್ಣತ್ವದ ವಿಚಾರಧಾರೆಯನ್ನು ಕಲಿಪುರುಷ ಮತ್ತು ದ್ವಾಪರದೇವನ ನಡುವಿನ ಸಂಭಾಷಣೆಯಲ್ಲಿ ಮನಮುಟ್ಟುವಂತೆ ಮಹಾಕವಿಗಳು ಸಾರ್ವಕಾಲಿಕವಾಗಿರುವಂತೆ ಚರ್ಚಿಸಿದ್ದಾರೆ.
ಪ್ರಸ್ತುತ ನಾಟಕದ ಎಲ್ಲಾ ದೃಶ್ಯಾವಳಿಗಳು/ಘಟನೆಗಳು ಕುರುಕ್ಷೇತ್ರದಲ್ಲಿ ಒಂದೇ ರಾತ್ರಿಯಲ್ಲಿ ವಿವಿಧ ಭಾಗಗಳಲ್ಲಿ ನಡೆಯುತ್ತವೆ. ಅಚ್ಚರಿಯಂತಹ ಏಕತೆಯ ಗುಣ ಈ ನಾಟಕದಲ್ಲಿ ಅಂತರಿಕವಾಗಿ ಪ್ರವಹಿಸುತ್ತದೆ. ಇದ್ದೊಬ್ಬ ಮಗನ ಸಾವಿನಿಂದಾಗಿ ಕಂಗೆಟ್ಟು ಆತನ ಶವವನ್ನು ಹುಡುಕುವ ಮುದುಕಿಯಿಂದ ಆರಂಭವಾಗಿ ರಾಜಮಾತೆ ಕುಂತಿಯವರೆಗೂ ಎಲ್ಲ ವರ್ಗದ ಜನರು ರಣಭೂಮಿಯಲ್ಲಿ ತಮಗೆ ಬೇಕಾದವರ ಶವಗಳಿಗಾಗಿ ಹುಡುಕಾಡುವ ಸನ್ನಿವೇಶವು ಘನಘೋರ ಯುದ್ಧದ ನಂತರ ರಣಭೂಮಿಯೆಂಬುದು ಹೇಗೆ ಶ್ಮಶಾನವಾಗಿರುತ್ತದೆಂಬುದನ್ನು ಒಂದು ರಾತ್ರಿಯ ಸಂದರ್ಭವನ್ನು ಕಟ್ಟಿಕೊಡುವ ಮಹಾಕವಿಗಳು ರಾಜಧರ್ಮವೆಂಬುದರ ಕಠೋರತೆಯು ತಂದೊಡ್ಡುವ ವಿನಾಶವನ್ನು ಮನಮಿಡಿಯುವಂತಾಗಿಸಿದ್ದಾರೆ.
ಗೀರ್ವಾಣ, ನೀಲಾಕ್ಷ ಮತ್ತು ಚಾಣೂರನೆಂಬ ಮೂರ ಜನ ಕಿಂಕರರು ಪಂಜಿನ ಬೆಳಕಿನಲ್ಲಿ ತಮ್ಮ ಒಡೆಯನಾದ ಕೌರವೇಂದ್ರನನ್ನು ಹುಡುಕುತ್ತಾ ಬರುವುದರೊಂದಿಗೆ ಎರಡನೇಯ ದೃಶ್ಯ ತೆರೆದುಕೊಳ್ಳುತ್ತದೆ. ಅವರ ಮಾತುಗಳಿಂದ ಕೌರವೇಂದ್ರನಾದ ದುರ್ಯೋಧನನ ಕುರಿತಾಗಿ ಭಾರತೀಯರ ಮನದಲ್ಲಿ ಇರುವ ಋಣಾತ್ಮಕ ಅಂಶಗಳು ಹೋಗಲಾಡಿಸಿ ಆತನ ವ್ಯಕ್ತಿತ್ವಕ್ಕೊಂದು ಹೊಳಪು ಬರುವಂತೆ ಮಹಾಕವಿಗಳು ಮಾಡಿರುವುದು ಅವರ ಸೃಜನಶೀಲತೆಗೆ ಹಿಡಿದ ಕನ್ನಡಿಯಾಗಿದೆ. ಇಲ್ಲಿ ನಾಟಕದ ಕೊನೆಯವರೆಗೂ ದುರ್ಯೋಧನನ ಕುರಿತು ವಿಶೇಷ ಮಮಕಾರವನ್ನು ತಾಳುವ ಮಹಾಕವಿ ಕುವೆಂಪುರವರಿಗೆ ಬಹುಷಃ ಕರುನಾಡಿನ ಇನ್ನೊರ್ವ ಮಹಾಕವಿ ರನ್ನನ ಕಾವ್ಯದ (ಮೂಲಕೃತಿಯಾದ ‘ಸಾಹಸಭೀಮ ವಿಜಯಂ’ನ್ನು ರಂಗಕೃತಿಯಾಗಿ ‘ರನ್ನನ ಗದಾಯುದ್ಧ’ ಎಂಬ ಹೆಸರಿನಲ್ಲಿ ಚಿತ್ರದುರ್ಗದ ಸಿ.ಪಿ.ಜ್ಞಾನದೇವ ರೂಪಾಂತರಿಸಿದ್ದಾರೆ. ಇತ್ತೀಚೆಗೆ ಇದರ ರಂಗಪ್ರಯೋಗವನ್ನು ಧಾರವಾಡದಲ್ಲಿ ನಾನು ವೀಕ್ಷಿಸಿದ್ದೇನೆ) ಪ್ರಭಾವ ಹೆಚ್ಚಾಗಿದೆ ಎಂದು ತಿಳಿದು ಬರುತ್ತದೆ. ಮುಂದುವರೆದು ಹೇಳುವುದಾದರೆ ರಂಗಕೃತಿಯ ಕೊನೆಯ ದೃಶ್ಯದಲ್ಲಿ ರುದ್ರನಿಗೆ ಕೃಷ್ಣನು ‘ಕಲಿಯುಗ ಮಹಾಕಾವ್ಯಮನ್ ! ನಾಳೆಯೆ ಪೀಠಿಕಾ ದೃಶ್ಯಾರಂಭಂ’ ಎಂದು ಕಲಿಯುಗದ ಪ್ರಮುಖ ಘಟನಾವಳಿಗಳನ್ನು ವಿವರಿಸುವಾಗ ‘……ಕನ್ನಡದೇಶಂ…ಕವಿರನ್ನನ್…ವಿಜಯನಗರಂ…’ ಎಂದು ವಿಶೇಷವಾಗಿ ರನ್ನನ ಕುರಿತು ಹೇಳಿರುವುದು ಈ ಮಾತಿಗೆ ಪುಷ್ಟಿಕೊಡುವಂತಿದೆ. ಮೂವರು ಕಿಂಕರರ ಮಾತುಗಳಿಂದ ಕೌರವೇಂದ್ರನ ಮಹಾನುಭಾವದ ವ್ಯಕ್ತಿತ್ವ, ಪರಿಜನ ಪ್ರೇಮದೊಂದಿಗೆ ಆತನನ್ನು ಇನ್ನೂ ಎತ್ತರಕ್ಕೇರುವಂತೆ ಚಿತ್ರಿಸಿರುವರು. ‘ಎಮ್ಮೊಡೆಯನನ್ನರ್ ಮತ್ತಾವ ದಾತಾರನಂ ಇನ್ನಿಳೆಯ ಮೇಲಾವು ಕಾಣುವೆನು? ದಯೆಯೊಳಾತಂಗೆ ದೊರೆಯಪ್ಪರಾರಿಹರು? ಡಿಂಗರಿಗರ್ಗೆ ಆತನೊಲು ಕಡುನೇಹಮಂ ತೋರ್ಪ ಚಕ್ರವರ್ತಿಗಳಾರು ಈ ತಿರೆಯೊಳಿರ್ಪರು ?’ ಎಂದು ತನ್ನ ದೊರೆಯ ಕುರಿತಾಗಿ ಗೀರ್ವಾಣನು ನೆನಪಿಸಿಕೊಂಡರೆ, ‘ನಮಗಾತನೇ ತಂದೆಯಾಗಿರ್ದನ್, ಆತನಳಿದ ಬಳಿಕ್ಕ ನಾಮೆಲ್ಲರುಂ ತಿರಿದುಂಬ ದೇಸಿಗರಲ್ತೆ?’ ಎಂದು ನೀಲಾಕ್ಷನು ಹಲುಬುತ್ತಾನೆ. ‘ಹಾ, ತಂದೆ ಎಲ್ಲಿ ನರಳುತ್ತ ಪುಡಿಯೊಳು ಪವಡಿಸಿ ಪೊರಳುತಿಹೆ?’ ಎನ್ನುತ್ತಾ ಚಾಣೂರನು ತನ್ನೊಡೆಯನ ಕುರಿತಾದ ನಲ್ಗತೆ(ಸನ್ನಿವೇಶ)ವೊಂದನ್ನು ವಿವರಿಸುತ್ತಾನೆ. ಚಾಣೂರನಿಗೊಮ್ಮೆ ಮಾರಣಾಂತಿಕ ಕಾಯಿಲೆಯಾದಾಗ ಕೌರವೇಂದ್ರನು ವೇಷ ಮರೆಸಿಕೊಂಡು ಬಂದು ಯೋಗಕ್ಷೇಮ ವಿಚಾರಿಸಿಕೊಂಡಿದ್ದಲ್ಲದೇ ಕಾಯಿಲೆ ವಾಸಿಯಾಗುವಂತೆ ವ್ಯವಸ್ಥೆ ಮಾಡಿಸಿ, ಮತ್ತೆ ಮರುಜನ್ಮ ನೀಡಿದಾತನೆಂದು ಉಪಕಾರ ಸ್ಮರಿಸಿಕೊಳ್ಳುತ್ತಾನೆ. ಎಲ್ಲರೂ ಕೌರವೇಂದ್ರನಿಂದಾದ ಸಹಾಯ-ಉಪಕಾರಗಳನ್ನು ನೆನಪಿಸಿಕೊಳ್ಳುವುದರೊಂದಿಗೆ ಆತನ ಶವವನ್ನು ಹುಡುಕುತ್ತ ಕತ್ತಲಲ್ಲಿ ಮರೆಯಾಗುತ್ತಾರೆ. ಅದೇ ದೃಶ್ಯದಲ್ಲಿ ಮಾತೆಯೊಬ್ಬಳು ಹತ್ತಿಕ್ಕಲಾಗದ ದುಃಖದೊಂದಿಗೆ ತನ್ನ ಚಿಕ್ಕ ಮಗುವನ್ನು ಕಂಕುಳಲ್ಲಿ ಹೊತ್ತುಕೊಂಡು, ಪಾಂಡವ ಪಕ್ಷದಲ್ಲಿದ್ದುಕೊಂಡು ಮಡಿದ ತನ್ನ ಗಂಡನ ಶವವನ್ನು ಹುಡುಕುತ್ತಾ ಬರುತ್ತಾಳೆ. ಜೀವನವೆಂದರೇನೆಂಬುದನ್ನು ಅರಿಯದ ಮುಗ್ದ ಕಂದಮ್ಮನಿಗೆ ಸಾವಿನ ಪರಿಚಯ ಹೇಗೆ ಮಾಡಿಕೊಡಲಿ ಎಂದು ಬಿಕ್ಕುವ ಹೃದಯವಿದ್ರಾವಕ ಚಿತ್ರಣವಿದು.
(ಚಿತ್ರ:ಉಪೇಂದ್ರ ಪ್ರಭು)
ಮೂರನೇಯ ದೃಶ್ಯದಲ್ಲಿ ವಿಕಾರಾಕೃತಿಯ ಮರುಳುಗಳು ಎಂಬ ಎರಡು ಪಾತ್ರಗಳನ್ನು ಸೃಷ್ಟಿಸಿರುವುದರೊಂದಿಗೆ ಮನುಷ್ಯನಲ್ಲಿಯ ದುರುಳತನವನ್ನು ಮಹಾಕವಿಗಳು ಬಹಿರಂಗಗೊಳಿಸಿರುವುದನ್ನು ನಾವು ಅರ್ಥೈಸಿಕೊಳ್ಳಬಹುದು. ಮಾನವರ ಮರುಳುತನದ ಕುರಿತಾಗಿ ಎರಡೂ ಮರುಳುಗಳು ಮಾತನಾಡಿಕೊಳ್ಳುತ್ತಿರುವಾಗಲೇ ಹಣ್ಣು-ಹಣ್ಣು ಮುದುಕಿಯೊಬ್ಬಳು ಕೌರವರ ಪಕ್ಷದಲ್ಲಿ ಕಾಲ್ದಳದಲ್ಲಿದ್ದುಕೊಂಡು ಹೋರಾಡಿ ಮಡಿದ ಮಗನ ಶವವನ್ನು ಹುಡುಕಿಕೊಂಡು ಬರುವುದನ್ನು ಕಂಡು ಮಾಯವಾಗುತ್ತವೆ. ಆಯಾಸಗೊಂಡಿದ್ದಕ್ಕಾಗಿ ಅಸ್ಪಷ್ಟ ಮಾತುಗಳು, ಮುಖದಲ್ಲಿ ನೋವು ಹೊರಹಾಕುತ್ತಾ ಮಡಿದ ಮಗನಿಗಾಗಿ ರೋಧಿಸುತ್ತಾಳೆ. ಈ ದೃಶ್ಯವು ಮಡಿದ ವೀರರ ಸಂಬಂಧಿಕರ ಪ್ರತಿನಿಧಿಯಂತೆ ಮುದುಕಿಯು ಗೋಚರಿಸುತ್ತಾಳೆ. ವಿದುರನೊಂದಿಗೆ ಆಗಮಿಸುವ ಕೃಷ್ಣನು ಕುರುಕ್ಷೇತ್ರ ಶ್ಮಶಾನದಲ್ಲಿ ಸಂಚರಿಸಿ ಸಾಯುವವರಿಗೆ ಮುಕ್ತಿಯ ನೀಡುವ ಮಹಾಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾಗ ಮಾರುವೇಷದ ಕೃಷ್ಣನಿಗೆ ಆ ಮುದುಕಿಯು ತನ್ನ ಮಗ ನಾರಾಯಣನನ್ನು ಎಲ್ಲಿದ್ದಾನೆಂದು ತೋರಿಸುತ್ತಿರಾ? ಎಂದು ಗೋಗರೆಯುತ್ತಾಳೆ. ನಾರಾಯಣನಿರುವ ಜಾಗವನ್ನು ಸೂಚಿಸುವುದರೊಂದಿಗೆ ಅವಳನ್ನು ಹಿಡಿದೆತ್ತಿದಾಗ ಅವಳ ಆಯಾಸವೆಲ್ಲ ಕರಗಿದಂತಾಗುವಂತಹ ಪವಾಡಗಳು ಅಲ್ಲಿ ಜರುಗುತ್ತವೆ. ವಿದುರ ಮತ್ತು ಕೃಷ್ಣ ನಡುವಿನ ಚರ್ಚೆಯು ಬಹಳ ಗಂಭೀರ ಮತ್ತು ಅರ್ಥಪೂರ್ಣವಾಗಿ ನಡೆದು ದೃಶ್ಯ ಮುಕ್ತಾಯವಾಗುತ್ತದೆ.
ಕುರುಕ್ಷೇತ್ರದ ಮತ್ತೊಂದೆಡೆ ನಡೆಯುವ ನಾಲ್ಕನೆಯ ದೃಶ್ಯದಲ್ಲಿ ದೃತರಾಷ್ಟ್ರ-ಗಾಂಧಾರಿ ದಂಪತಿಗಳು ಸಂಜಯನೊಂದಿಗೆ ಗದಾಯುದ್ಧದಲ್ಲಿ ಸೋತ ಕೌರವನನ್ನು ಹುಡುಕುತ್ತಾ ಬರುತ್ತಾರೆ.
ಕಣ್ಗಂ ಮನಕ್ಕಂ ಭಯಂಕರಮಾಗಿರ್ಪುದು
ಈ ಸುಡುಗಾಡ ನೋಟಂ ! ಕಣ್ಗಳಿಲ್ಲದ ನೀನೆ
ಧನ್ಯನಾದಯ್ ಇಂದು, ದೃತರಾಷ್ಟ್ರ ಭೂಮಿಪನೆ.
ಎಂದು ಸಂಜಯನು ಸುಡುಗಾಡಿನಂತಾದ ಭಯಾನಕ ರಣಭೂಮಿಯ ಕುರಿತು ವಿವರಿಸುತ್ತಾನೆ.
ಪುಸಿಯದಿರ್, ಸಂಜಯ.
ಕಣ್ಣರಿಯದಿಹ ನೋವು ಕಿವಿಗಳಿಗೆರಡು ಮಡಿ
ಆದಪುದು. ಓ ವಿಧಿ, ಕುರುಡಿಂಗೇತರ್ಕೆ
ಕಿವುಡುಮಂ ಪೊದ್ರ್ದಿಸದೆ ನೀನೆನ್ನ ಮಾಡಿದಯ್?
ಎನ್ನುವ ದೃತರಾಷ್ಟ್ರನ ದುಃಖದಾಳದಲ್ಲಿಯ ಕರುಣಾಜನಕ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳಬಹುದು. ತನ್ನ ಕರುಳಕುಡಿಗಳನ್ನು ಕಳೆದುಕೊಂಡು ಗೋಳಾಡುತ್ತಿರುವ ಗಾಂಧಾರಿಯನ್ನು ಸಮಾಧಾನಿಸಲು ಸಂಜಯನಿಗೆ ಹೇಗೆ ಸಮಾಧಾನಿಸಬೇಕೆಂಬುದೇ ತಿಳಿಯದಾಗಿದೆ. ಕೌರವ ಸಾಯುವುದಕ್ಕಿಂತ ಮೊದಲು ಆತನೊಂದಿಗೆ ಇವರನ್ನು ಮಾತನಾಡಿಸಬೇಕೆಂದು ಮುಂದೆ ಕರೆದುಕೊಂಡು ಹೋಗುತ್ತಾನೆ. ಅದೇ ದೃಶ್ಯದಲ್ಲಿ ಆಗಮಿಸುವ ಕೌರವೇಂದ್ರನ ಮನದನ್ನೆ ಮಹಾರಾಣಿ ಭಾನುಮತಿ ಹುಚ್ಚಿಯಂತಾಗಿ ಮಿತಿಮಿರಿದ ದುಗುಡದಲ್ಲಿ ಹುಚ್ಚಿಯಂತಾಗಿ ಮುಸುಕು ಹಾಕಿಕೊಂಡು ಶೋಕದಲ್ಲಿ ಸಖಿಯೊಡನೆ ಬರುತ್ತಾಳೆ. ಇಲ್ಲಿ ನಾಟಕಕಾರರು ಭಾನುಮತಿ ಪಾತ್ರದಿಂದ ಯಾವ ಮಾತನ್ನೂ ಆಡಿಸದಿರುವುದು ಅವರ ಸಾಂದರ್ಭಿಕವಾಗಿ ಗಂಭೀರತೆಯ ಕಳೆಕಟ್ಟಿದೆ.
ಘಟೋತ್ಕಚ, ಅಭಿಮನ್ಯುರಂತಹ ನೆಂಟರಿಷ್ಟರ ಹುಡುಕಾಟಕ್ಕಾಗಿ ಬರುವ ಧರ್ಮರಾಯ, ಭೀಮ, ಅರ್ಜುನ, ದ್ರೌಪದಿ ಮೊದಲಾದವರು ಆಗಮಿಸುವುದರೊಂದಿಗೆ ಐದನೇಯ ದೃಶ್ಯವು ಆರಂಭವಾಗುವಾಗ ಅಲ್ಲಿಯ ಶ್ಮಶಾನ ಸದೃಶ್ಯವನ್ನು ಕಂಡು ಧರ್ಮರಾಯನು ದುಃಖ-ಸಂಕಟದಿಂದ ನಿಟ್ಟಿಸಿರೆಳೆಯುತ್ತಾನೆ.
……ಧರ್ಮಂ ಬೇಳ್ದಿರ್ಪ ಅಧರ್ಮದುದ್ಯಾನಂ ;
ಪುಣ್ಯಾಗ್ನಿಗಾಹುತಿಯಾದ ಪಾಪದ ಬೆಳಸು !
ಎಂದು ಭೀಮನು ತನಗೇನು ಇದರಿಂದ ತೊಂದರೆ, ಸಂಕಟ ಯಾವುದೂ ಆಗಿಲ್ಲವೆಂದು ಪರೋಕ್ಷವಾಗಿ ವಿವರಿಸುತ್ತಾನೆ. ಅರ್ಜುನ, ದ್ರೌಪದಿಯರು ಸಹ ಇತನ ಮಾತಿಗೆ ಧನಿಗೂಡಿಸುವರು.
.……ವಿಕಾಸಮಾಗುವುದರೊಳೆ ವಿನಾಶಮೈತಂದಪುದು.
ಬೋಧನೆಯ ಮಾರ್ಗಕ್ಕೆ ಶತಮಾನಗಳೆ ವೇಳ್ಕುಂ ;
ವಿಪ್ಲವದ ಪಥವಿಡಿಯೆ ದಿಮೆರಡೆ ಸಾಲ್ಗುಂ.
ಯುಗಗಳೆದೆಗೆ, ಒರ್ದಿನಂ ಗದೆಗೆ !
ಪದಿನೆಂಟೆ ದಿನಗಳೊಳ್ ಮುಗಿದಿರ್ಪುದೊಂದು
ಕಲ್ಪದ ಕಜ್ಜಂ. ಸಿದ್ಧಿಯಿಂ ಬಹ ಪುಣ್ಯಮೇ ಗಂಗೆ,
ಸಾಧನೆಯ ಪಾಪಕ್ಕೆ !
ಎಂಬ ವೈಚಾರಿಕ ಮನೋಭಾವದವನು ಭೀಮ. ಅದೇ ವೇಳೆಗೆ ರಣರಂಗದಲ್ಲಿ ಬಿದ್ದು ಸಾಯುತ್ತಿರುವ ಅನಾಮಧೇಯ ಸೈನಿಕನೋರ್ವನು ನೀರು ಬೇಕೆಂದು ಕೇಳಿದಾಗ ಧರ್ಮರಾಯನು ಅರ್ಜುನನಿಗೆ ನೀರು ಹೇಳುತ್ತಾನೆ. ಆಗ ಭೀಮನು ‘ಅಗ್ರಜಾ, ಮೊದಲ್ ಅವನಾರವನ್, ಕೇಳದನ್, ನಮ್ಮವನೋ? ಕೌರವನ ಪಡೆಯವನೋ?’ ಎಂದು ಕೇಳಿದಾಗ, ಮಸಣದಲ್ಲಿಯ ಮರಣದೆದುರಿನಲ್ಲಿ ಕರುಣೆ ಇರಬೇಕೆಂದು ಧರ್ಮರಾಯನು ಹೇಳಿದಾಗ ‘ತಾವೆಲ್ಲರುಂ ಮಹಾಕರುಣಿಗಳ್ ! ಸಮರದೊಳ್ ಗದೆಯಂ ಬಿಸುಟ್ಟಾನುಂ ಕರುಣೆಯನ್ ಕೈದುಮಾಡಿರ್ದೊಡೆ ಇವರ್ಗಾವ ಗತಿಯಿತ್ತು?’ ಎಂದು ಅಹಂಕಾರದ ಮಾತನ್ನಾಡುತ್ತಾನೆ. ದೃಶ್ಯದ ಕೊನೆಯಲ್ಲಿ ಅರ್ಜುನ ತಂದ ನೀರನ್ನು ಕುಡಿದು ಸಾಯುವ ಸೈನಿಕನು ಕೌರವೇಂದ್ರನಲ್ಲಿ ತೋರುವ ಸ್ವಾಮಿನಿಷ್ಟೆಯನ್ನು ಮೆಚ್ಚುವುದರಿಂದ ಭೀಮನು ಖಳನಾಯಕನಾಗುವುದನ್ನು ಸ್ವಲ್ಪದರಲ್ಲಿಯೇ ಕುವೆಂಪುರವರು ತಪ್ಪಿಸಿದ್ದಾರೆ.
(ಮುಂದುವರೆಯುವುದು…)
ಇಲ್ಲಿ ನಿಮ್ಮ ಶ್ರಮ ಮತ್ತು ಆಸಕ್ತಿ ಹೆಚ್ಚಿದೆ. ಒಳ್ಳೆಯ ಪ್ರಯತ್ನ ಸರ್. ಖಂಡಿತ ತಾವು ಈ ಲೇಖನಗಳನ್ನು ಪುಸ್ತಕ ರೂಪದಲ್ಲಿ ತರುವ ಪ್ರಯತ್ನ ಮಾಡಬೇಕು. ಧನ್ಯವಾದಗಳು ಸರ್.
ಧನ್ಯವಾದಗಳು ಮೇಡಮ್…ನಿಮ್ಮ ಸಲಹೆಗಳಿಗೆ ಸ್ವಾಗತ….ಶುಭದಿನ !
ಕಳೆದ ಸಂಚಿಕೆಗಿಂತ ಮಾಹಿತಿ ಇನ್ನೂ ಆಸಕ್ತಿದಾಯಕವಾಗಿದೆ. ಒಳ್ಳೇಯ ಪ್ರಯತ್ನ ಮುಂದುವರೆಯಲಿ….ಶುಭಾಶಯಗಳೊಂದಿಗೆ….ಜಯಪ್ರಕಾಶ
ಧನ್ಯವಾದಗಳು ಸರ್…..ಇನ್ನೂ ಹೆಚ್ಚಿನ ಆಸಕ್ತಿದಾಯಕ ವಿಷಯಗಳು ಹೊರಬರಲಿವೆ. ನಿರೀಕ್ಷಿಸಿ….ಶುಭದಿನ !
ಒಳ್ಳೆಯ ಪ್ರಯತ್ನ; ಖಂಡಿತ ಒಂದು ಪುಸ್ತಕ ಮಾಡಿ. ಕುವೆಂಪು ಅವರಿಗೆ ವಿಶೇಷವಾಗಿ ಮಾನಸರಂಗದ ಮೇಲೆ ಆಸಕ್ತಿ ಹೆಚ್ಚಾಗಿತ್ತು. ಅದು ಕತೆಯ ಚೌಕಟ್ಟನ್ನು ಹಿಗ್ಗಿಸುತ್ತದೆ ಎಂಬ ಕುರಿತು ಒಮ್ಮೆ ಸುಬ್ಬಣ್ಣ ಸರ್ ನಮಗೆ ಕ್ಲಾಸ್ ಮಾಡಿದ್ದರು. ಅವರ ರಾಮಾಯಣ ದರ್ಶನವೂ ಒಂದು ಮಹತ್ವದ ನಾಟಕೀಯ ಕೃತಿಯೇ ಹೌದು. ದಶಾನನ ಸ್ವಪ್ನ ಸಿದ್ಧಿ ಎಂಬ ಭಾಗದಲ್ಲಿ ರಾವಣ ಸೀತೆಯ ಮಗುವಾಗಿ ಸೃಷ್ಟಿಸಿದ್ದಾರೆ. ನೋಡಿ ಅವರು ನಾಟಕಕಾರರಾಗಿ ಅಷ್ಟೆ ಅಲ್ಲ ಸಾಹಿತ್ಯಕೃತಿಯೊಳಗೆ ನಾಟಕೀಯ ಪ್ರತಿಮಾ ಸೃಷ್ಟಿಗಳನ್ನು ಹೇಗೆಲ್ಲ ನಿರೂಪಿಸುತ್ತಾರೆ. ನಿಮ್ಮ ಮೂರು ಲೇಖನಗಳು ತುಂಬ ಚನ್ನಾಗಿವೆ, ಆದಷ್ಟು ಬೇಗ ಪುಸ್ತಕ ಮಾಡಿ
ನಿಮ್ಮ ಪ್ರತಿಕ್ರಿಯೆಯ ನುಡಿಗಳಿಗೆ ಧನ್ಯವಾದಗಳು ಮಹಾದೇವಣ್ಣ, ಆದರೂ ತುಂಬಾ ಹೆದರಿಕೆಯಿಂದ+ಎಚ್ಚರಿಕೆಯಿಂದ ಬರೆಯುತ್ತಿದ್ದೇನೆ, ಏನಾದರೂ ತಪ್ಪು ಗ್ರಹಿಕೆಗಳಾದರೆ ತಕ್ಷಣ ತಿಳಿಸಿ ಉಪಕರಿಸಬೇಕೆಂದು ತಮ್ಮಲ್ಲಿ ವಿನಂತಿ… ಯಾಕಂದರೆ ಕನ್ನಡದ ಮಹಾಮೇರು ಪರ್ವತ ಹಿಮಾಲಯದಂತಿರುವ ಮಹಾಕವಿಗಳ ಕುರಿತು ಮಾತಾಡುವುದು ಬಿಡಿ…ಬರೆಯುವುದು ಸಹ ಪರ್ವತವನ್ನು ಮೈಮೇಲೆ ಹಾಕಿಕೊಂಡಂತೆ…ಆದರೂ ಪಂಜು ಬಳಗದ ಎಲ್ಲಾ ಸ್ನೇಹಿತರ ಪ್ರೋತ್ಸಾಹದೊಂದಿಗೆ ಮುಂದುವರೆದಿರುವೆನು. ನಿಮ್ಮ ಮಾಹಿತಿಗೆ ಧನ್ಯವಾದಗಳು…ಶುಭದಿನ !
[…] ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ. ಈ ಮೊದಲಿನ ದೃಶ್ಯಗಳಲ್ಲಿ […]