ಆತ್ಮೀಯ ಓದುಗಪ್ರಭುಗಳೇ, ಷೇಕ್ಸ್ ಪಿಯರ್‍ನ ‘ಹ್ಯಾಮ್ಲೆಟ್’ ನಾಟಕದ ಆತ್ಮವನ್ನು ಇಟ್ಟುಕೊಂಡು ಶರೀರವಾಗಿಯೆಂಬಂತೆ ಕನ್ನಡದ ಪರಿಸರಕ್ಕೆ ಸ್ವತಂತ್ರ ಕಥಾನಕವೆನಿಸುವಂತೆ ರೂಪಾಂತರಿಸಿದ ‘ರಕ್ತಾಕ್ಷಿ’ ರಂಗಕೃತಿಯ ಸಂದರ್ಭದಲ್ಲಿ ಮೂಲಕೃತಿಯ ತಾತ್ವಿಕತೆಗೆ ಭಿನ್ನವಾದ ದೃಷ್ಟಿಕೋನವನ್ನು ಮಹಾಕವಿಗಳು ಪ್ರತಿಪಾದಿಸುವ ಮೂಲಕ ಸಾಂಸ್ಕೃತಿಕವಾಗಿ ಒಂದು ಮಹತ್ವದ ಬದಲಾವಣೆಯೆಂಬಂತೆ, ಅದರಲ್ಲೂ ಮುಖ್ಯವಾಗಿ ಶಪಿಸಲಾರದ, ಕೇವಲ ಆಶೀರ್ವದಿಸಬಲ್ಲ ಮನಸ್ಸು ‘ರಕ್ತಾಕ್ಷಿ’ಯಲ್ಲಿ ಪ್ರಧಾನವಾಗಿ ಕಂಡು ಬರುತ್ತದೆ. ಇಂತಹ ಮಹಾನ್ ರಂಗಕೃತಿಯನ್ನು ಕನ್ನಡ ನಾಡಿನ ಇತಿಹಾಸದ ನೈಜ ಘಟನೆಯೊಂದಕ್ಕೆ ತಳುಕು ಹಾಕಿ, ಮೈಸೂರು ಪ್ರಾಂತದ ಬಿದನೂರಿನ ರಾಜಮನೆತಕ್ಕೆ ಸಂಬಂಧ ಕಲ್ಪಿಸಿಕೊಂಡು ರೂಪಾಂತರಿಸಿರುವುದನ್ನು ನಾವು ಹಿಂದಿನ ಸಂಚಿಕೆಗಳಲ್ಲಿ ನೋಡಿದ್ದೇವೆ.
ಇಂದಿನ ಸಂಚಿಕೆಯಲ್ಲಿ ಮಹಾಕವಿಗಳ ಸಾಮಾಜಿಕ ವಸ್ತು ವಿಶೇಷವಿರುವ ಎರಡು (ಜಲಗಾರ ಮತ್ತು ಬಲಿದಾನ) ರಂಗಕೃತಿಗಳಲ್ಲಿ ಒಂದಾದ ಜಲಗಾರ (ಉತ್ತರ ಕರ್ನಾಟಕದಲ್ಲಿ ಜಾಡಮಾಲಿ, ಭಂಗಿ ಇತ್ಯಾದಿ) ರಂಗಕೃತಿಯ ಕುರಿತು ಮರು-ಓದಿನ ಪರಿಚಯ ಮಾಡಿಕೊಳ್ಳೋಣ. ಇಂದಿಗೂ ವಿಶ್ವದೆಲ್ಲೆಡೆ ಕನ್ನಡದ ಮನಸ್ಸುಗಳಿರುವ ಕನ್ನಡ ರಂಗಭೂಮಿಯಲ್ಲಿ ಒಂದಲ್ಲಾ ಒಂದು ಕಡೆ ಮರುಪ್ರದರ್ಶನಗಳಲ್ಲಿ ಹಲವಾರು ರಂಗಕರ್ಮಿಗಳಿಂದ ನಾನಾ ರೀತಿಯಿಂದ ಪ್ರಯೋಗಿಸಿಕೊಳ್ಳುತ್ತಲೇ ಪ್ರೇಕ್ಷಕರ ಮನೋಭೂಮಿಕೆಯಲ್ಲಿ ವೈಚಾರಿಕ ಸಂಚಲನೆಯನ್ನುಂಟು ಮಾಡುತ್ತಿರುವ ಅಪರೂಪದ ರಂಗಕೃತಿಯಾಗಿ ಮಿನುಗುತ್ತಿರುವುದು ಕೇವಲ ಅದರಲ್ಲಿರುವ ಸಾಮಾಜಿಕ ವಸ್ತುವೇ ಆದರೂ ಅದು ಆ ಮಟ್ಟಕ್ಕೆ ಸೀಮಿತಗೊಳ್ಳದೇ ಅದರಾಚೆಗೂ ತನ್ನ ವಿಸ್ತಾರವನ್ನು ವಿಸ್ತರಿಸಿಕೊಳ್ಳುತ್ತಲೇ ನಡೆದಿದೆ. ಸಮಕಾಲೀನ ಸಂದರ್ಭದಲ್ಲಿಯೂ ಕಾಣಿಸುವ ಸಾಮಾಜಿಕ ಸಮಸ್ಯೆಗಳು ಮತ್ತು ತೊಡಕುಗಳು ಹೀಗೆ ಹಲವಾರು ಅಂಶಗಳು ನಮ್ಮ ಕೆಲಸವನ್ನು/ಮನಸ್ಸನ್ನು ಪ್ರಚೋಧಿಸುತ್ತಿರುವುದು ವೇದ್ಯವಷ್ಟೇ. ಹೀಗಿರುವಾಗ ಅದನ್ನು ಯಥಾವತ್ತಾಗಿ ಪ್ರತಿಕೃತಿಯ ಸ್ವರೂಪದಲ್ಲಿ ಮಹಾಕವಿಗಳು ಕಟ್ಟಿಕೊಡದೇ, ಅವುಗಳ ಭಾವಸತ್ಯಕ್ಕೆ ಸಾಕ್ಷಿಯೆಂಬಂತೆ ಪ್ರತಿಮಾರೂಪದಲ್ಲಿ ಕಲಾಕೃತಿಯಾಗಿ ಪ್ರಸ್ತುಪಡಿಸುವಿಕೆಯೊಂದಿಗೆ ಸಮಕಾಲೀನತ್ವದ ಸಮಾನತೆಯ ಪ್ರಜ್ಞೆ ಹೊರಹೊಮ್ಮಿರುವುದು ಇಲ್ಲಿ ಮಹಾಕವಿ ಕುವೆಂಪುರವರ ವಿಶಿಷ್ಟ ಶೈಲಿ. ಈ ಕೃತಿಯಲ್ಲಿ ಅಸ್ಪೃಶ್ಯತೆಯಂಥ ಸಾಮಾಜಿಕ ಸಮಸ್ಯೆಗಳನ್ನು ಹೊಸ ದೃಷ್ಟಿಕೋನದಲ್ಲಿ ಮಹಾಕವಿಗಳು ವಿಶ್ಲೇಷಣೆ ಮಾಡಿದ್ದಾರೆ. ಪುರೋಹಿತಶಾಹಿಯ ವಿರುದ್ಧ ಪ್ರಜ್ಞಾಪೂರ್ವಕವಾಗಿಯೇ ಅನೇಕ ಪ್ರಶ್ನೆಗಳನ್ನು ಕೇಳುತ್ತಲೇ ವೈಚಾರಿಕ ದಂಗೆ ಎದ್ದಿದ್ದಾರೆಂದು ಹೇಳಬಹುದು.
ಜಲಗಾರ (1928) :
ಈ ಕೃತಿಯ ರಚನೆಯ ಹಿನ್ನಲೆ ಕುರಿತು ಕೆದಕಿದಾಗ ಕೆಲವೊಂದು ಆಸಕ್ತಿಕರ ಮಾಹಿತಿಗಳು ನನಗೆ ಆಕಸ್ಮಿಕವಾಗಿ ತಿಳಿದು ಬಂದವು. ಈ ರಂಗಕೃತಿಯು ಮಹಾಕವಿಗಳಿಂದ ರಚಿತಗೊಂಡ (1928) ಪ್ರಥಮ ರಂಗಕೃತಿ. ಇದನ್ನು ಅವರು ಎಂ.ಎ. ವಿದ್ಯಾರ್ಥಿಯಾಗಿರುವಾಗಲೇ ಬರೆದುದು. ಈ ಕೃತಿಯ ಮೊದಲು ಮುದ್ರಣವು 1931ರಲ್ಲಿ ಬೆಂಗಳೂರಿನ ರಾಮಮೋಹನ ಕಂಪೆನಿ ಪ್ರಕಾಶನ ಮಾಡಿದಾಗ ‘ಮೂರು ನಾಟಕಗಳು’ ಸಂಪುಟದಲ್ಲಿ ಪ್ರಕಟಗೊಂಡಿತು. ನಂತರ 1939ರಲ್ಲಿ ಬಿಡಿಯಾಗಿ ಶಿವಮೊಗ್ಗ ಕಾವ್ಯಾಲಯದಿಂದ ಪ್ರಕಟವಾಯಿತು. ಎರಡನೆಯ ಮುದ್ರಣವು 1944, ಆನಂತರ ‘ಮೂರು ನಾಟಕಗಳು’ ಸಂಪುಟದಲ್ಲಿ ಅನುಕ್ರಮವಾಗಿ 1931, 1942, 1946ರಲ್ಲಿ ಪ್ರಕಟಗೊಂಡಿತು. ಮೈಸೂರಿನ ಉದಯರವಿ ಪ್ರಕಾಶನದಿಂದ ಬಿಡಿಯಾಗಿ 1962, 1963, 1969, 1973, 1984, 1989, 1997, 2002ರಲ್ಲಿ ಪ್ರಕಟಗೊಂಡಿತು. 2004ರಲ್ಲಿ ಶೂದ್ರತಪಸ್ವಿ ನಾಟಕವನ್ನೊಳಗೊಂಡು ಒಂದು ಸಂಪುಟದಲ್ಲಿ ಪ್ರಕಟವಾಗಿದೆ. ಈ ರಂಗಕೃತಿಯು ಎರಡು ದೃಶ್ಯಾವಳಿಗಳನ್ನೊಳಗೊಂಡಿದೆ.
ಈ ಕೃತಿಯ ಕುರಿತು ಆಗಿನ ಕಾಲದಲ್ಲಿ ತ.ಸು.ಶಾಮರಾಯರು (ಪ್ರಬುದ್ಧ ಕರ್ನಾಟಕ, 1952) ಈ ಕೃತಿಯ ಪ್ರತಿಮಾ ವಿಧಾನ ಮತ್ತು ನಿರೂಪಣೆಯ ಕುರಿತು ಹೇಳಿರುವ ಮಾತುಗಳನ್ನು ನಾವು ಇಂದಿನ ಕಾಲದಲ್ಲಿ (2013) ನೆನಪಿಸಿಕೊಳ್ಳುವುದು ಔಚಿತ್ಯಪೂರ್ಣವಾಗಿದೆ. ಅವರು ಹೇಳಿರುವುದು ಹೀಗೆ, “ನಾಟಕದ ಆದಿಯಲ್ಲಿ ಬರುವ ಉಷಾಗೀತೆ, ಜಲಗಾರನ ಸೂರ್ಯ ಪ್ರಾರ್ಥನಾ ಗೀತೆಗಳು, ಜಾತ್ರೆಯಿಂದ ಹಿಂದಿರುಗುವ ಹುಡುಗಿ, ಕಬ್ಬಿಗ, ಬಾಲಕರು ಇವರ ಹಾಡುಗಳು ಕಾವ್ಯಕ್ಕೆ ಒಂದು ಆವರಣ ಪ್ರಭಾವವನ್ನು ಕಲ್ಪಿಸುತ್ತವೆ. ಕುವೆಂಪುರವರ ಕಲೆಯಲ್ಲಿ ಮೂಡಬಲ್ಲ ಭವ್ಯಭಾವಗಳೆಲ್ಲವೂ ಬೀದಿಯನ್ನು ಗುಡಿಸುವ ಜಲಗಾರನ ಕಲೆಯಲ್ಲಿ ಮೂಡಬಲ್ಲವಾದರೆ ಅವನ ಕೈಯಲ್ಲಿನ ಕಸಬರಿಗೆ ಬೀದಿ ಬೀದಿಗಳಲ್ಲಿಯೂ ಕಾವ್ಯರಸವನ್ನು ಚೆಲ್ಲುತ್ತಾ ಹೋದೀತು”
ಗೀತರೂಪಕ-ಪೌರಾಣಿಕ ಮಾದರಿಯ ವಿಶಿಷ್ಟ ಸಾಮಾಜಿಕ ಕೃತಿಯಾದ ಇದರ ಕಥಾನಾಯಕ ಜಲಗಾರ. ಇತನು ನಿತ್ಯವೂ ತನ್ನ ಕಾಯಕದಲ್ಲಿ ಭಗವಂತನನ್ನು ಕಾಣುವ ಶಿವಭಕ್ತ. ಪುರದ ಕಸದ ರಾಶಿಯನ್ನು ಗುಡಿಸುವ ಸೇವಾಕಿಂಕರನಾಗಿರುವ ಕರ್ಮಯೋಗಿ. ಆದರೆ ಸಮಾಜದಿಂದ ಬಹಿಷ್ಕೃತನಾದ ಈ ಜಲಗಾರನಿಗೆ ಶಿವನ ಗುಡಿಗೆ ಪ್ರವೇಶ ನಿರಾಕರಿಸಲಾಗಿದೆ. ವಾಸ್ತವದಲ್ಲಿ ಶಿವ ವಾಸವಿರುವುದು ಪಾಮರರಾದ ಭಕ್ತರ ಹೃದಯದಲ್ಲಿ. ಇಂತಹ ಮನೋಧರ್ಮದ ಕರ್ತವ್ಯಶೀಲರು ನಿಜಜೀವನದಲ್ಲಿಯೂ ಇರಲಿಕ್ಕೂ ಸಾಧ್ಯ. ಅವನ ಪ್ರಕೃತಿ ಉಪಾಸನೆ, ಕವಿ ಮನೋಧರ್ಮದಿಂದ ಹಾಡುವ ಅವನ ಪ್ರೌಢವಾದ ಹಾಡುಗಳು, ವಿಚಾರಗಳು ಮುಂತಾದ ಸಂಗತಿಗಳು ಅಸಹಜವಾಗಿ ಇಲ್ಲಿ ಕಾಣುವುದಿಲ್ಲ. ಇಂತಹ ಕಥಾವಸ್ತುವೊಂದನ್ನು ನಿರ್ವಹಿಸುವಾಗ ಸಾಮಾಜಿಕ ವಸ್ತುವಿನಲ್ಲಿಯೂ ಮಹಾಕವಿಗಳು ಸಾಧಿಸಿರುವ ವಿಶಿಷ್ಟ ಶಕ್ತಿಯೆಂದು ನಾವು ಅರ್ಥೈಸಿಕೊಳ್ಳಬಹುದು. ಇದನ್ನು ಸೂಚಿಲಿಕ್ಕಾಗಿಯೇ ಭೂದೇವಿಯ ಹಾಡಿನಿಂದ ರಂಗಸ್ಥಳದಲ್ಲಿ ದೃಶ್ಯ ಆರಂಭಗೊಳ್ಳುತ್ತದೆ. ಭೂದೇವಿಯು ತನ್ನ ಚೆಲುವಿನಿಂದ ಮಾಯಮೋಹದ ಜಾಲವ ನೇಯ್ದು ಮುಂಜಾವನ್ನು ವರ್ಣಿಸಿ ಭೂದೇವಿ ಮರೆಯಾಗುವುದರೊಂದಿಗೆ ಜಲಗಾರನ ಪಾತ್ರದ ಪ್ರವೇಶವಾಗುತ್ತದೆ. ಇಲ್ಲಿಯ ಜಲಗಾರ ಈ ಮೊದಲು ಹೇಳಿರುವಂತೆ ನಿಷ್ಕಾಮ, ನಿಷ್ಕಪಟ ಮನಸ್ಸಿನೊಂದಿಗೆ ಕಾಯಕವೇ ಕೈಲಾಸವೆಂದು ತಿಳಿದುಕೊಂಡು ಅದರಂತೆ ಜೀವಿಸುತ್ತಿರುವವನು. ಆತನ ವಿಚಾರದಂತೆ ಶಿವನಿಲ್ಲದ ಶಿವಾಲಯದಲ್ಲಿ ಕಾಣುವುದು ಕೃತಕ ಭಕ್ತಿ, ಅಲ್ಲಿ ನಡೆಯುವುದೆಲ್ಲಾ ಕುಯುಕ್ತಿ. ನೈಜ ಭಕ್ತಿಯು ಸಾಕಾರ ದೈವವಾಗಿ ಕಾಣುವ ಕೈಲಾಸವೆಂದರೆ ದುಡಿಮೆಯ ತಾಣ. ಮಾನವನು ಮೇಲು-ಕೀಳು ಭಾವನೆಗಳೆಂಬ ಬಂಧನಗಳಿಂದ ಹೊರಬರಬೇಕು. ಆಗ ಮಾತ್ರ ಜೀವನ್ಮುಕ್ತಿ ಸಾಧ್ಯ. ಇದರಿಂದ ಸಮಾಜಕ್ಕೆ ಮತ್ತು ಸಮಾಜದ ಅಂಗವಾಗಿರುವ ವ್ಯಕ್ತಿಗೂ ಒಳ್ಳೆಯದು.
ಆದಿ ಕಾಲದಿಂದಲೂ ನಮ್ಮ ದೇಶದಲ್ಲಿ ಸ್ಥಾಪಿತ ಜಾತಿಪದ್ಧತಿಯೆಂಬ ಹೀನ ವ್ಯವಸ್ಥೆಯನ್ನು ದೃಢವಾಗಿ ಖಂಡಿಸುತ್ತಾ ಮಹಾಕವಿ ಕುವೆಂಪುರವರು ದಿಟ್ಟತನದೊಂದಿಗೆ ಸಾತ್ವಿಕವಾಗಿ ತಮ್ಮ ಕೋಪಾಗ್ನಿಯನ್ನು ಹೊರಹಾಕಿದವರು. ಮುಂದುವರೆದು ಅವರು ಜಾತೀಯತೆಯ ಪೊಳ್ಳು-ಜೊಳ್ಳುತನವನ್ನು ತಮ್ಮ ಜೀವಿತದವರೆಗೂ ಜಾಲಾಡಿದವರು. ಅದರ ದುಷ್ಪರಿಣಾಮಗಳನ್ನು ಕಂಡು ರೋಸಿಹೋದವರು. ಶೋಷಿತರ ನೋವನ್ನು ತಮ್ಮ ವೈಚಾರಿಕ ಬರಹಗಳ ಮೂಲಕ ವ್ಯಕ್ತಪಡಿಸುತ್ತಾ ಬರಹವನ್ನು ಆಯುಧವನ್ನಾಗಿ ಝಳಪಿಸುತ್ತಾ ಜಾಗೃತಿಯ ಮಂತ್ರವನ್ನು ಹೇಳಿಕೊಟ್ಟವರು.
ಇಲ್ಲಿ ‘ಜಲಗಾರ’ ಕೃತಿಯು ಮಹಾಕವಿಗಳ ವೈಚಾರಿಕ ಕ್ರಾಂತಿಯ ಚಿಂತನೆಯ ಮೂಸೆಯಲ್ಲಿ ಹದಗೊಂಡು ವಿಶಿಷ್ಟ ಕೃತಿಯಾಗಿ ಹೊರಹೊಮ್ಮಿದೆ. ಮನುಷ್ಯ-ಮನುಷ್ಯರ ನಡುವೆ ಯಾವುದೇ ಬೇಧಭಾವ ಇರಬಾರದು. ಅನೇಕ ಸಂಕುಚಿತ ವಿಚಾರಗಳು ಮನಸ್ಸಿನಿಂದ ದೂರ ತಳ್ಳುತ್ತಾ, ಆರೋಗ್ಯಕರ ಸಾಮಾಜಿಕ ಜೀವನದಲ್ಲಿ ಪ್ರಗತಿಪರ ಧೋರಣೆಯನ್ನು ಹೊಂದಿದವರಾಗಬೇಕು. ಜಾತಿ ಮತ್ತು ಉದ್ಯೋಗಾಧಾರಿತ ಶ್ರೇಣೀಕೃತ ವ್ಯವಸ್ಥೆ ನಾಶವಾಗಬೇಕು. ಮೌಢ್ಯತೆಯ ಜಾಢ್ಯವನ್ನು ದೂರೀಕರಿಸಬೇಕು. ಇಲ್ಲಿನ ಕಥಾನಾಯಕ ಜಲಗಾರ ದುಡಿದು ತಿನ್ನುವವ, ದುಡಿಮೆಯಲ್ಲಿ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳುವ ಪ್ರಯತ್ನಿಶೀಲ ವ್ಯಕ್ತಿತ್ವದವನು.
ಮಹಾಕವಿಗಳು ಈ ಕೃತಿಯಲ್ಲಿ ಜಲಗಾರನ ಪಾತ್ರವನ್ನು ಪೋಷಿಸಿರುವುದು ಮತ್ತು ಆ ಪಾತ್ರದ ವಿಚಾರಧಾರೆಗಳು ಆದರ್ಶ, ಅನುಕರಣೀಯ, ಶೋಷಿತರ ಪ್ರತಿನಿಧಿಯಂತೆ ಚಿತ್ರಿಸಿರುವುದು ಅವರ ಸಾಮಾಜಿಕ ಸಮಾನತೆಯ ಬದ್ಧತೆಯ ಔನ್ನತ್ಯವನ್ನು ತೋರಿಸುತ್ತದೆ. ಪ್ರಭುತ್ವದ/ಶ್ರೀಮಂತರ ಅಡಿಯಾಳಾಗದೆ, ಅಸಮಾನತೆಯ ಸರಕಾಗಿರದೆ, ಸ್ವಾಭಿಮಾನದ ಬದುಕು ಸಾಗಿಸುವ ಛಲಗಾರನಾಗಿರುವ ಜಲಗಾರನು ಮುಗ್ದ ಮನಸ್ಸಿನ, ಮೃದು ಹೃದಯದ ಚೇತೋಹಾರಿ ವ್ಯಕ್ತಿಯಾಗಿದ್ದಾನೆ. ಆತನು ವಿಶಾಲ ಚಿಂತನಾಶೀಲಜೀವಿ, ಜೀವನದ ಹಲವಾರು ಏರಿಳಿತಗಳನ್ನು ಅನುಭವಿಸಿದವನು. ಶೋಷಿತ ಜನರ ಪ್ರತಿನಿಧಿಯಾಗಿರುವ ಮತ್ತು ಜಗಜ್ಜನರೊಡನೆ ಸಂಭಾಷಿಸುವ ಆತನ ಪರಿ ಅಂತರಾಳದಲ್ಲಿ ಅಲೆಗಳನ್ನೆಬ್ಬಿಸುವಂತಹುದು. ಕವಿ-ಸಾಹಿತಿ-ಬುದ್ಧಿಜೀವಿಗಳಿಗೆ ಸಾಮಾಜಿಕ ಬದ್ಧತೆಯಿರಬೇಕು, ತೋರಿಕೆಯ ಉಪದೇಶದಿಂದ ಕಿಂಚಿತ್ತು ಒಳಿತಾಗುವುದಿಲ್ಲ ಎಂಬ ಅರಿವು ಇರಬೇಕೆಂಬ ಸಾಮಾನ್ಯ ಅಂಶವು ಇಲ್ಲಿ ಮಹಾಕವಿಗಳು ಸೂಚ್ಯವಾಗಿ ಹೇಳಿದ್ದಾರೆ. ಭಗವಂತನಿಗಿಲ್ಲದ ಮೇಲು-ಕೀಳೆಂಬ ಭೇದಭಾವ ಮನುಷ್ಯನಿಗೇಕೆ ಎಂದು ಜಲಗಾರನ ಪಾತ್ರದ ಮೂಲಕ ಪ್ರಶ್ನಿಸುತ್ತಾರೆ. ಇಲ್ಲಿಯ ಕಾವ್ಯಭಾಷೆಯ ಸೌಂದರ್ಯ ಮತ್ತು ಸರಳ ರಗಳೆಯ ಸಮ್ಮಿಶ್ರಣದ ಸವಿಪಾಕವು ಪ್ರಯೋಗಾತ್ಮಕವಾಗಿ ಎಂಬಂತಿದ್ದರೂ ಉತ್ತಮವಾಗಿ ನೆರೆದ ಪ್ರೇಕ್ಷಕರ ಮನದ ಕದವನ್ನು ನೇರವಾಗಿ ತಟ್ಟುತ್ತದೆ.
ಈ ಕೃತಿಯಲ್ಲಿ ಶಿವನಗುಡಿಯು ಕೇಂದ್ರಸ್ಥಾನ. ಇಲ್ಲಿಯ ಹಾರುವರು, ತರುಣರು, ಮತ್ತು ಜಲಗಾರ ಪಾತ್ರಗಳು ಮಹಾಕವಿಗಳ ಕಲ್ಪನೆಯ ಮೂಸೆಯಲ್ಲಿ ಅರಳಿದ ನೈಜ ಸೃಷ್ಟಿ. ದೃಶ್ಯಾವಳಿಗಳ ಸಂಯೋಜನೆಯು ಸರಳವಾಗಿ ಮನಸೆಳೆಯುತ್ತದೆ. ಮೊದಲ ಮತ್ತು ಕೊನೆಯ ದೃಶ್ಯಗಳಲ್ಲಿ ಭಕ್ತಾಧಿಗಳು ಶಿವನ ಗುಡಿಗೆ ಹಿಂದಿರುಗುವ ರಂಗಕ್ರಿಯೆಯಿದೆ.
ಶಿವಪೂಜೆಗೆಂದು ಹೊರಟಿರುವ ಕರ್ಮಯೋಗಿ, ನೇಗಿಲಯೋಗಿ ರೈತನನ್ನು ಜಲಗಾರನು ಮಾತನಾಡಿಸುತ್ತಾ ಹೇಳುತ್ತಾನೆ. ‘ಕರ್ಮಾರಾಧನೆ, ಸೇವೆಯೇ ಪೂಜೆ’ ಎಂದು ಹೇಳುವುದರೊಂದಿಗೆ ನಂತರದಲ್ಲಿ ಬರುವ ವಿಚಾರವಾದಿ ತರುಣನನ್ನು ನೋಡಿ ‘ಒಂದು ದಿನದ ಜಾತ್ರೆ, ಅದಕ್ಕಾಗಿ ಯುಗ-ಯುಗದ ಯಾತ್ರೆ’ ಎಂದು ಉದ್ಗರಿಸುತ್ತಾನೆ. ಕಸ ಗುಡಿಸು ಜಲಗಾರ ಮತ್ತು ನೇಗಿಲಯೋಗಿ ರೈತ ಇಬ್ಬರೂ ಶ್ರಮಜೀವಿಗಳು ಮತ್ತು ಕಾಯಕವನ್ನು ಬಹಳ ಪ್ರೀತಿಯಿಂದ ಅಪ್ಪಿಕೊಂಡವರು. ಇವರಿಬ್ಬರ ವಿಚಾರದಲ್ಲಿ ದುಡಿಮೆಯ ಹಿರಿಮೆಯನ್ನು ಕಾಣಬಹುದು.
ಶಿವನ ಗುಡಿಯ ಮುಂದೆ ನಡೆಯುವ ಜಾತ್ರೆಗೆ ಹೊರಟಿರುವ ರೈತನು ಹಣ್ಣುಕಾಯಿಗಳೊಡನೆ, ಹೊಸ ಬಟ್ಟೆಯನ್ನುಟ್ಟುಕೊಂಡು ಹೋಗುತ್ತಿರುವಾಗ, ಜಲಗಾರನನ್ನು ಹಿಂತಿರುಗಿ ನೋಡಿದಾಗ ಅವರಿಬ್ಬರಲ್ಲಿ ನಡೆಯುವ ಸಂಭಾಷಣೆ ಹೀಗಿದೆ-
ರೈತ : ಓಹೋ ನೀನರಿಯೆಯಾ? ಇಂದು ನಮ್ಮೂರ
ಶಿವಗುಡಿಯ ಜಾತ್ರೆ ! ಬರುವುದಿಲ್ಲವೆ ನೀನು?
ತೇರೆಳೆಯಲೆಂದನಿಬರೂ ಬರುತಿಹರು.
ಜಲಗಾರ : ನನಗೇಕೆ ಶಿವಗುಡಿಯ ಜಾತ್ರೆ?
ಜೋಯಿಸರು ದೇಗುಲದ ಬಳಿಗೆನ್ನ ಸೇರಿಸರು.
ರೈತ : ದೂರದಲ್ಲಿಯೇ ನಿಂತು ಕೈಮುಗಿದು ಬಾ.
ಜಲಗಾರ : ಕರ್ಮವಾರಾಧನೆ, ಸೇವೆಯೇ ಪೂಜೆ.
ನನ್ನ ಭಗಕೆ ಪೊರಕೆ ಆರತಿ. ಗುಡಿಸುವುದೆ
ನನ್ನ ದೇವರ ಪೂಜೆ !-ನಿನ್ನ ದೇಗುಲದೆಡೆಗೆ
ಹೋದೆನ್ನ ಕಂದನಂ ಬೈದಿರಿದು ನೂಕಿದರು.
ಶಿವಗುಡಿಯ ಶಿವನು ಜೋಯಿಸರ ಶಿವನಂತೆ ;
ನನ್ನ ಶಿವನೀ ಮಣ್ಣಿನಲ್ಲಿಹನು. ನನ್ನ ಶಿವ
ಕೊಳೇ ಕಸದೊಳಗಿಹನು. ಕಪ್ಪುರದೊಳಗಿಲ್ಲ ;
ಮಂಗಳಾರತಿಯೊಳಿಲ್ಲ ; ಹೂವುಗಳಲಿಲ್ಲ.
ಯಾವೆಡೆಯೊಳಾನಿಹೆನೊ ಅವನಲ್ಲಿಯೇ ಇಹನು.
ನನ್ನೆದೆಯೆ ದೇಗುಲ ; ನನ್ನೊಲ್ಮೆಯದೆ ಪೂಜೆ.
ನಾನೆಲ್ಲಿ ಭಕ್ತಯಿಂ ಕೈಮುಗಿವೆನೋ ಅಲ್ಲಿ
ತನಿಹನು. ನಾನೆಲ್ಲಿ ಸತ್ಕರ್ಮವೆಸಗುವೆನೊ
ಅಲ್ಲಿ ಮೈದೋರುವನು. ಶಿವಗುಡಿಯದೆನಗೇಕೆ?-
ಶಿವನ ಗುಡಿಯಲ್ಲಿರುವವನು ಜೋಯಿಸರ ಶಿವನೆಂದು ತನ್ನ ಮಗನನ್ನು ಹೊರದೂಡಿದಾಗ ತಂದೆಯಾಗಿ ಜಲಗಾರನ ವ್ಯಾಕುಲತೆಯು ಇಮ್ಮಡಿಗೊಳ್ಳುತ್ತದೆ.
ಹಾರುವರ ನಡುವೆ ನಡೆಯುವ ಸಂಭಾಷಣೆಯಲ್ಲಿ ಮೇಲು-ಕೀಳು ಭಾವನೆ, ದ್ವಿಜ ಶ್ರೇಷ್ಟನೆಂಬ ಭಾವನೆ ಮತ್ತು ಅಹಂ ವ್ಯಕ್ತಪಡಿಸುವಿಕೆಯನ್ನು ನಾವು ಇಲ್ಲಿ ಗಮನಿಸಬೇಕು. ಇಂಪಾದ ಗಾಯನವೊಂದನ್ನು ಕೇಳಿದ ಹಾರುವರು ಅದನ್ನು ಹಾಡಿದವನು ಅಸ್ಪೃಶ್ಯ ಜಲಗಾರನೆಂಬುದನ್ನು ತಿಳಿದುಕೊಂಡಾಗ ಬೇರೆಯ ಮಾತುಗಳನ್ನು ಹೇಳುತ್ತಿರುವಂತೆಯೇ ಅವರಿಬ್ಬರ ಮಾತಿನ ದಾಟಿಯೇ ಬದಲಾಗುತ್ತದೆ.
ಮೊದಲನೆಯ (ಹಾರುವ) ಪಾರ್ವ :
ಕೊಳಲ ಇನಿದನಿಯಂತೆ ಸವಿಗೊರಲಿನಿಂದೊಗೆದ
ಗಾಯನವದು ಎನಿತಿಂಪು ! ಹಾಡಿದವರಾರೋ?
ಎರಡನೆಯ (ಹಾರುವ) ಪಾರ್ವ :
ಯಾರೋ ದಿವ್ಯಾತ್ಮನಿರಬೇಕು. ಮಧುರತಮ
ಗಾಯನವು ಅಮಲತಮ ಹೃದಯದಿಂದಲ್ಲದೆ
ಹೊರಹೊಮ್ಮಲರಿಯದು !
ಮೊದಲನೆಯ (ಹಾರುವ) ಪಾರ್ವ : (ಜಲಗಾರನನ್ನು ನೋಡಿ)
ಜಲಗಾರ, ಹಾಡಿದವರಾರೋ?
ಜಲಗಾರ : (ಕೈಮುಗಿದು) ನಾನೇ ಮಹಾಸ್ವಾಮಿ ; ತಮ್ಮ ಅನುಗ್ರಹದಿಂದ
ಎರಡನೇಯ (ಹಾರುವ) ಪಾರ್ವ : ಅವನಂತೆ ! ಬರಿಯ ಸಟೆ ! ಬಾ ಹೋಗೋಣ.
ಮೊದಲನೆಯ (ಹಾರುವ) ಪಾರ್ವ: ಸಂಗೀತವು ಅನಿತೇನು ಮನಮೋಹಿಪಂತೆ ಇರಲಿಲ್ಲ.
ಗಾನದೇವಿಯು ಹೀಗೆ ಜಲಗಾರನನ್ ಒಲಿಯುವಳೆ ?
ಎಂದಿಗೂ ಇಲ್ಲ !
ಆಧುನಿಕ ಪ್ರಗತಿಪರ ವಿಚಾರವಾದಿಗಳಂತೆ ಮಾತನ್ನಾಡುವವರು ಜಾತ್ರೆಯಲ್ಲಿ ದೇವಸ್ಥಾನದ ಮುಂದುಗಡೆಯಿರುವ ಭಿಕ್ಷುಕನಿಗೆ ಬಿಡಿಗಾಸನ್ನೂ ಭಿಕ್ಷೆ ನೀಡದೇ, ಭಿಕ್ಷುಕನು ಕಂಡರೂ ಕಾಣದಂತೆ ಮುನ್ನಡೆಯುತ್ತಾರೆ. ತನ್ನಲ್ಲಿರುವುದನ್ನೇ ಉದಾರವಾಗಿ ಹಂಚಿಕೊಂಡು ಜೀವಿಸುವ ಜಲಗಾರನು
ಬಡವರಿಗೆ ಬಡವರಲ್ಲದೇ ಬೇರೆ ಗತಿಯುಂಟೇ?
ಲೋಕದಲ್ಲಿ ಕಂಬನಿಯೊಂದನೊರಸಿದವನೆ
ಧನ್ಯ ! ನಿಟ್ಟುಸಿರಿನೊಂದ ಸಂತೈಸುವನೆ
ಮಾನ್ಯ ! ಹಸಿದ ಹೊಟ್ಟೆಗೆ ಮರುಗಿ ತುತ್ತೊಂದ
ನೀಡುವನೇ ಶಿವನಿಗೆಣೆ !
ಎಂದು ಹೇಳುತ್ತಿರುವುದನ್ನು ಕಂಡು ಶಿವನು ಇನ್ನೊಬ್ಬ ಜಲಗಾರನ ವೇಷದಲ್ಲಿ ಪ್ರತ್ಯಕ್ಷನಾಗುತ್ತಾನೆ. ತಾನು ನಿಜವಾದ ಜಲಗಾರನೆಂದು ಹೇಳಿಕೊಳ್ಳುತ್ತಾ
ಊರ ತೋಟಿಯು ನೀನು ; ಜಗದ ತೋಟಿಯು ನಾನು !
ಬಾ ಎನ್ನ ಸೋದರನೆ, ನೀನೆನ್ನ ನಿಜಭಕ್ತ !
ಎಂದು ಹೇಳುತ್ತಾನೆ. ಬಡತನಕ್ಕೆ ಜಾತಿ ಬೇಧವಿಲ್ಲ. ಆದರೆ ಮೇಲ್ಜಾತಿಯೆಂಬ ಆಯುಧ ಹಿಡಿದು ಜಾತಿಯ ಹೆಸರಿನಲ್ಲಿ ದೂರ ಇಡಲ್ಪಟ್ಟ ಶೋಷಿತ ವರ್ಗವು ಡೊಂಗಿ ಜನರ ವರ್ತನೆಗೆ ಈಡಾದುದು ಪರಮಸತ್ಯ. ಶೋಷಿತ ದೀನರಲ್ಲಿಯೇ ಪ್ರೀತಿ-ಪ್ರೇಮ-ಮಮತೆ-ವಾತ್ಸಲ್ಯ-ಅನುಕಂಪ ಮನೆ ಮಾಡಿರುತ್ತದೆ. ಅವರು ಅವುಗಳನ್ನೇ ದೇವರೆಂದು ಅನುದಿನವೂ ಪೂಜಿಸುತ್ತಾರೆ. ದೇವರು ಗುಡಿ-ಗುಂಡಾರಗಳಲಿಲ್ಲ, ಭಕ್ತಿ-ನಿಷ್ಟೆ-ಪ್ರಾಮಾಣಿಕತೆಯಿಂದ ಮಾಡುವ ಯಾವುದೇ ಕೆಲಸವು ಕೀಳಲ್ಲ. ಇದೇ ಪಾರಮಾರ್ಥಿಕ ಹಾಗೂ ಸಾಮಾಜಿಕ ತತ್ವ, ಜಾತ್ರೆಯಲ್ಲಿ ತಿನ್ನುವ ಅನ್ನಕ್ಕೋಸ್ಕರ ಭಿಕ್ಷೆ ಬೇಡುತ್ತಿರುವ ಕುರುಡ-ಕುಂಟ-ತಿರುಕರಿಗೆ ತಾನು ತಿನ್ನುವ ಅನ್ನದಲ್ಲಿ ಒಂದು ಮುಷ್ಟಿಯನ್ನು ನೀಡಿ ಮಾನವೀಯತೆಯನ್ನು ಮೆರೆದು ಆನಂಧಿಸುವುದೇ ನಿಜವಾದ ಶಿವಪೂಜೆಯೆಂದು ತಿಳಿದು ಬುತ್ತದೆ. ಧನ್ಯತಾಭಾವ ಮೂಡುತ್ತದೆ.
ಎರಡನೇಯ (ಹಾರುವ) ಪಾರ್ವ :
ಶೂದ್ರರೋಳ್ ಕವಿವರ್ಯರುಧಿಸುವರೆ ? ಹುಟ್ಟುವರೆ ಪಂಡಿತರ್ ?
ಜನಿಸುವರೆ ಶಿಲ್ಪಿಗಳ್ ? ಗಾಯಕರ್ ? ಯೋಗಿಗಳ್ ?
ಅಸದಳಂ !
ಇಲ್ಲಿ ಮಹಾಕವಿಗಳ ಪ್ರತಿಭೆಯು ವ್ಯಕ್ತಿ ಮತ್ತು ಜಾತಿಯಿಂದ ಬರುವುದೆಂಬ ಕಾಲೆಳೆವ ಕುತ್ಸಿಕ ಬುದ್ಧಿಯ ವಿಚಾರವನ್ನು ನಿರಾಕರಿಸುತ್ತಾರೆ. ಇದು ಜಾತಿ ವ್ಯವಸ್ಥೆಯಲ್ಲಿ ಆದಿಕಾಲದಿಂದಲೂ ಬೇರು ಬಿಟ್ಟಿರುವ ತಳಬುಡವಿಲ್ಲದ ನಂಬಿಕೆ. ದೇವರು, ವಿದ್ಯೆ ಕೇವಲ ಕೆಲವರ ಸ್ವತ್ತು ಮತ್ತು ಹಕ್ಕು ಎಂಬುದನ್ನು ಇಲ್ಲಿ ಕಿತ್ತೊಗೆದಿದ್ದಾರೆ. ಪ್ರತಿಭೆಯನ್ನು ಹತ್ತಿಕ್ಕುವ ಪ್ರಯತ್ನವು ಮನುಷ್ಯ ಕುಲಕ್ಕೆ ಕಂಠಕಪ್ರಾಯವೆಂದು ನೇರವಾಗಿ ಇಲ್ಲಿ ಹೇಳಿದ್ದಾರೆ.
ಮುಂದುವರೆದು, ಮಹಾಕವಿಗಳು ಹೇಳುವುದು ಹೀಗೆ :
ಒಂದು ಸಲ ಸರ್ವರೊಳು ಅವನಿರುವನೆನ್ನುವರು
‘ಹೊಲೆಯ ನೀ ದೂರವಿರು’ ಎಮದೆಂಬರಿನ್ನೊಮ್ಮೆ
ನುಡಿಗೂ ನೆಗಳ್ತೆಗೂ ಸಂಬಂಧವೇ ಇಲ್ಲ
ಇದೆ ನಮ್ಮ ಭಾರತಾಂಬೆಯ ದುರ್ಗತಿಗೆ ಕಾರಣ
ಬಡಜನರ ಕಣ್ಣೆತ್ತಿ ನೋಡದಿಹ, ಮರುಗದಿಹ
ಹಾಳು ಪೂಜೆಯದೇಕೆ ?
ಎಂದು ಕೃತಿಗೂ ಮತ್ತು ಮಾತಿಗೂ ಒಂದಿನಿತು ಸಂಬಧವೇ ಇಲ್ಲದಂತೆ ವರ್ತಿಸುವವರ ಪ್ರತಿಷ್ಟಿತ ಸಮಾಜಿಕರ ಕುರಿತು ಹೇಳುತ್ತಾರೆ. ಜಲಗಾರನ ರೂಪದಲ್ಲಿ ಪ್ರತ್ಯಕ್ಷವಾಗು ಶಿವನು ಸಮಾಧಾನಗೊಳಿಸುತ್ತಾ-
ನಾನೊಬ್ಬ ಜಲಗಾರ
ಅಂಜದಿರು ಸೋದರನೆ ಜಗದ ಜಲಗಾರ ನಾನು !
ಶಿವನೆಂದು ಕರೆಯುವರು ಎನ್ನ !
ಎಂದು ಹೇಳುತ್ತಾನೆ. ಈ ಮಾತನ್ನು ನಂಬದ ಜಲಗಾರನು ತನ್ನ ಮುಗ್ದ ಮನಸ್ಸಿನಿಂದ ‘ನೀನು ಶಿವನೆಂದು ನಂಬುವುದು ಹೇಗೆ? ಉಳಿದವರು ಪಂಡಿತರು ಶಿವನನ್ನು ಬೇರೆಯೇ ರೀತಿ ವರ್ಣಿಸಿದ್ದಾರೆ, ಹಾಗಿಲ್ಲ ನೀನು’ ಎಂದು ಕೇಳುವಾಗ ಏನೊಂದು ಅರಿಯದ ಭಾವದ ಮುಗ್ದತೆಯು ವ್ಯಕ್ತವಾಗುತ್ತದೆ.
ಶಿವ : ಸೋದರನೆ, ಶಿವನು ಶಾಸ್ತ್ರಿಗಳ ಶಿವನಲ್ಲ !
ಕಾವ್ಯಗಳ ಶಿವನಲ್ಲ ! ಕವಿತೆಯಾ ಶಿವನಲ್ಲ !
ಬೆಳ್ಳಿ ಬೆಟ್ಟದ ಮೇಲೆ ಗಿರಿಜೆಯೊಡಗೂಡಿ
ಸರಸವಾಡುವ ರಸಿಕ ಶಿವನಲ್ಲ ! ಬ್ರಹ್ಮಾಂಡ
ಒತ್ತುತಿಹ ಕಸದ ರಾಶಿಯ ಮೇಲೆ ಹತ್ತಿ,
ನಿಂತು, ನರ್ತನವೆಸಗುತಿಹ ತೋಟಿ ನಾನು !
ನಿಜಶಿವನು ಜಲಗಾರ ! ನಿನ್ನ ಮುಂದಿಹನು, ನೋಡು !
ಎಂದು ತನ್ನ ಇರುವಿಕೆಯನ್ನು ಸಾಕ್ಷೀಕರಿಸುತ್ತಾನೆ. ಜನಿವಾರ-ಶಿವದಾರದ ಬಡಿವಾರದಲ್ಲಿ ನಿರಾಧಾರನಾಗಿರುವ ಜಲಗಾರನು ತನ್ನ ಮನದಲ್ಲಿಯ ನೋವಿನ ನಿಜವಾದ ನೋವಿನ ಪರಿಯನ್ನು ಹೊರಗೆಡಹುವುದು ಹೀಗೆ –
ಜನಿವಾರ ಬುದಿಗಳು ಇಲ್ಲದೆಯೆ, ಶಿವಗುಡಿಗೆ
ಸೇರಸರು ಶಿವನಾದ ಎನ್ನ. ಅದರಿಂದ
ನಿಜವಾದ ಶಿವನು ಜಲಗಾರ ಶಿವನು
ಶಿವಗುಡಿಯ ಪೀಠದಲಿ ಎಂದೆಂದಿಗೂ ಇಲ್ಲ
ಎಂದು ಜಲಗಾರನು ಹೇಳಲು, ಆತನ ಮುಗ್ದ ಭಕ್ತಿಗೆ ಮೆಚ್ಚಿ ನಿಜವಾದ ಶಿವನು ಹೀಗೆ ಹೇಳುವನು –
ಬೀದಿ ಗುಡಿಸುವ ಬಡವನೆದೆಯಲಿ ನಾನಿರುವೆ !
ಉಳುತಿರುವ ಒಕ್ಕಲಿಗನೆಡೆಯಲ್ಲಿ ನಾನಿರುವೆ
ಎಲ್ಲಿ ಹೊಲೆಯನು ತನ್ನ ಕಾರ್ಯದಲಿ ತೊಡಗಿಹನೊ
ಅಲ್ಲಿ ನಾನವನ ಪಕ್ಕದೊಳಿರುವೆ.
ಕುಂಟರನು, ಕುರುಡರನು, ದೀನರನು ಅನಾಥರನು ಕೈಹಿಡಿದು
ಪೊರೆಯುತಿಹನೆಡೆಯಿರುವೆ
ಭಾರತೀಯ ಮತ-ಧರ್ಮಗಳಲ್ಲಿನ ಅಸ್ಪೃಶ್ಯತೆಯೆಂಬ ಕೊಳಕು ನಿವಾರಣೆ, ಮೇಲು-ಕೀಳೆಂಬ ಬೇಧ-ಭಾವಗಳ ನಿರಾಕರಣೆ, ಸಾಮಾಜಿಕ ಮನೋವಿಕಾಸ ಮತ್ತು ಮಾನವೀಯ ಮೌಲ್ಯಗಳ ಪ್ರತಿಪಾದನೆ ಮುಂತಾದ ಅಂಶಗಳು ಈ ‘ಜಲಗಾರ’ ಕೃತಿಯಲ್ಲಿ ಮಹಾಕವಿಗಳು ಅಳವಡಿಸಿ ಯಶಸ್ವಿಯಾಗಿದ್ದಾರೆ. ಮಹಾಕವಿಗಳು ಇಲ್ಲಿ ಓರ್ವ ಆಧ್ಯಾತ್ಮಿಕ ಸಂತರಂತೆ ಸನಾತನ ಹಿಂದೂ ಪರಂಪರೆ ಮತ್ತು ಭಗವಂತನ ಅಸ್ತಿತ್ವವನ್ನು ಒಪ್ಪಿಕೊಂಡು ಪರಮಾತ್ಮನ ಆಶ್ರಯದಲ್ಲಿ ಸದಾಶಯಗಳನ್ನು ಪೂರೈಸಿಕೊಳ್ಳಬೇಕೆಂದು ಭಯಸಿದವರು. ಅವರು ಪುರೋಹಿತಸಾಹಿ ಮತ್ತು ಪುರೋಹಿತಗಿರಿಯನ್ನು ಯಾವಾಗಲೂ ನಿರಾಕರಿಸುತ್ತಿದ್ದರು. ವ್ಯಕ್ತಿಯೊರ್ವ ತಾನು ಮಾಡುವ ಕಾರ್ಯ-ಕೆಲಸಗಳಿಂದ ಗೌರವ ಲಭಿಸುತ್ತದೆಂಬುದನ್ನು ಈ ಮೂಲಕ ಸಾರಿದ್ದಾರೆ. ಆಚಾರ-ವಿಚಾರಗಳಿಗೆ ನಿಕಟ ಸಂಬಂಧವೇರ್ಪಟ್ಟು ಎಲ್ಲರೂ ಒಂದೇ ಎಂಬ ಭಾವನೆ ಬಲವಾಗಬೇಕೆಂದು ಬಯಸಿದವರು. ಜೀವವಿರೋಧಿ ಧೊರಣೆಗಳು, ದಮನಕ್ಕೊಳಗಾದವರು ನ್ಯಾಯಕ್ಕಾಗಿ ಪ್ರಭುತ್ವವನ್ನು ಪ್ರಶ್ನಿಸಲು ಅನುವಾಗುವಂತೆ ಶಕ್ತರಾಗಿರಬೇಕೆಂದು ಹೇಳುತ್ತಲೇ ಪುರೋಹಿತಶಾಹಿಯು ಶೂದ್ರಶಕ್ತಿಯ ಮುಂದೆ ಪದರುಗುಟ್ಟುವಂತೆ ಮಾಡಿದವರು. ಮೌಡ್ಯವನ್ನು ತೊರೆದು ಬಲಾಡ್ಯರಾಗಿರಬೇಕೆಂದು ಕರೆ ಕೊಟ್ಟವರು. ಈ ರಂಗಕೃತಿಯಲ್ಲಿ ಮಹಾಕವಿಗಳ ವೈಚಾರಿಕತೆ ಹಾಗೂ ಆಧ್ಯಾತ್ಮ ಚಿಂತನೆಗಳು ಮೈಳೈಸಿವೆ.
ಇಲ್ಲಿ ಜಲಗಾರ ಶಿವಭಕ್ತ, ಹಂಗಂತ ಮೋಕ್ಷ ಪಥವನ್ನು ಬಯಸದವನು. ಆತನಿಗೆ ಬದುಕಿನ ದೀಕ್ಷೆಯನ್ನರಸುವ ವಾಸ್ತವವಾದಿ. ಪ್ರಕೃತಿಯೇ ದೈವಕಲ್ಪ ; ಜೈನ-ಬೌದ್ಧಧರ್ಮಗಳ ಕರ್ಮಸಿದ್ಧಾಮತದ ಪ್ರತಿಪಾದನೆಯು ಇಲ್ಲಿ ಮಹಾಕವಿಗಳ ಲೇಖನಿಯಲ್ಲಿ ವ್ಯಕ್ತಗೊಂಡಿದೆ. ಇಲ್ಲಿಯ ಜಲಗಾರನು ತನ್ನ ಕಾಯಕದ ಸಿದ್ಧಿ-ಸಾಧನೆಯಲ್ಲಿ ತೊಡಗಿಸಿಕೊಂಡು ಮನುಕುಲದ ತೀಕ್ಷ್ಣತೆಗಳನ್ನು ಅರಿಯಲು ಹಾತೊರೆಯುವವನು. ಜಗದ ಜಲಗಾರನ ದರ್ಶನ ಮಾತ್ರದಿಂದ ಪುನೀತನಾದ ಶಿವನು ಜಲಗಾರನ ಭಕ್ತಿ ಪರಾಕಾಷ್ಟೆಯನ್ನು ಈ ಸಾಮಾಜಿಕ ಗೀತರೂಪಕದ ಪ್ರಕಾರದಲ್ಲಿ ಸಾಕ್ಷಾತ್ಕರಿಸಲಾಗಿದೆ. ಜಗದ ಕೊಳೆಯನ್ನು ತೊಳೆಯಲು ತಾನಿಡಿದಿರುವ ಪೊರಕೆಯು ಹರಕೆಯನ್ನು ಪೊರೆದು ಸದ್ಗತಿ ಕಾಣಬೇಕೆಂಬುದು ಜಲಗಾರನ ಮನದಾಳದ ಇಚ್ಛೆ.
ಇಲ್ಲಿ ಮಹಾಕವಿಗಳು ಅಳವಡಿಸಿರುವ ಸಾಮಾಜಿಕ ಮತ್ತು ಪಾರಮಾರ್ಥಿಕ ಚಿಂತನೆಯ ವಿಚಾರಗಳು ಸದಿಚ್ಛೆಯ ಪ್ರತೀಕ ಮತ್ತು ಆತ್ಮನಿವೇಧನೆಯ ಪ್ರತಿರೂಪವಾಗಿ ಹೊರಹೊಮ್ಮಿವೆ. ಕರ್ಮಯೋಗಿ ಜಲಗಾರನ ಕಾಯಕದ ಮಹತ್ವದೊಂದಿಗೆ ಸಾಮಾಜಿಕ ಪಿಡುಗಾಗಿರುವ ಅಸ್ಪೃಶ್ಯತೆಯನ್ನು ದಿಕ್ಕರಿಸುವ ಮತ್ತು ಅದರ ವಿರುದ್ಧ ಬಂಡೇಳುವ ಹೃದಯಸ್ಪರ್ಶಿ ಕಲಾತ್ಮಕ ಕೃತಿಯಾಗಿ ರೂಪಿತಗೊಂಡಿದೆ. ಜಗದ ಜಲಗಾರನ ಮನೋಧರ್ಮದ ಮರ್ಮ ಸವಿಸ್ತಾರವಾದುದು ; ಸಾಹಿತ್ಯ ಚಿಂತನೆಗೆ ನಿಲುಕುವಂತದು. ಸಾಮಾಜಿಕ ವಸ್ತು, ಧಾರ್ಮಿಕ ವಿಡಂಭನೆಯನ್ನು ಅಲೌಕಿಕ ಮಟ್ಟಕ್ಕೆರಿಸುವ ಚತುರತೆ ಇಲ್ಲಿದೆ. ಸಾಮಾಜಿಕ ಮತ್ತು ಧಾರ್ಮಿಕ ವಿಷಮತೆಯ ವಿಢಂಬನೆ, ಇಲ್ಲಿ ಕೇವಲ ವಿಢಂಭನೆಯಾಗಿ ಉಳಿಯದೆ, ಇಡೀ ರಂಗಕೃತಿಯ ನಿರ್ಮಾಣವು ಆಧ್ಯಾತ್ಮಿಕ ತಳಹದಿಯ ಮೇಲೆ ನಿಂರಿತುವುದನ್ನು ನಾವು ಕಾಣಬಹುದು. ತನ್ನತನವನಳಿದ ಸಾರ್ಥಕ ಜೀವನದ ಉನ್ನತ ಗತಿಯನ್ನು ಉಜ್ವಲವಾಗಿ ಚಿತ್ರಿಸಿರುವ ಈ ಕೃತಿಯು ಏಕಾಂಕ ಮಾದರಿಯ ಸಮಕಾಲೀನ ಸಂದರ್ಭದಲ್ಲಿಯೂ ತನ್ನ ತಾಜಾತನದ ಕಥಾವಸ್ತುವನ್ನು ಹೊಂದಿರುವ ರಂಗಕೃತಿಯಾಗಿದೆ.
ಸಿದ್ದರಾಮ್, ಈ ಸರಣಿಯ ಈ ಸಲದ ಲೇಖನ ಸಂಪೂರ್ಣ ವಿಭಿನ್ನವಾಗಿ ಚರ್ಚಿಸಿದ್ದೀರಿ….ಮುಂದುವರೆಯಲಿ ಕನ್ನಡದ ಮಂದಾರಪರ್ವತದಂತಿರುವ, ಯು(ಜ)ಗದ ಕವಿ ಕುವೆಂಪುರವರ ನಾಟಕದ ಪ್ರತಿಭಾಲೋಕ….ಶುಭಾಶಯಗಳು…
ಚೆನ್ನಾಗಿದೆ..
ಕರ್ಮಯೋಗಿ ಜಲಗಾರನ ಕಾಯಕದ ಮಹತ್ವದೊಂದಿಗೆ ಸಾಮಾಜಿಕ ಪಿಡುಗಾಗಿರುವ ಅಸ್ಪೃಶ್ಯತೆಯನ್ನು ದಿಕ್ಕರಿಸುವ ಮತ್ತು ಅದರ ವಿರುದ್ಧ ಬಂಡೇಳುವ ಕವನಗಳ ಮೂಲಕ ಚೆನ್ನಾಗಿ ರೂಪುಗೊಂಡಿದೆ..ಸಿದ್ದರಾಮ್,
ಧನ್ಯವಾದಗಳು ಮೇಡಮ್….