ನಾಟಕಕಾರರಾಗಿ ಕುವೆಂಪು (ಭಾಗ-14) : ಹಿಪ್ಪರಗಿ ಸಿದ್ದರಾಮ್


ಎರಡನೆಯ ಅಂಕದ ಮೊದಲನೆಯ ದೃಶ್ಯದಲ್ಲಿ ಅರಮನೆಯ ಹೆಬ್ಬಾಗಿಲ ಬಳಿ ಕಾವಲು ಕಾಯುತ್ತಾ ನಡುರಾತ್ರಿಯಲ್ಲಿ ಕೆಂಚಣ್ಣನಿರುವಾಗ ಹೊನ್ನಯ್ಯನೊಂದಿಗೆ ರಾಜಕುಮಾರ ಬಸವಯ್ಯ ಆಗಮಿಸುತ್ತಾನೆ. ಆ ಸಂದರ್ಭದ ಮದ್ಯರಾತ್ರಿಯ ಮೌನದಲ್ಲಿ ಬೆಳದಿಂಗಳ ಮಾಯೆಯನು ನೋಡಿ ಬಸವಯ್ಯನ ಮನಸ್ಸು ಸೌಂದರ್ಯೋಪಾಸನೆಯ ವರ್ಣನೆಯನ್ನು ಹೀಗೆ ಮಾಡುತ್ತಾನೆ :

ನೋಡಿದೋ ಎಂತಹ ಶಾಂತಿ ಕಡಲಾಡುತಿದೆ !

ಎಂತಹ ಸೊಬಗು ಸುರೆಯಾಗಿಹುದು ಈ ನಮ್ಮ 

ತಿರೆಯಲ್ಲಿ ! ಈ ಪ್ರಕೃತಿ ಸೌಂದರ್ಯವೆಮ್ಮನು 

ಕೈಬೀಸಿ ಕರೆಯುತಿದೆ ಉತ್ತಮ ಪ್ರಪಂಚಕ್ಕೆ. 

……………………………………………………….

ಸತ್ತಮೇಲೆಮೆಗೆ ಪುರಸತ್ತು ;

ಆದರೀ ಚೆಲ್ವು ಸಿಗುವುದೇ? ಯಾವನಿಗೆ ಗೊತ್ತು ?

ಮುಂತಾಗಿ ಮಾತಾಡುತ್ತಾ ಮೈಮರೆತಿರುವಾಗ ಭೂತವು ಬರುವುದನ್ನು ಕೆಂಚಣ್ಣ ನೋಡುತ್ತಾನೆ. ಹೊನ್ನಯ್ಯನು ಬಸವಯ್ಯನಿಗೆ ತೋರಿಸಲು ತನ್ನ ತಂದೆಯ ಆಕಾರವೇ ಬಂದು ಎದುರು ನಿಂತಿರುವುದನ್ನು ಕಂಡು ಭಾವೋದ್ವೇಗಗೊಂಡು,

ಶಿವಶಿವಾ ಕಾಪಾಡು !

ದೆವ್ವವೋ ? ದೇವತೆಯೋ ? ಯಾರಾದರಾಗಿರು !

ಶುಭವು ನಿನ್ನುದ್ದೇಶವೋ ? ಅಶುಭವುದ್ದೇಶವೊ ?

ನಾನರಿಯೆ ! ಆಕಾರದಲಿ ನೀನು ನನ್ನ ಆ 

ತಂದೆಯನೆ ಹೋಲುತಿಹೆ. ಅದರಿಮದೆ ನುಡಿಸುವೆ ; 

ಬಸವೇಂದ್ರ ಭೂಮಿಪನೆ, ಓ ತಂದೆ, ಓ ದೊರೆಯೆ,

ಬಿದನೂರನಾಳಿದ ಸ್ವಾಮಿಯೇ, ಬೇಡುವೆನು ;

ಪಡಿನುಡಿಯನಿತ್ತೆನ್ನ ಮನದ ಸಮದೇಹವನು

ಪರಿಹರಿಸು. ಪುಣ್ಯಾತ್ಮನಾದ ನೀನಿಂತೇಕೆ

ದಿಕ್ಕಿರದ ಮಡಿದವನ ಆತ್ಮದಂದದಲಿ 

ಪ್ರೇತರುಪದಿ ರಾತ್ರಿಯನು ಸುತ್ತುತ್ತಿರುವೆ ?

ಇದರರ್ಥವೇನರುಹು ! ದುಃಖದಿಂದೆನ್ನೆದೆ

ಸಿಡಿಯುತಿದೆ. ಓ ನನ್ನ ತಂದೆ, ಮಾತಾಡು !

ನೀನೆನ್ನ ತಂದೆಯೇ ದಿಟವಾದರೆನಗೆ ನುಡಿ !

ಏಕಿಂತು ತೊಳಲುತಿಹೆ ? ಬಯಕೆಯೇನಿಹುದಿಲ್ಲಿ ? 

ನಿನಗಾವ ರೀತಿಯಲಿ ನಾನು ನೆರವಾಗಬಲ್ಲೆ ? 

ಹೇಳು ! ನುಡಿ ! ಮಾತಾಡು !

ಇಂತಹ ನುಡಿಗಳನ್ನು ಕೇಳಿದ ಭೂತವು ಬಸವಯ್ಯನೆಡೆಗೆ ಸನ್ನೆ ಮಾಡುತ್ತದೆ. ಆವೇಶಗೊಂಡ ಬಸವಯ್ಯನು ಹೊನ್ನಯ್ಯ ಮತ್ತು ಕೆಂಚಣ್ಣ ಇಬ್ಬರೂ ಅವನ ಕೈ ಹಿಡಿದರೂ ಬಿಡಿಸಿಕೊಂಡು ಭೂತದೆಡೆಗೆ ಹೋಗುವನು. ಇಲ್ಲಿ ಗಮನಿಸಬೇಕಾದ ಅಂಶವೊಂದನ್ನುನಾವು ಗಮನಿಸುವುದು ಔಚಿತ್ಯಪೂರ್ಣವಾಗಿದೆ. ಷೇಕ್ಸ್-ಪೀಯರ್ ‍ನ ಮೂಲ ಕೃತಿಯಾದ ಹ್ಯಾಮ್ಲೆಟ್‍ದಲ್ಲಿ ಭೂತಾಕೃತಿ ಮತ್ತು ರಾಜಕುಮಾರ ಇಬ್ಬರೂ ಸಂಭಾಷಿಸುವ ದೃಶ್ಯವಿದೆ. ಆದರೆ ಮಹಾಕವಿಗಳು ಇಲ್ಲಿ ಕೇವಲ ಭೂತವು ಕೈಬೀಸಿ ಕರೆಯುವುದಕ್ಕಷ್ಟೇಸೀಮಿತಗೊಳಿಸಿದ್ದಾರೆ. ಯಾಕೆಂದರೆ ಕರುನಾಡಿನ ಪ್ರೇಕ್ಷಕರು/ಓದುಗರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಈ ರೀತಿ ಸೃಷ್ಟಿಸಿರಬಹುದು ಮತ್ತು ಕಥನ ಕುತೂಹಲವನ್ನು ಕಾಯ್ದುಕೊಳ್ಳುವ ಸಲುವಾಗಿ ಹೀಗೆ ಮಾಡಿರಬಹುದೆಂದು ನಾವುಅರಿತುಕೊಳ್ಳಬಹುದು. ಮುಂದಿನ ದೃಶ್ಯಾವಳಿಗಳಲ್ಲಿ ಭೂತವು ಬಸವಯ್ಯನಿಗೆ ಏನು ಹೇಳಿತೆಂಬುದನ್ನು ರಾಜಕುಮಾರ ಬಸವಯ್ಯನು ರುದ್ರಾಂಬೆ ಮತ್ತು ಮಂತ್ರಿ ಲಿಂಗಣ್ಣನವರ ಮುಂದೆ ಹೇಳುವಾಗ ನಾವು ತಿಳಿದುಕೊಳ್ಳಬಹುದು.

ಎರಡನೇಯ ದೃಶ್ಯದಲ್ಲಿ ನಿಂಬಯ್ಯನ ಮನೆಯ ಕೊಠಡಿಯೊಂದರಲ್ಲಿ ಆತನ ಮಗನಾದ ಸೋಮಯ್ಯನು ತನ್ನ ಮಿತ್ರನಾದ ಶಿವಯ್ಯನೊಡನೆ ಮಾತಾಡುತ್ತಾ ಕುಳಿತದ್ದಾನೆ. ಈ ಶಿವಯ್ಯನು ಈ ರಂಗಕೃತಿಯ ಕಥಾನಕ ಮತ್ತೊಂದು ಪ್ರಮುಖ ಪಾತ್ರವಾಗಿದೆ.ರುದ್ರಾಂಬೆಯ ಪ್ರೇಮಕ್ಕಾಗಿ ಹಂಬಲಿಸುತ್ತಿರುವ ಭಗ್ನಪ್ರೇಮಿ. ತನ್ನ ಉದ್ದೇಶ ಸಾಧನೆಗಾಗಿ ಏನನ್ನಾದರೂ ಮಾಡಲು ಹಿಂಜರಿಯದ ದುಷ್ಟಕಪಟಿ. ಬಸವಯ್ಯನಿರುವತನಕ ತನಗೆ ರುದ್ರಾಂಬೆಯು ಸಿಗುವುದಿಲ್ಲವಾದ್ದರಿಂದ ಸೋಮಯ್ಯನಿಂದ ರಾಜಕುಮಾರಬಸವಯ್ಯನ ಕೊಲೆ ಮಾಡಿಸಲು ಸಂಚು ರೂಪಿಸುವುದರೊಂದಿಗೆ ತನಗೆ ರುದ್ರಾಂಬೆ ಸಿಗುವಂತೆ, ಬಸವಯ್ಯನ ಮರಣಾನಂತರ ರಾಣಿಯ ದತ್ತುಪುತ್ರನಾಗಿ ಸೋಮಯ್ಯನಿಗೆ ರಾಜ್ಯದಾಡಳಿತವನ್ನು ಕೊಡಿಸಬೇಕೆನ್ನುವ ಭ್ರಮೆಯಲ್ಲಿರುವವನು. ಈವಿಚಾರವಾಗಿ ಸೋಮಯ್ಯನ ತಲೆತುಂಬುತ್ತಿರುವಾಗ, ಸ್ವಂತ ಬುದ್ಧಿಯಿಲ್ಲದ ಸೋಮಯ್ಯನು ಆತನ ಮಾತಿಗೆ ಮಾನಸಿಕವಾಗಿ ಸಿದ್ಧನಾಗುತ್ತಿರುವಾಗ ತಿಮ್ಮಜಟ್ಟಿ ಪ್ರವೇಶಿಸಿ ತೀರಿಹೋದ ದೊರೆಯು ಭೂತವಾಗಿ ಕಾಣಿಸಿಕೊಂಡಿರುವ ಸಂಗತಿಯಿಂದಆರಂಭಿಸಿ ಅದು ರಾಜಕುಮಾರ ಬಸವಯ್ಯನೊಂದಿಗೆ ಮಾತಾಡಿದುದನ್ನು ಸನ್ಯಾಸಿಯಿಂದ ತಿಳಿದುಕೊಂಡಿರುವುದನ್ನು ವಿವರಿಸುತ್ತಾನೆ. ಇದರಲ್ಲಿ ಏನೋ ತಂತ್ರವಿದೆಯೆಂದು ಸೋಮಯ್ಯ ಮತ್ತು ಶಿವಯ್ಯ ನಿರ್ಧರಿಸಿ, ಅದನ್ನು ನಿಂಬಯ್ಯ ಮತ್ತು ರಾಣಿಚೆಲುವಾಂಬಿಕೆಯ ಹತ್ತಿರ ತಿಳಿಸಲು ಮತ್ತು ಅರಮನೆಯ ಕಡೆಗೆ ಓಡುತ್ತಾರೆ.

ಮೂರನೇಯ ದೃಶ್ಯದಲ್ಲಿ ಬಿದನೂರಿನ ಅರಮನೆಯಲ್ಲಿ ರಾಣಿ ಚೆಲುವಾಂಬೆ ಮತ್ತು ನಿಂಬಯ್ಯ ಮಾತಾಡುತ್ತಿದ್ದಾರೆ. ಭೂತದ ಕಥೆಯನ್ನು ನಂಬದ ನಿಂಬಯ್ಯನು ‘ಬಸವಯ್ಯನೂಹೆಯಾತ್ಮಕೆ ದೇಹವನು ನೀಡೆ ಯಾರೊ ಸೃಜಿಸಿದ ಸಂಚು !ನಮ್ಮನೆಂತಾದರೂ ಅಪರಾದಿಗಳು ಎಂದು ಮೂಲೆಗೊತ್ತಲು ನೆಯ್ದ ಜಾಲವಿದು.’ ಎಂದು ತರ್ಕಿಸುತ್ತಾನೆ. ಆ ಬಲೆಯು ಸುತ್ತಿಸುಳಿಯುವ ಮೊದಲೆ ಅದನ್ನು ತುಂಡುಗೈಯಲು ಅಣಿಯಾಗುತ್ತಾನೆ. ಅದರೊಂದಿಗೆ ಮುಂದಿನ ಉಪಾಯವನ್ನು ಹೀಗೆಸೂಚಿಸುತ್ತಾನೆ.

ಹಿಂದುಮುಂದನು ನೋಡದೆಯೆ ಈಗ

ಬಸವಯ್ಯ ಲಿಂಗಣ್ಣರನು ಹಿಡಿದು ಸೆರೆಮನೆಯೊಳಿಡಬೇಕು

ಎಂದು ಹೇಳುತ್ತಾನೆ. ಇದರಿಂದ ಜನರು ದಂಗೆಯೇಳಬಹುದೆಂಬ ರಾಣಿಯು ದಿಗಿಲುಗೊಳ್ಳುವಳು. ಜನರನ್ನು ಕುರಿಗಳೆಂದು ತಿಳಿದುಕೊಂಡು ನಿಕೃಷ್ಟವಾಗಿ ಕಾಣುವ ದುಷ್ಟಬುದ್ಧಿಯ ಕೆಚ್ಚು ಆತನದು. ಅದೇ ವೇಳೆಗೆ ಸೋಮಯ್ಯ ಮತ್ತು ಶಿವಯ್ಯ ಬಂದುಭೂತದ ವರ್ತಮಾನವನ್ನು ತಿಮ್ಮಜಟ್ಟಿ ಹೇಳಿರುವುದನ್ನು ಕೇಳಿ ಬಸವಯ್ಯ ಮತ್ತು ಲಿಂಗಣ್ಣನವರು ಪಿತೂರಿಯಲ್ಲಿ ತೊಡಗಿರುವುದು ನಿಂಬಯ್ಯನಿಗೆ ಮತ್ತಷ್ಟು ಮನದಟ್ಟಾಗುತ್ತದೆ. ಹೀಗೆ ತನ್ನ ಮಾನಸಿಕ ಸ್ಥಿಮಿತವನು ಕಳೆದುಕೊಂಡ ನಿಂಬಯ್ಯನುಸೋಮಯ್ಯ ಮತ್ತು ಶಿವಯ್ಯನಿಗೆ ಸೇನೆ ಸಿದ್ದಗೊಳಿಸುವಂತೆ ಹೇಳಿ ಕಳಿಸುತ್ತಾನೆ. ರಾಣಿ ಚೆಲುವಾಂಬೆಯು ‘ಪ್ರೀಯನೇ, ಎಚ್ಚರಿಕೆಯಿಂದ ಮುಂಬರಿಯಬೇಕು’ ಎಂದು ಎಚ್ಚರಿಸುತ್ತಾಳೆ. ಸೈನಿಕರಲ್ಲಿ ಭಕ್ತಿಯನ್ನುದ್ರೇಕಗೊಳಿಸಲು ತಾನೂ ಹೊರಡುತ್ತಾನೆ.

ನಾಲ್ಕನೇಯ ದೃಶ್ಯದಲ್ಲಿ ಮಂತ್ರಿ ಲಿಂಗಣ್ಣನ ಮನೆಯಲ್ಲಿ ರುದ್ರಾಂಬೆ, ಬಸವಯ್ಯ, ಹೊನ್ನಯ್ಯ ಎಲ್ಲರೂ ಭೂತದರ್ಶನವಾಗಿ, ಅದು ಸ್ಪಷ್ಟವಾಗಿ ನುಡಿದ ಮಾತುಗಳನ್ನು ಮೊದ-ಮೊದಲಿಗೆ ನಂಬದ ಮಂತ್ರಿ ಲಿಂಗಣ್ಣನವರು ಈಗ ಎಲ್ಲರೂ ತಾವುನೋಡಿರುವುದನ್ನು ಹೇಳಿದ ನಂತರವಷ್ಟೇ ನಂಬಿದ್ದಾರೆ.

ಚೆಲುವಾಂಬೆ ನಿಂಬಯ್ಯರಿಬ್ಬರೂ ಸೇರಿ

ಔಷಧಿಯ ನೆವದಿಂದೆ ನನಗೆ ವಿಷವನು ಕುಡಿಸಿ

ಕೊಂದರು

ಎಂದು ಭೂತವು ಹೇಳಿರುವುದು ತನ್ನ ತಂದೆಯ ಪ್ರೇತವೇ ಹೌದೆಂದು ಹೇಳಿದುದನ್ನು, ಅದರೊಂದಿಗೆ ‘ಲಿಂಗಣ್ಣ ಮಂತ್ರಿಯದು ಸರಳಹೃದಯವು, ಮಗೂ, ಆತನರಿಯನು ನಿಜವ’ ಎಂದು ಹೇಳಿದುದನ್ನೂ ಸಹ ಅರುಹಿದಾಗ ರುದ್ರಾಂಬೆಯು ಕಡುಕೋಪದಿಂದ‘ನರಕವಿಂತುಟು ನಾಕ ವೇಷದಲಿ ಬಹುದೆಂದು ನಾನರಿದುದಿಲ್ಲ’ ಎನ್ನುತ್ತಾಳೆ. ಲಿಂಗಣ್ಣ ಮಂತ್ರಿಗಳಿಗೆ ಅಂದಿನ ಚಿತ್ರ ಕಣ್ಣೇದುರು ಬಂದು ರೋಧಿಸುತ್ತಾನೆ.

ನೀನು ಮದ್ದನು ಒಲ್ಲೆನೆಂದರೂ ನಾನೆಯೆ

ಬಲವಂತದಿಂದ ಕುಡಿಸಿದೆನಲ್ಲಾ ಶಿವಶಿವಾ !

ಅವರಲ್ಲ ಅವರಲ್ಲ, ನಾನೆ ಕೊಲೆ ಪಾತಕನು !

ಎಂದು ರೋಧಿಸುತ್ತಾನೆ. ಹೀಗಿರುವಾಗ ಇದಕ್ಕೆ ಪ್ರತೀಕಾರವನ್ನು ತೀರಿಸಿಕೊಳ್ಳಬೇಕೆಂದು ಯೋಚಿಸುತ್ತಾ ಹೊನ್ನಯ್ಯನನ್ನು ಮುಂದಿನ ಸಿದ್ಧತೆಗೆ ಕಳುಹಿಸುವುದರೊಂದಿಗೆ ರಾಣಿ ಚೆಲುವಾಂಬೆ, ದುರುಳ ನಿಂಬಯ್ಯನನ್ನು ಸೆರೆಯಾಳಾಗಿಸಿಕೊಳ್ಲುವವಿಚಾರವಾಗಿ ರಾಜಕುಮಾರ ಬಸವಯ್ಯನ ಹತ್ತಿರ ಯೋಚಿಸುತ್ತಿರುವಾಗ ದಿಡೀರನೆ ನಿಂಬಯ್ಯನ ಮಗ ಸೋಮಯ್ಯ ಮತ್ತು ಉಪಸೇನಾಧಿಪತಿ ರುದ್ರಯ್ಯ ಸೈನ್ಯದೊಡನೆ ಬಂದು ಇವರನ್ನು ಬಂಧಿಸುತ್ತಾರೆ. ಬಸವಯ್ಯನು ಪ್ರತಿಭಟಿಸುತ್ತಿರಲು ಮಂತ್ರಿಲಿಂಗಣ್ಣನವರು ಪರಿಸ್ಥಿತಿಯನ್ನು ಅರಿತುಕೊಂಡು ಉಪಾಯದಿಂದ ನಂತರ ಪಾರಾಗಲು ಅವಕಾಶವಿರುವುದರಿಂದ ಪ್ರತಿಭಟಿಸದೇ ಅವರ ಹಿಂದೆ ಹೋಗುವುದೊಳಿತು ಎಂದು ಹೇಳಲು ಸೆರೆಯಾಳಾಗಿ ಹೋಗುವರು. ಇದನ್ನು ನೋಡಿದ ರುದ್ರಾಂಬೆಯು ತನ್ನತಂದೆ ಮತ್ತು ತನ್ನ ಇನಿಯನ್ನೂ ಬಿಡುಗಣ್ಣಾಗಿ ನೋಡುತ್ತಾ ಕಂಬನಿದುಂಬಿ ನಿಲ್ಲುವುದರೊಂದಿಗೆ ಎರಡನೇಯ ಅಂಕ ಸಮಾಪ್ತಿಯಾಗುತ್ತದೆ.

ಇಲ್ಲಿ ಮೊದಲನೆಯ ಅಂಕದಲ್ಲಿ ಉಲ್ಲೇಖವಾಗುತ್ತ ಹೋಗುವ ಘಟನೆಯ ನಂತರದ ಹೋರಾಟವು ಎರಡನೇಯ ಅಂಕದಲ್ಲಿ ತೀವ್ರತೆ ಮತ್ತು ಅನೀರಿಕ್ಷಿತ ಬೆಳವಣಿಗೆಗಳಿಗೆ ದಾರಿ ಮಾಡಿಕೊಡುತ್ತದೆ. ಇಂತಹ ರಾಜಕಾರಣವನ್ನು ವಿಶ್ವದಲ್ಲಿ ಇಂದಿಗೂ ಮಿಲಿಟರಿಸರ್ವಾಧಿಕಾರಿಗಳ ಆಡಳಿತವಿರುವ ಮತ್ತು ಕೆಲವೊಂದು ಆಪ್ರಿಕನ್ ಮತ್ತು ಅರಬ್ ದೇಶಗಳಲ್ಲಿ ಕಾಣುತ್ತಿದ್ದೇವೆ. ಆದರೆ ಭಾರತೀಯರಾದ ನಾವು ಇಂತಹ ಕ್ಷಿಪ್ರಕ್ರಾಂತಿಯ ಕಾರ್ಯಾಚರಣೆ/ಬದಲಾವಣೆಗಳನ್ನು ಇತಿಹಾಸದಲ್ಲಿಯೇ ಅನುಭವಿಸಿ ಈಗಪ್ರಜಾಪ್ರಭುತ್ವವೆಂಬ ವಿಶ್ವದ ಅತ್ಯುತ್ತಮವಾದ ಮಹಾಮಾರ್ಗದಲ್ಲಿ ಮುನ್ನಡೆದಿದ್ದೇವೆ. ಅದು ಒಂದೆಡೆ ಇರಲಿ ಈಗ ನಮ್ಮ ಬಿದನೂರು ಸಂಸ್ಥಾನದ ಕಥಾನಕಕ್ಕೆ ಬರೋಣ. ಇಲ್ಲಿ ಬಸವಯ್ಯನ ಸಂಶಯಕ್ಕೆ ಪೂರಕವಾಗಿ, ತನ್ನ ತಂದೆಯಕೊಲೆಯಾಗಿರುವುದನ್ನು ಭೂತವು ಹೇಳಿರುವುದು ಸಮರ್ಥನೀಯ ಮತ್ತು ನಿರೀಕ್ಷಿತವಾಗಿದ್ದರೂ ಬಸವಯ್ಯ ಮತ್ತು ಲಿಂಗಣ್ಣ ಮಂತ್ರಿಗಳು ಬಂಧಿಯಾಗುವುದು ಅನಿರೀಕ್ಷಿತವಾಗಿ ರಂಗಕೃತಿಯ ಓದುಗರಿಗೆ/ಪ್ರೇಕ್ಷಕಪ್ರಭುಗಳಲ್ಲಿ ಉದ್ವಿಗ್ನ, ಕುತೂಹಲ ಮತ್ತುರೋಮಾಂಚನ (ಥ್ರಿಲ್ಲಿಂಗ್) ನೀಡುತ್ತದೆ. ಮುಂದಿನ ಬೆಳವಣಿಗೆಗಳಿಗಾಗಿ ಉಸಿರನ್ನು ಬಿಗಿಹಿಡಿದು ಕುಳಿತುಕೊಳ್ಳುವಂತೆ ಮಹಾಕವಿಗಳು ಆಗಿನ ಕಾಲದಲ್ಲಿಯೇ ಸಸ್ಪೆನ್ಸ್ ಥ್ರೀಲ್ಲರ್ ಸೃಷ್ಟಿಸಿದ್ದಾರೆಂಬುದು ಕುತೂಹಲದ ಸಂಗತಿ.

ಮೂರನೇಯ ಅಂಕದಲ್ಲಿ ಬಂಧಿಗಳಾಗಿರುವ ಮಂತ್ರಿ ಲಿಂಗಣ್ಣ ಮತ್ತು ರಾಜಕುಮಾರ ಬಸವಯ್ಯರು ಬಿಡುಗಡೆಯಾಗುವುದು ಅದಕ್ಕೆ ಶಿವಯ್ಯನು ರುದ್ರಾಂಬೆಯನ್ನು ಪಡೆಯುವ ಉದ್ದೇಶದಿಂದ ಸಹಕರಿಸುವುದು. ರುದ್ರಾಂಬೆಯ ತಂದೆ ಮಂತ್ರಿ ಲಿಂಗಣ್ಣನನ್ನುಬಿಡುಗೊಳಿಸಲು ಸಹಾಯ ಮಾಡಿದರೆ ಅವಳ ಪ್ರೇಮವನ್ನು ಸಂಪಾದಿಸಬಹುದೆಂದು ಅವಳ ಹತ್ತಿರ ಬಂದು ಪರಿಸ್ಥಿತಿಯನ್ನು ತನಗೆ ಬೇಕಾದಂತೆ ಹೇಳುತ್ತಾ ಅವಳ ಮನಸ್ಸು ತನ್ನ ಕಡೆಗೆ ತಿರುಗಿಸಿಕೊಳ್ಳಲು ನಾನಾ ರೀತಿಯ ಪ್ರಯತ್ನಿಸಿದರೂ ಅವಳುಇತನಿಗೆ ಅಣ್ಣನಂತಿರುವೆಯೆಂದು ಹೇಳುತ್ತಾಳೆ. ಅನೇಕ ಮಾತುಗಳಾದ ನಂತರವೂ ಆತನು ನೇರವಾಗಿ ‘ನಿನ್ನ ಪ್ರೇಮದ ಮುಖವ ನನ್ನೆಡೆಗೆ ತಿರುಗಿಸುವೆಯಾ?’ ಎಂದು ಕೇಳುತ್ತಾನೆ. ಇಲ್ಲಿಯವರೆಗೂ ಆತ ತೋರಿಸಿದ ಅನುಕಂಪದ ಹಿಂದಿರುವ ಉದ್ದೇಶತಿಳಿದು ಬೆಚ್ಚಿಬಿದ್ದರೂ ಅಧೀರಳಾಗದೇ ‘ಬಾಂಧವರ ಜೀವವನು ಉಳಿಸಿಕೊಳ್ಳುವ ಸುಳ್ಳು ಪಾಪವಾಗದು’ ಎಂದು ಮನದಲ್ಲಿಯೇ ನಿರ್ಧರಿಸಿ ಅದನ್ನು ತೋರ್ಪಡಿಸಿಕೊಳ್ಳದೇ ‘ಆಗಲಿ ನಿನ್ನಾಶೆಯಂತೆಯೆ ನಡೆಯುವೆನು. ಸೆರೆಯಿಂದೆ ಎಂತಾದರೂಅವರಿಬ್ಬರನು ಹೊರಗೆಡಹು’ ಎಂದು ಹೇಳುತ್ತಾಳೆ. ಇದರಿಂದ ಸಂತಸಗೊಮಡ ಶಿವಯ್ಯನು ರುದ್ರಾಂಬೆಯು ತನ್ನನ್ನು ಒಪ್ಪಿಕೊಂಡಳೆಂದು ತಿಳಿದುಕೊಂಡು ಅವರಿಬ್ಬರನ್ನು ಬಿಡುಗಡೆಗೊಳಿಸುವ ಕೆಲಸಕ್ಕೆ ಯೋಚಿಸುತ್ತಾ ಹೊರಡುವಾಗ ಆಗಮಿಸುವಹೊನ್ನಯ್ಯನು ತೃಣಾನಂದ ಪರಮಹಂಸ ಸನ್ಯಾಸಿಯ ಸಹಾಯದಿಂದ ಅವರನ್ನು ಸೆರೆಯಿಂದ ಬಿಡಿಸಬಹುದೆಂದು ಹೇಳುತ್ತಾ ಆತನ ಸಹಾಯವನ್ನು ಪಡೆಯಲು ಹೇಳುತ್ತಾ ಶಿವಯ್ಯನು ಹೊರಡುವನು. ಆತ ಹೋದ ನಂತರ ರಾಜಕುಮಾರ ಶಿವಯ್ಯನಆಪ್ತಮಿತ್ರನಾದ ಶಿವಯ್ಯನು ತನ್ನ ಗೆಳೆಯನ ಪ್ರೇಯಸಿ ರುದ್ರಾಂಬೆಗೆ ಹೇಳುವ ಮಾತು ಹೃದಯಂಗಮವಾಗಿದೆ.

ಧೈರ್ಯದಿಂದಿರು, ತಂಗಿ, ಈಶ್ವರನ ದಯೆಯಿರಲು

ಎಲ್ಲ ಮಂಗಳವಹುದು, ಈ ದುಃಖಮಾಲೆಗಳು

ಸುಖಕೆ ಸೋಪಾನಗಳು. ಜಗದೀಶ್ವರನ ಕೃಪೆಗೆ

ನೂರು ಮಾರ್ಗಗಳಿಹವು ; ನೂರು ವೇಷಗಳಿಹವು.

ಸುಖವೆಂಬುದಾತನೊಲ್ಮೆಗೆ ಚಿಹ್ನೆಯಾಗುವೊಡೆ

ದುಃಖವೂ ಅಂತೇಯೇ ಎಂದರಿಯುವುದು, ತಂಗಿ !

ಅದರಿಂದೆ ಕಾರುಣಿಕ ಈಶ್ವರನ ಕಾರ್ಯದಲಿ

ಶ್ರೇಯಸ್ಸೆ ತುದಿಯ ಗುರಿ ಎಂಬುದನು ನಂಬಿ

ನೆಚ್ಚುಗೆಡದಿರು. ಎಲ್ಲ ಮಂಗಳವಾಗುವುದು !

ಈ ಮಾತುಗಳಲ್ಲಿ ಹೊನ್ನಯ್ಯನ ಒಳ್ಳೆಯ ಸ್ವಭಾವ ಮತ್ತು ಸರಳತೆ, ಸ್ನೇಹಪರತೆ, ಕಾಳಜಿ, ಧೈರ್ಯಹೇಳುವಂತಹ ಸದ್ಗುಣಗಳನ್ನು ಕಾಣಬಹುದು. ಹೋಗುವುದಕ್ಕಿಂತ ಮೊದಲು ರುದ್ರಾಂಬೆಗೆ ಹೇಳುವ ಎಚ್ಚರಿಕೆಯ ಮಾತು ರಾಜಕಾರಣದ ವಿಪ್ಲವಗಳಲ್ಲಿಹೇಗೆ ಎಚ್ಚರಾಗಿರಬೇಕೆಂಬುದನ್ನು ಅರಿತುಕೊಳ್ಳಬಹುದು. ‘ನಾವು ಅವರನು ಸಾಗಿಸಿದ ತರುವಾಯ ನಿನಗೇನಾದರೂ ಕೇಡಾಗಬಹುದು. ಮೈಮರೆಸಿಕೊಳ್ಳಲು ಸಿದ್ಧಳಾಗಿರಬೇಕು’ ಎಂದು ಹೇಳುತ್ತಾನೆ.

ಮುಂದಿನ ದೃಶ್ಯ 2ರಲ್ಲಿ ಆರಂಭದಲ್ಲಿಯೇ ಶಿವಯ್ಯನು ಸನ್ಯಾಸಿಯಿಂದ ಬೀಳ್ಕೊಡುತ್ತಿದ್ದಾನೆ. ಬಸವಯ್ಯ ಮತ್ತು ಲಿಂಗಣ್ಣರನ್ನು ರಾತ್ರಿ ವೇಳೆ ಸೆರೆಮನೆಯಿಂದ ಬಿಡುಗಡೆ ಮಾಡಲು ಬೇಕಾಗುವ ಎಲ್ಲವನ್ನೂ ಮಾತಾಡಿಕೊಳ್ಳುವುದರೊಂದಿಗೆ ಸನ್ಯಾಸಿಯು ಈಕಾರ್ಯವನ್ನು ಮಾಡಲು ಒಪ್ಪಿಕೊಂಡಿದ್ದಾನೆ. ಶಿವಯ್ಯ ಹೋದ ನಂತರ ಸನ್ಯಾಸಿ ಬೇಟಿಯಾಗಲು ತಿಮ್ಮಜಟ್ಟಿಯು ಬರುತ್ತಾನೆ. ಇಂದಿನ ರಾತ್ರಿ ಸೆರೆಮನೆಯಲ್ಲಿ ಲಿಂಗಣ್ಣ ಮತ್ತು ಬಸವಯ್ಯರನ್ನು ಕೊಲ್ಲಲು ತನಗೆ ಸುಫಾರಿಯನ್ನು ಚೆಲುವಾಂಬೆ ಮತ್ತುನಿಂಬಯ್ಯರು ನೀಡಿರುವುದನ್ನು ಹೇಳುತ್ತಾ, ತಾನು ಜೀವನಪೂರ್ತಿ ಕೊಲೆಗಾರನಾಗಿಯೇ ಇರುವುದಕ್ಕಾಗಿ ಪಶ್ಚಾತ್ತಾಪ ಪಡುತ್ತಾ ಇದರಿಂದ ತನಗೆ ಮುಕ್ತಿ ನೀಡಬೇಕೆಂದು ಬೇಡಿಕೊಳ್ಳುತ್ತಾನೆ. ತಾನು ಹೇಳಿದಂತೆ ಮಾಡಿದರೆ ಮುಕ್ತಿ ನೀಡುವೆನೆಂದುಹೇಳುವುದರೊಂದಿಗೆ ಸೆರೆಯಲ್ಲಿರುವ ಇಬ್ಬರನ್ನೂ ಬಿಡುಗಡೆಗೆ ಇಂದಿನ ರಾತ್ರಿ ಸಹಕರಿಸುವ ಉಪಾಯವನ್ನು ಹೇಳುವುದರೊಂದಿಗೆ ನಿನ್ನ ಸಹಚರರಿಗೆ ತಿನಿಸಲು ಮದ್ದನ್ನು ಕೊಟ್ಟು ಕಳುಹಿಸಿಕೊಡುತ್ತಾನೆ.

ಮುಂದಿನ 3ನೇಯ ದೃಶ್ಯದಲ್ಲಿ ಸನ್ಯಾಸಿಯ ಪಾತ್ರ ಬಹಳ ಚಾಣಾಕ್ಷತನದಿಂದ ಗಮನ ಸೆಳೆಯುತ್ತದೆ. ಸೆರೆಮನೆಯ ಕಾವಲುಗಾರ ಸಿಂಗಣ್ಣನನ್ನು ತನ್ನ ಮಾತುಗಳಿಂದ ಕೈಲಾಸವನ್ನು ತೋರಿಸುವುದರೊಂದಿಗೆ ಶಿವನೊಂದಿಗೆ ಮಾತನಾಡುವ ಧೈರ್ಯಕ್ಕೆಬೇಕಾಗಿರುವ ಬ್ರಹ್ಮಜ್ಞಾನಾಮೃತ ಎಂಬ ಗುಳಿಗೆಯನ್ನು ನುಂಗಿಸಿ, ಅವನು ಎಚ್ಚರತಪ್ಪಿ ಬೀಳುವಂತೆ ಮಾಡಿ ಸೆರೆಮನೆಯ ಬೀಗದ ಕೈ ಸಿಕ್ಕನಂತರ ಸಿಳ್ಳೆ (ಸಿಲ್ಪಿ/ಸೀಟಿ/ವಿಸಲ್) ಸಂಕೇತ ನೀಡಿ ದೂರದಲ್ಲಿ ಕಾದಿದ್ದ ಶಿವಯ್ಯ ಮತ್ತು ಹೊನ್ನಯ್ಯರನ್ನು ಕರೆದುಒಳಗಿರುವ ಇಬ್ಬರನ್ನೂ ಬಿಡಿಸಿಕೊಂಡು ಬರಲು ಹೇಳಿ ತಾನು ದೂರದಲ್ಲಿ ಇವರಿಗೋಸ್ಕರ ಕಾದು ನಿಲ್ಲುತ್ತಾನೆ.

ಮುಂದಿನ 4ನೇಯ ದೃಶ್ಯದಲ್ಲಿ ಸೆರೆಮನೆಯ ಒಂದು ಕೋಣೆಯಲ್ಲಿ ದಣಿದು ಬಸವಳಿದು ಬಸವಯ್ಯನು ಮಲಗಿರಲು ಅವನನ್ನು ಬಿಡಿಸಿಕೊಂಡು ಹೋಗಲು ಶಿವಯ್ಯ ಒಳಗೆ ಬಂದಿದ್ದಾನೆ. ಮಂತ್ರಿ ಲಿಂಗಣ್ಣನ ಕೋಣೆಗೆ ಹೊನ್ನಯ್ಯನನು ಕಳಿಸಿ ತಾನು ಇಲ್ಲಿಗೆಬಂದಿದ್ದಾನೆ. ಸೆರೆಮನೆಯಲ್ಲಿಯೂ ನಿಶ್ಚಿಂತನಾಗಿ ಮಲಗಿಕೊಂಡಿರುವ ಬಸವಯ್ಯನನ್ನು ನೋಡಿ ಗಾಬರಿಯಾಗುತ್ತಾನೆ. ಆ ಕ್ಷಣವೇ ಶಿವಯ್ಯನಲ್ಲಿರುವ ದುಷ್ಟಬುದ್ಧಿ ಜಾಗೃತಗೊಂಡು ಬಸವಯ್ಯನ ರುಂಡವನ್ನು ಹಾರಿಸಬೇಕೆಂದು ತನ್ನ ಒರೆಯಲ್ಲಿದ್ದ ಖಡ್ಗವನ್ನುಹೊರಗೆಳೆಯಲು ರುದ್ರಾಂಬೆಯನ್ನು ಕಂಡಂತಾಗಿ ತನಗೆ ತಾನೆ ‘ಹೀನಬುದ್ಧಿಯ ಶಿವಯ್ಯನೇ’ ಎಂದು ಎಚ್ಚರಗೊಂಡವನಾಗಿ ಕಠಾರಿಯನ್ನು ಬಲವಾಗಿ ಕೆಳಗೆ ಬಿಸಾಡುವನು. ಆ ಸದ್ದಿಗೆ ಬಸವಯ್ಯನು ಎಚ್ಚರಗೊಂಡಾಗ ‘ಲಿಂಗಣ್ಣ ಮಂತ್ರಿಗಳೂಬಿಡುಗಡೆಯಾಗಿ ನಿನಗಾಗಿ ಹೊರಗೆ ಕಾದಿದ್ದಾರೆ’ ಎಂದು ಹೇಳುತ್ತಾ ಆತನನ್ನು ವೇಗವಾಗಿ ಶಿವಯ್ಯನು ಕರೆದುಕೊಂಡು ಹೋಗುತ್ತಾನೆ. ಇಲ್ಲಿ ಮಹಾಕವಿಗಳು ಶಿವಯ್ಯನು ಕಠಾರಿಯನ್ನು ಹೊರಗೆಳೆದು ತನ್ನ ದಾರಿಗೆ ಅಡ್ಡವಾಗಿರುವ ಬಸವಯ್ಯನನ್ನು ಕೊಲ್ಲಲುಯತ್ನಿಸುತ್ತಿರುವಾಗ ಮನುಷ್ಯನ ಒಳತೋಟಿಯ ದ್ವಂದ್ವಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.

ಮುಂದಿನ ದೃಶ್ಯ 5ರಲ್ಲಿ ಸೆರೆಮನೆಗೆ ತುಸು ದೂರದಲ್ಲಿ ಮರಗಳ ಗುಂಪಿನಲ್ಲಿ ಹೊನ್ನಯ್ಯನು ಲಿಂಗಣ್ಣಮಂತ್ರಿ ಹಾಗೂ ಸನ್ಯಾಸಿಗಳು ಬಸವಯ್ಯನನ್ನು ಕರೆದು ತರಲು ಹೋಗಿರುವ ಶಿವಯ್ಯನಿಗಾಗಿ ಕಾದಿದ್ದಾರೆ. ಆ ನಾಲ್ವರನ್ನು ಈ ರಾಜ್ಯದ ಗಡಿ ದಾಟಿಸಿಹೈದರಾಲಿಯ ಹತ್ತಿರಕ್ಕೆ ಕಳುಹಿಸಲು ನಾಲ್ಕು ಕುದುರೆಗಳ ವ್ಯವಸ್ಥೆಯನ್ನು ಸನ್ಯಾಸಿಯು ಮಾಡಿದ್ದಾನೆ. ಬಸವಯ್ಯ ಮತ್ತು ಶಿವಯ್ಯ ಬರುವುದು ತಡವಾದುದರಿಂದ ಹೊನ್ನಯ್ಯ ಮತ್ತು ಲಿಂಗಣ್ಣ ಮಂತ್ರಿಯನ್ನು ಕುಂಸಿಯ ಮಾರ್ಗವಾಗಿ ಹೋಗುವಂತೆಹೇಳುತ್ತಾನೆ. ಅವರು ಬಂದನಂತರ ಅವರಿಬ್ಬರನ್ನೂ ಇದೇ ಮಾರ್ಗವಾಗಿ ಕಳುಹಿಸಿ ಕೊಡುವುದಾಗಿ ಹೇಳುತ್ತಾನೆ. ಸ್ವಲ್ಪ ಸಮಯದ ನಂತರ ಅಲ್ಲಿಗೆ ಬರುವ ಶಿವಯ್ಯ ಮತ್ತು ಬಸವಯ್ಯರಿಬ್ಬರಿಗೂ ಸನ್ಯಾಸಿಯು ಮುಂದಿನ ಸಹಾಯಕ್ಕಾಗಿಶಿವಮೊಗ್ಗೆಗೆ ಸೈನ್ಯದೊಂದಿಗೆ ಬಂದು ಬಿಡಾರ ಹೂಡಿರುವ ಹೈದರಾಲಿಗೆ ಕೊಡುವಂತೆ ಪತ್ರವೊಂದನ್ನು ಬಸವಯ್ಯನ ಕೈಗೆ ಕೊಡುತ್ತಾ ಮುಂದೆ ಹೋದ ಅವರಿಬ್ಬರನ್ನು ಹಿಂಬಾಲಿಸಲು ಹೇಳುತ್ತಾನೆ. ಅಷ್ಟರಲ್ಲಿ ಕೆಮ್ಮಿನ ಸದ್ದು ಕೇಳಲು ಸೆರೆಯಲ್ಲಿರುವಬಸವಯ್ಯ ಮತ್ತು ಲಿಂಗಣ್ಣರನ್ನು ಕೊಲ್ಲುವುದಕ್ಕಾಗಿ ತಿಮ್ಮಜಟ್ಟಿಯ ಕೊಲೆಗಾರರು ಬರುವುದರ ಸೂಚನೆಯನ್ನರಿತು ಸನ್ಯಾಸಿಯು ಮರೆಯಾಗುವನು. 


(ಮುಂದುವರೆಯುತ್ತದೆ)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Jayaprakash Abbigeri
Jayaprakash Abbigeri
10 years ago

ಆತ್ಮೀಯ ಸಿದ್ದರಾಮ್, ದುರಂತಮಯ ರಕ್ತಾಕ್ಷಿ ನಾಟಕದ ಕುರಿತು ಅಷ್ಟೇ ದುಃಖಮಯವಾಗುವಂತೆ ಬರೆಯುತ್ತಿರುವ ನಿಮ್ಮ ಲೇಖನಿಗೆ ಧನ್ಯವಾದಗಳು….ರಾಷ್ಟ್ರಕವಿ ಕುವೆಂಪುರವರ ನಾಟಕಗಳನ್ನು ಮತ್ತೊಮ್ಮೆ ಓದುವಂತೆ ಪ್ರೇರೇಪಿಸಿದ್ದಕ್ಕೆ ಕೃತಜ್ಞತೆಗಳು….

sharada.m
sharada.m
10 years ago

nice article  as i felt..
but due to lack of time i am not reading this writing series..

2
0
Would love your thoughts, please comment.x
()
x