ನಾಟಕಕಾರರಾಗಿ ಕುವೆಂಪು (ಭಾಗ-12) : ಹಿಪ್ಪರಗಿ ಸಿದ್ದರಾಮ್, ಧಾರವಾಡ


ಆತ್ಮೀಯ ರಂಗಾಸಕ್ತ ಓದುಗಪ್ರಭುಗಳೇ, ಸಿದ್ಧಾರ್ಥ ಬುದ್ಧನಾಗುವ ಮಹತ್ವದ ಮತ್ತು ಇಂದಿಗೂ ಆಕರ ಕೃತಿಯಾಗಿ ಶೋಭಾಯಮಾನವಾಗಿರುವ ‘ಮಹಾರಾತ್ರಿ’ ರಂಗಕೃತಿಯಲ್ಲಿ ವ್ಯಕ್ತಿತ್ವವೊಂದು ರೂಪಾಂತರವಾಗುವ ಮಹತ್ವದ ಕಥಾನಕದ ಹಿನ್ನಲೆಯಲ್ಲಿ ಮಹಾಕವಿಗಳು ತಮ್ಮ ಪ್ರಧಾನ ತಾತ್ವಿಕ ನಿಲುವನ್ನು ಅತ್ಯಂತ ಸ್ಪಷ್ಟವಾಗಿ ರಾಜಕುಮಾರ ಸಿದ್ಧಾರ್ಥನ ಪಾತ್ರದ ಮೂಲಕ ‘ಜಗಕಾಗಿ ಕಣ್ಣೀರ ಸುರಿಸುವೆನು, ಅದಕಾಗಿ ಸತಿಗಾಗಿ ಕಂಬನಿಯ ಕರೆಯೆ, ಮುಂದೆದೆಯ ಬೆಣ್ಣೆಯನು ಮಾಡಿ, ಇಂದದನು ಕಲ್ಲಾಗಿ ಮಾಡಿ’ ಎಂದು ಹೇಳಿಸುತ್ತಾರೆ. ಇಲ್ಲಿ ಸಿದ್ಧಾರ್ಥನು ವೈಯಕ್ತಿಕ ಭೋಗಕ್ಕಿಂತ ಸಾಮಾಜಿಕ ಸಾಮೂಹಿಕ ಹಿತ ಮುಖ್ಯ ಎಂಬುದು ಬುದ್ಧದೇವನ ಮೂಲಮಂತ್ರವಾಗಿರುವಿಕೆಯನ್ನು ಇಲ್ಲಿ ಮಹಾಕವಿಗಳು ಪ್ರಸ್ತುತಪಡಿಸುವಿಕೆಯು ಶೈಲಿ ಮನೋಜ್ಞವಾಗಿರುವುದನ್ನು ನಾವು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ.

ನಾವೀಗ ಷೇಕ್ಸ್ ಪಿಯರ್‍ನ ‘ಹ್ಯಾಮ್ಲೆಟ್’ ನಾಟಕಕೃತಿಯ ಕನ್ನಡ ರೂಪಾಂತರವಾಗಿರುವ ‘ರಕ್ತಾಕ್ಷಿ’ (ಗಮನಿಸಿ : ಭಾಷಾಂತರ ಅಥವಾ ಅನುವಾದವಲ್ಲ !) ರಂಗಕೃತಿಯ ಕುರಿತು ನೋಡೋಣ. ಈ ಕೃತಿಯು ಬಿದನೂರಿನ ಇತಿಹಾಸವನ್ನು ಆಧರಿಸಿದ ಕಥಾನಕವನ್ನು ಹೊಂದಿದೆ. ಐದು ಅಂಕಗಳಿವೆ ಮತ್ತು ಪ್ರತಿಯೊಂದು ಅಂಕಗಳಲ್ಲಿಯೂ ನಾಲ್ಕರಿಂದ ಐದೈದು ದೃಶ್ಯಾವಳಿಗಳಿವೆ. ಈ ರಂಗಕೃತಿಯು ಮೊದಲಬಾರಿಗೆ 1932ರಲ್ಲಿ ಶಿವಮೊಗ್ಗದಲ್ಲಿರುವ ಕರ್ನಾಟಕ ಸಂಘದಿಂದ ಪ್ರಕಟಗೊಂಡಿತು. ಎರಡನೆಯ ಮುದ್ರಣವು 1936ರಲ್ಲಿ ಇದೇ ಕರ್ನಾಟಕ ಸಂಘ, ಶಿವಮೊಗ್ಗದಿಂದ ಪ್ರಕಟಗೊಂಡಿತು. ಕಾವ್ಯಾಲಯ ಪ್ರಕಾಶನದಿಂದ 1945ರಲ್ಲಿ ಮುದ್ರಣಗೊಂಡಿತು. ನಂತರದಲ್ಲಿ ಮೈಸೂರಿನ ಉದಯರವಿ ಪ್ರಕಾಶನದಿಂದ 1952, 1966, 1968, 1974, 1981, 1982, 1995, 2004 ಮತ್ತು ಇತ್ತೀಚೆಗಿನ ಪ್ರಕಟಣೆಯು 2012ರಲ್ಲಿ ಪ್ರಕಟಗೊಂಡಿತು.

ಈ ಕೃತಿಗೆ ಸುದೀರ್ಘ ಮುನ್ನುಡಿಯನ್ನು 01-08-1932ರಲ್ಲಿ ಎ.ಆರ್.ಕೃಷ್ಣಶಾಸ್ತ್ರಿಗಳು ತಮ್ಮ ಪ್ರಿಯ ಮಿತ್ರರಾದ ಶ್ರೀಮಾನ್ ಕೆ.ವಿ.ಪುಟ್ಟಪ್ಪನವರ ಮೇಲಿನ ವಿಶ್ವಾಸಕ್ಕಾಗಿ ಮತ್ತು ಅವರ ಆಗ್ರಹಕ್ಕಾಗಿ ‘ಶಿಷ್ಯಾದಿಚ್ಚೇತ್ ಪರಾಜಯಂ’ ಎಂಬಂತೆ ಬರೆದಿರುವುದಾಗಿ ಆತ್ಮೀಯವಾಗಿ ಉಲ್ಲೇಖಿಸಿರುವುದರ ಮೂಲಕ ಆಗಿನ ಸಾಹಿತ್ಯಿಕ ಸಂದರ್ಭದಲ್ಲಿ ದಿಗ್ಗಜರು ಒಬ್ಬರಿಗೊಬ್ಬರು ಗೌರವಿಸಿಕೊಂಡಿರುವುದನ್ನು ಈಗಿನ ಸಂದರ್ಭದಲ್ಲಿ ನಾವು ತಿಳಿದುಕೊಳ್ಳಬಹುದು. ಕರ್ನಾಟಕದ ರಾಜಮನೆತನಗಳ ಚರಿತ್ರೆಯ ಪುಟಗಳಲ್ಲಿಯ ಪ್ರಸಂಗಗಳನ್ನಾಯ್ದುಕೊಂಡು ರಂಗಕೃತಿಗಳನ್ನು ರಚಿಸಲು ತಾವು ಪ್ರೇರೇಪಿಸಿರುವುದನ್ನು ಮತ್ತು ಅದಕ್ಕೆ ಪೂರಕವಾದ ಕೆಲವೊಂದು ಕಥನಗಳನ್ನು ಆಂಗ್ಲ ಇತಿಹಾಸಕಾರರು ರಚಿಸಿರುವ ಸಂಶೋಧನಾ ಗ್ರಂಥಗಳನ್ನು ಆಕರವಾಗಿ ಉಪಯೋಗಿಸಿಕೊಳ್ಳುವ ರೀತಿಯನ್ನೂ ಸೂಚಿಸುವುದರೊಂದಿಗೆ ಮಾರ್ಗದರ್ಶನ ನೀಡಿರುವುದನ್ನು ಜ್ಞಾಪಿಸಿಕೊಳ್ಳುವ ಕೃಷ್ಣಶಾಸ್ತ್ರಿಗಳು ಬಿದನೂರಿನ ಕಥಾನಕವೊಂದನ್ನು ವಿವರಿಸುತ್ತಾ, ''ಆ ವೃತ್ತಾಂತವನ್ನು ಬೇಕಾದರೆ, ‘ಹ್ಯಾಮ್ಲೆಟ್’ ಕಥೆಯಾಗಿ ಮಾಡಬಹುದಲ್ಲವೇ?’' ಎನ್ನುತ್ತಾರೆ. ಈ ಸಂಗತಿಯನ್ನು 1922ರಲ್ಲಿ ತಮ್ಮ ಪತ್ರಿಕೆಯಾದ ‘ಪ್ರಬುದ್ಧ ಕರ್ನಾಟಕ’ದ ಕಾಮನ ಸಂಚಿಕೆಯಲ್ಲಿ ಹೇಳಿರುವುದನ್ನು ಉಲ್ಲೇಖಿಸುತ್ತಾರೆ.

ತಮ್ಮ ಮಾತಿನಂತೆ ಕೆ.ವಿ.ಪುಟ್ಟಪ್ಪನವರು ಐತಿಹಾಸಿಕ ಕೃತಿಯನ್ನು ರಚಿಸಿರುವುದಕ್ಕೆ ಮೆಚ್ಚುಗೆಯನ್ನು ಸೂಚಿಸುತ್ತಾ, ‘ಇದು ಷೇಕ್ಸ್ ಪಿಯರ್ ಮಹಾಕವಿಯ ರೂಪಕ ರತ್ನಗಳಲ್ಲೊಂದಾದ ‘ಹ್ಯಾಮ್ಲೆಟ್’ನ ಸಾರವನ್ನು ಹೀರಿಕೊಂಡು ಅಪೂರ್ವ ತೇಜಸ್ಸಿನೊಂದಿಗೆ ಕಳಕಳಿಸುವ ಹೊಸ ಮಾದರಿಯ ಗ್ರಂಥವಾಗಿದೆ’ ಎಂದು ಹರ್ಷಿಸುತ್ತಾರೆ. ಮುಂದುವರೆದು, ‘ಮೂಲ ಹ್ಯಾಮ್ಲೆಟ್ ಕೃತಿಯು ಪಾಶ್ಚಾತ್ಯ ಜಾತಿಯ ರುದ್ರ ನಾಟಕ. ಅಂತಹ ಮಹತ್ವದ ಕೃತಿಯೊಂದರ ಕನ್ನಡ ರೂಪಾಂತರವಾದ ‘ರಕ್ತಾಕ್ಷಿ’ಯು ಕನ್ನಡದ ‘ಹ್ಯಾಮ್ಲೆಟ್’ ಕಾವ್ಯ. ಇಂಗ್ಲಿಷಿನಲ್ಲಿ ‘ಹ್ಯಾಮ್ಲೆಟ್’ ಹುಟ್ಟಿದಾಗ ಅದರ ಸಾಹಿತ್ಯವು ಅತ್ಯುನ್ನತ ಶಿಖರವನ್ನೇರಿತು. ಅದರಂತೆ ‘ರಕ್ತಾಕ್ಷಿ’ಯಂತಹ ಶ್ಲ್ಯಾಘ್ಯ ಸ್ವತಂತ್ರ ಐತಿಹಾಸಿಕ ನಾಟಕವು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹುಟ್ಟಿದಾಗ ಅದರ ಮಟ್ಟವು ಬಹು ಎತ್ತರಕ್ಕೆ ಏರಿರುವುದರಲ್ಲಿ ಸಂದೇಹವಿಲ್ಲ’ ಎಂದು ಮೆಚ್ಚುಗೆಯ ಮಾತುಗಳ ಮೂಲಕ ಹಾರೈಕೆಯ ನುಡಿಗಳನ್ನಾಡಿದ್ದಾರೆ.

ರಕ್ತಾಕ್ಷಿ (1932) :

ಮಹಾಕವಿಗಳು ಈ ಮೊದಲಿನ ರಂಗಕೃತಿ ‘ಬಿರುಗಾಳಿ’(1931)ಯಲ್ಲಿ ಹಾಡುಗಳು ಮತ್ತು ರಗಳೆ ಮಾದರಿಯ ಕಾವ್ಯಾತ್ಮಕ ಸಂಭಾಷಣೆಗಳನ್ನು ಅಳವಡಿಸಿದ್ದರು. ಆದರೆ ರಕ್ತಾಕ್ಷಿ ಕೃತಿಯಲ್ಲಿ ಅಂತಹ ಯಾವುದೇ ರಗಳೆ-ಹಾಡುಗಳ ಹಂಗಿಲ್ಲದೇ ರಚನೆ ಮಾಡಿರುವುದನ್ನು ನಾವು ಗಮನಿಸಬಹುದು. ಇಲ್ಲಿ ಬಳಕೆಯಾಗಿರುವುದು ಅಥವಾ ಸೃಷ್ಟಿಯಾಗಿರುವುದು ಯಾವುದೇ ಛಂದಸ್ಸು ಅಲ್ಲ ; ಗದ್ಯಮಯವಾಗಿದೆ. ಭಾವಾಭಿನಯಕ್ಕೆ ಅನುಕೂಲವಾಗುವಂತೆ ಭಾಗಗಳನ್ನಾಗಿ ಮಾಡಿ ಬರೆದಿರುವ ‘ಖಂಡಗದ್ಯ’ವಾಗಿದೆ. ಈ ಹಿಂದೆ ನಾವು ನೋಡಿರುವ ‘ಶ್ಮಶಾನ ಕುರುಕ್ಷೇತ್ರಂ’ ರಂಗಕೃತಿಯಲ್ಲಿ ಕೌರವೇಂದ್ರನ ಸ್ವಗತದ ಸಂಭಾಷಣೆ ಮತ್ತು ಕುಂತಿಯ ಪ್ರಲಾಪಗಳ ಮಾದರಿಗಳನ್ನು ಮಹಾಕವಿಗಳು ಪ್ರಯೋಗಾತ್ಮಕವಾಗಿ ರಂಗಕೃತಿಗಳಲ್ಲಿ ಸ್ವತಂತ್ರವಾಗಿ ಸೃಷ್ಟಿಸಿಕೊಂಡು ಬಳಸಿಕೊಂಡಿರುವುದನ್ನು ನಾವು ಜ್ಞಾಪಿಸಿಕೊಂಡು ಗಮನಿಸಬಹುದು.

ಇಲ್ಲಿ ಮಹಾಕವಿಗಳು ಆಗಿನ ಸಂದರ್ಭದಲ್ಲಿ ಹೊಸ ಸಂಸ್ಕರಣ ಮಾರ್ಗವನ್ನು ಕಂಡುಕೊಂಡು ರಸವತ್ತಾಗಿ, ನೂತನ ಭಾವ ಭಾಷಾ ಶೈಲಿ ಛಂದಸ್ಸುಗಳಿಂದ ಬುದ್ಧಿಯನ್ನು ಕುದುರಿಸಬಹುದಾದ, ಮನಸ್ಸನ್ನು ಉಲ್ಲಸಿತಗೊಳಿಸಬಹುದಾದ ಮಹಾಕವಿಗಳ ಕಾವ್ಯದ ಸೊಬಗನ್ನು ಅವರ ಕಾವ್ಯಗಳಾಚೆಗೂ ರಂಗಕೃತಿಗಳಲ್ಲಿಯೂ ನಾವು ಆಸ್ವಾದಿಸಬಹುದು. ಅಂತಹ ಆಸ್ವಾದನೆಯನ್ನು ಮಹಾಕವಿಗಳಿಂದ 1932ರಲ್ಲಿ ರಚಿತಗೊಂಡಿರುವ ‘ರಕ್ತಾಕ್ಷಿ’ ರಂಗಕೃತಿಯಲ್ಲಿ ನಾವು ನೋಡಬಹುದು. ಆರಂಭದಲ್ಲಿ ಈ ಕೃತಿಯ ಹೆಸರು ಕೇಳಿದೊಡನೆ ಇದೊಂದು ವೃತ್ತಿರಂಗಭೂಮಿಗಾಗಿ (ಕಮರ್ಶಿಯಲ್ ಆಕರ್ಷಣೀಯ ಅಂಶಗಳನ್ನೊಳಗೊಂಡಿರುವಂತೆ) ರಚಿತಗೊಂಡಿರುವ ಜನಪ್ರಿಯ ನವರಸರಂಗಕೃತಿಯೆಂದು ಭಾಸವಾಗುತ್ತದೆ. ಒಳಹೊಕ್ಕು ನೋಡಿದರೆ ಇದೊಂದು ಐತಿಹಾಸಿಕ, ಸಾಹಿತ್ಯಿಕ, ದೀರ್ಘಾವಧಿ ಮತ್ತು ಪೂರ್ಣಾವಧಿಯ ಇತಿಹಾಸದ ಸತ್ಯ ಘಟನಾವಳಿಗಳನ್ನೊಳಗೊಂಡ ಕೆಳದಿ ನಾಯಕರಿಗೆ ಸಂಬಂಧಿಸಿದ ರಂಗಕೃತಿಯಾಗಿದೆ. ಈ ಕೃತಿಯ ಮೂಲಕಥಾವಸ್ತುವಿನ ಇತಿಹಾಸದ ಸಂಗತಿಯನ್ನು ಸಂಗ್ರಹವಾಗಿ ಈ ಕೆಳಗಿನಂತೆ ಹೇಳಬಹುದು :

ಕೆಳದಿಯ ದೊರೆಯಾಗಿದ್ದ ಎರಡನೇಯ ಬಸವಪ್ಪನಾಯಕನಿಗೆ ಚೆನ್ನಮ್ಮಾಜಿ ಮತ್ತು ವೀರಮ್ಮಾಜಿ ಎಂಬ ಇಬ್ಬರು ರಾಣಿಯರಿದ್ದರೂ ಸಹ ಸಂತಾನಭಾಗ್ಯವಿಲ್ಲದ ಕಾರಣಕ್ಕೆ ಚೆನ್ನಬಸವಯ್ಯನಾಯಕ ಎಂಬುವವನನ್ನು ದತ್ತು ಸ್ವೀಕರಿಸಿರುತ್ತಾನೆ. ಮುಂದೆ 1755ರಲ್ಲಿ ಬಸಪ್ಪನಾಯಕನು ಕಾಲವಾಗಲು ದತ್ತುಪುತ್ರನು ರಾಜ್ಯಾಡಳಿತದ ಚುಕ್ಕಾಣಿ ಹಿಡಿದು ರಾಜನಾಗುತ್ತಾನೆ. ಮಲತಾಯಿ ರಾಣಿ ವೀರಮ್ಮಾಜಿಯು ರಾಜ್ಯದ ಅಧಿಕಾರಿ ನಿಂಬಯ್ಯನೊಡನೆ ಸ್ನೇಹ ಬೆಳೆಸಿಕೊಂಡು ದುರ್ನಡತೆಗೆ ಬಿದ್ದಿರುವುದನ್ನು ಸಹಿಸಲಾರದೆ ಚೆನ್ನಬಸವಯ್ಯನಾಯಕ ಆಕ್ಷೇಪಿಸಿದಾಗ ಅವನ ಕೊಲೆ ಮಾಡಿಸಲು ಜಟ್ಟಿಯೊಬ್ಬನಿಗೆ ಸುಫಾರಿ ನೀಡುತ್ತಾರೆ.

ಆದರೆ ಕೆಲವು ಇತಿಹಾಸಕಾರರು ರಾಣಿಯ ಮೇಲಿನ ಈ ಆರೋಪ ಬುಡವಿಲ್ಲದ್ದೆಂದು ಅಭಿಪ್ರಾಯ ಪಡುತ್ತಾರೆ. ಚನ್ನಬಸವಯ್ಯನ ಮರಣಾನಂತರ ವೀರಮ್ಮಾಜಿ 1757ರಲ್ಲಿ ತಾನೇ ಸಿಂಹಾಸನವನ್ನೇರುತ್ತಾಳೆ. ಸೋಮಶೇಖರ ಎಂಬ ಮಗನನ್ನು ದತ್ತು ತೆಗೆದುಕೊಳ್ಳುತ್ತಾಳೆ. ಆದರೆ ಈ ವೇಳೆಗೆ ಮೈಸೂರಿನಲ್ಲಿ ಪ್ರಭಲನಾಗುತ್ತಿದ್ದ ಹೈದರಾಲಿಯು 1762ರಲ್ಲಿ ಬಿದನೂರನ್ನು ಸೈನ್ಯ ಸಮೇತನಾಗಿ ಬಂದು ಮುತ್ತಿಗೆ ಹಾಕುತ್ತಾನೆ. ರಾಣಿಯು ಅವನನ್ನು ಉಪಾಯವಾಗಿ ಮರಳಿಸಲು ಪ್ರಯತ್ನಿಸುತ್ತಾಳೆ. ಅವಳು ನೀಡುವ (ಧನ-ಕನಕಾದಿ) ಕಾಣಿಕೆಯ ಬೆಲೆಯನ್ನು ಒಪ್ಪಿಕೊಳ್ಳದ ಹೈದರಾಲಿಯು ಮುಂದೆ ಬರುತಿರಲು ರಾಣಿಯು ಕೌಲೇದುರ್ಗಕ್ಕೆ ಓಡಿ ಹೋಗುತ್ತಾಳೆ. ಹೈದರಾಲಿಯು ಅಲ್ಲಿಗೂ ಹೋಗಿ ಸೆರೆಹಿಡಿಯುತ್ತಾನೆ. ನಂತರ ಕೆಳದಿರಾಜ್ಯವು ಮೈಸೂರಿನೊಡನೆ ವಿಲೀನವಾಗುತ್ತದೆ. ಇಷ್ಟು ಸಂಗತಿಗಳನ್ನು ನಾವು ಇತಿಹಾಸದಿಂದ ತಿಳಿದುಕೊಳ್ಳುತ್ತೇವೆ.

ಇಂತಹ ಇತಿಹಾಸದ ಸತ್ಯ ಸಂಗತಿಗಳನ್ನು ಮಹಾಕವಿಗಳು ನವರಸಗಳಲ್ಲಿ ಒಂದಾದ ರುದ್ರರಸಕ್ಕನುಗುಣವಾದ ರೀತಿಯಲ್ಲಿ ಅಳವಡಿಸಿದ್ದಾರೆ. ಇತಿಹಾಸದಲ್ಲಿಯ ಕೆಲವು ಪಾತ್ರಗಳ ಹೆಸರುಗಳನ್ನು ಚೆನ್ನಬಸವನಾಯಕನ ಹೆಸರನ್ನು ಚೆನ್ನಬಸವಯ್ಯನೆಂದು, ವೀರಮ್ಮಾಜಿಯನ್ನು ರಾಣಿ ಚೆಲುವಾಂಬೆಯಾಗಿ ಬದಲಾಯಿಸಿಕೊಳ್ಳುವುದರೊಂದಿಗೆ ಕೆಲವೊಂದು ಘಟನೆಗಳನ್ನು ಮತ್ತು ಪ್ರಸಂಗಗಳನ್ನು ರಂಗಸ್ಥಳಕ್ಕೆ ಹೊಂದಿಕೆಯಾಗುವಂತೆ ಬದಲಾಯಿಸಿಕೊಂಡಿದ್ದಾರೆ. ಹೀಗೆ ಬದಲಾಯಿಸಿಕೊಳ್ಳುತ್ತಾ, ರಂಗರೂಪ ನೀಡುವಾಗ ಷೇಕ್ಸ್ ಪಿಯರ್‍ನ ಹ್ಯಾಮ್ಲೆಟ್ ರಂಗಕೃತಿಯ ಪ್ರಭಾವಕ್ಕೆ ಒಳಗಾಗಿರುವುದನ್ನು ನಾವು ಗಮನಿಸಬಹುದು. ಆದರೆ ‘ಬಿರುಗಾಳಿ’ ರಂಗಕೃತಿಯಲ್ಲಿ ಮಾಡಿದಂತೆ ಮಾಡಿದ ಅನುವಾದ ಇಲ್ಲಿಲ್ಲ. ಇದೊಂದು ಸ್ವತಂತ್ರ ಕೃತಿ. ಇಲ್ಲಿಯ ಕಥಾವಸ್ತುವಿನ ವಿನ್ಯಾಸದಲ್ಲಿ, ರಂಗತಂತ್ರದಲ್ಲಿ, ಪಾತ್ರ ಪೋಷಣೆಯಲ್ಲಿ, ಕಥಾನಕದ ಬೆಳೆಸುವಿಕೆಯಿಂದ ಹಿಡಿದು ಮುಕ್ತಾಯದವರೆಗೂ ಇಂಗ್ಲಿಷಿನ ಹ್ಯಾಮ್ಲೆಟ್‍ಗೂ ಕನ್ನಡ ರಕ್ತಾಕ್ಷಿಗೂ ವ್ಯತ್ಯಾಸ ಹೆಚ್ಚು-ಕಡಿಮೆ ಒಂದೇ ಆಗಿರುವುದಾದರೂ ಕೆಲವು ಅಂಶಗಳ ಛಾಯೆ ಮಾತ್ರ ಇಲ್ಲಿ ಸ್ವಲ್ಪ ಮಟ್ಟಿಗೆ ಉಳಿದಿರುವುದನ್ನು ಗಮನಿಸಬಹುದು. ಇವೆಲ್ಲಾ ಗೊಂದಲಗಳನ್ನು ನಾವು ಈಗಿನ ಸಂದರ್ಭದಲ್ಲಿ ನಿವಾರಿಸಿಕೊಳ್ಳಬೇಕಾದರೆ ಹ್ಯಾಮ್ಲೆಟ್ ರಂಗಕೃತಿಯ ಕಥಾನಕವನ್ನು ಇಲ್ಲಿ ನಾವು ಸಂಗ್ರಹಿಸಿ ಹೇಳುವುದು ಔಚಿತ್ಯಪೂರ್ಣವೆಂದು ನಾನಾದರೂ ಭಾವಿಸಿದ್ದೇನೆ.

ಹ್ಯಾಮ್ಲೆಟ್‍ನೆಂಬ ಡೆನ್ಮಾರ್ಕಿನ ರಾಜಕುಮಾರನಿಗೆ ತನ್ನ ತಂದೆಯ ಸಾವು ಸಹಜವಾದುದಲ್ಲವೆಂಬುದು ಮತ್ತು ಯಾವುದೋ ದುಷ್ಟಶಕ್ತಿಯ ಕೈವಾಡವಿದೆಯೆಂದು ಶಂಕೆಯಾಗಿ ಉಳಿದುಕೊಂಡಿದೆ. ತಂದೆಯ ಸಾವಿನ ನಂತರ ಸಿಂಹಾಸವನ್ನೇರಲಿರುವ ಚಿಕ್ಕಪ್ಪ Cladius ಮತ್ತು ಆತನನ್ನು ಮದುವೆಯಾಗಿರುವ ತನ್ನ ತಾಯಿ Gertrude ಮೇಲೆ ರಾಜಕುಮಾರನ ಸಂಶಯ ಬಲವಾಗಿದೆ. ಸಂಶಯವು ನಿಜವಾಗುವಂತೆ ಒಂದು ಅಲೌಕಿಕ ಪ್ರಸಂಗವೊಂದು ನಡೆಯುತ್ತದೆ. ರಾಜಕುಮಾರನ ಸತ್ತ ತಂದೆಯು ಪ್ರೇತಾಕಾರದಲ್ಲಿ ಕಾಣಿಸಿಕೊಳ್ಳುತ್ತಿದೆ ಎಂಬ ಸುದ್ಧಿ ರಾಜಕುಮಾರ ಹ್ಯಾಮ್ಲೆಟ್‍ಗೆ ತಿಳಿದು ಅದನ್ನು ಮಾತನಾಡಿಸಲು ಹೊರಡುತ್ತಾನೆ. ಅವನ ಪ್ರಯತ್ನ ಕೈಗೂಡುವುದರೊಂದಿಗೆ Cladius+ Gertrude ಇಬ್ಬರೂ ಒಂದಾಗಿ ತನಗೆ ವಿಷವುಣಿಸಿ ಕೊಂದ ಘಟನೆಯನ್ನು ಹೇಳುತ್ತದೆ.

ಅದಕ್ಕೆ ತಕ್ಕ ಸೇಡನ್ನು ತೀರಿಸಿಕೊಳ್ಳಬೇಕೆಂದು ಪ್ರಚೋಧಿಸುತ್ತದೆ. ಈ ವಿಚಾರವನ್ನು ಯಾರಿಗೂ ತಿಳಿಸಬಾರದೆಂದು ಹ್ಯಾಮ್ಲೆಟ್ ತನ್ನ ಗೆಳೆಯರಿಗೆ ಎಚ್ಚರಿಕೆಯ ಅಪ್ಪಣೆಯನ್ನು ನೀಡುತ್ತಾನೆ. ಈ ವಿಚಾರ ತಿಳಿದ ಹ್ಯಾಮ್ಲೆಟ್‍ನ ಮನಸ್ಸು ಘಾಸಿಗೊಳ್ಳುತ್ತದೆ. ಅವರಿಬ್ಬರ ಈ ದ್ರೋಹಕ್ಕೆ ಪ್ರತಿಕಾರ ತೆಗೆದುಕೊಳ್ಳುವುದರೊಂದಿಗೆ ಪ್ರತಿಕಾರವನ್ನು ತೆಗೆದುಕೊಳ್ಳಬೇಕೆಂಬ ವಿಚಾರವು ಅವನನ್ನು ಹುಚ್ಚನನ್ನಾಗಿಸುತ್ತದೆ. ತನ್ನ ಪ್ರೇಮಿ Ofiliaಗೆ ವಿಪರೀತವೆನಿಸುವ ತಲೆಕೆಟ್ಟವನಂತೆ ಪತ್ರಗಳನ್ನು ಬರೆಯಲು ಆರಂಭಿಸುತ್ತಾನೆ. ಹೀಗಿರುವಾಗ ಆ ನಗರಕ್ಕೆ ಸಂಚಾರಿ ನಾಟಕ ಮಂಡಲಿಯೊಂದು ಬರುತ್ತದೆ. ಹ್ಯಾಮ್ಲೆಟ್‍ನ ಸೂಚನೆಯಂತೆ, ಆತನು ಹೇಳಿದ ನಾಟಕವೊಂದನ್ನು ರಾಜ ಮತ್ತು ರಾಣಿಯ ಮುಂದೆ ಪ್ರದರ್ಶಿಸಲು ಆ ನಾಟಕ ಮಂಡಳಿಯವರು ಒಪ್ಪಿಕೊಳ್ಳುತ್ತಾರೆ.

ರಾಜನೊಬ್ಬನನ್ನು ಕೊಲೆ ಮಾಡಿ ಸಿಂಹಾಸನವನ್ನೇರಿದವನನ್ನು ವಿಧವೆ ರಾಣಿಯು ಮದುವೆಯಾಗುವ ಸನ್ನಿವೇಶವನ್ನೊಳಗೊಂಡಿರುವ ಕಥೆಯ ನಾಟಕದ ಪ್ರದರ್ಶನ ನಡೆಯುತ್ತದೆ. ತನ್ನ ತಂದೆಯ ಸಾವು ಮತ್ತು ನಂತರದ ಪ್ರಸಂಗಗಳನ್ನು ಹೋಲುವಂತಹ ನಾಟಕವನ್ನೇ ಆಡಲು ಹೇಳಿರುತ್ತಾನೆ. ಆ ನಾಟಕ ನಡೆಯುತ್ತಿರುವಾಗ Cladius ಮತ್ತು ತನ್ನ ತಾಯಿಯನ್ನು ನೋಡಿದಾಗ, ಅವರು ವ್ಯಕ್ತಪಡಿಸುವ ಪ್ರತಿಕ್ರಿಯೆಯನ್ನು ಗಮನಿಸಿ, ಅವರ ಮುಖದಲ್ಲಿಯ ಅಪರಾಧಿ ಮನೋಭಾವವು ಸಂದೇಹವನ್ನು ಪುಷ್ಟೀಕರಿಸುತ್ತದೆ. ಈ ನಾಟಕ ನೋಡಿದ ನಂತರ ರಾಣಿಯು ಅಸ್ತವ್ಯಸ್ತಳಾಗುತ್ತಾಳೆ. ಮುಂದೆ ಹ್ಯಾಮ್ಲೆಟ್ ಮತ್ತು ಅವಳ ನಡುವೆ ಸಂಭಾಷಣೆ ನಡೆದಾಗ ತಾಯಿಯನ್ನು ತಿರಸ್ಕಾರವಾಗಿ ಮಾತಾಡುತ್ತಿರುವುದನ್ನು ಮರೆಯಲ್ಲಿ ನಿಂತು ಕೇಳುತ್ತಿರುವನು Cladius ಎಂದು ತಪ್ಪಾಗಿ ಭಾವಿಸಿಕೊಂಡು ಹ್ಯಾಮ್ಲೆಟ್ ಇರಿದುಬಿಡುತ್ತಾನೆ.

ಆತನು Cladius ಆಗಿರದೇ ಹ್ಯಾಮ್ಲೆಟ್‍ನ ಪ್ರಿಯತಮೆ Ofiliaಳ ತಂದೆ Phalonious ಆಗಿರುತ್ತಾನೆ. ತನ್ನ ಪ್ರಿಯತಮೆಯ ತಂದೆಯ ಕೊಲೆ ತನ್ನಿಂದಲೇ ಜರುಗಿತಲ್ಲವೆಂದು ವ್ಯಥೆಪಡುತ್ತಾನೆ. ಇದಕ್ಕೆ ಕಾರಣನಾದ ಇತನಿಗೆ ದೇಶದಿಂದ ಹೊರಗಟ್ಟುವ ನಿರ್ಧಾರವನ್ನು Cladius+ Gertrude ಇಬ್ಬರೂ ತೆಗೆದುಕೊಳ್ಳುತ್ತಾರೆ. ಆತನ ಸಹಪಾಠಿಗಳೊಂದಿಗೆ ಇಂಗ್ಲೆಂಡಿಗೆ ಕರೆದುಕೊಂಡು ಹೋಗಿ ಅಲ್ಲಿ ಮುಗಿಸಬೇಕೆಂದು ಸಂಚು ಮಾಡುತ್ತಾರೆ. ಅದರಲ್ಲಿಯೂ ಪಾರಾಗುವ ಹ್ಯಾಮ್ಲೆಟ್ ಮತ್ತೆ ಡೆನ್ಮಾರ್ಕಿಗೆ ಮರಳುವಷ್ಟರಲ್ಲಿ ತನ್ನ ಪ್ರಿಯತಮೆಯ ಶವಸಂಸ್ಕಾರದ ದೃಶ್ಯವನ್ನು ಕಾಣುತ್ತಾನೆ. ಒಂದೆಡೆ ತನ್ನ ತಂದೆಯನ್ನು ಪ್ರಿಯಕರನು ಕೊಲೆ ಮಾಡಿದ್ದು, ಇನ್ನೊಂದೆಡೆ ಸೋದರ Laertes ಎತ್ತಲೋ ಹೋಗಿರುವುದು ಮೊದಲಾದ ಸಂಗತಿಗಳಿಂದ Ofilia ಜರ್ಜರಿತಗೊಂಡು ಹುಚ್ಚಿಯಂತಾಗಿ ಸರೋವರದಲ್ಲಿ ಮುಳುಗಿ ಸಾವನಪ್ಪಿರುತ್ತಾಳೆ. ಈ ಪ್ರಸಂಗದಿಂದ ಹ್ಯಾಮ್ಲೆಟ್‍ನಿಗೆ ಅತೀವ ತಾಪವಾಗುತ್ತದೆ.

ಅದೇ ಸಮಯಕ್ಕೆ Ofiliaಳ ಸೋದರ ಐಚಿeಡಿಣes ಮರಳಿದ್ದಾನೆ. ಇವನನ್ನು ಕಂಡು ತನ್ನ ತಂದೆ ಮತ್ತು ಸೋದರಿಯ ಮರಣಕ್ಕೆ ಹ್ಯಾಮ್ಲೆಟ್ ಕಾರಣನೆಂದು ಅವನ ಮೇಲೆ ಆಕ್ರಮಣ ಮಾಡುತ್ತಾನೆ.  ಇದನ್ನು ತಿಳಿದುಕೊಂಡ Laertesನು ಈ ಸಂದರ್ಭವನ್ನು ಬಳಸಿಕೊಂಡು ಹ್ಯಾಮ್ಲೆಟ್‍ನನ್ನು ಮುಗಿಸಬೇಕೆಂದು ಸಂಚು ಮಾಡಿ ಅವರಿಬ್ಬರಲ್ಲಿ ಸ್ನೇಹದ ದ್ವಂದ್ವಯುದ್ಧವನ್ನೇರ್ಪಡಿಸುತ್ತಾನೆ. ಯುದ್ಧದ ಸ್ಪರ್ಧೆಯಲ್ಲಿ ಬಳಸುವ ಕತ್ತಿಗೆ ವಿಷವನ್ನು ಲೇಪಿಸಿ ಎದುರಾಳಿ Laertesನ ಕೈಗೆ ನೀಡುತ್ತಾನೆ. ಆ ವಿಷದ ತೀವ್ರತೆ ಎಷ್ಟಿರುತ್ತದೆಂದರೆ ಆ ಕತ್ತಿಯಿಂದ ಹ್ಯಾಮ್ಲೆಟ್ ಸ್ವಲ್ಪವೇ ಗಾಯಗೊಂಡರೂ ವಿಷವೇರಿ ಸಾಯುತ್ತಿರುತ್ತಾನೆ. ಒಂದು ವೇಳೆ ಗಾಯಗೊಳ್ಳದೇ ಯುದ್ಧ ಕೊನೆಗೊಂಡರೂ ಆಯಾಸಗೊಂಡ ಆತನಿಗೆ ಕುಡಿಯಲು ವಿಷಪೂರಿತ ಪಾನೀಯವನ್ನು ನೀಡಲು ಯೋಜಿಸಿರುತ್ತಾನೆ.

ಇದೊಂದು ಸ್ನೇಹದ ಯುದ್ಧಸ್ಪರ್ಧೆಯೆಂದು ಡೊಂಗಿ ನಟಿಸುತ್ತಿದ್ದ ರಾಣಿಯು ಯುದ್ಧ ಪ್ರಾರಂಭಗೊಂಡ ಸ್ವಲ್ಪ ಸಮಯದಲ್ಲಿ ಹ್ಯಾಮ್ಲೆಟ್‍ನಿಗೆ ಶುಭಕೋರಲು ಸಂತೋಷವನ್ನು ವ್ಯಕ್ತಪಡಿಸುತ್ತಿರುವಂತೆ ಮಾಡುತ್ತಿರುವಾಗ ಮೈಮರೆತು ವಿಷಪೂರಿತ ಪಾನೀಯವನ್ನು ಕುಡಿಯುತ್ತಾಳೆ. ಇತ್ತಕಡೆ Laertesನು ಹ್ಯಾಮ್ಲೆಟ್‍ನನ್ನು ಗಾಯಗೊಳಿಸಿದ್ದಾನೆ. ಅನಂತರದ ಹೋರಾಟದ ಭರಾಟೆಯಲ್ಲಿ ಎರಡೂ ಕತ್ತಿಗಳು ಅದಲು-ಬದಲಾಗುತ್ತವೆ. ವಿಷಲೇಪನದ ಕತ್ತಿ ಈಗ ಹ್ಯಾಮ್ಲೆಟ್‍ನ ಕೈಲಿದ್ದು ಅದರಿಂದ Laertesನು ಗಾಯಗೊಂಡಿದ್ದಾನೆ. ಇತ್ತಕಡೆಗೆ ವಿಷಪಾನೀಯದ ಪರಿಣಾಮವಾಗಿ ರಾಣಿಯು ಸಾವು ಸಮೀಪಿಸುತ್ತದೆ. Laertesನು ಸಹ ಈ ಹಿಂದೆ ತಾನು ಮಾಡಿದ ಮೋಸವನ್ನು ಹೇಳುತ್ತಾನೆ. ಇದನ್ನೆಲ್ಲಾ ಕೇಳುತ್ತಿದ್ದಂತೆ ಹ್ಯಾಮ್ಲೆಟ್ ಸಹ ತಾನು ಸಾಯುವುದಕ್ಕಿಂತ ಮೊದಲು ತನ್ನೆಲ್ಲಾ ಶಕ್ತಿಯನ್ನು ಒಟ್ಟುಗೂಡಿಸಿ Cladiusನ ಎದೆಗೆ ಕತ್ತಿಯಿಂದ ಇರಿಯುತ್ತಾನೆ.

ಹೀಗೆ ಎಲ್ಲರ ಸಾವಿನೊಂದಿಗೆ ರಂಗಕೃತಿ ಕೊನೆಯ ಚರಮಗೀತೆಯನ್ನು ಹೇಳುತ್ತದೆ. ಇಲ್ಲಿ ಮೂಲ ಹ್ಯಾಮ್ಲೆಟ್ ಕಥಾಸಾರವನ್ನು ಹೇಳಿರುವುದರ ಉದ್ದೇಶವೇನೆಂದರೆ, ಮಹಾಕವಿಗಳ ಸ್ವತಂತ್ರ ಸೃಷ್ಟಿಯಾದ ರಕ್ತಾಕ್ಷಿ ರಚನೆಯ ಹಿನ್ನಲೆಯಲ್ಲಿ ಹ್ಯಾಮ್ಲೆಟ್ ಕೃತಿಯ ಪ್ರಭಾವವನ್ನು ಅರಿತುಕೊಳ್ಳಲು ಪೂರಕವಾಗುತ್ತದೆ.  ಇಲ್ಲಿ ಎರಡೂ ಕೃತಿಗಳನ್ನು ಗಮನಿಸಿದಾಗ ರಕ್ತಾಕ್ಷಿ ಕೃತಿಯು ಸ್ವತಂತ್ರ ಮತ್ತು ಭಿನ್ನವಾದದ್ದೆಂದು ಅನಿಸಿದರೂ ಕಥಾವಸ್ತುವನ್ನು ಬೆಳೆಸಿರುವುದು ಸೋಜಿಗವನ್ನುಂಟು ಮಾಡುತ್ತದೆ. ಆದರೂ ಹ್ಯಾಮ್ಲೆಟ್ ಕೃತಿಯಿಂದ ಕೆಲವೊಂದು ಅಂಶಗಳನ್ನು ಪಡೆದಿರುವುದನ್ನು ನಾವು ಗಮನಿಸಬಹುದು. ಅಲ್ಲಿಯ ಹ್ಯಾಮ್ಲೆಟ್ ಇಲ್ಲಿ ಬಸವಯ್ಯ, ಆತನ ಸ್ನೇಹಿತ Horocio ಇಲ್ಲಿ ಹೊನ್ನಯ್ಯ, ಅಲ್ಲಿನ Ofilia ಇಲ್ಲಿ ರುದ್ರಾಂಬೆಯಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಮಹತ್ವದ ವಿಚಾರವೆಂದರೆ ಹ್ಯಾಮ್ಲೆಟ್ ಆ ರಂಗಕೃತಿಯ ಕೊನೆಯಲ್ಲಿ ಸಾವನಪ್ಪಿದರೆ, ರಕ್ತಾಕ್ಷಿಯಲ್ಲಿ ಬಸವಯ್ಯನು ಮದ್ಯದಲ್ಲಿಯೇ ಸಾವನಪ್ಪುತ್ತಾನೆ. ಮುಂದೆ ಸಂಪೂರ್ಣ ಕಥಾನಕವು ರುದ್ರಾಂಬೆಯು ರಣಕಾಳಿ ರಕ್ತಾಕ್ಷಿಯಾಗಿ ಕೊನೆಯವರೆಗೂ ಪಾತ್ರವನ್ನು ಮಹಾಕವಿಗಳು ಬೆಳೆಸಿದ್ದಾರೆ.

(…..ಮುಂದುವರೆಯುತ್ತದೆ)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago

ಚೆನ್ನಾಗಿದೆ ಸರ್

ಹಿಪ್ಪರಗಿ ಸಿದ್ದರಾಮ್, ಧಾರವಾಡ
ಹಿಪ್ಪರಗಿ ಸಿದ್ದರಾಮ್, ಧಾರವಾಡ
10 years ago

ಧನ್ಯವಾದಗಳು ಮೇಡಮ್ ಜಿ….

ಸರ್ವೇಶ್ ಕುಮಾರ್
ಸರ್ವೇಶ್ ಕುಮಾರ್
10 years ago

ಕುವೆಂಪು ನಾಟಕಗಳ ಬಗ್ಗೆ ನಿಮ್ಮ ಬರಹಗಳು ಅದ್ಬುತವಾಗಿ ಮೂಡಿಬರುತ್ತಿವೆ. ಇಷ್ಟವಾಯಿತು

ಹಿಪ್ಪರಗಿ ಸಿದ್ದರಾಮ್, ಧಾರವಾಡ
ಹಿಪ್ಪರಗಿ ಸಿದ್ದರಾಮ್, ಧಾರವಾಡ
10 years ago

ಸರ್ವೇಶ ಕುಮಾರ್ ಅವರೇ….ಧನ್ಯವಾದಗಳು….ಈ ಸರಣಿಯ ಮುಂದಿನ ಭಾಗಗಳಲ್ಲಿ ಇನ್ನೂ ಹೆಚ್ಚಿನ ಸ್ವಾರಸ್ಯಗಳಿವೆ….ಕಾದು ನೋಡಿ….
ಶುಭದಿನ !

4
0
Would love your thoughts, please comment.x
()
x