ನಾಟಕಕಾರರಾಗಿ ಕುವೆಂಪು (ಭಾಗ-11): ಹಿಪ್ಪರಗಿ ಸಿದ್ದರಾಮ್

ಮಹಾಕವಿಗಳ ‘ಬಿರುಗಾಳಿ’ ರಂಗಕೃತಿಯು ಷೇಕ್ಸ್‍ಪಿಯರ್‍ನ ‘ಟೆಂಪೆಸ್ಟ್’ ನಾಟಕದ ಅನುವಾದವಾದರೂ ಇಂಗ್ಲಿಷ ಬಾರದ ಜನರಿಗೆ ಸ್ವತಂತ್ರ ಕೃತಿಯಂತೆ ಕಾಣುತ್ತದೆ. ಮಾನವನ ಮನೋರಂಗದಲ್ಲಿ ಯಾವಾಗಲೂ ದುಷ್ಟ ಶಕ್ತಿ ಮತ್ತು ಶಿಷ್ಟಶಕ್ತಿಗಳ ಹೋರಾಟ ನಿರಂತರ ನಡೆಯುತ್ತಲೇ ಇರುತ್ತದೆ. ಒಂದು ಕಡೆ ಲೋಭ, ಮೋಹ, ಛಲ, ವಂಚನೆ, ಅಹಂಕಾರ ಮೊದಲಾದ ಪಾಶವೀ ಶಕ್ತಿಗಳು, ಮತ್ತೊಂದು ಕಡೆ ತ್ಯಾಗ, ಪ್ರೇಮ, ಕ್ಷಮೆ, ಸತ್ಯ ಶಾಂತಿ ಮೊದಲಾದ ದೈವೀಶಕ್ತಿಗಳು. ಇವುಗಳ ಹೋರಾಟವೇ ಬಾಹ್ಯಪ್ರಪಂಚದಲ್ಲಿ ಯುದ್ಧ, ಕೊಲೆ, ರಕ್ತಪಾತ ಮೊದಲಾದ ಅನಾಹುತಗಳ ರೂಪದಲ್ಲಿ ಪ್ರಕಟಗೊಳ್ಳುತ್ತವೆ. ಈ ಹೋರಾಟದಲ್ಲಿ ಪಾಶವೀ ಶಕ್ತಿಗೆ ಮೊದಮೊದಲು ವಿಜಯ ದೊರಕಿದರೂ ಕೊನೆಗೆ ದೈವೀಶಕ್ತಿಯೇ ಗೆಲ್ಲಬೇಕು. ಇಲ್ಲವಾದರೆ ಪ್ರಪಂಚ ಪಿಶಾಚಿಗಳ ನೃತ್ಯರಂಗವಾಗುತ್ತದೆ. ಈ ತತ್ವ ಮಹಾಕವಿಗಳ ‘ಬಿರುಗಾಳಿ’ ರಂಗಕೃತಿಯಲ್ಲಿ ಮೊದಲಿನಿಂದ ಕೊನೆಯತನಕ ವಿಕಾಸಗೊಳ್ಳುತ್ತ ಹೋಗುವುದರ ಕುರಿತು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ. 

ಈಗ ಮಹಾಕವಿಗಳ ಮತ್ತೊಂದು ಮಹೋನ್ನತ ಐತಿಹಾಸಿಕ ರಂಗಕೃತಿಯಾದ ‘ಮಹಾರಾತ್ರಿ’ಯ ಕುರಿತು ನೋಡೋಣ. ರಾಜಕುಮಾರ ಸಿದ್ಧಾರ್ಥನು ಬುದ್ಧನಾಗಲು ಹೊರಡುವ ಮಹಾರಾತ್ರಿಯ ಕಥಾನಕವಾಗಿದೆ. 

ಮಹಾರಾತ್ರಿ (1931):

ಈ ರಂಗಕೃತಿಯ ಕುರಿತು ಹೇಳುವುದಾದರೆ, ಬುದ್ಧದೇವನ ಜೀವನದಲ್ಲಿಯ ಒಂದು ಪ್ರಮುಖವಾದ ಘಟನೆಯನ್ನು ಚಿತ್ರಿಸಿರುವುದಾಗಿದೆ. ಬುದ್ಧ ಐತಿಹಾಸಿಕ ವ್ಯಕ್ತಿಯಾದರೂ ‘ಮಹಾರಾತ್ರಿ’ ಕೃತಿಯನ್ನು ಐತಿಹಾಸಿಕ ರಂಗಕೃತಿಯೆಂದು ಹೇಳುವುದು ಕಷ್ಟವೇ ಸರಿ. ಐತಿಹಾಸಿಕ ವ್ಯಕ್ತಿಯ ಜೀವನವನ್ನು ಆಧರಿಸಿ ಆತನ ಅಂತರಂಗ ಸಾಧನೆಯತ್ತ ದೃಷ್ಟಿಯನ್ನು ಹರಿಸಿದ ‘ಆಧ್ಯಾತ್ಮಿಕ’ ರಂಗಕೃತಿಯೆಂದು ಹೇಳಬಹುದು. ಈ ಕೃತಿಯು ಪ್ರಥಮಬಾರಿಗೆ ಮಹಾಕವಿಗಳ ‘ಮೂರು ನಾಟಕಗಳು’ ಸಂಪುಟವಾಗಿ 1931ರಲ್ಲಿ ಬೆಂಗಳೂರಿನ ರಾಮಮೋಹನ ಕಂಪೆನಿಯವರಿಂದ ಪ್ರಕಟಗೊಂಡಿತು. ಮುಂದೆ ಬಿಡಿಯಾಗಿ ಕಾವ್ಯಾಲಯ ಶಿವಮೊಗ್ಗ-ತೀರ್ಥಹಳ್ಳಿಯಿಮದ 1939ರಲ್ಲಿ ಪ್ರಕಟಗೊಂಡಿತು. ಮತ್ತೊಮ್ಮೆ ‘ಮೂರು ನಾಟಕಗಳು’ ಸಂಪುಟವಾಗಿ ಕಾವ್ಯಾಲಯದಿಂದ 1942, 1946ರಲ್ಲಿ ಪ್ರಕಾಶನಗೊಂಡಿತು. ಮುಂದೆ ಉದಯರವಿ ಪ್ರಕಾಶನದಿಂದ ಪರಿಷ್ಕೃತಗೊಂಡು ಎರಡು ನಾಟಕಗಳ ಸಂಪುಟವಾಗಿ ಅಂದರೆ ಶ್ಮಶಾನ ಕುರುಕ್ಷೇತ್ರಂ ಮತ್ತು ಮಹಾರಾತ್ರಿ ನಾಟಕಗಳು 1962ರಲ್ಲಿ ಪ್ರಕಾಶನಗೊಂಡವು. ಮತ್ತೊಮ್ಮೆ ಬಿಡಿಯಾಗಿ 1967, 1972ರಲ್ಲಿ ಪ್ರಕಾಶನಗೊಂಡವು. ಆನಂತರ ಎರಡು ನಾಟಕಗಳ ಸಂಪುಟವು 1974ರಲ್ಲಿ ಪ್ರಕಾಶನಗೊಂಡವು. ಬಿಡಿಯಾಗಿ 1988 ಮತ್ತು 1995, 2004ರಲ್ಲಿ ಪ್ರಕಾಶನಗೊಂಡಿವೆ. 

ಈ ಕೃತಿಯಲ್ಲಿ ಪೀಠಿಕಾದೃಶ್ಯ ಮತ್ತು ಉಪಸಂಹಾರ ದೃಶ್ಯಗಳೊಂದಿಗೆ ಹತ್ತು ದೃಶ್ಯಗಳ ಮೂಲಕ ರಾಜಕುಮಾರ ಸಿದ್ಧಾರ್ಥನು ಬುದ್ಧನಾಗಲು ಹೊರಡುವ ರಾತ್ರಿಯ ಕಥಾನಕವನ್ನು ಒಳಗೊಂಡಿರುವ ಮತ್ತು ಹಲವಾರು ವಿಶ್ವವಿದ್ಯಾಲಯಗಳ ಪದವಿ ಮತ್ತು ಸ್ನಾತಕೋತ್ತರ ಪದವಿಯ ತರಗತಿಗಳಿಗೆ ಪಠ್ಯವಾಗಿ ಮಹಾಕವಿಗಳ ಈ ರಂಗಕೃತಿಯು ಕನ್ನಡ ಸಾಹಿತ್ಯ ಅಧ್ಯಯನಕಾರರಿಗಷ್ಟೇ ಅಲ್ಲದೇ ಕನ್ನಡಾಭಿಮಾನಿಗಳಿಗೂ ಸಹ ಬಹು ಅಚ್ಚು-ಮೆಚ್ಚಿನ ಕೃತಿಯಾಗಿರುವುದು ಅತಿಶಯೋಕ್ತಯೇನಲ್ಲ. ವಸ್ತುವಿಷಯಗಳೊಂದಿಗೆ ರಂಗಕೃತಿಯಾಗಿ ಮಹಾಕವಿಗಳು ಅದನ್ನು ನಿರ್ವಹಿಸಿದ ರೀತಿ ಅತ್ಯುತ್ತಮ ಮಾದರಿಗಳಿಗೆ ಮತ್ತೊಂದು ಶ್ರೇಷ್ಠ ಮಾದರಿಯೆಂದರೆ ತಪ್ಪೇನಲ್ಲ. ಈ ಕೃತಿಯ ರಚನೆಯ ಕಾಲಘಟ್ಟವನ್ನು ಒಮದು ಯೋಚಿಸಿದಾಗ ದೇಶದಲ್ಲಿ ಸ್ವಾತಂತ್ರಸಮರದಲ್ಲಿ ಗಾಂಧಿಯುಗ ಆರಂಭಗೊಂದ್ದ ಸಮಯ, ಮತ್ತೊಂದೆಡೆ ಭಾರತೀಯ ಸಮಾಜದಲ್ಲಿಯ ಅಸಮಾನತೆಗಳ ಕುರಿತಾದ ಸಾಮಾಜಿಕ ಚಳುವಳಿಗಳ ಪರ್ವಕಾಲ. ಮತ್ತೊಂದೆಡೆ ಆಂಗ್ಲಸರಕಾರದ ಅತೀರೇಕದ ವರ್ತನೆಗಳು ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ಮಹಾರಾತ್ರಿಯ ಕಥಾನಕವನ್ನು ಮಹಾಕವಿಗಳು ತಮ್ಮ ಯೌವ್ವನದ ದಿನಗಳಲ್ಲಿ ನಿರ್ವಹಿಸಿರುವುದು ಅವರ ಬದ್ಧತೆಯೊಂದಿಗೆ ಪ್ರಭುದ್ಧತೆ ಹಾಗೂ ದೂರದೃಷ್ಟಿಯ ಕುರಿತು ನಾವು ಈಗಿನ ಕಾಲಘಟ್ಟದಲ್ಲಿ ನಿಂತು ಚಿಂತಿಸುವಂತೆ ಮಾಡುವಂತಹ ಕೃತಿ. ಸಮಕಾಲೀನ ಸಂದರ್ಭದಲ್ಲಿ ಬುದ್ಧದೇವನ ಆಚಾರ-ವಿಚಾರಗಳನ್ನು ಅರಿಯದ ಕಿಡಿಗೇಡಿಗಳು ವಿಶ್ವದಾದ್ಯಂತ ಇರುವ ಬುದ್ಧದೇವನ ಸ್ಮಾರಕಗಳಿಗೆ, ಬುದ್ಧವಿಹಾರಗಳಿಗೆ ಹಾನಿಯನ್ನುಂಟು ಮಾಡುತ್ತಿರುವುದು ಅವಿವೇಕದ ಪರಮಾವಧಿಯೆಂಬುದನ್ನು ಈ ಸಂದರ್ಭದಲ್ಲಿ ನಾವು ಯೋಚಿಸಬೇಕಾದ ವಿಚಾರವಾಗಿದ್ದು, ಆಧುನಿಕ ಸಮಾಜವು ಇಂತಹ ಪ್ರಚೋಧನಕಾರಿ ಮತ್ತು ಕಿಡಿಗೇಡಿ ಪ್ರವೃತ್ತಿಯ ವ್ಯಕ್ತಿಗಳನ್ನು ಸಹಿಸಿಕೊಳ್ಳಲೇಬಾರದು.

ಪ್ರಸ್ತುತ ರಂಗಕೃತಿಯ ಆರಂಭದಲ್ಲಿ ಮಹಾಕವಿಗಳು ಪೀಠಿಕಾದೃಶ್ಯದಲ್ಲಿ ಹಿಮಗಿರಿಯ ಮೇಲೆ ಯಕ್ಷ ಮತ್ತು ಕಿನ್ನರರಿಬ್ಬರು ಕಾಣಿಸಿಕೊಂಡು ಬ್ರಹ್ಮಾಂಡವನ್ನು ಸಂಬೋಧಿಸಿ ಡಂಗುರ ಸಾರುವಂತೆ ಚಿತ್ರಿಸಿದ್ದಾರೆ. ಕಿನ್ನರನು ‘ಇದು ಮಹಾರಾತ್ರಿ ; ಸಿದ್ಧಾರ್ಥನು ಬುದ್ಧನಾಗುವ ರಾತ್ರಿ ; ಸಗ್ಗದೊಲವಿಳೆಗಿಳಿವ ರಾತ್ರಿ !’ ಎಂಬ ಘೋಷಣೆಯ ಡಂಗುರ ಸಾರುತ್ತಾನೆ. ನಂತರ ಗಂಧರ್ವನು ಕಾಣಿಸಿಕೊಂಡು ಮೂವರು ಸೇರಿ ಪ್ರಸ್ತುತ ರಂಗಕೃತಿಯ ವಸ್ತು ವಿಷಯದ ಕುರಿತು ಚರ್ಚಿಸಿ, ಮುಂದಿನ ಕಥಾನಕದ ಕುರಿತು ಮುನ್ಸೂಚನೆಯನ್ನು ನೀಡಿ ತೆರಳುತ್ತಾರೆ. 

ಮೊದಲನೆಯ ದೃಶ್ಯದಾರಂಭದಲ್ಲಿ ಅರಮನೆಯ ಪಕ್ಕದ ಉದ್ಯಾನವನದಲ್ಲಿ ಸಿದ್ಧಾರ್ಥನು ಯೋಚನೆ ಮಾಡುತ್ತಾ ತಿರುಗಾಡುತ್ತಿದ್ದಾನೆ. ಆತನಲ್ಲಿ ವೈರಾಗ್ಯದ ತಳಮಳ ಹೆಚ್ಚಾಗುತ್ತಿದೆ. ಅದನ್ನು ಮಹಾಕವಿಗಳು ದೃಶ್ಯದಾರಂಭದ ಸಂಭಾಷಣೆಯಲ್ಲಿ ಮೂಲಕ ರಾಜಕುಮಾರ ಸಿದ್ಧಾರ್ಥನಿಂದ ಹೇಳಿಸುವುದು ಹೀಗಿದೆ : 

ಇಲ್ಲ ; ಇನ್ನಿಲ್ಲಿ ಇರಲಾರೆ. ಇರಲಾರೆ !

ಎಳೆಯ ಕರೆಯನು ಕೇಳಿಯೂ ಸುಮ್ಮನಿರಲಾರೆ.

ಆತ್ಮದಾಮಂತ್ರಣವನೋದಿಯೂ ಭೋಗಾಭಿ-ಲಾಷೆಯಿಂದಿನ್ನು ನಾನಿರಲಾರೆ. ವರಧರ್ಮ

ದೇವತೆಯು ಗುಡಿಗಳಿಂ, ಹೊಲಗಳಿಂ, ವನಗಳಿಂ,

ಸೌಧಸೌಧಂಗಳಿಂ ಕೈಬೀಸಿ ಗೋಳಾಡಿ 

ಕರೆವುದನು ಕಂಡೂ ಮೊದ್ದನಾಗಿರಲಾರೆ. (ವಾದ್ಯ)

ನಾದವೇನಿದು ? ವಾದ್ಯಗಳ ನಿನದ! ನನಗರಿಯ

ದಂಥಾವ ಶುಭವಿಂದು ಬಂದಿಹುದು?-ನನಗೇನು?

ದನಿಯ ಬೀರಿರಿ ವಾದ್ಯಗಳಿರ ! ನಿಮ್ಮಗಳ

ಭಾಗಕ್ಕೆ ಕಿವುಡನಾಗಿಹೆನಿಂದು. ಇಲ್ಲ ; ನಾನ್

ಇರಲಾರೆನಿನ್ನು ! ಇಂದಿನಿರುಳನು ಬಿಟ್ಟರೆ

ಎನಗಿನ್ನು ಗತಿಯಿಲ್ಲ. ನಾಳೆ ನಾಳೇ ಎಂದು

ವರ್ಷಗಳ ಕಳೆದಾಯ್ತು ! ನಾಳೆ ಎಂದಿಗು ನಾಳೆ!

ಇಂದಿದೆ !

ಅಂತರ್ಮುಖಿಯಾಗಿ ಯೋಚಿಸುತ್ತಿರುವಾಗಲೇ ಚೆನ್ನನು ಸಿದ್ಧಾರ್ಥನಿಗೆ ಗಂಡು ಜನಿಸಿರುವ ಶುಭ ಸುದ್ಧಿಯನು ತಿಳಿಸಲು ಓಡೋಡಿ ಬರುತ್ತಾನೆ. ‘ಮತ್ತೊಂದು ಪಾಶ, ಕಬ್ಬಿಣದ ಸರಪಣಿಯ ಬಂಧನ! ದಿನ ಕಳೆದ ಹಾಗೆಲ್ಲಾ ಬುವಿಯ ಜಾಲವು ನಮ್ಮ ಸುತ್ತುವುದೆ ಹೊರತು ಬಿಚ್ಚಿ ಬಿಡುವುದು ಎಂಬ ನೆಚ್ಚ ನಾ ಕಾಣೆ’ ಎಂದು ಮತ್ತಷ್ಟು ಅಂತರ್ಮುಖನಾಗುತ್ತಾನೆ. ಇಂದಿನ ರಾತ್ರಿಯಲ್ಲಿಯೇ ಅರಮನೆಯನ್ನು ತ್ಯಜಿಸುವ ತನ್ನ ನಿರ್ಧಾರವನ್ನು ಕಾರ್ಯಗತಗೊಳಿಸಲು ಚೆನ್ನನ ಸಹಾಯವನ್ನು ಬಯಸುತ್ತಾನೆ. ಚನ್ನನಿಗೆ ಸಿದ್ಧಾರ್ಥನ ಆಲೋಚನೆಗಳು ತಿಳಿದುಕೊಳ್ಳುವುದಾಗುವುದಿಲ್ಲ. ‘ಏಕೆ ನನ್ನೊಡೆಯ ಇಲ್ಲಿ ಸೊಗಮಿಲ್ಲವೇ ನಿನಗೇ?’ ಎಂದು ಕಾಳಜಿಪೂರ್ವಕ ಕೇಳುತ್ತಾನೆ. ಅದಕ್ಕೆ ಸಿದ್ಧಾರ್ಥನ ವ್ಯಾಕುಲತೆಯಿಂದ ಹೇಳುವ ಉತ್ತರ ಹೀಗಿದೆ : 

ಚನ್ನಜ್ಜ, 

ನಾನೊಬ್ಬ ಸುಖಿಯಾದರೇನಾಯ್ತು? ಲೋಕವೇ

ಬೊಬಿರಿಯುತಿಹುದಲ್ಲ ಬೆಮದು ಬಡತನದಲ್ಲಿ.

ಮೌಡ್ಯಾಂಧಕಾರದೊಳು ಸಿಕ್ಕಿ, ದಾರಿಯ ತಪ್ಪಿ,

ಕಾಡು ಪಾಲಾಗಿಹಳು ಭಾರತಾಂಬೆಯು, ಚನ್ನ,

ಕಾಡುಪಾಲಾಗಿಹಳು ! 

ಎನ್ನುವ ಮಾತಿನಲ್ಲಿ ಸಿದ್ಧಾರ್ಥನ ಮನದಲ್ಲಿ ನಡೆದಿರುವ ತುಮುಲಗಳನ್ನು ಅರ್ಥೈಸಿಕೊಳ್ಳಬಹುದಾಗಿದೆ. ಈ ಹಿಂದೆ ತಾನು ವಯಸ್ಸಾದ ಮುದುಕನನ್ನು, ರೋಗಿಯನ್ನು, ಸತ್ತ ವ್ಯಕ್ತಿಯ ಶವವನ್ನು ಕಂಡ ದಿನವನ್ನು ಚನ್ನಜ್ಜನಿಗೆ ನೆನಪಿಸಿಕೊಡುತ್ತಾನೆ. ಅಂದೇ ರಾಜ್ಯವನ್ನು ತ್ಯಜಿಸಬೇಕಾಗಿತ್ತು. ಮದುವೆ ಅಡ್ಡ ಬಂತು, ಇಂದು ಸುತನುದಯ ಅದಕ್ಕೆ ಅಡ್ಡಿಯಾಗಬಾರದು. ‘ಇಂದು ಜವ ಬಂದರೂ ತಡೆಯಲಾರನು ಎನ್ನ’ ಎಂದು ತನ್ನ ಗಟ್ಟಿ ನಿರ್ಧಾರವನ್ನು ಹೇಳಿದಾಗ, ಏನೊಂದು ಅರಿಯದ ಚನ್ನಜ್ಜನು ಸಿದ್ಧಾರ್ಥನ ಮೇಲಿರುವ ಒಲುಮೆಯಿಂದ ಹೇಳಿದಂತೆ ಕೆಲಸ ಮಾಡಲು ಒಪ್ಪಿಕೊಳ್ಳುತ್ತಾನೆ. ಇಂದಿನ ರಾತ್ರಿ ಚೆನ್ನನು ತನ್ನ ಕೋಣೆಯಲ್ಲಿ ಮಲಗಿಕೊಳ್ಳುವಂತೆ ಹೇಳಿ ಕಳುಹಿಸುತ್ತಾನೆ.

ನಂತರದ ದೃಶ್ಯ ಎರಡರಲ್ಲಿ ರಾಜಕುಮಾರ ಸಿದ್ಧಾರ್ಥನ ಅಂತರಂಗದ ತಳಮಳವನ್ನು ಕಾಣುತ್ತೇವೆ. ಅದು ಈ ರೀತಿಯಾಗಿ ಪ್ರಕಟಗೊಂಡಿದೆ. 

ಹಿಂಜರಿಯದಿರು, ಮನವೆ. ಕಲ್ಲಾಗು, ಎದೆಯೆ.

ಬೆಣ್ಣೆಯಾಗುವೆ ಮುಂದೆ ! ವ್ಯಾಮೋಹವೇ, ಸಾಯಿ !

ವೈರಾಗ್ಯವೇ, ಕಾಯಿ! ಮುಕ್ತಿದೇವತೆ, ತಾಯಿ,

ಬಂದೆನ್ನ ಹೃದಯಕಮಲದಿ ನೃತ್ಯವಾಡು.

ಮಾಯೆಯನು ದೂಡು. ಶಕ್ತಿಯನು ನೀಡು !

ಎಂದು ತನ್ನನ್ನು ತಾನೇ ಸಂತೈಸಿಕೊಳ್ಳುತ್ತಾನೆ.  ಕಾವಲುಗಾರ ಕೈಲಾಸನನ್ನು ಕರೆದು ತನ್ನ ಆಭರಣಗಳನ್ನು ತೆಗೆದು ಕೊಡುತ್ತಾನೆ. ಆಶ್ಚರ್ಯಚಕಿತಗೊಳ್ಳುವ ಕೈಲಾಸನು ಸಿದ್ಧಾರ್ಥನ ಔದಾರ್ಯವನ್ನು ಮೆಚ್ಚಿಕೊಳ್ಳುವ ಪ್ರಸಂಗವು ಪರಿಣಾಮಕಾರಿಯಾಗಿ ಮೂಡಿಬಂದಿದೆ. ‘ಈ ರಾತ್ರಿ ನಿನ್ನ ಮನದಲಿ ಚಿರಸ್ಮರಣೀಯವಾಗಿರಲಿ’ ಎಂದು ಸಿದ್ಧಾರ್ಥನು ಹೇಳುವ ಮಾತು ಮಾರ್ಮಿಕವಾಗಿದೆ. ತಾನು ನೀಡಿದ ಸೂಚನೆಯಂತೆ ತನ್ನ ಕೋಣೆಯಲ್ಲಿ ಮಲಗಿದ್ದ ಚೆನ್ನನಿಗೆ ಕಡಿವಾಣ ಹಾಕದೆ ಕಂಥಕನೆಂಬ ಕುದುರೆಯನ್ನು ತೆಗೆದುಕೊಂಡು ಅರಮನೆಯ ಪಶ್ಚಿಮ ದ್ವಾರದಲ್ಲಿ ಕಾಯುತ್ತಿರುವಂತೆ ಹೇಳಿ ಅವನನ್ನು ಕಳುಹಿಸಿಕೊಡುತ್ತಾನೆ. ಉರಿಯುತ್ತಿರುವ ದೀಪವನ್ನು ಹಿಡಿದುಕೊಂಡು ಬಾಗಿಲ ಬಳಿ ಬಂದು ಹೇಳುವ ಮಾತುಗಳು ಒಳಗಿನ ಬೆಳಕನ್ನು ಪಡೆಯಲು ಹೋಗುತ್ತಿರುವ ಆತ್ಮದ ಅಭಿಪ್ಸೆಯನ್ನು ವ್ಯಕ್ತಗೊಳಿಸುವಿಕೆಯೊಂದಿಗೆ ವೈರಾಗ್ಯ ಭಾವದ ಉತ್ತುಂಗ ಸ್ಥಿತಿಯನ್ನು ಪ್ರಕಟಿಸುತ್ತದೆ. 

ಬಾ, ಬೆಳಕೆ, ಭ ಬೇಗ. ನೀನು ಹೊರಗಿನ ಬೆಳಕು ;

ಜ್ಞಾನ ಒಳಗಿನ ಬೆಳಕು, ನೀನಡಿಗಳಿಗೆ ದಾರಿ

ತೋರಿಸುವೆ. ಅರಿವಾದರಾತ್ಮನನು ಕೈಹಿಡಿದು

ನಡೆಸುವುದು. ಎಲೆಲೆ ಹೊರಗಿನ ಬೆಳಕೆ, ಒಳಗಿನಾ

ಬೆಳಕ ಪಡೆಯಲು ಹೋಗುತಿಹೆನು. ನೆರವಾಗು.

ಬಾ ಬೆಳಕೆ, ಬಾ ಬೇಗ.

ಅದರಂತೆ ಕೊನೆಯ ಬಾರಿಗೆ ತನ್ನ ಕೋಣೆಗೆ ಹೇಳುವ ಮಾತುಗಳು ಸಹ ಹೃದಯಸ್ಪರ್ಶಿಯಾಗಿವೆ. ‘ಕೋಣೆಯೆ ವಂದನೆ ನಿನಗೆ, ಸವಿಯಾದ ನೆನಪುಗಳಿಗಾವಾಸವಾಗಿರುವೆ. ಕಡೆಯ ವಂದನೆ’ ಎಂದು ಹೇಳುವ ಮಾತುಗಳು ಮನೋಜ್ಞವಾಗಿವೆ. ಹೊರಡುವ ಮುನ್ನ ಆಲೋಚಿಸಿ ಪತ್ರವನ್ನು ಬರೆದಿಟ್ಟು ತೆರಳುತ್ತಾನೆ. 

ಮೂರನೇಯ ದೃಶ್ಯದಲ್ಲಿ ಕುದುರೆ ಲಾಯದ ಬಳಿ ಚೆನ್ನನು ಆತಂಕದೊಡನೆ ಬರುತ್ತಾನೆ. ‘ಒಡೆಯನಿ ಪರಿ ಹುಚ್ಚನಾದೊಡೆ ವಿಧೇಯನಾಗಿರಬೇಕೆ?’ ಎಂಬ ಗೊಂದಲದಲ್ಲಿದ್ದಾನೆ. ಹೇಗಾದರೂ ಮಾಡಿ ಈ ಪ್ರಯಾಣವನ್ನು ತಪ್ಪಿಸಬೇಕೆಂಬ ಆಲೋಚನೆ ಇತನದು. ಅದಕ್ಕಾಗಿ ಕುದುರೆ ಕಾಸ್ತಾರನಾದ ರಾಲನನ್ನು ಎಬ್ಬಿಸಿ ಅವನ ನೆರವನ್ನು ಬಯಸುತ್ತಾನೆ. ಅರಮನೆಯ ಪಶ್ಚಿಮದ್ವಾರದಲ್ಲಿ ಅಡಗಿ ಕುಳಿತು ಸಿದ್ಧಾರ್ಥ ಅಲ್ಲಿಗೆ ಬಂದೊಡನೆ ಅಬ್ಬರಿಸು ಎಂದು ಹೇಳಿಕೊಡುತ್ತಾನೆ. ಆ ವೇಳೆಗೆ ಅಲ್ಲಿಗೆ ಕೈಲಿ ದೀಪ ಹಿಡಿದುಕೊಂಡಿರುವ ಸಿದ್ಧಾರ್ಥ ಅಲ್ಲಿಗೆ ಬರುತ್ತಾನೆ. 

ಒಂದೆ ಸಲ, ಒಂದೆಯೊಂದು ಸಲ ! ಹೋಗಿ

ಕಣ್ಣಿನಾಸೆಯ ತಣಿಸಿ ಬರುವೆ.

ಸತಿ ಯಶೋಧರೆ ಮತ್ತು ಅಂದೇ ಜನಿಸಿದ ಮಗು ರಾಹುಲನನ್ನು ಒಂದೇ ಸಲ ನೋಡಬೇಕೆಂಬಾಶೆ ಆತನನ್ನು ಬಾಧಿಸುತ್ತದೆ. ‘ಹೋಗಬೇಕೇಕೆ?’ ಎಂದು ಕೆಲವೊಮ್ಮೆ ಮನಸ್ಸು ಕೇಳುತ್ತದೆ. ಆದರೂ ಎದೆಯು ಶಾಂತವಾಗದು. ‘ಒಂದೇ ಸಲ ! ಒಂದೆ ಸಲ! ಮತ್ತೆಂದು ಬಯಸದಿಹ ಕಡೆಯ ಮುತ್ತನ್ನು ಕೊಟ್ಟು ಬರುವೆ’ ಎಂದು ಹೋಗುವನು. ಮೋಹಬಂಧನದಿಂದ ಬಿಡುಗಡೆಗೊಳ್ಳುವ ಜೀವದ ತಳಮಳವನ್ನು, ಮಾನವೀಯ ದೌರ್ಬಲ್ಯಗಳ ಸಹಜವಾದ ಹಿನ್ನಲೆಯಲ್ಲಿ ಮಹಾಕವಿಗಳು ಇಲ್ಲಿ ಚಿತ್ರಿಸಿರುವುದು ಗಮನ ಸೆಳೆಯುತ್ತದೆ. 

ನಾಲ್ಕನೇಯ ದೃಶ್ಯದಲ್ಲಿ ಕತ್ತಲಿರುವ ಯಶೋಧರೆಯ ಹೆರಿಗೆ ಮನೆಗೆ ಕೈಯಲ್ಲಿ ದೀಪವನ್ನು ಹಿಡಿದುಕೊಂಡು ಆಗಮಿಸುವ ಸಿದ್ಧಾರ್ಥನಿಗೆ ಮಂಚದ ಮೇಲೆ ಮಲಗಿರುವ ಸತಿ ಯಶೋಧರೆ, ತೊಟ್ಟಿಲಲ್ಲಿ ಮಲಗಿರುವ ಶಿಶು ರಾಹುಲ ಮತ್ತು ಅಲ್ಲಲ್ಲಿ ಮಲಗಿರುವ ದೂತಿಯರು ಕಾಣುತ್ತಾರೆ. ಮುದ್ದಾದ ಮಗು, ಅಂದದ ಸತಿಯನ್ನು ತ್ಯಜಿಸಿ ಹೋಗುವಾಗ ಸಿದ್ಧಾರ್ಥನ ಮನದಲ್ಲಿ ನಡೆದಿರಬಹುದಾದ ಒಳತೋಟಿಯನ್ನು ಇಲ್ಲಿ ಮಹಾಕವಿಗಳ ಕವಿಹೃದಯವು ತನ್ನ ಕಲ್ಪನಾಚಕ್ಷುವಿನಿಂದ ಚಿತ್ರಿಸಿರುವುದು ಮನಮುಟ್ಟುವಂತಿದೆ.  ‘ಧೈರ್ಯವಿದೆಯೇ ಧೈರ್ಯ. ವೈರಾಗ್ಯದೇವತೆಯೆ ಸಲಹೆನ್ನನಿಂದು’ ಎಂದು ವೈರಾಗ್ಯದೇವತೆಯನ್ನು ಪ್ರಾರ್ಥಿಸುತ್ತಾನೆ. ‘ವೈರಾಗ್ಯವಿಡುತಿರುವ ಹೆಜ್ಜೆಗಳ ಸಪ್ಪಳವ ವ್ಯಾಮೋಹವಾಲಿಸದ ತೆರದಿ……ಎಲೆ ನೆಲವೆ ಮಿದುವಾಗು, ಮಿದುವಾಗು, ಮಿದುವಾಗು….’ಎಂದು ನಿಧಾನವಾಗಿ ಹೆಜ್ಜೆಯಿಡುತಾ ಮುಮದುವರಿಯುತ್ತಾನೆ. ಕನವರಿಸುತಿರುವ ದೂತಿಯನ್ನು ಇತರ ಸೇವಕಿಯರನ್ನು ದಾಟಿಕೊಮಡು ‘ಅಲ್ಲಿಹುದು, ಅಲ್ಲಿಹುದು….ಎನ್ನ ಮುದ್ದಿನ ಕೆಂಡ’ ಎಂದು ಯಶೋಧರೆ ರಾಹುಲರ ಬಳಿಗೆ ಬರುತ್ತಾನೆ. ಆದರೆ ಅವರ ಹತ್ತಿರಕ್ಕೆ ಹೋಗಲಾರ ಮತ್ತು ಮುಟ್ಟಿದರಲಾರ : 

ಮುಟ್ಟಲಾರೆನು ; ಮುಟ್ಟಿದರೆ ಸುಟ್ಟುಬಿಡುವೆ ; 

ಮುಟ್ಟದಿರಲಾರೆ ; ತನುಮನಗಳೆಲ್ಲವನು

ಮೋಹಿಸುವ ಕಾಂತಿಯಿಮದೆಸೆಯುತಿಹೆ, ಎಲೆ ಕೆಂಡ!

ಇಲ್ಲಿಗೇತಕೆ ಬಂದೆ ಎಲೆ ಹೃದಯ? ಮತ್ತೇಕೆ

ಬೆದರಿ ಹಿಂಜರಿಯುತಿಹೆ . ತೃಪ್ತಿಯಾಯಿತೆ ನಿನಗೆ?

ಎನ್ನುವ ಮಾತುಗಳಲ್ಲಿ ಸಿದ್ಧಾರ್ಥನ ಅಂತರಂಗದ ತಳಮಳ ಪ್ರಕಟಗೊಳ್ಳುತ್ತಿದೆ. ‘ಶಾಂತವಾಗಲೇ ಎದೆಯೆ ! ತಳಮಳಿಸದಿರು ಮನವೆ !’ ಎಂದು ತನಗೆ ತನೇ ಸಮಾಧಾನಿಸಿಕೊಳ್ಳುತ್ತಾ, ‘ಒಂದು ಮುತ್ತನು ಸೆಳೆದು ತೆರಳುವೆನು’ ಎಂದು ಮಗುವನ್ನು ಮುದ್ದಿಸಲು ಮುಂದೆ ಬಾಗುತ್ತಾನೆ : 

ತಂದೆಯೊಲಿದೀಯುವಾ ಮುತ್ತಲ್ಲವಿದು, ಕಂದ ;

ಸಂನ್ಯಾಸಿಯಿಯುತಿಹೆ ನಿಷ್ಕಾಮ ಚುಂಬನ,

ಪರಮಾತ್ಮನೀಯುತಿಹ ಮಂಗಳದ ಮುತ್ತು !

ಎಂದು ಮುದ್ದಿಸಲು ಹೋಗಿ ಕಲ್ಪನೆಯ ಸದ್ದು ಕೇಳಿ ಬೆದರಿ ಏಳುವನು. ಮತ್ತೆ ದೈರ್ಯದಿಂದ ‘ಏಳದಿರು, ಕೂಗದಿರು, ಅಳಬೇಡ, ರಾಹುಲಾ. ನಿನ್ನಳುವಿನೊಳು ಮಹಾಶಕ್ತಿಯಿಹುದಿಂದು,’ ಎಂದು ಮುತ್ತಿಡುತ್ತಾನೆ. ‘ಕಡೆಯ ಮುತ್ತಿದು ಕಂದ ; ಮೊದಲ ಮುತ್ತಾದರೂ !’ ಎಂಬ ಮಾತು ಇಡೀ ಪ್ರಸಂಗಕ್ಕೆ ಪರಿಣಾಮಕಾರಿಯಾದ ಕಳೆಯನ್ನುಂಟು ಮಾಡುತ್ತದೆ. ನಂತರ ಆತನ ಗಮನವು ನಿದ್ರಿಸುತ್ತಿರುವ ಯಶೋಧರೆಯೆಡೆಗೆ ತಿರುಗುತ್ತದೆ. ಆಕೆ ಈಗ ಆತನ ಸತಿಯಾಗಿ ಉಳಿದಿಲ್ಲ. 

ನಿದ್ರಿಸು, ಯಶೋಧರಾ, ನಿದ್ರಿಸಲೆ ತಾಯಿ;

ಇಂದು ನಾ ನಿನ್ನ ಸುತ, ಪತಿಯಲ್ಲ !

ನೀನೆನಗೆ ದೇವತೆ, ನಿನ್ನ ಬಳಿ ನಾ ಸಾರೆ ;

ನಿನ್ನ ನಾನಿನ್ನೊಲಿಯೆ ; ಭಕ್ತಿಯಂ ಪೂಜಿಸುವೆ.

ಎನ್ನುವ ಆತನ ಧ್ವನಿಯಲ್ಲಿ ನಾವು ಈಗಾಗಲೇ ಆತನು ಲೌಕಿಕ ಭಾಂದವ್ಯವನ್ನು ಕಳಚಿಕೊಂಡಿರುವುದನ್ನು ಗಮನಿಸಬಹುದು. ಅದೇ ವೇಲೆಗೆ ಕುದುರೆಯ ಖುರಪುಟದ ಸದ್ದು ಕೇಳಿಸುತ್ತದೆ. ಎಚ್ಚತ್ತುಕೊಂಡವನಾಗಿ ‘ಬಂದೆ ಚೆನ್ನ ಬಂದೆ, ನಿಮಗೆಲ್ಲ ಮಂಗಳಂ’ ಎಂದು ಹೊರಡುತ್ತಾನೆ. 

ಮುಂದಿನ ದೃಶ್ಯ 5ರಲ್ಲಿ ಅರಮನೆಯ ಹೊರಗಡೆ ಸಿದ್ಧಾರ್ಥ ಮತ್ತು ಮೋಹಿನಿಯ ಮಗ ಮಾರನ ನಡುವೆ ನಡೆಯುವ ಸಂಭಾಷಣೆಯ ಕಲ್ಪನೆ ಅರ್ಥಪೂರ್ಣವಾಗಿದೆ. ಒಂದು ಕಡೆ ಸತ್‍ಶಕ್ತಿ ಆತನನ್ನು ಎಲೆಯುತ್ತಿದ್ದರೆ, ಇನ್ನೊಂದೆಡೆ ಲೌಕಿಕ ಆಕರ್ಷಣೆಯೂ ತನ್ನ ಬಲೆಯನ್ನು ಬೀಸುತ್ತಿತ್ತು. ಎಂಬುದನ್ನು ಮಾರನ ಸಾಂಕೇತಿಕ ಪಾತ್ರದ ಮೂಲಕ ಮಹಾಕವಿಗಳು ಚಿತ್ರಿಸಿದ್ದಾರೆ. ಕಪಿಲವಸ್ತುವಿನಗಲ ಸಾಲದಿದ್ದರೆ ಈ ಧರೆಯನ್ನೇ ನಿನಗೆ ಕೊಡುತ್ತೇನೆ ಹಿಂದಿರುಗು’ ಎಂಬ ಪ್ರಲೋಭನೆಯನ್ನು ಒಡ್ಡುತ್ತಾನೆ ಮಾರ. ‘ಇಹಸುಖವನರಿತಿಹೆನು, ಪರಸುಖವದೆಂತಿಹುದೋ’ ಅರಿಯದಿಹ ಪರಸುಖಕ್ಕಾಗಿ, ಕೈಲಿರುವ ಇಹಸುಖವನ್ನು ಕಳೆದುಕೊಳ್ಳಬಾರದೆಂದು ಐಹಿಕ ಆಕರ್ಷಣೆಯತ್ತ ಮನಸ್ಸನ್ನು ಸೆಳೆಯುತ್ತಾನೆ. ಇದಕ್ಕೆಲ್ಲ ಸೊಪ್ಪುಹಾಕುವವನಲ್ಲ ಸಿದ್ದಾರ್ಥ. ಆದರೂ ಮಾರನು ಹೇಳುವ ಮಾತೊಂದು ಸಿದ್ಧಾರ್ಥನಿಗೆ ನಾಟುತ್ತದೆ. 

ಹೆತ್ತತಾಯ್ತಂದೆಗಳಿಗೆಲ್ಲ

ಮೋಸ ಮಾಡುವೆಯೇನು ಸಿದ್ಧಾರ್ಥ? ಸೋಮಾರಿ

ನೀನು; ಕರ್ಮಕ್ಕೆ ಭಯಪಟ್ಟು, ಕರ್ತವ್ಯ

ವೆಸಗದಲೆ ಸ್ವಾನಂದಕೆಳಸುತಿಹ ನೀನೆ

ಹೇಡಿ !

ಒಂದರ್ಥದಲ್ಲಿ ಮಾರ ಹೇಳುತ್ತಿರುವುದು ಸರಿ. ತಂದೆ ತಾಯಿಗಳಿಗೆ ಮೋಸ ಮಾಡಿ ಕೈಹಿಡಿದ ಸತಿಯನ್ನು ಕೈಬಿಟ್ಟು ಹೋಗುತ್ತಿದ್ದಾನೆ. ಆದರೆ ಅದನ್ನೂ ಆತ ಅಲೋಚಿಸಿದ್ದಾನೆ.

ಬೈಯದಿರು ಮಾರ, ಬೈಯದಿರು

ಕಡಲಾಗಿ ಹಿಂತಿರುಗಲೆಂದೇ ಹನಿಯಾಗಿ

ಹೊರಟಿಹೆನು. ಹನಿಯೊಂದು ಎನಿತು ಕೊಳಕೊಡ್ಡಂ

ತೊಳೆಯಬಲ್ಲುದು ಮಾರ?

‘ಒಂದು ಹನಿ ಎಷ್ಟು ಕೊಳೆಯನ್ನು ತೊಳೆಯಬಲ್ಲುದು? ಹನಿಯಾಗಿರುವ ನಾನು ಸಮುದ್ರೋಪಮನಾಗಿ ಬರಲು ಹೋಗುತ್ತಿದ್ದೇನೆ. ಕರ್ತವ್ಯಕ್ಕೆ ಭಯಪಟ್ಟು ಅಲ್ಲ’ ಎಂದು ಹೇಳುವ ಮಾತಿಗೆ ಒಪ್ಪದ ಮಾರನು ‘ಕಲ್ಲಿನೆದೆ ನಿನ್ನದೈ ಸಿದ್ಧಾರ್ಥ! ಸತಿಯ ಗೊಳಿಗೆ ನೂಂಕಿ ಕಂಬನಿಯ ಕರೆಯದೆಯೆ ಓಡುತಿಹೆ ತಸ್ಕರನ ತೆರದಿ!’ ಎನ್ನುತ್ತಾನೆ. ಜನಕ್ಕಾಗಿ ಕಣ್ಣಿರು ಸುರಿಸುತ್ತಿರುವ ಸಿದ್ಧಾರ್ಥ ಈ ಮಾತಿಗೆ ಹೇಳುವುದು ಹೀಗಿದೆ : 

ಮುಂದೆದೆಯ ಬೆಣ್ಣೆಯನು ಮಾಡೆ ಇಂದದನು

ಕಲ್ಲಾಗಿ ಮಾಡಿರುವೆ. ಮೋಹಿನಿಯ ಮಗನೇ

ತೊಲಗತ್ತ ! ತೊಲಗತ್ತ !

ಎಂದು ಮಾರನೊಡ್ಡುವ ಯಾವುದೇ ಯುಕ್ತಿಗಳಿಗೆ ಬಗ್ಗದೇ ತೆರಳುತ್ತಾನೆ. ತುದಿಯವರೆಗೂ ಆತನನ್ನು ಬೆನ್ನಟ್ಟಿ ಕಾಡುವುದಾಗಿ ಮಾರ ನಿರ್ಧರಿಸಿದರೂ ಸಿದ್ಧಾರ್ಥನ ಸ್ಥೈರ್ಯಕ್ಕೆ ಮೆಚ್ಚಿ ಹೇಳುವ ಮಾತಿದು : 

ಮಾರನೊಡ್ಡುವ ಬಲೆಗೆ ಬೀಳದವರಪರೂಪ

ಒಮ್ಮೆ ತಪ್ಪಿದರೂ ಮಹಾತ್ಮರೇ ಹೌದು.

ಅದರಿಂದ ನೀನೂ ಮಹಾತ್ಮನೇ ಗೌತಮಾ!

ಧರ್ಮಮೋಕ್ಷವೇ ನೀನು ; ನಾನು ಕಾಮಾರ್ಥ !

ಇತ್ತ ಮುಂದಿನ ದೃಶ್ಯ ಆರರಲ್ಲಿ ಚೆನ್ನನಿಂದ ಪ್ರಚೋಧಿತನಾಗಿ ಬರುವ ರಾಲನು ತನ್ನ ಕೆಲಸದಲ್ಲಿ ವಿಫಲನಾಗಿ ಸಿದ್ಧಾರ್ಥನಿಂದ ವಸ್ತುಗಳನ್ನು ದಾನವಾಗಿ ಪಡೆದು ಹೋಗುವ ಪ್ರಸಂಗವು ಇಡೀ ರಂಗಕೃತಿಯು ಗಂಭೀರತೆಯಲ್ಲಿ ಸಾಗುತ್ತಿರುವಾಗ ರಾಲನ ಪಾತ್ರವು ತುಸು ಹಾಸ್ಯವನ್ನೋದಗಿಸುತ್ತದೆ.

ಸಿದ್ಧಾರ್ಥ ಹೇಳಿದಂತೆ ಚನ್ನಜ್ಜ ಕುದುರೆಗಳನ್ನು ತಂದು ಕಾಯುತ್ತಿರುವ ದೃಶ್ಯ ಏಳನೇಯದು. ಸಿದ್ಧಾರ್ಥ ಅಲ್ಲಿಗೆ ಬಂದ ನಂತರ ಇಬ್ಬರೂ ಕುದುರೆಯನ್ನೇರಿ ಹೊರಡುತ್ತಾರೆ. 

ಮುದ್ದು ಹಯವೇ, ಹೊರಡು ; ನಡೆ ಮುಮದೆ, ಮುಂದೆ

ಜಗದ ಬೆಳಕನು ಹೊತ್ತು ಜವದಿಂದ ನಡೆ ಮುಂದೆ

ಎಂಬ ಸಿದ್ಧಾರ್ಥನ ದೀರ್ಘವಾದ ಸಂಭಾಷಣೆಯಲ್ಲಿ ಮುಂದೆ ಬುದ್ಧನಾಗಲಿರುವ ಆತನ ಮಹತ್ವದ ಸ್ವಯಂ ವಿಶ್ಲೇಷಣಾತ್ಮಕ ನಿರೂಪಣೆ ಬರುತ್ತದೆ.

ಬೆನ್ನಿನೊಳು ಜಗದ ಜ್ಯೊತಿಯು ಕುಳಿತು ತಳಿಸುತಿದೆ.

ನಿಶೆಯ ಗರ್ಬಂಬೊಕ್ಕು ನಡೆ, ಹಯವೆ, ನಡೆ ಮುಂದೆ

ಮುಂದೆ. ಆವಜ್ಯೋತಿಯ ಹೊರುವ ಪುಣ್ಯವೊದ

ಗಿದೆ ಇಂದು, ನೀನೆ ಧನ್ಯನು, ಹಯವೇ : ನೀನಿಂದು

ಇಳೆಯ ತಿಮಿರಿವ ಹರಿವ ಪೊಂಜುಗರನು, ತೇಜಿ.

ಜಗದ ಪುಣ್ಯದ ಬಾರ, ನಿನ್ನ ಬೆನ್ನಿನ ಮೇಲೆ.

ಕೋಟಿ ಜೀವರ ಬಿದಿಯು, ಕೋಟಿಯರಸರ ಬಿದಿಯು,

ನಿನ್ನ ಬೆನ್ನಿನೊಳೊಹುದು, ಓಡು, ನಡೆ ; ಓಡು, ನಡೆ…….

ಮುಂತಾಗಿ ಚೆಂದದ ಸಂಭಾಷಣೆಯನ್ನು ಮಹಾಕವಿಗಳು ಮೂಡಿಸಿದ್ದಾರೆ. ಇಲ್ಲಿ ಒಂದು ವಿಚಾರ ನಾವು ಗ್ರಹಿಸಿದಂತೆ ಮಹಾಕವಿಗಳು ಇಲ್ಲಿ ತನ್ನೊಳಗಿನ ಅಹಂಕಾರವನ್ನು ಅಳಿದುಕೊಂಂಡು ಸಾಧಕನಾಗಲು ಹೊರಟಿರುವ ಸಿದ್ಧಾರ್ಥನು ತನ್ನನ್ನೇ ಕುರಿತು ಹೇಳಿಕೊಳ್ಳುವ ಸ್ವಗತದಂತಹ ಸಂಭಾóಷಣೆಯನ್ನು ಎಂಡನೇಯ ದೃಶ್ಯದಲ್ಲಿ ಬರುವ ಯಕ್ಷ, ಗಂಧರ್ವ ಮತ್ತು ಕಿನ್ನರರಿಮದ ಹೇಳಿಸಿದ್ದರೆ ಚೆನ್ನಾಗಿತ್ತೇನೋ. 

ಮುಂದಿನ ಚಿಕ್ಕದದ 8ನೇಯ ದೃಶ್ಯದಲ್ಲಿ ಯಕ್ಷ, ಗಂದರ್ವ ಮತ್ತು ಇನ್ನರರು ಸಿದ್ಧಾರ್ಥನು ಹತ್ತಿ ಹೊರಟಿರುವ ಕುದುರೆಯ ಖುರಪುಟದ ಧ್ವನಿ ಕೇಳಿದಂತೆ ಹೂವುಗಳನ್ನು ಚೆಲ್ಲುತ್ತಾ ಹೋಗುವ ದೃಶ್ಯವಿದೆ. ಅದು ಪ್ರತಿಮಾತ್ಮಕವಾಗಿ ಅರ್ಥಪೂರ್ಣವಾಗಿದೆ. 

ಒಂಬತ್ತನೇಯ ದೃಶ್ಯದಲ್ಲಿ ಚನ್ನ ಮತ್ತ ಉಸಿದ್ಧಾರ್ಥರಿಬ್ಬರೂ ಕುದುರೆಯನೇರಿ ಆಗಲೇ ನಗರದಿಂದ ಬಹಳ ದೂರ ಬಂದಿದ್ದಾರೆ. ಇನ್ನೂ ಬೆಳಕು ಮೂಡಿಲ್ಲ. ವಯಸ್ಸ್ಸಾದ ಚನ್ನಜ್ಜ ಆಯಾಸಗೊಂಡಿದ್ದಾನೆ. ಕುದುರೆಯಿಂದಿಳಿದು ಚನ್ನಜ್ಜನಿಗೆ ವಿಶ್ರಾಂತಿಯನ್ನು ತೆಗೆದುಕೊಳ್ಳುವಂತೆ ಸಿದ್ಧಾರ್ಥನು ಹೇಳುತ್ತಾನೆ. ಚನ್ನಜ್ಜನು ನಿದ್ರಿಸುತ್ತಾನೆ. ಲೋಕದ ಮಹಾವಾರಿದಿಗೆ ಬೀಳಲಿರುವ ತನ್ನೊಡನೆ ಈ ಮುದುಕನಿನ್ನು ಬರಲಾರನೆಂಬುದನ್ನು ತಿಳಿದುಕೊಮಡ ಸಿದ್ಧಾರ್ಥನ ಅಂತರಂಗದ ತಳಮಳವನ್ನು ಮಹಾಕವಿಗಳು ಉತ್ತಮವಾಗಿ ಚಿತ್ರಿಸಿದ್ದಾರೆ. ಅದರಮತೆ ಎಚ್ಚರಗೊಮಡ ನಂತರ ವ್ಯಕ್ತವಾಗುವ ಚನ್ನಜ್ಜನ ದುಃಖವೂ ಅಷ್ಟೇ ಮನಕಲಕುವಂತಿದೆ. ಇಲ್ಲಿ ಸೇವಕನ ನಿಷ್ಟೆ ಮತ್ತು ಸುಸಂಸಕೃತ ಹೃದಯಗಳ ಪ್ರಾಮಾಣಿಕತೆ ವ್ಯಕ್ತವಗಿದೆ. 

ಕೊನೆಯ ಮತ್ತು ಹತ್ತನೇಯ ದೃಶ್ಯದಲ್ಲಿ ಅನುಮಾ ನದಿಯ ದಡದಲ್ಲಿ ಸಿದ್ಧಾರ್ಥನನ್ನು ಕಾಣುತ್ತೇವೆ. ಆತನ ವೈರಾಗ್ಯ ಯಜ್ಞಕ್ಕೆ ಬಲಿಯಾಗಲೆಂದು ಉಳಿದ ಪ್ರಾಣಿಯೆಂದರೆ ಆತನ ನೆಚ್ಚಿನ ಕುದುರೆ ಕಂಥಕ. ಸತಿ-ಸುತರ ಭಾಂಧವ್ಯದ ಮೋಹ, ಚನ್ನನ ಸ್ನೇಹದ ಮೇಲಿನ ಮೋಹ ಇವುಗಳಿಗಿಂತ ಕಠಿಣತಮವಾದುದು ಈ ಮೂಕಪ್ರಾಣಿಯ ಮೇಲಿನ ಮಮತೆ. ಅದನ್ನು ಕಿತ್ತೊಗೆದ ಸಿದ್ಧಾರ್ಥ ಕಪಿಲ ವಸ್ತುವಿನ ಕಡೆಗೆ ಕಂಥಕನನ್ನು ಕಳುಹಿಸುತ್ತಾನೆ. ಈಗ ವಿಸ್ತಾರವಾದ ಜಗತ್ತಿನ ಮುಮದೆ ನಿಸ್ಸಂಗವಾಗಿ ನಿಂತಿದ್ದಾನೆ. ಈ ನಿಸ್ಸಂಗತ್ವಕ್ಕೆ ಸಾಂಕೇತಿಕವಾದ ಹೊರಗಿನ ವೇಷ ಇನ್ನೂ ಬಮದಿಲ್ಲ. ಆ ವೇಳೇಗೆ ತಿರುಕನೋರ್ವನು ಅಲ್ಲಿಗೆ ಬರುವಂತ ಮಾಡಿ, ಅವನ ವೇಷವನ್ನು ಸಿದ್ಧಾರ್ಥನಿಗೆ ಕೊಡಿಸುವುದರ ಮೂಲಕ ಮಹಾಕವಿಗಳು ಮುಕ್ತಾಯವನ್ನು ಅರ್ಥಪೂರ್ಣಗೊಳಿಸಿದ್ದಾರೆ. 

ಶಿವನ ಬಟ್ಟೆಯನುಟ್ಟ ನೀನೆ ಧನ್ಯನು ಇಂದು,

ಸಿದ್ಧಾರ್ಥ ! ಶಿವನಾದೆ ಮುಂದೆ ಎಂದೆಂದೂ!

ತಿರುಕ/ಭಿಕ್ಷುಕ ಹೇಳುವುದರೊಂದಿಗೆ ಪರದೆ ಬೀಳುತ್ತದೆ. ಮುಂದಿನ ಉಪ-ಸಂಹಾರದ ದೃಶ್ಯದಲ್ಲಿ ಯಕ್ಷ, ಕಿನ್ನರ, ಗಂಧರ್ವರು ಈ ಮಹಾ ಘಟನೆಯನ್ನು ಹಾಡಿ ಹೊಗಳುತ್ತಾ ‘ಧನ್ಯಂ ಮಹಾರಾತ್ರಿ’ ‘ಲೋಕಕಾಗಲಿ ಮೈತ್ರಿ’ ಎಂಬ ಭರತವಾಕ್ಯದೊಂದಿಗೆ ಪರದೆ ಬೀಳುತ್ತದೆ. 

ಇದೊಂದು ಪರಿಣಾಮಕಾರಿಯಾದ ಮತ್ತು ಸರ್ವಕಾಲಕೂ ಸಲ್ಲುವ ವಸ್ತ್ತುವಿಷಯದ ಕಥಾನಕವಾಗಿದೆ. ಇಲ್ಲಿ ಒಂದು ಘಟನೆಯ ಹಿಂದಿರುವ ಮಾನಸಿಕ ವಿಶ್ಲೇಷಣೆಯನ್ನು ಎಳೆ-ಎಳೆಯಾಗಿ ತೋರಿಸಿವುದು ಸಾಹಿತ್ಯಿಕ ಕೆಲಸವೆಂದು ಒಪ್ಪಿಕೊಲ್ಳುವುದಾದರೆ ಅದನ್ನು ಈ ರಂಗಕೃತಿಯು ಉನ್ನತ ಮಟ್ಟದಲ್ಲಿ ಯಶಸ್ವಿಯಾಗಿ ನಿರ್ವಹಿಸಿರುವುದುನ್ನು ನಾವು ಮನಗಾಣಬಹುದು. ಸಿದ್ಧಾರ್ಥನನ್ನು ಮಾನವೀಯ ಮಟ್ಟದಲ್ಲಿ ನಿಲ್ಲಿಸಿ ಮಾನವೀಯತೆಯಿಮದ ದೈವತ್ವಕ್ಕೇರುತ್ತಿರುವ ಉನ್ನತ ಸಾಹಸದ ಚಿತ್ತವನ್ನು ಪ್ರಜ್ವಲವಾಗಿ ತೋರಿಸಲಾಗಿದೆ. ಆದುದರಿಂದ ಸಿದ್ಧಾರ್ಥ ಪಾತ್ರವು ಇಲ್ಲಿ ಶುಷ್ಕ ಆದರ್ಶದ ನಿರ್ಜಿವ ಪ್ರತಿಮೆಯಾಗಿ ನಿಲ್ಲುವುದಿಲ್ಲ. ಪ್ರೇಮ-ತ್ಯಾಗ-ಅನುಕಂಪಗಳ ಕರುಣಾಮಯಿ ಮಂಗಳಮೂರ್ತಿಯಾಗಿ ಸಹೃದಯರ ಕಂಬನಿಯ ಕಾಣ್ಕೆಯನ್ನು ಪಡೆಯುತ್ತಾನೆ. ಶ್ರಮವಹಿಸಿ ರಿಹರ್ಸಲ್ ಮಾಡುವುದರೊಂದಿಗೆ ಅನುಭವಿ ನಟರನ್ನು ಆಯ್ಕೆ ಮಾಡಿಕೊಂಡು ರಂಗದಲ್ಲಿ ಪ್ರಯೋಗಿಸಿದರೆ ಉತ್ತಮ ಪ್ರದರ್ಶನವನ್ನು ನೀಡಬಹುದು.ತನ್ಮಯತೆಯಿಂದ ಪರಿಭಾವಿಸಬಲ್ಲ ಸಹೃದಯರಿಗೆ ಬುದ್ಧನ ವ್ಯಕ್ತಿತ್ವದ ಪ್ರಜ್ವಲ ಬೆಳಕಿನ ರಂಗಕೃತಿ. ಅಂತರಂಗದ ಕಣ್ಣಿನ ಮುಂದೆ ಅಚ್ಚೊತ್ತಿದಂತೆ ಉಳಿಯುವಂತಹ ಪರಿಣಾಮವನ್ನು ಈ ಕೃತಿಯು ನೀಡುತ್ತದೆ. 

ಇಂತಹ ಮಹಾನ್ ಮತ್ತು ಅಪರೂಪದ ರಂಗಕೃತಿಯನ್ನು ಇತ್ತೀಚೆಗೆ ಮೈಸೂರಿನ ರಂಗಾಯಣದ ವನರಂಗದಲ್ಲಿ ಹಿರಿಯ ರಂಗಕರ್ಮಿ ಡಾ.ಬಿ.ವಿ.ರಾಜಾರಾಂ ಅವರ ನಿರ್ದೇಶನದಲ್ಲಿ ಬೆಂಗಳೂರಿನ ಕಲಾಗಂಗೋತ್ರಿ ತಂಡದ ನಟರು ಅಭಿನಯಿಸಿರುವುದನ್ನು ದಿನಾಂಕ 25.12.2012ರಂದು ನಾನು ನೋಡಿದಾಗ ರಾಜಕುಮಾರ ಸಿದ್ಧಾರ್ಥನು ಬುದ್ಧದೇವನಾಗುವ ಪೂರ್ವದ ತಳಮಳಗಳನ್ನು ಮಹಾಕವಿಗಳ ಲೇಖನಿಯಲ್ಲಿ ಪ್ರಜ್ವಲವಾಗಿ ಹೊರಹೊಮ್ಮಿದುದನ್ನು ಆಸ್ವಾದಿಸುವ ಭಾಗ್ಯ ದೊರಕಿದುದು ಆ ಬುದ್ಧದೇವನ ಕೃಪೆಯೆಂದು ನನಗನಿಸಿತು. ಅಂತಹ ಮಹಾನ್ ಚೇತನಗಳಿಗೆ ಮತ್ತೊಮ್ಮೆ ರಂಗನಮನಗಳನ್ನು ಸಲ್ಲಿಸುವುದು ರಂಗಹೃದಯಿಗಳಾದ ನಮ್ಮೆಲ್ಲರ ಸೌಭಾಗ್ಯವೆಂಬುದು ಅತಿಶಯೋಕ್ತಿಯೇನಲ್ಲ!.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Jayaprakash Abbigeri
Jayaprakash Abbigeri
11 years ago

Dear Siddaram, ತಪ್ಪಿಲ್ಲದಂತೆ ಟೈಪಿಸುವಿಕೆಯ ಮೇಲೆ concentrate ಮಾಡಿರಿ. ಉತ್ತಮ ಸರಣಿ ಲೇಖನ….ಮುಂದುವರೆಯಿರಿ…ಶುಭವಾಗಲಿ…Best Wishes from my side….

ಹಿಪ್ಪರಗಿ ಸಿದ್ದರಾಮ್
ಹಿಪ್ಪರಗಿ ಸಿದ್ದರಾಮ್
11 years ago

Thank you very much Sir….

GAVISWAMY
11 years ago

ತುಂಬಾ ಚೆನ್ನಾಗಿದೆ ಸರ್  'ಮಹಾರಾತ್ರಿ' ನಾಟಕದ ವಿಶ್ಲೇಷಣೆ

Hipparagi Siddaram
Hipparagi Siddaram
11 years ago
Reply to  GAVISWAMY

Thank you very much Sir….

4
0
Would love your thoughts, please comment.x
()
x