ನಾಟಕಕಾರರಾಗಿ ಕುವೆಂಪು (ಭಾಗ-10): ಹಿಪ್ಪರಗಿ ಸಿದ್ದರಾಮ್

ಆತ್ಮೀಯ ರಂಗಾಸಕ್ತ ಓದುಗಸ್ನೇಹಿತರೇ, ಇಲ್ಲಿಯವರೆಗೆ ಮಹಾಕವಿಗಳ ರಂಗಕೃತಿಗಳ ಪೌರಾಣಿಕ ಲೋಕದಲ್ಲಿ ವಿಹರಿಸುತ್ತಾ, ಅವರ ಪ್ರತಿಭಾಜ್ವಾಲೆಯಲ್ಲಿ ಅರಳಿದ ಹಲವು ಪೌರಾಣಿಕ ಪ್ರಸಂಗಗಳು ಆಧುನಿಕ ರಂಗರೂಪದೊಂದಿಗೆ ಹೊರಹೊಮ್ಮುವುದರೊಂದಿಗೆ, ಇಂದಿಗೂ ಕನ್ನಡ ರಂಗಭೂಮಿಯಲ್ಲಿ ಹೊಸತನಕ್ಕೆ ಪ್ರಚೋಧನಾತ್ಮಕವಾಗಿರುವ ಪೌರಾಣಿಕ ರಂಗಕೃತಿಗಳ ಕುರಿತಾಗಿ ಇಲ್ಲಿಯವರೆಗೆ ನೋಡಿದ್ದೇವೆ. ಮಹಾಕವಿಗಳು ಕೇವಲ ಪೌರಾಣಿಕ ಪ್ರಸಂಗಗಳಿಗೆ ಸೀಮಿತವಾಗದೇ ಮುಂದುವರೆದು ತಮ್ಮ ಲೇಖನಿಯಲ್ಲಿ ಐತಿಹಾಸಿಕ ಕಥನಕಗಳನ್ನು ಸಹ ಹೊಸ ರೂಪಾಂತರದೊಂದಿಗೆ ಇಂದಿನ ಕಾಲದ ರಂಗಕರ್ಮಿಗಳ ಪ್ರತಿಭೆಗೆ ಸವಾಲೊಡ್ಡುವಂತಹ ವಿಷಯಾಧಾರಿತ ಮತ್ತು ಪ್ರಸಂಗಾಧಾರಿವಾದ ರಂಗಕೃತಿಗಳನ್ನು ನೀಡಿದ್ದಾರೆ. ಅವುಗಳನ್ನು ನಾವೀಗ ಅವುಗಳ ರಚನೆಯ ಕಾಲಾನುಕ್ರಮದೊಂದಿಗೆ ನೋಡುತ್ತಾ, ಪರಿಚಯಿಸಿಕೊಳ್ಳುವುದರೊಂದಿಗೆ ಆಸ್ವಾದಿಸುತ್ತಾ ಹೋಗೋಣ.

ಬಿರುಗಾಳಿ (1930):
ಮೂಲ ಷೇಕ್ಸಪಿಯರ್ ಮಹಾಕವಿಯ ‘ಟೆಂಪೆಸ್ಟ್’ ಆಂಗ್ಲ ರಂಗಕೃತಿಯ ಮೂಲಭಾವಗಳನ್ನು ಆಧರಿಸಿ ರಚಿಸಿದ ರಂಗಕೃತಿಯಾಗಿದ್ದು ಒಂಬತ್ತು ದೃಶ್ಯಗಳನ್ನೊಳಗೊಂಡಿದೆ. ಈ ಕೃತಿಯು ಆಗಿನ ಕಾಲದಲ್ಲಿಯೇ ಮೈಸೂರಿನ ಮಹಾರಾಜರ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸಿದ್ದರೆಂದು ಉಲ್ಲೇಖವಿದೆ. 1930ರಲ್ಲಿ ಮೊದಲ ಮುದ್ರಣವನ್ನು ಕಂಡ ಈ ಕೃತಿಯ ಇತ್ತೀಚಿಗಿನ ಹನ್ನೊಂದನೆಯ ಮುದ್ರಣವು 2004ರಲ್ಲಿ ಉದಯರವಿ ಪ್ರಕಾಶನ, ವಾಣಿವಿಲಾಸಪುರಂ, ಮೈಸೂರು ಇವರಿಂದ (ಬೆಲೆ-45/- ರೂ) ಪ್ರಕಾಶನಗೊಂಡಿದೆ.

ಈ ಕೃತಿಯ ಮುನ್ನುಡಿ(24-11-1930)ಯಲ್ಲಿ ಮಹಾಕವಿ ಕುವೆಂಪುರವರ ಗುರುಗಳಾದ ಟಿ.ಎಸ್.ವೆಂಕಣ್ಣಯ್ಯನವರು ಆತ್ಮೀಯವಾಗಿ ಹೇಳುವಂತೆ, “…….ಈಗ ಪುಟ್ಟಪ್ಪನವರು ಈ ಇಂಗ್ಲಿಷ್ ಸಂಪ್ರದಾಯವನ್ನು ಕನ್ನಡಕ್ಕೆ ತರಲು ಈ ನಾಟಕಗಳಲ್ಲಿ ಪ್ರಯತ್ನಿಸಿರುತ್ತಾರೆ. ‘ಬಿರುಗಾಳಿ’ಯಲ್ಲಿ ಇಂಗ್ಲಿಷ್ ನಾಟಕಗಳಲ್ಲಿರುವಂತೆಯೇ ಅಲ್ಲಲ್ಲಿ ಮಧ್ಯಮ-ನೀಚ ಪಾತ್ರಗಳ ಸಂಭಾಷಣೆಯಲ್ಲಿ ಗಧ್ಯವನ್ನು ಉಪಯೋಗಿಸಿರುತ್ತಾರೆ. ಈ ನಾಟಕಗಳಲ್ಲಿರುವ ಪದ್ಯದ ಮೂಲವು ರಗಳೆಗಳಲ್ಲಿದೆ. ಲಲಿತ ರಗಳೆಯಲ್ಲಿ ಪ್ರತಿ ಪಾದದಲ್ಲಿಯೂ ಐದು ಮಾತ್ರೆಯ ನಾಲ್ಕು ಗಣಗಳಿರುತ್ತವೆ ; ಪಾದದ ಆದ್ಯಂತಗಳಲ್ಲಿ ಪ್ರಾಸವಿರುತ್ತದೆ. ಈ ಪ್ರಾಸದ ಕಟ್ಟನ್ನು ತೆಗೆದು ಹಾಕಿದರೆ ಪುಟ್ಟಪ್ಪನವರು ಬರೆದಿರುವ ಪದ್ಯದ ತಳಹದಿ ಸಿಕ್ಕುತ್ತದೆ. ಈ ಪ್ರಾಸರಹಿತವಾದ ರಗಳೆಯನ್ನು ‘ಸರಳ ರಗಳೆ’ ಎಂದು ಕರೆಯಬಹುದು. ……ಒಂದು ಭಾಷೆಯಲ್ಲಿರುವ ನಾಟಕವನ್ನು ಇನ್ನೊಂದು ಭಾಷೆಗೆ ತರುವವರು ಮೂಲದಲ್ಲಿ ಇದ್ದುದನ್ನು ಇದ್ದಂತೆ ಶಬ್ದಶಃ ಭಾಷಾಂತರ ಮಾಡಬಹುದು ಅಥವಾ ಮೂಲದಕ್ಕಿರುವುದನ್ನು ಹೆಚ್ಚು ಬದಲಾಯಿಸದೇ ಅದು ತಾವು ಬರೆಯುವ ಭಾಷೆಯನ್ನಾಡುವ ಜನರ ನಡೆನುಡಿಗೆ ಹೊಂದುವಂತೆ ಅವಶ್ಯಕವಾದಷ್ಟು ವ್ಯತ್ಯಾಸವನು ಮಾಡಿಕೊಂಡು ಸ್ವಲ್ಪ ಹೆಚ್ಚು ಕಡಿಮೆ ಮೂಲನಾಟಕದ ಭಾವವೆಲ್ಲವೂ ಬರುವಂತೆ ಅನುವಾದಿಸಬಹುದು. ಆದರೆ ಪುಟ್ಟಪ್ಪನವರು ಎರಡೂ ವಿಧಾನಗಳನ್ನು ಅನುಸರಿಸಿಲ್ಲ. ಅವರು ಮೂಲ ಗ್ರಂಥವನ್ನು ಓದಿ, ಅದನ್ನು ಓದಿದ್ದರಿಂದ ತಮ್ಮ ಮನಸ್ಸಿನಲ್ಲಿ ಉಂಟಾದ ಮುಖ್ಯ-ಮುಖ್ಯವಾದ ಚಿತ್ರಗಳನ್ನು, ಭಾವಗಳನ್ನೂ ಆಧಾರವಾಗಿಟ್ಟುಕೊಂಡು ಒಂದು ಹೊಸ ನಾಟಕವನ್ನು ನಿರ್ಮಿಸಿರುತ್ತಾರೆ. ಇದನ್ನು ಮೂಲ ನಾಟಕದ ಭಾಷಾಂತರ ಅಥವಾ ಅನುವಾದ ಎಂದು ಹೇಳಲಾಗದು. ಆ ನಾಟಕವನ್ನು ಈ ನಾಟಕ ರಚನೆಗೆ ಪ್ರೇರಕವೆಂದು ಹೇಳಬಹುದು……ಕಾಲವೆಂಬ ಗಾಳಿ ತಾನಾಗಿ ತಾನೇ ಜೊಳ್ಳನ್ನು ತೂರುತ್ತದೆ; ಕಾಳು ಉಳಿಯುತ್ತದೆ. ಇದರಲ್ಲಿ ಕಾಳು ಯಾವುದು, ಜೊಳ್ಳು ಯಾವುದೆಂಬುದನ್ನು ಗ್ರಹಿಸಬೇಕಾದ ವಿಶಾಲ ಮನೋಭಾವವು ಕನ್ನಡಿಗರಲ್ಲಿ ಸ್ವಾಭಾವಿಕವಾಗಿದೆಯೆಂಬುದನ್ನು ಕನ್ನಡ ಸಾಹಿತ್ಯ ಚರಿತ್ರೆಯನ್ನು ಓದಿದವರು ಅರಿಯದೆ ಇರಲಾರರು” ಎಂದು ತಮ್ಮ ಶಿಷ್ಯೋತ್ತಮರ ಕೃತಿಯ ಕುರಿತು ನಿಷ್ಟುರತೆಯಿಂದೊಮ್ಮೆ, ಮಗುದೊಮ್ಮೆ ಆಶೀರ್ವದಿಸಿದಂತೆ ಹೇಳಿರುವುದು ನಮಗೆ ಆಗಿನ ಕಾಲಮಾನದ ಸಾಹಿತಿ ದಿಗ್ಗಜರ ನಡುವಿನ ಬಾಂಧವ್ಯದ ಕುರಿತು ಅರಿತುಕೊಳ್ಳಬಹುದು.

ಮುನ್ನುಡಿಯ ನಂತರದ ಪುಟಗಳಲ್ಲಿ ಮಹಾಕವಿಗಳು ‘ಬಿರುಗಾಳಿ’ ಕೃತಿಯ ಕಥಾಸಾರಾಂಶವನ್ನು ಚುಟುಕಾಗಿ ಮತ್ತು ರಸವತ್ತಾಗಿ ವಿವರಿಸುವುದರೊಂದಿಗೆ ಓದುಗರಲ್ಲಿ ಕೃತಿಯ ಕುರಿತು ಕುತೂಹಲ ಮೂಡಿಸುತ್ತಾರೆ. ಅದರಂತೆ ಕೃತಿಯ ಕೊನೆಯಲ್ಲಿಯೂ ‘ಟಿಪ್ಪಣಿಕೆ’ಯಲ್ಲಿ ಕೃತಿಯಲ್ಲಿ ನಿರೂಪಿತಗೊಂಡು ಸುಪ್ತವಾಗಿರುವ ಜೀವನದರ್ಶನ, ವಿಶ್ವತತ್ವಗಳು ಮುಂತಾದ ಸಂಗತಿಗಳೊಂದಿಗೆ ನಾಟಕಕಾರ  ಷೇಕ್ಸಪಿಯರ್ ಕುರಿತಾಗಿ ಮತ್ತು ಆತನ ಕೃತಿಗಳ ಕುರಿತು ವಿವರಣೆಗಳನ್ನು ನೀಡುತ್ತಾರೆ.

ಇಲ್ಲಿ ಮಹಾಕವಿಗಳು ಕನ್ನಡ ನಾಡಿನ ರಾಜಮನೆತನವೊಂದಕ್ಕೆ ಹೊಂದಿಕೆಯಾಗುವಂತೆ ಕಥಾನಕವನ್ನು ಬದಲಾಯಿಸಿಕೊಂಡಿದ್ದಾರೆ. ಕಥೆಯ ಆತ್ಮ ಮೂಲ ‘ಟೆಂಪೆಸ್ಟ್’ ಕೃತಿಯದಾಗಿದ್ದರೂ ಕಥಾನಕ ನಡೆಯುವುದು ಕರುನಾಡಿನ ನದಿಯ ತೀರ ಪ್ರದೇಶವೊಂದರಲ್ಲಿ. ಮೂಲ ಕೃತಿಯೊಂದಿಗೆ ಹೋಲಿಸುವುದಾದರೆ Duke of Milan ಮತ್ತು King of Naples ಇಲ್ಲಿ ಅನುಕ್ರಮವಾಗಿ ಕೆಳದಿಯ ನಾಯಕನಾದ ಭೈರವನಾಯಕ ಮತ್ತು ನಗರ ಸಂಸ್ಥಾನದ ಅರಸ ರಣನಾಯಕ ಎಂದು ಸ್ಥಳಿಯ ಹೆಸರಿನಲ್ಲಿ ಕಂಗೊಳಿಸುತ್ತಾರೆ. ಅಲ್ಲಿಯ Prospheroನ ಮಗಳಾದ Miranda ಇಲ್ಲಿ ಭೈರವನಾಯಕನ ಮಗಳು ಗೌರಾಂಬೆ ಆಗಿದ್ದಾಳೆ. ಅದರಂತೆ ಇತರ ಪಾತ್ರಗಳ ಹೆಸರುಗಳು ಸಹ ಸೂಕ್ತವಾದ ರೀತಿಯಲ್ಲಿ ಬದಲಾವಣೆಗೊಳಗಾಗಿವೆ. ರಣನಾಯಕನ ಮಗನಾದ ಶಿವನಾಯಕನು (Ferdinend) ಭೈರವನಾಯಕನ ತಮ್ಮ ರುದ್ರನಾಯಕ (Antenio) ರಣನಾಯಕನ ತಮ್ಮ ರಂಗನಾಯಕ (Sebastion) ಹಾಗೆಯೇ ಅಲ್ಲಿನ Ganzalo ಇಲ್ಲಿ ಜಯದೇವ ಎಂಬ ವಯಸ್ಸಾದ ಮಂತ್ರಿಯಾಗಿದ್ದಾನೆ. Arielನನ್ನು ‘ಕಿನ್ನರ’ನೆಂದು ಕರೆದಿದ್ದಾರೆ. Calibenಗೆ ಶನಿಶಕ್ತಿ ಎಂದು ಸೂಕ್ತ ಹೆಸರಿಡಲಾಗಿದೆ. ಅವನ ಜೊತೆಗೆ ಸೇರಿಕೊಳ್ಳುವ ರಾಜನ ಪರಿಜನರಾದ Stephano ಮತ್ತು Trinculo ಎಂಬ ಹೆಸರಿನ ಪಾತ್ರಗಳು ಇಲ್ಲಿ ಭೀಮಣ ಮತ್ತು ತ್ರಿಶಂಕು ಆಗಿ ಮೈದಳೆದಿವೆ. ಅಲ್ಲಿ ಬರುವ ಅಲೌಕಿಕ ಶಕ್ತಿಗಳನ್ನು ಬನದೇವಿ, ಜಲದೇವಿ ಎಂದು ಹೆಸರಿಡುತ್ತಾ ಸಂಪೂರ್ಣವಾಗಿ ಭರತಖಂಡದ ವಾತಾವರಣದೊಂದಿಗೆ ಕರುನಾಡಿನ ರಾಜವಂಶದ ಆಡಳಿತ ಕಾಲದಲ್ಲಾಗುವ ಐತಿಹಾಸಿಕ ವಿಪ್ಲವಗಳನ್ನು ತೋರಿಸುತ್ತಾ ಕೊನೆಯಲ್ಲಿ ಸುಖಾಂತ್ಯವನ್ನು ಮಹಾಕವಿಗಳು ಕರುನಾಡಿನ ರಂಗರಸಿಕರಿಗೆ ಉಣಬಡಿಸುತ್ತಾರೆ. ಕೃತಿಯ ಪ್ರತಿಯೊಂದು ಹಂತದಲ್ಲಿಯೂ ಈ ಮಾತು ಸತ್ಯವೆನಿಸುತ್ತದೆ.

ಕೃತಿಯ ಮೊದಲ ದೃಶ್ಯವನ್ನು ಮಹಾಕವಿಗಳು ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಟೆಂಪೆಸ್ಟ್ ಕೃತಿಯ ಆರಂಭದಲ್ಲಿ ಪ್ರಕ್ಷುಬ್ದಗೊಂಡ ಸಾಗರದಲ್ಲಿ ಹೊಯ್ದಾಡುತ್ತಿರುವ ಹಡಗು ಮುಳುಗಲಿರುವುದನ್ನು ಉಳಿಸಲು ಯತ್ನಿಸುವ ನಾವಿಕರ ವ್ಯರ್ಥ ಸಾಹಸ ಮತ್ತು ಅಲ್ಲಿರುವ ನೇಪಲ್ಸಿನ ರಾಜ ಮೊದಲಾದವರ ಆತಂಕ ಮತ್ತು ಕಾತರತೆಯ ದೃಶ್ಯವನ್ನು ತೋರಿಸಲಾಗಿದೆ. ಆದರೆ ಮಹಾಕವಿಗಳು ಇಲ್ಲಿ ಆ ರಂಗತಂತ್ರವನ್ನು ಬದಲಾಯಿಸಿಕೊಂಡು ಕೆಳದಿ ಮತ್ತು ನಗರ ರಾಜ್ಯಗಳ ಹಿನ್ನಲೆಯನ್ನು ಆರಿಸಿಕೊಂಡಿದ್ದರಿಂದ ಸಮುದ್ರ ಮತ್ತು ಹಡಗು ಕೈಬಿಟ್ಟು ತುಂಬಿ ಹರಿಯುವ ಹೊಳೆ ಮತ್ತು ದೋಣಿಗಳನ್ನು ಇಟ್ಟುಕೊಂಡಿದ್ದಾರೆ. ಮೊದಲ ದೃಶ್ಯದಾರಂಭವಾಗುವ ಮುಂಚೆ ದೋಣಿ ತಲೆಕೆಳಗಾಗಿ ಅದರಲ್ಲಿದ್ದ ರಣನಾಯಕ, ರಂಗನಾಯಕ, ಜಯದೇವ, ರಂಗನಾಯಕ ಮೊದಲಾದವರು ದ್ವೀಪವೊಂದರ ದಡದಲ್ಲಿ ಬಂದು ಬಿದ್ದಿದ್ದಾರೆ. ಅದೇ ದೃಶ್ಯದಲ್ಲಿ ಇನ್ನೊಂದೆಡೆ ಅವರೆಲ್ಲರ ಪರಿಚಾರಕರಾಗಿರುವ ತ್ರಿಶಂಕು ಮತ್ತು ಭೀಮಣರು ಹೊಳೆಯ ಪ್ರಕೋಪಕ್ಕೆ ತುತ್ತಾಗಿ ದಡದಲ್ಲಿ ಬಂದು ಹಸಿವಿನಿಂದ ಕಂಗಾಲಾಗಿ ಅಲ್ಲಿಯವರೆಗೆ ನಡೆದ ಘಟನಾವಳಿಗಳನ್ನು ಸಂಭಾಷಣೆಯೊಂದಿಗೆ ಪ್ರೇಕ್ಷಕರಿಗೆ ವಿವರಿಸುತ್ತಾರೆ. ತೊಯ್ದ ಬಟ್ಟೆಯ ಡೊಳ್ಳು ಹೊಟ್ಟೆಯ ನಸುಮುದುಕ ತ್ರಿಶಂಕು ಮತ್ತು ನಲ್ವತ್ತು ವಯಸ್ಸಿನ ದಾಂಡಿಗ ಬಾಣಸಿಗ ಭೀಮಣನು ಕೈಯಲ್ಲಿ ಹೆಂಡದ ಬುರುಡೆಯನ್ನು ಹಿಡಿದು ತೊಯ್ದ ಬಟ್ಟೆಗಳೊಂದಿಗೆ ರಂಗಸ್ಥಳಕ್ಕೆ ಆಗಮಿಸುವ ಪರಿಯನ್ನು ಮಹಾಕವಿಗಳು ರೋಚಕವಾಗಿ ಕಟ್ಟಿಕೊಡುತ್ತಾರೆ.

ಮುಂದಿನ ಎರಡನೇಯ ದೃಶ್ಯದಲ್ಲಿ ದ್ವೀಪವೊಂದರಲ್ಲಿ ಭೈರವನಾಯಕನು ತನ್ನ ಮಗಳು ಗೌರಾಂಬೆಯೊಂದಿಗೆ ಗುಹೆಯ ಮುಂದುಗಡೆ ನಡೆಯುತ್ತಾ ಬರುತ್ತಿರುವಾಗ, ಗೌರಾಂಬೆಯು

ಅಪ್ಪಯ್ಯ, ನಿನ್ನ ಮಂತ್ರದ ಬಲದೊಳೀ ದೊಡ್ಡ
ಬಿರುಗಾಳಿ ಎದ್ದಿರುವುದಾದೊಡೆ ತವಿಸದನು

ಎಂದು ಉದ್ವೇಗದಿಂದ ಕೇಳಿಕೊಳ್ಳುತ್ತಾಳೆ. ಮುಗುಳ್ನಗೆಯೊಂದಿಗೆ ಭೈರವನಾಯಕನು ತನ್ನ ಜೀವಮಾನದಲ್ಲಿ ನಡೆದ ಘಟನೆಗಳನ್ನು ಮಗಳಿಗೆ ವಿವರಿಸುತ್ತಾನೆ. ಇಂದಿಗೆ ಹನ್ನೆರಡು ವರುಷಗಳ ಕೆಳಗೆ ಕೆಳದಿಯನ್ನು ಆಳುವ ಅರಸನಾಗಿದ್ದ ವಿಷಯಯೊಂದಿಗೆ ತನ್ನ ತಮ್ಮ ರುದ್ರನಾಯಕನಿಗೆ ರಾಜ್ಯಭಾರವಹಿಸಿ ತಾನು ವೇದಾಧ್ಯಯನ, ಯೋಗಗಳೆಂಬ ಗುಪ್ತಸಾಧನೆಗಳಲ್ಲಿ ತೊಡಗಿದಾಗ, ನಗರದರಸನೊಂದಿಗೆ ಕೂಡಿಕೊಂಡು ಸಂಚು ಮಾಡಿ, ರಾಜ್ಯವು ಪರರ ಪಾಲಾಗುವಂತೆ ಮಾಡಿದ್ದಲ್ಲದೇ, ತಂದೆ-ಮಗಳಾದ ನಮ್ಮನ್ನು ನೆರೆತುಂಬಿ ಬೋರ್ಗರೆಯುತ್ತಿದ್ದ ನದಿಯಲ್ಲಿ ಸಾಯಿಸಲು ನೂಕಿದರೆಂದು, ಜಯದೇವನೆಂಬ ಮುದಿಮಂತ್ರಿಯು ನಮ್ಮನ್ನು ರಕ್ಷಿಸಿ ಈ ದ್ವೀಪಕ್ಕೆ ತಂದುಬಿಟ್ಟನು ಹೇಳುತ್ತಾನೆ. ಈಗ ನನಗೆ ಮೋಸ ಮಾಡಿದವರೆಲ್ಲರೂ ದೋಣಿಯಲ್ಲಿ ಪಯಣಿಸುತ್ತಿದ್ದಾಗ, ಅವರಿಗೆ ಬುದ್ಧಿ ಕಲಿಸಲೆಂದು ತನ್ನ ಮಂತ್ರದಿಂದ ಅವರ ದೋಣಿ ಮುಗುಚಿ ಅವರು ಹೊಳೆಪಾಗುವಂತೆ ಮಾಡಿದ್ದು ತಾನು ಎಂದು ಹೇಳುತ್ತಿರುವ ಕಥೆಯನ್ನು ಕೇಳುತ್ತಾ ಭೈರಾಂಬೆ ನಿದ್ದೆ ಹೋಗುತ್ತಾಳೆ. ಆಗ ಭೈರವನಾಯಕನ ಅತಿಮಾನುಷ ಕಿಂಕರ ಶನಿಯು ‘ಜಯಮಕ್ಕೇ! ನನೊಡೆಯ, ನಿನ್ನ ಗೆಲವಕ್ಕೆ!’ ಎಂದು ಆಗಮಿಸುತ್ತಾನೆ. ತನ್ನೊಡೆಯ ಭೈರವನಾಯಕನ ಆಜ್ಞೆಯಂತೆ ದೋಣಿ ಮುಗುಚುವಂತೆ ಮಾಡಿದ್ದು, ಅದರಲ್ಲಿಯ ಎಲ್ಲರಿಗೂ ನೋವಾಗುವಂತೆ ಮಾಡುತ್ತಾ, ಸಾಯದಂತೆ ಉಳಿಸಿ ದಡ ಮುಟ್ಟಿಸಿರುವುದನ್ನು ಹೇಳಿಕೊಳ್ಳುತ್ತಾ, ನೀನು ಹೇಳಿದಂತೆ ಎಲ್ಲವನ್ನೂ ಮಾಡುವ ತನಗೆ ಬೇಗ ಬಿಡುಗಡೆ ಮಾಡಬೇಕೆಂಧು ಕೇಳಿಕೊಳ್ಳುತ್ತಾನೆ. ಆದರೆ ಭೈರವನಾಯಕನು ಅದಕ್ಕೆ ಸಮ್ಮತಿಸದೆ ಇನ್ನೊಂದೆರಡು ದಿನಗಳಲ್ಲಿ ನಿನಗೆ ಬಿಡುಗಡೆಯೆಂದು ಸಮಾಧಾನಿಸುವುದರೊಂದಿಗೆ ಆತನಿಗೆ ಕಳುಹಿಸುತ್ತಾನೆ.

ಇತ್ತ ನಿದ್ದೆ ಹೋದ ಮಗಳು ಗೌರಂಬೆಯನ್ನು ಎಬ್ಬಿಸುತ್ತಾನೆ. ಆಗ ಆವಳು ಅಲ್ಲಿಯವರೆಗೂ ಕೇಳಿದ ಕಥೆಯ ಗುಂಗಿನಲ್ಲಿದ್ದವಳು ತನ್ನ ತಂದೆಯ ತಮ್ಮನನ್ನು ಶಪಿಸುತ್ತಾಳೆ. ನಂತರ ಶನಿಯ ಬಂದು ಕಟ್ಟಿಗೆ ತರಲು ಹೋದ ನಂತರ ನಗರದರಸು ರಣನಾಯಕನ ಮಗನಾದ ಶಿವನಾಯಕನು ಪ್ರವಾಹದಲ್ಲಿ ದೋಣಿ ಮುಗುಚಿ ತನ್ನ ತಂದೆ ಮತ್ತು ಆತನ ಹಿತೈಷಿಗಳ ಗುಂಪಿನಿಂದ ಬೇರೆಯಾಗಿ ದಡವನು ತಲುಪಿ ಇವರಿರುವಲ್ಲಿಗೆ ಬರುತ್ತಾನೆ. ಅಲ್ಲಿಯ ಪ್ರಕೃತಿ ಸೌಂದರ್ಯವನ್ನು ಮಹಾಕವಿಗಳು ಶಿವನಾಯಕನ ಪಾತ್ರದಿಂದ ವರ್ಣಿಸುತ್ತಾರೆ. ಅಲ್ಲಿಯವರೆಗೂ ತನ್ನ ತಂದೆಯ ಹೊರತಾಗಿ ಮನುಷ್ಯರನ್ನೇ ಕಾಣದ ಗೌರಾಂಬೆಯು ಶಿವನಾಯಕನನ್ನು ನೋಡಿ, ‘ಸೊಬಗಿನಾಕಾರಮದು ದೇವತೆಯೆ ದಿಟ’ವೆಂದು ಬಗೆಯುತ್ತಾಳೆ. ಅಂತಹ ಗೊಂಬೆಯನ್ನು ನಮ್ಮ ಗುಹೆಗೆ ತೆಗೆದುಕೊಂಡು ಹೋಗೋಣವೇ ಎಂಬರ್ಥದಲ್ಲಿ ತಂದೆಯಲ್ಲಿ ಕೇಳಿದಾಗ, ‘ನನ್ನೆದೆಯ ಬಯಕೆ ಕೈಗೂಡುವುದು’ ಎಂದು ಮನದಲ್ಲಿ ಅಂದುಕೊಳ್ಳುವನು. ಅಲ್ಲಿಗೆ ಆಗಮಿಸಿ ಇವರನ್ನು ನೋಡಿದ ಶಿವನಾಯಕನು ‘ದ್ವೀಪರಾಣಿಯೋ?’ ಎಂದು ಅಚ್ಚರಿ ವ್ಯಕ್ತಪಡಿಸುತ್ತಾನೆ. ‘ನಾನು ದೇವತೆಯಲ್ಲ, ಮಾನವ ಕನ್ಯೆ’ ಎಂದು ಪರಿಚಯಿಸಿಕೊಳ್ಳುತ್ತಾಳೆ. ತಾನು ಇಲ್ಲಿಗೆ ಬಿರುಗಾಳಿಯೊಳು ಸಿಲುಕಿ ನೌಕೆಯು ಮುಳುಗಿ, ತನ್ನ ತಂದೆಯು ಮುಳುಗಿರುವುದನ್ನು ಹೇಳಿ ದುಃಖಿಸುತ್ತಾನೆ. ಆ ದುಃಖವನ್ನು ಕಂಡು ಮರುಗಿ, ಅವನಲ್ಲಿ ಗೌರಾಂಬೆಯ ಪ್ರೇಮಾಂಕುರವಾಗಿರುವುದನ್ನು ಗಮನಿಸಿದ್ದರೂ ತೋರಗೊಡದೆ, ಶಿವನಾಯಕನನ್ನು ದೇಶದ್ರೋಹಿಯೆಂದು ಬಂಧಿಸಿ ತನ್ನ ಗುಹೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ಹೇಳುತ್ತಾನೆ. ಬೇಡ ಅಪ್ಪಯ್ಯ ಎಂದು ಗೌರಂಬೆ ವಿನಂತಿಸಿಕೊಂಡರೂ ಕೇಳದ ಭೈರವನಾಯಕನು ‘ಹುಂ ಹೊರಡು’ ಎಂದು ಗದರಿಸಿ ಕರೆದೊಯ್ಯುತ್ತಾನೆ. ಆಗ ಗೌರಾಂಬೆಯು ತನ್ನ ಪ್ರಿಯಕರ ಶಿವನಾಯಕನಿಗೆ ಧೈರ್ಯ ಹೇಳುವುದರೊಂದಿಗೆ ತನ್ನ ತಂದೆಯ ಕುರಿತಾಗಿಯೂ ಗೌರಭಾವ ಮೂಡಿಸುವ ಮಾತು ಪ್ರೇಮಿಗಳಿಗೆ ಮಾದರಿಯಂತಿದೆ.

ಪ್ರಿಯತಮ, ನನ್ನೆದೆಯ ಚನ್ನಿಗನೆ, ಬೆದರದಿರು.
ನನ್ನ ತಂದೆಯ ಬಗೆಯೆ ಬೇರೆಯಾಗಿಹುದಿಂದು.
ಮಾತಿನಲಿ ಕಠಿನತೆಯ ತೋರಿದರು, ಎದೆಯಲ್ಲಿ
ಕೋಮಲತೆಯಡಗಿಹುದು. ಇಂತಾವಗಂ ತಮದೆ
ಕೋಪಗೊಂಡಿರಲಿಲ್ಲ. ಇಂದಿಂತಿರ್ಪನೇಕೋ?

ಮೂರನೇಯ ದೃಶ್ಯದಾರಂಭದಲ್ಲಿ ದ್ವೀಪದ ಮತ್ತೊಂದು ಭಾಗದಲ್ಲಿ ರಣನಾಯಕ, ರಂಗನಾಯಕ, ರುದ್ರನಾಯಕ, ಜಯದೇವ ಮುಂತಾದವರು ಬಂಡೆಯೊಂದರ ಮೇಲೆ ಕುಳಿತು ಮಾತಾಡುತ್ತಿರುವರು. ರಣನಾಯಕನು ತನ್ನ ಮಗ ಶಿವನಾಯಕನು ಎಲ್ಲಿ ಹೋದನೋ ಎಂದು ವ್ಯಾಕುಲಗೊಂಡಿರುವನು. ಉಳಿದವರು ಅಂದರೆ ಮುದಿಮಂತ್ರಿ ಜಯದೇವನು ಸಮಾಧಾನಿಸುತ್ತಾ ವೀರರು ಬದುಕಿರುತ್ತಾರೆಂದು ಹೇಳುತ್ತಾನೆ. ಶೋಕದಿಂದ ನಿತ್ರಾಣಗೊಂಡ ರಣನಾಯಕ ಮತ್ತು ಜಯದೇವರು ಅಲ್ಲಿಯೇ ನಿದ್ದೆ ಹೋದಾಗ, ರಂಗನಾಯಕ ಮತ್ತು ರುದ್ರನಾಯಕರು ನಗರದರಸು ರಣನಾಯಕನ ಶಿರಚ್ಛೇಧನ ಮಾಡಲು ಯೋಜಿಸಿ ಕತ್ತಿಗಳನೆಳೆಯುವರು. ಅದೃಶ್ಯರೂಪದಲ್ಲಿ ಕಿನ್ನರನು ಬಂದು ಜಯದೇವನ ಕಿವಿಯಲ್ಲಿ ಪಿಸುಗುಟ್ಟುವನು. ಇದರಿಂದ ಎಚ್ಚೆತ್ತ ಜಯದೇವನು ಗಾಬರಿಯಿಂದ ‘ಶಿವಾ ಶಿವಾ ! ಶಿವ ಶಿವಾ ! ದೊರೆಯಂ ಕಾಪಾಡು !’ ಎನ್ನುತ್ತಾ ಕತ್ತಿಗಳನೊರೆಗಳಚಿ ನಿಂತಿರುವ ಇಬ್ಬರನ್ನೂ ನೋಡಿದಾಗ, ಅವರು ‘ನಿಮ್ಮ ಸಂರಕ್ಷಣೆಯಲ್ಲಿ ನಿಂತಿದ್ದೇವೆ’ಂದು ಹೇಳಿ ಬಾಯಿಮುಚ್ಚಿಸುತ್ತಾರೆ. ಎಚ್ಚರಗೊಂಡ ರಣನಾಯಕನು ಮಗನ ಅಗಲಿಕೆಯಲ್ಲಿದ್ದಾಗ ಇದೆಲ್ಲವನ್ನು ಗಂಭೀರವಾಗಿ ತೆಗೆದುಕೊಳ್ಳದೇ ‘ಪೊರಡುವಂ. ಮಗನ ಗತಿ ಏನಾದುದೆಂಬುದಂ ತಿಳಿಯುಂ ; ನಡೆಯಿಂ!’ ಎಂದು ಹೇಳಿ ಎಲ್ಲರನ್ನು ಮುಂದೆ ಕರೆದುಕೊಂಡು ಹೋಗುತ್ತಾನೆ.

ಮುಂದಿನ ನಾಲ್ಕನೇಯ ದೃಶ್ಯದಲ್ಲಿ ಕಂಬಳಿ ಹೊದ್ದುಕೊಂಡು ಸತ್ತಂತೆ ಬಿದ್ದ ಶನಿಯ ಜೊತೆಯಲ್ಲಿ ಮಲಗಿರುವ ತ್ರಿಶಂಕು, ಹೆಂಡವನ್ನು ಕುಡಿದು ಮತ್ತೇರಿಸಿಕೊಂಡು ಹಾಡುತ್ತಾ ಬರುವ ಭೀಮಣ, ಒಂದೇ ದೇಹಿಗಳಂತಿರುವ ಇಬ್ಬರನ್ನು ನೋಡಿ ನಾಲ್ಕು ಕಾಲಿನ ರಾಕ್ಷಸನೆಂದು ಭಾವಿಸುವುದು, ನಂತರ ಎಚ್ಚರಗೊಂಡು ಪರಸ್ಪರ ಅರಿತುಕೊಳ್ಳುವ ಸನ್ನಿವೇಶವು ಅಲ್ಲಿಯವರೆಗೂ ಗಂಭೀರವಾಗಿ ನಡೆದ ರಂಗಸ್ಥಳದಲ್ಲಿ ಹಾಸ್ಯದ ಹೊನಲನ್ನು ಹರಿಸುವಲ್ಲಿ ಯಶಸ್ವಿಯಾಗುತ್ತದೆ. ಮೂಲ ಕೃತಿ ಟೆಂಪೆಸ್ಟ್‍ದ ಹೆಜ್ಜೆಯಲ್ಲಿಯೇ ಸೂಕ್ತ ಬದಲಾವಣೆಗಳೊಂದಿಗೆ ಸಂಭಾಷಣೆಯನ್ನು ಅಳವಡಿಸಿಕೊಂಡು ಮಹಾಕವಿಗಳು ಅನುವಾದಿಸಿದ್ದಾರೆ ಅಂದುಕೊಳ್ಳುವುದಕ್ಕಿಂತ ರೂಪಾಂತರಿಸಿದ್ದಾರೆ.

ಮುಂದಿನ ಐದನೇಯ ದೃಶ್ಯದಲ್ಲಿ ಭೈರವನಾಯಕನ ಗುಹೆಯ ಮುಂದೆ ಶಿವನಾಯಕನು ಒಂದು ಭಾರವಾದ ಮರದ ತುಂಡನ್ನು ಹೊತ್ತುಕೊಂಡು ಬಂದು ನೆಲದ ಮೇಲೆ ಹಾಕುವುದರೊಂದಿಗೆ ತೆರೆದುಕೊಳ್ಳುತ್ತದೆ. ಭೈರವನಾಯಕನು ಶಿವನಾಯಕನಿಗೆ ತೋರಿಕೆಯ ಶಿಕ್ಷೆಯನ್ನು ವಿಧಿಸಿದ್ದಾನೆ. ಗೌರಾಂಬೆ ಮತ್ತು ಶಿವನಾಯಕರ ಪ್ರಣಯ ಭಾವನೆಗಳನ್ನು ಉತ್ಕಟಾವಸ್ಥೆಗೇರಿಸುವುದು ಆತನ ಒಳಗಿನ ಉದ್ದೇಶವಾಗಿರುತ್ತದೆ. ಇಲ್ಲಿ ಅವನ ಉಪಾಯ ಫಲಿಸುತ್ತದೆ. ಅವನು ಕಟ್ಟಿಗೆ ಹೊರುವುದನ್ನು ಕಂಡು ಗೌರಾಂಬೆ ಮರುಗುತ್ತಾಳೆ. ಆಗ ನಡೆಯುವ ಅವರ ಸಂಭಾಷಣೆಯಲ್ಲಿ ಕೋಮಲಭಾವ, ಪ್ರಣಯದಭಾವದ ಕಡೆಗೆ ತಿರುಗಿ ಪರಸ್ಪರ ಸಮರ್ಪಣೆÉಯಲ್ಲಿ ಕೊನೆಗೊಳ್ಳುತ್ತದೆ. ಅವರಿಗರಿಯದಂತೆಯೇ ಅದನ್ನು ಕಂಡ ಭೈರವನೂ ಸಂತೋಷಗೊಂಡು ಅವರಿಬ್ಬರ ಪ್ರೇಮವನ್ನು ಪೂರ್ತಿಗೊಳಿಸಲು ನಿರ್ಧರಿಸುತ್ತಾನೆ.

ಆರನೇಯ ದೃಶ್ಯದಲ್ಲಿ ಶನಿಶಕ್ತಿಯು ಭೀಮಣ ಮತ್ತು ತ್ರಿಶಂಕು ಇವರೊಡನೆ ಸೇರಿ, ಭೈರವನಾಯಕನನ್ನು ಕೊಲ್ಲಲು ಸನ್ನಾಹ ನಡೆಸುವ ಬಗೆಯು ಚೆನ್ನಾಗಿ ಪ್ರಸ್ತುಪಡಿಸಿರುವುದು ಮಹಾಕವಿಗಳ ಪ್ರತಿಭೆಗೆ ಸಾಕ್ಷಿಯೆಂಬಂತಿದೆ. ಭೈರವನಾಯಕನು ಮಲಗಿರುವಾಗ ಅವನ ಮಂತ್ರದ ಹೊತ್ತಿಗೆಗಳನ್ನು ಹೊತ್ತುಕೊಂಡು ಹೋಗಿ ಸುಟ್ಟುಹಾಕಿದರೆ, ಅವನನ್ನು ಸುಲಭವಾಗಿ ಕೊಲ್ಲಬಹುದೆಂದು ಶನಿಯನ ಉಪಾಯವಾಗಿದೆ. ಅದರಿಂದ ಗೌರಾಂಬೆ ದೊರೆಯುವಳೆಂಬ ಆಮಿóಷವನ್ನು ಒಡ್ಡುತ್ತಾನೆ. ಇದೆಲ್ಲವನ್ನು ಅಶರೀರಿಯಾದ ಕಿನ್ನರನು ತಮ್ಮ ನಡುವೆ ನಿಂತು ಕೇಳುತ್ತಿರುವುದನ್ನು ಅರಿಯದೆ ಭೀಮಣ ಮತ್ತು ತ್ರಿಶಂಕು ಇಬ್ಬರೂ ಶನಿಯನೊಂದಿಗೆ ಸೇರಿ ಭೈರವನನ್ನು ಕೊಂದು ತಾನೇ ಆ ದ್ವೀಪಕ್ಕೆ ಒಡೆಯನಾಗುವ ನಿರ್ಧಾರವನ್ನು ತೆಗೆದುಕೊಂಡು ಹೋಗುತ್ತಾನೆ.

ಏಳನೇಯ ದೃಶ್ಯವು ಬಹಳ ಮುಖ್ಯವಾದುದಾಗಿದೆ. ರಣನಾಯಕ, ರಂಗನಾಯಕ, ರುದ್ರನಾಯಕ, ಜಯದೇವ ಮುಂತಾದವರು ಅಲೆದು ಸುಸ್ತಾಗಿ ಪ್ರವೇಶಿಸುವುದರೊಂದಿಗೆ ದೃಶ್ಯವು ಆರಂಭಗೊಳ್ಳುತ್ತದೆ. ಅವರೆಲ್ಲರೂ ಎಷ್ಟೊಂದು ಆಯಾಸಗೊಂಡಿದ್ದಾರೆಂದರೆ, ದೃಶ್ಯದ ಆರಂಭದಲ್ಲಿ ಜಯದೇವನು ಹೇಳುವ ಮಾತು ಸ್ಪಷ್ಟಿಕರಿಸುತ್ತದೆ.

ಮುಂದೊಂದು ಹೆಜ್ಜೆಯನು ಇಡಲಾರೆ. ಶಿವಶಿವಾ!
ನನ್ನ ಮುದಿ ಎಲುಬುಗಳೊ ಕಡಲೆಯಂ ಬೀಸುತಿವೆ.-
ಇದು ಚಕ್ರಭೀಮ ಕೋಟೆಯೆ ಹೌದು. ಎನಿತೊಳವು
ಸುತ್ತುಗಳು! ಏನು ತಿರುಗಣೆಗಳು! ದಿಣ್ಣೆಗಳು,
ಕಣಿವೆಗಳು ! ಕಣಿವೆಗಳು, ದಿಣ್ಣೆಗಳು ! ಏರಿಳಿದು,
ಇಳಿದೇರಿ ಸಾಕಾಯ್ತು! ನೀವಿನಿತು ತಳುವಿದರೆ
ವಿಶ್ರಮಿಸಿಕೊಳ್ಳುವೆನು.

ಎಂದು ಹೇಳಿದಾಗ, ರಣನಾಯಕನು ‘ಬಿದಿ ಎಮ್ಮ ಸಾಹಸವನ್ ಅಣಕಿಸುತಲಿರ್ಪುದು !’ ಎಂದು ತನ್ನ ಅಸಹಾಕತೆಯನ್ನು ವ್ಯಕ್ತಪಡಿಸುತ್ತಾನೆ. ಇಂತಹ ದುರ್ದರ ಪ್ರಸಂಗದಲ್ಲಿಯೂ ರಂಗನಾಯಕ ಮತ್ತು ರುದ್ರನಾಯಕರ ಆಲೋಚನೆಗಳು ರಣನಾಯಕನನ್ನು ಕೊಲೆಗೈಯಲು ಹವಣಿಸುತ್ತಿವೆ. ಈ ಹಿಂದೆ ತಮ್ಮ ಪ್ರಯತ್ನ ವಿಫಲವಾದುದಕ್ಕೆ ಅಸಂತುಷ್ಟರಾಗಿ, ಈಗ ಅದ್ನು ಈಡೇರಿಸಿಕೊಳ್ಳಲು ಇನ್ನೊಂದು ಅವಕಾಶಕ್ಕಾಗಿ ಕಾದಿದ್ದಾರೆ. ‘ಇಂದಿನಿರುಳೆ ಅಕ್ಕೆ, ಇನ್ನದನು ಕುರಿತಾಡವುದು ಬೇಡ! ಸುಮ್ಮನಿರು!’ ಎಂದು ರಂಗನಾಯಕನು ಮಾತನ್ನು ಮುಗಿಸುವಷ್ಟರಲ್ಲಿ ಕಿನ್ನರನ ಅಲೌಕಿಕ ಶಕ್ತಿಯ ಕೆಲಸವು ಆರಂಭವಾಗುತ್ತದೆ. ಭೈರವನಾಯಕನು ದೂರದಲ್ಲಿ ಅಗೋಚರನಾಗಿ ನಿಂತಿಕೊಂಡು ಅಲ್ಲಿ ನಡೆಯುತ್ತಿರುವುದನ್ನು ಗಮನಿಸುತ್ತಾನೆ. ಕೆಲವು ವಿಚಿತ್ರ ಆಕೃತಿಗಳು ಹಾಡುತ್ತಾ ಕುಣಿಯುತ್ತಾ ಬಂದು ಇವರ ಬಳಿ ಹಣ್ಣು-ಹಂಪಲಗಳನ್ನು ಇಟ್ಟು ಹೋಗುತ್ತವೆ. ಗಾಬರಿಗೊಂಡ ನಾಲ್ಕು ನಾಯಕರು ಹಣ್ಣು-ಹಂಪಲಗಳ ತಟ್ಟೆಯನ್ನು ನೋಡುತ್ತಿದ್ದಾರೆ. ಗಾಬರಿಯಲ್ಲಿದ್ದ ರಣನಾಯಕನು ‘ಶಿವನೇ ಕಾಪಾಡು! ಇವೆನು ರೂಪಗಳು!’ ಎಂದು ತನ್ನಲ್ಲಿರುವ ಗಾಬರಿಯನ್ನು ಹೊರಹಾಕುತ್ತಾನೆ. ಮಂತ್ರಿ ಜಯದೇವನು ಹೇಳುವ ಮಾತು ಸ್ವಾರಸ್ಯವಾಗಿದೆ :

ನಾವಿದನು ನಗರದಲಿ ಹೇಳಿದರೆ ಜನರು
ನಂಬುವರೆ? ನಾವಿಂಥ ಜನಗಳನು ಕಂಡೆವೆನೆ-
ಏಕೆಂದರವರು ಈ ದ್ವೀಪದ ನಿವಾಸಿಗಳೆ
ಇರಬೇಕು.-ರೂಪಗಳು ಬೇರಾದೊಡೇನಂತೆ?
ಮಾನವರ್ ಅರಿಯದಿಹ ಅತಿಥಿಸತ್ಕಾರವಿದು!
ಮನುಜರಲಿ ಈ ವಿನಯ ಮರ್ಯಾದೆಗಳು ವಿರಳ!
ಇಲ್ಲ ಎಂದರು ಎನ್ನಬಹುದು!

ಇದನ್ನು ಕೇಳಿದ ಭೈರವನು ಮನದಲ್ಲಿಯೇ (ಸ್ವಗತ) ಜಯದೇವನನ್ನು ಹೊಗಳುತ್ತಾನೆ. ‘ಧರ್ಮಾತ್ಮನ್, ಪುಣ್ಯಾತ್ಮನಹೆ ನೀನು, ನನ್ನಿಯನೆ ನುಡಿದಿರ್ಪೆ. ಏಕೆಂದರಲ್ಲಿರ್ಪ ಮೂವರಲಿ ಪಿಶಾಚಿಗಳ ಮಿರಿರ್ಪ ನಕ್ತಾತ್ಮರೊಳರು !’ ಎಂಬ ಭೈರವನ ಮಾತು ಆ ದೃಶ್ಯದಲ್ಲಿರುವ ಇತರರ ವ್ಯಕ್ತಿತ್ವವನ್ನು ತೋರಿಸುತ್ತದೆ. ತಿನ್ನುವ ಆಸೆಯಿಂದ ಆ ಹಣ್ಣು-ಹಂಪಲಗಳ ತಟ್ಟೆಗೆ ಕೈಹಾಕಿದಾಗ ಗುಡುಗು-ಸಿಡಿಲು-ಮಿಂಚು ಹೊಡೆದಂತಾಗಿ, ಕಿನ್ನರನು ಘೋರ ರಾಕ್ಷಸಿಯ ವೇಷದಿಂದ ನುಗ್ಗಿ ಬರಲು ಹಣ್ಣು-ಹಂಪಲಗಳು ಮಾಯವಾಗುತ್ತವೆ. ಕಿನ್ನರನು ಹೇಳುವ ಮಾತುಗಳು ಬಹಳ ಮಾರ್ಮಿಕವಾಗಿವೆ. ‘ನಿಮ್ಮಲ್ಲಿ ಮೂರು ಜನ ಪಾಪಿಗಳಿಹರು’ ಎಂಬ ವಾಕ್ಯದೊಂದಿಗೆ ಆರಂಭವಾದಾಗ ಇತರರು ಕತ್ತಿಗಳನು ಒರೆಗಳಚಿ, ಬರಲಿರುವ ಶತ್ರುವನ್ನೆದುರಿಸಲು ಸನ್ನದ್ಧರಾಗುವಾದಗ ಕಿನ್ನರನ ಮಾತುಗಳು ಹೀಗೆ ಮುಂದುವರೆಯುತ್ತವೆ :

ಚಿಃ ! ಚಿಃ ! ಮೂರ್ಖರಿರ, ಹೇಡಿಗಳ್
ನೀವೇನ ಮಾಡುವಿರಿ? ವಿಧಿಯ ಕಿಂಕರರಾವಿ ;
ನಿಮ್ಮ ಕೈಯಾ ಕತ್ತಿಗಳೂ ನಾವೆ. ಚೀರುತಿಹ
ಗಾಳಿಗಳ ಖಂಡಿಸಿರಿ ! ಭೋರ್ಗರೆವ ನೀರುಗಳ
ಕತ್ತರಿಸಿ ! ನನ್ನ ಮೈನವಿರನೊಂದಾದೊಡಂ
ಕೀಳಲಾರದು ನಿಮ್ಮ ಮೈಬಲ್ಮೆ. ನಮ್ಮವರ್
ನನ್ನಂತೆ ಬಲವಂತರಾಗಿಹರ್. ನೀವೀಗ
ಕತ್ತಿಗಳ ಭಾರದಿಂ ಕುಸಿಯುವಿರಿ ! ಅವುಗಳನು
ಎತ್ತಲಾರದೆ ಕೆಳಗೆ ಬಿಸುಡುವಿರಿ !

ಎಂದು ಇನ್ನೂ ಹೆಚ್ಚಿಗೆ ಹಂಗಿಸುತ್ತಾ ಅವರು ಕತ್ತಿಗಳನು ಕೆಳಗೆಸೆಯುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾನೆ. ಅವರು ಹಿಂದೆ ಮಾಡಿದ ಪಾಪಕಾರ್ಯವನ್ನು ನೆನಪಿಸಿ ಮಾಯವಾಗುತ್ತಾನೆ. ದೂರದಲ್ಲಿ ನಿಂತು ಇದನ್ನೆಲ್ಲವನ್ನು ಗಮನಿಸುತ್ತಿದ್ದ ಭೈರವನಾಯಕನಿಗೆ ಕಿನ್ನರ ಮತ್ತು ಇತರ ಅಲೌಕಿಕ ಶಕ್ತಿಗಳು ನಿರ್ವಹಿಸಿದ ಪಾತ್ರ ಸಮಾಧಾನತರುತ್ತದೆ. ಶಿವನಾಯಕನು ಗೌರಾಂಬೆಯನ್ನು ನೋಡಲು ಹೊರಡುತ್ತಾನೆ. ಗಾಬರಿಗೊಂಡ ರಣನಾಯಕರ ತಂಡವು ಚೇತರಿಸಿಕೊಳ್ಳುತ್ತಿರುವಾಗ ಮಂತ್ರಿ ಜಯದೇವನು ಹೇಳುವ ಮಾತುಗಳು ಬಹಳ ಅರ್ಥವತ್ತಾಗಿ ಕಾಣುತ್ತವೆ.

ಪಾಪದಿಂದಿವರ್ಗೆಲ್ಲ
ಎದೆಗೆಚ್ಚು ತೊಲಗಿಹುದು. ಎಂದೊ ಕುಡಿದಾ ವಿಷವು
ಇಂದು ಮೈಗೇರಿಹುದು ! ಏನು ಮಾಳ್ಪರೊ ಕಾಣೆ !
ಅವರ ಹಿಂದೆಯೆ ಹೋಗಿ ಸಂತೈಸಲೆಳಸುವೆನು!

ಎಂದು ಅವರ ಹಿಂದೆ ಹೊರಡುವುರೊಂದಿಗೆ ದೃಶ್ಯಕ್ಕೆ ತೆರೆ ಬೀಳುವುದು.

ಎಂಟನೇಯ ದೃಶ್ಯವು ಭೈರವನಾಯಕನ ಗುಹೆಯ ಮುಂದಿನ ಭಾಗದಲ್ಲಿ ಭೈರವನಾಯಕ, ಶಿವನಾಯಕ ಮತ್ತು ಗೌರಾಂಬೆ ಆಗಮಿಸುವುದರೊಂದಿಗೆ ತೆರೆದುಕೊಳ್ಳುತ್ತದೆ. ಶಿವನಾಯಕ ಮತ್ತು ಗೌರಾಂಬೆಯರ ನಡುವಿನ ಪ್ರೇಮ ಸಲ್ಲಾಪಕ್ಕೆ ಭೈರವನಾಯಕನ ಒಪ್ಪಿಗೆ ಮತ್ತು ಭೈರವನಾಯಕನನ್ನು ಕೊಲ್ಲುವ ಶನಿಶಕ್ತಿಯ ವಿಫಲ ಪ್ರಯತ್ನಗಳನ್ನು ಒಳಗೊಂಡ ಈ ದೃಶ್ಯವು ಆರಂಭದಲ್ಲಿ ಭೈರವನಾಯಕನು ತನ್ನ ಮಗಳನ್ನು ಶಿವನಾಯಕನಿಗೆ ಧಾರೆಯೆರೆಯುವುದರೊಂದಿಗೆ ತನ್ನ ಮಗಳನ್ನು ಹೀಗೆ (ಹೆತ್ತವರಿಗೆ ಹೆಗ್ಗಣು ಮುದ್ದಲ್ಲವೇ?) ವರ್ಣಿಸುತ್ತಾನೆ.

ಗೌರಾಂಬೆ ಹೂಚೆಲುವೆ. ಗೌರಾಂಬೆ ಅತಿಸುಗುಣೆ.
ನಾಯಕನೆ, ತಂದೆ ಮಗಳನು ಬಣ್ಣಿಸುವನೆಂದು
ತಿಳಿಯದಿರು. ಬಣ್ಣನೆಗಳೆಲ್ಲವನು ಹಿಂದಿಕ್ಕಿ
ಮುಂಚುವುದು ನನ್ನ ಗೌರಿಯ ಶೀಲ!

ನಂತರ ತರುಣ ದಂಪತಿಗಳ ವಿನೋದಕ್ಕಾಗಿ ಬನದೇವಿ, ನದೀದೇವಿ, ಮುಗಿ¯ದೇವತೆಗಳು, ಉರ್ವಶಿ ಮುಂತಾದವರಿಂದ ಗಾನನರ್ತನಗಳಾಗುತ್ತವೆ. ಇತ್ತ ಭೀಮಣ, ತ್ರಿಶಂಕು ಅವರಿಂದೊಡಗೂಡಿ ಶನಿಯನು ತನ್ನನ್ನು ಕೊಲೆಗೈಯುವ ಉದ್ದೇಶದಿಂದ ಬರುತ್ತಿರುವುದನ್ನು ತಿಳಿದು ಭೈರವನಾಯಕನು ಅವರ ಯೋಜನೆಯನ್ನು ವಿಫಲಗೊಳಿಸಲು ಈ ತರುಣ ದಂಪತಿಗಳನ್ನು ತನ್ನ ಗುಹೆಯ ಒಳಮಂಟಪದ ಸನಿಹಕ್ಕೆ ಕಳುಹಿಸುತ್ತಾನೆ. ಭೈರವನಾಯಕನ್ನು ಕೊಲ್ಲು ಬಂದ ಅವರ ಮೇಲೆ ಭೈರವನಾಯಕನು ವಿಕಾರಾಕೃತಿಗಳನ್ನು ಛೂಬಿಟ್ಟು ಬೆನ್ನಟ್ಟಿಸಿ ಓಡಿಸುತ್ತಾನೆ.

ಕೊನೆಯ ಮತ್ತು ಒಂಬತ್ತನೇಯ ದೃಶ್ಯದಲ್ಲಿ ಮಂತ್ರಕವಚಧಾರಿಯಾದ ಭೈರವನಾಯಕನೊಂದಿಗೆ ಕಿನ್ನರನು ಗುಹೆಯ ಮುಂಭಾಗಕ್ಕೆ ಬರುತ್ತಿರುವಾಗ ಭೈರವನಾಯಕನು ಸಂತೃಪ್ತಿಯಿಂದ ತನ್ನ ಗುರಿಸಾಧನೆಯ ಉದ್ದೇಶಗಳು ಈಡೇರುತ್ತಿರುವುದನ್ನು ಮಹಾಕವಿಗಳು ಹೀಗೆ ಹೇಳಿಸುತ್ತಾರೆ.

ಈಗಳೆನ್ನಿಚ್ಛೆ ಮಾಗಿ ಹಣ್ಣಾಗುತ್ತಿದೆ:
ಒಂದಿನಿತೂ ಕುಂದದಿದೆ ನನ್ನ ಮಂತ್ರದ ಬಲಂ.
ನನ್ನ ಮಾಯೆಯ ದೇವತೆಗಳೆಲ್ಲ ತಪ್ಪದೆಯೆ
ಪೇಳ್ದಾಣತಿಯ ಪಾಲಿಸುತ್ತಿಹರ್. ಇಂದೆನಗೆ
ಬಿದಿಯೆ ಶರಣುಹೊಕ್ಕಂತಿದೆ. ಪೊಳ್ತೆನಿತು?

ಹೀಗೆ ನಿರಾಳತೆಯ ಭಾವದಲ್ಲಿದ್ದರೂ ಭೈರವನಾಯಕನು ಮೈಮರೆಯುವ ವ್ಯಕ್ತಿತ್ವದವನಲ್ಲ. ಇನ್ನೂ ಕೆಲಸ ಬಾಕಿಯಿದೆಯೆಂಬುದನ್ನು ಜ್ಞಾಪಿಸಿಕೊಳ್ಳುತ್ತಾ, ಗುಹೆಗೆ ಬಳಿಯಿರ್ಪ ಮಾಮರದ ತೋಪಿನಲಿ ಸೆರೆಯಾಗಿ ಬಿದ್ದ ಅರಸನೂ ಮತ್ತು ಆತನ ಅನುಯಾಯಿಗಳನ್ನು ಕರೆದುಕೊಂಡು ಬರುವಂತೆ ಕಿನ್ನರನಿಗೆ ಆಜ್ಞಾಪಿಸುತ್ತಾನೆ. ಇಲ್ಲಿ ಭೈರವನಾಯಕನಿಗೆ ಸೇಡು ತೀರಿಸಿಕೊಳ್ಳಬೇಕೆಂಬ ಪ್ರತಿಕಾರದ ಬುದ್ಧಿ ಆತನಿಗಿಲ್ಲವೆಂಬುದು ಕಿನ್ನರನನ್ನುದ್ದೇಶಿಸಿ ಹೇಳುವ ಈ ಮಾತಿನಿಂದ ಸ್ಪಷ್ಟವಾಗುತ್ತದೆ.

ಕಿನ್ನರಾ,
ಕರಗಿದಪುದೆನ್ನೆರ್ದೆಯುಂ, ಗಾಳಿಯಾಗಿಹ ನೀನೆ
ಮರುಗಿದೊಡೆ ಮನುಜನಾಗಿಹ ನಾನು, ನನ್ನಂತೆ
ಇರ್ಪ ಮನುಜರಿಗಾಗಿ ಮರುಗದಿರ್ಪೆನೆ, ಹೇಳು!
ಅವರೆನಗೆ ನಿರ್ನೆರಂ ಪೆಬೆರ್Éೀನೆಗೈದರ್,
ಅದೊಡಂ ನಾನವರ ದಂಡಿಸೆನ್! ಪೀಡಿಸೆನ್!
ಮುಯ್ಗೆ ಮುಯ್ಯಿ ತೀರ್ಚಿಕೊಳ್ವದದು ಜಸಮಲ್ತು!
ದಂಡನೆ ದೊಡ್ಡವರ ಕಾರ್ಯಮಾಗದು ; ಕ್ಷಮೆಯೆ
ಪುಣ್ಯಾತ್ಮರಿಗೆ ಪಿರಿಯ ಪೊಂದೊಡಿಗೆ. ಬಳಲಿಹರ್,
ಅವರೆಲ್ಲ ನೊಂದಿಹರ್, ಬಗೆಯಲ್ಲಿ ಬೆಂದಿಹರ್.
ಪೋಗವರ ಸೆರೆಬಿಡಿಸು ! ಮುಸುಗಿರ್ಪ ಮಾಯೆಯನ್
ಬೇಗನೋಸರಿಸಿ ಇಲ್ಲಿಗವರನ್ ಕರೆದು ತಾ.

ಎಂಬ ಮಾತಿನಿಂದ ಭೈರವನಾಯಕನ ಉದಾತ್ತತೆ ವ್ಯಕ್ತವಾಗುತ್ತದೆ. ಕಿನ್ನರನು ರಣನಾಯಕ ಮತ್ತು ಆತನ ಅನುಯಾಯಿಗಳನ್ನು ಕರೆದುಕೊಂಡ ಬಳಿಕ ಭೈರವನಾಯಕನ ಪಾತ್ರಕ್ಕೆ ಕಳೆಕಟ್ಟುವಂತೆ ಮಹಾಕವಿಗಳು ಪಾತ್ರ ಪೋಷಣೆ ಮಾಡಿದ್ದಾರೆ. ಹಿಂದೆ ಅವರು ತನಗೆ ಮಾಡಿದ ಅನ್ಯಾಯವನ್ನು ಎತ್ತಿ ಹೇಳುತ್ತಾ ‘ಈಗಳಾದರೂ ನಿನ್ನ ಎದೆ ಬೇವುದೇ ರಂಗನಾಯಕ?’ ಎಂದು ಕೇಳುತ್ತಾನೆ. ಸೋದರನಾದ ರುದ್ರನಾಯಕನನ್ನು ಉದ್ದೇಶಿಸಿ ಹೇಳುವ ಮಾತುಗಳು ಎಂತಹ ಪಾಪಿಗಳ ಎದೆಯನ್ನು ಚುಚ್ಚದೆ ಇರದು :

ಒಂದೆ ಬಸಿರಿಂ ಬಂದ ನನ್ನ ಒಡಹುಟ್ಟಿದನೆ,
ತಮ್ಮ, ರುದ್ನಾಯಕನೆ, ರಾಜಯಾಭೀಲಾಷೆಯಿಮ
ಸೊದರತೆಯನೆ ಮರೆತು, ಧರ್ಮವನೆ ತೊರೆದು,
ಅನ್ಯಾಯವೆಂಬುದನು ಲೆಕ್ಕಿಸದೆ ನೀನೆನಗೆ
ಅಪರಾಧವನ್ನೆಸಗಿ ಸಂತಸದಿ ಬಾಳುತಿಹೆ!-
ರಂಗನಾಯಕನೊಡನೆ ಒಳಸಂಚು ಮಾಡಿ
ದೊರೆಯ ಕೊಲೆಗಾರನಾಗುತಲಿದ್ದೆ ; ನಾನದನ್
ತಪ್ಪಿಸಿದೆ. ನಿನ್ನ ಅಪರಾಧಗಳನೆಲ್ಲವನು
ಮನ್ನಿಸಿಹೆ !………

ಎಂದು ಹೇಳುತ್ತಿರಲು ಈತನಾರೆಂಬುದನ್ನು ತಿಳಿಯದೆ ಅವರು ಗಾಬರಿಯಾಗಿ ನಿಂತಿರಲು, ಕಿನ್ನರನಿಂದ ತಾನು ಕೆಳದಿಯ ರಾಜನಾಗಿದ್ದಾಗ ಹಾಕಿಕೊಳ್ಳುತ್ತಿದ್ದ ವೇಷವನ್ನು ತರಿಸಿಕೊಂಡು ಹಾಕಿಕೊಳ್ಳುತ್ತಾನೆ. ಆಗ ಅವರೆಲ್ಲರಿಗೂ ಭೈರವನಾಯಕನೆಂಬುದು ಅರಿವಾಗುತ್ತದೆ.

…….ಭೈರವನಾಯಕನೆ ಇದೆಕೊ
ನಿನ್ನ ನಾಡನು ನಿನಗೆ ಹಿಂದಕೊಪ್ಪಿಸಿದೆ;
ನನ್ನ ಮೇಲೆರಕಮಂ ತೋರಿ ಸ್ವೀಕರಿಸದನ್!
ಮರೆತುಬಿಡು ಮುನ್ನ ನಾಂ ಗೈದ ಅಪರಾಧಮಂ!
ಮನ್ನಿಸಯ್, ಕೂಮುಗಿದು ಬೇಡುವೆನ್.-

ಎಂದು ರಣನಾಯಕನು ಅವನಿಗೆ ಶರಣಾಗುತ್ತಾನೆ. ಇಲ್ಲಿ ಭೈರವನಾಯಕನ ಉದಾತ್ತ ಮನೋಭಾವವು ಉನ್ನತ ಮಟ್ಟಕ್ಕೇರುತ್ತದೆ. ಈ ಸಮಯದಲ್ಲಿ ಅವರನ್ನು ಯಾವ ರೀತಿಯಿಂದಲಾದರೂ ಶಿಕ್ಷಿಸಲು ಆತ ಸಮರ್ಥ, ಆದರೆ ‘ಈ ಸಮಯದೊಳ್ ತರಮಲ್ತು ಕೀಳ್ ಪಿಸುಣ್’ ಎಂದು ಅವರೆಲ್ಲರನ್ನು ಕ್ಷಮಿಸುತ್ತಾನೆ. ಮಗನ ಅಗಲಿಕೆಯಿಂದ ಕಂಗಾಲಾಗಿದ್ದ ರಣನಾಯಕನ ದುಃಖವನ್ನು ಕಂಡು ತನ್ನ ನಾಟಕವನ್ನು ಕೊನೆಯ ದೃಶ್ಯದಲ್ಲಿ ಸುಖಾಂತ್ಯ ಹಾಡಲು ಗೌರಾಂಬೆ ಮತ್ತು ಶಿವನಾಯಕರು ಪಗಡೆಯನಾಡುವ ದೃಶ್ಯವನ್ನು ಗುಹಾದ್ವಾರ ತೆರೆಯುವ ಮೂಲಕ ತೋರಿಸುತ್ತಾನೆ. ತನ್ನ ಮಗ ಬದುಕಿರುವುದನ್ನು ಕಂಡುದಲ್ಲದೇ, ಸುಂದರ ಸೊಸೆಯನ್ನು ಪಡೆದ ಸಂತೋಷದಲ್ಲಿ ರಣನಾಯಕ ಸಂಭ್ರಮಿಸುತ್ತಿದ್ದಾನೆ. ಆದರೂ ತಾನು ಹಿಂದೆ ಮಾಡಿದ ಕುಕೃತ್ಯಗಳಿಗಾಗಿ ಪಶ್ಚಾತ್ತಾಪಗೊಂಡಿದ್ದು ಸೊಸೆಯ ಹತ್ತಿರ ಹೀಗೆ ಹೇಳಿಕೊಳ್ಳುತ್ತಾನೆ/ಬೇಡಿಕೊಳ್ಳುತ್ತಾನೆ.

ನನ್ನ ಸೊಸೆಯಂ ನಾನೆ ಸೆರಗೊಡ್ಡಿ ಬೇಡುವೆನ್!
ಗೌರಾಂಬೆ, ನಿನಗೆ ನಾನಪರಾಧವೆಸಗಿದೆನ್;
ಮನ್ನಿಸೌ, ಮಾದೇವಿ.-ನೀನೆನ್ನ ಸೊಗದ ಸಿರಿ!

ಸಾತ್ವಿಕ ಶಕ್ತಿಯೇ ಮೈವೆತ್ತಂತಿರುವ ಮುದಿಮಂತ್ರಿ ಜಯದೇವನಿಗೆ ನಾಲ್ವರೂ ದುಷ್ಟರಲ್ಲಾದ ಮನಃಪರಿವರ್ತನೆಯಿಂದ ಅತೀವ ಸಂತೋಷವಾಗುತ್ತದೆ. ಈ ಸಂತಸದ ಸಂದರ್ಭದಲ್ಲಿಯೇ ವಿಕಾರಾಕೃತಿಗಳನ್ನು ಛೂಬಿಟ್ಟು ಓಡಿಸಿ ನಂತರ ಬಂಧಿತರಾದ ಭೀಮಣ, ತ್ರಿಶಂಕು, ಶನಿಯ ಮುಂತಾದವರು ಬರುತ್ತಾರೆ. ಅವರ ವಿಚಾರಣೆಯಾಗಿ ‘ನಿಮ್ಮನಿಬರಂ ಮನ್ನಿಸಿಹೆ’ ಎಂದು ಭೈರವನಾಯಕನು ಅವರನ್ನು ಬಿಡುಗಡೆ ಮಾಡುತ್ತಾನೆ. ಆಗ ಪಶ್ಚಾತ್ತಾಪದಲ್ಲಿ ಶನಿಯ ಹೇಳುವ ಮಾತು ಹಾಸ್ಯವನ್ನೊದಗಿಸುತ್ತದೆ.

ಅಪ್ಪಣೆ ! ನಿನ್ನಾಣತಿಯನೆಸಗಿ
ಕೃಪೆಯನಾರ್ಜಿಸಿ ಮುಂದೆ ಮತಿವಂತನಾಗುವೆನ್.-
(ಬೀಮಣನನ್ನು ನೋಡುತ್ತಾ)
ಕತ್ತೆಗಳಿಗೆಲ್ಲ ನಾನೆಯೆ ಹಿರಿಯ ಹೆಗ್ಗತ್ತೆ:
ಕುಡುಕನಾಗಿರ್ಪ ಈ ಮೂಲನನು ಸಗ್ಗದ
ಹಿರಿಯ ದೇವತೆಯಿಂದ ಪೂಜಿಸಿದೆನಲ್ಲಾ!

ನಂತರ ಬಂದಿರುವ ಅತಿಥಿಗಳಿಗಾಗಿ ಗುಹೆಯನ್ನು ಒಪ್ಪೋರಣಗೊಳಿಸಲು ಶನಿಯ ಹೊರಡುತ್ತಾನೆ. ಭೈರವನು ಎಲ್ಲರನ್ನು ತನ್ನ ಗುಹೆಗೆ ಆತಿಥ್ಯಕ್ಕಾಗಿ ಆಹ್ವಾನಿಸುತ್ತಾನೆ. ಅವರ ನೌಕೆಯನ್ನೇರಿ ಕೆಳದಿಗೆ ಬಂದು ನೂತನ ವಧು-ವರರಮದುವೆ ದಿಬ್ಬಣದಲ್ಲಿ ಬಾಗಿಯಾಗಿ, ಉಳಿದ ಆಯುಷ್ಯವನ್ನು ಶಿವನ ದ್ಯಾನದಲ್ಲಿ ಕಳೆಯುವುದಾಗಿ ತನ್ನ ಮುಂದಿನ ಯೋಜನೆಗಳನ್ನು ಅವರಲ್ಲಿ ಆತ್ಮೀಯವಾಗಿ ಹೇಳಿಕೊಳ್ಳುತ್ತಾನೆ. ತನ್ನೆಲ್ಲಾ ಸಾಧಿತ ಕಾರ್ಯಗಳಲ್ಲಿ ಪ್ರಧಾನ ಪಾತ್ರವಹಿಸಿದ್ದ ಕಿನ್ನರನನ್ನು ಮಾತುಕೊಟ್ಟಂತೆ ಬಿಡುಗಡೆ ಮಾಡುತ್ತಾನೆ. ಅದಕ್ಕೆ ಖುಷಿಯಾಗಿ ಕಿನ್ನರನು ‘ದುಂಬಿಯು ಬಂಡನು ಹೀರುವ ಎಡೆಯೊಳು ನಾ ಮಧುಪಾನವ ಮಾಡುವೆನು. ತೇಲುವ ತಾವರೆ ಹೂವಿನ ಹೊಡೆಯೊಳು ಪವಡಿಸೆ ಸಜ್ಜೆಯ ಹೂಡುವೆನು’ ಎಂಬ ಮಧುರ ಮಂಗಳ ಗೀತೆಯನ್ನು ಹಾಡುತ್ತಾ ಹೋಗಲು ರಂಗಸ್ಥಳದಲ್ಲಿ ಕತ್ತಲಾವರಿಸುವುದು.

ಪ್ರಸ್ತುತ ‘ಬಿರುಗಾಳಿ’ ರಂಗಕೃತಿಯು ರಚನಾತಂತ್ರ ಮತ್ತು ಏಕಮುಖ ಪರಿಣಾಮದ ದೃಷ್ಟಿಯಿಂದ ಇದೊಂದು ಒಳ್ಳೆಯ ಕೃತಿಯಾಗಿದೆ. ಒಂದು ದಿನದಲ್ಲಿ ನಡೆಯುವ ಘಟನೆಗಳನ್ನೊಳಗೊಂಡ ಈ ಕೃತಿಯು ವಿಚಿತ್ರ ಶಕ್ತಿಗಳನ್ನುಳ್ಳ ದ್ವೀಪದಲ್ಲಿ ನಡೆಯುತ್ತದೆ. ಅದರೊಂದಿಗೆ ಉತ್ತಮ ನಿರೂಪಣೆ ಮತ್ತು ಸರಳ ರಗಳೆಗಳ ಮೂಲಕ ಕವಿಹೃದಯದ ನಾಟಕಕಾರಾಗಿ ಮಹಾಕವಿಗಳು ಪ್ರತಿಯೊಂದು ಪಾತ್ರದ ಸಂಭಾಷಣೆಯಲ್ಲಿ ಕ್ಷಣ-ಕ್ಷಣಕ್ಕೂ ಕಂಗೊಳಿಸುತ್ತಾರೆ. ಇದೊಂದು ಸಂಕ್ಷಪ್ತ ಬ್ರಹ್ಮಾಂಡದ ಕಥನವಿದ್ದಂತಿದೆಯೆಂದು ಹಿರಿಯರೊಬ್ಬರು ಹೇಳಿದ್ದು ಜ್ಞಾಪಕಕ್ಕೆ ಬರುತ್ತದೆ.

ಷೇಕ್ಸಪಿಯರ್‍ನು ಟೆಂಪೆಸ್ಟ ಕೃತಿಯ ರಚನಾ ಸಂದರ್ಭವನ್ನು ಗ್ರಹಿಸುವುದಾದರೆ ಆ ಸಮಯದಲ್ಲಿ ಇಂಗ್ಲೆಂಡ್ ಅಭಿವೃದ್ಧಿಯ ಶಿಖರವನ್ನೇರುವುದರಲ್ಲಿತ್ತು. ವಿಜ್ಞಾನ, ಕೈಗಾರಿಕಾ ಕ್ಷೇತ್ರಗಳಲ್ಲಿ ಪ್ರಸಿದ್ಧಿಯನ್ನು ಪಡೆದಿತ್ತು. ಅನೇಕರು ಸಾಹಸ ಯಾತ್ರಗಳ ಮೂಲಕ ಹೊಸ-ಹೊಸ ದೇಶಗಳನ್ನು ಕಂಡು ಹಿಡಿದು ಅವುಗಳನ್ನು ತಮ್ಮ ವಸಾಹತುಗಳನ್ನಾಗಿ ಮಾಡಿಕೊಳ್ಳುತ್ತಾ ಸೂರ್ಯ ಮುಳುಗದ ಸಾಮ್ರಾಜ್ಯವನ್ನು ವಿಸ್ತರಿಸುವ ಸಂದರ್ಭದಲ್ಲಿ ರಚನೆಗೊಂಡ ಟೆಂಪೆಸ್ಟ ಕೃತಿಯು ಸಾಮ್ರಾಜ್ಯಸಾಹಿಯ ಪ್ರಭಾವಕ್ಕೆ ಒಳಗಾಗಿರುವ ಕೃತಿಕಾರರಿಗೆ ನಾಗರಿಕ-ಬುಡಕಟ್ಟು ಜನಾಂಗಗಳ ಹೋರಾಟ ಕಂಡಿರಬಹುದು.

ಮಹಾಕವಿಗಳಿಂದ ರಚಿತಗೊಂಡಿರುವ ‘ಬಿರುಗಾಳಿ’ ಕೃತಿಯ ಸಂದರ್ಭದಲ್ಲಿ ಸಾಮ್ರಾಜ್ಯಶಾಹಿಯ ರಾಷ್ಟ್ರೀಯ ಮನೋಭಾವನೆಗಳನ್ನು ಮಾತ್ರ ನಾವು ಗುರುತಿಸಿದರೆ ಅದು ವಿಶ್ವಮಟ್ಟಕ್ಕೆ ತಲುಪದೇ ದೇಶ/ಪ್ರಾಂತೀಯ ಮಟ್ಟಕ್ಕೆ ಸೀಮಿತವಾಗುತ್ತದೆ. ಆದರೂ ಮಹಾಕವಿಗಳ ಸದಾಕಾಲ ಸಶಕ್ತ ವಿಶ್ವಮಾನವ ಮಂತ್ರಗಳನ್ನು ಗಮನದಲ್ಲಿಟ್ಟುಕೊಂಡು ಸರ್ವಕಾಲ, ಸರ್ವದೇಶ ಮಾನ್ಯವಾಗುವ ವಿಶ್ವತತ್ವಗಳ ಸುಪ್ತ ಪ್ರತಿಮೆಗಳನ್ನು ಇಲ್ಲಿ ನಾವು ಗುರುತಿಸುವುದರಿಂದ ರಂಗಕೃತಿಗೆ ವಿಶ್ವಮಾನ್ಯ ವಿಶ್ವತ್ವ ಮತ್ತು ಶಾಶ್ವತತ್ವ ಒದಗಿಸಿದಂತಾಗುತ್ತದೆ.

ಇಂತಹ ಮಹಾಕೃತಿಯನ್ನು ರಂಗದಲ್ಲಿ ಅಳವಡಿಸಿ, ನನಗೆ ರಣನಾಯಕನ ಪಾತ್ರ ನಿರ್ವಹಿಸುವುದರೊಂದಿಗೆ ರಂಗಕೃತಿಯ ಆಂತರ್ಯದಲ್ಲಿ ಅಡಗಿಕೊಂಡು ನಡೆಸುವ ತುಮುಲಗಳನ್ನು ಅರ್ಥೈಸಿಕೊಳ್ಳುವಂತೆ ಮಾಡಿದ ಧಾರವಾಡದ ರಂಗಪರಿಸರ ತಂಡ ಮತ್ತು ನಿರ್ದೇಶಕಿ ನೀನಾಸಂ ಪದವೀದರೆ ರಾಜೇಶ್ವರೀ ಸುಳ್ಯ (ಒಮ್ಮೆ ಅಕ್ಕನಂತೆ ವಾತ್ಸಲ್ಯವತಿಯಾಗಿ, ಮತ್ತೊಮ್ಮೆ ಶಿಸ್ತಿನ ಸಿಪಾಯಿಯಂತಹ ಕಠೋರ ಮೇಷ್ಟ್ರ ಹಾಗೆ ದಂಡಿಸಿದ ರಿಹರ್ಸಲ್ ಸಂದರ್ಭದ ದಿನಗಳು ಮರೆಯಲಾರದ ರಂಗಭೂಮಿಯ ಬಂಗಾರದ ಕ್ಷಣಗಳು) ಮತ್ತು ರಂಗಕಹಳೆ ಸಂಸ್ಥೆಯ ಸ್ನೇಹಿತರು ನೆನಪಾದರು. ಮೈಸೂರಿನ ರಂಗಾಯಣದ ವನರಂಗದಲ್ಲಿ 28.12.2012ರ ಸಂಜೆಯಲ್ಲಿ ಪ್ರದರ್ಶನಗೊಂಡ ಈ ರಂಗಪ್ರದರ್ಶನಕ್ಕೆ ಮಹಾಕವಿಗಳ ಸುಪುತ್ರಿ ಶ್ರೀಮತಿ ತಾರಿಣಿ ಚಿದಾನಂದಗೌಡರು ಹಾಗೂ ಮಹಾಕವಿಗಳ ಅಳಿಯ ಡಾ.ಚಿದಾಂದಗೌಡರು (ಕುವೆಂಪು ವಿಶ್ವವಿದ್ಯಾಲಯದ ಮಾಜಿ ಉಪ-ಕುಲಪತಿಗಳು) ಉಪಸ್ಥಿತರಿದ್ದು ನಮಗೆಲ್ಲಾ ಹಾರೈಸಿದ್ದು ನಮ್ಮ ರಂಗಜೀವನದ ನೆನಪುಗಳಲ್ಲಿಯ ಅಚ್ಚಳಿಯದ ಪುಟಗಳು. ಅಂದು ಹಿರಿಯರೊಬ್ಬರು ಹೇಳಿದ್ದು ನೆನಪಾಗಿದ್ದು : ‘ಬಯಲು ಸೀಮೆಯ ಧಾರವಾಡಕ್ಕೂ, ಮಲೆನಾಡಿನ ಮಹಾಕವಿಯ ನಾಟಕವೊಂದು ಮೈಸೂರು ಸೀಮೆಯಲ್ಲಿ ಪ್ರದರ್ಶನಗೊಳ್ಳಲು ಮಹಾಕವಿಯ ಚೇತನದ ಶಕ್ತಿ ನಮಗೆಲ್ಲಾ ಎಲ್ಲೊ ಒಂದು ಕಡೆ ನಮ್ಮನ್ನು ಕೈಹಿಡಿದು ಮುನ್ನಡೆಸುತ್ತಿದೆಯೆಂಬುದು ಅತಿಶಯೋಕ್ತಿಯೆನಲ್ಲ!’. ಆ ಮಾತು ನಿಜ ಅಲ್ಲವೇ?

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
Jayaprakash Abbigeri
Jayaprakash Abbigeri
11 years ago

Ok Siddaram,
nice article but concentrate on overall theme of the play for future writing…
Any way Best wishes Siddaram….

ಹಿಪ್ಪರಗಿ ಸಿದ್ದರಾಮ್
ಹಿಪ್ಪರಗಿ ಸಿದ್ದರಾಮ್
11 years ago

Thank you Sir…

prashasti.p
11 years ago

ಕುವೆಂಪುರವರ ನನ್ನ ಗೋಪಾಲ, ಜಲಗಾರ ನಂತಹ ನಾಟಕಗಳನ್ನು ಓದಿದ್ದೇನೆ. ಆದರೆ ನಿಮ್ಮ ಮಾಲಿಕೆಯಲ್ಲಿ ಬರುತ್ತಿರುವ ಲೇಖನಗಳನ್ನು ಓದಿರಲಿಲ್ಲ..ಸುಧೀರ್ಘ ಲೇಖನಗಳನ್ನು  ಚೆನ್ನಾಗಿ ರೂಪಿಸಿದ್ದೀರ ಸರ್.. ಮುಂದುವರೆಯಲಿ

ಹಿಪ್ಪರಗಿ ಸಿದ್ದರಾಮ್
ಹಿಪ್ಪರಗಿ ಸಿದ್ದರಾಮ್
11 years ago
Reply to  prashasti.p

ಧನ್ಯವಾದಗಳು…Prashasti.p ಅವರೇ….

Gaviswamy
11 years ago

ತುಂಬಾ ಚೆನ್ನಾಗಿ ವಿಶ್ಲೇಷಿಸಿದ್ದೀರಿ ಸರ್.
'ಬಿರುಗಾಳಿ'ಯನ್ನು ಓದಲು ಪ್ರೇರಪಿಸಿದೆ ನಿಮ್ಮ 
ಬರಹ. ಧನ್ಯವಾದಗಳು.

 

ಹಿಪ್ಪರಗಿ ಸಿದ್ದರಾಮ್
ಹಿಪ್ಪರಗಿ ಸಿದ್ದರಾಮ್
11 years ago
Reply to  Gaviswamy

Thanks Dr.Gaviswamy….

6
0
Would love your thoughts, please comment.x
()
x