ದಿನಾಂಕ:೧೧/೧೨/೨೦೧೪ರ ಗುರುವಾರ ಸಂಜೆ ಸಾಗರದಲ್ಲಿ ಒಟ್ಟು ಮೂರು ಪುಸ್ತಕಗಳು ಒಂದೇ ವೇದಿಕೆಯಲ್ಲಿ ಬಿಡುಗಡೆಗೊಂಡವು. ಶ್ರೀ ನಾಗೇಶ ಹೆಗಡೆಯವರ ನರಮಂಡಲ ಬ್ರಹ್ಮಾಂಡ, ಶ್ರೀ ಆನಂದ ತೀರ್ಥ ಪ್ಯಾಟಿಯವರ ಅಹಾ ಇಸ್ರೇಲಿ ಕೃಷಿ ಹಾಗೂ ನನ್ನದೇ ಆದ ಜೋಗದ ಸಿರಿ ಕತ್ತಲಲ್ಲಿ. ಇದೇ ಹೊತ್ತಿನಲ್ಲಿ ಪೆರು ದೇಶದ ಲಿಮಾದಲ್ಲಿ ೧೯೦ ದೇಶಗಳ ಧುರೀಣರು ಒಟ್ಟು ಸೇರಿ ಭೂಬಿಸಿಯನ್ನು ನಿಯಂತ್ರಿಸುವ ಕುರಿತು ೧೧ನೇ ದಿನದ ಗಂಭೀರ ಚರ್ಚೆ ನಡೆಸುತ್ತಿದ್ದರು, ಒಟ್ಟು ಹನ್ನೆರೆಡು ದಿನ ನಡೆದ ಈ ಜಾಗತಿಕ ಸಮಾವೇಶದಲ್ಲಿ ಭೂಬಿಸಿಗೆ ಕಾರಣವಾಗುವ ಎಲ್ಲಾ ಅಂಶಗಳ ಬಗ್ಗೆ ಚರ್ಚೆ ನಡೆಸಿದರು. ಮುಂದಿನ ವರ್ಷ ಪ್ಯಾರೀಸ್‌ನಲ್ಲಿ ನಡೆಯುವ ಜಾಗತಿಕ ಸಮಾವೇಶದ ಪೂರ್ವಭಾವಿ ಸಭೆ ಇದಾಗಿತ್ತು. ಇದೇ ಸಮಯದಲ್ಲಿ ಮಲೆನಾಡಿನ ರೈತರು ಕೊಯ್ಲು ಮಾಡಲು ಪ್ರಾರಂಭಿಸಿದ್ದರು. ಚಳಿಗಾಲದ ಮಧ್ಯದಲ್ಲಿ ಬಾನು ಗುಡುಗಿತು. ಸಿಡಿಲಬ್ಬರದ ಮಳೆ ಮುಸಲಧಾರೆಯಂತೆ ಸುರಿಯಿತು. ಕೊಯ್ದಿಟ್ಟ ಭತ್ತ ಕೊಚ್ಚಿಕೊಂಡು ಹೋಯಿತು. ಬೇಯಿಸಿದ ಅಡಕೆಗೆ ಮುಗ್ಗಲು ಹಿಡಿಯಿತು. ಕಾಫಿ ಹಣ್ಣುಗಳು ಕೊಳೆತವು. ಬಾಳೆ ಮರಗಳು ಗಾಳಿಗೆ ಮುರಿದು ಹೋದವು. ಅಸಹಾಯಕ ರೈತ ಬೆಚ್ಚಿ ಬಿದ್ದ. ಅಲ್ಲಿ-ಇಲ್ಲಿ ಸಾಲ ಮಾಡಿ ಹೈರಾಣಾಗಿದ್ದ ರೈತನ ಮೇಲೆ ಪ್ರಕೃತಿ ನಿಷ್ಕರುಣೆಯಿಂದ ವರ್ತಿಸಿತು. ಅಕಾಲಿಕ ಮಳೆಗೆ ಕಾರಣ ಹವಾಮಾನ ವೈಪರೀತ್ಯ ಹಾಗೂ ಇದಕ್ಕೆ ಮನುಜರೇ ಕಾರಣ ಎಂದು ರೈತನಿಗೆ ಗೊತ್ತಿಲ್ಲ. ಗೊತ್ತಿದ್ದರೂ ಏನೂ ಮಾಡುವ ಹಾಗಿಲ್ಲ.
ಪೆರು ದೇಶದ ಹಿಮಗುಡ್ಡಗಳು ಕರಗಿ ನೀರಾಗಿ ಹರಿದು ಹೋಗುತ್ತಿರುವ ಬಗ್ಗೆ ಚರ್ಚೆ ನಡೆಯಲಿಲ್ಲ. ಹವಾಮಾನ ವೈಪರೀತ್ಯದಿಂದ ಅಲ್ಲಿನ ಸಾಂಪ್ರದಾಯಿಕ ಕೃಷಿಕರು ಹೇಗೆ ಸಂಕಷ್ಟಕ್ಕೊಳಗಾಗಿದ್ದಾರೆ ಎಂಬುದೂ ಚರ್ಚೆಯ ವಿಷಯವಾಗಲಿಲ್ಲ. ಸದಾ ಶಾಂತಿಯಿಂದ ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ಗ್ರೀನ್‌ಪೀಸ್ ಅಂತಾರಾಷ್ಟ್ರೀಯ ಸಂಸ್ಥೆ ಹಲವು ಸಾಹಸಗಳನ್ನು ಮಾಡುತ್ತದೆ. ಗ್ರೀನ್‌ಪೀಸ್ ಕಾರ್ಯಕರ್ತರು ಜೀವದ ಹಂಗನ್ನು ತೊರೆದು ಪರಿಸರ ರಕ್ಷಣೆಗಾಗಿ ಹೋರಾಡುತ್ತಾ ಪರಿಸರಕ್ಕೆ ಮಾರಕವಾಗುವ ಉತ್ಪನ್ನಗಳನ್ನು ತಯಾರಿಸುವ ಬಹುರಾಷ್ಟ್ರೀಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಗ್ರೀನ್‌ಪೀಸ್ ಸಂಸ್ಥೆಯನ್ನು ಅತಿರೇಕದ ಪರಿಸರವಾದ ಸಂಸ್ಥೆ ಎಂದು ತೆಗಳಿದ್ದಾರೆ.
ಪೆರು ದೇಶದ ಸಮುದ್ರ ತೀರದಲ್ಲಿ ವಿಶಿಷ್ಟವಾದ ಪ್ರದೇಶವೊಂದಿದೆ. ಇದಕ್ಕೆ ನಾಝ್ಕಾ ಗೆರೆಗಳು ಎಂದು ಹೆಸರು. ಮೆದುವಾದ ಬಿಳಿ-ಕಪ್ಪು ಮಿಶ್ರಿತ ಕಲ್ಲಿನಲ್ಲಿ ಸುಮಾರು ೨೦೦೦ ವರ್ಷಗಳ ಹಿಂದೆ ರಚಿಸಿದ ವಿವಿಧ ಪ್ರಾಣಿ ಪಕ್ಷಿಗಳ ಚಿತ್ರಗಳಿವೆ. ಇದರಲ್ಲೇ ಪ್ರಸಿದ್ದವಾದದು ಹಮ್ಮಿಂಗ್ ಹಕ್ಕಿಯ ಚಿತ್ರ. ಈ ಪ್ರದೇಶವನ್ನು ವಿಶ್ವಪಾರಂಪಾರಿಕ ಪ್ರದೇಶವೆಂದು ಘೋಷಿಲಾಗಿದ್ದು, ಪೆರು ದೇಶದ ರಾಷ್ಟ್ರೀಯ ಸ್ಮಾರಕವೂ ಹೌದು. ಈ ಪ್ರದೇಶಕ್ಕೆ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಲ್ಲಿನ ರಾಜ್ಯಾಧ್ಯಕ್ಷರು ಕೂಡ ಅನುಮತಿಯಿಲ್ಲದೆ ಪ್ರವೇಶ ಮಾಡುವ ಹಾಗಿಲ್ಲ. ಪುರಾತತ್ವ ಇಲಾಖೆಯ ಬಿಗಿಯಾದ ಕಣ್ಗಾವಲು ಈ ಪ್ರದೇಶಕ್ಕಿದೆ. ಕಾಲ-ಕಾಲಕ್ಕೆ ನಿರ್ವಹಣೆ ಮಾಡುವ ಸಂಧರ್ಭದಲ್ಲೂ ಕಟ್ಟುನಿಟ್ಟಿನ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಮೆದುವಾದ ಕಲ್ಲಿನ ಮೇಲೆ ನಡೆದಾಗ ನಮ್ಮ ಭಾರಕ್ಕೆ ಅಥವಾ ಹಾಕಿದ ಪಾದರಕ್ಷೆಯ ಗುರುತು ಬೀಳುವಷ್ಟು ಮೆದುವಾದ ಕಲ್ಲಿನ ಪ್ರದೇಶವಿದು. ಇದರ ಮೇಲೆ ನಡೆದಾಡಲೇ ವಿಶಿಷ್ಟವಾದ ಪಾದರಕ್ಷೆಗಳನ್ನು ವಿನ್ಯಾಸಗೊಳಿಸಲಾಗಿದೆ. ಕಲ್ಲಿಗಿಂತ ಮೆದುವಾದ ಪಾದರಕ್ಷೆಗಳನ್ನೇ ಬಳಸಿ ನಿರ್ವಹಣಾ ಕಾರ್ಯವನ್ನು ನಡೆಸಬೇಕು.
ಡಿಸೆಂಬರ್ ೧ ನೇ ತಾರೀಖಿನಿಂದ ಲಿಮಾದಲ್ಲಿ ನಡೆಯುವ ಜಾಗತಿಕ ಸಮಾವೇಶದ ಗಮನ ಸೆಳೆಯುವ ಸಲುವಾಗಿ ಇದೇ ಗ್ರೀನ್‌ಪೀಸ್ ಸಂಸ್ಥೆಯ ಬ್ರೆಜಿಲ್, ಅರ್ಜಂಟೈನಾ, ಚಿಲಿ, ಸ್ಪೇನ್, ಇಟಲಿ ಮತ್ತು ಆಸ್ಟ್ರಿಯಾದ ಕಾರ್ಯಕರ್ತರು ಸೇರಿ ಈ ನಿಷೇಧಿತ ನಾಝ್ಕಾ ಗೆರೆಯಿಂದ ರಚಿತವಾದ ಹಮ್ಮಿಂಗ್ ಹಕ್ಕಿಯ ಹತ್ತಿರದಲ್ಲೇ ಒಂದು ಸಂದೇಶವನ್ನು ಬರೆಯುತ್ತಾರೆ. ಹಳದಿ ಬಟ್ಟೆಗಳನ್ನು ಉಪಯೋಗಿಸಿ ಬದಲಾವಣೆಯ ಕಾಲ – ಮರುಬಳಕೆಯ ಇಂಧನಗಳೇ ಭವಿಷ್ಯ ಎಂದು ಬರೆದು, ಈ ಚಿತ್ರವನ್ನು ವಿಮಾನದಿಂದ ಚಿತ್ರೀಕರಿಸಿ ಬಿಡುಗಡೆ ಮಾಡಿದ್ದಾರೆ. ಗ್ರೀನ್‌ಪೀಸ್ ಸಂಸ್ಥೆಯ ಈ ಕ್ರಮವನ್ನು ಪೆರು ದೇಶದ ನಾಗರೀಕರು ಮತ್ತು ಅಲ್ಲಿನ ಆಡಳಿತ ತೀವ್ರವಾಗಿ ಆಕ್ಷೇಪಿಸಿವೆ. ಇದೊಂದು ಅತ್ಯಂತ ಹೇಯಕರ ಕೃತ್ಯವೆಂದು ಅಲ್ಲಿನ ಪುರಾತತ್ವ ಇಲಾಖೆಯ ಮಂತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಸ್ಮಾರಕವನ್ನು ವಿರೂಪಗೊಳಿಸಿದ ಗಂಭೀರ ಆಪಾದನೆ ಈಗ ಗ್ರೀನ್‌ಪೀಸ್ ಎದುರಿಸುತ್ತಿದೆ. ಅಲ್ಲಿನ ಕಾನೂನಿನ ಪ್ರಕಾರ ಈ ಅಕ್ರಮ ಪ್ರವೇಶಕ್ಕೆ ೬ ವರ್ಷಗಳ ಸಜೆಯನ್ನು ವಿಧಿಸಬಹುದಾಗಿದೆ. ಅಲ್ಲಿನ ಜನರು ಈ ಅಕ್ರಮ ಪ್ರವೇಶವನ್ನು ನಮ್ಮ ಮೇಲೆ ನಡೆಸಲಾದ ಸಾಂಸ್ಕ್ರತಿಕ ದಬ್ಬಾಳಿಕೆ ಎಂದು ದೂರಿದ್ದಾರೆ.
ತಕ್ಷಣಕ್ಕೆ ಎಚ್ಚೆತ್ತುಕೊಂಡ ಗ್ರೀನ್‌ಪೀಸ್ ಸಂಸ್ಥೆ ಪೆರು ಆಡಳಿತ ಮತ್ತು ಅಲ್ಲಿನ ನಾಗರೀಕರಲ್ಲಿ ಬೇಷರತ್ತಾಗಿ ಕ್ಷಮೆ ಯಾಚಿಸಿದೆ. ಆದ ಹಾನಿಯನ್ನು ಭರಿಸಿಕೊಡುವ ಮಾತನಾಡಿದೆ. ಆದರೆ, ಪುರಾತತ್ವ ಇಲಾಖೆಯ ಪ್ರಕಾರ ಆದ ಹಾನಿಯನ್ನು ಸರಿಪಡಿಸಲು ಸಾಧ್ಯವಿಲ್ಲ. ಹಣದ ರೂಪದಲ್ಲಿ ಆದ ಹಾನಿಯನ್ನು ಭರಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡಿದೆ. ಅಲ್ಲಿನ ಸರ್ಕಾರ ಗ್ರೀನ್‌ಪೀಸ್ ಸಂಸ್ಥೆಯ ಮೇಲೆ ಕಟ್ಟಳೆ ಹೂಡಲು ತೀರ್ಮಾನಿಸಿದೆ. ನಿಜಕ್ಕೂ ಇದೊಂದು ಇಬ್ಬಂದಿಯ ಸಮಸ್ಯೆಯಾಗಿದೆ. ನಿಶ್ಚಿತವಾಗಿ ಇದೊಂದು ಗ್ರೀನ್‌ಪೀಸ್ ಸಂಸ್ಥೆಯ ತಪ್ಪು ಹೆಜ್ಜೆಯಾಗಿದೆ. ಜಗತ್ತಿನ ಗಮನ ಸೆಳೆಯುವ ಭರದಲ್ಲಿ ಪೆರುವಿನ ಹೆಮ್ಮೆಯಾದ ನಾಝ್ಕಾ ಗೆರೆಗಳನ್ನು ಹಾಳು ಮಾಡಿದ್ದು ಗ್ರೀನ್‌ಪೀಸ್ ಸಂಸ್ಥೆಗೆ ಹಿನ್ನೆಡೆಯಾಗಿದೆ. ಈ ಕೃತ್ಯದ ಬಗ್ಗೆ ತುಂಬಾ ವಿವರವಾದ ತನಿಖೆ ನಡೆಯುತ್ತಿದ್ದು, ಇದರಲ್ಲಿ ಭಾಗಿಯಾದ ಪೆರು ದೇಶದ ಪುರಾತತ್ವ ಇಲಾಖೆಯ ಸಿಬ್ಬಂದಿಗಳು ಕೂಡ ವಿಚಾರಣೆಯ ಭೀತಿಯಲ್ಲಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುವ, ಗಾಂಧಿ ತತ್ವದಲ್ಲಿ ನಂಬಿಕೆಯಿಟ್ಟು ಹೋರಾಡುವ ಇತಿಹಾಸವುಳ್ಳ ಗ್ರೀನ್‌ಪೀಸ್ ಸಂಸ್ಥೆ ಈ ಕೃತ್ಯದ ನಂತರದಲ್ಲಿ ತೀವ್ರ ಪಶ್ಚಾತಾಪ ಪಡುತ್ತಿದೆ. ಪೆರು ದೇಶವೂ ಕೂಡ ಗ್ರೀನ್‌ಪೀಸ್ ಘೋಷಣೆಯ ವಿರುದ್ಧವಾಗಿಲ್ಲ. ಗ್ರೀನ್‌ಪೀಸ್ ಸಂಸ್ಥೆಯ ಆಶಯಗಳನ್ನು ಅವರೂ ಒಪ್ಪುತ್ತಾರೆ. ಆದರೆ ನಡುರಾತ್ರಿಯಲ್ಲಿ ಪ್ರವೇಶ ನಿಷಿದ್ಧ ಪ್ರದೇಶಕ್ಕೆ ನುಗ್ಗಿ ಧಾಂದಲೆ ನಡೆಸಿದವರನ್ನು ಕ್ಷಮಿಸುವ ಮನೋಸ್ಥಿತಿಯಲ್ಲಿ ಪೆರುವಿಲ್ಲ. ಈ ವಿಚಿತ್ರ ಪರಿಸ್ಥಿತಿ ಯಾವ ತಿರುವುನ್ನು ಪಡೆಯುತ್ತದೆ ಎಂಬುದನ್ನು ಕಾಲವೇ ನಿರ್ಣಯಿಸಬೇಕು.
*****
ಪ್ರಿಯ ಅಖಿಲೇಶ್, ತುಂಬಾ ಮಾಹಿತಿಪೂರ್ಣ ಲೇಖನ!
Priya akhilesh, nimma pustaka elli labhyavide, mAhiti tilisi, pustaka maligegaLallU sigittilla