ನಾಕವನ್ನು ನರಕ ಮಾಡುತ್ತಿರುವವರ ಹುನ್ನಾರ!?: ಅಖಿಲೇಶ್ ಚಿಪ್ಪಳಿ


ಕಳೆದೆರಡು ತಿಂಗಳಲ್ಲಿ ಭೂಮಿಯ ಆರೋಗ್ಯದ ಕುರಿತು ವಿಶ್ವ ವನ್ಯ ನಿಧಿ ಸಂಸ್ಥೆ ಮತ್ತು ಗ್ರೀನ್‌ಪೀಸ್ ಸಂಸ್ಥೆಗಳು ವಿಸೃತವಾದ ವರದಿ ನೀಡಿವೆ. ಭೂಮಾತೆಗೆ ಬಂದಿರುವ ಜ್ವರ ವಿಪರೀತ ಮಟ್ಟಕ್ಕೆ ಹೋಗಿದೆ ಎಂಬುದೇ ಎರಡೂ ವರದಿಗಳ ಸಾರಾಂಶ. ಮನುಷ್ಯ ಕೇಂದ್ರಿತ ಅಭಿವೃದ್ಧಿ, ಕಾಡುನಾಶ ಇತ್ಯಾದಿಗಳು ಕಾರಣ ಎಂದು ರೋಗದ ಮೂಲವನ್ನು ಪತ್ತೆ ಮಾಡಿದ್ದಾರೆ. ಯಾವುದೇ ಅತ್ಯುತ್ತಮ ವೈದ್ಯನ ಕೌಶಲ್ಯ ಅಭಿವ್ಯಕ್ತಗೊಳ್ಳುವುದು ಖಾಯಿಲೆಯನ್ನು ಗುರುತಿಸುವ ಬಗೆಯಲ್ಲಿರುತ್ತದೆ. ಚಿಕಿತ್ಸೆ ನೀಡುವುದು ಎರಡನೆಯ ಹಂತ. ಹಾಗೆಯೇ ಭೂಜ್ವರಕ್ಕೆ ಕಾರಣ ಗೊತ್ತಾಗಿದೆ. ವಿಪರ್ಯಾಸವೆಂದರೆ, ಕಾಯಿಲೆ ಹರಡುವವರೇ ವೈದ್ಯರಾಗಬೇಕಾದ ವಿಲಕ್ಷಣ ಸಂದರ್ಭವಿದು. ದುಂದುಗಾರಿಕೆಯಲ್ಲಿ ಮೊದಲನೆಯದಾಗಿ ಅಮೆರಿಕ ನಿಂತರೆ, ಕ್ರಮವಾಗಿ ಚೀನಾ ಮತ್ತು ಭಾರತಗಳು ಎರಡು ಮತ್ತು ಮೂರನೇ ಸ್ಥಾನವನ್ನು ಹಂಚಿಕೊಂಡಿವೆ. 

ಆಣೆಕಟ್ಟುಗಳು ದೇಶದ ದೇವಾಲಯಗಳಿದ್ದಂತೆ ಎಂದು ದೇಶದ ಮೊದಲನೇ ಪ್ರಧಾನಿ ನೆಹರು ಹೇಳುತ್ತಾ ಅನೇಕ ಕಡೆಗಳಲ್ಲಿ ಜಲವಿದ್ಯುತ್ ಯೋಜನೆಗಳಿಗೆ ಅನುಮತಿ ನೀಡಿದರು. ಯಾವುದೇ ಸರ್ಕಾರಗಳು ಬರಲಿ, ನಮ್ಮಲ್ಲಿ ಅನುಕೂಲಸಿಂಧು ಪ್ರವೃತ್ತಿ ಹೆಚ್ಚು ಇದೆ ಎಂದು ಘಂಟಾಘೋಷವಾಗಿ ಹೇಳಬಹುದು. ಕೇಂದ್ರ ಸರ್ಕಾರದ ಇಲಾಖೆಗಳಿಗೂ, ರಾಜ್ಯ ಸರ್ಕಾರದ ಇಲಾಖೆಗಳಿಗೂ ತಾಳಮೇಳವಿಲ್ಲ. ಲೋಕೋಪಯೋಗಿಯವರು ಹೊಸದಾಗಿ ರಸ್ತೆ ನಿರ್ಮಿಸಿದ ಮರುದಿನ ದೂರವಾಣಿ ಇಲಾಖೆಯವರು ಬಂದು ಆ ಹೊಸ ರಸ್ತೆಯನ್ನು ಅಗೆದು ಕೇಬಲ್ ಹಾಕುವ ಕಾಯಕ ಮಾಡುತ್ತಾರೆ. ಒಂದೊಮ್ಮೆ ಯೋಜನೆಗಳಿಂದ ಅಪಾರ ಲಾಭವಿದೆಯೆಂದಾದರೆ, ಇಲಾಖೆಗಳು ಪರಸ್ಪರ ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ. ಇದು ಹೇಗೆ ಎಂಬುದನ್ನು ಉದಾಹರಣೆಯ ಮೂಲಕ ನೋಡೋಣ. 

ಕೇಂದ್ರದಲ್ಲಿ ಅರಣ್ಯ ಸಲಹಾ ಸಮಿತಿಯೊಂದಿದೆ. ಹೆಸರೇ ಹೇಳುವಂತೆ ಅರಣ್ಯ ರಕ್ಷಣೆಗಾಗಿ ಕೆಲಸ ಮಾಡಬೇಕಾದ ಸಮಿತಿಯಿದು. ಇದಲ್ಲದೆ ಅರಣ್ಯ ಸರ್ವೇಕ್ಷಣಾ ಇಲಾಖೆಯಿದೆ, ಜೊತೆಗೆ ಇದಕ್ಕಿಂತ ಹೆಚ್ಚಿನ ಅಧಿಕಾರ ಹೊಂದಿದ ಪರಿಸರ-ಅರಣ್ಯ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಮುಖ್ಯವಾದ ಇಲಾಖೆ ಮತ್ತು ಇದಕ್ಕೊಂದು ಮಂತ್ರಿವರ್ಯರು ಇದ್ದಾರೆ. ದೇಶದಲ್ಲಿ ವಿದ್ಯುತ್ ಬಡತನವಿದೆ, ಇದನ್ನು ನೀಗಿಸಲೇ ಬೇಕಾದ ಅನಿವಾರ್ಯತೆಯಿದೆ ಎಂದು ಪ್ರತಿಪಾಧಿಸುವ ರಾಷ್ಟ್ರೀಯ ವಿದ್ಯುಚ್ಛಕ್ತಿ ನಿಗಮವಿದೆ. ಅಭಿವೃದ್ದಿಗಾಗಿ ವಿದ್ಯುಚ್ಛಕ್ತಿಯ ಉತ್ಪಾದನೆ ಹೆಚ್ಚು ಮಾಡಲು ಇರುವ ಇಲಾಖೆಯಿದು. ಅರುಣಾಚಲ ಪ್ರದೇಶವೆಂದರೆ, ಗುಡ್ಡಗಾಡು ಪ್ರದೇಶ. ಇದೇ ರಾಜ್ಯದ ದಿಬಾಂಗ್ ಜಿಲ್ಲೆಯಲ್ಲಿ ಜಲವಿದ್ಯುತ್ ಯೋಜನೆಯನ್ನು ಪ್ರಾರಂಭಿಸಲು ಅಲ್ಲಿನ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಲ್ಲಾ ತಯಾರಿಗಳನ್ನು ನಡೆಸಿವೆ. ಪ್ರಾಥಮಿಕವಾಗಿ ೩೦೦೦ ಮೆ.ವ್ಯಾ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿವೆ. ಇದಕ್ಕೆ ದಿಬಾಂಗ್ ವಿವಿದ್ದೋದೇಶ ಯೋಜನೆಯೆಂದು ಹೆಸರಿಡಲಾಗಿದ್ದು, ಒಟ್ಟೂ ೫೦೫೭ ಹೆಕ್ಟರ್ ದಟ್ಟಾರಣ್ಯ ಪ್ರದೇಶವನ್ನು ಮುಳುಗಿಸುವ ಕಾರ್ಯಕ್ಕೆ ಮೇಲೆ ಹೇಳಿದ ಅರಣ್ಯ ಸಹಾ ಸಮಿತಿ ಒಪ್ಪಿಗೆ ನೀಡಿದೆ. ಯಥಾಪ್ರಕಾರ ಸ್ಥಳೀಯರು  ಸರ್ಕಾರದ ನೇರ ದೌರ್ಜನ್ಯವನ್ನು ಖಂಡಿಸುತ್ತಾರೆ. ಪ್ರತಿಭಟನೆಗೆ ಮಣಿದ ಸರ್ಕಾರಗಳು ಅದು ಹೇಗೋ ಒಂದೇ ವಾರದಲ್ಲಿ ತೇಪೆ ಹಚ್ಚಿದ ಇನ್ನೊಂದು ವರದಿಯನ್ನು ಪ್ರಕಟಿಸುತ್ತವೆ.  ೫೦೫೭ ಹೆಕ್ಟರ್ ಬದಲಿಗೆ ೪೫೭೮ ಹೆಕ್ಟರ್ ಅರಣ್ಯ ಪ್ರದೇಶವನ್ನು ಮಾತ್ರ ಮುಳುಗಿಸುತ್ತೇವೆ ಹಾಗೂ ಆಣೆಕಟ್ಟಿನ ಎತ್ತರವನ್ನು ೧೦ ಮೀಟರ್ ತಗ್ಗಿಸುತ್ತೇವೆ ಹಾಗೂ ಇದರಿಂದ ಅರಣ್ಯ ನಾಶ ಗಣನೀಯವಾಗಿ ಕಡಿಮೆಯಾಗುತ್ತದೆಯಾದ್ದರಿಂದ ಯೋಜನೆಯ ಅನುಷ್ಠಾನಕ್ಕೆ ಅಡ್ಡಿಯಿಲ್ಲ ಎಂಬುದೇ ತೇಪೆ ಹಚ್ಚಿದ ವರದಿಯ ಸಾರಾಂಶ. ಹೀಗೆ ಭಾರತದ ಅತಿದೊಡ್ಡ ಜಲವಿದ್ಯುತ್ ಯೋಜನೆಯನ್ನು ಕಾರ್ಯಗತಗೊಳಿಸಲು ಸರ್ಕಾರಗಳು ಹೊಂಚಿ ಕುಳಿತಿವೆ. ೨೦೧೩ರಲ್ಲಿ ಈ ಯೋಜನೆಯನ್ನು ಪರಾಮರ್ಶಿಸಿ, ಇದರಿಂದ ಅತ್ಯುತ್ತಮ ಅರಣ್ಯ ಪ್ರದೇಶ ನಾಶವಾಗುತ್ತದೆ, ಸುಮಾರು ೩.೫ ಲಕ್ಷ ಬಲಿತ ಮರಗಳನ್ನು ಹನನ ಮಾಡಬೇಕಾಗುತ್ತದೆ. ಲೆಕ್ಕವಿಲ್ಲದಷ್ಟು ಜೀವಿವೈವಿಧ್ಯ ನಾಶವಾಗುತ್ತದೆ ಎಂಬ ಕಾರಣಕ್ಕೆ ಅನುಮತಿ ನೀಡಲು ನಿರಾಕರಿಸಲಾಗಿತ್ತು. ಹಾಲಿ ಗುಜರಾತ್‌ನ ನರ್ಮದಾ ನದಿಗೆ ಅಡ್ಡಲಾಗಿ ಕಟ್ಟಿದ ಸರ್ದಾರ್ ಸರೋವರಕ್ಕಿಂತ ದುಪ್ಪಟ್ಟು ದೊಡ್ಡದಾದ ಈ ಯೋಜನೆಯಿಂದಾಗಿ ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯದ  ಹಲವು ಜಿಲ್ಲೆಗಳಿಗೆ ಪ್ರತಿಕೂಲ ಪರಿಣಾಮಗಳಾಗುತ್ತವೆ. ಅಲ್ಲದೆ, ವನ್ಯಜೀವಿ ಕಾಯ್ದೆ ೧೯೭೨ ಪರಿಚ್ಛೇದ ೧ರಲ್ಲಿ ಬರುವ ಮತ್ತು ಆಹಾರ ಸರಪಣಿಯ ತುತ್ತತುದಿಯಲ್ಲಿರುವ ಹಲವು ಮುಖ್ಯವಾದ ಪ್ರಾಣಿಪ್ರಭೇದಗಳಿರುವ (ಹುಲಿ, ಸಿಂಹ, ಚಿರತೆ, ಗಿಬ್ಬನ್ ಮಂಗ, ಘೇಂಡಾ, ಆನೆ) ಮೆಹಾವ್ ಅಭಯಾರಣ್ಯ ಈ ಉದ್ದೇಶಿತ ಯೋಜನಾ ಪ್ರದೇಶದ ಹತ್ತಿರದಲ್ಲಿದೆ. ಅಸ್ಸಾಂನ ದಿಬ್ರು ರಕ್ಷಿತಾರಣ್ಯದ ಸಮೀಪದವರೆಗೆ ಮುಳುಗಡೆಯಾಗುವ ಅಪಾಯವೂ ಇದೆ. 

ಅಧಿಕಾರದ ಎತ್ತರದ ಸ್ಥಾನದಲ್ಲಿರುವ ವ್ಯಕ್ತಿಗಳಿಗೆ ಈ ನಿರಾಕರಣ ವರದಿ ಅಷ್ಟಾಗಿ ಹಿಡಿಸಲಿಲ್ಲ. ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ನಡೆಯುವ ಯೋಜನೆಗೆ ಅಡ್ಡಗಾಲು ಹಾಕುವ ಅರಣ್ಯ ನೀತಿ-ನಿಯಮಗಳು ಇವರಿಗೆ ಕಹಿಯಾಗಿದೆ. ಯೋಜನೆ ಜಾರಿಯಾದಲ್ಲಿ, ಉನ್ನತ ಸ್ತರದ ಹಲವು ವ್ಯಕ್ತಿಗಳಿಗೆ ಹಲವು ತರಹದ ಲಾಭಗಳಿವೆ. ೩.೫ ಲಕ್ಷ ಮರಗಳಿಂದ ಬರುವ ಆದಾಯವೇ ಕೋಟಿ-ಕೋಟಿಗಳಾಗುತ್ತವೆ. ಆಣೆಕಟ್ಟು ನಿರ್ಮಿಸುವಲ್ಲಿ ಬಳಕೆಯಾಗುವ ಕಬ್ಬಿಣ, ಸಿಮೆಂಟ್, ಬೃಹತ್ ಯಂತ್ರಗಳ ಗುತ್ತಿಗೆ, ಕೆಲಸಗಾರರಿಗೆ ನೀಡುವ ಸಂಬಳ-ಭತ್ಯೆ, ಇವರಿಗಾಗಿ ನಿರ್ಮಿಸುವ ತಾತ್ಕಾಲಿಕ ಮನೆಗಳು, ಊಟ-ವಸತಿ-ಆರೋಗ್ಯ ಹೀಗೆ ಈ ಮೂಲಗಳಿಂದ ಚಲಾವಣೆಯಾಗುವ ಅಪಾರ ಪ್ರಮಾಣದ ಹಣ ಇತ್ಯಾದಿಗಳು ಅತಿಮುಖ್ಯ ಸಂಗತಿಗಳಾಗಿವೆ. ಈ ಯೋಜನೆಯ ಅನುಷ್ಠಾನಕ್ಕೆ ಪೂರಕವಾದ ವರದಿಯನ್ನು ನೀಡುವಾಗ ಇಲ್ಲಿನ ಜೀವಿವೈವಿಧ್ಯದ ಸೇವೆಯನ್ನು ಪರಿಗಣಿಸಲಾಗಿಲ್ಲ. ಇಲ್ಲಿ ವಾಸಿಸುವ ಗುಡ್ಡಗಾಡು ಜನಾಂಗಗಳ ಮೂಲಹಕ್ಕುಗಳನ್ನು ಕಾಪಾಡುವ ಯಾವ ಪ್ರಸ್ತಾಪವೂ ವರದಿಯಲ್ಲಿ ಉಲ್ಲೇಖಿಸಿಲ್ಲ. ಮುಳುಗಡೆಯಿಂದಾಗಿ ಸಂತ್ರಸ್ಥರಾಗುವ ಸಾಮಾನ್ಯಜನರಿಗೆ ಪರ್‍ಯಾಯವಾದ ಪರಿಹಾರವನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ. ಮುಳುಗಿಹೋಗಲಿರುವ ಅರಣ್ಯ ಪ್ರದೇಶಕ್ಕೆ ಪರ್‍ಯಾಯವಾಗಿ ಅರಣ್ಯ ನಿರ್ಮಿಸುವ ಯಾವುದೇ ಶಿಪಾರಸ್ಸುಗಳಿಲ್ಲ. ಆದರೂ ಯೋಜನೆಯನ್ನು ಜಾರಿಗೊಳಿಸಬೇಕೆಂಬ ಹುಂಬತನ ಸರ್ಕಾರಗಳದ್ದಾಗಿದೆ. ೩೦೦೦ ಮೆ.ವ್ಯಾ ಸಾಮರ್ಥ್ಯದ ಈ ಯೋಜನೆಯಿಂದ ಲಭ್ಯವಾಗುವ ವಿದ್ಯುತ್‌ನ್ನು ಕೋಲ್ಕತ್ತಾ ನಗರಕ್ಕೆ ೮ ರೂಪಾಯಿ ಯೂನಿಟ್‌ನಂತೆ ಮಾರಾಟ ಮಾಡಲು ನಿಶ್ಚಯಿಸಲಾಗಿದೆ. ಒಂದು ಯೂನಿಟ್ಟಿಗೆ ೮ ರೂಪಾಯಿ ನೀಡಿ ಖರೀದಿಸುವ ಬದಲಿಗೆ ಸೌರಶಕ್ತಿಯನ್ನು ಅಳವಡಿಸಿಕೊಳ್ಳುವುದೇ ಅಗ್ಗವಾಗುತ್ತದೆ. ಭೂತಾನ್ ದೇಶದಿಂದ ನಮ್ಮಲ್ಲಿಗೆ ವಿದ್ಯುತ್ ಅಮದಾಗುತ್ತದೆ. ಅವರು ಯೂನಿಟ್‌ಗೆ ಬರೀ ೨ ರೂಪಾಯಿಗಳನ್ನು ಪಡೆಯುತ್ತಾರೆ. ಒಟ್ಟಾರೆಯಾಗಿ ಇವರ ಅಭಿವೃದ್ಧಿಯ ಹಸಿವನ್ನು ತಣಿಸಿಕೊಳ್ಳುವುದಕ್ಕೆ ದೇಶದಲ್ಲಿ ವಿದ್ಯುತ್ ಬಡತನವಿದೆ ಎಂಬ ನೆಪ ನೀಡಿ ಕಾರ್ಯಸಾಧು ಮಾಡಿಕೊಳ್ಳಲು ಹೊರಟಿದ್ದಾರೆ. 

ಇಷ್ಟಕ್ಕೂ, ನವೀಕರಿಸಬಹುದಾದ ಇಂಧನಗಳ ತಂತ್ರಜ್ಞಾನ ಇವತ್ತು ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಸೌರಶಕ್ತಿಯನ್ನು ಸಂಚಯಿಸಿ ವಿದ್ಯುತ್ ಉತ್ಪಾದನೆ ಮಾಡುವ ಹಾಳೆಗಳ ದರ ಗಮನಾರ್ಹವಾಗಿ ಇಳಿಕೆಯಾಗಿದೆ. ಜರ್ಮನಿಯಂತಹ ಶೀತಪ್ರದೇಶ ದೇಶದಲ್ಲಿ ೩೭ ಸಾವಿರ ಮೆ.ವ್ಯಾ ವಿದ್ಯುಚ್ಚಕ್ತಿಯನ್ನು ಸೌರಶಕ್ತಿಯಿಂದ ಪಡೆಯಲಾಗುತ್ತದೆ. ಇದು ಆ ದೇಶದ ಒಟ್ಟು ವಿದ್ಯುಚ್ಛಕ್ತಿಯ ೩೦% ಉತ್ಪಾದನೆಯಾಗಿದೆ. ಸುಮಾರು ೬ ಲಕ್ಷ ಮನೆಗಳಲ್ಲಿ ಸೌರ ವಿದ್ಯುತ್ ಉತ್ಪಾದಿಸಲಾಗುತ್ತದೆ. ತಮಗೆ ಬೇಕಾದಷ್ಟು ವಿದ್ಯುತ್‌ನ್ನು ಬಳಸಿಕೊಂಡು, ಮಿಕ್ಕಿದ್ದನ್ನು ಸರ್ಕಾರಕ್ಕೆ ಮಾರುತ್ತಾರೆ. ಭಾರತದಲ್ಲಿ ಬಿಸಿಲಿಗೆ ಯಾವಾಗಲೂ ಬರವಿಲ್ಲ. ಆದರೂ ನಾವು ಸೌರ ವಿದ್ಯುತ್ ಉತ್ಪಾದನೆಯಲ್ಲಿ ಹಿಂದಿದ್ದೇವೆ. ಬರೀ ೨೬೦೦ ಮೆ.ವ್ಯಾ. ಸೌರವಿದ್ಯುತ್‌ನ್ನು ನಮ್ಮಲ್ಲಿ ಉತ್ಪಾದಿಸಲಾಗುತ್ತಿದೆ. ಯಥಾಪ್ರಕಾರ ಹವಾಮಾನ ಬದಲಾವಣೆಯೆನ್ನುವುದು ಒಂದು ಊರಿಗೆ, ರಾಜ್ಯಕ್ಕೆ ಅಥವಾ ದೇಶಕ್ಕೆ ಸಂಬಂಧಿದ ವಿಚಾರವಲ್ಲ. ಇದು ಇಡೀ ಜಗತ್ತಿನ ಎಲ್ಲಾ ಜೀವಕೋಟಿಗಳಿಗೆ ಸಂಬಂಧಿಸಿದ್ದು, ಹವಾಮಾನ ವೈಪರೀತ್ಯದಿಂದ ಸರಿಪಡಿಸಲಾರದ ಉತ್ಪಾತಗಳಾಗುತ್ತವೆ. ಹವಾಮಾನ ವೈಪರೀತ್ಯಕ್ಕೆ ಹೆಚ್ಚಿನ ಕಾರಣ ಮೇಲೆ ಹೇಳಿದ ಮೂರು ದೇಶಗಳು. ಅಮೆರಿಕಾ, ಚೀನಾ ಮತ್ತು ಭಾರತ. ೨೦೩೦ರ ಒಳಗಾಗಿ ಈ ದೇಶಗಳು ತಮ್ಮ ಇಂಧನ, ಕಲ್ಲಿದ್ದಲು ಬಳಸುವ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬೇಕಾಗುತ್ತದೆ. ಹೀಗಾದರೆ ಮಾತ್ರ ಈ ಭೂಮಿಯು ವಾಸಯೋಗ್ಯವಾಗಿ ಉಳಿಯುತ್ತದೆ. ಇದೇ ಸಮಯದಲ್ಲಿ ವಿದ್ಯುಚ್ಛಕ್ತಿಯ ಸ್ವಾವಲಂಬನೆಗಾಗಿ ಮುಂದಿನ ೫ ವರ್ಷಗಳಲ್ಲಿ ೧೫ ದಶಲಕ್ಷ ಕೋಟಿ ಬಂಡವಾಳವನ್ನು ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಹೂಡುವ ಗುರಿ ಇದೆ ಎಂದು ನಮ್ಮ ಕೇಂದ್ರ ಇಂಧನ ಸಚಿವರು ಹೇಳಿಕೆ ನೀಡಿದ್ದಾರೆ. ಇಷ್ಟು ದೊಡ್ಡ ಬಂಡವಾಳವನ್ನು ಕಲ್ಲಿದ್ದಲಿಗಾಗಿ ಖರ್ಚು ಮಾಡಿ, ಇದರಿಂದ ವಿದ್ಯುತ್ ಪಡೆಯುವುದರಿಂದ ಅದ್ಯಾವ ಪ್ರಮಾಣದ ಮಾಲಿನ್ಯವಾಗಬಹುದು ಎಂಬುದನ್ನು ಲೆಕ್ಕ ಹಾಕಲಾಗಿಲ್ಲ. ಇಂತಹ ಅಭಿವೃದ್ಧಿ ಯೋಜನೆಗಳಿಂದಲೇ ಹಲವು ತರಹದ ನೈಸರ್ಗಿಕ ವಿಕೋಪಗಳು ಸಂಭವಿಸುತ್ತವೆ. ಎಬೋಲಾದಂತಹ ಮಾರಕ ಕಾಯಿಲೆಗಳು ಪ್ರಪಂಚಾದ್ಯಂತ ಹರಡಲು ಕಾರಣವಾಗುತ್ತದೆ. ಇದನ್ನು ಬರೆಯುತ್ತಿರುವ ಹೊತ್ತಿನಲ್ಲೇ ದೇಶದಲ್ಲಿ ಹೊಸದಾಗಿ ಕಳೆದ ಜೂನ್‌ನಲ್ಲಿ ರಚನೆಯಾದ ರಾಜ್ಯ ತೆಲಂಗಾಣದಲ್ಲಿ ೩೫೮ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ಪ್ರತಿನಿತ್ಯ ೨ಕ್ಕಿಂತ ಹೆಚ್ಚು ರೈತರು ಆತ್ಮಾಹುತಿಯ ಮೊರೆ ಹೋಗಿದ್ದಾರೆ. ಹಾಗೂ ಇವರ ಸರಣಿ ಆತ್ಮಹತ್ಯೆಗೆ ಹವಾಮಾನ ವೈಪರೀತ್ಯವೇ ಕಾರಣ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.  

ಮೊನ್ನೆಯಷ್ಟೇ ಯೂರೋಪಿಯನ್ ರಾಷ್ಟ್ರಗಳ ಒಕ್ಕೂಟದ ೨೮ ದೇಶಗಳ ನಾಯಕರುಗಳು ಸೇರಿ ಹವಾಮಾನ ವೈಪರೀತ್ಯಕ್ಕೆ ಕಡಿವಾಣ ಹಾಕದಿದ್ದಲ್ಲಿ ಮುಂದೆ ಬಾರೀ ದೊಡ್ಡ ಅಪಾಯ ಕಾದಿದೆಯೆಂಬ ವಿಷಯದಲ್ಲಿ ಚರ್ಚೆ ನಡೆಸಲು ಸಭೆ ಸೇರಿದ್ದರು. ೨೦೧೫ರ ಡಿಸೆಂಬರ್ ತಿಂಗಳಲ್ಲಿ ಜಾಗತಿಕ ಹವಾಮಾನ ವೈಪರೀತ್ಯ ಸಭೆಯನ್ನು ಪ್ಯಾರೀಸ್ ಪಟ್ಟಣದಲ್ಲಿ ಆಯೋಜಿಸಲಾಗಿದ್ದು, ಜಾಗತಿಕ ಮಟ್ಟದಲ್ಲಿ ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕಡ್ಡಾಯವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಚರ್ಚೆ ನಡೆಸಲಾಯಿತು. ಈ ಸಭೆಯಲ್ಲೂ ಕೂಡ ಅಮೆರಿಕಾ, ಚೀನಾ ಮತ್ತು ಭಾರತ ದೇಶಗಳ ಭಾದ್ಯತೆಗಳು ಮತ್ತು ಆ ದೇಶಗಳು ತೆಗೆದುಕೊಳ್ಳಬಹುದಾದ ಸಂಭಾವ್ಯ ಪೂರಕ ನಿರ್ಣಯಗಳ ಮಾರ್ಗಸೂಚಿ ಏನು ಇರಬೇಕು ಎಂಬುದನ್ನೂ ಚರ್ಚಿಸಿ, ಈ ದೇಶಗಳ ನಾಯಕರುಗಳಿಗೆ ಮನದಟ್ಟು ಮಾಡುವ ಪ್ರಯತ್ನದ ಬಗ್ಗೆ ಕೂಡ ವಿಷಯ ಮಂಡನೆಯಾಯಿತು. 

ಇಂಟರ್‌ಗೌರ್‍ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್ (ಐ.ಪಿ.ಸಿ.ಸಿ) ಯ ೫ನೇ ವಾರ್ಷಿಕ ವರದಿ ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಐ.ಪಿ.ಸಿ.ಸಿಯ ಚೇರ್‌ಮನ್ ಆದ ಶ್ರೀ ರಾಜೇಂದ್ರ ಪಚೌರಿ ಈ ವರದಿಯ ಮುಖ್ಯಾಂಶಗಳನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದಾರೆ. ೮೦೦ ಜನ ವಿಜ್ಞಾನಿಗಳು ಅವಿರತವಾಗಿ ಶ್ರಮಿಸಿ ಈ ವರದಿಯನ್ನು ತಯಾರು ಮಾಡಿದ್ದಾರೆ. ಜಗತ್ತಿನ ಎಲ್ಲಾ ಖಂಡಗಳಿಗೂ ಭೂಜ್ವರದ ತಾಪ ತಟ್ಟಿದೆ. ಕಳೆದ ಶತಮಾನದ ಮಧ್ಯಭಾಗದಿಂದ ವಿಜ್ಞಾನ, ತಂತ್ರಜ್ಞಾನ, ಯಂತ್ರಗಳು ಈ ಜಗತ್ತನ್ನು ಅಕ್ಷರಷ: ಆಳುತ್ತಿವೆ. ಮನುಜಪ್ರಣೀತ-ಯಂತ್ರಅವಲಂಬಿತ ಯುಗದ ಆರಂಭದಿಂದಲೇ ಪ್ರಾರಂಭವಾದ ವೈಪರೀತ್ಯಗಳು ಭೂಆರೋಗ್ಯವನ್ನು ಕ್ಷಯದಂತೆ ಕಾಡುತ್ತಿವೆ. ಕಲ್ಲಿದ್ದಲು, ಪೆಟ್ರೋಲ್, ಡೀಸೆಲ್ ಇತ್ಯಾದಿ ಪಳೆಯುಳಿಕೆ ಇಂಧನಗಳು ಹಾಗೂ ಕೃಷಿ ಮತ್ತು ಇನ್ನಿತರ ಉಪಯೋಗಗಳಿಗಾಗಿ ಆದ ಕಾಡು ನಾಶ ಭೂಬಿಸಿಯೇರಿಕೆಗೆ ಕಾರಣವಾಗಿದೆ. ಈಗ ಉಪಯೋಗಿಸಲ್ಪಡುತ್ತಿರುವ ಪಳೆಯುಳಿಕೆ ಇಂಧನಗಳನ್ನು ೨೦೫೦ರ ವೇಳೆಗೆ ೮೦% ಕಡಿಮೆ ಮಾಡುವುದು ಹಾಗೂ ೨೧೦೦ರ ವೇಳೆಗೆ ಸಂಪೂರ್ಣವಾಗಿ ನಿಲ್ಲಿಸುವುದು ಮಾತ್ರ ಈ ಭೂಮಿಯನ್ನು ವಾಸಯೋಗ್ಯ ಸ್ಥಿತಿಯಲ್ಲಿಡಲಿಕ್ಕೆ ಸಾಧ್ಯವಾಗುತ್ತದೆ ಎಂಬ ಗಂಭೀರ ಎಚ್ಚರಿಕೆಯನ್ನು ಈ ವರದಿಯಲ್ಲಿ ನೀಡಲಾಗಿದೆ. 

ಇದು ಈ ಭೂಮಿಯೆಂಬ ಸುಂದರ, ವಾಸಯೋಗ್ಯ ಗ್ರಹದ ಪ್ರಸ್ತುತ ಪರಿಸ್ಥಿತಿ. ಈ ಮೊದಲೇ ಹೇಳಿದಂತೆ, ಖುದ್ದು ರೋಗವೇ ವೈದ್ಯನಾಗಬೇಕಾದ ವಿಲಕ್ಷಣ ಸ್ಥಿತಿಯಲ್ಲಿ ಮನುಜ ಜನಾಂಗವಿದೆ. ಪ್ರತೀ ದೇಶದ ಪ್ರತೀ ಪ್ರಜೆಯೂ ಒಟ್ಟಾಗಿ ಈ ಹೋರಾಟದಲ್ಲಿ ಭಾಗಿಯಾಗಬೇಕಾದ ಅನಿವಾರ್ಯತೆಯಿದೆ. ಸದ್ದಿಲ್ಲದೇ ಸಾವಿನ ಹತ್ತಿರಕ್ಕೆ ಹೋಗುತ್ತಿರುವ ಇಡೀ ಮನುಕುಲವೇ ಒಗ್ಗಟ್ಟಾಗಿ ಭೂಜ್ವರವನ್ನು ತಣಿಸಬೇಕಿದೆ. ಶಾಪವಾಗಿ ಪರಿಣಮಿಸಿದ ಅಂಧಾದುಂಧಿ ಅಭಿವೃದ್ದಿಗೆ ಕಡಿವಾಣ ಹಾಕಬೇಕಿದೆ. ದೊಡ್ಡ ಹೊಟ್ಟೆಯ ಕಾರ್ಪೊರೇಟ್ ವಲಯದ ರಾಕ್ಷಸ ಹಸಿವನ್ನು ಕಡಿಮೆ ಮಾಡಲು ಕರುಳು ಕತ್ತರಿಸಿ ಚಿಕ್ಕದು ಮಾಡುವ ಸರ್ಜರಿ ತಜ್ಞರ ಅವಶ್ಯಕತೆಯಿದೆ. ಭೂಮಿಯನ್ನೇ ನುಂಗುವ ಭೂಸುರರ, ಕಾಡನ್ನೇ ನುಂಗುವ ಕಾಡಾಸುರರ ಮಿತಿಮೀರಿದ ಲೋಭಕ್ಕೆ ಆಣೆಕಟ್ಟು ಕಟ್ಟುವ ಕೆಲಸವಾಗಬೇಕಿದೆ. ತಮ್ಮ ವೈಯಕ್ತಿಕ ಸ್ವಾರ್ಥಕ್ಕೆ ದೇಶವನ್ನೇ ಮಾರಲು ಹೊರಟ ದುರುದ್ಧೇಶಾಚಾರರ ಸಂಚನ್ನು-ಹೊಂಚನ್ನು ವಿಫಲಗೊಳಿಸಬೇಕಾದ ಜರೂರತ್ತು ಇದೆ. ಸ್ವರ್ಗಸದೃಶ ಭೂಮಿಯನ್ನು ನರಕಕೂಪವನ್ನಾಗಿ ಮಾಡಲು ಹೊರಟ ಹುನ್ನಾರವನ್ನು ವಿಫಲಗೊಳಿಸಬೇಕಿದೆ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x