ಕಿಟಕಿಯ ಕಂಬಿಗಳಿಗೆ ಒಣಗಿಸಿದ ಕರ್ಚೀಪು, ಟವೆಲುಗಳ ಸಂದಿಯಿಂದಲೇ ಇಣುಕಿದ್ದ ಸೂರ್ಯ, ಬಂಡೆಗಳ ಬಿರುಕಲ್ಲೇ ಅರಳೋ ನ್ಯಗ್ರೋಧದಂತೆ. ಅಲಾರಮ್ಮನ್ನೇ ಮೂರು ಬಾರಿ ಮಲಗಿಸುತ್ತಿದ್ದ ಆ ಮಲಗುವೀರನ ಕಷ್ಟಪಟ್ಟು ಎಬ್ಬಿಸುತ್ತಿದ್ದ ನಿತ್ಯದ ಆ ಸೂರ್ಯರಶ್ಮಿಗಳಿಗೂ ಅಂದ್ಯಾಕೋ ಆತ ಮಲಗಿದ್ದ ಪರಿ ಕಂಡು ಅಯ್ಯೋ ಪಾಪ ಅನಿಸಿತ್ತು. ರಾತ್ರಿಯ ಚಳಿಗೋ, ಬಿದ್ದ ಕೆಟ್ಟ ಕನಸಿಗೋ ನಡುಗಿ, ಕಾಲುಗಳ ನಡುವೆ ಕೈಯಿಟ್ಟು ಮುದುರಿ ಮಲಗಿರೋ ಮಗುವ ಕಂಡು ಕರಗಿದ ತಾಯಿಯ ಅಂತಃಕರಣದಂತಾಗಿತ್ತು ರವಿಯ ಕಿರಣಗಳ ಕತೆಯಿಂದು. ಈತನ ರೂಮ ಹೊಕ್ಕ ಅವು ನಿತ್ಯದಂತೆ ಕಣ್ಣು ಕುಕ್ಕಿ ಎಬ್ಬಿಸದೇ ಹಾಗೇ ಹೊರಡಲಣಿಯಾಗಿದ್ದವು, ಮಲಗಿದ್ದ ಕಂದನ ತಟ್ಟಿ ಎಬ್ಬಿಸೋ ಬದಲು ಅವನ ಹೊದಿಕೆ ಸರಿಮಾಡಿ ಇನ್ನೊಂದಿಷ್ಟು ಹೊತ್ತು ಮಲಗಲು ಬಿಟ್ಟ ತಾಯಿಯಂತೆ. ಆದರೂ ಹೇಗೋ ಎಚ್ಚರಾದ ಅವ ಸುತ್ತ ಕಣ್ಣರಳಿಸಿದ್ದ. ಕತ್ತಲ ಗುಡಿಸುತ್ತಾ,ಬೆಳ್ಳನೆ ಪ್ರಭೆಯೆರಚುತ್ತಾ ಬೆಳಗಾಗುತ್ತಿತ್ತಲ್ಲಿ. ಮೂಲೆಯಲ್ಲೆಲ್ಲೋ ಬಿದ್ದ ಗಡಿಯಾರದಲ್ಲಿ ಸಮಯವೆಷ್ಟು ಅಂತ ನೋಡೋಕೆ ಹೊರಳಿದ್ರೆ, ಅದೆಲ್ಲಿತ್ತೋ ಏನೋ ಕೈಕಾಲೆಲ್ಲಾ ನೋವು. ಉರಿಯುತ್ತಿದ್ದ ಕಣ್ಣುಗಳನ್ನ ಕಷ್ಟಪಟ್ಟು ಬಿಟ್ಟು ನೋಡಿದ್ರೆ ಅರೆ ಇನ್ನೂ ಆರೂವರೆ. ಅಲಾರಂ ಹೊಡಿಯೋಕೆ ಕಾಲು ಘಂಟೆ ಮುಂಚೆಯೇ ಎದ್ದ ಈ ಅಪರೂಪದ ಪ್ರಸಂಗದಿಂದ ಖುಷಿಯಾದ್ರೂ ಉರಿಯುತ್ತಿದ್ದ ಕಣ್ಣುಗಳಲ್ಲಿ ಕಿಟಕಿಯಾಚೆಯ ಸೂರ್ಯಕಾಂತಿಯನ್ನು ದಿಟ್ಟಿಸಲಾಗದೇ ಹಾಗೇ ಹೊದ್ದು ಮಲಗಿಬಿಟ್ಟನಾತ . ಹೇಗಿದ್ರೂ ಮತ್ತೆ ಎಬ್ಬಿಸೋ ಅಲಾರಮ್ಮಿನ ಭರವಸೆಯಲ್ಲಿ.
ಅಲಾರಮ್ಮಿನ ಮೊದಲ ಕರೆಗೇ ಎದ್ದಿದ್ದ ರಾಮನಿಗೆ ಸ್ನಾನವಾದರೂ ಏನೋ ಒಂಥರಾ ಆಲಸ್ಯ.ಪೇಪರ ಕಣ್ಣಾಡಿಸುತ್ತಲೇ ಲೇಟಾಗಿ ಆಫೀಸು ಬಸ್ಸು ತಪ್ಪಿಸಿಕೊಂಡವ ಅದನ್ನು ಎಂದಿನಂತೆ ಆಫೀಸಿಗೆ ಕೊಂಡೊಯ್ಯೋ ಬದಲು ತಿಂಡಿ ತಿಂದಲ್ಲೇ ಮರೆತಿದ್ದ. ನಡೆದು ಹೋದರೆ ಇಪ್ಪತ್ತು ನಿಮಿಷದ ಆ ದಾರಿ ಅಂದಿನ ವಿಪರೀತ ಟ್ರಾಫಿಕ್ಕಿನಿಂದ ಮುಕ್ಕಾಲು ಘಂಟೆ ತೆಗೆದುಕೊಂಡಿತ್ತು. ತಾವೇ ದಿನಾ ಲೇಟಾಗಿ ಬರೋ ಸಹೋದ್ಯೋಗಿಗಳು ಅಂದು ರಾಮ ಲೇಟಾಗಿ ಬಂದದ್ದು ಮಹಾಪರಾಧವಾಗಿರುವಂತೆ ಆಡಿಕೊಂಡಿದ್ರು. ಅದೆಷ್ಟೋ ದಿನಗಳು ಕಷ್ಟಪಟ್ಟಿದ್ದ ಪ್ರೆಸೆಂಟೇಷನ್ನನ್ನು ಗ್ರಾಹಕರಿಗೆ ತೋರಿಸೋ ಆ ದಿನದಲ್ಲಿ ಅವನ ಕಂಪ್ಯೂಟರಿನ ಕೆಲವು ಪ್ರೋಗ್ರಾಂಗಳು ಆಶ್ಚರ್ಯವೆನ್ನುವಂತೆ ಕೈಕೊಟ್ಟು ಎಲ್ಲರೆದುರು ಮುಜುಗರಕ್ಕೊಳಗಾಗಿದ್ದ. ಮಧ್ಯಾಹ್ನವಾದರೂ ತನಗೆ ನೀರು ತುಂಬಿಸಲೇ ನೆನಪಾಗಿಲ್ಲ ಅಂತ ಬೆಳಗ್ಗೆ ತಂದಿದ್ದ ಖಾಲಿ ನೀರಿನ ಬಾಟಲು, ಒಣಗಿದ ಗಂಟಲು ಹೇಳ್ತಿದ್ರೂ ಅದರತ್ತ ಗಮನ ಹರಿದಿರಲಿಲ್ಲ. ತಮ್ಮ ಟೀಮಿನ ಮೀಟಿಂಗ್ ನಡೆಯಬೇಕಾಗಿದ್ದ ರೂಮಿನ ಬದಲು ಅದರ ಪಕ್ಕದ ರೂಮಲ್ಲಿ ಕೂರಲು ಹೋಗಿದ್ದ, ನಿತ್ಯ ಮಾಡೋ ಸಣ್ಣ ಕೆಲಸದಲ್ಲೇ ಅದೆಷ್ಟೋ ತಪ್ಪು ಮಾಡಿ ಮ್ಯಾನೇಜರಿಂದ ಚೆನ್ನಾಗಿ ಬಯ್ಯಿಸಿಕೊಂಡಿದ್ದ. ಒಟ್ನಲ್ಲಿ ಒಂದಿಡೀ ದಿನವೇ ಹಾಳಾದ ಬೇಸರಕ್ಕೆ ತನ್ನ ಒಂದು ನಿರ್ಧಾರವನ್ನೇ ಶಪಿಸೋಕೆ ಶುರು ಮಾಡಿತ್ತು ಒಂದು ಭಾವ. ಆಗೋದೆಲ್ಲಾ ಒಳ್ಳೇದಕ್ಕೆ. ಇನ್ನೊಂದು ಸ್ವಲ್ಪ ಸಮಾಧಾನದಿಂದಿರು. ಇನ್ನೊಂಚೂರೇ ಹೊತ್ತು ಅಂತ ಸಂಜೆಯವರೆಗೆ ಮನದ ಸ್ವಾಸ್ಥ್ಯ ಕಾದಿತ್ತು ಮತ್ತೊಂದು ಭಾವ.
ಎಂದಿನಂತೆ ಸಂಜೆ ನಡೆದೇ ಮನೆಗೆ ಹೊರಟ. ದಿನಾ ಓಡಾಡುತ್ತಿದ್ದ ಅದೇ ರಸ್ತೆಯ ಹಸಿರು ಮರಗಳು ಇಂದೇಕೋ ಬಹಳವೇ ಚೆನ್ನಾಗಿ ಕಾಣುತ್ತಿದ್ದವು!. ತೋಟದಲ್ಲಿ ಕಾಣ್ತಿದ್ದ ಹಳದಿ, ಬಿಳಿ, ಕರಿ-ಬಿಳಿ ಪಟ್ಟೆ ಪಟ್ಟೆಯ ಸ್ಕಿಪ್ಪರ್,ಪಿರೆಟ್ ಚಿಟ್ಟೆಗಳು ಅಂದು ರಸ್ತೆಯಲ್ಲೇ ಎದುರು ಸಿಕ್ಕಿದ್ದಕ್ಕೂ, ರಸ್ತೆ ಬದಿಯ ಗಿಡವೊಂದರ ಮೇಲೆ ಓಡಾಡುತ್ತಿದ್ದ ಹಾರೋ ಜೇಡ(jumping spider) ಕಣ್ಣಿಗೆ ಬಿದ್ದ ಖುಷಿಗೂ ಹಿಂದಿನ ಸಂಬಂಧವೂ ಅರ್ಥವಾಗಲಿಲ್ಲ. ದಿನಾ ಹೀಗೆ ಇದ್ದು ತಾನೇ ಗಮನಿಸುತ್ತಿರಲಿಲ್ಲವೋ ಅಥವಾ ಬೆಳಗ್ಗಿಂದ ಹಾಳಾದ ತನ್ನ ದಿನಕ್ಕೊಂದಿಷ್ಟು ಖುಷಿ ತರಲೆಂದೇ ಇವೆಲ್ಲಾ ಈಗ ಕಾಣಿಸುತ್ತಿದೆಯೋ ಎಂಬ ದ್ವಂದ್ವಕ್ಕೆ ಕೊನೆಗೂ ಉತ್ತರ ದಕ್ಕಲಿಲ್ಲ. ಸುತ್ತಣ ಪ್ರಕೃತಿಯನ್ನು ಆನಂದಿಸುತ್ತಾ ಮುಂದೆ ಸಾಗುವ ಹೊತ್ತಿಗೆ ತಮ್ಮ ಖಾಯಂ ಪಾನ್ ಅಂಗಡಿ ಸಿಕ್ಕಿತು. ಹೆಸರಿಗೆ ಪಾನಂಗಡಿಯಾಗಿದ್ರೂ ಅಲ್ಲಿಗೆ ಜನ ಬರ್ತಿದ್ದಿದೆಲ್ಲಾ ಸಿಗರೇಟೋ, ಗುಟ್ಕಾವನ್ನೋ ಕೊಳ್ಳಲು! ತಮ್ಮ ಖಾಯಂ ಗಿರಾಕಿ ಕಂಡೂ ಕಾಣದಂತೆ ಮುಂದೆ ಸಾಗ್ತಿರೋದನ್ನ ಗಮನಿಸಿದ ಆಶ್ಚರ್ಯದಲ್ಲಿ ಪಾನಂಗಡಿಯವನಿದ್ರೆ ತನ್ನೂರಿನ ನೆನಪುಗಳಲ್ಲಿ ಮುಳುಗಿಹೋಗಿದ್ದ ರಾಮ.
ಮಲೆನಾಡ ಮಡಿಲಲ್ಲಿ ಒಂದು ಊರು. ನಾಡಿಗೆ ಬೆಳಕ ಕೊಡಲು ತಮ್ಮ ಹೊಲ ಮನೆಗಳ ಜೊತೆಗೆ ತಮ್ಮ ಬದುಕನ್ನೇ ಶರಾವತಿಯ ಮಡಿಲಿಗೆ ಒಡ್ಡಿದ್ದ ಇವನ ಪೂರ್ವಜರು ವಲಸೆ ಬಂದು ನೆಲೆಸಿದ್ದ ಜಾಗ ಅದು. ಹುಟ್ಟೂರು ಬಿಟ್ಟರೂ ನೆಲದ ಋಣ ಕಡಿದು ತೀರಾ ದೂರ ಬರಲಾಗದ ಅವರು ಶರಾವತಿಯ ಹಿನ್ನೀರ ದಾಟಿ ಒಂದು ಗುಡ್ಡದ ಮಡಿಲಂತಿದ್ದ ಆ ಊರಲ್ಲಿ ನೆಲೆಸಿದ್ದರು. ಇವರ ಊರ ಮತ್ತು ಪಟ್ಟಣದ ಮಧ್ಯೆ ಶರಾವತಿಯ ಹಿನ್ನೀರು. ಕೆಲವೆಡೆ ಆಳವಿದ್ದರೆ ಕೆಲವೆಡೆ ಲಘುವದು. ಸರ್ಕಾರಕ್ಕೆ ಒಂದು ಸೇತುವೆ ನಿರ್ಮಿಸಿಕೊಡಿ ಅಂತ ಕೊಟ್ಟ ಅರ್ಜಿಗಳ ಲೆಕ್ಕ ಮರೆತ ಜನ ನೀರ ಆಳವಿಲ್ಲದಿದ್ದೆಡೆ ದೋಣಿ ದಾಟಿಯೇ ಪೇಟೆಗೆ ಬರೋದನ್ನ ರೂಢಿ ಮಾಡಿಕೊಂಡಿದ್ದರು. ಅಲ್ಲಿ ದೋಣಿ ನಡೆಸುತ್ತಿದ್ದವ ಈಗಿನ ರಾಮನ ಹೆಸರಿನವನೇ. ಅಂದ್ರೆ ದೋಣಿ ರಾಮಣ್ಣ ಅಥವಾ ಸಣ್ಣ ಹುಡುಗರ ಪಾಲಿನ ದೋಣಿ ರಾಮಜ್ಜ. ವರ್ಷಾಂತ್ಯದಲ್ಲಿ ಮನೆ ಮನೆಗೆ ಬಂದು ಒಂದಿಷ್ಟು ಅಕ್ಕಿ,ಅಡಕೆಯನ್ನೋ ದುಡ್ಡನ್ನು ಸಂಗ್ರಹಿಸಿಕೊಂಡು ಹೋಗುತ್ತಿದ್ದ ರಾಮಣ್ಣನ ಕೈಯಲ್ಲಿ ಸದಾ ಇರುತ್ತಿದುದು ಒಂದು ಬೀಡಿ ಮುಂಡು ಅವನ ಹೆಗ್ಗುರುತೇ ಆಗೋಗಿತ್ತು. ಅಮ್ಮೋರು ಬಂದ್ರು ಅಂತ ಇವನ ಅಮ್ಮನೋ ದೊಡ್ಡಮ್ಮನೋ ಅಥವಾ ಊರಿನ ಯಾವುದೇ ಸ್ತ್ರಿಯರು ಬಂದಾಗ ತನ್ನ ಬೀಡಿ ಮುಂಡನ್ನು ಮರೆ ಮಾಡುತ್ತಿದ್ದುದು ಬಿಟ್ರೆ ಅವನ ಬಾಯಲ್ಲಿ ಬೀಡಿಯಿಲ್ಲದೇ ಕಂಡದ್ದೇ ಇಲ್ಲವೆನ್ನುವಷ್ಟು ಕಮ್ಮಿ ! ಅದೆಂತ ಯಾವಾಗ್ಲೂ ಬೀಡಿ ಸೇದ್ತ್ಯ ರಾಮ. ತೆಗ್ಯ. ಹೊಗೆ ಕುಡ್ದು ಕುಡ್ದೇ ಸತ್ತೋಗ್ತೆ ನೀನು. ತೆಗಿ ಸಾಕು ಅಂತ ಇವನ ಅಪ್ಪಯ್ಯ ಬೈದಾಗ ಏನೋ ಸಮಜಾಯಿಷಿ ಕೊಡೋಕೆ ಹೋಗಿ ಅಪ್ಪನ ಮೇಲಿನ ಗೌರವಕ್ಕೋ , ಅವರ ತರ್ಕದ ಮೇಲಿನ ಗೌರವಕ್ಕೋ ಸ್ವಲ್ಪ ಹೊತ್ತು ಬೀಡಿ ಬದಿಗಿಟ್ಟದ್ದು ಬಿಟ್ರೆ ಬೀಡಿಗೂ ರಾಮಣ್ಣನಿಗೂ ಗಳಸ್ಯ ಕಂಠಸ್ಯವೆನ್ನುವಂತಾ ಸಂಬಂಧ ! ಹೈಸ್ಕೂಲಿನ ಕೊನೇ ವರ್‍ಷಕ್ಕೆ ಹೋಗುವಾಗ ಒಮ್ಮೆ ತಡೆಯಲಾರದೇ ಕೇಳೂ ಬಿಟ್ಟಿದ್ದ ಇವ ರಾಮಣ್ಣನಿಗೆ. ಎಂತಾ ರಾಮಣ್ಣ ಈ ನಮ್ನಿ ಕೆಮ್ತೆ . ಆದ್ರೂ ಈ ಬೀಡಿ ಸೇದೂದು ಬಿಡಕಾಗ್ತಲ್ಯ ಅಂತ. ಸರಿ ಹೇಳ್ತ್ರಿ ಸಣ್ಣೆಗ್ಡೇರೆ. ಆದ್ರೆ ಎಂತ ಮಾಡುದು ? ಇದೊಂತರ ನಸರಿ ಮ್ಯಾಣ ಇದ್ದಂಗೆ ನಾ ಎಷ್ಟು ಬಿಡ್ತೆ ಅಂದ್ರೂ ನನ್ನ ಬಿಡೂದಿಲ್ಲೆ ಇದು. ನನ್ನ ಪ್ರಾಣ ತೆಗ್ದೇ ಕೊನೆಯಾಗೂದೇನ ಇದು ಅಂತ ಕೆಮ್ಮಿದ್ದ. ಹೇ. ಹಂಗೆಲ್ಲ ಹೇಳೂಕಾಗ ಬಿಡ್ತು ಅನ್ನು ಅಂತ ಸಮಾಧಾನದ ಮಾತಾಡಿದ್ದ ಇವನಿಗೆ ಕಾಲೇಜಿಗೆ ಸೇರಿ ಕೆಲವೇ ದಿನಗಳಲ್ಲಿ ಉಸಿರಾಟದ ತೊಂದ್ರೆಯಿಂದ ರಾಮಣ್ಣ ಸತ್ತಿದ್ದ ಸುದ್ದಿ ಸಿಕ್ಕಿತ್ತು !
ಪಿಯುಸಿ ಓದೋಕೇಂತ ಪಟ್ಟಣದ ಕಾಲೇಜಿಗೆ ಕಳಿಸೋಕೆ ಅಪ್ಪ ಒಪ್ಪಿದ್ರೂ ಅಮ್ಮಂಗೆ ಹೆದರಿಕೆ. ಪಟ್ಟಣದಲ್ಲಿ ಓದಿ ಬಿಟ್ರೆ ಮಕ್ಳು ಹಾಳಾಗಿ ಬಿಡ್ತಾರೆ ಅನ್ನೋದು ಅವಳ ಭಯ. ಏ,ಹಾಳಾಗೋರು ಎಲ್ಲಿದ್ರೂ ಹಾಳಾಗ್ತ. ನಿನ್ನ ಮಗರಾಯನ ಮೇಲೆ ನಂಬಿಕೆ ಇಲ್ಯಾ ನಿಂಗೆ ಅಂತ ಸಮಾಧಾನ ಮಾಡಿದ ಅಪ್ಪ, ಅಮ್ಮನ ಒಪ್ಪಿಸಿ ಪಟ್ಟಣಕ್ಕೆ ಕಳಿಸಿಕೊಟ್ಟಿದ್ರು. ಮೊದ ಮೊದ್ಲು ಎಲ್ಲಾ ಚೆನ್ನಾಗೇ ಇತ್ತು. ಆದ್ರೆ ಸಿಕ್ಕ ಸ್ನೇಹಿತರ ಸಹವಾಸ ಮಾದಕ ವ್ಯಸನ ಅನ್ನೋ ಕಡೆಗೆ ಎಳೆಯೋಕೆ ವಿಪರೀತ ಅನ್ನೋ ಅಷ್ಟು ಜಾಸ್ತಿಯಾಯ್ತು. ಒಂದು ದಮ್ಮೆಳೆಯೋ. ಏನೂ ಆಗಲ್ಲ. ಒಂದು ಪೆಗ್ ಹಾಕಿದ್ರೆ ಏನು ಕಿಕ್ಕೂ ಏರಲ್ಲ ಕಣೋ. ಜೀವನ ಅಂತಿರೋದನ್ನ ಎಂಜಾಯ್ ಮಾಡ್ಬೇಕು ಕಣಮ್ಮ. ಏನು ಗಾಂಧಿ ತರಾ ಇರ್ತೀಯ ಅನ್ನೋ ಒತ್ತಾಯ ಪೂರ್ವಕ ಮಾತುಗಳನ್ನ ತಳ್ಳಿಹಾಕೋದು ತುಂಬಾ ಅಂದ್ರೆ ತುಂಬಾನೇ ಕಷ್ಟವಾಗಿತ್ತು. ನಮ್ಮದು ಬಡಕುಟುಂಬ. ಇಂಥಾ ಹವ್ಯಾಸಗಳಿಗೆಲ್ಲಾ ಒಳಗಾದ್ರೆ ಅದಕ್ಕೆ ಬೇಕಾದ ದುಡ್ಡನ್ನು ಅಪ್ಪ-ಅಮ್ಮನತ್ರ ಹೆಂಗೆ ಕೇಳೋದು ಅನ್ನೋ ವಿವೇಚನೆಯೇ ಇದ್ಯಾವ ಚಟಕ್ಕೂ ಒಳಗಾಗದಂತೆ ಕಾದಿತ್ತಾ ಗೊತ್ತಿಲ್ಲ. ಅಂತೂ ಅತ್ಯುತ್ತಮ ದರ್ಜೆಯಲ್ಲಿ ಪಾಸ್ ಮಾಡಿ ಉನ್ನತ ವ್ಯಾಸಂಗಕ್ಕೆ ತೆರಳಿದ ಇವ. ಅಲ್ಲೂ ಉತ್ತಮ ವಿದ್ಯಾರ್ಥಿ ಅಂತ್ಲೇ ಹೆಸರು ಗಳಿಸಿದ್ದ ರಾಮನಿಗೆ ಅದು ಮುಗಿದು ಯಾವಾಗ ಕೆಲಸ ಸಿಕ್ಕಿತೋ ನೋಡಿ. ಎಲ್ಲಾ ಬದಲಾಗಿ ಹೋಯ್ತು.
ಒಳ್ಳೇ ಕಂಪನಿಯಲ್ಲಿ ಕೆಲಸ. ಕೈತುಂಬಾ ಸಂಬಳ. ಸಾಲದ್ದಕ್ಕೆ ಎರಡೋ ಮೂರು ವಾರಕ್ಕೊಮ್ಮೆಯಂತೆ ಒಂದೊಂದು ಪಾರ್ಟಿ. ಮೊದಲೆಲ್ಲಾ ಕಂಪೆನಿಯ, ಸಹೋದ್ಯೋಗಿಗಳ ಪಾರ್ಟಿಗೆ ಅವರಿಗೆ ಬೇಜಾರಾಗತ್ತೆ ಅಂತ ಸುಮ್ಮನೇ ಹೋಗುತ್ತಿದ್ದ ರಾಮನಿಗೆ ಇದ್ರದ್ದೂ ಒಂದು ರುಚಿ ನೋಡೋಣ ಅನ್ಸೋಕೆ ಶುರು ಆಯ್ತು. ರುಚಿ ನೋಡೋಕೆ ಅಂತ ಶುರುವಾದ ಬೀರು, ರಮ್ಮು, ವೋಡ್ಕಾಗಳ ಜೊತೆಗೆ ವೋಡ್ಕಾ, ಸ್ಕಾಚುಗಳು ಬಂದ್ವು. ಮುಂಚೆಯೆಲ್ಲಾ ಪಾರ್ಟಿಗಳಿಗೆ ಸೀಮಿತವಾಗಿದ್ದ ಎಣ್ಣೆ ನಂತರ ಇಲ್ಲದಿದ್ರೆ ರಾತ್ರಿ ನಿದ್ದೆಯೇ ಬರೋಲ್ಲ ಅನ್ನುವಂತಹ ಗೀಳಾಗಿ ಬದಲಾಯ್ತು. ರಾತ್ರಿಯಾದ್ರೆ ಎಣ್ಣೆಯ ಸಂಗದ ನಶೆ. ಅದ್ರೆ ಅದಿಲ್ಲದ ಹಗಲನ್ನು ಕಳೆಯೋದು ಹೇಗೆ ? ಎಣ್ಣೆಯಿಂದ ಅದೆಷ್ಟೋ ಸುಲಭವಾಗಿ ಮರೆಯುತ್ತಿದ್ದ ಆಫೀಸಿನ ಜಂಜಾಟಗಳನ್ನು ಹಗಲು ಹೊತ್ತಲ್ಲಿ ಮರೆಸೋಕೆ ಕಂಡ ಪರ್ಯಾಯವೇ ಸಿಗರೇಟು ! ಮೊದಲೆಲ್ಲಾ ಊಟ . ತಿಂಡಿನೂ ಖುರ್ಚಿಯ ಪಕ್ಕ ಕೊಟ್ರೆ ಇಡೀ ದಿನ ಕಂಪ್ಯೂಟರ್ ಬಿಟ್ಟು ಏಳಲ್ಲ ಅಂತ ಸಹೋದ್ಯೋಗಿಗಳಿಂದ ತಮಾಷೆಗೊಳಗಾಗ್ತಿದ್ದ ರಾಮನಿಗೆ ಈಗ ಗಂಟೆಗೊಂದೊಂದು ಬ್ರೇಕು ಬೇಕಾಯ್ತು. ಎಲ್ಲಾ ಹೊಗೆಯ ಮಹಿಮೆ ಅಂತ ಹೇಳ್ಬೇಕಂತೇನಿಲ್ಲ. ಮೊದಲೆಲ್ಲಾ ದಿನಕ್ಕೆ ಕೆಲವಿದ್ದ ಸಿಗರೇಟು ಕೊನೆಗೆ ಚೈನ್ ಸ್ಮೋಕರನ್ನಾಗಿ ಮಾರ್ಪಡಿಸಿತ್ತು. ನಾಲ್ಕೇ ತಿಂಗಳಲ್ಲಿ ಇಷ್ಟೆಲ್ಲಾ ಬದಲಾಗಿದ್ದ ರಾಮನಿಗೆ ತೊಂದ್ರೆಯಾಗುತ್ತಿದ್ದುದುಸಿಗರೇಟಿಂದ ಶುರುವಾಗಿದ್ದ ಕೆಮ್ಮಿನಿಂದಲ್ಲ ಊರಿಂದ ಅಮ್ಮನ ಫೋನ್ ಬಂದಾಗಷ್ಟೇ ! ಅವಳ ಫೋನ್ ಬಂದಾಗ ಕೆಮ್ಮೋದನ್ನ ಹೆಂಗೆ ತಪ್ಪಿಸಿಕೊಳ್ಳೋದು ಅಥವಾ ಕೆಮ್ಮಿದರೂ ಅದಕ್ಕೊಂದು ಕಾರಣ ಏನು ಕೊಡೋದು ಅನ್ನೋದೇ ರಾಮನ ಪಾಲಿಗೊಂದು ದೊಡ್ಡ ಸಾಹಸವಾಗಿತ್ತು.
ದಿನಗಳು ಉರುಳಿದಂತೆ ಹವ್ಯಾಸವಾಗಿದ್ದು ಹುಚ್ಚಾಯ್ತು. ಅವಿಲ್ಲದೆ ಜೀವನವೆ ನಶ್ವರ ಅನಿಸುವಷ್ಟರಮಟ್ಟಿಗಿನ ಚಟವಾಯ್ತು. ಸಿಗರೇಟು, ಸಿಗಾರು, ಚುಟ್ಟಾ, ತರತರದ ಮದ್ಯಗಳು.. ಹೀಗೆ ಒಂದು ಕಿಕ್ಕಿಗಾಗಿ ಮತ್ತು ಜೀವವನ್ನೇ ಸುಟ್ಟುಬಿಡುವಂತೆ ಕಾಡೋ ಚಿಂತೆಗಳಿಂದ ಮುಕ್ತಿ ಪಡೆಯಲೋಸುಗ ಹೊಕ್ಕದ ದಾರಿಗಳಿಲ್ಲ. ಕ್ರಮೇಣ ಈ ಚಿಂತೆಗಳಿಂದ ಒಂದು ಸಮಾಧಾನ ಕೊಡದಿದ್ದಾಗ ಮತ್ತೊಂದು, ಅದಾಗದಿದ್ದಾಗ ಇನ್ನೊಂದು .. ಹೀಗೆ ಹೊಸ ಹೊಸ ಮಾದಕಗಳ ಮೊರೆ ಹೋಗುತ್ತಲೇ ಹೋದ. ಕೈಯಲ್ಲೊಂದು ಸಿಗರೇಟೋ, ಎದುರಿಗೊಂದು ಪೆಗ್ಗೋ ಇರದಿದ್ದರೆ ಯಾವ ಕೆಲಸವನ್ನೂ ಮಾಡಲೇ ಆಗದಂತಹ ಪರಿಸ್ಥಿತಿ ಬಂದು ಆಫೀಸೊಳಗೆ ಸಿಗರೇಟು ಸೇದೋಕೆ,ಹೆಂಡ ತರೋಕೆ ನಿರ್ಬಂಧ ಹೇರಿದ್ದ ಹುಚ್ಚು ಜನರ ಬಗ್ಗೆ ವಿಪರೀತ ಸಿಟ್ಟು ಬಂದು ಬಿಡುತ್ತಿತ್ತು ! ಬರುತ್ತಿದ್ದ ಸಂಬಳವೆಲ್ಲಾ ಇದಕ್ಕೇ ಖರ್ಚಾಗುತ್ತಿದೆ, ಆರೋಗ್ಯ ಹಾಳಾಗ್ತಿದೆ, ಜೀವನದಲ್ಲಿ ಬೇರೆ ಏನು ಮಾಡೋಕೂ ಆಗದೇ ಅದೆಷ್ಟೋ ಸಣ್ಣ ಸಣ್ಣ ಖುಷಿಗಳನ್ನು ಕಳೆದುಕೊಳ್ಳುತ್ತಿದ್ದೇನೆ ಅಂತ ಗೊತ್ತಾದರೂ ಏನೂ ಮಾಡಲಾಗುತ್ತಿರಲಿಲ್ಲ. ಎಷ್ಟು ಪ್ರಯತ್ನಪಟ್ಟರೂ ಕೆಲವೇ ಗಂಟೆಗಳಲ್ಲಿ ಮಾದಕ ದ್ರವ್ಯದ ಗೀಳು ಮತ್ತೆ ಕಾಡಿ ಅವನ್ನು ಮುಟ್ಟೋಲ್ಲವೆಂದು ಮಾಡಿದ ಪ್ರತಿಜ್ಞೆ ಮುರಿದುಹೋಗುತ್ತಿತ್ತು. ಕೊನೆ ಕೊನೆಗೆ ಈ ಬಿಡೋ ಪ್ರಯತ್ನವೇ ಬಿಟ್ಟುಹೋಗಿ ಭಂಗಿದೇವರಿಗೆ ಹೆಂಡಗುಡುಕ ಪೂಜಾರಿ ಅನ್ನುವಂತೆ ಆ ನಶೆಯ ನಿಶೆಯಲ್ಲಿ ನಡೆದಿದ್ದೆಲ್ಲಾ ಸರಿಯೆನ್ನಿಸತೊಡಗಿತ್ತು.
ಹೀಗೇ ಒಂದು ಗುರುವಾರದ ರಾತ್ರಿ. ತನ್ನ ಖಾಯಂ ಬಾರಿನ ಬಳಿ ಹೋಗ್ತಿದ್ದಾಗ ಎದುರ ರಸ್ತೆಯಲ್ಲಿ ಧಡ್ ಅಂತ ಶಬ್ದವಾಯ್ತು. ಬೈಕಲ್ಲಿ ಬರ್ತಿದ್ದೋನಿಗೆ ರಾಂಗ್ ಸೈಡಿಂದ ಬಂದ ಬೈಕವ ಗುದ್ದಿರೋದು ಅಂತ, ಸೀದಾ ರಸ್ತೆಯಾಗಿದ್ರೂ ಹೆಲ್ಮೆಟ್ ಹಾಕದೇ ಅದನ್ನ ಟ್ಯಾಂಕಿ ಮೇಲೆ ಇಟ್ಟು, ವೇಗವಾಗಿ ಹೋಗ್ತಿದ್ದ ಇವನಿಗೆ ಎಷ್ಟು ನಿರ್ಲಕ್ಷ್ಯ ಅಂತೀನಿ ಅಂತ, ತಿರುವಲ್ಲಿ ಮರಳಿತ್ತು. ವೇಗವಾಗೂ ಹೋಗ್ತಿದ್ರಿಂದ ಎದುರು ಬೈಕು ಬಂದಾಗ ಹಾಕಿದ ಬ್ರೇಕು ನಿಲ್ಲದೇ ಉರುಳಿ ಬಿದ್ದಿದ್ದಾನೆ ಅಂತ್ಲೂ ಇವ ಅಲ್ಲಿಗೆ ಹೋಗುವಾಗ ಸುತ್ತ ನೆರೆದ ಜನ ಮಾತಾಡ್ತಾ ಇದ್ರು. ಹತ್ತಿರ ಹೋಗಿ ನೋಡಿದ್ರೆ ಬಿದ್ದವನನ್ನು ಎತ್ತಿ ಒಂದು ಮೂಲೆಗೆ ಕೂರಿಸ್ತಾ ಇದ್ರು ಇಬ್ರು. ಮತ್ತೊಬ್ರು ಅವನಿಗೆ ಕುಡಿಸೋಕೆ ಅಂತ ನೀರಿಗಾಗಿ ಹುಡುಕ್ತಾ ಇದ್ರು. ಬಿದ್ದವನ ಮುಖ ನೋಡಿದ ರಾಮನಿಗೆ ಇವನನ್ನು ಎಲ್ಲೋ ನೋಡಿದ್ದೀನಲ್ಲ ಅನಿಸ್ತು. ಕಾಲ ಪ್ಯಾಂಟು ಅಲ್ಲಲ್ಲಿ ಹರಿದಿತ್ತು. ಎಡಗೈಯನ್ನು ಎತ್ತಲೇ ಆಗದಂತೆ ಒದ್ದಾಡುತ್ತಿದ್ದ ಅವನಿಗೆ ಅಲ್ಲಿನ ಬೆರಳುಗಳನ್ನು ಆಡಿಸಲು ಸಾಧ್ಯವಾಗ್ತಿದ್ರೂ ಚೆನ್ನಾಗಿ ಹೊಡೆತ ಬಿದ್ದಿರೋದು ಗೊತ್ತಾಗುತ್ತಿತ್ತು. ತಲೆಗೆ ಹೊಡೆತ ಬೀಳದಿದ್ರೂ ಹಣೆಯ ಎಡಭಾಗದಲ್ಲಿ ಗಾಯವಾಗಿತ್ತು. ಬಿದ್ದು ಒಡೆದ ತುಟಿಯಿಂದ ರಕ್ತ ಜಿನುಗುತ್ತಿತ್ತು. ಅಂತೂ ಅವನನ್ನು ಆಟೋ ಮಾಡಿ ಆಸ್ಪತ್ರೆಗೆ ಕಳಿಸೋ ಹೊತ್ತಿಗೆ ಇವನನ್ನು ಮಾಮೂಲು ಬಾರಲ್ಲಿ ಎರಡು ದಿನಗಳ ಹಿಂದೆ ಕಂಡದ್ದು ನೆನಪಾಯ್ತು! ನಶೆಯಲ್ಲೇ ಗಾಡಿ ಓಡಿಸುತ್ತಿದ್ದ ತಾನೇನಾದ್ರೂ ಅವನ ಜಾಗದಲ್ಲಿದ್ದಿದ್ರೆ ಏನಾಗುತ್ತಿತ್ತು ಅಂತ ಕಲ್ಪಿಸಿಕೊಂಡು ಮೈಯೆಲ್ಲಾ ಥರಗುಟ್ಟಿತು.ಬೈಕ ಬದ್ಲು ಲಾರಿಗೋ ಬಸ್ಸಿಗೋ ಗುದ್ದಿದ್ದಿದ್ರೆ ಕ್ಷಣದಲ್ಲೇ ಹರೋ ಹರ ಅನ್ನುತ್ತಿದ್ದದನ್ನು ನೆನೆಸಿ ಕುಡಿತದ ಬಯಕೆಯೇ ಸತ್ತು ಬಾರಿನ ಬದ್ಲು ಹತ್ತಿರವಿದ್ದ ಮನೆಯತ್ತ ಗಾಡಿ ತಿರುಗಿಸಿದ.
ಶುಕ್ರವಾರ ಬೆಳಗ್ಗೆ ಎದ್ದವನ ಮನದಲ್ಲೊಂದು ನಿರ್ಧಾರ ರೂಪುಗೊಳ್ಳುತ್ತಿತ್ತು. ಇವತ್ತೇನೇ ಆಗ್ಲಿ ತಾನು ಯಾವ ಮಾದಕ ದ್ರವ್ಯದ ಸುದ್ದಿಗೂ ಹೋಗೋಲ್ಲ, ರಾಮಣ್ಣನಂತೆ ಖಾಯಿಲೆಯಿಂದ ಸಾಯೋಲ್ಲವೆಂಬ ನಿರ್ಧಾರ ಅದೆಷ್ಟನೆ ಸಲವೋ ಎಂಬಂತೆ ಮತ್ತೆ ಮೂಡಿತ್ತು. ಅಂದು ಒತ್ತರಿಸಿ ಬರುತ್ತಿದ್ದ ಕೆಮ್ಮ ನಿವಾರಣೆಗೆ, ಕೆರಸುತ್ತಿದ್ದ ಗಂಟಲ ಶಮನಕ್ಕೆ ಒಂದು ದಮ್ಮು ಹೊಡೆದು ಬಿಡಲಾ ಅನ್ನೋ ಆಸೆಗಳನ್ನು ಅದು ಹೇಗೆ ತಡೆದನೋ ಅವನೇ ಬಲ್ಲ. ಇವನ ಹೊಗೆ ಸ್ನೇಹಿತರಿಗೆ ಎಷ್ಟು ಒತ್ತಾಯಿಸಿದರೂ ಬರಲೊಲ್ಲದ ಇವನ ವರ್ತನೆ ಕಂಡು ಆಶ್ಚರ್ಯವಾದ್ರೂ ಇವನ ಹಿಂದಿನ ಪ್ರತಿಜ್ಞೆಗಳಂತೆ ಇವೂ ಕೆಲ ಘಂಟೆಗಳ ಕಾಲ ಮಾತ್ರ ಅಂತ ನಕ್ಕು ಸುಮ್ಮನಾಗಿದ್ರು.ಹೊಗೆಯಿಲ್ಲದೆ ತಲೆ ಸುತ್ತಿ ಬಂದಂತಾಗುತ್ತಿತ್ತು. ಇದ್ದಕ್ಕಿದ್ದಂತೆ ಕಣ್ಣೆಲ್ಲಾ ಕತ್ತಲಾದಂತನಿಸುತ್ತಿತ್ತು. ಹಾಗೆ ಆದಾಗಲೆಲ್ಲಾ ಕೂತಲ್ಲೇ ಸ್ವಲ್ಪ ಹೊತ್ತು ಸುಧಾರಿಸಿಕೊಂಡು ತನ್ನ ಕೆಲಸ ಮುಂದುವರೆಸಲು ಪ್ರಯತ್ನಿಸುತ್ತಿದ್ದ. ಗ್ರೀನ್ ಟೀ, ನಿಂಬೂ ಟೀ ಹೀಗೆ ಗಂಟೆಗೊಮ್ಮೆ ಏನಾದ್ರೂ ಕುಡಿದು ತನ್ನ ಹೊಗೆಯಭ್ಯಾಸ ಬಿಡೋಕೆ ಪರ್ಯಾಯವನ್ನು ಹುಡುಕುತ್ತಿದ್ದ. ಒಂದಾದ್ರೂ ದಮ್ಮು ಹೊಡೆಯೋವರ್ಗೆ ಕೆಲ್ಸ ಮಾಡಲೇ ಬಿಡೋಲ್ಲ ಅಂತ ದೇಹ ಮುಷ್ಕರ ಹೂಡಿದಂತೆ ಅನಿಸತೊಡಗಿ ಅರ್ಧ ಘಂಟೆ ಕಾಲ ಯಾವ ಕೆಲಸದಲ್ಲೂ ಮನಸ್ಸು ತೊಡಗದಾಯಿತು. ಕೆಲಸವಿಲ್ಲದ ಮನವನ್ನು ಸಮಾಧಾನಪಡಿಸೋಕೆ ಅಂತ ಫೇಸ್ಬುಕ್ಕು, ವಾಟ್ಸಾಪು, ಜೀಚಾಟುಗಳನ್ನೆಲ್ಲಾ ಒಟ್ಟಿಗೆ ತೆಗೆದಿಟ್ಟರೂ ಅವುಗಳಿಂದ ಸಮಾಧಾನ ದಕ್ಕಲಿಲ್ಲ.
ಸಂಜೆಯ ಹೊತ್ತಿಗೆ ಒಂದಾದ್ರೂ ಸಿಗರೇಟು ಎಳೆಯದಿದ್ರೆ ನಾನು ಉಸಿರುಗಟ್ಟಿ ಸತ್ತೇ ಹೋಗುತ್ತೇನೇನೋ ಅನ್ನುವಷ್ಟರ ಮಟ್ಟಿಗೆ ಕಾಡುತ್ತಿತ್ತು ಅದರ ತುಡಿತ.ಆಫೀಸಲ್ಲಿ ಕೂರಲಾಗದೇ ಸಂಜೆ ಬೇಗನೇ ಮನೆಗೆ ಹೊರಟವನಿಗೆ ಹೊರಗಿನ ಸೂರ್ಯ ಬೆಂಕಿಯಂತೆ , ಬೀಸುತ್ತಿದ್ದ ಗಾಳಿ ತನ್ನ ಕೊಲ್ಲೋಕೆ ಬಂದ ಸುಂಟರಗಾಳಿಯಂತೆ ಭಾಸವಾಗುತ್ತಿತ್ತು. ಮಾದಕದ್ರವ್ಯಗಳಿಂದ ಭ್ರಮಾಲೋಕ ಸೃಷ್ಟಿಯಾಗುತ್ತೆ ಅಂತ ಓದಿದವನಿಗೆ ಅವುಗಳನ್ನು ಬಿಟ್ಟು ಒಂದಿನ ಇರೋಕೆ ಪ್ರಯತ್ನಪಟ್ರೂ ಈ ರೀತಿಯ ಭ್ರಮೆ ಸೃಷ್ಟಿಯಾಗಿ ಮತ್ತೆ ಅವುಗಳತ್ತ ಜನ ಸೆಳೆಯಲ್ಪಡ್ತಾರೆ ಅನ್ನೋ ಅನುಭವವೂ ಹಿಂದಿನ ಪ್ರಯತ್ನಗಳಲ್ಲಿ ಲೈಟಾಗಿ ಆಗಿತ್ತು.ಆದ್ರೆ ಈ ಬಾರಿ ಏನೇ ಆದ್ರೂ ತನ್ನ ನಿರ್ಧಾರ ಬದಲಿಸಬಾರ್ದು ಅನ್ನೋ ನಿಲುವು ಗಟ್ಟಿಯಾಗುತ್ತಿತ್ತು ಅವನಿಗೇ ಅರಿಯದಂತೆ.
ಸಂಜೆ ಫೋನ್ ಮಾಡಿದ ಅಮ್ಮನ ಬಳಿ ಮುಕ್ಕಾಲು ಘಂಟೆ ಮಾತಾಡಿದ್ದ. ಪ್ರತಿದಿನ ಬಿಸಿಯಾಗಿದ್ದೀನಿ ಅಂತ ಐದು ನಿಮಿಷಗಳಲ್ಲೇ ಕಟ್ ಮಾಡುತ್ತಿದ್ದ ಇವ ಇಂದು ಮುಕ್ಕಾಲು ಘಂಟೆಯದ್ರೂ ಇನ್ನೂ ಮಾತಾಡ್ತಿರೋದು ತಾಯಿಗೆ ಅಚ್ಚರಿ. ಬೆಳಗ್ಗಿನಿಂದ ಎಲ್ಲೂ ದಕ್ಕದ ಸಮಾಧಾನ, ಮಾನಸಿಕ ಶಾಂತಿ ಅಮ್ಮನ ಜೊತೆ ಮಾತಾಡುವಾಗ ಸಿಕ್ತಿದ್ದಿದ್ದು ಇವನಿಗೂ ಆಶ್ಚರ್ಯ ತಂದಿತ್ತು. ಏನಾದ್ರೂ ಅನಾಹುತವಾಗಿರಬಹುದಾ ಅನ್ನೋ ಅಳುಕು ಆಕೆಗೆ ಹಲವು ಬಾರಿ ಕಾಡಿದ್ರೂ ಏನೂ ಆಗದಿರಲಿ ದೇವ್ರೆ, ನಿಂಗೆ ಈ ಫೋನಾದ ಮೇಲೆ ಕಾಣಿಕೆ ಎತ್ತಿಡ್ತೀನಿ ಅಂತ ಮನೆಯ ದೇವರಮನೆಯೆಡೆಗೆ ತಿರುಗಿ ಮನಸ್ಸಲ್ಲೇ ನಮಸ್ಕರಿಸಿದ್ಲು. ಆಫೀಸ ಕತೆ, ಮನೆಯ ಕತೆ, ತಾನು ಅದೆಷ್ಟೊ ಸಮಯವಾದ ಮೇಲೆ ತನ್ನ ಹಳೆಯ ಸ್ನೇಹಿತರ ಜೊತೆ ಟ್ರಿಪ್ಪಿಗೆ ಹೊರಟಿರೋ ಕತೆ.. ಹೀಗೆ ಮಗ ಮಾತಾಡ್ತಾನೆ ಇದ್ರೆ ತಾಯಿ ಹರಿವ ಹೊಳೆ ಎಷ್ಟು ಹರಿದ್ರೂ ಸ್ವಾಗತಿಸೋ ಸಮುದ್ರವಾಗಿದ್ದಳು. ಬ್ಯಾಟ್ರಿ ಖಾಲಿಯಾಗ್ತಾ ಇದೆ ಅನ್ನೋದು ಅದರ ಕುಯ್ ಕುಯ್ ಇಂದ ಗೊತ್ತಾಗಿ ಇನ್ನೇನು ಅದು ಸತ್ತೇ ಬಿಡತ್ತೆ ಅನ್ನೋ ಹೊತ್ತಿಗೆ ಸರಿಯಮ್ಮ, ಬ್ಯಾಟ್ರಿ ಖಾಲಿ ಆಗ್ತಾ ಇದೆ. ಇಡ್ಲಾ ಅಂದಿದ್ದ. ತಡ್ಯೋ ಮಗ್ನೆ. ಎಂತ ಮಳ್ಳಿ ನಾನು.ಕತೆ ಕೇಳ್ತಾ ಕೇಳ್ತಾ ನಿನ್ನ ಆರೋಗ್ಯ ಹೆಂಗಿದೆ ಅಂತ ಕೇಳೋದ್ನೆ ಮರ್ತು ಬಿಟ್ಟೆ ನಾನು. ಚೆನ್ನಾಗಿದೆ ತಾನೆ ? ಕೆಮ್ಮು ಹೇಗಿದೆ ? ನಾಳೆನೂ ಹಿಂಗೇ ಫೋನ್ ಮಾಡಿ ಮಾತಾಡ್ತೀಯಲ್ವಾ ಅನ್ನುವಷ್ಟರ ಹೊತ್ತಿಗೆ ಫೋನ್ ಡೆಡ್ಡಾಗಿತ್ತು !
ತಾಯ ಮಾತ ಕೇಳಿ ಈತನ ಕಣ್ಣಲ್ಲೆಲ್ಲಾ ನೀರು. ಅವಳಿಂದ ಅದೆಷ್ಟು ಮುಚ್ಚಿಟ್ಟಿದ್ದೇನೆ. ತನ್ನ ಅಮೂಲ್ಯ ಜೀವವ ನೆಚ್ಚಿಕೊಂಡು, ಅದರ ಮೇಲೆ ಅದೆಷ್ಟೋ ಕನಸ ಕಟ್ಟಿಕೊಂಡ ತನ್ನ ತಾಯಿಯಿರಬೇಕಾದ್ರೆ , ತನ್ನ ಮಗ ಹಾಗೆ ಹೀಗೆ ಅಂತ ಊರೆಲ್ಲಾ ಹೆಮ್ಮೆಯಿಂದ ತಿರುಗುವ ತಂದೆಯಿರಬೇಕಾದ್ರೆ ಅವರ್ಯಾರನ್ನೂ ಲೆಕ್ಕಿಸದೆ ತನ್ನ ಜೀವನವ ಹಾಳು ಮಾಡಿಕೊಳ್ಳಲು ಹೊರಟಿದ್ದೆನಲ್ಲ ಅನಿಸಿ ತನ್ನ ಮೇಲೇ ಬೇಸರ ಮೂಡಿತು. ಏನಾದ್ರಾಗಲಿ ಅವರಿಗೆ ಎಲ್ಲಾ ಹೇಳಿಬಿಡಬೇಕು ಅನಿಸಿತು.ಆದ್ರೆ ಹಾಳಾದ ಬ್ಯಾಟ್ರಿ ಈಗ್ಲೇ ಸಾಯಬೇಕಾ ? ಮೊದ್ಲು ಅದ್ನ ಚಾರ್ಚು ಮಾಡ್ಬೇಕು ಅನಿಸಿದ್ದೇ ತಡ ಮನೆಯತ್ತ ಓಡತೊಡಗಿದ. ಸಿಕ್ಕಿಹಾಕಿಕೊಳ್ಳುತ್ತಿದ್ದ ಉಸಿರ ನಡುವೆಯೇ, ಹನೆಯಲ್ಲಿ ಹನಿಗಟ್ಟಿದ್ದ ಬೆವರ ಒರೆಸಲೂ ಬಿಡುವಿಲ್ಲದಂತೆ ರೂಮ ಬಾಗಿಲು ತೆಗ್ದು ಚಾರ್ಜಿಗೆ ಹಾಕಿದ್ದವನಿಗೆ ಓಡೋ ಬದ್ಲು ಅಲ್ಲೇ ದಾರಿಯಲ್ಲಿದ್ದ ಫೋನ್ ಬೂತಿಗೆ ಹೋಗ್ಬಹುದಿತ್ತು. ಪಕ್ಕದಲ್ಲಿ ಬರುತ್ತಿದ್ದ ಯಾರದಾದ್ರೂ ಫೋನು ಕೇಳಿ ಪಡೆದು ಆಮೇಲೆ ಫೋನ್ ಮಾಡ್ತೀನಮ್ಮ ಅಂತ್ಲಾರೂ ಹೇಳ್ಬಹುದಿತ್ತಲ್ವಾ ಅನ್ನೋ ಯೋಚನೆಗಳು ತಡವಾಗಿ ಹೊಳೆದವು.
ಹತ್ತು ನಿಮಿಷ ಬಾಲ ಸುಟ್ಟ ಬೆಕ್ಕಿನಂತೆ ಚಾರ್ಚರ ಬುಡದಲ್ಲೇ ಓಡಾಡಿಕೊಂಡಿದ್ದ ಅವ ನಂತರ ಅಮ್ಮಂಗೆ ಫೋನ್ ಮಾಡಿದ್ದ. ಮಗನಿಗೆ ಏನೋ ಆಯ್ತು ಅಂತ ಅಳೋಕೆ ಶುರುಮಾಡಿದ್ದ ಅಮ್ಮನ ಸುಧಾರಿಸೋಕೆ ಸಾಕಾಗಿ ಹೋಗಿದ್ದ ಅಪ್ಪ ಫೋನೆತ್ತಿದ್ರು. ಹಲೋ, ಹೇಗಿದೀಯೋ ಮಗ್ನೆ. ನಿನ್ನ ಫೋನ್ ಕಟ್ಟಾಗಿದ್ರಿಂದ ನಿನ್ನಮ್ಮ ಸಿಕ್ಕಾಪಟ್ಟೆ ಬೇಜಾರು ಮಾಡ್ಕೊಂಡು ಅಳ್ತಾ ಕೂತಿದಾಳೆ. ಏನಾಯ್ತೋ ಅವಾಗ ? ಚೆನ್ನಾಗಿದೀಯ ತಾನೆ ಅಂತ ಕೇಳೋದ್ರೊಳಗೆ ಅಮ್ಮ ಬಂದು ಫೋನ್ ಕಸಿದುಕೊಂಡಿದ್ಲು. ಏ ರಾಮು. ನೀ ಚೆನ್ನಾಗಿದೀಯ ತಾನೆ ? ನಾನೇನೋ ಅಂದ್ಕಂಡಿದ್ದೆ ಅಂದ ಅಮ್ಮನ ದನಿ ಅಳುದನಿಯಂದ ಸಾಮಾನ್ಯಕ್ಕೆ ತಿರುಗುತ್ತಿದ್ದುದು ಗೊತ್ತಾಗ್ತಿತ್ತು. ಏ ಅಮ್ಮ. ನಾನು ಗುಂಡಕಲ್ಲಂಗಿದೀನಿ. ನನ್ನ ಬ್ಯಾಟ್ರಿ ಖಾಲಿಯಾಗಿತ್ತು ಅಷ್ಟೆ. ಈಗ ಸ್ವಲ್ಪ ಚಾರ್ಚು ಮಾಡಿದ್ದೀನಿ. ರಾತ್ರೆ ಫೋನ್ ಮಾಡ್ತೀನಿ ಸರೀನಾ ? ಅವಾಗ ಮತ್ತೆ ಮುಕ್ಕಾಲು ಘಂಟೆ ಮಾತಾಡೋನ. ಒಮ್ಮೆ ನಗು ನೋಡೋಣ ಅಂದಿದ್ದ ತನ್ನಲ್ಲೂ ಹೆಪ್ಪುಗಟ್ಟಿದ್ದ ದುಃಖವ ಮರೆಸುತ್ತಾ. ಏನೋ ಎಡವಟ್ಟಾಗಿದೆ. ಆದ್ರೆ ಅದ್ನ ಸರಿಪಡಿಸೋಕೆ ಪ್ರಯತ್ನಾನೂ ಮಾಡ್ತಾ ಇದ್ದಾನೆ ಮಗ. ಹೆಂಗಿದ್ರೂ ರಾತ್ರೆ ಫೋನ್ ಮಾಡ್ತಾನಲ್ಲ. ಮಾತಾಡಿದ್ರಾಯ್ತು ಅಂತ ಸಮಾಧಾನ ಮಾಡ್ಕೊಂಡ ಅಮ್ಮ ಫೋನಿಟ್ಟಿದ್ರು.
ರಾತ್ರೆಯೂ ತನ್ನ ಹಳೆ ಹವ್ಯಾಸಗಳ ಬಗ್ಗೆ ಹೇಳಲು ಧೈರ್ಯ ಸಾಕಾಗದೇ ಆಫೀಸಿನ ಕೆಲಸಗಳಲ್ಲಿ ತಾನು ಕಳೆದುಹೋಗಿದ್ದ ಹಲವು ಪ್ರಸಂಗಗಳ ಬಗ್ಗೆ, ಊರಿನ ಬಗ್ಗೆ, ಅಪ್ಪ-ಅಮ್ಮ ಬೆಂಗಳೂರಿಗೆ ಬಂದ್ರೆ ಏನೇನು ನೊಡ್ಬೋದು ಅನ್ನೋ ಬಗ್ಗೆ ಹಿಗೆ ಮತ್ತಂದರ್ಧ ಘಂಟೆ ಮಾತಾಡಿದ್ದ. ಬೆಳಗ್ಗೆ ಬೇಗ ಎದ್ದು ಬೇಲೂರಿಗೆ ಹೊರಡಬೇಕಾಗಿದ್ರಿಂದ ಹಾಗೇ ಮಲಗಿ ಬಿಟ್ಟ. ವೀಕೆಂಡಿನ ಎಣ್ಣೆ ಪಾರ್ಟಿಗಳಿಂದ ದೂರಾಗಬೇಕಂದ್ರೆ ಎಲ್ಲಾದ್ರೂ ಹೋಗ್ಲೇಬೇಕಿತ್ತು. ಆಗ ನೆನಪಾಗಿದ್ದೇ ಬೇಲೂರು, ಹಳೇಬೀಡು , ಶ್ರವಣಬೆಳಗೊಳ.
ಶ್ರವಣಬೆಳಗೊಳದ ಶಿಲಾಶಾಸಗಳನ್ನು ಎಂದೂ ಶಾಸನಗಳನ್ನೇ ಕಾಣದವನಂತೆ ಓದಲು ಪ್ರಯತ್ನಿಸಿದ್ದ, ಕತ್ತಲೆ ಬಸಿ, ಶಾಸನ ಬಸ್ತಿ, ಚಾವುಂಡರಾಯನ ಬಸ್ತಿ, ವಿಂದ್ಯಗಿರಿ, ಚಂದ್ರಗಿರಿ, ಗೊಮ್ಮಟೇಶ್ವರ..ಹೀಗೆ ಪ್ರತಿಯೊಂದನ್ನೂ ಕೂಲಂಕೂಷವಾಗಿ ನೋಡಿ ಫೋಟೋ ತೆಗೆಯಲು ಪ್ರಯತ್ನಿಸುತ್ತಿದ್ದ ಇವನ ಕಂಡು ಇವನ ಸ್ನೇಹಿತರಿಗಲ್ಲ. ಇವನಿಗೇ ಆಶ್ಚರ್ಯವಾಗಿತ್ತು. ಒಂದು ಘಂಟೆ ಅಂದುಕೊಂಡಿದ್ದ ಶ್ರವಣಬೆಳಗೊಳದಲ್ಲಿ ಮೂರು ಘಂಟೆ ಕಳೆದಿದ್ದ ಇವನಿಗೆ ತನ್ನಲ್ಲಿ ಈ ತರದ್ದೊಂದು ಹವ್ಯಾಸವಿದ್ರೂ ಅದರ ಬಗ್ಗೆ ಗಮನವೇ ಕೊಟ್ಟಿರದೇ ಅದನ್ನು ಕೊಲ್ಲುತ್ತಿದ್ದ ಬಗ್ಗೆ ಬೇಸರವಾಗಿತ್ತು . ಬೇಲೂರಿನ ಚೆನ್ನಕೇಶವ, ಹಳೆಬೀಡಿನ ಹೊಯ್ಸಳೇಶ್ವರ , ಶಾಂತಲೇಶ್ವರರ ಕಂಡಿದ್ದ ಅವನಿಗೆ ಬಿಟ್ಟೂ ಬಿಡದಂತೆ ಕಾಡಿದ್ದು ಅಲ್ಲಿನ ಉಗ್ರನರಸಿಂಹ ಮತ್ತು ಸ್ಮಶಾನ ಭೈರವಿ. ಹಿರಣ್ಯಕಶಿಪುವನ್ನು ಸಂಹರಿಸುವಾಗ ಅಡ್ಡ ಬಂದ ರಕ್ಕಸನ ಕುತ್ತಿಗೆ ಹಿಡಿದು ಮೇಲಕ್ಕೆತ್ತಿದಾಗ ಅವನ ಮುಖದ ಚರ್ಮ ಎದ್ದು ಬಂದು ಬರಿಯ ಕಪಾಲ,ಮತ್ತು ಎದ್ದು ಬಂದ ಚರ್ಮದಲ್ಲಿರುವ ಕಣ್ಣುಗುಡ್ಡೆಗಳ ಕೆತ್ತನೆ ಇವನ ಕಾಡಿಬಿಟ್ಟಿತ್ತು. ಸ್ಮಶಾನದಲ್ಲಿರುವ ಭೈರವಿಯ ಸುತ್ತ ನರ್ತಿಸುತ್ತಿರುವ ಪಿಶಾಚಿಗಳು, ಅಕೆಯ ಕೈಯಲ್ಲಿರುವ ರುಂಡಕ್ಕೆ ಬಾಯಿ ಹಾಕುತ್ತಿರುವ ನಾಯಿ,ಉಗ್ರ ರೂಪಧಾರಿ ಶಿವನ ಕೈಯಲ್ಲಿದ್ದ ದೇಹದಿಂದ ಸುರಿಯುತ್ತಿರುವ ರಕ್ತಕ್ಕೆ ಬಾಯಿ ಹಾಕಿರುವ ಒಂದು ಮಗುವ ಹೊತ್ತ ಪಿಶಾಚಿಯ ದೃಶ್ಯಗಳೇ ಕಾಡಿ ಆ ರಾತ್ರಿ ನಿದ್ದೆಯೇ ಬರಲಿಲ್ಲ.
ಭಾನುವಾರದ್ದೂ ಅದೇ ಕತೆ. ಮಾದಕ ವ್ಯಸನಕ್ಕೆ ಎಳೆಯುತ್ತಿದ್ದ ಮನವನ್ನು ಬೇರೆ ಕಡೆ ಹೊರಳಿಸೋಕೆ ಅಂತ ಬ್ಲಾಗು ಬರೆಯೋಕೆ, ಹಾಫ್ ಗರ್ಲ್ ಫ್ರೆಂಡ್ ಪುಸ್ತಕ ಓದೋಕೆ ಪ್ರಯತ್ನಿಸಿ ಅದರಲ್ಲಿ ಬಹುಮಟ್ಟಿಗೆ ಯಶಸ್ವಿಯೂ ಆಗಿದ್ದ. ಆದ್ರೆ ಯಥಾಪ್ರಕಾರ ಹೆಚ್ಚು ಹೊತ್ತು ಎಲ್ಲೂ ಗಮನ ಕೇಂದ್ರೀಕರಿಸಲಾಗದ ಸಮಸ್ಯೆ. ಹಿಂದಿನ ದಿನ ಆದ ಮೈಕೈ ನೋವಿಗಿಂತ ಸಿಗರೇಟು, ಎಣ್ಣೆಗಳಿಲ್ಲದ ವಾರಾಂತ್ಯ ಕಳೆಯೋ ನೋವೇ ಹೆಚ್ಚೆನಿಸುತ್ತಿತ್ತು . ಅಂತೂ ರಾತ್ರಿಯಾಯ್ತು.ಮಾದಕ ವ್ಯಸನಗಳಿಗೆ ತುತ್ತಾಗಿ ಹೆತ್ತವರ ಕಡೆಗಣಿಸಿದ ತನಗೆ ಹಿಂದಿನ ದಿನ ಕಂದ ರಕ್ಕಸರ ಗತಿ ದಕ್ಕಬಹುದಾದ ಕಲ್ಪನೆಯಿಂದ ಅಂದೂ ನಡುಗಿದ್ದ. ಬೆಳಗಾಗುವ ಹೊತ್ತಿಗೆ ಆ ರಕ್ತಪಿಪಾಸಿ ಪಿಶಾಚಿಯ ಕಂಕುಳಲ್ಲಿದ್ದ ಮಗು ತಾಯ ಹಾಲಿಗೆ ಬಾಯ ಕೊಟ್ಟ ದೃಶ್ಯದಲ್ಲಿ ಆಕೆಯ ಮಮತೆ ಕಣ್ಣ ಮುಂದೆ ಬಂದಂತಾಯ್ತು ! ಆಶೀರ್ವದಿಸೋ ಭಂಗಿಯಲ್ಲಿದ್ದ ತಾಯೆ ಶಾರದೆಯ ಚಿತ್ರ ಕಣ್ಣ ಮುಂದೆ ಬಂದು ಅಲ್ಲಿ ತನ್ನ ತಾಯೇ ಕಂಡು , ಒಳ್ಳೇ ಮಾರ್ಗದಲ್ಲಿ ನಡೆಯುತ್ತಿದ್ದೀಯ. ನಿನಗೆ ಒಳ್ಳೆಯದಾಗಲಿ ಅಂತ ಹರಸಿದಂತಾಯ್ತು. ಅಂತೂ ಹಿಂದಿನ ದಿನ ದಕ್ಕಿರದ ನಿದ್ರೆ ಅದೆಷ್ಟೋ ದಿನಗಳಿಂದ ಕಾಣದಿದ್ದವನ ಬಳಿ ಬಂದಂತೆ ಆವರಿಸಿತು.
ನೆನಪುಗಳ ನಿನ್ನೆಯಿಂದ ಹೊರಬಂದ ರಾಮ ಇಂದು ತನ್ನ ಮನೆಯತ್ತ ಸಾವಕಾಶವಾಗಿ ಹೆಜ್ಜೆ ಹಾಕುತ್ತಿದ್ದಾನೆ. ನಿನ್ನೆ ಅರ್ಧ ಓದಿದ ಬುಕ್ಕು, ಅರ್ಧಕ್ಕೇ ನಿಲ್ಲಿಸಿದ ಬ್ಲಾಗನ್ನು ಪೂರ್ಣಗೊಳಿಸೋ ಕಾತುರತೆಯಿಂದ. ಹಿಂದಿನ ರಾತ್ರಿಯ ಸುಖನಿದ್ರೆಯ ಮುಂದುವರಿಕೆಯ ಪಡೆದ ರಾಮನ ಮನಸ್ಸಲ್ಲಿ ಕತೆಯೊಂದು ಹುಟ್ಟುತ್ತಿದೆ. ತನ್ನ ಪಯಣದ ಬಗ್ಗೆ. ಜೀವನಗಾಥೆಯ ಬಗ್ಗೆ. ಹೊಸ ಜೀವನೋತ್ಸಾಹದೊಂದಿಗೆ ಆಫೀಸು ಹೊಕ್ಕ ಅವನಿಗೇ ಆಶ್ಚರ್ಯವಾಗುವಷ್ಟು ಚೆನ್ನಾಗಿ ಅವನ ಕೆಲಸಗಳು ನಡೆಯುತ್ತಿವೆ. ಯಾವ ಸಿಗರೇಟು, ಮದ್ಯಗಳೂ ಮರೆಸದ ನೋವುಗಳ ಜಾಗದಲ್ಲಿ ಹೊಸತೇನೋ ಸಾಧಿಸೋ ಬಯಕೆ ಹುಟ್ಟಿಬಿಟ್ಟಿದೆಯಾದ್ದರಿಂದ ಯಾವ ಚಿಂತೆಗಳಿಗೂ , ಚಟಗಳಿಗೂ ಜಾಗವಿಲ್ಲದಂತಾಗಿದೆ. ನಶೆಯ ನಿಶೆಯಿಂದ ಹೊರಬಂದ ಮೂಲ ರಾಮನನ್ನು, ಹೊಸದೊಂದು ಸಂಶೋಧಕನನ್ನು ಕಾಣುತ್ತಿರೋ ಮುಳುಗುರವಿಯ ಮುಖದಲ್ಲಿ ಮಂದಹಾಸ ಮೂಡುತ್ತಿದೆ. ಹೊಸದೊಂದು ನಾಳೆಯ ನಿರೀಕ್ಷೆಯಲ್ಲಿ. ಸುಂದರ ಭವಿಷ್ಯದ ಹರಕೆಯಲ್ಲಿ…
ವಂದನೆಗಳೊಂದಿಗೆ,
ಪ್ರಶಸ್ತಿ.ಪಿ,
*****
ಪ್ರಶಸ್ತಿ, ಕಥೆ ತುಂಬಾ ಚೆನ್ನಾಗಿದೆ! 'ನಶೆ' ಎಲ್ಲದರಲ್ಲಿಯೂ ಕಂಡುಕೊಳ್ಳಬಹುದು! ಆದರೆ ದುರಭ್ಯಾಸಗಳ ನಶೆಗೇ ಮನುಷ್ಯ ಬಲಿಯಾಗೋದು ಜಾಸ್ತಿ. ನಿಮ್ಮ ಬರವಣಿಗೆಯಲ್ಲಿ ಪ್ರಬುದ್ಧತೆ ಹೆಚ್ಚುತ್ತಿದೆ. ಓದಿ ಖುಷಿಯಾಯ್ತು.