ನವೆಂಬರ್ ಕೊನೆಯಲ್ಲೊಂದು ವಾರ ಬೆಂದಕಾಳೂರಲ್ಲಿ ಕನ್ನಡ ಸಿನಿಮಾ ನೋಡೊ ಉಮೇದಲ್ಲಿ ಕನ್ನಡ ಥಿಯೇಟರೊಂದ ಹುಡುಕಿ ಹೊರಟಿದ್ದೆ. ಎದುರು ನೋಡಲು ಒಂದು ಕಿಂಡಿಯಷ್ಟು ಮಾತ್ರವೇ ಜಾಗ ಬಿಟ್ಟು ಉಳಿದೆಲ್ಲಾ ಭಾಗದಲ್ಲಿ ಕನ್ನಡದ ಧ್ವಜ ಚಿತ್ರಿಸಿದ್ದ ಆಟೋವೊಂದು ಎದುರಾಯ್ತು. ಆಟೋದಲ್ಲಿ ಕನ್ನಡ ಧ್ವಜ, ಬಸ್ಸಲ್ಲಿ ಜ್ಞಾನಪೀಠಿಗಳ ಚಿತ್ರ, ಕನ್ನಡ ಘೋಷವಾಕ್ಯಗಳ ನೋಡಿದ್ದೆ ನವೆಂಬರ್ ಆಚರಣೆಯ ಫಲವಾಗಿ. ಈ ತರದ ಡಿಸೈನೊಂದನ್ನು ನೋಡಿದ್ದು ಮೊದಲಾದ್ದರಿಂದ ಅದರದೊಂದು ಫೋಟೋ ತೆಗೆಯೋಣ ಅಂತ ಹೊರಟೆ. ತನ್ನ ಆಟೋ ಫೋಟೋದಲ್ಲಿ ಸೆರೆಯಾಗಿದ್ದನ್ನ ನೋಡಿ ನಾಚಿದ ಆಟೋದವ, ಅಷ್ಟೇ ಖುಷಿಪಡುತ್ತಾ ಥ್ಯಾಂಕ್ಯೂ ಸರ್ ಅಂತ ಮುಂದೆ ಹೋದ. ಅವನ ಹೆಸರೇನೆಂದು ಕೇಳಲೂ ಸಮಯ ಕೊಡದಂತೆ. ಆಟೋದಲ್ಯಾವುದೋ ಹಿಂದಿ ಹಾಡು ಮೊಳಗುತ್ತಿತ್ತು !
ಅದಾಗಿ ಸ್ವಲ್ಪ ಸಮಯವಾಯ್ತು. ನವೆಂಬರ್ ಕಳೆದು ಎರಡು ವಾರಗಳುರುಳುತ್ತಾ ಬಂದ ಸಂದರ್ಭದಲ್ಲಿ ಹೀಗೆ ಒಂದು ಸುತ್ತಾಟ ಹೊರಟಿದ್ದೆ ಕನ್ನಡದ ಜೈಕಾರ ಕೇಳಿದ್ದ ಬೀದಿಗಳಲ್ಲಿ, ಎಲ್ಲೆಡೆಯೂ ಕೆಂಪು,ಹಳದಿಯಾಗಿದ್ದ ಗಲ್ಲಿಗಳಲ್ಲಿ.ಆದ್ರೆ ಅಂದು ಕಂಡ ದೃಶ್ಯವೇ ಬೇರೆ. ಕಳೆದ ಹದಿನಾಲ್ಕು ದಿನಗಳಲ್ಲಿ ಕನ್ನಡದ ಜೈಕಾರ ಕೂಗುತ್ತಾ ರಸ್ತೆ ಬದಿಗೆಲ್ಲಾ ಸಿಕ್ಕಿಸಿದ್ದ ಬಾವುಟಗಳು ಧೂಳು ತಿನ್ನುತ್ತಾ ಬಿದ್ದಿತ್ತು. ಎಲ್ಲೆಡೆಯೂ ರಾರಾಜಿಸುತ್ತಿದ್ದ ಕನ್ನಡ ಧ್ವಜಗಳು ನಿಧಾನವಾಗಿ ಮಾಯವಾಗುತ್ತಿತ್ತು. ಮಾಲ್ಗಳಲ್ಲಿ ಮಾಯವಾದ ಕನ್ನಡದ ತೋರಣಗಳು ಕಾಡಿದ್ದಲ್ಲ ನನಗೆ.ಬದಲಿಗೆ ತಿಂಗಳಿಡೀ ಕನ್ನಡದ ಕಾರ್ಯಕ್ರಮಗಳು ನಡೆದರೂ ಪಾಲ್ಗೊಳ್ಳದೇ ಈಗಲೂ "ಕನ್ನಡ ಗೊತ್ತಿಲ್ಲ" ಎಂಬ ಜನರ ಉಡಾಫೆ !
ಮುಂಚೆಯೆಲ್ಲಾ ಕನ್ನಡ ರಾಜ್ಯೋತ್ಸವ ಎಂದರೆ ನವೆಂಬರ್ ಒಂದಕ್ಕೆ ಸೀಮಿತವಾಗಿರುತ್ತಿತ್ತು.ಅವತ್ತೊಂದು ಧ್ವಜಾರೋಹಣ ಮಾಡಿ ಶಾಲಾ ಹುಡುಗರಿಂದ ಮಾರ್ಚ್ ಫಾಸ್ಟ್ ಮಾಡಿಸಿ ಸಿರಿಗನ್ನಡಂ ಗೆಲ್ಗೆ,ಸಿರಿಗನ್ನಡಂ ಬಾಳ್ಗೆ ಎಂದೆಲ್ಲಾ ಜೈಕಾರ ಹಾಕಿಸಿ, ಒನಕೆ ಓಬವ್ವ, ಕಿತ್ತೂರ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ,ಕುವೆಂಪು,ದ.ರಾ ಬೇಂದ್ರೆಯವರಂತೆ ಛದ್ಮವೇಷ ಹಾಕಿಸಿ ಮೆರವಣಿಗೆ ಮಾಡಿಸಿ , ಸಿಹಿಹಂಚಿ ಸಂಭ್ರಮಿಸುವುದರಲ್ಲಿ ಕಳೆಯುತ್ತಿತ್ತು.ಪತ್ರಿಕೆಗಳಲ್ಲಿ ಸುದ್ದಿಯಾಗದಿದ್ದರೂ ಸಣ್ಣ ಸಣ್ಣ ಊರುಗಳಲ್ಲಿ ಕನ್ನಡ ಜ್ಯೋತಿಯ ಮೆರವಣಿಗೆಯೋ, ಕವಿಗೋಷ್ಠಿಯೋ, ಶಾಲಾ ಕಾಲೇಜುಗಳಲ್ಲಿನ ಸ್ಪರ್ಧೆಯೋ ಹೀಗೆ ಏನಾದರೊಂದು ಕಾರ್ಯಕ್ರಮಗಳು ತೀರಾ ಸದ್ದುಗದ್ದಲವಿಲ್ಲದೇ ನಡೆದು ಹೋಗುತ್ತಿತ್ತು. ಹಾಗೆಂದು ಅದು ಕನ್ನಡತನದ ಬಗೆಗಿನ ನಿರ್ಲಕ್ಷ್ಯವೆಂದಲ್ಲ. ನಮ್ಮ ನಾಡು ನುಡಿಗಳಲ್ಲಿ ಬೆರೆತುಹೋಗಿರೋ ಭಾಷೆಗೆ ನಿತ್ಯವೂ ಗೌರವಿಸುತ್ತಲೇ ಇರುವಾಗ ಯಾವುದೋ ತಿಂಗಳು ಬಂತೆಂದು ಸಂಭ್ರಮಿಸುವ ಅಗತ್ಯವಿಲ್ಲವೆಂಬ ಭಾವವಷ್ಟೇ. ಆದರೆ ಈಗಿನ ಪಟ್ಟಣಗಳಲ್ಲಿನ ಪರಿಸ್ಥಿತಿ ಹಾಗಿಲ್ಲ. ದೇಶದೆಲ್ಲೆಡೆಯ ಜನ ಬಂದು ನೆಲೆಸಿರೋ ಚೌಚೌಭಾತಾಗಿರೋ ಬೆಂಗಳೂರಿನಂತಹ ಮಹಾನಗರಗಳು ಕರ್ನಾಟಕದ ರಾಜಧಾನಿಯೇ ಆಗಿದ್ದರೂ ಇಲ್ಲಿ ಕನ್ನಡ ಕಳೆದುಹೋಗುತ್ತಿದೆ. ಎಲ್ಲೋ ಒಬ್ಬರೋ ಇಬ್ಬರೋ ಅಲ್ಲ. ಹತ್ತಕ್ಕೊಬ್ಬರಂತೆ ಎದುರಾಗೋ ಜನ "ಕನ್ನಡ ಗೊತ್ತಿಲ್ಲ" ಎಂದು ಯಾವ ಅಂಜು,ಅಳುಕಿಲ್ಲದೇ ಹೇಳುತ್ತಾ ಯಾವ ಕಷ್ಟವೂ ಇಲ್ಲದೇ ಇಲ್ಲಿ ಬದುಕುತ್ತಿರುವುದು ನಮ್ಮವರ ಹೃದಯವೈಶಾಲ್ಯವೋ , ಭಾಷೆಯೆಡೆಗಿನ ಅಭಿಮಾನಶೂನ್ಯತೆಯೋ ಎನ್ನುವ ಗೊಂದಲ ಕಾಡುತ್ತಿರೋ ಸಂದರ್ಭದಲ್ಲಿ ವರ್ಷಕ್ಕೊಂದು ತಿಂಗಳಾದರೂ ಇಲ್ಲಿ ಕನ್ನಡದ ಪುನರುತ್ಥಾನಕ್ಕೆ,ನವೀಕರಣಕ್ಕೆ ನಡೆಯೋ ಪ್ರಯತ್ನಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವೆನಿಸುತ್ತೆ.
ಹೊರಗಿನಿಂದ ಬಂದವರು ಇಲ್ಲಿ ವರ್ಷಗಟ್ಟಲೇ ಇದ್ದರೂ ಕನ್ನಡ ಯಾಕೆ ಕಲಿಯೋಲ್ಲ ಅನ್ನೋ ಪ್ರಶ್ನೆಗೆ ಕಲಿಯೋ ಪ್ರಮೇಯವೇ ಬರೋಲ್ಲ ಅನ್ನೋದು ಒಂದು ಉತ್ತರವಾದರೆ ಕಲಿಯೋ ಆಸಕ್ತಿಯಿದ್ದರೂ ಕಲಿಸೋರಿಲ್ಲ ಅನ್ನೋ ಮತ್ತೊಂದು ಉತ್ತರ ಎದುರಾಗುತ್ತೆ.ಇದೇ ಪ್ರಶ್ನೆಗೆ ಇನ್ನೂ ಹಲವಾರು ಉತ್ತರಗಳಿರೋದರ ಬಗ್ಗೆ ಆಮೇಲೆ ನೋಡೋಣವಂತೆ. ಇದರಲ್ಲಿ ಮೊದಲನೇ ಅಂಶವಂತೂ ಅಕ್ಷರಶಃ ಸತ್ಯ. ತಮಿಳುನಾಡಿಗೆ ಹೋಗಿ ಇಂಗ್ಲೀಷಲ್ಲೋ, ಹಿಂದಿಯಲ್ಲೋ ಕೇಳಿದ್ರೆ ಅಲ್ಲಿನ ಜನ ಆ ಭಾಷೆಗಳು ಗೊತ್ತಿದ್ರೂ ತಮಿಳಲ್ಲೇ ಉತ್ತರಿಸುತ್ತಾರೆ ಅನ್ನೋದು ಅನೇಕರ ಅನುಭವದ ಮಾತು. ಆದ್ರೆ ನಮ್ಮಲ್ಲಿ ? ಹಿಂದಿ ಬಾರದಿದ್ದರೂ ತನ್ನಲ್ಲಿ ಬರೋ ಉತ್ತರ ಭಾರತದ ಗ್ರಾಹಕರ ಬಳಿ ತಟ್ಟಿ ಕುಟ್ಟಿ ಹಿಂದಿ ಮಾತನಾಡೋ ಅಂಗಡಿಯವ, ಕನ್ನಡ ಗೊತ್ತಿದ್ದರೂ ಬಸ್ಸಲ್ಲಿ ಎದುರಾಗೋ ಅಪರಿಚಿತನ ಬಳಿ ಇಂಗ್ಲೀಷಲ್ಲೇ ವ್ಯವಹರಿಸೋಕೆ ಶುರುಮಾಡೋ ಭವ್ಯ ಕನ್ನಡಿಗ, "ಗಾಂಚಾಲಿ ಬಿಡಿ , ಕನ್ನಡ ಮಾತಾಡಿ" ಎಂದು ವಾಟ್ಸಾಪ್ ಫೇಸ್ಬುಕ್ಕುಗಳಲ್ಲೆಲ್ಲಾ ವೀಡಿಯೋ ಮಾಡುವಷ್ಟರ ಮಟ್ಟಿಗೆ ಕನ್ನಡ ಮರೆತಿರೋ ಕಾಲೇಜು ಹುಡುಗ ಹುಡುಗಿಯರು.. ಹೀಗೆ ಸದ್ಯ ಬೆಂಗಳೂರಲ್ಲಿರೋ ಪರಿಸ್ಥಿತಿಗೆ ನಮ್ಮೆಲ್ಲರ ಕಾಣಿಕೆ ಇದ್ದೇ ಇದೆ. ಕನ್ನಡಿಗ ಗೆಳೆಯನೊಬ್ಬ ನನಗೆ ಕನ್ನಡ ಮಾತಾಡೋಕೆ ಬರುತ್ತೆ ಕಣೋ, ಆದ್ರೆ ಓದೋಕೆ ಬರೆಯೋಕೆ ಬರಲ್ಲ ಅಂತಲೋ, ಬರೆಯೋದು ಬಿಟ್ಟು ವರ್ಷಗಳೇ ಆಗಿ ಅದು ಮರತೇ ಹೋಗಿದೆ ಅಂತಲೋ ಅಂತಾನೆ ಅಂದ್ರೆ ಅವನಿಗಿಂತ ಜಾಸ್ತಿ ನಾಚಿಕೆ ನನಗಾಗುತ್ತೆ. ಎಂಥಾ ಜನರ ಮಧ್ಯೆ ಇದ್ದೀನಪ್ಪಾ ಅಂತ ! ಹಂಗಂತಾ ಎಲ್ಲರೂ ತಾವು ಮಾಡೋ ಕೆಲಸ ಬಿಟ್ಟು ಕಥೆ, ಕವಿತೆ, ಕಾದಂಬರಿ ಬರೀಲಿ ಅಂತಲೋ, ಹಾದಿ ಬೀದಿಯಲ್ಲಿ ಎಲ್ಲೇ ಕನ್ನಡೇತರ ನುಡಿ ಕೇಳಿದರೂ ಅಲ್ಲಿಗೆ ಹೋಗಿ ಕನ್ನಡದ ಪಾಠ ಮಾಡಿ ಅಂತಲೋ ಹೇಳಹೊರಟಿಲ್ಲ ನಾನು. ಸಾಧ್ಯವಾದಷ್ಟೂ ನಮ್ಮ ನುಡಿಯನ್ನ ಉಳಿಸಿ ಬೆಳೆಸೋ ಪ್ರಯತ್ನ ನಮ್ಮದಾಗಬೇಕು ಅಂತ ಹೇಳಹೊರಟಿಹುದಷ್ಟೇ ಇಲ್ಲಿ.
ಕನ್ನಡ ಕಲಿಸೋರೇ ಇಲ್ವಾ ಇಲ್ಲಿ ಅಂದ್ರೆ ಹಾಗೇನಿಲ್ಲ.ಪತ್ರಿಕೆಯೊಂದು ಇಲ್ಲಿ ಬಂದು ನೆಲಸಿರೋ ಪರಭಾಷಾ ಗೆಳೆಯರಿಗೆ ಕನ್ನಡ ಕಲಿಸೋಕೆ ಟೊಂಕಕಟ್ಟಿ ನಿಂತಿರೋ ಗೆಳೆಯರನ್ನ ಮುನ್ನೆಲೆಗೆ ತರೋ ಪ್ರಯತ್ನಕ್ಕೆ ಕೈ ಹಾಕಿತ್ತು.ದಿನಕ್ಕೆ ಸುಮಾರು ಹತ್ತು ಚಿತ್ರಗಳಂತೆ ಮುನ್ನೂರಕ್ಕಿಂತಲೂ ಹೆಚ್ಚು ಅಂತಾ ಪ್ರಯತ್ನಗಳ ಪಟಗಳು ದಾಖಲಾಗಿದ್ದವಲ್ಲಿ.ತೆರೆಮರೆ ಕಾಯಿಯಾಗೇ ಇರಬಯಸಿದ್ದ, ಫೋಟೋ ಕಳಿಸಿಯೂ ಪ್ರಕಟವಾಗದಿದ್ದ ಅಂತಹ ಎಷ್ಟೋ ಪ್ರಯತ್ನಗಳು ನಮ್ಮ ಕಣ್ಣ ಮುಂದೆದುರೇ ಇವೆ ಅನ್ನೋದು ಕನ್ನಡದ ಉಸಿರ ಉಳಿವಿಗೆ ಒಳ್ಳೆಯ ಸುದ್ದಿಯೇ ಸರಿ.ಸುಮಾರಷ್ಟು ಮಾಲ್ಗಳಲ್ಲಿ, ಫೇಸ್ಬುಕ್ಕಿನ ಪೇಜುಗಳಲ್ಲಿ ಕನ್ನಡ ಕಲಿಕಾ ಪ್ರಯತ್ನಗಳು ನಡೆದವು ತಿಂಗಳುದ್ದಕ್ಕೂ. ಬೇರೆ ತಿಂಗಳಿಗಿಂತಲೂ ಹೆಚ್ಚು ಕಥೆ,ಕವನ ಸ್ಪರ್ಧೆಗಳು, ಪುಸ್ತಕ ಬಿಡುಗಡೆ ಸಮಾರಂಭಗಳು ನಡೆದವು. ಆಟೋ ಚಾಲಕರ ಸಂಘ, ಯುವಕರ ಸಂಘ ಹೀಗೆ ಎಲ್ಲೆಡೆಯಿಂದ ರಸಮಂಜರಿ ಕಾರ್ಯಕ್ರಮಗಳು, ಕನ್ನಡಕ್ಕೆ ಶ್ರಮಿಸಿದ ಹಿರಿಯರ ಸನ್ಮಾನಗಳು ಮತ್ತಿತರ ಕನ್ನಡಪರ ಕಾರ್ಯಕ್ರಮಗಳು ನಡೆದು ಎಲ್ಲೆಡೆ ಕನ್ನಡದ ಧ್ವಜ ರಾರಾಜಿಸಿದವು ನವೆಂಬರ್ ಉದ್ದಕ್ಕೂ. ಆದರೆ ಪೇಪರಲ್ಲಿ ಫೋಟೋ ಬಂದು ತಿಂಗಳು ಕಳೆಯೋದ್ರೊಳಗೆ, ಫೇಸ್ಬುಕ್ಕಲ್ಲೊಂದಿಷ್ಟು ಲೈಕ್ ಪಡೆದ ಕನ್ನಡಪರ ಫೋಟೋ ಹಳತಾಗಿ,ಬೇಸರವಾಗಿ ಹೊಸ ಫೋಟೋಕ್ಕೆ ಜಾಗ ಮಾಡಿಕೊಡೋ ಸಂದರ್ಭದಲ್ಲಿ ಫೋಟೋದೊಂದಿಗೆ ಮೂಡಿದ್ದ ಕನ್ನಡಪರ ಕಾಳಜಿಗಳೂ ಮರೆಯಾಗಬೇಕಾ ಅನ್ನೋದು ಪ್ರಶ್ನೆ. ಕನ್ನಡಕ್ಕಾಗಿ ಏನಾದರೂ ಮಾಡಬೇಕೆಂಬ ಅದಮ್ಯ ತುಡಿತ ಡಿಸೆಂಬರ್ ಒಂದು ಬರುತ್ತಿದ್ದಂತೆ ಅಚಾನಕ್ಕಾಗಿ ಮಾಯವಾಗಿ ಮುಂದಿನ ವರ್ಷದ ನವೆಂಬರ್ ಒಂದರ ತನಕ ಹೆಸರೇ ಸಿಕ್ಕದಂತೆ ತಲೆಮೆರಸಿಕೊಳ್ಳೊದು ದುರಂತ !
ವರ್ಷವಿಡೀ ರಸಮಂಜರಿ,ಸನ್ಮಾನ ಮಾಡಿ ಅಂತಲೋ, ಆಟೋ,ಬಸ್ಸು,ಕಾರುಗಳಲ್ಲಿ ಕನ್ನಡ ಧ್ವಜ ಹಾರಿಸಿಕೊಂಡು ಓಡಾಡಿ ಅಂತಲೂ ಹೇಳಹೊರಟಿಲ್ಲವಿಲ್ಲ. ಈ ಯಾವ ಬಾಹ್ಯ ತೋರಿಕೆಗಳಿರದಿದ್ದರೂ ನಮ್ಮ ಮನೆ ಮನದಲ್ಲಿ ಕನ್ನಡಕ್ಕೊಂದು ಸ್ಥಾನ ಕೊಟ್ಟರೆ ಸಾಕೆಂಬ ಭಾವವಷ್ಟೇ. ಕನ್ನಡಪ್ರೇಮಿಯೆಂದ ಮಾತ್ರಕ್ಕೆ ಆತ ಇಂಗ್ಲೀಷ್,ಹಿಂದಿ,ತಮಿಳು,ತೆಲುಗು,ಮರಾಠಿ, ಸಂಸ್ಕೃತ.. ಹೀಗೆ ಬೇರೆಲ್ಲಾ ಭಾಷೆಗಳ ದ್ವೇಷಿಯಾಗಬೇಕೆಂಬ ನಿಯಮವೇನಿಲ್ಲ. ನೀವೆಲ್ಲಾ ಕುವೆಂಪುರವರ "ಶ್ರೀ ರಾಮಾಯಣ ದರ್ಶನಂ" ಕೃತಿ ಓದಿರಬಹುದು.ಹೆಸರಾದ್ರೂ ಕೇಳಿರಬಹುದು. ಅದರಲ್ಲಿ ಒಂದು ಸಾಲು ಬರುತ್ತೆ
ಹೋಮರಗೆ ವರ್ಜಿಲಗೆ ಡಾಂಟೆ ಮೇಣ್ ಮಿಲ್ಟನಗೆ
ನಾರಣಪ್ಪಂಗೆ ಮೇಣ್ ಪಂಪನಿಗೆ ,ಋಷಿ ವ್ಯಾಸ
ಭಾಸ ಭವಭೂತಿ ಮೇಣ್ ಕಾಳಿದಾಸಾದ್ಯರಿಗೆ
ನರಹರಿ ತುಲಸಿದಾಸ ಮೇಣ್ ಕೃತ್ತಿವಾಸಾದಿ
ನನ್ನಯ್ಯ ಫಿರ್ದೂಸಿ ಕಂಬಾರವಿಂದರಿಗೆ
ಹಳಬರಿಗೆ ಹೊಸಬರಿಗೆ ಹಿರಿಯರಿಗೆ ಕಿರಿಯರಿಗೆ
ಕಾಲ ದೇಶದ ನುಡಿಯ ಜಾತಿಯ ವಿಭೇದಮಂ
ಲೆಕ್ಕಿಸದೆ ಜಗತೀ ಕಲಾಚಾರ್ಯರೆಲ್ಲರ್ಗೆ,
ಜ್ಯೋತಿಯಿರ್ಪಡೆಯಲ್ಲಿ ಭಗವದ್ ವಿಭೂತಿಯಂ
ದರ್ಶಿಸುತೆ,ಮುಡಿಬಾಗಿ ಮಣಿದು ಕೈಜೋಡಿಸುವೆನಾಂ,
ಲೋಕ ಗುರು ಕೃಪೆಯಿರಲಿ;ಲೋಕ ಕವಿ ಕೃಪೆ ಬರಲಿ
;(ಕವಿ ಕೃತು ದರ್ಶನಂ ಎಂಬ ಮೊದಲ ಸಂಚಿಕೆ, ೧೪೧ರಿಂದ ೧೫೧ರವರೆಗಿನ ಸಾಲುಗಳು)
ಅಂತ. ದೇಶ ಕಾಲ ಭಾಷೆಗಳ ಬೇಧವಿಲ್ಲದೇ ಎಲ್ಲಾ ಕಲಾಚಾರ್ಯರಿಗೆ, ಹಿರಿಯರಿಗೆ, ಕಿರಿಯರಿಗೆ ನಾ ವಂದಿಸುತ್ತೇನೆ ಎಂಬ ಮಾತು ಇಂದಿಗೂ ಪ್ರಸ್ತುತವೆನಿಸುತ್ತೆ. ಕನ್ನಡತನ ಉಳಿಸಿ ಬೆಳೆಸೋಕೆ ಪ್ರಯತ್ನಿಸೋ ಎಲ್ಲರಿಗೂ ದಾರಿದೀಪವಾಗುತ್ತೆ ಎಂದನಿಸುತ್ತೆ. ಎಷ್ಟಕ್ಕೂ ಇದು ನಮ್ಮ ನೆಲ. ನಮ್ಮ ಭಾಷೆ. ಇದನ್ನುಳಿಸಿ ಬೆಳೆಸೋ ನಮ್ಮ ಪ್ರಯತ್ನಗಳು ದಿನವೊಂದಕ್ಕೆ , ತಿಂಗಳೊಂದಕ್ಕೆ ಸೀಮಿತವಾಗದೇ ನಮ್ಮ ನಿತ್ಯದ ಭಾಗವಾದರೆ ಚೆನ್ನವೆಂಬ ಸದಾಶಯದೊಂದಿಗೆ ಸದ್ಯಕ್ಕೊಂದು ವಿರಾಮ.