ಜವಾಬ್ದಾರಿ
ಗೆಳೆಯನ ಮಾತಿಗೆ ಅವನು ಹೀಗಂದ- 'ನಿಜವಾದ ಜವಾಬ್ದಾರಿ ಆರಂಭವಾಗಿದ್ದೇ ಈಗ. ಇಷ್ಟುದಿನವಾದರೆ ಅಕ್ಕ ನನ್ನ ಕಣ್ಣೆದುರಿಗಿದ್ದಳು..'
ತುತ್ತು ಕೊಟ್ಟವಳಿಗೊಂದು ಮುತ್ತು…!
ನನಗಿನ್ನೂ ಆಗ ಚಡ್ಡಿ ಹಾಕಿಕೊಳ್ಳಬೇಕೆಂದೂ ತಿಳಿಯದಷ್ಟು ತೀರಾ ಸಣ್ಣ ವಯಸ್ಸು! ಹೊಟ್ಟೆ ಹಸಿವೆಂದರೆ ಅಮ್ಮ ತಟ್ಟೆಗಿಷ್ಟು ಹಾಕಿಕೊಡುತ್ತಿದ್ದಳು. ನಾನು ಎಡಗೈಯಲ್ಲೋ, ಬಳಗೈಯಲ್ಲೋ ತಿಂದು. ಅರ್ಧ ನೆಲಕ್ಕೆ ಚೆಲ್ಲಿಕೊಂಡು, ಮೂತಿಯೊರೆಸಿಕೊಳ್ಳದೆ (ಒಮ್ಮೊಮ್ಮೆ ಕೈಯನ್ನೂ ತೊಳೆಯದೇ!) ಬೀದಿಗೋಡಿಬಿಡುತ್ತಿದ್ದೆ. ಮತ್ತೆ ಹೊಟ್ಟೆ ಹಸಿವಾಗುವವರೆಗೂ ನಮ್ಮದೇ ಕೇರಿಯ ಹುಡುಗರೊಂದಿಗೆ ಆಟವಾಡಿಕೊಂಡಿರುತ್ತಿದ್ದೆ. ಉಪ್ಪುಮೂಟೆ ಆಟ, ಗೊಂಬೆಗಳ ಮದುವೆ ಆಟ, ಕಣ್ಣಾ ಮುಚ್ಚಾಲೆ, ಕಳ್ಳ ಪೋಲಿಸ್, ಕಪ್ಪೆಗಳ ಮದುವೆ, ಇರುವೆಗಳಿಗೆ ಊಟ ಹಾಕುತ್ತೇವೆಂಬ ಹಮ್ಮಿನಲ್ಲಿ ಇರುವೆ ಗೂಡುಗಳಿರುವ ಜಾಗದಲ್ಲೆಲ್ಲಾ ದೊಗೆದು ಅಕ್ಕಿ-ರಾಗಿ ಕಾಲುಗಳನ್ನ ಹಾಕುವುದು. ಹೀಗೆ ಏನೇನೋ ಆಟಗಳು…
ಅಮ್ಮಾ ಗೌರಿ ಹಬ್ಬಕ್ಕೆ ಅಣ್ಣನ ಮನೆ, ತಮ್ಮನ ಮನೆಯೆಂದು ಗೌರಿಹಬ್ಬಕ್ಕೆ ತವರಿನ ಸೀರೆಯುಡಲು ಹೋಗಿಬರುತ್ತಿದ್ದಳು. ಆಗೆಲ್ಲಾ ಅಮ್ಮ ಹೊರಟು ನಿಂತಾಗ ಅವಳ ಅಣ್ಣ-ತಮ್ಮಂದಿರು ಅಮ್ಮನ ಖರ್ಚಿಗೆಂದು ಪ್ರೀತಿಯಿಂದ ಅಮ್ಮನಿಗೊಂದಿಷ್ಟು ದುಡ್ಡು ಕೊಡುತ್ತಿದ್ದರು. ಆ ಹಣವನ್ನೆಲ್ಲ ಅಮ್ಮಾ, ಅಪ್ಪನ ಕಣ್ಣಿಗೆ ಬೀಳದಂತೆ ತನ್ನ ಪೆಟ್ಟಿಗೆಯಲ್ಲಿ ಭದ್ರವಾಗಿ ಬಚ್ಚಿಡುತ್ತಿದ್ದಳು.
ಅವತ್ತು ಅಮ್ಮಾ ಅವಳ ಅಣ್ಣ ಕೊಟ್ಟಿದ್ದ ದುಡ್ಡಿನಲ್ಲಿ ನನಗೊಂದು ಬಿಸ್ಕತ್ತಿನ ಪಟ್ಟಣವನ್ನು ತಂದಿಟ್ಟಿದ್ದಳು. ನಾನು ಆಟವನ್ನೆಲ್ಲಾ ಮುಗಿಸಿ, ಹೊಟ್ಟೆಗೆ ಹಸಿವು ತಟ್ಟಿದಾಗ ಮನೆಗೋಡಿ ಅಮ್ಮನ ಕೈಯಿಡಿದು ಜಗ್ಗಿದೆ. ಅಮ್ಮಾ ಪ್ರೀತಿಯಿಂದ ನನ್ನನ್ನು ಮಡಿಲಿನಲ್ಲಿ ಕೂರಿಸಿಕೊಂಡು ಬಿಸ್ಕತ್ತಿನ ಪಟ್ಟಣವನ್ನು ಬಿಡಿಸಿಕೊಟ್ಟಳು. ನಾನು ಖುಷಿಯಿಂದ ಅಮ್ಮನ ಕೆನ್ನೆಗೆ ಮುತ್ತಿಟ್ಟೆ. ಅಮ್ಮಾ- 'ಥೂ… ಬೇವರ್ಸಿ ನೀನೂ ನಿಮ್ಮಪ್ಪನ ಹಾಗೇನೇ..!' ಅಂತಂದು ಹುಸಿಕೊಪದಿಂದ ಬೆನ್ನಿಗೊಂದು ಗುದ್ದಿ, ನಾನು ಮುತ್ತಿಟ್ಟ ಕೆನ್ನೆಯೊರೆಸಿಕೊಂಡಳು!! ನಾನು ಮುತ್ತಿಟ್ಟ ಅಮ್ಮನ ಕೆನ್ನೆ ಕೆಂಪಾಗಿತ್ತು! ಆ ಕೆಂಪಿನ ಹಿಂದೆ ಸಂಕೋಚ; ನಾಚಿಕೆ ಮತ್ತು ಅಪ್ಪ ಮುತ್ತಿಟ್ಟ ಕ್ಷಣಗಳ ನೆನಪುಗಳಿದ್ದವೇನೋ..?!
***
-ನವೀನ್ ಮಧುಗಿರಿ