ಲೇಖನ

ನವರಾತ್ರಿಯ ಸಂಭ್ರಮ: ಪೂಜಾ ಗುಜರನ್ ಮಂಗಳೂರು.

ಭೂಮಿ ಮೇಲೆ ರಾಕ್ಷಸರ ಅಟ್ಟಹಾಸವು ಮಿತಿಮೀರಿದಾಗ. ಎಲ್ಲೆಲ್ಲೂ ಅನ್ಯಾಯ ವಿಜೃಂಭಿಸಿ ಅಧರ್ಮವೇ ತಾಂಡವಾಡುವಾಗ ದುಷ್ಟರನ್ನು ಸಂಹರಿಸಿ ಶಿಷ್ಟರನ್ನು, ರಕ್ಷಿಸಲು ಧರೆಗಿಳಿದು ಬಂದವಳೇ ದುರ್ಗಾಮಾತೆ. ತನ್ನ ಬಳಿಗೆ ನೊಂದು ಬರುವ ಭಕ್ತರಿಗೆ ದೇವಿಯೂ ಅನುಗ್ರಹವನ್ನು ಮಾಡಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿ ಹರಸುತ್ತಾಳೆ ಅನ್ನುವ ಅಚಲವಾದ ನಂಬಿಕೆ ಭಕ್ತರಿಗಿದೆ.

ನವರಾತ್ರಿಯ ಕುರಿತು ಪುರಾಣಗಳಲ್ಲಿ ಹಲವಾರು ಕಥೆಗಳಿವೆ.
ದುರ್ಗಾದೇವಿಯೂ ಮಹಿಷಾಸುರನೊಂದಿಗೆ ಪಾಡ್ಯದಿಂದ ನವಮಿವರೆಗೆ ಯುದ್ಧ ಮಾಡಿ ನವಮಿಯಂದು ಅಸುರನನ್ನು ಕೊಂದಳು. ಅದುದರಿಂದ ದೇವಿಗೆ ಮಹಿಷಾಮರ್ಧಿನಿ ಎಂದು ಕರೆಯುತ್ತಾರೆ.

ಪುರಾಣದ ಪ್ರಕಾರ ರಾಮನಿಗೆ ನಾರದರು ಶರವನ್ನರಾತ್ರಿಯ ವೃತವನ್ನು ಮಾಡಲು ಹೇಳಿದರು. ಈ ವೃತವನ್ನು ಪೂರ್ಣಗೊಳಿಸಿದ ನಂತರ ಶ್ರೀ ರಾಮನು ರಾವಣನನೊಂದಿಗೆ ಯುದ್ಧ ಮಾಡಿ ರಾವಣನ ಸಂಹಾರ ಮಾಡಿದನೆಂದು ಉಲ್ಲೇಖವಿದೆ. ಅದ್ದರಿಂದ ಉತ್ತರಭಾರತದಲ್ಲಿ ಇಂದಿಗೂ ದಶಮಿಯಂದು ರಾವಣನ ಪ್ರತಿಕೃತಿ ಮಾಡಿ ಸುಡಲಾಗುತ್ತದೆ.

ನವ, ಎಂದರೆ ಒಂಭತ್ತು. ಈ ಒಂಬತ್ತು ದಿನಗಳ ಕಾಲ ಆಚರಿಸುವ ಹಬ್ಬವೇ ನವರಾತ್ರಿ.
ನವರಾತ್ರಿಯಂದು ದೇವಿಯನ್ನು ಭಕ್ತಿ ಶ್ರದ್ಧೆಯಿಂದ ಪೂಜಿಸಿದರೆ ದೇವಿತತ್ತ್ವವೂ ಲಾಭವಾಗುತ್ತದೆ ಎನ್ನುವ ನಂಬಿಕೆಯಿದೆ.

ನವರಾತ್ರಿಯನ್ನು ಶರವನ್ನರಾತ್ರಿ ಅಂತಲೂ ಕರೆಯುತ್ತಾರೆ. ಈ ಹಬ್ಬವನ್ನು ಜಗತ್ತಿನಾದ್ಯಂತ ಎಲ್ಲರೂ ಸಂಭ್ರಮದಿಂದ ಆಚರಿಸುತ್ತಾರೆ. ಪ್ರತಿಯೊಂದು ದಿನವು ದುರ್ಗೆಯನ್ನು ವಿವಿಧ ರೂಪದಲ್ಲಿ ಆಚರಿಸುತ್ತಾರೆ. ಪ್ರತಿ ಪೂಜೆಗೂ ಅದರದ್ದೆ ಆದ ವಿಶೇಷತೆಯಿದೆ. ಶಕ್ತಿಯ ಆರಾಧನೆಯೆ ಈ ಹಬ್ಬದ ವೈಶಿಷ್ಟ್ಯ.

ಮೊದಲ ಮೂರು ದಿನ ದೇವಿಯನ್ನು ಶಕ್ತಿಯ ಪ್ರತೀಕವಾಗಿ ಪೂಜಿಸಲಾಗುತ್ತದೆ. ರಾಕ್ಷಸ ಶಕ್ತಿಯನ್ನು ನಾಶಮಾಡಿ ದುಷ್ಟತೆಯ ಹುಟ್ಟಡಗಿಸಿ ವಿಜಯಿಸುವ ಕಾಲವಿದು. ನಂತರದ ಮೂರು ದಿನ ಜಗತ್ತಿನಲ್ಲಿ ಸಂಪತ್ತು,ಸಮೃದ್ಧಿ ಮಮತೆಗಳನ್ನು ಕರುಣಿಸುವ ಪ್ರತೀಕವಾಗಿ ಲಕ್ಷ್ಮೀಯನ್ನು ಪೂಜಿಸಲಾಗುತ್ತದೆ.
ಇನ್ನು ಮೂರು ದಿನಗಳಲ್ಲಿ ಸರಸ್ವತಿಯನ್ನು ಆರಾಧಿಸಲಾಗುತ್ತದೆ. ಈ ಸಂದರ್ಭದಲ್ಲಿ ಹೆತ್ತವರು ತಮ್ಮ ಮಕ್ಕಳ ವಿಧ್ಯಾಭ್ಯಾಸವು ನಿರ್ವಿಘ್ನವಾಗಿ ನೆರೆವೇರಲಿ ಎಂದೂ ದೇವಿಯ ಸಾನಿಧ್ಯದಲ್ಲಿ ಅಕ್ಷರಭ್ಯಾಸವನ್ನು ಮಾಡಿಸುತ್ತಾರೆ.

ಜಗನ್ಮಾತೆಯನ್ನು ಒಂಭತ್ತು ದಿನಗಳ ಕಾಲ ವಿವಿಧತೆಯಿಂದ ಪೂಜಿಸುತ್ತಾರೆ.. ಒಂಭತ್ತು ಅವತಾರಗಳಿಗೆ ಸಂಬಂಧಿಸಿ ದೇವಿಯನ್ನು ವಸ್ತ್ರಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ.
ಈ ಸಮಯದಲ್ಲಿ ದೇವಿಗೇ ಒಂಭತ್ತು ಬಗೆಯ ಬಣ್ಣಗಳಿಂದ ಅಲಂಕರಿಸಿ ಪೂಜಿಸಲಾಗುತ್ತದೆ. ಈ ಪ್ರತಿಯೊಂದು ಬಣ್ಣಕ್ಕೂ ಅದರದೆ ಆದ ವಿಶೇಷ ಧಾರ್ಮಿಕ ಹಿನ್ನಲೆಯಿದೆ.
ಶೈಲಪುತ್ರಿ;- ಕಿತ್ತಳೆ ಬಣ್ಣ.
ಬ್ರಹ್ಮಚಾರಿಣಿ:- ಬಿಳಿ ಬಣ್ಣ.
ಚಂದ್ರ ಘಂಟ:-ಕೆಂಪು ಬಣ್ಣ.
ಕೂಷ್ಮಾಂಡ:-ಗಾಢ ನೀಲಿ ಬಣ್ಣ.
ಸ್ಕಂದಮಾತ:-ಹಳದಿ ಬಣ್ಣ.
ಕಾತ್ಯಾಯಿನಿ:-ಹಸಿರು ಬಣ್ಣ.
ಕಾಲರಾತ್ರಿ:-ಬೂದು ಬಣ್ಣ.
ಮಹಾಗೌರಿ:-ಗುಲಾಬಿ ಬಣ್ಣ.
ಸಿದ್ಧಿಧಾತ್ರಿ:-ಆಕಾಶ ನೀಲಿ.

ನವರಾತ್ರಿಯ ಹಬ್ಬವನ್ನು ಬೇರೆ ಬೇರೆ ಸ್ಥಳಗಳಲ್ಲಿ ಆಚರಿಸುತ್ತಾರೆ. ಕೆಲವೊಂದು ಕಡೆ ಆಚರಣೆಯಲ್ಲಿ ವಿಭಿನ್ನತೆ ಇದ್ದರೂ ವಿಧಿ-ವಿಧಾನಗಳು ಒಂದೇ ಆಗಿರುತ್ತದೆ. ಜಗತ್ತಿನ ಅತ್ಯಂತ ಶಕ್ತಿ ದೇವತೆಯೆಂದರೆ ಅದು ದುರ್ಗಾದೇವಿ.

ನವರಾತ್ರಿಯ ಕೊನೆಯ ದಿನ ಆಯುಧ ಪೂಜೆ. ಈ ಪೂಜೆಗೆ ವಿಶೇಷವಾದ ಮಹತ್ವವಿದೆ. ದೇವಿ ಹಾಗೂ ರಾಕ್ಷಸರ ಮಧ್ಯೆ ಘೋರ ಯುದ್ಧ ನಡೆದು ದೇವಿ ಜಯಿಸಿದ ಸಂಕೇತವಾಗಿ ಆಯುಧ ಪೂಜೆಯನ್ನು ಮಾಡಲಾಗುತ್ತದೆ. ಆ ದಿನ ದೇವಿಯ ಎಲ್ಲ ಅಯುಧಗಳಿಗೂ ವಿಶೇಷವಾದ ಪೂಜೆ ನಡೆಯುತ್ತದೆ. ಅಷ್ಟೇ ಅಲ್ಲ ಆ ದಿನ ಕುಶಲ ಕರ್ಮಿಗಳು ರೈತರು ತಾವು ಉಪಯೋಗಿಸುವ ತಮ್ಮ ಆಯುಧಗಳಿಗೆ ಪೂಜೆ ಮಾಡುತ್ತಾರೆ. ಅಲ್ಲದೇ ಮನೆಯಲ್ಲಿ ಉಪಯೋಗಿಸುವ ಚೂರಿಯಿಂದ ಹಿಡಿದು ಎಲ್ಲಾ ತರದ ಆಯುಧಗಳನ್ನು ಮನೆಯಲ್ಲಿರುವ ವಾಹನಗಳನ್ನು ತೊಳೆದು ಹೂಗಳಿಂದ ಅಲಂಕರಿಸಿ ಪೂಜೆ ಮಾಡಲಾಗುತ್ತದೆ.

ತುಳುನಾಡಿನಲ್ಲಿ ನವರಾತ್ರಿಯನ್ನು ಮಾರ್ನೆಮಿ (ಮಹಾನವಮಿ)ಯೆಂದು ಆಚರಿಸುತ್ತಾರೆ. ಇಲ್ಲಿ ನವರಾತ್ರಿಯ ಇನ್ನೊಂದು ವಿಶೇಷವೆಂದರೆ ವೇಷಗಳು. ಈ ಸಂಧರ್ಭದಲ್ಲಿ ವೇಷಧಾರಿಗಳು ವಿಶೇಷವಾದ ವೇಷಗಳನ್ನು ಧರಿಸಿಕೊಂಡು ಮನೆ ಮನೆಗೆ ಹೋಗುವ ಪದ್ಧತಿಯಿದೆ. ಅದರಲ್ಲೂ ಹುಲಿವೇಷಕ್ಕೆ ಮತ್ತೊಂದು ವಿಶೇಷವಿದೆ.ಮಕ್ಕಳಿಗೆ ಹುಲಿವೇಷದ ಹರಕೆ ಹೊತ್ತು ವೇಷ ಹಾಕುವವರು ಇದ್ದಾರೆ. ಇಲ್ಲಿ ದಸರಾ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಮಂಗಳೂರು ದಸರಾ ಅಂದರೆ ತುಂಬಾ ವಿಶೇಷವಾಗಿದೆ. ಊರ ಪರವೂರಿನಿಂದ ಬರುವ ಸಾವಿರಾರು ಭಕ್ತರನ್ನು ಮಂಗಳೂರು ದಸರಾ ಸಂಭ್ರಮದಿಂದ ಬರಮಾಡಿಕೊಳ್ಳುತ್ತದೆ.

ನವರಾತ್ರಿಯ ಹಬ್ಬವನ್ನು ಎಲ್ಲರೂ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ.
ನವರಾತ್ರಿಯ ಸಮಯದಲ್ಲಿ ದುರ್ಗೆಯನ್ನು ಅಲಂಕಾರ ಮಾಡಿ ಪೂಜಿಸುವುದಲ್ಲದೇ ನಗರವನ್ನು ಅಲಂಕರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ..

ಈ ನವರಾತ್ರಿ ಹಬ್ಬವೂ ಇನ್ನಷ್ಟು ಸಂಭ್ರಮ ಸಮೃದ್ಧಿಯನ್ನು ದಯಪಾಲಿಸಲಿ. ಮನದ ಕತ್ತಲೆಯನ್ನು ದೂರಮಾಡಿ ಅಜ್ಞಾನದ ಅಂಧಕಾರವನ್ನು ಅಳಿಸಿ ಎಲ್ಲರನ್ನೂ ಸನ್ಮಾರ್ಗದಲ್ಲಿ ನಡೆಸುವ ಆ ಜಗನ್ಮಾತೆಯೂ ಎಲ್ಲರಿಗೂ ಒಳಿತನ್ನು ಮಾಡಲಿ.

ಪೂಜಾ ಗುಜರನ್ ಮಂಗಳೂರು.


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *