ನವದಂಪತಿಗಳನ್ನು ಉದ್ದೇಶಿಸಿ: ಹೃದಯಶಿವ ಅಂಕಣ


ನೀವು ಈ ಜಗತ್ತಿನ ರಮ್ಯಜೀವಿಗಳು, ನೂತನ ಜಗತ್ತಿಗೆ ಮೈಮನಸುಗಳನ್ನು ತೆರೆದುಕೊಳ್ಳುತ್ತಿರುವ ಆಸೆಗಣ್ಣುಗಳ ಕೋಮಲ ಹೃದಯವಂತರು… ನಿಮ್ಮೊಟ್ಟಿಗೆ ಒಂದಿಷ್ಟು ಮಾತುಗಳನ್ನು ಹಂಚಿಕೊಳ್ಳುವ ತುಡಿತ ನನ್ನದು . ನೀವು ಅಂದರೆ, ಇನ್ನಷ್ಟೇ ದಾಂಪತ್ಯ ಬದುಕಿಗೆ ಪ್ರವೇಶ ಪಡೆಯುತ್ತಿರುವ, ಆದರೆ ಹುಡುಗುತನದ ಗಡಿಯನ್ನು ಮೀರಿದ, ಕುಂಟೋಬಿಲ್ಲೆ, ಮರಕೋತಿ ಆಟಗಳನ್ನು ಬಿಟ್ಟು ಈಗಷ್ಟೇ ಮದುವೆಯಾಗಿರುವ ತರುಣ ಅಥಾ ತರುಣಿ. ನೀವು ಜನ ತುಂಬಿದ ಎಲ್ಲಾ ಊರುಗಳಲ್ಲಿ, ಚಿತ್ರಮಂದಿರಗಳಲ್ಲಿ, ದೇವಸ್ಥಾನಗಳಲ್ಲಿ ಕಣ್ಣಿಗೆ ಬೀಳುತ್ತೀರಿ. ಮುಂಬಯಿಯ ಇಂಡಿಯಾ ಗೇಟಿನ ಬಳಿ, ಊಟಿಯ ಚಳಿಯ ನಡುವೆ, ಕೇರಳದ ಸಮುದ್ರ ತೀರ, ಮೈಸೂರಿನ ಮೃಗಾಲಯ, ಆಗ್ರಾದ ತಾಜ್ ಮಹಲ್ ಗಳ ಹತ್ತಿರ ಕೈಗೆ ಕೈ ಬೆಸೆದು ನಸುನಗುವುದನ್ನು ಕಂಡಿದ್ದೇನೆ. ಲಾಲ್ ಬಾಗ್ ಕೆರೆ ನೋಡುತ್ತಾ ಕಿಲಕಿಲ ನಗುವುದನ್ನು, ಜೋಗ್ ಜಲಪಾತದ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುವುದನ್ನು, ಸಂಸಾರಿಗಳತ್ತ ಕುತೂಹಲ, ಗೊಂದಲದಿಂದ ನೋಡುವುದನ್ನು ಗಮನಿಸಿದ್ದೇನೆ; ಎಲ್ಲಕ್ಕಿಂತ ಮಿಗಿಲಾಗಿ ನನ್ನೊಳಗೆ ನೀವು ಮೂಡಿಸುವ ಅಚ್ಚರಿ, ಆತಂಕಗಳನ್ನು ನೆನೆದು ಬೆರಗಾಗಿದ್ದೇನೆ. 

ನಿಮ್ಮೊಂದಿಗೆ ಈ ಮಾತುಗಳನ್ನು ಹಂಚಿಕೊಳ್ಳಲು ಮೂಲಪ್ರೇರಣೆಯಾದ ನಿಮ್ಮದೇ ಮಿಡಿತದ ಒಟ್ಟಿಗೆ ಮಾತು ಆರಂಭಿಸುತ್ತೇನೆ. ಮೊನ್ನೆಮೊನ್ನೆಯಷ್ಟೇ ಆಡುವ ಹುಡುಗರಾಗಿದ್ದ ನೀವು ನೋಡುನೋಡುತ್ತಿದ್ದಂತೆಯೇ ದೊಡ್ಡವರಂತೆ ಕಾಣಿಸುತ್ತಿದ್ದೀರಿ. ಈಗಷ್ಟೇ ಮದುವೆಯಾಗಿದೆ. ಅಲ್ಲಿ, ಇಲ್ಲಿ ಸುತ್ತಾಡಲು ಅಥವಾ ಬಂಧುಮಿತ್ರರ ಮನೆಯ ಊಟದ ಆಹ್ವಾನಕ್ಕೆ ಹೊರಡುತ್ತಿರುವ ನೀವು 'ಹುಷಾರು… ಅರಿಶಿನದ ಮೈಯಿ' ಎಂದು ಹೇಳುವ ಅಮ್ಮನ ಮಾತನ್ನು ಕೇಳಿಸಿಕೊಳ್ಳುವುದೇ ಇಲ್ಲ. 'ಗಾಡಿ ಓಡಿಸುವಾಗ ಜಾಗ್ರತೆ' ಎಂದು ಹೇಳುವ ಅಪ್ಪನ ಮಾತಿಗೆ 'ಓಕೆ ' ಎಂದಷ್ಟೇ ಹೇಳಿ ಭರ್ರನೆ ಹೋಗಿಬಿಡುತ್ತೀರಿ. ನಿಮ್ಮನ್ನು ನಿಭಾಯಿಸುವಷ್ಟರಲ್ಲಿ ತಂದೆತಾಯಿಗಳು ಹೈರಾಣಾಗಿರುತ್ತಾರೆ. ಹಿರಿಯರ ಬುದ್ಧಿಮಾತು, ಕಾಳಜಿ, ಲೆಕ್ಕಾಚಾರಗಳೆಲ್ಲ ನಿಮಗೆ ಅತೀ ಮುತುವರ್ಜಿಯ ತಮಾಷೆಯ ವಿಷಯಗಳಾಗಿ ಕಾಣುತ್ತವೆ; ಮುತುವರ್ಜಿ ಎಂಬುದು ನಿಮ್ಮ ಅನುಭವ, ನಡೆ, ಪ್ರಬುದ್ದತೆಗಳಿಂದ ನಿಮಗೇ ಒಲಿಯಬೇಕಾದುದು. ಆದ್ದರಿಂದ ಬದುಕನ್ನು ಎದುರಿಸುತ್ತಲೇ, ಎಡವುತ್ತಲೇ ನೀವುನೀವಾಗಿಯೇ ಮಾಗುವುದು ಸರಿಯಾದ ಮಾರ್ಗ.

ನಿಮ್ಮ ಜಗತ್ತಿನಲ್ಲಿ ದುಡ್ಡಿನ ಸ್ಥಾನವೇನು? ದುಡ್ಡು ಕೊಟ್ಟು ಕೊಳ್ಳಲಾಗದ ಒಂದೇ ಒಂದು ವಸ್ತುವೆಂದರೆ ಅದು ದುಡ್ಡು ಮಾತ್ರ. ಈಗಷ್ಟೇ ಒಡವೆಗಳಿಗಾಗಿ, ಬಟ್ಟೆಗಳಿಗಾಗಿ, ಕಲ್ಯಾಣ ಮಂಟಪದ ಬಾಡಿಗೆಗಾಗಿ, ಅಡುಗೆಯವನಿಗಾಗಿ, ಫೋಟೋ-ವಿಡಿಯೋ ತೆಗೆಯುವವನಿಗಾಗಿ, ಹೂವಿನಲಂಕಾರ ಮಾಡುವವನಿಗಾಗಿ, ವಾದ್ಯ ನುಡಿಸುವವನಿಗಾಗಿ, ಮೇಕಪ್ ಹಾಕುವವನಿಗಾಗಿ, ಪುರೋಹಿತನಿಗಾಗಿ ಹೆತ್ತವರಿಂದ ಹಣ ಖರ್ಚು ಮಾಡಿಸಿ ಮದುವೆಯಾದ ನಿಮಗೆ ಹಣದ ಬಗ್ಗೆ ಒಂದೆರಡು ಮಾತು ಹೇಳಲಿಚ್ಛಿಸುತ್ತೇನೆ, ಕೇಳಿ. ನಾನು ಚಿಕ್ಕವನಿದ್ದಾಗ ಮನೆ ನಿಭಾಯಿಸಲು ಬಾರದ ನನ್ನಪ್ಪ ಸಾಲ ಮಾಡುವುದನ್ನು ನನ್ನ ತಾತ ವಿರೋಧಿಸುತ್ತಿದ್ದ; ಸಾಲ ಅಪಾಯಕಾರಿಯೆನ್ನುವ ರೀತಿಯಲ್ಲಿ ಬೈಯ್ಯುತ್ತಿದ್ದ. ನಂತರ ತಿಳಿದದ್ದೆಂದರೆ, ಇದ್ದುದರಲ್ಲಿ ಸಂಸಾರ ನಡೆಸಲು ಬಾರದೆ, ಸಾಲದ ಮೊರೆ ಹೋದ ನನ್ನಪ್ಪ ಬಡ್ಡಿಯನ್ನೂ ಕಟ್ಟಲಾಗದೆ ಕಡೆಗೆ ಮೂರೆಕರೆ ಹೊಲ, ಒಂದು ಮನೆ, ಒಂದು ಖಾಲಿಸೈಟನ್ನು ಮಾರಿಕೊಂಡ ದುರಂತಮಯ ಸಂಗತಿ. ಜರ್ಮನ್ ಗಾದೆಯೊಂದರ ಪ್ರಕಾರ 'ಉಳಿತಾಯ ಎಂಬುದು ಸಂಪಾದನೆಗಿಂತಲೂ ಮಹತ್ವವಾದದ್ದು'. ಇದರ ತಾತ್ಪರ್ಯವೇನೆಂದರೆ, ನೀವು ವೃಥಾ ಖರ್ಚು ಮಾಡಿದರೆ, ನಿಮ್ಮ ನಲ್ಲಿಯ ನೀರು ಸುರಿಯಲು ಬಿಟ್ಟು, ಟಿವಿಯನ್ನು ಚಾಲನೆಯಲ್ಲಿಟ್ಟು ಎಲ್ಲಿಗೋ ಹೋದರೆ, ಅರ್ಧ ತಿಂದು ಉಳಿದರ್ಧವನ್ನು ಕಸದಬುಟ್ಟಿಗೆಸೆದರೆ, ನಿಮ್ಮಿಂದ ಯಾವುದೂ ರಕ್ಷಿಸಲ್ಪಡುವುದಿಲ್ಲ; ಸಿದ್ಧಾಂತವೂ. ಇನ್ನೊಬ್ಬರಿಗೆ ಅಗತ್ಯವಿರುವ ಅವುಗಳನ್ನು ವೃಥಾ ನಾಶ ಮಾಡಿದ ನಿಮ್ಮೊಳಗೆ ಜವಾಬ್ಧಾರಿಯುತ ಮಾನವನ ಲಕ್ಷಣಗಳು ಕೂಡ ಬಾಳಿಕೆ ಬರುವುದು ಕಷ್ಟ. 

ನನ್ನ ಹತ್ತಿರ ಪ್ರಸಿದ್ಧ ಸಾಹಿತಿಯೊಬ್ಬರ ಅಭಿನಂದನಾ ಗ್ರಂಥವಿದೆ. ದುಬಾರಿ ಕಾಗದದಲ್ಲಿ, ಕಲರ್ ಫುಲ್  ಚಿತ್ರಗಳೊಡನೆ, ಅದ್ಭುತ ಕವರ್ ಪೇಜ್ ಮಾಡಿಸಿ ತಮ್ಮ ಬರವಣಿಗೆ ಬಗ್ಗೆ, ತಮ್ಮ ಬಗ್ಗೆ ತಮಗೆ ಬೇಕಾದವರಿಂದ ಹೊಗಳಿಕೆಯ ಬರಹಗಳನ್ನು ಬರೆಸಿಕೊಂಡು ಈ ಬೃಹತ್ ಪುಸ್ತಕವನ್ನು ರೂಪಿಸಿದ್ದಾರೆ. ನಾನು ಈ ಪುಸ್ತಕಕ್ಕಾದ ವೆಚ್ಚವನ್ನು ತಿಳಿದುಕೊಂಡಾಗ ಪುಸ್ತಕ, ಬಿಡುಗಡೆ ಸಮಾರಂಭ ಎಲ್ಲವೂ ಸೇರಿ ಹತ್ತಿರಹತ್ತಿರ ಒಂದು ಲಕ್ಷ ರೂಪಾಯಿಗಳಷ್ಟು ವೆಚ್ಚ ತಗುಲಿತ್ತು. ತಾವು ಏಕೆ ಬರೆದರು, ಸಾಹಿತ್ಯ ಲೋಕಕ್ಕೆ ತಮ್ಮ ಕೊಡುಗೆಯೇನು, ತಮ್ಮನ್ನು, ತಮ್ಮ ಸಾಹಿತ್ಯವನ್ನು ಹೊಗಳಿರುವ ಲೇಖನ-ಮುನ್ನುಡಿಗಳುಳ್ಳ ಈ ಗ್ರಂಥಕ್ಕೆ ಮುಲಾಜಿಗೆ ಬಸಿರಾಗುವ ಪ್ರಕಾಶಕರ ಕೈಯಲ್ಲಿ ಇಷ್ಟೊಂದು ಹಣ ಪೋಲು ಮಾಡಿಸಿದ ಆ ಪ್ರಚಾರಪ್ರಿಯ ಸಾಹಿತಿಗೆ ಇವರಿಗಿರಬಹುದಾದ ಅಭಿಮಾನಿಗಳ ಮೇಲೆ ಭರವಸೆಯಿಟ್ಟು ಪುಸ್ತಕ ಮಾಡಿ ಕೈ ಸುಟ್ಟುಕೊಂಡ ಪ್ರಕಾಶಕನ ಅಳಲು ಅರ್ಥವಾಗಿರಲಿಕ್ಕಿಲ್ಲ. 

ನಿಮ್ಮ ಪರಸ್ಪರ ಒಗ್ಗಿಕೊಳ್ಳುವುದರ ಬಗ್ಗೆ ನಾನು ಬಹುವಾಗಿ ಧ್ಯಾನಿಸುತ್ತೇನೆ. ನನಗೆ ನೆನಪಿಸುವಂತೆ ನನಗೆ ಆಗಷ್ಟೇ ಮದುವೆಯಾಗಿತ್ತು. ನಾವು ಹಳ್ಳಿಗಾಡಿನವರಾಗಿದ್ದುದರಿಂದ ಈ ಪಟ್ಟಣದ ನವದಂಪತಿಗಳಷ್ಟು ಸಲೀಸಾಗಿ ಬೆರೆಯುವ ಮಾತೇ ಇಲ್ಲ; ಸಂಕೋಚ ಸ್ವಭಾವದವರಾದ ನಾವು ಆದಷ್ಟು ಸಮಯ ತೆಗೆದುಕೊಂಡು ಸಲಿಗೆ ಬೆಳೆಸಿಕೊಳ್ಳಬೇಕಾಗಿತ್ತು. ನಾನಂತೂ ನನ್ನ ಹೆಂಡತಿಯನ್ನು ತುಸು ನಾಚೆಕೆಯಿಂದಲೇ 'ಬನ್ನಿ… ಹೋಗಿ' ಅಂತಲೇ ಮಾತಾಡಿಸುತ್ತಿದ್ದೆ. ಆಕೆಯೂ ಅಷ್ಟೇ, ಅಂಜಿಕೆ, ಅಳುಕಿಲ್ಲದೆ ಮಾತಾಡುತ್ತಲೇ ಇರಲಿಲ್ಲ. ಸಂಕೋಚದಿಂದಲೇ ಅರಳಿಕೊಳ್ಳುವ ಮದುವೆ ಎನ್ನುವ ಈ ವಿಶಿಷ್ಟ ಸಂಬಂಧ ಈ ನಗರಜಗತ್ತಿನಲ್ಲಿ ತನ್ನ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಾ ಬಂದು ಈಗ ನಿಶ್ಚಿತಾರ್ಥದ ನಂತರ ಹುಡುಗ-ಹುಡುಗಿಯನ್ನು ದೂರ ದೂರ ಇರಿಸುವುದೇ ಹೆತ್ತವರ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. ಇದೇ ವರಸೆ ಮುಂದುವರಿದರೆ, ಮದುವೆ ಕುತೂಹಲ ಕಳೆದುಕೊಂಡು, ಮೊದಲರಾತ್ರಿಗಳು ನೀರಸ ಎನ್ನಿಸುವ ದಿನಗಳೇನೂ ದೂರವಿಲ್ಲ. ಆದ್ದರಿಂದ ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ನಿಮ್ಮಲ್ಲಿ ಹೇಳಬೇಕಿರುವ ಮಾತೆಂದರೆ, ತುಸು ಸಂಕೋಚ, ಕೌತುಕ, ಅಚ್ಚರಿಯಿಂದ ಮದುವೆಯನ್ನು ಸ್ವೀಕರಿಸುವ ಮನೋಧರ್ಮ ಬೆಳೆಸಿಕೊಂಡರೆ ಮಾತ್ರ ನಿಮ್ಮ ಬದುಕಿನಲ್ಲಿ ಮದುವೆ ವಿಶೇಷ ಅರ್ಥ ಪಡೆದುಕೊಳ್ಳಲು ಸಾಧ್ಯ.

ಇದಕ್ಕಿಂತಲೂ ಪ್ರಮುಖವಾದುದು ನಿಮ್ಮನ್ನು ಎದುರುಗೊಳ್ಳುವ ಲೈಂಗಿಕತೆ. ಲೈಂಗಿಕ ವಿಷಯಗಳ ಬಗ್ಗೆ ತೀವ್ರವಾಗಿ ಧ್ಯಾನಿಸುತ್ತಿದ್ದಂತೆಯೇ ಪ್ರಕೃತಿದತ್ತವಾದ ಲೈಂಗಿಕತೆಗೆ ನಮ್ಮ ದೇಶದಲ್ಲಿ ಧರ್ಮದ ಲೇಪ ಹಚ್ಚಿ ಗೊಂದಲಮಯ ಸ್ಥಿತಿಯನ್ನು ತಂದೊಡ್ಡಿಕೊಂಡು ಯಾತನೆ ಪಡುತ್ತಿರುವುದು ನನ್ನನ್ನು ಕಾಡುತ್ತದೆ. ಸನ್ಯಾಸದ ಹೆಸರಿನಲ್ಲಿ ತಪಸ್ಸು, ಇಂದ್ರಿಯನಿಗ್ರಹದ ಮೂಲಕ ಸೆಕ್ಸ್ ನಿಂದ ದೂರ ಉಳಿಯಲು ಹರಸಾಹಸ ಪಡುವ, ಇಲ್ಲವೇ ಕದ್ದುಮುಚ್ಚಿ ತೃಷೆ ತೀರಿಸಿಕೊಳ್ಳಲು ಹೋಗಿ ತಗಲುಹಾಕಿಕೊಳ್ಳುವ ಧರ್ಮಗುರುಗಳ ಕಷ್ಟವನ್ನು ನೆನದರೆ ನಗು ಹಾಗೂ ದುಃಖ ಎರಡೂ ನನ್ನನ್ನು ಒಟ್ಟೊಟ್ಟಿಗೇ ಆವರಿಸುತ್ತವೆ. ಇಷ್ಟಕ್ಕೂ ಇಂಥವರು ಆರಾಧಿಸುವ ಬ್ರಹ್ಮ, ವಿಷ್ಣು, ಈಶ್ವರರೂ ಸಂಸಾರಸ್ಥರು ಎಂಬುದು ಸೋಜಿಗದ ಸಂಗತಿ. ಹೀಗಾಗಿ ನಮ್ಮಲ್ಲಿ ಸೆಕ್ಸ್  ಅಪರಾಧವಾಗಿ ಅತ್ಯಾಚಾರಗಳಿಗೆ, ಅನಾಚಾರಗಳಿಗೆ ದಾರಿಮಾಡಿಕೊಟ್ಟಿತು; ಪಶ್ಚಿಮ ದೇಶಗಳಲ್ಲಿನ ಸೆಕ್ಸ್ ಬಗೆಗಿನ ನಿಲುವು ನಮ್ಮ ಪಾಲಿಗೆ ಅನಾಗರೀಕವಾದದ್ದೆಂಬ ತೀರ್ಮಾನ ಬಂತು. 

ನವದಂಪತಿಗಳ ಲೈಂಗಿಕ ಒತ್ತಡಗಳು ಹಿರಿಯರಿಗೆ ಗೊತ್ತಾಗುವುದಿಲ್ಲ. ಅಡಗಿಸಿಟ್ಟುಕೊಂಡ ಭಾವನೆಗಳಿಗೆ, ಕಾಮನೆಗಳಿಗೆ ರೆಕ್ಕೆ ಬರುವ ಕಾಲ ಅದು. 'ರೆಕ್ಕೆ ಬರುವ' ಎಂಬ ಪದಬಳಕೆ ಭಾರತದಂತಹ ದೇಶದಲ್ಲಿ ಅರ್ಥಪೂರ್ಣ. ಏಕೆಂದರೆ ಲೈಗಿಕತೆಯ ಬಗ್ಗೆ ಚರ್ಚಿಸುವ, ಅರಿತುಕೊಳ್ಳುವ ಮುಕ್ತ ವಾತಾವರಣ ಇಲ್ಲಿಲ್ಲ. ಶಿಶ್ನ-ಯೋನಿಗಳ ಸಂಗಮದಿಂದಲೇ ಹುಟ್ಟುವ ಪ್ರತಿಯೊಂದು ಹೆಣ್ಣು ಮತ್ತು ಗಂಡಿನೊಳಗೆ ಲೈಂಗಿಕ ಕೌತುಕಗಳು ಸುಪ್ತವಾಗಿ ಅಡಗಿದ್ದು ಸಮಯ ಬಂದಾಗ ಕಾರ್ಯಪ್ರವೃತ್ತವಾಗುತ್ತವೆ. ಆದ್ದರಿಂದ ಹರೆಯಕ್ಕೆ ಕಾಲಿಡುತ್ತಿದ್ದಂತೆಯೇ ಮೈಮನಸ್ಸನ್ನು ಆವರಿಸಿಕೊಳ್ಳುವ ಇವುಗಳು ಹೆಣ್ಣು ಅಥವಾ ಗಂಡು ಮದುವೆಯಂಚಿಗೆ ಬರುತ್ತಿದ್ದಂತೆಯೇ ಒಂದಿಷ್ಟು ಬಯಕೆ, ಆತಂಕಗಳೊಡನೆ ಮತ್ತಷ್ಟು ತೀವ್ರಗೊಳ್ಳುವುದು ಸಹಜ ಪ್ರಕ್ರಿಯೆ. 

ನಿಮ್ಮಂತಹ ನವದಂಪತಿಗಳ ಅನುಕೂಲಕ್ಕಾಗಿ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತೇನೆ. ನನಗೆ ಗೊತ್ತಿರುವ ಸ್ನೇಹಿತನೊಬ್ಬ ತನ್ನ ಮದುವೆಯ ಹೊಸತರಲ್ಲಿ ಶೀಘ್ರಸ್ಖಲನದ ಸಮಸ್ಯೆಗೆ ತುತ್ತಾದ. ಈ ಸಮಸ್ಯೆಯಿಂದಾಗಿ ತನ್ನ ಮಡದಿಯನ್ನು ತೃಪ್ತಿಪಡಿಸಲಾಗದೆ ತನ್ನ ಪುರುಷತ್ವಕ್ಕೇ ಧಕ್ಕೆ ಉಂಟಾಗುತ್ತಿರುವುದಾಗಿ ಬೆಚ್ಚಿದ. ಒಂದು ದಿನ ಧೈರ್ಯಮಾಡಿ ವೈದ್ಯರೊಬ್ಬರಲ್ಲಿ ತನ್ನ ಆತಂಕವನ್ನು ಹೇಳಿಕೊಂಡ. ಅವರು ಹೇಳಿದರು:  "ಮೊದಲಬಾರಿ ಹೆಣ್ಣಿನ ಸ್ಪರ್ಶ, ಬಿಸಿಮಾತು, ಸಲಿಗೆ ಸಾಮೀಪ್ಯಗಳ ತಾಪಕ್ಕೆ ಗುರಿಯಾಗುವ ನಿನ್ನಂತಹ ಬಹುತೇಕ ನವವಿವಾಹಿತರ ಸಮಸ್ಯೆ ಇದು. ಇಷ್ಟಕ್ಕೂ ಈಗಷ್ಟೇ ಮದುವೆಯಾಗಿರುವುದರಿಂದಲೂ, ನಿನ್ನ ಹೆಂಡತಿಯೂ ನಿನ್ನ ಬದುಕಿಗೆ ಇನ್ನೂ ಹೊಸಬಳಾಗಿರುವುದರಿಂದಲೂ ಇಂತಹ ಸಮಸ್ಯೆಗಳು ಎದುರಾಗುವ ಸಂಭವವಿದೆ. ಇದಕ್ಕೆ ಸರಿಯಾದ ಔಷಧಿ ನೀನು ನಿನ್ನ ಹೆಂಡತಿಯೊಂದಿಗೆ ಹೆಚ್ಚು ಹೆಚ್ಚು ಬೆರೆಯಬೇಕು. ಪ್ರೀತಿಯ ಮಾತು, ಸಲಿಗೆಯಿಂದ ಆತ್ಮೀಯತೆಯಿಂದ ಹತ್ತಿರವಾಗಬೇಕು. ಹೆಣ್ಣಿನೆಡೆಗಿನ ಕೌತುಕ, ಅಚ್ಚರಿಯಷ್ಟೇ ಆಕೆಯ ಕುರಿತ ಆವೇಗ, ಉದ್ವೇಗವನ್ನೂ ದಾಟಿ ಮುನ್ನಡೆಯಬೇಕು. ಆಗ ನಿನ್ನ ಗಂಡಸುತನದ ಬಗೆಗಿನ ನಿನ್ನ ಆತಂಕವೂ ನಿವಾರಣೆಯಾಗುತ್ತಿದೆ, ನಿನ್ನ ದಾಂಪತ್ಯ ಬದುಕೂ ಸುಂದರವಾಗುತ್ತಿದೆ ಎಂದು ಮನಗಾಣುವೆ." 

ಈ ಸಲಹೆಯಿಂದ ಆ ಸ್ನೇಹಿತನ ಲೈಂಗಿಕ ಭ್ರಮೆಗಳು ಯಾವುದೇ ಗುಳಿಗೆ, ಟಾನಿಕ್ಕುಗಳಿಲ್ಲದೆಯೇ ದೂರವಾಗಲು ಸಹಕಾರಿಯಾಯಿತು. ಅವನಿಗೀಗ ಎರಡು ಮಕ್ಕಳು.

ನವದಂಪತಿಗಳ ಜೀವನಕ್ರಮದಲ್ಲಿ ಲೈಂಗಿಕತೆಯಷ್ಟೇ ಪ್ರಮುಖವಾದದ್ದು ಮುಂಬರುವ ಬೃಹತ್ ಬದುಕನ್ನು ಎದುರಿಸುವ, ಆ ನಿಟ್ಟಿನಲ್ಲಿ ತಯಾರಿ ನಡೆಸಿಕೊಳ್ಳುವ ಜಾಣ್ಮೆ ಹಾಗೂ ಜಾಗ್ರತೆ. ಈ ನಿಟ್ಟಿನಲ್ಲಿ ಮದುವೆಯಾದ ಮೊದಲ ಒಂದೆರಡು ವರ್ಷಗಳು ಗಂಡ, ಹೆಂಡತಿಯ ದೃಷ್ಟಿಯಲ್ಲಿ ಸಂಕೀರ್ಣ ಕಾಲ. ತನ್ನ ಸಂಗಾತಿ ಯಾವ ಬಗೆಯ ಮನುಷ್ಯ? ಉದಾರಿಯೋ, ಜಿಪುಣನೋ, ನಾಸ್ತಿಕನೋ, ಆಸ್ತಿಕನೋ, ಹೊಂದಿಕೊಂಡು ಹೋಗುವವನೋ, ಹಠಮಾರಿಯೋ, ಸಭ್ಯನೋ, ಮುಖವಾಡ ಹೊತ್ತವನೋ, ಕುಡುಕನೋ, ಲಂಪಟನೋ, ಮುಗ್ಧನೋ, ಪೆದ್ದನೋ, ಕಿಲಾಡಿಯೋ? ಯಾವ ಬಗೆಯ ಮನುಷ್ಯನೊಂದಿಗೆ ತನ್ನ ಸುಧೀರ್ಘ ಬಾಳಪಯಣ ಸಾಗಬೇಕಿದೆ?- ಇದು ಗಂಡ, ಹೆಂಡತಿ ಇಬ್ಬರಿಗೂ ಅನ್ವಯವಾಗುವ ಮಾತು. 

ನನ್ನ ಗ್ರಹಿಕೆಗೆ ಸಿಕ್ಕಿದಂತೆ, ಬದುಕಿನ ಸಾರ್ಥಕತೆಯಲ್ಲಿ ಅಂದರೆ ನಿರಾಳ, ನಿರುಮ್ಮಳ ಜೀವನಪಯಣದಲ್ಲಿ ಮುಖ್ಯವಾದದ್ದು ನಮ್ಮ ಮನೋಧರ್ಮಕ್ಕೆ ಹೊಂದುವ ಸಂಗಾತಿ ಸಿಕ್ಕುವುದು. ಮೌನವನ್ನಪ್ಪುವ ಕವಿಗೆ ಬಾಯಿಬಡುಕಿ ಹೆಂಡತಿಯೋ, ವಿಚಾರವಾದಿಗೆ ಟಿವಿಯ ಜ್ಯೋತಿಷ್ಯ ಕಾರ್ಯಕ್ರಮ ವೀಕ್ಷಿಸುವ ಹೆಂಡತಿಯೋ, ಅಡುಗೆಭಟ್ಟನಿಗೆ ಸದಾ ಪಥ್ಯದಲ್ಲಿರುವ ರೋಗಿಷ್ಠ ಹೆಂಡತಿಯೋ, ಆಫೀಸಿಗೆ ಹೋಗಿ ದುಡಿಯುವ ಹೆಣ್ಣಿಗೆ ದಿನವೆಲ್ಲ ಇಸ್ಪೀಟಾಡುವ ಸೋಮಾರಿ ಗಂಡನೋ, ಜಿಮ್, ಏರೋಬಿಕ್ಸ್ ಸಂಸ್ಕೃತಿಯ ಹುಡುಗಿಗೆ ದೊಡ್ಡಹೊಟ್ಟೆಯ ತಿಂಡಿಪೋತ ಗಂಡನೋ ಸಿಕ್ಕುವುದು ಈ ದೇಶದ ದುರದೃಷ್ಟಗಳಲ್ಲೊಂದು; ಮನುಷ್ಯನ ಅಧಃಪತನದ ಸಂಕೇತ. ಇದಕ್ಕೆ ಮೂಲ ಕಾರಣ ನಮ್ಮ ಯುವಕಯುವತಿಯರು ತಮ್ಮ ಇಚ್ಛೆ, ಅಭಿರುಚಿ, ಆಸಕ್ತಿಗಳನ್ನು ಆಧರಿಸಿ ತಮ್ಮ ಜೀವನಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ, ತಮ್ಮ ಬದುಕನ್ನು ರೂಪಿಸಿಕೊಳ್ಳುವತ್ತ ಜಾಗರೂಕತೆಯಿಂದ ಧ್ಯಾನಿಸುವಲ್ಲಿ ನಮ್ಮ ಸಾಮಾಜಿಕ ಕಟ್ಟಳೆಗಳು ಅಡ್ಡಿಯಾಗಿರುವುದು ಹಾಗೂ ಮದುವೆ ಎಂಬುದು ಗಂಡು ಹೆತ್ತವರಿಗೆ ವ್ಯವಹಾರವೂ, ಹೆಣ್ಣು ಹೆತ್ತವರಿಗೆ ಕೈ ತೊಳೆದುಕೊಳ್ಳುವ ಕಾರ್ಯವೂ ಆಗಿರುವುದು. 

ಹೊಸದಾಗಿ ಮದುವೆಯಾಗಿರುವ ನೀವು ನಿಮ್ಮ ಬಣ್ಣಬಣ್ಣದ, ನಿಮ್ಮ ಒಳಲೋಕದಲ್ಲೇ ಜೀವತಳೆದ, ಸುಪ್ತವಾಗಿ ನಿಮ್ಮೊಳಗೆ ಬೇರೂರಿವ ಜೀವನ ಮಿಡಿತಗಳನ್ನು ಪತ್ತೆಮಾಡುವಲ್ಲಿ ಯಶಸ್ವಿಯಾದರೆ ಹೊಸಬದುಕನ್ನು ಎದುರಿಸಲು ಮುಂದಾಗುತ್ತಿದ್ದಂತೆಯೇ, ಕ್ಷಣಿಕ ಲೈಂಗಿಕತೆಯಾಚೆಯ ವಿಶಾಲ ಬದುಕಿನ ಕಲ್ಪನೆ ನಿಮಗೆ ಸಿಕ್ಕುತ್ತಿದ್ದಂತೆಯೇ ನೀವು ದೃಢತೆ  ಸಾಬೀತಾಗುತ್ತದೆ. ಅನ್ನ, ಬಟ್ಟೆ, ಸೂರನ್ನು ಸಂಪಾದಿಸಿಕೊಳ್ಳುವುದರ ಜೊತೆಜೊತೆಗೆ ನಿಮ್ಮೊಳಗೆ ಅಡಗಿರುವ ನಿಮ್ಮತನ, ಪ್ರತಿಭೆಗೆ ರೆಕ್ಕೆಪುಕ್ಕ ಬಂದು ಪಯಣದುದ್ದಕ್ಕೂ ಹೆಜ್ಜೆಗುರುತು ಮೂಡಿಸುವಲ್ಲಿ ಸಹಕಾರಿಯಾಗುತ್ತದೆ. ಏನಾದರು ಸಾಧಿಸಿದ ನಂತರ ಮದುವೆಯಾಗೋಣ ಎನ್ನುವವರ ನಡುವೆಯೇ ಮದುವೆಯ ನಂತರ ಅಪಾರವಾದುದನ್ನು ಸಾಧಿಸಿ ಜಗತ್ತನ್ನೇ ಬೆರಗುಗೊಳಿಸಿದವರಿಗೇನೂ ಕೊರತೆಯಿಲ್ಲ ಎಂಬುದನ್ನು ಗಮನಿಸಬೇಕು.

ಪ್ರತಿಯೊಬ್ಬರೂ ಸುಖವಾಗಿ ಬಾಳಲು ಸಾಧ್ಯವಾಗದಿರುವುದು ಈ ಜಗತ್ತಿನ ದುರಂತಗಳಲ್ಲಿ ಒಂದು. ಆದರೆ ಶಿಶುವಾಗಿ ಜನಿಸಿ, ಬಾಲ್ಯನನ್ನು ದಾಟಿ, ಯೌವನದ ದೋಣಿಯಲ್ಲಿ ದಾಂಪತ್ಯದ ಪಯಣ ಕೈಗೊಳ್ಳುವ ಎಲ್ಲರೂ ಬದುಕು ತಂದೊಡ್ಡುವ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಸಾರ್ಥಕ್ಯ ಪಡೆದುಕೊಳ್ಳಲು ಇಲ್ಲಿ ಅವಕಾಶವಂತೂ ಇದೆ; ಸಾಧಿಸುವ ಛಲ, ಆದಮ್ಯ ಚೈತನ್ಯವನ್ನು ಒದಗಿಸಬಲ್ಲ ಈ ಅಪರೂಪದ ಯೌವನವನ್ನು ದುರುಪಯೋಗ ಪಡಿಸಿಕೊಂಡ, ಅಡ್ಡದಾರಿಗೆ ವಿನಿಯೋಗಿಸಿಕೊಂಡ ಅದೆಷ್ಟೋ ಜನ ಕೊಲೆಗಡುಕರೂ, ಗೂಂಡಾಗಳೂ, ಅತ್ಯಾಚಾರಿಗಳೂ, ಮೋಸಗಾರರೂ, ವಿಶ್ವಾಸಘಾತುಕರೂ, ಭಯೋತ್ಪಾದಕರೂ, ಧರ್ಮಾಂಧರೂ, ದೇಶದ್ರೋಹಿಗಳೂ ಆಗಿರುವ ಉದಾಹರಣೆಗಳೂ ಇಲ್ಲಿವೆ. 

ಕೊನೆಯದಾಗಿ ಒಂದೆರಡು ಮಾತು. ಈಗಾಗಲೇ ಬದುಕಿನ ಚೋದ್ಯ ಎಂಥಾದ್ದು ಎಂಬುದು ನಿಮ್ಮ ಅರಿವಿಗೇ ಬಂದಿರುತ್ತದೆಂದು ಭಾವಿಸುತ್ತೇನೆ. ವಿನಾಕಾರಣ ಹುಟ್ಟಿದ, ಬೆಳೆದ, ಜಗತ್ತಿಗೆ ಹೊಂದಿಕೊಳ್ಳುವ ನೆಪದಲ್ಲಿ ಸ್ವಂತಿಕೆಯ ಕತ್ತು ಹಿಸುಕಿ, ತಾಯಿಯ ಗರ್ಭದಲ್ಲಿದ್ದಾಗ ಸಂಬಂಧವಿರದಿದ್ದ ಯಾವುದೋ ಧರ್ಮಕ್ಕೆ, ಯಾವುದೋ ದೇವರಿಗೆ, ಯಾವನದೋ ಸಿದ್ಧಾಂತಕ್ಕೆ ಕ್ರಮೇಣ ಕಟ್ಟು ಬಿದ್ದು ನಿಮ್ಮನ್ನು ನೀವು ರೂಪಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕದೆ ಜಗತ್ತು ಹೇಗೆ ರೂಪಿಸಿತೋ ಹಾಗೆ ಬೆಳೆದು, ಅದೇ ಬದುಕೆಂದು ನಂಬಿ,  ಬೆಳೆದು ದೊಡ್ಡವರಾಗಿ ಈಗ ಮದುವೆಯ ಮೂಲಕ ಹೊಸಬದುಕಿನ ಹೊಸ್ತಿಲಿನಲ್ಲಿ ನಿಂತಿದ್ದೀರಿ, ಕಾಲ ಓಡುವ ಕುದುರೆ ನೀವು ಅದರ ಮೇಲಿನ ಸವಾರರು. ಆದ್ದರಿಂದ ಕುದುರೆಯನ್ನು ಹುಷಾರಾಗಿ ಓಡಿಸುವುದನ್ನು ನೀವು ರೂಢಿಸಿಕೊಳ್ಳಬೇಕು. ಇಲ್ಲಿ ತಾಲೀಮಿಗೆ ಅವಕಾಶವಿಲ್ಲ. ನಮ್ಮ ದೇಶದ ದುರಂತವೆಂದರೆ ನೀವು ಓಡಿಸಬೇಕಿರುವ ಕುದುರೆಗೆ ಧರ್ಮವೋ, ಸರ್ಕಾರವೋ ಲಾಗಾಮು ಕಟ್ಟುತ್ತದೆ. ಸ್ವಂತಿಕೆ ಎಂಬ ಪದದ ಅರ್ಥವನ್ನೇ ಭೇದಿಸದ ನಮ್ಮ ನಮ್ಮದೇ ಲೋಕಗಳು ಭ್ರೂಣಾವಸ್ಥೆಯಲ್ಲಿಯೇ ನಿರ್ನಾಮವಾಗುವುದು, ಇನ್ನಿಲ್ಲವಾಗುವುದು ಈ ಕಾರಣದಿಂದಲೇ. ನಿಮ್ಮಿಬ್ಬರ ನಡುವೆ ಪ್ರಾಮಾಣಿಕತೆ ಕಾಪಾಡಿಕೊಳ್ಳುವುದು, ಪರಸ್ಪರ ಮುಕ್ತ ಚಿಂತನೆಯ ಮೂಲಕ ಎದ್ದುನಿಲ್ಲಬಹುದಾದ ಅನುಮಾನದ ಗೋಡೆಗಳು ಅಥವಾ ಹಮ್ಮುಬಿಮ್ಮಿನ ಕಂದಕಗಳಿಗೆ ಎಡೆಮಾಡಿಕೊಡದಿರುವುದು ನಿಮಗೆ ನೀವೇ ಕಂಡುಕೊಳ್ಳುವ ಉಪಯುಕ್ತ ಸೂತ್ರಗಳು. ಪರಸ್ಪರ ಪ್ರೀತಿ, ನಂಬಿಕೆ, ಕ್ಷಮಿಸುವ ಔದಾರ್ಯತೆ, ಸೋಲುವ ದೊಡ್ಡತನ ಸದಾ ನಿಮ್ಮ ಜೊಳಿಗೆಯಲ್ಲಿರಲಿ. ಒಂದು ಆರೋಗ್ಯಕರ ಸಂಬಂಧಕ್ಕೆ ಇವು ಅತ್ಯುಪಕಾರಿ.
-ಹೃದಯಶಿವ 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

26 Comments
Oldest
Newest Most Voted
Inline Feedbacks
View all comments
Rukmini Nagannavar
Rukmini Nagannavar
10 years ago

ಪರಸ್ಪರ ಪ್ರೀತಿ, ನಂಬಿಕೆ,ಕ್ಷಮಿಸುವ ಔದಾರ್ಯತೆ, ಸೋಲುವ ದೊಡ್ಡತನ ಇವು ಒಂದೊಳ್ಳೆಯ ಸುಖಿ ದಾಂಪತ್ಯಕ್ಕೆ ಅತ್ಯುಪಕಾರಿ.

ನವದಂಪತಿಗಳನ್ನು ಉದ್ದೇಶಿಸಿದ ಕಿವಿಮಾತು ಇಷ್ಟವಾಯಿತು. ಭವಿಷ್ಯದಲ್ಲಿ ನನಗೆ ಉಪಯೋಗವಾಗುವ ಸಲಹೆಗಳು.;) :-p

ಚಂದದ ಬರಹ.

ರುಕ್ಮಿಣಿ ಎನ್.

hridayashiva
hridayashiva
10 years ago

ಓದಿಗೆ ಧನ್ಯವಾದಗಳು 

Akhilesh Chipli
Akhilesh Chipli
10 years ago

ಬರಹದ ಸ್ಪಷ್ಟತೆ ಇಷ್ಟವಾಯಿತು.
ಧನ್ಯವಾದಗಳು ಹೃದಯ ಶಿವ.

hridayashiva
hridayashiva
10 years ago

ಧನ್ಯವಾದಗಳು 

ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
10 years ago

ಈಗಿನ ಅವಸರವಸರದ ಬದುಕಿನ ದಿನಗಳ ಹೊಸ ಜೋಡಿಗಳಿಗೆ ಸೂಕ್ತ ಮತ್ತು ಅವಶ್ಯಕ ರೂಢಿಗಳ ಬಗ್ಗೆ ಚೆನಾಗಿ ಬರೆದಿದ್ದೀರಿ ಕವಿಗಳೇ…

hridayashiva
hridayashiva
10 years ago

thank you

Sushma Moodbidri
10 years ago

ನವದಂಪತಿಗಳ ಸರಸ, ಕುತೂಹಲ, ಗೊಂದಲ ಎಲ್ಲದರ ಬಗ್ಗೆಯೂ ಸರಿಸಮವಾಗಿ ಹೇಳಿದ್ದೀರಿ… 

ಅದರಲ್ಲೂ ನನಗೆ ತುಂಬಾ ಹೊಸದು ಅನಿಸಿದ್ದು
"ದುಡ್ಡು ಕೊಟ್ಟು ಕೊಳ್ಳಲಾಗದ ಒಂದೇ ಒಂದು ವಸ್ತುವೆಂದರೆ ಅದು ದುಡ್ಡು ಮಾತ್ರ…"

ಈ ಸಾಲು…
 

ಚೆನ್ನಾಗಿದೆ… ವಿಷಯ ಎಲ್ಲಾ ಆಯಾಮಗಳಲ್ಲೂ ದಕ್ಕುವುದರಿಂದ ಬಹಳ ಇಷ್ಟವಾಗುತ್ತದೆ ಲೇಖನ .. .

hridayashiva
hridayashiva
10 years ago

thanks

ಶ್ರೀವತ್ಸ ಕಂಚೀಮನೆ

ಇಷ್ಟವಾಯಿತು ಬರಹ…

hridayashiva
hridayashiva
10 years ago

dhanyavadagalu brother

Guruprasad Kurtkoti
10 years ago

ಶಿವಾ, ನವದಂಪತಿಗಳಿಗೊಂದು ಕೈಪಿಡಿಯಂತೆ, ತುಂಬಾ ಚೆನ್ನಾಗಿದೆ ನಿಮ್ಮ ಬರಹ!

hridayashiva
hridayashiva
10 years ago

🙂

Sharath chakravarthi
Sharath chakravarthi
10 years ago

ಶಿವಣ್ಣ ನಾನು ಓದ್ದೆ 😛

hridayashiva
hridayashiva
10 years ago

ನಾ ನೋಡ್ದೆ…

ಮಂಜಿನ ಹನಿ

ಶಿವಣ್ಣ, ಒಳ್ಳೆಯ ಬರಹ. ನವ ವಿವಾಹಿತರ ಚಡಪಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಮುಕ್ತ ಮುಕ್ತವಾಗಿ ಹಂಚಿಕೊಂಡದ್ದು ಇಷ್ಟ ಆಯ್ತು. ಮದುವೆಯಾಗಿರದ ನಮಗೂ ಈ ಕಿವಿ ಮಾತುಗಳು ಮುಂದೆ ಉಪಯೋಗಕ್ಕೆ ಬರುವಂಥವು! 😀

hridayashiva
hridayashiva
10 years ago

ನಿಮ್ಮ ಓದಿಗೆ ಧನ್ಯವಾದ 

murthy
murthy
10 years ago

lekhana bahaLa chennagide. 

kutoohala kaapaDikoLLada maduve, vyatirikta swabhavada ganda- hendati – ee bagge bareda vaakyavrunda atyanata sogasagi mooDi bandide.

hridayashiva
hridayashiva
10 years ago

ತುಂಬಾ ಧನ್ಯವಾದಗಳು ಒದೀದ್ಕೆ…

hridayashiva
hridayashiva
10 years ago

ತುಂಬಾ ಧನ್ಯವಾದಗಳು ಸರ್ ಓದಿದ್ದಕ್ಕೆ…

SAROJA UDUPA
SAROJA UDUPA
10 years ago

SIR, BAHALA CHENNAGI BAREDIDDRA.

 

hridayashiva
hridayashiva
10 years ago
Reply to  SAROJA UDUPA

vandanegalu

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago

ನಿಮ್ಮ ಲೇಖನವು ಒಂದು ಮನೋವಿಙ್ಞಾನ ಪಾಠದಂತೆ ಬಹಳಷ್ಟು ಅರಿವು ಮೂಡಿಸೋ ಪ್ರಯತ್ನದಲ್ಲಿದೆ,, ಮೂಡಿಸುತ್ತಲಿದೆ. ನವದಂಪತಿಗಳಿಗಾಗಿ ಈ ಸಮಗ್ರವಾದ ಚಿಂತನ(ಸೂಚನೆ) ಬಹುರೂಪದಿ ಉಪಯುಕ್ತವಾಗಲಿದೆ,, 🙂

ಧನ್ಯವಾದಗಳು ಸರ್ 🙂

hridayashiva
hridayashiva
10 years ago

odige thanks

Prakash Raju K
Prakash Raju K
10 years ago

ಶಿವು, ಇದು ನವ ದಂಪತಿಗಳಿಗೆ, ಹಳೆ ದಂಪತಿಗಳಿಗೆ ಏನು ಸಲಹೆ

hridayashiva
hridayashiva
10 years ago
Reply to  Prakash Raju K

innomme bareyona…

Venkateshswami
Venkateshswami
5 years ago

ಅದ್ದುಣವಾದ ಬರವಣಿಗೆ ನಿಮ್ಮದು ಪ್ರತಿಯೊಬ್ಬ ಇದನ್ನು ಅರ್ಥಮಾಡಿಕೊಂಡು ಜೀವನ ಸಾಗಿಸಬೇಕು ಸೂಪರ್ ಮಾಹಿತಿಯನ್ನು ತಿಳಿಸಿದ್ದಿರಿ ಧನ್ಯವಾದಗಳು

26
0
Would love your thoughts, please comment.x
()
x