ಈ ಸೀರೆಯಲ್ಲಿ ಈ ಮೇಕಪ್ ನಲ್ಲಿ ಹೇಗೆ ಕಾಣಿಸ್ತೇನೆ ? ಕೇಳಿದಳು .
ಅಂದು ಆಕೆ ಬಲಗಡೆ ಸೆರಗು ಹೊದ್ದು ಅವಳ ತೂಕಕ್ಕೆ ಭಾರವೆನಿಸುವ ಸೀರೆಯನ್ನು ತುಂಬಾ ಇಷ್ಟಪಟ್ಟು ಒಂದೂವರೆ ತಾಸಿಗಿಂತ ಹೆಚ್ಚು ಸಮಯ ತೆಗೆದುಕೊಂಡು ರೆಡಿಯಾಗಿ ಬಂದಿದ್ದಳು. ಎಂದಿಗಿಂತ ತುಸು ಹೆಚ್ಚೇ ಎನ್ನುವಷ್ಟು ಮೇಕಪ್ ಮಾಡಿಕೊಂಡಿದ್ದಳು. ತುಟಿಗಳು ರಂಗಾಗಿದ್ದವು. ಅಂದು ಸಂಜೆ ಕಾಕ್ ಟೈಲ್ ಪಾರ್ಟಿ ಗೆ ಆಹ್ವಾನಿಸಿದ ಮೇರೆಗೆ ಬಹಳ ಉಲ್ಲಸಿತಳಾಗಿ ತನ್ನ ಎಲ್ಲ ನಾಲ್ಕು ದಿನದಿಂದೀಚೆಗೆ ಆದ ಗೆಳತಿಯರೊಂದಿಗೆ ಬಂದಿಳಿದಿದ್ದಳು.
ವಾವ್ । – ಒಬ್ಬ
"ತುಂಬಾ ಚೆನ್ನಾಗಿದೆ. ಮಿಂಚು ಹೊಳೆದಂತೆ" ಮತ್ತೊಬ್ಬ
ಅಷ್ಟೇಕೆ ಆಕೆ ಜೊತೆಗೆ ಬಂದಿದ್ದ ನಾಲ್ಕು ದಿನದ ಗೆಳತಿಯರಲ್ಲೇ ಹೊಟ್ಟೆಯಲ್ಲಿ "ಕಲೆಸಿದಂತೆ" ಅಸೂಯೆ. ಎಲ್ಲರಿಂದಲೂ ಮೆಚ್ಚುಗೆ.
ಗಾಜುಗಳ ಹಿಂದಿನ ಕಣ್ಣುಗಳ ಹುಡುಗ, ಛೇ ಚೂಪುಗಣ್ಣಿನ ಹುಡುಗನಂಥವನಿಗೆ ಆಕೆ ಕೇಳಬೇಕಿತ್ತು. ಗುಂಪಿನ ಮಧ್ಯೆ ಎದ್ದು ಹೋಗಿ ಒಬ್ಬನನ್ನೇ ಕೇಳಲು ಮುಜುಗರ. ಏಕೆಂದರೆ ಅವನೂ ಕೇವಲ ನಾಲ್ಕು ದಿನಗಳ ಪರಿಚಯದವ. ಆದರೆ…… ?
ಅದಕ್ಕೂ ನಾಲ್ಕು ದಿನದ ಮೊದಲು ಎಲ್ಲರೂ ಅಪರಿಚಿತರು. ಅದೇ ಈಗ ಎಷ್ಟೋ ವರ್ಷಗಳ ಹಳೆಯ ಸ್ನೇಹದಂತೆ ಕುಲುಕು. ನಿಜಕ್ಕೂ ಬಂದಿದ್ದ ಎಲ್ಲರೂ ಎಗ್ಜೈಟ್ ಆಗಿದ್ದರು. ಮೊದಲ ದಿನ ಇದ್ದಂಥ ಅಪರಿಚಿತತೆ ಇವತ್ತು ಮಾಯಾ. ಈಗ ಅದೇ ಮಾಯಾ ಆಕೆಗೆ ಗಾಜುಗಣ್ಣಿನ ಹುಡುಗನಂಥವನ ಹಿಂದೆ ಬಿದ್ದಿವೆ.
ಅದೇ ದಿನ ಸಂಜೆ ಹೈದರಾಬಾದಿನ ಪ್ರಸಿದ್ಧ ಗೋಲ್ಕೊಂಡ ಕೋಟೆಗೆ ಒಟ್ಟಿಗೆ ಹೋಗಿ ಬಂದಿದ್ದರು. ಆಗಲೇ ಅಲ್ಲವಾ ಹೆಸರಿನ ಪರಿಚಯ ಆಪ್ತತೆಗೆ ತಿರುಗಿದ್ದು. ಆಗಲೇ ಅಲ್ಲವಾ ಹಿಂದಿನ ಮೂರು ದಿನದಿಂದಲೂ ಗಮನಿಸುತ್ತಿದ್ದ ನುಣುಪು ಕೆನ್ನೆಯ ಮೇಲಿನ ಗುಳಿಯ ಆಕೆ ಗಾಜುಗಣ್ಣಿನ ಹುಡುಗನಂಥವನನ್ನು ತನ್ನೆಡೆಗೆ ಸ್ನೇಹದಿಂದ ಒಲಿಸಿಕೊಂಡಿದ್ದು. ಅದು ಗಾಜುಗಣ್ಣಿನವನಿಗೆ ಗೊತ್ತಿಲ್ಲದ್ದೇನಿಲ್ಲ . ಅವನೂ ಚಿವುಟುವಂತೆಯೇ ಕಣ್ಣು ತೇಲಿಸಿದ್ದನಾದರೂ ಆಕೆಯೆಡೆಗೆ ಆಸೆ ಯಿಂದೇನು ಇದ್ದಿಲ್ಲ. ಆದರೆ ಸೇರಿದ ಸ್ನೇಹಿತರಲ್ಲಿ ಎದೆಯ ಕಫ ಕಿತ್ತೊಗೆಯುವಂತೆ ನಕ್ಕು, ನಗಿಸಿ ಕಣ್ಣ ತೇವಗೊಳಿಸಿ ಕೊಳ್ಳುವ ಮನಸ್ಸಿಗ. ಅದೇ ಅಲ್ಲವಾ ಆಕೆಯನ್ನು ಸೆಳೆದದ್ದು.
"ಫ್ರೆಂಡ್ಸ್ ….. ಕಮ್ ಅಂಡ್ ಜಾಯಿನ್ ….. " ಆಯೋಜಕರಿಂದ ಬುಲಾವ್…
ಆ ದಿನದ ಬೆಳಿಗ್ಗೆ ತರಬೇತಿಗೆ ಬಂದಿದ್ದವರಲ್ಲಿ ತಾವು ಪ್ಯೂರ್ ವೆಜ್ಜು … ಡ್ರಿಂಕು ಆಗಲ್ಲ. ನೋ ವೇಯ್, ಎಂದಿದ್ದವರು ಸಹ ಆ ಸಂಜೆಯ ಕಾಕ್ಟೈಲ್ ಪಾರ್ಟಿಗೆ ಬಂದಿದ್ದರು. ಅದೊಂದು ದೊಡ್ಡ ಸಂಸ್ಥೆ. ದೇಶದ ಅತ್ಯುನ್ನತ ಹುದ್ದೆಯಲ್ಲಿರು ವವರು ಆಗಾಗ ಸಭೆ ಸಮಾರಂಭಾ, ವಾರ್ಷಿಕೋತ್ಸವ ಹೀಗೆ ನಾನಾ ಸಂಧರ್ಭಗಳಲ್ಲಿ ಬರುವಂಥ, ಉನ್ನತ ಹುದ್ದೆ ಯಲ್ಲಿರುವವರಿಗೆ ಮ್ಯಾನೇಜ್ಮೆಂಟ್ ಬಗ್ಗೆ, ಹ್ಯೂಮನ್ ರಿಸೋರ್ಸ್ ಬಗ್ಗೆ , ಸಮಯ ನಿಭಾಯಿಸುವಿಕೆ, ಇತರೆ ಉಪಯುಕ್ತ ಹಾಗೂ ಸೂಕ್ಷ್ಮ ಕಲೆಗಳ ಬಗ್ಗೆ, ತರ ಬೇತಿಯನ್ನು ನೀಡುವಂಥ ಆ ಸಂಸ್ಥೆಗೆ ನಾನಾ ರಾಜ್ಯದಿಂದ ಒಂದು ವಾರದ ತರಬೇತಿಗೆ ಬಂದಂಥ ಕೆಲವೇ ಸದಸ್ಯರಲ್ಲಿ ಆಕೆಯು ಒಬ್ಬಳು. ಮತ್ತು ಗಾಜುಗಣ್ಣಿನವನೊಬ್ಬ. ತರಬೇತಿಯ ಅವಧಿಯಲ್ಲಿ ಮಧ್ಯೆ ಒಂದು ದಿನ ಈ ತರಹದ ಕಾಕ್ಟೈಲ್ ಪಾರ್ಟಿ ಅರೆಂಜ್ ಮಾಡುವುದು ಅಲ್ಲಿನ ರೂಢಿ.
ಸರಿ, ಬೆಳದಿಂಗಳ ಬೆಳಕಿನಲ್ಲಿ ಹಸಿರು ತುಂಬಿದ ಲಾನ್ ಮಧ್ಯೆ ದುಂಡಾಗಿ ಕುಳಿತ ಒಬ್ಬೊಬ್ಬರಾಗಿ ಶುರು ಹಚ್ಚಿ ಕೊಂಡ ದ್ರಾಕ್ಷಾ ರಸ/ ಮದಿರೆ ಸೇವನೆ ರಂಗು ತುಂಬಲು ಬಹಳ ಹೊತ್ತು ಹಿಡಿಯಲಿಲ್ಲ. ಒಂದು, ಎರಡು, ಮೂರು, ನಾಲ್ಕು, ರೌಂಡು ಮುಗಿದವು. ಹಿಂದೆಯೇ ಆಯೋಜಕರಿಂದ ಒಂದು ಚಿಕ್ಕ ಅನೌನ್ಸ್ಮೆಂಟ್.
"ಸುಮ್ಮನೆ ಗುಟುಕರಿಸುವ ಬದಲು ಒಂದಷ್ಟು ಶಾಯರಿ, ಹಾಡು ಹೊರ ಬೀಳಲಿ" ಎಂದದ್ದೇ ಬಂತು. ಒಬ್ಬೊಬ್ಬರಾಗಿ ತಮ್ಮ ಭಾಷೆಯ ಇಷ್ಟವಾದ ಹಾಡು ಹಾಡಿದರು. ಮೂಲತಃ ಹೈದರಾಬಾದು ತೆಲುಗು ಭಾಷೆಯದ್ದಾದರೂ ಹಿಂದಿ ಬಳ ಕೆಯೂ ಸಹ ಹೆಚ್ಚು. ಹಾಗಾಗಿ ಎಲ್ಲರಿಗೂ ಸಾಮಾನ್ಯವಾಗಿ — ಹಾಗೂ ಸುಲಭವಾಗಿ ಅರ್ಥವಾಗುವಂಥ ಹಿಂದಿಯಲ್ಲಿ ಹಾಡು ಹೊರಬರಲಾರಂಭಿಸಿದವು.
"ತೇರೆ ಜೈಸಾ ಮುಖಡಾ ಸಾ ಪೆಹೇಲೆ ಕಭೀ ದೇಖಾ ನಹಿ ಸಾರಿ ದುನಿಯಾ ದೇಖಿ ಮೈನೆ ಹೋ"
ಕಿಶೋರರ ಹಾಡನ್ನು ಗಾಜುಗಣ್ಣಿನ ಹುಡುಗ ಹಾಡಲು ಆರಂಭಿಸಿದ. ಸುತ್ತಲೂ ಕುಳಿತವರು (ಒಂದು ಕೈಯಲ್ಲಿ ಗ್ಲಾಸು ಹಿಡಿದಿದ್ದರಿಂದ ) ಎರಡು ಕೈಯಲ್ಲಿ ಚಪ್ಪಾಳೆ ತಟ್ಟಲಾಗದೇ ತಮ್ಮ ತೊಡೆ ತಟ್ಟುತ್ತಾ ಬೆಂಬಲಿಸುತ್ತಿದ್ದರು. ಆ ಬದಿಯ ಲೇಡಿಸ್ ಕಾರ್ನರ್ ನಲ್ಲಿ ಕುಳಿತ ಆಕೆಯ ಕೈಯಲ್ಲಿನ ಗ್ಲಾಸಿಂದ ಜ್ಯೂಸನ್ನು ಆಕೆಯಲ್ಲಿನ ಒಲವು ತುಳಿಕಿಸಿತೋ. ಅದೇ ತುಳಿಕಿತೋ ಗೊತ್ತಾಗಲಿಲ್ಲ. ಅಂತೂ ಹಾಡು ಹೇಳುವ ಹುಕಿಯಲ್ಲಿದ್ದ ಗಾಜುಗಣ್ಣಿನವನು ಗಮನಿಸಲಿಲ್ಲ.ಅದಾಗಿ ಬಗೆ ಬಗೆಯ ವೆಜ್ಜು ನಾನ್- ವೆಜ್ಜು ಅಡುಗೆ ರುಚಿ ಸವಿಯುತ್ತಿದ್ದವರ ಸಾಲಿನಲ್ಲಿರದೇ, ಗಾಜುಗಣ್ಣಿನವನು ದೂರದ ಕತ್ತಲಿನಲ್ಲಿ ಚೂರೇ ಚೂರು ಕಿಡಿ ತಾಕಿಸಿದ ಸಿಗರೇಟನ್ನು ಸುಟ್ಟು ತನ್ನ ಎದೆಕರಕಲಾಗಿಸಿ ಬಂದು ತಟ್ಟೆಗೆ ನಾನ್ ವೆಜ್ ಹಾಕಿಸಿಕೊಂಡು ಇನ್ನೇನು ಬಾಯಿಗಿಡಬೇಕು;
ಆಗಲೇ ಆಕೆ ಕೇಳಿದ್ದು; ಹೇಗೆ ಕಾಣಿಸ್ತೇನೆ ಈ ಸೀರೆಯಲ್ಲಿ, ಈ ಮೇಕಪ್ ನಲ್ಲಿ ? ಎಂದು.
ಗಾಜುಗಣ್ಣಿನವನು; " ಸೀರೆ ಓಕೆ ಬಟ್ ಮೇಕಪ್ … ಉಹೂ …. ನಾಟ್ ಗುಡ್" ಅಂದುಬಿಟ್ಟ.
ಸಿಗರೇಟಿನ ಘಾಟು, ಮಧುರಸ ಆಕೆ ಅವನನ್ನು ಸಮೀಪಿಸದಂತೆ ಅಂತರ ಕಾಪಾಡಿಕೊಂಡಿತ್ತು. ಆದರೆ, ಅವನ ಮಾತು ಸ್ಪಷ್ಟವಾಗಿದ್ದವು. "ನಾಟ್ ಗುಡ್" ಮತ್ತೊಮ್ಮೆ ಹೇಳಿದ.
ಇರಿಸುಮುರಿಸಾದರೂ ಮತ್ತೆ ಕೇಳಿದಳು; why ?
ಗಾಜುಗಣ್ಣಿನವನು; "ನೋಡಿ, ತಮ್ಮಲ್ಲಿ ಮೇಕಪ್ ಮಾಡಿಕೊಂಡು ಸೌಂದರ್ಯವನ್ನು ಬಿತ್ತರಿಸುವಂಥ ಅವಶ್ಯಕತೆ ಇಲ್ಲ. ಅದು ನಿಮ್ಮಲ್ಲಿ ಸಹಜವಾಗಿದೆ. ಸಿಂಪಲ್ ಆಗಿ ಮುಖ ತೊಳೆದು ಬಿಂದಿ ಇಟ್ಟರೂ ತಾವು ಸುಂದರಿಯೇ. ತಾವು ತಮ್ಮ ಸಹಜ ಸೌಂದರ್ಯವನ್ನು ಮೇಕಪ್ ಡಬ್ಬಿಯಲ್ಲಿ ಇರಿಸಿ ಡಬ್ಬಿಯ ಸರಕನ್ನು ಮಾತ್ರ ಮುಖದ ಮೇಲೆ ಹೊತ್ತು ಬಂದಿದ್ದೀರಿ. ಸೊ ಐ ಸೆಡ್ ನಾಟ್ ಗುಡ್. ಬಿ ನ್ಯಾಚು ರಲ್. ಅಷ್ಟಕ್ಕೂ ನೀವು ನಿಮ್ಮ ಮೇಕಪ್ ಬಗ್ಗೆ, ಸೀರೆ ಉಡುಗೆ ಬಗ್ಗೆ ನನ್ನ ಅಭಿಪ್ರಾಯ ಏಕೆ ಕೇಳ್ತಾ ಇದ್ದೀರಿ? ನೀವು- ನಿಮ್ಮಿಷ್ಟ. ಚಂದ್ರನಿಗೆ ಹತ್ತಿರದ ಹೆಸರಿಟ್ಟುಕೊಂಡ ಬೆಳದಿಂಗಳಂಥ ತಾವು ಹತ್ತಿರ ಇದ್ದರೂ ತಂಪೇ. ದೂರದಿಂದನೂ ಚೆಂದಾನೇ. ಆದರೆ ಸೂರ್ಯನ ಕೆಂಪಡರಿದ ಮುಖವನ್ನು ದೂರ ದಿಂದ ನೋಡಿದರೂ ಅದು ಬಿಸಿ ತಾಕಿಸುವಂಥ ನೋಟವೇ" ಅಂದ.
ಮುಂದುವರಿದು "ಅಂದಹಾಗೆ ನಿಮ್ಮ ವಯಸ್ಸೆಷ್ಟು.. ಮದುವೆ ಆಗಿದೆಯಾ ?" ಕೇಳಿದ.
"ಮದುವೆ ಆಗಿ ಹದಿನಾಲ್ಕು ವರ್ಷ. ಒಬ್ಬಳೇ ಇರುವ ಮಗಳಿಗೀಗ ಹನ್ನೆರಡು ವರ್ಷ" ಅಂದುಬಿಟ್ಟಳು.
ಪಶ್ಚಿಮ ಬಂಗಾಳದಲ್ಲಿ ಹಿಂದೂಗಳಲ್ಲಿ ಮದುವೆ ಸಂಧರ್ಭದಲ್ಲಿ ತಾಳಿ ಕಟ್ಟುವ ಪದ್ಧತಿ ಇಲ್ಲವಂತೆ, ತಲೆಗೆ ಸಿಂಧೂರದ ಬೊಟ್ಟು ಮತ್ತು ಎಡಗೈಯಲ್ಲಿ ಒಂದು ಕಡಗ ತೊಡಿಸುತ್ತಾರಂತೆ. ಅದು ಮದುವೆ ಯಾದ ಹೆಣ್ಣಿನ ಐಡೆಂಟಿಟಿ. ಅದನ್ನು ತೋರಿಸಿ ಮನವರಿಕೆ ಮಾಡಿದಳು. ಅದಕ್ಕೂ ಮುನ್ನ ಆಕೆಗೆ ತಾನು ಮದುವೆ ಆಗಿದ್ದರ ಬಗ್ಗೆ, ತನ್ನಿಬ್ಬರ ಮಕ್ಕಳ ಬಗ್ಗೆ ಹೇಳಿದ್ದ, ಅದೂ ಮದಿರೆಯ ಚಿತ್ತದಲ್ಲಿ, ಆಕೆಗೆ ಸ್ಪಷ್ಟವಾಗಿ ಅರ್ಥವಾಗುವಂತೆ. ಒಂದೆರಡು ನಿಮಿಷ ಸುಮ್ಮನಿದ್ದು ಗಾಜುಗಣ್ಣಿನವನು "ನಾನೀಗ ನನ್ನ ರೂಮಿಗೆ ಹೋಗಬೇಕು, ಸಖತ್ ನಿದ್ದೆ ಮಬ್ಬು ಗುಡ್ ನೈಟ್" ಹೇಳಿ ಹೊರಟ.
ಆಕೆ ಅವನನ್ನೇ ಹಿಂಬಾಲಿಸಿದಳು ಅವನದೇ ರೂಮಿಗೆ.ರೂಮಿನಲ್ಲಿ ಅವನೊಟ್ಟಿಗೆ ಬಂದಿದ್ದ ಇತರೆ ಗೆಳೆ ಯರು ರಮ್ಮಿ ಆಡುತ್ತಾ ಕುಳಿತಿದ್ದರು. ಗಾಜುಗಣ್ಣಿನವನಿಗೆ ಇಸ್ಪೀಟು ಆಟ ಜನ್ಮದಲ್ಲಿ ಅಂಟುವುದಿಲ್ಲ . ಹಾಗೆ ಹಿಂಬಾಗಿಲ ಕಿಟಕಿ ಬಳಿ ಸಿಗರೇಟು ಹಿಡಿದು ಹೊಗೆಯಾಗುತ್ತಿದ್ದ. ಸಮಯ ರಾತ್ರಿ ಹನ್ನೆರಡರ ಸಮೀಪ. ಅವನ ಗೆಳೆಯರೆಲ್ಲ ಅವರವರ ರೂಮಿಗೆ ಹೊರಟರು. ಇವನೊಬ್ಬನೇ ಸುಡುವ ಕಿಡಿಯ ತುಟಿಗೆ ತಾಕಿಸಿ ಹೊಗೆಯಾಗುತ್ತಿದ್ದ. ಆದರೂ ಆಕೆ ಹೊರಡಲಿಲ್ಲ. ತನ್ನ ಇಷ್ಟದ ಕೆಲಸ, ಹಾಬಿ,
ಗೆಳತಿಯರು, ಅವರೊಂದಿಗೆ ಇರುವ ಮಸ್ತಿ, ಹೊರ ಜಗತ್ತಿನಲ್ಲಿ ಬೆರಗುಗಣ್ಣಿನಿಂದ ಖುಷಿ ಪಡುವ, ಜಾಗಗಳು, ಎಲ್ಲವನ್ನೂ ಹೇಳಿಕೊಂಡಳು. ತನ್ನ ಗಂಡನೊಂದಿಗೆ ಇರುವ ತನ್ನ intimecy ಒಂದನ್ನು ಬಿಟ್ಟು. ಗಾಜುಗಣ್ಣಿನವನು ಹಾಗೂ ಅವನ ಗೆಳೆಯರು ತಮ್ಮ ತಮ್ಮ ಮಡದಿಯರ ಹತ್ತಿರ "ಅತ್ಯಂತ" ವಾಗಿ ಮಾತಾಡುತ್ತಿದ್ದರೆ ಆಕೆ ಅದನ್ನೂ ಬೆರಗಿನಿಂದ ಪ್ರತಿ ದಿನ ನೋಡುತ್ತಿದ್ದಳು.
ಆ ದಿನ ರಾತ್ರಿ ಸೂಕ್ಸ್ಮವಾಗಿ ಗಾಜುಗಣ್ಣಿನವನು ಆಕೆಗೆ ಕೇಳಿಯೇಬಿಟ್ಟ; Are you comfortable with your spouse?"
ಇಲ್ಲ ಅಂತೇನೂ ಆಕೆ ಹೇಳಲಿಲ್ಲವಾದರೂ ಮಾತುಗಳಲ್ಲಿ ಆಕೆಯನ್ನು ತಾನು ನಿರೀಕ್ಷಿಸಿದಷ್ಟು ಸಾಮಿ ಪ್ಯವೋ ಸಾಂಗತ್ಯವೋ, ಸಲುಗೆಯೋ, ಪ್ರೀತಿಯೋ ಸಿಗದ ಕೊರತೆ ಅವಳ ಮಾತಿನಲ್ಲಿತ್ತು. ಗಾಜು ಗಣ್ಣಿನವನು ಮತ್ತವನ ಗೆಳೆಯರು ಆಕೆಗೆ ಮರುದಿನ ಧೈರ್ಯ ತುಂಬಿದರೂ ಆಕೆಗದು ಕೊರತೆ ಯಾಗಿತ್ತು. ಅದಾಗಿ ಆ ಸಂಜೆ ತರಬೇತಿಗೆ ಬಂದವರು ಹುಸೇನ್ ಸಾಗರ್, ಚಾರ್ ಮಿನಾರ್, ಸಾಲಾರ್ ಜಂಗ್ ಮ್ಯೂಸಿಯಂ, ಬಿರ್ಲಾ ಮಂದಿರ್, ರಾಮೋಜಿ ಫಿಲಂ ಸಿಟಿ ನೋಡಿ ಬಂದರು. ಈ ಹಿಂದೆ ತಾವು ಬಂದಾಗ ನೋಡಿದ್ದನ್ನು ಮತ್ತೆ ನೋಡುವಂಥದ್ದು ಅಂಥ ಖಾಸ್ ಎಂದು ಅವರಿಗೆ ಅನ್ನಿಸಲಿಲ್ಲ. ಆದರೆ ಹೊಸ ಗೆಳೆಯರ ಜೊತೆ ಹೊರಟಿದ್ದು, ಹರಟಿದ್ದು, ಸಮಯ ಕಳೆದಿದ್ದು ಖುಷಿ ಅಷ್ಟೇ.
ತರಬೇತಿ ಮುಗಿದ ದಿನ ಸಂಜೆ ಮೇಲೆ ಒಬ್ಬೊಬ್ಬರಾಗಿ ತಮ್ಮ ಊರಿಗಳತ್ತ ಹೊರಟರು. ಆ ದಿನ ಸಂಜೆ ಗಾಜುಗಣ್ಣಿನವನು ಮುತ್ತು ಕೊಳ್ಳಲು ಹೋಗಿದ್ದ, ತನ್ನ ಹೆಂಡತಿಗೆ. ಬಂದ ನಂತರ ಮತ್ತದೇ ಹುಲ್ಲು ಹಾಸಿನ ಮೇಲೆ ರಾತ್ರಿ ಕುಳಿತು ಲಹರಿಗೆ ಬಿದ್ದವನಂತೆ ಹಾಡುತ್ತಿದ್ದ. ಪಕ್ಕದಲ್ಲಿ ಯಾರೂ ಇದ್ದಿಲ್ಲ. ಒಂದಾದ ಮೇಲೊಂದರಂತೆ ಹಾಡುಗಳು ನೆನಪಾಗುತ್ತಿದ್ದವು. ಲಿರಿಕ್ಸ್ ಸರಾಗ ಸರಾಗ. ಅಷ್ಟೊತ್ತಿ ಗಾಗಲೇ ಅವನ ಹೊಟ್ಟೆಯಲ್ಲಿ "ಮದಿರೆ"ಯ ಮಾಯೆ. ಕುಳಿತ ಒಂದೂವರೆ ತಾಸಿನಲ್ಲಿ ತನ್ನ ಮೊದಲ ಕಾಲೇಜಿನ ಗೆಳತಿ, "ಇಗೋ, ಈಗ ಬಂದೆ ಇರು" ಎಂದು ಹೇಳಿ ಎದ್ದು ಹೊರಟವಳ ಮುಖ ಹದಿ ನೆಂಟು ವರ್ಷವಾದ ನಂತರ ಯಾಕೋ ನೆನಪಾಗಿ "ಅಂಗೈ ನೋಡಿಕೊಂಡ. ಗೆರೆಗಳನ್ನು ನೋಡಿ ತಿಳಿದುಕೊಳ್ಳುವ ಕಲೆಯನ್ನು ಸ್ವಲ್ಪವಾದರೂ ಕಲಿಬೇಕಿತ್ತು ಅಂದುಕೊಂಡ. ಆದರೆ, ಅವನ ಸಹಾಯಕ್ಕೆ ಬಂದಿದ್ದು ಅವನು ಕೊಂಚವೇ ಕಲಿತಿದ್ದ hand writing analysis.
ಆಗ ತಾನೇ ಊಟ ಮಾಡಿ ಕುಳಿತ ಗಾಜುಗಣ್ಣಿನವನ ರೂಮಿಗೆ ಆಕೆ ಬಂದಳು. ಅದೇ ಸಮಯಕ್ಕೆ ಅವನ ಹೆಂಡತಿಯ ಫೋನು ಬಂತು. ವಿಚಾರಣೆ ಶುರು, ಎಲ್ಲಿದ್ದೀರಿ, ಊಟ ಆಯ್ತಾ, ಏನ್ ಮಾಡ್ತಾ ಇದ್ದೀರಿ…. ಹೀಗೆ. ತನಗೆ ಸಿಕ್ಕ ಗೆಳತಿಯನ್ನು ಹೆಂಡತಿಗೆ ಪರಿಚಯಿಸಿದ. ಗಾಜುಗಣ್ಣಿನವನ ಹೆಂಡತಿ ಚೂರಾದರೂ ಅನುಮಾನಪಡಬೇಕಿತ್ತು. ಅದಾಗಲಿಲ್ಲ. ಅದು ನಂಬಿಕೆ ವಿಷ್ಯ. ಆಗ ಸಮಯ ರಾತ್ರಿ ಹನ್ನೊಂದುವರೆ. ತಕ್ಷಣ ಗೆಳತಿಯಿಂದ ಒಂದು ಹಾಳೆಯಲ್ಲಿ ಒಂದು ಸಾಲು ಆಕೆಯಿಂದ ಬರೆಸಿ ಕೊಂಡು ಹೊರ ಸಾಗ ಹಾಕಿದ. ಆಗೇನೂ ಆಕೆಗೆ ಹೇಳಲಿಲ್ಲವಾದರೂ ತಾನು ಅದೇ ದಿನ ರಾತ್ರಿ ಊರಿಗೆ ಬರುವಾಗ ಅವಳು hug ಮಾಡಿದಳು. ಇವನು ಸುಮ್ಮನಿದ್ದ. ಅವಳು ಕೊಲ್ಕೊತ್ತಾಗೆ ವಿಮಾನದಿಂದ ಹೋದಳು. ಇವನು ರೈಲಲ್ಲಿ ತನ್ನೂರಿಗೆ ಬಂದ.
ಅಲ್ಲಿಂದಲೇ ಪೀಕಲಾಟ ಶುರುವಾಗಿದ್ದು….
ಪ್ರತಿ ದಿನ ಫೋನು, ಮೆಸ್ಸೇಜು ಬರಲಾರಂಭಿಸಿದವು. ಮೊದ ಮೊದಲು ಸ್ನೇಹದಿಂದ ಇದ್ದಂಥ ಮಾತುಗಳು, ವರಸೆ, ಸಲುಗೆ ಎಲ್ಲಾ ಬದಲಾಗುತ್ತಿದ್ದವು. ಮೊದಲು ರೀ… ನಂತರ ಡಿಯರ್, ಲೈಕ್ ಯು, ಸ್ವೀಟ್ ಹಾರ್ಟ್, ಲವ್ ಯೂ ……. ವರೆಗೆ ಬಂದು ನಿಂತಿತು. ಗಾಜುಗಣ್ಣಿನವನು ಗಾಬರಿ ಯಾದದ್ದೇ ಆಗ.
ಗಾಜುಗಣ್ಣಿನವನು ಮನಸ್ಸು ಮಾಡಿದ್ದರೆ, ಹತ್ತಿರವಿದ್ದ ದಿನಗಳಲ್ಲೇ ಏನಾದರೂ ಎಡವಟ್ಟು ಮಾಡಿಬಿಡ ಬಹುದಾಗಿತ್ತು. ಆದರೆ, ಆ ಬಂಗಾಲಿಗಿಂತ ಚೆಂದದ ಕನ್ನಡದ ಹೆಂಡತಿ ಇದ್ದವನಿಗೆ ಆ ಗೆಳೆತಿ ಮೇಲೆ ಇನ್ಯಂಥ ಮೋಹ? ಆದರೂ ಆಕೆ ತನ್ನನ್ನು ಆಕರ್ಷಿಸುತ್ತಿದ್ದಾಳಾ? ಅಥವಾ ಕೆಡವುತ್ತಿದ್ದಾಳಾ? ಕಂಕ್ಲುಜನ್ ಗೆ ಬರೋವಷ್ಟರಲ್ಲಿ ಗಾಜುಗಣ್ಣು ಕೆಂಪಾಗಿದ್ದವು. ಆಕೆ ಬರೆದುಕೊಟ್ಟ ಹಾಳೆಯ ಮೇಲಿನ ಅಕ್ಷರಗಳನ್ನು ನೋಡಿದ. "ಇವಳನ್ನು ಒಮ್ಮೆ ಹಚ್ಚಿಕೊಂಡರೆ ಸುಲಭಕ್ಕೆ ತಪ್ಪಿಸಿಕೊಳ್ಳಲಾಗದ ಸ್ಥಿತಿ ಯನ್ನು, ಅವಳ ಸ್ನೇಹ, ಪ್ರೀತಿ, ಮಾತು, ನಗು, ಸಿಟ್ಟು, ಹಗೆ, ಯಾವುದನ್ನೂ ಬಿಟ್ಟುಕೊಡದ ಹಠಮಾರಿತನ,ಎಲ್ಲವನ್ನೂ ಸೂಕ್ಷ್ಮವಾಗಿ ತಿಳಿದುಕೊಂಡನು.
ದಿನ ಕಳೆದಂತೆಲ್ಲಾ ಗಾಜುಗಣ್ಣಿನವನು ಆಕೆಯ ಕರೆಗಳನ್ನು ಮಾಡಿದ ಮೆಸ್ಸೇಜುಗಳಿಗೆ ರಿಪ್ಲೈ ಮಾಡು ವುದನ್ನು ಬಿಟ್ಟ. "ಒಮ್ಮೆ ಕೊಲ್ಕೊತ್ತಾಗೆ ಬನ್ನಿ ನನ್ನ ಜೀವಮಾನದ ಉಡುಗೊರೆ ನೀಡುತ್ತೇನೆ" ಅಂದಳು. ಕಡೆಗೆ ಆಕೆಯ ಫೋನ್ ನಂಬರನ್ನು ಬ್ಲಾಕ್ ಮಾಡಿದ. ಅದಾದ ಮೇಲೆ ಅದ್ಹೇಗೋ ಕಚೇ ರಿಯ ಲ್ಯಾಂಡ್ ಫೋನ್ ನಂಬರ್ ಪತ್ತೆ ಮಾಡಿ ಅದಕ್ಕೂ ಆಕೆ ಕಿವಿ ಆನಿಸಿ ಕೂಡಲು ಆರಂಭಿಸಿದಳು. ಈ – ಮೇಲ್, ಫೇಸ್ಬುಕ್ ಎಲ್ಲಾದರಲ್ಲೂ ರಿಕ್ವೆಸ್ಟ್ ಮಾಡಿದಳು. ಅದನ್ನೂ ತಪ್ಪಿಸಿಕೊಳ್ಳುತ್ತಿದ್ದ ಗಾಜು ಗಣ್ಣಿನವ ಕಡೆಗೊಂದು ದಿನ ನಿರ್ಧರಿಸಿಬಿಟ್ಟ.
one fine day ಗಾಜುಗಣ್ಣಿನವನು ನೇರವಾಗಿ ಕರೆ ಮಾಡಿ, "ಹೆಣ್ಣು ಗಂಡಿನ ನಡುವೆ ಗೆಳೆತನ/ ಸ್ನೇಹ, ಪ್ರೀತಿ ಹೀಗಿರಬೇಕು, ಅದೂ ಮದುವೆಯಾಗಿ, ಮಕ್ಕಳಾಗಿ ಜಾವಾಬ್ದಾರಿಯಿಂದ ಮತ್ತು ಮಕ್ಕಳೆ ದುರಿಗೆ ವಿಶೇಷವಾಗಿ ಹೆಣ್ಣು ಮಕ್ಕಳೆದುರಿಗೆ ಹೀಗೆ ನಡೆದುಕೊಳ್ಳುವಾಗ ಇರಬೇಕಾದ ಒಂದು ಸಣ್ಣ ಗೆರೆಯಂಥ ಎಚ್ಚರಿಕೆಯನ್ನು ಇಟ್ಟುಕೊಳ್ಳಬೇಕು. ಅದು ಗೆಳೆತನದ್ದು ಅಥವಾ ಪ್ರೀತಿಯದ್ದು ಅಂತಲ್ಲ, ಅದು ನಮ್ಮ ಪ್ರಜ್ಞೆಯದ್ದು. ಆ ಪ್ರಜ್ಞೆಯಿಂದ ಏನಾದರೂ ಮಾತಾಡುವುದಿದ್ದರೆ ಮಾತನಾಡಿ ಇಲ್ಲವಾದಲ್ಲಿ ಸಾರಿ …. I am not reachable…." ಎಂದು ಹೇಳಿ ನಿಟ್ಟುಸಿರಾಗಿದ್ದ. ಎಚ್ಚರವಾದ ಎಷ್ಟೋ ದಿನ ಗಳ ನಂತರ ಆಕೆ ಮನಃ ಪರಿವರ್ತನೆಗೊಂಡು ಕ್ಷಮೆ ಕೇಳಿದ್ದಳಂತೆ. ಮತ್ತೀಗ ಗಾಜುಗಣ್ಣಿನವನ ಸ್ವಚ್ಛ ಮೆಸೇಜು "ನಿಮ್ಮ ಕರೆಗಳನ್ನು ಗುಣಮಟ್ಟ ಹಾಗೂ ಉತ್ತಮ ಬಾಂಧವ್ಯಕ್ಕಾಗಿ ರೆಕಾರ್ಡ್ ಮಾಡಕೊಳ್ಳ ಲಾಗುವುದು ಅಲ್ಲಿಯವರೆಗೆ ಸಂಪರ್ಕದಲ್ಲಿರಿ"….
ಈ ಕಥೆ ಕೇಳಿ ಈಗ ಸರಿಯಾಗಿ ಒಂದು ವರ್ಷವಾಯಿತು. ಈ ಗಾಜುಗಣ್ಣಿನವನು ವಾರೆ ನೋಟ ಬೀರಿ ದ್ದರೆ ಅವನು ಗೆರೆ ದಾಟಬಹುದಿತ್ತು. ಅತ್ತ ಆಕೆ ತನ್ನನ್ನು ನಿರ್ಲಕ್ಷಿಸಿದ್ದಕ್ಕಾಗಿ ದುರಾಲೋಚನೆಯಿಂದ ಮಹಿಳಾ ಸಬಲೀಕರಣದ ಜಾಗೃತಿಯ ಈ ದಿನಗಳಲ್ಲಿ ಗಾಜುಗಣ್ಣಿನವನನ್ನು ಸಿಕ್ಕಿಸಿ ಕಣ್ಣೀರಿಕ್ಕಿ ಸೇಡು ತೀರಿಸಿಕೊಳ್ಳಬಹುದಿತ್ತು. ಅವೆರಡೂ ಪ್ರಸಂಗಗಳಿಲ್ಲಿ ಅಪ್ರಸ್ತುತವಾಗಿವೆ. ನಲವತ್ತರ ಆಸುಪಾಸಿನಲ್ಲಿ insecured ಆದಂಥ ಕೆಲವು ಮನಸ್ಸುಗಳು ಈ ರೀತಿ ಎಡವುತ್ತವಾ? ಗೊತ್ತಿಲ್ಲ. ಗಾಜುಗಣ್ಣಿನವನು ನಿಭಾಯಿಸಿದ ಪರಿಸ್ಥಿತಿ ನನಗೆ ಬಂದಿದ್ದರೆ ನಾನು ಹೇಗೆ ರಿಯಾಕ್ಟ್ ಮಾಡುತ್ತಿದ್ದೆ? ನಲವತ್ತರ ಆಸು ಪಾಸಿನವನಾಗಿ?
ಯೋಚಿಸುತ್ತಿದ್ದೇನೆ.
*****
🙂 🙂 ಚೆನ್ನಾಗಿದೆ
Sambandhagala sankeernatheyannu athyantha naajookaagi nibhaayisida katheyannu ashte su-sambaddhavaagi heliddeeri Amar!
ಚೆನ್ನಾಗಿದೆ ಸರ್
Kela samaya hyderabadge hogi bande. Gajukanninavana echharikeya nade dodda gandanthara dinda avanannu paru madide. Once upon a time samething happened to me. Chandra dooradinda nododikke bahala sundaravagidru hathira hogi nodidaga bari kuligale ideyanthe. Nimma katheya neethi horagina soundaryakke yavaththu marulagadiri! echchara!!!
experience taught a lot……..
ಪ್ರೀತಿ, ವಿಶ್ವಾಸ, ನಂಬಿಕೆಗಳೇ…. ಮನುಷ್ಯನ ಸಂಬಂಧಗಳಲ್ಲಿ ತುಸು ಎಚ್ಚರ ತಪ್ಪಿದರೂ… ಮನೆ, ಮನ ಹೊಡೆಯುವ ( ಮುರಿದು ಬೀಳುವ ) ಸಂದರ್ಭಗಳ ಚೆನ್ನಾಗಿ ನಿರೂಪಿಸಿದ್ದೀರಿ .