ನಮ್ಮ ಮನೆಯಲ್ಲಿ ರವೀ ಮೂಡಿದ್ದಾನೆ!: ದೀಕ್ಷಿತ್ ಕುಮಾರ್ ಕೆ. ಎಂ

ಯಾಕೋ ಗೊತ್ತಿಲ್ಲ ಇಂದಿಗೂ ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ ನಮ್ಮ ಮನೆಯ ಸದಸ್ಯರಲ್ಲಿ ಯಾರೋ ಒಬ್ಬರು ನನ್ನನ್ನು ಅಗಲಿ ಹೋಗಿದ್ದರೂ ಇಷ್ಟು ಹೊತ್ತಿಗೆ ಚೇತರಿಸಿಕೊಂಡು ಸದೃಢನಾಗುತ್ತಿದ್ದೆನೇನೊ? ಆದರೆ ನಾನು ಕಳೆದುಕೊಂಡದ್ದು ಒಬ್ಬ ದೈತ್ಯ ಪ್ರತಿಭೆಯನ್ನು, ನಾ ಲೇಖನಿ ಹಿಡಿದು ಬರೆಯಲು ಕಾರಣರಾದವರನ್ನು, ನನ್ನ ಪ್ರಬುದ್ಧ ಮಾತುಗಳ ಹಿಂದಿನ ಗುರುವನ್ನು ಹಾಗೂ ನನ್ನ ಕಿಂಚಿತ್ತು ಸಾಧನೆಯ ಹಿಂದಿನ ಸ್ಫೂರ್ತಿದಾಯಕರನ್ನು! ಅವರು ಕಾಲವಾದ ನಂತರ ಅವರನ್ನು ಕುರಿತು ಪುಂಕಾನುಪುಂಕ ಬರೆಯಲು ನಿರ್ಧರಿಸಿ ಹಠಕ್ಕೆ ಬಿದ್ದು ಟೇಬಲ್ ನ ಮೇಲೆ ಹಾಳೆ ಹರವಿಕೊಂಡು ಕುಳಿತರೂ ಶಕ್ತಿ ಮತ್ತು ಧೈರ್ಯದ ಕೊರತೆಯಿಂದ ಸ್ವತಃ ನನ್ನ ಬೆರಳುಗಳೇ ನನಗೆ ಸಾಥ್ ಕೊಡದೆ ನನ್ನನ್ನು ನಿಷಣ್ಣನ್ನನ್ನಾಗಿಸಿತ್ತು. ಆದರೆ ಇಂದೂ ಕೂಡ ಬರೆಯದೇ ಇದ್ದರೆ ನಾನೊಬ್ಬ ಮಹಾನ್ ಪಾಪಿಯಾಗಿ ಬಿಡುತ್ತೇನೆ. “ಮಾರ್ಚ್,15 2021” ಬಹುಶಃ ಈ ದಿನ ನಾನು ಬೆಂಗಳೂರಿನ ಪದ್ಮನಾಭನಗರದ ಹಾಯ್ ಬೆಂಗಳೂರು ಕಚೇರಿಯಲ್ಲಿ ಅವರನ್ನು ಕಂಡು ಹುಟ್ಟುಹಬ್ಬದ ಶುಭಾಶಯ ಕೋರಿ ಆಶೀರ್ವಾದ ಪಡೆದುಕೊಂಡು ಹತ್ತಾರು ಪುಸ್ತಕಗಳೊಂದಿಗೆ ಹಿಂದಿರುಗುತ್ತಿದ್ದೆನೇನೊ? ಅದು ನನ್ನ ಬಹು ವರ್ಷಗಳ ಪ್ರಾಮಾಣಿಕ ಕನಸು ಕೂಡ. ಆದರೆ ಅದು ಹೇಗೆ ಸಾಧ್ಯ? ಅವರು ಈಗ ಅಲ್ಲಿಲ್ಲವಲ್ಲ, ಕಾರಣ ಹೇಳದೆ ನಡುರಾತ್ರಿಯೇ ಹೊರಟು ಬಿಟ್ಟರಲ್ಲ, ಸೂತಕದ ಛಾಯೆಯನ್ನು ತಂದಿಟ್ಟು ಹೋದರಲ್ಲ.

ನಿಮಗೆ ಗೊತ್ತಾಗಿದೆ ಅಲ್ವಾ? ನನ್ನ ಅಕ್ಷರಗಳು ಸಾಗುತ್ತಿರುವುದು ಅಕ್ಷರ ಮಾಂತ್ರಿಕ ರವಿ ಬೆಳಗೆರೆಯವರನ್ನು ಕುರಿತು ಎಂದು. ಹೌದು ಸ್ನೇಹಿತರೆ, ಇಂದು ಕನ್ನಡ ಸಾಹಿತ್ಯಲೋಕದಲ್ಲಿ ವಿಭಿನ್ನವಾದ ಕಾದಂಬರಿಗಳ ಮೂಲಕ ಸದ್ದಿಲ್ಲದೆ ಸುದ್ದಿಯಾಗಿದ್ದ, ಪ್ರೀತಿಯೆಂದರೆ ಕೇವಲ ಹೊಕ್ಕುಳ ಆಳದ ಕಾಮವಲ್ಲ ಎಂದು ತಿಳಿಸಿಕೊಟ್ಟಿದ್ದ ಕನ್ನಡದ ಹಿರಿಯ ಪತ್ರಕರ್ತ, ನಿರೂಪಕ, ಲೇಖಕ, ವಾಗ್ಮಿಯಾಗಿದ್ದ ಮತ್ತು ಎಲ್ಲಾ ಕ್ಷೇತ್ರಗಳಲ್ಲೂ ಕೈಯಾಡಿಸಿದ್ದ ರವಿ ಬೆಳಗೆರೆಯವರ 63ನೇ ವರ್ಷದ ಜನ್ಮದಿನದ ಸವಿನೆನಪು.

“ಹೀಗೆ ಫೋನ್ ನಲ್ಲಿಯೇ ಮಾತಾಡ್ಕೊಂಡೇ ಇರ್ತಿಯೋ ಹೇಗೆ? ನನ್ನ ಪದ್ಮನಾಭನಗರದ ಹಾಯ್ ಬೆಂಗಳೂರು ಕಚೇರಿಗೆ ಬಾ ಮಗು ಒಂದಿಷ್ಟು ಹರಟೋಣ. ನನ್ನ ಮೆಚ್ಚಿನ ಪುಸ್ತಕಗಳನ್ನು ನಿನಗೆ ಕೊಡ್ತೀನಿ ಅರ್ಧದಷ್ಟು ದುಡ್ಡು ಕೊಡು ಸಾಕು” ಒಬ್ಬ ಅಸಾಧಾರಣ ಸಾಧಕ ಸಾಮಾನ್ಯ ಕಾಲೇಜಿನ ವಿದ್ಯಾರ್ಥಿ ಅದರಲ್ಲೂ ಹತ್ತೊಂಬತ್ತು ವರ್ಷದ ಹುಡುಗನಾದ ನನ್ನ ಬಳಿ ಮಾತನಾಡುತ್ತಿದ್ದ ವೈಖರಿಯಿದು. ನಾನಂತೂ ಎಡಬಿಡಂಗಿ ಸಾಧಿಸಿರೋರ್ನ ಕಂಡರೆ ಅದರಲ್ಲೂ ಮನಸ್ಸಿಗೆ ಹತ್ತಿರವಾದವರು ಸಿಕ್ಕರೆ ಮೆದುಳಿಗೆ ಕೈಹಾಕಿ ಬಿಡ್ತೀನಿ ಆದರೆ ಯಾವುದೇ ಹಮ್ಮು ಬಿಮ್ಮು ಕೋಪವಿಲ್ಲದೆ ತಾಳ್ಮೆಯಿಂದ ಹತ್ತು ನಿಮಿಷಕ್ಕೂ ಹೆಚ್ಚು ಮಾತನಾಡಿ ಹತ್ತು ವರ್ಷಗಳಿಗಾಗುವಷ್ಟು ಸ್ಫೂರ್ತಿ ತುಂಬುತ್ತಿದ್ದರೆಂದರೆ ನಿಜಕ್ಕೂ ಅವರು ಅದೆಷ್ಟು ಗ್ರೇಟ್ ಅಲ್ವಾ? ಇದ್ಯಾವುದೂ ಸುಳ್ಳಲ್ಲ ಮತ್ತು ಉತ್ಪ್ರೇಕ್ಷೆಯಲ್ಲ ಅಕ್ಷರಶಃ ಸತ್ಯ. ರವಿ ಸರ್ ಸಂಪರ್ಕ ನನಗೆ ಸಿಕ್ಕಿದ್ದೆ ಒಂದು ವಿಚಿತ್ರ ಸಹಸ್ರಾರು ವೆಬ್ ಸೈಟ್ ಗಳನ್ನು ಜಾಲಾಡಿ ಅವರ ನಂಬರ್ ಪಡೆದು ವಾಟ್ಸಪ್ ನಲ್ಲಿ ಮೆಸೇಜ್ ಹಾಕಿ ಅವರಿಂದ ಮರು ಮೆಸೆಜ್ ಪಡೆದು ಅವರ Contact list ನಲ್ಲಿ “Deekshith Mandya” ಎಂದು ಸ್ಥಾನ ಗಿಟ್ಟಿಸಿಕೊಂಡ ಸಾಹಸಿಗ. ಫೇಸ್ ಬುಕ್ ನಲ್ಲಿ ಫ್ರೆಂಡ್ ಆಗಿ ಅವರನ್ನು ಸದಾ ಹಿಂಬಾಲಿಸುತ್ತಿದ್ದ ಹುಚ್ಚು ಅಭಿಮಾನಿ. ಕೆಲವೊಮ್ಮೆ ಅವರ ಸ್ಟೇಟಸ್ ನನಗೆ ಬಂದಾಗಲಂತೂ ನೂರು ಬಾರಿ ಕುಣಿದು ಕುಪ್ಪಳಿಸಿ ಮನೆಮಂದಿಗೆಲ್ಲ ತೋರಿಸಿ ಕೈ ಹಾಕಿದರೂ ಸಿಗದ ಚಿಗುರು ಮೀಸೆಯನ್ನು ತಿರುವುತ್ತಿದ್ದೆ.

ಹೀಗೆ ಬರೋಬ್ಬರಿ ಒಂದು ವರ್ಷ ಕಾಲ್ ಮತ್ತು ಮೆಸೇಜ್ನಲ್ಲಿಯೇ ಬೆಸೆದಿದ್ದ ನಮ್ಮ ಸಂಬಂಧ ನೇರಾನೇರ ಮುಖ ಭೇಟಿಯಿಲ್ಲದೆಯೇ ಕೊನೆಗೊಂಡು ಬಿಟ್ಟಿತ್ತು. ನನಗೆ ನಿಜಕ್ಕೂ ಅದೆಷ್ಟು ಅಸಡ್ಡೆ ಇತ್ತು ಎಂದು ಇಂದಿಗೂ ಅನಿಸುತ್ತಿದೆ ಬಸ್ ಸೀಟಿನ ಮೇಲೆ ತಲೆಹಾಕಿ ಕೂತಿದ್ದರೆ ಮೂರು ಗಂಟೆಯಲ್ಲಿ ಬೆಂಗಳೂರಿಗೆ ಕರೆದೊಯ್ಯುತ್ತಿತ್ತು. ಅಲ್ಲಿಂದ ಅರ್ಧ ಗಂಟೆಯಲ್ಲಿ ರವಿ ಸರ್ ಅವರ ಆಫೀಸ್ ತಲುಪಿ ಅವರನ್ನು ಕಾಣುವ ಅವಕಾಶವಿತ್ತು. ಆದರೆ “ನಾಳೆ ನಾಳೆ” ಎಂಬ ನನ್ನ ತಾತ್ಸಾರ ಮುಂದೆಂದಿಗೂ ಅವರನ್ನು ಕಾಣದಂತೆ ಮಾಡಿಬಿಟ್ಟಿತು. ಆ ನೋವನ್ನು ಭರಿಸಲೆಂದೇ ಅವರ ನಲವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಓದಿ ಇನ್ನುಳಿದ ಪುಸ್ತಕಗಳನ್ನು ಖರೀದಿಸಿ ಓದಲು ಹಪಹಪಿಸುತ್ತಿದ್ದೇನೆ. ಬೆಳಿಗ್ಗೆ ಎದ್ದ ತಕ್ಷಣ ದೇವರ ಮುಖ ದರ್ಶನ ಮಾಡದೆ ಮಾನಸ ಗುರುವಿನ ದರ್ಶನ ಮಾಡಲು ಗೋಡೆಗೆ ಅವರ ಫೋಟೋವನ್ನು ತೂಗುಹಾಕಿ ನಳನಳಿಸುವ ಹಾರ ಹಾಕಿದ್ದೇನೆ ಮತ್ತು ಹೊರಗಡೆ ಹೋಗುವ ಮುನ್ನ ಅವರಿಗೆ ಕರಮುಗಿದು ಹೊರಡುತ್ತೇನೆ.

ಒಟ್ಟಾರೆ ಹಗಲು ಮತ್ತು ರಾತ್ರಿ ಪೂರ ನಮ್ಮ ಮನೆಯೊಳಗೆ ರವೀ ಮೂಡಿರುತ್ತಾನೆ. ನಾನಂತೂ ಹೊಸ ಮನುಷ್ಯನಾಗಿ ಬದಲಾಗಿದ್ದೇನೆ. ಸಾಧಿಸುವ ಹೆಬ್ಬಯಕೆಯನ್ನು ಹೊಂದಿದ್ದೇನೆ. ಇದಕ್ಕೆ ಕಾರಣವಾದದ್ದು ರವಿ ಬೆಳೆಗೆರೆಯವರ ಪುಸ್ತಕಗಳು ಸಾಧ್ಯವಾದರೆ ನೀವೂ ಕೂಡ ಈ ಕೆಳಗಿನ ಒಂದಿಷ್ಟು ಪುಸ್ತಕಗಳನ್ನು ಓದಿ ಸದೃಢರಾಗಿ

1) ಕಾರ್ಗಿಲ್ ನಲ್ಲಿ ಹದಿನೇಳು ದಿನಗಳು
2) ಹಿಮಗಿರಿಯ ಗರ್ಭದಲ್ಲಿ
3) ಹಿಮಾಗ್ನಿ
4) ಹೇಳಿ ಹೋಗು ಕಾರಣ
5) ಅಮ್ಮ ಸಿಕ್ಕಿದ್ಲು
6) ರೇಷ್ಮೆ ರುಮಾಲು
7) ಹಂತಕಿ ಐ ಲವ್ ಯೂ
8) ಮಾಟಗಾತಿ
9) ನಕ್ಷತ್ರ ಜಾರಿದಾಗ

“ಅಕ್ಷರ ಮಾಂತ್ರಿಕ ನೀನು
ಈ ದಶಕದ ಸಾಧಕ
ಕಂಡದ್ದನ್ನು ಕಂಡಂತೆಯೇ
ಭಟ್ಟಿ ಇಳಿಸಿದ ಲೇಖಕ “

ರವಿ ಬೆಳಗೆರೆಯವರ ನೆನಪಿನಲ್ಲಿ
-ನಾನು

ದೀಕ್ಷಿತ್ ಕುಮಾರ್ ಕೆ. ಎಂ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x