ನಮ್ಮ ಪುರಾಣಗಳಲ್ಲಿ ನಮ್ಮ ಮಕ್ಕಳು: ದತ್ತ ರಾಜ್


ಹದಿನೆಂಟು ಪುರಾಣಗಳು ಹಾಗೂ ಅವುಗಳ ಉಪಪುರಾಣಗಳು ಭಾರತೀಯ ಇತಿಹಾಸಗ್ರಂಥಗಳೇ ಆಗಿದ್ದರೂ  ಕೆಲವು ಪುರಾಣಗಳಲ್ಲಿ ಪರಸ್ಪರ ವಿರೋಧಗಳಿರುವುದರಿಂದ, ಅನೇಕ ಪ್ರಕ್ಷಿಪ್ತತೆಗಳು ಇರುವುದರಿಂದ ಅವುಗಳನ್ನು ಸಂಪೂರ್ಣವಾಗಿ ಸತ್ಯವಾದ ಇತಿಹಾಸಗಳೆಂದು ಪರಿಗಣಿಸಲಾಗುವುದಿಲ್ಲ. ಆದರೆ ರಾಮಾಯಣ ಮತ್ತು ಮಹಾಭಾರತ ಇವೆರಡನ್ನುಯಥಾರ್ಥ ಇತಿಹಾಸ ಗ್ರಂಥಗಳು ಎಂದು ಗುರುತಿಸಲಾಗಿದೆ. ಈ ಇತಿಹಾಸ ಪುರಾಣಗಳನ್ನು ಅವಲೋಕಿಸಿದಾಗ  ಪ್ರಾಚೀನ ಭಾರತದ ಜನರು ಎಂತಹ ಜೀವನ ನಡೆಸುತ್ತಿದ್ದರು.  ಸಮಾಜದ ಆರ್ಥಿಕ-ಪಾರಿವಾರಿಕ ಸ್ಥಿತಿಗತಿಗಳು ಹೇಗಿದ್ದವು ಎನ್ನುವುದು ಅರಿವಿಗೆ ಬರುತ್ತದೆ. ಪ್ರಾಚೀನ ಭಾರತದಲ್ಲಿಯೂ ಮಕ್ಕಳ ಮೇಲೆ ಇಂದಿನಂತೆ ದೌರ್ಜನ್ಯಗಳು ನಡೆಯುತ್ತಿದ್ದವಾ..?  ಆಗಿನ ಕಾಲದ ಜನಜೀವನದಲ್ಲಿ ಮಕ್ಕಳ ಹಕ್ಕುಗಳೇನಾಗಿದ್ದವು..? ಎಂದು ನೋಡುತ್ತ ಹೋದರೆ ಬಹಳ ಆಸಕ್ತಿಕರ ಸಂಗತಿಗಳು ಸಿಗುತ್ತವೆ. ಸಮಾಜದಲ್ಲಿ, ಧರ್ಮದಲ್ಲಿ ಮಕ್ಕಳಿಗೆ ವಿಶೇಷ ಹಕ್ಕುಗಳು ಇರುವುದು ಕಂಡು ಬರುತ್ತದೆ. 

ಇತಿಹಾಸ-ಪುರಾಣಗಳ ಅಪರಾಧಿಗಳನ್ನು ಶಿಕ್ಷಿಸುವ ಸಂದರ್ಭಗಳಲ್ಲಿ ಅವರು ಬಾಲ್ಯಾವಸ್ಥೆಯಲ್ಲಿ ಮಾಡಿದ ತಪ್ಪುಗಳನ್ನು ''ಶಿಕ್ಷಾರ್ಹ'' ಎಂದು ಪರಿಗಣಿಸುವುದಿಲ್ಲ. ಬಾಲ್ಯದಲ್ಲಿ ನಡೆಯುವ ಅಚಾತುರ್ಯಗಳಿಂದ ಯಾವುದೇ ಪಾಪಗಳು ಅಂಟುವುದಿಲ್ಲ ಎಂದು ಅನೇಕ ಕಡೆ ತಿಳಿಸಲಾಗಿದೆ. ಇತಿಹಾಸ ಪುರಾಣಗಳಿಗಿಂತ ಧರ್ಮಶಾಸ್ತ್ರದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಹೆಚ್ಚು ವಿವರ ಕಂಡು ಬರುತ್ತದೆ. ತಂದೆ ತಾಯಂದರು ಪೂಜಾ-ಯಜ್ಞಾದಿಗಳಲ್ಲಿ ತೊಡಗಿದಾಗ ತಮ್ಮ ಮಕ್ಕಳನ್ನು ಉಪವಾಸ ಇಡಬಾರದು, ಮಕ್ಕಳಿಗೆ ಯಾವುದೇ ನಿಯಮಗಳಿರುವುದಿಲ್ಲ ಎಂದು ತಿಳಿಸಲಾಗಿದೆ.  ಮಡಿ-ಮೈಲಿಗೆ ಸೂತಕ-ಅಶೌಚ ಮುಂತಾದ ಆಚರಣೆಗಳನ್ನು ಮಕ್ಕಳು ಆಚರಿಸುವ ಅಗತ್ಯವೇ ಇಲ್ಲ. ಯಾವ ಮನೆಯಲ್ಲಿ ಮಕ್ಕಳು ಹಿಂಸಿಸಲ್ಪಡುತ್ತಾರೋ, ಕಣ್ಣೀರು ಸುರಿಸುತ್ತಾರೋ ಅಂತಹ ಮನೆ ಅಮಂಗಳಕರ . ಮಕ್ಕಳ ಕಣ್ಣೀರು ಆ ಮನೆಯ ಯಜಮಾನನಿಗೆ ಹಾನಿ ಉಂಟುಮಾಡುತ್ತದೆ  ಎಂದು ತಿಳಿಸಲಾಗಿದೆ. ವಯಸ್ಕರು ಯಾವುದೇ ಕಾರ್ಯಗಳನ್ನು ಮಾಡುವಾಗ ಮಕ್ಕಳ ವಯೋಸಹಜ ಹುಡುಗಾಟಿಕೆಯಿಂದಾಗಿ  ಆ ಕೆಲಸದಲ್ಲಿ ತೊಂದರೆ ಉಂಟಾದರೆ  ಅದಕ್ಕೆ ಪ್ರತಿಯಾಗಿ ಮಕ್ಕಳನ್ನು ದಂಡಿಸಬಾರದು. ತಮ್ಮ ಆರ್ಥಿಕ ಶಕ್ತಿ ಮೀರಿ ಮಕ್ಕಳನ್ನು ಪಡೆಯಬಾರದು, ಮಕ್ಕಳಿಂದ ಯಾವುದೇ ಕೆಲಸ ಮಾಡಿಸಬಾರದು ಮುಂತಾದ ನಿಯಮಗಳನ್ನು ಪರಾಶರ ಸ್ಮೃತಿ ವಿಧಿಸುತ್ತದೆ.

''ಮಕ್ಕಳು'' ಎನ್ನುವುದು ಕೇವಲ ವಯಸ್ಸಿಗೆ ಸಂಬಂಧಪಟ್ಟಿದ್ದು ಅಲ್ಲ. ಯಾರಲ್ಲಿ ಅಮಾಯಕತೆ ಇದೆಯೋ.. ವಿದ್ಯೆ, ಬುದ್ಧಿ, ಶಕ್ತಿ ಸಾಮರ್ಥ್ಯ ಯಾರಲ್ಲಿ ಕಡಿಮೆ ಇದೆಯೋ ಅವರೆಲ್ಲ ಬಾಲಕ ಬಾಲಕಿಯರೇ..  ಹಾಗೂ ಯಾರಲ್ಲಿ ವಿವೇಕ-ವಿದ್ಯೆ ಹಾಗೂ ಶಕ್ತಿ ಸಾಮರ್ಥ್ಯಗಳಿವೆಯೋ ಅವರು ಮಾತ್ರ ಪ್ರೌಢರು, ವಯಸ್ಕರು ಎಂದು ಪರಿಗಣಿಸಬೇಕು ಎಂದು ಧರ್ಮಶಾಸ್ತ್ರ ನಿರ್ದೇಶಿಸುತ್ತದೆ. ಇತಿಹಾಸ ಪುರಾಣಗಳಾಗಲಿ  ಅಥವಾ ಶಾಸ್ತ್ರಗಳೇ ಆಗಲಿ, ಅವೆಲ್ಲವೂ ಧರ್ಮದ  ಮೂಲಕ ಜೀವಿಯ ಅಲೌಕಿಕ ಸಾಧನೆಯ ಮಾರ್ಗವನ್ನು ತೋರಿಸುವ ಗ್ರಂಥಗಳೆ  ಅದ್ದರಿಂದ ಅವುಗಳಲ್ಲಿ ನಿರ್ದಿಷ್ಟವಾಗಿ ಇಂಥವರ ಹಕ್ಕು ಇಷ್ಟು ಎಂದು ಕಾನೂನಿನಂತೆ ವಿವರಿಸುವುದಿಲ್ಲ. ಆದರೆ ವಯಸ್ಕ ಪ್ರಜೆಗಳಿಗೆ ಧರ್ಮವನ್ನು ವಿಧಿಸುವಾಗ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಅನೇಕ ನಿರ್ದೇಶನಗಳಿವೆ.

“ ಲಾಲಯೇತ್ ಪಂಚ ವರ್ಷಾಣಿ ದಶ ವರ್ಷಾಣಿ ತಾಡಯೇತ್ | ಪ್ರಾಪ್ತೇ ತು ಶೋಡಷೇ ವರ್ಷೇ ಪುತ್ರಂ ಮಿತ್ರವದಾಚರೇತ್ “ ಎನ್ನುವ ಸುಭಾಷಿತದಲ್ಲಿ ''ಮಕ್ಕಳು ಐದು ವರ್ಷದವರಾಗುವವ ವರೆಗೆ ಯಾವುದೇ ಕಾರಣಕ್ಕೂ ಅವರನ್ನು ಗದರಿಸಬಾರದು, ಐದರಿಂದ ಹದಿನಾರನೇಯ ವಯಸ್ಸಿನ ವರೆಗೆ ಶಿಕ್ಷಣ ನೀಡಬೇಕು, ಹದಿನಾರರ ನಂತರ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು'' ಎಂಬ ಸಂದೇಶವಿದೆ. ಇನ್ನು ಋಗ್ವೇದದ ಕರ್ಮಕಾಂಡದ  ಮಹಾಪ್ರಾಯಶ್ಚಿತ್ತ ಭಾಗದಲ್ಲಿ ''ಬಾಲ ಹನನ'' ಅಂದರೆ ಮಕ್ಕಳ ಮೇಲಿನ ಹಲ್ಲೆಯನ್ನು  ಐದು ಮಹಾಪಾತಕ ಮತ್ತು ಏಳು ಉಪಪಾತಕಗಳಲ್ಲಿ ಒಂದು ಎಂದೇ ಪರಿಗಣಿಸಿ ಅದನ್ನು ಒಂದು ಗಂಭೀರ ಅಪರಾಧವೆಂದು ತಿಳಿಸಿದ್ದಾರೆ. ಅದಕ್ಕೆ ಘೋರವಾದ ಪ್ರಾಯಶ್ಚಿತ್ತಗಳನ್ನು ವಿಧಿಸಿದ್ದಾರೆ. ತಮ್ಮ ಸ್ವಂತ ಮಕ್ಕಳಲ್ಲದೇ  ಅನ್ಯರ ಮಕ್ಕಳ ಬಗೆಗೂ ಇದೇ  ನಿಯಮಗಳು ವರ್ತಿಸುತ್ತವೆ. ಗುರುಕುಲದಲ್ಲಿ ವಿದ್ಯಾರ್ಥಿಗಳು ತಂದೆ ತಾಯಂದಿರ ನೆನಪಿನಲ್ಲಿ ಓದು ಬರಹದಲ್ಲಿ ಆಸಕ್ತಿ ತೋರಿಸದೇ  ಹೋದಲ್ಲಿ ಅಂತಹ ಮಕ್ಕಳನ್ನು ದಂಡಿಸಬಾರದು ಎಂದು ಶಿಕ್ಷಾ ಶಾಸ್ತ್ರವು ಹೇಳಿದೆ.

ಪ್ರಾಚೀನ  ಭಾರತದಲ್ಲಿ ಎಲ್ಲರೂ ಒಂದೇ ರೀತಿಯ ಉದ್ಯೋಗಗಳನ್ನು ಮಾಡುತ್ತಿರಲಿಲ್ಲವಾದ್ದರಿಂದ ಎಲ್ಲ ಮಕ್ಕಳಿಗೂ ಒಂದೇ ರೀತಿಯ  ಶಿಕ್ಷಣ ವ್ಯವಸ್ಥೆ ಇರಲಿಲ್ಲ. ಈಗ  ಇರುವಂತೆ ಇತಿಹಾಸ, ಸಮಾಜಶಾಸ್ತ್ರ ವಿಜ್ಞಾನ, ಗಣಿತ ಮುಂತಾದವುಗಳನ್ನೊಳಗೊಂಡ ಸರ್ಕಾರದಿಂದ ನಿರ್ದೇಶಿತ ಪ್ರೌಢಶಾಲೆಯ ವರೆಗಿನ ಏಕರೂಪ ಶಿಕ್ಷಣ  ಎಲ್ಲರಿಗೂ ಕಡ್ಡಾಯ ಇರಲಿಲ್ಲ. ಬಹುತೇಕ ಮಕ್ಕಳು ತಮ್ಮ ತಮ್ಮ ತಂದೆ ತಾಯಿಯರ ಬಳಿ  ಅಥವಾ ಮನೆಯವರ ಬಳಿಯೇ ತಮ್ಮ ತಮ್ಮ ಕುಲ ಕಸುಬುಗಳನ್ನು ಕಲಿಯುತ್ತಿದ್ದರು. ತಮ್ಮ ಕುಲವೃತ್ತಿಗೆ ಅಗತ್ಯವಿಲ್ಲದ ವಿದ್ಯೆಯನ್ನು ಯಾರೂ ಕಲಿಯುತ್ತಿರಲಿಲ್ಲ.. ಹಾಗೂ ಅದನ್ನು ಕಲಿಯಲಿಕ್ಕಾಗಿ ಮನೆ ಬಿಟ್ಟು ಹೆಚ್ಚು ದೂರ ಹೋಗುತ್ತಿರಲಿಲ್ಲ.  ಆಡಳಿತಕ್ಕೆ ಬೇಕಾದ ರಾಜಧರ್ಮದ ತಿಳುವಳಿಕೆ ಮತ್ತು ಧರ್ಮದ ತಿಳುವಳಿಕೆ ಹೊಂದಿರಬೇಕಾದ ಕೆಲವೇ ವರ್ಗದ ಮಕ್ಕಳನ್ನು ಗುರುಕುಲಗಳಿಗೆ ಕಳುಹಿಸಲಾಗುತ್ತಿತ್ತು.  ಉಳಿದಂತೆ ವೃತ್ತಿಶಿಕ್ಷಣವೆಲ್ಲವೂ ಮನೆಯಲ್ಲಿಯೇ ಅಥವಾ ಸ್ವಗ್ರಾಮದಲ್ಲಿಯೇ ನಡೆಯುತ್ತಿತ್ತು. ಹೀಗಾಗಿ  ಈಗಿನಂತೆ ಮಕ್ಕಳು ಬೇರೆಯವರ ಸುಪರ್ದಿಯಲ್ಲಿ ಬೆಳೆಯುವ ಸಂದರ್ಭಗಳು ಕಡಿಮೆ ಇದ್ದವು.  ಆದ ಕಾರಣ ಮಕ್ಕಳು ಈಗಿನಂತೆ ಕುಟುಂಬದವರ ಹೊರತಾಗಿ ಬೇರೆಯವರಿಂದ ಅತ್ಯಾಚಾರ, ಹಲ್ಲೆಗೊಳಗಾಗುವ ಸಂದರ್ಭಗಳು ಅಪರೂಪ. ಆದರೆ ಕುಟುಂಬಿಕರಿಂದಲೇ ನಡೆಯುವ ಹಿಂಸೆ ಪ್ರಾಚೀನವಾದದ್ದೇ ಆಗಿದ್ದರೂ ಪ್ರಾಚೀನ ಭಾರತದಲ್ಲಿ ಧರ್ಮಭೀರತೆ ಹೆಚ್ಚು ಇತ್ತು ಹಾಗೂ ಲೌಕಿಕ ಮಹತ್ವಾಕಾಂಕ್ಷೆ  ಕಡಿಮೆ ಇದ್ದ ಕಾರಣ ಅದರ ಪ್ರಮಾಣ ಈಗಿನಷ್ಟಿರಲಿಲ್ಲ. ಒಟ್ಟಿನಲ್ಲಿ ಪುರಾಣ ಕಾಲದಲ್ಲೂ ಮಕ್ಕಳಿಗೆ ಅವರದೇ ಆದ ಅಸ್ತಿತ್ವವನ್ನೂ ಗುರುತಿಸಲಾಗಿತ್ತು ಮತ್ತು ಅವರಿಗೆ ಬೇಕಾದ ಮೂಲಭೂತ ಸಂರಕ್ಷಣೆ ಮತ್ತು ಮಾರ್ಗದರ್ಶನವನ್ನು ಅವರುಗಳ ಹಕ್ಕು ಎಂದೇ ಪರಿಗಣಿಸಿ ವಯಸ್ಕರ ಕರ್ತವ್ಯವನ್ನು ನಿಗದಿಪಡಿಸಲಾಗಿತ್ತು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x