ಒಮ್ಮೆ ಪ್ರಜಾವಾಣಿಯಲ್ಲಿ ಒಂದು ಸುಂದರ ವ್ಯಂಗ್ಯ ಚಿತ್ರ ಪ್ರಕಟವಾಗಿತ್ತು. ಅದನ್ನು ಬರೆದದ್ದು ಯಾರೆಂದು ಮರೆತಿದ್ದೇನೆ. ಆ ಚಿತ್ರ ಹೀಗಿತ್ತು: ಒಬ್ಬ ಯುವಕ, ಸಾಕಷ್ಟು ದಿನ ಕೂದಲು ಗಡ್ಡ ಟ್ರಿಮ್ ಮಾಡಿಸದೆ ಫಲವತ್ತಾಗಿ ಬೆಳೆದುಬಿಟ್ಟಿದೆ. ಆತ ಒಂದು ಕಂಪ್ಯೂಟರಿನ ಮುಂದೆ ಕುಳಿತಿದ್ದಾನೆ. ಆತನು ಆಚೀಚೆ ಅಲುಗಾಡದಂತೆ ಕುಳಿತಿದ್ದುದಕ್ಕೆ ಸಾಕ್ಷಿಯೆಂಬಂತೆ ಆತನ ಗಡ್ಡ–ಮುಖಕ್ಕೂ ಮತ್ತು ಆ ಕಂಪ್ಯೂಟರಿನ ಮಾನೀಟರಿಗೂ ದಟ್ಟಾದ ಜೇಡರ ಬಲೆ ಹೆಣೆದುಕೊಂಡುಬಿಟ್ಟಿದೆ. ಈ ಅರ್ಥವತ್ತಾದ ಚಿತ್ರ ಹೇಳುವಂತೆ ನಾವೆಲ್ಲರೂ ಇಂದು ಕಂಪ್ಯೂಟರ್, ಅಂತರ್ಜಾಲ ಎಂಬ ಮೋಹಕತೆಗೆ ನಮ್ಮನ್ನು ನಾವು ಒಪ್ಪಿಸಿಬಿಟ್ಟಿದ್ದೇವೆ. ಇದರ ಹೊರತಾದ ನಮ್ಮ ಜೀವನವನ್ನು ಊಹಿಸಲೂ ಅಸಾಧ್ಯ ಎಂಬ ಹಂತ ತಲುಪಿದ್ದೇವೆ.
ಇದು ಇಂಟರ್ನೆಟ್ ಯುಗ. ಒಂದು ಪುಟ್ಟ ಮಗುವಿನಿಂದ ಹಿಡಿದು ವಯಸ್ಸಾದವರೂ ಸಹ ಈ ಚಟಕ್ಕೆ ಬಲಿಯಾಗಿ ಬಿಟ್ಟಿದ್ದಾರೆ. ಇದರ ಸರಿ ತಪ್ಪುಗಳ, ಅಗತ್ಯಗಳ ಚರ್ಚೆ, ತುಲನೆ ಮಾಡಲೂ ಸಮಯವಿಲ್ಲದಂತೆ ಈ ಇಂಟರ್ನೆಟ್ 'ಬಲೆ'ಗೆ ಅನುರೂಪವಾಗಿಬಿಟ್ಟಿದ್ದೇವೆ. ಇಂದು ಇದರಿಂದ ಉಪಯೋಗವೆಷ್ಟೋ ಅದಕ್ಕೂ ದುಪ್ಪಟ್ಟಾಗಿ ದುರುಪಯೋಗ ಪ್ರಚಲಿತವಾಗಿಬಿಟ್ಟಿವೆ. ಸುಲಭವಾಗಿ, ಕುಳಿತಲ್ಲೇ ಕೆಡುವ ದಾರಿಗಳು ಸಾಕಷ್ಟು ಲಭ್ಯವಿದೆ. ಕೆಟ್ಟ ವಸ್ತುಗಳು, ವಿಚಾರಗಳು ಮನುಷ್ಯನನ್ನು ತುಂಬಾ ಕಾಡಿ ಸೆಳೆಯುತ್ತವಂತೆ. ಅವುಗಳನ್ನು ಬೇಗ ತನ್ನದಾಗಿಸಿಕೊಳ್ಳಲು ಮುಂದಾಗುತ್ತಾನಂತೆ. ಇದು ನಮ್ಮ ಬೈಬಲ್ಲಿನ 'ಹಣ್ಣಿನಿಂದ' ಮೊದಲುಗೊಂಡ ಸೈಕಲಾಜಿಕಲ್ ಥಿಯರಿ! ಈ ರೀತಿಯಾದ ಸೆಳೆತಗಳಿಗೂ ಮನುಷ್ಯನಿಗೂ ಕನೆಕ್ಟಿವಿಟಿ ಬರೀ ಒಂದು ಹೆಬ್ಬೆರಳು ಎಂದರೆ ಯೋಚಿಸಿ! ಇತ್ತೀಚಿಗೆ ನನ್ನ ಮನೆಗೆ ಬಂದ ಒಂದು ಪುಟ್ಟ ಹುಡುಗಿ, ವಯಸ್ಸು ಸುಮಾರು ಎಂಟು–ಒಂಭತ್ತು ಇರಬಹುದು. "ಆಂಟೀ ವೆನ್ ಡಿಡ್ ಯು ಹ್ಯಾವ್ ಯುವರ್ ಫಸ್ಟ್ ಕಿಸ್?" ಎಂದು ಕೇಳಿದ್ದಳು! ಆ ಪುಟ್ಟ ಮಗುವಿಗೆ ಅದು ಯಾವ ಕೌತುಕದ, ಪ್ರಶ್ನಾರ್ಥಕ ವಿಷಯವಾಗಿರಲಿಲ್ಲ, ಮತ್ತ್ಯಾವುದೋ ಇಪ್ಪತ್ತು ಮುವ್ವತ್ತರ ಹೆಣ್ಣು, ಹೀಗೆ ಮತ್ತೊಬ್ಬ ಹೆಣ್ಣನ್ನು ಛೇಡಿಸುವ ಪ್ರಶ್ನೆಯಂತೆ ಕಂಡಿತು. ತಡೆಯಲಾರದಷ್ಟು ನಗು ಬಂದದ್ದು ನಿಜವಾದರೂ, ಎಲ್ಲೋ ಒಂದು ಕಡೆ ತುಂಬಾ ಭಯ, ಆತಂಕ ಆವರಿಸಿಬಿಟ್ಟಿತು. "ಏಜ್ ಆಫ್ ಇನ್ಫ಼ರ್ಮೆಶನ್" ಎಂದು ಯಾವುದನ್ನೂ ಕರೆಯುತ್ತೀವಿ, ಅದು ನಮ್ಮ ಬಾಲ್ಯ, ಮುಗ್ಧತೆ ಎಂಬ ಸವಿಯನ್ನೂ ಕಸಿದುಕೊಂಡುಬಿಡುತ್ತಿದೆಯೇ, ಎಂದು. ಈ ಅಂತರ್ಜಾಲದ ಆಸ್ಪೋಟ ನಮ್ಮಲ್ಲಿನ ಮುಗ್ಧತೆಯನ್ನಷ್ಟೇ ಅಲ್ಲದೆ ಮಾನವೀಯ ಮೌಲ್ಯಗಳನ್ನೂ ತೆದೆದೊಗೆಯಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
ಇಂತಹ ಸಮಯದಲ್ಲಿ ನಮ್ಮ 'ಮಾರಲ್ ಪೋಲೀಸ್' ತರಹ ಒಂದು 'ಇಂಟರ್ನೆಟ್ ಪೋಲೀಸ್' ಇರಬಾರದಿತ್ತೇ ಎನಿಸುವುದು ಸತ್ಯ. ಇದೇ ಮಾತನ್ನು ಕಾರ್ಯರೂಪಗೊಳಿಸಲು ಅಂತರ್ಜಾಲದಲ್ಲಿ ಜವಾಬ್ದಾರೀ ಚಟುವಟಿಕೆಗಳು, ಪತ್ರಿಕೆಗಳು ಎಂಬಿತ್ಯಾದಿ ಒಳ್ಳೆಯ ತಾಣಗಳು ಅನೇಕ ರೂಪಗಳಲ್ಲಿ ತಲೆದೋರುತ್ತಿವೆ. ಈ ನಿಟ್ಟಿನಲ್ಲಿಯೇ ಒಂದು ಹೊಸ, ತಾಜಾ, ಲವಲವಿಕೆಯ, ಸಾಮಾಜಿಕ ಕಳಕಳಿಯ ಒಂದು ಸುಂದರ ತಾಣ ತನ್ನ ಬೆಳಕಿನ, ಅರಿವಿನ ‘ಪಂಜ’ನ್ನು ಹಿಡಿದು ನಮ್ಮೆಲ್ಲರ ಮನೆಯ ಕದ ತಟ್ಟಿದೆ. ಇದನ್ನು ನಾವೆಲ್ಲರೂ ಒಟ್ಟಿಗೆ ಸೇರಿ ಸ್ವಾಗತಿಸೋಣ, ಹುರಿದುಂಬಿಸೋಣ. ಈ ಮಾಧ್ಯಮದ ಮೂಲಕ ನಮ್ಮ ಕಳಕಳಿಯ ಧ್ವನಿಯನ್ನು ಹಂಚಿಕೊಳ್ಳೋಣ. "ಕಟ್ಟೋಣ ಹೊಸ ನಾಡೊಂದನು, ರಸದ ಬೀಡೊಂದನು" ಎಂಬ ಕವಿವಾಣಿಯ ಕನಸ ಕಂಡ ನಟರಾಜು ಮತ್ತು ತಂಡದವರಿಗೆ ನಮ್ಮೆಲ್ಲರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
-ಸಂಯುಕ್ತಾ ಪುಲಿಗಲ್

ಆ ಪುಟ್ಟ ಮಗುವಿಗೆ ಏನು ಉತ್ತರ ಕೊಟ್ಟಿರಿ ಎಂದು ಹೇಳಲೇ ಇಲ್ಲ 😉
ತಮಾಷೆಗೆ ಅಷ್ಟೇ… "ಪಂಜು"ವಿನ ನಿಮ್ಮ ಮೊದಲ ಲೇಖನಕ್ಕೆ ಅಭಿನಂದನೆಗಳು:)
ಓಹೋ…! ಎಲ್ಲೆಲ್ಲೂ ನಮ್ಮ ಸಂಯುಕ್ತ'ರೇ'… 🙂
ನಿಮ್ಮ ಈ ಕೊಡುಗೆ ಇಡೀ ವಿದ್ಯಾರ್ಥಿ ಸಮುದಾಯಕ್ಕೆ ಅನುಕೂಲಕರ ಧನ್ಯವಾದಗಳು ಸರ್
ಅಂತರ್ಜಾಲ ಅಲ್ಲವಿದು ಮಾಯಾಜಾಲ
ಇದರೊಳಗೆ ಸಿಲುಕಿದರೆ ಸುಲಭವಲ್ಲ
ಹೊರಬರಲು ವೃದ್ಧ, ತರುಣ, ಬಾಲ
ಅನಿಸುವುದು ಇದರಿಂದ ಎಲ್ಲರಿಗೂ ಕೇಡುಗಾಲ