ನಮ್ಮ ದೇವರು: ಜೈಕುಮಾರ್.ಹೆಚ್.ಎಸ್


ದೇಶದ ಪ್ರತಿಷ್ಟಿತ ವಿಜ್ಞಾನ ಸಂಶೋಧನಾ ಸಂಸ್ಥೆಯ ಆವರಣವದು. ದಟ್ಟ ಅರಣ್ಯವನ್ನು ನೆನಪಿಸುವ ದೇಶೀಯ ಮರಗಿಡಗಳಷ್ಟೇ ಅಲ್ಲದೆ ವಿವಿಧ ದೇಶಗಳ ಸಸ್ಯಸಂಪತ್ತನ್ನು ಹೊಂದಿದ್ದು, ಎಂಥಹ ಕಡುಬೇಸಿಗೆಯಲ್ಲೂ ತಂಪಾದ ಗಾಳಿ ಬೀಸುತ್ತಾ ನಳನಳಿಸುವ ಆವರಣವದು. ನೂರಾರು ಎಕರೆಯಷ್ಟು ಹರಡಿರುವ ಆವರಣದಲ್ಲಿ ವಿಜ್ಞಾನ ಪ್ರಯೋಗಾಲಯಗಳು, ಕ್ಲಾಸ್ ರೂಮುಗಳು, ವಿದ್ಯಾರ್ಥಿ ನಿಲಯಗಳು, ಕ್ಯಾಂಟೀನ್‌ಗಳು, ವಿಜ್ಞಾನಿಗಳ ವಸತಿ ನಿಲಯಗಳು ಯೋಜಿತ ರೀತಿಯಲ್ಲಿ ವಿಶ್ವದರ್ಜೆಗೆ ಸರಿಸiನಾಗಿ ಅರಣ್ಯದಂಥಹ ಆವರಣದಲ್ಲಿ ಅಡಗಿ ಕುಳಿತಂತಿವೆ. 

ಅದೊಂದು ದಿನ ಮಧ್ಯಾಹ್ನದ ಹೊತ್ತು ರಸ್ತೆಯಲ್ಲಿ ಜನ ತಮ್ಮ ಪಾಡಿಗೆ ತಾವು ಸಾಗುತ್ತಿದ್ದಾರೆ. ಸೂರ್ಯನ ಕಿರಣಗಳು ಮರಗಳ ಎಲೆಗಳ ನಡುವಿನ ಸಂಧುಗಳನ್ನು ತಡಕಾಡುತ್ತಾ ಅಲ್ಲೊಂದು ಇಲ್ಲೊಂದೆಡೆ ಎನ್ನುವಂತೆ ನೆಲವನ್ನು ಮುಟ್ಟುತ್ತಿವೆ. ತಂಪನೆಯ ಗಾಳಿ ನಿಟ್ಟುಸಿರು ಬಿಡುತ್ತಿರುವಂತಿದೆ. ಅತ್ತ ಕಡೆಯಿಂದ ಬೈಸಿಕಲ್ ಮೇಲೆ ವಿಚಿತ್ರ ವೇಷಧಾರಿ ಬರುತ್ತಿದ್ದಾನೆ. ತನ್ನದೇ ಹಾವ-ಭಾವ, ಭಂಗಿಯ ಮೂಲಕ ದಾರಿಹೋಕರ ಗಮನಸೆಳೆಯತೊಡಗಿದ. ಎಲ್ಲರ ಮೊಗದ ಮೇಲೂ ನಗು ಹರಡತೊಡಗಿದ. ಗಂಭೀರ ಚಿತ್ತದಿಂದ ಒಬ್ಬಂಟಿ ಹೋಗುತ್ತಿದ್ದವರು, ಆತ್ಮೀಯರೊಂದಿಗೆ ಮಾತನಾಡುತ್ತಾ ಸಾಗುತ್ತಿದ್ದವರು, ರಸ್ತೆ ಬದಿಯ ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳು, ಹೀಗೆ ಎಲ್ಲರ ಮುಖ-ಮನಸ್ಸುಗಳು ಅವನನ್ನು ಕಂಡು ಹರುಷ ತುಂಬಿಕೊಳ್ಳತೊಡಗಿದವು. ತನ್ನನ್ನು ಕಂಡು ಮಕ್ಕಳು ಖುಷಿಗೊಂಡ ಆ ಜಾಗದಲ್ಲಿ ಒಂದರೆ ಕ್ಷಣ ಬೈಸಿಕಲ್ ನಿಲ್ಲಿಸಿ ಇನ್ನಷ್ಟು ಖುಷಿ ಹಂಚಲು ಯತ್ನಿಸಿ ಮುನ್ನಡೆಯುತ್ತಿದ್ದ.

ಈ ವಿಲಕ್ಷಣ ಬೈಸಿಕಲ್ ಸವಾರನ ಕುರಿತು ನನ್ನ ಸ್ನೇಹಿತನೊಬ್ಬ ಒಂದೊಮ್ಮೆ ಹೇಳಿದ್ದ. ’ಸರ, ವಿಚಿತ್ರ ವೇಷ ಹಾಕೊಂಡ್, ಕೈಯಲ್ಲಿ ಗದೆ ಹಿಡ್ಕೊಂಡು, ಬೈಸಿಕಲ್ ಪೂರಾ ಎಂತೆಂತದೋ ವಸ್ತುಗಳಿಂದ ಅಲಂಕಾರ ಮಾಡ್ಕೊಂಡು ಓಡಾಡ್ತಾನೆ. ಇಲ್ಲೇ ಕೆಲಸ ಮಾಡ್ತಾನೆ ಅನ್ನಿಸ್ತದೆ. ಅವನ ಹಾವ-ಭಾ ನೋಡಿದ್ರೆ,  ಮೆಂಟಲ್ ಕೇಸ್ ಇರ್‍ಬೋದೇನೋ ಅನ್ಸುತ್ತೆ, ಸರ’ ಅಂದಿದ್ದ. ಹಾಗಾಗಿ ಅವನೇನಾದ್ರೂ ಸಿಕ್ಕರೆ ಮಾತಾಡ್ಸಿ ಒಂದಷ್ಟು ಅವನ ವಿವರ ತಿಳ್ಕೋಬೇಕು ಅನ್ಕೊಂಡಿದ್ದೆ. 

ಇನ್ನು ಸ್ವಲ್ಪ ಹೊತ್ತಿನಲ್ಲಿ ನಾನು ನಿಂತಿರುವ ಜಾಗದ ಮುಂದೆಯೇ ಹಾದು ಹೋಗುವವನಿದ್ದ ಆ ವಿಚಿತ್ರ ವ್ಯಕ್ತಿ. ನನ್ನ ಮುಂದೆಯೇ ಸಾಗಿ ಹೋಗುತ್ತಿದ್ದವನನ್ನು ’ನೀವು ಒಂದೈದು ನಿಮಿಷ ಬಿಡುವಾಗಿದ್ದರೆ, ಬೈಸಿಕಲ್ ನಿಲ್ಲಿಸಬಹುದಾ? ನಿಮ್ ಜೊತೆ ಸ್ವಲ್ಪ ಮಾತಾಡ್ಬೇಕು’ ಅಂದೆ. ಒಂದೆಡೆ ಎಚ್ಚರಿಕೆಯ ಕಣ್ಣುಗಳಿಂದ ನನ್ನನ್ನು ಗಮನಿಸುತ್ತಾ, ಮತ್ತೊಂದೆಡೆ ’ಬನ್ನಿ ಸಾರ್, ಮಾತಾಡೋಣ’ ಎಂದು ಸೌಜನ್ಯಯುತವಾಗಿಯೇ ಬದಿಗೆ ಬೈಸಿಕಲ್ ನಿಲ್ಲಿಸಿದ. ಹಾಗೇ ಅವನನ್ನು ಮತ್ತು ಬೈಸಿಕಲ್‌ನ್ನು ದಿಟ್ಟಿಸಿ ನೋಡುವಂತೆ ಗಮನಸೆಳೆದವು. ಬೈಸಿಕಲ್‌ನ ಪ್ರತಿಯೊಂದು ಭಾಗಕ್ಕೂ ಹತ್ತಲವು ಬಣ್ಣ ಬಣ್ಣದ ವಸ್ತುಗಳಿಂದ ಅಲಂಕಾರ ಮಾಡಲಾಗಿತ್ತು. ತ್ರಿಶೂಲ, ಕ್ರಾಸ್‌ಬಾರ್, ಹನುಮನ ಗದೆ, ಹಿಂದೂ-ಕ್ರಿಶ್ಚಿಯನ್-ಮುಸ್ಲಿಂ-ಇತ್ಯಾದಿ ದೇವರುಗಳ ಸಣ್ಣ ಸಣ್ಣ ವಿಗ್ರಹಗಳನ್ನು ಹ್ಯಾಂಡಲ್ ಬಾರ್‌ಗೆ ಕಟ್ಟಲಾಗಿತ್ತು. ಎರಡೂ ಚಕ್ರಗಳ ಸ್ಪೋಕ್ಸ್ ಕಡ್ಡಿಗಳಿಗೆ ಬಣ್ಣ ಹಚ್ಚಲಾಗಿತ್ತು. ಮಕ್ಕಳನ್ನು ಮಾತ್ರವೇ ಅಲ್ಲ, ದೊಡ್ಡವರನ್ನೂ ಅದು ತನ್ನೆಡೆಗೆ ಸೆಳೆಯದೇ ಬಿಡುತ್ತಿರಲಿಲ್ಲ. ಆ ವ್ಯಕ್ತಿಯ ವೇಷ ಭೂಷಣ ಕೂಡ ಹಾಗೆಯೇ ವಿಶಿಷ್ಟವಾಗಿದ್ದವು. ’ನಿಮ್ಮ ವೇಷ ಭೂಷಣ ಮತ್ತು ಬೈಸಿಕಲ್ ಓಟದ ಕುರಿತು ಸ್ವಲ್ಪ ವಿಷಯ ಹಂಚಿಕೊಳ್ತೀರಾ, ನನ್ನ ಕುತೂಹಲ ತಣಿಸೋದಿಕ್ಕೆ ಸಹಾಯ ಮಾಡಿದ ಹಾಗಾಗುತ್ತೆ’ ಎಂದದ್ದೇ ಖುಷಿಯಿಂದ ಮಾತನಾಡತೊಡಗಿತು ಆ ವ್ಯಕ್ತಿ. ಮೊದಲ ಪರಿಚಯದಲ್ಲೇ ತನ್ನ ವೈಯುಕ್ತಿಕ ವಿಷಯಗಳನ್ನೂ ಕೂಡ ಅಚ್ಚರಿಯಾಗುವಂತೆ ಬಿಚ್ಚಿ ಹೇಳತೊಡಗಿದ.

ಸಾರ್, ನನ್ನ ಹೆಸರು ಇಮಾನ್ಯುಯೆಲ್ ಅಂತ. ಇಲ್ಲೇ ಔಟ್‌ಸೋರ್ಸಿಂಗ್ ಆಧಾರದಲ್ಲಿ ಕೆಲ್ಸ ಮಾಡ್ತಿದೀನಿ. ನನಗೆ ರೋಗದಿಂದ ಹಾಸಿಗೆ ಹಿಡಿದಿರುವ ತಾಯಿ ಮಾತ್ರವೇ ಇರೋದು. ನನಗೆ ಬದುಕ್ಬೇಕು ಅನ್ನೋ ಆಸೇನೇ ಹೊರಟ್ಹೋಗಿತ್ತು. ನನಗೋಸ್ಕರ ಇಡೀ ಜೀವನಾನೇ ಮುಡಿಪಾಗಿಟ್ಟಿದ್ದು ನನ್ ತಾಯಿ. ನನ್ನ ತಾಯಿಗೋಸ್ಕರ ಬದುಕ್ತಿದೀನಿ.  ಚಿಕ್ಕವನಿದ್ದಾಗ ನಾನು ಅತಿ ನಾಚಿಕೆ ಸ್ವಭಾವ, ಕೀಳರಿಮೆ ಮತ್ತು ಬಡತನದಿಂದಾಗಿ ಯಾರೊಂದಿಗೂ ಅಷ್ಟಾಗಿ ಮಾತಾಡದೆ ಇರ್‍ತಿದ್ದೆ. ನನ್ನನ್ನು ಎಲ್ರೂ ರೇಗಿಸ್ತಿದ್ರು. ನನಗೊಬ್ಬ ಅಣ್ಣ ಕೂಡ ಇದ್ದ. ಆದ್ರೆ ಅಣ್ಣ ಮತ್ತು ಅಪ್ಪ ಒಂದೇ ತಿಂಗಳ ಅವಧಿಯಲ್ಲಿ ರೋಗದಿಂದ ತೀರ್‍ಕೊಂಡರು. ಅಪ್ಪ ಒಬ್ಬ ಗುತ್ತಿಗೆ ಕಾರ್ಮಿಕನಾಗಿದ್ದ, ಅಮ್ಮ ಮನೆಗೆಲಸ ಮಾಡ್ತಿದ್ಳು. ಅಣ್ಣ ಓದು ಮುಗಿಯುವ ಮುಂಚೆಯೇ ಅಚಾನಕ್ಕಾಗಿ ತೀರಿಹೋದ. ನಾನು ಅಮ್ಮನ ಮನೆಗೆಲಸದಿಂದಾಗಿ ಪದವಿ ಓದ್ತಾ ಇದ್ದೆ.

ಒಮ್ಮೆ ಒಂದು ಹುಡುಗಿ, ಮಧ್ಯಮ ವರ್ಗದ ಮನೆತನದವಳು, ನನ್ನನ್ನು ಕಾಲೇಜಿನಲ್ಲಿ ತುಂಬಾ ಹಚ್ಕೊಂಡಿದ್ಲು. ಮೊದಲಿಗೆ ದೂರವಿದ್ದ ನಾನು, ಅವಳ ಪ್ರೀತಿಗೆ ಸೋತು ನಾನೂ ತೀರಾ ಹಚ್ಕೊಂಡೆ. ಪದವಿ ಮುಗಿಯೋದ್ರೊಳಗೆ ಅವಳ ಮನೇಲಿ ಬೇರೊಬ್ಬರೊಡನೆ ಮದ್ವೆಗೆ ಏರ್ಪಾಡು ಮಾಡಿದ್ರು. ಅವರ ಮನೆಯವರೆಗೂ ನನ್ ವಿಷಯ ತಿಳೀತು. ಅವರಪ್ಪ ಒಮ್ಮೆ ನನ್ನ ಭೇಟಿ ಮಾಡಿ ’ನಿನ್ನಂಥ ಚಿಲ್ರೆಯವರೆಗೆಲ್ಲ ನನ್ಮಗಳನ್ನು ಕೊಡೋಕ್ಕಾಗಲ್ಲ. ಇನ್ನೊಮ್ಮೆ ಅವ್ಳ ಸಂಪರ್ಕ ಮಾಡಿದ್ರೆ ಮರ್ಡರ್ ಮಾಡಿಸ್ತೀನಿ ಹುಷಾರ್’ ಎಂದ. ನಾನವಳ ಅಂತಿಮ ಅಭಿಪ್ರಾಯ ಕೇಳಿದಾಗ ಅವಳು ಕೂಡ ’ನನ್ನನ್ನು ಕ್ಷಮ್ಸು, ಮರೆತುಬಿಡು’ ಅಂದ್ಲು. ಜೀವನ ನನ್ನನ್ನು ತೀವ್ರ ಘಾಸಿಗೊಳಿಸಿತ್ತು. ಪದವಿ ಪೂರ್ಣಗೊಳಿಸಲಾಗದೇ ಮಾನಸಿಕವಾದೆ. ಮನೆಯಿಂದ ಹೊರಗೇ ಹೋಗದೆ ಹಲವು ವರ್ಷ ರೋಗಿಯಂತೆ ಮನೆಯೊಳಗೆ ಖಿನ್ನತೆಯಿಂದ ಬಳಲಿದೆ. 

ಅಮ್ಮನ ಸ್ಫೂರ್ತಿ ಮಾತುಗಳು ಕೊನೆಗೂ ನನಗೆ ಧೈರ್ಯ ತುಂಬಿದವು. ಹೀಗಿದ್ರೆ ಆಗೋದಿಲ್ಲ, ನಾನು ಎಲ್ಲರೂ ಗಮನಿಸುವ ರೀತೀಲಿ ಜೀವನ ಮಾಡ್ಬೇಕು. ವಿಶಿಷ್ಟವಾಗಿರ್‍ಬೇಕು. ಮಕ್ಕಳಿಗೆ, ಜನರಿಗೆ ಖುಷಿ ಕೊಟ್ಟು ಬದುಕ್ಬೇಕು ಅಂತ ತೀರ್ಮಾನ ಮಾಡಿದೆ. ಬೈಸಿಕಲ್ ಹೊಡೆಯೋಕೆ ಬರ್‍ತಿರ್‍ಲಿಲ್ಲ. ಬೈಸಿಕಲ್ ಕಲಿತೆ. ಅರೆ-ಉದ್ಯೋಗಕ್ಕೆ ಸೇರಿದೆ. ಬೈಸಿಕಲ್‌ನಲ್ಲಿ ಎಲ್ಲ ಧರ್ಮದ ದೇವರುಗಳ ಚಿತ್ರವನ್ನೂ ಹಾಕೊಂಡಿದೀನಿ. ನಾನು ಕ್ರಿಶ್ಚಿಯನ್ ಆದ್ರೂ ಚರ್ಚ್‌ಗೆ ಅಮ್ಮನಿಗೋಸ್ಕರ ಮಾತ್ರವೇ ಹೋಗೋದು. ಆದ್ರೆ ಎಲ್ಲಾ ಧರ್ಮದ ದೇವರುಗಳನ್ನು ಮನೇಲೇ ಇಟ್ಕೊಂಡು ಪೂಜೆ ಮಾಡ್ತೀನಿ. ರಸ್ತೇಲಿ ಬೈಸಿಕಲ್ ಹ್ಯಾಂಡಲ್ ಕೈಬಿಟ್ಟು ಓಡಿಸೋದು, ಹನುಮನ ಗದೆ ಹಿಡಿಯೋದು, ಹೀಗೆ ರಸ್ತೇಲಿ ಮಕ್ಕಳ ಗಮನ ಸೆಳೆಯೋದಿಕ್ಕೆ ಶುರು ಮಾಡಿದೆ. ಮಕ್ಕಳಷ್ಟೇ ಅಲ್ಲ ಜನ ಕೂಡ ಖುಷಿಪಡೋರು. ನನಗೆ ನಿರಾಳ ಅನ್ನಿಸ್ತಿತ್ತು. ನನ್ ನೋವು ಕೂಡ ಶಮನ ಆದಂಗಾಯ್ತು. ಬಡವನಾಗಿದ್ರೂ ಜಗತ್ತಿಗೆ ವಾಪಸ್ ಏನಾದ್ರೂ ಕೊಡ್ತಿದೀನಿ ಅನ್ನಿಸೋಕೆ ಶುರು ಆಯ್ತು. ಈಗ ನನ್ನ ಮನೆಯಿಂದ ಕೆಲಸಕ್ಕೆ ಹೋಗೋ ಸ್ಥಳದವರೆಗೂ ಉದ್ದಕ್ಕೂ ಪರಿಚಿತ ಜನರಿದ್ದಾರೆ, ಮಕ್ಕಳು ನನ್ ಸುತ್ತ ಮುತ್ತಿಕೊಳ್ತವೆ. ಇಂಡಿಯನ್ ಎಕ್ಸ್‌ಪ್ರೆಸ್ ಪೇಪರ್ ನವ್ರು ಒಮ್ಮೆ ನನ್ನನ್ನು ರಸ್ತೇಲಿ ನೋಡಿ ಪೋಟೋ ಹೊಡೆದು ವರದಿ ಪ್ರಕಟಿಸಿದಾರೆ   ಎಂದು ಹೇಳಿದ. 

ಅವನಿಗೆ ಸಾಕಷ್ಟು ಹೊತ್ತಾಯಿತೇನೋ ಅನ್ನಿಸಿತು. ಮತ್ತೆ ಸಿಗೋಣ, ನಿಮ್ಮ ಸಮಯಕ್ಕೆ ತುಂಬಾ ಥ್ಯಾಂಕ್ಸ್ ಎಂದು ಹೇಳಿ ಹೊರಟೆ. 

ಕೆಲವು ದಿನಗಳ ನಂತರ ಸಂಶೋಧನಾ ಸಂಸ್ಥೆಯ ಆವರಣದೊಳಗೆ ಪರಿಚಿತರೊಬ್ಬರನ್ನು ಭೇಟಿಯಾಗಲು ಹೋಗಿದ್ದಾಗ, ಈ ವ್ಯಕ್ತಿ ಅದೇಕೋ ನೆನಪಾದ. ನನ್ನ ಪರಿಚಿತರನ್ನು ಈ ವಿಶಿಷ್ಟ ವ್ಯಕ್ತಿಯ ಕುರಿತು ಕೇಳಿದೆ. ಅಯ್ಯೋ, ಅವನಾ? ಪಾಪ ಏನೋ ಹೇಗೋ ಬದುಕ್ತಾಯಿತ್ತು, ಬಡಪಾಯಿ ಎಲ್ರಿಗೂ ಖುಷಿಪಡಿಸ್ತಾ. ಅದೇ ಡಿಪಾರ್ಟ್‌ಮೆಂಟ್‌ನ ಅಧೀಕ್ಷಕ ಅವನಿಗೆ ಮೊನ್ನೆ ಚೆನ್ನಾಗಿ ಹೊಡೆದುಬಿಟ್ನಂತೆ. ನೀನು ನಮ್ಮ ರಾಮ, ಕೃಷ್ಣ ದೇವರುಗಳ ಚಿತ್ರಗಳನ್ನು ಬೇರೆ ಧರ್ಮದ ಚಿತ್ರಗಳ ಜೊತೆ ಯಾಕೆ ಸೇರಿಸಿ, ಮೈಲಿಗೆ ಮಾಡ್ತೀಯಾ, ಆಂಜನೇಯ ಬಳಸ್ತಿದ್ದಂತ ಗದೆ ಹೊತ್ಕೊಂಡು ಆಂಜನೇಯನ್ಗೆ ಅವಮಾನ ಮಾಡ್ತೀಯಾ ಅಂತ ಹೊಡೆದು ಬಿಟ್ರು. ನಾವೆಲ್ಲಾ ಹೋಗಿ ಬಿಡ್ಸಿದ್ವಿ ಅಂದ್ರು! 

’ಅಂಥ ಮುಗ್ಧ ಜೀವಿಗೆ ಹೊಡೆದವನ ಮೇಲೆ ಏನೂ ಕ್ರಮ ತಗೋಳ್ಲಿಲಿಲ್ವೇ’ ಎಂದು ಕೇಳಿದೆ. 
’ಅಯ್ಯೋ, ಮತಾಂಧಟಿ ರೀತಿ ಹೊಡೆದವನೊಬ್ಬ ಮೂಢ, ಜೊತೆಗೆ ಪರ್ಮನೆಂಟ್ ನೌಕರ ಬೇರೆ. ಹೊಡೆಸಿಕೊಂಡವನು ಟೆಂಪರರಿ ನೌಕರ. ಕಂಪ್ಲೆಂಟ್ ಕೊಟ್ರೂ ಏನೂ ಮಾಡಲ್ಲ. ಇಲ್ಲಿ ಕೆಲವು ವೃತ್ತಿಪರ ವಿಜ್ಞಾನಿಗಳ ಮನಸ್ಸುಗಳು ಕೂಡ ಧಾರ್ಮಿಕವಾಗಿ ರೋಗಗ್ರಸ್ತವಾಗಿವೆ, ಏನ್ಮಾಡೋದು?’ ಅಂದ್ರು.

ನನ್ನ ಕೆಲಸ ಮುಗಿಸಿ ರಸ್ತೆಯಲ್ಲಿ ಬರುತ್ತಿದ್ದಾ ಆ ವಿಶಿಷ್ಟ ವ್ಯಕ್ತಿ  ಮತ್ತೆ ಕ್ಯಾಂಪಸ್‌ನಲ್ಲಿ ಗದೆ ತಿರುವುತ್ತಾ ಬೈಸಿಕಲ್ ಮೇಲೆ ಸರ್ಕಸ್ ತರಹದ ಭಂಗಿಗಳನ್ನು ತೋರಿಸುತ್ತಾ ಮಕ್ಕಳನ್ನು ಖುಷಿಪಡಿಸುತ್ತಿರುವುದು ಕಾಣಿಸಿತು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x