ನಮ್ಮ ಜಿಲ್ಲೆಯ ಗಜಲ್ ಕಾರರು… (ಭಾಗ ೧): ವೇಣು ಜಾಲಿಬೆಂಚಿ

ಗಜಲ್ ಬರೆಯುವ ವಿಷಯದಲ್ಲಿ ಬಹಳಷ್ಟು ಪಳಗಿದ ಕೈಗಳು ನಮ್ಮಲ್ಲಿ ಸಾಕಷ್ಟಿವೆ. . . . (ಇಲ್ಲಿ ಕೇವಲ ನಮ್ಮ ರಾಯಚೂರು ಜಿಲ್ಲೆಯನ್ನು ಸೀಮಿತವಾಗಿಟ್ಟುಕೊಂಡು ಹೇಳುವ ಪ್ರಯತ್ನ ಹಾಗೂ ಈ ಬರಹದ ಹಿಂದೆ ಯಾವ ಉದ್ದೇಶವೂ ಇಲ್ಲ. . . ಕೇವಲ ವಿಚಾರ ವಿನಿಮಯ ಮಾತ್ರ) ನಮ್ಮ ಭಾಗದ ಹೆಮ್ಮೆಯ ಗರಿಮೆ ದಿವಂಗತ ಶಾಂತರಸರನ್ನು ಈ ಗಜಲ್ ವಿಷಯದಲ್ಲಿ ಮೂಲ ಸಂಸ್ಥಾಪಕರಾಗಿ ನಾವು ಕಾಣುತ್ತೇವೆ. . ತರುವಾಯ ಶ್ರೀಮತಿ ಎಚ್. ಎಸ್ ಮುಕ್ತಾಯಕ್ಕ, ತರುವಾಯ ದಿವಂಗತ ಶ್ರೀ ಜಂಬಣ್ಣ ಅಮರಚಿಂತರು, ಹಿರಿಯರಾದ ಶ್ರೀ ವೀರಹನುಮಾನ ಅವರು, ಎರಡನೇ ಪೀಳಿಗೆಯಲ್ಲಿ ಸಾಕಷ್ಟು ಹೆಸರು ಮಾಡುತ್ತಿರುವ ಶ್ರೀ ಡಾ. ದಸ್ತಗೀರ ಸಾಬ್ ದಿನ್ನಿ ಅವರು, ಹಲವು ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನ ಗಿಟ್ಟಿಸಿ ಅನುವಾದಗಳಲ್ಲೂ ಸೈ ಅನಿಸಿಕೊಂಡಿರುವ ಶ್ರೀ ಚಿದಾನಂದ ಸಾಲಿ ಅವರು, ಪ್ರಜಾವಾಣಿಯ ಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆಯುವ ಮೂಲಕ ನಮ್ಮ ಜಿಲ್ಲೆಯತ್ತ ಬೆಂಗಳೂರಿನ ಜನ ತಿರುಗಿ ನೋಡುವಂತೆ ಮಾಡಿದ ಯುವ ಪ್ರತಿಭೆ ಆರೀಫ್ ರಾಜಾ ಅವರು, ಶ್ರೀ ರಮೇಶ ಅರೋಲಿ ಅವರು, ಇಷ್ಟಲ್ಲದೆ ಒಂದು ಸೈದ್ಧಾಂತಿಕ ಚೌಕಟ್ಟಿನಲ್ಲಿ ತಮ್ಮ ಬರವಣಿಗೆಗೆ ಬಧ್ಧರಾಗಿರುವ ಬಂಡಾಯದ ಕಿಡಿ ಕೋರೆನಲ್ ಅವರು, ಜನಕವಿ ಹಾಗೂ ಹೋರಾಟದ ಹಾಡುಗಳಿಂದ ಮತ್ತು ಬಂಡಾಯದ ಗಜಲ್ ಗಳಿಂದ ಹೆಸರಾದ ಶ್ರೀ ರಮೇಶ್ ಗಬ್ಬೂರ್ ಅವರು , ಭಾವಗೀತಾತ್ಮಕ ಗಜಲ್ ಗಳಿಗೆ ಹೆಸರಾದ ನಮ್ಮ‌ ಜಿಲ್ಲೆಯವರೇ ಆದ ಶ್ರೀ ಪ್ರಭಾವತಿ ದೇಸಾಯಿ ಮೇಡಂ ಅವರು , ಡಾ. ಶರೀಫ್ ಹಸಮಕಲ್ ಅವರು, ಡಾ. ಪ್ರಕಾಶ ಬುದ್ದಿನ್ನಿ ಅವರು, ಇತ್ತೀಚೆಗೆ ಬಹಳಷ್ಟು ಸದ್ದು ಮಾಡುತ್ತಿರುವ ಶ್ರೀ ಈರಣ್ಣ ಬೆಂಗಾಲಿ ಅವರು, ಶ್ರೀ ಶಿವಶಂಕರ ಕಡದಿನ್ನಿ ಅವರು ( ಇತ್ತೀಚೆಗೆ ಇವರ ಅನೇಕ ಗಜಲ್ ಗಳು ನಾಡಿನ ಹಲವು ಮಾಸ ಹಾಗೂ ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿ ಬರುತ್ತಿವೆ ಎಂಬುದು ಖುಷಿಯ ವಿಷಯ) ಇಷ್ಟು ಮಾತ್ರವಲ್ಲದೇ ಇತ್ತೀಚೆಗೆ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಇತ್ತೀಚೆಗೆ ” ಗೋರಿ ಮೇಲಿನ ಹೂ ” ಗಜಲ್ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಬಹುಮಾನಕ್ಕೆ ಭಾಜನರಾದ ಶ್ರೀ ಅಭಿಷೇಕ್ ಬಳೆ ಅವರು, ಪೋಲಿಸ್ ವೃತ್ತಿಯಲ್ಲಿದ್ದರೂ ತಣ್ಣನೆಯ ಕಾವ್ಯಪ್ರೀತಿ ಹಂಚುತ್ತಿರುವ ಶ್ರೀ ಮಹಾದೇವ ಪಾಟೀಲ ಅವರು ( ಇತ್ತೀಚೆಗೆ ಬಿಸಿಲು ಬಿದ್ದ ರಾತ್ರಿ ಎಂಬ ಒಂದು ಪ್ರಯೋಗಶೀಲ ಗಜಲ್ ಕೃತಿಯನ್ನು ಹೊರತಂದಿದ್ದಾರೆ) ಜೊತೆಗೆ ಸ್ವತಂತ್ರ ಕೃತಿ ತರದಿದ್ದರೂ ಹಲವು ಮೌಲಿಕ ಗಜಲ್ ಗಳನ್ನು ಬರೆದು ಹೆಸರಾಗಿರುವ ಶ್ರೀ ಉಮರ್ ದೇವರ ಮನಿ ಅವರು, ವಿಶೇಷವಾಗಿ ಮಹಿಳೆಯರು ಕೂಡ ನಮ್ಮ ಭಾಗದಲ್ಲಿ ತಮ್ಮ ಗಜಲ್ ಗಳ ಮೂಲಕ ಗಮನ ಸೆಳೆಯುತ್ತಿರುವ ಶ್ರೀಮತಿ ಅಂಬಮ್ಮ ಪ್ರತಾಪ್ ಸಿಂಗ್ ಮೇಡಂ , ಶ್ರೀ ಉಷಾಜ್ಯೋತಿ ಮೇಡಂ ಅವರು ಇಲ್ಲಿ ಉಲ್ಲೇಖನೀಯ.

ಇದುವರೆಗೂ ಸ್ವತಂತ್ರ ಗಜಲ್ ಕೃತಿ ತಂದಿರದಿದ್ದರೂ ನಿಗಿ ನಿಗಿ ಕೆಂಡದುಂಡೆಯೇ ನನ್ನ ಗಜಲ್ ಎಂಬ ಖ್ಯಾತಿಗೆ ಪಾತ್ರರಾದ ಶ್ರೀ ಮಲ್ಲೇಶ ಭೈರವ ರಾಂಪೂರ ಅವರು ಇಷ್ಟು ಮಾತ್ರವಲ್ಲ ಇತ್ತೀಚೆಗೆ ಗಜಲ್ ಬರೆಯುತ್ತ ತಮ್ಮದೇ ಆದ ವಿಶಿಷ್ಟ ಹಾದಿಯಲ್ಲಿ ಪಯಣ ನಡೆಸಿರುವ ನಮ್ಮ ಭಾಗದ ಹಿರಿಯ ಸಾಹಿತಿಗಳೂ , ಸಹೃದಯ ವಿಮರ್ಶಕರೂ ಆದ ಶ್ರೀ ಮಂಡಲಗಿರಿ ಪ್ರಸನ್ನ ಅವರು. . . ಯುವ ಬರಹಗಾರರಾದ ಶ್ರೀ ಡಾ. ತಿಮ್ಮಯ್ಯ ಶೆಟ್ಟಿ ಇಲ್ಲೂರು , ಶ್ರೀ ಅಮರೇಶ ಎಂ. ಕೆ. , ವೇಣು ಜಾಲಿಬೆಂಚಿ ( ಪ್ರಸ್ತುತ ಲೇಖಕ ) ಹೀಗೆ ಹೆಸರುಗಳನ್ನು ಪಟ್ಟಿ ಮಾಡುತ್ತ ಹೋದರೆ ಅದಕ್ಕೆ ಅಂತ್ಯವೇ ಇಲ್ಲವೇನೋ?

ಬಹುಶಃ ಇದನ್ನು ನೋಡಿದರೆ ಈ ನಮ್ಮ ಮಣ್ಣಿನ ಗುಣ ವಿಶೇಷವೇ ಹಾಗಿದೆಯೇನೋ ಅನಿಸುತ್ತದೆ. ಮುಖ್ಯವಾಗಿ ಗಜಲ್ ಪ್ರಕಾರ ಅಂದಕೂಡಲೆ ಪ್ರೀತಿ, ವಿರಹ, ಮೋಹ, ವೈರಾಗ್ಯ ಈ ರೀತಿಯ ವಸ್ತು ವಿಶೇಷಗಳೇ ತುಂಬಿಕೊಂಡಿರುವ ಪ್ರಕಾರ ಎಂದು ಪ್ರತಿಯೊಬ್ಬರ ತಿಳುವಳಿಕೆ. ಆದರೆ ಬದಲಾದ ಕಾಲಮಾನಕ್ಕೆ ಎಲ್ಲವೂ ಬದಲಾಗಲೇ ಬೇಕು. . ಅದು ಮನುಷ್ಯನ ವಿಷಯದಲ್ಲಾದರೂ ಸರಿ ಕಲೆ ಸಾಹಿತ್ಯದ ವಿಷಯದಲ್ಲಾದರೂ ಸರಿ. ಹಾಗಾಗಿ ಇತ್ತೀಚೆಗೆ ಬರುತ್ತಿರುವ ಗಜಲ್ ಗಳನ್ನು ಗಮನಿಸಿದಾಗ ಏನಿದೆ ಅನ್ನೋದಕ್ಕಿಂತ ಏನಿಲ್ಲ. . ಇದಕ್ಕೂ ಮಿಗಿಲು ಹೇಳಲಿಕ್ಕೆ ಇನ್ನೂ ಇದೆಯಾ? ಎಂದು ಪ್ರಶ್ನೆ ಮಾಡುವಷ್ಟು ವೈವಿಧ್ಯಮಯವಾದ ಗಜಲ್ ಗಳು ನಮಗಿಂದು ಓದಲು ಸಿಗುತ್ತಿವೆ. . . ಬಣ್ಣ ವಾಸನೆಯಿಂದ ಹಿಡಿದು ಕಾಮ ಪ್ರೇಮದ ವರೆಗೆ ಹಸಿದು ಕುಳಿತವನ ಹೊಟ್ಟೆಗೆ ಮೊಗೆ ಮೊಗೆದು ಕೊಡುವ ಮಧು ಬಟ್ಟಲುಗಳು ಒಂದೊಂದು ಗಜಲ್… ಅವನ್ನು ಓದಿಯೇ ಸವಿಯಬೇಕು…

ಮೊದಲು ನಮ್ಮ ಜಿಲ್ಲೆಯ ಗಜಲ್ ಪಿತಾಮಹ ಶ್ರೀ ಶಾಂತರಸರ ಒಂದು ಗಜಲ್ ತುಣುಕನ್ನು ನೋಡೋಣ

” ಒಮ್ಮೆಯೂ ಸಾಕಿ ತುಂಬಿಕೊಡಲಿಲ್ಲ ಮದಿರೆ ಬಟ್ಟಲವನು
ಜೀವನದ ಯಾತನೆಯ ಮರ್ಮವನು ಅರಿಯುವುದ ಬಹಳವಿತ್ತು “

ಈ ಜೀವನ ನೀರ ಮೇಲಿನ ಗುಳ್ಳೆ. ಅರಿತೂ ನಾವು ಆಸೆಯ ಬೆಂಕಿಗೆ ಬಿದ್ದು ಯಾತನೆ ಅನುಭವಿಸುವುದು ಯಾತಕ್ಕಾಗಿ? ಇದರ ಹಿಂದಿನ ಮರ್ಮವಾದರೂ ಏನು? ಎಂಬ ಕುತೂಹಲದ ಪ್ರಶ್ನೆ ಮುಂದಿಟ್ಟು ನಮ್ಮನ್ನು ಆಧ್ಯಾತ್ಮದ ಜಿಜ್ಞಾಸೆಗೆ ತೊಡಗಿಸುತ್ತಾರೆ ಶಾಂತರಸರು.

ಆದರೆ ತೀರಾ ಅರಿಯುವುದರ ಒಳಗೆ ನಾವೇ ಈ ಜೀವನದಿಂದ ದೂರ ಹೋಗಿರುತ್ತೇವೆ. . . ನಮ್ಮೆಲ್ಲ ಸಂಕಲ್ಪಗಳನ್ನು ಅರ್ಧಕ್ಕೇ ಬಿಟ್ಟು… ಹಾಗಾಗಿ ಅರ್ಥಪೂರ್ಣವಾಗಿ ಬದುಕುವುದು ನಮ್ಮಿಂದ ಸಾಧ್ಯವಾಗುವಂಥದ್ದಲ್ಲವೇ? ಎಂಬ ತಾತ್ವಿಕ ಜಿಜ್ಞಾಸೆಯ ಪಡಿಯಚ್ಚು ಈ ಗಜಲ್… ಇಂತಹ ಅದೆಷ್ಟೋ ಮೌಲಿಕ ಗಜಲ್ ಗಳನ್ನು ಶಾಂತರಸರು ಈ ಸಾರಸ್ವತ ಲೋಕಕ್ಕೆ ಅರ್ಪಿಸಿರುವುದು ಹೆಮ್ಮೆಯ ವಿಷಯ…

ಶ್ರೀ ಜಂಬಣ್ಣ ಅಮರಚಿಂತರು ತಣ್ಣನೆಯ ಬಂಡಾಯಕ್ಕೆ ಮತ್ತೊಂದು ಹೆಸರು…. ಅವರ ಬರವಣಿಗೆಯ ವಿಶೇಷ ಎಂದರೆ ಮೃದಯವಾಗಿಯೇ ಎದೆಯನ್ನು ಕಲಕಿಬಿಡುವುದು. . . ಕಣ್ಣೀರು ನೆನಪಿಸುತ್ತಲೇ ಕಣ್ಣು ಕಿತ್ತವರ ಮೇಲೆ ಆಕ್ರೋಶ ವ್ಯಕ್ತಪಡಿಸುವುದು…

” ಹಿಂದೆ ಸರಿದರೆ ಬೆಂಕಿ, ಮುಂದುವರೆದರೆ ಕಂದರ
ಬಾಳಲು ಬಾರದ ದುರ್ಗಮ ನಿವಾಸ ಬಿಟ್ಟುಹೋದರು “

ಹಿಂದೆ ಸರಿಯೋಣವೆಂದರೆ ಬೆಂಕಿ ಹೋಗಲಿ ಮುಂದಕ್ಕಾದರೂ ಜರುಗೋಣ ಎಂದರೆ ಕಂದರ ಎಂತಹ ವಿಪರ್ಯಾಸ!? ಅದೂ ಹೋಗಲಿ ಹೇಗಾದರೂ ಮಾಡಿ ದಿನ ದೂಡೋಣ ಎಂದರೆ ” ಬಾಳಲು ಬಾರದ ದುರ್ಗಮ ನಿವಾಸ ” ಬಿಟ್ಟು ಹೋದರು…. ಇದು ಇವೊತ್ತಿನ ವ್ಯವಸ್ಥೆಯ ಕಟು ವಾಸ್ತವ. ಇಂತಹ ಮನೋಜ್ಞ ಸಾಲುಗಳು ನಮಗೆ ಇವರ ಕಾವ್ಯದಲ್ಲಿ ನೋಡಲು ಸಿಗುತ್ತವೆ….

ನಮ್ಮ ಭಾಗದ ಮತ್ತೋರ್ವ ಗಟ್ಟಿ ಗಜಲ್ ಕಾರರು ಎಂದರೆ ಶ್ರೀಮತಿ ಎಚ್. ಎಸ್. ಮುಕ್ತಾಯಕ್ಕ. . . ಶ್ರೀ ಶಾಂತರಸ ಮಗಳು… ತಂದೆಯ ಹಾಗೆ ಮಗಳು ಕೂಡ ಅತ್ಯುತ್ತಮ ಗಜಲ್ ಗಳನ್ನು ಬರೆದು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿದ್ದಾರೆ. .

” ಶೂನ್ಯ ಕವಿದ ಹೃದಯದಲಿ ವಿರಹದೀಪ ಉರಿಯಲಿ ಬಿಡು
ಸಂತೈಸಲಾಗದ ಉನ್ಮತ್ತ ರಾತ್ರಿಗಳು ಬಟ್ಟಲು ತುಂಬು ಸಾಕಿ “

ನೋಡಿ ಅದೆಂತಹ ಉನ್ನತ ವೈರಾಗ್ಯ ಭಾವನೆ ಒಡಮೂಡಿದೆ ಇಲ್ಲಿ. . ಪ್ರೀತಿಗೆ ಎರವಾದ ಹೃದಯದಲ್ಲಿ ಕತ್ತಲು ಬಿಟ್ಟರೆ ( ಶೂನ್ಯ) ಇನ್ನೇನು ತಾನೆ ಇದ್ದೀತು. ಅದಕ್ಕೆ ವಿರಹದ ದೀಪವಾದರೂ ಉರಿಯಲಿ ಅದೇ ಮದ್ದು . . ಶೂನ್ಯ ಕವಿದ ಹೃದಯಕ್ಕೆ …. ಉನ್ಮತ್ತ ರಾತ್ರಿಗಳು ಕೂಡ ಕವಿಯ ವಿರಹವನ್ನು ಶಮನ ಮಾಡಲಾರವು ಎಂದು ಅತ್ಯಂತ ಮನೋಜ್ಞ ಸಾಲುಗಳಲ್ಲಿ ಹೇಳಿರುವುದು ಅವರಿಗೆ ಅವರೇ ಸಾಟಿ. . .

ಅದರಂತೆಯೇ ನಮ್ಮ ಭಾಗದವರೇ ಆದ ಸರಳ ಸಜ್ಜನಿಕೆಯ ಶ್ರೀ ಪ್ರಭಾವತಿ ದೇಸಾಯಿ ಮೇಡಂ ಅವರು ಕೂಡ ಗಜಲ್ ಬರವಣಿಗೆಯಲ್ಲಿ ಉತ್ತಮ ಕೃಷಿ ಮಾಡಿದವರು. ಮೂರು ಸ್ವತಂತ್ರ ಗಜಲ್ ಕೃತಿಗಳನ್ನು ಸಾರಸ್ವತ ಪ್ರಪಂಚಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಇನ್ನೂ ಕೂಡ ಗಜಲ್ ಬರೆಯುತ್ತಲೇ ಎಲ್ಲರ ಪ್ರೀತಿಪಾತ್ರರಾದ ಮೇಡಂ ಅವರ ಒಂದು ಗಜಲ್ ಸಾಲು ಹೀಗಿದೆ

” ನಡೆ ನುಡಿ ಒಂದಾದರೂ ನಮ್ಮ ಬದುಕಲಿ ಮನವು ಕೂಡಲಿಲ್ಲ
ನನ್ನ ನಿನ್ನ ನೋಟ ಒಂದಾದರೂ ನಮ್ಮ ತನವು ಕೂಡಲಿಲ್ಲ “

ನಡೆ ಮತ್ತು ನುಡಿ ಎರಡೂ ಒಂದಕ್ಕೊಂದು ವಿರುಧ್ಧ ಧ್ರುವಗಳಾಗಿ ಬದುಕುತ್ತಿರುವವರನ್ನು ನಾವು ದಿನನಿತ್ಯ ನೋಡುತ್ತಿರುತ್ತೇವೆ. ಎರಡರ ನಡುವೆ ಭೇದ ಅಭೇದ ಎರಡನ್ನೂ ಸೃಷ್ಟಿಸುವ ಮನಸು ಮಾತ್ರ ಒಂದಾಗದಿದ್ದರೆ ಅಂದರೆ ಮನಸು ಮನಸುಗಳು ಬೆರೆಯದಿದ್ದರೆ ಕೇವಲ ನಮ್ಮ ನಡೆ ನುಡಿ ಮಾತ್ರವಲ್ಲ ನಮ್ಮ ತನವು ಕೂಡ ಯಾವತ್ತೂ ಬೆರೆಯಲಿಕ್ಕೆ ಸಾಧ್ಯವಿಲ್ಲ ಎಂದು ಕವಿ ಸರಿಯಾಗಿಯೇ ಗುರುತಿಸಿದ್ದಾರೆ. ವ್ಯಕ್ತಿಯ ಮೂಲ ಸ್ವಭಾವಗಳನ್ನು ವಿವೇಚನೆಗೊಡ್ಡುವ ಉತ್ತಮ ಗಜಲ್.

ನಮ್ಮ ಭಾಗದ ಹಿರಿಯ ಸಾಹಿತಿ ಸರಳಜೀವಿ ಶ್ರೀ ವೀರಹನುಮಾನ ಅವರು ಕೂಡ ಗಜಲ್ ಗಳನ್ನು ಬರೆದು ಸಾಹಿತ್ಯಾಸಕ್ತರ ಗಮನ ಸೆಳೆದವರು. . . ಮೇಲಾಗಿ ಹೈಕು ವಿಷಯದಲ್ಲಿ ಅವರು ನಮ್ಮ ಈ ಭಾಗದಲ್ಲಿ ಸಾಕಷ್ಟು ಕೃಷಿಯನ್ನು ಮಾಡಿರುವುದು ನೋಡಿದರೆ ನಮ್ಮ ಜಿಲ್ಲೆಯ ಸಾಂಸ್ಕೃತಿಕ ಘನತೆ ಮತ್ತಷ್ಟು ಶ್ರೀಮಂತಗೊಳಿಸಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಇತ್ತೀಚೆಗೆ ತಾನೆ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಅನುವಾದ ಕೃತಿ ಧಮ್ಮಪದಕ್ಕಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಇಡೀ ನಮ್ಮ ಜಿಲ್ಲೆಯ ಗೌರವವನ್ನು ಇನ್ನೊಂದಿಷ್ಟು ಹೆಚ್ಚಿಸಿದೆ ಎಂದು ಹೆಮ್ಮೆಯಿಂದ ಹೇಳಬಹುದು.

ಅವರ ಒಂದು ಗಜಲ್ ನ ಸಾಲು ಹೀಗಿದೆ

” ಅನುದಿನವು ಬೆಳಕು ನೀಡಲು ನಿತ್ಯ ಉರಿದವರು
ಒಡಲ ತುಂಬ ಕೆಂಡವ ಧರಿಸಿ, ಜಗಕೆ ಬಲಿಯಾದವರು ನಾವು “

ದೀನ ದಲಿತರು ಈ ದೇಶದ ಮುಕ್ಕಾಲು ಭಾಗ ತುಂಬಿದ್ದರೂ , ದೇಶಕ್ಕೆ ಅನ್ನ ನೀಡುವ ಶ್ರಮಿಕ ವರ್ಗವೂ ಅವರಾಗಿದ್ದರೂ ನಿತ್ಯ ಅವರು ತಮ್ಮನ್ನು ತೇಯ್ದುಕೊಂಡು ಮೇಲ್ವರ್ಗದ ಜನರ ಮನೆಗೆ ಬೆಳಕಾಗಿದ್ದಾರೆ, ಒಡಲ ತುಂಬ ಭಯಂಕರ ಹಸಿವು ಇಟ್ಟುಕೊಂಡು ನಿರ್ಲಕ್ಷ್ಯದ ಕಣ್ಣಿಗೆ ಬಲಿಯಾದವರು ಎಂದು ಯಾವತ್ತಿನಿಂದಲೂ ಇರುವ ಈ ಸಾಮಾಜಿಕ ಅವ್ಯವಸ್ಥೆಯನ್ನು ಕಟುವಾಗಿ ಟೀಕಿಸುತ್ತಾರೆ. ‌. ಸದ್ಯದ ಗಜಲ್ ಬಂಡಾಯದ ಪ್ರತಿರೂಪ.

ಈಗಿನ ಯುವ ಬರಹಗಾರರ ಖಾತೆಯಲ್ಲಿ ಥಟ್ಟನೆ ನೆನಪಾಗುವ ಹೆಸರು… ಡಾ. ದಸ್ತಗೀರ ಸಾಬ್ ದಿನ್ನಿಯವರದು. . . ಅವರು ಅನೇಕ ಯುವಮಿತ್ರರಿಗೆ ಮೆಚ್ಚಿನ ಗುರುಗಳಾಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. . . ಯಾವುದೇ ಹೊಸ ಬರಹಗಾರ ಬಂದು ಸಲಹೆ ಕೇಳಿದರೂ ಅವರು ನಗು ನಗುತ್ತಲೇ ತಮ್ಮ ಜ್ಞಾನವನ್ನು ಹಂಚಿಕೊಳ್ಳುತ್ತಾರೆ. . . ಅವರು ಇಲ್ಲಿಯವರೆಗೂ ಸಾಕಷ್ಟು ಗಜಲ್ ಗಳನ್ನು ಬರೆದಿದ್ದಾರೆ. . ಅಲ್ಲದೆ ಅವರ ಗಜಲ್ ಗಳು ಖ್ಯಾತ ಪತ್ರಿಕೆಗಳಾದ ಮಯೂರ, ತುಷಾರ, ಹೊಸತು, ಪ್ರಜಾವಾಣಿ ಇನ್ನೂ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ನಮ್ಮ ಭಾಗದ ಒಳ್ಳೆಯ ಬರಹಗಾರರ ಸಾಲಿನಲ್ಲಿ ಅವರೂ ಒಬ್ಬರು…ಅವರ ಗಜಲ್ ಗಳು ಹೆಚ್ಚಾಗಿ ಪ್ರೀತಿ , ವಿರಹ, ಏಕಾಂತ, ಹಸಿ ಹಸಿ ಭಾವನೆಗಳ ತಾಕಲಾಟ ಈ ರೀತಿಯ ವಸ್ತುಗಳನ್ನು ಇಟ್ಟುಕೊಂಡೇ ಬಂದಿವೆ. . . ಇನ್ನು ಕೆಲವು ಕೋಮು ಸಾಮರಸ್ಯ, ಸಾಮಾಜಿಕ ಅಸಮಾನತೆ ಬಗೆಗೆ ಬರೆದ ಗಜಲ್ ಗಳೂ ಇವೆ

ಅವರ ಒಂದು ಗಜಲ್ ಹೀಗಿದೆ…

” ಸಂಜೆಯಾದರೆ ಸಾಕು ಅವಳ ನೆನಪಾಗುವುದು
ನೋವ ಮರೆಯಲೆಂದೇ ಇಲ್ಲಿಗೆ ಬಂದುದನು ಹೇಗೆ ಹೇಳಲಿ ಸಾಕಿ “

ಸಂಜೆಯಾದರೆ ಏಕಾಂತಕ್ಕೆ ಜಾರುವ ಲೋಕ. ಆಪ್ತ ಜೀವದ ಸಾಂಗತ್ಯ ಬಯಸುವ ಪ್ರಿಯಕರನಿಗೆ ಅವಳು ತನ್ನ ಬಳಿ ಇಲ್ಲದಿರುವುದು ಗಾಯ ಕೊಡುವಷ್ಟೇ ನೋವಿನ ಸಂಗತಿ ಅದನ್ನು ಮರೆಯಲೆಂದೇ ಮಧುಶಾಲೆಗೆ ಬಂದಿರುವೆ ಅದನ್ನು ಮತ್ತೆ ಮತ್ತೆ ಕೇಳಿ ಘಾಸಿಗೊಳಿಸಬೇಡ, ಕೇಳಿದರೆ ಹೇಳುವ ಮಾತಲ್ಲ ಈ ವೇದನೆ ನಿನಗೆ ತಿಳಿದೇ ಇದೆಯಲ್ಲ ಸಾಕಿ ಎಂದು ಬಹಳ ಆಪ್ತವಾಗಿ ಎದೆಗೆ ತಾಕುವಂತೆ ಬರೆಯುತ್ತಾರೆ. ಅವರ ಬಹಳಷ್ಟು ಗಜಲ್ ಗಳು ಕೋಮಲ ಹೂಗಳ ಪರಿಮಳ ಹೊಂದಿ ತಾಜಾ ಅನುಭವವನ್ನು ನೀಡುತ್ತವೆ. . . ಓದುಗ ಹೃದಯಗಳಿಗೆ ತಂಪೆರೆವ ತಾಣ…

ಶ್ರೀ ಚಿದಾನಂದ ಸಾಲಿ ನಮ್ಮ ಭಾಗದ ಮತ್ತೋರ್ವ ಪ್ರತಿಭಾನ್ವಿತ ಯುವ ಬರಹಗಾರರು. ಹಲವು ಕಥೆ ಕವನಗಳನ್ನು ಬರೆದು ಅನುವಾದದಲ್ಲೂ ಸೈ ಎನಿಸಿಕೊಂಡವರು. ಹಲವು ರಾಜ್ಯ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನವನ್ನೂ ಪಡೆದವರು. ಗಜಲ್ ವಿಷಯದಲ್ಲಂತೂ ಅವರು ನಿತ್ಯ ಪ್ರಯೋಗಶೀಲರು. ಹೆಚ್ಚಾಗಿ ಇವರ ಗಜಲ್ ಗಳು ಪ್ರಧಾನವಾಗಿ ವ್ಯಂಗ್ಯ ವಿಡಂಬನೆಯಿಂದ ಕೂಡಿದ್ದು ಧ್ವನಿಪೂರ್ಣವಾಗಿರುತ್ತವೆ.

ಅವರು ಹೀಗೆ ಬರೆಯುತ್ತಾರೆ

” ಆ ಊರ ಜನ ಬೇಡ ಎಂದು ಸುತ್ತ ಗೋಡೆಯ ಕಟ್ಟಿಸಿದೆ
ನಮ್ಮೂರೊಳಗೇ ಇರುವ ಹೊಲಸು ಈಗ ಮೂಗಿಗೆ ತಟ್ಟುತಿದೆ “

ಇದ್ದ ವಾಸ್ತವವನ್ನು ಗುರುತಿಸದ ಮನಸ್ಥಿತಿ ಅದನ್ನು ಒಪ್ಪಿಕೊಳ್ಳದ ಮನಸ್ಸು ಎರಡೂ ಒಂದೇ ಎಂದು ವ್ಯಂಗ್ಯದಿಂದ ನೋಡಿ ಬರೆದ ಸಾಲಿದು. ಒಂದರ್ಥದಲ್ಲಿ ಅದೇ ನಿಜವಾದ ದಾರಿದ್ರ್ಯ ಎಂದೂ ಕವಿ ಸಮಾಜಕ್ಕೆ ಎಚ್ಚರಿಸುತ್ತಾರೆ.

” ನನಗೆ ನಾನೇ ಅಪರಿಚಿತನಾಗಿರುವೆ ಕನ್ನಡಿ ಮುಖಕೆ ಉಗಿಯುತಿದೆ
ಪ್ರೀತಿ ನಂಬಿಕೆಗಳಿಲ್ಲದ ಮೇಲೆ ಸಾಲಿಯು ಬದುಕಿಯೂ ಸತ್ತಂತೆ “

ತನ್ನತನ ( ಸ್ವಂತಿಕೆ ) ಮತ್ತು ಪ್ರೀತಿ ನಂಬಿಕೆ ಬದುಕಿಗೆ ಭದ್ರ ಬುನಾದಿಯಾಗದೆ ತೋರಿಕೆಯ ವಸ್ತುಗಳಾಗಿ ಹೋದರೆ ನಮ್ಮ ನೆರಳೇ ನಮ್ಮನ್ನು ಹಂಗಿಸುತ್ತದೆ. . ಕನ್ನಡಿಯ ಬಿಂಬವೂ ನಮ್ಮ ಮುಖಕ್ಕೆ ಅಸಹ್ಯಪಟ್ಟುಕೊಳ್ಳುತ್ತದೆ. ಜೀವವಿದ್ದೂ ನಾವು ಶವಗಳಂತಾಗುತ್ತೇವೆ. . . ನಮ್ಮ ಬದುಕಿಗೆ ಅರ್ಥವೇ ಉಳಿಯುವುದಿಲ್ಲ ಎಂದು ಬದುಕಿನ ವ್ಯಾಖ್ಯಾನವನ್ನು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ. . . ಇಲ್ಲಿರುವ ಬದುಕಿನ ಪರ ನಿಲುವು ಶ್ಲಾಘನೀಯ…

ಈ ಭಾಗದ ಇನ್ನೋರ್ವ ಮಹತ್ತರ ಗಜಲ್ ಬರಹಗಾರರು , ಹೋರಾಟದ ಹಾಡುಗಳ ಮೂಲಕ ಜನಪ್ರೀತಿ ಗಳಿಸಿದ ಶ್ರೀ ರಮೇಶ ಗಬ್ಬೂರು ಅವರು ಬಂಡಾಯ ಮತ್ತು ಹಾಡುಗಾರಿಕೆ ಎರಡರ ಕಸಿಯಲ್ಲಿ ಗಜಲ್ ಬರೆಯುತ್ತಿದ್ದು ವಿಶೇಷವಾಗಿ ಗಮನ ಸೆಳೆಯುತ್ತವೆ. ಇತ್ತೀಚೆಗೆ ಅವರ ಗಜಲ್ ಕೃತಿ ಗರೀಬ್ ಗಜಲ್ ಕೃತಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿ ದೊರಕಿದ್ದು ಈ ನಮ್ಮ ಭಾಗದ ಸಾಹಿತ್ಯ ವಲಯಕ್ಕೆ ಅತ್ಯಂತ ಸಂತಸ ತಂದಿದೆ.

ಅವರ ಗಜಲ್ ನ ಒಂದು ಸಾಲು…

” ಕೂಡು ರಸ್ತೆಯಲಿ ನಿಲಿಸಿದ ಪ್ರತಿಮೆಯಂತೆ ನಾನೇನು ಹೇಳಲೆಂದಿತು
ರಕ್ತದಲ್ಲದ್ದಿದ ಗುಲಾಬಿಯನು ಸಮಾಧಿಯ ಮೇಲಿಟ್ಟದಿನ ಒಂದು ಹಾಡು “

ಮಾನವೀಯತೆಗೆ ತುಡಿವ ಜೀವಗಳನು ಬಲಿ ತೆಗೆದುಕೊಳ್ಳುವ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಕವಿ ರಸ್ತೆಗೊಂದರಂತೆ , ಗಲ್ಲಿಗೊಂದರಂತೆ ನಿಲ್ಲಿಸಿದ ನಿರ್ಜೀವ ಪ್ರತಿಮೆಗಳಂತೆಯೇ ಇಂದಿನ ಅಮಾಯಕ ಜನರ ಪರಿಸ್ಥಿತಿಯಾಗಿದೆ ಎಂದು ಉತ್ತಮ ಪ್ರತೀಕಗಳ ಮೂಲಕ ಹೇಳಿರುವುದು ಅತ್ಯಂತ ಪರಿಣಾಮಕಾರಿ ಸಾಲುಗಳಲ್ಲಿ ಹೊಮ್ಮಿರುವುದು ಅಭಿನಂದನಾರ್ಹವಾಗಿದೆ.

ಈ ನಮ್ಮ ಭಾಗದ ಯುವ ಪ್ರತಿಭೆ ಅನೇಕ ಕಾವ್ಯ ಪುರಸ್ಕಾರಗಳನ್ನು ಪಡೆದು ಚಿಕ್ಕ ವಯಸ್ಸಿನಲ್ಲೇ ಎತ್ತರದ ಖ್ಯಾತಿಗೆ ಪಾತ್ರರಾದ ಶ್ರೀ ಆರಿಫ್ ರಾಜಾ ಅವರ ಗಜಲ್ ಗಳ ಬಗ್ಗೆ ಮಾತನಾಡುತ್ತ ಹೋದರೆ ಒಂದು ಹೊಸ ಲೋಕದ ಜೊತೆ ಆಪ್ತ ಸಂವಾದ ನಡೆಸಿದಂತ ಅನುಭವವಾಗುತ್ತದೆ. ಅವರು ಕಾವ್ಯವನ್ನು ಇನ್ನಿಲ್ಲದ ರೀತಿಯಲ್ಲಿ ಧ್ಯಾನಸ್ಥ ಸ್ಥಿತಿಗೆ ಒಯ್ದು ಬರೆಯುವುದರಿಂದ ಅತ್ಯಂತ ಸಶಕ್ತ ಸಾಲುಗಳನ್ನು ನಮ್ಮ ಮುಂದಿಡುತ್ತಾರೆ. ಅದು ಏಕಕಾಲಕ್ಕೆ ಬೆಟ್ಟವೂ ಆಗಿರುತ್ತದೆ, ಹರಿಯುವ ನದಿ ಸಮುದ್ರವೂ ಆಗಿರುತ್ತದೆ… ಭಾವನೆಗಳ ಚೆಲ್ಲಾಟವೂ ಆಗಿರುತ್ತದೆ. . ಇದೆಲ್ಲ ಆಗಿಯೂ ಅವರ ಕಾವ್ಯ ಸಾವಿರದೊಂದು ಒಗಟಾಗಿರುತ್ತದೆ…

ಅವರ ಒಂದು ಗಜಲ್ ಸಾಲು…

” ದೇವರ ಬದಲು ಭಕ್ತರು ಮಾತನಾಡಿದಾಗ ಈ ಶಹರಕೆ ಬೆಂಕಿ ಬಿತ್ತು
ಕವಿತೆಯ ಬದಲು ನೆತ್ತರು ಮಾತನಾಡಿದಾಗ ಈ ಶಹರಕೆ ಬೆಂಕಿ ಬಿತ್ತು “

ನೋಡಿ ದೇವರು ಅನ್ನುವುದು ಒಂದು ನಂಬಿಕೆ. ಭಕ್ತರು ಆ ನಂಬಿಕೆಗೆ ಪೂರಕವಾಗಿ ನಡೆಯುವವರು. ಆದರೆ ಕಾಣದ ದೇವರ ವಿಚಾರದಲ್ಲಿ ಭಕ್ತರು ಹಗಲೇ ದರೋಡೆಗೊಳಗಾಗುವುದು ಅದು ಅವರ ಮುಗ್ಧತೆ ಅನಿಸಿಕೊಂಡರೂ ಮೌಢ್ಯತೆಯ ಪರಮಾವಧಿ. . . ಇಲ್ಲದ ದೇವರ ವಿಚಾರದಲ್ಲಿ ಭಕ್ತರೇ ಹರಕೆಯ ಕುರಿಯಾಗುವುದು ಸಾಮಾಜಿಕ ವಿಪರ್ಯಾಸ ಇದನ್ನು ಕವಿ ತೀವ್ರವಾಗಿ ಖಂಡಿಸಿದ್ದು ಕವಿಯ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುತ್ತದೆ. ಮುಂದಿನ ಸಾಲಿನಲ್ಲೂ ಹಾಗೆಯೇ ಕವಿತೆ ಎಂದರೆ ಒಂದು ನೈತಿಕ ಅಭಿವ್ಯಕ್ತಿ , ಸಮಾಜದ ಅಂತರಗಳ ವಿರುಧ್ಧ, ನೊಂದ ದನಿಗಳ ಪರವಾಗಿ ಮಾತನಾಡುವ ಕವಿತೆಯನ್ನು ನೆತ್ತರಿನಿಂದ ಹತ್ತಿಕ್ಕಲು ನೋಡಿದರೆ ಸಾಮಾಜಿಕ ಆಶಯಗಳಿಗೆ ಇನ್ನೆಲ್ಲಿಯ ಬೆಲೆ? ಮಾನವೀಯತೆ ಉಳಿಯಬಲ್ಲುದೆ? ಇಂತಹ ಪ್ರಶ್ನೆಗಳನ್ನು ಹುಟ್ಟು ಹಾಕುವ ಉತ್ತಮ ಗಜಲ್.

ನಮ್ಮ ಭಾಗದ ಮತ್ತೋರ್ವ ಯುವ ಪ್ರತಿಭೆ ಹಲವು ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನ ಗಿಟ್ಟಿಸಿಕೊಂಡು ನಮ್ಮ ಜಿಲ್ಲೆಗೆ ಹೆಸರು ತಂದವರಲ್ಲಿ ಒಬ್ಬರು ಶ್ರೀ ರಮೇಶ್ ಅರೋಲಿ ಅವರು. ಅವರು ಎಷ್ಟು ಗಜಲ್ ಗಳನ್ನು ಬರೆದಿದ್ದಾರೆ ಎಂದು ಮಾಹಿತಿ ನನಗೆ ಇಲ್ಲ. . ಆದರೂ ಅವರ ಹಲವಾರು ಕವಿತೆಗಳನ್ನು ಓದಿ ಪ್ರಭಾವಿತನಾಗಿದ್ದೇನೆ…

ಅವರ ಗಜಲ್ ನ ಸಾಲು ಹೀಗಿದೆ…

” ನಿನ್ನ ಗೈರಿನಲ್ಲಿ ನಾನು ನಿಶ್ಚಲ ಬರಿ ತೊಟ್ಟಿಲು
ಉಟ್ಟುಡುಗೊಯ ತುಂಬ ಚಿತ್ತಾರದ ಮಧು ಬಟ್ಟಲು “

ಆಹಾ…. ಚಿದಾನಂದ ಸಾಲಿಯವರು , ದಸ್ತಗೀರ್ ಸಾಬ್ ದಿನ್ನಿಯವರು ಪ್ರಿಯಕರನ ಬಳಿ ಪ್ರೇಯಸಿ ಇರದಿದ್ದರೆ ಹೇಗೆ ಎಂದು ತೋರಿಸಿಕೊಟ್ಟ ಮಜಲುಗಳಿಗಿಂತ ಅರೋಲಿಯವರು ಮತ್ತೊಂದು ತಮ್ಮದೇ ಆದ ಮಜಲಿನಲ್ಲಿ ತಮ್ಮ ಈ ಗಜಲ್ ನಲ್ಲಿ ” ನಿಶ್ಚಲ ಬರಿ ತೊಟ್ಟಿಲು ” ನಲ್ಲಿ ಕಾಣಿಸಿದ್ದಾರೆ. . . ಬೆತ್ತಲಾಗಿದ್ದರೂ ಚಿತ್ತಾರದ ಮಧು ಬಟ್ಟಲೆಯಷ್ಟು ಆಕರ್ಷಕ ಎನ್ನುತ್ತಾರೆ…! ನಿಜಕ್ಕೂ ಹುಬ್ಬೇರಿಸುವಂತಹ ಗಜಲ್ ಇದು….

ನಮ್ಮಲ್ಲಿ ಎಲೆಮರೆ ಕಾಯಿಯಂತಿರುವ ಅದೆಷ್ಟೋ ಪ್ರತಿಭೆಗಳಿವೆ. . . ತಮ್ಮ ಪಾಡಿಗೆ ತಾವು ಬರೆಯುತ್ತ ಸಿದ್ಧಾಂತಕ್ಕೆ ಬಧ್ಧರಾಗಿ ಬರೆದಂತೆ ಬದುಕುತ್ತಿರುವವರಲ್ಲಿ ಶ್ರೀ ಕೋರೆನಲ್ ಅವರು ಒಬ್ಬರು. ಅವರು ಎಡಪಂಥೀಯ ವಿಚಾರಗಳನ್ನೇ ಮುನ್ನೆಲೆಯಲ್ಲಿಟ್ಟುಕೊಂಡು ದಲಿತ ಸಂವೇದನೆಯ ಪ್ರತೀಕವಾಗಿ ಗುರುತಿಸಿಕೊಂಡವರು. . ಅವರ ಬರಹಗಳು ಪ್ರಖರ ವೈಚಾರಿಕ ಪ್ರಜ್ಞೆಯಿಂದ ಕೂಡಿರುತ್ತವೆ…

ಅವರ ಗಜಲ್ ಸಾಲು ಹೀಗಿದೆ….

” ಮನುಷ್ಯರೇ ಒಮ್ಮೆಯಾದರೂ ನಿಮ್ಮ ಮುಖ ತೋರಿಸಿರಿ
ಬರೀ ಮುಖವಾಡಗಳನ್ನೇ ನೋಡಿ ನೋಡಿ ಸಾಕಾಗಿದೆ “

ಮನುಷ್ಯನಾದವನ ನಿಜಾಯತಿಯನ್ನೇ ಬುಡಮಟ್ಟದಿಂದ ಪ್ರಶ್ನಿಸುವ ತಾಕತ್ತು ಕೇವಲ ಬಂಡಾಯ ಸಾಹಿತ್ಯಕ್ಕೆ ಮಾತ್ರ ಇದೆ. ಪ್ರತಿ ಮನುಷ್ಯನ ಐಡೆಂಟಿಟಿಯನ್ನು ತೋರಿಸಲು ಮುಖ ಇದೆ. ಆದರೆ ಬಾಹ್ಯದಲ್ಲಿ ಒಂದು ಮುಖ. ಆಂತರ್ಯದಲ್ಲಿ ಒಂದು ಮುಖ. ಮುಖವಾಡಗಳನ್ನು ಹಾಕಿಕೊಂಡೇ ಅಸಲಿಯತ್ತನ್ನು ಮುಚ್ಚಿಹಾಕಿ ನಕಲನ್ನೇ ಅಸಲಿಯೆಂದು ಬಿಂಬಿಸುವ ಪ್ರಭೃತಿಗಳ ವಿರುಧ್ಧ ಆಕ್ರೋಶ ವ್ಯಕ್ತಪಡಿಸುವ ಸಶಕ್ತ ಸಾಲು…

ಡಾ. ಶರೀಫ್ ಹಸಮಕಲ್…. ನಮ್ಮ ಭಾಗದ ಭರವಸೆಯ ಯುವ ಬರಹಗಾರರು….

ಅವರ ಗಜಲ್ ಸಾಲು ನೋಡುವುದಾದರೆ…

” ಇತಿಹಾಸ ಬರೆದ ಪೆನ್ನಿನ ಮಸಿಯನ್ನೆ ಬದಲಿಸುವ ಮನು ಮನುಗಳಿಗೆ
ಮೋಹ ಬಿಡಿಸಿ ಮತ್ತೆ ಕಪ್ಪಾದ ಅಕ್ಷರ ಚೆಲ್ಲದೆ ನೆಲಕ್ಕೆ “

ಈ ಒಂದು ಸಾಲಿನಿಂದಲೇ ಕವಿಯ ಬಂಡಾಯ ಮನೋಧೋರಣೆ ತಿಳಿದು ಬರುತ್ತದೆ. ಇತಿಹಾಸ ಬರೆದ ಪೆನ್ನಿನ ಮಸಿಯನ್ನೇ ಬದಲಾಯಿಸುವ ನೀಚ ಬುಧ್ಧಿ ಮನು ಬುಧ್ಧಿ. ಆ ಮನು ಬುಧ್ಧಿಗಳನ್ನು ಓಡಿಸಿ ನಿಜವಾದ ಇತಿಹಾಸ ಬರೆಯಬೇಕಾಗಿದೆ. . . ಕೇವಲ ಒಂದು ಸಮುದಾಯದ ದಾಖಲೆ ಮಾಡುತ್ತ ಹೋದರೆ ಅದು ನಿಜವಾದ ಇತಿಹಾಸವಾಗಲಾರದು. . . ಅಂದರೆ ಅಲಕ್ಷಿತ ದಲಿತ ಸಮುದಾಯಗಳು ಇವತ್ತಿಗೂ ಕೂಡ ಇತಿಹಾಸದಲ್ಲಿ ದಾಖಲಾಗಿಲ್ಲ. . . ಇದು ವ್ಯವಸ್ಥಿತ ಸಂಚು ಎಂಬ ಚಿಂತನೆಯ ಮೂಸೆಯಲ್ಲಿ ಈ ಗಜಲ್ ಮೂಡಿದೆ. .

-ವೇಣು ಜಾಲಿಬೆಂಚಿ


ಮುಂದುವರೆಯುವುದು..

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ರಮೇಶ ಗಬ್ಬೂರ್
ರಮೇಶ ಗಬ್ಬೂರ್
3 years ago

ವೇಣು ಜಾಲಿಬೆಂಚಿ ಅವರ ಈ ಲೇಖನ ಓದಿದೆ…. ತುಂಬಾ ಚೆನ್ನಾಗಿ ಬರೆದಿದ್ದಾರೆ… ಅವರ ಈ ಬರಹದ ಒಳ ತುಡಿತ ವೇಗವಾಗಿ ಮತ್ತು ತೀವ್ರವಾಗಿ ವಿಶ್ಲೇಷಣೆಗೆ ಒಳಪಡುತ್ತಿರಃವುದು ಸಂತೋಷ… ಓದು ಮತ್ತು ಬರವಣಿಗೆಯಲ್ಲಿ ಸದಾ ಜಾಗೃತವಾಗಿದ್ದುಕೊಂಡು ಬದುಕ ಬದಲಾಯಿಸುವ ಸಾಹಿತ್ಯ ಬರೆಯುತ್ತ ಜನಮುಖಿ ಆಗಲೆಂದು ಆಶಿಸುತ್ತೇನೆ….

Venu Jalibenchi
Venu Jalibenchi
3 years ago

ನನ್ನ ಲೇಖನ ಓದಿ ಅಭಿಪ್ರಾಯ ಹಂಚಿಕೊಂಡ…ಹಿರಿಯ ಸಾಹಿತಿಗಳೂ ಮೇಲಾಗಿ‌ ಜನಕವಿಯೆಂದೇ ಗುರುತಿಸಿಕೊಂಡ ಶ್ರೀ ರಮೇಶ ಗಬ್ಬೂರ ಸರ್ ಅವರಿಗೆ ನನ್ನ ಅನಂತಾನಂತ ಧನ್ಯವಾದಗಳು…

2
0
Would love your thoughts, please comment.x
()
x