ನಮ್ಮ ಜಿಲ್ಲೆಯ ಗಜಲ್ ಕಾರರು…(ಕೊನೆಯ ಭಾಗ): ವೇಣು ಜಾಲಿಬೆಂಚಿ

ಮತ್ತೋರ್ವ ಭರವಸೆಯ ಗಜಲ್ ಬರಹಗಾರರು ಶ್ರೀ ಪ್ರಕಾಶ ಬುದ್ದಿನ್ನಿಯವರು…

ಅವರು ಬರೆದ ಗಜಲ್ ನ ಸಾಲು ಹೀಗಿದೆ…

” ನೀ ಬರುವೆಯೆಂದು ಕಾದೆ ನೀನು ಬರಲಿಲ್ಲ ದೀಪ ಹಚ್ಚಿಟ್ಟ ರಾತ್ರಿ
ನನ್ನೆದೆಯ ಬಾನಿನಲ್ಲಿ ನೀನು ಚಿತ್ತಾರವಾಗಲಿಲ್ಲ ದೀಪ ಹಚ್ಚಿಟ್ಟ ರಾತ್ರಿ “

ಎಂತಹ ಮನೋಜ್ಞವಾದ ಸಾಲು… ರಾತ್ರಿ ಎಂಬುದೇ ಪ್ರೀತಿಯ ಸಲ್ಲಾಪಕ್ಕೆ ಕರೆಯುವ ವೇದಿಕೆ. . . ಅದರಲ್ಲೂ ದೀಪ ಹಚ್ಚಿಟ್ಟುಕೊಂಡು ಪ್ರಿಯತಮೆಯ ಬರುವಿಕೆಗಾಗಿ ಕಾಯುತ್ತಿರುವ ಪ್ರಿಯಕರ. ಆದರೆ ಎಷ್ಟು ಕಾದರೂ ಅವಳು ಬಂದಳಾ? ನಿರಾಶೆಯನ್ನೇ ಉಳಿಸಿತೆಂದು ಮುಂದಿನ ಸಾಲು ” ನನ್ನೆದೆಯ ಬಾನಿನಲ್ಲಿ ನೀನು ಚಿತ್ತಾರವಾಗಲಿಲ್ಲ ದೀಪ ಹಚ್ಚಿಟ್ಟ ರಾತ್ರಿ ” ಸ್ಪಷ್ಟವಾಗಿ ಹೇಳಿಬಿಡುತ್ತದೆ. ಪ್ರೀತಿ, ಪ್ರೀತಿಯ ವೈಫಲ್ಯ ಕುರಿತು ಬಹಳ ಚೆನ್ನಾಗಿ ಬರೆದಿರುವ ಗಜಲ್….

ಇತ್ತೀಚೆಗೆ ಸಾಕಷ್ಟು ಸುದ್ದಿ ಮಾಡುತ್ತ ಒಂದಲ್ಲ ಒಂದು ರೀತಿಯಲ್ಲಿ ಚಲಾವಣೆಯಲ್ಲಿರುವ ಹೆಸರು ಶ್ರೀ ಈರಣ್ಣ ಬೆಂಗಾಲಿಯವರು. ಸಾಮಾಜಿಕ ಕಳಕಳಿಗೆ ಉತ್ತಮ ನಿದರ್ಶನವಾಗಿ ಅವರ ಬರಹಗಳನ್ನು ನಾವು ನೋಡಬಹುದು.

ಅವರ ಒಂದು ಗಜಲ್ ನ ಸಾಲು ಹೀಗಿದೆ…

” ಬೆಳಕಿನ ತೋರಣ ಚೆಂದದಿ ಕಟ್ಟಿವೆ ದೀಪಗಳ ಸಾಲು
ತಮ್ಮನ್ನೇ ಸುಟ್ಟು ಹೊಂಬೆಳಕ ಸೂಸಿವೆ ದೀಪಗಳ ಸಾಲು “

ಸಾಲಕ್ಕೆ ಹಚ್ಚಿ ಇಟ್ಟಿರುವ ದೀಪಗಳನ್ನು ರೂಪಕವಾಗಿಟ್ಟುಕೊಂಡು ಬೆಳಕಿನ ತೋರಣವಾಗಿಸಿ ತಮ್ಮನ್ನೇ ಸುಟ್ಟು ಕೊಂಡರೂ ಬೆಳಕು ಸೂಸುವ ದೀಪಗಳ ಸಮರ್ಪಣಾ ಬುಧ್ಧಿ ತ್ಯಾಗವೇ ಜೀವನ ಎಂಬ ಸಂದೇಶವನ್ನು ರವಾನಿಸಿದ್ದಾರೆ ಈ ಸಾಲಿನಲ್ಲಿ. . ಇವರ ವಿಶೇಷತೆ ಎಂದರೆ ಸರಳತೆ. ಹಾಗಾಗಿ ಇವರು ಬಹುತೇಕ ಎಲ್ಲರ ಮನಸನ್ನೂ ಗೆದ್ದುಬಿಡುತ್ತಾರೆ.

ಶ್ರೀ ಶಿವಶಂಕರ ಕಡದಿನ್ನಿ. . ಇತ್ತೀಚೆಗೆ ಬಹಳಷ್ಟು ಭರವಸೆ ಮೂಡಿಸುತ್ತಿರುವ ಯುವ ಬರಹಗಾರ. ಹಲವಾರು ಪತ್ರಿಕೆಗಳಲ್ಲಿ ಇವರ ಗಜಲ್ ಗಳು ಪ್ರಕಟಣೆ ಕಂಡಿದ್ದು ಅದು ಅವರ ಬರವಣಿಗೆಯ ಸತ್ವವನ್ನು ತಿಳಿಸುತ್ತದೆ. .

ಅವರ ಒಂದು ಗಜಲ್ ನ ಸಾಲು ಹೀಗಿದೆ…

” ಜಾತಿ ಮತಗಳನ್ನು ತೊರೆದು ಕಾಯುತ್ತಿರುವೆ ಹಿಡಿಯಷ್ಟು ಪ್ರೀತಿಗಾಗಿ.
ಮಡಿ ಮೈಲಿಗೆ ಬದಿಗೆ ಒತ್ತಿ ಹುಡುಕುತ್ತಿರುವೆ ಹಿಡಿಯಷ್ಟು ಪ್ರೀತಿಗಾಗಿ”

ಪ್ರಸ್ತುತ ಸಾಲೇ ಹೇಳುವಂತೆ ಜಾತಿ ಮತಗಳಿಗಿಂತಲೂ, ಮಡಿ ಮೈಲಿಗೆ ಗಿಂತಲೂ ಪ್ರೀತಿ ಇಡಿಯಷ್ಟೇ ಇರಲಿ ಅದು ಹೊಸ ಬದುಕನ್ನು ಕಟ್ಟಿಕೊಡುತ್ತದೆ ಆದರೆ ಆ ಇಡಿಯಷ್ಟು ಪ್ರೀತಿಗೂ ಹಪಹಪಿಸುವ ಕಾಲದಲ್ಲಿ ನಾವಿದ್ದೇವೆ ಎಂದು ತುಂಬ ಅರ್ಥಪೂರ್ಣವಾಗಿ ಈ ಸಾಲುಗಳ ಮೂಲಕ ಕವಿ ಸಮಾಜದೊಂದಿಗೆ ಮುಖಾಮುಖಿಯಾಗಿದ್ದಾರೆ.

ಶ್ರೀ ಅಭಿಷೇಕ್ ಬಳೆ ಭರವಸೆಯ ಯುವ ಗಜಲ್ ಬರಹಗಾರರು. . . ಇವರು ಕೂಡ ನಮ್ಮ ಭಾಗದ ಒಬ್ಬ ಉತ್ತಮ ಗಜಲ್ ಪ್ರತಿಭೆ… ಇತ್ತೀಚೆಗಷ್ಟೇ ಅವರ ” ಗೋರಿ ಮೇಲಿನ ಹೂ ” ಗಜಲ್ ಕೃತಿ ಬಿಡುಗಡೆಯಾಯಿತು. . ಹಲವು ಪ್ರಶಂಸೆ ಮತ್ತು ಮೆಚ್ಚುಗೆಗಳು ವ್ಯಕ್ತವಾದವು.

ಸದ್ಯ ಅವರ ಕೃತಿಯ ಗಜಲ್ ನ ಒಂದು ಸಾಲು…

” ಪಟಪಟ ಮಾತನಾಡುವೆ ಅರಳು ಹುರಿದಂತೆ ರಾಯಚೂರು ರೊಟ್ಟಿಯಂತೆ ಖಡಕ್
ನಿನ್ನ ಮಾತಿನ ವೈಖರಿಗೆ ತೀನ್ ಖಂದಿಲ್ ಕಲ್ಲಾನೆಗೆ ಜೀವ ಬಂದರೆ ಚೆಂದ ಕಣ ಹುಡುಗಿ “

ಕಾಲೇಜು ಮೆಟ್ಟಿಲು ಹತ್ತಿದಾಗ ವಯೋಸಹಜವಾಗಿಯೇ ಹುಡುಗ ಹುಡುಗಿ ಆಕರ್ಶಿತರಾಗುವುದು. . . ತನಗೆ ತಾನೇ ಭಾವನೆಗಳು ಒಡಮೂಡಿ ಬರುವುದು ಸರ್ವೇ ಸಾಮಾನ್ಯ. ಅಂತಹ ಪರಿವೇಶದಲ್ಲಿ ಅಭಿಯವರು ಇತರೆಲ್ಲರಿಗಿಂತ ಬಹಳ ವಿಭಿನ್ನವಾಗಿ ಆಲೋಚಿಸಿ ಕಾವ್ಯಕುಸುರಿ ಮಾಡುತ್ತಿರುವುದು ಪ್ರಶಂಸನೀಯ. ಅವಳ ಮಾತಿನ ಶೈಲಿಗೂ ರಾಯಚೂರು ರೊಟ್ಟಿಯ ಖಡಕ್ ತನಕ್ಕೂ ಹೋಲಿಕೆ ಕಲ್ಪಿಸುವ ಕವಿ ಅದನ್ನು ತೀನ್ ಖಂದಿಲ್ ಕಲ್ಲಾನೆಗೆ ಜೀವ ಬರಿಸುವ ವೈಖರಿಯನ್ನಾಗಿ ಕಂಡರಿಸುವ ಮೂಲಕ ತಮ್ಮೊಳಗೊಬ್ಬ ಸೂಕ್ಷ್ಮ ಮತಿ ಕವಿ ಅಡಗಿದ್ದಾನೆ ಎಂಬ ಎಲ್ಲ ಸುಳಿವುಗಳನ್ನು ಕೊಡುತ್ತಾರೆ ಶುಭವಾಗಲಿ. .

ಇನ್ನೋರ್ವ ನಮ್ಮ ಭಾಗದ ಭರವಸೆಯ ಯುವ ಬರಹಗಾರರು ಶ್ರೀ ಮಹಾದೇವ ಪಾಟೀಲ ಅವರು. ವೃತ್ತಿಯಿಂದ ಪೋಲಿಸ್ ಇಲಾಖೆಯಲ್ಲಿದ್ದರೂ ಪ್ರವೃತ್ತಿಯಿಂದ ಮಾತ್ರ ಕವಿಹೃದಯಿಗಳು. ಇತ್ತೀಚೆಗಷ್ಟೇ ಅವರ ಪ್ರಥಮ ಗಜಲ್ ಕೃತಿ ” ಬಿಸಿಲು ಬಿದ್ದ ರಾತ್ರಿ ” ಬಿಡುಗಡೆಯಾಯಿತು. ಕೃತಿಯ ಬಗ್ಗೆ ಮೆಚ್ಚುಗೆ, ಪ್ರಶಂಸೆ ವ್ಯಕ್ತವಾದವು. . ನಾನು ಪ್ರಸ್ತುತ ಆ ಕೃತಿಯಿಂದ ಗಜಲ್ ಎತ್ತಿಕೊಳ್ಳದೆ ಬೇರೆ ಗಜಲ್ ‌ನ ಸಾಲನ್ನು ಇಲ್ಲಿ ಉಲ್ಲೇಖಿಸಿದ್ದೇನೆ. .

” ಯಾರನ್ನು ನಂಬಿಕೊಂಡು ಬದುಕಿ ಬಾಳಬೇಕು ಈ ಜಗದಲಿ
ಯಾರೊಂದಿಗೆ ವಿಶ್ವಾಸ ಹಂಚಿಕೊಂಡು ಬಾಳಬೇಕು ಈ ಜಗದಲಿ “

ನಂಬಿಕೆ ದ್ರೋಹ, ವಿಶ್ವಾಸ ದ್ರೋಹ ತುಂಬಿ ಹೋಗಿರುವ ಈ ಜಗತ್ತಿನಲ್ಲಿ ಬದುಕು ಸಾಗಿಸುವುದು ಅದೆಷ್ಟು ದುರ್ಭರವಾಗಿದೆ ಎಂದು ಚಿಂತಿಸುವ ಕವಿ ನೈತಿಕ ಮೌಲ್ಯಗಳು ಕುಸಿದು ಹೋಗುತ್ತಿರುವುದರ ಕುರಿತು ವಿಶಾದ ವ್ಯಕ್ತಪಡಿಸಿದ್ದಾರೆ. . ಶುಭವಾಗಲಿ….

ಶ್ರೀಮತಿ ಅಂಬಮ್ಮ ಪ್ರತಾಪ್ ಸಿಂಗ್. . ನಮ್ಮ ಭಾಗದ ಭರವಸೆಯ ಗಜಲ್ ಕಾರರು. ಅವರ ಒಂದು ಗಜಲ್ ಸಾಲು ಹೀಗಿದೆ…

” ಹುಡುಕುತ್ತಿರುವೆ ಈ ಜಗತ್ತಿನಲ್ಲಿ ನನ್ನನ್ನು ನಾನು
ಎಲ್ಲರಿಗೂ ಕಂಡರೂ ಕಾಣಿಸುತ್ತಿಲ್ಲ ನನಗೆ ನಾನು “

ಪ್ರತಿ ಮನುಷ್ಯನಿಗೂ ಕೂಡ ಒಂದಲ್ಲ ಒಂದು ದಿನ ತನ್ನಲ್ಲಿ ಆತ್ಮಸಾಕ್ಷಿಯ ಪ್ರಜ್ಞೆ ಜಾಗೃತವಾಗಿ ಇದ್ದಿದ್ದೇ ಆದರೆ ತನ್ನನ್ನು ತಾನು ಹುಡುಕಿಕೊಳ್ಳುವ ಗೋಜಿಗೆ ಹೋಗಿಯೇ ತೀರುತ್ತಾನೆ. . . ಎಲ್ಲರಿಗೂ ಕಾಣಿಸುವ ನಾನು. . . ನನಗೆ ಭಿನ್ನವಾಗಿ ಕಾಣುತ್ತಾನೆ…! ನನಗೆ ನಾನು ಕಂಡಂತೆ ಇನ್ನೊಬ್ಬರಿಗೆ ಕಾಣಲಾರೆ…! ಇದು ಒಂದು ರೀತಿಯಲ್ಲಿ ಮನುಷ್ಯ ತನ್ನ ಅಂತರಂಗವನ್ನು ಹೊಕ್ಕು ತನ್ನನ್ನು ತಾನು ಅರ್ಥಮಾಡಿಕೊಳ್ಳಬೇಕಾದ ಬಗೆ…. ತಾತ್ವಿಕ ಜಿಜ್ಞಾಸೆ ಮೂಡಿಸುವ ಗಜಲ್… ಆದರೆ ಇದೇ ವಸ್ತು ಹೊಂದಿರುವ ಶ್ರೀ ಶಾಂತರಸರ ಗಜಲ್ ಗಳು…. ವಿಭಿನ್ನವಾಗಿ ಕಾಣುತ್ತವೆ. . ಅಧ್ಯಯನಕ್ಕಾದರೂ ಭಿನ್ನತೆ ಮತ್ತು ಹೋಲಿಕೆಗಳನ್ನು ಟಿಪ್ಪಣಿ ಮಾಡಬಹುದು… ಶುಭವಾಗಲಿ…

ಹಾಗೆಯೇ ಮತ್ತೋರ್ವ ಮಹಿಳೆ ಅದರಲ್ಲೂ ಗಜಲ್ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವಾರು ಉತ್ತಮ ಗಜಲ್ ಗಳನ್ನು ಬರೆದು ಮೆಚ್ಚುಗೆಗೆ ಪಾತ್ರರಾದ ಶ್ರೀ ಉಷಾಜ್ಯೋತಿ ಮೇಡಂ ಅವರು ಕೂಡ ಇಲ್ಲಿ ಉಲ್ಲೇಖಾರ್ಹರು. ಗಜಲ್ ನ ಚೌಕಟ್ಟು ಮತ್ತು ಛಂದಸ್ಸನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸೈ ಎನಿಸಿಕೊಂಡ ಅಪರೂಪದ ಗಜಲ್ ಬರಹಗಾರರು. ಅವರಿಂದ ಉತ್ತಮ ಗಜಲ್ ಗಳ ಕೃತಿ ಹೊರಬರಲಿ ಎಂದು ಆಶಿಸೋಣ.

ಅವರ ಗಜಲ್ ನ ಒಂದು ಸಾಲು….

” ಒಲವತೈಲವೆರೆಯದೇ ಜ್ಯೋತಿಯು ಬೆಳಗಲು ಸಾಧ್ಯವೇ
ಮಳೆಬರಲು ಬೀಜ ಫಲವ ಕೊಡದಿರುವುದೇ ಗೆಳತಿ “

ಜ್ಯೋತಿ ಬೆಳಗಿಸಲು ಎಣ್ಣೆ (ತೈಲ) ಇರಬೇಕು. ಎಣ್ಣೆ ಇಲ್ಲದೆ ಹೇಗೆ ಜ್ಯೋತಿ ಬೆಳಗಲು ಸಾಧ್ಯವಿಲ್ಲವೋ ಹಾಗೆಯೇ ಒಲವೆಂಬ ತೈಲ ಸುರಿಸದೆ ಬದುಕೆಂಬ ಜ್ಯೋತಿ ಬೆಳಗಿಸಲು ಸಾಧ್ಯವಾಗದು. ಇದು ತರ್ಕಬದ್ಧವಾಗಿಯೂ ಕೂಡ ಸತ್ಯವಾಗಿರುವುದಷ್ಟೇ ಅಲ್ಲ ಕಾವ್ಯಶಿಲ್ಪದಲ್ಲೂ ಕೂಡ ಸುಂದರವಾದ ವಾಸ್ತವ. ಇಂತಹ ಕಟುಸತ್ಯಗಳನ್ನು ಹೇಳುವ , ಕೇಳುವ , ಪ್ರಶ್ನಿಸುವ ಉಮೇದುವಾರಿಕೆ ಇಂತಹ ಸೃಜನಶೀಲ ಸಾಹಿತ್ಯದ ಮುಖ್ಯ ಜವಾಬ್ದಾರಿಗಳಲ್ಲಿ ಒಂದಾಗಿರುವುದರಿಂದ ಪ್ರಸ್ತುತ ಗಜಲ್ ಸಾಲು ಹುಟ್ಟಿಕೊಳ್ಳಲು ಸಾಧ್ಯವಾಗಿದೆ. ಶುಭವಾಗಲಿ.

ಯುವ ಗಜಲ್ ಬರಹಗಾರರಲ್ಲಿ ಇತ್ತೀಚೆಗೆ ಸಾಕಷ್ಟು ಹೆಸರು ಕೇಳಿಬರುತ್ತಿರುವ ಮತ್ತು ಹಲವು ಮಾಸಪತ್ರಿಕೆಗಳಲ್ಲಿ ಕೂಡ ತಮ್ಮ ಗಜಲ್ ಗಳಿಂದ ಗುರುತಿಸಿಕೊಳ್ಳುತ್ತಿರುವ ಶ್ರೀ ಉಮರ್ ದೇವರಮನಿ ಅವರು ತಮ್ಮದೇ ಶೈಲಿಯ ಗಜಲ್ ಗಳನ್ನು ಬರೆದಿದ್ದು ಒಂದು ವಿಶಿಷ್ಟ ಮಾದರಿಯನ್ನು ಕಾಪಾಡಿಕೊಂಡು ಬರುತ್ತಿರುವುದು ಗಜಲ್ ಬಗೆಗಿನ ಅವರ ಕಾಳಜಿ ಮತ್ತು ಶ್ರಧ್ಧೆ ಎಂತಹದ್ದು ಎಂದು ತೋರಿಸಿಕೊಡುತ್ತದೆ. ಒಂದು ರೀತಿಯಲ್ಲಿ ಅವರ ಗಜಲ್ ಗಳು ಕಾವ್ಯಕುಸುರಿಯಿಂದ ಕೂಡಿದ ವಿಶಿಷ್ಟ ಗಜಲ್ ಗಳು.

ಅವರ ಒಂದು ಗಜಲ್ ನ ಸಾಲು. . .

” ಹೃದಯಗಳು ಎಷ್ಟು ಬಿಕ್ಕಿರಬಹುದು ಕನಸುಗಳು ಸಾಯುವಾಗ
ಸತ್ತು ಎಷ್ಟು ಬದುಕಿರಬಹುದು ಮನಸುಗಳು ಬಾಡುವಾಗ “

ಅಂತರಾಳಕ್ಕೆ ಹೇಳಿಕೊಳ್ಳುವ ಆಪ್ತ ಮಾತುಗಳಾಗಿಯೂ ಕೇಳಿಸುವ ಈ ಸಾಲುಗಳು ಇನ್ನೊಬ್ಬ ಆಪ್ತ ದಕ್ಕದಿದ್ದರೆ ಎಲ್ಲಿಗೆ ಮುಟ್ಟಬೇಕು? ಮನಸುಗಳೂ ಬಾಡುವ ವಿದ್ಯಮಾನವನ್ನು ಅದು ಹೇಗೆ ತಾನೆ ತಡೆಯಬೇಕು? ಅದು ಸಾಧ್ಯವಾಗುವುದಿದೆಯಾ? ಇಂತಹ ಕೋಮಲ ಸಂಗತಿಗಳನೂ ದಗ್ಧ ಮಾಡಿಬಿಡುವ ವಿಲಾಸಿ ಬದುಕಿಗೆ ಏನು ಹೇಳುವುದು ಎಂಬಂತೆ ಒಟ್ಟಾರೆ ಆಂತರಿಕ ತುಮುಲಗಳ ಹೊಯ್ದಾಟವನ್ನು ಕಂಡರಿತ ನೈಪುಣ್ಯಭರಿತ ಗಜಲ್ ಸಾಲುಗಳು ಉಮರ್ ದೇವರಮನಿ ಅವರದ್ದು. ಅವರೂ ಕೂಡ ಸ್ವತಂತ್ರ ಕೃತಿ ಹೊರತಂದು ಸಾರಸ್ವತ ಲೋಕಕ್ಕೆ ಕಾಣಿಕೆ ನೀಡಲಿ ಎಂದು ಆಶಿಸುತ್ತೇನೆ.

ಇನ್ನು ನಮ್ಮ ಪ್ರಸ್ತುತ ರಾಯಚೂರು ಜಿಲ್ಲಾ ಗಜಲ್ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಹಾಗೂ ಬಂಡಾಯದ ಗಜಲ್ ಗಳಿಗೇ ಹೆಸರಾದ ಶ್ರೀ ಮಲ್ಲೇಶ ಭೈರವ ಅವರು ಕಡಿಮೆ ಬರೆದರೂ ಸತ್ವಪೂರ್ಣವಾದದ್ದನ್ನೇ ಬರೆಯುತ್ತಾರೆ. . ಅವರ ಗಜಲ್ ನ ಒಂದು ಸಾಲು ಹೀಗಿದೆ

” ಹಂತಕರ ಹಿಡಿದು ಬಂಧಿಸಿದರೂ ಸಾವು ನಿಲ್ಲದು
ಉಗ್ರರ ಗುಂಡಿಕ್ಕಿ ಕೊಂದರೂ ಸಾವು ನಿಲ್ಲದು “

ಇಲ್ಲಿ ಸಾವು ಸಾಮಾನ್ಯ ಆದರೆ ಹಂತಕರನ್ನು ಹಿಡಿದು ಬಂಧಿಸುವುದಾಗಲಿ, ಉಗ್ರರನ್ನು ಗುಂಡಿಟ್ಟು ಕೊಲ್ಲುವುದಾಗಲಿ ಸಾವನ್ನು ಗೆಲ್ಲುವಲ್ಲಿ ಯಾವ ರೀತಿಯಿಂದಲೂ ಸಹಾಯಕ್ಕೆ ಬರುವುದೇ ಇಲ್ಲ. ಸಾವಿನ ಮೇಜವಾನಿ ಮಾತ್ರ ನಡೆದೇ ಇರುತ್ತದೆ ಅದು ಶಾಶ್ವತ ಸತ್ಯ ಅದನ್ನು ಯಾರೂ ಕೂಡ ಬದಲಾಯಿಸಲಾರರು…. ಎಂದು ವಾಸ್ತವವನ್ನು ಕಟುವಾಗಿಯೇ ಹೇಳಿಬಿಡುವ ಇವರ ಬಹುತೇಕ ಗಜಲ್ ಗಳ ಶೈಲಿ ಹೀಗೆಯೇ ಇರುತ್ತದೆ ಇವರು ಕೂಡ ತಮ್ಮ ಗಜಲ್ ಗಳನ್ನು ಒಟ್ಟೈಸಿ ಒಂದು ಕೃತಿ ಹೊರತರಬೇಕಾದದ್ದಿದೆ. . . ಅವರ ಹಿತೈಷಿಗಳೆಲ್ಲರೂ ಎದುರು ನೋಡುತ್ತಿದ್ದಾರೆ. . . ಶುಭವಾಗಲಿ….

ಇತ್ತೀಚೆಗೆ ಮಾತ್ರ ಗಜಲ್ ಬರೆಯಲು ಶುರುಮಾಡಿದ್ದರೂ ಬಹಳಷ್ಟು ಭರವಸೆ ಹುಟ್ಟಿಸುತ್ತಿರುವ ಈಗಾಗಲೇ ತಮ್ಮ ಮಕ್ಕಳ ಪದ್ಯ ಹಾಗೂ ನಾಟಕ ಮತ್ತು ನವ್ಯ ಶೈಲಿಯ ಕವಿತೆಗಳಿಂದ ತಮ್ಮದೇ ಆದ ಛಾಪನ್ನು ಮೂಡಿಸಿರುವ ಹಿರಿಯರಾದ ಶ್ರೀ ಮಂಡಲಗಿರಿ ಪ್ರಸನ್ನ ಅವರು ಬರವಣಿಗೆಯನ್ನು ಕೇವಲ ಕ್ರಿಯಾಶೀಲ ಚಟುವಟಿಕೆ ಮಾತ್ರವಲ್ಲದೆ ಅದನ್ನೊಂದು ಸೃಜನಶೀಲ ಪ್ರಕ್ರಿಯೆ ಎಂದು ಗುರುತಿಸಿದ್ದುದಕ್ಕೆ ಇತ್ತೀಚೆಗೆ ಅವರು ಹುಟ್ಟು ಹಾಕಿದ “ಸ್ಪಂದನ ಸಾಹಿತ್ಯ ವೇದಿಕೆ” ಯೇ ಸಾಕ್ಷಿ. ಈ ವೇದಿಕೆಯಡಿ ಹಲವಾರು ಸೃಜನಶೀಲ ಚಟುವಟಿಕೆಗಳನ್ನು ಮುಂದಿನ ದಿನಮಾನಗಳಲ್ಲಿ ಹಮ್ಮಿಕೊಳ್ಳಲಿದ್ದಾರೆ. ಶುಭವಾಗಲಿ.

ಅವರ ಒಂದು ಗಜಲ್ ನ ಸಾಲು…. .

” ಬದುಕು ಜಂಜಡಗಳ ಅರ್ಥವಾಗದ ಕಾಡು ಹಾದಿಯೆ
ದೂರದಲ್ಲಿನ ದಿಗಂತವನು ತಿಳಿಯಲು ಹೋದೆ ನಾನು”

ಬದುಕು ಒಂದು ಕಾಡಾಗಿ ಅರ್ಥವಾಗದೆ ಕಾಡುವಾಗ ದೂರದ ದಿಗಂತದೆಡೆಗಿನ ಮನುಷ್ಯನ ಸೆಳೆತವನ್ನು , ಇದ್ದುದನು ಬಿಟ್ಟು ಇಲ್ಲದುದರ ಕಡೆಗೆ ತುಡಿಯುವ ಮನುಷ್ಯನ ಸಂದಿಗ್ಧ ನಡೆಯನ್ನು ಭಾವ ಪರಿವೇಶದಲ್ಲಿ ಈ ಗಜಲ್ ಸಾಲಿನಲ್ಲಿ ಕಂಡರಿಸಿದ್ದು ಅತ್ಯಂತ ಅರ್ಥೋಚಿತ ಮತ್ತು ಸಶಕ್ತ ಪದವಿನ್ಯಾಸದಲ್ಲಿ ಮೂಡಿ ಬಂದಿರುವುದು ಕವಿಯ ಕುರಿತು ಹೆಚ್ಚಿನ ಭರವಸೆಯನ್ನು ಉಂಟುಮಾಡುತ್ತಿದೆ. ಮುಂದಿನ ದಿನಮಾನಗಳಲ್ಲಿ ಅವರಿಂದ ಒಂದು ಸ್ವತಂತ್ರ ಗಜಲ್ ಕೃತಿಯ ಕೊಡುಗೆ ನಮ್ಮ ನಾಡಿಗೆ ದಕ್ಕಲಿ ಎಂದು ಆಶಿಸುತ್ತೇನೆ.

ಇತ್ತೀಚೆಗೆ ಗಜಲ್ ಬರವಣಿಗೆಯಲ್ಲಿ ತೊಡಗಿಕೊಂಡಿರುವ ದೊಡ್ಡ ಯುವ ಸಮೂಹವೇ ಇದೆ. ಅವರಲ್ಲಿ ಶ್ರೀ ಅಮರೇಶ ಎಂ. ಕೆ. ಅವರೂ ಒಬ್ಬರು. ಅವರು ಹಲವಾರು ಗಜಲ್ ಗಳನ್ನು ಸಮೂಹ ಮಾಧ್ಯಮಗಳಾದ ವಾಟ್ಸಾಪ್‌ , ಫೇಸ್ ಬುಕ್ ಇಂತಹ ಆಧುನಿಕ ಜಾಲತಾಣಗಳಲ್ಲಿ ತಮ್ಮ ಗಜಲ್ ಗಳನ್ನು ಹರಿಬಿಟ್ಟಿದ್ದು ಹಲವು ಸಹೃದಯರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರಿಂದ ಮುಂದೆ ಸ್ವತಂತ್ರ ಕೃತಿ ಬರಬೇಕಾಗಿದೆ. ಶುಭವಾಗಲಿ.

ಅವರ ಒಂದು ಗಜಲ್ ನ ಸಾಲು. . .

” ನನ್ನವರು ತನ್ನವರೆನ್ನರು ಇಲ್ಲಿನವರು
ಕೈಗಳು ಮೇಲೆದ್ದಿವೆ ಕಾಲೆಳೆಯುತ್ತಿವೆ “

ಅದೇ ರೀತಿಯಾಗಿ ಇತ್ತೀಚೆಗೆ ಗಜಲ್ ಪ್ರೇರಣೆಯಿಂದ ಅದರ ವಿಶಿಷ್ಟ ಸೆಳೆತಕ್ಕೊಳಗಾಗಿ ಸುಮಾರು ಐದುನೂರಕ್ಕೂ ಹೆಚ್ಚು ಗಜಲ್ ಗಳನ್ನು ಬರೆದು ಮತ್ತು ಬರೆಯುತ್ತ ಸಾಗಿರುವ ಇನ್ನೋರ್ವ ಯುವ ಕವಿ ಬರಹಗಾರ ವೇಣು ಜಾಲಿಬೆಂಚಿ. ಪ್ರಾರಂಭದಲ್ಲಿ ಕಥೆ , ಕವಿತೆಗಳನ್ನು ಬರೆಯುತ್ತಿದ್ದವರು ಇತ್ತೀಚೆಗೆ ಕಾವ್ಯ ಕಥೆ ಮಾತ್ರವಲ್ಲದೆ ಹನಿಗವನ , ಚುಟುಕು , ವಚನ , ಹೈಕು ಹೆಚ್ಚಾಗಿ ಗಜಲ್ ಗಳತ್ತ ವಿಶೇಷ ಒಲವು ಹಚ್ಚಿಕೊಂಡು ತೀವ್ರವಾಗಿ ಗಜಲ್ ಬರವಣಿಗೆಯಲ್ಲಿ ತೊಡಗಿಕೊಂಡಿರುವುದರಿಂದ ಐದುನೂರಕ್ಕೂ ಮಿಕ್ಕಿ ಗಜಲ್ ಗಳನ್ನು ಬರೆದಿದ್ದು ಆಧ್ಯಾತ್ಮ , ತತ್ವಜ್ಞಾನ ಬಂಡಾಯ , ಪ್ರೀತಿ , ವಿಡಂಬನೆ ವಿಶೇಷವಾಗಿ ಹಾಸ್ಯಗಜಲ್ ಗಳನ್ನು ಕೂಡ ಬರೆದಿದ್ದು ಪ್ರಮುಖವಾಗಿ ತಾತ್ವಿಕ ಜಿಜ್ಞಾಸೆಯೇ ಇವರ ಗಜಲ್ ಗಳ ವಸ್ತು ವಿಷಯವಾಗಿರುತ್ತದೆ.

ಇವರ ಗಜಲ್ ನ ಒಂದು ಸಾಲು

” ಅಸಲಿ ನಕಲಿ ಮಾಡಿ ನಕಲಿ ಅಸಲು ಮಾಡಲಾಗುತಿದೆ
ಮನುಷ್ಯನೀಗ ಅಸಲಿಯಾಗುಳಿದಿರುವನೋ ಪ್ರಶ್ನೆ ಈಗ ಎದ್ದಿದೆ “

ಇಂದಿನ ಅವ್ಯವಸ್ಥೆಯ ಕುರಿತಾಗಿ ಹರಿತವಾದ ವ್ಯಂಗ್ಯ ಮತ್ತು ವಿಡಂಬನೆಯ ಪ್ರಶ್ನೆ ಇಲ್ಲಿ ಏಕಕಾಲಕ್ಕೆ ಓದುಗರನ್ನೂ ಮತ್ತು ಪ್ರಸ್ತುತ ಸಾಮಾಜಿಕ ವ್ಯವಸ್ಥೆಯನ್ನೂ ತೀವ್ರವಾಗಿ ದಂಗುಬಡಿಸುತ್ತದೆ. ಯಾವುದು ಅಸಲಿ? ಯಾವುದು ನಕಲಿ? ಭೇದವೇ ಇಲ್ಲದಂತೆ ಈ ವ್ಯವಸ್ಥೆಯ ಸಂಚಿನಲ್ಲಿ ಅಸಲಿ ನಕಲಿಯಾಗಿ ನಕಲಿ ಅಸಲಿಯಾಗಿ ಮಾರ್ಪಡುವ ಕುತಂತ್ರದಲ್ಲಿ ಮನುಷ್ಯನೂ ಕೂಡ ಅಸಲಿಯಾಗುಳಿದಿರುವನೋ ಎಂಬ ಗುಮಾನಿ , ಶಂಕೆ ಭೂತಾಕಾರದ ಪ್ರಶ್ನೆಯಾಗಿ ಕಾಡುತ್ತಿದೆ ಎಂದು ನಮ್ಮನ್ನು ವಿವೇಚನೆಗೆ ಹಚ್ಚುತ್ತದೆ ಈ ಗಜಲ್ ಸಾಲು.

ಇದಿಷ್ಟು ನಾನು ಪ್ರಾಯೋಗಿಕವಾಗಿ ಬರೆದ ವಿಚಾರಗಳು. ಅದಕ್ಕೆ ಹಿನ್ನೆಲೆಯಾಗಿ ಹಿಂದಿನ ತಲೆಮಾರಿನಿಂದ ಇಂದಿನ ತಲೆಮಾರಿನ ವರೆಗೂ ಗಜಲ್ ಬರೆಯುತ್ತಿರುವವರ ಒಂದೊಂದೇ ಸಾಲುಗಳನ್ನು ಆಯ್ದುಕೊಂಡು ಅವುಗಳ ಗುಣವಿವೇಚನೆ ಮಾಡಲು ಪ್ರಯತ್ನಿಸಿದ್ದೇನೆ. ಅನಿಸಿದ್ದನ್ನು ಹೇಳಿಬಿಡುವ ಜಾಯಮಾನ‌ ನನ್ನದು. ಒಂದಿಷ್ಟು ಓದುಗರ ಜೊತೆ ಈ ಮೂಲಕವಾದರೂ ಸಂವಾದ ನಡೆಯಲಿ ಎಂಬುದು ನನ್ನ ಮುಖ್ಯ ಆಶಯ.

-ವೇಣು ಜಾಲಿಬೆಂಚಿ


ಮುಗಿಯಿತು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x