ಕಥಾಲೋಕ

ನಮ್ಮ ಇಂದ್ರಿ ಕತಿ: ರುಕ್ಮಿಣಿ ನಾಗಣ್ಣವರ

ಕೆಲಸದ ಮ್ಯಾಲ ಹೆಡ್ ಆಫಿಸಿಗಿ ಹ್ವಾದ್ರ ನನ್ನದಲ್ಲದ ಕೆಲಸಾನೂ ನಾ ಮಾಡಬೇಕಾಗಿ ಬರ್ತದ. ಮನ್ನಿ ಮನ್ನೆರ ಕಂಪ್ಯೂಟರ್ ಕೆಲಸಕಂತ ಒಬ್ಬ ಹುಡುಗನ ನೇಮಿಸ್ಯಾರ.  ಅದೇನೋ ಡಿಪ್ಲೊಮಾ ಕೋರ್ಸ್ ಮುಗಿಸ್ಯಾನಂತ. ಆ ಊರ ಪಲ್ಲಾಳಗಿತ್ತಿ ಪದ್ದಿ ಬಾಯಾಗಿಂದ ಕೇಳಿದ ಸುದ್ದಿ.

ಡಿಪ್ಲೊಮಾ ಮುಗಿಸಿದ ಹುಡಗ ಇಲ್ಲಿ ಇವರ ಕೊಡು ಯಾಡ ಸಾವಿರಕ ಅವರ ಅಂದಿದ್ದ ಅನಿಸ್ಕೊಂಡ ನಾಯಿಗಿಂತ ಕಡೆ ಆಗಿ ಯಾಕ ಸಾಯ್ಲಿಕ್ ಬಂದಾನೊ? ಅಂತ ನನಗ ಅನಿಸಿದ್ದೂ ಅದ. ಅವನ ಮಾರಿ ನೋಡಿದರ ಅಯ್ಯೋ ಪಾಪ! ಅನಿಸಿ ಜೀಂವ ಮರಗ್ತದ ಅಷ್ಟ ಸಂಭಾಯಿತ. ಖರೇ ಏನ್ ಮಾಡುದ ಸಂಭಾಯ್ತನ ಇಟಗೊಂಡ? ಒಂದ ಪೇಜ್  ಟೈಪ್ ಮಾಡಾಕ ತಾಸಗಟ್ಟಲೆ ಟಾಯಮ್ ತಗೋತಾನ. ಅಂಥದರಾಗ, ನಂದ ಇಡಿ ತಿಂಗಳಾನಗಟ್ಲೆ ಅದೇನೇನ ಕಡದ ಕಟ್ಟಿ ಹಾಕಿನಿ ಅನ್ನದನ್ನೆಲ್ಲ ಉದ್ದುದ್ದಕ ಕತಿಮಾಡಿ ಟೈಪ್ ಮಾಡಿ ಡಿಸ್ಕ್ರಿಪ್ಟಿವ್ ರಿಪೋರ್ಟ್ ಮಾಡಿಕೊಟ್ಟ ಬರುದ ಇರ್ತೈತಿ. ಅವನ ಕೂಡ ತಲಿ ಹೊಡ್ಕೊಳ್ಳೊದಕ್ಕಿಂತ ಅವತ್ತಿನ ಕಂಪ್ಯೂಟರ್ ವರ್ಕ್ ಎಲ್ಲ ನಾನ ಮಾಡಿ ಮುಗಿಸುದು ಒಳ್ಳೆದಂತ ನಾನ ಮಾಡಿಕೊಟ್ಟಿರ್ತೀನಿ.

ಇಂಥ ಮೂಳ ಕಿಲಾಪೆಲ್ಲ ಮುಗಸ್ಕೊಂಡ್ ವಾಪಸ್ ನಾ ನನ್ನ ಗೂಡ ಸೇರುದು ಮೂರುಸಂಜಿ ದೀಪ ಹಚ್ಚು ವ್ಯಾಳೇಕ.

ಅಯ್ಯ ಇದರ ಸುಡ್ಲಿ! ಹಾಂಟ್ಯಾನ ಮಳಿ  ಮುಂಜಾನಿಂದ ಸಣ್ಣಗ  ತೂತ್ ಮಡಿಕಿ ಹಾಂಗ ಬುಳು ಬುಳು ಇಳದ  ಇಳ್ಯಾಕ ಹತೈತಿ. ಈ ಅಡಕಸಿಬಿ ಮಳಿ ನಿಲ್ಲು ಲಕ್ಷಣದಾಗೇನ ಕಾಣೊಲ್ದು. ಛತ್ರಿ ಅದೇಟ ವಜ್ಜೆ ಅಕ್ಕಿತ್ತ ನನಗ? ಬ್ಯಾಗ್ನ್ಯಾಗ ಒಕ್ಕೊಂಡಿದ್ರ ಅನುಕೂಲ ಅಕ್ಕಿತ್ತ. ಈಗ ಅನ್ಕೊಂಡ್ರ ಆಗುದಾದ್ರೂ ಏನ? ಹೋಗಬೇಕೀಗ ಮಳ್ಯಾಗ ತೋಯಿಸ್ಕೊಂಡ.

(ಬಸ್ ಇಳದಾಕಿನ, ಬರ ಬರ ದೊಡ್ಡ ಹೆಜ್ಜಿ  ಹಾಕಿ ರೂಮ್ ಕಡಿ ನಡದಬಿಟ್ಟೆ).

ದರ್ ಸರ್ತಿ, ವರಾಂಡದಾಗ ಗೀತ, ಇಂದ್ರ ಮತ್ತ ಸವಿತವ್ವಕ್ಕ ಕೇರಮ್ ಆಡಕೊಂಡ ಭಾವಿಕಟ್ಟಿಗಿ ಕೇಳು ಹಾಂಗ ಜೋರ್ ಜೋರ್ ಆವಾಜ್ ಮಾಡವರು. ಇವತ್ತ ಮಳಿ ಸಲುವಾಗಿ ಎಲ್ಲಾರ ಮನಿ ಬಾಗಲ ಮುಚ್ಚಿ ಬಿಟ್ಟಿದ್ವು. ವರಾಂಡೆಲ್ಲ ಭಣಭಣ ಅಂತಿತ್ತ.

ಹೆಗಲಿಗೊಂದು ಬ್ಯಾಗ್, ಕೈಯಾಗೂ ಒಂದು ಚೀಲ. ಚೀಲದಾಗ ಮೂರ್ನಾಲ್ಕ್ ದಪ್ಪ ದಪ್ಪ ಬುಕ್ಕ ಹಿಡಕೊಂಡ ಮಳ್ಯಾಗ ತೋಯಿಸ್ಕೊಂಡ್ ಬ್ಯಾರಿ ಬರುದಕ ನನಗೂ ಸಾಕ ಸಾಕಾಗಿತ್ತ.
ಅಲ್ಲೆ ವರಾಂಡದ ಒಂದ ಮೂಲಿಗಿ ಚಪ್ಪಲ ಬಿಡುದ  ನೋಡಿ ಸವಿತಕ್ಕ ಹೇಳಿದ್ಳು, "ಚಪ್ಪಲ ಮ್ಯಾಲ ಎತ್ತಿಡ್ರಿ. ಆ ಗೌಡ್ರ ನಾಯಿ ರಾತ್ರಿ ಇಲ್ಲೆ ಮಲಗಿರ್ತದ. ಚಪ್ಪಲ್ ಸಿಕ್ರ ಕಡದ ಹಾಕ್ಕದ". ಹೌದೇನ ಸವಿತಕ್ಕ?  ಅದಕ್ಕೇನ ಅಂಥ ರೋಗವಾ ಹವಾಯಿ ಕಡಿಯುದು?

(ಬೈಕೊಂತ ಬರಗ್ಗನ ಚಪ್ಪಲ ತಗದು ಮ್ಯಾಲ ಪಳಿ ಸಂದ್ಯಾಗ ಎತ್ತಿಟ್ಟ್ಯ).

ಅರ್ಧ ಮುಂದಕ ಮಾಡಿದ ಬಾಗಲ ಹಂಗ ಸಲ್ಪ್ ನೂಕಿ ಒಳಗ ಹೆಜ್ಜಿ ಇಡುದುಕ ಇಂದ್ರಿ ಕಂಡಳು. ನನ್ ಹೊಸಾ ಚಾಪಿ ಹಾಸಿಕೊಂಡ ತನ್ನದ ಬಾಯಿಬಿಟ್ ತಲಿದಿಂಬ ತಲಿ ಬುಡಕ ಇಟಗೊಂಡ್ ಹಣಿಮ್ಯಾಲ ಕೈ ಇಟ್ಟ ಮಲಗಿದ್ಳು. ಅಲ್ಲೇ ತಲಿದಿಂಬಿಗಿ ಆಣಿಸಿ ಅಮೃತಾಂಜನ್ ಬಾಟ್ಲಿನೂ ಹೊಟ್ಟಿ ನೆಲಕ ಹಚ್ಚಿ ಬಾಯಿ ತೆರಕೊಂಡ ಉಳ್ಯಾಡ್ತಿತ್ತ. ಮೂರುಸಂಜಿಗಿ ದೀಪ ಹಚ್ಚು ವ್ಯಾಳೆದಾಗ ಹಿಂಗ ಮಲಗಿರು ಗತ್ತ ನೋಡಿ ನನಗೇನ ಆಕಿ ನಿದ್ದಿ ಬಂದ ಮಲಗ್ಯಾಳ ಅಂತ ಅನಿಸ್ಲಿಲ್ಲ.

ಚಂದ್ರಕಲಾನ ಮದ್ವ್ಯಾಗ ಇಂದ್ರ ಚಟಪಟ ಅಂತ ಒಳೆ ಓಡಾಡಿ ಕೆಲಸ ಮಾಡಿದ್ಳಂತ, ಅಕ್ಕನ ಮದವಿ ಆದ ಮ್ಯಾಲ ಊರಮನಿಗೆಲ್ಲ   ಓಡ್ಯಾಡಿ ಬುತ್ರೊಟ್ಟಿ ಬೀರಿದಳಂತ, ಅಕ್ಕ ಭಾವನ ಕೂಡ ಗಾಡ್ಯಾಗ ದೇವರಿಗೂ ಹೋಗಿ ಬಂದ್ಳಂತ. ನಮ್ಮ್ ಮಂದಿ ನಮ್ಮ್ ಮಕ್ಳ ಅಂತ ಹಚಕೊಂಡ ಮಾತಾಡವಳಂತ. ಇದನೆಲ್ಲ ಕೇಳಿದ ಪೂಜೇರಿ ಮಾವಗಂತೂ ಇಂದ್ರಿ ಅಂದ್ರ ಒಳೆ ಖುಷಿ. ನಮ್ಮ ಉಮೇಶಿಗಿ ಅಕಿನ ತಗಲ ಹಾಕುನು ಅಂತ ಅಂವೂ ಒಂದ್ ಕಪೆ ಹೇಳಿದ್ದಂತ. ನಾನೂ ಕೇಳಿದ್ ಸುದ್ದಿ.

ಚಂದ್ರಕಲಾನ ತಂಗಿ ಇಂದ್ರ ಭಾಳ ಶ್ಯಾನ್ಯಾಳ. ಅಷ್ಟ ಬೆರಿಕ್ಯೂ ಅದಾಳ. ಅದೇನೋ ಸ್ಟಾಪ್ ನರ್ಸ್ಬಾಯಿ ಸಾಲಿ ಮುಗಸಿ ಅಲ್ಲೆಲ್ಲೊ ಖಾಸಗಿ ಸಂಸ್ಥಾದಾಗ ಕೆಲಸ ಮಾಡ್ತಾಳ. ಪಗಾರನೂ ಒಳೆ ದಮ್ಮ ಐತಿ. ನಮ್ಮ ಉಮೇಶಿಗಿ ಇಕಿ ಸರಿ ಹೊಕ್ಕಾಳ. ಮುಂದಿನ ವರಸ ವಾಲಗಾ ಊದಿಸಿದ್ರ ಹ್ಯಾಂಗ ಆದೀತು? ಚಂದ್ರಕಲಾನ ಅತ್ತಿ ತನ್ನ ನೆಗ್ಯಾನಿ ಹಂತೇಕ ಹೇಳ್ಕೊಂಡ ಕುಡೆ, ನಮ್ಮ ಚಂದ್ರಕಲಾನ ತಂಗಿ? ಗುಂಡನ ಮಾರಿ, ಸಬಳಾನ ಮೈ. ಮಾರಿಗೆಲ್ಲ ಥೇಟ್ ಅವರಪ್ಪನ ಹಾಂಗ ಭಲೆ ಚಂದ ಐತಿ ಹುಡುಗಿ. ನಮ್ಮ ಉಮೇಶಿಗಿ ಹೇಳಿ ಮಾಡಿಸಿದಂಗ. ಅಲ್ಲದ ಚಂದ್ರಕಲಾಗ ಕೆಲಸ ಅಷ್ಟ್ ನೀಗುದಿಲ್ಲ ಇಂದ್ರಿ ಹಂಗ ಹಿರೆ ಮನಷಾಳಂಗ ಜವಾಬ್ಧಾರಿ ಹೊರುದು ಚಂದ್ರಕಲಾಗ ಬರುದಿಲ್ಲ. ಮನ್ಯಾಗ ಏನರ ಹೆಚ್ಚ ಕಡಿಮಿ ಆದರ ಅಕ್ಕ-ತಂಗಿ ಇಬ್ಬರೂ ಹೊಂದಿಸಿಕೊಂಡ ಹೊಕ್ಕಾರ. ಆಗಲಿವಾ ಎಕ್ಕಾ. ಮುಂದಿನ ವರ್ಸ್ ಮನಿ ತುಂಬಿಸಿಕೊಳ್ಳು ಕಾರ್ಯ ನಡಸೂನು ಅಂದಿದ್ಳಂತ.

ಹುಡುಗನ ಕಡೆಯವರು ನೋಡಾಕ ಬರ್ತಾರು ಅನ್ನು ಸುದ್ದಿ ಇಂದ್ರಿ ಕಿಂವಿ ಮ್ಯಾಲ ಬಿದ್ದಾಗಿಂದ ಇಂದ್ರಿ ಕಾಲ ನೆಲದ ಮ್ಯಾಲ ನಿಂತಿಲ್ಲ. ಅದೇನೇನೊ ಸುಡಗಾಡ ಕ್ರೀಮ್ ಗೀಮ್ ಹಚಗೊಂಡ್ ವಳೆ ಛಂದ ಕಾಣಾಕ ಹತ್ಯಾಳ. ಲಗ್ನ ಆದಮ್ಯಾಲ ಫೋನ್  ಗೆಳ್ಯಾನ ರಗಳಿ ಬ್ಯಾಡ್ ಅಂತ ಕೋಳಿ ಜಗಳಾನ ದ್ವಾಡದ ಮಾಡಿ ಅವನ ಕೂಡ ಮಾತಬಿಟ್ಟ ಸಿಮ್ ಚೇಂಜ್ ಮಾಡಿ ಬಿಟ್ಟಾಳ. ಈಗ ಕಮ್ಮಗ ತಿಂದುಂಡ ಕಣ್ತುಂಬ ನಿದ್ದಿ ಮಾಡಿ ಕನಸಿನ್ಯಾಗೂ ಉಮೇಶ್ ಉಮೇಶ್ ಅಂತ ಬಡಬಡಸ್ಕೋಂತ ಆರಾಮ್ ಅದಾಳ.

ಇಂದ್ರನ ಅಪ್ಪ ಗುರುವಾರ ದಿನ ಫೋನ್ ಮಾಡಿ, "ಚಂದ್ರಕಲಾನ ಅತ್ತಿ ಮಾವ ನೋಡಾಕ ಬರ್ತಾರಂತ ಈ ಐತಾರ. ಶನಿವಾರ ಡ್ಯೂಟಿ ಮುಗಿಸ್ಕೊಂಡ ಮದ್ಯಾನ್ ಯಾಡರ ಬಸ್ ಹತ್ತಿ ಬಿಡು ಮಗಳ" ಅಂತ ಹೇಳಿದ್ ನೆನಪಾತು. ಅದಕ್ ಈಕಿನೂ ಹೂಂ ಆತೆಪ್ಪ ಅಂತ ಗೋಣ್ ಹಾಕಿದ್ಳು.

ಅಂತೂ ಇಂತೂ ತನ್ನ ಬದುಕಿಗಿ ಒಂದ್ ನೆಲಿಗಾಣು ಟಾಯಮ್ ಬಂತಂತ ಇಂದ್ರಿ ಭಾಳ ಖುಷ್ಯಾಗ ಇದ್ಳು. ಶನಿವಾರ ದಿನ, ನಿಂತ್ರು ಉಮೇಶಿ. ಕುಂತ್ರು ಉಮೇಶಿ. ಯಾವಾಗ ಯಾಡ ಆಗಿತ್ತು. ಯಾವಾಗ ಇಲ್ಲಿಂದ ಹೋದೇನು. ಯಾವಾಗ ಉಮೇಶಿ ಮಾರಿ ನೋಡೇನು ಅಂತ ಒಂದ್ ಸವ್ನಿ ಚಡಪಡಿಸ್ಕೋಂತನ ಮನಿಗಿ ಹೋಗಿದ್ಳು. ಇವತ್ತ ಇಕಿ, ಮೈಯಾಗ ಉಷಾರಿಲ್ಲ ಅನ್ನು ಗತ್ತ ಹಾಕಿ ಮಲಗಿದ ನೋಡಿ ನನಗ ಯಾಕೋ ಸಮಾಧಾನ ಆಗಲಿಲ್ಲ. 
"ಯಾಕ ಲೇ ಇಂದ್ರಿ, ಹಿಂಗ ಮಲಗಿ? ಮೈಯಾಗ ಉಷಾರಿಲ್ಲ?". (ಅವಳ ಹಣೆ ಮತ್ತು ಕೊರಳ ಸುತ್ತ ಕೈಯಿಡುತ್ತ.)
"ಹೂಂ… ಏನೋ ಸಲ್ಪ್ ತಲಿ ನೂಸಿದಂಗ ಆಗಾಕ ಹತೈತಿ".
"ಅದ್ ಬಿಡ, ನಿನ್ ನೋಡಾಕ ಬರಾಕ ಹತ್ಯಾರ ಅಂತ ಮನಿಗಿ ಹೋಗಿದ್ಯಲ್ಲ. ಅದೇನ ಆತು?".
….

"ಯಾಕ ಸುಮ್ಮ ಆದ್ಯ ಲೇ..? ಏನ್ ಆತ? ಕೊಡತಗೋಳೋದ ಬಗಿ ಹರಿಲಿಲ್ಲ ಏನ?".

"ಅಲ್ಲಿ ಮಟಾ ಮಾತ ಮುಂದವರಿಲಿಲ್ಲ ಬಿಡಲೆ".

"ಐ! ಹಾಂಗ ಅಂದರ ಏನ? ಯಾಕ ದೈದ್ ಮಂದಿ ಕೂಡಿರಲಿಲ್ಲ?".

"ಇಲ್ಲ. ಅವನ ಜಾತಕ ನನ್ ಜಾತಕ ಹೊಂದತದೋ ಇಲ್ಲ ಅನ್ನುದನ್ ನೋಡಾಕ ಐನಾರ ಮಂಟೈ ಸ್ವಾಮಿ ಮನಿಗಿ ಹೋಗಿದ್ವಿ. ಜಾತಕ ಏನೋ ಕೂಡಿ ಬಂತ್. ಆದರ ನನಗೇನೋ ನಾಗದೋಷ ಐತಿ ಅಂತ. ಪರಿಹಾರ ಮಾಡಬೇಕು ಅಂದರ ಅದೆಷ್ಟೋ ಮಂಗಳಾರ ಒಪ್ಪತ್ ಮಾಡಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಗಿ ನಡ್ಕೋಬೇಕಂತ. ಒಪ್ಪತ್ತಿನ ದಿನಾ ಮುಗುದ್ ಮ್ಯಾಲ ಕುಕ್ಕೆ ಸುಬ್ರಹ್ಮಣ್ಯಗ ಹೋಗಿ ಅದೇನೋ "ಆಶ್ಲೇಷಾ ಬಲಿ" ಅಂತ ಅದನ ಬ್ಯಾರಿ ಮಾಡಬೇಕಂತ.  ಒಪ್ಪತ್ ಇದ್ದಾಗ ಕೋಳಿ, ಕುರಿ,ತತ್ತಿ, ಮೀನ ಮಟನ್ ಯಾವ ಕಪ್ಪ ಅಡಗಿನೂ ತಿನಬಾರದಂತ.

ಹಂಗರ.. ಇನ್ ಮಾಗಿಂದ ನಾನ್ವೆಜ್ ಮಾಡಿದರ ನಿನ್ನ ಪಾಲಿಂದೆಲ್ಲ ನಮಗ ಅಂದಂಗಾತು? (ತಮಾಷೆ ಮಾಡುತ್ತ).

ಉಣ್ಣವರ ಮುಂದ ಹೇಲವರ ಕುಂತ್ರಂತ. ನನ್ನ ಚಿಂತಿ ನನಗ. ನಿನಗ ತಿನ್ನುದ ಹತ್ತೆದೆಲ್ಲ ಕಸಬರಗಿ.. (ಬೈದ್ಳು).

ಐ ಕತಿಯ! ಚಾಷ್ಟಿ ಮಾಡಿನ್ಯಳ. ಹೂಂ… ಮತ್ ಏನೇನ ಹೇಳಿದರ?.

ಅದೆಲ್ಲ ಮುಗ್ಯುತಕಾ ಯಾವ ಶುಭ ಕಾರ್ಯ ನಡ್ಯು ಹಾಂಗಿಲ್ಲ ಅಂತ.

ಹಂಗಾರ.. ಮತ್ತೊಂದ ವರಸ ವನವಾಸ?

ವನವಾಸ ಹಾಂಗಿರಲಿ. ಉಮೇಶಿ ಮನ್ಯಾನವರಿಗಿ ಅಲ್ಲಿಮಟಾ ನಿಲ್ಲಾಕಾಗುದಿಲ್ಲಂತ. ಕೈ ಚೆಲ್ಲಿದ ಹಾಂಗ ಮಾಡಿದರು ಅವರು. ಚಂದ್ರಕಲಾನ ಯಾಡನೇ ಮೈದನ ಲಸಮಣ್ಣ(ಲಕ್ಷ್ಮಣ)ಶಾರದಾಗ ನೌಕ್ರಿ ಮಾಡ್ತಾನ. ಅವನಿಗಿ ಮದವಿ ವಯಸ್ ಮೀರಿ ಭಾಳ ವರಸ ಆತ. ಈ ವರಸ ಅಂವಂಗ ಲಗ್ನ ನೇಮಕಿ ಮಾಡ್ಯಾರ. ಕೊಡತಗೊ ಕಾರ್ಯನೂ ಮುಗಸ್ಯಾರ. ಗೊತ್ತಿ ಆದರ ಆಗೊಲ್ದ್ಯಾಕ ಖರ್ಚಿನ್ಯಾಗ ಖರ್ಚ್ ಹೊಕ್ಕದ ಒಂದ್ ಹಂದರದಾಗ ಇಬ್ಬರುದೂ ಅಕ್ಕಿ ಕಾಳ ಒಗದ ಸಲ್ಪ್ ಭೇಷಗನ ಖರ್ಚ್ ಮಾಡಿದರಾತು ಅಂತ ಅಕ್ಕಲ್ ಹಾಕ್ಯಾರ. ಇಂಥದರಾಗ ನನ್ ಸಲುವಾಗಿ ಕಾಯು ಮಾತ ಸುಳ್ಳ ಲೇ.

ಐ ನಿನ್ ಕರಗಾಲ ಬಾಯಿದ! ಹಂಗ ಅನಬ್ಯಾಡ. ಒಳತ್ ಅನ್ನ. ಎಲ್ಲ ಒಳ್ಳೆದ ಆಕೈತಿ. ಅಕಿನ ನಮ್ ಕಿರಿ ಸೊಸಿ ಅಂತ ನಿಮ್ ಅತ್ತಿ ಮಾಂವ ಊರ ತುಂಬ ಹೇಳಕೋಂತ ಅಡ್ಡಾಡ್ಯಾರ.ಉಮೇಶಿ ಓದಿದವ ಅದಾನ. ತಿಳದಾಂವ ಅದಾನ. ಅವನ ಕೂಡ ಮಾತಾಡಿದೇನು?

ಏ, ಇಲ್ಲವಾ.. ಮದವಿ ಆಗುಮಟಾ ಹಂಗ ಮಾತಾಡಾಕ ನಮ್ ಮನ್ಯಾಗ ಆಗ್ಲಿ ಅವರ ಮನ್ಯಾಗ ಆಗಲಿ ಚಾಲಿ ಇಲ್ಲ. ಈಗ, ಅವರಿಗೆ ಆಗ್ಲಿ ಇವರಿಗೆ ಆಗ್ಲಿ ಗೊತ್ತಾತ ಅಂದರ ಮಾಡಬಾರದ್ದ ಏನೋ ಮಾಡಿನಿ ಅಂತ ನನ್ ಕಡದ ಹೆಡಿಗಿ ತುಂಬತಾರ. ನಿನ್ನಿ ಅಕ್ಕಾ ಪೋನ್ ಮಾಡಿದ್ಳು. ಅಂಗೈಯಾಗ ಬೆಣ್ಣಿ ಹಿಡದ ಊರೆಲ್ಲ ಸುತ್ತುದ್ಯಾಕ ಅಂತ ಮಾಮಾ ಜಲ್ಲ್ ಬಿಟ್ಟ ಕುಂತಿದ್ದ. ಈಗ ಅಂವೂ ಕಂಗಾಲ ಆಗ್ಯಾನ. ಅವರಿವರಿಗಿ ಪೋನ್ ಹಚ್ಚಿ ಹೆಣ್ಣ ಕೇಳಾಕ ಹತ್ಯಾನ. ನೀ ಉಮೇಶಿ ಆಸೆ ಬಿಟ್ಟಬಿಡು ಅಂತ ಸಮಾಧಾನ ಹೇಳಿದಳು.

ಆದದ್ದೆಲ್ಲ ಒಳ್ಳೆದಕ್ಕ ಆಗೈತಿ ಅಂತ ತಿಳ್ಕೊ. ನೀ ಏನ್ ಅನ್ಪಡ್ ಗಂವಾರ? ಈ ಸದ್ದೆ ನಿಮ್ ಅಪ್ಪ ವರಾ ಹುಡುಕಾಕ ಸುರು ಮಾಡಿದರ ನಾ ಮುಂದ ತಾ ಮುಂದ ಅಂತ ಹೆಣ್ಣ ಕೇಳಾಕ ಬರತಾರ. ಹುಚ್ ಮಂಗ್ಯಾ ಹಳೆ ಹುಚ್ ಮಂಗ್ಯಾ. ಮುಗಿಲ್ ಕಡಕೊಂಡ ತಲಿ ಮ್ಯಾಲ ಬಿದ್ದಂಗ ಆಡ್ತಿದಿ. ಆ ಇಚಾರ ಅಲ್ಲೆ ಬಿಡ. ಇಂವ ಅಲ್ಲ ಅಂದ್ರ ಇನ್ನೊಬ್ಬ.
ಮುಂಜಾನಿಂದ ಡಿಗ್ಗಿ ಭಾಂಡೆ ವಟ್ಯಾವ ಬಚ್ಚಲದಾಗ. ನೀ ಮುಸುರಿ ತಿಕ್ಕ. ನಾ ಅಂಗಳ ಕಸಾ ಹೊಡದ, ಕೈಕಾಲ ಮೋತಿ ತೊಳದ ದೇವರ ಮುಂದ ದೀಪ ಹಚ್ಚತನ.
ಆ ಮ್ಯಾಲ ಚಾ ಕಾಸೂನು.

ಸುಜಾತಾ, ನನಗ ಉಮೇಶಿ ಚಿಂತಿ ಇಲ್ಲ. ನಮ್ಮಪ್ಪನ ಚಿಂತ್ಯಲೆ. ಉಮೇಶಿ ಭಾಳ ತಿಳದಾಂವ ಅದಾನ. ತಿಂಗಳ ಪಗಾರದಾಗ ಒಂದಿಷ್ಟ್ ಅಪ್ಪಗ ಕೊಡತನ ಅಂದಿದ್ದರ ಹೂಂ ಅನ್ನುವಷ್ಟ ದೊಡ್ಡತನ ಐತಿ ಅವನ ಹಂತೇಕ. ಅಕ್ಕಾನ ಲಗ್ನಕ ಅಂತ ಇದ್ದ ಯಾಡ ಎಕರೆದಾಗ ಒಂದ್ ಎಕರೆ ಮಾರಿದ್ದಾಗೈತಿ. ಕೈಯಾಗೊಂದಿಷ್ಟ ಇದ್ದ ದುಡ್ಡುನೂ ಮನ್ನಿ ಅವ್ವಾನ ಕಣ್ಣ ಆಪರ್ಷನಕ ಖರ್ಚ್ ಮಾಡಿ ನಮ್ಮಪ್ಪ ಬರಗೈಯಾಗ ಕುಂತಾನ. ನಾ ದುಡದದ್ದ್ ನನ್ ಹೊಟ್ಟಿಗ್ಯ ಬಟ್ಟಿಗ್ಯ ಆಗಿ ಉಳದ್ಯಾಡ ದುಡ್ ಕೂಡಿಸಿಟ್ಟಿದ್ದ ಅಷ್ಟ ಖರೆ. 
ಇಂದ್ರನ ಲಗ್ನಕ ಅದೊಂದ ಎಕರೆ ಮಾರಿ ಬಿಡುನ ಅಂತ ಅವ್ವನ ಮುಂದ ಅಪ್ಪ ಹೇಳುದ ಕೇಳಿ ಹೊಲ ಮಾರುದ ಏನ ಬ್ಯಾಡೆಪ್ಪ. ನನ್ ಹೆಸರಿನ್ಯಾಗ ಸಾಲ ತಗಿತನ. ತಿಂಗಳ ಒಂದಿಷ್ಟಷ್ಟ ನನ್ನ ಪಗಾರದಾಗ ಮುರಕೋಂತ ಹೊಕ್ಕಿನಿ ಅಂದಿದ್ಯ.

ಹಂಗಟ್ ಹಿಂಗಟ್ ಮಾಡಿ ಅಪ್ಪಗ ಧೈರ್ಯ ಹೇಳಿ ಹೊಲಾ ಅವರ ಉಣ್ಣು ಹಾಂಗ ಮಾಡಿದರಾತು ಅನ್ನು ಥೇರಿ ಇಟಗೊಂಡಿದ್ಯ. ಈಗ ನೋಡಿದರ ಹಿಂಗ್ ಆತಲ್ಲ ಸುಜಾತ.

ನಾಗದೋಷ ಐತಿ ಅನ್ನು ಸುದ್ದಿ ಕೇಳಿದಾಗಿಂದ ನಮ್ಮಪ್ಪ ಮತ್ತಷ್ಟ ನರಮ್ ಆಗಿ ಬಿಟ್ಟಾನ. ಕುಂತಂತವ ಬರಗ್ಗನ ಎದ್ದಾಂವನ ಲಮಾನ್ಯಾರ ಲಚ್ಚಿ ಮನಿ ಕಡಿ ಹೆಜ್ಜಿ ಹಾಕಿದ್ದ. ರಾತ್ರಿ ಬಾರಾದಾಗ ಕುಡದ ದಾರ್ಯಾಗ ಬಿದ್ದ ಅಪ್ಪಾನ ಪುಚ್ಚಳ್ಳೆರ ಸಿದ್ಲಿಂಗಪ್ಪ ಕಾಕ ಮನಿ ತಕಾ ಕರ್ಕೊಂಡ್ ಬಂದು ಬಿಟ್ ಹ್ವಾದ. ನಸಕನ್ಯಾಗ ಎದ್ದ ಡ್ಯೂಟಿಗಿ ಬರುವಾಗ ಹೋಗಿ ಬಾರ ಮಗಳ ಅಂತ ಒಂದ್ ಮಾತೂ ಹೇಳಲಿಲ್ಲ. ಅಪ್ಪಗ ನನ್ನ ಮ್ಯಾಲ ಬ್ಯಾಸರೋ, ತನ್ನ ಮ್ಯಾಲ ಬ್ಯಾಸರೋ ಇಲ್ಲ ಬದಕಿನ ಮ್ಯಾಲ ಬ್ಯಾಸರೋ ಒಂದೂ ತಿಳಿವಲ್ದು ಅಂದ್ಳು.

ಟೈಮ್ ಕೆಟ್ಟ ಐತಿ ಅಂತ ಸುಮ್ ಆಗ. ಭಾಳ ಚಿಂತಿ ಮಾಡಬ್ಯಾಡ. ತಗೊ ಚಾ ಕುಡಿ. ಡಬ್ಯಾಗ ಬಿಸ್ಕಿಟ್ ಅದಾವ ಬೇಕಂದರ. ತಟಗ ಲೆಕ್ಪತ್ರದ ಕೆಲಸ ಐತಿ. ಮಾಡಿ ಮುಗಸ್ತನ ಅಂತ ನಾ ಹೇಳಿದ್ದನ್ನೂ ಕಿಂವ್ಯಾಗ ಹಾಕೊಳ್ದ, ಕಿಡಕ್ಯಾಗ ಇಟ್ಟಿದ್ದ ಹಳಿ ಸಿಮ್ ತಗದ ಪೋನಿನ್ಯಾಗ ಹಾಕುದರಾಗ ಮಗ್ನ ಆಗಿದ್ಳು.

ರುಕ್ಮಿಣಿ ಎನ್.

****

ಕನ್ನಡದ ಬರಹಗಳನ್ನು ಹಂಚಿ ಹರಡಿ

6 thoughts on “ನಮ್ಮ ಇಂದ್ರಿ ಕತಿ: ರುಕ್ಮಿಣಿ ನಾಗಣ್ಣವರ

  1. ನಾಗದೋ‍ಷ ಅಂತ ಹೇಳಿ ಒಬ್ರ ಬಾಳೇ ಹಾಳು ಮಾಡಿದಂಗಾತು. ಉತ್ತಮ ನಿರೂಪಣೆ ರುಕ್ಮಿಣಿಯವರೆ. ಧನ್ಯವಾದಗಳು

  2. ಇಂದ್ರಿ ಕಥೆ ಆರಾಮಾಗಿ ಓದಿಸಿಕೊಂಡು ಹೋಗ್ತದ. ಭಾಷೆ ಅಂತೂ ಬಾಳ ಸೊಗಸಾಗಿ ಬಂದಿದೆ. ಕಥೆ ಹರಹು ಇನ್ನಷ್ಟು ಬೇಕು ಅನಿಸ್ತು,

     

  3. ರೀ ನಮಸ್ಕಾರ ರೀ ಚಂದ ರೀ ನಾ ಕಾಯಾಕತಿದ್ನಿ ಹೀಂತಾ ಕಥಿಗಳ ಸಲುವಾಗಿ ಬಾಳ ಛೊಲೊ ಆತರಿ ಅಕ್ಕಾರ್…..

Leave a Reply

Your email address will not be published. Required fields are marked *