ನಮ್ಮ ಅಣ್ಣಾವ್ರು ಅಂದರೆ ಕಡಿಮೇನಾ?: ಶ್ರೀಧರ್ ಬನವಾಸಿ

ಭಾರತೀಯ ಸಿನಿಮಾದಲ್ಲಿ ಅನೇಕ ಸೂಪರ್‌ಸ್ಟಾರ್‌ಗಳು, ಕಲಾವಿದರು ಬಂದು ಹೋಗಿದ್ದಾರೆ. ಈಗಲೂ ಬರುತ್ತಲೇ ಇದ್ದಾರೆ. ಆದರೆ ನೂರು ವರ್ಷದ ಭಾರತೀಯ ಸಿನಿಮಾ ಇತಿಹಾಸದಲ್ಲಿ ಡಾ. ರಾಜ್‌ಕುಮಾರ್ ಹೇಗೆ ವಿಭಿನ್ನ ಅನ್ನುವುದಕ್ಕೆ ಒಂದು ಮಾತನ್ನು ನೆನಪಿಸಿಕೊಳ್ಳಲೇಬೇಕು. ಈ ಮಾತನ್ನು ಹೇಳಿದವರು ಬೇರೆ ಯಾರೂ ಅಲ್ಲ. ತೆಲುಗಿನ ಮೇರುನಟ ನಾಗೇಶ್ವರರಾಯರು (ತೆಲುಗು ಸೂಪರ್‌ಸ್ಟಾರ್  ನಾಗಾರ್ಜುನ ಅವರ ತಂದೆ)  ರಾಜ್‌ಕುಮಾರ್ ಮೇಲೆ ಅಪಾರ ಗೌರವವನ್ನು ಹೊಂದಿದ್ದ ನಾಗೇಶ್ವರರಾಯರು, ವೈಯಕ್ತಿಕವಾಗಿ ಅವರದ್ದು ಸುಮಾರು ೫೦ ವರ್ಷಗಳ ಸ್ನೇಹವಾಗಿತ್ತು. ರಾಜ್‌ಕುಮಾರ್ ಬೇಡರ ಕಣ್ಣಪ್ಪ ಸಿನಿಮಾದಲ್ಲಿ ಅಭಿನಯಿಸುವಾಗ ನಾಗೇಶ್ವರರಾಯರು ‘ದೇವದಾಸ್’ ಸಿನಿಮಾ ಮೂಲಕ ನಾಯಕರಾಗಿ ಮಿಂಚಿದ್ದರು. ಮೊದಲ ಸಿನಿಮಾದಲ್ಲೇ ಯಶಸ್ಸನ್ನು ಪಡೆದು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ನಾಯಕನಟರಾಗಿದ್ದರು. ಮೊದಲ ಬಾರಿ ನಾಗೇಶ್ವರರಾಯರನ್ನು ರಾಜ್‌ಕುಮಾರ್ ಭೇಟಿ ಮಾಡಿದಾಗ, ರಾಯರು, ಅಣ್ಣಾವ್ರನ್ನು ಪ್ರೀತಿಯಿಂದ ಮಾತನಾಡಿಸಲೇ ಇಲ್ಲ. ರಾಜ್‌ಕುಮಾರ್‌ಅವರಿಗೆ ತುಂಬಾ ನಿರಾಶೆಯಾಗಿತ್ತು. ಹೀಗೆ ಮದ್ರಾಸ್‌ನಲ್ಲಿ ಕನ್ನಡ, ತೆಲುಗು ಚಿತ್ರರಂಗ ನೆಲೆಸಿದ್ದಾಗ ಅವರ ಭೇಟಿ ಪುನಃ ಪುನಃ ಆದಾಗ, ಅಣ್ಣಾವ್ರು, ರಾಯರಿಗೆ ತುಂಬಾ ಹತ್ತಿರವಾದರು.

ರಾಯರ ಅನ್ನಪೂರ್ಣ ಸ್ಟುಡಿಯೋಸ್‌ನ ಪ್ರಾರಂಭೋತ್ಸವಕ್ಕೆ ರಾಜ್‌ಕುಮಾರ್ ಹೋಗಿದ್ದರು. ಅವರ ಕುಟುಂಬದ ಯಾವುದೇ ಕಾರ್‍ಯಕ್ರಮ ಇದ್ದರೂ, ಅಣ್ಣಾವ್ರಿಗೆ ಒಂದು ಆತಿಥ್ಯ ಇದ್ದೇ ಇರುತ್ತಿತ್ತು. ಒಮ್ಮೆ ‘ಪ್ರೇಮಾಭೀಷೇಕಂ’ ಚಿತ್ರದ ರಜತಮಹೋತ್ಸವ ಸಮಾರಂಭಕ್ಕೆ ರಾಜ್‌ಕುಮಾರ್ ಅವರೇ ಮುಖ್ಯ ಅತಿಥಿಗಳಾಗಿದ್ದರು. ರಾಜ್‌ಕುಮಾರ್ ಅವರನ್ನು ಬರಮಾಡಿಕೊಳ್ಳಲು ಮೇರು ನಟ ನಾಗೇಶ್ವರಾಯರು ಏರ್‌ಪೋರ್ಟ್‌ಗೆ ಹಾರ ಹಿಡಿದು ಕಾರಿನಲ್ಲಿ ಬಂದಿದ್ದರು. ಅದು ರಾಜ್‌ಕುಮಾರ್ ಅವರಿಗೆ ತುಂಬಾ ಮುಜುಗುರವಾಯಿತು. ಹೀಗಿದ್ದರೂ ಅದನ್ನು ತೋರಿಸಿಕೊಳ್ಳಲಿಲ್ಲ. ರಾಯರು, ರಾಜಕುಮಾರ್‌ಅವರನ್ನು ಅಪ್ಪಿಕೊಂಡು ಅವರಿಗೆ ಹಾರ ಹಾಕಿ ತಮ್ಮ ಕಾರಿನಲ್ಲೇ ಕರೆದುಕೊಂಡು ಹೋದರು. ರಾಜ್‌ಕುಮಾರ್‌ಅತಿಥಿಯಾಗಿ ಭಾಗಿಯಾಗಿದ್ದ ಈ ಕಾರ್‍ಯಕ್ರಮ ತುಂಬಾ ಚೆನ್ನಾಗಿ ಆಯಿತು. ಕಾರ್‍ಯಕ್ರಮದ ಕೊನೆಯಲ್ಲಿ ನಾಗೇಶ್ವರರಾಯರು ರಾಜ್‌ಕುಮಾರ್ ಕುರಿತು ‘ನನ್ನ ಪ್ರಕಾರ ರಾಜ್‌ಕುಮಾರ್ ಮಾತ್ರ ವಜ್ರ ಮತ್ತು ಚಿನ್ನ ಸೇರಿಕೊಂಡ ವ್ಯಕ್ತಿ’ ಅಂತ ಹೇಳುತ್ತಾರೆ.

ಸಾಮಾನ್ಯವಾಗಿ ನಾಗೇಶ್ವರರಾಯರು ಯಾರನ್ನೂ ಹೊಗಳದಂತಹ ವ್ಯಕ್ತಿ. ಅಂತಹುದರಲ್ಲಿ ರಾಜ್‌ಕುಮಾರ್ ಕುರಿತು ಈ ಮಾತನ್ನು ಹೇಳಿದಾಗ ಹೆಚ್ಚಿನವರಿಗೆ ಅವರ ಮಾತು ಅರ್ಥವಾಗುವುದಿಲ್ಲ. ಚಿನ್ನ ಮತ್ತು ವಜ್ರ ಅನ್ನುವ ಅವರ ಮಾತು ಒಂದು ರೀತಿಯಲ್ಲಿ ರಾಜ್‌ಕುಮಾರ್ ಅವರ ವ್ಯಕ್ತಿತ್ವ ಹಾಗು ಅಭಿನಯಕ್ಕೆ ಹೇಳಿದ ಮಾತಾಗಿತ್ತು. ಒಬ್ಬ ಜನಪ್ರಿಯ ಕಲಾವಿದನಿಗೆ ಒಳ್ಳೆಯ ವ್ಯಕ್ತಿತ್ವ ಇರುವುದಿಲ್ಲ. ಒಬ್ಬ ಒಳ್ಳೆಯ ವ್ಯಕ್ತಿತ್ವ ಹೊಂದಿದವನಿಗೆ ಅಭಿನಯ ಅಷ್ಟು ಒಗ್ಗಿರುವುದಿಲ್ಲ. ಆದರೆ ರಾಜ್‌ಕುಮಾರ್ ಅವರಲ್ಲಿ ಮಾತ್ರ ಈ ಎರಡೂ ಗುಣಗಳನ್ನು ನಾನು ಕಂಡಿದ್ದೇನೆ ಅಂತ ರಾಯರು ಹೇಳಿದ್ದರು. ನಿಜಕ್ಕೂ ರಾಯರು ಹೇಳಿದ್ದು ಮುತ್ತಿನಂತ ಮಾತು.  ‘ಪ್ರೇಮಾಭೀಷೇಕಂ’ ಸಿನಿಮಾದ ಸಮಾರಂಭಕ್ಕೆ ಹೈದರಾಬಾದ್‌ಗೆ ಹೋಗಿದ್ದ ಸಂದರ್ಭದಲ್ಲಿ ರಾಜ್‌ಕುಮಾರ್ ಅವರನ್ನು  ತೆಲುಗು ಹಿರಿಯ ನಟ ಎನ್‌ಟಿರಾಮರಾಯರು ಕೂಡ ಊಟಕ್ಕೆ ತಮ್ಮ ಮನೆಗೆ ಆಹ್ವಾನಿಸಿದ್ದರು. ಸ್ವಭಾವತಃ ಹಠವಾದಿಯಾಗಿದ್ದ ರಾಮರಾಯರು, ರಾಜ್‌ಕುಮಾರ್ ಜೊತೆ ಊಟ ಮಾಡಬೇಕೆಂದು ಬಯಸಿದ್ದರು. ಆದರೆ ಅವರು ಬಂದಿದ್ದು ನಾಗೇಶ್ವರರಾಯರ ಕಾರ್‍ಯಕ್ರಮಕ್ಕೆ.

ರಾಜ್‌ಕುಮಾರ್ ಅವ್ರಿಗೆ ಎನ್‌ಟಿಆರ್  ಮನೆಗೆ ಹೋಗಲೋ ಬೇಡವೋ ಅನ್ನುವ ಸಣ್ಣ ಗೊಂದಲದಲ್ಲಿದ್ದರು. ಇದನ್ನು ಅರ್ಥಮಾಡಿಕೊಂಡ ನಾಗೇಶ್ವರರಾಯರು, ‘ರಾಮರಾಯರ ಮನೆಗೆ ಹೋಗಿ ಊಟ ಮಾಡಿಕೊಂಡು ಬನ್ನಿ, ಅವರು ಕರೆದ ಮೇಲೆ ನೀವು ಹೋಗೋದೆ ಒಳ್ಳೆಯದು, ಇಲ್ಲಾಂದ್ರೆ ಅದೇ ಬೇಸರವನ್ನು ಮನಸ್ಸಿನಲ್ಲಿಟ್ಟುಕೊಂಡಿರುತ್ತಾರೆ’ ಅಂತ ಹೇಳಿ ಕಳುಹಿಸಿದರು. ಸಾಮಾನ್ಯವಾಗಿ ಎನ್‌ಟಿರಾಮರಾಯರು ರಾತ್ರಿ ಬೇಗ ಊಟ ಮಾಡಿ ಮಲಗುವ ಅಭ್ಯಾಸ. ಆದರೆ ಆ ದಿನ  ರಾಜ್‌ಕುಮಾರ್ ನಾಗೇಶ್ವರರಾಯರ ಕಾರ್‍ಯಕ್ರಮ ಮುಗಿಸಿಕೊಂಡು, ರಾಮರಾಯರ ಮನೆಗೆ ಬಂದಾಗ ರಾತ್ರಿ ಹನ್ನೊಂದು ಗಂಟೆಯಾಗಿತ್ತು. ಅಲ್ಲಿಯವರೆಗೂ ತೆಲುಗಿ ದಂತಕತೆ  ಜನಪ್ರಿಯ ನಟ ಎನ್‌ಟಿರಾಮರಾಯರು, ರಾಜ್‌ಕುಮಾರ್‌ಗೋಸ್ಕರ ಮನೆಯ ಹೊರಗಡೆಯೇ ಕಾಯ್ತಾ ಇದ್ದರು. ರಾಜ್‌ಕುಮಾರ್  ಬಂದ ಮೇಲೆ ಅವರನ್ನು ತಬ್ಬಿಕೊಂಡು ಊಟಕ್ಕೆ ಕರೆದುಕೊಂಡು ಹೋದರು. ನಂತರ ದಿನಗಳಲ್ಲಿ ತಮಿಳುನಾಡಿನಲ್ಲಿ ಎಮ್‌ಜಿಆರ್ ಮುಖ್ಯಮಂತ್ರಿಯಾದಂತೆ, ಆಂಧ್ರದಲ್ಲಿ ಎನ್‌ಟಿ ರಾಮ್‌ರಾವ್ ಮುಖ್ಯಮಂತ್ರಿಯಾದರು. ಆಗ ರಾಜ್‌ಕುಮಾರ್ ಅವರನ್ನು ತಿರುಪತಿ ದೇಗುಲದ ಟ್ರಸ್ಟಿಯನ್ನಾಗಿಸಿದ್ದರು.

ರಾಜ್‌ಕುಮಾರ್ ಅನ್ನುವ ನಮ್ಮ ಕನ್ನಡ ವರ ನಟ, ತೆಲುಗಿನ ಮೇರುನಟರುಗಳಾದ ಎನ್‌ಟಿಆರ್ ಹಾಗೂ ನಾಗೇಶ್ವರರಾವ್ ಅವರನ್ನು ತಮ್ಮ ವ್ಯಕ್ತಿತ್ವ ಹಾಗೂ ಅಭಿನಯದ ಮೂಲಕ ಪ್ರಭಾವಿತರಾಗುವಂತೆ ಮಾಡಿದ್ದರು.  ರಾಜ್‌ಕುಮಾರ್ ಅವರಿಗೆ ಅವರ ಸಮಕಾಲೀನ ನಟರಾದಂತಹ ಎಂಜಿಆರ್, ಶಿವಾಜಿ ಗಣೇಶನ್, ಎನ್‌ಟಿಆರ್, ನಾಗೇಶ್ವರಾವ್ ಇನ್ನು ಹಲವು ನಟರುಗಳ ಜೊತೆ ಒಳ್ಳೆಯ ಬಾಂಧವ್ಯವಿತ್ತು. ರಾಜ್‌ಕುಮಾರ್ ಎಂದರೆ ಅವರೆಲ್ಲಾ ತುಂಬಾ ಇಷ್ಟಪಡುತ್ತಿದ್ದರು. ಎಂಜಿಆರ್, ಅಣ್ಣಾವ್ರನ್ನು ‘ತಂಬಿ… ತಂಬಿ…’ ಅಂತಲೇ ಕರೆಯುತ್ತಿದ್ದರು. ಎಂಜಿಆರ್ ಅವರನ್ನು ಭೇಟಿ ಮಾಡಲು ನಿರ್ಮಾಪಕರು, ನಿರ್ದೇಶಕರು ಕಾಯ್ತಾ ಇರೋರು, ನೂರಾರು ಜನರು ಅವರನ್ನು ಭೇಟಿ ಮಾಡಲಿಕ್ಕೆ ಬರುತ್ತಿದ್ದರು. ಎಂಜಿಆರ್‌ಗೋಸ್ಕರ ಇಷ್ಟೊಂದು ಜನ ಕಾಯುತ್ತಿದ್ದರೂ, ಎಂಜಿಆರ್ ಮಾತ್ರ ರಾಜ್‌ಕುಮಾರ್ ಅವರನ್ನು ತಮ್ಮ ರೂಮಿಗೆ ಕರೆಸಿಕೊಂಡು, ಮಾತನಾಡಿಸಿ ಕಳುಹಿಸುತ್ತಿದ್ದರು. ರಾಜ್‌ಕುಮಾರ್ ಅಂದ್ರೆ ಎಂಜಿಆರ್‌ಗೆ ಅಷ್ಟು ಪ್ರೀತಿ ಇತ್ತು.

ಅದೇ ರೀತಿ ಶಿವಾಜಿ ಗಣೇಶನ್ ಅವರು ರಾಜ್‌ಕುಮಾರ್ ಅವರ ಕೆಲವು ಸಿನಿಮಾಗಳನ್ನು ತಮಿಳಿನಲ್ಲಿ ರಿಮೇಕ್ ಮಾಡಿದ್ದರು. ಅದರಲ್ಲಿ ’ಶಂಕರ್‌ಗುರು’ ಸಿನಿಮಾ ಕೂಡ ಒಂದಾಗಿತ್ತು.  ಶಿವಾಜಿ ಗಣೇಶನ್ ತಮಿಳಿನಲ್ಲಿ ಈ ಸಿನಿಮಾ ಮಾಡಿದಾಗ, ಅಣ್ಣಾವ್ರು ನಿರ್ವಹಿಸಿದ್ದ ಆ ಮೂರು ಪಾತ್ರಗಳನ್ನು ಶಿವಾಜಿ ಗಣೇಶನ್ ನಿರ್ವಹಿಸಿದ್ದರೂ, ರಾಜ್‌ಕುಮಾರ್‌ಅವರಷ್ಟು ಅಭಿನಯದ ಮಟ್ಟ ನನ್ನಿಂದ ಮುಟ್ಟಲಾಗಲಿಲ್ಲ ಅಂತ ಹೇಳುತ್ತಿದ್ದರು.

-ಶ್ರೀಧರ್ ಬನವಾಸಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಹಿಪ್ಪರಗಿ ಸಿದ್ದರಾಮ್, ಧಾರವಾಡ
ಹಿಪ್ಪರಗಿ ಸಿದ್ದರಾಮ್, ಧಾರವಾಡ
11 years ago

ವಜ್ರೇಶ್ವರಿಯ ಕೃಪಾಶೀರ್ವಾದದ ಕರುನಾಡಿನ ವಜ್ರಕಿರೀಟದಂತೆ ಕಂಗೊಳಿಪ ಅಭಿಮಾನಿ ದೇವರುಗಳ ಅಣ್ಣ ಡಾ.ರಾಜಕುಮಾರ ಅವರ ಕುರಿತು ಬರೆದಷ್ಟು, ಬಗೆದಷ್ಟು ಎಂದೆಂದಿಗೂ ಬರಿದಾಗದ ಸಮೃದ್ಧ ಸಾಗರದಂತಿರುವ ವ್ಯಕ್ತಿತ್ವ. ಅವರು ಅಭಿನಯಿಸಿದ ಎಷ್ಟೋ ಚಿತ್ರಗಳನ್ನು ವೀಕ್ಷಿಸಿ ನಾನು ಬದಲಾಗಿದ್ದೇನೆ ಎಂದರೆ ಅದು ಅವರ ವ್ಯಕ್ತಿತ್ವದ ಪ್ರಭಾವಳಿ ಎಂದರೆ ಸುಳ್ಳಲ್ಲ ! ಅಂತಹ ಮಹಾನುಭಾವರ ಕುರಿತು ಬರೆದ ಲೇಖನ ಓದಿ ಖುಷಿ ಆಯಿತು. ಧನ್ಯವಾದಗಳು ಶ್ರೀಧರ್ ಬನವಾಸಿ ಅವರೇ….ಶುಭದಿನ !!

Srikanth K M
11 years ago

ಅಣ್ಣಾವ್ರು ಬರಿ ಮಾತಿಗೆ ಅಣ್ಣಾವ್ರು ಆಗಿರಲಿಲ್ಲ.. ತಾವು ಮಾಡಿದ ಪಾತ್ರಗಳ ರೀತಿಯಲ್ಲಿಯೇ ಅವರು ಸಾತ್ವಿಕತೆ ಹೊಂದಿದ್ದರು. ಎರಡು ಮೂರು ಚಿತ್ರಗಳಿಗೆ ಕೊಂಬು ಬಾಲ ಬೆಳೆಸಿಕೊಳ್ಳುವ ಮಂದಿಗಿಂತ ಗಾವುದ ಮೈಲು ದೂರದಲ್ಲಿದ್ದರು. ಜೀವನ ನಿರ್ವಹಣೆ, ಸಾಹಸಿ ಬದುಕು ಅವರ ಗುಣವನ್ನು ಇನ್ನಷ್ಟು ಹೊಳಪಿಗೆ ತಂದಿತು ಅಂದರೆ ತಪ್ಪಿಲ್ಲ. ಸುಂದರ ಬರಹ ನಿಮ್ಮದು ಇಷ್ಟವಾಯಿತು 

2
0
Would love your thoughts, please comment.x
()
x