ನಮ್ಮೆಲ್ಲರ ಸಿಪಿಕೆ- ಎಂಬತ್ತರ ಮೊಹಬತ್ತು!: ಡಾ. ಹೆಚ್ ಎನ್ ಮಂಜುರಾಜ್


ಸಿಪಿಕೆ ಮತ್ತು ಅವರ ಕಾವ್ಯ ಕುರಿತ ಬರಹ

ಅಪ್ರತಿಮ ವಿದ್ವತ್ತು; ಮಾತೋ ವಿದ್ಯುತ್ತು ! ಸಿಪಿಕೆಯವರನ್ನು ಬಲ್ಲ ಯಾರಿಗೂ ಅನಿಸುವ ಸತ್ಯವಿದು. ಮೈಸೂರಿನ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಸಿ ಪಿ ಕೃಷ್ಣಕುಮಾರ್ ಅವರು ಕನ್ನಡ ಸಾಹಿತ್ಯದ ಹೆಮ್ಮೆಯ ಆಸ್ತಿ. ಹಳೆಯ ಮೈಸೂರು ಪ್ರಾಂತ್ಯದ ಸತ್ತ್ವ ಮತ್ತು ಸ್ವತ್ವ. ಇವರು ತಮ್ಮೆಲ್ಲ ಚೈತನ್ಯವನ್ನು ಸಾಹಿತ್ಯ ಕೃಷಿಗೆ ಮುಡಿಪಿಟ್ಟವರು. ಕನ್ನಡ ಸಾಹಿತ್ಯ ಸೇವೆಯೇ ಅವರ ಮತ್ತೊಂದು ಹೆಸರು; ಬರೆವಣಿಗೆ ಅವರ ಉಸಿರು. ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷಾ ಸಾಹಿತ್ಯಗಳಲ್ಲಿ ಅಪಾರ ತಿಳಿವು, ಪರಿಶ್ರಮವಿರುವ ವಿದ್ವಾಂಸ, ಚಿಂತಕ, ಕವಿ, ಅನುವಾದಕ, ವಿಮರ್ಶಕ, ಜಾನಪದ ತಜ್ಞ, ಸಮರ್ಥ ಸಂಪಾದಕ-ರು. ಅಧ್ಯಯನ, ಅಧ್ಯಾಪನ, ಕೃತಿರಚನ, ಪ್ರಕಟಣಗಳಲ್ಲಿ ಸಿದ್ಧಪ್ರಸಿದ್ಧರು. ಹಲವು ಪ್ರಕಾರಗಳಲ್ಲಿ ಮೌಲಿಕ ಬರೆವಣಿಗೆ ನಡೆಸಿದ ಮತ್ತು ನಡೆಸುತ್ತಿರುವ ವಿರಳಾತಿವಿರಳರು. ಮುನ್ನೂರೈವತ್ತಕ್ಕೂ ಮೀರಿದ ಹತ್ತಿರ ಹತ್ತಿರ ನಾನೂರು ಕೃತಿಗಳನ್ನೂ ಸಾವಿರಾರು ಲೇಖನಗಳನ್ನೂ ವಿಪುಲ ಪ್ರಮಾಣದ ಭಾಷಣೋಪನ್ಯಾಸಗಳನ್ನು ಕನ್ನಡಕ್ಕೆ ನೀಡಿರುವ ಸಿಪಿಕೆಯವರು ಭಾರತೀಯ ಭಾಷಾಸಾಹಿತ್ಯಗಳಲ್ಲೇ ಒಂದು ವಿಸ್ಮಯ! ವಿಷಯ ಆಯ್ಕೆ, ಪಾಂಡಿತ್ಯಪೂರ್ಣ ವಿಶ್ಲೇಷಣೆ, ಅಪೂರ್ವ ಹೊಳಹು, ಆಕರ್ಷಕ, ರೋಚಕ ಭಾಷಾಶೈಲಿ- ಎಲ್ಲದರಲ್ಲೂ ಅಚ್ಚುಕಟ್ಟು, ಸ್ವೋಪಜ್ಞತೆಯ ಛಾಪು, ವ್ಯಕ್ತಿತ್ವವೂ ಅಷ್ಟೇ, ಎತ್ತರದ್ದು. ಬರೆಹದಂತೆಯೇ ಬದುಕು. ಚಿಂತನಪ್ರಧಾನ ಸಾಹಿತಿ ಸಿಪಿಕೆಯವರು ಬರೆವುದೆಲ್ಲ ಪ್ರಕಟಣಯೋಗ್ಯ ಅಥವಾ ಪ್ರಕಟಿಸುವುದೆಲ್ಲವೂ ವ್ಯಾಸಂಗಯೋಗ್ಯ.

ಏಪ್ರಿಲ್, ೪, ೧೯೩೯ ರಲ್ಲಿ ಮೈಸೂರು ಜಿಲ್ಲೆ ಕೃಷ್ಣರಾಜನಗರ ತಾಲೂಕಿನ ಚಿಕ್ಕನಾಯಕನಹಳ್ಳಿಯಲ್ಲಿ ಜನಿಸಿದ ಇವರು ಕನ್ನಡ ಎಂಎ ಪದವಿ, ೧೯೭೪ ರಲ್ಲಿ ನಾಗವರ್ಮನ ಕರ್ಣಾಟಕ ಕಾದಂಬರಿ- ತೌಲನಿಕ ಮತ್ತು ವಿಮರ್ಶಾತ್ಮಕ ಅಧ್ಯಯನ ಎಂಬ ಮಹಾಪ್ರಬಂಧಕ್ಕೆ ಪಿಹೆಚ್.ಡಿ. ಪದವಿ ಪಡೆದರು; ಡಾ. ಹಾ ಮಾ ನಾಯಕರು ಇವರ ಮಾರ್ಗದರ್ಶಕರು. ಭಾರತೀಯ ವಿದ್ಯಾಭವನ ಕೊಡಮಾಡುವ ‘ಸಂಸ್ಕೃತ ಕೋವಿದ’ ಪದವಿಯನ್ನೂ ಪಡೆದಿದ್ದಾರೆ.

೧೯೬೧ ರಿಂದ ೧೯೬೪ ರ ವರೆಗೆ ಮೈಸೂರಿನ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಸಂಶೋಧನ ಸಹಾಯಕರಾಗಿ, ಆನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಮೂರು ವರ್ಷ ಕನ್ನಡ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ ಸಿಪಿಕೆಯವರು ೧೯೬೭ ರಿಂದ ೧೯೯೯ ರ ವರೆಗೆ ಅವಿರತವಾಗಿ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಅತ್ಯುತ್ತಮ ಸೇವೆ ಸಲ್ಲಿಸಿ, ಇದೀಗ ಕಳೆದ ೨೫ ವರ್ಷಗಳಿಂದ ಮೈಸೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ; ಓದು-ಬರೆಹ-ಭಾಷಣ-ಪುಸ್ತಕ ಪ್ರಕಟಣ-ಕಾರ‍್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ. ಈ ನಡುವೆ ೧೯೮೯ ರಿಂದ ೧೯೯೧ ರ ವರೆಗೆ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಆಡಳಿತಾತ್ಮಕ ಜವಾಬ್ದಾರಿಯನ್ನೂ ನಿರ್ವಹಿಸಿದರು. ೨೦೧೧ ರಲ್ಲಿ ಗಂಗಾವತಿಯಲ್ಲಿ ನಡೆದ ೭೮ ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ ಇವರಿಗೆ ಸಂದ ಶ್ರೇಷ್ಠ ಗೌರವವಾಗಿದೆ. ಹಲವು ನೂರು ಪ್ರಶಸ್ತಿಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಾನಪದ ತಜ್ಞ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ವಿಶ್ವಮಾನವ ಕುವೆಂಪು ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಬಸವಸಾಹಿತ್ಯಶ್ರೀ ಹಾಗೂ ಕಾವ್ಯಾನಂದ ಪುರಸ್ಕಾರ ಪ್ರಮುಖವಾದವು.

‘ಬರಿದೆ ಸಂಖ್ಯಾರೋಪ ಮಾಡುವವರಿರಬಹುದು. ಶತಶತ ಕೃತಿಪಂಕ್ತಿ ಮೂಡಿ ಬಂದದ್ದೆಂತು? ಇರಲಿ ಅನ್ಯರಿಗೆ, ನನಗೇ ಸೋಜಿಗದ ಹೇತು! ಒಮ್ಮೊಮ್ಮೆ ಕಾಡುವುದು ಒಣಹೆಮ್ಮೆ; ಇನ್ನೊಮ್ಮೆ ನೈರಾಶ್ಯ; ಏನನೂ ಮಾಡಿಲ್ಲ ಇದುವರೆಗೆ………’ ಇದು ಅವರ ‘ಸ್ವಗತ’ ಎಂಬ ಕವಿತೆಯ ಆತ್ಮಾವಲೋಕನಗೊಂಡ ಸಾಲುಗಳು! ೩೫೦ ಕ್ಕೂ ಹೆಚ್ಚಿನ ಕೃತಿಗಳ ವಾರಸುದಾರಿಕೆ ಸ್ವಲ್ಪದ ಸಾಧನೆಯಲ್ಲ. ‘ಇವರ ಸಾಹಿತ್ಯವು ಗಾತ್ರದಲ್ಲಿ ಮಾತ್ರವಲ್ಲದೇ ಗುಣದಲ್ಲಿಯೂ ದೊಡ್ಡದು’ ಎಂದು ಅಂದೇ ಕವಿ ಕುವೆಂಪು ಶ್ಲಾಘಿಸಿದ್ದಾರೆ. ‘ಇವರ ಕೃತಿಸಮೂಹ ಗಟ್ಟಿ ಕಾಳುಗಳ ಕಣಜ’ ಎಂದು ಹೆಮ್ಮೆ ಪಟ್ಟಿದ್ದಾರೆ ಹಾ ಮಾ ನಾಯಕರು. ಮುಖ್ಯವಾಗಿ ಕವಿತೆ, ಸಾಹಿತ್ಯವಿಮರ್ಶೆ ಮತ್ತು ಭಾಷಾಂತರ ಕ್ಷೇತ್ರಗಳಲ್ಲಿ ಇವರದು ಹೆಚ್ಚಿನ ದುಡಿಮೆ. ೪೦ ಕ್ಕೂ ಹೆಚ್ಚಿನ ಕವನ ಸಂಕಲನಗಳು ಇವರೊಳಗಿನ ಕವಿತ್ವವನ್ನು ಅಚ್ಚೊತ್ತಿವೆ. ತಾವೊಬ್ಬ ಸೃಜನಪ್ರಧಾನ ಸಾಹಿತಿಯೂ ಹೌದೆಂಬುದನ್ನು ಸಾಬೀತು ಮಾಡಿದ್ದಾರೆ. ಸದ್ಯ ‘ಸರ್ವೋದಯ ಸಂಭೂತಿ’ ಎಂಬ ಮಹಾಕಾವ್ಯ ಇವರಿಂದ ರಚಿತಗೊಂಡು ಅಚ್ಚಿನಲ್ಲಿದೆ! ಇನ್ನುಳಿದಂತೆ ಗ್ರಂಥ ಸಂಪಾದನೆ, ಚಿಂತನ-ಪ್ರಬಂಧ, ಸಂಶೋಧನ, ಜೀವನಚಿತ್ರ ಮತ್ತು ಮಕ್ಕಳ ಸಾಹಿತ್ಯ ಇವರ ಪ್ರೀತಿಯ ಕ್ಷೇತ್ರ.

ಸಿಪಿಕೆಯವರು ನಾಲ್ಕು ಗೋಡೆಗಳ ನಡುವಿನ ಕುಟೀಚಕರಲ್ಲ! ಗೋಕಾಕ್ ವರದಿ ಜಾರಿ ಚಳವಳಿ, ಕನ್ನಡಕ್ಕೆ ಶಾಸ್ತಿçÃಯ ಸ್ಥಾನಮಾನಕ್ಕಾಗಿ ನಡೆದ ಹೋರಾಟ, ಕಾವೇರಿ ವಿವಾದ ಸಂಬಂಧ ಹೋರಾಟ, ಹೊಗೇನಕಲ್ ವಿವಾದ ಸಂಬಂಧ ರಾಜ್ಯಪಾಲರ ಭೇಟಿ ಹೀಗೆ ಸಾಮಾಜಿಕ-ಸಾಮುದಾಯಿಕ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದವರು. ಭಾಷಣಗಳ ಸಂಖ್ಯೆಯೇ ಹತ್ತಾರು ಸಾವಿರ ದಾಟಿವೆ. ಇವರಷ್ಟು ಭಾಷಣಗಳನ್ನು ಮಾಡಿದ ಇನ್ನೊಬ್ಬರ ಹೆಸರು ತಕ್ಷಣಕ್ಕೆ ಹೊಳೆಯುವುದಿಲ್ಲ ಎಂಬುದೇ ಇವರ ಮಹತ್ವವನ್ನು ಸಾರುವ ಮಾತಾಗುತ್ತದೆ! ಪ್ರಾಥಮಿಕ ಶಾಲೆಯಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದ ವಿಚಾರಸಂಕಿರಣದವರೆಗೆ ಇವರ ಭಾಷಣೋಪನ್ಯಾಸಗಳ ವ್ಯಾಪ್ತಿ ಮಹಿಮೆ ಹರಡಿದೆ. ತತ್ತ್ವಾನ್ವೇಷಕರಾದ ಕನ್ನಡದ ದಿಗ್ಗಜ ಕವಿಕುವೆಂಪು ಅವರ ಸಮರ್ಥ ಶಿಷ್ಯರಾದ ಇವರು ಅವರ ಪಂಚಮಂತ್ರಗಳನ್ನು ತಮ್ಮ ಬರೆಹದಲ್ಲಿ ಸಮರ್ಪಕವಾಗಿ ಪ್ರತಿಫಲಿಸಿದ್ದಾರೆ. ಮುಖ್ಯವಾಗಿ ಸಹೃದಯಕೇಂದ್ರಿತ ರಸಗ್ರಹಣ, ಮಾಹಿತಿ ಮಂಥನ, ಪಾಂಡಿತ್ಯಪೂರ್ಣ ವಿಶ್ಲೇಷಣ ಜೊತೆಗೆ ತಮ್ಮದೇ ಆದ ವಿಡಂಬನಾತ್ಮಕ ವ್ಯಾಖ್ಯಾನ ಇವರ ಶೈಲಿಯ ವಿಶೇಷತೆ. ಬ್ರಾಕೆಟ್‌ಗಳನ್ನೂ ಹೈಫನ್‌ಗಳನ್ನೂ ಬಳಸಿ ನೂತನಾರ್ಥಗಳನ್ನು ಬಗೆಯುವ ಬಗೆ ಇವರ ಛಾಪು. ಇದೀಗ ರಾಮಕೃಷ್ಣ ದರ್ಶನ, ವಿವೇಕಾನಂದ ವಿವೇಚನ, ಶಾರದಾ ಸೌರಭ ಮತ್ತು ಭಗವದ್ಗೀತೆ-ಜಗದ ಭಾಗ್ಯ ಎಂಬ ನಾಲ್ಕು ಕೃತಿಗಳನ್ನು ಅಚ್ಚಿಸಿ, ಪ್ರಕಟಿಸಿದ್ದಾರೆ. ಇವರ ಬಹಳಷ್ಟು ಪುಸ್ತಕಗಳ ಪ್ರಕಾಶಕರು ಇವರೇ ಆಗಿರುವುದೂ ಒಂದು ಸಾಧನೆ. ಸರಳ-ಸಹಜ-ಸಂಯಮ-ಸಹನಾಶೀಲ ಆದರೆ ಅಸಾಧಾರಣ ಪಾಂಡಿತ್ಯ-ಪ್ರತಿಭಾ ಸಮ್ಮಿಲನ. ಸಾವಿರಾರು ಶಿಷ್ಯರ-ಗೆಳೆಯರ-ಹಿರಿಯರ ಆತ್ಮೀಯರು. ಸಾಹಿತ್ಯದಿಂದ ಕಲಿಯಬೇಕಾದ್ದನ್ನು ಕಲಿತು, ಕಲಿಸುತ್ತಿರುವವರು.
ಅಹಂಕಾರದಿಂದ ತುಂಬಿದ, ಅನ್ಯಮಾರ್ಗದ-ಅಡ್ಡಹಾದಿಯ ತುಳಿದು ಅಯೋಗ್ಯರಾಗುತ್ತಿರುವ ಬಹುತೇಕರು ನಡೆಗೂ-ನುಡಿಗೂ ಸಂಬಂಧವನ್ನೇ ಇಟ್ಟುಕೊಳ್ಳದೇ ಆರ್ಭಟಿಸುತ್ತಿರುವ ಇಂದಿನ ಕನ್ನಡ ಸಾಹಿತ್ಯಕ ಜಗತ್ತಿನಲ್ಲಿ ಇಂಥ ನಿಗರ್ವೀ, ನೇರ, ನಯ-ವಿನಯ ನಡೆ-ನುಡಿಯ ಬರಹಗಾರ ವಿದ್ವಾಂಸ ನಾಡಿಗೇ ಅಪರೂಪ. ಇಂಥವರ ಇನ್ನೊಬ್ಬರ ಹೆಸರು ಹೇಳಬೇಕೆಂದರೆ ದಿನ ಕಳೆದರೂ ನಾಲಗೆಗೆ ಹೊಳೆಯುವುದಿಲ್ಲ; ಮನಸಿಗೆ ನೆನಪಾಗುವುದಿಲ್ಲ. ಅಂಥ ಅಪರಂಜಿ ನಮ್ಮ ಈ ಸೀಪೀಕೆ! ಇವರಿರುವಾಗ ಇನ್ನೊಬ್ಬರಾದರೂ ಯಾಕೆ!!
ಇವರ ಇತ್ತೀಚಿನ ಒಂದು ಮಾತು: ‘ವೃದ್ಧಾಪ್ಯದಲಿ ರೋಗಗಳು ಸಹಜ. ನಿರೋಗಿಯೇ!? ವೃದ್ಧಾಪ್ಯವೇ ಒಂದು ರೋಗ!!’
*****
ನೆಲಮುಗಿಲ ನಂಟು: ಚಿಂತನ ಪ್ರಧಾನ ಸಾಹಿತಿ ಸಿಪಿಕೆಯವರ ಸೃಜನಪ್ರಧಾನ ರಚನೆಗಳೆಲ್ಲ ಬಹುತೇಕ ಕವಿತೆ-ವಚನಗಳಾಗಿ ರೂಪುಗೊಂಡಿವೆಯೆಂಬುದು ಗಮನಾರ್ಹ. ಸಿಪಿಕೆಯವರು ಸುಮಾರು ಆರು ದಶಕಗಳಿಂದಲೂ ಕವಿತಾ ರಚನೆಯಲ್ಲಿ ತಮ್ಮನ್ನು ಗಂಭೀರವಾಗಿ ತೊಡಗಿಸಿಕೊಂಡಿದ್ದಾರಾದರೂ ಕನ್ನಡ ವಿಮರ್ಶಾ ಲೋಕ ಮಾತ್ರ ಸಿಪಿಕೆ ಕಾವ್ಯವನ್ನು ಕುರಿತು ಗಂಭೀರ ಅಧ್ಯಯನ ನಡೆಸಿಲ್ಲ. ‘ಕನ್ನಡ ನವೋದಯದಿಂದ ನವ್ಯಕ್ಕೆ ವಾಲುತ್ತಿದ್ದ ಸಂದರ್ಭದಲ್ಲೇ ಸದ್ದುಗದ್ದಲವಿಲ್ಲದೆ ನಿಷ್ಕಾಮ ಸೃಷ್ಟಿಯಲ್ಲಿ ತೊಡಗಿದ ಸಿಪಿಕೆ ಅವರು ತಮ್ಮ ಸಮನ್ವಯ ಮನೋಧರ್ಮದಿಂದ ನಡೆಸಿರುವ ಪ್ರಯೋಗಗಳು ಆಸಕ್ತಿ ಕೆರಳಿಸುತ್ತವೆ, ಆಕರ್ಷಕವಾಗಿವೆ…….ಸಿಪಿಕೆ ಕನ್ನಡ ಕಾವ್ಯದಲ್ಲಿ ಚಿಂತನಶೀಲ ಪ್ರವೃತ್ತಿಯನ್ನು ಬೆಳೆಸಿದ ಗೌರವಕ್ಕೆ ಪಾತ್ರರಾಗಿ, ಜನಪರ ಆಶಯಗಳನ್ನು ತಮ್ಮ ಕಾವ್ಯದುದ್ದಕ್ಕೂ ತೋರುತ್ತ ಬಂದ ವಿಶಿಷ್ಟ ಕವಿಯಾಗಿ ನಿಲ್ಲುತ್ತಾರೆ.’ (ಶಿವರಾಮು ಕಾಡನಕುಪ್ಪೆ- ಸಾರ್ಥಕ: ಸಿಪಿಕೆ ಅಭಿನಂದನ, ಪುಟ ೧೦೭)

ಸಿಪಿಕೆಯವರ ಪ್ರಥಮ ಕವನ ಸಂಕಲನ ‘ತಾರಾಸಖ’ ಪ್ರಕಟಗೊಂಡದ್ದು ೧೯೬೦ ರಲ್ಲಿ. ಅದೇ ರೀತಿಯಲ್ಲಿ ಅನಂತಪೃಥ್ವಿ (೧೯೬೪), ಪ್ರಕೃತಿ (೧೯೬೮), ವರ್ತಮಾನ (೧೯೭೨) ಬೊಗಸೆ (೧೯೭೬), ಅಂತರತಮ (೧೯೭೬), ನೂರೊಂದು (೧೯೮೨), ನೀವೆ ನಮಗೆ ದಿಕ್ಕು (೧೯೮೮), ಹನಿಮಿನಿ (೧೯೮೯), ಲಯವಿಲ್ಲದ ಬದುಕು (೧೯೯೧), ಸರಾಗ (೧೯೯೩), ಕನವರಿಕೆ (೧೯೯೬), ಕಾರಣಿಕ ವಚನಗಳು (೧೯೯೬), ಸಿಪಿಕೆ ಚುಟುಕುಗಳು (೧೯೯೭), ರ‍್ಯಾಯ (೧೯೯೭) ಮತ್ತು ಚೋದ್ಯ ಕುಚೋದ್ಯ (೧೯೯೮), ಕನ್ನಡಿಯ ಕಿಚ್ಚು (೧೯೯೯) ಮೊದಲ ಐದು ಕವನ ಸಂಕಲನಗಳಿಂದ ಆಯ್ದ ಕವನಗಳು- ಒಳದನಿ (೧೯೭೭) ಎಂಬ ಹೆಸರಿನಿಂದ ಪ್ರಕಟಗೊಂಡಿವೆ. ಇವೆಲ್ಲವೂ ಸಿಪಿಕೆ ಸಮಗ್ರ ಕವಿತೆ (೨೦೦೦) ಎಂಬ ಹೆಸರಿನಲ್ಲಿ ಸಂಕಲಿತಗೊಂಡದ್ದು ಸಂತಸ ಮತ್ತು ಸಮಾಧಾನದ ಸಂಗತಿ.

ಸಮಗ್ರ ಕವಿತೆ ಪ್ರಕಟವಾದ ಮೇಲೂ ಸಿಪಿಕೆಯವರು ಕವಿತೆಗಳನ್ನು ಬರೆಯುತ್ತಲೇ ಇದ್ದಾರೆ. ಪ್ರಕಟಿಸುತ್ತಲೇ ಇದ್ದಾರೆ. ಅವರ ಕಾವ್ಯಧಾರೆ ನಿರಂತರ ಮತ್ತು ನಿಯಮಿತ. ಸಾನೆಟ್ ಸಾಲು, ತೊಟ್ಟುಗಳು ಮತ್ತು ವಚನವಿಜ್ಞಾಪನ ಎಂಬ ಹೆಸರಿನಲ್ಲಿ ಸಂಗ್ರಹಗೊಂಡಿವೆ. ‘ನಿಸರ್ಗಾರಾಧನೆ, ತಾತ್ತ್ವಿಕ ವಿಸ್ಮಯಗಳಿಂದ ಪ್ರಾರಂಭವಾಗಿರುವ ಸಿಪಿಕೆಯವರ ಕಾವ್ಯ ಜೀವನ ನಂತರ ಹೆಚ್ಚು ಸೂಕ್ಷ್ಮವಾದ ಬೌದ್ಧಿಕ ಸವಾಲುಗಳನ್ನು ಒಳಗೊಳ್ಳುತ್ತ ಸಾಗಿತು’ ಎಂಬುದಾಗಿ ಡಿ ಆರ್ ನಾಗರಾಜ್ ಅಭಿಪ್ರಾಯಪಟ್ಟಿದ್ದರು. ‘ಕನ್ನಡದ ಸುವಿಖ್ಯಾತ ಪ್ರತಿಭಾವಂತ ಕವಿ’ ಎಂಬುದಾಗಿ ಚದುರಂಗ ಶ್ಲಾಘಿಸಿದ್ದರು. ‘ಸೃಜನ ಸಾಹಿತ್ಯ ಮತ್ತು ವಿಮರ್ಶನ ಸಾಹಿತ್ಯಗಳೆರಡರಲ್ಲೂ ಸಿಪಿಕೆ ಅವರು ಸರಿಸಮಾನ ಪ್ರತಿಭೆಯಿಂದ ಸಿದ್ಧಹಸ್ತರಾಗಿ ಮುಂದುವರಿಯುತ್ತಿದ್ದಾರೆ ಎಂದು ಎಂದೋ ಕುವೆಂಪು ಅವರು ಭವಿಷ್ಯ ನುಡಿದಿದ್ದು ಸೋಜಿಗ ತರುತ್ತದೆ. ಅವರ ಮುನ್ನೂರೈವತ್ತು ಕೃತಿಗಳ ಪೈಕಿ ನಲವತ್ತಕ್ಕೂ ಹೆಚ್ಚು ಸೃಜನ ಕವಿತೆಗೆ ಮೀಸಲಾದ ಗ್ರಂಥಗಳಾಗಿವೆ. ಇವಲ್ಲದೆ ದಿನನಿತ್ಯ ಪತ್ರಿಕೆ, ಮ್ಯಾಗಜೀನುಗಳಲ್ಲಿ ಪ್ರಕಟಗೊಳ್ಳುವ ಕವಿತೆ-ಹನಿಗವಿತೆಗಳು ಬೇರೆ! ಅಂದರೆ ಇವರ ಕಾವ್ಯ ರಚನೆಯ ಪಟ್ಟಿಯನ್ನು ಒಂದೆಡೆ ಕಲೆ ಹಾಕಿದರೆ ಎಂಥವರಿಗೂ ಅಚ್ಚರಿಯಾಗದಿರದು, ಅದರ ಹರವನ್ನು ಕಂಡು.

‘ವಾಸ್ತವವಾಗಿ ಕಾವ್ಯಪಥ-‘ಪಂಥ’ವಲ್ಲ- ಅಂತವಿಲ್ಲದ್ದು. ಅದರ ಗುರಿ ಬಹುಶಃ ಅಗಮ್ಯ; ದಾರಿಯಷ್ಟೇ ಎಲ್ಲರ ಪಾಲಿಗೂ ಇರತಕ್ಕದ್ದು’ (ಒಳದನಿಯ ಮೊದಲ್ನುಡಿ) ಎಂದುಕೊಂಡಿರುವ ಸಿಪಿಕೆ ಕಾವ್ಯವು ನಿಜಕ್ಕೂ ಪಂಥಕ್ಕಂಟಿಕೊಳ್ಳದ ಮನೋಧರ್ಮದ್ದು. ಒಳಿತು ಎಲ್ಲೇ ಇರಲಿ, ಎಲ್ಲಿಂದಲೇ ಬರಲಿ ಅದು ಆದರ್ಶನೀಯ ಮತ್ತು ಅನುಕರಣೀಯ ಎಂಬ ಸಿದ್ಧಾಂತದಲ್ಲಿ ನಂಬುಗೆಯಿಟ್ಟ ಕವಿ ಅವರು. ಹೀಗಾಗಿ ನವೋದಯ, ನವ್ಯ, ಬಂಡಾಯ-ದಲಿತಗಳೆಂಬ ಕೃತಕ ಭೇದ ಅವರಿಗೆ ರುಚಿಸುವುದಿಲ್ಲ. ಸಿಪಿಕೆ ಕಾವ್ಯದಲ್ಲಿ ಹೊಸಗನ್ನಡದ ಎಲ್ಲ ಸಾಹಿತ್ಯಕ ಧೋರಣೆಗಳನ್ನು ಮಿಳಿತಗೊಳಿಸಿದ ಸಮನ್ವಯ ಮಾರ್ಗವೊಂದನ್ನು ಕಾಣುತ್ತೇವೆ. ನನ್ನ ದೃಷ್ಟಿಯಲ್ಲಿ ನಿಜವಾದ ಸಮನ್ವಯ ಕವಿ ಇವರು. ಸಾಮಾನ್ಯರು ನಿರ್ಲಕ್ಷಿಸಬಹುದಾದ ಸಣ್ಣ ಪುಟ್ಟ ಸಂಗತಿಗಳನ್ನೂ ಸಿಪಿಕೆ ಕವಿತೆಯ ಚೌಕಟ್ಟಿಗೆ ತಂದಿಟ್ಟು ಆ ಮೂಲಕ ಮಹತ್ತಾದ ಸಂದೇಶವನ್ನು ಅಡಕಗೊಳಿಸುತ್ತಾರೆ.

ತಲೆ ಬಾಗೋಣ ತೆಂಗಿನಮರಕ್ಕೆ
ಪಾರ್ಥೇನಿಯಂ ಗಿಡಕ್ಕಲ್ಲ

ಎಂಬುದು ಸಿಪಿಕೆಯವರ ಕಾವ್ಯ ಪ್ರಕಾರಕ್ಕೆ ಚೆನ್ನಾಗಿ ಒಪ್ಪುವ ಅವರದೇ ಮಾತು. ಕ್ಷುದ್ರ, ಕ್ಷುಲ್ಲಕವೆನಿಸುವ, ಅನಾದರಕ್ಕೆ ಒಳಗಾಗಬಹುದಾದ ಸಂಗತಿಗಳಲ್ಲೇ ಬದುಕಿನ ಕಾವ್ಯವಿದೆ ಎಂಬುದು ಸಿಪಿಕೆ ರಚನೆಗಳಲ್ಲಿ ಕಾಣಿಸುವ ಕಾಣ್ಕೆ. ಅಂದರೆ ಇವರ ಬಹಳಷ್ಟು ಹನಿಗವನಗಳಲ್ಲಿ ತೀರಾ ಪುಟ್ಟದೆನಿಸುವ ಅನುಭವವೂ ಮಹತ್ತೆನಿಸುವ ಕಲಾತ್ಮಕತೆಯನ್ನು ಪಡೆದು ಮಿರುಗುತ್ತವೆ. ಖಾಸಗಿಯಾದದ್ದು ಸಾರ್ವತ್ರೀಕರಣಗೊಳ್ಳುವಾಗಲೇ ತಾನೇ ಕಾವ್ಯದ ಸೃಷ್ಟಿಶಕ್ತಿಯ ರಹಸ್ಯವಿರುವುದು! ಹಾಗೆ ನೋಡಿದರೆ ಈ ಕವಿ ಕವಿತೆಯಲ್ಲಿ ‘ಕಲ್ಪಿತನಿಜ’ಗಳನ್ನು ‘ಕಾಣಿ’ಸುತ್ತಾರೆ. ಸದಾ ಹರಿತಗೊಂಡ ಲೇಖನಿ, ನಿಶಿತಗೊಂಡ ಮತಿ, ಸೂಕ್ಷ್ಮ ಸಂವೇದನೆ, ತಟಕ್ಕನೆ ತನ್ನದಾಗಿಸಿಕೊಳ್ಳುವ ಕುಸುರೀ ಕಲೆಗಳಿಂದ ಸಂದರ್ಭದ ಬೇರೆ ಬೇರೆ ಕೋನಗಳನ್ನು ತಮ್ಮ ರಚನೆಗೆ ಗ್ರಾಸವಾಗಿಸಿಕೊಳ್ಳುತ್ತಾರೆ.

ಹೊಂದಾಣಿಕೆಯಿಲ್ಲದ ದಂಪತಿ
ಒಟ್ಟಿಗೇ ಆತ್ಮಹತ್ಯೆ
ಮಾಡಿಕೊಂಡರಂತೆ!
ಇದಕಿಂತ ದೊಡ್ಡ ಹೊಂದಾಣಿಕೆ
ಬೇರೊಂದುಂಟೆ?

ಇಲ್ಲಿನ ಸಾಲುಗಳನ್ನು ಒಂದರ ಪಕ್ಕ ಬರೆದುಕೊಂಡು ಹೋದರೆ ಚಿಂತನಗದ್ಯವಾದೀತು. ಆದರೆ ಪ್ರತಿ ಸಾಲುಗಳಿಗೆ ಇರುವ ವ್ಯಂಗ್ಯಾರ್ಥ ಅನುರಣನಗೊಳ್ಳುವ ಶಕ್ತಿ ಪಡೆದಿದೆ. ಎಲ್ಲೋ ಕೇಳಿದ, ಓದಿದ ಸುದ್ದಿ ಕವಿಯ ಕೈಯಲ್ಲಿ ಹನಿಗವನವಾಗಿದೆ. ಕೊನೆಯ ಎರಡು ಸಾಲುಗಳು ಕವಿಯ ವ್ಯಾಖ್ಯಾನ. ಮೊದಲ ಮೂರು ಸಾಲುಗಳ ಪ್ರತಿಕ್ರಿಯೆಯದು. ಭಾವನೆಗಳ ಏಳುಬೀಳುಗಳ ಮುಖೇನ ಕವಿ ಓದುಗರಲ್ಲಿ ಚಿಂತನಶೀಲತೆಯನ್ನು ಹುಟ್ಟು ಹಾಕುತಾರೆ. ಸಿಪಿಕೆ ತಮ್ಮ ಕಾವ್ಯದಲ್ಲಿ ಇಂಥ ಸುದ್ದಿ ವಿವರಗಳನ್ನು ವ್ಯಾಪಕ ಬಳಸಿಕೊಂಡು ತಾತ್ತ್ವಿಕ ತಿಳಿವಿನ ವ್ಯಾಖ್ಯಾನದಲ್ಲಿ ಮುಕ್ತಾಯ ಮಾಡುತಾರೆ. ಇವರ ಕವಿತಾ ಬರೆವಣಿಗೆಯ ಇನ್ನೊಂದು ಲಕ್ಷಣವೆಂದರೆ ಕಂಸ (Bracket)ಗಳ ಅಪಾರ ಬಳಕೆ. ತಮ್ಮ ಅನಿಸಿಕೆ, ಆಲೋಚನೆಗಳು ಸಾಲುಗಳಾಗಿ ಸಾಕಾರಗೊಳ್ಳುವ ಹಂತದಲ್ಲಿ, ಅದಕ್ಕೆ ವಿರುದ್ಧವಾದ ಅಥವಾ ಸಮಾನಾಂತರವಾದ ವಾದಸರಣಿ, ವಿಚಾರಲಹರಿಗಳಿದ್ದಲ್ಲಿ ಅದನ್ನು ಕಂಸಗಳಲ್ಲಿ ಇಟ್ಟು ಮುಂದುವರಿಯುತಾರೆ. ಉದಾಹರಣೆಗೆ,

ಬಿಚ್ಚು, ಬಿಚ್ಚು ಎಂದು ಹಲವರ ಒತ್ತಡ
ಬಿಚ್ಚಬೇಡ, ಬೇಡ
ಎಂದು ಕೆಲವರ ಹಿತವಚನ!
ಏನ ಮಾಡಲಿ? ಕಡೆಗೂ
ಬಿಚ್ಚದೆ ಗತ್ಯಂತರವಿಲ್ಲ;
ಸ್ನಾನ ಮಾಡಬೇಕಲ್ಲ!
(ಬಚ್ಚಲು ಇರುವುದೇ ಬಿಚ್ಚಲು)

*****

ಮೂರು ಹೆಜ್ಜೆಯ ಬೇಡಿ ಬಂದ ವಾಮನನಂತೆ

ನೀವು ಬಂದಿರಿ ನನ್ನ ಬಾಳಿಗೆ

(ನೀವು ಬರಲಿಲ್ಲ, ನಾನೇ ಕರೆದೆ)

ಇವರ ಕಾವ್ಯದ ಒಂದು ವೈಶಿಷ್ಟ್ಯವೆಂದರೆ ಮತ್ತೊಬ್ಬರು ಅನುಕರಿಸಲಾಗದ ತನ್ನತನದ ಛಾಪು.

ನನ್ನ ಕೈಗಡಿಯಾರ ರೇಡಿಯೋ ಕಾಲಕನುಸಾರ
ಅದ ನಾನು ಚೆನ್ನಾಗಿ ಬಲ್ಲೆ:
ಇದು ನನ್ನ ವಸ್ತು, ಎಂದಿಗೂ ನನ್ನದಾಗಿರಲಿ
ಅವರಿವರ ಕೈ ನೋಡಿ ತಿದ್ದಲೊಲ್ಲೆ.

ಸೃಜನಶೀಲ ಕವಿಯಾದ ಇವರು ವಸ್ತು, ಲಯ, ಭಾಷೆ, ಶೈಲಿ, ಬಂಧ ವಿನ್ಯಾಸಗಳಲಿ ವಿಶೇಷ ಆಯ್ಕೆ. ಹಾಗೆ ನೋಡಿದರೆ ಗಂಡು-ಹೆಣ್ಣುಗಳ ಸಂಬಂಧ, ಹೆಣ್ಣಿನ ಅಪರಿಮಿತ ಚುಂಬಕ ಶಕ್ತಿ ಇತ್ಯಾದಿಗಳನ್ನು ಕುರಿತಂತೆ ಅವರ ಕವಿತೆ ಅತ್ಯಧಿಕವಾಗಿ ತಲೆ ಕೆಡಿಸಿಕೊಂಡಿದೆ. ಆದರೆಲ್ಲೂ ಪುನರುಕ್ತಿ ದೋಷ ಕಾಣದು. ಹೇಳಿದ್ದನ್ನೇ ಹೇಳುವಂತಿದ್ದರೂ ಹೇಳುವ ರೀತಿ, ಕೊನೆಯಲ್ಲಿ ಸಿಗುವ ನೀತಿ ವಿಭಿನ್ನ. ಹೀಗಾಗಿ ಕವಿ ಯಾವುದೋ ಒಂದು ಸಿದ್ಧಾಂತಕ್ಕೆ, ವಾದಕ್ಕೆ ಬದ್ಧರಾಗುವುದಿಲ್ಲ. ‘ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸ’ ಎಂಬಂತೆ ಹೊಳೆದು ಕಣ್ಮರೆಯಾಗಬಹುದಾದ ಭಾವನೆ, ಚಿಂತನೆಗಳನ್ನು ಕವಿ ಬೆನ್ನಟ್ಟಿ ಬೇಟೆಯಾಡುತಾರೆ. ಆಗಿನ ಮನಸ್ಥಿತಿಯನ್ವಯ ಅವುಗಳು ಕವಿತೆಯಲ್ಲಿ ವ್ಯಾಖ್ಯಾನ ಪಡೆದುಕೊಳ್ಳುತ್ತವೆ. ಮನುಷ್ಯನ ಸಣ್ಣತನ-ದೊಡ್ಡತನ, ಅಲ್ಪತೆ-ಭೂಮತೆ, ಸಹ್ಯ-ಅಸಹ್ಯ ಎಲ್ಲವನ್ನೂ ಕವಿ ಕವಿತೆಯನ್ನಾಗಿ ಮಾಡುವ ಛಲ ತೊಡುತ್ತಾರೆ. ನೀತಿಮೌಲ್ಯಗಳ ಕಳಕಳಿಯೆಂದೂ ಅವರ ಕಾವ್ಯದಿಂದ ದೂರ ನಿಲ್ಲುವುದಿಲ್ಲ. ‘ಒಲವು ಹಗೆಯಾಯ್ತೇಕೆ? ನಂಜಾದುದೇಕೆ ಸುಧೆ? ಅರ್ಥವಾಗಿಲ್ಲ ಇದುತನಕ ಮಾನವರ ಎದೆ!’ ಕವಿಯ ಹೃದಯಾಂತರಾಳದ ಅಳಲಿದು. ಮಾನವನ ಕುಬ್ಜತೆಗಳನ್ನೆಲ್ಲ ಬಯಲಿಗೆಳೆಯುತ್ತಾ ಆ ಮೂಲಕ ಅವನು ಏರಬೇಕಾದ ಎತ್ತರವನ್ನು ಸೂಚಿಸುವುದು ಸಿಪಿಕೆ ಕಾವ್ಯದ ಪ್ರಮುಖ ಲಕ್ಷಣ.

ಹೀಗೆ ಸಿಪಿಕೆ ಕಾವ್ಯದ ಪ್ರಧಾನ ಲಕ್ಷಣವೆಂದರೆ ಅದು ಸಾತತ್ಯ ಗುಣವುಳ್ಳದ್ದು. ಅವರ ಕವಿತಾ ರಚನೆ ಅವಿಚ್ಛಿನ್ನವಾದದ್ದು. ಎಲ್ಲವನೂ ಒಳಗೊಳ್ಳುವ ಮಹತ್ವಾಕಾಂಕ್ಷೆಯ ಕಾವ್ಯ ಸಿಪಿಕೆಯದು. ಕವಿಗಳಲ್ಲಿ ಇದು ಸಹಜವೇ. ಆದರೆ ಕಂಡ ಕಾಣ್ಕೆಗಳನೆಲ್ಲ, ಉದಿಸಿದ ಭಾವಗಳನೆಲ್ಲ, ಅನಿಸಿದ್ದನೆಲ್ಲ ಕವಿತೆಯ ಚೌಕಟ್ಟಿಗೆ ತರುವ ಹಟ ಇವರದು. ಈ ಹಟವು ಗಂಭೀರ ಛಲವಾದಾಗ ಅವರ ಕವಿತೆ ಗೆಲುವು ಸಾಧಿಸುತ್ತದೆ; ಚಪಲವಾಗಷ್ಟೇ ಉಳಿದಾಗ ಸೋಲುತ್ತದೆ. ಇವರ ಕಾವ್ಯದಲ್ಲಿ ದ್ವಂದ್ವಾತ್ಮಕ ನೆಲೆಗಳು ಅಪಾರ. ಹಾಗೆ ನೋಡಿದರೆ ದ್ವಂದ್ವವು ಸಹ ಕಾವ್ಯದ ಲಕ್ಷಣವೇ! ಏನೆಂದರೆ ಹೀಗೆ ಬಂದು ಹಾಗೆ ಹಾರಿ ಹೋಗಬಹುದಾದ ಎಲ್ಲ ಪ್ರತಿಭಾಸೆಲೆಗಳನ್ನೂ ಕಾವ್ಯ ಮಾಡಲು ಹೊರಡುವುದರಿಂದ ದ್ವಂದ್ವ ಕೂಡ ಇವರ ಕವಿತೆಯಲ್ಲಿ ಸಹಜಗುಣವಾಗಿ ಶೋಭಿಸುವ ಪವಾಡವನ್ನು ಕಾಣಬಹುದು. ಅಂದರೆ ಕವಿಯು ಒಂದು ತತ್ತ್ವ, ತರ್ಕ, ವಿಚಾರಕ್ಕೆ ಅಂಟಿಕೊಂಡು ಅದರ ಕಾವ್ಯಾತ್ಮಕ ಪ್ರತಿಪಾದನೆಗೆ ಇಳಿಯುವುದಿಲ್ಲ.

ಸಿಪಿಕೆ ಕಾವ್ಯವು ಪ್ರಹೇಳಿಕೆಗಳ ಆಗರ! ಕವನದ ಅಂತ್ಯವು ಏನಾದರೊಂದು ತಾತ್ತ್ವಿಕ ಸಂದೇಶ ನೀಡುವಲ್ಲಿ ತೃಪ್ತಿಪಡುತ್ತದೆ. ಇಂಥ ಸಂದೇಶಗಳು ‘ನೀತಿ’ಯಾಗುವುದಿಲ್ಲವೆಂಬುದೇ ಸೋಜಿಗ. ಪಂಥಗಳಿಗೆ ಅಂಟದ ಕಾವ್ಯಧರ್ಮ ತಮ್ಮದೆಂದು ಕವಿ ಹೇಳಿಕೊಂಡರೂ ಬಹುತೇಕ ಇವರ ಕವಿತೆಗಳು ನವೋದಯದಿಂದ ಕವಿತಾ ಚೌಕಟ್ಟನ್ನೂ ಸಮಕಾಲೀನ ಸಂದರ್ಭಗಳ ಮೌಲ್ಯಪಲ್ಲಟಗಳಿಂದ ವಸ್ತುವೈವಿಧ್ಯವನ್ನೂ ಪಡೆದಿದೆ. ಕವಿ ಅದಮ್ಯ ಕನಸುಗಾರ. ನಿರಾಸೆಯನ್ನು ಕೇಂದ್ರವಾಗಿಸಿಕೊಂಡ ಕವನಗಳೂ ಕಡೆಯಲ್ಲಿ ‘ಸರ್ವೇಜನಾಃ ಸುಖಿನೋಭವಂತು’ ಎಂಬ ಶುಭಹಾರೈಕೆಯತ್ತ ತಿರುಗಿ ಮುಕ್ತಾಯಗೊಳ್ಳುತ್ತದೆ. ದಿವದ ಕನಸು, ಲೋಕದುಣಿಸು- ಎರಡೂ ಸಿಪಿಕೆ ಕಾವ್ಯದಲ್ಲಿ ಸಮಾನ ಸ್ಥಾನ ಪಡೆದಿವೆ. ಇನ್ನೊಂದು ಮಾತೆಂದರೆ ಇವರ ಕಾವ್ಯವು ಗಂಭೀರ ಅಧ್ಯಯನಕ್ಕೆ ಪಾತ್ರವಾಗುವಂಥದು. ಕೇವಲ ಸಹೃದಯವಿಮರ್ಶೆಯಷ್ಟೇ ಅಲ್ಲದೆ ಎಲ್ಲ ಬಗೆಯ ಸೈದ್ಧಾಂತಿಕ ವಿಮರ್ಶೆಗಳನ್ನೂ ತಾಳಿಕೊಳ್ಳುವಂಥದು. ಹಲವು ನೂರು ಚಿಂತನ ಪ್ರಧಾನ ಕೃತಿಗಳನ್ನು ಕನ್ನಡ ಸಾಹಿತ್ಯಕೆ ಕೊಟ್ಟ ಸಿ ಪಿ ಕೃಷ್ಣಕುಮಾರ್ ಅವರು ಸೃಜನಪ್ರಧಾನ ಸಾಹಿತಿಯೂ ಹೌದೆಂಬುದನ್ನು ಇವರ ಕಾವ್ಯ ರುಜುವಾತು ಪಡಿಸುತ್ತದೆ. ಕಾವ್ಯವೊಂದೇ ಅವರ ಸೃಷ್ಟಿಮಾಧ್ಯಮವಲ್ಲ; ಕಾವ್ಯವೂ ಅವರ ಸೃಷ್ಟಿಮಾಧ್ಯಮಗಳಲ್ಲಿ ಒಂದು. ಒಟ್ಟಾರೆ ಸಿಪಿಕೆಯವರ ಕಾವ್ಯ ನೆಲಮುಗಿಲ ನಂಟಿನಂತೆ; ದೂರವಿದ್ದರೂ ಹತ್ತಿರ, ಅಪಾರ ಸೆಳೆತ ಮಾತ್ರವಲ್ಲ, ಪಾರಾವಾರ ಪರಿವಾರ!
– ಡಾ. ಹೆಚ್ ಎನ್ ಮಂಜುರಾಜ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಎಲ್ ಎಚ್ ರವಿ
ಎಲ್ ಎಚ್ ರವಿ
5 years ago

ಎಂಬತ್ತರ ಹೊತ್ತಿನಲ್ಲಿ ಸಿಪಿಕೆ ಅವರನ್ನು ಕುರಿತು ಉತ್ತಮವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದೀರಿ. ಸರಳ, ಸಜ್ಜನಿಕೆಯ ಬಹುಮುಖ ಪ್ರತಿಭೆ ಕಾಲಘಟ್ಟದಲ್ಲಿ ನಾವೂ ಇದ್ದೇವೆ ಎಂಬುದೇ ಹೆಮ್ಮೆಯ ವಿಷಯ.

1
0
Would love your thoughts, please comment.x
()
x