ನಮ್ಮೂರ ದಸರಾ: ಪ್ರಶಸ್ತಿ

ಹಬ್ಬಗಳೆಂದ್ರೆ ಅದೇನೋ ಖುಷಿ.ಅದು ನಮ್ಮನ್ನೆಲ್ಲಾ ಸ್ವಂತಂತ್ರ್ಯರನ್ನಾಗಿಸಿದ ಆಗಸ್ಟ್ ಹಬ್ಬವಾಗಿರಬಹುದು. ಗಣತಂತ್ರರನ್ನಾಗಿಸಿದ ಜನವರಿ ಹಬ್ಬವೂ ಆಗಿರಬಹುದು. ನಾಡಹಬ್ಬ ದಸರಾವಾಗಿರಬಹುದು, ಬೆಳಕಹಬ್ಬ ದೀಪಾವಳಿಯಾಗಿರಬಹುದು. ಯಾವಾಗ ಬರುತ್ತಪ್ಪಾ ರಜಾ ಎಂದನಿಸೋ ಬಕ್ರೀದು, ರಂಜಾನ್, ಕ್ರಿಸ್ಮಸ್ಸುಗಳಾದ್ರೂ ಸರಿಯೇ.ಹಬ್ಬವೆಂದ್ರೆ, ಆ ರಜೆಗಳೆಂದ್ರೆ ಅದೆಂತದೋ ಖುಷಿ ಬಾಲ್ಯದಿಂದಲೂ. ಕೆಲವೆಡೆಯೆಲ್ಲಾ ಶಾರದಾಪೂಜೆ, ಲಕ್ಷ್ಮೀ ಪೂಜೆ, ಆಯುಧಪೂಜೆ, ಗೂಪೂಜೆ ಅಂತ ಹಲವಾರು ಪೂಜೆಯಿರೋ ದಸರಾ ದೊಡ್ಡ ಹಬ್ಬವಾದರೆ ನಮ್ಮೆಡೆ ಅದರ ಹೆಚ್ಚಿನವೆಲ್ಲಾ ಬರೋ ದೀಪಾವಳಿಯೇ ದೊಡ್ಡಬ್ಬ. ದಸರಾವೆಂದರೆ  ದೊಡ್ಡವರಿಗೆ ಶಮೀ ಪತ್ರೆ ಕೊಟ್ಟು, ಬನ್ನಿ ಕಡಿಯೋದು , ಬಾಳೆಮರ ಕಡಿಯೋದು ಮುಂತಾದ ಆಚರಣೆಗಳಿರೋ ಶಿವಮೊಗ್ಗಕ್ಕೂ ಅದಕ್ಕಿಂತ ಬರೀ ಎಪತ್ತ್ಮೂರು ಕಿ.ಮೀ ದೂರವಿರೋ ಸಾಗರಕ್ಕೂ ಅದೆಷ್ಟು ಭಿನ್ನತೆ ಅಂತಂದುಕೊಂಡಿದ್ದಿದೆ ಎಷ್ಟೋ ಸಲ. ಅದೇ ದೀಪಾವಳಿಯ ಮೂರು ದಿನಗಳಲ್ಲೂ ಅಂಟಿಗೆಪಿಂಟಿಗೆ ಅಥವಾ ಹಬ್ಬ ಹಾಡೋದು, ದೀಪಾವಳಿಯ ಹಿಂದಿನ ದಿನ ಅಂದರೆ ಭೂರಿ ನೀರು ತುಂಬುವ ದಿನದ ರಾತ್ರಿ ಭೂರಿ ಕಳುವು ಅಂತ ಆಚರಿಸೋ ಸಾಗರದ ಕೆಲ ಹಳ್ಳಿಗಳಿಗೂ , ಅದೆಂದರೆ ಏನೆಂದೇ ತಿಳಿಯದ ಹತ್ತೋ ಹದಿನೈದು ಕಿ.ಮೀ ದೂರದಲ್ಲೇ ಇರೋ ಸಾಗರ ಪೇಟೆಯ ಜನರೇ ಇರ್ಬೇಕಾದ್ರೆ ಅದರಲ್ಲೇನೂ ವಿಶೇಷವಿಲ್ಲ ಅನಿಸುತ್ತೆ. ಹೇಳಹೊರಟರೆ ಒಂದೊಂದು ಹೊಸ ಕಾದಂಬರಿಯಾದೀತೇನೋ ಹೇಳಹೊರಟವನ ಹಬ್ಬದಾಚರಣೆಗಳು.

ದಸರಾ ಅಂದ್ರೆ ಬಾಲ್ಯದಿಂದ ಈಗಿನವರೆಗೂ ಕುತೂಹಲ ಮೂಡಿಸೋದು ಅಂದ್ರೆ ನಮ್ಮಲ್ಲಿನ ಬಸ್ಸುಗಳ ಅಲಂಕಾರಗಳು. ಡ್ರೈವರ್ರಿನ ಮುಖ ಮಾತ್ರ ಕಾಣೋವಷ್ಟು ಬಿಟ್ಟು ಬೇರೆಲ್ಲಾ ಭಾಗಗಳ ಚೆಂಡುಹೂವಿನ ಹಾರಗಳಿಂದ ಅಲಂಕರಿಸುವುದ್ರಲ್ಲಿ ಬಸ್ಸುಬಸ್ಸುಗಳ ನಡುವೆ ಪೈಪೋಟಿ.ಆ ಬಸ್ಸೋರು ಅಷ್ಟು ಅಲಂಕರಿಸಿದ್ದಾರೆ, ನಾವೇನು ಕಮ್ಮಿ ಅನ್ನೋ ಭಾವ ಪ್ರತಿಯೊಬ್ಬರಲ್ಲೂ ವಿಜಯದಶಮಿ ಸಂದರ್ಭದಲ್ಲಿ. ಆಯುಧಪೂಜೆ ದಿನ ಫುಲ್ ನಾಮಗಳ ಬಳಿದ , ಹೂಗಳ ನಡುವೆ ಅದ್ಯಾವ ಕಂಪೆನಿ ಬಸ್ಸು ಅಂತ ಹುಡುಕೋದೇ ದೊಡ್ಡ ಸಾಹಸ ಅನ್ನೋ ತರದ ಅಲಂಕಾರವಿರುತ್ತಿತ್ತು ನಮ್ಮ ಬಾಲ್ಯದಲ್ಲಿ ಕಾಣುತ್ತಿದ್ದ ಬಸ್ಸುಗಳಲ್ಲಿ.ಪದವಿ, ಕೆಲಸ ಅಂತ ಸರಿಯಾಗಿ ರಜೆಯೇ ಸಿಗದೇ ದಸರಾ ಸಂಭ್ರಮಗಳೆಲ್ಲಾ ಮರೆತುಹೋಗುವ ಅಪಾಯವಿದ್ದ ಸಂದರ್ಭದಲ್ಲಿ ನಾಲ್ಕು ದಿನ ರಜಾ ಅಂದಾಗ ಸ್ವರ್ಗವೇ ಧರೆಗಿಳಿದಷ್ಟು ಖುಷಿಪಟ್ಟಿದ್ದೆ ನಾನು.  ಊರಿಗೆ ಹೋಗೋಕೆ ಬಸ್ಸು ಸಿಗುತ್ತೋ ಇಲ್ಲವೋ ಅನ್ನೋ ಭಯಕ್ಕಿಂತ ಆಗ ಕಾಡುತ್ತಿದ್ದಿದ್ದು ದಸರಾದ ಬಸ್ಸುಗಳ ಅಲಂಕಾರ ನೋಡ್ಬೋಕು ಅನ್ನೋ ತವಕವಷ್ಟೆ !

ದಶಮಿ ದಿನ ಅಂದ್ರೆ ನಮಗೆ ಖುಷಿ ಕೊಡೋ ಇನ್ನೊಂದು ಸಂಗತಿ ಅಂದ್ರೆ ನಮ್ಮೂರಿಗೆ ತೀರಾ ಹತ್ತಿರವಿದ್ದ ತೆರವಿನಕೊಪ್ಪ ಅಥವಾ ತ್ಯಾರಣಕೊಪ್ಪದ ಅಕ್ಕನಾಗಮ್ಮ ದೇವಿಯ ಜಾತ್ರೆ. ಸಾಗರದ ಸುತ್ತಮುತ್ತಲ ಜನರಷ್ಟೇ ಅಲ್ಲದೇ ದೂರದ ಊರುಗಳಿಂದಲೂ ನಾಗದೇವತೆಯ ಮೇಲಿನ ನಂಬಿಕೆಯುಳ್ಳವರು, ಕಷ್ಟಗಳ ಪರಿಹಾರ ಅರಸೋರು ಬರುತ್ತಾರೆ ಇಲ್ಲಿಗೆ. ಜಾತ್ರೆ ಅಂದ್ರೆ ಜಾಯಿಂಟ್ ವೀಲು, ದೋಣಿ, ಗಿರಗಿಟ್ಲೆ ಅಷ್ಟೆ ಅದ್ರಲ್ಲೇನಿದೆ ಅಂತ ಪೇಟೆ ಮಕ್ಕಳು ಕೇಳುವಂತಹ ಜಾತ್ರೆಯಲ್ಲ ಅದು. ಸಾವಿರಾರು ಜನ ಸೇರಿದ್ರೂ ಹಳ್ಳಿಯ ಸೊಗಡು ಮರೆಯದ ಅಲ್ಲಿ ಜಾತ್ರೆ ಅಂದ್ರೆ ಕಾಣೋದು ಹಣ್ಣು ಕಾಯಿ ವ್ಯಾಪಾರದವರು, ಬೋಂಡಾ ಬಜ್ಜಿ ಕರಿಯೋರು, ಜಿಲೇಬಿ ಜಹಾಂಗೀರ್ ಬಿಡೋರು,ಐಸ್ ಕ್ಯಾಂಡಿ,ಮಂಡಕ್ಕಿ, ಬೆಂಡು ಬತ್ತಾಸು ಮಾರೋರು ಇತ್ಯಾದಿ ಇತ್ಯಾದಿ. ಚಾಕಪೀಸಿದು ತಿನ್ನೋದಲ್ಲ ಅಂತ ಹೇಳ್ತಿದ್ದ ಅಜ್ಜ ಚಾಕಪೀಸಿನ ತುಂಡನ್ನ ಮುರಿದು ಬಾಯಿಗಿಟ್ಟುಕೊಂಡರೆ ಏನಾಗಬೇಡ . ಹೆ ಹೆ, ಇದು ಚಾಕಪೀಸಲ್ವೋ , ಬತ್ತಾಸು ಅಂತ ಅವರು ನಗುತ್ತಿದ್ರೆ, ಮೊದಲ ಬಾರಿಗೆ ಕುರಿಯಾದ ಭಾವ ಎಳೆಯರಾದ ನಮ್ಮದು !. ಅಂದಿಂದ ಇಂದಿನವರೆಗೂ ಜಾತ್ರೆ ಅಂದ್ರೆ ಒಂದು ಕಾಲು ಕೇಜಿಯಾದ್ರೂ ಬೆಂಡು ಬತ್ತಾಸು ತಗೊಳ್ಳದೇ ಬರೋಲ್ಲ. ಜಾತ್ರೆಗಳಲ್ಲಿ ಮಾತ್ರ ಇದು ಸಿಗೋದು ಅನ್ನೋ ಭಾವವೋ, ಈ ಮೂಲಕವಾದ್ರೂ ಅದನ್ನು ಮಾಡುವವರ ಪ್ರೋತ್ಸಾಹಿಸೋಣ ಅನ್ನೋ ಸದುದ್ದೇಶವೋ ಇದರ ಹಿಂದಿದ್ದಿದ್ದಲ್ಲ. ನಮ್ಮನ್ನು ಸೆಳೆಯುತ್ತಿದ್ದಿದ್ದು ಅದರ ಸವಿಯಷ್ಟೆ. ಬತ್ತಾಸು ಅಂದ್ರೆ ಏನಂತಾ ಗೊತ್ತಿಲ್ಲದೋರಿಗೆ ಅದ್ರ ಫೋಟೋ ತೆಗೆದು ಹಾಕಬೇಕಾದ ಪರಿಸ್ಥಿತಿ ಬರಬಹುದೇನೋ ಅನ್ನೋ ಭಯ ಬತ್ತಾಸಿನೊಳಗಣ ಕಡಲೆಯಂತೆ ತಣ್ಣಗೆ ಅಡಗಿ ಕುಳಿತಿತ್ತು.

ದಸರಾಕ್ಕೆ ಒಂದಿಷ್ಟು ಅಂಗಡಿಗಳಲ್ಲಿ ಅಂಗಡಿಪೂಜೆಯ ಸಂಭ್ರಮ. ಅಂಗಡಿಗಳನ್ನೆಲ್ಲಾ ಬಣ್ಣದ ಪೇಪರುಗಳಿಂದ, ವಿದ್ಯುತ್ ಸರಗಳಿಂದ ಅಲಂಕರಿಸೋದ ನೋಡೋಕೆ ಅಂತ್ಲೇ ಸಂಜೆಯಾಗೋದನ್ನ ಕಾಯುತ್ತಿದ್ದ ದಿನಗಳಿದ್ದವು. ಪೇಟೆಯಲ್ಲಿ ಅದೆಷ್ಟು ಪಳಪಳ ಬೆಳಕನ್ನು,ಎಲ್.ಇ.ಡಿ ಸರಗಳನ್ನ ನೋಡಿದ್ರೂ ದಿನದ ಅದೆಷ್ಟೋ ಗಂಟೆಗಳ ಪವರ್ ಕಟ್ಟಿನ ನಡುವೆಯೂ ಲಕ್ಷ್ಮೀ ಪೂಜೆಗೋ, ಅಂಗಡಿಪೂಜೆಗೋ ಹಾಕಿದ ಸರ ಮಿಣಿ ಮಿಣಿ ಮಿಣುಕೋ ದೀಪದ ಸಾಲನ್ನು ನೋಡೋದೇ ಖುಷಿ.ಅಂಗಡಿಪೂಜೇಲಿ ಏನೋ ಕೊಡ್ತಾರೆ ಅಂತಲ್ಲ ಆ ಸಂದರ್ಭದಲ್ಲಾದ್ರೂ ಜೊತೆಯಾಗ್ತಾರಲ್ಲ ಸ್ನೇಹಿತರು ಅನ್ನೋ ಸಂಭ್ರಮ. ಪೇಟೆ ಸುತ್ತೋ ಸಂದರ್ಭಗಳಲ್ಲಿ ಅದೆಷ್ಟೋ ವರ್ಷಗಳಿಂದ ಕಾಣದಿದ್ದ ಅದೆಷ್ಟೋ ಗೆಳೆಯರು ಸಿಕ್ಕಿದ್ದುಂಟು ಈ ವರ್ಷದಂತೆಯೇ ! ಸಾಗರದ ಮಾರಿಕಾಂಬೆ ದೇವಸ್ಥಾನದ ಅಮ್ಮನ ಮನೆಗೂ, ಗಂಡನ ಮನೆಗೂ ನೂರು ಮಾರಿನ ದೂರವಾದ್ರೂ ಅಲ್ಲಿನ ಅಲಂಕಾರಗಳ ನೋಡುತ್ತಾ, ಪಕ್ಕದಲ್ಲೇ ಇರೋ ಸಾಂಸ್ಕೃತಿಕ ಕಾರ್ಯಕ್ರಮಗಳ ನೋಡುತ್ತಾ ಅವೆರಡನ್ನೂ ನೋಡೋಕೆ ಹೋದವರು ಅರ್ಧಘಂಟೆ ಕಳೆದುದ್ದು ಗೊತ್ತಾಗದಿದ್ದಿದು, ಅಲ್ಲೇ ಪಕ್ಕದ ಸಾಗರ್ ಹೋಟಲ್ ಸರ್ಕಲ್ಲಲ್ಲಿ ಈಗ ಸಾಗರ ಹೋಟೆಲ್ ಇಲ್ಲದಿದ್ರೂ ಆ ಹೆಸರು ಮಾತ್ರ ಖಾಯಂ ಆಗಿ ಉಳ್ಕಂಡಿರೋದು.. ಹೀಗೆ ಅದೆಷ್ಟೋ ನೆನಪುಗಳು ದಸರಾ ಅಂದೊಡೆ ಎದುರಾಗುತ್ವೆ.  ಬಾಲ್ಯದ ಮಧುರ ಭಾವಗಳ ಹಸಿರಾಗಿಸುತ್ವೆ. ಶಿವಮೊಗ್ಗೆಯಲ್ಲಿ ಓದಿದ ವರ್ಷಗಳಲ್ಲಿ ಕಂಡ ಅಲ್ಲಿ ನೆಹರೂ ಮೈದಾನದಲ್ಲಿ ಊರ ಎಲ್ಲಾ ದೇವರುಗಳೂ ಬಂದು ಸೇರೋ ದಸರಾ ಆಚರಣೆ, ಬೆಂಗಳೂರಲ್ಲಿ ಬೆಂಗಾಳಿಗಳ ದುರ್ಗಾ ಪೂಜೆ,ಆಫೀಸ ಆಚರಣೆಗಳು.. ಹೀಗೆ ಹತ್ತು ಹಲವು ನೆನಪುಗಳು ಜೊತೆ ಸೇರುತ್ತೆ. ಮತ್ತೊಂದಿಷ್ಟು ನೆನಪುಗಳ ಜೊತೆ ಭೇಟಿಯಾಗೋಣ.. ಮುಂದಿನ ವಾರದಲ್ಲಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x