ಪಂಜು-ವಿಶೇಷ

ನಮ್ಮಪ್ಪನೇ ಈಗ ಸೊಸೈಟಿಯ ಅಧ್ಯಕ್ಷ: ಡಾ. ಗವಿ ಸ್ವಾಮಿ

 

ನಮ್ಮ ಸಂಪಾದಕರ  ಟೈಮ್ ಲೈನನ್ನು ಜಾಲಾಡುತ್ತಿದ್ದೆ.

ಅರೆ, ಡಿಪೋ ಅಕ್ಕಿಯ ಬಗ್ಗೆ ಲೇಖನ ಕಳಿಸಬೇಕಂತೆ ಪಂಜು ವಿಶೇಷ ಸಂಚಿಕೆಗಾಗಿ!

ಛೇ ನಾನು ಇದನ್ನು ಮೊದಲೇ ಗಮನಿಸಬಾರದಿತ್ತಾ. ಇನ್ನೊಂದೇ ದಿನ ಬಾಕಿ ಇದೆ. 18ಕ್ಕೆ ಡೆಡ್ ಲೈನ್.

ಬರೆಯಲೇಬೇಕು. 
ಏನಾದರೂ ಬರೆಯಲೇಬೇಕು.
ಆ ಹಕ್ಕು ನನಗಿದೆ.
ಬಹುಶಃ ಡಿಪೋ ಅಕ್ಕಿಯ ಬಗ್ಗೆ  ಅಧಿಕಾರಯುತವಾಗಿ ಮಾತನಾಡುವ ಹಾಗು ಬರೆಯುವ ಹಕ್ಕು ಇರುವುದು ಅದರ ರುಚಿ ನೋಡಿದವರಿಗೆ ಮಾತ್ರ!

ಅವರಲ್ಲಿ ನಾನೂ ಒಬ್ಬ .
ಅದಕ್ಕೇ ಹೇಳಿದ್ದು ನನಗೆ ಹಕ್ಕಿದೆ ಅಂತಾ.

ಏನು ಬರೆಯಲಿ.
ಫೇಸ್ಬುಕ್ಕಿನಲ್ಲಿ ಕಾಳಗವನ್ನು ನೋಡಿದರೆ ಭಯವಾಗುತ್ತದೆ.

ಒಬ್ಬರು ಹೇಳ್ತಾರೆ ; ರುಪಾಯ್ಗೆ ಒಂದ್ ಕೆ.ಜಿ ಅಕ್ಕಿ ಕೊಡಲಿ ಬಿಡಿ ಸ್ವಾಮಿ. ಅದು ಬಡವರ ಹಕ್ಕು. 
ಅದ್ರಿಂದ ನಿಮ್ಮ ಮನೆ ಗಂಟೇನೋಗುತ್ತೆ. 
ಗೋದಾಮಿನಲ್ಲಿ ಕೊಳೀತಾ ಬಿದ್ದಿರೋದನ್ನೇ ತಾನೆ ಕೊಡ್ತಾ ಇರೋದು. ತಿನ್ಲಿ ಬಿಡಿ ಬಡವರು .

ಇನ್ನೊಬ್ಬರು ಹೇಳ್ತಾರೆ ; ಸರ್ಕಾರ ಜನರನ್ನ ಸೋಮಾರಿಗಳನ್ನಾಗಿ ಮಾಡ್ತಾ ಇದೆ. ಅವರನ್ನ ಓಟಿಗೋಸ್ಕರ ಸಾಕ್ತಾ ಇದೆ. ಅದರು ಬದಲು ಅವರಿಗೆ ಒಂದು ಪರಮನೆಂಟ್ ಪರಿಹಾರ ನೀಡಲಿ . ಆ ಅಕ್ಕಿಯನ್ನು ಖರೀದಿಸೋ ಶಕ್ತಿಯನ್ನು ಅವರಿಗೆ ನೀಡ್ಲಿ. ಉದ್ಯೋಗ ಸೃಷ್ಟಿಸಲಿ.

ವಾದಗಳನ್ನು ನೋಡಿದರೆ, ಬಹುಶಃ ಎರಡೂ ಕಡೆಯವರದ್ದು ಸರಿ ಅನ್ಸುತ್ತೆ.

ಆ ವಿಷಯವನ್ನು ಸದ್ಯಕ್ಕೆ ನಾನಿಲ್ಲಿ ಚರ್ಚಿಸುವುದಿಲ್ಲ.

Let's leave it to experts.

lets come back to the very ಡಿಪೋ ಅಕ್ಕಿ!

ನೀವು ಸೊಸೈಟಿಗೆ ಹೋಗಿದ್ದೀರಾ?
ಕ್ಯೂನಲ್ಲಿ ನಿಂತು ಅಕ್ಕಿ ತಂದಿದ್ದೀರಾ?
ಡಿಪೋ ಅಕ್ಕಿಯನ್ನು ಮುಟ್ಟಿದ್ದೀರಾ?

ಅಲ್ಲಲ್ಲ.
ಡಿಪೋ ಅಕ್ಕಿಯ ಚೀಲದೊಳಕ್ಕೆ ಮೊಣಕೈ ತನಕ  ಕೈತೂರಿಸಿದ್ದೀರಾ ?

ಕೈಗೆ ಮೆತ್ತಿಕೊಳ್ಳುವ ಆ ಬೂದು ಬಣ್ಣದ ಪೌಡರನ್ನು ಮುಖಕ್ಕೆ ಮೆತ್ತಿಕೊಂಡಿದ್ದೀರಾ?
ಅಂಗೈಯನ್ನು ಮೂಗಿನ ಬಳಿಗೆ  ತಂದು  ಆಘ್ರಾಣಿಸಿದ್ದೀರಾ  ಆ typical ಘಮಘಮವನ್ನ?

ನಮಗೆ ಅದೇ ಮಜಾ .
ಚಿಕ್ಕವರಿದ್ದಾಗ ಅಪ್ಪನೊಂದಿಗೆ ಸೊಸೈಟಿಗೆ ಹೋದಾಗ  ಇದೇ ಆಟ .

ಒಂದು ಸಲವಂತೂ ಅಪ್ಪನ ಕಣ್ತಪ್ಪಿಸಿ ಗೋದಾಮಿನೊಳಕ್ಕೆ ಒಬ್ಬನೇ ಹೋಗಿಬಿಟ್ಟಿದ್ದೆ.

ಒಂದರ ಮೇಲೊಂದು ಕೂತಿದ್ದ ಮೂಟೆಗಳನ್ನು ಕತ್ತುನೋಯಿಸಿಕೊಂಡು ನೋಡುತ್ತಿದ್ದಾಗ ಪುತಕ್ ಅಂತ ಬೆಕ್ಕಿನ ಗಾತ್ರದ ಹೆಗ್ಗಣವೊಂದು ಮೂಟೆ ಸಂದಿಯಿಂದ ಜಾರಿಬಿತ್ತು. 
ನಾನು ಚೀರಿಕೊಂಡು ಆಚೆಗೆ ಓಡಿಬಿಟ್ಟಿದ್ದೆ!

ಅಪ್ಪ ಅಕ್ಕಿ ಚೀಲ ಹಿಡಿದುಕೊಂಡರೆ, ನಾನು ಚಿಕ್ಕ ಸಕ್ಕರೆ ಬ್ಯಾಗನ್ನು ಹಿಡಿದುಕೊಂಡು ಬರುತ್ತಿದ್ದೆ.
ಆ ಸಕ್ಕರೆ!
ಶ್! ಬರೆಯಬಾರದು!
ಇಲ್ಲಿ ಕೇಳಿರುವುದು ಅಕ್ಕಿಯ ಬಗ್ಗೆ !

ಜತೆಗೆ ಅಪ್ಪನೊಂದಿಗೆ ಸೊಸೈಟಿಗೆ ಹೋಗುವುದರಿಂದ ನನಗೆ ಇನ್ನೊಂದು ಫಾಯಿದೆ ಇತ್ತು .

ಚಿಲ್ಲರೆ ಚೀಟಿ! 
ಚಿಲ್ಲರೆ ಇಲ್ಲದಿದ್ದಾಗ ಸೆಕ್ರೆಟರಿ ಎರಡು ರೂಪಾಯಿಗೋ ಮೂರು ರೂಪಾಯಿಗೋ ಚೀಟಿ ಬರೆಯುತ್ತಿದ್ದರು. ನಾನು ಪಟ್ಟಂತ ಕಿತ್ತುಕೊಂಡು ಬಿಡುತ್ತಿದ್ದೆ.
ನಾನು ಮತ್ತು ನನ್ನ ತಮ್ಮನಿಗೆ ಅದು  ಚೆಕ್ ಇದ್ದ ಹಾಗೆ!
ಯಾವಾಗ ಬೇಕಾದರೂ ಡ್ರಾ ಮಾಡಬಹುದಿತ್ತು.

ಅಕ್ಕಿಯ ಚೀಲವನ್ನು ಮನೆಗೆ ತೆಗೆದುಕೊಂಡು ಹೋದ ಮೇಲೆ ಶುರುವಾಗುತ್ತಿದ್ದುದೇ ಕಷ್ಟಕರವಾದ ಎರಡನೇ ಹಂತ.

ಸೋಸುವುದು!

ನಾನು ನನ್ನ ತಮ್ಮ ಪೈಪೋಟಿ ಮೇಲೆ ಭತ್ತ ಆಯುತ್ತಿದ್ದೆವು.
ಒಂದೊಂದು ಸಲಾ ಬಿಳಿ ಬಣ್ಣದ ಹುಳುಗಳು ಸಿಗುತ್ತಿದ್ದವು.
ಗಾಜಿನ ಚೂರೂ ಸಿಕ್ಕಿದ್ದುಂಟು!

ಒಮ್ಮೊಮ್ಮೆ ಅಕ್ಕಿ ಉಂಡೆ ಉಂಡೆಯಾಗಿ ಅಂಟಿಕೊಂಡಿರುತ್ತಿತ್ತು.
ಅದನ್ನು ಬಿಡಿಸಿ ಅಕ್ಕಿಯನ್ನು ಹುಡಿ ಹುಡಿಯಾಗಿ ಉದುರಿಸಬೇಕಾಗುತ್ತಿತ್ತು.

ಸೋಸುವ ಕೆಲಸ ಮುಗಿದ ಮೇಲೆ , ನಮ್ಮ ಅವ್ವ ಯಾರ್ಯಾರ ಮನೆಯಲ್ಲಿ ಅಕ್ಕಿಯನ್ನು  ಸಾಲ ಪಡೆದಿದದ್ದಳೋ ಅದನ್ನೆಲ್ಲಾ  ತೀರಿಸಿ  ಬರುತ್ತಿದ್ದಳು .

ಎರಡೋ ಮೂರೋ ಸೇರುಗಳಷ್ಟು ಅಕ್ಕಿಯನ್ನು ಅಂಗಡಿಗೆ ಕೊಟ್ಟು, in exchange ಟೀ ಪೊಟ್ಟಣ, ಒಳ್ಳೆಣ್ಣೆ ಅಥವಾ ರವೆ ಇನ್ನಿತರ ವಸ್ತುಗಳನ್ನು ತರುತ್ತಿದ್ದಳು.

ಒಂದು ಮಾತಂತೂ ಸ್ಪಷ್ಟವಾಗಿ ಹೇಳಿಬಿಡುತ್ತೇನೆ.
ಕಳೆದ ಒಂದು ದಶಕದ ಹಿಂದೆ ಗ್ರಾಮೀಣ ಜನತೆಯನ್ನು ಪೊರೆದ ಎರಡು ಮನೆಗಳೆಂದರೆ ಸೊಸೈಟಿ ಮತ್ತು ಹಾಲಿನ ಡೈರಿ.ಈಗಲೂ ಪೊರೆಯುತ್ತಿವೆ.

ಅವುಗಳಿಲ್ಲದ ಗ್ರಾಮವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ .

ಡಿಪೋ ಅಕ್ಕಿಯ taste ನ ಬಗ್ಗೆ ಹೇಳಲೇ ಇಲ್ಲ ನೋಡಿ ನಾನು .

ಬಿಡಿಬಿಡಿಯಾಗಿರುವ ಅನ್ನಕಿಂತಾ  ಮುದ್ದೆ ರೀತಿ ಪಾತ್ರೆಯಲ್ಲೇ ಪಂಗಿದ ಅನ್ನದ taste ಇನ್ನೂ ಚೆನ್ನಾಗಿರುತ್ತದೆ.

ಜೊತೆಗೆ ಹುರುಳಿಕಾಳಿನ ಸಾರು ಇದ್ದರಂತೂ ಪ್ಚ ಪ್ಚ ಪ್ಚ ಪ್ಚ!

ಒಂದಿಷ್ಟು ಅನ್ನ , ಮೇಲೊಂಚೂರು ಹುರುಳಿಸಾರು ಅದರ ಜೊತೆಗೆ ಮಜ್ಜಿಗೆ !
ಮೂರನ್ನು ಕಲಸಿ ಪಾಯ್ಸ ಮಾಡ್ಕೊಂಡು ಹೊಡಿತಾ ಇದ್ರೆ! ಪ್ಚ ಪ್ಚ ಪ್ಚ ಪ್ಚ್ !

ಮಾರನೇ ದಿನ ದೋಸೆ ಗ್ಯಾರಂಟಿ.
ಅದರ ಟೇಸ್ಟೇ ಬೇರೆ!
ಈ ಸಲಾ ಜೊತೆಯಾಗುತ್ತಿದ್ದುದು  ಕಾಯಿ ಚಟ್ನಿ. ಜೊತೆಗೆ ಸ್ವಲ್ಪ ಮೊಸರು. ಚಟ್ನಿ ಮೊಸರು ಕಂಬೈನ್ ಮಾಡಿ ದೋಸೆಗೆ ಅದ್ದುಕೊಂಡು  ತಿನ್ನುತ್ತಿದ್ದರೆ! ಪ್ಚ ಪ್ಚ ಪ್ಚ ಪ್ಚ !

ofcourse ಈಗಲೂ ನಮ್ಮ ಮನೆಯಲ್ಲಿ ಪ್ರತಿ ಭಾನುವಾರ ಅಥವಾ ಸೋಮವಾರ ಡಿಪೋ ಅಕ್ಕಿಯ ದೋಸೆ ಗ್ಯಾರಂಟಿ.

ಡಿಪೋದ ಅಕ್ಕಿಯ ಇನ್ನೊಂದು ಸೂಪರ್ ಡಿಷ್ ಏನೆಂದರೆ ಬೆಲ್ಲದನ್ನ.
ಬೆಲ್ಲ ಅದಕ್ಕೆ ಚೆನ್ನಾಗಿ ಹಿಡಿಯುತ್ತೆ.

ಇನ್ನೊಂದು ವಿಷ್ಯ ಹೇಳೋದು ಮರೆತೆ.
ಸೊಸೈಟಿಗೆ ಅಕ್ಕಿ ಬಂದ ದಿನ ಸಂಜೆ  ಒಬ್ಬ ಮುದುಕಿ ಪ್ರತಿ ಬೀದಿಗೂ ಬಂದು ಸಾರುತ್ತಿದ್ದಳು.
'ಸೊಸೈಟಿಗಕ್ಕಿ ಬಂದದಾ, 
ನಾಳಕಾ ಎಲ್ರುವಾ  ತಕ್ಕಳಿ ವೋಗೆವ್ವೋ'

ಅವಳ ಸದ್ದು ಕೇಳಿದರೆ ಎಲ್ಲರ ಕಿವಿಗಳು ಜಾಗೃತವಾಗುತ್ತಿದ್ದವು .

ನಾನಂತೂ ಅವಳ ಬಳಿಗೇ ಹೋಗಿ ಅವಳ ದನಿಯನ್ನು ಇಮಿಟೇಟ್ ಮಾಡುತ್ತಿದ್ದೆ.
ನಾವೆಲ್ಲಾ ಸಣ್ಣ ಹೈಕಳು ಆಕೆಯ TYPICAL ದನಿಯನ್ನು ಮಿಮಿಕ್ ಮಾಡುತ್ತಿದ್ದರೆ  ಅವಳಿಗೆ ಖುಷಿ!

ಈಗ ಆ ಮುದುಕಿ ಸತ್ತುಹೋಗಿದ್ದಾಳೆ. ಮಗಳು ಸಾರುತ್ತಾಳೆ.
ಅವಳೂ ಮುದುಕಿಯಾಗಿದ್ದಾಳೆ.
typical ಅವ್ವನ ದನಿಯೇ!
ಅವಳಿಗೆ  ನನ್ನನ್ನು ಕಂಡರೆ ಪ್ರೀತಿ .
ನನಗೂ ಅಷ್ಟೇ.

ಸೀನಿಯರ್ ಮುದುಕಿ ಸಾರಿ ಹೋದ ಮೇಲೆ ಒಳಮನೆಯಲ್ಲಿ ಗುಸುಗುಸು ಚರ್ಚೆ ಶುರುವಾಗುತ್ತಿತ್ತು.

ಬಹುತೇಕ ಸಂದರ್ಭಗಳಲ್ಲಿ ದುಡ್ಡು ಇರುತ್ತಿರಲಿಲ್ಲ.ಸಾಲ ಮಾಡಬೇಕಾಗುತ್ತಿತ್ತು.
ಸಾಲವೂ ಹುಟ್ಟುತ್ತಿರಲಿಲ್ಲ . 
ಅಂತ ಕಡುಗಷ್ಟದ ಕಾಲ ಅದು.

ಈಗಲಾದರೋ , 
ಎದ್ದೇಳು…ಚಿತ್ರದಲ್ಲಿರುವ ಹಾಗೆ, 'ಹೇಗೆ ತೀರಿಸ್ತೀರಾ ಅಂತ ಕೇಳಿದರೆ ನೋ ಕಮೆಂಟ್ಸ್  ಎನ್ನುವ ಪುಂಡುಪೋಕರಿಗಳು ಸಹಾ ಹೇಗೋ ನ್ಯಾಕಿನಿಂದ ಸಾಲ ಎತ್ತಿರುತ್ತಾರೆ!

ಬೀದಿಬೀದಿಗೂ ಮಹಿಳಾ ಸಂಘಗಳಿವೆ.
ಕಂತು ಕೊಡುವವರು ಜಾಸ್ತಿಯಾಗಿದ್ದಾರೆ.

ಆ ವಿಷಯ ಬಿಡಿ.

ಡಿಪೋ ಅಕ್ಕಿಯ ವಿಷಯದಲ್ಲಿ ನಮಗೆ ಡಬಲ್ ಪ್ರಿವೆಲೆಜ್.
ನಮ್ಮ ಊರು ತಮಿಳು ನಾಡಿನ ಬಾರ್ಡರಿಗೆ ಹತ್ತಿರವಿರುವುದರಿಂದ  ಅಲ್ಲಿನ ಅಕ್ಕಿ ನಮಗೆ ಬ್ಲ್ಯಾಕಲ್ಲಿ ಸಿಗ್ತದೆ, ಹತ್ರುಪಾಯ್ಗೆ.

ತಾಳವಾಡಿ ಹೋಬಳಿಯಲ್ಲಿರುವ ಬಹುತೇಕ  ಜನರು ಕನ್ನಡಿಗರೇ.
ನಮ್ಮ ತಾಲೂಕಿನವರಿಗೂ ಅಲ್ಲಿನವರಿಗೂ ನಂಟಿರುವುದರಿಂದ ನಮ್ಮವರು ಅಲ್ಲಿಂದ ಅಕ್ಕಿಯನ್ನು ತಂದು ಬ್ಲ್ಯಾಕಲ್ಲಿ ಮಾರ್ತಾರೆ.
ತಮಿಳುನಾಡು ಡಿಪೋ ಅಕ್ಕಿಯಲ್ಲಿ ಮಾಡಿದ ಇಡ್ಲಿಯ ಟೇಸ್ಟ್ ಸಖತ್ತಾಗಿರುತ್ತೆ, ನಮ್ಮ ಡಿಪೋದ ಅಕ್ಕಿಯ ಇಡ್ಲಿಗಿಂತಲೂ.

ನಾವು ಈಗ ಸ್ವಲ್ಪ ಸ್ಥಿತಿವಂತರಾಗಿದ್ದೇವೆ. 
ನಮಗೆ ಈಗ 
ಡಿಪೋ ಅಕ್ಕಿಯ ಅವಶ್ಯಕತೆಯಿಲ್ಲದಿದ್ದರೂ ಸಹಾ ಏನೋ ಒಂದು ಸೆಳೆತ.

ಮೊದಲು BPL ಕಾರ್ಡಿತ್ತು . ಪಂಪ್ಸೆಟ್ ಮಾಡಿದ ಮೇಲೆ ಕಿತ್ತುಕೊಂಡರು!

ಈಗ APL ಕಾರ್ಡಿದೆ. ಆದರೆ ಅದನ್ನು ಬಿಟ್ಟುಕೊಡಲು ನಾವು ತಯಾರಿಲ್ಲ!

ನನಗೆ ಭಯವಾಗುತ್ತದೆ.
ಒಂದು ವೇಳೆ ನಾವು ಆ ಕಾರ್ಡನ್ನು ವಾಪಾಸ್ ಮಾಡಿಬಿಟ್ಟರೆ, ಆ ಮರುಕ್ಷಣವೇ ನಾವು ಸ್ಥಿತಿವಂತರಾಗಿಬಿಟ್ಟಿದ್ದೇವೆ ಎಂಬ  EGO ಶುರುವಾಗಿಬಿಡುತ್ತದೇನೋ ಎಂಬ ಆತಂಕ ನನ್ನದು.

ಆ ಈಗೋವನ್ನು ಮೆಟ್ಟಿ ನಿಲ್ಲಲು ನಾವು ಈಗಲೂ ಡಿಪೋ ಅಕ್ಕಿ ಅನ್ನವನ್ನೇ ಉಣ್ಣುತ್ತೇವೆ.

ಈಗ ಡಿಪೋ ಅಕ್ಕಿಯನ್ನು ತರಲು ನೂರು ರೂಪಾಯಿ  ಜೇಬಿನಲ್ಲಿ ಇದ್ದೇ ಇರುತ್ತದೆ ಎಂಬುದೊಂದೇ DIFFERENCE.

ಇನ್ನೊಂದು ವಿಷಯ ಹೇಳಲು ಏಕೋ ಸಂಕೋಚವಾಗುತ್ತದೆ.
ಆದರೂ ಹೇಳಿಬಿಡುತ್ತೇನೆ.

ನಮ್ಮಪ್ಪನೇ ಈಗ ಸೊಸೈಟಿಯ ಅಧ್ಯಕ್ಷ .
ಮಾಮೂಲಿನಂತೆ ತಾನೇ ಲೈನಿನಲ್ಲಿ ನಿಂತು ಅಕ್ಕಿ ತರುತ್ತಾನೆ. ಸುಮಾರು ಜನ ಬಡವರಿಗೆ ರೇಷನ್ ಕಾರ್ಡ್ ಮಾಡಿಸಿಕೊಟ್ಟಿದ್ದಾನೆ.
ಸೊಸೈಟಿಯ ಒಂದು ಪೈಸೆಯನ್ನು ಮುಟ್ಟಿದವನಲ್ಲ.
ಸೆಕ್ರೆಟರಿ ಯಾವ್ಯಾವುದೋ ಚೆಕ್ ಗಳನ್ನು ತಂದು ಸೈನ್ ಹಾಕಿಸಿಕೊಂಡು ಹೋಗುತ್ತಾರೆ .ಅವರಿಂದ ಒಂದು ಪೈಸೆಯನ್ನೂ  ಕೇಳುವುದಿಲ್ಲ.

ನಮ್ಮವ್ವ ರೇಗಿಸುತ್ತಿರುತ್ತಾಳೆ, 'ಅದ್ಯಕ್ಸ್ರಂತ ಅದ್ಯಕ್ಸ್ರು… ಯಾವ್ ಸೀಮ ಅದ್ಯಕ್ಸ್ರ ನೀವು.. ಏಡ್ ಕೇಜಿ ಅಕ್ಕಿ ಜಾಸ್ತಿ ತರಕ್ಕಾಗಲ್ಲ ನಿಮ್ಕೈಲಿ'

ಅದಕ್ಕೆ ನಮ್ಮಪ್ಪ , ' ಓಗಮ್ಮೇ ' ಅಂತ ಗದರಿಸಿ ಸುಮ್ಮನಾಗುತ್ತಾನೆ!

ನಿಮ್ಮಪ್ಪ ಅಧ್ಯಕ್ಷ , ಅದಕ್ಕೇ APL ಕಾರ್ಡು ಇಟ್ಟುಕೊಂಡಿದ್ದೀರಿ , ಅದನ್ನು ವಾಪಾಸ್ ಮಾಡಿ ಅಂತ ಮಾತ್ರ ಕೇಳಬೇಡಿ!

ನಮ್ಮಪ್ಪನನ್ನು ಒಪ್ಪಿಸಬಹುದು ಆದರೆ, ನಮ್ಮವ್ವಳನ್ನು ಒಪ್ಪಿಸಲು ಸಾಧ್ಯವಿಲ್ಲ .
BPL ಕಾರ್ಡ್ ಹೋದಾಗಲೇ ತುಂಬಾ ಜಗಳವಾಡಿದ್ದಳು!

APL ಕಾರ್ಡು ನಮ್ಮ EGO KILLER!

ಕನ್ನಡದ ಬರಹಗಳನ್ನು ಹಂಚಿ ಹರಡಿ

11 thoughts on “ನಮ್ಮಪ್ಪನೇ ಈಗ ಸೊಸೈಟಿಯ ಅಧ್ಯಕ್ಷ: ಡಾ. ಗವಿ ಸ್ವಾಮಿ

 1. ಒಂದು ಚಿಕ್ಕ CORRECTION.
  ಈಗಲೂ ನಮ್ಮ ಬಳಿ BPL ಕಾರ್ಡೇ ಇದೆ!
  ಮೂರು ವರ್ಷಗಳ ಹಿಂದೆ ಅದನ್ನು ಕಿತ್ತುಕೊಂಡು APL ಗೆ ಬದಲಾಯಿಸುವ ಪ್ರಯತ್ನ ನಡೆದದ್ದು ನಿಜ.

  ಆದರೆ ಹೇಗೋ ಅದೇ ಕಾರ್ಡು ಉಳಿದುಕೊಂಡಿದೆ.
  ನನಗೆ ಇದು ಗೊತ್ತೇ ಇರಲಿಲ್ಲ .
  ಹಲವು ಬಾರಿ ಕಾರ್ಡು ನೋಡಿದ್ದೇನೆ .
  ಆದರೆ ಅದು ಏಪಿಯೆಲ್ಲಾ ಅಥವಾ ಬಿಪಿಯೆಲ್ಲಾ ಎಂಬುದನ್ನು ಸರಿಯಾಗಿ ಪರೀಕ್ಷಿಸಿಯೇ ಇರಲಿಲ್ಲ .

  ಮೊನ್ನೆ ಲೇಖನ ಕಳಿಸಿದ ಮೇಲೆ ನೋಡುತ್ತೇನೆ .
  ಮೂಲೆಯಲ್ಲಿ BPL ಸಿಂಬಲ್ ಇದೆ!

  ಕೈ ಹಿಸುಕಿಕೊಂಡೆ.
  ಲೇಖನ ಬರೆಯುವ ಒಮ್ಮೆ ಕಾರ್ಡನ್ನು ಸರಿಯಾಗಿ ಪರೀಕ್ಷಿಬಾರದಿತ್ತಾ?!

  BUT ANYWAYS, ಕೊನೆ ಸಾಲನ್ನು ಹೀಗೆ ಬದಲಾಯಿಕೊಂಡು ಓದಿಕೊಳ್ಳಿ;

  ‘BPL ಕಾರ್ಡು ನಮ್ಮ EGO KILLER!’

  (ಹೌದು . ಅದು ನಿಜಕ್ಕೂ ನಮ್ಮ EGO KILLER)

 2. ಡಾ.ಗವಿ ಸ್ವಾಮಿಯವರೇ, ಲಘುಹಾಸ್ಯದ ದಾಟಿಯ ಹಿಂದಿರುವ ಬಡತನದ ನೋವನ್ನು ನೈಸಾಗಿ ಓದುಗರ ಮನಕ್ಕೆ ತಲುಪಿಸುವ ನಿಮ್ಮ ಶೈಲಿ ಆತ್ಮೀಯವೆನಿಸಿತು. ಗೆಳೆಯನೋರ್ವ ಪಕ್ಕದಲ್ಲಿ ಕುಳಿತುಕೊಂಡು ಗತಕಾಲದ ಸವಿನೆನಪನ್ನು ಹೇಳಿದಂತಾಯಿತು. ಶುಭದಿನ !

 3. ಓದಿದ ಮತ್ತು ಅಮೂಲ್ಯ ಅಭಿಪ್ರಾಯಗಳನ್ನು ದಾಖಲಿಸಿದ ಎಲ್ಲರಿಗೂ ಧನ್ಯವಾದಗಳು .

Leave a Reply

Your email address will not be published. Required fields are marked *