ನಮಸ್ಕಾರ….ನಮಸ್ಕಾರ: ಹೊರಾ.ಪರಮೇಶ್

'ನಮಸ್ಕಾರ' ಈ ಸಂಬೋಧನಾ ಶಬ್ದವನ್ನು ಬಳಸದಿರುವ ಅಥವಾ ಕೇಳದಿರುವ ಯಾವುದೇ ವ್ಯಕ್ತಿ ಅಥವಾ ಕನ್ನಡಿಗ ಇಲ್ಲವೆಂದೇ ಭಾವಿಸಿದ್ದೇನೆ.ಆಂಗ್ಲ ಭಾಷಾ ಪ್ರೇಮಿಗಳು ಗುಡ್ ಮಾರ್ನಿಂಗ್ ; ಆಫ್ಟರ್ ನೂನ್, ಗುಡ್ ನೈಟ್ ಎಂದು ಹೇಳಿದರೂ ಅದರ ಅಂತರಾರ್ಥದ ಭಾವ 'ನಮಸ್ಕಾರ'ವೇ ಆಗಿದೆ.ಈ ಶಬ್ದದ ಹರವು ಸಾಗರದಷ್ಟು ವಿಶಾಲವಾದುದಾಗಿದೆ.ವಿವಿಧ ಸಂದರ್ಭಗಳಲ್ಲಿ ವಿಧ ವಿಧ ಅರ್ಥವಂತಿಕೆಯನ್ನು ಹೇಗೆಯ ಪಡೆದುಕೊಂಡಿದೆ ಎಂಬುದರ ಸುತ್ತ ಮುತ್ತ ಸುತ್ತಾಡಿ ಬರುವ ಉದ್ದೇಶ ನನ್ನದು.ಅದಕ್ಕೂ ಮುಂಚೆ ನಮಸ್ಕಾರ ಎಂದರೇನು? ಎಂದು ನೋಡಿಬಿಡೋಣ.

ಸಾಕು ಸುಮ್ನಿರ್ರಿ, 'ನಮಸ್ಕಾರ' ಅಂದ್ರೆ ನಮಗೆ ಗೊತ್ತಿಲ್ವೆ ? ಎಂದು ಮೂಗು ಮುರಿಯಬೇಡಿ.ನನಗೆ ಅನ್ನಾಸೋದನ್ನಷ್ಟೇ ಹೇಳುತ್ತೇನೆ.ನಿಮಗೆ ಅನ್ನಿಸೋದನ್ನು ನಾನು ಹೇಳೋದರೊಂದಿಗೆ ತಾಳೆ ಮಾಡಿಕೊಳ್ಳೊದು ನಿಮಗೆ ಬಿಟ್ಟಿದ್ದು.ವ್ಯತ್ಯಾಸವಾದರೆ ನಿಮಗೊಂದು ದೊಡ್ಡ ನಮಸ್ಕಾರ ಅಂತಾ ಸುಮ್ಮನಾಗಿ ಬಿಡ್ತೇನೆ.ನೋಡಿ ಈಗ ನಾನೇ ನಿಮಗೆ ದೊಡ್ಡ ನಮಸ್ಕಾರ ಅಂತಾ ಹೇಳಿದ್ನಲ್ಲಾ, ಅದಕ್ಕೂ ಮೂಲ ನಮಸ್ಕಾರಕ್ಕೂ ಅದೆಷ್ಟೋ ವ್ಯತ್ಯಾಸ ಆಯ್ತು ಅಲ್ವೇ ?

ಅಂದ ಹಾಗೇ ನಮಸ್ಕಾರ ಅಂದರೆ, ನಮಿಸುವುದು, ನಮಸ್ಕರಿಸುವುದು, ಗೌರವಿಸುವುದು, ಪ್ರಾರ್ಥಿಸುವುದು ಎಂಬ ಅರ್ಥಗಳಿದ್ದು ವಿವಿಧ ಸಂದರ್ಭಗಳಿಗೆ ಅನುಗುಣವಾಗಿ ಬಳಕೆಯಾಗುತ್ತದೆ.ಅದು ಹೇಗೆ ಎಂಬುದನ್ನು ಮುಂದೆ ಕೆಲ ಸಂದರ್ಭಗಳೊಂದಿಗೆ ವಿವರಿಸುತ್ತಿದ್ದೇನೆ.ಮುಂದೆ ಓದಿ.

ಪ್ರತಿ ದಿನ ಮುಂಜಾನೆ ಎದ್ದು ಯೋಗಾಸನ  ಮಾಡೋ ಯೋಗಾಪಟುಗಳು ಸೂರ್ಯ ನಮಸ್ಕಾರ ಹಾಕುತ್ತಾರೆ ಜಗವನ್ನು ಬೆಳಗುವ ಜಗದ ಜೀವಿಗಳೆಲ್ಲಕ್ಕೂ ಚೈತನ್ಯ ನೀಡುವ ಸೂರ್ಯ ದೇವನಿಗೆ ನಮಸ್ಕರಿಸುವ ಮೂಲಕ ಮನಃಶಾಂತಿಗಾಗಿ ಪ್ರಾರ್ಥಿಸುತ್ತಾರೆ.ಹೀಗೆ ಮಾಡುವ ಮೂಲಕ ದೇಹಕ್ಕೂ ಮನಸ್ಸಿಗೂ ಒಳ್ಳೆಯ ವ್ಯಾಯಾಮ ಆಗಿ ಆರೋಗ್ಯವಂತರಾಗುವುದು ಅವರ ಉದ್ದೇಶ ಮತ್ತು ಜೀವನದಲ್ಲಿ ಸದಾ ಚೈತನ್ಯ-ಆರೋಗ್ಯ ಬಯಸುವ ಪ್ರತಿಯೊಬ್ಬರಿಗೂ ಈ ಅಭ್ಯಾಸ ಅಗತ್ಯ ಕೂಡ.ಆದರೆ ಸೂರ್ಯ ಉದಯಿಸಿ ತಾಸು ಗಂಟೆ ಬಿಟ್ಟು ಎದ್ದೇಳುವ ಸೂರ್ಯ ವಂಶಸ್ಥ ಶಿಖಾಮಣಿಗಳಿಗೆ ಅವರ ತಾಯಿ ತಂದೆಯರು ಹೇಳಿ ಹೇಳಿ ಸಾಕಾಗಿ ಅವರ ಸೋಮಾರಿತನಕ್ಕೆ ಒಂದು ದೊಡ್ಡ ನಮಸ್ಕಾರ ಹೇಳಿ ಸುಮ್ಮನಾಗಿಬಿಡುತ್ತಾರೆ.

ಮೊದಲೇ ಹೇಳಿದಂತೆ ನಮಸ್ಕಾರ ಎಂದರೆ ನಮಿಸುವುದು, ತಲೆಬಾಗುವುದು, ಗೌರವಿಸುವುದು ಎಂದು ಅರ್ಥೈಸಬಹುದಾದರೆ ಯಾರಿಗೆ ? ಎಂಬ ಪ್ರಶ್ನೆ ಎದುರಾಗುತ್ತದೆ.ಆಗ ಹಿರಿಯರಿಗೆ, ತಾಯಿ ತಂದೆಯರಿಗೆ, ಗುರುಗಳಿಗೆ, ದೇವರಿಗೆ, ಸಾಧಕರಿಗೆ, ಶರಣರಿಗೆ….. ಹೀಗೆ ಸಾಧನಾಶೀಲ, ಹಿರಿಯರನ್ನೂ ಗೌರವಿಸುವ, ನಮಸ್ಕರಿಸಿ, ಪ್ರೋತ್ಸಾಹಿಸುವ, ಪ್ರಶಂಸಿಸುವ ಪರಿಪಾಠವಿದೆ.ಇದು ಸಜ್ಜನಿಕೆಯೂ, ಸನ್ನಡತೆಯೂ, ಸತ್ಸಂಪ್ರದಾಯವೂ ಹೌದು. ಜೊತೆಗೆ ಜ್ಞಾನವಂತರೂ, ಸಿರಿವಂತರೂ, ನೀತಿವಂತರು.ಅಧಿಕಾರಿಗಳು, ರಾಜಕಾರಣಿ ಪ್ರಭುಗಳನ್ನೂ ನಮಸ್ಕರಿಸುವ ರೂಢಿ ಇದೆ. ನಮಸ್ಕರಿಸುವಲ್ಲಿ ಕೆಲವು ವಿಧಗಳಿದ್ದು, ಮುಖ್ಯವಾಗಿ ಎರಡೂ ಕೈಗಳಿಂದ ಕೈ ಮುಗಿಯುವುದು, ಬಲಗೈ ಹಸ್ತವನ್ನು ಹಣೆಯ ಬದಿಗಿಟ್ಟು ಎಲಡೂ ಹೊಡೆಯುವುದು, ಹಸ್ತವನ್ನು ಎದೆಯ ಭಾಗದಲ್ಲಿಟ್ಟು ಬಾಗುವುದು, ದೀರ್ಘದಂಡ ಹಾಕಿ ನಮಸ್ಕರಿಸುವುದು, ಮಿಲಿಟರಿ ಸಿಪಾಯಿಗಳಂತೆ ಠಾಕುಠೀಕಿನಿಂದ ಸೆಲ್ಯೂಟ್ ಹೊಡೆಯುವುದು…..ಹೀಗೆ ನಾನಾ ಪ್ರಕಾರದ ನಮಸ್ಕಾರ ವಿಧಾನಗಳನ್ನು ಕಾಣಬಹುದು.

ವಿವಿಧ ಇಲಾಖೆಗಳ ಮೇಲಾಧಿಕಾರಿಗಳಿಗೆ ಸಹಾಯಕ ಸಿಬ್ಬಂದಿ ತಾವು ಕರ್ತವ್ಯಕ್ಕೆ ಹಾಜರಾಗುವ ಮೊದಲು ನಮಸ್ಕಾರ ಹೇಳುತ್ತಾರೆ. ಕೆಳಗಿನಿಂದ ಮೇಲು ಹಂತದವರೆಗೆ ಒಬ್ಬರಿಗೊಬ್ಬರು ನಮಸ್ಕರಿಸುವ ಕಾರ್ಯ ನಿತ್ಯ ನಿರಂತರವಾಗಿ ನಡೆಯುತ್ತಿರುತ್ತದೆ.

ಅಧಿಕಾರದ ವಿಷಯದಲ್ಲಿ ಆಯಾ ಸ್ಥಾನಗಳಿಗೆ ಅನುಗುಣವಾಗಿ ಗೌರವಿಸುವ ಸತ್ಸಂಪ್ರದಾಯ ಒಳ್ಳೆಯದೆ ಆದರೂ ಕೆಲವೊಮ್ಮೆ ನಗೆ ಪಾಟಲಿಗೀಡಾಗುತ್ತದೆ. ಕೆಲವು ಅಧಿಕಾರಿಗಳು, ನೌಕರರು ತಮ್ಮ ಸೇವಾ ಹಿರಿತನವನ್ನೇ ಮುಂದು ಮಾಡಿಕೊಂಡು ತಾವಾಗಿಯೇ ನಮಸ್ಕಾರದ ಗೌರವ ಆಪೇಕ್ಷಿಸುತ್ತಾರೆ.ಸೀನಿಯರ್ ಜ್ಯೂನಿಯರ್ ಎಂಬ ಬೇಧ-ಭಾವ ಈ ನಮಸ್ಕಾರ ಕೊಡು ತೆಗೆದುಕೊಳ್ಳುವಿಕೆಯಲ್ಲಿ ಜಟಾಪಟಿ ನಡೆಸುತ್ತದೆ.

ಕೆಲವೊಮ್ಮೆ ದಕ್ಷ ಪ್ರಾಮಾಣಿಕರಾದ, ಸಂಭಾವಿತ ವ್ಯಕ್ತಿತ್ವ ಹೊಂದಿದ ಅಧಿಕಾರಿಗಳಿಗೆ ನಮಸ್ಕಾರ ಗೌರವಗಳು ತಾವಾಗಿಯೇ ಲಭಿಸುತ್ತವೆ.ತಾವಾಗಿಯೇ ಆಪೇಕ್ಷಿಸುವವರಿಗೆ ಸಿಗುವ ನಮಸ್ಕಾರಗಳು ಕೃತಕವಾಗಿ ಕೂಡಿರುತ್ತವೆ.ಕೆಲವು ಸರಕಾರಿ ಅಥವಾ ಸರ್ಕಾರೇತರ ಕಛೇರಿಗಳು, ಆಸ್ಪತ್ರೆಗಳಿಗೆ ಹೋದಾಗ ಮೊದಲಿಗೆ ನಮಸ್ಕಾರ ಸಾರ್ ಎಂದು ಸಂಬೋಧಿಸಿ ಮುಂದುವರೆದರೆ ಸರಿ, ಇಲ್ಲವಾದರೆ ನಿಮ್ಮೊಂದಿಗೆ ಸಿಡುಕಿನಿಂದ ಕುಳಿತುಕೊಳ್ಳಿ ಎಂಬ ಸೌಜನ್ಯವೂ ದೊರೆಯದೆ ನೀವು ಹೋಗಿರುವ ಕೆಲಸವೂ ಸುಸೂತ್ರವಾಗುವುದಿಲ್ಲ. ಅದರ ಬದಲು ಗೌರವ ಇರಲಿ ಬಿಡಲಿ ಒಂದು ನಮಸ್ಕಾರ ಹೇಳಿ ಬಿಡಿ ಮುಂದೆ ಎಲ್ಲಾ ಸಲೀಸು.ಆಯ್ಕೆ ನಿಮ್ಮದು. 

ನಮ್ಮ ಭಾರತೀಯ ಗುರು ಪರಂಪರೆಯಲ್ಲಿ ಅಧ್ಯಾಪಕ ಅಥವಾ ಉಪಾಧ್ಯಾಯ ವೃತ್ತಿಗೆ ಮಹತ್ವದ ಸ್ಥಾನ, ಗೌರವ ಹಿಂದಿನಿಂದಲೂ ಇದೆ. ಈಗಲೂ ಇದೆ. ಕೆಲವೊಬ್ಬ ಅನೈತಿಕ ನಡತೆಯ ಶಿಕ್ಷಕರಿಂದ ಇಡೀ ಗುರುಸಂಕುಲಕ್ಕೆ ಮಸಿ ಇತ್ತೀಚೆಗೆ ಬೀಳುತ್ತಿದೆಯಾದರೂ ಅದು ನಗಣ್ಯ ಅಂತಹವರಿಗೊಂದು ದೊಡ್ಡ  ನಮಸ್ಕಾರ ಹೇಳಿ ದೂರ ಇದ್ದು ಬಿಟ್ಟರೆ ಸಮಾಜದಿಂದ ದೂಷಿಸಲ್ಪಟ್ಟ ದುಷ್ಟರೂ ಮನಪರಿವರ್ತನೆ ಮಾಡಿಕೊಂಡು ಸತ್ಗಂಗಕ್ಕೆ ಸೇರಲೂ ಬಹುದೆಂದು ಆಶಿಸುವ.

ಒಳ್ಳೆಯ ಗುಣ, ಸ್ವಭಾವ, ಪಾಂಡಿತ್ಯ,ಬೋಧನಾ ಕೌಶಲ್ಯ ಹೊಂದಿರೊ ಪ್ರಾಮಾಣಿಕ ಸೇವಾ ಮನೋಭಾವ ಇರುವ ಶಿಕ್ಷಕ ಬೋಧನಾ ಪ್ರತಿ ನಿತ್ಯ ನೂರಾರು ನಮಸ್ಕಾರಗಳು ಶಿಷ್ಯಕೋಟಿಯಿಂದ ಪ್ರಾಪ್ತವಾಗುತ್ತವೆ.

ಈ ಶಿಷ್ಯ ಸಮೂಹದ ಪ್ರೀತಿಯ ಋಣ ಭಾರವನ್ನು ಗುವಾದವರು ತೀರಿಸಲು ಈ ಒಂದು ಜನ್ಮ ಸಾಲದು ಅದಕ್ಕಾಗಿಯೇ ಗುರುಗಳಾದವರು ವಿದ್ಯಾದಾಬನದ ಪವಿತ್ರ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬಯಸುತ್ತಾರೆ.

ಕಾಲೇಜು ಹಂತದಲ್ಲಿ ಉಪನ್ಯಾಸಕರು ಪಾಂಡಿತ್ಯವುಳ್ಳವರೂ ಗಾಂಬೀರ್ಯ ವ್ಯಕಜ್ತಿತ್ವದವರೂ ಸಹೃದಯವಂತರೂ ಆಗಿದ್ದರೆ ಸರಿ, ತಪ್ಪಿದ್ದರೆ ಕಾಲೇಜು ವಿದ್ಯಾರ್ಥಿಗಳ ನಮಸ್ಕಾರದ ಪರಿ ಕಿರಿಕಿರಿ ಉಂಟು ಮಡಿ ಗೋಳು ಹುಯ್ದುಕೊಳ್ಳುವ ಸ್ಥಿತಿ ಶೋಚನೀಯವಾಗಿರುತ್ತದೆ.

ಶಾಲಾ ಕಾಲೇಜುಗಳ ಸಿಬ್ಬಂದಿ ವರ್ಗದಲ್ಲಿಯೂ ಸೇವಾ ಹಿರಿತನ ಕಿರಿತನಗಳ ಬೇಧಭಾವದ ನಡುವೆಯೇ ನಮಸ್ಕಾರ ವಿನಿಮಯ ನಡೆಯುತ್ತದೆ. "ಅವನು ವೃತ್ತಿಗೆ ಇನ್ನೂ ಹೊಸಬ, ನನ್ನ ನೋಡಿಯೂ ನಮಸ್ಕರಿಸದೆ ಹೋಗುತ್ತಿದ್ದಾನೆ, ಎಷ್ಟು ಸೊಕ್ಕು ಅವನಿಗೆ?" ಎಂದು ಹೇಳುವುದನ್ನು  ನೋಡುತ್ತಿರುತ್ತೇವೆ. ಆತ ಬೇಕೆಂತಲೇ ಮಾಡಿದನೋ,ಮರೆತನೋಹೇಗೆ ಎಂಬ ಗೋಜಿಗೆ ಹೋಗದೆ ಹಳಿಯಲು ಛೇಡಿಸಲು ಶುರುಮಾಡುತ್ತಾರೆ. ಅಷ್ಟಕ್ಕೂ ಬಲವಂತವಾಗಿ ಪಡೆಯುವ ಗೌರವ ನಮಸ್ಕಾರಗಳಿಗೆ ಬೆಲೆ ಇದೆಯೇ? ನಮ್ಮ ವ್ಯಕ್ತಿತ್ವ ಕರ್ತವ್ಯ ಶುದ್ಧ ಮಾರ್ಗದಲ್ಲಿದ್ದರೆ ಅವೇ ನಮ್ಮನ್ನು ಹುಡುಕಿಕೊಂಡು ಬರುತ್ತವೆಂಬ ಸತ್ಯ ಯಾರ ಅರಿವಿಗೂ ಬಾರದಿದ್ದರೆ ಇಂತಹ ನಮಸ್ಕಾರಗಳ ಅವಾಂತರ ಇದ್ದದ್ದೇ.

ಪೋಲಿಸ್ ಇಲಾಖೆಯಲ್ಲಿನ ನಮಸ್ಕಾರಗಳ ಪರಿಯೇ ಬೇರೆ, ಕರ್ತವ್ಯಕ್ಕೆ ಬಂದ ತಕ್ಷಣ ಅಥವಾ ಬೇರಾವುದೇ ಸಂದರ್ಭಗಳಲ್ಲಿ ಮೇಲಾಧಿಕಾರಿಗಳ ದರ್ಶನವಾಗುತ್ತಿದ್ದಂತೆ ತಮ್ಮ ಪಥ ಸಂಚಲನದ ಹೆಜ್ಜೆಗಳನ್ನು ಟಪ್ ಎಂದು ಬಡಿದು ಬಲಗೈಯ ಹಸ್ತವನ್ನು ಹಣೆಗೆ ಮುಟ್ಟಿಸಿ ನಮಸ್ಕಾರಿಸುತ್ತಾರೆ. ಇವರ ಈ ರೀತಿಯ ನಮಸ್ತೆಯು ಶಿಸ್ತಿನ ಚೌಕಟ್ಟಿನಲ್ಲಿಯೇ ಇರುತ್ತದೆ. 

ನಮ್ಮನ್ನು ಆಳುವ ದೊರೆಗಳ ನಮಸ್ಕಾರದ ವಿಶೇಷ ನೋಡಿ ಐದು ವರ್ಷಗಳಿಗೆ ಒಮ್ಮೆ ಬಂದು ಬಡ ಬೋರೇಗೌಡನಿಗೆ ನಮಸ್ಕಾರಿಸಿ ಓಟು ಗಿಟ್ಟಿಸಿ ವಿಧಾನಸೌಧದ ಮೆಟ್ಟಿಲು ಏರಿದರಾಯಿತು.ನಮ್ಮ ಬಡ ಬೋರೇಗೌಡ ತನ್ನ ಕೆಲಸ ಕಾರ್ಯಗಳಿಗಾಗಿ ತಾನೇ ಆರಿಸಿ ಕಳಿಸಿದ ಪ್ರಭುಗಳಿಗೆ ಕೈಮುಗಿದು ನಮಸ್ಕರಿಸಿ ಕೃಶವಾಗಿ ಹೋಗುತ್ತಾನೆ. ಪ್ರಚಾರ ಸಮಯದಲ್ಲಿ ಕೈ ಮುಗಿಯಲು ಎತ್ತಿದ ಕೈಗಳು ಫಲಿತಾಂಶದವರೆಗೂ ಇಳಿಯುವುದೇ ಇಲ್ಲ.ಅನಂತರದ ಶ್ರೀಸಾಮಾನ್ಯನ ಸ್ಥಿತಿ ನಿಮಗೆ ಗೊತ್ತಲ್ಲ ? ಕಂಡಾಗಲೆಲ್ಲಾ ಕೈ ಮುಗಿದು ಮನವಿ ಪತ್ರ ಹಿಡಕೊಂಡು ಅಲೆದಾಡಿದರೂ ಇವರ ನಮಸ್ಕಾರ ಸ್ವಾಮಿ ಎಂಬ ಅಳಲಿಗೆ ಕಾಸಿನ ಕಿಮ್ಮತ್ತೇ ಸಿಗುವುದಿಲ್ಲ.ತಮ್ಮ ಮತಗಳಿಂದಲೇ ದೊರೆಯಾದ ಪ್ರತಿನಿಧಿಗೆ ದಿನನಿತ್ಯ ಸಲಾಮು, ಹೊಡೆಯುತ್ತಾ ಗಾಣದೆತ್ತಿನ ತರಹ ಸುತ್ತುವುದೊಂದೇ ಕಾಯಕವಾಗಿಬಿಡುತ್ತದೆ.

ನಮ್ಮ ತಾಯಿ ಭಾರತ ಮಾತೆಗೆ, ರಾಷ್ಟ್ರದ ಏಳಿಗೆ, ದುಡಿದ ಮಹನೀಯರಿಗೆ ರಾಷ್ಟ್ರವನ್ನು ಪ್ರತಿನಿಧಿಸುವ ಗೀತೆ, ಚಿಹ್ನೆ ಮತ್ತು ಲಾಂಛನಗಳಿಗೆ ಗೌರವ ಪೂರ್ವಕವಾಗಿ ಪ್ರತಿಯೊಬ್ಬ ದೇಶಪ್ರೇಮಿಯು ನಮಸ್ಕರಿಸಿ ಗೌರವಿಸುತ್ತಾನೆ.ಈ ಪುಣ್ಯ ಕಾರ್ಯದಲ್ಲಿ ನಮಸ್ಕಾರಕ್ಕೆ ಇರುವ ಮಹತ್ವವನ್ನು ಅರಿಯಬಹುದು.ರಾಷ್ಟ್ರಪತಿ, ಪ್ರಧಾನ ಮಂತ್ರಿಗಳು ರಾಷ್ಟೀಯ ಹಬ್ಬಗಳಂದು ಕೆಂಪು ಕೋಟೆಯ ಧ್ವಜಾರೋಹಣ ಸಂದರ್ಭದಲ್ಲಿ ಧ್ವಜವಂದನೆಯನ್ನು ಸ್ವೀಕರಿಸುವ ಕ್ಷಣ ರೋಮಾಂಚನಕಾರಿಯಾದುದು.ನಾಡಿನ ಪ್ರತಿಯೊಬ್ಬ ಪ್ರಜೆಯು ಧಮನಿ ಧಮನಿಯಲ್ಲಿ ದೇಶಾಭಿಮಾನ, ಗೌರವ ಉಕ್ಕಿಸುವ ಕ್ಷಣವದು.ಆ ಧ್ವಜವಂದನಾ ಸ್ವೀಕಾರದ ಗೌರವಕ್ಕೆ ಅದೆಷ್ಟು ಬೆಲೆ ಯೋಚಿಸಿ.

ಅಂತಹ ಪವಿತ್ರ ನಮಸ್ಕಾರದಿಂದ ನಮ್ಮ ನಮ್ಮಗಳ ಮಧ್ಯೆ ಪ್ರೀತಿಯ ಬೆಸುಗೆ ಏರ್ಪಡಲಿ, ಪರಸ್ಪರ ವಿಶ್ವಾಸ ವೃದ್ಧಿಸಲಿ, ಗೌರವ ವಿನಿಮಯವಾಗಲಿ, ಅತ್ಯಗತ್ಯಗಳು ಅವಿರ್ಭವಿಸಲಿ.ಮನುಕುಲದ ಮಧುರ ಬಾಂಧವ್ಯದ ಸಂಕೇತ ಈ ನಮಸ್ಕಾರ ಆಗಲಿ. ಇದರ ವ್ಯಂಗ್ಯಾರ್ಥ ನಿಲ್ಲಲಿ. ಎಲ್ಲರೂ ಹೃದಯದಿಂದ ನಮಸ್ಕರಿಸುವಂತಾಗಲೆಂದು ಆಶಿಸುತ್ತೇನೆ. ಮತ್ತೊಮ್ಮೆ ನಿಮಗೆ ನಮಸ್ಕಾರಗಳು.         

ವಂದನೆಗಳೊಂದಿಗೆ,
–ಹೊರಾ.ಪರಮೇಶ್

 *    *    *    *    *    *

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x