ನಮಸ್ಕಾರ-ಚಮತ್ಕಾರ: ವೈ. ಬಿ. ಕಡಕೋಳ

KADAKOL Y.B.

“ನಮಸ್ಕಾರ” ಸರ್ ಹೇಗಿದ್ದೀರಿ?” ಎಂಬ ಧ್ವನಿ ನಿಮ್ಮೆದುರಿಗೆ ಬಂದರೆ ತಕ್ಷಣ ನಿಮ್ಮ ಭಾವನೆ ಹೇಗಿರುತ್ತದೆ? ಎಲ್ಲಿಯೋ ಈ ಧ್ವನಿ ಕೇಳಿದೆನೆಲ್ಲ ಎಂದೊಮ್ಮೆ ಮನಸ್ಸಿನಲ್ಲಿ ಅಂದುಕೊಳ್ಳಬಹುದು.  ಅಥವ ಗುರುತಿಸಿದ ವ್ಯಕ್ತಿಯ ಧ್ವನಿಯ ಪರಿಚಯವಿದ್ದರೆ ತಕ್ಷಣ ನಮಸ್ಕಾರ ಹೇಗಿದೀರಿ? ಎಂಬ ಉಭಯಕುಶಲೋಪಚರಿಯತ್ತ ಮನಸ್ಸು ಹೊರಳಬಹುದು. ಅಂತಹ ಶಕ್ತಿ ಇರುವುದು ಈ ನಮಸ್ಕಾರ ಪದಕ್ಕೆ ಅಲ್ಲವೇ?

 ಈ ನಮಸ್ಕಾರ ಇಂದು ನಿನ್ನೆಯದಲ್ಲ. ವೇದಗಳ ಕಾಲದಿಂದಲೂ ಭಾರತದ ಸನಾತನ ಧರ್ಮದಲ್ಲಿ ಇದಕ್ಕೆ ತನ್ನದೇ ಆದ ವೈಶಿಷ್ಟ್ಯತೆ ಮತ್ತು ಗೌರವ ಸೂಚಕ ಮೌಲ್ಯತೆಯಿದೆ. , ಮಾತಾ-ಪಿತೃಗಳಿಗೆ, ಗುರುಗಳಿಗೆ, ಹಿರಿಯರಿಗೆ ಹೀಗೆ ಗೌರವಕ್ಕೆ ಅರ್ಹರಾದವರಿಗೆಲ್ಲರಿಗೂ ಎರಡೂ ಕೈಗಳನ್ನು ಜೋಡಿಸಿ ನಮಸ್ಕಾರ ಹೇಳುವ ಪದ್ದತಿ ನಮ್ಮ ಸಂಸ್ಕøತಿಯಿಂದ ತಲೆತಲಾಂತರಗಳಿಂದ ನಡೆದು ಬಂದಿದೆ.

 ಐದು ಬೆರಳುಗಳು ಸೇರಿದ ಒಂದು ಕೈ ಮತ್ತೊಂದು ಕೈಯಲ್ಲಿನ ಐದೂ ಬೆರಳುಗಳ ಸಂಗಮ ಈ ನಮಸ್ಕಾರ.  ಇಲ್ಲಿ ಪ್ರತಿ ಬೆರಳಿಗೂ ಒಂದೊಂದು ವಿಶಿಷ್ಟತೆಯನ್ನು ಕಲ್ಪಿಸಲಾಗಿದೆ.  ಹೆಬ್ಬೆರಳು ಶುಕ್ರನ ಸ್ಥಾನವನ್ನೂ, ತೋರುಬೆರಳು ಗುರುಸ್ಥಾನವನ್ನೂ, ಮಧ್ಯದ ಬೆರಳು ಶನಿ ಸ್ಥಾನವನ್ನು, ನಾಲ್ಕನೆಯ ಬೆರಳು ಉಂಗುರ ಬೆರಳು ಅನಾಮಿಕವೆಂತಲೂ ಪವಿತ್ರ ಬೆರಳೆಂತಲೂ, ಕಿರಿ ಬೆರಳು ಮಹತ್ವದ ಕೆಲಸಕ್ಕೆ ಹೋಗಿ ಬರುವೆ ಎಂದು ಹೇಳುವ ಸಂಜ್ಞೆಯ ಮೂಲಕ ಎರಡೂ ಕೈಗಳನ್ನು ಹೃದಯ ಕಮಲದ ಮಧ್ಯದಲ್ಲಿ ಜೋಡಿಸಿ ಹೇಳುವ ಭಕ್ತಿ ಸೂಚಕ ಪದ ಈ “ ನಮಸ್ಕಾರ”.

 ಕಾಲ ಕಳೆದಂತೆ ಹೃದಯ ಕಮಲದ ನಡುವೆ ಎರಡೂ ಕೈಗಳು ಬರದೇ ಎಲ್ಲೆಲ್ಲಿಯೋ ಬಂದರೂ ಕೂಡ ಅದು ನಮಸ್ಕಾರವಾಗತೊಡಗಿತು.  ಜೊತೆಗೆ ನಮಸ್ಕಾರ ತನ್ನದೇ ಆದ ಶೈಲಿಯನ್ನು ಪಡೆಯತೊಡಗಿತು.  ಒಂದೂರಲ್ಲಿ ಒಬ್ಬ ಜಮೀನ್ದಾರನಿದ್ದ. ಅವನಿಗೆ ತನ್ನ ಎದುರಿಗೆ ಯಾರೇ ಬರಲಿ ನಮಸ್ಕಾರ ಹೇಳಬೇಕು ಯಾರಾದರೂ ಅಪ್ಪಿ ತಪ್ಪಿ ಅವನತ್ತ ನೋಡದೇ ಹೋದರೋ ಅವರ ಪೂರ್ವಾಪರ ವಿಚಾರಿಸಿ ಅವರು ಬಂದು ನಮಸ್ಕಾರ ಹೇಳುವ ಹಾಗೆ ಮಾಡುವ ಖಯಾಲಿ ಅವನದು. ಅಷ್ಟೇ ಅಲ್ಲ ನಮಸ್ಕಾರ ಮಾಡಿ ಮುಂದೆ ಬಂದು ತಮಗೆ ಏನಾದರೂ ಸಹಾಯ ಬೇಕಾದಲ್ಲಿ ಉದಾರವಾಗಿ ಕೊಡುವ ಬುದ್ದಿ ಕೂಡ ಅವನಲ್ಲಿತ್ತು.  ಇಂಥ ವ್ಯಕ್ತಿಗಳು ಸಮಾಜದಲ್ಲಿ ಸಿಗುವುದು ವಿರಳವಲ್ಲವೇ?

 ದಿನವಿಡೀ ಟೀವಿ ನೋಡುವ ಮಂದಿಗೆ ಅದರಲ್ಲಿ ಬರುವ ಕೆಲವು ದೈವಭಕ್ತಿಯ ಸಂದೇಶಗಳಲ್ಲಿ ದಿನವೂ ಭಕ್ತಿಯಿಂದ ದೇವಾಲಯಕ್ಕೆ ಹೋಗಿ ಪ್ರದಕ್ಷಿಣ ನಮಸ್ಕಾರ ಮಾಡುವುದರಿಂದ ಏನೇನು ಸಿದ್ಧಿಸುತ್ತದೆ ಎಂಬ ವಿವರಣೆಗಳು, ಅಷ್ಟಾಂಗ ನಮಸ್ಕಾರ ಮಾಡುವುದರಿಂದ ಆಗುವ ಲಾಭಗಳೇನು? ಉದ್ದಂಡ ನಮಸ್ಕಾರ ಮಾಡುವುದರಿಂದ ಆಗುವ ಲಾಭಗಳೇನು? ದೀಡ ನಮಸ್ಕಾರವನ್ನು ಏಕೆ ಮಾಡಬೇಕು? ಇತ್ಯಾದಿ ವಿವರಗಳನ್ನು ಹೇಳುವುದನ್ನು ಮತ್ತು ಅವುಗಳ ಪ್ರತಿಫಲಗಳನ್ನು ಕೇಳುತ್ತೇವೆ.  ಕೇಳಿದ ಮೇಲೆ ದೈವಭಕ್ತಿಯಿಂದ ಅತ್ತ ಕಡೆಗೆ ತಮ್ಮ ಗಮನವಿಟ್ಟು ನಡೆಯುವ ಜನರೂ ಕೂಡ ಈ ಎಲ್ಲ ನಮಸ್ಕಾರಗಳಿಗೆ ಬೆಲೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲ ಯೋಗಾಸನದಲ್ಲಿಯಂತೂ ಸೂರ್ಯ ನಮಸ್ಕಾರದ ವಿವಿಧ ಹಂತಗಳು ಶರೀರಕ್ಕೆ ಅವುಗಳನ್ನು ಮಾಡುವುದರಿಂದ ಆಗುವ ಅನುಕೂಲಗಳನ್ನು ವಿವರಿಸಿದಾಗ ಅವುಗಳನ್ನು ಮಾಡುವ ಮೂಲಕ ಶರೀರವನ್ನು ಉತ್ತಮವಾಗಿಟ್ಟುಕೊಳ್ಳಲು ಮಾಡುತ್ತೇವೆ ಕೂಡ.

 ಹೀಗೆ ಎಲ್ಲ ರೀತಿಯ ನಮಸ್ಕಾರಗಳನ್ನು ನೋಡುತ್ತಿದ್ದ ನನಗೆ ಕೆಲವು ದೇವಾಲಯಗಳಲ್ಲಿ ದೇವಾಲಯಕ್ಕೆ ಬರುವ ಜನರು ದೀಡ ನಮಸ್ಕಾರ ಹಾಕುವುದನ್ನು ಕಂಡು ಇದನ್ನು ಏಕೆ ಮಾಡುತ್ತೀರಿ? ಎಂದು ಕೇಳಿದಾಗ ಅವರು ತಮ್ಮ ಮನದ ಕೋರಿಕೆ ಈಡೇರಿದರೆ ತಾಯಿಯ ಸನ್ನಿಧಿಗೆ ಬಂದು “ದೀಡ ನಮಸ್ಕಾರ” ಹಾಕ್ತೀವಿ ಎಂದು ಬೇಡಿಕೆ ಸಲ್ಲಿಸಿ ಅದು ಈಡೇರಿದ್ದರಿಂದ ಈ ರೀತಿ ಸೇವೆ ಹರಕೆ ಸಲ್ಲಿಸುತ್ತಿದ್ದೇವೆ ಎನ್ನುವಾಗ ಅವರಲ್ಲಿನ ಶ್ರದ್ಧೆ ಕಂಡು ಅಚ್ಚರಿಯಾಯಿತು.  ಇಂಥ ಅನೇಕ ರೀತಿಯ ನಮಸ್ಕಾರಗಳನ್ನು ನಾವಿಂದು ಎಲ್ಲ ದೇವಾಲಯಗಳಲ್ಲಿ ಕಾಣುತ್ತೇವೆ.  ದೀಡ ನಮಸ್ಕಾರವೆಂದರೆ ಕೈಯಲ್ಲಿ ಕೋಲು (ಜೋಳದ ದಂಟು) ಹಿಡಿದು ನೆಲದ ಮೇಲೆ ಮಲಗಿ ಆ ದಂಟಿನಿಂದ ಒಂದು ಗುರುತನ್ನು ಗುರುತಿಸಿ. ಆ ಗುರುತಿನ ಜಾಗದಿಂದ ಮತ್ತೆ ಮಲಗಿ ಮುಂದೆ ಕೈಗಳನ್ನು ಚಾಚಿ ಮತ್ತೆ ದಂಟಿನಿಂದ ಗುರುತನ್ನು ಮಾಡಿಕೊಂಡು ಆ ಗುರುತಿನ ಸ್ಥಾನದಿಂದ ಮತ್ತೆ ಮಲಗಿ ಕೈ ಚಾಚಿ ಗುರುತಿಸುತ್ತ ದೇವಾಲಯವನ್ನು ಹೀಗೆ ಮಾಡುತ್ತ ಪ್ರದಕ್ಷಿಣೆ ಹಾಕುತ್ತ ಒಳಗೆ ದೈವ ಸನ್ನಿಧಿಗೆ ಹೋಗುವ ಪ್ರಕ್ರಿಯೆ.  ಇದು ದೇವಾಲಯದ ಆವರಣದ ಹತ್ತಿರದಿಂದಲಾದರೂ ನಡೆಯಬಹುದು.  ಇಲ್ಲವೇ ತಮ್ಮ ಗ್ರಾಮದಿಂದ ದೇವಾಲಯದವರೆಗೂ ದೀಡ ನಮಸ್ಕಾರ ಹಾಕ್ತೀನಿ ಅಂತ ಕೋರಿಕೆ ಸಲ್ಲಿಸಿದವರಿಂದ ತಮ್ಮ ಊರಿನಿಂದಲೂ ಈ ರೀತಿ ಮಾಡುತ್ತ ದೇವಾಲಯದ ಸನ್ನಿಧಿಗೆ ಬರುವುದರ ಮೂಲಕವೂ ನಡೆಯಬಹುದು.  ಇದು ದೇವಾಲಯಗಳಲ್ಲಿ ಕಂಡು ಬರುವ ನಮಸ್ಕಾರದ ಒಂದು ವಿಧದ ರೂಪ. ಅದು ಭಕ್ತಿಯ ಸೂಚಕ ಕೂಡ.

 ನಮಸ್ಕಾರ ಎನ್ನುವ ವಿಚಾರ ತಲೆಯಲ್ಲಿ ಬಂದದ್ದೇ ತಡ ನಮ್ಮ ಬದುಕಿನಲ್ಲಿ ಈ ನಮಸ್ಕಾರ ಕುರಿತು ಏನೆಲ್ಲ ಘಟನೆಗಳು ನಡೆಯುತ್ತವೆಯೋ ಅವೆಲ್ಲ ಕಣ್ಮುಂದೆ ಸುಳಿಯತೊಡಗುತ್ತವೆ.  ಹಾಗಾದರೆ ಈ ನಮಸ್ಕಾರ ಮನದಲ್ಲಿ ಮೂಡಿದ ಭಾವನೆಯಿಂದ ಬರಬೇಕೇ ವಿನಹ ಅದು ಒತ್ತಾಯದಿಂದ ಬರಬಾರದಲ್ಲವೇ? ಯಾವುದೇ ಕಾರ್ಯಕ್ರಮವಿರಲಿ ಹಳ್ಳಿಗಳಲ್ಲಿ ಎಲ್ಲರಿಗೂ ನಮಸ್ಕಾರ ಮಾಡುವುದು ಸಂಪ್ರದಾಯ. ಅದರಲ್ಲೂ ಹಿರಿಯರಿಗೆ ಹಣೆ ಹಚ್ಚಿ ನಮಸ್ಕಾರ ಮಾಡಬೇಕು. ಕಿರಿಯರಿಗೆ ವಂದನೆಗಳನ್ನು ಸಲ್ಲಿಸಬೇಕು. , ವಿವಾಹ ಮತ್ತು ಇನ್ನಿತರ ಮಂಗಲ ಕಾರ್ಯಗಳಲ್ಲಿ ಹಿರಿಯರು ಕಿರಿಯರಿಗೆ ಈ ನಮಸ್ಕಾರ ಹೇಳುವ ರೀತಿಯನ್ನು ರೂಢಿಸಲು ಕುಳಿತಿರುತ್ತಾರೆ “ ಅಲ್ಲಿ ಕಾಕಾ ನಿಂತಾನ ನೋಡ ಕಾಲಿಗೆ ಬಿದ್ದ ನಮಸ್ಕಾರ ಮಾಡ.  ಅಲ್ಲಿ ಅಮ್ಮ ನಿಂತಾಳ ನೋಡ ಹೋಗಿ ಕಾಲಿಗೆ ನಮಸ್ಕಾರ ಮಾಡ.  ಸ್ವಾಮೀಜಿ ಬಂದರು ಹೋಗಿ ಕಾಲಿಗೆ ನಮಸ್ಕಾರ ಮಾಡ” ಹೀಗೆ ಹಣೆಯನ್ನು ಅವರ ಪಾದಕ್ಕೆ ಹಚ್ಚಿ ನಮಸ್ಕಾರ ಮಾಡುವಂತೆ ಸೂಚಿಸುವುದನ್ನು ಇಂದಿಗೂ ನಾವು ಗ್ರಾಮೀಣ ಪ್ರದೇಶಗಳಲ್ಲಿ ಕಾಣಬಹುದಾಗಿದೆ.  ಇದು ಉದ್ದಂಡ ನಮಸ್ಕಾರ.

 ಇನ್ನು ಸಾಷ್ಟಾಂಗ ನಮಸ್ಕಾರವೂ ಕೂಡ ಇದನ್ನೇ ಹೋಲುತ್ತದೆ.  ಎಂಟು ಇಂದ್ರೀಯಗಳನ್ನು ಒಂದೇ ಭಾವನೆಯಿಂದ ಬರುವಂತೆ ಮಾಡಿ ನೇರವಾಗಿ ಭೂಮಿಯ ಮೇಲೆ ಮಲಗಿ ಕಣ್ಣು, ಕಿವಿ, ಕೈ, ಕಾಲು, ಹೃದಯಪೂರ್ವಕ ಭಾವನೆಯಿಂದ ಹಿರಿಯರ ಪಾದಕ್ಕೆ ತಮ್ಮ ಹಣೆಯನ್ನು ಸ್ಪರ್ಶಿಸುವ ಮೂಲಕ ಮಾಡುವ ನಮಸ್ಕಾರ ಇದಾಗಿದೆ. ಇದು ಬಾಂಧವ್ಯದ ಸಂಪತ್ತು ಕೂಡ.  ಇದನ್ನು ಎಲ್ಲೆಡೆ ಮಾಡಲಾಗದು.

 ನಾವು ಶಿಕ್ಷಕರ ತರಭೇತಿ ಪಡೆಯುತ್ತಿರುವಾಗ ನನ್ನ ಅನೇಕ ಸ್ನೇಹಿತರು ನಮ್ಮ ಉಪಾಧ್ಯಾಯರ ಎದುರಿಗೆ ಬೇಕೂಂತಲೇ ಹೋಗಿ “ ನಮಸ್ಕಾರ ಸರ್” ಎನ್ನುತ್ತಿದ್ದರು.  ಅವರನ್ನು ಕೇಳಿದಾಗ ಅವರು ಹೇಳಿದ ಆಶ್ಚರ್ಯಕರ ಸಂಗತಿ ಏನು ಗೊತ್ತೆ? “ ಈ ರೀತಿ ಪದೇ ಪದೇ ಅವರನ್ನು ಕಂಡು ನಮಸ್ಕಾರ ಮಾಡುವುದರಿಂದ ಅವರ ಬಳಿ ಇರುವ 25 ಆಂತರಿಕ ಅಂಕಗಳಿಗೆ ಕನಿಷ್ಟ 22/23 ಕೊಡ್ತಾರೆ ಅದರಿಂದ ಇನ್ನುಳಿದ 75 ಕ್ಕೆ ಪಾಸಾಗುವಷ್ಟು ಉತ್ತರ ಬಿಡಿಸಿದರೂ ಸಾಕು ಎಲ್ಲ ಸೇರಿ ಒಂದು ರೇಂಜಿಗೆ ಪ್ರತಿಶತ ಅಂಕ ತಗೆಯಬಹುದು ಎಂಬ ಲೆಕ್ಕಾಚಾರ” ಇದು ನಮಸ್ಕಾರ-ಚಮತ್ಕಾರವಲ್ಲದೇ ಇನ್ನೇನು. ಈ  ಆಂತರಿಕ ಅಂಕಗಳನ್ನು ಪಡೆಯುವ ಸಲುವಾಗಿ ನಮಸ್ಕಾರಕ್ಕೆ ಜೋತು ಬೀಳುವ ವಿದ್ಯಾರ್ಥಿಗಳು ಒಂದೆಡೆ ಇರಲಿ. ಇನ್ನು ವೃತ್ತಿ ರಂಗದಲ್ಲೂ ಕೂಡ ನಮಸ್ಕಾರ ಪ್ರೀಯರನ್ನು ನಾವು ಕಾಣುತ್ತೇವೆ.  ಯಾರಾದರೂ ತಮ್ಮ ಮೇಲಿನ ಅಧಿಕಾರಿಗಳಿ ನಮಸ್ಕಾರ ಮಾಡದೇ ಹೋದರೆ “ಎಷ್ಟು ಸೊಕ್ಕಿನವನು” ಅಂದುಕೊಂಡರೆ. ಪ್ರತಿಯಾಗಿ ಅವರೂ ಮಾಡದಿದ್ದರೆ ಇವರೂ ಕೂಡ “ಎಷ್ಟು ಸೊಕ್ಕು. ನಮಸ್ಕಾರ ಮಾಡಿದರೆ ಸ್ವಲ್ಪವೂ ಪ್ರತಿಕ್ರಿಯೆ ತೋರದೇ ಹೋಗ್ತಾನೆ”ಎಂದೆಲ್ಲ ಏಕವಚನದ ಶಬ್ದಗಳಲ್ಲಿ ನಿಂದಿಸುತ್ತಾರೆ.

 ಇಂಥಹ ಹಲವು ನಿದರ್ಶನಗಳನ್ನು ವೃತ್ತಿ ರಂಗದಲ್ಲಿ ನಾವು ಅನುಭವಿಸುತ್ತೇವೆ. ಕಛೇರಿಯೊಂದಕ್ಕೆ ಒಬ್ಬ ಬಾಸ್ ಹೊಸದಾಗಿ ವರ್ಗವಾದವರ ಜಾಗಕ್ಕೆ ಬಂದು ಹಾಜರಾದರು. ಅಲ್ಲಿರುವ ಎಲ್ಲರಿಗೂ ಕುತೂಹಲ ಈ ಬಾಸ್ ಯಾವ ರೀತಿ ಅವರ ಸ್ವಭಾವ ಎಂತದು. ಹೀಗೆ ಎಲ್ಲರೂ ಕೆಲವು ದಿನ ಅವರ ವ್ಯಕ್ತಿಗತ ಗುಣಗಳನ್ನೇ ವಿಚಾರಿಸತೊಡಗುವುದು ಸಾಮಾನ್ಯ. , ಇಲ್ಲಿಯೂ ಹಾಗೆ ಆಯಿತು. ಸದಾ ಗಂಟು ಮೋರೆ ಹಾಕಿಕೊಂಡು ಗಂಭೀರ ವದನರಾಗಿ ಕಾರ್ಯಾಲಯದಲ್ಲಿ ಪ್ರತಿದಿನ ಪ್ರವೇಶಿಸುವ ಆ ವ್ಯಕ್ತಿಗೆ ಜವಾನನಂತೂ ನಿತ್ಯವೂ ಅವರನ್ನು ಕಂಡ ಕೂಡಲೇ ನಮಸ್ಕಾರ ಹೇಳಲೇಬೇಕು ಅದು ಅವನ ಕರ್ತವ್ಯ ಕೂಡ. ಬಾಸ್ ಮಾತ್ರ ಪ್ರತಿಯಾಗಿ ಏನೂ ಹೇಳದೇ ಹೋಗುವುದನ್ನು ಕಂಡ ಜವಾನನಿಗೆ ಇವನಿಗೆ ಸ್ವಲ್ಪವೂ ಮರ್ಯಾದೆಯಿಲ್ಲವಾ? ಎಂದು ತನ್ನೊಳಗೆ ಗೊಣಗುವಂತಾಗಿತ್ತು.  

 ಹೀಗೇ ದಿನಗಳು ಸಾಗಿದವು ಇನ್ನುಳಿದ ಸಿಬ್ಬಂಧಿಗೆ ಆ ವ್ಯಕ್ತಿಗೆ ನಮಸ್ಕಾರ ಮಾಡಿದರೆ ಪ್ರತಿ ನಮಸ್ಕಾರ ಎಂಬ ಪದ ಕೂಡ ಅವರ ನಾಲಿಗೆಯಿಂದ ಕೇಳಿ ಬರುತ್ತಿರಲಿಲ್ಲವಾದ್ದರಿಂದ ನಮಸ್ಕಾರ ಮಾಡುವುದನ್ನೇ ನಿಲ್ಲಿಸಿದರಾಯಿತು ಎಂದು ಬಾಸ್ ಕಚೇರಿಯ ಒಳಗಡೆ ಬಂದ ತಕ್ಷಣ ಅವರು ಯಾರನ್ನೇ ಮಾತಾಡಲು ಒಳಗೆ ಕರೆದರೂ ನೇರವಾಗಿ ಕಚೇರಿ ಒಳಗೆ ಹೋಗಿ ನಮಸ್ಕಾರ ಎನ್ನದೇ “ಯಾಕ್ ಸರ್ ಕರೆದಿದ್ದು?(ಕೂಗಿದ್ದು)” ಎಂದು ಕೇಳತೊಡಗಿದರು.

 ಹೀಗೆಯೇ ದಿನಗಳು ಸಾಗಲು ಒಂದು ದಿನ ಬಾಸ್ ಕಾರ್ಯಾಲಯದ ಗುಮಾಸ್ತನನ್ನು ಕರೆದು ಆತ ಏನು ಕೆಲಸ ಸಾರ್ ಎನ್ನಲು “ ಏನಯ್ಯಾ ಒಳಗೆ ಕೆಲಸಕ್ಕೆ ಕರೆದರೆ ನಮಸ್ಕಾರ ಮಾಡಬೇಕು ಎನ್ನುವ ಕನಿಷ್ಟ ಸೌಜನ್ಯವೂ ಇಲ್ಲವೇ? ಎಂತಹ ಸಂಸ್ಕಾರವಂತ ನೀನು”.  ಎಂದೆಲ್ಲ ರೇಗಾಡಿಬಿಟ್ಟರು. ಆತ ಒಳಗಿನಿಂದ ಹೊರಗೆ ಪೆಚ್ಚು ಮೋರೆ ಹಾಕಿಕೊಂಡು ಬಂದಾಗ ಉಳಿದ ಎಲ್ಲ ಸಿಬ್ಬಂಧಿಗೆ ಅಚ್ಚರಿ.  “ಯಾಕೋ? ಬಾಸ್ ಏನಾದ್ರೂ ಬೈದರಾ, ? ಏನ ಕೆಲಸಾ ಮಾಡಬೇಕಂತೆ, ?” ಎಂದು ಕೇಳಲು. ”ಥೂ! ಅವನ ಜನ್ಮಕ್ಕೆ, ನಮಸ್ಕಾರ ಮಾಡಿಸಿಕೊಳ್ಳೋಕು ಯೋಗ್ಯತೆ ಬೇಕು.  ನಮಸ್ಕಾರ ಇಷ್ಟು ದಿನ ಮಾಡಿದಾಗ ನಮಸ್ಕಾರ ಅಂತಾ ಒಂದೂ ದಿನ ಬಾಯ್ತುಂಬ ಹೇಳದ ಪುಣ್ಯಾತ್ಮನಿಗೆ ನಮಸ್ಕಾರ ಮಾಡೋದು ಎಲ್ಲರೂ ಬಿಟ್ರಿ ಅಂತ ನಾನೂ ಬಿಟ್ಟಿದ್ದೆ.  ಅದಕ್ಕೆ ಕೆಲಸವಿಲ್ಲದೇ ಒಳಗೆ ಕರೆದು ನಮಸ್ಕಾರ ಮಾಡೋಕು ಬರೋದಿಲ್ವ ಅಂತ ಬೈಯ್ದು ಕಳಿಸಿದ ಪುಣ್ಯಾತ್ಮ” ಎಂದು ಗೊಣಗುತ್ತ ತನ್ನ ಪಾಡಿಗೆ ತಾನು ಕುಳಿತು ಕೆಲಸ ಮಾಡತೊಡಗಿದ.

 ಉಳಿದವರು ನಮಗ್ಯಾಕೆ ಈ ಉಸಾಬರಿ ಅಂತಾ ಬಿಟ್ಟಿದ್ದರೆ ಒಳ್ಳೆಯದಿತ್ತು.  ಹಾಗೆ ಮಾಡಲಿಲ್ಲ. ಎಲ್ಲರೂ ಒಟ್ಟಾಗಿ ಮಾತಾಡಿಕೊಂಡು ಇನ್ಮುಂದೆ ಬಾಸ್ ಎಲ್ಲಿಯೇ ಎದುರಿಗೆ ಸಿಕ್ಕಲಿ “ ನಮಸ್ಕಾರ್ ಸರ್ “ ಎನ್ನೋಣ.  ಎಂದು ನಿರ್ಧರಿಸಿದರು.  ಆಯ್ತು ಮರುದಿನದಿಂದ ಎಲ್ಲರೂ “ನಮಸ್ಕಾರ್ ಸರ್” ಎಂದೇ ಬಾಸ್ ಜೊತೆ ಮಾತು ಪ್ರಾರಂಭಿಸತೊಡಗಿದರು. ಆಗ ಬಾಸ್ ಗೆ ಒಳಗೊಳಗೆ ಖುಷಿ. ನಿನ್ನೆ ನಾನು ಆ ಗುಮಾಸ್ತನಿಗೆ ನಮಸ್ಕಾರ ಮಾಡಲು ಹೇಳಿದ್ದು ಚಾಲನೆಗೆ ಬರ್ತಾಯಿದೆ. ಆದರೂ ನಾನು ಮತ್ತೆ ಗಂಭೀರ ವದನನಾಗಿಯೇ ಇರಬೇಕು ಎಂಬ ಅಹಂದಲ್ಲಿಯೇ ಕೆಲಸ ಮಾಡತೊಡಗಿದರು.

 ಆಫೀಸಿನಲ್ಲಿರುವ ಗುಂಡನಿಗೆ ಇದನ್ನೂ ಮೀರಿ ವಿಶೇಷತೆ ಮಾಡುವ ಆಶೆಯಾಯಿತು.  ಅವನು ಸಾಹೇಬರು ಏನಾದರು ಕೆಲಸಕ್ಕೆ ಕರೆದರೆ ಸಾಕು ಒಳಗೆ ಹೋದವನೇ “ ನಮಸ್ಕಾರ ಸರ್” ಎನ್ನುತ್ತಿದ್ದ. ಕೆಲಸ ಮಾಡು ಎಂದಾಗ ಹೊರ ಬರುವಾಗಲೂ “ ನಮಸ್ಕಾರ ಸರ್” ಹೋಗಿ ಬರ್ತೀನಿ ಎನ್ನತೊಡಗಿದ.  ಇದು ಒಂದು ರೀತಿ ಬಾಸ್‍ಗೆ ವಿಚಿತ್ರವಾಗಿ ಕಾಣತೊಡಗಿತು. ಎಲ್ಲರೂ ಒಂದು ಸಲ ನಮಸ್ಕಾರ ಮಾಡಿದರೆ ಈ ಮನುಷ್ಯ ಹೆಜ್ಜೆ ಹೆಜ್ಜೆಗೂ ನಮಸ್ಕಾರ ಅಂತಾನಲ್ಲ.  ಒಂದು ದಿನ ಇವನನ್ನು ಮಾತಾಡಿಸಿಯೇ ಬಿಟ್ಟರಾಯಿತು ಎಂದುಕೊಂಡು ಎಲ್ಲರೂ ಕೆಲಸದಲ್ಲಿರುವಾಗ ತಾವೇ ಹೊರಗಡೆ ಬಂದು ಅವನ ಟೇಬಲ್ ಬಳಿ ಹೋಗಿ ಗುಂಡಣ್ಣ ಎಂದರು “ ನಮಸ್ಕಾರ ಸರ್. ಇಲ್ಲೀವರೆಗೂ ತಾವೇ ಬಂದಿದ್ದೀರಲ್ಲ ಕರೆದಿದ್ದರೆ ನಾನೇ ಬರ್ತಿದ್ದೆ.  ಹೇಳಿ ಸರ್ ಏನ್ ಕೆಲಸ?” ಎಂದ.

  “ನೀನು ಪ್ರತಿ ಸಲವೂ ನಮಸ್ಕಾರ ಮಾಡ್ತಿಯಲ್ಲ ಯಾಕೆ?”ಎಂದರು.  “ಓ ಅದಾ “ ನಮಸ್ಕಾರ ಸರ್ ತಾವು ನಮಸ್ಕಾರ ಪ್ರೀಯರು ಅದಕ್ಕೆ ಒಂದೇ ಸಲಕ್ಕೆ ನಮಸ್ಕಾರ ಮಾಡಿ ಯಾಕೆ ಸುಮ್ಮನಾಗಬೇಕು. ಪ್ರತಿ ಸಲ ಮಾಡುವುದರಿಂದ ನನಗೂ ಏನಾದರೂ ತಮ್ಮಿಂದ ಮೆಚ್ಚುಗೆಯ ರೂಪದಲ್ಲಿ ಬೋನಸ್ ಸಿಗಬಹುದೆ? ಅಂತಾ ಹೊರತು ಬೇರೆ ಏನೂ ಅಲ್ಲ ಸರ್. ” ಎಂದಾಗ.  ನಮಸ್ಕಾರ ಪ್ರಿಯ ಮನುಷ್ಯ ನಿಂತಲ್ಲಿಯೇ ಪೆಚ್ಚಾಗಿದ್ದ.  ಉಳಿದವರೆಲ್ಲರೂ ಮುಸಿ ಮುಸಿ ನಗುತ್ತಿದ್ದರು.

 ಇದು ನಮಸ್ಕಾರದ ಪರಿ ಇನ್ನೂ ಹಲವಾರು ಘಟನೆಗಳು ನಮಸ್ಕಾರದ ಹೆಸರಿನಲ್ಲಿ ನಡೆದಿರಬಹುದಾದರೂ ನಮಸ್ಕಾರಕ್ಕೆ ತನ್ನದೇ ಗುಣ ವಿಶೇಷಣಗಳಿವೆ. ಅದನ್ನು ಅರಿತು ನಡೆದರೆ ಆ ಪದಕ್ಕೂ ಗೌರವ ಅದನ್ನು ಪಡೆದವರಿಗೂ ಗೌರವವಲ್ಲವೇ? ನಮಸ್ಕಾರ ಮಾಡುವಾಗ ನಮ್ಮ ಆತ್ಮವನ್ನು ಒಂದು ಸಲ ಆತ್ಮಾವಲೋಕನ ಮಾಡಿಕೊಳ್ಳಬೇಕು.  ಮಾಡಿಸಿಕೊಳ್ಳುವವರು ಕೂಡ ಅದಕ್ಕೆ ತಕ್ಕ ಗೌರವ ನೀಡುವುದನ್ನು ಕಲಿತುಕೊಳ್ಳಬೇಕು. ಇದರಿಂದ ಯಾರ್ಯಾರಿಗೆ ಯಾವ ಯಾವ ನಮಸ್ಕಾರಗಳು ಪ್ರೀಯವೋ ಅಂಥಹ ನಮಸ್ಕಾರಕ್ಕೆ ಅವರವರೇ ಅರ್ಹರು. ಅವರವರ ಭಾವಕ್ಕೆ ಅವರವರ ಭಕುತಿಗೆ, ಅವರವರ ಪೂಜೆಗೆ ಸಲ್ಲುತಿಹನು ಶಿವಯೋಗಿ ಎನ್ನುವಂತೆ, ಅವರವರ ನಮಸ್ಕಾರಕ್ಕೆ, ಅವರವರ ಪ್ರತಿಕ್ರಿಯೆಗೆ ವಂದಿಸುವ ಪ್ರಕ್ರಿಯೆ ಜರುಗುತಿಹುದು ನೋಡಾ ಜಗದೊಳು ಎನ್ನುತ್ತ ನಮಸ್ಕಾರ ಚಮತ್ಕಾರಕ್ಕೆ ನನ್ನದೊಂದು ನಮಸ್ಕಾರ.

ವೈ. ಬಿ. ಕಡಕೋಳ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x