ನನ್ನ ಶಿಷ್ಯ ಗೋಪಾಲ!: ಶಶಿಕಾಂತ ಕುರ್ತಕೋಟಿ

shashikant-kurtakoti
ನನ್ನ ಮಗ ಗುರುಪ್ರಸಾದ ಅದೊಂದು ದಿನ ಬೆಳಿಗ್ಗೆ “ಅಪ್ಪ, ಗೋಪಾಲ ವಾಜಪೇಯಿಯವರ ಪುಸ್ತಕ ಬಿಡುಗಡೆ ಸಮಾರಂಭವಿದೆ ಬರುತ್ತೀಯಾ? ಅವರು ನಿನ್ನನ್ನು ಕರೆದುಕೊಂಡು ಬರಲು ಹೇಳಿದ್ದಾರೆ.” ಅಂತ ಕೇಳಿದ. ನಾನು ಕೂಡಲೇ ಹೂಂ ಅಂತ ಒಪ್ಪಿಕೊಂಡೆ. ಆ ಹೆಸರು ನನಗೆ ೪೩ ವರ್ಷ ಹಿಂದೆ ಕರೆದೊಯ್ದಿತು. ನಮ್ಮಿಬ್ಬರದು ಗುರು-ಶಿಷ್ಯ ಸಂಬಂಧ. ಆ ಸಮಾರಂಭಕ್ಕೆ ಜಾತಕ ಪಕ್ಷಿಯಂತೆ ಕಾಯತೊಡಗಿದೆ. ಅಷ್ಟು ವರ್ಷಗಳ ನಂತರ ನನ್ನ ಆತ್ಮೀಯ ಗೋಪಾಲನನ್ನು ನೋಡುವ ಅವಕಾಶ ಅದಾಗಿತ್ತು. 

ನನ್ನ ಮಗನಿಗೆ ಚಿಕ್ಕಂದಿನಿಂದಲೂ ಸಾಹಿತ್ಯ, ನಾಟಕ ರಂಗದ ಬಗ್ಗೆ ಆಸಕ್ತಿ. ಅದು ಅವನ ಅಮ್ಮನಿಂದ ಬಳುವಳಿಯಾಗಿ ಬಂದಿದೆ. ನನ್ನ ಶ್ರೀಮತಿ ದಿ. ಪರಿಮಳ ಕುರ್ತಕೋಟಿ ಕತೆಗಾರ್ತಿಯಗಿದ್ದಳು. ಯಾವುದೇ ಸಾಹಿತ್ಯದ ಸಮಾರಂಭ ಇದ್ದರೂ ಅದಕ್ಕವನು ಹಾಜರಾಗುತ್ತಿದ್ದ. ಅದು ಹೇಗೋ ಗೋಪಾಲ ವಾಜಪೇಯಿಯವರ ಪರಿಚಯ ಮಾಡಿಕೊಂಡು ಅವರ ಸ್ನೇಹ ಸಂಪಾದಿಸಿದ್ದ. ಅವರ ಮೇಲಿನ ಅಭಿಮಾನ ಎಷ್ಟಿತ್ತೆಂದರೆ ಅವರ ಯಾವುದೇ ಕಾರ್ಯಕ್ರಮವನ್ನೂ ಆತ ತಪ್ಪಿಸುತ್ತಿರಲಿಲ್ಲ.

ಸಮಾರಂಭದ ಆ ದಿನ ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಅವತ್ತು ನಾನು ನನ್ನ ಮಗ ಹಾಲ್ ಗೆ ಬಂದಾಗ, ಅವರು ಕೆಲವು ಸ್ನೇಹಿತರೊಂದಿಗೆ ಹರಟುತ್ತಿದ್ದರು. ನನ್ನ ಕಂಡ ಕೂಡಲೇ ಹತ್ತಿರ ಬಂದು ಸಂತೋಷದಿಂದ ಬರಮಾಡಿಕೊಂಡರು. ನಮಸ್ಕಾರ ಮಾಡಿ ಎಲ್ಲರಿಗೂ ನನ್ನನ್ನು ಪರಿಚಯಿಸಿದರು. ಅಷ್ಟೊಂದು ದೊಡ್ಡ ಬರಹಗಾರ, ನಾಟಕಕಾರ ಅದರೂ ಎಷ್ಟೊಂದು ಸೌಜನ್ಯ ಮೂರ್ತಿ! ಆಮೇಲೆ ಸಮಾರಂಭ ಶುರುವಾಯ್ತು. ಪುಸ್ತಕ ಬಿಡುಗಡೆಯಾಗುತ್ತಲೇ, ನನ್ನನ್ನು ಸ್ಟೇಜ್ ಮೇಲೆ ಕರೆದರು. ತಮ್ಮ ಪುಸ್ತಕವನ್ನು ಕೊಟ್ಟರು. ಅಷ್ಟೇ ಅಲ್ಲದೆ ಎಲ್ಲರಿಗೂ ನನ್ನನ್ನು ಪರಿಚಯಿಸಿದ ಬಗೆಯನ್ನು ಮರೆಯಲು ಸಾಧ್ಯವೇ ಇಲ್ಲ. “ಇವರು ಶಶಿಕಾಂತ ಕುರ್ತಕೋಟಿಯವರು ನನಗೆ ಇಂಗ್ಲಿಶ್ ಕಲಿಸಿದ ಗುರುಗಳು.” ಅಂತ ಹೆಮ್ಮೆಯಿಂದ ಹೇಳಿದ್ದು ಕೇಳಿ ನನ್ನ ಕೊರಳುಬ್ಬಿ ಬಂದಿತ್ತು.

ಇನ್ನು ನಮ್ಮಿಬ್ಬರ ಒಡನಾಟದ ಬಗ್ಗೆ ನಾಲ್ಕು ಮಾತು ಹೇಳಲೇ ಬೇಕು. ೧೯೭೦ ರಲ್ಲಿ ನಾನು ಇಂಗ್ಲಿಶ್ ಪ್ರಾಧ್ಯಾಪಕನಾಗಿ ಲಕ್ಷ್ಮೇಶ್ವರದ ಎಂ ಎ ಕಾಲೇಜ್ ನಲ್ಲಿ ಸೇರಿಕೊಂಡೆ. ಆಗ ನಾನು ಮನೆ ಮಾಡಿದ್ದು ಬ್ರಹ್ಮಪುರಿಯಲ್ಲಿ. ನನ್ನ ಮನೆಯ ಪಕ್ಕದಲ್ಲಿ ಗೋಪಾಲ ವಾಜಪೇಯಿಯವರ ಮನೆ. ನಾನು ಆ ಮನೆ ಪ್ರವೇಶ ಮಾಡಿದ ಎರಡನೇ ದಿನ ನನ್ನನ್ನು ನೋಡಿ ನಗುಮುಖದೊಂದಿಗೆ ಪರಿಚಯ ಮಾಡಿಕೊಂಡರು. ಆಮೇಲೆ ದಿನವೂ ನಾನು ಕಾಲೇಜಿನಿಂದ ಬರುವುದನ್ನೇ ಕಾಯುತ್ತಾ, ನನ್ನ ರೂಮಿಗೆ ಬಂದು ಹರಟುತ್ತಿದ್ದರು. ಕೆಲವೇ ದಿನಗಳಲ್ಲಿ ನಾವು ತುಂಬಾ ಆತ್ಮೀಯರಾದೆವು. ಇಂಗ್ಲಿಶ್ ನಾಟಕಗಳು ಹಾಗೂ ಕಾದಂಬರಿಗಳ ಬಗ್ಗೆ ಹರಟುತ್ತಿದ್ದೆವು. ೧೯೭೩ ರಲ್ಲಿ ನನ್ನ ಮದುವೆಯಾಯಿತು. ಹೆಚ್ಚು ಕಡಿಮೆ ಅದೇ ಸಮಯಕ್ಕೆ ಅವರು ಹುಬ್ಬಳ್ಳಿಗೆ ಹೋದರು. ಅಲ್ಲಿ ಕಸ್ತೂರಿ ಮಾಸ ಪತ್ರಿಕೆಯಲ್ಲಿ ಸಂಪಾದಕರಾಗಿ ಕೆಲಸ ಮಾಡತೊಡಗಿದರು. ಮುಂದೆ ನಮ್ಮಿಬ್ಬರ ಭೇಟಿ ತುಂಬಾ ಅಪರೂಪಕ್ಕೆ ಅಂತ ಆಗುತ್ತಿತ್ತು. 

ಅವರ ಸಾವಿನ ಸುದ್ದಿ ಕೇಳಿ ತುಂಬಾ ಆಘಾತವಾಯಿತು. ಇಷ್ಟು ಬೇಗ ಹೋಗಿಬಿಟ್ಟರಲ್ಲ ಅಂತ ತುಂಬಾ ಬೇಜಾರಾಯ್ತು. ಒಮ್ಮೊಮ್ಮೆ ಅನಿಸುತ್ತದೆ. ದೇವರೂ ಕೂಡ ತುಂಬಾ ಸ್ವಾರ್ಥಿ. ಅವನಿಗೂ ಗೋಪಾಲ ವಾಜಪೇಯಿ ಅಂಥವರ ಸಾನಿಧ್ಯ ಬೇಕೇನೋ! ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ.                

– ಶಶಿಕಾಂತ ಕುರ್ತಕೋಟಿ, ಬೆಂಗಳೂರು
 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x