ಲೇಖನ

ನನ್ನ ಮೊದಲ ಲೇಖನ: ಶೀತಲ್

ಮೊದಲ ಬಾರಿಗೆ ಬ್ಯಾಟ್ ಹಿಡಿದು, ಮೊದಲ  ಬಾಲ್ ನಲ್ಲೇ ಸಿಕ್ಸರ್ ಹೊಡೆದ ಖಿಲಾಡಿಗಳು ಬಹುಶಃ ಯಾರೂ ಇಲ್ಲವೇನೋ, ಹಾಗೆಯೇ ಮೊದಲ ಬಾರಿಗೆ ಪತ್ರಿಕೆಯಲ್ಲೊಂದು ಲೇಖನ ಎಲ್ಲಾ ಸಣ್ಣ-ಪುಟ್ಟ ಬರಹಗಾರರಂತೆ ನನ್ನದೂ ಒಂದು ಕನಸಾಗಿದೆ. ಹೇಗೆ ಸಿಕ್ಸರ್ ಹೊಡೆಯಲು ಆ ಮೊದಲ ಬಾರಿ ಬ್ಯಾಟ್ ಹಿಡಿದ ಖಿಲಾಡಿಗೆ ಆಗಲಿಲ್ಲವೋ ಹಾಗೆಯೇ ನನ್ನ ಲೇಖನವೂ  ಪ್ರಕಟವಾಗಲಿಲ್ಲ … ಸಿಕ್ಸರ್ ಹೊಡೆಯಲಾಗಲಿಲ್ಲ ಎಂದ ಮಾತ್ರಕ್ಕೆ ಪ್ರಯತ್ನವನ್ನು ಬಿಡಲು ಸಾಧ್ಯವೇ? ಖಂಡಿತಾ ಇಲ್ಲ …. ಬರೆಯುತ್ತಲೇ ಇದ್ದೇನೆ ಆದರೆ ಯಾವ ಬಾಲ್ ಗೆ ಯಾವ ಬೌಲರ್ ಬಾಲ್ ಹಾಕಿದಾಗ ಸಿಕ್ಸರ್ ಹೊಡೆಯುತ್ತೇನೋ ಕಾದು  ನೋಡಬೇಕಿದೆ. . ವಿವೇಕಾನಂದರು ಹೇಳಿದ ಹಾಗೆ,"ಗುರಿ ಮುಟ್ಟುವ ತನಕ ನಿಲ್ಲದಿರಿ" ಎಂಬ ಮಾತು ಈ ರೀತಿಯ ಸಂಧರ್ಭಗಳಲ್ಲಿ ಶಂಖ ಊದಿದಂತೆ ಸೀದಾ ಕಿವಿಗೆ ತಾಕಿ ಒಳಹೊಕ್ಕು ಮನಸ್ಸಿಗೆ ಬಾಣದಂತೆ ನಾಟುತ್ತದೆ ….ಪತ್ರಿಕೆಯಲ್ಲಿ ಲೇಖನ ಒಂದು ಬಾರಿ ಬಂದಾಕ್ಷಣ ಒಂದೊಳ್ಳೆ ಬರಹಗಾರ್ತಿಯ ಪಟ್ಟಕ್ಕೇನೂ ನಾ ಅರ್ಹಳಲ್ಲ ಎಷ್ಟೇ ಲೇಖನಗಳು ಪ್ರಕಟವಾದರೂ ಕಲಿಕೆ ಎನ್ನುವುದು ಒಂದು ನಿರಂತರ ಪ್ರಕ್ರಿಯೆ… 

ಹೇಗೆ ಬ್ಯಾಟ್ಸ್ ಮ್ಯಾನ್ ಒಂದು ಬಾರಿ ಶತಕ ಹೊಡೆದಾಕ್ಷಣ ವಿಶ್ವ ಪ್ರಖ್ಯಾತ ಆಟಗಾರನಾಗಲು ಸಾಧ್ಯವಿಲ್ಲವೋ ಅದೇ ರೀತಿ ಇದನ್ನೂ ಪರಿಗಣಿಸಬಹುದು … ಆದರೆ ಒಂದು "ಬ್ರೇಕ್ " ಎಲ್ಲರಿಗೂ ಬೇಕು…. ಒಂದು ಅವಕಾಶ, ಒಂದು ವೇದಿಕೆ ಹೀಗೆ ಬ್ರೇಕ್ ಏನಾದರೂ ಆಗಬಹುದು .. ವೈಯಕ್ತಿಕ ಪ್ರತಿಭೆ ತೋರ್ಪಡಿಸುವ ಒಂದು ಮಾದ್ಯಮ ಬೇಕೆ ಬೇಕು, ಅದಿಲ್ಲದಿದ್ದರೆ  ಆ ಪ್ರತಿಭೆ, ಎಲ್ಲೋ ಮನದಾಳದಲ್ಲಿ ಹುದುಗಿ ಹೋದ ಮೊದಲ ಪ್ರೇಮದಂತಾಗಿ ಹೋಗುತ್ತದೆ …..ನೆನಪಾಗುತ್ತಲೇ ಇದ್ದರೂ ಹೊರ ಬರುವುದೇ ಇಲ್ಲ… ಹಾಗೆಯೇ ಆ ಮಾಧ್ಯಮಕ್ಕಾಗಿ ಅಲ್ಪ-ಸ್ವಲ್ಪವಾದರೂ ಕಷ್ಟ ಪಡಲೇಬೇಕು …. ಎಲ್ಲಾ ಕೂರುವ ಜಾಗಕ್ಕೆ ಬರಲು ನಾವು ಬದುಕುತ್ತಿರುವುದು ವಾಸ್ತವಿಕ ಜಗತ್ತಿನಲ್ಲೇ ಹೊರತು ಕಾಲ್ಪನಿಕ ಲೋಕದಲ್ಲಲ್ಲ… ಪ್ರಯತ್ನ ಪಡದೆ ಯಾವುದನ್ನು ಸಾಧಿಸಲು ಸಾದ್ಯವಿಲ್ಲ …. ಒಮ್ಮೆ ಸೋತರೆ ಅದೇನು ಜಗತ್ತಿನ ಅಂತ್ಯವಲ್ಲ, ಸೋಲೆಂಬುದು ಹಾಗಲ ಕಾಯಿಯಂತೆ ಕಹಿಯಾಗಿದ್ದರೂ ದೇಹಕ್ಕೆ ಹಾಗಲ ಕಾಯಿ ಎಷ್ಟು ಒಳ್ಳೆಯದೋ ಹಾಗೇ  ಜೀವನಕ್ಕೆ ಸೋಲೆಂಬುದು  ಅದರಷ್ಟೇ ಒಳ್ಳೆಯದು .. ಗೆದ್ದು ಸೋಲುವುದಕ್ಕಿಂತ ಸೋತು ಗೆಲ್ಲುವುದೇ ಒಳಿತು …. ಬ್ಯಾಟ್ಸ್ ಮ್ಯಾನ್ ಮೊದಲ ಪಂದ್ಯದಲ್ಲೇ ಶತಕ ಬಾರಿಸಿ ತಾನೇ ಅತ್ಯುತ್ತಮ ಆಟಗಾರನೆಂಬ ಅತಿಯಾದ ಆತ್ಮವಿಶ್ವಾಸ ದೊಂದಿಗೆ "ಅಹಂ" ಎಂಬ ಕೆಟ್ಟ ಹುಳುವನ್ನು ತಲೆಯೊಳಗೆ ಬೆಳೆಸಿಬಿಡುತ್ತಾನೆ ಇದೇ ಹಲವಾರು ಪ್ರತಿಭಾವಂತರ ಆಜನ್ಮ ಶತ್ರು . ಇದರಿಂದ ಬಚಾವಾದವರು ಬೆರಳಣಿಕೆಯಷ್ಟು ಮಂದಿ ಅವರನ್ನು ಪ್ರತಿಭಾವಂತರೆನ್ನುವ ಬದಲು ಮಹಾತ್ಮರೆನ್ನುವುದೇ ಸೂಕ್ತ .. ಅಲ್ಲದೇ ಸೋತು ಸೋತು ಗೆದ್ದವರೂ ಮಹಾನ್ ವ್ಯಕ್ತಿಗಳಾದ ಉದಾಹರಣೆಗಳು ನಮಗೆ ಬೇಕಾದಷ್ಟು ಸಿಗುತ್ತವೆ.. ಎಲ್ಲರೂ ಮಹಾತ್ಮರೊಂತು ಆಗಲು ಸಾಧ್ಯವಿಲ್ಲ ಕನಿಷ್ಠ ಮಹಾನ್ ಆಗಲು ಪ್ರಯತ್ನಿಸಬಹುದು… 

ಬಲ್ಬ್ ಕಂಡು ಹಿಡಿದ ಎಡಿಸನ್ ಹೇಳಿದ್ದು "ನಾನು ಸೋಲಲಿಲ್ಲ, ಬದಲಾಗಿ ಬಲ್ಬ್ ಮಾಡಲಾಗದ ೧೦೦೦ ವಿಧಗಳನ್ನು ಕಂಡು ಹಿಡಿದೆ " ಎಂದು . ಈ  ವಾಕ್ಯ ಅದೆಷ್ಟು ಸ್ಪೂರ್ತಿದಾಯಕವಾಗಿದೆ ಅಲ್ಲವೇ??? ಪ್ರತಿ ಸೋಲನ್ನೂ ಗೆಲುವಿನ ಮೆಟ್ಟಲಾಗಿ ಉಪಯೋಗಿಸಿದ ಮಹಾನ್ ವ್ಯಕ್ತಿ ಈತ. ಇವನಂತೆ ಸಾವಿರ ಸೋಲನ್ನೊಂತು ನಮ್ಮಲ್ಲಿ ಹಲವರು ಅನುಭವಿಸಿರುವುದಿಲ್ಲ ಆದರೂ ನಮ್ಮಲ್ಲಿ ಆತ್ಮವಿಶ್ವಾಸದ ನದಿ ಹರಿಯುವದ ನಿಲ್ಲಿಸಿ ಬೇಡದ ಆಲೋಚನೆಗಳಿಂದ ನಾರುವ ಕೊಳವಾಗಿರುತ್ತದೆ … ಬದುಕಿನಲ್ಲಿ "ಆತ್ಮವಿಶ್ವಾಸ ","ಪ್ರಯತ್ನ","ಗುರಿ ಮುಟ್ಟುವ ಹಂಬಲ" ಈ ಮೂರನ್ನು ಒಳ್ಳೆಯ ಗೆಳೆಯರನ್ನಾಗಿಸಿ, ಕನಸನ್ನು ನನಸಾಗಿಸುವ ಪ್ರಯತ್ನವನ್ನು ನಾವೆಲ್ಲಾ ಮಾಡೋಣ …. ಒಂದು ಬಾರಿ ಕಾರ್ಯ ನಡೆಯದಿದ್ದರೆ ಅದು ನಡೆಯುವುದೇ ಇಲ್ಲ ಎಂಬುದು ಸುಳ್ಳು  ಪ್ರಯತ್ನಿಸುತ್ತಿರಬೇಕು ಅದನ್ನು ಸಾಧಿಸುವವರೆಗೂ … ಈ ಲೇಖನವೆನಾದರು ಪ್ರಕಟವಾದಲ್ಲಿ ನನ್ನದೊಂದು ಕನಸು ನನಸಾದಂತೆ ….. ಇಲ್ಲವಾದರೆ ಮೊದಲೇ ಹೇಳಿದಂತೆ ವಿವೇಕಾನಂದರ ಮಾತು ಹಾಗು ಎಡಿಸನ್ ಹೇಳಿದ ಮಾತುಗಳನ್ನು ಮನಸಿನಾಳದವರೆಗೂ ಮುಟ್ಟುವಂತೆ ಬಾಣವನ್ನು ಚುಚ್ಚುತ್ತಲೇ ಇರುತ್ತೇನೆ … ಪ್ರಯತ್ನವನ್ನೊಂತು ಬಿಡಲಾರೆ… ನನ್ನ ಈ ಮೊದಲ ಲೇಖನವು ಪ್ರಕಟವಾಗದೆ ಹೋದರೆ ಬರೆಯುತ್ತಲೇ ಇರುತ್ತೇನೆ ಹೊರತು ಪ್ರಯ್ತ್ನವನ್ನೊಂತು ನಿಲ್ಲಿಸಲಾರೆ …. ಈ ಲೇಖನವೇ ನನ್ನ "ಮೊದಲ ಲೇಖನ"ವಾದಲ್ಲಿ ನಿಮ್ಮೆಲ್ಲರಿಗೂ ಇದು ಒಳ್ಳೆಯ ಉದಾಹರಣೆ ಅಲ್ಲವೇ??? ಪ್ರಯತ್ನಿಸಿದಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ… ನನ್ನ ಹಾಗೆ ನೀವೂ ಕೂಡ ನಿಮ್ಮ ಅಪೂರ್ಣ ಕಾರ್ಯವನ್ನು ಪೂರ್ಣ ಮಾಡಿಕೊಳ್ಳಿ…. ಅದರ ಸಂತೋಷವೇ ಬೇರೆ…ಏನಂತೀರಿ ???
-ಶೀತಲ್  

******

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *