ಲೇಖನ

ನನ್ನ ಮುದ್ದು ಅಪ್ಪ: ಸುನಿತಾ. ಎಸ್. ಪಾಟೀಲ


ಅಪ್ಪ ಎಂಬ ಎರಡಕ್ಷರದ ಈ ಪದ ಸ್ವಲ್ಪ ಭಾರ,  ಮಕ್ಕಳಿಗೆ ಮುಜುಗರ ಉಂಟುಮಾಡುವಂತದ್ದು. ಅಪ್ಪ ಎಂಬ ಸಂಬಂಧಕ್ಕೆ ಬಹುಶಃ ಯಾರು ಅಷ್ಟೊಂದು ಪ್ರಾಶಸ್ತ್ಯ  ಕೊಡೋದಿಲ್ಲ. ಹಾಗಂತ ಪ್ರೀತಿ ಇಲ್ಲ ಅಂತಲ್ಲ. ಅಪ್ಪನಿಗೆ ಕಂಡರೆ ಅದೇನೋ ಮುಜುಗರ, ಗೌರವ, ಭಯ. ಏಕೆಂದರೆ ಅಮ್ಮನ ಜೊತೆ ಇರುವ ನಮ್ಮ ಸೆಂಟಿಮೆಂಟ್,  ಅಟ್ಯಾಚ್ಮೆಂಟ್, ಅಪ್ಪನ ಜೊತೆ ಸ್ವಲ್ಪ ಕಡಿಮೆನೇ ಅಲ್ವಾ? ಆದರೆ ಎಲ್ಲರಿಗೂ ಗೊತ್ತು ಅಪ್ಪ ಅಂದ್ರೆ ಸ್ಫೂರ್ತಿ,  ಅಪ್ಪ ಅಂದ್ರೆ ತ್ಯಾಗ,  ಅಪ್ಪ ಅಂದ್ರೆ ಆಕಾಶ,  ಅವರ ಪರಿಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ತನ್ನ ಕುಟುಂಬವನ್ನು ಸಲಹಬೇಕು. ತನ್ನ ಮಕ್ಕಳನ್ನು ತನಗಿಂತ ಉತ್ತಮ ಸ್ಥಾನದಲ್ಲಿ ಕಾಣಬೇಕು ಅಂತ ತಾನು ಹಗಲಿರುಳು ಎನ್ನದೆ ಪಡುವ ಕಷ್ಟ ಮಕ್ಕಳಿಗೆ ಗೊತ್ತಾಗದಂತೆ  ಎಚ್ಚರವನ್ನು ವಹಿಸುತ್ತಾನೆ. ತಾನು ಪಡುವ ಕಷ್ಟ, ಕುಟುಂಬದ ಜವಾಬ್ದಾರಿ, ತನ್ನ ಹೊಣೆಗಾರಿಕೆ ಎಂದು ಎಲ್ಲ ಜವಾಬ್ದಾರಿಗಳನ್ನು ಕಿರೀಟದಂತೆ  ತಲೆಯ ಮೇಲೆ ಹೊತ್ತು ಪೂರೈಸುತ್ತಾನೆ.

ಅಮ್ಮ ಅಂದ್ರೆ ನಮ್ಮ ಹಿತೈಷಿ ಅಪ್ಪನಿಂದ ಸ್ವಲ್ಪ ದೂರವೇ ಅಪ್ಪನ ಬಗ್ಗೆ ಯೋಚಿಸುವುದು ನಾವುಗಳು ಕಡಿಮೆ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ನಮಗೆ ಅಪ್ಪ ಬೇಕು. ಆದರೆ ಅದು ಅಮ್ಮನ ಮಾಧ್ಯಮದ ಮೂಲಕ ಪೂರೈಸಿ ಕೊಳ್ಳುತ್ತೇವೆ. ಅಮ್ಮ ತಿನ್ನಿಸುತ್ತಾಳೆ ನಿಜ ಆದರೆ ಆ ಅನ್ನ ಅಪ್ಪನ ದುಡ್ಡಿನಿಂದಲೇ ಅಲ್ವಾ? “ಪಿತೃದೇವೋಭವ” ಅಂತ ಹಿರಿಯರು ಹೇಳುತ್ತಾರೆ ಆದರೆ ತಂದೆಯನ್ನು ದೇವರ ಸ್ಥಾನದಲ್ಲಿ ನೋಡದೆ ಇದ್ದರೂ ಒಬ್ಬ ಸ್ನೇಹಿತನಂತೆ ನಾವು ನೋಡೋಣ. ನಾನೊಬ್ಬ ಅಪ್ಪನ ಮುದ್ದಿನ ಮಗಳು ಸ್ನೇಹಿತರೇ!  ಒಂದು ಮಗು 9 ತಿಂಗಳು ಅಮ್ಮನ ಮಡಿಲಲ್ಲಿ ಇದ್ದರೆ ಆ ಮಗು ಸದಾ ಅಪ್ಪನ ಯೋಚನೆಯಲ್ಲಿ ಬೆಳೆಯುತ್ತದೆ. ಅಮ್ಮ ಹೊತ್ತಿರುವುದು ಎಲ್ಲರಿಗೂ ಕಾಣುತ್ತದೆ ಆದರೆ ಆ ಮಗು ಬೆಳೆಯುವಲ್ಲಿ ಅಪ್ಪ ಎಷ್ಟೊಂದು ಆಸೆ-ಆಕಾಂಕ್ಷೆಗಳನ್ನು ಇಟ್ಟುಕೊಂಡಿರುತ್ತಾನೆ ಅದು ಯಾರಿಗೂ ಕಾಣದು. ಪಾಪ ಅವರ ಕಷ್ಟ ಅವರಿಗೆ ಗೊತ್ತು. ಒಂದು ಮಗು ಕಿರುಬೆರಳು ಹಿಡಿದುಕೊಂಡು ಪಾದಗಳ ಮೇಲೆ ಪಾದವನ್ನಿಟ್ಟು ನಡೆಯುವಾಗ, ತನ್ನ ಕನಸುಗಳಲ್ಲಿ ಕಣ್ಣುಗುಡ್ಡೆ ಹಿಂದೆ ಜೋಪಾನವಾಗಿ ಆ ಪ್ರೀತಿಯನ್ನು ಅಡಗಿಸಿಟ್ಟು ಸ್ಪೂರ್ತಿ ತುಂಬಿದವರು  ನನ್ನಪ್ಪ. ನನ್ನ ನೋವುಗಳ ನೆಲವು ತನ್ನ ಕೈಯ ಕಿರುಬೆರಳಿನಲ್ಲಿ ಭದ್ರವಾಗಿ ಹಿಡಿದು ಹೆದರದಂತೆ ಹೆಜ್ಜೆಯಿಡಲು ಕಲಿಸಿದವರು ನನ್ನಪ್ಪ, ಹಗಲಿರುಳೆನ್ನದೆ ತನ್ನ ಮಕ್ಕಳ ಏಳಿಗೆಯಲ್ಲಿ ತನ್ನ ನೋವುಗಳನ್ನು ಮರೆತು ಆಲದ ಮರವಾಗಿ ನಮಗೆ ನೆರಳಾಗಿ ನಿಂತವರು ನಮ್ಮಪ್ಪ. ನಮ್ಮ ಕನಸುಗಳಲ್ಲಿ ನನಸಾಗುವ ಗುರಿಯನ್ನು ತುಂಬಿದ ಸ್ಫೂರ್ತಿ ದಾತರು ನಮ್ಮಪ್ಪ.

ಮನುಷ್ಯನಾಗಿ ಹುಟ್ಟಿದ ಮೇಲೆ ಮನೆ ನಂತರ ಹೊರಪ್ರಪಂಚದೊಂದಿಗೆ ಒಂದಲ್ಲ ಒಂದು ರೀತಿಯ ಸಂಬಂಧವನ್ನು ಬೆಸೆದುಕೊಂಡು ಜೀವನ ನಡೆಸುತ್ತಾನೆ. ಅದರಲ್ಲಿ ತಂದೆ-ತಾಯಿಯರದು ವಿಶೇಷ ಸ್ಥಾನ. ಅಪ್ಪ ಎಂದಾಗ ಎಂತದೋ ಸೆಳೆತ. ಪ್ರತಿ ಮಗುವಿಗೂ ತಿದ್ದಿ ತೀಡುವ ತಂದೆ-ತಾಯಿ ದೇವರ ಸಮಾನ ಎಂದೇ ಭಾವಿಸುವ ಸಂಸ್ಕೃತಿ ನಮ್ಮದು. ಈ ಸಂಸ್ಕೃತಿಯೇ ಕೂಡು ಕುಟುಂಬದ ಸೂತ್ರವೂ ಹೌದು. ಆದರೆ ಇತ್ತೀಚಿಗೆ ಎಲ್ಲೋ ಪ್ರೀತಿ ಕಡಿಮೆಯಾಗುತ್ತಾ ಹೋಗುತ್ತಿದೆ. ಎಲ್ಲರೂ ಜೀವನದಲ್ಲಿ ಎತ್ತರ ಬೆಳೆಯುವ ಹಂಬಲದಲ್ಲಿ ಮಕ್ಕಳು ತಂದೆ ತಾಯಿಯಿಂದ ದೂರ ಇರುವಂತೆ  ಆಗುತ್ತಿದೆ. ಪ್ರೀತಿ ಸಹ ಆಧುನೀಕರಣಕ್ಕೆ ಮಾರು ಹೋಗಿದೆ. ದಿನೇ ದಿನೇ ಕುಟುಂಬಗಳು ಚಿಕ್ಕವಾಗಿ ಹೋಗುತ್ತೇವೆ. ಇದ್ದಿದ್ದರಲ್ಲೇ ತಮ್ಮ ಪ್ರೀತಿಯ ಮಮಕಾರವನ್ನು ತಂದೆತಾಯಿ ಇರುವ ಒಂದಿಬ್ಬರು ಮಕ್ಕಳಿಗೆ ಧಾರೆ ಎರೆದಿರುತ್ತಾರೆ. ಅದೇ ರೀತಿ ಮಕ್ಕಳಿಂದ ತಂದೆತಾಯಿ ಸಹ ಅದೆಷ್ಟೋ ಭರವಸೆಗಳನ್ನಿಟ್ಟುಕೊಂಡು ಬದುಕುವುದು ಸಾಮಾನ್ಯ. ತಾಯಿಯನ್ನು ಕಂಡರೆ ಮಕ್ಕಳಿಗೆ ಸಲುಗೆ, ತಪ್ಪು ಮಾಡಿದಾಗ ಅಮ್ಮ ತಿದ್ದಿ ಬುದ್ದಿ ಹೇಳಿ ಸಲಹುವ ರೀತಿಯೇ ಬೇರೆ. ಆದ್ರೆ ತಂದೆ ಎಂದರೆ ಏನೋ ಒಂದು ರೀತಿ ಅವ್ಯಕ್ತ ಭಯ. ಮೊದಲೆಲ್ಲ ಅಪ್ಪನ ಗದರಿಕೆ ಮಾತ್ರ ಕಾಣುತ್ತಿದ್ದ ಕಣ್ಣಿಗೆ ಬೆಳೆಯುತ್ತಿದ್ದಂತೆ ರಕ್ಷಣೆಯ ದ್ಯೋತಕವಾಗಿ ನಮ್ಮನ್ನೆಲ್ಲ ಪೋರೆಯುವ ಪಾಲಕನಾಗಿ ಎಲ್ಲ ಅವಶ್ಯಕತೆಗಳನ್ನು ಪೂರೈಸುವವರಾಗಿ ಗೋಚರಿಸುತ್ತಾರೆ. ನಾವು ಹಂತಹಂತವಾಗಿ ಬೆಳಿತಾ ಹೋದಂತೆ ನಾವು ಪಡೆದಿರುವ ಯಶಸ್ಸು, ಎತ್ತರ ಯು ಅಪ್ಪಂದಿರಿಗೆ ಎಮ್ಮೆಯನ್ನು ತಂದುಕೊಡುತ್ತದೆ. ಹತ್ತು-ಹಲವಾರು ಸ್ನೇಹಿತರ ಮುಂದೆ ತಮ್ಮ ಮಕ್ಕಳ ಏಳಿಗೆಗೆ ಬಗ್ಗೆ ವರ್ಣನೆ ಮಾಡುತ್ತಾರೆ. ಮಗಳು ದೊಡ್ಡವಳಾಗಿ ನಿಂತಾಗ ಆಕೆಯ ಮುಂದಿನ ಜೀವನದ ಬಗ್ಗೆ ಚಿಂತಿಸಿ ಒಬ್ಬ ರಾಜಕುಮಾರನನ್ನು ಹುಡುಕಿ ತನ್ನ ಮುದ್ದಾದ ರಾಜಕುಮಾರಿಗೆ ಕೊಟ್ಟು ವಿವಾಹವನ್ನು ಮಾಡಿಕೊಡುತ್ತಾರೆ. ಆಕೆಯೇ ತನ್ನ ತಂದೆಯಿಂದ ದೂರವಾದಾಗ ಪಡುವ ಕಷ್ಟ ತುಂಬಾ ರೋಚನಿಯ. ತನ್ನ ಮುದ್ದಿನ ಅರಗಿಣಿಯನ್ನು ಬೇರೆಯವರ ಕೈಯಲ್ಲಿ ಒಪ್ಪಿಸುವುದು ಸಾಮಾನ್ಯವಾದ ವಿಷಯವಲ್ಲ. ಆದರೆ ಇದು ಹಿಂದಿನಿಂದ ನಡೆದು ಬಂದಂತಹ ಸಂಪ್ರದಾಯ. ಒಂದು ಹೆಣ್ಣು ತನ್ನ ಗಂಡನ ಮನೆಯಲ್ಲಿ ತನ್ನ ತಂದೆ-ತಾಯಿ ಕಲಿಸಿದಂತಹ ಸಂಸ್ಕಾರದಿಂದ ಗಂಡನ ಮನೆ ಹಾಗೂ ತವರಮನೆ ಕೀರ್ತಿ ಬೆಳಗಿದಾಗ ಆಗ ಅಪ್ಪ-ಅಮ್ಮನಿಗೆ ಆಗುವಂತಹ ಸಂತೋಷಕ್ಕೆ ಪಾರವೇ ಇರುವುದಿಲ್ಲ.

ಅಪ್ಪ ಎಂದರೆ ರಕ್ಷಣೆ, ಅಮ್ಮ ಎಂದರೆ ಪ್ರೀತಿ ಎಂದೇ ವ್ಯಾಖ್ಯಾನಿಸಲಾಗುವ ಈ ಸಂಬಂಧದ ಬಗ್ಗೆ ಹೇಳುವುದು ಕಷ್ಟವಾದರೂ ಪ್ರತಿ ಮಗು ಅಪ್ಪನೊಂದಿಗೆ ಹೊಂದಿರುವ ಬಾಂಧವ್ಯವನ್ನು ಅನುಭವಿಸಿಯೇ ಬೆಳೆಯಬೇಕು. ಅದು ಮಕ್ಕಳ ಏಳಿಗೆಯಲ್ಲಿ ಪ್ರತಿಫಲನವಾಗದೇ ಇರದು. ತಾಯಿಯೊಂದಿಗೆ ನಕ್ಕು ನಲಿಯುವ ಮಕ್ಕಳು ತಂದೆಯಿಂದ ಅನತಿ ದೂರದಲ್ಲೇ ನಿಂತು ಆಜ್ಞೆಗಳನ್ನು ಪಾಲಿಸುತ್ತಾ ಅವಶ್ಯಕತೆಗಳು ಬಂದಾಗ ಹಿಂಜರಿಯುತ್ತಲೇ ಅಪ್ಪನಿಗೆ ಹೇಳುತ್ತಿದ್ದ ಮಕ್ಕಳು ಅಪ್ಪನ ಮಾತುಗಳನ್ನು ಮೀರದೆ ಆ ಸಂಬಂಧಕ್ಕೆ ಒಂದು ಗೌರವ ತಂದುಕೊಟ್ಟಿರುತ್ತಾರೆ. ಹಾಗೆ ಅಪ್ಪನಾದವನು ತನ್ನ ಮಕ್ಕಳು ಹೇಳದೇ

ಇರುವಂತಹ ಎಷ್ಟು ವಿಷಯಗಳು ತಾನಾಗೆ ಅರಿತುಕೊಂಡು ನಮಗೆ  ಬೆನ್ನೆಲುಬಾಗಿ ನಿಲ್ಲುತ್ತಾರೆ. ತನ್ನ ಮಗನಾದವನು ಬೇರೊಂದು ಹೆಣ್ಣನ್ನು ಮದುವೆ ಮಾಡಿಕೊಂಡು ಬಂದಾಗ ಆ ಹೆಣ್ಣಿಗೆ ತನ್ನ ತಂದೆ-ತಾಯಿಯ ನೆನಪಾಗದಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ “ಕೈ ಕೈ ಜೋಡಿಸಿದಾಗ ಮಾತ್ರ ಚಪ್ಪಾಳೆ ತಟ್ಟಲು ಸಾಧ್ಯ”. ಎಂಬಂತೆ ನಾವು ಪ್ರೀತಿ ತೋರಿಸಿದಾಗ ಮಾತ್ರ ನಮ್ಮ ಮನೆಯಲ್ಲಿ ಬಂದಂತಹ ಮುಗ್ಧ ಸೊಸೆಯಂದಿರು ಮಕ್ಕಳಾಗಿ ಪ್ರೀತಿ ತೋರುವುದು ಎಂದು ಅವರು ಅರಿತಿರುತ್ತಾರೆ. ಅವರಲ್ಲಿ ತನ್ನ ಮುದ್ದಿನ ಮಗಳನ್ನು ಕಾಣಲು ಪ್ರಯತ್ನಿಸುತ್ತಾರೆ. ತನ್ನ ಮಗಳಿಗಿಂತ ಹೆಚ್ಚಿನ ಪ್ರೀತಿಯನ್ನು ತೋರಿಸಿ  ಆಕೆಯನ್ನು ತನ್ನ ಮಗಳಾಗಿ ಮಾಡಿಕೊಳ್ಳುತ್ತಾರೆ. ಅಪ್ಪ ನಿನ್ನಲ್ಲಿ ಅದು ಎಂತಹ ದೊಡ್ಡಗುಣ ಅಪ್ಪ . ಐ ಲವ್ ಯು ಅಪ್ಪ. ನಾನು ಮದುವೆ ಮಾಡಿಕೊಂಡು ನಿನ್ನಿಂದ ದೂರ ಇದ್ದರೂ ಪ್ರತಿ ಕ್ಷಣ ನಿನ್ನ ನೆನಪು ಕಾಡುತ್ತಿರುತ್ತದೆ. ನಾನು ಬರೆಯುವಂತಹ ಅಕ್ಷರಗಳು ನಿನ್ನ ವರ್ಣಿಸಲು ಸಾಲದು ಅಪ್ಪ. ಅಪ್ಪ ಅಂದ್ರೆ ನೇ ಹಾಗೆ ಆಕಾಶಕ್ಕೂ ಮಿಗಿಲು ಎಲ್ಲವೂ ನೀನೆ, ನಿನ್ನಿಂದಲೇ ನನಗೆಲ್ಲ. ಅಪ್ಪ ಕಲಿಸಿದಂತಹ ಜೀವನದ ಮೌಲ್ಯಗಳು ಜೀವನದುದ್ದಕ್ಕೂ ಅಮೂಲ್ಯ. ದಿನಾ ಬೆಳಗ್ಗೆ ಆದರೆ ಸಾಕು ನಿಮ್ಮ ಮಾತು , ನಿಮ್ಮ ಮುದ್ದು ಮಾಡುವ ರೀತಿ, ಅಮ್ಮ ಬೈಯುತ್ತಿರುವಾಗ ನನ್ನ ವಹಿಸಿಕೊಂಡು ಮಾತಾಡುವ ರೀತಿ, ಹಾಗೆ ಈಗ ನನ್ನ ಕಣ್ಣು ಯಾವಾಗಲೂ ನೀವು ಬರುವ ದಾರಿಯನ್ನೇ ಕಾಯುತ್ತಿರುವೆ ಅಪ್ಪ. ನಿಮ್ಮನ್ನು ತುಂಬಾ ಮಿಸ್ ಮಾಡ್ಕೊತೀನಿ ಅಪ್ಪ.

ಈ ಒಂದು ಅಪ್ಪಂದಿರ ದಿನದಂದು ಅಪ್ಪ ಅಮ್ಮ ನಮ್ಮೆರಡು ಕಣ್ಣುಗಳು. ಒಂದು ಕಣ್ಣಿಗೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವ ಮತ್ತೊಂದು ಕಣ್ಣಿಗೂ ಇದೆ. ಯಾವುದೇ ಒಂದು ದೃಶ್ಯ ನೋಡಬೇಕಾದರೆ ಎರಡು ಕಣ್ಣುಗಳಿಂದ ನೋಡಿದಾಗ ಮಾತ್ರ ಅದರ ಅಂದ ಹೆಚ್ಚುವುದು. ಹಾಗೆ ಅಮ್ಮ ಎಲ್ಲದರಲ್ಲೂ ಮುಂದೆ, ಪ್ರೀತಿ, ನೋವು, ದುಃಖ ತೋರಪಡಿಸಿ ಶಾಂತಳಾಗುತ್ತಾಳೆ. ಆದರೆ ಅಪ್ಪ ಪ್ರೀತಿ,  ನೋವು, ದುಃಖ, ಎಲ್ಲವನ್ನೂ ಒಳಗೆ ಬಚ್ಚಿಟ್ಟುಕೊಂಡು ಧೈರ್ಯದಿಂದ ಎಲ್ಲರ ಮುಂದೆ ನಮ್ಮೆಲ್ಲರ ಬೆನ್ನೆಲುಬಾಗಿ ಹಿಂದೇ ಇರುವುದರಿಂದಲೇ ನಾವೆಲ್ಲರೂ ಬೆಟ್ಟದ ಹಾಗೆ ಬೆಳೆದು ನಿಂತಿದ್ದು ನಾವೆಲ್ಲರೇ ಎಲ್ಲರಿಗೂ ಸ್ಫೂರ್ತಿ. “ಮುತ್ತು ಕೊಡೋಳು ಬಂದಾಗ ತುತ್ತು ಕೊಡುವವರನ್ನು  ಮರೆಯಬಾರದು” ಎಂಬ ಮಾತಿನಂತೆ ನಾವು ಕೆಲ ಕಾಲ ಯಾವುದೋ ವ್ಯಾಮೋಹಕ್ಕೆ ಮರುಳಾಗಿ ಹೆತ್ತವರನ್ನು ಮರೆಯುವ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ. ಎಷ್ಟೋ ತಂದೆತಾಯಿಗಳಿಗೆ ವೃದ್ಧಾಶ್ರಮಕ್ಕೆ ಸಹ ಸೇರಿಸುತ್ತಿರುವದು ನೋಡಿದ್ದೇವೆ . ಹಾಗೆಯೇ ಆ ಪರಿಸ್ಥಿತಿಗೆಲ್ಲಾ ಒಂದು  ಹೆಣ್ಣೇ ಕಾರಣವೆಂದು ದೋಷಿಸುವುದು ಉಂಟು. ಆದರೆ ಅದು ಎಷ್ಟರಮಟ್ಟಿಗೆ ಸತ್ಯ? ನಿಜ ಹೆಣ್ಣು ತನ್ನ ತಂದೆ ತಾಯಿಯಂತೆ ಅವರನ್ನು ನೋಡಿಕೊಳ್ಳದೆ ಇರಬಹುದು. ಆಕೆ ಅಲ್ಲಿ ಅವರನ್ನು ಅತ್ತೆ ಮಾವನಂತೆ ಕಂಡಾಗ ಗಂಡುಮಕ್ಕಳು ತನ್ನ ತಂದೆ ತಾಯಿಯನ್ನು ಹೇಗೆ ಮರೆಯುತ್ತಾರೆ? ಒಂದು ಹೆಣ್ಣು ತನ್ನ ಕಡೆಯವರನ್ನು ತನ್ನ ತಂದೆ ತಾಯಿಯನ್ನು ಎಷ್ಟು ಮಹತ್ವ ಕೊಡುತ್ತಾಳೋ ಅಷ್ಟೇ ಮಹತ್ವ ಗಂಡುಮಕ್ಕಳು ಸಹ ತನ್ನ ಕಡೆಯ ಸಂಬಂಧಿಕರಿಗೆ, ತಂದೆ-ತಾಯಿಗೆ ಕೊಟ್ಟಾದ ಒಂದು ಸುಖ ಸಂಸಾರ ಸಾಗಲು ಸಾಧ್ಯ.  ತನ್ನ ಹೆಂಡತಿ ಎಡವಿದಾಗ ಅಥವಾ ಒಂದು ಹೆಣ್ಣು ನಿಮ್ಮ ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ ಇದ್ದಾಗ  ಆಕೆಯ ತಪ್ಪನ್ನು ತಿದ್ದಿ,  ತಾನು ಸಹ ದಾರಿ ತೋರಿಸಬಲ್ಲದಲ್ಲವೇ? ಪ್ರಪಂಚವೇನೋ ತಾಯಿ ತೋರಿಸಿರಬಹುದು ಆದರೆ ಆ ಪ್ರಪಂಚದಲ್ಲಿ ಬದುಕಲು ತಂದೆಯ ಕೈ ಹಿಡಿದು  ಕಲಿತಿರುವುದು ಮರೆಯಬಾರದು ಅಲ್ಲವೇ? ಅವರ ಋಣ ತೀರಿಸುವುದು ಅಸಾಧ್ಯವಾದದ್ದು. ಅಪ್ಪ ಅಮ್ಮ ನೀವು ನನ್ನ ಹೃದಯ ಎಂಬ ಅಂಬಾರಿಯಲ್ಲಿ ಬಚ್ಚಿಟ್ಟಿರುವೆ. ಐ ಲವ್ ಯು ಅಪ್ಪ.

ಸುನಿತಾ. ಎಸ್. ಪಾಟೀಲ 


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *