ಪತ್ರಗಳು

ನನ್ನ ಪುಟ್ಟ ಕನಸು:ವೀರ್ ಸಂತೋಷ್

 

ನನ್ನ ಪುಟ್ಟ ಕನಸಿನ ಹೆಸರು, “ಪೂರ್ವಿ”. ಅವಳು ನನ್ನ ಜೀವನಕ್ಕೆ ಬಂದು ಇವತ್ತಿಗೆ ಸರಿಯಾಗಿ ಒಂದು  ವರ್ಷವಾಯ್ತು. ಒಂದು ವರ್ಷದ ಹಿಂದೆ ಇದ್ದ ಸಂತೋಷ ಇವತ್ತಿಗೂ ಹಾಗೇ ಇದೆ. ದಿನದಿಂದ ದಿನಕ್ಕೆ ಅವಳ ಮೇಲಿನ ಪ್ರೀತಿ ಜಾಸ್ತಿಯಾಗ್ತಾ ಇದೆ. ಅವಳನ್ನು ನೋಡಿದ ಮೊದಲನೇ ದಿನ ಇನ್ನೂ ನನ್ನ ಕಣ್ಣಲ್ಲಿ ಹಸಿರಾಗಿದೆ. ಅವಳನ್ನು ನೋಡಿದ ಮರುಕ್ಷಣವೇ ನನ್ನ ಜೀವನ ಪರಿಪೂರ್ಣವಾಯಿತು. ಅವಳ ನೋಟದ ಶಕ್ತಿಯೇ ಅಂತಹದ್ದು. 

ಅವಳ ಪುಟ್ಟ ಕೈ ಬೆರಳುಗಳು ನನ್ನ ಕನಸಿನ ಲೋಕವನ್ನು ಚಿತ್ರಿಸಲು ಸಜ್ಜಾದಂತೆ ಕಾಣಿಸುತ್ತಿದ್ದವು. ಅವಳ ಕಾಲಿನ ಬೆರಳುಗಳಲ್ಲಿ ನನ್ನ ಪ್ರೀತಿಯ ಹೆಜ್ಜೆ ಗುರುತುಗಳಿದ್ದವು. ಅವಳನ್ನೇ ದಿಟ್ಟಿಸುತ್ತಾ ಕುಳಿತಿದ್ದ ನನ್ನ ಕಣ್ಣಲ್ಲಿ ನೀರು ತಾನಾಗೇ ಹೊರಬರಲು ಪ್ರಯತ್ನಿಸುತ್ತಿತ್ತು. ಅದರೊಡನೆ ಹೋರಾಡಲು ಸಾಧ್ಯವಿಲ್ಲದ ನನಗೆ ಆ ಕಣ್ಣ ಹನಿಗಳನ್ನು ಹಿಡಿದಿಡಲು ಸಾಧ್ಯವಾಗಲಿಲ್ಲ. ಮೊದಲ ಬಾರಿಗೆ ನನ್ನ ಕಣ್ಣುಗಳು ಸಂತೋಷದಿಂದ ತೇವವಾಗಿದ್ದವು. 

ಮೊದಲ ಬಾರಿಗೆ ನಾನು ಅವಳ ಕೈ ಬೆರಳುಗಳನ್ನು ಮುಟ್ಟಿದಾಗ ಅವಳು ನಕ್ಕ ಆ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವಳು ಅಂದು ಬೀರಿದ ಮುಗ್ಧ ನೋಟ ಇಂದಿಗೂ ಹಚ್ಚ ಹಸಿರಾಗಿದೆ. ಆ ನೋಟದಲ್ಲಿ ಯಾವುದೋ ಅರ್ಥವಾಗದ ಸಂದೇಶವಿತ್ತು. ಅದನ್ನು ಅರಿಯಲು ಪ್ರಯತ್ನಿಸುತ್ತಾ ನಾನು ನನ್ನನ್ನೇ ಅರ್ಥ ಮಾಡಿಕೊಂಡೆ. ಆ ಕೈ ಬೆರಳುಗಳಲ್ಲಿದ್ದ  ಮಾಂತ್ರಿಕ ಶಕ್ತಿಯೊಂದು ನನ್ನನ್ನು ಯಾವುದೋ ಕಲ್ಪನಾ ಲೋಕಕ್ಕೆ ಕರೆದೊಯ್ದಂತೆ ಭಾಸವಾಯಿತು.  

 ಅವಳ ಮುದ್ದಾದ ಕೆನ್ನೆಯನ್ನೊಮ್ಮೆ ಮುಟ್ಟಬೇಕೆನಿಸಿ ನನ್ನ ಕೈಗಳು ಒತ್ತಾಯಿಸುತ್ತಿದ್ದವು. ಹೇಗೋ ಆ ಕೆಲಸದಲ್ಲೂ ಯಶಸ್ವಿಯಾದೆ. ಅವಳು ಈ ಬಾರಿ ಸ್ವಲ್ಪ ಹೆಚ್ಚು ಹೊತ್ತೇ ನನ್ನನ್ನು ನೋಡಿದಳು. ಗೋಲಿಯಂತಹ  ಸುಂದರವಾದ ಆ ಕಪ್ಪು ಕಣ್ಣುಗಳಲ್ಲಿ ನನ್ನ ಕನಸಿನ ಲೋಕದ ಅನಾವರಣವನ್ನು ಕಂಡು ನನಗೆ ತುಂಬಾ ಹೆಮ್ಮೆಯೆನಿಸಿತು.  

ಅವಳಿಗೊಂದು ಧನ್ಯವಾದ ಹೇಳಬೇಕೆಂದೆನಿಸಿ ನಾನು ಅವಳ ಹಣೆಗೆ ಮುತ್ತೊಂದನ್ನು ನೀಡಿದೆ. ಅವಳು ತಡೆಯೋ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ನಾ ಇನ್ನೊಮ್ಮೆ ಚುಂಬಿಸಿದೆ. ಅವಳು ಈ ಬಾರಿ ನಕ್ಕಳು ಮತ್ತು ನನ್ನ ಕೈಯನ್ನು ಬಲವಾಗಿ ಹಿಡಿದಳು. ನಾ ಅವಳ  ತಲೆಯನ್ನೊಮ್ಮೆ ನೇವರಿಸಿ ಅವಳ ಕಣ್ಣಲ್ಲಿ ಕಣ್ಣಿಟ್ಟು, “ಧನ್ಯವಾದಗಳು” ಎಂದೆ. ಅವಳು ತನ್ನ ನಗುವಿನಿಂದ ಉತ್ತರ ನೀಡಿದಳು. ನಮ್ಮಿಬರಲ್ಲಿ ಯಾವುದೇ ಸಂಕೋಚಗಳಿರಲಿಲ್ಲ. ಅವಳನ್ನೇ ತದೇಕಚಿತ್ತದಿಂದ ನೋಡುತ್ತಿದ್ದ ನನ್ನನ್ನು ತನ್ನ ನಗುವಿನಿಂದ ಮಾತನಾಡಿಸಲು ಅವಳು ಪ್ರಯತ್ನಿಸುತ್ತಿದ್ದಳು. ನಾನೂ ಪ್ರಯತ್ನಿಸಿದೆ, ಆದರೆ ಅವಳಷ್ಟು ಪ್ರಭಾವಿಯಾಗಿ ಮಾತನಾಡಲು ನನ್ನಿಂದ ಆಗಲಿಲ್ಲ!!  

ಇಷ್ಟೆಲ್ಲಾ ಹೇಳಿದ ಮೇಲೂ ಪೂರ್ವಿ ಯಾರು ಅಂತ ಯೋಚಿಸ್ತಾ ಇದ್ದೀರಾ..? ಆಕೆ ನನ್ನ ಮಗಳು. ಇವತ್ತಿಗೆ ಅವಳು ನನ್ನ ಲೈಫ್ ಗೆ ಎಂಟ್ರಿಯಾಗಿ ಸರಿಯಾಗಿ ಒಂದು ವರ್ಷ. ಅವಳನ್ನ ನನಗೆ ಕೊಟ್ಟ ಅವರಮ್ಮನಿಗೆ ನಾನು ಚಿರರುಣಿ. ಈ ಒಂದು ವರ್ಷದಲ್ಲಿ ನಾನು ತುಂಬಾ ವಿಷಯಗಳನ್ನು ಕಲಿತೆ. ಮಾತಿಲ್ಲದೇ ಎಲ್ಲವನ್ನೂ ಹೇಳೋದು ಹೇಗೆ ಅಂತ  ಅವಳು ತುಂಬ ಚೆನ್ನಾಗಿ ಹೇಳಿಕೊಟ್ಟಳು. ಇವತ್ತು ಹೇಳಿಕೊಡ್ತಾ ಇದ್ದಾಳೆ. ಸಂತೋಷವಾಗಿರೋಕೆ ಯಾವುದೇ ಕಾರಣ ಬೇಕಿಲ್ಲ ಅನ್ನೋದನ್ನು ಸಹ ಕಲಿಸಿದವಳು ಅವಳು.

 ಇವತ್ತು ಅವಳು ಹುಟ್ಟಿದ ದಿನ. ಫ್ರಾಕ್ ಹಾಕಿಕೊಂಡು ತುಂಬಾ ಮುದ್ದಾಗಿ ಕಾಣ್ತಾ ಇದಾಳೆ. ಮೊದಲನೇ ದಿನ ಇದ್ದ ಮುಗ್ಧತೆ ಇನ್ನೂ ಹಾಗೇ ಇದೆ. ಅವಳು ತನ್ನ ತೊದಲು ನುಡಿಯಲ್ಲಿ, “ಅಪ್ಪಾ!!” ಅನ್ನುತ್ತಿದ್ದಾಳೆ.  ನನಗೆ ತುಂಬಾ ಖುಷಿಯಾಗ್ತಿದೆ. ಅವಳನ್ನು ನನ್ನ ಕಾಲ ಮೇಲೆ ನಿಲ್ಲಿಸಿಕೊಂಡು ಹೇಳಿಕೊಡೋದ್ರಲ್ಲಿ ಇರೋ ಮಜಾ ಇನ್ಯಾವುದ್ರಲ್ಲೂ ಸಿಗಲ್ಲಾ. ಅವಳು ಯಾವುದೋ ಕಾರಣಕ್ಕೆ ಅತ್ತಾಗ, ಅವಳನ್ನು ಎತ್ತಿಕೊಂಡು ಸಮಾಧಾನ ಮಾಡೋದಿದ್ಯಲ್ಲಾ ಅದರಷ್ಟು ಖುಷಿ ಕೊಡೋ ಕೆಲಸ ಈ ಭೂಮಿ ಮೇಲೆ ಮತ್ತೊಂದಿಲ್ಲ.  

ಅವಳು ನನ್ನ ಕೈಯನ್ನ ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಮುಂದೆ ಅದೇ ಕೈಗಳು ಇನ್ಯಾರದ್ದೋ ಕೈಹಿಡಿದು ನನ್ನಿಂದ ದೂರವಾಗೋದು ಖಂಡಿತ. ಆದರೆ ಇವತ್ತಿರುವ ಸಂತೋಷಕ್ಕೆ ಆ ಕೈಗಳೇ ಕಾರಣ. ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಪೂರ್ವಿ!!

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ನನ್ನ ಪುಟ್ಟ ಕನಸು:ವೀರ್ ಸಂತೋಷ್

  1. ಅವಳು ನನ್ನ ಕೈಯನ್ನ ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಮುಂದೆ ಅದೇ ಕೈಗಳು ಇನ್ಯಾರದ್ದೋ ಕೈಹಿಡಿದು ನನ್ನಿಂದ ದೂರವಾಗೋದು ಖಂಡಿತ. ಆದರೆ ಇವತ್ತಿರುವ ಸಂತೋಷಕ್ಕೆ ಆ ಕೈಗಳೇ ಕಾರಣ
    veer santhosh gave elaborate feelings he had with his daughter
    a readable article.

  2. ಎಷ್ಟೊಂದು Coincidence ನೋಡಿ,
    ನನ್ನ ಹೆಸರು ಕೂಡ ಸಂತೋಷ್, ನನ್ನ ಮಗಳ ಹೆಸರು ಪೂರ್ವಿ.
    ಅವಳಿಗೀಗ ಮೂರೂವರೆ ವರ್ಷ.
    ನಿಮಗಾದ ಅನುಭವಗಳೇ ನನಗೂ ಆಗಿವೆ:)

    ಪೂರ್ವಿ ನೂರ್ಕಾಲ ಬಾಳಲಿ.

Leave a Reply

Your email address will not be published. Required fields are marked *