ನನ್ನ ಪಾಲಿನ ಮತ್ತೊಂದು ಮಾತೃರೂಪ: ಎಂ.ಎಲ್.ನರಸಿಂಹಮೂರ್ತಿ

ಪ್ರತಿ ಹಬ್ಬಕ್ಕೂ ನಮ್ಮ ಹೊಸ್ತಿಲಲ್ಲಿ ಕೂತು ಅವರ ಹೊಸ್ತಿಲ ಕಡೆ ನೋಡುವುದು ರೂಢಿಯಾಗಿಬಿಟ್ಟಿತ್ತು

ನಾನು ಸಹಜವಾಗಿವೇ ತೊದಲು ನುಡಿಗಳನ್ನು ಆರಂಭಿಸಿದಾಗನಿಂದ ಇಲ್ಲಿಯ ವರೆಗೆ ಸೋಮು ಒಮ್ಮೊಮ್ಮೆ ಮಾತ್ರಕ್ಕೆ ನರಸಿಂಹ ಎಂದು ತಾಯ ಪ್ರೀತಿ ಹಂಚಿ ತಾಯಿಯಷ್ಟೆ ಅಕ್ಕರೆಯಿಂದ ನೋಡುಕೊಳ್ಳುವ ಮತ್ತೊಂದು ಮಾತೃಹೃದಯ ನಮ್ಮೂರಲ್ಲಿ ಇದಾರೆ. ನನಗೆ ಎರಡು ವರ್ಷ ವಯಸ್ಸಾಗಿದ್ದಾಗ ಬಾಲ ವ್ಯಾಧಿಯಿಂದಾಗಿ ಸತ್ತು ಹೋಗುತ್ತಿದ್ದನಂತೆ. ಆಗ ನಮ್ಮ ಅಪ್ಪ ಅಮ್ಮ, ಅಜ್ಜ ಅಜ್ಜಿ ಹೇಳಿದ ಜಾಗ, ಕೇಳಿದ ವೈದ್ಯರ ಬಳಿಗೆ , ಸೂಚಿಸಿದ ಮಂತ್ರಗಾರರ ಬಳಿಗೆ ನನ್ನ ಹೊತ್ತು ಓಡುತ್ತಿದ್ದರಂತೆ. ದಿನಗಟ್ಟಲೇ ನಡೆದಾಡಿದ್ದಾರೆ. ಸಮಯಕ್ಕೆ ಊಟವಿಲ್ಲದೆ ,ಹಗಲುರಾತ್ರಿ ಎನ್ನದೇ ನೂರಾರು ಕಿ.ಮೀಗಳಷ್ಟು(ಮಾಡಪ್ಪಲ್ಲಿಯಿಂದ ಆಂದ್ರದ ಅನಂತಪುರಂ ಜಿಲ್ಲೆಯ ಹಿಂದೂಪುರ , ಗೌರಿಬಿದನೂರಿಗೂ ) ಬರೀ ಕಾಲ್ನಡಿಗೆ ,ಸಾಧ್ಯವಾದಗ ಮಾತ್ರ ಅಪರೂಪಕ್ಕೆ ಬಸ್ಸಿಗೆ, ಎತ್ತಿನ ಗಾಡಿ ಪಯಣ ಹೀಗೆ ತಮ್ಮ ಪಯಣದಲ್ಲಿ ನನ್ನನ್ನು ಉಳಿಸಿಕೊಳ್ಳುವ ಕಾತುರದಲ್ಲಿ ತಮ್ಮ ಆಯಾಸ, ಹಸಿವು, ನಿದ್ರೆಗಳನ್ನೇ ಮರೆತು ಹೋಗುತ್ತಿದ್ದರಂತೆ.

ಅಪರೂಪಕ್ಕೆ ಹುಟ್ಟಿದ ಗಂಡು ಹೇಗಾದರೂ ಸರಿ ಇನ್ನೂ ನಾಲ್ಕು ಮನೆಗಳಲ್ಲಿ ಜೀತವಿದ್ದಾದರೂ ಮಗನನ್ನು ಉಳಿಸಿಕೊಳ್ಳಲೇ ಬೇಕೆಂದು ಸಾಲ ಮಾಡಲೂ ಮುಂದಾದರಂತೆ ನಮ್ಮ ಅಪ್ಪ, ಅದೇ ಸಮಯಕ್ಕೆ ತಾವು ಸಾಕಿಕೊಂಡಿದ್ದ ಮೇಕೆಗಳು ರೋಗಗಳಿಂದ ಹೆಣಗಳಾಗಿ ಬಿದ್ದಿದ್ವಂತೆ.

ಆ ಮೇಕೆಗಳನ್ನು ಕೋಯ್ದು ಭಾಗ ಹಾಕಿ ಊರಿನವರಿಗೆ ಎತ್ತಿಕೊಡುವ ಮನಸ್ಥಿತಿಯಲ್ಲೂ ಇಲ್ಲದ ನಮ್ಮ ಕುಟುಂಬದವರನ್ನು ಕಂಡ ನಾಗಮ್ಮ ( ಚಿತ್ರದಲ್ಲಿರುವವರು ನಾನು ಅವರನ್ನು ದೊಡ್ಡಮ್ಮ ಎಂದು ಕರೆಯುತ್ತೇನೆ.) ತನ್ನ ಯಜಮಾನ ಅಂದ್ರೆ ನರಸಿಂಹಪ್ಪ ಅಥವಾ ಅವರನ್ನು ಪ್ರೀತಿಯಿಂದ ಬಹುತೇಕ ಮಂದಿ ತಂತ್ಯಾಯಪ್ಪ ಎಂದು ಕರೆಯುತ್ತಿದ್ದರು. ಅವರಿಗೆ ಹೇಳಿದರಂತೆ ಪಾಪ ಮಗುವಿನ ಅನಾರೋಗ್ಯ ಪರಿಸ್ಥಿತಿಯಿಂದ ಅವರು ಕಂಗಾಲಾಗಿದ್ದಾರೆ. ಸತ್ತಂತ ಮೇಕೆಗಳನ್ನು ಯಾರಿಗ್ಯಾದರೂ ಕೊಟ್ಬಿಟ್ಟು ಉಳಿದವುಗಳಿಗೆ ಔಷಧಿಯ ಸಸ್ಯಗಳನ್ನು ತಂದು, ನೀವೇ ಈ ಎರಡು ದಿನ ಮೇಯಿಸಿಕೊಂಡು ಬನ್ನಿ ಎಂದು ಹೇಳಿದ್ದರಂತೆ.
ಹೆಣವಾಗಿ ಬಿದ್ದ ಮೇಕೆಗಳೊಂದೆಡೆಯಾದರೆ, ಧಾರಾಕಾರ ಮಳೆಯಿಂದಾಗಿ ಮತ್ತೊಂದೆಡೆ ವಾಸವಾಗಿದ್ದ ಸೂರಿನ ಗೋಡೆ ಕುಸಿತವಾಗಿತ್ತಂತೆ. ನಮ್ಮ ಅಜ್ಜಿ ಕಲ್ಲುಗಳನ್ನು ಮನೆಯ ಮಧ್ಯದಲ್ಲಿ ಹಾಕಿ ಅದರ ಮೇಲೆ ಹೆಜ್ಜೆ ಹಾಕುತ್ತಾ ನೀರಿಲ್ಲದ ಮನೆಯ ಮೂಲೆಯೊಂದರಲ್ಲಿ ನನ್ನ ಮಲಗಿಸಿಕೊಂಡ ಅಮ್ಮನಿಗೆ ಧೈರ್ಯ ಹೇಳುತ್ತಿದ್ದರಂತೆ, ಜೊತೆಗೆ ಅಪ್ಪನಿಗೆ ಊಟವನ್ನು ತಟ್ಟೆಯಲ್ಲಿಟ್ಟುಕೊಂಡು ಬಂದು ಬಲವಂತವಾಗಿ ಎರಡು ತುತ್ತು ತಿನ್ನಲು ಅಂಗಲಾಚುತ್ತಿದ್ದರಂತೆ. ಅಜ್ಜಿಯ ಮಾತಿಗೆ ಕೋಪಗೊಳ್ಳುತ್ತಿದ್ದ ಅಪ್ಪಅಮ್ಮ ಅವರಿಗೆ ಧೈರ್ಯ ಹೇಳಲು ಪಕ್ಕದ ಮನೆಯ ನರಸಿಂಹಪ್ಪ(ತಂತ್ಯಾಯಪ್ಪ, ನಾನು ದೊಡ್ಡಪ್ಪ ಎಂದು ಕರೆಯುತ್ತಿದ್ದೆ), ಅವರು ಮತ್ತು ಅವರ ಮಡದಿ ನಾಗಮ್ಮ(ದೊಡ್ಡಮ್ಮ ) ಇಬ್ಬರೂ ಬರುತ್ತಿದ್ದರಂತೆ. ಅವರು ಅಗಸರು(ಕ್ಷಮೆ ಇರಲಿ ಜಾತಿಯನ್ನು ಸೂಚಿಸಿದ್ದಕ್ಕಾಗಿ) ಆಗಿದ್ದಕ್ಕಾಗಿ ಹೊನ್ನಂಪಲ್ಲಿಯಲ್ಲಿ ಅವರ ರೈತರುಗಳು ಏನೇ ತಿಂಡಿಕೊಟ್ಟರು ಅದರಲ್ಲಿ ನನಗೆ ಮತ್ತು ನಮ್ಮ ಅಕ್ಕಗೆ ಪಾಲು ಇರುತ್ತಿತ್ತು.

ಏನೇನೋ ಹರಸಾಹಸಗಳಿಂದ ಬದುಕುಳಿದ ನನ್ನ ಸೋಮಶೇಖರ ಎಂಬ ಹೆಸರನ್ನು ಮನೆ ದೇವರ ಹೆಸರು ಬರುವಂತೆ ಹರಕೆ ಮಾಡಿಕೊಂಡು ನರಸಿಂಹಮೂರ್ತಿಯಾಗಿ ಬದಲಾಯಿಸಿದರಂತೆ. ಅಂದಿನಂತೆ ಆ ಬೀದಿಯಲ್ಲಿನ ಸಾವು ಗೆದ್ದವನೆಂದು, ದರಿದ್ರ ಕಾಲದಲ್ಲಿ ಹುಟ್ಟಿ ಹೆತ್ತವರನ್ನು ಕಾಡಿಸಿದವನೆಂದು, ಅಪರೂಪವಾಗಿ ಬೆಳೆದವನೆಂದು ಪಕ್ಕದ ಮನೆಯವರು ಆಗ್ಗಾಗ್ಗೆ ಹೇಳುತ್ತಿದ್ದರು.

ನಮ್ಮೂರಲ್ಲಿ ಅದರಲ್ಲೂ ಹಿರಿಯರಲ್ಲಿ ಜಾತಿವಾದವೂ ಬೇರೂರಿದೆ, ಜಾತೀಯತೆ ಅದೆಷ್ಟರ ಮಟ್ಟಿಗೆ ಬೇರೂರಿತ್ತೆಂದರೆ ಅದು ನನಗೂ ತಪ್ಪಿದ್ದಲ್ಲ , ಸಹಜವಾಗಿಯೇ ನಾನು ಹೈಸ್ಕೂಲ್ ಓದುತ್ತಿರುವಾಗಲೇ ಅಪ್ಪಅಮ್ಮನ ಜೊತೆ ಕೂಲಿ ಹೋಗುತ್ತಿದ್ದೆ, ಕೂಲಿ ಹೋದ ಜಾಗದಲ್ಲಿ ಲೋಟ ಅಥವಾ ತಂಬಿಗೆಯಲ್ಲಿ ನೀರು ಕುಡಿಯಲು ಬಿಡುತ್ತಿರಲಿಲ್ಲ. ಬದಲಿಗೆ ಬೊಗೆಸೆ ಮಾಡಿಕೊಳ್ಳುವಂತೆ ಹೇಳಿ ಬೊಗಸೆಗೆ ನೀರು ಸುರಿಯುತ್ತಿದ್ದರು. ಊಟಕ್ಕೆ ಎಲ್ಲರಿಗೂ ಎಲೆ ತಂದರೆ ನಮಗೆ ಅಲ್ಲಿಯೇ ಬಳ್ಳಿಯ ಅಥವಾ ಪತೃಳಿ( ಇಸ್ತ್ರಾಕು ಎಂದು ತೆಲುಗುವಿನಲ್ಲಿ) ಎಲೆಯೇ ಹುಡುಕಿಕೊಂಡು ತರಬೇಕಾಗಿತ್ತು. ಇಂತ ಹಲಾವರೂ ಅವಮಾನಗಳನ್ನು ಅರಿವಿಗೆ ಬಂದರೂ ಬರದಂತೆ ಎದುರಿಸುತ್ತಿದ್ದ ನೆನಪುಗಳು ಈಗಲೂ ಕಣ್ಣಾಲಿಗಳನ್ನು ತಣಿಸುತ್ತವೆ.

ಅದರ ನಡುವೆಯೇ ನಾನು ಚಿಕ್ಕ ವಯಸ್ಸಿನಲ್ಲಿ ಅದನ್ನು ಪಾಲಿಸದೇ ಮುರಿದವನೆಂದು ಅಜ್ಜಿ ಹೇಳಿ ಹಿಯಾಳಿಸುತ್ತಿರುತ್ತಾರೆ. ಕಾರಣ ಪಕ್ಕದ ಮನೆಯಲ್ಲಿ ನಾಗಮ್ಮ ದೊಡ್ಡಮ್ಮ ಏನೇ ತಿಂಡಿ ಮಾಡಿದರೂ ಅದರಲ್ಲಿ ಪಾಲುಗಾರನಾಗುತ್ತಿದ್ದೆ. ಒಮ್ಮೊಮ್ಮೆ ನಮ್ಮ ಅಜ್ಜಿಯ ಅರಿವಿಗೆ ಬಾರದಂತೆ ದೊಡ್ಡಮ್ಮ ನನಗೆ ಅದೆಷ್ಟೋ ಸಲ ತಿಂಡಿ ಕೊಡುತ್ತಿದ್ದರು. ಬರ್ತಾಬರ್ತಾ ಸಾಮಾನ್ಯವಾಗಿ ಬಿಟ್ಟು, ಅಜ್ಜಿ ತಗಾದೆ ತೆಗೆಯುವುದನ್ನು ಬಿಟ್ಟು ಮಕ್ಕಳು ತಾನೇ ತಿನ್ನಲಿ ಬಿಡೋ ಎನ್ನುವ ಉದಾರತೆಯನ್ನು ಬೆಳೇಸಿಕೊಳ್ಳುವಂತೆ ಮಾಡಿದೆ ಎಂದು ನಮ್ಮ ಅಜ್ಜಿಯೇ ಹೇಳಿದ ನೆನಪು.

ತಾತನಿಗೆ ನರಸಿಂಹಪ್ಪ ದೊಡ್ಡಪ್ಪ ವಾರಕ್ಕೊಮ್ಮೆ ಭಟ್ಟಿ ಸಾರಾಯಿ ಸೀಸೆಯನ್ನು ಯಾರಿಗೂ ಗೊತ್ತಾಗ ರೀತಿಯಲ್ಲಿ ತನ್ನ ನಿಕ್ಕರ್ ಜೇಬಿನಲ್ಲಿಟ್ಟು ತಂದು ನನ್ನ ಕರೆದು ಏಯ್ ನರಸಿಂಹ ನಿಮ್ಮ ಮನೆಯಲ್ಲಿ ಗೊತ್ತಾಗದಂತೆ ನಿಮ್ಮ ತಾತನಿಗೆ ಕೊಡು ಎಂದು ಆ ಸೀಸೆಯನ್ನು ನನ್ನ ಕೈಗೆ ಕೊಡುತ್ತಿದ್ದರು.ಅಷ್ಟೆ ಅಲ್ಲ ತಾತನಿಗೆ ಹಂದಿ ಮಾಂಸ ಎಂದರೆ ತುಂಬಾ ಇಷ್ಟ ,ಅದರ ಸಾರು ಮಾಡಿದರೂ ಹಾಗೇಯೇ ಕದ್ದು ಮುಚ್ಚಿ ತಾತನಿಗೆ ಕೊಡುತ್ತಿದ್ದರು. ಚೀಟಿ ಬೀಡಿ, ಸರಾಯಿ ಹಂಚಿ ಸವಿಯುತ್ತಿದ್ದರು ನರಸಿಂಹಪ್ಪ ದೊಡ್ಡಪ್ಪ. ನಾನು ಬೆಳೆಯುತ್ತಿದ್ದಂತೆ ರಜೆಯ ದಿನಗಳಲ್ಲಿ ಕುರಿ ಮೇಯಿಸಲು ನರಸಿಂಹಪ್ಪ ದೊಡ್ಡಪ್ಪನ ಜೊತೆ ಹೋಗುತ್ತಿದ್ದೆ, ಆಗ ಮಾವಿನ ತೋಪುಗಳಲ್ಲಿ ಮಾವಿನಕಾಯಿ, ಪರಂಗಿ ಹಣ್ಣು ಕದ್ದು ತಂದು ಸವಿಯುತ್ತಿದ್ದೇವು. ಕುರಿಮಂದೆಗಳು ಗುಂಪುಗೂಡುತ್ತಿದ್ದಾಗ ನಾನು, ನರಸಿಂಹಪ್ಪ, ಫಕೀರಪ್ಪ,ಗಂಗುಲಪ್ಪ, ಶ್ರೀನಿವಾಸ, ವೆಂಕಟೇಶ್, ಸೂರಿ,ಲಕ್ಷ್ಮಿನರಸು, ನಾರಾಯಣಮ್ಮ, ಗಂಗಯ್ಯ, ರಾಮಚಂದ್ರಣ್ಣ, ಮತ್ತಿತರರು ಸೇರಿ ಅಳಿಲಿನ ಬೇಟೆ ಮಾಡುತ್ತಿದ್ದೇವು. ಹುಣಸೆ ಮರದಲ್ಲಿ ಅಳಿಲಿದ್ದರೆ ಬಹುತೇಕ ಅದರ ಪ್ರಾಣ ಪಕ್ಷಿ ಹಾರುವುದು ಖಚಿತವಾಗುತ್ತಿತ್ತು. ದಿನಕ್ಕೆ ಇಂತಿಷ್ಟು ಅಳಿಲ ಬೇಟೆ ಮಾಡಲೇ ಬೇಕೆಂಬ ಗುರಿ ಇರುತ್ತಿತ್ತು. ಹೀಗೆ ಪರಸ್ಪರ ಸಾಮರಸ್ಯ, ಪ್ರೀತಿ, ತುಂಟಾಟಗಳಿಂದ ಸದಾ ಕಷ್ಟಗಳನ್ನು ಮರೆಯುತ್ತಿದ್ದ ನೆರೆಹೊರೆಯವರಿಂದ ಕೂಡಿದ ಅಕ್ಕರೆಯ ಪುಟ್ಟ ಹಳ್ಳಿಯ ಜೀವನ ನಮ್ಮದು.

ಸಾಮಾನ್ಯವಾಗಿ ನಮ್ಮೂರಲ್ಲಿ ಮುಸ್ಲಿಂರು ಇಲ್ಲದ ಕಾರಣಕ್ಕಾಗಿ ಮೋಹರಂ ಹಬ್ಬವನ್ನು ಪಕ್ಕದ ಜಿಲ್ಲಾಲಪಲ್ಲಿ ಗ್ರಾಮದಲ್ಲಿ ನಾವೆಲ್ಲ ಆಚರಣೆ ಮಾಡುತ್ತೇವೆ. ಈ ಹಬ್ಬದಲ್ಲಿ ಹಿಂದೂ ಮೂಸ್ಲಿಂ ರು ಒಟ್ಟಿಗೆ ಆಚರಿಸುವ ಹಬ್ಬ. ತುಂಬು ಪ್ರೀತಿಯಿಂದ ಮಾಮಾ..ಭಾವ ಎನ್ನು ಸಂಬಂಧ ಕಲ್ಪಿಸಿಕೊಂಡು ಸಾಮರಸ್ಯದಿಂದ ಆಚರಿಸುವ ಹಬ್ಬ. ಈ ಹಬ್ಬದ ಮಾರನೇ ದಿನ ನರಸಿಂಹಪ್ಪ ದೊಡ್ಡಪ್ಪ ಮತ್ತು ರಾಜಪ್ಪ ಮಾಮ ಛದ್ಮ ವೇಷ ಧರಿಸುತ್ತಿದ್ದರು. ಗೋಣಿ ಚೀಲ, ಕತ್ತಾಲೆ ನಾರಿನ ಗಡ್ಡ , ತಲೆಗೂದಲು ಹಾಕಿಕೊಂಡು ಜಾನಪದ ಹಾಡುಗಳನ್ನು ಹಾಡುತ್ತಾ ಮನೆ ಮನೆಗೂ ಹೋಗಿ ದವಸಧಾನ್ಯಗಳನ್ನು ಸಂಗ್ರಹಿಸುತ್ತಿದ್ದರು. ಜೊತೆಗೆ ಒಂದಿಷ್ಟು ಸರಾಯಿಗೆ ಬೇಕಾದಷ್ಟು ಹಣವನ್ನು ಚಂದಾ ಮಾಡುಕೊಳ್ಳುತ್ತಿದ್ದರು.

(ಇದೆಲ್ಲ ನೆನಪಿಗೆ ಬರಲು ನಮ್ಮ ಅಪ್ಪನನ್ನು ತನ್ನ ದೊಡ್ಡ ಮಗನಂತೆ ಸಾಕಿದ ಪದ್ಮಾವತಿ ಅಮ್ಮನವರು ಈ ದೀಪಾವಳಿಯ ಸಮಯದಲ್ಲಿ ಬೆಳಗುವುದು ನಿಲ್ಲಿಸಿದರು0, ಈಗಿನ ಮಳೆಗಿಂತ ಇನ್ನೂ ಹೆಚ್ಚು ಮಳೆ ಊರಿಗೆ ಊರೆ ಶೋಕದಲ್ಲಿ ಮುಳಿಗಿತ್ತು)

ಇಂತಹ ಹಬ್ಬದ ಏನೇ ವಿಶೇಷ ಹಬ್ಬಗಳ ತಿಂಡಿಗಳಿದ್ದರೂ ನಾಗಮ್ಮ- ನರಸಿಂಹಪ್ಪ ದಂಪತಿ ತಮ್ಮ ನಾಲ್ಕು ಮಕ್ಕಳ(ಅವರಿಗೆ 2 ಹೆಣ್ಣು ಮತ್ತು 2ಗಂಡು) ಜೊತೆಗೆ ನಾವು 3ಜನ (ಅಕ್ಕ, ತಂಗಿ ಮತ್ತು ನಾನು) ಸೇರಿಕೊಳ್ಳುತ್ತಿದ್ದೇವು. ಅನ್ನ ಯಾರಾದರೂ ಕೊಟ್ಟರೆ ಸೋಮು ನಮ್ಮಮ್ಮ ಕರೆಯುತ್ತಿದ್ದಾರೆ ತಟ್ಟೆ ಅಂತೆ ತಗೊಂಡು ಹೋಗು ಎಂದು ಗಂಗಾ ಅಕ್ಕ(ನಾಗಮ್ಮ ದೊಡ್ಡಮ್ಮರವರ ಕಿರಿ ಮಗಳು) ಅದೆಷ್ಟೋ ಸಲ ಹೇಳಿದ್ದಾರೆ. ತಟ್ಟೆ ತಗೊಂಡು ಹೋಗು ಎಂದ ಕೂಡಲೇ ನನಗೆ ಬೆಲ್ಲದ ಪಾಯಸ, ಅನ್ನ , ಕೇಸರಿಬಾತು ಅಥವಾ ರಾಗಿ ಶಾವಿಗೆಯನ್ನು ನಿರೀಕ್ಷಿಸಿಕೊಂಡು ಹೋಗುತ್ತಿದ್ದೆ. ದೊಡ್ಡಮ್ಮ ಏನೇ ಕೊಟ್ಟರೂ ಅದನ್ನು ಮೂರು ಭಾಗ ಮಾಡಿಕೊಂಡು ತಿನ್ನುವುದು ನಮ್ಮಲ್ಲಿ ತಾನಾಗಿಯೇ ಬೆಳೆದು ಬಂದಿತ್ತು. ಅದು ಸ್ವಲ್ಪ ಇದ್ದರೂ ಸರಿ ಜಾಸ್ತಿಯಾದರೂ ಸರಿ.

ಕಾಲ ಚಕ್ರದಲ್ಲಿ 1994ರಲ್ಲಿ ತಾತ ತೀರಿಕೊಂಡರು ನರಸಿಂಹಪ್ಪ ದೊಡ್ಡಪ್ಪ ಅಯ್ಯೋ ಮಾಮ ನನಗೆ ದೊಡ್ಡಣ್ಣ ಅಂತಿದ್ದ ನೀವು ಹೊರಟು ಹೋದರೆ ಎಂದು ದುಃಖಿಸಿದ್ದ ನೆನಪು ಈಗಲೂ ಕಣ್ಮುಂದೆ ಕಾಡುತ್ತದೆ. ತದ ನಂತರ 2005 ರಲ್ಲಿ ನರಸಿಂಹಪ್ಪ ತೀರಿಕೊಂಡಾಗ ನಮ್ಮಪ್ಪರವರು ಅದೇ ರೀತಿಯಲ್ಲಿ ನಮ್ಮ ಹತ್ತಿರ ಹೇಳಿಕೊಂಡು ದುಃಖಿಸಿದರು. ಇಲ್ಲಿ ನಮ್ಮಲ್ಲಿ ಬೆಸೆದುಕೊಂಡಿದ್ದ ಬಾಂಧವ್ಯ ಭಾವನಾತ್ಮಕವಾಗಿತ್ತು.
ನಾಗಮ್ಮ ದೊಡ್ಡಮ್ಮ ಈಗಲೂ ಅಷ್ಟೇ ಊರಿಗೆ ಹೋದಾಗ ವಿಶೇಷ ತಿಂಡಿ ಇದ್ದರೆ ಬಚ್ಚಿಟ್ಟುಕೊಂಡು ಬಂದು ಕೊಡ್ತಾರೆ. ಏನಪ್ಪ ನರಸಿಂಹ ಹೀಗೆ ಇರ್ತೀಯಾ. ನಾವು ಸಾಯುವುದರೊಳಗೆ ಕೀರು ಹಾಕ್ಸು ಎಂತಾರೆ. ದೊಡ್ಡಮ್ಮರ ಮನೆಯಲ್ಲಿ ಏನೇನೋ ಬದಲಾವಣೆಗಳಾದವು, ಒಂದಷ್ಟು ದಿನಗಳು ಅಜ್ಜಿಯ ಜೊತೆ ಮುನಿಸಿಕೊಂಡರೂ ನಮ್ಮನ್ನು ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದರು.

ನಾಗಮ್ಮ ದೊಡ್ಡಮ್ಮ ನನ್ನ ಪಾಲಿಗೆ ಮತ್ತೊಬ್ಬ ಮಾತೃ ಮೂರ್ತಿಯಾಗಿ ಬೆಳೆಸಿದ್ದಾರೆ. ನಮ್ಮ ಅಕ್ಕನ ಎರಡನೇ ಹೆರಿಗೆ ಅವರ ಮನೆಯಲ್ಲಿಯೇ ಮಾಡಿಸಿದರು. ನಮ್ಮನ್ನು ಸಾಕಿದ್ದಲ್ಲದೆ ನಮ್ಮ ಅಕ್ಕ ಮತ್ತು ತಂಗಿಯ ಮಕ್ಕಳನ್ನು ಸಲುಹಿದ್ದಾರೆ. ಊರಿಗೆ ಅವರು ಬಂದರೆ ಮೊಮ್ಮಕ್ಕಳು ನೋಡುನೋಡುತ್ತಿದ್ದಂತೆಯೇ ಬೆಳೆದು ಬಿಡುತ್ತಿದ್ದಾರೆ ಎಂದು ಹೊಗುಳುತ್ತಾರೆ.

ಇಂತಹ ಮತ್ತೊಬ್ಬ ನೆರೆಮನೆಯ ಮಾತೃ ಮೂರ್ತಿಗಳು ಸಿಗುವುದು ಕಷ್ಟ…..

-ಎಂ.ಎಲ್.ನರಸಿಂಹಮೂರ್ತಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x