ನನ್ನ ಜೀವನವನ್ನು ಬದಲಿಸಿದ ಆ ಚಿತ್ರ:ವಾಸುಕಿ ರಾಘವನ್

 

ಬಹುಶಃ 1998ರ ಆಗಸ್ಟ್ ಇರಬೇಕು. ಸೆಮಿಸ್ಟರ್ ಕೊನೆಯ ದಿನ ಕಾಲೇಜಿನಿಂದ ಹಾಲ್ ಟಿಕೆಟ್ ಇಸ್ಕೊಂಡು ಬರಕ್ಕೆ ಹೋಗಿದ್ದೆ. ವಾಪಸ್ಸು ಮನೆಗೆ ಬಾರೋವಾಗ ನನಗೇ ಗೊತ್ತಿಲ್ಲದಂತೆ ವುಡ್-ಲ್ಯಾಂಡ್ಸ್ ಥೀಯೇಟರ್ ಕಡೆಗೆ ನನ್ನ ಗಾಡಿ ತಿರುಗಿಸಿದ್ದೆ. ಆ ಚಿತ್ರದ ಬಗ್ಗೆ ಒಳ್ಳೆ ವಿಮರ್ಶೆ ಓದಿದ್ದೆನಾ ಅಥವಾ ಪರೀಕ್ಷೆ ಶುರು ಆಗೋದರ ಒಳಗೆ ಒಂದು ಸಿನಿಮಾ ನೋಡಿಬಿಡಬೇಕು ಅನ್ನೋ ಚಡಪಡಿಕೆ ಇತ್ತಾ ನೆನಪಿಗೆ ಬರ್ತಾ ಇಲ್ಲ. ನನಗೆ ಆಗ ಆ ಚಿತ್ರದ ನಿರ್ದೇಶಕನಾಗಲೀ, ನಟರಾಗಲೀ ಯಾರೂ ಗೊತ್ತಿರಲಿಲ್ಲ. ಆದರೆ ಚಿತ್ರಮಂದಿರದಲ್ಲಿ ಕೂತಿದ್ದ ಆ ಮೂರು ಗಂಟೆಯ ಅನುಭವ ಇವತ್ತಿಗೂ ಒಂಚೂರೂ ಮರೆತಿಲ್ಲ. ಅಲ್ಲಿಯವರೆಗೆ ಸಿನಿಮಾಗಳನ್ನ ಟೈಂಪಾಸ್ ಗೆ, ‘ಮನರಂಜನೆ’ಗೆ, ಸುಮ್ನೆ ಫ್ರೆಂಡ್ಸ್ ಜೊತೆ ಮಜಾ ಮಾಡಕ್ಕೆ ಅಂತ ನೋಡ್ತಿದ್ದು – ಆದರೆ ಈ ಚಿತ್ರ ನಾನು ಸಿನಿಮಾ ಅನ್ನು ಗ್ರಹಿಸುವ ರೀತೀನೆ ಬದಲಾಯಿಸಿಬಿಡ್ತು. ನನಗೆ ಯಾವ ಮಟ್ಟಿಗೆ ಕಾಡಿತ್ತು ಅಂದ್ರೆ ಈ ಸಿನಿಮಾದ ವಿಸಿಡಿ ಅನ್ನು ತಂದು ನನ್ನ ಕಂಪ್ಯೂಟರ್ ಅಲ್ಲಿ ಕಾಪಿ ಮಾಡ್ಕೊಂಡುಬಿಟ್ಟಿದ್ದೆ. ಅದೆಷ್ಟು ಸಲ ಮತ್ತೆ ಮತ್ತೆ ನೋಡಿದ್ದೇನೋ, ಕೆಲವು ಸೀನ್ ಅಂತೂ ಒಂದೈವತ್ತು ಸಲ ನೋಡಿದ್ರೂ ಆಶ್ಚರ್ಯ ಇಲ್ಲ. ಯಾರು ಸಿಕ್ರೂ ಬರೀ ಈ ಫಿಲಂ ಬಗ್ಗೆನೇ ಮಾತಾಡ್ತಾ ಇರ್ತಿದ್ದೆ. ಆ ಲೆವೆಲ್ಗೆ ಹುಚ್ಚು ಹಿಡಿಸಿದ ಆ ಮನೋಜ್ಞ ಚಿತ್ರವೇ  “ಸತ್ಯ”!

ಚಿತ್ರದ ಕಥೆ ತುಂಬಾ ಸರಳ. ಎಲ್ಲಿಂದಲೋ ಮುಂಬೈಗೆ ಬರುವ ಸತ್ಯ ಎಂಬ ಯುವಕ ಯಾವನದೋ ಜೊತೆ ಹೊಡೆದಾಟ ಮಾಡಿ ಜೈಲು ಸೇರುತ್ತಾನೆ. ಅಲ್ಲಿ ಭಿಕು ಮ್ಹಾತ್ರೆ ಎಂಬ ಅಂಡರ್ವರ್ಲ್ಡ್ ಡಾನ್ ನ ಪರಿಚಯ. ಬಹಳ ಬೇಗ ಭಿಕು ಜೊತೆ ಗೆಳೆತನ ಉಂಟಾಗಿ ಆಚೆ ಬಂದ ಮೇಲೆ ಭಿಕು ಹಾಗು ಕಲ್ಲು ಮಾಮ ಅವರ ಗ್ಯಾಂಗ್ ಸೇರುತ್ತಾನೆ. ಈ ಗ್ಯಾಂಗ್ ಗೆ ಬೆಂಬಲವಾಗಿ ಇರುವವನು ಭಾವು ಅನ್ನೋ ರಾಜಕಾರಿಣಿ, ಇವನೂ ಒಂದು ಕಾಲದಲ್ಲಿ ರೌಡಿ ಆಗಿದ್ದವನೇ. ಸತ್ಯ ತನ್ನ ಧೈರ್ಯ, ನಿಷ್ಠಾವಂತಿಕೆ, ಚಾಕಚಕ್ಯತೆಯಿಂದ ಬಹಳ ಬೇಗ ಗುಂಪಿನಲ್ಲಿ ಬೆಳೀತಾನೆ. ಇದರ ಮಧ್ಯೆ ಭಾವು ಚುನಾವಣೆ, ಗ್ಯಾಂಗ್ ರೈವಲ್ರಿ, ಹೊಸ ಪೋಲಿಸ್ ಕಮಿಷನರ್ ಆಗಮನದಿಂದ ಉಂಟಾಗೋ ತಲ್ಲಣ, ಸತ್ಯನಿಗೆ ಪಕ್ಕದ ಮನೆ ಹುಡುಗಿ ಜೊತೆ ಪ್ರೀತಿ – ಹೀಗೆ ಸಾಗುತ್ತೆ ಕಥೆ.

ಕಥೆಗಿಂತ ಹೆಚ್ಚಿಗೆ ಇಷ್ಟವಾಗೋದು ಅಂದ್ರೆ ಚಿತ್ರಕಥೆಯನ್ನು ಹೆಣೆದಿರುವ ರೀತಿಯಲ್ಲಿ. ಕಲ್ಲು ಮಾಮ ಪಾತ್ರ ಮಾಡಿರೋ ಸೌರಭ್ ಶುಕ್ಲ ಮತ್ತು ಈ ಪೀಳಿಗೆಯ ಅತ್ಯಂತ ಭರವಸೆಯ ನಿರ್ದೇಶಕ ಅನುರಾಗ್ ಕಶ್ಯಪ್ ಬರೆದಿರೋ ಅದ್ಭುತ ಚಿತ್ರಕಥೆಯನ್ನ ರಾಮ್ ಗೋಪಾಲ್ ವರ್ಮ ಅಷ್ಟೇ ಕಲಾತ್ಮಕತೆಯಿಂದ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ತೀರಾ ಚಿಕ್ಕಚಿಕ್ಕ ಪತ್ರಗಳೂ ಕೂಡ ಮನಸ್ಸಿನಲ್ಲಿ ಉಳಿದುಬಿಡುತ್ತದೆ. ಓಂ ಪುರಿ ಅವರ ಕಂಚಿನ ಕಂಠದ ವಾಯ್ಸ್ ಓವರ್ ಇಂದ ಶುರು ಆಗೋ ಚಿತ್ರ ನಮ್ಮನ್ನು ಸೀಟಿಗೆ ಅಂಟಿಕೊಂಡು ಕೂರೋ ಹಂಗೆ ಮಾಡಿಬಿಡುತ್ತೆ.

ಸತ್ಯ ಮತ್ತು ಭಿಕು ಗೆಳೆತನದ ನೈಜ ಚಿತ್ರಣ ನಿಜಕ್ಕೂ ತುಂಬಾ ಚನ್ನಾಗಿದೆ. ಇಬ್ಬರದೂ ಭಿನ್ನ ವ್ಯಕ್ತಿತ್ವ. ಭಿಕು ಜೋರಾಗಿ ನಗುವ, ವಟವಟ ಮಾತಾಡೋ ಹುಂಬ. ಸತ್ಯ ಎಲ್ಲಿಂದಲೋ ಬಂದವನು, ಮಾತು ಕಮ್ಮಿ, ಆದರೆ ಬಹಳ ಬುದ್ಧಿವಂತ. ಗ್ಯಾಂಗ್ ನ ಬೇರೆ ಎಲ್ಲರೂ ಕುಡಿದು ಕುಣಿತಾ ಇದ್ರೆ ಇವನು ಯಾವುದೋ ಮೂಲೇಲಿ ಸುಮ್ಮನೆ ಸೈಲೆಂಟ್ ಆಗಿ ಒಬ್ಬನೇ ನಿಲ್ಲುವ ನಾಚಿಕೆ ಸ್ವಭಾವ. ತನ್ನ ಭಾವನೆಗಳನ್ನು ಮುಕ್ತವಾಗಿ ಪ್ರದರ್ಶಿಸದ ಸಂಕೋಚದ ವ್ಯಕ್ತಿ – ತಾನು ಬಹಳ ಗಾಡವಾಗಿ ಪ್ರೀತಿಸೋ ಪಕ್ಕದ ಮನೆ ಹುಡುಗಿ ಹಾಗೂ ಜೀವದ ಗೆಳೆಯ ಭಿಕು ಹತ್ತಿರ ಕೂಡ. ಸತ್ಯನ ಪಾತ್ರಕ್ಕೆ ತುಂಬಾ ‘ವುಡನ್’ ಮುಖದ ಚಕ್ರವರ್ತಿ ಅನ್ನು ಆಯ್ಕೆ ಮಾಡಿರೋದು ನಿಜಕ್ಕೂ ಸೂಕ್ತವಾಗಿದೆ. ಸತ್ಯ ನಿಮಗೆ ಎಷ್ಟೇ ಗೊತ್ತಾದ ಅಂದ್ಕೊಂಡ್ರೂ ನಿಮಗೆ ಗೊತ್ತಿಲ್ದೆ ಇರೋದೇ ಜಾಸ್ತಿ ಅನ್ಸುತ್ತೆ. ಭಿಕು ನಿಮ್ಮ ಊರು ಯಾವುದು ಅಂತ ಕೇಳಿದಾಗ “ತಿಳ್ಕೊಂಡು ಏನ್ ಪ್ರಯೋಜನ” ಅಂತಾನೆ. ನಿಮ್ಮ ಅಪ್ಪ ಅಮ್ಮ ಎಲ್ಲಿದಾರೆ ಅನ್ನೋದಕೆ “ಗೊತ್ತಿಲ್ಲ, ಬಹುಶಃ ಸತ್ತುಹೋಗಿರ್ಬೇಕು” ಅಂತ ಅತ್ಯಂತ ನಿರ್ಭಾವುಕವಾಗಿ ಹೇಳ್ತಾನೆ – ನೆನೆಸಿಕೊಂಡರೆ ಈಗಲೂ ಮೈ ಜುಮ್ ಅನ್ನುತ್ತೆ. ಅವನ ಹಿನ್ನೆಲೆ ಬಗ್ಗೆ ಹೆಚ್ಚೇನೂ ತಿಳಿಸದೇ ಅವನನ್ನು ಭೂಗತ ಪ್ರಪಂಚದಲ್ಲಿ ಕಳೆದು ಹೋಗೋ ನೂರಾರು ಹುಡುಗರ ಪ್ರತೀಕ ಅನ್ನುವಂತೆ ತೋರಿಸಲಾಗಿದೆ.

ಈ ಚಿತ್ರದಲ್ಲಿ ನನಗೆ ಬಹಳ ಬಹಳ ಇಷ್ಟ ಆಗಿರೋ ಒಂದು ಸೀನ್ ಇದೆ. ಭಿಕು ಆಗ ತಾನೇ ಜೈಲಿಂದ ಬಿಡುಗಡೆಯಾಗಿರ್ತಾನೆ. ನೇರ ಮನೆಗೆ ಹೋಗೋ ಬದಲು ಸತ್ಯನ ಜೊತೆ ಬಾರ್ ಗೆ ಹೋಗಿ ಕುಡಿದು ಮನೆಗೆ ಬರುತ್ತಾನೆ. ಸತ್ಯನನ್ನು ಮೊದಲ ಬಾರಿಗೆ ತನ್ನ ಮನೆಗೆ ಕರೆತಂದಿರುತ್ತಾನೆ. ಇಷ್ಟು ತಡವಾಗಿ ಬಂದಿದ್ದಕ್ಕೆ ರಣಚಂಡಿ ಆಗಿರ್ತಾಳೆ ಭಿಕು ಹೆಂಡತಿ. ಬಾಗಿಲ ಹತ್ರಾನೆ ಅಡ್ಡ ಹಾಕಿ ದಬಾಯಿಸ್ತಾಳೆ. ಕುಡಿದ ಅಮಲಿನಲ್ಲಿ ಭಿಕು ಅವಳನ್ನ ರಮಿಸೋಕೆ ಟ್ರೈ ಮಾಡ್ತಿರ್ತಾನೆ. ಹಾಗೆ ಮಾಡಿದಷ್ಟೂ ಅವಳ ಕೋಪ ಜಾಸ್ತಿ ಆಗುತ್ತೆ. ಸ್ನೇಹಿತನ ಮುಂದೆ ಏನಿದೆಲ್ಲ ಅಂತ ನಗುನಗುತ್ತಾ ಅವಳನ್ನ ಸಮಾಧಾನ ಮಾಡೋಕೆ ಹೋಗ್ತಾನೆ, ಆದರೂ ಅವಳು ಬಗ್ಗಲ್ಲ. ತಮಾಷೆಯಾಗಿ ನಡಿತಿರೋ ಈ ದೃಶ್ಯ ಒಮ್ಮೆಲೇ ಗಂಭೀರವಾಗುತ್ತೆ – ಅದು ಭಿಕು ತಕ್ಷಣ ಸೀರಿಯಸ್ ಆಗಿ ಅವಳ ಕೆನ್ನೆಗೆ ರಪ್ ಅಂತ ಹೊಡೆದಾಗ. ಅವಳು, ಸತ್ಯ ಎಲ್ಲರೂ ದಂಗಾಗಿಬಿಡ್ತಾರೆ ಒಂದು ಕ್ಷಣ, ನಾವು ಕೂಡ. ಆಗ ಭಿಕು ಸಾವರಿಸಿಕೊಂಡು ಸತ್ಯನಿಗೆ ಗಾಡಿ ಕೊಟ್ಟು ಕಳಿಸಿಬಿಡ್ತಾನೆ. ಅವನು ಹೊರಟಮೇಲೆ ಮನೆ ಒಳಗೆ ಬಂದು, ಬಾಗಿಲು ಹಾಕಿ, ಹೆಂಡತಿಗೆ ಸಮಾಧಾನ ಮಾಡಕ್ಕೆ ಹೋಗ್ತಾನೆ. ಇನ್ನೂ ಕೋಪದಿಂದ ಧಗಧಗಿಸ್ತಾ ಇರೋ ಅವಳು ತೆಗೆದು ಇವನು ಕಪಾಳಕ್ಕೆ ರಪ್ ಅಂತ ಬಿಗಿತಾಳೆ. ಅವನು ಒಂದು ಕ್ಷಣ ಪೆಚ್ಚಾದರೂ “ನಂಗೇ ಹೊಡಿತೀಯಾ” ಅಂತ ಜೋರಾಗಿ ನಕ್ಕು, ಅವಳನ್ನ ಬರಸೆಳೆದು ಅಪ್ಪಿಕೊಳ್ತಾನೆ. ಇಬ್ಬರೂ ಒಬ್ಬರನ್ನೊಬ್ಬರು ಮುದ್ದು ಮಾಡುತ್ತಾರೆ. ಸತ್ಯ ಹೊರಟುಹೋದ ತಕ್ಷಣ ಈ ಸೀನ್ ಮುಗಿದು ಹೋಗಿದ್ರೆ ಹೆಣ್ಣಿನ ಮೇಲಿನ ಹಿಂಸೆಯ ವೈಭವೀಕರಣ ಅನ್ನಿಸ್ಕೊತಾ ಇತ್ತು. ಆದರೆ ಮುಂದಿನ ಭಾಗದಿಂದ ನಮಗೆ ಗೊತ್ತಾಗೋದು ಇವರಿಬ್ಬರೂ ಒಬ್ಬರ ಜೊತೆ ಇನ್ನೊಬ್ಬರು ಹೊಡೆದಾಡಿಕೊಂಡು, ಕಿರುಚಾಡಿ ಜಗಳವಾಡುತ್ತಾ, ಹಾಗೆಯೇ ತೀವ್ರವಾಗಿ ಪ್ರೀತಿಸುವ ಗಂಡಹೆಂಡತಿ ಅಂತ!

ಈ ಚಿತ್ರ ಬಂದು ಆಗಲೇ ಹದಿನೈದು ವರ್ಷ ಆಗಿಹೋಗಿದೆ. ಆದರೆ ಈಗಲೂ ಯಾವುದೇ ಒಂದು ಭೂಗತಲೋಕದ ಚಿತ್ರ ಬಿಡುಗಡೆ ಆದರೆ ಅದರಲ್ಲಿನ ಈ ಅಂಶ “ಸತ್ಯ”ಅಲ್ಲಿ ಇತ್ತು ಆಲ್ವಾ ಅಂತ ನೆನೆಸ್ಕೊತೀವಿ. ಅಷ್ಟೇ ಫ್ರೆಶ್ ಆಗಿ ಉಳಿದಿರುವುದು ಸಂದೀಪ್ ಚೌಟ ಕೊಟ್ಟಿರುವ ಹಿನ್ನೆಲೆ ಸಂಗೀತ. ಈ ಚಿತ್ರಕ್ಕೆ ಮುಂಚೆ ಹಿನ್ನೆಲೆ ಸಂಗೀತ ಈ ಪರಿ ಹಿಟ್ ಆದ ಉದಾಹರಣೆ ಇನ್ನೊಂದಿಲ್ಲ. ಎಷ್ಟರ ಮಟ್ಟಿಗೆ ಅಂದರೆ ನಮ್ಮ ಕ್ರೈಂ ಡೈರಿ, ಕ್ರೈಂ ಸ್ಟೋರಿ ಮತ್ತು ಅಸಂಖ್ಯಾತ ಧಾರಾವಾಹಿಗಳಲ್ಲಿ ನಾವು ಈಗಲೂ ಈ ‘ಥೀಮ್’ ಮ್ಯೂಸಿಕ್. ಕೇಳುತ್ತಿರ್ತೀವಿ. ಮೆದುಳಿಗೆ ಕೈ ಇಟ್ಟ ಈ ಚಿತ್ರ ಬಗ್ಗೆ ಗುಲ್ಜಾರ್ ಚನ್ನಾಗಿ ಹೇಳಿದ್ದಾರೆ – “ಗೋಲಿ ಮಾರ್ ಭೇಜೇ ಮೇ”!

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Parameshwara
11 years ago

Solid Review Vasuki Raghavan avare. Thank you. 

Venkatesh
11 years ago

Even i liked this movie..
Its rich in all the aspects music, cam work , screen play… Anurag kashyap got an award for the screen play
And we got a new talent called 'Manoj bajpeyee'
Hats off RGV !

ಸಪ್ತಗಿರಿವಾಸಿ -ವೆಂಕಟೇಶ
ಸಪ್ತಗಿರಿವಾಸಿ -ವೆಂಕಟೇಶ
11 years ago

ಈ   ಚಿತ್ರ ಮಂದಿರದಲ್ಲಿ  ಕಡಿಮೆ  ಅದೇ ಸಮಯದಲ್ಲಿ ನೊದಿದ್ದೆ. ಒಂತಹ್ರ ಹಸಿ ಬಿಸಿ ಹೊಡೆದಾಟದ ಚಿತ್ರ  ಆರ್ ಜೀ ವಿ       ಬಾಜಪಾಯಿ ನಟನೆ ತಿಕ್ಕಳುತನದ್ದು  ಹಿಡಿಸಿತ್ತು … ಈ ತರಹದ ಚಿತ್ರ   ಆರ್ ಜೀ ವಿ ಎತ್ತಿದ ಕೈ … ಒಳ್ಳೆ ವಿಮರ್ಶೆ ….
ಶುಭವಾಗಲಿ
ಸಪ್ತಗಿರಿವಾಸಿ ವೆಂಕಟೇಶ

Narayana.M.S.
Narayana.M.S.
11 years ago

RGV's BIOGRAPHICAL WORK MAAISHTAM TRANSLATED BY SRUJAN AS 'NANNISHTA' GIVES GOOD INSIGHT TO RGV'S PERSONA

4
0
Would love your thoughts, please comment.x
()
x