ಅಂದು ನಾನು ಗ್ರಂಥಾಲಯದಲ್ಲಿ ನನ್ನ ಪಾಡಿಗೆ ನನ್ನ ಇಷ್ಟದ ಪುಸ್ತಕವಾದ ಶಿವರಾಮ್ ಕಾರಂತರ “ಮೈಮನಗಳ ಸುಳಿಯಲ್ಲಿ” ಪುಸ್ತಕದ ತಲಾಶ್ ನಲ್ಲಿ ತಲ್ಲೀನನಾಗಿದ್ದೆ. ರ್ಯಾಕ್ ನಲ್ಲಿ ನನಗೆ ಬೇಕಾದ ಪುಸ್ತಕ ಕಂಡಿತು, ಅದನ್ನು ರ್ಯಾಕ್ ನಿಂದ ತೆಗೆದ ಕೂಡಲೇ ರ್ಯಾಕ್ ನ ಕಿಂಡಿಯಲ್ಲಿ ಹೊಂಬೆಳಕನ್ನು ಹೊತ್ತಿದ್ದ ತಿಳಿ ನೀಲಿ ಬಣ್ಣದ ನಿನ್ನ ನಯನಗಳು ಹೊಳೆದವು. ನೀನು ಕೂಡ ನನ್ನಂತೆ ಪುಸ್ತಕದ ಹುಡುಕಾಟದಲ್ಲಿದ್ದೆ. ಪುಸ್ತಕ ಹಿಡಿದು ಅಲ್ಲೇ ಇದ್ದ ಮೇಜಿನ ಮೇಲೆ ಓದುತ್ತಾ ಕುಳಿತೆ. ಪುಸ್ತಕದ ಮೊದಲ ಪುಟದ ಮೂರು ಸಾಲುಗಳನ್ನು ಕೂಡ ಓದಿರಲಿಲ್ಲ, ಅಷ್ಟರಲ್ಲಿ ಶಿಶಿರ ಋತುವಿನ ಚಂದ್ರಿಕೆಯಂತಹ ನಿನ್ನ ನೇತ್ರಗಳನ್ನು ನೋಡಲು ನನ್ನ ಗಮನ ನಿನ್ನ ಕಡೆ ಜಾರಿತು. ಕೈಯಲ್ಲಿ ಪುಸ್ತಕ ನೆಪಮಾತ್ರಕ್ಕೆ ಇತ್ತು, ನನ್ನ ಕಣ್ಣುಗಳು ನಿನ್ನ ಅಂದದ ಸೊಬಗನ್ನು ಓದುತ್ತಿದ್ದವು. ನಾನು ನಿನ್ನನ್ನು ನೋಡುತ್ತಿರುವುದು ಗೊತ್ತಾಗಿ ಅದ್ಯಾಕೋ ನಿನ್ನ ಹಾವಭಾವದಲ್ಲಿ ಬದಲಾವಣೆಯಾಗಿ ವಿಶೇಷವೆನಿಸುತ್ತಿತ್ತು. ಸಹಜ ಸ್ವಭಾವದಲ್ಲಿ ನಾಚಿಕೆ ಬೆರೆಸಿದ್ದರಿಂದಲೋ ಅಥವಾ ನನ್ನಂತೆಯೇ ನಿನಗೂ ಒಲವಿನ ಸುಳಿಯಲ್ಲಿ ಸಿಲುಕಿರುವ ಭಾವನೆಯಿಂದಲೋ ನಿನ್ನ ಸೌಂದರ್ಯಕ್ಕೆ ಮತ್ತಷ್ಟು ಮೆರಗನ್ನು ನೀಡಿದಂತೆ ಕಾಣಿಸುತಿತ್ತು. ನೀನು ಪುಸ್ತಕವನ್ನು ಹಿಡಿದುಕೊಂಡು ಬೇರೆಡೆ ಕೂರದೆ ನನ್ನೆದುರಲ್ಲೇ ಕುಳಿತುಕೊಂಡದ್ದು ನನ್ನ ಒಲವಿನೋಲೆಗೆ ಅಂಕಿತ ಹಾಕಿದ ಭಾವ ನನ್ನೆದೆಯಲ್ಲಿ ಮೂಡಿತು.
ನಿನ್ನ ಕಂಗಳ ಮುಂಗಾರಿನ ಮಿಂಚಿನ ಸೆಳವು ನನ್ನನ್ನು ಪುನಃ ಪುನಃ ಆಕರ್ಷಿಸಿತು. ಪದೇ ಪದೇ ನೋಡುತಿದ್ದ ನಿನ್ನ ಕಣ್ಣೋಟದ ಹೊಡೆತಕ್ಕೆ ಕಲ್ಲು ಬಂಡೆಯಂತಹ ನನ್ನ ಹೃದಯ ಪ್ರೀತಿಯ ಶಿಲೆಯಾಗಲು ಜಾಸ್ತಿ ಸಮಯ ಹಿಡಿಯಲಿಲ್ಲ. ನೋಟದಲ್ಲೇ ನನ್ನೆದೆಯಲ್ಲಿ ಪ್ರೇಮದ ಮೂರ್ತಿಯನ್ನು ಪ್ರತಿಷ್ಠಾಪಿಸಿಬಿಟ್ಟೆ. ಪುಸ್ತಕ ಓದುವ ರೀತಿ ನಟಿಸಿ ಕದ್ದು ಕದ್ದು ನೋಡುವ ವೈಯಾರದ ನೋಟದಿಂದ ನನ್ನ ಹೃದಯವನ್ನು ಕೊರೆದು ಇಂಚಿಂಚು ಮನಸ್ಸನ್ನು ಅತಿಕ್ರಮಣ ಮಾಡಿಬಿಟ್ಟೆ. ಈ ನೋಟದ ಪ್ರೇಮದಾಟದಲ್ಲಿ ಸಮಯ ಉರುಳಿ ಹೋಗಿದ್ದು ತಿಳಿಯದೇ ನಿನ್ನದೇ ವಿಭಿನ್ನ ಗುಂಗಿನಲ್ಲಿ ಮನೆ ಸೇರಿದೆ.
ನಿನ್ನ ಅನುಪಸ್ಥಿತಿಯ ನಡುವೆಯೂ ನಿನ್ನ ನೆನಪುಗಳ ಧ್ವನಿಸುರುಳಿ ನನ್ನ ಮನಸ್ಸಿನಲ್ಲಿ ಗುನುಗುತ್ತಿವೆ. ನಾನು ನಿನಗೆ ಆಮಂತ್ರಣ ಕೊಟ್ಟು ಕರೆಯದಿದ್ದರೂ ನನ್ನೆದೆಯ ಭದ್ರಕೋಟೆಯೊಳಗೆ ಬಂದು ಆಕ್ರಮಣ ಮಾಡಿಕೊಂಡು ಬಿಟ್ಟೆ. ಪ್ರತಿ ಘಳಿಗೆಯೂ ನಿನ್ನದೇ ಯೋಚನೆ ಕೇವಲ ನಿನ್ನದೇ ಆಲಾಪನೆ. ಕಾರ್ಮೋಡ ಕವಿದಿದ್ದ ಈ ನನ್ನ ಬಾಳಿಗೆ ನೀ ಬಂದ ಕ್ಷಣದಿಂದ ಹುಣ್ಣಿಮೆಯ ಬೆಳದಿಂಗಳು ಚೆಲ್ಲಿ ಉತ್ಸಾಹದ ಚಿಗುರು ಚಿಗುರಿದೆ. ಬೇಡಬೇಡವೆಂದರೂ ನಿನ್ನೊಲವಿಗೆ ಮಿಡಿದ ನನ್ನ ಹೃದಯ ನಿನ್ನ ಪರವಶದೊಳಗೆ ಅರಿವಿಲ್ಲದಂತೆಯೇ ಸಿಲುಕಿದೆ. ಮಳೆಯಿಲ್ಲದೆಯೇ ನನ್ನ ಮನಸ್ಸಿನಲ್ಲಿ ಮಳೆಬಿಲ್ಲನ್ನು ಆ ನಿನ್ನ ನೋಟ ಮೂಡಿಸಿದ ಪರಿ ನನ್ನನ್ನು ವಿಸ್ಮಿತನನ್ನಾಗಿ ಮಾಡಿದೆ.
ನಿನ್ನ ಮುಗುಳುನಗೆಯ ಅಲೆಗಳು ಮಧ್ಯ ರಾತ್ರಿಯಲ್ಲಿ ಆಲಾರಮ್ ನಂತೆ ಎಬ್ಬಿಸಿ ನನ್ನನ್ನು ವಿಚಲಿತಗೊಳಿಸಿವೆ. ಬೆಳಿಗ್ಗೆ ಎದ್ದಾಗ ಅರುಣೋದಯದಲ್ಲಿ ನಿನ್ನ ನೆನಪಿನ ಕಿರಣಗಳು ನನ್ನೆದೆಗೆ ತಾಗಿ ನನ್ನನ್ನು ಭಾವಪರವಶಗೊಳಿಸಿ ಉಲ್ಲಾಸದ ಹೊಳೆಯೇ ಹರಿಸುತ್ತೀವೆ. ಈ ಹುಚ್ಚುತನದ ಉನ್ಮಾದದಲ್ಲಿ ನನ್ನ ದಿನನಿತ್ಯದ ಕೆಲಸಗಳನ್ನು ಮರೆತು ಮಂಕಾಗಿ ಕುಳಿತುಬಿಡುತ್ತೇನೆ. ಇಂತಹ ಸಿಹಿ ಆವೇಶದ ಘಟನೆಗಳಿಂದ ನನ್ನ ಹೃದಯ ಮಿತಿಯನ್ನು ಮೀರಿ ನಿನಗಾಗಿ ಮಿಡಿಯುತ್ತಿದೆ.ನಿನ್ನ ಕಿರುನೋಟದ ವರ್ಷಧಾರೆಯಿಂದ ನನ್ನೆದೆಯಲ್ಲಿ ಅರಳಿರುವ ಒಲವೆಂಬ ಹೂಗಳನ್ನು ನಿನ್ನ ಮುಡಿಗೇರಿಸಲು ಕಾದುಕುಳಿತಿರುವೆ…….
-ಬಿ.ಎಲ್.ಶಿವರಾಜ್ ದೇವದುರ್ಗ