ನನ್ನೊಳಗಿನ ಗುಜರಾತ..!!!

ಜೀವನಯೆಂದರೇನು? ಎಂಬ ಈ ಜಟಿಲ ಪ್ರಶ್ನೆಗೆ ನನ್ನ ಮನಸ್ಸು ತಡಬಡಿಸುತ್ತ ಇಲ್ಲಿಯವರೆಗೂ ಅದೆಷ್ಟು ಉತ್ತರ ನೀಡಿದೆಯೋ ಏನೋ. ಬಾಲ್ಯದ ದಿನಗಳಲ್ಲಿಯೇ ನನ್ನ ಮನಸ್ಸಿಗೆ ಆ ದೇವರು ಯವ್ವನವನ್ನು ನೀಡಿಯಾಗಿತ್ತೇನೊ. ಆವತ್ತಿನಿಂದ ಇವತ್ತಿನವರೆಗೂ ತನ್ನನ್ನೇ ತಾನು ಪ್ರಶ್ನಿಸುತ್ತ ತನಗೆ ತಾನೆ ಉತ್ತರಿಸುತ್ತಿರುವ ನನ್ನ ಮನಸಿಗೆ, ಇದೊಂದು ನಿರಂತರ ಕೆಲಸವಾಗಿ ಹೋಗಿದೆ. ಅಂಥದುದರಲ್ಲಿ ಒಂದಿಷ್ಟು ಉತ್ತರಗಳು ನೆಮ್ಮದಿ ನೀಡಿವೆಯಾದರು ಇನ್ನು ನಿಖರ ಉತ್ತರಕ್ಕಾಗಿ ಕಾಯುತ್ತಿದೆ.

ನನು ಏಳನೆ ತರಗತಿ ಓದುವಾಗ ಈ ಪ್ರಶ್ನೆಗೆ ಎರಡು ಉತ್ತರವನ್ನು ಬರೆದು ನನ್ನ ಪುಸ್ತಕದಲಿ ಮಡಚಿ ಇಟ್ಟು ಕೊಂಡಿದ್ದೆ .ಆವಾಗಲಿವಾಗಲೊಮ್ಮೆ ಆ ಉತ್ತರಗಳನ್ನು ತೆಗೆದು ಪದೇ ಪದೆ ಓದುತ್ತಿದ್ದೆ. ಅದ್ಯಾವ ಕಾರಣಕ್ಕೆ ಆ ಉತ್ತರಗಳು ನನ್ನನು ಅಷ್ಟರ ಮಟ್ಟಿಗೆ ಆಕರ್ಷಿಸಿದ್ದವೊ ಏನೋ. ಓದಿದಾಗಲೆಲ್ಲ ಮನಸ್ಸಿಗೆ ತಪ್ಪದೇ ಮುದನೀಡುತ್ತಿದ್ದವು. ಉತ್ತರಗಳು;  ಉತ್ತರ-1. ಜೀವನವೆಂದರೆ ಎತ್ತಿನ ಗಾಡಿ ! ಅಪ್ಪ- ಅಮ್ಮ ಎಳೆಯುತ್ತಾರೆ ನಾವು ಮಕ್ಕಳು ಆ ಬಂಡಿಯಲಿ ಕುಳಿತು ಸಾಗುತ್ತಿರುತ್ತೇವೆ. ಉತ್ತರ-2. ಜೀವನವೆಂದರೆ ನಾವು ಆಡುವ ಖೋ..ಖೋ ಪಂದ್ಯವಿದ್ದಂತೆ ಆಟಕ್ಕೆಂದು ಮೈದಾನಕ್ಕಿಳಿದವರು ಓಡುತ್ತಲೇ ಇರಬೇಕು. ಓಟಗಾರನನ್ನು ಬೆನ್ನತ್ತಿ. ಹೌದು! ನಾನು ಆ ಎಳೆ ವಯಸ್ಸಿನಲಿ ಕೊಟ್ಟ ಈ ಎರಡನೆಯ ಉತ್ತರ, ಇಂದಿಗೂ ನನ್ನ ಸ್ಮೃತಿ ಪಟಲದಲಿ ಅಳಿಸಿ ಹೋಗದೆ ಹಾಗೆಯೇ ಉಳಿದು ಬಿಟ್ಟಿದೆ. ನನ್ನ ಅಚ್ಚು ಮೆಚ್ಚಿನ ಖೋ..ಖೋ.. ಪಂದ್ಯವನು ಉಪಮೇಯವಾಗಿಟ್ಟುಕೊಂಡು ಉತ್ತರಿಸಿದ ಈ ಉತ್ತರ, ಇವತ್ತಿಗೂ ಜೀವಂತ ಸ್ನೇಹಿತ. ನನ್ನ ಬದುಕಿನ ಜೊತೆಗೆ ನನ್ನನು ಹಿಂಬಾಲಿಸುತ್ತಾನೇ ಇದೆ. ಆ ಆಟದಲಿ ಒಬ್ಬ ಓಟಗಾರನ ಹಿಂದೆ ಒಂಬತ್ತು ಜನ ಸರದಿಯಾಗಿ ಓಡಿದರೆ , ಅದರಂತೆ ಹಲವಾರು ಹಂಬಲಗಳ ಹಿಂದೆ ನಾವು ನಮ್ಮ ಜೀವನದಲಿ ಓಡುತ್ತಲೇ ಇರುತ್ತೇವೆ. ಇಂಥ ಓಟ ಒಮ್ಮೊಮ್ಮೆ ನನ್ನನು ಹದ್ದು ಮೀರಿಸಿ ಎಲ್ಲೆಲ್ಲೋ ಕರೆದುಕೊಂಡು ಹೋಗಿದ್ದುಂಟು. ಅಂಥ ಹಲವಾರು ಓಟಗಳಲಿ ನನ್ನ ಗುಜರಾತಿನೆಡೆಗಿನ ಮೊದಲ ಓಟವು ಒಂದು ಮರೆಯಲಾಗದ ಅನುಭವ. ಮೊಲದ ಬಾರಿಗೆ  ನಾನು ಗುಜರಾತ ಕಡೆಗೆ ಮುಖ ಮಾಡಿ ಹೊಗಿದ್ದು 14-08-2009 ರಂದು. ಕನ್ನಡದ ಮೇರು ಕವಿ ಗೋಪಾಲ ಕೃಷ್ಣ ಅಡಿಗರ “ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು” ಎಂಬ ಭಾವ ಗೀತೆಯನು  ಗೊಣಗುತ್ತ.

ಆವಾಗ ತಾನೆ ನನ್ನ ಬಿ.ಎಸ್ ಸಿ ನರ್ಸಿಂಗ್ ಪದವಿ ಮುಗಿದು ಒಂದು ವರ್ಷವಾಗಿತ್ತು. ನಾನು ಹುಬ್ಬಳ್ಳಿಯ ಒಂದು ವಿದ್ಯಾ ಸಂಸ್ಥೆಯಲಿ ಉಪನ್ಯಾಸಕನಾಗಿ ನೇಮಕಗೊಂಡಿದ್ದೆ. ಆ ಸಂಸ್ಥೆಯ ಪರವಾಗಿ ಗುಜರಾತಿನಿಂದ ವಿದ್ಯಾರ್ಥಿಗಳನು ನಮ್ಮ ಕರ್ಣಾಟಕಕ್ಕೆ ಓದಲು ಕರೆತರುವ ಜವಾಬ್ದಾರಿಯ ಮೇಲೆ ನಾನು ಗುಜರಾತಿಗೆ ಪ್ರಯಾಣ ಬೆಳೆಸಿದ್ದೆ. ಒಂದೊಂದು ಸಲ ನಾನು ಆಳವನು ಅವಲೋಕಿಸದಯೇ ಸವಾಲುಗಳನು ಸ್ವೀಕರಿಸಿ, ಆಮೇಲೆ ಒಳ ಹೊಕ್ಕು ಕಷ್ಟ- ನಷ್ಟ ಅನುಭವಿಸುತ್ತಲೆಯೇ ಕೊನೆಗೆ ಜಯಶಾಲಿ ಯಾಗುತ್ತಿದ್ದೆ. ಬಿಸಿ ರಕ್ತವನು ಸರಿಯಾಗಿಯೇ ಸದುಪಯೋಗ ಪಡಿಸಿಕೊಂಡು ಮುನ್ನುಗ್ಗುವ ನನ್ನ ಛಾತಿಗೆ ಹಲವಾರು ಸಲ ನಾನೇ ಬೆನ್ನು ತಟ್ಟಿಕೊಂಡಿದ್ದುಂಟು . ಇಂಥ ಛಲ ಇವತ್ತಿನ ಎಷ್ಟು ಯುವಕರಲ್ಲಿ ಇದೆಯೋ ನಾ ಅರಿಯೆ. ಮೈದಾನಕ್ಕಿಳಿಯುವ ಮೊದಲೇ ಸೋಲಿನ ಭಯಕ್ಕೆ ಸಿಲುಕುವವರನ್ನು ನಾನು ಎಂದೂ ಗಣನೆಗೆ ತೆಗೆದುಕೊಂಡವನಲ್ಲ. ಅದರಂತೆ ನಿರ್ಭೀತನಾಗಿ ನಾನು ಗುಜರಾತಿನೆಡೆಗೆ ಪಯಣಿಸಲು ಸಜ್ಜುಗೊಂಡು ಬಿಟ್ಟೆ.

ನಾನು, ಹುಬ್ಬಳ್ಳಿಯ ಆ ವಿದ್ಯಾ ಸಂಸ್ಥೆಯಲಿ  ಕಾರ್ಯ ನಿರ್ವಹಿಸಬೇಕಾದರೆ ನನ್ನ ಕೈ ಕೆಳಗೆ ಹಲವಾರು ಗುಜರಾತಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಧ್ಯಯನ ಮಾಡುತ್ತಿದ್ದರು. ಉಪನ್ಯಾಸದ ಮಧ್ಯ ಗುಜರಾತಿನ ಬಗ್ಗೆ ಹಲವಾರು ವಿಷಯಗಳು ಕೇಳಿ ತಿಳಿದುಕೊಳ್ಳುತ್ತಿದ್ದೆ. ಅವರಿಂದ ದೊರೆಯುತ್ತಿದ್ದ ಹಲವಾರು ಸ್ವಾರಾಸ್ಯಭರಿತ ವಿಷಯ ಕೇಳಿ ನನ್ನಲಿ ಗುಜರಾತಿನ ಬಗ್ಗೆ ವಿಸ್ಮಯ ಮನೋಭಾವವನು ಹುಟ್ಟು ಹಾಕಿತ್ತು. ಅದು ಯಾವ ಮೋಹವು ನಾ ಕಾಣೇ ಗುಜರಾತಿನ ಪುಣ್ಯ ನಾಡಿಗೆ ನಾ ನನ್ನ ಪಯಣ ಬೆಳೆಸುವ ಮೊದಲೇ ಗುಜರಾತಿಗರ ಹೃದಯ ತಲ್ಲನಗಳನು ಅರಿಯುವ ಬಲ ನನ್ನಲಿ ಬೆಳೆದಾಗಿತ್ತು. ಗುಜರಾತಿನ ಎಷ್ಟೋ ವಿದ್ಯಾರ್ಥಿಗಳಿಗೆ ನಾನು ಅಚ್ಚು ಮೆಚ್ಚಿನ ಶಿಕ್ಷಕನಾಗಿ ಬಿಟ್ಟಿದ್ದೆ. ಆ ಎಲ್ಲ ನನ್ನ ಹಳೆಯ ವಿದ್ಯಾರ್ಥಿಗಳು ನನಗೆ ಇವತ್ತಿಗೂ ಚಿರಪರಿಚಿತರಾಗಿ ಉಳಿದು ಬಿಟ್ಟಿದ್ದಾರೆ. ಎಲ್ಲಕ್ಕಿಂತ ಮೇಲಾಗಿ ನನ್ನನ್ನು ಭಾವನಾತ್ಮಕವಾಗಿ ಅವರ ಒಡನಾಟದೊಡನೆ ಈ ಕಾಲ ಎಂಬ ಮಾಯೆ ಬಿಗಿಯಾಗಿ ಕಟ್ಟಿ ಹಾಕಿದೆ. ಅಂದಿನಿಂದ ಇಂದಿನವೆರೆಗೂ ನಾನು ಹಲವಾರು ಬಾರಿ ಗುಜರಾತಿಗೆ ಹೋಗಿ ಬಂದಿದ್ದೇನೆ ಮತ್ತು ಅಲ್ಲಿ ನೌಕರಿ ಸಹ ಮಾಡಿದ್ದೇನೆ.

ಅದೇನೆ ಇರಲಿ, ನನ್ನ ಗುಜರಾತಿನ ಅನುಭವದ ವಿಚಾರ ವಿನಿಮಯದ ಮೊದಲು, ಪೀಠಿಕೆಯೇ ಬಹಳವಾಯ್ತು ಎಂದು ಕೊಳ್ಳುವೆ. ಆದರು, ಕೆಲವು ಅನುಭವಗಳನು ಮೆಲಕು ಹಾಕುವಾಗ ನಾವು ನಮ್ಮ ಮೇಲಿನ ಹಿಡಿತವನ್ನು ಕಳೆದುಕೊಂಡು ಸ್ವಲ್ಪ ಅತೀಯಾಗಿ ಸಂಭಾಷಿಸುತ್ತೇವೆ ಎನ್ನುವುದು ನನ್ನ ಅನುಭವದ ಮಾತು. ಏನೇ ಇರಲಿ, ಗೆಳೆಯರೆ ನನ್ನ ಗುಜರಾತಿ ಅನುಭವವನ್ನು ಎಳೆ-ಎಳೆಯಾಗಿ ನಿಮ್ಮ ಜೊತೆಗೆ ನಾನು ಮುಕ್ತವಾಗಿ ಹಂಚಿಕೊಳ್ಳುವೆ. ನೀವು ನನ್ನ ಈ ಪ್ರವಾಸ ಕಥನದಂತಹ ಸರಣಿ ಲೇಖನವನ್ನು ಹೇಗೆ ಸವಿಯುತ್ತೀರಿ ಎನ್ನುವುದು ನಿಮಗೆ ಬಿಟ್ಟ ವಿಚಾರ.!

 ಬನ್ನಿ ..,ನನ್ನ ಪಯಣದ ಜೊತೆಗೆ ನಿಮ್ಮನ್ನು ಸರಾಗವಾಗಿ ಸಾಗಿಸಿಕೊಂಡು ಹೋಗಿ ಗುಜರಾತಿನಲ್ಲಿ ಸುತ್ತಾಡಿಸಿಕೊಂಡು ಬರುತ್ತೇನೆ. ಅಂದು 13-08-2009 ಬಹುಷಃ ಶುಕ್ರವಾರ. ನನ್ನ ಪ್ರಯಾಣ ಆಕಸ್ಮಿಕವಾಗಿ ನಿಗಧಿಯಾಗಿದ್ದರಿಂದ ಟ್ರೈನ್ ಟಿಕೇಟ್ ಕಾಯ್ದಿರಿಸಲಾಗಿರಲಿಲ್ಲ ಅಂಥ ಸಮಯದಲಿ ಹುಬ್ಬಳ್ಳಿ ಮಂತ್ರಿವರ್ಯರ ಸಹಾಯಕನಿಂದ ಮಂತ್ರಿ “ಕೋಟಾ” ದಡಿ ನನಗೊಂದು ಹುಬ್ಬಳ್ಳಿಯಿಂದ ಗುಜರಾತಿನ ಅಹಮದಾಬಾದ ವರೆಗೆ ಟಿಕೇಟ್ ಪಡೆದೆ. ಮರುದಿನ ಮುಂಜಾನೆ ಸರಿಯಾಗಿ ಏಳು ಗಂಟೆಗೆ ರೈಲು ಗಾಡಿ ಹುಬ್ಬಳ್ಳಿಯಿಂದ ಹೊರಡುವುದಿತ್ತು. ಪೂರ್ವನಿಯೋಜಿತವಲ್ಲದ ಪಯಣಕ್ಕೆ ಅಂತಹ ಯಾವದೇ ವಿಶೇಷ ತಯಾರಿ ಮಾಡಿಕೊಳ್ಳಲಾಗಿರಲಿಲ್ಲ. ಇತ್ತ, ನನ್ನೊಬ್ಬ ಗುಜರಾತಿನ ವಿದ್ಯಾರ್ಥಿ ಸರ್- ನೀವು “ಏನು ಚಿಂತೆಮಾಡುವ ಅವಶ್ಯಕತೆಯೇ ಇಲ್ಲ ಸುಮ್ಮನೆ ಗಾಡಿ ಏರಿ. ಅಲ್ಲಿ ನಿಮಗೆ ನೀವು ಸಂತುಷ್ಠರಾಗುವಂತ ಆತಿಥ್ಯ  ಸಿಗುತ್ತೆ” ಅಂತ ಸಾರೀ ಹೇಳಿದ್ದ. ಆ ನನ್ನ ನೆಚ್ಚಿನ ವಿದ್ಯಾರ್ಥಿಯಮಾತನ್ನು ಉತ್ಕಷ್ಟನಂಬಿಕೆಯೊಂದಿಗೆ  ನಂಬಿ ಪ್ರಯಾಣಕೆ ಅಣಿಯಾದೆ.

ಮರು ದಿನ ಅಂದರೆ, ಶನಿವಾರ 14-08-2009 ರಂದು ಮುಂಜಾವಿನ 6 ಗಂಟೆಗೆ ಹುಬ್ಬಳ್ಳಿಯ ರೈಲು ನಿಲ್ದಾಣಕೆ ನನ್ನ ಜೊತೆಗೆ ನನ್ನ ವಿದ್ಯಾರ್ಥಿಯನು ಕರೆದುಕೊಂಡು ಹೆಗಲಿಗೆ ಅಷ್ಟೇನು ಭಾರವಲ್ಲದ ಬ್ಯಾಗ್ ನ್ನು ತಗಲಾಕಿಕೊಂಡು ಹೊರಟು ಬಂದೆ. ಬಂದ ಸ್ವಲ್ಪ ಸಮಯದಲ್ಲಿಯೇ ಇತ್ತ ಸರಿಯಾಗಿ ಏಳು ಗಂಟೆಗೆ ಬೆಂಗಳೂರ ಅಜ್ಮೇರ ರೈಲು ಗಾಡಿ ಚುಕು ಬುಕು ಸದ್ದುಮಾಡುತ್ತ ಹುಬ್ಬಳ್ಳಿ ನಿಲ್ದಾಣಕೆ ಲಗ್ಗೆ ಇಟ್ಟಿತು. ಒಂದು ಕ್ಷಣ ಎಂದೂ ಕಾಣದ ಗುಜರಾತ ರಾಜ್ಯ ಮಸಕು ಮಸುಕಾಗಿ ಕಣ್ಣು ಮುಂದೆ ಬಂದು ಹೊಯ್ತು. ನಿರ್ಭಾವುಕನಾಗಿ ನನ್ನನು ಕಳಿಸಕೊಡಲೆಂದು ಬಂದ ಆ ವಿದ್ಯಾರ್ಥಿಗೆ ಮತ್ತೆ ಬೇಗ ಮರಳುವ ವಿಶ್ವಾಸದ ಕುರುಹು ಎನ್ನುವಂತೆ ಕೈ ಬೀಸಿ ನನ್ನ ಆಸನಕ್ಕ ಹೋಗಿ ಕುಳಿತು ಬಿಟ್ಟೆ. ಇತ್ತ ರೈಲು ಗಾಡಿ ಬೆಳೆಗಾವಿಯ ಕಡೆಗೆ ಮುಖಮಾಡಿ ಚಲಿಸಲತ್ತಿತು. ಪ್ರಯಾಣದ ನಾಲ್ಕಾರು ಗಂಟೆಗಳಲಿ ರೈಲು ಗಾಡಿ ನಮ್ಮ ಕನ್ನಡ ನಾಡನ್ನು ದಾಟಿ ಮಹಾರಾಷ್ಟ್ರವನ್ನು ಪ್ರವೇಶಿಸಿತು. ಒಂದು ಕ್ಷಣ ಮನಸಲಿ ಏಕಾಂಗಿ ಭಾವ ಮೆಲ್ಲನೆ ಆವರಿಸಲು ಶುರುವಿಟ್ಟುಕೊಂಡಿತು. ಅಂಥವುದರಲ್ಲಿ ಮಾರ್ಗ ಮಧ್ಯ ಚಹಾ- ಕಾಫಿ ಹೀರುತ್ತ ಸಂಜೆವರೆಗೂ ಹೇಗೋ ಕಾಲವನು ತಳ್ಳಿ ಬಿಟ್ಟೆ. ಇತ್ತ ಸಂಜೆ ಸಮಯ ಏಳಾಗುತ್ತಿದ್ದಂತೆ ರೈಲು ಪುಣೆಯನ್ನು ತಲುಪಿತು.

ನನ್ನೆಲ್ಲ ಗಮನ ಗುಜರಾತಿನ ಮೇಲೆ ಕೇಂದ್ರಿಕೃತವಾಗಿತ್ತು. ಯಾವಗ ತಲುಪುತ್ತೇನೋ ಎಂದು ಕಾತರಿಸುತ್ತ ಪುಣೆಯ ರೈಲು ನಿಲ್ದಾಣವನ್ನು ಕಿಟಕಿಯಿಂದ ಇಣುಕುತ್ತಿರುವಾಗಲೇ ಪಕ್ಕದ ಆಸನಕ್ಕೆ ಗುಜರಾತಿನಲಿ ಮಾತನಾಡುತ್ತ ಇಬ್ಬರು ದಂಪತಿಗಳು ಬಂದು ಕುಳಿತರು. ಅಲ್ಪ ಸ್ವಲ್ಪ ಗುಜರಾತಿ ಕಲಿತಿದ್ದ ನಾನು. ಗುಜರಾತಿನಲಿ “ತಮಾರು ನಾಮ್ ಸುಛೆ” ಎಂದು ಕೇಳಿಬಿಟ್ಟೆ. ಅವರ ನನ್ನ ಚಿಕ್ಕ ಪ್ರಶ್ನೆಗೆ ಪಟಾ-ಪಟ್ ಗುಜರಾತಿನಲ್ಲಿ ಉತ್ತರಿಸಿ ಬಿಟ್ಟರು. ಒಂದು ಕ್ಷಣ ನಾನು ತಬ್ಬಿಬ್ಬಾಗಿ ಹೋದೆ. ನಿಧಾನವಾಗಿ ಸುಧಾರಿಸಿಕೊಂಡು.ಹಿಂದಿಯಲಿ “ಮುಝೆ ಮಾಪ ಕಿಜಿಯೇ, ಮುಝೇ ಗುಜರಾತಿ ಉತನಾ ನಹಿ ಆಥಿ”! ಎಂದೆ. ನಂತರ ನಮ್ಮ ನಡುವೆ ಹಿಂದಿಯಲಿ ಸಂಭಾಷಣೆ ಮುಂದುವರೆಯಿತು. ಗುಜರಾತಿನ ಬಗ್ಗೆ ನಾನಾಡಿದ ಹಲವಾರು ಮಾತಿಗೆ ಅವರು ಘನವಾದ ಕೃತಜ್ಞತೆ ತಿಳಿಸಿ, ಮತ್ತಷ್ಟು ಗುಜರಾತನ್ನು ಪರಿಚಯಿಸಿದರು. ನಾನು ಅವರಿಗೆ ಒಂದು ಪ್ರಶ್ನೆಯನು ತುಂಬಾ ಉತ್ಸುಕನಾಗಿ ಕೇಳಿದೆ. ಈ ಗಾಡಿ ಗುಜರಾತ ಗಡಿಯನ್ನು ಎಷ್ಟು ಗಂಟೆಗೆ ಪ್ರವೇಶಿಸುತ್ತದೆ ಅಂತ. ಯಾಕಂದ್ರೆ, ಗುಜರಾತನ್ನು ಸೀಮಾ ರೇಖೆಯಿಂದಲೇ ಕಣ್ಣುತುಂಬಿಕೊಳ್ಳಬೇಕೆಂಬುದು ನನ್ನ ಉದ್ಧೇಶವಾಗಿತ್ತು. ಅವರು ಹೇಳಿದಂತೆ ರೈಲು ಗಾಡಿ ಬೆಳ್ಳಂ ಬೆಳಿಗ್ಗೆ 5 ಗಂಟೆಗೆ ಅಂದರೆ, ಆಗಸ್ಟ 15 ರಂದು ಗುಜರಾತನ್ನು ಪ್ರವೇಶಿಸಿತು. ಅಂದು ಹೇಳಿ ಕೇಳಿ ಸ್ವಾತಂತ್ರ್ಯ ದಿನೋತ್ಸವದ ದಿನವಾದ್ದರಿಂದ ನನ್ನ ಮನಸಲ್ಲಿ ಮಹಾತ್ಮ ಗಾಂಧಿ, ಸರ್ದಾರ ವಲ್ಲಭಭೈ ಪಟೇಲ್ ಬಂದು ಗುಜರಾತ ಮಣ್ಣಿಗೆ ನಮನ ಅರ್ಪಿಸುವಂತೆ ಮಾಡಿದರು.ತದನಂತರ ಗಡಿಭಾಗಕ್ಕೆ ಅಂಟಿಕೊಂಡಂತಹ  ಗುಜರಾತಿನ “ವಾಪಿ” ನಗರವನ್ನು ಗಾಡಿ ತಲುಪಿತು . 

ಮುಂಜಾನೆಯ ಮಬ್ಬುಗತ್ತಲಲಿ ಆ ಪುಟ್ಟ ಊರನ್ನು ನೋಡಿ ಆನಂದಿಸಿದೆ. ಪುಟ್ಟ- ಪುಟ್ಟ ಮನೆಗಳ ಮುಂದೆ ಮುಖವೆಲ್ಲ ಸೀರೆ ಸೆರಗನ್ನು ಹೊದ್ದು ಮಹಿಳೆಯರು ಮುಂಜಾನೆಯ ಕಾರ್ಯಗಳಲಿ ತಮ್ಮನು ತೊಡಗಿಸಿಕೊಂಡಿದ್ದರು. ಇತ್ತ, ಉದ್ದನೆಯ ಹುರಿ ಮೀಸೆ ಬಿಟ್ಟುಕೊಂಡು ಧೋತಿ ಕಾಟನ್ ತುಂಬು ತೋಳಿನ ಅಂಗಿ ಮತ್ತು ತಲೆಗೊಂದು ಬೆಳ್ಳನೆಯ ಪೇಟ ತೊಟ್ಟು ಮಧ್ಯ ವಯಸ್ಸಿನ ಪುರುಷರು ಮನೆಯ ಮುಂದೆ ಹಾಕಿದಂತಹ ನೂಲಿನಿಂದ ಹೆಣೆದ ಮಂಚದ ಮೇಲೆ ಕುಳಿತು ಚಿಕ್ಕ –ಚಿಕ್ಕ ಬಸೀ ಒಳಗೆ ಚಹಾ ಹೀರುತ್ತಿದ್ದರು. ಅವರು ಮೀಸೆ ಒರೆಸುತ್ತ ಚಹಾ ಹೀರುತ್ತಿರುವದನ್ನು ನೋಡಿ, ನನಗೂ ಸಹ ಗಟ್ಟಿಯಾದ ಎಮ್ಮೆ ಹಾಲಿನಲಿ ಮಾಡಿದಂತಹ  ಆ ಗ್ರಾಮೀನ ಚಹಾದ ಸವಿಯನು ಸವಿಯಬೇಕೆನಿಸಿತು. ಗುಜರಾತಿನ ಆ ವಾಪಿ ನಗರ ದಾಟಿದ ಮೇಲೆ ಕ್ರಮವಾಗಿ ನವಸಾರಿ, ವಲಸಾಡ, ಸೂರತ್, ವಡೋದರಾ ,ಆನಂದ, ನಡಿಯಾದ ನಗರಗಳ ನಂತರ ರೈಲು ಗಾಡಿ ಮುಂಜಾನೆ 9 ಗಂಟೆಗೆ ಅಹಮದಾಬಾದ ಮಹಾನಗರವನು ಸೇರಿತು. 

ಚಕಿತ ಭಾವದಿಂದ ನಮ್ಮ ಬೆಂಗಳೂರು ರೈಲು ನಿಲ್ದಾಣಕ್ಕಿಂತ ತುಸು ದೊಡ್ಡದಾದ ನಿಲ್ದಾಣದ ಕೋಣೆ- ಕೋಣೆಗೂ ದೃಷ್ಟಿ ಆಯಿಸುತ್ತ ಹೊರ ಬಂದೆ. ಮುಂಬಾಗಿಲಿಗೆ ಬರುತ್ತಿದ್ದಂತೆಯೇ ನನ್ನನು ಬರಮಾಡಿಕೊಳ್ಳಲು ಬಂದಂತಹ ಮತ್ತೊಬ್ಬ ನನ್ನ ಹಳೆಯ ವಿದ್ಯಾರ್ಥಿ ಲಗುಬಗನೆ ಬಂದವನೇ ಸರ್. “ಗುಡ್ ಮಾರ್ನಿಂಗ್ ಆಪ್ ಅಭಿ ಆಯಾ ಕ್ಯಾ ಸರ್, ಜರ್ನಿ ಕೈಸಾ ಥಾ? ಕುಚ್ ತಕಲಿಪ್ ತೋ ನಹಿ ಹೂವಾ ನ ಸರ್? ಎನ್ನುತ್ತ ಒಂದೇ ಉಸಿರಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿದ! “ಐಸಾ ಕುಚ್ ಭಿ ನಹಿ ಹುವಾ. ಮೈ ಆರಾಮ ಸೇ ಪಹುಚ್ ಗಯಾ”! ಎಂದು ಉತ್ತರಿಸುತ್ತಿದ್ದಂತೆಯೇ ಅವನು ಓಕೆ “ಚಲೋ ಸರ್ ಹಮ್ ಜಾಹೆಂಗೆ ಗರ್ ಪರ್ ಆಪ್ ಪಹೆಲೆ ಪ್ರೇಶ್ ಹೊಜಾವೊ ನಾಷ್ಟ ಕರ್ನೇಕೆ ಬಾದ್ ಥೋಡಾ ರೆಸ್ಟ ಕರೋಗೆ” ಎಂದ. ಯಾಕೋ ನನಗೆ ಗುಜರಾತಿನ ಚಹಾ ಹೀರುವ ತೃಷೆ ಕಾಡುತ್ತಿತ್ತು . ನನ್ನ ವಿದ್ಯಾರ್ಥಿಗೆ … ಕಮ್ಲೇಶ್ “ಮುಝೇ ಚಹಾ ಪೀನಾ ಹೈ”  ಎಂದೆ. ಅವನು ನನ್ನನು ಒಂದು ಒಳ್ಳೆಯ ಉಪಹಾರ ಮಂದಿರಕೆ ಕರೆದೊಯ್ಯಲು ಅಣಿಯಾದ. ನನಗೆ ಯಾಕೋ ಅಲ್ಲಲ್ಲಿ ಎತೇಚ್ಛವಾಗಿ ನಿಂತುಕೊಂಡಿದ್ದ ತಳ್ಳುಗಾಡಿಯಲ್ಲಿನ ಚಹಾ ಕುಡಿಯಬೇಕು ಎಂದೆ. ಅವನು ಒಲ್ಲದ ಮನಸ್ಸಿನಿಂದಲೇ ಒಂದು ಚಿಕ್ಕ ತಳ್ಳು ಅಂಗಡಿಗೆ ಕರೆದೊಯ್ದು ಅಂಗಡಿಯವನಿಗೆ ಗುಜರಾತಿನಲಿ. “ಭೈ ಹೇ ಹಮಾರ ಸರ್ ಹೈ ಪಹೆಲಿ ಬಾರ್ ಕರ್ಣಾಟಕ ಸೇ ಗುಜರಾತ ಕೊ ಆಯಾ ಹೈ ಇಸ್ಲೀಯೆ ಏಕ್ ಬಡಿಯಾ ಚಹಾ ಬನಾಕೆ ದೂ” ಎಂದ. 

ಈ ಮಾತು ಕೇಳಿದ ನಲವತ್ತರ ಆಸುಪಾಸಿನ ಆ ಮನುಷ್ಯ ನನಗೆ ನಮಸ್ಕಾರ ಹೇಳುತ್ತಲೇ. ಒಂದು ಕಪ್ ಸ್ಪೇಷಲ್ ಚಹಾ ಮಾಡಿ ಕೊಟ್ಟ. ನಾನು ಕುಡಿಯುತ್ತಿದ್ದರೆ ಹಸನ್ಮುಖಿಯಾಗಿ ಸಂಕೋಚಭಾವದಿಂದ ನನ್ನನ್ನೇ ನೋಡುತ್ತ ನಿಂತು ಬಿಟ್ಟಿದ್ದ ಆ ಚಹಾದಂಗಡಿಯ ಮನುಷ್ಯ. ನಾನು ಚಹಾ ಕುಡಿದ ನಂತರ . ಅವನಿಗೆ ಪ್ರೀತಿಯಿಂದ “ಕ್ಯಾ ಸಾಹೇಬ್ ಅಪ್ನೆ ಚಹಾ ಬಡಿಯಾ ಬನಾಯಾ”. ಮುಝೇ ಬಹುತ್ ಅಚ್ಛಾ ಲಗಾ” ಎನ್ನುತ್ತ ಜೇಬಿನಿಂದ ಹತ್ತು ರೂಪಾಯಿ ತೆಗೆದು ಕೊಡಲು ಹೋದೆ. ಅವನು ಕಾಸು ಪಡೆಯದೆ ನನಗೆ ಸಾಹೇಬ್ “ಆಪ್ ಬಹುತ್ ದೂರ್ ಸೇ ಹಮಾರಾ ಗುಜರಾತ್ ಕೋ ಪಹೆಲಿ ಬಾರ್ ಆಯಾ ಹೈ ಮೈ ಪೈಸಾ ನಹಿ ಲೆಲುಂಗ್ ಆಪ್ ಜಾಹಿಯೇ” ಎಂದ. ಎಷ್ಟೇ ಒತ್ತಾಯ ಮಾಡಿದರು ಅವನು ಕಾಸು ಮಾತ್ರ ತೆಗೆದುಕೊಳ್ಳಲಿಲ್ಲ. ನನಗೆ ಗುಜರಾತ ಬಗ್ಗೆ ಇದ್ದಂಥ ಪ್ರೀತಿ ಮತ್ತಷ್ಟು ಹೆಚ್ಚಿತು. ಮನಸಲ್ಲಿಯೇ ಏನಪ್ಪ…! ಈ ಮಾನವೀಯ ಮೌಲ್ಯ ಪ್ರೀತಿ, ವಿಶ್ವಾಸ ಮತ್ತು ಅಭಿಮಾನ ಇನ್ನು ಇವೆಯೇ ಎಂದು ಯೋಚಿಸುತ್ತ. ಅವನಿಗೆ ಕೃತಜ್ಞತೆ ತಿಳಿಸಿ. ಸೀದಾ ಅಲ್ಲಿಂದ ಗೀತಾ ಮಂದಿರಕೆ ಬಂದು ನಾನು ಅಹಮದಾಬಾದನಿಂದ ಹೋಗಬೇಕಾಗಿದ್ದ “ಬಾಯಡ್” ನಗರಕ್ಕ ಬಸ್ ಹಿಡಿದೆ. 

ಅಹಮದಾಬಾದನಿಂದ ಸರಿ ಸುಮಾರು 78 ಕಿ.ಮೀ ದೂರದಲ್ಲಿ ಸಾಬರ ಕಾಂಟಾ ಜಿಲ್ಲೆಯಲಿ ಬರುವಂತ ತಾಲೂಕು ಕೇಂದ್ರವಾಗಿತ್ತು ಆ ಬಾಯಡ್ ನಗರ. ಬಸ್ಸಿನಲಿ ನನ್ನ ವಿದ್ಯಾರ್ಥಿಯ ಜತೆಗೆ ಮಾತನಾಡುತ್ತ ಗುಜರಾತಿನ ಚಪ್ಪಟೆ ಭೂಮಿಯನ್ನು ನೋಡುತ್ತ ಪ್ರಯಾಣ ಮುಂದುವರೆಸಿದೆ.ಅಹಮದಾಬಾದನಿಂದ ಹೊರಟ ಬಸ್ಸು ಚಿಲೋಡಾ, ಡೆಹಗಮ್ ಮಾರ್ಗವಾಗಿ ಬಾಯಡ್ ಕಡೆಗೆ ಹೊರಟಹತ್ತಿತು. ಪ್ರತಿ ಬಸ್ ನಿಲ್ದಾಣ ಮತ್ತು ನಗರಗಳ ರಸ್ತೆಯ ಬದಿಯಲ್ಲೆಲ್ಲ ಬಿಕ್ಕ- ಚಿಕ್ಕ ಪ್ಲಾಸ್ಟಿಕ್ ಪೌಚ್ ಗಳು ಎಲ್ಲಂದರಲಿ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು. ಇದನ್ನು ಕಂಡ ನಾನು, ಏನಪ್ಪ ನಮ್ಮ ಕರ್ಣಾಟಕದಲಿನ ದೇಶಿ ಸರಾಯಿಯ ಪೌಚ್ ಇದ್ದಂಗೆ ಇದಾವೆ ಬಹುಶಃ ಇಲ್ಲಿ ದೇಶಿ ಸರಾಯಿಯ ಹಾವಳಿ ಬಹಳ ಇರಬೇಕು. ಯಾವದಕ್ಕು ನಾನು ಸ್ವಲ್ಪ ಎಚ್ಚರವಾಗಿರಬೇಕು ಎಂದು ಯೋಚಿಸುತ್ತ ಕುಳಿತು ಬಿಟ್ಟೆ. ಬಸ್ಸು ಡೆಹಗಮ್ ಬಸ್ ನಿಲ್ದಾಣದೊಳಗೆ ಪ್ರವೇಶಿಸುತ್ತಿದ್ದಂತೆ ನಾಲ್ಕಾರು ಹುಡುಗರು ಕೈನಲಿ ಒಂದಿಷ್ಟು ನೀರಿನ ಪೌಚ್ ಹಿಡಿದುಕೊಂಡು “ತಂಡು ಪಿವಾನು ಪಾನಿ” ಎಂದು ಕೂಗುತ್ತ ಬಸ್ಸಿನಲಿ ನುಗ್ಗಿದರು.

 ಆ ಪೌಚ್ ನೋಡಿದ ಮೇಲೆ ಗೊತ್ತಾಯ್ತು ಅವು ಸಾರಾಯಿದ್ದಲ್ಲ ಕುಡಿಯುವ ನೀರಿನದ್ದು ಎಂದು. ತರಾತುರಿಯಲ್ಲೇ ಒಬ್ಬ ಹುಡುಗನನ್ನು ಕೇಳಿದೆ. ಹೇ  “ಭೈ ಏಕ್ ಪೌಚ್ ಕೊ ಕಿತನಾ”? ಅಂತ. ಅವನು “ಭಾಯ ಸಾಬ್ ಸಿರ್ಫ ಏಕ್ ರೂಪಯಾ” ಎಂದ. ನಾನು ಎರಡು ಪೌಚ್ ತಗೊಂಡು ತಂಡು ಪಾನಿ ಕುಡಿದು ನಿರಾಳನಾದೆ. ಇತ್ತ, ಸರಿ ಸುಮಾರು ಮಧ್ಯಾಹ್ನ ಒಂದು ಗಂಟೆಗೆ ನಾನು ತಲುಪಬೇಕಾದ ಬಾಯಡ್ ನಗರವನು ತಲುಪಿಯಾಯ್ತು. ನನ್ನ ವಿದ್ಯಾರ್ಥಿ ನನ್ನನು ಸೀದಾ ಕರೆದುಕೊಂಡು ಬಾಯಡ್ ನಗರದ ರಹವಾಸಿಯಾದಂತ “ರಂಜನ ಪಟೇಲ್” ಎಂಬುವವರ ಮನೆಗೆ ಕರೆದುಕೊಂಡು ಹೋದ. ಪೂರ್ವ ನಿಯೋಜನೆಯಂತೆ ನನ್ನ ತಾತ್ಕಾಲಿಕ ಕಾಳಜಿಯನ್ನು ಅವರು ತೆಗೆದುಕೊಳ್ಳುದಾಗಿ ಒಪ್ಪಿಕೊಂಡಿದ್ದರು…!!! 

(ಮುಂದುವರೆಯುವದು)

-ಚಿನ್ಮಯ್ ಮಠಪತಿ

             

   

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
ಪ್ರಸನ್ನ ಆಡುವಳ್ಳಿ

ಕುತೂಹಲಕಾರಿಯಾಗಿ ಶುರುಮಾಡಿ ನಮ್ಮನ್ನೂ ನಿಮ್ಮೊಡನೆ ಗುಜರಾತಿಗೆ ಕರೆದೊಯ್ಯುತ್ತಿದ್ದೀರಿ…. ವರ್ಷಗಳ ಹಿಂದೆ ಕಂಡಿದ್ದ ಗುಜರಾತ್ ನೆನಪನ್ನು ಹಸಿಮಾಡಿದ್ದೀರಿ.. ಮುಂದಿನ ವಾರದ ಬರಹಕ್ಕಾಗಿ ಕಾಯುತ್ತಿದ್ದೇನೆ…!

Santhoshkumar LM
11 years ago

ಚಿನ್ಮಯ್ ನಿಮ್ಮ ಜೊತೆ ನಾವೂ ಗುಜರಾತ್ ಸೇರಿದ್ದೇವೆ….ಮುಂದುವರೆಸಿ ನಿಮ್ಮ ಪಯಣ. ನಿಮ್ಮ ಹಿಂದೆ ನಾವಿರುತ್ತೇವೆ:)

chinmay mathapati
chinmay mathapati
11 years ago

ನಿಮ್ಮೆಲ್ಲರ ಪ್ರೋತ್ಸಾಹದಿಂದ ಸಂತಸವಾಗಿದೆ. ಅದೇ ರೀತಿ ಪಂಜು ಪುಟದಲ್ಲಿ ಮಿನುಗುತ್ತಿರುವ ನಿಮ್ಮೆಲ್ಲರ ಚೆಂದದ ಬರಹಗಳನ್ನು ಓದಿ, ಸವಿದು  ಪ್ರತಿಕ್ರಿಯಿಸುವೆ. ನನ್ನ ಮುಂಬರುವ ವಾರಗಳ  ಸಂಚಿಕೆಗಳನ್ನು ಇದೇ ರೀತಿ ಪ್ರೋತ್ಸಾಯಿಸುತ್ತೀರಿ ಎನ್ನುವ ವಿಶ್ವಾಸದೊಂದಿಗೆ…….ಧನ್ಯವಾದಗಳು…………

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
11 years ago

ಸೊಗಸಾದ ನಿರೂಪಣೆ ಸರ್. ನಿಮ್ಮೊಂದಿಗೆ ನಾವು ಪ್ರಯಾಣಿಸಿದ್ದೇವೆ,,,,

ಮಂಜುನಾಥ ರೆಡ್ಡಿ

ತುಂಬಾ ಚೆನ್ನಾಗಿ ವಿವರಿಸಿದ್ದೀ ನಿಮ್ಮ ಅನುಭವವನ್ನು, ನಿಮ್ಮ ಮಾತು ಕೇಳಿದ ಮೇಲೆ ಒಮ್ಮೆ ಭೇಟಿ ಮಾಡುವ ಕನಸು…. 

lakshmikanth
11 years ago

i am more lucky person that i read this article before publishing ,and i am proud to say matapathi is one of my good friend.

ಸುಮತಿ ದೀಪ ಹೆಗ್ಡೆ

ಚೆನ್ನಾಗಿ ಮೂಡಿ ಬಂದಿದೆ.  ಮುಂದಿನ ಸರಣಿಯ ನಿರೀಕ್ಷೆಯಲ್ಲ್ಲಿ….

Rajesh Thalwagal math
Rajesh Thalwagal math
11 years ago

superrrrrrrrrrrrrr brother

8
0
Would love your thoughts, please comment.x
()
x