ಚಿನ್ಮಯ್ ಮಠಪತಿ ಅಂಕಣ

ನನ್ನೊಳಗಿನ ಗುಜರಾತ (ಭಾಗ 9): ಚಿನ್ಮಯ್ ಮಠಪತಿ

 

ಬದಲಾಗುತ್ತಿರುವ ಜೀವನ ಕ್ರಮವನ್ನೊಮ್ಮೆ ಸಿಂಹಾವಲೋಕನ ಮಾಡಬೇಕು. ಇಂತಹ ಒಂದು ಅವಲೋಕನ ಮಾಡಿದರೆ, ಎಷ್ಟೋ ವಿಸ್ಮಯಗಳು ನಮ್ಮನ್ನು ಯಾವದೋ ಒಂದು ಮಾಯಾಲೋಕಕ್ಕೆ ಕರೆದೊಯ್ದು ಒಂದು ಸುತ್ತು ಸುತ್ತಾಡಿಸಿಕೊಂಡು ಬರುತ್ತವೆ.  ಈ ನಡುವೆ ನಮ್ಮಲ್ಲಿ ಹಲವಾರು ಪ್ರಶ್ನೆಗಳು ಹುಟ್ಟುತ್ತವೆ ಮತ್ತು ಉತ್ತರವನ್ನು ಕೆಲವೊಂದಿಷ್ಟು ಪ್ರಶ್ನೆಗಳು ಕಂಡುಕೊಳ್ಳುತ್ತವೆ. ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ. ಮೊನ್ನೆ, ನೆನ್ನೆ ಮತ್ತು ಇವತ್ತೆಂಬ ಈ ಪುಟ್ಟ ಕಾಲಾಂತರದಲ್ಲಿ ಕಾಣ ಸಿಗುವ ಅಮೋಘ ಬದಲಾವಣೆಗಳ ಜೊತೆ,  ಚೂರು ಹಿಂದೆ ಸರಿದು ಹಿಂದಿನ ವಿದ್ಯಮಾನಗಳನ್ನು ಅವಲೋಕಿಸಿದರೆ ಅದರ ವಿಭಿನ್ನತೆಯೇ ಬೇರೆ. ಮನಸ್ಸು ಒಮ್ಮೆ ಕಲ್ಪನಾದಾಳಕ್ಕೆ ಇಳಿದು ಏನೆಲ್ಲ ಅವಲೋಕಿಸಿ ಬಿಡುತ್ತದೆ. ಭೂತ ಕಾಲವನ್ನು ಅಡಿಪಾಯವಾಗಿಸಿ ನಿಲ್ಲುವ ಇಂದು, ಇವತ್ತನ್ನು ಹೊಸಕಿ ಮೇಲೆ ನಿಲ್ಲಲು ಹಾತೊರೆವ ನಾಳೆ, ನಾಳೆ ಎನ್ನುವದನ್ನು ತಿಂದು ಇನ್ನಷ್ಟು ಮೈಯುಬ್ಬಿಸಿಕೊಂಡು ನಿಲ್ಲಬೇಕೆನ್ನುವ ಭವಿಷ್ಯ..!! ಎಷ್ಟೋ ಆಗು-ಹೋಗುಗಳು ಈ ನಡುವೆ ಕಾಲನ ಭೂತ ಪುಟ ಸೇರುವ ದಿನಮಾನಗಳು. ಇತ್ತ ಈ ದಿಶೆಯಲ್ಲಿ ಸಾಗುತಿರಲು ಬದುಕಿಗೆ ಬಂದೆರಗುವ ಸಂಧ್ಯಾಕಾಲ. ಮುಂದೆ ಶಾಂತ ಅಸ್ತಮ. ಮುಂದಿನ ಜನ್ಮ ಇದೆ ಎನ್ನುತ್ತಾರೆ ಬಲ್ಲವರು, ಆದರೆ, ಯಾರಿಗೆ ಗೊತ್ತು, ಮತ್ತೊಂದು ನಮ್ಮಯ ಹುಟ್ಟು ಮತ್ತು ಅದರ ಅಸ್ತಿತ್ವ. ಆದ್ದರಿಂದ ದೊರಕಿದ ಒಂದು ಮಾನವ ಜನ್ಮದಲ್ಲಿ ಹೀಗೊಂದು ಸುಂದರ  ಬದುಕು ನಮ್ಮದಾಗಬೇಕು.

ಎರಡು ಜೀವನ ಕ್ರಮಗಳನ್ನು ಆಯ್ದುಕೊಂಡು ಯೋಚಿಸಲಾಗಿ, ಎಲ್ಲೋ ಒಂದು ಕಡೆ ತುಸು ಸಂತೋಷ ಎನ್ನಿಸಿದರೂ, ಅಸಂತೋಷ, ಅಸಂತೃಪ್ತಿ ಒಂದು ಮೂಲೆಯಲ್ಲಿ ಅದಕ್ಕಿಂತ ಹೆಚ್ಚಾಗಿ ಕಾಡಿತು.  ಕಲೆ-ಸಂಸ್ಕೃತಿ , ಮದುವೆ ದಿಬ್ಬಣ, ಜಾತ್ರೆ ಉತ್ಸವಗಳ ಪ್ರಧಾನ ನಾಡು ನಮ್ಮ ದೇಶ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಕರುನಾಡು  ಈ ಒಂದು ವಿಚಾರದಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ.  ನಮ್ಮ ನಾಡಿಗೆ ಅದರದೇ ಆದ ವಿಶೇಷ ಕಲೆ- ಪರಂಪರೆಯ ಇತಿಹಾಸ ಇದೆ. ಈ ಕಾರಣಕ್ಕಾಗಿ ನಾವು ಕನ್ನಡಿಗರಾಗಿ ನಮ್ಮ ಕನ್ನಡ ನಾಡನ್ನು ಪೂಜ್ಯನೀಯ ದೃಷ್ಟಿಯಿಂದ ಗೌರವಿಸುವುದು ನಮಗೆಲ್ಲ ಹೆಮ್ಮೆಯ ಸಂಗತಿ. ನಮ್ಮ ಕರುನಾಡಲ್ಲಿನ ಎಲ್ಲ ಹಬ್ಬ- ಹರಿದಿನ, ಮದುವೆ-ದಿಬ್ಬಣ ಎಲ್ಲವೂ ಒಂದು ಕಾಲದಲ್ಲಿ ನಮಗೆ ಅದಮ್ಯ ಉಲ್ಲಾಸವನ್ನು ನೀಡಿದಂಥವು. ಆದರೆ, ಇವತ್ತಿನ ದಿನ ತುಸು ತಮ್ಮ ಮೂಲ ಕಳೆ ಮತ್ತು ಗಮ್ಮತ್ತನ್ನು ಕಳೆದುಕೊಂಡಂತೆ ಭಾಸವಾಗುತ್ತವೆ. ಅಜ್ಜ-ಅಜ್ಜಿ ಹೇಳುತ್ತಿದ್ದರು ನಮ್ಮ ಕಾಲದಲ್ಲಿ ಮದುವೆಗಳು ಸತತ ಏಳು ದಿನ ನಡೆಯುತ್ತಿದ್ದವು ಎಂದು. ನಮ್ಮ ಬಾಲ್ಯದಲ್ಲಿ ಅಪ್ಪ-ಅಮ್ಮ ಹೇಳುತ್ತಿದ್ದರು ನಮ್ಮ ಕಾಲದ ಮದುವೆಗಳು ಇಲ್ಲಾ ಎಂದರು ಎರಡು ದಿನ ನಡೆಯುತ್ತಿದ್ದವು ಎಂದು. ಅದೇ ತೆರನಾಗಿ ಜಾತ್ರೆ- ಉತ್ಸವಗಳು ವಾರಗಟ್ಟಲೆ ನಡೆದು ಜನಮಾನಸಕ್ಕೆ ತುಂಬು ಮನರಂಜನೆಯನ್ನು ನೀಡುತ್ತಿದ್ದವು. ಇವತ್ತು ಇವುಗಳೆಲ್ಲವು ಶರವೇಗವನ್ನು ಪಡೆದು, ಹೀಗೆ ಬಂದು ಹಾಗೆ ಹೋಗಿ ಬಿಡುತ್ತವೆ. ಇದು ನಮ್ಮ ಹಬ್ಬ ಹರಿದಿನಗಳ ಪ್ರಮಾದವಂತು ಅಲ್ಲ! ಅದು ನಮ್ಮಗಳೆಲ್ಲ ಆಚರಕಾರೆಂಬವರಿಂದ  ಕೊಡಮಾಡಿದ ಒಂದು ಕೊಡುಗೆ ಅಷ್ಟೆ. 

ಇದನ್ನೆಲ್ಲ ಕೆಣಕುತ್ತ ಮತ್ತೆ ಹಳೆ ವೈಭವಕ್ಕೆ ಮನಸೋಲಲು ಕಾರಣವಾಗಿದ್ದು. ಗುಜರಾತಿನ ಆ 2009ರ ನವರಾತ್ರಿ ಹಬ್ಬ. ತುಂಬು ಸಂತೋಷವನ್ನು ನೀಡಿದಂತಹ ಹಬ್ಬ ಅದು . ನಮ್ಮ ಕರ್ನಾಟಕದಲ್ಲಿ ಈ ಹಬ್ಬವನ್ನು ನಾಡ ಹಬ್ಬವಾಗಿ ಆಚರಿಸಿದರೂ ಸಹ, ನಾವು ಹಬ್ಬವನ್ನು ನಾಡಿನಾದ್ಯಂತ ಅಷ್ಟೊಂದು ವಿಜೃಂಭಣೆಯಿಂದ ಸತತ ಒಂಬತ್ತು ದಿನಗಳವರೆಗೆ ಆಚರಿಸುವ ವಾಡಿಕೆ ವರ್ಷದಿಂದ ವರ್ಷಕ್ಕೆ ಕಳೆಗುಂದುತ್ತಿದೆ ಎನ್ನಬಹುದು. ಕೇವಲ ಮೈಸೂರು ಮತ್ತು ಹಂಪಿಗಳಂತಹ ಐತಿಹಾಸಿಕ ಸ್ಥಳಗಳಲ್ಲಷ್ಟೇ ಅತಿ ವಿಜೃಂಭಣೆಯಿಂದ ಆಚರಿಸುತ್ತೇವೆ. ಈ ದಿಶೆಯಲ್ಲಿ ಗುಜರಾತಿನಲ್ಲಿ ಮಾತ್ರ ವಿಭಿನ್ನತೆಯಿದೆ. ಅಲ್ಲಿ ನವರಾತ್ರಿ ಎಂದರೆ ಅದೊಂದು ವಿಶೇಷವಾದ ಹಬ್ಬ. ಇಡೀ ರಾಜ್ಯಕ್ಕೆ ರಾಜ್ಯವೇ ಈ ಹಬ್ಬ ಬಂತೆಂದರೆ ಮದುವಣಗಿತ್ತಿಯಂತೆ ಶೃಂಗಾರಗೊಂಡು ಬಿಡುತ್ತದೆ. ಗುಜರಾತಿನ ಜನಸಮುದಾಯ ಈ ಹಬ್ಬದಾಚರಣೆಗೆ ಒಂದು ತಿಂಗಳ ಹಿಂದಿನಿಂದಲೇ ತಮ್ಮ ತಯಾರಿಯನ್ನು ಮಾಡಿಕೊಳ್ಳಲು ಶುರುವಿಟ್ಟುಕೊಳ್ಳುತ್ತೆ. ಹಳ್ಳಿ-ಶಹರಗಳೆನ್ನದೆ ಪುರಗಳಲ್ಲಿರುವಂತಹ ದೇವಿಯ ದೇವಸ್ಥಾನವನ್ನು ಸೌಂದರ್ಯವಾಗಿ ಅಲಂಕರಿಸುತ್ತಾರೆ. ಇತ್ತ ದೇವಸ್ಥಾನದ ಮುಂದಿನ ಹಾದಿ-ಬೀದಿಗಳಿಗೆಲ್ಲ ಚೆಂದ-ಚೆಂದದ ಚಪ್ಪರ –ಹಂದರವನ್ನು ಹಾಕಿ ಹಿಂದಿನ ಕಾಲದ ರಾಜ ಬೀದಿಯಂತೆ ಅಲಂಕರಿಸುತ್ತಾರೆ. ನವರಾತ್ರಿಯ ಮೊದಲ ದಿನದಿಂದ ಕೊನೆಯ ಒಂಬತ್ತನೆಯ ದಿನದವರೆಗೂ ಪ್ರತಿ ದಿನ ಪೂಜೆ, ಅಲಂಕಾರದ ಜೊತೆಗೆ ಶ್ರೀ ದೇವಿಯ ಮಹಾಚರಿತ್ರೆಯನ್ನು ಪ್ರವಚನದ ಮೂಲಕ ಸಂಜೆ ಮತ್ತು ಮುಂಜಾನೆಯ ವೇಳೆ ಭಕ್ತಾದಿಗಳಿಗೆ ಹೇಳುತ್ತಾರೆ. ಈ ಒಂದು ಮಾಸದಲ್ಲಿ ವೇದ ಪುರಾಣಗಳನ್ನು ಓದಿಕೊಂಡಂತಹ ಪಂಡಿತರಿಗೆ ಎಡ ಬಿಡದಂತಹ ಕೆಲಸ. ದೇವಿಯ ಆರಾಧನೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಭಕ್ತಾದಿಗಳಿಗೆ ನವರಾತ್ರಿಯ ವಿಶೇಷತೆ ಮತ್ತು ಚರಿತ್ರೆಯನ್ನು ಪೂಜೆ ಪ್ರವಚನದ ಮೂಲಕ ಹೇಳುತ್ತಾರೆ. ಆ ಒಂಬತ್ತು ದಿನಗಳನ್ನು ದೈವಿಕ ದಿನಗಳು ಅಂತಲೇ ಹೇಳಬಹುದು. ಇದು ಕೇವಲ ಪುರಗಳಲ್ಲಿರುವ ದೇವಸ್ಥಾನದಲ್ಲಷ್ಟೇ ಕಾಣ ಬರುವದಿಲ್ಲ. ನಾಗರೀಕರು ಸಹ ತಮ್ಮ  ಭಾವ- ಭಕುತಿಗೆ ತಕ್ಕಂತೆ ತಮ್ಮ- ತಮ್ಮ ಮನೆಗಳಲ್ಲಿಯೂ ಸಹ ಇಂತಹ ಪಾರಂಪರಿಕ ಆಚರಣೆಗಳಿಗೆ ಕಾರಣರಾಗುತ್ತಾರೆ. ಮನೆಗಳಲ್ಲಿ ಒಂಬತ್ತು ದಿನದವರೆಗೆ ದೈವತ್ವವನ್ನು ಮೆರೆದು , ಹಿಂದು ಸಂಪ್ರದಾಯಕ್ಕೆ ವಿಶೇಷ ಮನ್ನನೆಯನ್ನು ನೀಡುತ್ತಾರೆ. ಈ ಕಾಲಾವಧಿಯಲ್ಲಿ ಅವರು ದಿನಾಲು ಮನೆಗಳಲ್ಲಿ ಮತ್ತು ಸಾರ್ವಜನಿಕ ದೇಗುಲ-ಮಂದಿರಗಳಲ್ಲಿ ಹಲವಾರು ಭಗೆಯ ಭಕ್ಷ್ಯಗಳನ್ನು ತಯಾರಿಸಿ ಶ್ರೀದೇವಿಗೆ ನೈವೇದ್ಯ ಅರ್ಪಿಸಿ ಭಕ್ತ ವೃಂದಕ್ಕೆ ಅನ್ನಸಂತರ್ಪಣೆಯನ್ನು ಉಣ ಬಡಿಸುತ್ತಾರೆ. 

ನವರಾತ್ರಿಯಲ್ಲಿ ಇನ್ನೊಂದು ಕಣ್ಮನವನ್ನು ಸೆಳೆಯುವ ಅಂಶವೆಂದರೆ, ಪ್ರತಿದಿನ ಸಂಜೆ ಅಂದರೆ, 7-ರಿಂದ 10 ಗಂಟೆವರೆಗೂ ಸಮೂಹ ವೃಂದದಲ್ಲಿ ನೆರವೇರುವಂತಹ ಗರ್ಬಾ ಮತ್ತು ದಾಂಡಿಯಾ ನೃತ್ಯ. ಈ ಗುಜರಾತಿನ ವಿಶ್ವವಿಖ್ಯಾತ ನೃತ್ಯವನ್ನು ಯಾವ ವಯಸ್ಸು ಮತ್ತು ಲಿಂಗ ಭೇದವಿಲ್ಲದೆ ತುಂಬು ಉತ್ಸಾಹದಿಂದ ಎಲ್ಲ ಜನಸ್ತೋಮ ಭಾಗಗೊಂಡು ನೋಡುಗರನ್ನು ಮನರಂಜಿಸುತ್ತದೆ. ಈ ನೃತ್ಯವನ್ನು ನೋಡುವದೇ ಒಂದು ಭಾಗ್ಯ. ಚೆಂದ-ಚೆಂದದ ಪಾರಪಂರಿಕ ಉಡುಗೆಗಳನ್ನು ತೊಟ್ಟು ಸಾಮ್ಯತೆಯಿಂದ ಹೆಜ್ಜೆ ಹಾಕುತ್ತಿದ್ದರೆ ನೋಡುಗರು ಉಲ್ಲಾಸಿತರಾಗಿ ಹರ್ಷದಾಯಕ ಕರತಾಡನದಿಂದ ಹುರಿದುಂಬಿಸುತ್ತಾರೆ. ಇಂತಹ ಅತಿ ವಿಶೇಷವಾದ ನೃತ್ಯವನ್ನು ಕಂಡು ಸಂತೋಷದಿಂದ ಬೀಗಿದ್ದೆ. ಜೊತೆಗೆ ಒಂದಿಷ್ಟು ಗುಜರಾತಿನ ಪಾರಂಪರಿಕ ಸಂಗೀತ ಹಿಮ್ಮೇಳವು ಮನಸ್ಸಿಗೆ ಆಹ್ಲಾದವನ್ನು ನೀಡುತ್ತೆ. ನಮ್ಮ ಜನಪದ ಸಂಗೀತದ ಗೀತೆಗಳನ್ನು ಹೋಲುವಂತಹ ಆ ಗೀತೆಗಳು ಕೇಳುವಾಗ ಸುಂದರ ಅನುಭೂತಿಯನ್ನು ನಮ್ಮದಾಗಿಸುತ್ತವೆ. ಗರ್ಬಾ ಮತ್ತು ದಾಂಡಿಯ ನೃತ್ಯವನ್ನು ಇವತ್ತಿನ ದಿನ ಗುಜರಾತಿಗರು ಅಂತರಾಷ್ಟ್ರೀಯ ಮಟ್ಟದಲ್ಲೂ ಪರಿಚಯಿಸಿದ್ದಾರೆ. ವಿಶ್ವದಾದ್ಯಂತ ಗುಜರಾತಿಗರು ಎಲ್ಲೆಲ್ಲಿ ನೆಲೆಸಿದ್ದಾರೋ ಅಲ್ಲೆಲ್ಲ ವಿಶೇಷ ದಿನಗಳಲ್ಲಿ ಅಲ್ಲಿನ ಜನರಿಗೆ ನೃತ್ಯ ಸಮಾರಂಭಗಳನ್ನು ಏರ್ಪಡಿಸಿ ವಿದೇಶಿಗರಿಗೂ ಸಹ ಈ ನೃತ್ಯಗಳನ್ನು ಪರಿಚಯಿಸುತ್ತಿದ್ದಾರೆ. ಈ ಮುಖಾಂತರ ವಿಶ್ವ ಸಮುದಾಯಕ್ಕೆ ಗುಜರಾತಿನ ಪರಂಪರೆಯ ಪರಿಚಯವಾಗುತ್ತಿದೆ.

ನವರಾತ್ರಿಯಲ್ಲಿ ಮತ್ತೊಂದು ವಿಶೇಷವೆಂದರೆ, ಮಾತೆ ಅಂಬಾಜಿ ಉತ್ಸವ. ಗುಜರಾತಿನ ಉತ್ತರದ ಭಾಗದ ತುತ್ತು ತುದಿಯಲ್ಲಿ ಬರುವಂತಹ ಸಾಬರ ಕಾಂಟಾ ಜಿಲ್ಲೆಯಲ್ಲಿ ಈ ಅಂಬಾಜಿ ಎಂಬ ಪುಣ್ಯ ಕ್ಷೇತ್ರಕ್ಕೆ ಗುಜರಾತಿನ ಮೂಲೆ- ಮೂಲೆಯಿಂದಲೂ ನವರಾತ್ರಿಯ ಒಂದತ್ತು ದಿನಗಳಲ್ಲಿ ಜನ ಕಾಲುನಡುಗೆಯಿಂದ ಹೋಗುತ್ತಾರೆ. ಬರಿಗಾಲಿನಲ್ಲಿ ಜೈ ಮಾತಾಜಿ ಎಂಬ ಘೋಷಣೆಯೊಂದಿಗೆ ದಾರಿಯುದ್ದಕ್ಕೂ ಅಂಬಾಜಿಯನ್ನು ಭಜಿಸುತ್ತಾ ಬಂದು ಸೇರುತ್ತಾರೆ. ಒಂಬತ್ತು ದಿನಗಳ ಅವಧಿಯಲ್ಲಿ ಲಕ್ಷಾಂತರ ಜನ ಬಂದು ಅಂಬಾಜಿ ಮಾತೆಯ ದರ್ಶನವನ್ನು ಮಾಡಿಕೊಂಡು ದೈವಿಕತೆಯನ್ನು ಮೆರೆಯುತ್ತಾರೆ. ಗುಜರಾತಿನಾದ್ಯಂತ ಅಂಬಾಜಿ ಮಾತೆ ಎಂದರೆ, ಅತಿ ಭಕ್ತಿ ಮತ್ತು ದೈವಿಕ ಆರಾಧನೆಯ ಭಾವ ಕಾಣ ಸಿಗುತ್ತದೆ. ಒಂಬತ್ತು ದಿನಗಳವರೆಗೂ ಅಂಬಾಜಿ ಕ್ಷೇತ್ರ ಭಕ್ತಾದಿಗಳಿಂದ ತುಂಬಿ ತುಳುಕಿರುತ್ತದೆ. ಅಂಬಾಜಿ ಗುಜರಾತಿನ ನಾಡ ದೇವತೆ ಎಂದೇ ಹೇಳಬಹುದು.

ಇನ್ನುಳಿದಂತೆ ಇತರೇ ಮದುವೆ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅಷ್ಟೇ ಅಚ್ಚು-ಕಟ್ಟು. ವಿಭಿನ್ನ ರೀತಿಯ ಪರಂಪರೆಯ ಜೊತೆಗೆ ತಮ್ಮ ವಿಶೇಷತೆಯನ್ನು ತಮ್ಮಲ್ಲಿ ಇವತ್ತಿಗೂ ಹಿತವಾಗಿ ಹಿಡಿದಿಟ್ಟುಕೊಂಡಿವೆ. ನಾವು ಏನೇ ಆಗಲಿ, ನಮ್ಮ ಜೀವನ ಕ್ರಮ ಎಷ್ಟೇ ಆಧುಕತೆ ಮತ್ತು  ನಾಗರೀಕತೆ ಪಡೆದುಕೊಂಡರೂ, ನಮ್ಮ ಕಲೆ, ಸಂಸ್ಕೃತಿ, ಧಾರ್ಮಿಕ ಪರಂಪರೆ ಮಾತ್ರ ಮಾಯವಾಗದೆ, ಇಂದಿನ ಮತ್ತು ಮುಂಬರುವ ನಮ್ಮ ಪೀಳಿಗೆಗೆ ದೊರಕುವಂತಾಗಲಿ. ಇದರಿಂದ ನಮ್ಮ ದೇಶ- ನಾಡುಗಳ ಪಾರಂಪರಿಕ ಪರಿಚಯವನ್ನು ನಾವು ನಮ್ಮ ಪೀಳಿಗೆಗೆ ಒದಗಿಸಿಕೊಟ್ಟಂತಾಗುತ್ತದೆ. ಅಂಬಾಜಿಗೆ ನಮಿಸುತ್ತಾ್, ನಮ್ಮನ್ನು ದಯೆ ತೋರಿ ಕಾಪಾಡು ಅಮ್ಮ ಮಾತೆ ಎಂಬ ಪ್ರಾರ್ಥನೆಯೊಂದಿಗೆ. 

-ಚಿನ್ಮಯ್ ಮಠಪತಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ನನ್ನೊಳಗಿನ ಗುಜರಾತ (ಭಾಗ 9): ಚಿನ್ಮಯ್ ಮಠಪತಿ

  1. ನಮ್ಮಲ್ಲಿ ಹಲವಾರು ಪ್ರಶ್ನೆಗಳು ಹುಟ್ಟುತ್ತವೆ ಮತ್ತು ಉತ್ತರವನ್ನು ಕೆಲವೊಂದಿಷ್ಟು ಪ್ರಶ್ನೆಗಳು ಕಂಡುಕೊಳ್ಳುತ್ತವೆ. ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ ಅಂದಿರಿ…. ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಇದ್ದರೇ ಚಂದವೇನೋ ಅಂತಲೂ ಒಮ್ಮೊಮ್ಮೆ ಅನ್ನಿಸುತ್ತೆ ಚಿನ್ಮಯ್…:)
    ಚಂದದ ಬರಹ…

Leave a Reply

Your email address will not be published. Required fields are marked *