ಪ್ರಾರ್ಥಿಸುವ ತುಟಿಗಳಿಗಿಂತ ಸಹಾಯದ ಹಸ್ತಗಳು ದೊಡ್ಡವು ಅಂತೆ. ನಿಜ ! ಆವತ್ತು ಹಿಂದೆ ಮುಂದೆ ನೋಡದೆಯೇ ಸಮಯಕ್ಕೆ ಗಮನ ಕೊಡದೇ, ಮೆಹಸಾನಾದಿಂದ ಗಾಂಧಿ ನಗರಕ್ಕೆ ಪ್ರಯಾಣ ಬೆಳೆಸಿದ್ದೆ. ಯಾವದೋ ಕೆಲಸದ ಮೇಲೆ ಮೆಹಸಾನಾ ನಗರಕ್ಕೆ ಹೋಗಿದ್ದ ನಾನು, ಅಲ್ಲಿಂದ ಬಿಡುವಾಗ ಸಮಯ ಸರಿಯಾಗಿ ಏಳು ಗಂಟೆಯಾಗಿತ್ತು. ಸೀದಾ ಗಾಂಧಿ ನಗರಕ್ಕೆ ಬಸ್ಸು ಇರದ ಕಾರಣ ಹಿಮ್ಮತ್ತ ನಗರದವರೆಗೆ ಹೋಗುವ ಬಸ್ಸು ಹಿಡಿದು ಪ್ರಯಾಣ ಬೆಳೆಸಿದೆ. ದಿನವಿಡೀ ಉರಿ ಬಿಸಿಲಲ್ಲಿ ಸುತ್ತಾಡಿ ತುಂಬ ಸುಸ್ತಾಗಿದ್ದೆ. ಅಲ್ಲಿಂದ ಬಸ್ಸು ಹೊರಟ ಕೆಲವೇ ನಿಮಿಷಗಳಲ್ಲಿ ಹೊಟ್ಟೆ ತೊಳಲಿಟ್ಟು ಜೋರು ವಾಂತಿಯನ್ನು ಮಾಡಿಕೊಳ್ಳುವಂತೆ ಮಾಡಿತು. ನಿರ್ವಾಹಕನಿಗೆ ವಿನಂತಿಸಿ ಬಸ್ಸಿಂದ ಇಳಿದು ಮನಸಿಚ್ಛೆ ಹೊಟ್ಟೆಯೊಳಗಿನ ತಿಂದ ಅನ್ನವನ್ನೆಲ್ಲ ಕಕ್ಕಿ-ಕಕ್ಕಿ ಹೊರ ಹಾಕಿ ತುಸು ನಿರಾಳನಾಗಿ ಮತ್ತೆ ಬಸ್ಸಲ್ಲಿ ಬಂದು ಕುಳಿತೆ. ಅಷ್ಟರಲ್ಲಿ ನಿರ್ವಾಹಕ ಮತ್ತು ನನ್ನ ನಡುವೆ ಪರಿಚಯ ಬೆಳೆದಾಗಿತ್ತು. ಅವನು ಸಹ ನೀವು ಅಷ್ಟು ದೂರದಿಂದ ಬಂದವರು, ಇವತ್ತು ನೀವು ಆ ದೂರದ ಊರಿಗೆ ಹೋಗುವುದು ಕ್ಷೇಮವಲ್ಲ. ಇಲ್ಲಿಯೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಒಂದು ಹೊಟೇಲ್ ನಲ್ಲಿ ಉಳಿದುಕೊಳ್ಳಿ. ಆಮೇಲೆ ಬೆಳಿಗ್ಗೆ ಇಲ್ಲಿಂದ ಹೊರಡಿ ಎಂದು ಹೇಳಿದ. ನಿಶ್ಯಕ್ತನಾಗಿದ್ದ ನಾನು ಅವರಿಗೆ ಧನ್ಯವಾದ ಹೇಳಿ ಕುಳಿತುಕೊಂಡೆ. ಸಮಯ ಬಹುಶಃ ರಾತ್ರಿ ಎಂಟು ಗಂಟೆ. ಬಸ್ಸಿಂದ ಇಳಿದ ತಕ್ಷಣ ಮತ್ತದೇ ವರಸೆ. ಮತ್ತೊಮ್ಮೆ ಬಿರುಸಾಗಿ ವಾಂತಿ ಮಾಡಿಕೊಂಡೆ. ಇತ್ತ ಶರೀರ ನಿಶ್ಶಕ್ತಿಂದ ಯಿಂದ ಬಲಹೀನವಾಗಿಬಿಟ್ಟಿತ್ತು.
ಆವತ್ತು ಜೀವನದ ಮತ್ತೊಂದು ಮುಖದ ದರ್ಶನವಾಗಿತ್ತು. ಇದಕ್ಕಿಂತ ಮೊದಲು ಹಲವಾರು ಬಾರಿ ಇಂತಹ ದರ್ಶನಗಳು ಆಗಿದ್ದರೂ ಆವತ್ತಿನದು ಮಾತ್ರ ಆಳವಾಗಿ ಮನಸ್ಸನ್ನು ಬೇಧಿಸಿ, ಸೀಳಿ-ಸೀಳಿ ತುಣಕು-ತುಣಕಾಗಿಸಿತ್ತು. ಸ್ವಾದಿಸಿದಾಗ ರುಚಿ ಹೀನವೆನಿಸುವ ಒಡೆದ ಹಾಲಿನಂತಹ ಮನಸ್ಸನ್ನು ಎಷ್ಟೇ ತಿರುವು ಮುರುವಾಗಿ ಆಸ್ವಾದಿಸಿದರೂ ರುಚಿಕಟ್ಟಾದ ಒಂದು ಧನಾತ್ಮಕ ಭರವಸೆಯುಕ್ತ ಭಾವನೆಯನ್ನು ಹುಟ್ಟು ಹಾಕಲೇ ಇಲ್ಲ. ನಿಗೂಢ ಸುಪ್ತ ದುಃಖದ ಮಡುವಿನಲ್ಲಿ ಬಂದು ಕೇಂದ್ರಿಕೃತವಾದ ಮನ, ನನ್ನನ್ನು ಗಾಢವಾಗಿ ಕಷ್ಟದ ಕೂಪಕ್ಕೆ ತಳ್ಳಿ ಬಿಟ್ಟಿತ್ತು. ದುಃಖದ ತೀವ್ರವಾದ ತುತ್ತ ತುದಿಯ ಅಂಚಿನಲ್ಲಿ ಹೋಗಿ ಕುಳಿತು ಹಠಕ್ಕೆ ಬಿದ್ದ ಮಗುವಿನಂತೆ ಸಮಾಧಾನದ ಪರಿಧಿಗೆ ಮರಳದೆ ಸತಾಯಿಸಿತ್ತು. ಏನಾದರೂ ಮಾಡಿ ಆ ಒಂದು ಪ್ರಪಂಚದಿಂದ ಹೊರ ಬಂದು ಒಂದೊಳ್ಳೆ ಮನಸ್ಥಿತಿಯನ್ನು ನನ್ನಲ್ಲಿ ಪ್ರತಿಷ್ಠಾಪಿಸಿ ಉಲ್ಲಾಸಗೊಳ್ಳಬೇಕೆಂದು ಪರಿತಪಿಸಿದೆ. ಎಲ್ಲ ಪ್ರಯತ್ನಗಳು ಹೊಳೆಯಲ್ಲಿ ಹುಣಸೆ ತೊಳೆದಂತೆ ಅಪ್ರಯೋಜಕತೆಯನ್ನು ಪಡೆದು ಮತ್ತೆ ನನ್ನನ್ನು ಎಲ್ಲಿದ್ದೆನೋ ಅಲ್ಲಿಗೆ ತಂದು ನಿಲ್ಲಿಸಿದವು.
ಒಡೆದು ಚೂರು ಚೂರಾದ ಮನಸ್ಸಿನಲ್ಲಿ ನನ್ನ ಹಲವಾರು ದ್ವಂದ್ವಗಳು ಕಿರಾತಕನಂತೆ ಇಣುಕಿ ನನ್ನನ್ನು ಮೂದಲಿಸುತ್ತಿದ್ದವು. ಇತ್ತ ಮೈ ಮನ ದೊಡ್ಡ ಚಿಂತನಾ ಪರ್ವತವನ್ನು ಶಿರದ ಮೇಲೆ ಹೊತ್ತುಕೊಂಡು ಜಡತ್ವಕ್ಕೆ ಸೋತು ಸುಣ್ಣವಾಗಿದ್ದವು. ಹೆಗಲಿಗೆ ಹಾಕಿಕೊಂಡಿದ್ದ ಬ್ಯಾಗು ಹಾಗೆಯೇ ನನ್ನ ಹಿಡಿತದಿಂದ ವಿಮೋಚನೆಗೊಂಡು ಬೆನ್ನಿನಗುಂಟ ಕೆಳಗೆ ಜಾರುಬಂಡೆಯಲ್ಲಿ ಜಾರಿ ಕೆಳಗಿಳಿವ ಪುಟ್ಟ ಮಗುವಿನಂತೆ ಕೆಳಗೆ ಜಾರಿ ಬಿದ್ದಿತು. ಒಂದು ಕ್ಷಣ ಬಿದ್ದ ಬ್ಯಾಗನ್ನು ಎತ್ತಿ ಹೆಗಲಿಗೆ ಹಾಕಿಕೊಳ್ಳಲೂ ಆಗಲಿಲ್ಲ. ಅನಿವಾರ್ಯವಾಗಿ ಹಾಳಾದ ಅನಿಷ್ಟ ಬ್ಯಾಗು ಪ್ರಾಣ ತಿನ್ನುತ್ತೆ, ಬಡಪಾಯಿಗೆ ನಾನೆ ಮಾಲಿಕ ಅಲ್ಲವೆ? ಪಾಪ ಎತ್ತಿಕೊಳ್ಳದಿದ್ದರೆ ಈ ದೂರದೂರಿನ ಬಸ್ ತಂಗುದಾಣದಲ್ಲಿ ಅನಾಥವಾಗಿ ರಾತ್ರಿ ಎಲ್ಲ ಬಿದ್ದು ಬಿಡಬೇಕಾಗುತ್ತೆ ಎಂದು ನೆನೆಯುತ್ತ ಒಮ್ಮೆ ನನ್ನ ಅನಾಥ ಪ್ರಜ್ಞೆಯನ್ನು ಅದರ ಮೇಲೆ ವರ್ಗಾಯಿಸಿ ಬಿಟ್ಟೆ. ಹೆಣಗಾಡುತ್ತಲೇ ಎತ್ತಿ ಬ್ಯಾಗನ್ನು ಹೆಗಲಿಗೆ ಸಿಕ್ಕಿಸಿಕೊಂಡು ಬಸ್ ನಿಲ್ದಾನದ ಒಂದು ಅಂಕಣದ ಕಟ್ಟೆ ಮೇಲೆ ಬಂದು ಕುಳಿತೆ.
ಸ್ವಲ್ಪ ನೆಮ್ಮದಿ ಅನಿಸಿತು. ಮನಸ್ಸು ಆ ಒಂದು ಪರಿಧಿಯಿಂದ ಹೊರ ಬಂದು, ಒಂದಿಷ್ಟು ಜೀವನದ ತತ್ವಾತತ್ವಗಳ ತುಲನೆಯಲ್ಲಿ ತೊಡಗಿತು. ಖಿನ್ನವಾಗಿ ದುಖಕ್ಕೆ ಶರಣಾದ ಮನಸ್ಸಿಗೆ ಬಸ್ಸು ತಂಗುದಾಣದಲ್ಲಿ ಓಡಾಡುತ್ತಿದ್ದ ಜನಗಳು ಕ್ರಿಮಿ-ಕೀಟ ಹರಿದಾಡುವಂತೆ ಭಾಸವಾದರು. ಹಾಗೆಯೇ ನಿರ್ಭಾವುಕತೆಯಿಂದ ಜನರನ್ನು ನೋಡುತ್ತ ಜಗುಲಿಯ ಗೋಡೆಗೆ ಒರಗಿ ಕುಳಿತುಕೊಂಡು ಬಿಟ್ಟೆ. ಮನುಷ್ಯ ನೀ ಏನೇ ಆಗು, ಮೊದಲು ಮನುಜ ಜೀವ ಸಂಕುಲದ ಪ್ರೀತಿ ವಾತ್ಸಲ್ಯಗಳ ಒಳಗೆ ಯಾವಾಗಲೂ ಬಂಧಿಯಾಗಿರು. ಈ ಮಾನವೀಯ ಸಂಬಂಧಗಳಾಚೆ ಅಹಂ ಕೋಟೆಯನ್ನು ಮನದಲ್ಲಿ ಕಟ್ಟಿ ಅದರಲ್ಲಿ ನೀ ಬದುಕಬೇಡ. ನಿನ್ನದೇ ಆದ ಹತ್ತಿರದ ಯಕಃಶ್ಚಿತ ಒಂದು ಜೀವ ನಿನ್ನ ಜೊತೆಗಿರಲಿ. ನಿನ್ನ ಭಾವಂತರಂಗದ ಭಾವದಲೆಗಳ ಏರಿಳಿತ ಮತ್ತು ತವಕ-ತಲ್ಲಣಾದಿಗಳನ್ನು ಅರಿಯುವ ಜನ್ಮ ನಿನ್ನ ಜೊತೆಯಿರಲಿ. ಇಲ್ಲವಾದರೆ ಕೊನೇಪಕ್ಷ ಹತ್ತಿರದ ನಂಟಿನೊಂದಿಗೆ ಸಂಪರ್ಕದಲ್ಲಾದರೂ ಇರಲಿ. ಮನುಷ್ಯರಾದ ನಾವು ಮನುಷ್ಯ ಬಂಧದಾಚೆ ಬದುಕಲು ಅಸಾಧ್ಯ. ಭಾವ ಬಂಧದ ಸಂಬಂಧಗಳ ಕೊಂಡಿಯೊಳಗೆ ಬಂಧಿಸಿದ ಜೀವಗಳು ನಾವು. ಹೀಗೆ, ನನ್ನ ಹಾಡು ನನ್ನದು, ನನ್ನ ಭಾವ ನನ್ನದು, ನನ್ನ ಕೊರಳ ದನಿಯು ನನ್ನದು, ನನ್ನ ಶ್ರೋತೃ ಕರ್ಣ ನನ್ನದು, ನಿನ್ನದು ನಿನ್ನದು ನಾನು ನೀಡುವ ನೋವು ವೇದನೆಯಷ್ಟೇ ನಿನ್ನದು ಎನ್ನುತ್ತಿತ್ತು ಮನಸ್ಸು. ಮನಸ್ಸೆಂಬ ಮಾಯೆಯ ಗೆಜ್ಜೆನಾದಕ್ಕೆ ಗಿರ್ರನೆ ತಿರುಗಿ ಬಿದ್ದು ನನ್ನೊಳಗೆ ನನ್ನನ್ನು ಕಳೆದು ಕೊಂಡಿದ್ದೆ.
ಜೀವನಕ್ಕೆ ಅತ್ಯಂತ ಭಯಾನಕ ದುಸ್ವಪ್ನಗಳೆಂದರೆ- ಏಕಾಂಗಿತನ, ಬಡತನ ಮತ್ತೊಂದು ದಾರಿದ್ರ್ಯ. ಯಾರದಾದರೂ ಜೀವನದಂಗಳಕ್ಕೆ ಈ ಮೂರು ಒಂದೇ ಬಾರಿ ಒಕ್ಕರಿಸಿಕೊಂಡರೆ ಆ ಬದುಕಿಗೆ ಎದ್ದು ನಿಲ್ಲಲು ಮತ್ತೊಂದು ಅವಕಾಶ ದೊರಕುವದು ಕಷ್ಟ ಸಾಧ್ಯ. ಎಲ್ಲೋ ಒಂದೊಂದು ಸಂಘರ್ಷ ಜೀವಿಗಳು ಈ ಮೂರನ್ನು ಗೆದ್ದು ಮತ್ತೆ ಮೈ ಕೊಡವಿ ಎದ್ದು ನಿಲ್ಲುತ್ತವೆ. ಆದರೆ, ಎಲ್ಲರಿಗೂ ಈ ಮನೋಬಲವನ್ನು ಆ ದೇವರು ದಯಪಾಲಿಸಬೇಕಲ್ಲವೇ. ಹೀಗೆ ದೊಡ್ಡ-ದೊಡ್ಡ ತತ್ವಗಳನ್ನು ಭೋಧಿಸಲು ಶುರುವಿಟ್ಟುಕೊಂಡಿದ್ದ ಮನಸ್ಸನ್ನು ಒಮ್ಮೆ ಗೆದ್ದು ಹೊರ ಬಂದು ಸಮಯವನ್ನು ನೋಡಿದೆ, ಸರಿಯಾಗಿ ರಾತ್ರಿ ಒಂಬತ್ತು ಗಂಟೆ. ಒಂದು ಕ್ಷಣ ವಿಚಲಿತಗೊಂಡೆ. ಹೆದರಿ ಹೌಹಾರಿದೆ. ಆ ದೂರದ ಊರಿನ ಬಸ್ ತಂಗುದಾಣದಲ್ಲಿ ಕುಳಿತುಕೊಂಡು ಪ್ರಶ್ನಿಸಿಕೊಂಡೆ. ನಾನ್ಯಾರು ಈ ಊರಿನ ಬಂಧು ಬಾಂಧವರಿಗೆ? ಇಲ್ಲಿ ನನ್ನನ್ನು ಗುರ್ತಿಸಿ ಮಾತನಾಡಿಸುವರು ಯಾರು? ಅವರವರ ಧಾವಂತದಲ್ಲಿ ತಮ್ಮ ಮನೆಗಳನ್ನು ಸೇರಲು ದೌಡಾಯಿಸುತ್ತಿದ್ದವರು ಯಾಕೆ ನನಗೆ ಅಣ್ಣ- ತಮ್ಮ, ಅಕ್ಕ ತಂಗಿ, ಚಿಕ್ಕಪ್ಪ- ದೊಡ್ಡಪ್ಪ ಇನ್ನು ಏನೇನೋ ಆಗಿ ಬಂದು ನನ್ನನ್ನು ಮಾತನಾಡಿಸುತ್ತಿಲ್ಲ. ನೂರಾರು ಜನರ ಮಧ್ಯ ನಾನೇಕೆ ಪ್ರಾಣಿಯಂತೆ ಆದೆ. ಹೀಗೆ ಏನೇನೋ ನೆನೆಯುತ್ತ ಮನ ಮುಂದಿನ ಕಾರ್ಯಚರಣೆಯ ಹವಣಿಕೆಗೆ ಲಗ್ಗೆ ಇಟ್ಟಿತು.
ಸರಿ ಸುಮಾರು ಒಂದು ತಾಸಿನವರೆಗೂ, ಚಿತ್ತ ಪರದೆಯಲ್ಲಿ ಭಿತ್ತರಗೊಳ್ಳುತ್ತಿದ್ದ ಭಾವನೆಗಳಲ್ಲಿ ತಲ್ಲೀನನಾಗಿದ್ದವನಿಗೆ ಎದ್ದು ನಿಲ್ಲಲೂ ಶಕ್ತಿ ಇಲ್ಲದಂತಾಗಿತ್ತು. ತೀವ್ರ ವಾಂತಿಯಿಂದ ಬಳಲಿ ಬೆಂಡಾಗಿ ಹೋಗಿದ್ದೆ. ಹೇಗೋ ಕಷ್ಟಪಡುತ್ತಲೇ ಬಸ್ ನಿಲ್ದಾಣದ ಪಕ್ಕದ ಒಂದು ಆಸ್ಪತ್ರೆಗೆ ಹೋಗಿ ವೈದ್ಯರನ್ನು ಕಂಡೆ. ನನಗೆ ಗೊತ್ತಿತ್ತು, ನಾನು ಡಿಹೈಡ್ರೆಟ್ ನಿಂದ ಬಳಲಿ ಹೋಗಿದ್ದೇನೆಂದು. ವೈದ್ಯರು ಇವತ್ತು ಇಲ್ಲಿಯೇ ಅಡ್ಮಿಟ್ ಆಗಿ ಒಂದು ಗ್ಲೂಕೋಸ್ ಹಾಕಿಸಿಕೊಳ್ಳಿ, ಬೆಳಿಗ್ಗೆ ಹೊತ್ತಿಗೆ ಸರಿಹೋಗುತ್ತಿರಾ ಎಂದರು. ಹಾಗೆ ನನ್ನ ಪರಿಚಯವನ್ನು ಕೇಳುತ್ತಿದ್ದಂತೆಯೇ, ಅವರು ನನಗೆ ನಿಮ್ಮ ಕರ್ನಾಟದಲ್ಲಿ ಓದಿ ಬಂದಂತಹ ಒಬ್ಬ ವಿದ್ಯಾರ್ಥಿನಿ ನಮ್ಮ ಆಸ್ಪತ್ರೆಯಲ್ಲಿ “ಸ್ಟಾಫ್ ನರ್ಸ್” ಕೆಲಸ ಮಾಡುತ್ತಿದ್ದಾರೆ. ಈಗ ತಾನೇ ಡ್ಯೂಟಿ ಮುಗಿಸಿಕೊಂಡು ಮನೆಗೆ ಹೋದರು. ಬೇಕಾದರೆ ಕರೆ ಮಾಡಿ ಕರೆಯುತ್ತೇನೆ, ನೀವು ಮಾತನಾಡಿ ಎಂದರು. ನಾನು ಅವರ ಹೆಸರೇನು? ಎಂದೆ. ವೈದ್ಯರು. “ಉಷಾ ಪಟೇಲ್” ಅಂತ ಎಂದರು. ನನಗೆ ಎಲ್ಲಿಲ್ಲದ ಸಂತೋಷದ ಜೊತೆಗೆ ಹೆಮ್ಮೆ ಎನ್ನಿಸಿತು. ಉಷಾ ನನ್ನ ವಿದ್ಯಾರ್ಥಿನಿ ಆಗಿದ್ದಳು. ನಾನು ಹಿಂದೆ ಮುಂದೆ ಯೋಚಿಸದೆ ವೈದ್ಯರಿಗೆ "ಸರ್, ನಾನು ಕೆಲಸ ಮಾಡುತ್ತಿದ್ದ ಕಾಲೇಜ್ ನಲ್ಲಿಯೇ ಓದಿ ಬಂದವಳು ಉಷಾ. ಮೇಲಾಗಿ ನನ್ನ ವಿದ್ಯಾರ್ಥಿನಿ ಕೂಡಾ. ಇರಲಿ. ಅವರನ್ನೇನು ಇಲ್ಲಿಗೆ ಕರೆಯುವದು ಬೇಡ. ಕೇವಲ ನಂಬರ್ ಕೊಡಿ ನಾನೇ ಕಾಲ್ ಮಾಡುತ್ತೇನೆ" ಎಂದೆ. ವೈದ್ಯರು ತಕ್ಷಣ ನಂಬರ್ ಕೊಟ್ಟರು. ಕರೆ ಮಾಡಿ ಉಷಾ ಜೊತೆ ಮಾತನಾಡಿದೆ. ನಾನು ಹದಗೆಟ್ಟ ನನ್ನ ಆರೋಗ್ಯದ ಬಗ್ಗೆ ಹೇಳಿಕೊಳ್ಳದೆ ಔಪಚಾರಿಕವಾಗಿ ಮಾತನಾಡಿದೆ. ಈ ಮಧ್ಯ ನನಗೆ ಆ ಊರಿನ ಪಕ್ಕದಲ್ಲಿಯ ಒಂದು ಪುಟ್ಟ ಗ್ರಾಮದ ರಹವಾಸಿಯಾದಂತ ಮತ್ತೊಬ್ಬ ವಿದ್ಯಾರ್ಥಿಯ ಮೋಬೈಲ್ ನಂಬರನ್ನು ಉಷಾನಿಂದ ಪಡೆದೆ. ನಾನು ಕರೆ ಮಾಡಿ ಆ ನನ್ನ ವಿದ್ಯಾರ್ಥಿ “ವಿಜಯ್ ರಾಥೋಡ್” ಜೊತೆಗೆ ಮಾತನಾಡಿದೆ ನನ್ನ ನೈಜ ಪರಿಸ್ಥಿತಿಯನ್ನು ಬಚ್ಚಿಟ್ಟು. ಅವನು ತರಾತುರಿಯಲ್ಲಯೇ, ಸರ್ “ಡೊಂಟ್ ವರಿ ವಿಥಿನ್ ಆಫ್ ಅ್ಯನ್ ಅವರ್ ಐ ವಿಲ್ ಬಿ ದೇರ್ “ ಎಂದವನೇ ಫೊನ್ ಕಟ್ ಮಾಡಿದ. ನಾನು ಅವನಿಗೆ “ಜಸ್ಟ್ ಕಮ್ ಟು ದಿ ಬಸ್ ಸ್ಟಾಪ್” ಎಂದು ಟೆಕ್ಷ್ಟ್ ಮೇಸೆಜ್ ಹಾಕಿ ಆಸ್ಪತ್ರೆಯಿಂದ ಒಂದು ಇಂಜಕ್ಷನ್ ತಗೊಂಡು ಗ್ಲೂಕೋಸ್ ಪುಡಿ ಪೊಟ್ಟಣ ತೆಗೆದುಕೊಂಡು ಹೊರ ಬಂದೆ.
ಕಾಲುಗಳನ್ನು ತೆವಳಿಸಿಕೊಳ್ಳುತ್ತ ನಿತ್ರಾಣನಾಗಿ ಬಸ್ ನಿಲ್ದಾಣದ ಮುಂಬಾಗಿಲಲ್ಲಿ ಬಂದು ನಿಂತುಕೊಂಡೆ. ಇತ್ತ ವಿಜಯ್ ಬಂದವನೇ ಮನೆಗೆ ಕರೆದುಕೊಂಡು ಹೋದ. ಮನೆ ತಲುಪುತ್ತಿದ್ದಂತಯೇ ವಿಜಯ್ ನ ತಾಯಿ ನನಗೆಂದು ಒಂದು ಕೊಡಪಾನ ನೀರನ್ನು ಬಿಸಿ ಮಾಡಿ ಇಟ್ಟಿದ್ದರು. ಹೋದ ತಕ್ಷಣ ನಮಸ್ಕಾರಗಳನ್ನು ತಿಳಿಸುತ್ತ ಮನೆಯೊಳಗೆ ಪ್ರವೇಶಿಸಿದೆ. ತಾಯಿಯೂ ಸಹ “ನಮಸ್ತೆ ಆಯಿಯೆ” ಎನ್ನುತ್ತಲೇ ಮೊದಲು ಸ್ನಾನ ಮಾಡಿ ಬನ್ನಿ ಎಂದರು. ಇತ್ತ ನಾನು ಸ್ನಾನ ಮಾಡಿ ಬಂದೆ. ಬಂದ ನಂತರ ಚೂರು ನನ್ನ ವಿದ್ಯಾರ್ಥಿಗೆ ನನ್ನ ಪರಿಸ್ಥಿತಿಯನ್ನು ಹೇಳಿಕೊಂಡೆ. ಅವನು ಕೋಪಗೊಳ್ಳುತ್ತಲೇ “ಏನ್ ಸರ್ ನೀವು, ಆಗಲೇ ಹೇಳ ಬಾರದಿತ್ತೆ. ಇನ್ನಷ್ಟು ಆಸ್ಪತ್ರೆಯಲ್ಲಿ ತೋರಿಸಿಕೊಂಡು ಬರುತ್ತಿದ್ದೆವು” ಎಂದ. ನಾನು ಅವನಿಗೆ "ವಿಜಯ್, ಏನು ಬೇಡ ನಾನೀಗ ಮಲಗಿದರೆ ಸಾಕು ಅಷ್ಟೆ" ವಿಶ್ರಾಂತಿ ತೆಗೆದುಕೊಂಡರೆ ಎಲ್ಲವೂ ಸರಿ ಹೋಗುತ್ತೆ ಎಂದೆ. ಅವನು ಈ ವಿಷಯವನ್ನು ತನ್ನ ತಾಯಿಗೆ ಹೇಳಿದ. ಆ ತಾಯಿ ನನ್ನನ್ನು ತನ್ನ ಸ್ವಂತ ಮಗನಂತೆ ಬಂದು ಮಾತನಾಡಿಸಿ ಅದೇನೋ ವಿಶೇಷವಾದ ಅಡುಗೆ ತಯಾರಿಸಿ ಊಟಕ್ಕೆ ಬಡಿಸಿದರು. ಹದಗೆಟ್ಟ ಆರೋಗ್ಯ ಪರಿಸ್ಥಿತಿಯಲ್ಲಿಯೂ ಒಂದಿಷ್ಟು ಊಟ ಮಾಡಿ ಎದ್ದೆ.
ಇತ್ತ ಮಲಗಲು ತಯಾರಾಗುತ್ತಿದ್ದಂತೆಯೇ ನನ್ನ ಪರಿಸ್ಥಿತಿಗೆ ಹೊಲಸೆದ್ದು ಗಬ್ಬು ಹಿಡಿದಿದ್ದ ನನ್ನೆಲ್ಲ ಬಟ್ಟೆಗಳನ್ನು ಮತ್ತು ಬ್ಯಾಗ್ನಲ್ಲಿದ್ದ ಎಲ್ಲ ಧಿರಿಸುಗಳನ್ನು ತೆಗೆದುಕೊಂಡು ರಾತ್ರಿ ಸಮಯ ಎನ್ನದೇ ಆ ಮಹಾ ತಾಯಿ ತೊಳೆದು ಹಾಕಿದಳು. ನಾನು ಎಷ್ಟೇ ಒತ್ತಾಯ ಮಾಡಿದರೂ ಕೇಳದೆಯೇ ತನ್ನ ಸ್ವಂತ ಮಗನಂತೆ ಭಾವಿಸಿ ಝಳ-ಝಳ ಬಟ್ಟೆಗಳನ್ನು ತೊಳೆದು ಹಾಕಿ, ವಿಜಯ್ ಗೆ ಬೆಳೆಗ್ಗೆ ಎದ್ದ ತಕ್ಷಣವೇ ಬಟ್ಟೆಗಳನ್ನು ಇಸ್ತ್ರಿ ಮಾಡಿಕೊಡು ಎಂದು ತಾಕೀತು ಮಾಡಿದಳು. ವಿಜಯ್ ತಂದೆ ಬಂದು "ಇನ್ನಷ್ಟು ಹೊತ್ತು ಟಿ.ವಿ ನೋಡುತ್ತ ಕುಳಿತುಕೊಳ್ಳಿ, ಮತ್ತೆ ಏನಾದರೂ ತೊಂದರೆ ಎನ್ನಿಸಿದರೆ ಆಸ್ಪತ್ರೆಗೆ ಹೋಗೋಣ" ಎಂದರು. ಅವರ ಮಾತಿಗೆ ಒಪ್ಪಿ ಒಂದು ಹಾಲ್ ನಲ್ಲಿ ಟಿ.ವಿ ನೋಡುತ್ತಾ ಕುಳಿತುಕೊಂಡೆವು. ಆ ವಿಜಯ್ ನ ತಾಯಿ ನನ್ನ ಪಕ್ಕದಲ್ಲಿ ಬಂದು ಕುಳಿತು ಕ್ಷಣ-ಕ್ಷಣಕ್ಕೂ ನನ್ನ ಯೋಗ ಕ್ಷೇಮ ವಿಚಾರಿಸುತ್ತಿದ್ದರು. ಎಲ್ಲಕ್ಕಿಂತ ಮೇಲಾಗಿ ಅವರ ಕಣ್ಣುಗಳಲ್ಲಿ ಕಾಣುತ್ತಿದ್ದ ತುಂಬು ಪ್ರೀತಿ, ನನ್ನನ್ನು ಪದೇ ಪದೆ ಅವರತ್ತ ನೋಡುವಂತೆ ಮಾಡಿತು. ಮನಸ್ಸಲ್ಲಿ ಏನೋ ಒಂದು ಸುಂದರ ಅನುಭೂತಿ ನನ್ನನು ಕಾಡಿತು. ಒಂದಿಷ್ಟು ಕ್ಷಣ ಭಾವನಾತ್ಮಕ ಸುಳಿಯಲ್ಲಿ ಸಿಕ್ಕ ಮೀನು ನಾನಾದೆ. ಪ್ರಪಂಚದಲ್ಲಿ ನಾವು ಏನನ್ನಾದರು ಸಂಪಾದಿಸಬಹುದು. ಆದರೆ, ಯಾರೋ ನಮ್ಮವರಲ್ಲ ಎಂಬೆನ್ನುವವರ ಪ್ರೀತಿ, ವಿಶ್ವಾಸ, ಮಮತೆಯನ್ನು ಗಳಿಸುವದು ಖಂಡಿತವಾಗಿಯೂ ಕಷ್ಟದ ಕೆಲಸ. ದೇವರಲ್ಲಿ ಬೇಡಿಕೊಂಡೆ. “ಓ ದೇವರೇ, ಏನೇ ಕೊಡದಿದ್ದರು ಚಿಂತೆ ಇಲ್ಲ, ಜೀವನದಲ್ಲಿ ಈ ರೀತಿಯಾದ ಇನ್ನಷ್ಟು ತುಂಬು ಭಾಂದವ್ಯದಿಂದ ಕೂಡಿದ ಸಂಬಂಧಗಳನ್ನು ನನ್ನದಾಗಿಸು” ಎಂದು. ಮುಂದೊಂದು ದಿನ, ಯಾರಾದರೂ ನಿನ್ನ ಜೀವನದ ಸಾಧನೆ ಏನು ಅಂತ ಕೇಳಿದರೆ, ಎದೆ ತಟ್ಟಿಕೊಂಡು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ನನ್ನೆಲ್ಲ ಪ್ರೀತಿ, ವಿಶ್ವಾಸ, ಮಮತೆಯುಕ್ತ ಸಂಬಂಧಗಳು ಬೆಳದು ಚಾಚಿಕೊಂಡ ಉದ್ದಗಲಗಳನ್ನು. ಅವುಗಳ ಸವಿಸ್ತಾರಗಳನ್ನು. ಅವುಗಳ ಬೇರಿನ ಆಳವನ್ನು.
ಯಾವ ಜನ್ಮದ ಋಣಾನುಬಂಧವೋ ಆ ಮಹಾತಾಯಿಯಿಂದ ಸೇವೆ ಮಾಡಿಸಿಕೊಂಡು ಬಿಟ್ಟೆ. ಹೆತ್ತ ತಾಯಂದಿರೇ ಒಮ್ಮೊಮ್ಮೆ ತಮ್ಮ ಸ್ವಂತ ಮಕ್ಕಳ ಲಾಲನೆ-ಪಾಲನೆ ಮಾಡಲು ಬೇಸರ ವ್ಯಕ್ತಪಡಿಸುವ ಇವತ್ತಿನ ಅಧುನಿಕ ಯುಗದಲ್ಲಿ, ಆ ಮಹಾತಾಯಿ ಮಮತೆಯ ಧಾರೆಯನ್ನು ಹರಿಸಿದಳು. ಬೆಳಗಿನ ವರೆಗೂ ನಿದ್ರೆ ಮಾಡದೇ ಯೋಗಕ್ಷೇಮ ವಿಚಾರಿಸಿದಳು. ಎಷ್ಟೇ ಆದರೂ ನಮ್ಮ ಭಾರತದ ಮಣ್ಣಿನ ತಾಯಿ ಅಲ್ಲವೇ. ಇಂಥ ವಿದ್ಯಮಾನ, ಜೀವನ, ಪ್ರೀತಿ-ಮಮತೆಯ ಹಂಚಿಕೆ ನಮ್ಮ ಮಣ್ಣಲ್ಲಿ ಬಿಟ್ಟು ಬೇರೆ ಎಲ್ಲಿ ಸಿಕ್ಕಾವು? ರೋಗಿ ಅಥಿತಿಯಾಗಿ ಹೋಗಿ, ಅವರ ಮನ-ಮನೆಗೆ ಭಾರವಾಗಿ ಬಂದದ್ದು ಇವತ್ತಿಗೂ ನೆನಪಿನಲ್ಲಿದ್ದರೂ ಅದರ ಜೊತೆಗೆ ಅಮ್ಮನ ಪ್ರೀತಿ ಅದನ್ನು ಗೆದ್ದು ಕೇವಲ ಅವರ ಪ್ರೀತಿ, ವಾತ್ಸಲ್ಯದ ನೆನಪನ್ನು ಹೆಚ್ಚು ಭದ್ರವಾಗಿ ನೆನಪಿನ ಬುತ್ತಿಯಲ್ಲಿ ಮೃಷ್ಟಾನ್ನದಂತೆ ಉಳಿಸಿ ಬಿಟ್ಟಿದೆ. ನೆನೆದಾಗಲೆಲ್ಲ ಆ ಅಮ್ಮನ ಆವತ್ತಿನ ಪ್ರೀತಿ, ವಾತ್ಸಲ್ಯದ ಭೂರಿ ಭೋಜನವನ್ನು ಸವಿದು ಪುಳಕಗೊಳ್ಳುತ್ತೇನೆ.
ಇತ್ತ ನಾನು ಆವತ್ತು ಅಮ್ಮನ ಪ್ರೀತಿ ತುಂಬಿದ ಕಾಳಜಿಗೆ ಮನಸೋಲುತ್ತಲೇ ನನ್ನಲ್ಲಿ ದಾಳಿ ಇಟ್ಟು ಏಕಾಂಗಿತನವನ್ನು ಹುಟ್ಟು ಹಾಕಿದ ಭಾವನೆಗಳನ್ನು ಸಂಹಾರ ಮಾಡಿದೆ. ಎಲ್ಲ ದ್ವಂದ್ವಗಳಿಗೆ ಗುಜರಾತಿನ ಅಮ್ಮನ ಪ್ರೀತಿ ವಾತ್ಸಲ್ಯದಿಂದ ಉತ್ತರ ನೀಡಿದೆ. ಮೊನ್ನೆ ತಾನೆ ಮಾರ್ಚ್ ಎಂಟರಂದು ವಿಶ್ವ ಮಹಿಳೆ ದಿನಾಚರಣೆಯನ್ನು ಆಚರಿಸಿದ ನಾವು. ನನ್ನ ಈ ಲೇಖನ ಮಾಲೆಯನ್ನು ಆ ಅಮ್ಮನಿಗೆ ಅರ್ಪಿಸುವೆ. ಮಹಿಳೆ ಏನೇ ಆಗಲಿ, ಆದರೆ ಅವಳೊಂದು ಮಮತೆಯ ಕಲ್ಪತರು ಆಗಿರಲಿ. ಸ್ತ್ರೀ ಹಂಚುವ ಪ್ರೀತಿ- ಮಮಕಾರಗಳಿಗೆ ಜಗತ್ತೇ ತಲೆ ಬಾಗುತ್ತೆ. ಅಂತಹ ಮಹಾನ್ ಶಕ್ತಿ ನಮ್ಮ ಮಹಿಳೆಯರಲ್ಲಿ ಬತ್ತದ ಒರತೆಯಂತೆ ಎಂದಿಗೂ ಇರಲಿ.ನಮಗೆಲ್ಲ ಹೆಣ್ಣು ಕರುಳಿನ ವಾತ್ಸಲ್ಯ ಯಾವಾಗಲು ಸಿಗುತ್ತಿರಲಿ.
ವಿಶ್ವ ಮಹಿಳಾ ದಿನದ ಶುಭಾಶಯಗಳೊಂದಿಗೆ
-ಚಿನ್ಮಯ್ ಮಠಪತಿ
ಮನ ಕಲಕಿತು.
ಗಳಿಸಿಕೊಂಡ ಭಾವ ಬಾಂಧವ್ಯಗಳೇ ದೊಡ್ಡ ಗೆಲುವುಗಳು ಬದುಕಿಗೆ…
ಚಂದದ ಲೇಖನ…
ಆ ತಾಯಿಯ ಮತ್ತು ನಿಮ್ಮ ವಿದ್ಯಾರ್ತಿಯ ಹೃದಯ ದೊಡ್ಡದು.. ಮೇಲಾಗಿ ನೀವೂ ಸಹ ಅಂತ ವಿಶ್ವಾಸಕ್ಕೆ ಅರ್ಹ ವ್ಯಕ್ತಿ…ಭಾವನೆಗಳ ಮಹಾಪೂರ
ಜೀವನಕ್ಕೆ ಅತ್ಯಂತ ಭಯಾನಕ ದುಸ್ವಪ್ನಗಳೆಂದರೆ- ಏಕಾಂಗಿತನ, ಬಡತನ ಮತ್ತೊಂದು ದಾರಿದ್ರ್ಯ. ಯಾರದಾದರೂ ಜೀವನದಂಗಳಕ್ಕೆ ಈ ಮೂರು ಒಂದೇ ಬಾರಿ ಒಕ್ಕರಿಸಿಕೊಂಡರೆ ಆ ಬದುಕಿಗೆ ಎದ್ದು ನಿಲ್ಲಲು ಮತ್ತೊಂದು ಅವಕಾಶ ದೊರಕುವದು ಕಷ್ಟ ಸಾಧ್ಯ. ಎಲ್ಲೋ ಒಂದೊಂದು ಸಂಘರ್ಷ ಜೀವಿಗಳು ಈ ಮೂರನ್ನು ಗೆದ್ದು ಮತ್ತೆ ಮೈ ಕೊಡವಿ ಎದ್ದು ನಿಲ್ಲುತ್ತವೆ. ಈ ಸಾಲುಗಳು ಇಷ್ಟವಾದವು ಸರ್. ನಿಮ್ಮ ಚಿಂತನೆಗಳು ಉತ್ತಮವಾದವು. ಧನ್ಯವಾದಗಳು ಚಿನ್ಮಯ್ ಸರ್.
ಚಿನ್ಮಯ್ ಜೀ, ಎಂದಿನಂತೆ ಬರಹ ಸೊಗಸಾಗಿದೆ,
ಬದುಕು ಹೆಜ್ಜೆ ಹೆಜ್ಜೆಗೂ ಹೊಸ ಬಂಧಗಳ ಬೆಸೆಯುತ್ತದೆ, ಬದುಕನ್ನು ಗೆಲ್ಲಿಸುವುದು, ನೆನಪಾಗಿ ಜೊತೆಗುಳಿವುದು ಇಂತಹ ಬಂಧಗಳೇ…
ಅಲ್ಲಲ್ಲಿ ಗಾಢವಾಗುವ, ಅಲ್ಲಲ್ಲಿ ಕಥೆಯಾಗಬಹುದಾದ ಶೈಲಿಯ, ಮತ್ತೆ ಮತ್ತೆ ಓದಿಸಿಕೊಳ್ಳುವ ಸಾಲುಗಳ ನಿಮ್ಮ ಬರಹದ ಗಾಢತೆಗೆ ಶರಣು…
ಜೀವನಕ್ಕೆ ಅತ್ಯಂತ ಭಯಾನಕ ದುಸ್ವಪ್ನಗಳೆಂದರೆ- ಏಕಾಂಗಿತನ, ಬಡತನ ಮತ್ತೊಂದು ದಾರಿದ್ರ್ಯ
ಮನಸನ್ನು ಮುಟ್ಟುವ ಅನುಭವ ಹಾಗು ಬರಹ
ಆದರು ಬಡತನ ಹಾಗು ದಾರಿದ್ರ್ಯ ಒಟ್ಟಿಗೆ ಪ್ರಯೋಗವಾಗಿದೆ ಎರಡು ಒಂದೆ ಅರ್ಥಕೊಡುವ ಪದವಲ್ಲವೆ ಮೂರನೆಯವರು ಯಾರು ?
ನಮ್ಮ ''ಗುಜ್ಜ''ರ ಆ+ತ ಜನರೊಂದಿಗೆ ನಿಮ್ಮ ಪ್ರತಿ ಕ್ಷಣ ನಮ್ಮೊಂದಿಗೆ ಹಚ್ಕೊಂಡಿದ್ದಕ್ಕೆ ಧನ್ಯವಾದಗಳು