ಯಾಕೋ ಮನಸ್ಸು ಒಮ್ಮೊಮ್ಮೆ ಅಗಣಿತ ಮುಖವಾಡಗಳನ್ನು ಹಾಕುತ್ತದೆ. ಹಾಕಿ, ಜಗದ ಜನರ ಮುಂದೆ ಏನೆಲ್ಲ ತಾನೇ ಆಗಿ ಗಿರ್ರೆಂದು ತಿರುಗುವ ಬುಗುರಿಯ ಹಾಗೆ ತಿರುಗುತ್ತದೆ. ತುತ್ತೂರಿಯಾಗಿ ಏರು ದನಿಯಲ್ಲಿ ಕೂಗಿ, ಮಾರ್ದನಿಸಿ ಸದ್ದು ಗದ್ದಲೆಬ್ಬಿಸಿ ಒಳಮಾನಸದೊಳು ಭೀಮ ಅಲೆಗಳನ್ನು ಎಬ್ಬಿಸುತ್ತದೆ. ನೃತ್ಯ ಕಲಾ ಪ್ರವೀಣೆ ಚೆಂದುಳ್ಳಿ ಚೆಲುವೆ ನರ್ತಕಿಯಾಗಿ ಕುಣಿಯುತ್ತದೆ. ಬುಗುರಿಯಾಗಿ ಸುತ್ತಿ, ತುತ್ತೂರಿಯಾಗಿ ಕೂಗಿ, ನರ್ತಕಿಯಾಗಿ ಕುಣಿದು, ತಾನಷ್ಟೆ ಒಳ ಸುಖಿಸಿ, ಸ್ಖಲಿಸಿ ಎಲ್ಲವುಗಳನ್ನು ಅನುಭವಿಸುವ ಹಕ್ಕನ್ನು ತಾನೇ ಪಡೆದಿದ್ದರೆ, ಅದರ ಹಿಂದಿಂದೆಯೇ ಬಿಡಿಸಿಕೊಳ್ಳಲಾಗದ ಸೂತ್ರದಂತೆ ಗಟ್ಟಿಯಾಗಿ ಅಂಟಿಕೊಂಡು ಹಿಂಬಾಲಿಸುವ ನಮ್ಮ ದೃಢಕಾಯ ಮತ್ತು ಈ ಜೀವನಕ್ಕೇನು ವಿಪರ್ಯಾಸದ ಶಾಪ ತಟ್ಟುತ್ತಿರಲಿಲ್ಲ…!! ಹಿಡಿಯಲಾಗದ, ಕಾಣಲಾಗದ ಅಭೌತಿಕ ಗುಪ್ತಗಾಮಿನಿ ಅಭಿಸಾರಿಕೆಯಂಥ ಈ ಮನಸೆಂಬ ಮರೀಚಿಕೆಯ ಶೃಂಗಾರಕೆ ಹಾತೊರೆಯುವ ಜೀವಕೋಶ, ಅಂಗಾಂಗ…!! ಬಿಗಿಯಾಗಿ ತನ್ನೆದೆಯಾಳಕ್ಕೆ ಉಸಿರೆಳೆದು ಪಟ್ಟನೇ ಉಗುಳುವ ದುಃಖ ದುಮ್ಮಾನಗಳಿಗೆ ಬಸವಳಿದು ಬೆವರುರಿಸೋ ದೇಹ!! ಮೈ ಕೊಡವಿ ನುಲಿದು, ನಲಿದು, ಬಳಲಿ ಅಳಿಸುವ ಇಂವಗೆ ಇಷ್ಟೊಂದು ಬಲವಕೊಟ್ಟು, ಮೇಲೆ ಕುಳಿತು ನಗುವ ಶಿವನು ಎಂಬಿತ್ಯಾದಿಗಳ ಸೂತ್ರದಾರ. ಬಹುಶಃ ಗಹಗಹಿಸಿ ನಗುತ್ತಿರುತ್ತಾನೆ. ಈ ನಮ್ಮ ಮನವೃತ್ತದೊಳಗಿನ ಮರ್ಕಟ ಮನುಷ್ಯನ ಚೆಲ್ಲಾಟ, ಏಳಾಟ, ಬೀಳಾಟ, ಸೋಲಾಟ ಮತ್ತು ಗೆಲ್ಲಾಟಗಳನ್ನು ನೋಡಿ.
ಹೌದು..!! ಈ ಮನಸ್ಸೆಂಬ ಮಾಯೆಯ ಯಂತ್ರಕ್ಕೆ ತಗಲಾಕಿದ ಬೋಗಿಯಂತೆ ಜೀವನದುದ್ದಕ್ಕೂ ಸಾಗುವುದು ನಮ್ಮ ವ್ಯಾಮೋಹಿ ದೇಹ! ಒಳಗಿನ ಅರಿಷಡ್ವರ್ಗಗಳನ್ನು ತಣಿಸುವ ಸನ್ನಾಹದಲ್ಲಿ ತನ್ನ ಜೀವಿತಾವಧಿಯ ಎಲ್ಲ ಕಾಲಘಟ್ಟಗಳಲ್ಲಿಯೂ ಒಂದಲ್ಲ ಒಂದು ಕಸರತ್ತಿನಲ್ಲಿ ತಲ್ಲೀನವಾಗಿರುತ್ತದೆ. ಈ ಅಂತರದಲ್ಲಿ; ಕಳೆದುಕೊಳ್ಳುವದೆಷ್ಟೋ, ಉಳಿಸಿಕೊಳ್ಳುವದೆಷ್ಟೋ, ಬಯಸಿ ಹಾತೊರದವುಗಳು ಸಿಗದಾಗ ಒಳಗೊಳಗೆ ತೊಡುವ ವೇಷ ಭೂಷನಗಳೆಷ್ಟೋ…!! ಒಂದೊಕ್ಕೊಂದು ಮೈ ತಿಕ್ಕಾಡಿಸಿಕೊಂಡು ಸುಖಃದ ಸುಪ್ಪತ್ತಿಗೆಯಲ್ಲಿ ಉನ್ಮಾದಿಸಿ, ತಲ್ಲನಗಳ ತೀರದಲ್ಲಿ ವಿರಹಿಸುವ ದೃಷ್ಟಾಂತಗಳೆಷ್ಟೋ.!! ಸಮೂಹವಾಗಿ ಒಂದೇ ಪರಿಧಿಗೆ ಅಂಟಿಕೊಳ್ಳದೆ, ಸಹಸ್ರ ದಿಶೆಗೆ ಮೈ ಮನ ಚಾಚಿ ತೂರಿ ಹೋಗಿ ಅಂತರ್ ಪಿಶಾಚಿಯಂತೆ ತೇಲಾಡಿ ಮುಳುಗಿ ಏಳುವ ಈ ಮನಸಿನ ಮೇಲು-ಕೀಳಾಟದಲ್ಲಿನ ಮುಖಗಳೆಷ್ಟೋ..!!ಈ ಮಾರ್ಗವಾಗಿ ನನ್ನೊಳಗಿನ ಸೂಪ್ತಮನಸ್ಸು ಆವತ್ತು ತನ್ನ ಹರಿವಿನ ಉದ್ದಗಲಗಳನ್ನು ಅಳೆಯಲು ತಾನೇ ಪರೀಕ್ಷಕನಾಗಿ ನಿಂತಿತ್ತು. ಅಳೆಯವು ಮಾಪನ, ತೂಗುವ ತಕ್ಕಡಿ, ಕೂಡಿ ಗುಣಿಸಲು ಸಂಖ್ಯಾ ಶಾಸ್ತ್ರವನ್ನು ಸಂಪಾದಿಸಲಾಗದೆಯೇ ಮತ್ತೇ ಬಂದ ದಾರಿಗೆ ಸುಂಕವಿಲ್ಲವೆಂದರಿತು, ಸಹಜ ಸ್ಥಿತಿಗೆ ಮರಳಲು ಹೊರಟು ನಿಂತಿತು.
ಪಾಪ …, ಮೂರ್ಖ ಮನಸ್ಸಿಗೆ ತನ್ನ ತಾ ಕಾಣಲು ತನ್ನಿಂದಲೇ ಅಸಾಧ್ಯವೆಂಬುದು ಗೊತ್ತೇ ಇರಲಿಲ್ಲ.!! ಜಗತ್ತನ್ನು ಕಾಣುವ ಕಣ್ಣುಗಳಿಗೆ ತಮ್ಮನ್ನು ತಾವು ಕಾಣಲು ಮತ್ತೊಂದು ದರ್ಪಣ ಅದರೆದುರಿಗೆ ಬಂದು ಬೆತ್ತಲಾಗಿ ನಿಂತಾಗ ತಾನೇ ತಮ್ಮ ತಾ ಕಾಣಲು ಸಾಧ್ಯ ಆ ನಯನಗಳಿಗೆ. ಈ ಎಲ್ಲರನ್ನು,ಎಲ್ಲವನ್ನು ಇದ್ದಂತೆಯೇ ಎದೆಗೆ ಒದ್ದ ಹಾಗೆ ಬಿಂಬಿಸುವ ಈ ದರ್ಪಣವೇನು ಅಂತಿಮ ದರ್ಶಕವೇ? ತನ್ನ ನಗ್ನ ದೇಹದ ಉಬ್ಬು ತಗ್ಗಿರದ ನುಣುಪಾದ ಸೌಂದರ್ಯದಾಯಕ ಶ್ವೇತ ಕಾಯ ಕಾಣಲು, ಮತ್ತೊಬ್ಬ ದರ್ಪಣ ಇವನ ಮುಂದೆ ಬಂದು ನಿಲ್ಲಲೇ ಬೇಕು..! ಈ ಮಾರ್ಗವಾಗಿ ಚಿಂತನಾ ಲಹರಿ ನಸುಕಿನ ಐದು ಗಂಟೆಯಿಂದಲೇ ಚಿತ್ತಲೋಕದಲ್ಲಿ ಹಾವಳಿ ಎಬ್ಬಿಸಿತ್ತು. ಹತ್ತಿರದ ಯಾವದೋ ದೇವಸ್ಥಾನದಿಂದ ಪ್ರಸಾರವಾಗುತ್ತಿದ್ದ ಭಕ್ತಿ ಗೀತೆಗಳ ಜೋರ ಸದ್ದು ನಿದ್ರೆಯಿಂದ ನನ್ನನ್ನು ಬಡಿದೆಬ್ಬಿಸಿತ್ತು. ದೇವರನ್ನು ಭಕ್ತಿ ಗೀತೆಯಲ್ಲಿ ಹಾಡಿ ಹೊಗಳುತ್ತಿದ್ದ ಆ ದನಿ ಯಾವ ಪುಣ್ಯಾತ್ಮ ಗಾಯಕನದೋ, ನನ್ನ ಪಾಲಿಗೆ ದೇವರ ಪದ ಎನ್ನುವ ಆ ಭಕ್ತಿ ಭಾವಕ್ಕಷ್ಟೇ ಸ್ವಲ್ಪ ಕಣಿಕರ ಇತ್ತು, ಆದರೇ, ರಾಗ ತಾಳಕ್ಕೆ ತಕ್ಕಂತೆ ಏರು ಸ್ವರಕ್ಕೇರಿ, ಇಳಿ ಸ್ವರಕ್ಕೆ ಸರ್ರೆಂದು ಇಳಿಯುತ್ತಿದ್ದ ವಯ್ಯಾರದಿಂದ ನುಲಿಯುವ ಹದಿನೆಂಟರ ಕನ್ನಿಕೆಯಂಥ ಅವನ ದನಿ ನನ್ನ ಗ್ರಹಿಕೆ ಹಂದರಿನಲ್ಲಿ ಮಾತ್ರ ನಿರ್ಜೀವಾಗಿ ಶವದಂತೆ ಭಾಸವಾಗಿ ಶೂನ್ಯ ಪ್ರಯೋಜನವನ್ನಷ್ಟೇ ಗಳಿಸಿತ್ತು. ಅರ್ಥವಾಗದ ಭಾಷೆಯ ಭಾವ ಬಡಿವಾರಗಳನ್ನು ಅರಿಯುವ ಅನಿವಾರ್ಯತೆಯೂ ನನ್ನ ಬುದ್ಧಿಮತ್ತೆಗೆ ಇರಲಿಲ್ಲ. ಈ ಕಾರಣದಿಂದ ಉದಾಸೀನತೆಯ ಮೋಡಗಳನ್ನು ಮನ, ತನ್ನ ಮೈಮೇಲೆ ಎಳೆದುಕೊಂಡು ಬಾಹ್ಯ ಸದ್ದಿಗೆ ಓಗೊಡದೆಯೇ ತನ್ನೊಳಗೆ ತನ್ನ ತಾ ಕಾಣುವ ತವಕದಲ್ಲಿ ತೆವಳುತ್ತಿತ್ತು.
ಹಣ್ಣು ಹಂಪಲಾದ ಮುದುಕಿಯ ಮುಖದ ಮೇಲಿನ ಗೆರೆಗಳಂತೆ, ನನ್ನ ಮನವದನದ ಮೇಲ್ಪದರು ಹಾಗೂ ಒಳಪರಾದಿಯಾಗಿ ಲೆಕ್ಕ ಹಾಕವಾಗದಷ್ಟು ಗೀರುಗಳು ಬೆಳೆದು,ಆವತ್ತು ಮನಮುಖದ ರೂಪವನ್ನೇ ವಿಕಾರಗೊಳಿಸಿದ್ದವು. ಅದೇಕೋ ಬೆಳ್ಳಂ ಬೆಳಿಗ್ಗೆಯೇ ಆ ಸೂರ್ಯ, ಗಾಢ ಶೆಖೆಯನ್ನು ಜೊತೆಗೆಯೇ ಹೊತ್ತು ವೈರಿಯನ್ನು ಕುರಿತು, ನಿನ್ನನ್ನು ಕೆಂಡ ಸುರಿಸಿ ಸುಟ್ಟು ಹಾಕಿ ಬಿಡುವೆ ಎನ್ನುವಂತೆ ಮೂಡಣದಿಂದ ಮೇಲೇರಿ ಬರುತ್ತಿದ್ದ. ಪೂರ್ವಕ್ಕೆ ಕಾಲು ಚಾಚಿ ಎತ್ತರದೊಂದು ಮಂಚದ ಮೇಲೆ ಮಲಗಿದ್ದ ನಾನು, ಎದುರಿಗಿನ ಕಿಟಕಿಯನ್ನು ತೆರೆದುಕೊಂಡು ಮೆತ್ತನೆಯ ಹಾಸಿಗೆಯಲ್ಲಿ ಬಿದ್ದುಕೊಂಡಿದ್ದೆ. ಇಡೀ ರಾತ್ರಿ ತಂಗಾಳಿಯನ್ನು ಬರಸೆಳದು ನನ್ನ ಕೊಠಡಿಗೆ ತಂಪು ಬುಂಬಿದ್ದ ಆ ಕಿಟಕಿ, ಮುಂಜಾವಲಿ ರಾತ್ರಿ ಕೊಡಮಾಡಿದ ಉಪಚಾರಕ್ಕೆ ಪ್ರತಿಫಲ ಆಕ್ಷೇಪಿಸುತ್ತಿದ್ದಂತೆ ಕಂಡಿತು. ತೆರೆದ ಆ ಕಿಟಕಿಯಿಂದ ನೇಸರನ ಚುರ್ರೆನಿಸುವ ಕ್ಷಿಪ್ರ ಕಿರಣಗಳು ನನ್ನ ಮುಖವನ್ನು ಅಡರಿದವು. ಒಮ್ಮೆ ಕುಪಿತನಾದ ನಾನು, ಆ ಉದಯರವಿಗೆ ಮುಂಜಾನೆಯ ನಮನವನ್ನು ಹೇಳಲೂ ಸಹ ಹಿಂಜರಿದೆ. ಅದ್ಯಾವ ಸಿಟ್ಟೋ ಈ ಭೂಪನಿಗೆ ! ಏಳು ಏಳುತ್ತಿದ್ದಂತೆಯೇ ಉರಿ ಮುಖವನ್ನು ಹೊತ್ತು ಬರುತ್ತಿದ್ದಾನೆ. ಎಂದು ಅಸಮಧಾನ ವ್ಯಕ್ತಪಡಿಸುತ್ತ “ಫಿಟಲ್ ಪೊಸಿಷನ್” ನಲ್ಲಿ ಗೂಡುಗಾಲು ಹಾಕಿಕೊಂಡು ಬಲಕ್ಕೆ ಒರಳಿ ಮಲಗಿದೆ. ಎದ್ದು ಕಿಟಕಿ ಮುಚ್ಚಿ ಮತ್ತೆ ಬಂದು ಮಲಗಬೇಕು ಎಂದೆನಿಸಿತು. ಆದರೆ, ಎದ್ದು ಗೋಡೆಯ ಕಿಟಕಿಯವರೆಗೂ ಹೋಗಲು ಮನಸ್ಸು ಬರಲೇ ಇಲ್ಲೆ. ಹಾಗೆಯೇ ಮತ್ತೆ ಏನೇನೋ ಎಣಿಸುತ್ತ ಹಾಸಿಗೆಯ ಮೇಲೆ ಅಡ್ಡಾಗಿ ಬಿಟ್ಟೆ.
ನನ್ನ ತಾತ್ಕಾಲಿಕ ಕಾಳಜಿ ತೆಗೆದುಕೊಳ್ಳುವದಾಗಿ ಒಪ್ಪಿಕೊಂಡಿದ್ದ ಪಟೇಲ್ ದಂಪತಿಯವರ ಮನೆಯ ಮುಂದನ ಕೊಠಡಿಯ, ಪ್ರಾಯಶಃ ಅದು ನನ್ನ ಆರನೇ ದಿನದ ವಾಸ್ತವ್ಯವಾಗಿರಬೇಕು. ಆವತ್ತು ನನ್ನಲ್ಲಿ ಸ್ವಾಭಿಮಾನವೆಂಬುವವ ನಿಧಾನವಾಗಿ ನಸುಕಿನಲ್ಲಿಯೇ ಎಚ್ಚರಗೊಂಡು ನನ್ನನ್ನು ಜಾಗೃತಗೊಳಿಸಿದ್ದ. ಇಲ್ಲಿಯವರೆಗೂ ಯಾರಿಗೂ ಹೊರಯಾಗದೇ ಬದುಕಿದ ಜೀವವೇ; ನಾಡಿನಿಂದ ದೂರ ನುಸುಳಿ ಬಂದು ಯಾರದೋ ಮನ-ಮನೆಗೆ ಭಾರವಾಗಬೇಡ ಎಂದಿತು. ತಟ್ಟನೆ ಜ್ಞಾನೋದಯವಾಗಿ, ಬಲು ತರಾ ತುರಿಯಲ್ಲಿಯೇ ಹಾಸಿಗೆಯಿಂದ ಎದ್ದು ಗಡಿ ಬಿಡಿಯಲ್ಲಿ ಹಲ್ಲು ಉಜ್ಜಿ ತಣ್ಣೀರಿನ ಸ್ನಾನಕ್ಕೆ ಮೊರೆ ಹೋದೆ. ಮೈಗೆ ಆವರಿಸಿಕೊಂಡಿದ್ದ ಮುಂಜಾನೆಯ ಶೆಖೆಯನ್ನು ತಣ್ಣಿರಿನಲ್ಲಿ ಹರಿಬಿಟ್ಟು ಸ್ನಾನ ಮುಗಿಸಿಕೊಂಡು ಹೊರ ಬಂದೆ. ಕೈಗೆ ಸಿಕ್ಕ ಅಂಗಿ ಪ್ಯಾಂಟ್ ನ್ನು ಸಿಗ್ಹಾಕಿಕೊಂಡು ಮುಖಕ್ಕೆ ಒಂದಿಷ್ಟು ಪೌಡರ್ ಸಿಂಪಡಿಸಿಕೊಂಡು, ಎಲ್ಲೋ ಹರಿಡಾಡುತ್ತಿದ್ದ ಮನಸ್ಸನ್ನು ಹೊತ್ತು ಕನ್ನಡಿ ಮುಂದೆ ಬಂದು ನಿಂತೆ. ನೀಳವಾಗಿ ಶೇವ್ ಮಾಡಿದ ಕೆನ್ನೆಗಳ ಪೌಡರ್ ಭರಿತ ಮುಖವು, ಮೋಡದ ಹಿಂದಿನ ಚೆಂದಿರನಂತೆ ಅಸ್ಪಷ್ಟವಾಗಿ ಮಂಜು ಮಂಜಾಗಿ ಕಾಣಿತು. ಚಂಚಲ ಮನಸ್ಸಿನ ಓಡಾಟಕ್ಕೆಲ್ಲ ಇತಿಶ್ರೀ ಹಾಡಿ, ಒಮ್ಮೆ ನನ್ನ ಮುಖದ ಸೌಂದರ್ಯ ಮತ್ತು ನೈಜ ಸ್ಥತಿಯನ್ನು ಕಾಣುವ ಹಂಬಲ ಮನಸ್ಸಿನ ಮತ್ತೊಂದು ಮೂಲೆಯಲ್ಲಿ ಕಸರತ್ತಿನ ವ್ಯಾಯಮ ನಡೆಸಿತ್ತು. ಒಳ ಮನಸ್ಸಿನ ಸಾವಿರ ಚಿಂತನೆಯ ಹರಿವಿನಲ್ಲಿ ಯೋಚನಾ ನೌಕೆಯನ್ನೇರಿ ವಿಚಾರಗಳು ಮಾನಸ ಸಾಗರದಲ್ಲಿ ಹುಟ್ಟಾಡಿಸುತ್ತಾ ಎಳೆದುಕೊಂಡು ಹೋಗುತ್ತಿದ್ದ ಸೆಳವಿಗೆ ಪ್ರತಿರೋಧ ತೋರದೆ ಹರಿವಿನ ಜೊತೆಗೆ ಮೆಲ್ಲನೆ ಸಾಗುತ್ತಿದ್ದವು. ಕೊನೆಗೂ ಮುಖವನ್ನು ಒಮ್ಮೆ ಉತ್ಕಷ್ಟ ಜಾಗೃತ ಚಿತ್ತದಿಂದ ಕಂಡು ಆನಂದಿಸಲಾಗಲೇ ಇಲ್ಲ. ವರ್ಣರಹಿತ ಚಿತ್ತ ಹಲಗೆಯ ಮೇಲೆ ಅತೀ ವರ್ಣರಂಜಿತ ಚಿಂತನೆಗಳು ರಂಗು ರಂಗಿನ ಚಿತ್ತಾರಗಳನ್ನು ಭಿತ್ತರಿಸುತ್ತಲೇ ಇದ್ದವು.
ಒಳಗಣ್ಣಿನಲ್ಲಿ ಅವುಗಳ ಚೆಂದಾದಿ, ಕೂರೂಪತನಗಳನ್ನು ಸವಿಯುತ್ತಲೇ, ಕನ್ನಡಿಯ ಸಂಗ ತೊರೆದು ಮುಂಬಾಗಿಲಿಗೆ ಬಂದೆ. ಸರ್ರೆಂದು ಜೋರಾಗಿ ಬಾಗಿಲ ಹಲಗೆಯನ್ನು ಎಳೆದೆ. ಬಾಗಿಲ ಸುಳಕಿನಲ್ಲಿ ಬಚ್ಚಿಕೊಂಡಿದ್ದ ವೈರಿ ಚಂಗನೆ ಮೇಲೆ ಎರಗುವಂತೆ, ಮುಂಜಾನೆಯ ಬಿಸಿಲಿನ ಛಾಯೆ ತಕ್ಷಣ ಕಣ್ಣುಗಳಿಗೆ ಆವರಿಸಿ ದೃಷ್ಟಿಯನ್ನು ಕತ್ತಲಿನಲ್ಲಿ ಮುಳುಗಿಸಿ ಬಿಟ್ಟಿತು. ಒಂದೈದು ನಿಮಿಷ ಮಸಕು, ಮಸಕಾಗಿಯೇ ಉಳಿದ ದೃಷ್ಟಿ, ಆಮೇಲೆ ಮಂಜು ಕರಗಿ ತಿಳಿ ಬೆಳಕನ್ನು ಹರಿಸಿದಂತೆ, ತನ್ನಡರಿಕೊಂಡಿದ್ದ ಮಸಕನ್ನು ಗೆದ್ದು ತಿಳಿಯಾಯ್ತು. ಆಮೇಲೆ ಅಲ್ಲೊಂದು ಇಲ್ಲೊಂದು ಅನಾಥವಾಗಿ ಬಿದ್ದಿದ್ದ ಸೊಕ್ಸ್ ಗಳನ್ನು ಎತ್ತಿಕೊಂಡು ಎರಡು ಪಾದಗಳನ್ನು ಸೊಕ್ಸ್ ಗಳಲ್ಲಿ ಇಳಿಸಿ ಕೊಠಡಿಯಿಂದ ಹೊರ ಬಂದೆ. ಎಳೆದ ಬಾಗಿಲು ಸದ್ದಿಗೆ ಎದುರ ಮನೆಯ “ದಾದಿ” ಮಾ ಹೊರ ಬಂದು ಬೊಚ್ಚು ಬಾಯಿಂದ ಕಿರು ನಗೆಯನ್ನು ನನ್ನೆಡೆಗೆ ತೇಲಿ ಬಿಟ್ಟಳು. ನಾನು ಆ ದಾದಿಮಾನ ನಗುವಿಗೆ ಮರು ಮಂದ ಹಾಸವನ್ನು ತೋರಿದೆನೋ ಇಲ್ಲವೋ ಎನ್ನುವುದು ಅರಿವಿಗೆ ಬರಲೇ ಇಲ್ಲ. ಹಾಗೆಯೇ ತೊದಲುತ್ತ ದಾದಿಮಾಗೆ “ ದಾದಿಮಾ ಜೀ ಮೈ ಥೋಡಾ ಗುಮನೆ ಜಾ ರಹಾ ಹೂಂ ಮಾರ್ಕೆಟ್ ಕಿ ತರಪ್”..!! ಎಂದೆ. ದಾದಿಮಾ. “ಚಲೋ ಭೇಟಾ, ಜಾ ಕೆ ಆವೊ”..!! ಎಂದು ಉಸುರಿದಳು. ಕಾಲಿಗೆ ಸರಿಯಾಗಿ ಹಾಕಿಕೊಳ್ಳದ ಬೂಟ್ ಗಳನ್ನು ತೋಳ ತನ್ನ ಬಾಲವನ್ನು ಎಳೆದೆಕೊಂಡು ಹೋಗುವಂತೆ ಎಳೆದೆಳೆದು ಸರಿ ಮಾಡುತ್ತಾ ತುಸು ಮುಂದೆ ಸಾಗುತ್ತಿದ್ದಂತೆಯೇ. ದಾದಿಮಾ ನಡುಗುವ ದನಿಯಲ್ಲಿ ಮತ್ತೊಮ್ಮೆ ಕೂಗಿ, “ಭೇಟಾ ಆಜ್ ಶನಿವಾರ್ ಹೈ ಪಹೇಲೆ ಹನುಮಾನ್ ಮಂದಿರ್ ಕೋ ಜಾವೊ, ದರ್ಶನ್ ಕರ್ನೆಕೆ ಬಾದ್ ಕಹಿ ಭಿ ಜಾವೋ ಗುಮ್ನೆ ಕೆ ಲಿಯೇ, ಭಗವಾನ್ ಅಚ್ಛಾ ಕರೆಗಾ ತುಝೆ” ಎಂದು ಕೂಗಿದಳು. ಮುಂದ ಹೆಜ್ಜೆ ಇಡುತ್ತಲೇ ಅರ್ಧ ತಿರುಗಿ “ಓ.ಕೆ ದಾದಿಮಾ ಮೈ ಜಾವುಂಗಾ ಆಪ್ ಚಿಂತಾ ಮತ್ ಕರೋ” ಎನ್ನುತ್ತಾ ಮುಂದೆ ಸಾಗಿದೆ.
ಮುಂದಾಲೋಚನೆ ಇಲ್ಲದ ಆ ತುಂಡು ಸುತ್ತಾಟಕ್ಕೆ ಹೆಜ್ಜೆ ಹಾಕುತ್ತಿದ್ದಾಗ ದಾದಿಮಾ ಮಾತಿಗೆ ಸಮ್ಮತಿಸಿ ಊರಿನ ಹನುಮಾನ್ ಮಂದಿರದೆಡೆಗೆ ಹೆಜ್ಜೆ ಬೆಳೆಸಿದೆ. ಊರಿನ ನಾಲ್ಕಾರು ರಸ್ತೆಯ ತಿರುವುಗಳನ್ನು ದಾಟಿ, ಮಂದಿರದ ಹತ್ತಿರಕ್ಕೆ ಬಂದೆ. ಕೈಯಲ್ಲಿ ಒಳ್ಳೆಣ್ಣೆಯ ಲೋಟಗಳನ್ನು ಹಿಡಿದುಕೊಂಡು ಜನರು ಬೆಳಗಿನ ಒಂಬತ್ತರ ಆಸು ಪಾಸಿನಲ್ಲೂ ದರ್ಶನದಲ್ಲಿ ತೊಡಗಿದ್ದರೂ. ಬಾಲ-ಬ್ರಹ್ಮಚಾರಿ ಶ್ರೀ ಹನುಮಾನ ಜೀ, ಸುತ್ತಲಿನ ತಾಂಬೂಲದೆಲೆಗಳ ನಡುವೆ ಬಲಗೈಯಿಂದ ಮೇಲಕ್ಕೆತ್ತಿದ ಗದೆಯನ್ನು ಹೆಗಲ ಮೇಲೆ ಹಾಕಿಕೊಂಡು, ಎಡಗೈಯಲ್ಲಿ ಸಂಜೀವಿನಿ ಪರ್ವತವನ್ನು ಎತ್ತಿ,ಕಾಲಲ್ಲಿ ಶನಿದೇವನನ್ನು ಬಿರುಸಾಗಿ ತುಳಿದು, ಇತ್ತ ಕಡೆಯಿಂದ ಗೋಚರಿಸುವ ಕೆನ್ನೆಯನ್ನು ಊದಿಕೊಂಡು ನಿಂತಿದ್ದ. ನಾನು ದೇವಸ್ಥಾನದ ಮುಂದಿನ ಒಂದು ಪುಟ್ಟ ಅಂಗಡಿಯಲ್ಲಿ ಖರೀದಿಸಿದ ಒಳ್ಳೆಣ್ಣೆ ಕರ್ಪೂರವನ್ನು, ಪೂಜಾರಿ ಕೈ ಗಿತ್ತು ಆಂಜನೇಯನಿಗೆ ಕೈ ಮುಗಿದು, ಗರ್ಭ ಗುಡಿಯನ್ನು ಸುತ್ತುತ್ತಿದ್ದವರನ್ನು ಕಂಡು, ಅವರ ಹಿಂಬಾಲಕನಾಗಿ ಐದು ಸುತ್ತೊರೆದ ನಂತರ ದೇವಾಸ್ಥಾನದಿಂದ ಹೊರ ಬಂದೆ. ಬರುತ್ತಿದ್ದಂತೆಯೇ, ಮನಸ್ಸು ಖಾಲಿ ಮಡೆಕೆಯಂತಾಗಿತ್ತು. ಎತ್ತ ಹುಟ್ಟಾಡಿಸಿದರೂ ಬರೀ ಕರ್ಕಶ ಶಬ್ಧವನ್ನು ಹೊರಡಿಸಿತು ಹೊರತು, ಯಾವದೇ ಪಕ್ವ ನಿರ್ದೇಶನವನ್ನು ನೀಡಲೇ ಇಲ್ಲ.
ಹೀಗೆ ದ್ವಂದ್ವಗಳ ಗೂಡಾಗಿ ಹೋಗಿದ್ದ ಮನಸ್ಸನ್ನು ಹೊತ್ತು ಕಾರಣ ರಹಿತ ಸಂಚಾರವನ್ನು ಮುಂದುವರೆಸಿದೆ. ಏನೋ ಯೋಚಿಸುತ್ತಲೇ ಕಿಸೆಯಲ್ಲಿನ ಜಂಗಮ ವಾಣಿಯನ್ನು ಕೈಗೆತ್ತಿಕೊಂಡು ಕಾಂಟ್ಯಾಕ್ಟ್ಸ್ ಲಿಸ್ಟನ್ನು ಒಮ್ಮೆ ಅದುಮಿ ತೆರೆದು “ಎ” ಇಂದ “ಝೆಡ್” ವರೆಗೂ ಕಣ್ಣಾಡಿಸಿದೆ. ಪಕ್ಕದೂರಿನ ವಾತ್ರಕ್ ಗ್ರಾಮದ ನನ್ನೊಬ್ಬ ವಿದ್ಯಾರ್ಥಿಯ ಹೆಸರು ತಟ್ಟನೇ ಮನಸ್ಸು ಸೆಳೆಯಿತು. ಅವನಿಗೆ ಕರೆ ಮಾಡಿ ನನ್ನದೇ ಯಾದ ವಾಸ್ತವ್ಯದ ವ್ಯವಸ್ಥೆಗೆ ಸಹಾಯ ಕೋರಿದೆ. ಅವನು ಧನಾತ್ಮಕವಾಗಿಯೇ ಉತ್ತರಿಸಿ, ಇನ್ನೊಂದೆರಡು ದಿನದಲ್ಲಿ ವ್ಯವಸ್ಥೆ ಮಾಡಿಕೊಡುವದಾಗಿ ಅಭಯ ನೀಡಿದ. ಅವನ ಮಾತಿಗೆ ಜೈ ಅಂದು ಮುಂದೆ ಸಾಗಿತು ನನ್ನ ಅನಿರ್ಧಿಷ್ಟ ಪಯಣ.
ಆವತ್ತು ಬೆಳಿಗ್ಗೆಯಿಂದಲೇ ಬಾಹ್ಯ ಲೋಕದ ಹಂಗನ್ನು ತೊರೆದು ತನ್ನೊಳಗೆ ತಾನೇ ಲೀನವಾಗಿದ್ದ ನನ್ನ ಮನಸ್ಸಿಗೊಂದು ಸಂಗಾತಿಯ ನೀಡಿ ಆ ಅಂತರ್ಗತ ತುಮುಲದಿಂದ ಹೊರತರಬೇಕು ಎನ್ನಿಸಿತು. ಆದರೆ ನನ್ನವರು ಎನ್ನುವಂತ ಗಟ್ಟಿ ಬಾಂಧವ್ಯದ ಜೀವ ಗುಜರಾತಿನಲ್ಲಿ ಇರಲಿಲ್ಲ. ಗೊತ್ತಿದ್ದ ಮೂವತ್ತು ನಲವತ್ತು ವಿದ್ಯಾರ್ಥಿಗಳು. ಆದರೆ, ಅವರ ಜೊತೆಗೆ ಹರಟೆ ಹೊಡೆಯುವದಾಗಲಿ ಅಥವಾ ಎಲ್ಲೇ ಮೀರಿ ಮಾತನಾಡುವದಾಗಲಿ ಮಾಡಲು ಆಗುವದಿಲ್ಲವೆಂದರಿತ ನಾನು, ಮತ್ತೊಂದು ಸುಂದರ ಸ್ನೇಹಕ್ಕಾಗಿ ಗುಜಯಾತಿನ ಮಣ್ಣಿಗೆ ಕೋರಿಕೆ ಇಟ್ಟಿದ್ದೆ. ಆ ಮೊದಲೇ ಒಂದೆರಡು ದಿನ ಹಿಂದೆ ಸಂಜೆ ವೇಳೆ ಪೇಟೆಯಲ್ಲಿ ಸುತ್ತಾಡಿಕೊಂಡು ಬರಲು ಹೋಗಿದ್ದ ನಾನು, ಪೇಟೆ ರಸ್ತೆಗಳನ್ನು ಸರಿಯಾಗಿಯೇ ಪರಿಚಯಿಸಿಕೊಂಡಿದ್ದೆ. ಆ ಪುಟ್ಟ ನಗರದ ಪೇಟೆಯನ್ನು ಜಾಲಾಡಲಾಗಿ ಎರಡೂ ವಿಧದ ಮಳಿಗೆಗಳನ್ನು ಬಿಟ್ಟು ಇನ್ನುಳಿದ ಎಲ್ಲ ಪ್ರಕಾರದ ಮಳಿಗೆಗಳು ಕಣ್ಣಿಗೆ ಬಿದ್ದಿದ್ದವು. ಪ್ರಾಣಿಗಳನ್ನು ಕತ್ತರಿಸಿ ನೇತಾಕಿಕೊಂಡು ಹಲ್ಲು ಕಿರಿದು ನಿಲ್ಲುವ ಕಟುಕನ ಮಾಂಸದಂಗಡಿ ಹಾಗೂ ಮದ್ಯದ ದೊರೆಯ ಸರಾಯಿ ಅಂಗಡಿಗಳು ಮಾತ್ರ ಆ ಊರಿನ ಪೇಟೆಯಲ್ಲಿ ಕಂಡಿರಲಿಲ್ಲ. ಇದನ್ನು ನೋಡಿದ ನನಗೆ ಮನಸ್ಸಲ್ಲಿ ಏನೋ ಒಂದು ಸುಂದರ ಅನುಭೂತಿ ಕಾಡಿತ್ತು.
ಇವತ್ತಿಗೂ ಗುಜರಾತ್ ನಾಡಿನಲ್ಲಿ ಸಾರಾಯಿಯ ಹಾವಳಿಯಿಲ್ಲ, ಮಾಂಸದ ವ್ಯವಹಾರವಿಲ್ಲ. ಈ ಎರಡನ್ನು ತೊರೆದು ಜನ ತಮ್ಮ ಬದುಕನ್ನು ಸಾಗಿಸುತ್ತಿದ್ದಾರೆ. ಸಮಾಜದ ಮುಖ್ಯವಾಹಿನಿಯಲ್ಲಿ ಸಂಪೂರ್ಣವಾಗಿ ಇವುಗಳು ಕುರುಹು ಇಲ್ಲವಾದರೂ, ತೆರೆಮರೆಯಲ್ಲಿ ಹೊರ ರಾಜ್ಯದಿಂದ ಕಳ್ಳಮಾರ್ಗವಾಗಿ ಸ್ವಲ್ಪ ಮಟ್ಟಿಗೆ ಇವುಗಳ ಸಾಗಾಣಿಕೆ ಇದೆ ಎಂಬ ಖಚಿತ ವಿವರವನ್ನು ನನಗೆ ಕ್ಷೌರಿಕ “ಚಮನ್ ಭೈ” ಹೇಳಿದ್ದ. ಯಾಕೋ ಎರಡೇ ದಿನದಲ್ಲಿ ಆ ಎಪ್ಪತ್ತರ ಹರೆಯದ ಪೈಜಂ ವಾಲಾ “ಚಮನ್ ಭೈ” ಮತ್ತು ನನ್ನ ನಡುವೆ ಒಂದು “ಸುವರ್ಣ ಸ್ನೇಹ ಸೇತು” ಹುಟ್ಟಿ ನನ್ನಲ್ಲಿ ಪುಟ್ಟ ಮಗುವಿನಂತೆ ತಪ್ಪು ಹೆಜ್ಜೆಗಳನ್ನು ಹಾಕುತ್ತ ಬೆಳೆದು ನಿಲ್ಲಲು ಹಪಹಪಿಸುತ್ತಿತ್ತು.ಆವತ್ತು ಸುಮ್ಮನೇ ಗೊತ್ತು ಗುರಿಯಿಲ್ಲದೆಯೇ ಸುತ್ತುತ್ತಿದ್ದ ನನ್ನೆಡೆಗೆ ಕಿರುನಗೆ ಬೀರಿ ನನ್ನನ್ನು ಚಮನ್ ಭೈ ಮತ್ತು ಅವನ ಸ್ನೇಹ ಆತನ ಕ್ಷೌರದಂಗಡಿ ಕಡೆಗೆ ಸೆಳೆದಿದ್ದವು.
ನಸುಕಿನ ಐದು ಗಂಟೆಯಿಂದ ಎಡಬಿಡದೆ ದಿಕ್ಕು ದೆಶೆಯಿಲ್ಲದೆಯೇ ಅನಾಥ ಪ್ರಜ್ಞೆಯ ಸುಳಿಯಲ್ಲಿ ಸುತ್ತುತ್ತಿದ್ದ ಮನಸ್ಸಿನ ಮನಧರೆಗೆ ಚಮನ್ ಭೈ ನೆನಪು ತುಂತುರು ಮಳೆಯಂತೆ ಅಮೃತ ವರ್ಷಿಣಿಯನ್ನು ಸುರಿಸಿತು. ಪೇಟೆಯಲ್ಲಿ ತಳ್ಳು ಅಂಗಡಿಯಲ್ಲಿನ ಚಹಾ ಕುಡಿಯುತ್ತ ಬೆಳೆಗ್ಗೆ ಒಂಬತ್ತರಿಂದ ಸಂಜೆ ನಾಲ್ಕರವರೆಗೆ ಹೀಗೆ ವಿನಾಕಾರಣ ಪೇಟೆಯ ರಸ್ತೆಗಳಲ್ಲಿ ಅರೆ ಹುಚ್ಚನಂತೆ ಸುತ್ತಾಡಿ ಬಿಟ್ಟಿದ್ದೆ.
ನಮ್ಮಿಬ್ಬರ ಸ್ನೇಹ ಪರ್ವಾದಿಗಳ ಬಗ್ಗೆ ವ್ಯವಹರಿಸುವದಕ್ಕಿಂತ ಮೊದಲು,ನನ್ನ ಮತ್ತು ಈ ಕ್ಷೌರ ವರ್ಗದ ಪರಿವಾರದೊಡನೆಯ ನಂಟಿನ ಕುರಿತು ಹೇಳುವ ಬಯಕೆ. ಈ ಕ್ಷೌರ ಕೆಲಸಗಾರ ಅಲ್ಲ ಉದ್ಯೋಗಗಾರನಿಗೂ ನನಗೂ ಎಲ್ಲಿಲ್ಲದ ಬಾಂಧವ್ಯ, ಅದ್ಯಾವ ಜನ್ಮದ ನಂಟೋ,ಬಾಲ್ಯದಿಂದಲೂ ನನಗೆ ಬೇಗನೆ ಹತ್ತಿರವಾಗಿ ಹತ್ತಿರದ ಸ್ನೇಹ ಬೆಳೆಸಿಬಿಡುವ ಜನಗಳೆಂದರೆ ಈ ವರ್ಗದ ಜನ. ಅದಕ್ಕೆ ಕಾರಣವು ಇಲ್ಲದಿಲ್ಲ. ಬಾಲ್ಯದ ದಿನಗಳಲ್ಲಿ ಕೈಗೆ ಕಾಸಿಡದೇ ಹೋಗು, ಕ್ಷೌರ ದೊಡ್ಡಪ್ಪ “ಶೇಖಪ್ಪ” ನ ಮನೆಗೆ ಹೋಗಿ ತಲೆಕೂದಲೂದಲು ಕತ್ತರಿಸಿಕೊಂಡು ಬಾ ಎಂದು ಪೋಷಕರು ತಳ್ಳಿದಾಗ, ಅವನ ಮನೆಗೆ ಹೋಗಿ ನೋಡಿದರೆ, ಅವನು ಇರುತ್ತಿರಲೇ ಇಲ್ಲ. ಒಂದು ತಗಡಿನ ಡಬ್ಬಿಯೊಳಗೆ ತನ್ನ ಸರಂಜಾಮಗಳನ್ನು ತುಂಬಿಕೊಂಡು ಬೆಳಗಿನ ಜಾವದಲ್ಲಿ ಆ ಕ್ಷೌರಿಕ ಶೇಖಪ್ಪ ಹಳ್ಳಿಯ ಎಲ್ಲ ಓಣಿಗಳಲ್ಲಿ ಒಂದು ಸುತ್ತು ತಿರುಗಾಡಿ ಬರುತ್ತಿದ್ದ. ಯಾರಾದರೂ ಅವನನ್ನು ಕ್ಷೌರ ಮಾಡಲು ಕರೆದರೆ ಸಾಕು, ಹಾದಿ ಬೀದಿಯ ಅಂಚುಗಳಲ್ಲಿಯೇ ತನ್ನ ಡಬ್ಬಿಯನ್ನು ತೆರೆದು, ತನ್ನ ಕುಂಡಿಕೆಳಗೊಂದು ಅಲ್ಲೆ ಎಲ್ಲೋ ಅನಾಥವಾಗಿ ಬಿದ್ದಿದ್ದ ಕಲ್ಲು ಚಪ್ಪಡಿಯನ್ನು ತಂದು ಇಟ್ಟುಕೊಂಡು ಡಬ್ಬಿಯಿಂದ ಕತ್ತಿ ಮಸೆಯುವ ಕಲ್ಲು ತುಕಡಿಗೆ ನೀರೊಯ್ದು. ಚರಾಚರಾ ಅಂತ ತನ್ನ ಕತ್ತಿಯನ್ನು ಆ ಕಲ್ಲು ತುಕಡಿಯ ಎದೆಗೆ ತಿಕ್ಕಿ ನುಣುಪಾಗಿ ಮಸೆಯುತ್ತಿದ್ದ. ಆಮೇಲೆ ಎದುರಿಗೆ ಕುಳಿತವನ ತಲೆಗೆ ಚೆನ್ನಾಗಿ ಕತ್ತಿನ ಗುಂಟ ಇಳಿಯುವ ಹಾಗೆ ತಲೆಗೆ ನೀರೊಡೆದು, ಕ್ಷಣಾರ್ಧದಲ್ಲಿಯೇ ನಮ್ಮಂತಹ ಹುಡುಗರ ತಲೆಯನ್ನು ಆ ದಿನಗಳಲ್ಲಿ ಹಿಂದೆ ಮುಂದೆ ಲೆಕ್ಕಿಸದೆಯೇ ಬೋಳಿಸಿ ಬಿಡುತ್ತಿದ್ದ. ಹೀಗೆ ನಾನು ಅವನನ್ನು ಹುಡಿಕೊಂಡು ಹೋದಾಗ ಸಿಗದೇ ಹೋದ ಸಮಯದಲ್ಲಿ ಆಕಸ್ಮಿಕವಾಗಿ ಅವರಮನೆಗೆ ನನ್ನಂತೆ ಕೇಳಿಕೊಂಡು ಹಿಂದಿನ ದಿನ ಹೋದವರು ಹಾದಿ ಬೀದಿಯಲ್ಲಿ ಎಲ್ಲಾದರೂ ಸಿಕ್ಕರೆ ಸಾಕು, ಅಲ್ಲಿಯೇ ತನ್ನ ಡಬ್ಬಿಯನ್ನು ತೆರೆದು ಕೇಶ ಮುಂಡನೆಗೆ ಸಜ್ಜಾಗಿ ಬಿಡುತ್ತಿದ್ದ. ಈ ರೀತಿಯಾಗಿ ನಿಸ್ವಾರ್ಥ ಸೇವೆಯನ್ನು ಬಾಬತ್ತಿನ ಲೆಕ್ಕದ ರೂಪದಲ್ಲಿ ಮಾಡುತ್ತಿದ್ದ ಅವನ ಕೆಲಸವನ್ನು ನಾನು ಸಿಕ್ಕಾಪಟ್ಟೇ ಇಷ್ಟಪಡುತ್ತಿದ್ದೆ.
ಆ ಗತ ಕಾಲದ ಮಾದರಿಯ ಕೇಶ ಮುಂಡನೆ ನೆನಪಾದಾಗಲೆಲ್ಲ ಮನಸ್ಸಲ್ಲಿ ಬಾಲ್ಯದ ದಿನದಲ್ಲಿ ದುಡ್ಡಿನ ಹಂಗನ್ನು ತೊರೆದು ಪ್ರೀತಿಯಿಂದ ತಲೆಗೆ ನೀರೊಯ್ದು ಕೇಶ ಮುಂಡನೆ ಮಾಡುತ್ತಿದ್ದ ಆ ಮಂದಿಯ ವಾತ್ಸಲ್ಯ ಭರಿತ ಉದ್ಯೋಗ ನೆನಪಾಗಿ, ಇವತ್ತಿನ ದಿನ ವ್ಯಾಪಾರವಾಗಿ ಹೋಗಿರುವ ಆ ವ್ಯವಹಾರವನ್ನು ಪ್ರಶ್ನಿಸುವಂತೆ ಮಾಡುತ್ತಿತ್ತು. ಸುತ್ತಲು ಕನ್ನಡಿಯ ಅಲಂಕಾರಿಕ ಕೋಣೆಯಲ್ಲಿ ಆಧುನಿಕ ಆಸನದ ಮೇಲೆ ಕುಳಿತು ಇಂದು ನಾವು ಮಾಡಿಸಿಕೊಳ್ಳುವ ಕೇಶ ಮುಂಡನೆ ನನಗೊಂದು ನರಕದಂತೆ ಅನ್ನಿಸುತ್ತದೆ. ವೈಜ್ಞಾನಿಕ ದೃಷ್ಟಿಯಿಂದ ಒಪ್ಪುವಂತದ್ದಾಗಿದ್ದರು. ಯಾಕೋ ಈ ಕೃತಕ ಕರ್ಮಗಳಿಂದ ನಮಗೆ ಸಿಗಬೇಕಾದ ಮೂಲ ಉಲ್ಲಾಸ ಸಿಕ್ಕೊದಿಲ್ಲ ಅನ್ನಿಸುತ್ತದೆ.
ನನಗೂ ಮತ್ತು ಚಮನ್ ಭೈಗೂ ಪರಿಚಯ ಸ್ನೇಹವಾಗಿ ಮಾರ್ಪಡಲು ಕಾರಣ, ಅವನು ಕ್ಷೌರು ಮಾಡುವ ವಿಧಾನಕ್ಕೆ ಅಂಟಿಕೊಂಡಿದ್ದ ಮಾದರಿ. ನಾನು ಮೊದಲ ಬಾರಿ ಅವನನ್ನು ಸಂಪರ್ಕಿಸಿದಾಗಲೇ ನಮ್ಮ ನಡುವೆ ಗೆಳೆತನದ ಸಸಿ ಚಿಗುರೊಡೆದು ಬಿಟ್ಟಿತ್ತು. ಎರಡು ಮೂರು ದಿನಗಳ ಹಿಂದೆ ಇದೇ ರೀತಿಯಾಗಿ ಪೇಟೆ ಸುತ್ತಲು ಹೋದಾಗ,ಸ್ವಲ್ಪ ಹಾಗೇ ಊರಿನ ಕಟ್ಟ ಕಡೆಯ ಓಣಿ ಕಡೆಗೆ ಹೋಗಿದ್ದೆ. ಅಲ್ಲಿ ಒಂದು ಸರಕಾರಿ ಬಿಕಾರಿ ಜಾಗ,ಹೆಸರಿಗೆ ವಾರಸುದಾರ ಸರ್ಕಾರವಾಗಿದ್ದರೂ ಆ ವಿಶಾಲ ಜಾಗವನ್ನು ಯಾವದಕ್ಕೂ ಬಳಸಿಕೊಳ್ಳದೇ ಇದ್ದುದ್ದರಿಂದ, ಆ ವಿಸ್ತಾರವಾದ ಜಮೀನಿನಲ್ಲಿ ಯಾರು ನೆಟ್ಟು ಬೆಳಸದೆಯೇ, ಎಲ್ಲಿಂದಲೋ ತೂರಿ ಬಂದು ಬಿದ್ದ ಹಲವು ತರಹದ ಬೀಜಗಳಿಂದ ಎಂದೋ ಸಸಿಯಾಗಿ ತಲೆ ಎತ್ತಿದ ಪುಟ್ಟ ಗಿಡಗಳು, ಕ್ರಿಮಿ, ಕೀಟ , ಮನುಷ್ಯಜೊತೆಗೂಡಿ ಎಲ್ಲಪ್ರಾಣಿಗಳ ಉಪಟಳ ಮತ್ತು ದೌರ್ಜನ್ಯವನ್ನು ಮೆಟ್ಟಿ ಹೆಮ್ಮರವಾಗಿ ಬೆಳೆದು ನಿಂತಿದ್ದವು. ಆ ಒಂದು ಕಡೆಯಿಂದ ನಿರ್ಗತಿಕ ಜಾಗ ಮತ್ತು ನೂರಾರು ಮರಗಳಿಗೆ ಈ ಚಮನ್ ಭೈ ವಾರಸುದಾರನಂತೆ ನನಗೆ ಕಂಡಿದ್ದ. ಅವನು ಆ ಮರದ ತೋಪಿನ ನಡುವೆ ಒಂದು ದೊಡ್ಡ ಮರದ ಬಡ್ಡೆಗೆ ಮೊಳೆ ಹೊಡೆದು ಅದಕ್ಕೊಂದು ಕನ್ನಡಿಯನ್ನು ನೇತಾಕಿ, ಕನ್ನಡಿಯ ಮುಂದೊಂದು ಕಟ್ಟಿಗೆಯ ಹಲಗೆಯನ್ನು ಹಾಕಿದ್ದ.ಅದೇ ಅವನ ಕ್ಷೌರದಂಗಡಿಯಾಗಿತ್ತು. ಆವತ್ತು ತುಸು ದೂರದಿಂದಲೇ ಅವನನ್ನು ನೋಡಿದ್ದ ನಾನು,ತಡಬಡಾಯಿಸಿ ಅವನತ್ತ ಹೋಗಿ ಅವನ ಜೊತೆ ಒಂದು ಗಂಟೆ ಹರಟೆ ಹೊಡೆದು ಬಂದಿದ್ದೆ.
ಚಮನ್ ಭೈ, ಭೈ ಅಂತ ಕರೆದರೆ ಚೆನ್ನಾಗಿರಲ್ಲ ಅನ್ನಿಸಿ, ಏಳು ದಶಕದ ಅವನ ತುಂಬು ವಯೋಮಾನಕ್ಕೆ ಗೌರವ ಕೊಟ್ಟು “ಚಮನ್ ದಾದಾ” ಎಂದು ಕರೆದಿದ್ದೆ.ಸರ್ವೆ ಸಾಮಾನ್ಯವಾಗಿ ನಾವು ತುಂಬು ವಯೋಮಾನದ ಪುರುಷರನ್ನು ನಮ್ಮ ಕರ್ನಾಟಕದಲ್ಲಿ, ಅಜ್ಜ, ತಾತಾ, ಮುತ್ಯಾ, ಎಂದು ಕರೆಯುವಂತೆ, ಗುಜರಾತ್ನಲ್ಲಿ ಈ ವರ್ಗದ ಹಿರಿಯ ಜೀವಗಳನ್ನು “ದಾದಾ” ಎಂದು ಕರೆಯುತ್ತಾರೆ. ನಾನು ಆ ತಾತನನ್ನು ಮೊದಲ ದಿನ ದಾದಾ ಎಂದು ಕರೆದಾಗ ಅವನು ಹಿಗ್ಗಿ ಹೋಗಿ ಅರೆ ಬೊಚ್ಚು ಬಾಯಿಂದ ಖುಷಿಗೆ ಹೊಕ್ಕು ನಕ್ಕು ನಲಿದಿದ್ದ. ಮೇಲಾಗಿ ನನ್ನನ್ನು ಬಹಳ ಹಚ್ಚಿಕೊಂಡು ಮಾತನಾಡಿದ್ದ. ಆವತ್ತು ಒಂದೇ ದಿನದಲ್ಲಿ ಕರ್ಣಾಟಕದ ಹುಡುಗ ಮತ್ತು ಗುಜರಾತಿನ ತಾತನ ನಡುವೆ ಸ್ನೇಹ ಬೆಳೆದಿತ್ತು.
ಐವತ್ತು ವರ್ಷದಿಂದ ಅವನು ಆ ಮರದ ಕೆಳಗೆ ತನ್ನ ಕಾಯಕದ ಬಂಡಿಯ ನೊಗಕ್ಕೆ ಹೆಗಲಕೊಟ್ಟು ತನ್ನ ಜೀವನದ ಮುಕ್ಕಾಲು ಭಾಗ ಆ ಮರದಡಿಯಲ್ಲಿಯೇ ಕಳೆದಿದ್ದ. ನಾನು ಅವನಿಗೆ ಮಾರುಹೋಗಿದ್ದು ಈ ಒಂದೇ ಒಂದು ಕಾರಣಕ್ಕೆ. ಅವನಲ್ಲಿನ ತಾಳ್ಮೆ, ಮತ್ತು ಶಾಂತ ಜೀವನ ವೈಖರಿ ನನಗೆ ವಿಶೇಷ ಎನ್ನಿಸಿತ್ತು. ಅದೇ ಕಾರಣಕ್ಕೆ ಆವತ್ತು ಮತ್ತೊಮ್ಮೆ ದಾದಾನ ಜೊತೆ ಹರಟಿ ಬರುವ ಮುನ್ಸೂಚನೆ ತೋರುತ್ತ, ಊರ ಹೊರಗಿನ ಮರದ ತೋಪಿನೆಡೆಗೆ ನಡೆದು ಹೋದೆ.
ನನ್ನ ಅವಸರವಸರದ ಆಗಮನ ನೋಡಿ ಪರ್ಲಾಂಗ ದೂರದಿಂದಲೇ ದಾದಾ ಒಂದು ಮುಗುಳ್ನಗೆಯನ್ನು ಮುದಿ ಬೊಚ್ಚು ಬಾಯಿ ಹಿಗ್ಗಿಸಿ ಮರದಡಿಯಲ್ಲಿಂದ ಗಾಳಿಯಲ್ಲಿ ತೇಲಿ ಬಿಟ್ಟ. ಇತ್ತ ಕಡೆಯಿಂದ ನನ್ನದೂ ಅದೇ ಮಾರುತ್ತರ. ಇಬ್ಬರ ಹರೆಯ ಮತ್ತು ಮುದಿ ಮುಗುಳ್ನಗುಗಳು ನಮ್ಮ ಭೇಟಿಗೆ ಪ್ರಥಮ ಸಂಭಾಷಣೆಯಾಗಿ ಸಂಪರ್ಕಿಸಿ ಬಿಟ್ಟವು. ಹತ್ತಿರ ಹೋದವನೇ “ದಾದಾ ಆಜ್ ಕಿತ್ನಾ ಶಿರ್ ಕೋ ಕಾಟ್ ದಿಯಾ ಆಪ್ನೇ” ಎಂದೆ. ದಾದಾ, “ಕ್ಯಾ ಭೇಟಾ ಮೈ ಶಿರ್ ಕಾಟ್ನೆ ವಾಲಾ ನಹಿ ಹೂಂ, ಬಾಲ್ ಕಾಟ್ನೆ ವಾಲಾ ಹೂಂ”ಎಂದ. ದಾದಾಗೆ “ಥೋಡಾ ಕೋಶಿಶ್ ಕಿಯಾ ಥೋ ಆಪ್ ಶಿರ್ ಭಿ ಕಾಟ್ ಸಕ್ತೆ, ಚೊಡೊ ದಾದಾ, ಔರ್ ಕ್ಯಾ? ಎಂದೆ..!! ಹೀಗೆ ತಮಾಷೆಯಿಂದಲೇ ನಮ್ಮ ಮಾತುಗಾರಿಕೆ ಪ್ರಾರಂಭಗೊಂಡಿತ್ತು.
ಚಮನ್ ದಾದಾ ಒಬ್ಬ ಹೃದಯವಂತ. ಜೊತೆಗೆ ಜೀವನವನ್ನು ಎಲ್ಲ ರೀತಿಯಲ್ಲಿಯೂ ಆವಾವ ಕಾಲಘಟ್ಟದಲ್ಲಿ ಆರೋಗ್ಯಕರ ಪರಿಧಿಯೊಳಗೆ ಆನಂದಿಸಿದವನು. ಆವತ್ತು ದಾದಾನ ಮತ್ತಷ್ಟು ಮುಖಗಳು ನನಗೆ ಪರಿಚಯವಾದವು. ದಾದಾ ಹೇಳಿದ ಎಲ್ಲ ಮಾತುಗಳು ನನಗೆ ನೆನಪಿನಲ್ಲಿ ಇಲ್ಲವಾದರೂ,ಒಂದಿಷ್ಟು ಮಾತುಗಳು ಮತ್ತು ಅವನ ತುಂಟತನಗಳು ನೆನಪಿನಲ್ಲಿ ಇವೆ. ದಾದಾ ಆ ಕಾಲಕ್ಕೆ ದೊಡ್ಡ ಪೈಲ್ವಾನಂತೆ ತನ್ನ ಊರಲ್ಲಿ ಉಂಡಾಡಿ ಗುಂಡನಂತೆ ಊರಲ್ಲಿನ ಆ ಕಾಲದಲ್ಲಿನ ಹುಡುಗಿಯರನ್ನು ಗುರಾಯಿಸಿಕೊಂಡು ತಿರುಗಾಡುತ್ತಿದ್ದನಂತೆ.ತನ್ನ ಹುಟ್ಟುರಲ್ಲಿ ಎಲ್ಲರಿಂದಲೂ ಬೈಯಿಸಿಕೊಳ್ಳುತ್ತಿದ್ದನಂತೆ. ಎಲ್ಲರೂ ಇವನನ್ನು “ದಂಡ ಪಿಂಡ ತಿಂದೂ ಊರಿನ ಹಾದಿ ಬೀದಿಯಲ್ಲೆಲ್ಲ ದೇವರಿಗೆ ಬಿಟ್ಟ ಗೂಳಿಯ ಹಾಗೆ ಸುತ್ತುತ್ತಾನೆ” ಎಂದು ಜರಿಯುತ್ತಿದ್ದರಂತೆ. ಅಂಥ ಸಮಯದಲ್ಲಿ ಊರಿಂದ ದೂರ ಬಂದು ಆ ಊರಿನ ಈ ಮರದ ಕೆಳಗೆ ತನ್ನ ಕ್ಷೌರ ಕೆಲಸವನ್ನು ಪ್ರಾರಂಭಿಸಿದನಂತೆ. ಅಲ್ಲಿಂದ ಇಲ್ಲಯರೆಗೂ ಇವನ ಜೀವನ ಆ ಊರಲ್ಲಿ ಸಾಗಿ ಮುದಿತನವನ್ನು ತಲುಪಿತಂತೆ.ಜೊತೆಗೆ ಆ ಊರಿನ ಪಕ್ಕದ ಹಳ್ಳಿಯ ಹಡುಗಿಯ ಜೊತೆ ಹಸೆ ಮನೆ ಏರಿ ಮೂರು ಮಕ್ಕಳ ತಂದೆಯಾದನಂತೆ. ಈ ರೀತಿಯಾಗಿ ತನ್ನ ಜೀವನದ ಹಲವಾರು ಏರಿಳಿತಗಳನ್ನು ಆವತ್ತು ಒಂದೇ ಉಸಿರಿನಲ್ಲಿ ಎರಡೂ ಗಂಟೆ ನನಗೆ ಮಾತನಾಡಲೂ ಅವಕಾಶ ಮಾಡಿ ಕೊಡದೆಯೇ ಒಬ್ಬನೇ ತನ್ನ ಜೀವನ್ ಕಹಾನಿಯನ್ನು ಹೇಳಿದ.
ಸಂಜೆ ಆರು ಗಂಟೆಯಾಯ್ತು, ದಾದಾಗೆ ನಾನು ಸಣ್ಣಗೆ ಅಲ್ಲಿಂದ ಹೊರಡುವ ಸೂಚನೆಯನ್ನು ಅವನ ಮಾತಿನ ಮೇಲೆ ಇಷ್ಟವಿರದ ಗಮನವನ್ನು ಹರಿ ಬಿಟ್ಟು ತಲುಪಿಸಿದೆ. ಇದನ್ನು ಮನಗಂಡ ದಾದಾ, “ಅಚ್ಛಾ ಭೇಟಾ” ಮತ್ತೆ ನನ್ನನ್ನು ಕಾಣಬೇಕೆಂದರೆ ತಪ್ಪದೇ ಬಾ, ಏಕೆಂದರೆ “ನಾನೀಗ ಜೀವನ ಸಂಧ್ಯಾ ಕಾಲದ ಮುಳುಗುತ್ತಿರುವ ಸೂರ್ಯ, ನೀನು ಮತ್ತೇ ಯಾವಾಗಲಾದರೂ ಇಲ್ಲಿಗೆ ಬಂದಾಗ ಈ ಮರದ ಕೆಳಗೆ ಈ ಚಮನ್ ಮತ್ತು ಚಮನ್ ಭೈ ಯ ಈ ದುಖಾನ್ ಇಲ್ಲದೇ ಇರಬಹುದು” ಎಂದ..!! ಈ ಮಾತಿಂದ ನನಗೆ ತಟ್ಟನೆ ಬೇಸರವಾಗಿ, ದಾದಾ “ಹಾಗೆನ್ನಬೇಡ ನೀನು ಗಟ್ಟಿ ಮುದುಕ ಇನ್ನು ಬಹಳ ವರ್ಷ ಬದಕ್ತಿಯಾ” ಎಂದೆ. ಮುಂದೆ ಇಬ್ಬರು ಸೇರಿ ಒಂದು ಚಿಕ್ಕ ಹೊಟೇಲ್ ಗೆ ಹೋಗಿ ಸಂಜೆ ನಾಷ್ಟಾ ಮಾಡಿ ಮೇಲೊಂದೊಂದು ಲೋಟಾ ಚಹಾ ಕುಡಿದೆವು.
ನಾನು ಅಲ್ಲಿರುವ ತನಕ ನನ್ನಿಂದ ಒಂದು ರೂಪಾಯಿಯನ್ನು ಪಡೆಯದೆಯೇ ಕ್ಷೌರ ಮಾಡಿದ ಆ ದಾದ..!!ಮತ್ತೇ ಕೂಗಿದ ವಸಂತ ಕೋಗಿಲೆಯ ಇಂಪಾದ ದನಿಯ ಹಾಗೆ. ಆ ಹಳೆ ದಿನಗಳ ನಾಟಿ ಕ್ಷೌರ ಮತ್ತೇ ಗುಜರಾತಿನಲ್ಲಿ ದೊರೆಯುವಂತೆ ಮಾಡಿದ. ಅವನು ಪ್ರೀತಿಯಿಂದ ಕ್ಷೌರ ಮಾಡಿ, ತಲೆಗೆ ಎಣ್ಣೆ ಹಾಕಿ ಮಸಾಜ್ ಮಾಡುತ್ತಿದ್ದರೆ, ತಾಯಿ ತನ್ನ ಚಿಕ್ಕ ಕಂದನಿಗೆ ಕೊಡಮಾಡುವ ಪ್ರೀತಿಯ ಉಡುಗೊರೆಯಂತಹ ಮಮತೆಭರಿತ ಕಾಳಜಿ ಸಿಕ್ಕಂತಾಗುತ್ತಿತ್ತು. ಇನ್ನು,ಆವತ್ತು ಹದಗೆಟ್ಟು ಹದ್ದು ಮೀರಿ ಎಲ್ಲೆಲ್ಲೋ ತಿರುಗುತ್ತಿದ್ದ ಮನಸ್ಸು ದಾದಾನ ಸಾಂಗತ್ಯದಿಂದ ಹಗುರವಾಯ್ತು. ಸಂಜೆ ಏಳರ ಸುಮಾರಿಗೆ ಉಲ್ಲಾಸದಿಂದ ಹಗುರವಾದ ಹೆಜ್ಜೆಗಳ ಜೊತೆಗೆ ಮನೆಗೆ ಮರಳಿದೆ.
ಗುಜರಾತಿನಲ್ಲಿ ಇವತ್ತಿಗೂ ಈ ತರಹದ ಕ್ಷೌರಿಕರೂ ಮತ್ತು ಕ್ಷೌರದಂಗಡಿಗಳು ಇವೆ. ಮಹಾನಗರಗಳಾದ ಅಹಮದಾಬಾದ, ಗಾಂಧಿ ನಗರ, ಸೂರತ್, ಬರೋಡ್ ದಂತಹ ದೊಡ್ಡ ದೊಡ್ಡ ನಗರಗಳ ಜೊತೆಗೂಡಿ ಗುಜರಾತ್ ರಾಜ್ಯದ ತುಂಬೆಲ್ಲ ನೋಡ ಸಿಗುತ್ತವೆ. ಗಜರಾತಿಗೆ ಹೋದರೆ ನಾನು ಎಲ್ಲ ಬಡಿವಾರಗಳನ್ನು ಬದಿಗಿಟ್ಟು ರಸ್ತೆ ಬದಿಯ ಇಂತಹ ತೆರೆದ ಕ್ಷೌರದಂಗಡಿಯಲ್ಲಿ ಕ್ಷೌರಮಾಡಿಸಿಕೊಂಡು.ಬಾಲ್ಯದ ಸಂಭ್ರಮವನ್ನು ಇವತ್ತಿನ ದಿನದಲ್ಲಿ ನನ್ನದಾಗಿಸಿಕೊಳ್ಳುತ್ತೇನೆ. ಮರಳಿ ಬಾಲ್ಯದ ಬಾಗಿಲಿಗೆ ಹೋಗಿ ಬಾಲಕನಾಗಿ ಒಂದು ಭೇಟಿ ಕೊಟ್ಟು ಬರುತ್ತೇನೆ.
ನನ್ನ ಮತ್ತು ದಾದಾನ ನಡುವಿನ ಸ್ನೇಹ ಯಾವ ಶಂಖ ಜಾಗಟೆಯ ಸದ್ದಿಗಾಗಿ ಕಾಯದೆಯೇ ಮೆಲ್ಲನೆ ಶೈಶವ ಮತ್ತು ಬಾಲ್ಯವನ್ನು ದಾಟಿಕೊಂಡು ಯಾವ ರೋಗ ರುಜಿನುಗಳ ಭಯವಿಲ್ಲದೆಯೇ ತುಂಬು ಯೌವ್ವನದ ಘಟ್ಟಕ್ಕೆ ಕಾಲಿಟ್ಟಿತು. ಅಲ್ಲಿ ವಯಸ್ಸಿನ ಮಾನದಂಡ ನಮ್ಮ ಸ್ನೇಹದ ನಡುವೆ ಅಡ್ಡ ಗೋಡೆಯಾಗಿ ಪರಿಗಣಿಸಲೇ ಇಲ್ಲ. ನೋಡ ನೋಡತ್ತಿದ್ದಂತಯೇ ಬೆಳೆದು ನಿಂತ ಹರೆಯದ ನಾಜೂಕು ಹುಡುಗಿಯಂತೆ ಬೆಳೆದ ನಿಂತು, ಇಬ್ಬರ ಕಣ್ಮನ ಸೆಳೆಯ ಹತ್ತಿತು. ಇದೇ ರೀತಿಯಾಗಿ ಇಬ್ಬರ ನಡುವಿನ ಸಲುಗೆ ಯಾವದೇ ತೊಂದರೆಯಿಲ್ಲದೆಯೇ ತನ್ನ ಜೊತೆಗೆ ನಮ್ಮನ್ನು ಸಾಗಿಸಿಕೊಂಡು ಹೋಯಿತು. ಮುಂದೊಂದು ದಿನ ಚಮನ್ ದಾದಾ ಸ್ನೇಹಕ್ಕೆ ಉಡುಗೊರೆಯಾಗಿ ನನ್ನನ್ನು ಅವನ ಮನೆಯ ಒಂದು ಸುಂದರ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿಸಿದ್ದ.
ತನ್ನ ಮೊಮ್ಮಗಳ ಸೀಮಂತದ ಕಾರ್ಯಕ್ರಮವದು. ಅಷ್ಟೇನು ದೊಡ್ಡದಲ್ಲದ ಆ ಪುಟ್ಟ ನಗರದಲ್ಲಿ ಅವನವರು ಎನ್ನುವ ಬಂಧು ಬಾಂಧವರು ಕೇವಲ ಬೆರಳೆಣಿಕೆಯಷ್ಟು ಇದ್ದರು.ಎಲ್ಲರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಮುದಿ ದಾದಾ, ಎಲ್ಲರಿಗಿಂತ ನನಗೆ ತುಸು ಎತ್ತರದ ಘಣತೆಯ ಜೊತೆಗೆ ವಿಶೇಷ ಸ್ವಾಗತವನ್ನು ನೀಡಿದ್ದ. ಸಮಾರಂಭದಲ್ಲಿ ಮಕ್ಕಳಿಂದ ತಲೆ ಅಲ್ಲಾಡಿಸಿಕೊಂಡು ಬಂದ ಮುದುಕ, ಮುದುಕಿಯರವರೆಗಿನ ಎಲ್ಲ ವಯಷ್ಕ ಮಂದಿ ಜಮಾಯಿಸಿದ್ದರು. ಎಲ್ಲರೂ ಸೀಮಂತದ ದಂಪತಿಗಳ ಮೇಲೆ ಮೊದ ಮೊದಲು ತಮ್ಮ ಗಮನವನ್ನು ಕೇಂದ್ರಿ ಕರಿಸಿದ್ದರು. ಆಮೇಲೆ ಯಾವಾಗ ನಾವಿಬ್ಬರೂ ಗೆಳೆಯರು ಖಡಕ್ ಬಟ್ಟೆಯನ್ನುಟ್ಟುಕ್ಕೊಂಡು ಕೋಣೆಯಿಂದ ಕೈ ಕೈ ಮಿಲಾಯಿಸಿಕೊಂಡು ಹೊರ ಬಂದೆವೋ ನಮ್ಮ ಬಿಂಕ ಬಿನ್ನಾಣ ಗಳಿಗೆ ನೆರೆದಿದ್ದ ಜನ ಮಾರು ಹೋಗಿ ನೋಡ ಹತ್ತಿದರು. ದಾದಾನ ಕುಡಿ ನೋಟ ಮೆಲ್ಲನೇ ಕದ್ದು ಕದ್ದು ಬಂದಿದ್ದ ಅಜ್ಜಿಯಂದಿರ ಮೇಲೆ ಹರಿಯುತ್ತಿತ್ತು. ಸಲ್ಪ ರಸಿಕನಾಗಿದ್ದ ದಾದಾ ನನಗೆ, ಪಿಸುಗುಡುತ್ತಲೇ ಕಿವಿಯಲ್ಲಿ “ಭೇಟಾ ಕೋಹಿ ಅಚ್ಛಾ ಜವಾನಿ ಹೈ ಕ್ಯಾ ಧೇಕೊ, ಕೊಹಿ ಜವಾನಿ ಪಸಂದ ಆಯಾತೊ ಮುಝೇ ಬತಾವೋ, ಯಹಿ ಪೆ ಮೈ ಆಗೆ ಕಡಾಕೆ ತೆರಾ ಶಾದಿ ಕರೂಂಗಾ” ಎಂದ. ನಾನು ದಾದಾನ ಹೆಗಲಮೇಲೆ ಕೈ ಹಾಕಿ. “ದಾದಾ ತು ನೇ ಏಕ್ ಮೆರೆ ಕೋ ಅಚ್ಛಾ ಜವಾನಿ ದುಂಡೋ, ಯಹಿಪೇ ಮೈ ಶಾದಿ ಹೋ ಕೆ ಗುಜರಾತಿ ಜವಾನಿ ಕೋ ಲೆ ಜಾಹುಂಗಾ ಹಮಾರ ಕರ್ಣಾಟಕ ಕೋ” ಎಂದೆ.ದಾದಾ ಗಹಗಹಿಸಿ ನಕ್ಕು “ಬಡೀಯಾ ಭೇಟಾ, ಮುಝೆ ಇಸ್ಲಿಯೇ ತು ಬಹುತ್ ಅಚ್ಛಾ ದೊಸ್ತ ಬನ್ ಗಯಾ, ಆನೆ ವಾಲೆ ದಿನ್ ಮೇ ಮೈ ಏಕ್ ಸುಂದರ್ ಜವಾನಿ ತೆರೆಲಿಯೇ ದುಂಡುಂಗಾ” ಎಂದ. ಹೀಗೆಯೇ ಕಾರ್ಯಕ್ರಮದುದ್ದಕ್ಕೂ ನಮ್ಮ ತುಂಟಾಟಗಳು ಮುಂದುವರೆದಿದ್ದವು.ಎಲ್ಲರೂ ನಮ್ಮ ಸ್ನೇಹವನ್ನು ನೋಡಿ ಕೊಂಡಾಡಿದರೂ. ಆ ಬಾಂಧ್ಯವ್ಯದಿಂದ ನಾನು ಕಳೆದುಕೊಂಡದ್ದು ಏನೂ ಇಲ್ಲ. ಗಳಿಸಿದ್ದು ಮಾತ್ರ ಮಾತಲ್ಲಿ ಹೇಳಲಾಗದು. ಅಲ್ಲಿರುವ ತನಕ ದಾದಾ ನನ್ನೊಬ್ಬ ಆಪ್ತಮಿತ್ರನಾಗಿ ಉಳಿದ. ಇವತ್ತು ನನ್ನಲ್ಲಿ ಅವನ ನೆನಪುಗಳು ಆರದ ದೀಪ..!! ಆ ನೆನಪಿನ ದೀಪ ದಾದಾನ ಜೊತೆಗೆ ಕಳೆದ ಮಧುರ ಘಗಳಿಗಳನ್ನು ಸ್ಮರಿಸಿ ಎದೆಯಾಳದ ಮೂಲೆಮೂಲೆಗೂ ಬೆಳಕಿನ ಕಿರಣಗಳನ್ನು ಪ್ರಜ್ವಲಿಸಿ, ದಾದಾನ ಸ್ನೇಹವನ್ನು ಜೀವಂತವಾಗಿರಿಸಿದೆ.
“ಹಾಯ್ ….ಚಮನ್ ದಾದಾ, ನೀನು ಯಾವತ್ತು ನನ್ನ ಆಪ್ತಮಿತ್ರ, ಎದೆಯಾಳದಲ್ಲಿ ನೀನೊಂದು ಬತ್ತದಾ ಜೀವ ನದಿ.ಈ ಉಸಿರಿರುವ ತನಕ ನಿನ್ನ ಸ್ನೇಹ ಅಮರ….ನಿನ್ನ ಕ್ಷೌರದಂಗಡಿಯ ಬಾಂಧವ್ಯ ಅಮರ…ನೀ ಇಲ್ಲವಾದ ಮುಂದೊಂದು ದಿನವೂ ನೀನು ನನ್ನಲ್ಲಿ ಅಮರ…ಅಮರ…ಅಮರ…!!
!!! ಥ್ಯಾಂಕ್ಯೂ ದಾದಾ…!!!
-ಚಿನ್ಮಯ್ ಮಠಪತಿ
Good!!
ಧನ್ಯವಾದಗಳು ಸಂತು……………
ಚಿನ್ಮಯ್, ಈ ಬಾರಿಯ ಸಂಚಿಕೆ ತುಂಬಾ ವಿಭಿನ್ನವಾಗಿದೆ. ನಿಮ್ಮ ಸ್ನೇಹಿತ 'ಚಮನ್ ದಾದಾ' ಬಗ್ಗೆ ತುಂಬಾ ಸುಂದರವಾಗಿ ನಿರೂಪಣೆ ಕೊಟ್ಟಿದ್ದೀರಿ.
ಧನ್ಯವಾದಗಳು ಮೇಡಮ್………….!!
ತುಂಬ ಚೆನ್ನಾಗಿದೆ ಸರ್. ಹಾಸ್ಯ, ವಿನೋದ, ಅಂತರ್ಮುಕಿ ಭಾವ ಎಲ್ಲದರ ಸಂಮಿಶ್ರಣ ಸೊಗಸಾಗಿ ಮೂಡಿಬಂದಿದೆ. ಧನ್ಯವಾದಗಳು ಸರ್.