ಯಾರಿಗುಂಟು ಯಾರಿಗಿಲ್ಲ…!! ಇದನ್ನು ಅದೃಷ್ಟ ಅನ್ನುತ್ತಿರೊ ಅಥವಾ ದುರಾದೃಷ್ಟ ಅನ್ನುತ್ತಿರೊ ನಾನರಿಯೆ. ಆದರೆ, ನಾನು ಮಾತ್ರ ಬಾಲ್ಯದಲ್ಲಿಯೇ ಈ ಬದುಕಿನ ಆದಿ ಅಂತ್ಯಗಳೆಂಬ ಜನನ ಮರಣಗಳನ್ನು ಬಲು ಸನಿಹದಿಂದ ಕಣ್ಣು ತುಂಬ ಕಂಡವನು. ಅವುಗಳ ಅರ್ಥವನ್ನು ತಿಳಿಯುವ ಮೊದಲೇ ಬೆಳ್ಳಿ ಪರದೆಯ ಮೇಲೆ ಮೂಡಿ ಬರುವ ಅದ್ದೂರಿ ವೈಭವಿಕ ಚಲನಚಿತ್ರದ ದೃಶ್ಯದಂತೆ ಎರಡರ ಜೀವಂತ ದೃಶ್ಯವಿದ್ಯಮಾನಗಳನ್ನು ಕಂಡು, ಬುದ್ಧಿ ಬೆಳೆಯುತ್ತಿದ್ದಂತಯೇ ಅವುಗಳ ಆಳ ಮತ್ತು ವಿಸ್ತಾರಗಳನ್ನು ತಿಳಿಯುವ ಪ್ರಯತ್ನಕ್ಕೆ ಇಳಿದವನು. ಪುಟ್ಟು ಊರಲ್ಲಿ ಹುಟ್ಟಿ, ಗ್ರಾಮೀಣ ಬದುಕನ್ನು ಅಂತ್ಯಂತ ಕುತೂಹಲ ದೃಷ್ಟಿಯಿಂದ ಅವಲೋಕಿಸಿ, ಮನಸ್ಸಲ್ಲಿ ಹುಟ್ಟುವ ಹಲವಾರು ದ್ವಂದ್ವಗಳಿಗೆ ಚಿಂತನಾ ಕುದುರೆಯನ್ನೇರಿ ಪರಿಹಾರವೆಂಬ ಗುರಿಯನ್ನು ತಕ್ಕ ಮಟ್ಟಿಗೆ ನನ್ನದಾಗಿಸಿಕೊಂಡವನು. ಮೂಲತಃ ಜಂಗಮ ಸಮುದಾಯದಲ್ಲಿ ಹುಟ್ಟಿದ್ದಕ್ಕೆ ಅಂತಹ ಅವಕಾಶಗಳು ನನಗೆ ಬಯಸದೇ ತಾನಾಗಿಯೇ ಒಲಿದು ಬಂದಂಥವುಗಳು ಎಂದೆನಿಸದೇ ಇರದು. ಗುಜರಾತ ಬಗೆಗಿನ ಮೂರನೇ ಭಾಗವಾದ ಈ ಅನುಭವ ಲೇಖನ ಮಾಲೆ ಬರೆಯಲು ಕುಳಿತುಕೊಳ್ಳುತ್ತಿದ್ದಂತೆಯೇ ನನ್ನ ಅನುಮತಿಯನ್ನು ಪಡೆಯದೆಯೇ ನನ್ನ ಅಕ್ಷರ ಪಯಣ ತವರು ನಾಡಿನ ಬಾಲ್ಯದ ದಿನಗಳಲ್ಲಿ ನಾಗರೀಕ ಬದುಕಿನ ಉದಯಾಸ್ತಗಳಲ್ಲಿ ಕಂಡಂತಹ ಅನುಭವದೆಡೆಗೆ ತೀವ್ರ ರಭಸದಿಂದ ವಾಲಿ, ದಾಪುಗಾಲಿಡುತ್ತಲೇ ನನ್ನ ಬಾಲ್ಯದ ದಿನಗಳ ನೆನಪಿನಂಗಳದಲ್ಲಿ ಒಂದು ಸುತ್ತು ಸುತ್ತಿ ಬರುವಂತೆ ಮಾಡಿತು. ಮೂಲ ಮನೆಯ ಅನುಭವಗಳನ್ನು ಬಾಡಿಗೆ ಮನೆಯ ಅನುಭವಗಳಂತೆ ಭಾಸವಾದ ಗುಜರಾತಿನ ಅನುಭವಗಳ ಸಂಗಡ ಮಿಲನಿಸುವಂತೆ ಮಾಡಿತು. ಉತ್ತರ- ದಕ್ಷಿಣ ಧೃವಗಳ ನೆನಪಿನಾಳದ ಅನುಭವ ದೋಣಿಗಳ ನಡುವೆ ಬಂಧದ ಕೊಂಡಿಯನ್ನು ಬೆಸೆದು ನನ್ನನು ಎರಡೂ ದೋಣಿಯ ಪಯಣಿಗನಾಗಿಸಿ ತುಸು ಕಷ್ಟದಿಂದಲೇ ಬೆಚ್ಚನೆಯ ಭಾವನೆಗಳನ್ನು ಹೊರಹಾಕುವಂತೆ ಮಾಡಿತು.
ನಮ್ಮ ಉತ್ತರ ಕರ್ಣಾಟಕದ ಜೀವನ ಕ್ರಮ ಮತ್ತು ಅಲ್ಲಿನ ಜನರ “ಸೋಸಿಯಲ್ ರಿಚ್ಯುವಲ್ಸ್” ಬಹಳ ವಿಭಿನ್ನ ಒಂದಕ್ಕೊಂದು ಹೋಲಿಕೆ ಮಾಡಲಾಗದಷ್ಟರ ಮಟ್ಟಿಗೆ ಅಸಾಮ್ಯತೆಯಿಂದ ಕೂಡಿದಂಥವುಗಳು.ಇಂಥ ಕೆಲವು ಆಚರಣೆಗಳು ಮತ್ತು ಜೀವನ ಕ್ರಮಗಳು ಪ್ರಾದೇಶಿಕ ನೆಲಗಟ್ಟಿನ ಮೇಲೆ ಅಲ್ಲಲ್ಲಿ ಅಷ್ಟೇ ತಮ್ಮ ಅಸ್ತಿತ್ವವನ್ನು ಸಾಬೀತು ಪಡಿಸಿ ನಾಗರೀಕ ಜೀವನದಲ್ಲಿ ಉಸಿರಾಡುವಾಗ, ಅನ್ಯ ಪ್ರಾದೇಶಿಕರಿಗೆ ಪರಿಚಯದ ದಿಶೆಯಿಂದ ಬಹುಶಃ ಆಚೆ ಇದ್ದರೂ ಇರಬಹುದು. ಅಂಥ ಒಂದಿಷ್ಟು ಉತ್ತರ ಕರ್ಣಾಟಕದ ನನ್ನ ಬಾಲ್ಯದ ಅನುಭವಗಳು ಗುಜರಾತಿನಲ್ಲಿನ ನನ್ನ ಆರಂಭದ ದಿನಗಳಲ್ಲಿ ಬಲುವಾಗಿ ಕಾಡಿದವು. ಅದಕ್ಕೆ ಕಾರಣ “ರಂಜಿತ್ ಪರ್ಮಾರ್” ಎಂಬ ನನ್ನ ವಿದ್ಯಾರ್ಥಿ.
ಬಾಲ್ಯದ ದಿನಗಳನ್ನು ನನ್ನ ತಾಯಿಯ ತವರೂರಲ್ಲಿ ಕಳೆದ ನಾನು, ಆವೂರಲ್ಲಿ ಯಾರದಾದರೂ ಮನೆಯಲ್ಲಿ ಕೂಸು ಹುಟ್ಟಿತೆಂದರೆ ಊರಿಗೆ ಮಠಪತಿಯಾಗಿದ್ದ ನನ್ನ ತಂದೆಗೆ ತಟ್ಟಂತ ಕರೆ ಬರುತ್ತಿತ್ತು. ಹುಟ್ಟಿದ ಆ ಮಗುವಿನ ಮನೆಗೆ ಹೋಗಿ, ಮನೆಯ ಗುರುವಿನ ಜೊತೆಗೆ ಕೂಡಿಕೊಂಡು ಶಿಶುವಿಗೆ ಲಿಂಗಧಾರಣೆ ಮಾಡುತ್ತಿದ್ದರು. ಆ ಮಗುವಿನ ಕುಟುಂಬದವರು ಮಗು ಹುಟ್ಟಿದ ಮಾರನೇ ದಿನವೇ ಲಿಂಗಧಾರಣೆ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದರು. ನಾನು ಒಂದು ಕೈಯಿಂದ ಅಪ್ಪನ ಕಿರು ಬೆರಳು ಹಿಡಿದು ಇನ್ನೊಂದು ಕೈಯಿಂದ ತುಂಡು ಚೆಡ್ಡಿಯನ್ನು ಸರಿಮಾಡುತ್ತ ಬಾಲ ಹೆಜ್ಜೆಗಳನ್ನು ಹಾಕುತ್ತಾ ಜೊತೆಗೆ ಹೋಗುತ್ತಿದ್ದೆ. ಅವರು ಪೂಜಾ ಮತ್ತು ಮಂತ್ರ ಪಠನದೊಂದಿಗೆ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರೆ ಇತ್ತ, ಹಸಿ ಮಾಂಸದ ಉಂಡೆಯಂತೆ ಕಾಣುತ್ತಿದ್ದ ನವಜಾತ ಶಿಶುವನ್ನು ಅಚ್ಚರಿಗಣ್ಣಿನಿಂದ ನೋಡಿ ಹಾಲ್ಗೆನ್ನೆಗೊಂದು ಸಿಹಿ ಮುತ್ತನ್ನಿಡುತ್ತಿದ್ದೆ. ಒಮ್ಮೊಮ್ಮೆ ಒಂದೊಂದು ಮಗು ನೋಡಲು ವಿಚಿತ್ರವಾಗಿದ್ದಾಗ ಅಂಜಿಕೆಯಿಂದ ಸ್ಪರ್ಶಿಸಲೂ ಹಿಂಜರಿಯುತ್ತಿದ್ದೆ. ಆಮೇಲೆ ಈ ಅಂಜಿಕೆತನ ಮಾಯವಾಗಿ ಮನಸ್ಸು ಮಗು ಹೇಗೆಯೇ ಇದ್ದರು ಹತ್ತಿರದಿಂದ ನೋಡಲು ಶುರುವಿಟ್ಟುಕೊಂಡು ಆ ಮಗುವಿನ ಬದುಕಿಗೆ ನಾಂದಿ ಹಾಡಲು ಕಲಿಯಿತು.
ಆ ಒಂದು ಲಿಂಗಾಯತ ಸಮುದಾಯದ ಸಾಮಾಜಿಕ ಕಟ್ಟಳೆಯಂತೆ ವಿದಿವತ್ತಾಗಿ ಇಬ್ಬರೂ ಸೇರಿ ಕೊರಳಿಗೆ ಲಿಂಗಧಾರಣೆ ಮಾಡಿ ಮಗುವನ್ನು ಮನುಜ ಕುಲಕ್ಕೆ ಬರಮಾಡಿಕೊಳ್ಳುತ್ತಿದ್ದರು. ಮನುಷ್ಯಕಾಯದಿಂದ ಹುಟ್ಟಿದ ಮಗು ಮನುಜನಲ್ಲದೇ ಮತ್ತೇನು? ಅಂತ ನೀವು ಪ್ರಶ್ನಿಸಬಹುದು. ಆದರೆ, ನನ್ನಲ್ಲಿ ಸಮಂಜಸವಾದ ತಾರ್ಕಿಕ ಉತ್ತರ ಇಲ್ಲವಾದರೂ. “ಮೇ ಬಿ ಮೇ ನಾಟ್ ಬಿ” ಎಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಅಸ್ಪಷ್ಟ ಉತ್ತರ ನೀಡಬಲ್ಲೆ. ಪೂರ್ವಜರಿಂದ ಪಾಲಿಸಿಕೊಂಡು ಧಾರ್ಮಿಕ ಚಟುವಟಿಕೆಗಳನ್ನು ಅನುಕರಿಸುತ್ತ ನೆಮ್ಮದಿಯನ್ನು ಕಂಡುಕೊಡಲು ಇಂಥ ಆಚರಣೆಗಳನ್ನು ಪ್ರಾಯೋಗಿಕ ರೂಪದಲ್ಲಿ ಅನುಕರಿಸುತ್ತಿದ್ದವರು ಎಂದು ಹೇಳ ಬಹುದು. ಅಥವಾ, ಲಿಂಗವೆಂಬುದೊಂದು ಪಾಲಾಕ್ಷಿ ಸ್ವರೂಪ ಇಂತಹ ಲಿಂಗವನ್ನು ಮಗುವಿಗೆ ಧರಿಸಿದೊಡೆ ಮಗುವೊಂದು ಶಿವಸ್ವರೂಪವನ್ನು (ಒಳ್ಳೆಯದನ್ನು) ತನ್ನ ಬಾಳಲ್ಲಿ ಅಳವಡಿಸಿಕೊಂಡು ಬೆಳೆಯುತ್ತದೆ ಎಂಬುದು ಆ ಸಮುದಾಯದ ನಿಲುಮೆಯಾಗಿರಲೂಬಹುದು. ಇನ್ನೊಮ್ಮೆ, ಇವರೀರ್ವರ ಧಾರ್ಮಿಕ ನೆಲೆಗಟ್ಟಿನ ನಂಬಿಕೆಯೂ ಆಗಿರಬಹುದು. ಇಂಥವುಗಳನ್ನು ಕಂಡು ಅವುಗಳ ಹಿಂದಿನ ಉದ್ದೇಶವನ್ನು ತಂದೆಯಿಂದ ಮತ್ತು ಗದ್ದುಗೆಯ ಮೇಲೆ ಕುಳಿತು ನನ್ನ ತಂದೆಯಿಂದ ಪಾದ ಪೂಜೆ ಮಾಡಿಸಿಕೊಳ್ಳುತ್ತಿದ್ದ ಆ ಮನೆಯ ಗುರುಗಳಿಂದ ಕೇಳಿ ತಿಳಿದುಕೊಳ್ಳುಲು ಪ್ರಯತ್ನಿಸುತ್ತಿದ್ದೆ.
ಹೀಗಿರುವಾಗ, ಅದೇ ರೀತಿಯಾಗಿ ಊರಲ್ಲಿ ಯಾರಾದರೂ ತೀರಿದರೆ ಸಾಕು. ಮೊದಲ ಕರೆ ನಮ್ಮ ಮನೆಗೆ ಬರುತ್ತಿತ್ತು. ತಕ್ಷಣ ನಮ್ಮಪ್ಪ ಅವರ ಮನೆಗೆ ಹೋಗಿ, ತೀರಿದವನ ಪಾರ್ಥೀವ ಶರೀರಕ್ಕೆ ಸ್ನಾನ ಮಾಡಿಸಿ ಅಂಗಿಯನ್ನು ತಿರುಪಾಗಿ ತೊಡಿಸಿ ಸತ್ತ ದೇಹದ ಕತ್ತಿಗೆ ಎರಡು ಕೋಲನ್ನು ಗುಣಾಕಾರ ಚಿಹ್ನೆಯಂತೆ ಆಸರೆಯಾಗಿ ಕೊಟ್ಟು ಹೆಣವನ್ನು ಗೊಡೆಗೆ ಒರಗಿ ಕುಳ್ಳಿರಿಸಿ ಗೊಡೆಯ ಗೂಟಕ್ಕೂ ಮತ್ತು ಕೋಲಿಗೂ ನಡುವೆ ಒಂದು ಸದೃಢ ಹಗ್ಗದಿಂದ ನಂಟನ್ನು ಬೆಸೆದು ಕಟ್ಟುತ್ತಿದ್ದರು.ಮನೆಯ ಗೋಡೆಗೆ ಕುಳ್ಳರಿಸಿದ ನಂತರ ವಿದಿವಿಧಾನದಂತೆ ವಿಭೂತಿ ಪಟ್ಟೆ ಬಳಿದು ಕುಂಕುಮ ತಿಲಕವನ್ನಿಟ್ಟು ಸತ್ತವನು ಶಿವ ಸ್ವರೂಪವನ್ನು ಪಡೆದುಕೊಂಡ ಎಂದು ಕೂಗಿ ಹೇಳುತ್ತಿದ್ದರು. ತದನಂತರ ಅಂತಿಮ ನಮನ ಹೇಳಲು ಬರುತ್ತಿದ್ದ ಜನ, ಸತ್ತ ಮನುಷ್ಯ ಜೀವಿತಾವಧಿಯಲ್ಲಿ ಎಂಥ ಬದುಕನ್ನು ಬಾಳಿ ತೀರಿದ ಎಂಬ ಗೋಜಿಗೆ ಹೋಗದೇ, ಅವನ ಹೆಣಕ್ಕೆ ಹೂ ಮಾಲೆ ಹಾಕಿ ಕರ ಜೋಡಿಸಿ ನಮಿಸಿ ಸಂತಾಪ ಸೂಚಿಸಿ ಹೋಗುತ್ತಿದ್ದರು. ಹುಟ್ಟಿದ ಮಗುವಿಗೆ ಲಿಂಗಧಾರಣೆ ಮಾಡುವಾಗ ಶಿಶುವಿನ ಅನಿಯಂತ್ರಿತ ಕತ್ತಿಗೆ ನಿಯಂತ್ರನವನ್ನು ಒದಗಿಸಲು ಕತ್ತನ್ನು ಎರಡು ಮುಂಗೈಗಳಲ್ಲಿ ಹಿಡಿದ ನಾನು, ಅದೇ ರೀತಿಯಾಗಿ ತೀರಿದವನ ಅದೇ ತೆರನಾದ ಅನಿಯಂತ್ರಿತ ಕತ್ತನ್ನು ಗೋಡೆಯ ಗೂಟಕ್ಕೆ ಕಟ್ಟಿ ಹಾಕುವಾಗ ಮೇಲಕ್ಕೆ ಸೆಟೆಸಿ ಎತ್ತಿ ಹಿಡಿಯುತ್ತಿದ್ದೆ. ಈ ಮಾರ್ಗವಾಗಿ ಹುಟ್ಟು ಸಾವುಗಳನ್ನು ಅಂತ್ಯಂತಹ ಹತ್ತಿರದಿಂದ ಬಾಲ್ಯದಲ್ಲಿಯೇ ನೋಡಿ ಅಷ್ಟೇನು ಅಧೀರತೆಗೆ ಒಳಗಾಗದ ನಾನು. ಎರಡರ ನಡುವಿನ ಈ ಬದುಕೆಂಬ ಯಾತ್ರೆಯಲ್ಲಿ ಎದುರಾಗುವ ಸವಾಲು ಮತ್ತು ಪರೀಕ್ಷೆಗಳಿಗೆ ಭಯಂಕರ ಭಯಭೀತನಾಗಿ ಕೈ ಕಾಲು ತನುವಲ್ಲಿನ ಬಲವನ್ನು ಕಳೆದುಕೊಂಡು ಗಟ್ಟಿಯಾಗಿ ನಿಲ್ಲಲಾಗದೇ ಕುಸಿದು ಬಿದ್ದದ್ದುಂಟು. ಮತ್ತು ನನ್ನವರೆನ್ನುವವರ ಬದುಕಿನ ಹಲವಾರು ಅನಿಶ್ಚತೆಗಳಿಗೆ ನಿಟ್ಟುಸಿರು ಬಿಡುತ್ತಲೇ ಸೋಲಿಗೆ ಶರಣಾಗಿ ಹಲವಾರು ಬಾರಿ ಸಂಧಿಗ್ಧತೆಯ ಪ್ರಪಂಚದಲ್ಲಿ ಗಿರಕಿ ಹೊಡೆದಿದ್ದುಂಟು.
ಕೇವಲ ನನ್ನ ವಯಕ್ತಿಕ ಕಷ್ಟ ಕಾರ್ಪನ್ಯಗಳಿಗಷ್ಟೇ ಅಲ್ಲ. ಪರಿಚಿತರೆಂಬುವವರ ಅತೀ ದಟ್ಟ ದರಿದ್ರ ಬದುಕಿನ ಕ್ಷಣಗಳಿಗೂ ಸಹ ಚಿತ್ತ ಹರಿಸಿ ಮರುಕವನ್ನು ನುಡಿದಿದ್ದೇನೆ. ಇವತ್ತಿಗೂ ಈ ಮಾನಸಿಕ ನ್ಯೂನ್ಯತೆ ನನ್ನಲ್ಲಿರುವ ಧೀರ ಯೋಧ. ಇದು ನಿಮಗೆಲ್ಲ ಉತ್ಪ್ರೇಕ್ಷೆ ಎಂದು ಎನ್ನಿಸಿದರೂ ಇದು ಮಾತ್ರ ಕಠೋರ ಸತ್ಯ. ಓದಿನ ದಿನಗಳಲ್ಲಿ ಆಸ್ಪತ್ರೆಯಲ್ಲಿ ಪ್ರಾಯೋಗಿಕ ಅಧ್ಯಯನಕ್ಕೆಂದು ಹೋದಾಗ ಎಷ್ಟೋ ರೋಗಿಗಳು ಕಣ್ಣು ಮುಂದೆಯೇ ಮುಂಗೈ ಮೇಲೆ ಪ್ರಾಣ ತ್ಯಜಿಸಿದಾಗಲೂ ಅಷ್ಟೇನು “ಗ್ರೀಫ್” ಗೆ ಒಳಗಾಗದ ನಾನು, ಅದೇ ಆ ರೋಗಿಯ ಹಾರೈಕೆಯ ಸಮಯದಲ್ಲಿ ರೋಗಿ ಮನೆಯವರು ಬಡತನದಿಂದ ರೋಗಿಯ ಚಿಕಿತ್ಸೆ ವೆಚ್ಚವನ್ನು ಭರಿಸಲಾಗದೆಯೇ ಪರದಾಡುವಾಗ ಅತ್ಯಂತಹ ಖಿನ್ನತೆ ಮತ್ತು ಗ್ರೀಫ್ ಗೆ ಒಳಗಾಗುತ್ತಿದ್ದೆ. ಸತ್ತವನನ್ನು ಮರಳಿ ತರಲಂತು ಅಸಾಧ್ಯ, ಆದರೆ ಮರಣ ಪೂರ್ವದಲ್ಲಿ ಅವನು ಆರೋಗ್ಯಕ್ಕೆ ಸಂಬಂಧ ಪಟ್ಟ ತೊಂದರೆಗಳಿಂದ ಬಳಲುತ್ತಿದ್ದಾಗ ಅವನನ್ನು ಬದುಕಿಸಿಕೊಳ್ಳಬಹುದಾದ ಎಲ್ಲ ಸಾಧ್ಯತೆಗಳು ಕೆಲವೊಮ್ಮೆ ನಮ್ಮ ಕೈಯೊಳಗಿನ ಸಂಪತ್ತು. ಬಡತನ ಮತ್ತು ಜ್ಞಾನದ ಕೊರತೆಯಿಂದ ತಮ್ಮವನೆನ್ನುವವನನ್ನು ಕಳೆದುಕೊಂಡಾಗ ತುಂಬಾ ದುಃಖಿಯಾಗುತ್ತಿದ್ದೆ. ಇಂತಹ ಪ್ರಾಯೋಗಿಕ ನಿಟ್ಟಿನಲ್ಲಿ ಯೋಚಿಸುತ್ತಾ ತಾತ್ಪರ್ಯದಾಯಕ ನಿಲುವಿಗೆ ಅಂಟಿಕೊಳ್ಳುತ್ತಿದ್ದ ನಾನು ಸುಖಾ ಸುಮ್ಮನೆ ಭಾವಾನಾತ್ಮಕ ಬಿಕ್ಕಟ್ಟಿನ ಇಕ್ಕಳದಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿದ್ದೆ.
ಅರೆರೆ..…!!! ಆಸಾಮಿಯ ಪಯಣ ಗುಜರಾತನಿಂದ ಸರ್ರೆಂದು ನಮ್ಮ ಕರ್ಣಾಟಕಕ್ಕೆ ಸ್ಥಾನಪಲ್ಲಟವಾಗಿ ಬಿಟ್ಟಿದೆಯಲ್ಲ.!! ಒಂದಕ್ಕೊಂದು ತಾಳ-ಮೇಳಗಳ ನಂಟೇ ಅರ್ಥವಾಗುತ್ತಿಲ್ಲ..!! ಏನೋ ಹೇಳಲು ಹೋಗಿ ಏನೋ ಹೇಳುತ್ತಿದ್ದಾನೆ. ಎಂಬ ಸಂಶಯ ನಿಮ್ಮನ್ನು ಕಾಡ ಬಹುದು..!! ಖಂಡಿತವಾಗಿಯೂ ನಿಮ್ಮ ಅಭಿಪ್ರಾಯ ನಿಜ..!! ಜೀವ(ನ)-ನದಿ ಹುಟ್ಟಿ ಬದುಕನ್ನು ಹುಡುಕಿ ಎಷ್ಟು ದೂರ ಹರಿದು ಸಾಗಿದರೇನು? ಮೂಲ ಉಗಮದ(ಹುಟ್ಟಿದ) ನೆಲವನ್ನು ಮರೆಯಲಾದಿತೇ? ಆವತ್ತು ಮತ್ತೊಂದು ಗುಜರಾತಿನ ಅನುಭವ ನನ್ನನ್ನು ಇಷ್ಟೊಂದು ಸುತ್ತಿ, ಪಯಣಿಸಿ, ಹಳೆಯ ಗಾಯದ ಹಕ್ಕಳಿಯನ್ನು ತುರಿಯುವ ನೆಪದಲ್ಲಿ ಮತ್ತೇ ಘಾಸಿಗೊಳಿಸಿತು.
ನನ್ನೆಲ್ಲ ಗುಜರಾತಿನ ವಿದ್ಯಾರ್ಥಿಗಳನ್ನು ತುಂಬಾ ಹತ್ತಿರದಿಂದ ಕಾಣುತ್ತಿದ್ದ ನಾನು ಅವರೆಲ್ಲರ ಕೌಟುಂಬಿಕ ಸ್ಥಿತಿ-ಗತಿ ಮತ್ತು ಆಗು ಹೋಗುಗಳ ಬಗ್ಗೆ ತಕ್ಕ ಮಟ್ಟಿಗೆ ತಿಳಿದುಕೊಂಡಿದ್ದೆ. ಚಿಕ್ಕ ಪುಟ್ಟ ಕಷ್ಟ ಕಾರ್ಪಣ್ಯಗಳಲ್ಲಿ ಶಕ್ತಿ ಮೀರಿ ಪ್ರಯತ್ನಿಸಿ ಮನುಷ್ಯ ಕರ್ತವ್ಯವನ್ನು ಮನುಷ್ಯರಿಗಾಗಿ ಒಬ್ಬ ಮನುಷ್ಯನಾಗಿ ಒದಗಿಸಿ ಕೊಡಲು ನೋಡುತ್ತಿದ್ದೆ. ಇಂಥ ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಕೊಡಮಾಡಲು ಒಂದು ಅವಕಾಶ ನನ್ನನ್ನು ಹುಡಿಕಿಕೊಂಡು ಬಂದಿತ್ತು.
ಹುಬ್ಬಳ್ಳಿಯ ಆ ವಿದ್ಯಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಬೇಕಾದರೆ ಕಡು ಬಡತನವನ್ನು ಬೆನ್ನಿಗೆ ಕಟ್ಟಿಕೊಂಡು ಕಣ್ಣುಗಳಲ್ಲಿ ಭವಿಷ್ಯ ನಿರ್ಮಾಣದ ಬೆಚ್ಚನೆಯ ಕನಸುಗಳನ್ನು ಹೊತ್ತುಕೊಂಡು ನಮ್ಮ ಕರ್ಣಾಟಕಕ್ಕೆ ಓದಲು ಬಂದಿದ್ದ ಗುಜರಾತಿನ ಒಬ್ಬ ವಿದ್ಯಾರ್ಥಿ ಒಂದು ದಿನ ಬಂದು ಸರ್- “ನಾನು ಒಂದು ವಾರದಿಂದ ತೀವ್ರವಾದ ಜ್ವರದಿಂದ ಬಳಲುತ್ತಿದ್ದೇನೆ. ಆದ್ದರಿಂದ ಮನೆಗೆ ಕಳುಹಿಸಿ ಕೊಡಿ ನಾನು ಸುಧಾರಿಸಿಕೊಂಡ ಮೇಲೆ ಮರಳಿ ಬರುತ್ತೇನೆ” ಎಂದು ವಿನಂತಿಸಿಕೊಂಡಿದ್ದ..!! ಅವನ ಮಾತಿಗೆ ನಾನು ಸಮ್ಮತಿಸಿ ಹೋಗಲು ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದೆ. ಅವನಿಗೆ ಇಲ್ಲಿಂದ ಗುಜರಾತ ತಲುಪಲು ಬೇಕಾದಷ್ಟ ದುಡ್ಡು ಸಹ ಅವನಲ್ಲಿ ಇರದಿದ್ದಾಗ, ಮಾನವೀಯತೆಯ ದೃಷ್ಟಿಯಿಂದ ಸ್ವಲ್ಪ ದುಡ್ಡನ್ನು ಕೊಟ್ಟು ನನ್ನ ಕರ್ತವ್ಯವನ್ನು ಮಾಡಿದ್ದೆ. ಗುಜರಾತಿಗೆ ಹೋದ ಹುಡುಗ, ಸ್ವಲ್ಪದಿನಗಳ ನಂತರ ನನಗೆ ಅಲ್ಲಿಂದ ಫೋನಾಯಿಸಿ ಹೇಳಿದ್ದ. ಸರ್- “ಬಹುಶಃ ನಾನು ಓದಲು ಕರ್ನಾಟಕಕ್ಕೆ ಮರಳಲು ಸಾಧ್ಯವಿಲ್ಲ ಎನ್ನಿಸುತ್ತೆ” ಅಂತ..!! ಈ ಮಾತನ್ನು ಕರ್ಣಾಟಕದಲ್ಲಿದ್ದುಕೊಂಡೇ ಕೇಳಿದ್ದ ನಾನು ಅವನನ್ನು ಒತ್ತಾಯ ಪೂರ್ವಕವಾಗಿ ಮರಳಿ ಕರೆಸಿ ಕೊಂಡಿದ್ದೆ. ತದನಂತರ ಆ ನನ್ನ ವಿದ್ಯಾರ್ಥಿಯನ್ನು ಹುಬ್ಬಳ್ಳಿಯ “ಕಿಮ್ಸ್” ಆಸ್ಪತ್ರೆಯಲ್ಲಿ ಎಲ್ಲ ರೀತಿಯ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿದಾಗ. ಅವನು ಕ್ಷಯ ರೋಗದಿಂದ ಬಳಲುತ್ತಿದ್ದ. ವಿದ್ಯಾರ್ಥಿಗೆ ತಿಳಿಸಿದರೆ ಮಾನಸಿಕವಾಗಿ ಎಲ್ಲಿ ಕುಗ್ಗಿ ಹೋಗಿ ಬೇಡವಾದ ಅನಾಹುತಕ್ಕೆ ಮೊರೆಹೋಗಿಬಿಡುವನೇನೋ ಎಂಬ ಸಂಶಯಕ್ಕೆ ಒಳಗಾದ ನಾನು, ಆ ವಿಷಯವನ್ನು ಬಚ್ಚಿಟ್ಟು ಅವನಿಗೆ ಒಂಬತ್ತು ತಿಂಗಳಿನ ವೈದ್ಯಕೀಯ ಹಾರೈಕೆಯನ್ನು ಒದಗಿಸಿದೆ. ಅವನಿಗೆ ಎಂಥ ಆಹಾರವನ್ನು ಆ ಒಂಬತ್ತು ತಿಂಗಳವರೆಗೂ ಸೇವಿಸಬೇಕೆಂದು ಕಟ್ಟು ನಿಟ್ಟಾಗಿ ಹೇಳಿ ಕೊಟ್ಟೆ. ಅಭಿಮಾನಕ್ಕೆ ತಲೆ ಬಾಗಿ ವಿದ್ಯಾರ್ಥಿ ನನ್ನ ಮಾತನ್ನು ಚಾಚು ತಪ್ಪದೇ ಪಾಲಿಸಿದ. ಬದುಕಿನಲ್ಲಿ ಆಕಸ್ಮಿಕವಾಗಿ ಬಂದೆರಗುವ ಇಂಥ ಅನಿಶ್ಚತೆಗಳಿಗೆ ಹುಟ್ಟು ಸಾವುಗಳಿಗಿಂತಲೂ ಹೆಚ್ಚಾಗಿ ಹೆದರಿ ಪೆಚ್ಚು ಮೋರೆ ಹಾಕುತ್ತಿದ್ದ ನಾನು ಆ ಹುಡುಗನಿಗಾಗಿ ಹಲವಾರು ಬಾರಿ ಆಸ್ಪತ್ರೆಗೆ ಅಲೆದಾಡಿ ಅವನನ್ನು ಸಂಪೂರ್ಣವಾಗಿ ಖಾಯಿಲೆಯಿಂದ ಗುಣಮುಖನನ್ನಾಗಿಸಿದ್ದೆ.
ಇಲ್ಲಿರುವಾಗಲೇ ಒಂದು ದಿನ ಅವನನ್ನು ಕರೆದು ಒಂದು “ಕೌನ್ಸಲಿಂಗ್” ಮಾಡಿ ಅವನಿಗೆ ಎಲ್ಲವೂ ತಿಳಿ ಹೇಳಿದೆ. ಸಂಪೂರ್ಣವಾಗಿ ಚೇತರಿಸಿಕೊಂಡಿದ್ದ ಆ ಹುಡುಗ ತಕ್ಷಣ ಕಣ್ಣೀರಿಡಲು ಶುರುಮಾಡಿದ. ತೀವ್ರ “ಎಮೋಷನಲ್” ಗೆ ಒಳಪಟ್ಟು ಅದೇನೇನೋ ದೊಡ್ಡ-ದೊಡ್ಡ ಮಾತುಗಳನ್ನು ಹೇಳ ಹತ್ತಿದ. ನಾನು ಅವನಿಗೆ ಅಷ್ಟೇಲ್ಲ ಮಾತನಾಡಬೇಡಪ್ಪ. ಮಾನವೀಯ ಕರ್ತವ್ಯದಿಂದ ನಿನಗೆ ಒಳ್ಳೆಯದಾಗಿದೆಯೇ ಹೊರತು ಅದು “ನಾನು” ಅಥವಾ “ನನ್ನಿಂದ”ಲ್ಲ ಎಂದು ಸ್ವಲ್ಪ ಮಾನಸಿಕ ಉದ್ವೇಗಕ್ಕೆ ಒಳಗಾಗಿಯೇ ಹೇಳಿ ಕಳುಹಿಸಿಕೊಟ್ಟಿದ್ದೆ.
ನಾನು ಗುಜರಾತಿಗೆ ಹೋಗಿ ಬಹುಶಃ ಮೂರು ನಾಲ್ಕೂ ದಿನ ಕಳೆದಿತ್ತು. ಕ್ಷಯ ರೋಗಕ್ಕೆ ತುತ್ತಾಗಿದ್ದ ನನ್ನ ಆ ವಿದ್ಯಾರ್ಥಿ ಆ ಸಮಯದಲ್ಲಿ ಗುಜರಾತಿನಲ್ಲಿಯೇ ಇದ್ದ. ನಾನು ಅಲ್ಲಿಗೆ ಹೋಗಿದ್ದ ಸುದ್ದಿಯನ್ನು ಅವನ ಸ್ನೇಹಿತರಿಂದ ತಿಳಿದುಕೊಂಡಿದ್ದ ಹುಡುಗ, ತಕ್ಷಣ ನನಗೆ ಫೋನಾಯಿಸಿ ಮನೆಗೆ ಆಹ್ವಾನಿಸಿದ. ಯಾಕೋ ನನಗೂ ಅವನ ಮನವಿಯನ್ನು ತಿರಸ್ಕರಿಸಲಾಗದೇ ಒಂದೇ ಕರೆಗೆ ಒಪ್ಪಿಗೆಯನ್ನು ಸೂಚಿಸಿದ್ದೆ. ಆವತ್ತೇ ಆ ವಿದ್ಯಾರ್ಥಿ ನೆರೆಮನೆಯವರ ಬೈಕಲ್ಲಿ ಬಂದು ಸಂಜೆ 5 ರ ಸುಮಾರಿಗೆ ಅವರ ಹಳ್ಳಿಗೆ ನನ್ನನ್ನು ಕರೆದುಕೊಂಡು ಹೋದ. ನಾನಿದ್ದ ನಗರದಿಂದ ಸುಮಾರು 40 ಕೀ. ಮೀ. ದೂರದಲ್ಲಿದ್ದ ಆ ಹಳ್ಳಿ, ಅಲ್ಲ ..!! ಬುಡಕಟ್ಟು ಜನಾಂಗದ ಹಟ್ಟಿಯಂತಿದ್ದ ಆ ಹಟ್ಟಿಯನ್ನು ತಲುಪಿದೆವು. ಲೆಕ್ಕ ಹಾಕಿದರೆ ಬರೊಬ್ಬರಿ ಹನ್ನೇರಡು ತಟ್ಟಿಮನೆಗಳಲ್ಲಿ ನನ್ನ ವಿದ್ಯಾರ್ಥಿಯ ಕುಟುಂಬ ಸಮೇತ ಉಳಿದ ಕುಟುಂಬಗಳು ವಾಸವಾಗಿದ್ದವು. ತಲುಪುತ್ತಿದ್ದ ಸಮಯದಲ್ಲಿ ವಿದ್ಯಾರ್ಥಿ ಜೋರಾಗಿ ಗಾಡಿಯ ಸದ್ದನ್ನು ಹೊರಡಿಸಿ ಎಲ್ಲರಿಗೂ ನಾವು ತಲುಪಿದ ಸುದ್ದಿಯನ್ನು ಶಬ್ಧ ತರಂಗಾಂತರದಿಂದ ತಲುಪಿಸಿದ್ದ.
ಬೈಕನಿಂದ ಇಳಿಯುತ್ತಿದ್ದಂತೆಯೇ ಎಲ್ಲ ಗುಡಿಸಲು ಮನೆಯ ಸದಸ್ಯರು ಮನೆಯ ಮುಂದನ ನೆಲ ಛಾವಣಿಯಲ್ಲಿ ಸಾಲಾಗಿ ನಿಂತುಕೊಂಡು ಬರಮಾಡಿಕೊಂಡರು. ಮುಖದ ತುಂಬೆಲ್ಲ ಸೀರೆ ಸೆರಗನ್ನು ಹೊದ್ದು ನನ್ನ ವಿದ್ಯಾರ್ಥಿಯ ಅಣ್ಣನ ಹೆಂಡತಿ ಚೊಂಬು ನೀರನ್ನು ತಂದು ಮಾತನಾಡದೆ ಕೈಸನ್ನೆಯಲ್ಲಿ ನೀರು ತೆಗೆದುಕೊಳ್ಳಿ ಎಂದು ಹೇಳಿ ಚೊಂಬನ್ನು ಕೈಗಿತ್ತು ಹೋದಳು. ಕೈ ಕಾಲು ಮುಖವನ್ನು ತೊಳೆದುಕೊಂಡು ಗುಡಿಸಲು ಮುಂದೆ ಹಾಕಿದಂತಹ ನೂಲಿನ ಮಂಚದ ಮೇಲೆ ಕುಳಿತುಕೊಂಡೆ. ಬಹುಶಃ ವ್ಯಕ್ತಿಗತವಾಗಿ ನಾನು ಅವರಿಗೆ ವಿಶೇಷ ಅತಿಥಿಯಾಗಿರಲಿಲ್ಲ. ನಾನು ಕರ್ಣಾಟಕದವನಾಗಿ ಅವರ ಮನೆಗೆ ಹೋಗಿದ್ದು ಒಂದು ದೊಡ್ಡ ವಿಷಯವಾಗಿತ್ತು ಎನ್ನಿಸಿತ್ತು. ಪಾಪ..! ನಮ್ಮ ಭಾರತ ನಕ್ಷೆಯಲ್ಲಿ ನಮ್ಮ ರಾಜ್ಯ ಎಲ್ಲಿ ಬರುತ್ತದೆಂದು ಸಹ ಅರಿಯದ ಆ ಮುಗ್ಧ ಜನರು ನಾನು ಬೇರೆ ಗ್ರಹದಿಂದ ಅವರೂರಿಗೆ ಇಳಿದು ಬಂದ ಅನ್ಯಗ್ರಹ ಜೀವಿಯಂತೆ ಭಾವಿಸಿ ವಿಷ್ಮಯ ದೃಷ್ಟಿಯಿಂದ ಗುಡಿಸಲುಗಳ ಛಾವಣಿಯಲ್ಲಿ ನಿಂತುಕೊಂಡು ಸೆರಗಿನೊಳಗಿಂದ ಇಣುಕಿ ನೋಡುತ್ತಿದ್ದರು. ಯಾಕೋ ಅವರೆಲ್ಲರ ಮುಗ್ಧತೆಯನ್ನು ನೋಡಿ ಮನಸು ಏನೇನೋ ಚಿಂತನೆಯಲ್ಲಿ ತೊಡಗಿತು. ಒಂದು ಕಡೆ ಬಡತನ ಮತ್ತು ಮುಗ್ಧತೆ ಇದ್ದರೆ ಮತ್ತೊಂದು ಕಡೆಗೆ ಅವರ ಈ ಆಧುನಿಕ ತಳಕು ಬಳಕಿನಾಚೆಗಿನ ಸ್ವಚ್ಛ ನಿಷ್ಕಲ್ಮಶ ಬದುಕು ನನ್ನ ಅಕ್ಷಿ ಪಟಲದ ಕನ್ನಡಿಗೆ ಲಗ್ಗೆ ಇಟ್ಟಿತು. ಕಣ್ಣ ಪರದೆಯ ಮೇಲೆ ಅವರ ಬದುಕಿನ ಚಿತ್ರಣವನ್ನು ಎಳೆ ಎಳೆಯಾಗಿ ಭಿತ್ತರಿಸಿ ನನ್ನನ್ನು ಅತೀ ಆಳದ ಭಾವನಾತ್ಮಕ ಕೂಪಕ್ಕೆ ತಳ್ಳಿ ಬಿಟ್ಟಿತು.
ನನ್ನ ವಿದ್ಯಾರ್ಥಿ ಅತ್ಯಂಥ ಗಡಿಬಿಡಿಯಲ್ಲಿಯೇ ಗುಜರಾತಿನಲಿ ಅವರ ಹಟ್ಟಿಯ ಜನಕ್ಕೆ ಓಡಾಡುತ್ತಲೇ ಏರು ದನಿಯಲ್ಲಿ ಸಲಹೆಗಳನ್ನು ನೀಡುತ್ತಿದ್ದ. ಇಡೀ ಹಟ್ಟಿಯ ಜನರಿಗೆ ಸಡಗರವೋ ಸಡಗರ. ಇತ್ತ, ಅರೆ ನಗ್ನವಾಗಿ ತುಂಡ ಬಟ್ಟೆಯ ತೊಟ್ಟುಕೊಂಡಿದ್ದ ಹತ್ತಾರು ಮಕ್ಕಳು ನನ್ನ ಮುಂದೆ ಬಂದು ಹಿಂದೆ ಕೈ ಕಟ್ಟಿಕೊಂಡು ನಿಂತುಕೊಂಡರು. ಅವರಲ್ಲಿ ಹಲವಾರು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ಅವರ ದೇಹದಾಕೃತಿ ಕಂಡು ಬೇಸರ ಎನ್ನಿಸಿತು. ಎಲ್ಲ ಮಕ್ಕಳನ್ನು ಕರೆದು ನನ್ನ ಪಕ್ಕದಲ್ಲಿ ಕುಳ್ಳಿರಿಸಿಕೊಂಡೆ. ನಂತರ ಮಕ್ಕಳ ಜೊತೆಗೆ ಮಾತಿಗೆ ಇಳಿದೆ. ಆ ಕಡೆಯಿಂದ ಅವರ ಪೋಷಕರು ತುಂಬು ಖುಷಿಯಿಂದ ನಮ್ಮನ್ನು ನೋಡಿ ತಮ್ಮ ತಮ್ಮಲ್ಲಿಯೇ ಏನೇನೋ ಮಾತನಾಡಿಕೊಳ್ಳುತ್ತಿದ್ದರು.
ಹೋದ ಹತ್ತಾರು ನಿಮಿಷಗಳಲ್ಲಿ ಸುಮಾರು ಐದಾರು ಮಹಿಳೆಯರು ಅವರವರ ಮನೆಯಲ್ಲಿ ತಯಾರಿಸಿದಂತಹ ಚಹಾವನ್ನು ಕಿತ್ತಲಿಯಲ್ಲಿ ಹಾಕಿಕೊಂಡು ಕಿತ್ತಲಿಯನ್ನು ಕೈಯಲ್ಲಿ ಹಿಡಿದುಕೊಂಡು ಬಂದರು. ಅವರೆಲ್ಲರನ್ನು ಸಂತುಷ್ಟಗೊಳಿಸುವ ಉದ್ದೇಶದಿಂದ ಎಲ್ಲರಿಂದಲೂ ಸ್ವಲ್ಪ-ಸ್ವಲ್ಪ ಚಹಾವನ್ನು ಸ್ವೀಕರಿಸಿದೆ. ಗ್ರಾಮೀಣ ಜನರಾಗಿದ್ದರಿಂದ ನನಗೆ ಅವರ ಜೊತೆಗೆ ಮಾತನಾಡಲು ಈ “ಕಮ್ಯೂನಿಕೇಷನ್ ಗ್ಯಾಪ್” ಎಂಬ ಗೋಡೆ ಅಡ್ಡ ಬಂದು ನಮ್ಮ ಮಾತು- ವ್ಯವಹಾರವನ್ನು ಮೊಟಕುಗೊಳಿಸಿತು.ರಾತ್ರಿ ಸಮಯ ಎಂಟು ಗಂಟೆಯಾಗುತ್ತಿದ್ದಂತೆಯೇ ಆ ಹಟ್ಟಿಯ ಜನರೆಲ್ಲರೂ ಸಭೆ ಸೇರಿ ಭೋಜನಕ್ಕೆ ಯಾವ ರೀತಿಯಾದ ತಯಾರಿ ಮಾಡಬೇಕೆಂದು ವಿಚಾರಿಸುತ್ತಿದ್ದರು. ಅದನ್ನು ಮನಗಂಡ ನಾನು ಅವರಿಗೆ ನೀವು ದೈನಿಕವಾಗಿ ಯಾವ ರೀತಿಯ ಅಡುಗೆಗಳನ್ನು ಮಾಡುತ್ತಿರೋ ಅದೇ ಅಡುಗೆಯನ್ನೇ ಇವತ್ತು ಮಾಡಬೇಕು ಇಲ್ಲವಾದಲ್ಲಿ ನಾನು ನಿಮ್ಮ ಮನೆಯಲ್ಲಿ ಭೋಜನ ಮಾಡಲಾರೆ ಎಂದೆ. ನನ್ನ ಮಾತನ್ನು ಸಮ್ಮತಿಸಿ ಅವರು ಸಜ್ಜೆಯ ಮುಂಗೈಯಗಲ ರೊಟ್ಟಿ, ನಮ್ಕಿನ್ ಪಲ್ಯ, ಅನ್ನ ಮತ್ತು ಮಸಾಲಾ ಚನಾ ತಯಾರು ಮಾಡಿದರು. ಇತ್ತ, ಗುಡಿಸಲಿನ ಅಂಗಳ ತುಂಬೆಲ್ಲ ಅಲ್ಲಲ್ಲಿ ಕಟ್ಟಿಗೆಯ ಕಂಭಗಳನ್ನು ನಿಲ್ಲಿಸಿ ಅವುಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಿ ಅಂಗಳಕ್ಕೆ ಬೆಳಕಿನ ಮೆರಗನ್ನು ತುಂಬಿದರು. ಚೆಂದದ ವಿಧ್ಯುತ್ ಬೆಳಕಿನಲ್ಲಿ 40 ರಿಂದ 50 ಜನ ಸಾಲಾಗಿ ಕುಳಿತು ಊಟವನ್ನು ಮಾಡಿದೆವು.
ಊಟ ಮುಗಿದ ನಂತರ ನಾನು ಆ ವಿಶಾಲವಾದ ಬೆಳಕಿನಿಂದ ಕೂಡಿದ ಅಂಗಳದ ನಟ್ಟ- ನಡುವೆ ಹಾಕಿದಂತಹ ನೂಲಿನ ಮಂಚದ ಮೇಲೆ ನನ್ನ ವಿದ್ಯಾರ್ಥಿಯನ್ನು ಪಕ್ಕಕ್ಕೆ ಕುಳ್ಳಿಸರಿಸಿಕೊಂಡು ಅವನ ಹೆಗಲ ಮೇಲೆ ಪ್ರೀತಿಯಿಂದ ಕೈಯನ್ನು ಹಾಕಿ ಕುಳಿತುಕೊಂಡೆ.ಇತ್ತ ಎಲ್ಲ ಮನೆಯ ಸದಸ್ಯರು ಪ್ರಾಂಗಣಕ್ಕೊಂದು ದೊಡ್ಡದಾದ ಚಾಪೆಯನ್ನು ಹಾಸಿ ಅದರ ಮೇಲೆ ಪುರಾಣ- ಪ್ರವಚನ ಕೇಳಲೆಂದು ಬಂದವರಂತೆ ಶಾಂತ ಚಿತ್ತರಾಗಿ ಕುಳಿತುಕೊಂಡರು.
ಇತ್ತ ನಾನು ಹಿಂದಿಯಲ್ಲಿ ಮಾತನ್ನು ಶುರುವಿಟ್ಟುಕೊಳ್ಳಲು ಅಣಿಯಾಗುತ್ತಿದ್ದಂತೆಯೇ, ನನ್ನ ವಿದ್ಯಾರ್ಥಿಯ (ರಂಜಿತ್ ಪರ್ಮಾರ್)ನ ತಾಯಿ ಸೀದಾ ಬಂದವಳೇ ಪಾದಗಳನ್ನು ಹಿಡಿಯಲು ಪ್ರಯತ್ನಿಸುತ್ತಲೇ ಕಾಲಿಗೆ ಒರಗಲು ನಿಂತಳು, ಬಿಕ್ಕಿಸುತ್ತ ಅಳುತ್ತಿದ್ದ ಆ ತಾಯಿಯನ್ನು ನೋಡಿ ನಾನು ಕಕ್ಕಾ ಬಿಕ್ಕಿಗೊಂಡೆ. ನನ್ನ ಕಾಲುಗಳನ್ನು ಬಲವಾಗಿ ಹಿಂದಕ್ಕೆ ಎಳೆದುಕೊಂಡು ತಾಯಿಯ ಭುಜವನ್ನು ಹಿಡಿದು ಮೇಲಕ್ಕೆ ಎತ್ತಿದೆ. ತನ್ನ ಮುಖದ ಮೇಲಿನ ಸೆರಗನ್ನು ಓರೆಯಾಗಿ ಸರಿಸಿ ಗೊಳ್ಳೆಂದು ಅಳುವನ್ನು ಮುಂದುವರೆಸಿದಳು. ಇತ್ತ ಆ ಘೋರದುಃಖವನ್ನು ಕಂಡು ಕುಳಿತುಕೊಂಡವರೆಲ್ಲರ ಕಣ್ಣುಗಳು ತೇವಗೊಂಡಿದ್ದವು. ನನಗೆ ಮೊದಲು ಅಳುವಿನ ಹಿಂದಿನ ಕಾರಣ ತಿಳಿಯಲೇ ಇಲ್ಲ. ನಾನು ರಂಜಿತ್ ನನ್ನು ಉದ್ದೇಶಿಸಿ ಕೇಳಿದೆ “ಮಾ ಇತನಾ ಕ್ಯೂಂವ್ ರೋರ್ ರಹಾ ಹೈ”ಅಂತ. ಅವನು ಸಹ ಸಣ್ಣಗೆ ಕಣ್ಣಿರಲ್ಲಿ ಮುಳುಗಿದ್ದ. ಕೇವಲ “ಮುಝೇ ಪತಾ ನಹಿ ಸರ್” ಎಂಬ ಚುಟುಕಾದ ಉತ್ತರವನ್ನು ಕೊಟ್ಟ. ಆಮೇಲೆ ಚಿಕ್ಕ ವಾಖ್ಯದಲ್ಲಿ ಅಲ್ಪ ಸ್ವಲ್ಪ ಹಿಂದಿ ಗೊತ್ತಿದ್ದ ಆ ತಾಯಿ “ಆಪ್ ಭಗವಾನ್ ಝೈಸಾ ಹಮಾರ ಭೇಟಾ ಕೊ ಬಚಾದಿಯಾ ಆಪ್ ಕಾ ಮದತ್ ಹಮ್ ಕಭಿ ನಹಿ ಬುಲೆಂಗೆ” ಎಂದಳು. ಆವಾಗ ತಟ್ಟಂತ ಒಂದು ವರ್ಷದ ಹಿಂದಿನ ರಂಜಿತ್ ನ ಆ ಕ್ಷಯಪೀಡಿತ ದಿನಗಳತ್ತ ನನ್ನ ಗಮನ ವರ್ಗಾವನೆಗೊಂಡಿತು. ತಕ್ಷಣ ಎಲ್ಲರಿಗೂ ಸಾಂತ್ವನ ಹೇಳಿ ಸಮಾಧಾನ ಪಡಿಸಿದೆ. ಎಂದೋ ಒಂದು ದಿನದ ಸಹಾಯ ಹಸ್ತ ನನಗೆ ಇಂತಹ ಒಂದು ಹೃದಯ ಸ್ಪರ್ಶಿ ಕೃತಜ್ಞತೆಗಳನ್ನು ಕೊಡಮಾಡುತ್ತದೆ ಎಂದು ಕನಸಲ್ಲೂ ನೆನೆಸಿರಲಿಲ್ಲ. ಒಂದಂತು ನಿಜ ಕಡು ಬಡತನದಲ್ಲಿ ಜೀವನ ಕಳೆಯುತ್ತಿದ್ದ ಆ ನನ್ನ ಪ್ರೀತಿಯ ವಿದ್ಯಾರ್ಥಿಯ ಕುಟುಂಬ ಆರ್ಥಿಕ ತೊಂದರೆಯಿಂದಲೋ ಅಥವಾ ಜ್ಞಾನದ ಕೊರತೆಯಿಂದಲೋ ಬಹುಶಃ ಮನೆಯ ಮಗನನ್ನು ಕಳೆದುಕೊಳ್ಳುತ್ತಿತ್ತು ಎಂದೆನಿಸಿತು.ಹುಟ್ಟು ಸಾವಿನ ನಡುವಿನ ಈ ಜೀವನ ಯಾತ್ರೆಯಲ್ಲಿನ ಆ ಒಂದು ಅನುಭವ ನನ್ನನ್ನು ಅತಿಯಾಗಿ ಕಾಡಿತು. ಇವತ್ತಿನ ದಿನ ಅದೇ ಆ ಮನೆ ಮಗ ಸರಕಾರಿ ಕೆಲಸವನ್ನು ಗಿಟ್ಟಿಸಿಕೊಂಡು ತಿಂಗಳಿಗೆ ಇಪ್ಪತ್ತು ಸಾವಿರ ರೂಪಾಯಿ ದುಡಿಯುತ್ತಿದ್ದಾನೆ. ನಾನು ಇವತ್ತಿಗೂ ಗುಜರಾತಿಗೆ ಹೋದಾಗಲೊಮ್ಮೆ ಅವನಿಗೆ ಫೋನಾಯಿಸಿ ಸಾಧ್ಯವಾದರೆ ಭೇಟಿ ಮಾಡಿ ಬರುತ್ತೇನೆ. ಅವನಿಂದಾಗಿಯೇ ಅವರ ಕುಟುಂಬದ ಬಡತನ ಇಂದು ದೂರಾಗಿದೆ. ಅದರ ಜೊತೆಗೆ ಆ ಪುಟ್ಟ ಹಟ್ಟಿಗೊಂದು ರಾಜ ಕಳೆ ಬಂದು, ಎಲ್ಲರೂ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಎಷ್ಟೇ ಕಷ್ಟ ಎನ್ನಿಸಿದರೂ ಓದಿಸುತ್ತಿದ್ದಾರೆ. ಪ್ರೀತಿ, ಮಮತೆ ತುಂಬಿದ ಗುಡಿಸಲು ಮನೆಗಳಲ್ಲಿ ಇಂದು ಜ್ಞಾನದ ಬೆಳಕು ಫಸರಿಸಿ ಗುಡಿಸಲಿನ ವಾಸಿಗಳಿಂದ ಸುಂದರ ಕನಸುಗಳನ್ನು ಸೂಸಿಸುತ್ತಿದೆ. ನೆಮ್ಮದಿಯೋ ಕಷ್ಟವೊ ನಮ್ಮ ಬದುಕಿನ ಆದಿ ಅಂತ್ಯಗಳಲ್ಲಿ (ಹುಟ್ಟು- ಸಾವಲ್ಲಿ) ಅಷ್ಟೇನು ಎಣಗಾಡದೇ, ಎಣಗಾಡಿದರೂ ಅನುಭವಕ್ಕೆ ಬಾರದೆಯೇ ಸಾಗಿಬಿಡುವ ನಾವು ಆದರೆ, ಎರಡರ ನಡುವಿನ ಈ ಬದುಕು ಪಯಣದಲ್ಲಿ ಮಾತ್ರ ಸಮಸ್ಯಗಳ ಸುಳಿಗಳಲ್ಲಿ ಸಿಲುಕಿ ಈ ರೀತಿಯಾಗಿ ಗಾಡವಾಗಿ ನಲುಗಿ ಎಣಗಾಡಿ ಬಿಡುತ್ತೇವೆ.
ಆ ರಂಜಿತ್ ನ ಬಡತನದ ಬಾಳು ನನ್ನನ್ನು ಅಂತಹುದೇ ಆದ ನನ್ನ ಬಾಲ್ಯದ ದಿನಗಳತ್ತ ಕೊಂಡೊಯ್ದು, ನನ್ನ ಖಾಸಗಿ ಬದುಕನ್ನು ಅಕ್ಷರರೂಪದಲ್ಲಿ ಹೇಚ್ಚೇನು ಅಲ್ಲದಿದ್ದರೂ ತಕ್ಕಮಟ್ಟಿಗಾದರೂ ನಿಮ್ಮ ಜೊತೆಗೆ ಹಂಚಿಕೊಳ್ಳಲು ಕಾರಣವಾಯ್ತು. ಹುಟ್ಟು-ಸಾವಿಗೆ ಅಷ್ಟೇನು ಮಿಡಿಯದ ನನ್ನನ್ನು ರಂಜಿತ್ ನ ತಾಯಿ ಇವತ್ತು ಮತ್ತಷ್ಟು ಪ್ರಬುದ್ಧನನ್ನಾಗಿಸಿದ್ದಾಳೆ. ದುಃಖದಿಂದ ಆ ಹಿರಿಯ ಜೀವ ನನಗೆ ತಲೆಬಾಗಿದ ದೃಶ್ಯ ಪೂಜ್ಯತ್ವವನ್ನು ಹುಟ್ಟು ಹಾಕಿ, ತಾಯಿ ಪ್ರೀತಿಯ ಆಳವನ್ನು ಪರಿಚಯಿಸಿದೆ. ಈ ಲೇಖನ ಮಾಲೆಯನ್ನು ಆ ಅಮ್ಮನಿಗೆ ಸಮರ್ಪಿಸುತ್ತಾ ಮತ್ತು ರಂಜಿತನ ಬದುಕು ಎಂದಿಗೂ ಸುಃಖ ಸಮೃದ್ಧಿಯಿಂದ ಕೂಡಿರಲಿ ಎಂದು ಹಾರೈಸುವೆ.
ಬಹುಶಃ ಮಹಾತ್ಮ ಗಾಂಧಿಜೀ ನಮ್ಮ ದೇಶ ಹಳ್ಳಿಗಳಿಂದ ಕೂಡಿದ ದೇಶ..!! ದೇಶ ಕಲ್ಯಾಣದ ಪತಾಕೆ ಹಾರಿಸಬೇಕಾದರೆ ಮೊದಲು ಗ್ರಾಮ ಮತ್ತು ಗ್ರಾಮೀಣ ಬದುಕು ಹಸನಾಗಬೇಕು. ನೆಮ್ಮದಿಯ ತೀರದೆಡೆಗೆ ಸಾಗಬೇಕು ಎಂದು ಕರೆ ಕೊಟ್ಟಿದ್ದು ಅವರೊಬ್ಬ ಗುಜರಾತಿನ ನಾಗರೀಕ ಎಂಬ ಕಾರಣದಿಂದಲೇ ಇದ್ದಿರಬೇಕು ಎಂಬ ಸಂಶಯ ನನಗೆ ಗುಜರಾತಿನ ಗ್ರಾಮೀಣ ಪ್ರದೇಶದ ಜನ ಜೀವನ ನೋಡಿದ ಮೇಲೆ ಅರ್ಥವಾಯ್ತು. ಗುಜರಾತಿನ ಈ ಗ್ರಾಮೀಣ ಬದುಕನ್ನು ನಮ್ಮ ಕರ್ಣಾಟಕದ ಗ್ರಾಮೀಣ ಬದುಕಿಗೆ ಹೋಲಿಸಿದರೆ ಮನಸ್ಸು ಅಳಲಿನ ಆಳಕ್ಕೆ ನೂಕಿಕೊಂಡು ಹೋಗಿಬಿಡುತ್ತದೆ. ಏಕೆಂದರೆ ಇವತ್ತಿಗೂ ಗುಜರಾತಿನ ಗ್ರಾಮೀಣ ಸಮುದಾಯ ಈ ಆಧುನಿಕ ಬಿರುಗಾಳಿಯಂಥ ಆವಿಷ್ಕಾರಿಕ ಬದುಕಿಂದ ದೂರವೇ ಇದೆ. ರಾಜಕೀಯವಾಗಿ ಅಲ್ಲಿ ಶ್ರೀಯುತ ನರೇಂದ್ರ ಮೋದಿಯವರು ದಶಕಗಳಿಂದ ಮುಖ್ಯಮಂತ್ರಿಯಾದ ನಂತರ ಒಂದಿಷ್ಟು ಬದಲಾವಣೆ ಮತ್ತು ಬೆಳವಣಿಗೆಗಳು ಆಗುತ್ತಿದ್ದರೂ ಸಹ ಸಂಪೂರ್ಣ ಆರೋಗ್ಯಕರ ಗ್ರಾಮೀಣ ಸಮುದಾಯ ನಿರ್ಮಾಣಕ್ಕೆ ಇನ್ನು ಕಾಲಾವಕಾಶ ಬೇಕು ಎನ್ನಿಸುತ್ತದೆ.
ಇವತ್ತಿಗೂ ಗುಜರಾತಿನ ಗ್ರಾಮೀಣ ಸಮುದಾಯದಲ್ಲಿ ಬಡತನ, ದಾರಿದ್ರ್ಯ, ಅನಕ್ಷರತೆ, ಅತೀಯಾದ ಮುಗ್ಧತೆ ನಾವು ಕಾಣುತ್ತೇವೆ. ಜೊತೆಗೆ ಆರೋಗ್ಯಕ್ಕೆ ಸಂಬಂಧ ಪಟ್ಟ ಮಕ್ಕಳಲ್ಲಿ ಅಪೌಷ್ಟಿಕತೆ, ದೊಡ್ಡವರಲ್ಲಿ ಕ್ಷಯ, ಓರಲ್ ಕ್ಯಾನ್ಸರ್, ಮತ್ತು ಮಹಿಳೆಯರಲ್ಲಿ ಸರ್ವೈಕಲ್ ಕ್ಯಾನ್ಸರ್ “ಎಮರ್ಜಿಂಗ್ ಕಮ್ಯೂನಿಕೆಬಲ್” ಡಿಸೀಸ್ ಗಳಂತೆ ಗುಜರಾತಿಗರ ಬದುಕಿನಲ್ಲಿ ಹಾಸುಹೊಕ್ಕಾಗಿವೆ.
ನನ್ನ ವಿದ್ಯಾರ್ಥಿಯ ಮನೆಯಲ್ಲಿ ಆವತ್ತು ಒಂದು ದಿನ ಉಳಿದುಕೊಂಡು ಅವರ ಆತಿಥ್ಯವನ್ನು ತುಂಬು ಹೃದಯದಿಂದ ಸ್ವೀಕರಿಸಿ ಮರು ದಿನ ನಾನು ನನ್ನ ವಾಸ್ತವ್ಯಕ್ಕೆ ಮರಳಿದೆ. ಮರಳಿದ ಎಷ್ಟೋ ದಿನಗಳವರೆಗೂ ಆ ಘಟನೆ ನನ್ನನ್ನು ಅತೀಯಾಗಿ ಕಾಡಿತು. ಇನ್ನು ಒಟ್ಟಾರೆಯಾಗಿ ಗುಜರಾತಿನ ಮುಗ್ಧ ಗ್ರಾಮೀಣ ಸಮುದಾಯ ಈ ಎಲ್ಲ ಸಮಸ್ಯಗಳಿಂದ ಮುಕ್ತವಾಗಿ ಸಂತಸದಾಯಕ ಜೀವನವನ್ನು ಸಾಗಿಸಲಿ ಎಂದು ಆ ದಿನಗಳಲ್ಲಿ ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುವಂತೆ ಮಾಡಿತು.
-ಚಿನ್ಮಯ್ ಮಠಪತಿ
ಬಾವುಕತೆಯಿಂದ ಮನಸ್ಸು ತುಂಬಿ ಬರುತ್ತದೆ. ನಿಮ್ಮ ಜೀವನಾನುಭವದ ಮುಂದೆ ನನ್ನ ವಯಸ್ಸು ಏನೂ ಇಲ್ಲ. ಇನ್ನೂ ನಿರಿಕ್ಷಿಸುತ್ತೇನೆ.. ಶುಭವಾಗಲಿ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಸರ್ ……..ಬದುಕು ಕಲಿಸಿ ಕೊಟ್ಟು ಪಾಠಗಳನ್ನೇ ಮೂಲ ದ್ರವ್ಯವಾಗಿಟ್ಟುಕೊಂಡು ನನ್ನ ಅಂತರ್ಗತ ಅನುಭವಗಳಿಗೆ ಅಕ್ಷರ ರೂಪ ಕೊಡಲು ಪ್ರಾರಂಭಿಸಿದವನು ನಾನು.ವಿನಹಃ , ಹಲವಾರು ಮಹಾನ್ ಕೃತಿಗಳನ್ನು ಓದಿ ಮಹಾನ್ ಜ್ಞಾನವನ್ನು ಸಂಪಾದಿಸಿದವನಲ್ಲ. ಏನೇ ಆಗಲಿ . ನಿಮ್ಮ ಈ ಪ್ರೋತ್ಸಾಹ ಮತ್ತು ಸಲಹೆ ಹೀಗೆಯೇ ಇರಲಿ…ಧನ್ಯವಾದಗಳು……………….
huttu mathu saavina vyathayasa vannu neevu vivarisida pari nanna manasannu hokkithu…….sahaaya da hasthada vaikariyannu naanu ishta patte…….thumbha ne chennagide……
ನನ್ನ ಲೇಖನವನ್ನು ಮೆಚ್ಚಿ ಚೆಂದದ ನುಡಿ ಬರೆದಿದ್ದೀರಿ..ತುಂಬು ಹೃದಯದ ಧನ್ಯವಾದಗಳು ರಾಜೇಶ್……………
ನಿಮ್ಮ ಸಾಮಾಜಿಕ ಕಳಕಳಿ ಮತ್ತು ನಿಮ್ಮ ಸಹಾಯ ಹಸ್ತದ ಪರಿ ಚೆನ್ನಾಗಿ ಬಿಂಬಿಸಿದ್ದಿರಿ. ಓದುತ್ತಾ ಓದುತ್ತಾ ಭಾವುಕನಾಗಿ ಬಿಟ್ಟೆ..ನಿಮ್ಮ ಬರವಣಿಗೆ ಎಂಥವರನ್ನೂ ಕೂಡಾ ಮಂತ್ರಮುಗ್ಧರನ್ನಾಗಿಸುತ್ತದೆ.ಶುಭವಾಗಲಿ.
ಎಷ್ಟೋ ವಸಂತ ನಿದಿರೆಯಲ್ಲಿ ವಿಶ್ರಾಂತವಾಗಿದ್ದ ನನ್ನಲ್ಲಿನ ಕಳಕಳಿ, ತದನಂತರ ಎಚ್ಚರಗೊಂಡಿತು. ಎಲ್ಲರಲ್ಲಿಯೂ ಇರಬೇಕಾದ ಪ್ರಾಥಮಿಕ ಗುಣ, ನನ್ನಲ್ಲಿ ಆ ದಿನಗಳಲ್ಲಿ ಸ್ವಲ್ಪ ಏದೂಸಿರಲ್ಲಿ ಉಸಿರಾಡಿತು ಎಂದು ಕೊಂಡಿದ್ದೇನೆ.! ಆ ಸಮಯಕ್ಕೆ ನಾನು ನಿಮಿತ್ಯ ಮಾತ್ರ. ನನ್ನ ಗುರುವಾಗಿ ಕರ ಹಿಡಿದು ನಡೆಸಿಕೊಂಡು ಹೋಗಿದ್ದು, ಆ ಕಾಲವೆಂಬ ಮಾಯೆ..!! ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಸುನೀಲ್ ಸರ್….!!!
ಈ ಲೇಖನವನ್ನು ಮೊದಲ ದಿನ ಏಕೆ ಓದಲಿಲ್ಲ ಅನಿಸಿತು. ಇಷ್ಟು ದಿನ ಈ ಹುಡುಗ ಚೆನ್ನಾಗಿ ಬರೆಯುತ್ತಾನೆ ಅಂದುಕೊಂಡಿದ್ದೆ. ಇವತ್ತು ನಿಮ್ಮ ಒಳ ಮುಖದ ಪರಿಚಯ ಆಯಿತು. ಮನುಷ್ಯನ ನೋವಿಗೆ, ತೊಂದರೆಗೆ ಸ್ಪಂಧಿಸುವ ನಿಮಗೆ ಸಲಾಂ ಅನ್ನಲೆ. ನಿಮ್ಮಂತವರು ನೂರಾರು ಜನ ಹುಟ್ಟಿ ಬರಲಿ ಅನಿಸುತ್ತದೆ. ನಿಮ್ಮ ಲೇಖನಗಳ ಬಗೆಗೆ ಮುಂದಿನ ವಾರ ಬರೆಯುವೆ. ಕೊನೆಯದಾಗಿ ಒಂದು ಮಾತು (ನನ್ನ ಪ್ರೊಫೆಸರ್ ನನಗೆ ಬರೆದ ಮಾತು); ಒಳ್ಳೆಯತನದ ಅಂತಿಮ ವಿಜಯದ ಬಗೆಗೆ ನನಗೆ ವಿಶ್ವಾಸ ಇದೆ. ದೇವರು ಒಳ್ಳೆಯದು ಮಾಡಲಿ.
ಹಿರಿಯರಾದ ಮತ್ತು ನಿಮ್ಮ ಮೇರು ಅಭಿಪ್ರಾಯಕ್ಕೆ ನಾನು ಚಿರಋಣಿ….!!!
karnatakadinda gujarat vargu….. huttina kushiyinda savina anchina dukkadavaraegu…. preetiyinda krutajnathaevargu ondu tour odaedanthae bhaasavaythu…..
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು ಪೂರ್ಣಿಮಾ……!!!
ನಿಮ್ಮ ಲೇಖನದೊಂದಿಗೆ ನಿಮ್ಮ ಮೇರು ವ್ಯಕ್ತಿತ್ವದ ಪರಿಚಯವೂ ಆಯಿತು ಸರ್. ನಿಜ ಹೇಳಬೇಕೆಂದರೆ ನನ್ನಲ್ಲಿ ಮಾತಿಲ್ಲ. ಚಿಂತನ-ಮಂಥನದಂತಹ ನಿಮ್ಮ ಲೇಖನಕ್ಕೆ ಧನ್ಯವಾದಗಳು.
ನಿಮ್ಮ ಅಭಿಪ್ರಾಯಕ್ಕೆ ನನ್ನ ಅನಂತ ಧನ್ಯವಾದಗಳು ಮೇಡಮ್….. ಮನುಷ್ಯರಾಗಿ ಮನುಜ ಕುಲ ಸಮೂಹಕ್ಕೆಇದ್ದಷ್ಟು ದಿನ ಆದಷ್ಟು ಒಳ್ಳೆಯದನ್ನು ಮಾಡೋಣ… ಇಲ್ಲಿ "ನಾನು" "ನನ್ನದು" ಎಂಬುದು ಬರೀ ನಿಮಿತ್ಯವಷ್ಟೇ….ಮಾನವೀಯತೆಯೇ ಸರ್ವಸ್ವದ ಜೀವಾಳು….!!!
ಚಿನ್ಮಯ್ ಈ ವಾರದ ಲೇಖನ ವಿಭಿನ್ನವಾಗಿತ್ತು. ನಿಜಕ್ಕೂ ಮನಸ್ಸಿಗೆ ತಟ್ಟಿದ ಬರಹ…ಕೆಲಕಾಲ ರಂಜಿತ್ ಪರ್ಮಾರನ ಕುಟುಂಬ ನನ್ನ ಮನಸ್ಸನ್ನು ತುಂಬಾ ಕಾಡ್ತು…
ಅಭಿಪ್ರಾಯಕ್ಕೆ ಧನ್ಯವಾದಗಳು ಮೇಡಮ್……………….
ಅನುಭವಗಳಿಗೆ ಹೆಚ್ಚಾಗಿ ಮತ್ತೇನನ್ನೂ ಬೆರಸದೆ ಎದೆಯಾಳದಿಂದ ಲೇಖನ ಮಾಲೆಗಳನ್ನು ಕಟ್ಟುತ್ತಿದ್ದೀರಿ, ಧನ್ಯವಾದಗಳು. ಈ ಲೇಖನ ಸರಣಿಗೆ ಮುಂಚೆ ನಿಮ್ಮ ಹನಿಗಳಿಂದಷ್ಟೇ ನಿಮ್ಮನ್ನು ಬಲ್ಲವನು ನಾನು, ಗದ್ಯದಲ್ಲಿ ಇನ್ನಷ್ಟು ಹಿಡಿತ ಸಾಧಿಸಬಹುದು ನೀವು. ನಿಮ್ಮಲ್ಲಿ ಪದ ಸಂಗ್ರಹವಿದೆ, ಅದನ್ನು ಅಚ್ಚುಕಟ್ಟಾಗಿ ಬಳಸಿಕೊಂಡರೆ ಸಾಕು. ನನ್ನ ಗುಜ್ಜು ಸ್ನೇಹಿತರ ನೆಪ ಮಾಡಿ ನಾನೂ ಗುಜರಾತ್ ಸುತ್ತಿ ಬರುವಂತೆ ಪ್ರೇರೇಪಿಸುತ್ತದೆ ನಿಮ್ಮ ಲೇಖನ ಸರಣಿ. 🙂
– ಪ್ರಸಾದ್.ಡಿ.ವಿ.
ನಿಮ್ಮ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು ಪ್ರಸಾದ್….!!!
ಮಗಾ ಚಿನ್ಮಯ್,
really Hats off!!
ನಿನ್ನ ಜೀವನದ ಬಾಲ್ಯದ ಕ್ಷಣಗಳನ್ನು ಓದುತ್ತಾ ಹೋದಂತೆ ನನ್ನನ್ನೇ ನಾನು ಮರೆತುಬಿಟ್ಟೆ.
ನಿನ್ನ ಜೊತೆ ಜಾಸ್ತಿ ಮಾತನಾಡಲಾಗಿಲ್ಲ. ಆದರೆ ಈ ಲೇಖನ ಓದುತ್ತಿದ್ದಂತೆ ಬಹಳ ಆತ್ಮೀಯನಾಗಿಬಿಟ್ಟೆ.
ಹುಟ್ಟು ಸಾವು ಎರಡನ್ನು ಬಹಳ ಹತ್ತಿರದಿಂದ ನೋಡಿದ್ದೀಯ. ಆ ನಿನ್ನ ಜೀವನಾನುಭವವೇ ಇಲ್ಲಿಯವರೆಗೆ ನೀನು ಸಾಧನೆ ಮಾಡಿರುವಂತಹುದು.
ಆ ಗುಜರಾತ್ ಹುಡುಗನಿಗೆ ನೀ ಮಾಡಿದ ಸಹಾಯವನ್ನು ನಮ್ಮಲ್ಲೆಷ್ಟು ಜನ ಮಾಡುತ್ತಾರೆ ಹೇಳು.
ಆ ಪೈಕಿ ನೀನು ವಿಶೇಷವಾಗಿ ನಿಲ್ಲುತ್ತೀಯ.
ನನ್ನ ಜೀವನದ ಧ್ಯೇಯವೂ ಅಷ್ಟೇ ಮಗ, ಬಡವರಿಗೆ ಸಹಾಯ ಮಾಡಿದಷ್ಟು ಅವರೂ ನಿನ್ನನ್ನು ಜೇವನದ ಕಡೆಯವರೆಗೂ ನೆನೆಸಿಕೊಳ್ಳುತ್ತಾರೆ.
ದೇವರೂ ನಿನ್ನನ್ನು ಚೆನ್ನಾಗಿಟ್ಟಿರುತ್ತಾನೆ. ಗುಜರಾತಿನ ನಿನ್ನ ಅನುಭವದಲ್ಲಿನ ಈ ಸರಣಿಯಲ್ಲಿ ಈ ರೀತಿಯ ವಿಶೇಷಗಳು ಬರುತ್ತವೆಂದು ಅಂದುಕೊಂಡಿರಲಿಲ್ಲ.ಈ ಸಂಚಿಕೆಯಂತೂ ಸಿಕ್ಕಾಪಟ್ಟೆ ಇಷ್ಟವಾಯಿತು. ದೇವರು ನಿಂಗೆ ಒಳ್ಳೆಯದು ಮಾಡಲಿ.
ಬರೀತಾ ಇರು:) ನಾನು ಓದುತ್ತಾ ಇರುತ್ತೇನೆ!!
ಸಂತು…ಧನ್ಯವಾದಗಳು…!! ನನ್ನ ಬರಹಕ್ಕೊಂದು ದಿಶೆ ಮತ್ತು ನೆಲೆಯನ್ನುಕೊಡಮಾಡಿಕೊಟ್ಟು ,"ಪಂಜು" ನನ್ನ ಅನುಭವಗಳಿಗೆ ಮುಕ್ತಿ ಸಿಗುವಂತೆ ಮಾಡಿದೆ. ಇದೆಲ್ಲವೂ ಪಂಜುವಿನ ಕೊಡುಗೆ…………………………….