ನನ್ನೊಳಗಿನ ಗುಜರಾತ..!!! ಭಾಗ-2

 

ಆಗಷ್ಟ ತಿಂಗಳಲ್ಲಿ ನಮ್ಮ ಕರ್ಣಾಟಕದೆಲ್ಲೆಡೆ ಮುಂಗಾರು ಮಳೆಗಾಲ, ನಾವುಗಳು ಇಲ್ಲಿದ್ದುಕೊಂಡು ಸೂಯ್ಯೆಂದು ಸುರಿವ ಮಳೆಯ ಜೊತೆಗೆ ಚೆಂದದ ತಂಪನೆಯ ಹವಾಮಾನವನ್ನು ಸವಿಯುತ್ತಿರುತ್ತೇವೆ. ಆದರೆ, ಭೌಗೋಳಿಕವಾಗಿ ಇಲ್ಲಿಗೂ ಮತ್ತು ಗುಜರಾತಿನ ಹವಾಮಾನಕ್ಕೂ ತುಂಬಾ ವ್ಯತ್ಯಾಸವಿದೆ. ಆ ಆಗಷ್ಟ ಮಾಸದಲ್ಲಿ ಅಲ್ಲಿದ್ದಂತಹ ತಾಪಮಾನ ಸರಿ ಸುಮಾರು 42’ ಡಿಗ್ರಿ ಸೆಲ್ಸಿಯಸ್. ಉರಿಯುವ ಕೆಂಡದಂತಹ ತಾಪಮಾನಕ್ಕೆ ಬಳಲಿ ಬೆಂಡಾಗಿ ಅವರ ಮನೆ ತಲುಪಿದೆ. ಆ ಮೊದಲೇ ರಂಜನ ಪಟೇಲ್ ರವರನ್ನು ನಾನು ಒಂದೆರಡು ಬಾರಿ ನಮ್ಮ ಕರ್ಣಾಟಕಕ್ಕೆ ಬಂದಾಗ ಭೇಟಿಮಾಡಿದ್ದೆ. ಅಪರಿಚಿತರು ಎಂಬ ಆತಂಕವೂ ನನ್ನಲ್ಲಿ ಇಲ್ಲವಾಗಿತ್ತು.  ಅವರು ಸಹ ನನ್ನ ಬರುವಿಗಾಗಿ ತಮ್ಮ ಕೆಲಸಕ್ಕೆ ರಜೆ ಹಾಕಿ ಕಾಯುತ್ತಿದ್ದರು. ಮೂಲತಹಃ ಅವರು ಸರಕಾರಿ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದವರು. ಮಧ್ಯಮ ವಯಸ್ಸಿನ ಮಹಿಳೆ, ಚಿಕ್ಕ ಸಂಸಾರ, ಗಂಡ ಹೆಂಡತಿ ಮತ್ತು ಒಂದೇ ಒಂದು ಗಂಡು ಮಗು.!! ಈ ನಮ್ಮ ಶುಶ್ರೂಷ ಪ್ರೊಫೆಷನ್ ನಲ್ಲಿ ಲಾಲನೆ ಪಾಲನೆ ಮತ್ತು ಸ್ಪಂದಿಸುವ ಗುಣಗಳು ಮಾತ್ರ ಅಗ್ರವಾಗಿರುತ್ತವೆ. ಆದ್ದರಿಂದಲೇ ಏನೋ ನಾನು ಅವರು ಮನೆಗೆ ಹೋದ ಮೊದಲ ಕ್ಷಣದಿಂದಲೇ ಚೆಂದದ ಅತಿಥಿ ಸತ್ಕಾರವನ್ನು ನನಗೆ ಕಲ್ಪಿಸಲು ಪ್ರಾರಂಭಿಸಿದರು. 

ಗುಜರಾತಿಗರ ವಿಶೇಷವಾದ ಒಂದು ಗುಣವನ್ನು ನಾನೂ ನಿಮಗೆ ಹೇಳಲೇ ಬೇಕು. ನೀವು ಯಾರದಾದರೂ ಮನೆಗೆ ಅತಿಥಿಯಾಗಿ, ಇಲ್ಲವೆ ಯಾವುದಾದರೂ ಉಪಹಾರ ಮಂದಿರಕ್ಕೆ ಉಪಹಾರಕ್ಕೊ ಅಥವಾ ಭೋಜನಕ್ಕೆಂದು ಹೋಗಿ. ಅವರು ನಿಮಗೆ ತೆರೆದ ಮನಸ್ಸಿಂದ ಆತಿಥ್ಯ ಸತ್ಕಾರವನ್ನು ಮಾತ್ರ ಅಚ್ಚು ಕಟ್ಟಾಗಿ ನಗು ನಗುತ್ತಲೇ ಧಾರೆ ಎರೆಯುತ್ತಾರೆ.ಅದು ಶುದ್ಧ ನಮ್ಮ ಭಾರತೀಯ ಪರಂಪರೆಯ ಅಣತಿಯಂತೆ.ಇಂಥದುದರಲ್ಲಿ ಆವತ್ತು ಅಗಷ್ಟ 15 ರಂದು ಅವರ ಮನೆಗೆ ತಲುಪಿದ ನಂತರ ಅತ್ಯಂತ ಸಂತಸದಿಂದ ಕರ್ಣಾಟಕ ರಾಜ್ಯವೇ ತಮ್ಮ ಮನೆಗೆ ಗುಳೆ ಎದ್ದು ಬಂದಿದೆ ಏನೋ ಎನ್ನುವಂತೆ ಖುಷಿ ಪಟ್ಟರು. ಒಂದೈದು ನಿಮಿಷಗಳ ಕಾಲ ಉಭಯ ಕುಶಲೋಪರಿಯಲ್ಲಿ ಭಾಗಿಯಾಗಿ. ಆಮೇಲೆ ನನಗೆ ಸ್ನಾನ ಮಾಡಿ ಬನ್ನಿ,ನಂತರ ತಿಂಡಿ ಚಹಾ ಮಾಡುವಿರಂತೆ ಎಂದು ಹೇಳಿ ಅಡುಗೆ ಮನೆ ಸೇರಿದರು.

ನಾನು ಸ್ನಾನವನ್ನು ಮುಗಿಸಿಕೊಂಡು ಹೊರಬರುತ್ತಿದ್ದಂತೆಯೇ ಅವರು ಆ ವಠಾರದ ಹತ್ತು-ಹನ್ನೆರಡು ಮಹಿಳೆಯರನ್ನೊಳಗೊಂಡ ಸ್ತ್ರೀ ಮಿತ್ರ ಮಂಡಳಿಯನ್ನೇ ಮನೆಗೆ ಆಹ್ವಾನಿಸಿದ್ದರು. ಹೊರ ಬಂದು ನೋಡಿದರೆ ಬಲಗಡೆಯ ಹೆಗಲ ಮೇಲೆ ಸೀರೆ ಸೆರಗನ್ನು ಹೊದ್ದು ಸರಿ ಸುಮಾರು 35 ರಿಂದ 45 ರ ಪ್ರಾಯದ ಗೃಹಿಣಿಯರು ಶಿಕ್ಷಕನ ಮುಂದೆ ವಿನಮ್ರವಾಗಿ ನಿಲ್ಲುವ ಪುಟ್ಟ ವಿದ್ಯಾರ್ಥಿಯಂತೆ ನಿಂತುಕೊಂಡು ಸಾಹೇಬ್ ನಮಸ್ತೆ!!ಆಪ್ನೇ ಅಭಿ ಆಯಾ ಕ್ಯಾ?? ಎಂದರು.ಮಾತೃ ಸ್ವರೂಪಿಯಂತಿದ್ದ ಅವರನ್ನು ಮತ್ತು ಅವರು ವಿನಯದಿಂದ ಕುಶಲೋಪರಿಯನ್ನು ವಿಚಾರಿಸುವ ರೀತಿಯನ್ನು ನೋಡಿ ನಾನು ಮೂಖ ವಿಸ್ಮಿತನಾದೆ. ವಿನಮ್ರದಿಂದಲೇ“ಹಾ ಮಾ ಮೈ ಅಭಿ ಆಯಾ… ತುಮ್ ಬೈಟಿಯೇ”ಎಂದೆ. ಸಂಕೋಚದಿಂದಲೇ, “ಸಾಹೇಬ್ ಆಪ್ ಬೈಟಿಯೇ. ಆಪ್ ಆಜ್ ಕಾ ದಿನ್ ಹಮಾರ ಗುಜರಾತ್ಕೋ ಅತಿಥಿ ಹೈ”..!! ಎಂದರು.ಆಮೇಲೆ ನನ್ನ ವಿನಂತಿಗೆ ಒಪ್ಪಿ ಅವರೆಲ್ಲರೂ ಮನೆಯ ಪಡಸಾಲೆಯಲ್ಲಿನ ಅಗಾಲವಾದ ಮಂಚದ ಮೇಲೆ ಒಬ್ಬರ ತೊಡೆಯ ಮೇಲೆ ಇನ್ನೊಬ್ಬರ ತೊಡೆಗಳನ್ನು ಹೇರಿಕೊಂಡು ದಟ್ಟವಾಗಿ ಕುಳಿತು ಕೊಂಡರು. ನಾನು ಅವರೆದುರಿಗಿನ ಕುರ್ಚಿಯಲ್ಲಿ ಕಾಲು ಮೇಲೆ ಕಾಲು ಹಾಕಿಕೊಂಡು ಬಿಗುಮಾನದ ಸೆಡುವಿನೊಂದಿಗೆ ಗಾಂಭೀರ್ಯವಾಗಿ ಕರುನಾಡನ್ನು ಪ್ರತಿನಿಧಿಸಿ ಬಂದ ಅತಿಥಿ ಪ್ರತಿನಿಧಿಯಂತೆ ಢೌವಲತ್ತಿನಿಂದ ಒರಗಿಕೊಂಡೆ.

ರಂಜನ ಪಟೇಲ ರವರು ನನಗೆ “ನೀವೇನು ಸಂಕೋಚ ಪಡಬೇಡಿ ಇವರೆಲ್ಲ ಕರ್ಣಾಟಕದ ಅತಿಥಿಯನ್ನು ಕಾಣಲು ಎರಡು ದಿನದಿಂದ ಕಾತರದಿಂದ ಕಾಯುತ್ತಿದ್ದವರು. ಆದ್ದರಿಂದ ನೀವು ಅವರ ಜತೆ ಮಾತನಾಡುತ್ತ ಕುಳಿತುಕೊಳ್ಳಿ. ನಾನು ಎಲ್ಲರಿಗೂ ಚಹಾ ಪಾನಿ ತರುತ್ತೇನೆ” ಎಂದು ಹೇಳಿ ಅಡುಗೆ ಮನೆಗೆ ಹೋದರು. ಅವರ ಹಿಂದಿಂದಲೇ ಮೂರು ನಾಲ್ಕು ಜನ ಸಹಾಯಕ್ಕೆಂದು ರಂಜನ ರವರನ್ನು ಹಿಂಬಾಲಿಸಿದರು. ನಾನು ಮೂಲತಹಃ ಮಾತಿನ ಮಲ್ಲ, ಮಾತಿಗೆಂದು ಯಾರಾದರೂ ಸಿಕ್ಕರೆ ಅವರು ಕರ್ಣ ಪಿಶಾಚಿ ಮಾತು ಸಾಕು ನಿಲ್ಲಿಸು ಎನ್ನುವವರೆಗೂ ಮಾತು ಹೇಳುತ್ತಲೇ ಇರುತ್ತೇನೆ. ಅಂಥದುದರಲ್ಲಿ ಆವತ್ತು ಮಾತು ಕೇಳಲೆಂದೇ ಬಂದವರಂತೆ ಕಂಡ ಅ ಡಜನ್ ಗಿಂತಲೂ ಹೆಚ್ಚು ಜನರನ್ನು ನೋಡಿ ಮನಸ್ಸು ಒಳಗೊಳಗೆ ಕುಣಿದಾಡಿತು. ನನಗೆ ಎಲ್ಲಿಲ್ಲದ ಸಂತಸದ ಜೊತೆಗೆ ಸ್ವಲ್ಪ ಮುಜುಗರವು ಆಯ್ತು. “ಮದುವೆ ಗಂಡು ಕನ್ಯಾ ನೋಡಲೆಂದು ಕನ್ಯಾ ಮನೆಗೆ ಹೋದಾಗ ಯಾವ ವಾತಾವರಣ ಇರುತ್ತದೆಯೋ ಅಂಥದೆ ವಾತಾವರಣ ಆ ಕ್ಷಣಕ್ಕೆ ರಂಜನ ರವರ ಮನೆಯಲ್ಲಿ ಮೇಳೈಸಿತ್ತು”. ಆದರೆ, ಕನ್ಯಾ ನೋಡಲೆಂದು ಹೋದ ಗಂಡು ನಾನಾಗಿರಲಿಲ್ಲ ಮತ್ತು ಅಲ್ಲಿ ಯಾವ ವಧುವು ಶೃಂಗಾರಗೊಂಡು ನಸು ನಾಚುತ್ತ ನನ್ನ ಮುಂದೆ ಬಂದು ಕುಳಿತಿರಲಿಲ್ಲ…!!

ನನ್ನ ಬಗ್ಗೆ ಮತ್ತು ನಮ್ಮ ಚೆಂದದ ಕರ್ಣಾಟಕದ ಬಗ್ಗೆ ಬಹುಶಃ ರಂಜನ ಪಟೇಲರು ಬಂದಂತಹ ಆ ನೆರೆವರೆಯವರಿಗೆ ಮೊದಲೇ ಹೇಳಿಯಾಗಿತ್ತು ಅನ್ನಿಸುತ್ತೆ. ಅವರು ಮನಸ್ಸಲ್ಲೇ ಹಲವಾರು ಪ್ರಶ್ನೆಗಳನ್ನು ತಯಾರು ಮಾಡಿಕೊಂಡೇ ಬಂದಿದ್ದರು. ಇತ್ತ ಚಹಾ ಪಾನಿ ಬರುವ ಮೊದಲೇ ಒಬ್ಬ ಮಹಿಳೆ “ಸಾಹೇಬ್ ಆಪ್ ಸೌತ್ ಲೋಗ್ ಬಹುತ್ ಅಚ್ಛಾ ರಹೆತೆ ಹೈ. ಫೀರ್ ಬಹುತ್ ಸುಂದರ ಭಿ ಹೋ..!! ಮೈನೆ ಸೌತ್ ಕಾ ಮೂವಿ ಮೇ ಧೇಖಾ ಹೈ..!! ಮುಝೆ ಸೌತ್ ಇಂಡಿಯಾ ಬಹುತ್ ಅಚ್ಛಾ ಲಗ್ತಾ ಹೈ, ಆಪ್ ಗಲತ್ ನಹಿ ಸೋಚೊಗೆ ಥೋ ಮೈ ಏಕ್ ಭಾತ್ ಕಹೂಂಗಿ” ಎಂದಳು..!!! ನನಗೆ ಆ ಮಹಿಳೆಯ ಮುಖದಲ್ಲಿನ ಭಾವನಾತ್ಮಕ ಏರಿಳಿತಗಳನ್ನು ಕಂಡು, ಏನೋ ಒಂದು ಭಾವನಾತ್ಮಕವಾದ ಮಾತನ್ನೇ ಹೇಳಬಯಸುತ್ತಿರಬೇಕು ಎಂದು ಅರ್ಥೈಸಿಕೊಂಡೆ. ನಾನು ವಿಳಂಬ ಮಾಡದೆಯೇ.. “ಪ್ಲೀಜ್ ಭೋಲಿಯೇ…ಮೈ ಬಿಲ್ ಕುಲ್ ಕುಛ್ ಗಲತ್ ನಹಿ ಸೊಚುಂಗಾ” ಎಂದೆ. ತಕ್ಷಣ ಮಂಚದ ಎರಡನೇ ಸಾಲಿನಿಂದ ಮುಂದಿನ ಸಾಲಿಗೆ ನೆಗೆದು. “ಆಪ್ ಜಾನೇಕೆ ವಖ್ತ ಮುಝೆ ಕರ್ಣಾಟಕೊ ಲೆ ಜಾಹಿಯೇ ಮುಝೇ ಝರುರ ಆಪ್ ಕಾ ಭಾರಿಷ್ ವಾಲಿ ಸುಂದರ್ ರಾಜ್ಯ ಕೊ ಧೇಖನಾ ಹೈ” ಎಂದಳು. ನಮ್ಮ ಕರ್ಣಾಟಕದ ಮೇಲಿನ ಪ್ರೀತಿಗೆ ಅವರಿಗೆ ನಾನು ಕೃತಜ್ಞತೆ ಹೇಳಿ, ಖಂಡಿತಾ ಆಗಲಿ, ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ ಎಂದೆ.

ಅಷ್ಟರಲ್ಲಿ ಅಡುಗೆ ಮನೆಯಿಂದ ರಂಜನ ರವರ ಜೊತೆಗೆ ಚಹಾ ಪಾನಿ ತರಲೆಂದು ಹೋಗಿದ್ದ ಇಬ್ಬರು ಮಹಿಳೆಯರು,ಕೈಯಲ್ಲಿ “ಕಮನ್” (ಒಂದು ರೀತಿಯ ಉಪಹಾರ), ಗೊಟಾ (ಭಜಿ) ಮತ್ತು ಜಿಲೇಬಿಗಳನ್ನು ತಟ್ಟೆ ತುಂಬ ತಂದು ಟೇಬಲ್ ಮೇಲಿಟ್ಟರು. ನಾನು ಅವರಿಗೆ ಕೇಳಿದೆ “ಏನಮ್ಮ ಇದು ನನಗೊಬ್ಬನಿಗೋ ಅಥವಾ ಎಲ್ಲರಿಗೂ ಸೇರಿ ಒಂದೇ ತಟ್ಟೆಯಲ್ಲಿ ಕೊಟ್ಟಿದ್ದಿರೋ ಎಂದು”. ಇದು ನನಗೊಬ್ಬನಿಗೆ ಅಂತಾದರೆ ಇದನ್ನು ನಾನು ಒಂದು ತಿಂಗಳು ಮೇಯುತ್ತೇನೆ ಎಂದೆ. ನನ್ನ ಹಾಸ್ಯ ಪ್ರಜ್ಞಕ್ಕೆ ಎಲ್ಲರೂ ಗೊಳ್ಳೆಂದು ನಕ್ಕರು. ಅದರಲ್ಲಿ ಒಬ್ಬ “ಜಸ್ಟ್ ಮ್ಯಾರಿಡ್” ಮಹಿಳೆ. “ಧೇಖಿಯೇ ಹಮಾರ್ ಸಾಹೇಬ್ ಬಹುತ್ ಬಡಿಯಾ ಹೈ..ಕಿತನಾ ಅಚ್ಛಾ ಬಾತ್ ಭೋಲ್ತೆ” ಎಂದಳು. ಪಕ್ಕದಲ್ಲಿಯೇ ಕುಳಿತಿದ್ದ ಮತ್ತೊಬ್ಬ ಮಹಿಳೆ. “ಐಸಾ ಮತ್ ಕಹೋ ಆಲ್ ರೆಡಿ ತೆರಾ ಶಾದಿ ಹೊ ಚುಕಾ ಹೈ”..!! ಎಂದಳು.ಅವರ ಮಾತಿಗೆ ನೆರೆದಿದ್ದ ವೃಂದ ಮತ್ತೊಮ್ಮೆ ನಗೆಹೊನಲಲ್ಲಿ ತೇಲಿತು.  

ತದನಂತರ ತಿಂಡಿ ಪೂರೈಸುತ್ತಿದ್ದವರು ಎಲ್ಲರಿಗೂ ಒಂದೊಂದರಂತೆ ಪ್ಲೇಟ್ ನ್ನು ಹಿಡಿದುಕೊಂಡು ಬಂದರು. ನಾನು ಅವರಿಗೆ ಹೇಳಿದೆ. ಎಲ್ಲರಿಗೂ ಆಗುವಷ್ಟು ತಿಂಡಿಯನ್ನು ನನ್ನೊಬ್ಬನ ತಟ್ಟೆಯಲ್ಲಿಯೇ ಕೊಟ್ಟಿದ್ದೀರಿ. ನಾವೇಲ್ಲರೂ ಇದರಲ್ಲಿಯೇ ಹಂಚಿಕೊಂಡು ತಿನ್ನುತ್ತೇವೆ. ಆದ್ದರಿಂದ ಅವೆಲ್ಲ ಪ್ಲೇಟ್ ಗಳನ್ನು ಮರಳಿ ತೆಗೆದುಕೊಂಡು ಹೋಗಿ ಎಂದು. ನನ್ನ ತ್ವರಿತ ಹೊಂದಾಣಿಕೆಯ ಗುಣಕ್ಕೆ ಅವರೆಲ್ಲ ಮನಸ್ಸಲ್ಲಿಯೇ ಸೋತು ಹೋದರು. ನನ್ನ ಬಲವಾದ ಒತ್ತಾಯಕ್ಕೆ ಓಗೊಟ್ಟು ನನ್ನ ಜೊತೆಗೆಯೇ ಜತೆಯಾಗಿ ತಿಂಡಿ ಸವಿದರೂ. ನಾನು ಅಲ್ಲಿಗೆ ಹೋಗಿ ಇನ್ನು ಎರಡು ತಾಸು ಸಮಯವು ಕಳೆದಿರಲಿಲ್ಲ, ಅಷ್ಟರಲ್ಲಿ ನಮ್ಮೆಲ್ಲರ ನಡುವ ಚೆಂದದ “ಐ.ಪಿ.ಆರ್” ಬೆಳೆದು ನಿಂತಿತು. ಹರಟುತ್ತಲೇ ಎಲ್ಲರೂ ಕಮನ್ ಮತ್ತು ಗೋಟಾವನ್ನು ಸವಿದೆವು. ನಡು ನಡುವೆ  ಹಾಸ್ಯ ಚಿನಕುರುಳಿ ಚಟಾಕಿಗಳನ್ನು ಸಿಡಿಸುತ್ತ.

ತಿಂಡಿ ಚಪ್ಪರಿಸಿದ ನಂತರ ಚಹಾ ತಂದು ಕೊಟ್ಟರು..!! ಗುಜರಾತಿನ ಚಹಾಕ್ಕೆ ನಾನು ಆಗಲೇ ಮಾರುಹೋಗಿದ್ದೆ. ನಮ್ಮ ದಕ್ಷಿಣ ಕರ್ಣಾಟಕದಲ್ಲಿ ಹೇಗೆ ನಾವು ಅದ್ಭುತ ಕಾಫಿ ಪಡೆಯುತ್ತೇವೆಯೋ ಅಂಥದೆ ಅತ್ಯಂತ ವಿಶೇಷವಾದಂತಹ ಚಹಾ ಗುಜರಾತಿನಲ್ಲೆಡೆ ಸಿಗುತ್ತದೆ. ಚಹಾ ಮಾಡಬೇಕಾದರೆ ಹಸೆ ಶುಂಠಿ, ಏಲಕ್ಕಿ ಮತ್ತು ಇನ್ನಿತರ ವನಸ್ಪತಿಗಳನ್ನು ಬೆರೆಸಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಕುದಿಯುವ ಚಹಾನಲ್ಲಿ ಬೆರೆಸುತ್ತಾರೆ. ಮತ್ತು,ಚಹಾವನ್ನು ಸಂಪೂರ್ಣ ಗುಜರಾತಿನ ಧಡೂತಿ ಎಮ್ಮೆಗಳ ಗಟ್ಟಿ ಹಾಲಿನಲ್ಲಿ ಮಾಡುತ್ತಾರೆ. ಹಾ..ಹಾ..ಎಂಥ ರುಚಿ !!! ಕುಡಿದರೆ ಮನಸ್ಸು ಕ್ಷಣಾರ್ಧದಲ್ಲಿಯೇ ಪುಳಕಗೊಳ್ಳುತ್ತೆ. ಅಂತಹ ರುಚಿಕಟ್ಟಾದ ಚಹಾವನ್ನು ಮೊದಲು ಒಂದು ಕಪ್ ಕುಡಿದೆ. ಆಮೇಲೆ ಮತ್ತೊಂದು ಕಪ್ ಕೇಳಿ ಪಡೆದು ಕುಡಿದೆ.

 ಅವರ ಮನೆಯ ಅತಿಥಿಯಾದ ಎರಡೇ ಎರಡು ಗಂಟೆಗಳಲ್ಲಿ ನಾವುಗಳು ಎಷ್ಟೋ ವರ್ಷದ ಹಳೆಯ ಸ್ನೇಹಿತರೇನೋ ಎನ್ನುವಷ್ಟರ ಮಟ್ಟಿಗಿನ ಹತ್ತಿರದ ಭಾವುಕ ಪರಿಚಯವನ್ನು ಬೆಳೆಸಿಕೊಂಡೆವು.ಸಮಯ ಸಂಜೆ ನಾಲ್ಕು ಗಂಟೆಯಾಯ್ತು. ಬಂದ ಜನ ಮನೆಗೆ ಮರಳದೇ ಇನ್ನು ಹರಟುವ ಮೂಡಲ್ಲಿದ್ದರು.ಇದನ್ನು ಕಂಡ ರಂಜನ ರವರು, ಅವರಿಗೆ… “ಹರಟುವುದು ಸಾಕು ಪಾಪ ಎರಡು ದಿನ ಪ್ರಯಾಣ ಮಾಡಿ ಬಂದಿದ್ದಾರೆ ಸ್ವಲ್ಪ ವಿಶ್ರಾಂತಿ ಪಡೆಯಲಿ.ತಾವು ಮನೆಗೆ ಹೋಗಿ. ಇಲ್ಲ ಅಂದ್ರೆ ಇಲ್ಲಿಯೇ, ಟಿ.ವಿ ನೋಡುತ್ತಾ ಕುಳಿತುಕೊಳ್ಳಿ” ಎಂದರು.ಅವರೆಲ್ಲರು ಒಲ್ಲದ ಮನಸ್ಸಿನಿಂದಲೇ ಒಪ್ಪಿ ಕೆಲವರು ಟಿ.ವಿ ವಿಕ್ಷನೆಗೆ ಕುಳಿತರು ಕೆಲವರು ಮನೆಕಡೆಗೆ ಪಾದ ಬೆಳೆಸಿದರು.

ನಾನು ಒಂದೆರಡು ಗಂಟೆ ಮಲಗಿ ಎದ್ದೆ.ಸಂಜೆ ಆರು ವರೆ ಸುಮಾರಿಗೆ ಮತ್ತೊಮ್ಮೆ ಆ ಗುಜರಾತಿನ ಮಜಬೂತಾದ ಚಹಾವನ್ನು ಹೀರಿದೆ.ಆಮೇಲೆ ಅಕ್ಕ- ಪಕ್ಕದ ವಠಾರಿನ ಗೃಹಿಣಿಯರ ಮತ್ತು ಅವರ ಮಕ್ಕಳ ಜೊತೆಗೂಡಿ ಅಲ್ಲಿಂದ ನಾಲ್ಕಾರು ಕಿ.ಮೀ ದೂರದಲ್ಲಿದ್ದಂತಹ “ವಾತ್ರಕ್” ಎಂಬ ಹಳ್ಳಿಯ ಕಡೆಗೆ ಸಂಜೆ ವಿಹಾರಕ್ಕೆಂದು ಹೊರಟೆವು. ಮುಸ್ಸಂಜೆಯಲಿ ದಿನಕರ ತನ್ನ ದೈನಿಕ ಕರ್ತವ್ಯವನ್ನು ಮುಗಿಸಿ ತಾಯಿಯ ಮಡಿಲಿನ ಆಸರೆಗೆ ಧಾವಿಸುತ್ತಿದ್ದ.ಕೆಂಬಣ್ಣದ ಗೋಧೂಳಿಯು ಗುಜರಾತಿನ ಚಪ್ಪಟೆ ಹೊಲ ಗದ್ದೆಗಳಿಗೆ ಮತ್ತು ಹಸಿರಿನ ಪೈರುಗಳಿಗೆ ಸುಂದರ ರಂಗನ್ನು ನೀಡಿತ್ತು. ಇತ್ತ, ಶೆಖೆಯೂ ಕಡಿಮೆಯಾಯ್ತು.ಹಗುರವಾದ ಚೈತನ್ಯಭರಿತ ಹೆಜ್ಜೆಗಳನ್ನು ಹಾಕುತ್ತ ನಾವು ಬಾಯಡ್ ನಗರದ ಪೇಟೆ ರಸ್ತೆಯನ್ನು ದಾಟಿ ಮುಂದೆ ಸಾಗಿದೆವು.ವಾತ್ರಕ್ ನಲ್ಲಿ ಇರುವಂತಹ ಶಿವ ಮಂದಿರಕ್ಕೆ ಹೋಗುತ್ತಿದ್ದ ಮಾರ್ಗ ಮಧ್ಯದಲ್ಲಿ, ಟೈರ್ ಗಾಲಿಯ ಒಂಟೆ ಬಂಡಿಯನ್ನು ಹೊಡೆದುಕೊಂಡು “ಮೀಸೆ ಕಾಕಾ” ಮನೆಕಡೆಗೆ ಮರಳುತ್ತಿದ್ದ. ಅವನ ಬಂಡಿಯಲ್ಲಿ ಹಸಿ ಶೇಂಗಾ ಬಳ್ಳಿಗಳ ಒಂದೆರಡು ಹೊರೆಗಳು ಸಹ ಇದ್ದವು. ನನ್ನ ಸಂಗಡವಿದ್ದ ಹತ್ತಾರು ಮಹಿಳೆಯರು ಅವನಿಗೆ ನಮ್ಮೆಲ್ಲರನ್ನು ಬಂಡಿ ಸವಾರಿ ಮಾಡಿಸುವಂತೆ ವಿನಂತಿಸಿದರು.

ಮೊದ ಮೊದಲು ಅವನು ವಿನಂತಿಯನ್ನು ತಿರಸ್ಕರಿಸಿ ಹೇಳಿದ. “ಇಷ್ಟೊಂದು ಜನರನ್ನು ನಾನು ಬಂಡಿಗೆ ಹತ್ತಿಸಿಕೊಂಡು ಹೋಗಲಾಗುವುದಿಲ್ಲ ವುಂಟ (ಒಂಟೆ) ಮೊದಲೇ ದಣಿದು ಹೈರಾನಾಗಿದೆ ನೀವು ನಡೆದುಕೊಂಡು ಬನ್ನಿ” ಅಂತ. ನಂತರ ಅವರಲ್ಲಿನ ಒಬ್ಬ ಮಹಿಳೆ ನನ್ನ ಕುರಿತು ಹೇಳಿದಳು.ಇವರು ಕರ್ಣಾಟಕದಿಂದ ಬಂದಿದ್ದಾರೆ ಕೇವಲ ಇವರನ್ನು ಮತ್ತು ಮಕ್ಕಳನ್ನಾದರೂ ಬಂಡಿಯಲ್ಲಿ ಕರೆದುಕೊಂಡು ಹೋಗಿ ಎಂದಳು. ಈ ಮಾತು ಕೇಳಿದ್ದೇ ತಡ, ಅವನು ಒಂಟೆಯ ನಿಯಂತ್ರಣ ಹಗ್ಗವನ್ನು ಜಗ್ಗಿ ಹಿಡಿದು ಗಾಡಿಯನ್ನು ನಿಲ್ಲಿಸಿದ. ಆಮೇಲೆ ಎಲ್ಲರನ್ನು ಗಾಡಿಯಲ್ಲಿ ಕುಳ್ಳಿರಿಸಿಕೊಂಡು ಹೊರಟ ಹತ್ತಿದ. ತುಸು ದಾರಿಯನ್ನು ಕ್ರಮಿಸಿದ ನಂತರ, ಅದರಲ್ಲಿನ ಒಂದೆರಡು ಮಕ್ಕಳು ನಾವು ಒಂಟೆ (ವುಂಟ)ಮೇಲೆ  ಕುಳಿತು ಕೊಳ್ಳುತ್ತೇವೆ ಎಂದು ಹಟಕ್ಕೆ ಬಿದ್ದರು. ಅವರಲ್ಲಿನ ಒಬ್ಬ ಹುಡುಗ ನಾನು ಒಂಟೆ ಮೇಲೆ ಕುಳಿತು ಕೊಳ್ಳೋದಾದರೆ ಅಂಕಲ್ ಸಹ ನಮ್ಮ ಜೊತೆಗೆ ವುಂಟ ಮೇಲೆ ಕುಳಿತುಕೊಳ್ಳಬೇಕು ಎಂದ. ಆ ಹುಡುಗನ ಮಾತು ಕೇಳಿದ ಕ್ಷಣಾರ್ಧದಲ್ಲಿಯೇ “ಹೂಯ್ಯ” ಎನ್ನುತ್ತ ಎಲ್ಲರೂ ನನಗೆ ಒಂಟೆ ಮೇಲೆ ಕುಳಿತುಕೊಳ್ಳಿ ಎಂದು ಮುಗಿಬಿದ್ದರು. ಎಂದೂ ಒಂಟೆಯನ್ನು ಸ್ಪರ್ಶಿಸದ ನನಗೆ ಭಯವೋ ಭಯ.ಎಷ್ಟೇ ಒಲ್ಲೆ ಎಂದು ಗೋಗರೆದರೂ ಅವರು ಮಾತ್ರ ತಮ್ಮ ದಂಗೆಯನ್ನು ಕಡಿಮೆ ಮಾಡಲಿಲ್ಲ. ಇತ್ತ, ಗಾಡಿ ಮಾಲಿಕ,ಹುರಿ ಮೀಸೆ ಕಾಕನು ಸಹ ಜಿದ್ದಿಗೆ ಬಿದ್ದವರಂತೆ ದಂಗೆಗೆ ಇಳಿದುಬಿಟ್ಟ. ಮೆಲ್ಲನೆ ಗಾಡಿಯನ್ನು ನಿಲ್ಲಿಸಿ ನನಗೆ ತಿಳಿ ಹೇಳಿ ಮೇಲೆ ಕುಳ್ಳಿರಿಸಬೇಕೆಂದು ಹಾತೊರೆದ.

ಹಿಂದಿ ಬಾರದೇ ಇದ್ದುದರಿಂದ ಗುಜರಾತಿನಲ್ಲಿಯೇ ನನಗೆ ಏನೆನೋ ಅತೀ ಉತ್ಸುಕತೆಯಿಂದ ಹೇಳಿದ. ಅರ್ಥಮಾಡಿಕೊಳ್ಳಲಾಗದ ನಾನು ಅವನ ಗೇಣೂದ್ದ ಅಚ್ಚ ಬಿಳಿ ಮೀಸೆಯನ್ನು ನೋಡುತ್ತಾ ನಿಂತು ಬಿಟ್ಟೆ.ಆಮೇಲೆ ಮೀಸೆ ಕಾಕನ ಮಾತುಗಳನ್ನು ನನಗೆ ಹಿಂದಿನಲ್ಲಿ ತುರ್ಜುಮೆ ಮಾಡಿ ಒಬ್ಬ ಮಹಿಳೆ ಹೇಳಿದಳು. ಅವನ ಮಾತಿನ ಅರ್ಥ ಮತ್ತು ವುಂಟ ಮೇಲೆ ಹೇಗೆ ಕುಳಿತುಕೊಳ್ಳಬೇಕೆಂಬ ಸಲಹೆಗಳನ್ನು ಜಾಗರೂಕತೆಯಿಂದ ಕೇಳಿ ಮೂರು- ನಾಲ್ಕೂ ಮಕ್ಕಳ ನಡುವೆ ನಾನೇ ಅತ್ಯಂತ ಚಿಕ್ಕ ಹುಡುಗ ಎನ್ನುವ ರೀತಿಯಲ್ಲಿ ಭದ್ರವಾಗಿ ವುಂಟಮೇಲೆ ಕುಳಿತೆ. ಕತ್ತನ್ನು ಮೇಲೆ ಕೆಳಗೆ ಜೀಕಾಡಿಸುತ್ತ ವುಂಟ ತನ್ನ ಪಾಡಿಗೆ ದಾರಿಗೆ ನಾನೇ ರಾಜಾದಿ ರಾಜ ಎನ್ನುವ ಗತ್ತು ಗಮ್ಮತ್ತಿನಲ್ಲಿ ನಡೆಯಲು ಶುರುವಿಟ್ಟುಕೊಂಡಿತು.ವುಂಟ ನಡೆಯುತ್ತಿದ್ದರೆ ನನಗೆ ಏನೋ ವಿಭಿನ್ನ ಅನುಭವ.ಮಕ್ಕಳ ಜೊತೆಗೆ ಕೇಕೆ ಹಾಕುತ್ತ ಮತ್ತು ಶೇಂಗಾ ಬಳ್ಳಿಯಿಂದ ಹಸಿ ಶೇಂಗವನ್ನು ಕಿತ್ತು ತಿನ್ನುತ್ತ ವುಂಟ ಸವಾರಿ ಮಾಡುತ್ತಲೇ ವಾತ್ರಕ್ ನ್ನು (ಶಿವ ಮಂದಿರ) ತಲುಪಿದೆವು.

ನಮ್ಮ ಭಾರತ ದೇಶದಲ್ಲಿನ ಭಾರತೀಯರ ಮೂಲ ಹಿಂದುತ್ವ ಮತ್ತು ನಮ್ಮ ಹಿಂದೂ ಧರ್ಮದ ವೈಭವವನ್ನು ನಾವು ಗುಜರಾತನಲ್ಲಿ ನಿಚ್ಚಳವಾಗಿ ಕಾಣಬಹುದು.ಅಲ್ಲಿಯ ಹಿಂದೂ ದೇವರ ಆರಾಧನೆ ಮತ್ತು ನಮ್ಮ ಹಬ್ಬ ಹರಿದಿನಗಳ ಆಚರಣೆಗಳು ಮಾತ್ರ ಅತೀ ಅಮೋಘ.ಧಾರ್ಮಿಕ ಮತ್ತು ವೈಚಾರಿಕ ದೃಷ್ಟಿಯಿಂದ ನಾವು ತುಸು ಗುಜರಾತಿಗರಿಗಿಂತ ಚಿಕ್ಕವರು ಎನ್ನಿಸುತ್ತೆ. ಪ್ರತಿಶತ 80 ರಷ್ಟು ಗುಜರಾತಿಗರಲ್ಲಿ ಈ ಜಾತಿ ಬೇಧಗಳೆಂಬ ಪ್ರಧಾನ ಪಂಗಡಗಳಿಲ್ಲ. ಮೇಲು ಕೀಳೆಂಬ ಅಂತರ್ಗತ ಭಾವದೊಲವುಗಳಿಲ್ಲ. ಯಾವುದಾದರು ಹಿಂದೂ ಹಬ್ಬ, ಜಾತ್ರೆ, ಉತ್ಸವ ಬಂತೆಂದರೆ ಸಾಕು ಇಡೀ ಸಮುದಾಯ , ಊರು, ನಗರಗಳೆಲ್ಲ ಬೆರೆತು ಒಂದೇ ಕುಟುಂಬದಂತೆ ಮೈತ್ರಿಗೊಂಡು ಆಚರಣೆಗಳಲ್ಲಿ ತುಂಬು ಸಹಕಾರದಿಂದ ಭಾಗಿಯಾಗುತ್ತವೆ. ಚೆಂದ ಚೆಂದದ ಸಾಮ್ಯತೆಯಿರುವ ಉಡುಗೆ-ತೊಡುಗೆಗಳನ್ನು ತೊಟ್ಟು ಉತ್ಸಾಹದಿಂದ ಏಕತೆಯ ಮಂತ್ರದೊಂದಿಗೆ ಸಂಭ್ರಮಗಳಲ್ಲಿ ತನು, ಮನ, ಧನವನ್ನು ಕೊಡುಗೆಯಾಗಿಸಿ ಮಿಂದೇಳುತ್ತವೆ.  

ಇಂತಹ ಅತ್ಯಮೂಲ್ಯ ಏಕತೆಯನ್ನು ತನ್ನ ಸಾಮಾಜಿಕ ಜೀವನದ ಜೀವಾಳಾಗಿಸಿಕೊಂಡು ಬದುಕು ಸಾಗಿಸುವ ನಿಷ್ಕಲ್ಮಶ ಗುಜುರಾತಿನ ಸಹೃದಯಿ ತಾಯಂದಿರ ಮತ್ತು ಪುಟ್ಟ ಮಕ್ಕಳ ಜೊತೆಗೆ ಹಿಂದೂ ಮಹಾ ದೇವರರಾದಂತಹ ವಾತ್ರಕ್ ಗ್ರಾಮದ ಮಹಾದೇವನ ಮಂದಿರವನ್ನು ಬಂದು ತಲುಪಿದೆವು, ನಂತರ ಮಂದಿರದ ಪಕ್ಕದಲ್ಲಿಯೇ ಜುಳು- ಜುಳು ಹರಿಯುತ್ತಿದ್ದ ನದಿಯಲ್ಲಿ ಕೈ ಕಾಲುಗಳನ್ನು ಮಡಿ ಮಾಡಿಕೊಂಡು ದರ್ಶನಕ್ಕೆಂದು ಮಂದಿರವನ್ನು ಪ್ರವೇಶಿಸಿದೆವು.ಶಿವಮೂರ್ತಿಯನ್ನು ಸಂಜೆ ಪೂಜೆಯ ವೇಳೆ ಪೂಜಿಸಿ ವಿಭೂತಿ ಕುಂಕುಮವನ್ನು ಅಲ್ಲಲ್ಲಿ ಹಚ್ಚಿ ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದರು.ಮನಸ್ಸಲ್ಲಿಯೇ ಪಂಚಾಕ್ಷರಿ ಮಂತ್ರವನ್ನು ಪಠಿಸಿ ಧೀರ್ಘ ದಂಡ ಪ್ರಣಾಮವನ್ನು ಸಮರ್ಪಿಸಿ ಹಣೆಗೆ ಮೂರು ಬೊಟ್ಟು ವಿಭೂತಿ ಹಚ್ಚಿಕೊಂಡು ಹೊರ ಬಂದೆವು.ರಾತ್ರಿ ಎಂಟು ಗಂಟೆಯವರೆಗೂ ನದಿ ತೀರದ ಆ ಮಂದಿರದಲ್ಲಿ ನಡೆಯುತ್ತಿದ್ದಂತಹ ಶಿವ ಭಜನೆಯನ್ನು ಆಲಿಸಿ ಆನಂದಿಸಿದೆವು.ಮಂದಿರದಲ್ಲಿ ಸರಿಯಾಗಿ ಎಂಟು ಗಂಟೆಗೆ ಅನ್ನ ಸಂತರ್ಪನೆ ಪ್ರಾರಂಭವಾಯ್ತು. ನೂರಾರು ಶಿವ ಭಕ್ತರ ಜೊತೆಗೆ ಪಂಕ್ತಿಯಲ್ಲಿ ಕುಳಿತು ಪ್ರಸಾದ ಸ್ವೀಕರಿಸಿ,ಮಂದಿರದಲ್ಲಿದ್ದ ಹತ್ತಾರು ಸನ್ಯಾಸಿ ಸ್ವಾಮಿಗಳ ಪಾದಾರವಿಂದಗಳಿಗೆ ನಮಸ್ಕರಿಸಿ ಮನೆ ಕಡೆಗೆ ಮರಳಲು ಸಜ್ಜಾದೆವು.ಹಾಲಿನಂತಹ ಸ್ವಚ್ಛ ಬೆಳದಿಂಗಳು ನಮ್ಮ ನಡುಗೆಗೆ ಹೊಸ ಹುರುಪನ್ನು ನೀಡಿತು.ಅಂದಾಜು 14 ರಿಂದ 16 ಜನರಿದ್ದ ನಾವು, ಬೆಳದಿಂಗಳಿರುಳಲಿ ಲಹರಿಯಿಂದಲೇ ಮನೆಕಡೆಗೆ ಪ್ರಯಾಣ ಬೆಳೆಸಿದೆವು.ಮನೆಗೆ ಮರಳ ಬೇಕಾದರೆ ಗುಜರಾತಿನ ಮತ್ತೊಂದು ವಿಶೇಷವಾದ ತಿನಿಸು ಹುರಿದ “ಚನಾ”. ಎಲ್ಲರೂ ಒಂದೊಂದು ಚನಾ ಪ್ಯಾಕ್ ನ್ನು ಖರೀದಿಸಿ ದಾರಿಯುದ್ದಕ್ಕೂ ಚನಾ ಚಪ್ಪರಿಸುತ್ತ ಹರಟೆ ಹೊಡೆಯುತ್ತ ರಾತ್ರಿ 10 ರ ವೇಳೆಗೆ ಮನೆಗೆ ಬಂದು ಸೇರಿದೆವು……!!!

(ಮುಂದುವರೆಯುವದು)

 –ಚಿನ್ಮಯ್ ಮಠಪತಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

11 Comments
Oldest
Newest Most Voted
Inline Feedbacks
View all comments
Prasad
Prasad
11 years ago

 
ನಿಮ್ಮ ಪ್ರವಾಸ ಕಥನ ಚೆನ್ನಿದೆ.
ಸುಲಭವಾಗಿ ಓದಿಸಿಕೊಂಡು ಹೋಗುವ ಲೇಖನ ಇದು. 
ಗುಜರಾತ್ ಜನರ ಸಹೃದಯತೆ ಮತ್ತು ಅಲ್ಲಿನ ಸುಡು ಬಿಸಿಲ 
ಅನುಭವ ಮನಸ್ಸಿನಲ್ಲಿ ನಿಲ್ಲುತ್ತದೆ. 

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
11 years ago

ಸೊಗಸಾದ ನಿರೂಪಣೆ, ವಿನೋದಕರ ಹಾಗೂ ಆಸಕ್ತಿದಾಯಕ. ಧನ್ಯವಾದಗಳು ಚಿನ್ಮಯ್ ಸರ್.

chinmay mathapati
chinmay mathapati
11 years ago

ಧನ್ಯವಾದಗಳು, ಕೆ.ಪಿ ಸರ್ ಮತ್ತು ದಿವ್ಯ ಮೇಡಮ್. ನಿಮ್ಮ ಚೆಂದದ ಪ್ರತಿಕ್ರಿಯೆಯಿಂದ ನನ್ನ ಲೇಖನದ ತೂಕ ಹೆಚ್ಚಿಸಿದ್ದೀರಿ….!! ಲೇಖನವನ್ನು ಮೆಚ್ಚಿದೆಲ್ಲ ಸಹೃದಯ ಸ್ನೇಹಿತರಿಗೂ ತುಂಬು ಹೃದಯದ ವಂದನೆಗಳು….!!!

ಸುಮತಿ ದೀಪ ಹೆಗ್ಡೆ

ಗುಜರಾತ್ ಆತಿಥ್ಯ ತುಂಬಾ ಚೆನ್ನಾಗಿದೆ… :))

chinmay mathapati
chinmay mathapati
11 years ago

ಧನ್ಯವಾದಗಳು ಮೇಡಮ್………………….

Prasad V Murthy
11 years ago

ನನ್ನ ಗುಜ್ಜು ಸ್ನೇಹಿತರ ಆತ್ಮೀಯತೆಯನ್ನು ನೋಡಿಯೇ ಗುಜ್ಜುಗಳ ಆತಿಥ್ಯದ ಉತ್ಕೃಷ್ಟತೆಯನ್ನು ಊಹಿಸಬಲ್ಲೆ. ಬಹಳ ಚೆನ್ನಾಗಿ ನಿರೂಪಿಸುತ್ತಿದ್ದೀರಿ ಈ ಲೇಖನ ಸರಣಿಯನ್ನು. 'ದೇಶ ಸುತ್ತಬೇಕು, ಕೋಶ ಓದಬೇಕು.' ಎಂಬ ಉಕ್ತಿಯಂತೆ ದೇಶ ಸುತ್ತಿ ಬಂದವರು, ನಿಮ್ಮ ಅನುಭವಗಳ ಕೋಶವನ್ನು ಈ ಮೂಲಕ ಕಟ್ಟಿಕೊಡುತ್ತಿದ್ದೀರಿ. ಮುಂದುವರೆಸಿ.
– ಪ್ರಸಾದ್.ಡಿ.ವಿ.

chinmay mathapati
chinmay mathapati
11 years ago

ನಿಮ್ಮ ಚೆಂದದ ಪ್ರತಿಕ್ರಿಯೆಗೆ ತುಂಬು ಹೃದಯದ ಧನ್ಯವಾದಗಳು ಪ್ರಸಾದ್ (ಮಿತ್ರ)………………

Santhoshkumar LM
11 years ago

Chinmay, very interesting!!

chinmay mathapati
chinmay mathapati
11 years ago

ವಂದನೆಗಳು ಸಂತು…………………..

Rajesh Thalwagal math
Rajesh Thalwagal math
11 years ago

thumba andre thumba ishta aythu…….anna ninna anubhavada ee kathe nanna kannige kattidange aythu….naane gujarath nalli iddineno ansithu…..ultimate explanation brother

chinmay mathapati
chinmay mathapati
11 years ago

ವಂದನೆಗಳು…))))  ತಮ್ಮಾ ರಾಜೇಶ್……

11
0
Would love your thoughts, please comment.x
()
x