ನಾವು ಹುಟ್ಟಿಬಿಟ್ಟಿದ್ದೇವೆ ಮನುಷ್ಯರಾಗಿ. ವೇದ ಪುರಾಣಗಳಲ್ಲಿ ಹಾಡಿ ಹೊಗಳಿದ್ದಾರಲ್ಲವೆ? ಮನುಷ್ಯ ಜನ್ಮ ದೊಡ್ಡದು ಎಂದು? ಯಾಕೆ, ಪ್ರಪಂಚದೆಲ್ಲ ಪ್ರಾಣಿಗಳಂತೆಯೇ ಒಂದೇ ಪ್ರಾಕೃತಿಕ ರೀತಿ ನೀತಿಗಳಂತೆ ಜನಿತ, ಈ ನಮ್ಮ ಮನುಜ ಕುಲಕ್ಕೆಷ್ಟೇ ಬೇರೆ ಯಾವ ಅನ್ಯ ಜೀವಿಗೂ ಸಿಗದಂತಹ ಮಾನ್ಯತೆ , ಗೌರವ ! ಸೃಷ್ಟಿ ಕರ್ತನಿಂದ ವಿಶೇಷ ಸ್ಪರ್ಶದ ಜೊತೆಗೆ, ಸುಂದರ ಆಕಾರ ಅವತಾರ!. ಪಾಪ, ದೇವರ ದಡ್ಡತನದಿಂದಲೇ ನಾವು “ಹೋಮೊಶೆಪಿಯ್” ನಿಂದ ಹಲವಾರು ರೂಪ ರೇಶಗಳನ್ನು ದಾಟಿ, ಇವತ್ತು ಯಂತ್ರಮಾನವ (ರೋಬೊಟ್) ಹಂತಕ್ಕೆ ತಲುಪಿದ್ದೇವೆ ಅನ್ನಿಸುತ್ತದೆ. ಏನೋ ಮಾಡಲು ಹೋಗಿ ಏನೇನೋ ಮಾಡುತ್ತೇವೆ. ಏನೋ ಆಗಲು ಹೋಗಿ ಏನೇನೋ ಆಗುತ್ತಿದ್ದೇವೆ..!! ಮಾಡ ಬಾರದನ್ನು ಮಾಡಿ, ಪಡೆಯಬಾರದನ್ನು ಪಡೆಯುತ್ತೇವೆ. ಅಸಂಭವತೆಯನ್ನು ಸಂಭವತೆಯಾಗಿ ಮಾರ್ಪಡಿಸುತ್ತಿದ್ದೇವೆ. ಕೊನೆಗೆ ಏನು ಮಾಡಿದೆ ನಾನು ಹುಟ್ಟಿ ಬಂದು ಎಂದು ಅವಲೋಕನದ ಪ್ರಪಂಚದಲ್ಲಿ ನಮ್ಮನ್ನು ತೂಗಿ ಅಳೆಯಲು ನಿಂತಾಗ, ನಿರುತ್ತರದ ಜೊತೆಗೆ ಕೊನೆ ಉಸಿರೆಳೆದು ಬಿಡುತ್ತೇವೆ. ಎಲ್ಲೋ ಓದಿದ ನೆನಪು . “ಅವಶ್ಯಕತೆಗಳೇ ಆವಿಷ್ಕಾರಗಳ ತಾಯಿ” ಅಂತ..!! ಆದರೆ ಮನುಷ್ಯನ ಆಸೆ, ಆಕಾಂಕ್ಷೆ, ಅವಶ್ಯಕತೆಗಳಿಗೆ ಕೊನೆಯೆಂಬುದುಂಟೆ? ಒಂದು ಸಿಕ್ಕರೆ, ಮತ್ತೊಂದು ಬೇಕು. ಮತ್ತೊಂದು ಸಿಕ್ಕರೆ, ಮಗದೊಂದು ಬೇಕು. ಅಂತ್ಯವಿರದ ಈ ಬಯಕೆಗಳ ದಾಹ ತೀರುವುದು ಯಾವಾಗ..!! ಪ್ರಾಯಶಃ ಕೊನೆಯಿರದ ದಾರಿಯ ಪಯಣ ನಮ್ಮ ಜೀವನದ ಬಯಕೆ ಎಂದೆನಿಸುತ್ತದೆ. ಅವಶ್ಯಕತೆ, ಅನಾವಶ್ಯಕತೆ, ಯೋಗ್ಯತೆ, ಅಯೋಗ್ಯತೆಗಳನ್ನು ಯಾವಾಗ ನಮಗೆ ಈ ಖಚಿತ ಜ್ಞಾನಗಳಿಂದ ತುಲನೆ ಮಾಡುವ ಬಲ ಹುಟ್ಟಿತೋ, ಆವತ್ತೇ ನಾವು ಸಜೀವ ಯಂತ್ರಮಾನವರಾಗಿ ಬಿಟ್ಟೆವು ಎಂದೆನಿಸುತ್ತೆ.
ಹತ್ತಿಪ್ಪತ್ತು ವರ್ಷದ ಹಿಂದಿನ ಜೀವನ ಕ್ರಮಕ್ಕೂ, ಇವತ್ತಿನ ಜೀವನ ಕ್ರಮಕ್ಕೂ ಹೋಲಿಕೆ ಮಾಡಿದರೆ, ಅಜಗಜಾಂತರ ವ್ಯತ್ಯಾಸ ಕಂಡು ಬರುತ್ತದೆ. ನಾವು ಇವತ್ತು ಎಷ್ಟು ಜನ ಆ ಸೂರ್ಯೋದಯ, ಚಂದ್ರೋದಯ, ಸೂರ್ಯಾಸ್ತ, ಚಂದ್ರಾಸ್ತಗಳನ್ನು ನೋಡುತ್ತೇವೆ. ಬಿದಿಗೆಯ ಚಂದಿರನ ಸುತ್ತಲೂ ಬಿಡಿ-ಬಿಡಿಯಾಗಿ ಮುತ್ತಿನಂತೆ ಹೊಳೆವ ನಕ್ಷತ್ರಗಳನ್ನು ನೋಡಿ ಆನಂದಿಸುತ್ತೇವೆ. ಸ್ವಚ್ಛ ಬೆಳದಿಂಗಳಿರುಳಲ್ಲಿ ಮನೆಯ ಮುಂದನ ಜಗುಲಿಯ ಮೇಲೆ ಮಲಗಿಕೊಂಡು ಅಪ್ಪ-ಅಜ್ಜ-ಅಜ್ಜಿಯರಿಂದ ದಿಟ ಹಾಗೂ ಕಟ್ಟು ಕತೆಗಳನ್ನು ಮಗ್ಗುಲಲಿ ಹೊಂದಿಕೊಂಡು ಮಲಗಿ ಕೇಳುತ್ತೇವೆ. ಅಪ್ಪ, ಅಪ್ಪಾಗಿ ಉಳಿದಿಲ್ಲ..! ಅಜ್ಜ-ಅಜ್ಜಿಯಂದಿರ ಕತೆ, ಮಾತು ಕೇಳುವ ಮನಗಳಿಲ್ಲ, ಮಕ್ಕಳು, ಮೊಮ್ಮಕ್ಕಳು ಮುದ್ದು ಮನದ ಬಾಲಕ, ಬಾಲಕಿಯರಾಗಿ ತಮ್ಮ ಬಾಲ್ಯದ ಸಡಗರ ಸಂಭ್ರಮಗಳನ್ನು ಅನುಭವಿಸುತ್ತಿಲ್ಲ. “ಕೂಸು ಹುಟ್ಟುವ ಮೊದಲು ಕುಲಾಯಿ ಹೊಲಿಸುವ ತಂದೆ ತಾಯಿಗಳು” ಧಾವಂತದಲ್ಲಿಯೇ ಮಕ್ಕಳ ಬಾಲ್ಯದೆಲ್ಲ ಸ್ವತಂತ್ರಗಳನ್ನು ಭಕ್ಷಿಸುತ್ತಲೇ ಮಕ್ಕಳ ಭವಿಶ್ಯ ನಿರ್ಮಾಣಕ್ಕೆ ನಿಲ್ಲುತ್ತಾರೆ ಎಂದೆನಿಸುತ್ತದೆ. ಒಂದು ರೀತಿಯಲ್ಲಿ ಅವರ ಇಚ್ಛಾ ಮನೋಭಾವಗಳು ದೂರದೃಷ್ಟಿಯಿಂದ ಕೂಡಿರುವಂತವುಗಳಾಗಿದ್ದರೂ ಸಹ, ಮತ್ತೊಂದು ಕೋನದಲ್ಲಿ ತಮ್ಮ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಮಾರಕವಾಗಿ ಪರಿಗಣಿಸುವದರಲ್ಲಿ ಯಾವದೇ ಸಂದೇಹವಿಲ್ಲ ಎಂದ್ಹೇಳ ಬಹುದು.
ಒಂದು ಕಡೆ ಅತಿಯಾದ ಪ್ರೀತಿ ವಾತ್ಸಲ್ಯದ ಜೊತೆಗೆ ಮಕ್ಕಳ ಮೇಲೆ ಹೇರುವ ಒತ್ತಡದಿಂದ, ಮಕ್ಕಳು ಏನೋ ಆಗಲು ಹೋಗಿ ಇನ್ನೇನೋ ಆಗಿ ಬಿಡುತ್ತವೆ. ಇನ್ನು ಅತ್ಯಂತ ನಿರ್ಲಕ್ಚ್ಯದಿಂದಲೂ ಇಂತದೆ ಅವಘಡಗಳು ಸಂಭವಿಸಿ ಬಿಡುತ್ತವೆ. ಈ ಎರಡವುಗಳ ಅನುಭವವನ್ನು ನನ್ನ ಗುಜರಾತಿನ ದಿನಗಳಲ್ಲಿ ಕಾಣುವ ಒಂದೆರಡು ಅವಕಾಶಗಳು ನನಗೆ ಸಿಕ್ಕತ್ತು. ಮಾನವ ಮನಶಾಸ್ತ್ರ ಮತ್ತು ಮಾನಸಿಕ ಶಾಸ್ತ್ರಗಳನ್ನು ನನ್ನ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಸ್ವಲ್ಪ ಇಚ್ಛಾಸಕ್ತಿಯಿಂದ ಓದಿದ್ದರಿಂದ, ಸ್ವಲ್ಪ ಮಟ್ಟಿಗೆ ಈ ಎರಡೂ ಪಠ್ಯಗಳ ಮೇಲೆ ಹಿಡಿತ ವಿತ್ತು. ಇದರಿಂದಾಗಿಯೇ ಮಕ್ಕಳ ಮತ್ತು ದೊಡ್ಡವರ ವರ್ತನೆ, ಅವರ ಸ್ಪಂದಿಸುವ ರೀತಿ, ಸಾಮಾಜಿಕ ಜೀವನದಲ್ಲಿನ ಅವರ ನಂಬಿಕೆ ಮತ್ತು ನಿಲುವುಗಳನ್ನು ಅವಲೋಕಿಸುವ ಹವ್ಯಾಸ ಇವತ್ತಿಗೂ ನನ್ನಲ್ಲಿ ಇದೆ.
ಮೊದಲು ಅತಿಯಾದ ಬಿಗಿ ಪ್ರೀತಿ ವಾತ್ಸಲ್ಯ ಮತ್ತು ದೂರಾಲೋಚನೆಯ ಸರೆಗಿನ ಹಿಂದಿನ ಜೀವನದಿಂದಾಗಿ ಮಕ್ಕಳ ಸರ್ವತೋಮುಖ ಬೆಳವಣಿಗಯ ಮೇಲಾಗುವ ಪರಿಣಾಮದ ಆ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ. ಆವತ್ತು ನನ್ನೊಬ್ಬ ಗುಜ್ಜು ಸ್ನೇಹಿತ ನನ್ನ ಹರಿತವಾದ ಮಾತುಗಾರಿಕೆ ನೋಡಿ, ಊರಲ್ಲಿನ ತನ್ನ ಸ್ನೇಹಿತನೊಡೆತನದ ವಿದ್ಯಾ ಸಂಸ್ಥೆಗೆ ಅತಿಥಿ ಉಪನ್ಯಾಸವನ್ನು ಕೊಡಮಾಡಲು ಆಹ್ವಾನಿಸಿದ್ದ. ನಾನು ಮೊದ ಮೊದಲು ನಿರಾಕರಿಸುತ್ತಲೇ, ನಲ್ಮೆಯ ಅವನ ಕರೆಗೆ ಓಗೊಟ್ಟು ಶಾಲಾ-ಕಾಲೇಜಿನ ಆವರಣಕ್ಕೆ ಅವನ ಜೊತೆಗೂಡಿ ಹೋಗಿದ್ದೆ. ಒಂದೇ ಆವರಣದೊಳಗೆ ಹಲವಾರು ಕೋರ್ಸ್ಗಳು. ಒಂದನೆಯ ತರಗತಿಯಿಂದ ವೃತ್ತಿ ಪರ ತರಬೇತಿಗಳ ವರೆಗಿನ ವಿದ್ಯಾರ್ಥಿಗಳು ಅಲ್ಲಿ ಅಧ್ಯಯನ ಮಾಡುತ್ತಿದ್ದರು. ಸುಖಾ ಸುಮ್ಮನೆ ಶೂನ್ಯಭಾವದಿಂದ ಹೋಗಿದ್ದ ನಾನು, ಅಲ್ಲಿ ಯಾರಿಗೆ ಯಾವ ವಿಷಯದ ಮೇಲೆ ಉಪನ್ಯಾಸ ಕೊಡುವುದು ಎಂಬ ಜಿಜ್ಞಾಸೆಗೆ ಒಳಗಾದೆ. ಆ ನನ್ನ ಗುಜ್ಜು ಸ್ನೇಹಿತ ಪಟೇಲ್ ಒಡೆತನದ ಆ ವಿದ್ಯಾ ಸಂಸ್ಥೆಯ ಚೇರಮನ್ ಗೆ ನನ್ನನ್ನು ಪರಿಚಯಿಸಿದ . ಆಮೇಲೆ ಒಂದು ಕಪ್ ಚಹಾ ಹೀರಿ . ನನ್ನ ಗುಜ್ಜು ಗೆಳೆಯನಿಗೆ ಕೇಳಿದೆ. ಇಲ್ಲಿ ಯಾರಿಗೆ ಯಾವ ವಿಷಯದ ಮೇಲೆ ಪಾಠ ಮಾಡಲಿ ಗುರುವೇ ಅಂತ. ಅವನು ಹಲವಾರು ಕೋರ್ಸ್ ಗಳ ಹೆಸರುಗಳನ್ನು ಅರಳು ಹುರಿದಂತೆ ಹೇಳಿದ. ಅದರಲ್ಲಿ ನನಗೆ ಮೊದಲು ಪುಟ್ಟ ಮಕ್ಕಳಿಗೆ ಪಾಠ ಮಾಡಬೇಕಿಸಿತು. ದ್ವಿತೀಯ ಭಾಷೆ ಇಂಗ್ಲೀಷಿನ ಒಂದು ಪದ್ಯವನ್ನು ಒಂದೈದು ನಿಮಿಷ ಓದಿ ಅರ್ಥೈಸಿಕೊಂಡು ಐದನೆಯ ತರಗತಿಯ ವರ್ಗ ಕೊಠಡಿಗೆ ಹೋದೆ. ನನ್ನ ಜೊತೆಗೆ ಪರಿಚಯಿಸಿ ಕೊಡಲೆಂದು ಬಂದಿದ್ದ ಕ್ಲಾಸ್ ಟೀಚರ್, ನನ್ನುನ್ನು ಪರಿಚಯಿಸಿ ಭೋಧನಾ ಅಂಕಣಕ್ಕೆ ಹೊಂದಿಕೊಂಡು ಒಂದು ಆಸನದಲ್ಲಿ ಆಸೀನರಾದರು.
ಮುದ್ದು ಮಕ್ಕಳು ಎದ್ದು ನಿಂತು ಪ್ರೀತಿಯಿಂದ ನನಗೆ “ಗುಡ್ ಮಾರ್ನಿಂಗ್ ನ್ಯೂ ಸರ್” ಎಂದರು. ನಾನು ಸಹ ಪುಟ್ಟ ಮಕ್ಕಳಿಗೆ ಪ್ರೀತಿಯಿಂದಲೇ “ಗುಡ್ ಮಾರ್ನಿಂಗ್ ಡಿಯರ್ ಕಿಡ್ಸ್.. ಪ್ಲೀಸ್ ಸಿಟ್ ಡೌನ್” ಎಂದೆ. ಮಕ್ಕಳು ಉತ್ಸಾಹ ಭರಿತು ಕಿರು ನಗುವಿನೊಂದಿಗೆ ಕುಳಿತು ಕೊಂಡರು. ಪದ್ಯವನ್ನು ತಕ್ಕ ಮಟ್ಟಿಗೆ ಅರ್ಥವಾಗುವಂತೆ ಭೋಧಿಸಿ “ಕನ್ ಕ್ಲೂಷನ್” ಹಂತಕ್ಕೆ ಬಂದೆ. ಸುಮಾರು 50 ರಿಂದ 60 ಮಕ್ಕಳಿದ್ದ ಆ ಕ್ಲಾಸಿನಲ್ಲಿ ಎಲ್ಲ ಮಕ್ಕಳು ಪ್ರಯತ್ನಿಸುತ್ತಲೇ ಉತ್ತರಗಳನ್ನು ನೀಡಿದರು. ಮುಂದಿನ ಸಾಲಿನಲ್ಲಿ “ಸಕ್ಕರೆ ಮೂಟೆ”ಯಂತೆ ಕುಳಿತಿದ್ದ ಒಬ್ಬ ವಿದ್ಯಾರ್ಥಿ ಮಾತ್ರ ತನ್ನ ಲೋಕದಲ್ಲಿ ತಾನಿದ್ದ . ಬಾಹ್ಯ ಪ್ರಪಂಚದ ಗೊಡವೆ ನನಗೇಕೆ ಎನ್ನುವಂತೆ ಕುಳಿತಿದ್ದ. ಅವನನ್ನು ಎಷ್ಟೇ ಪ್ರಶ್ನಿಸಿದರೂ “ನೋ ರೆಸ್ಪಾನ್ಸ್” ಇದನ್ನು ಅರಿತ ನಾನು ಕ್ಲಾಸಿನ ಎಲ್ಲ ಮಕ್ಕಳನ್ನು ಇದೇ ರೀತಿಯಾಗಿ ಸೂಕ್ಷ್ಮ ದೃಷ್ಟಿಯಿಂದ ಅವಲೋಕಿಸಿದೆ. ಅಲ್ಲಿ ಇನ್ನೊಂದು ವಿದ್ಯಾರ್ಥಿನಿ. ಒಂದು ಕೇಳಿದರೆ ಮತ್ತೊಂದು ಉತ್ತರ..! ನಿಂತಲ್ಲಿ ನಿಲ್ಲದೆ, ಅತಿಯಾದ ದೈಹಿಕ ಚಲನವಲನದಿಂದ ಉತ್ತರಿಸಲು ಶುರುವಿಟ್ಟುಕೊಂಡಳು. ಇಬ್ಬರ ಕೌಟುಂಬಿಕ ಹಿನ್ನೆಲೆಯನ್ನು ಆ ಕ್ಲಾಸ್ ಟೀಚರ್ ನಿಂದ ಸಂಗ್ರಹಿಸಿದೆ. ಮೊದಲೆಯ “ಸಕ್ಕರೆ ಮೂಟೆ” ಊರಿನ ಆಗರ್ಭ ಶ್ರೀಮಂತನ ಮಗ. ಅವನು ಶಾಲೆಯಲ್ಲಿನ ಯಾವ ಬಡವರ ಮಕ್ಕಳೊಂದಿಗೂ ವ್ಯವಹರಿಸುವಂತಿಲ್ಲ. ಅವನದೇ ಆದ ಒಂದು ಒಂದು ಚಿಕ್ಕ ಶ್ರೀಮಂತ ಮಕ್ಕಳಿಂದ ಕೂಡಿದ ಗುಂಪು, ಆ ಗುಂಪಿನ ಮಕ್ಕಳೊಂದಿಗೆ ಮಾತ್ರ ಅವನ ಸ್ನೇಹತನ ಮತ್ತು ವ್ಯವಹಾರ! ಈ ರೀತಿಯಾಗಿ ಮಗು ಶಾಲೆಯಲ್ಲಿ ಇರಬೇಕೆಂದು ಶಾಲೆಯ ಶಿಕ್ಷಕರಿಗೆ ಅವನ ಆಗರ್ಭ ಶ್ರೀಮಂತ ತಂದೆಯಿಂದ ಕಟ್ಟಪ್ಪನೆಯಾಗಿತ್ತಂತೆ. ಇದರಿಂದ ಆ “ಸಕ್ಕರೆ ಮೂಟೆ” ಯಾರೊಂದಿಗೂ ಬೆರೆಯದೆಯೇ ತನ್ನ ಲೋಕದಲ್ಲಿ ತಾನು ಇದ್ದು, ತನ್ನಲ್ಲಿಯೇ ಒಂದು “ಮ್ಯೂಟಿಸಮ್” ಎಂಬ ಮಾನಸಿಕ ಕಾಯಿಲೆಯನ್ನು ಬೆಳೆಸಿಕೊಂಡಿತ್ತು. “ಸೆಲೆಕ್ಟೀವ್ ಮ್ಯೂಟಿಸಮ್” ಗೆ ಒಳಗಾದ ಮಗು, ಸಾಮಾಜಿಕ ಭಯಕ್ಕೆ ಒಳಗಾಗಿ, ತಾನು ಎಲ್ಲಿ ಏನಾದರೂ ತಪ್ಪಾಗಿ ಮಾತನಾಡಿ ಬಿಡುವನೇನೋ ಎಂಬ ಭೀತಿಯಲ್ಲಿ ಸಾಮಾಜಿಕ ಸಂಬಂಧದಿಂದ ದೂರ ಇರಲು ಪ್ರಯತ್ನಿಸುತ್ತೆ.
ತಮ್ಮ ಮಗನನ್ನು ಈ ಏನೋ ಒಂದು ದೊಡ್ಡದಾಗಿ ಎಲ್ಲ ಮಕ್ಕಳ ಒಡನಾಟದಿಂದ ದೂರವಿರುವಂತೆ ನೋಡಿಕೊಂಡಿದ್ದ ಪೋಷಕರು. ಇದರಿಂದಾಗಿ ಪುಟ್ಟ ಹುಡುಗ ಯಾರೊಂದಿಗೂ ಹೆಚ್ಚಾಗಿ ಬೆರೆಯದೆಯೇ ತನ್ನ ಪಾಡಿಗೆ ತಾನು ಇರುತ್ತಿದ್ದ. ಈ ರೀತಿಯಾದ ನಿಲುವಿನಿಂದ ತಂದೆ ತಾಯಿಗಳೇ ತಮ್ಮ ಮಗುವಿನ ಸರ್ವತೋಮುಖ ಬೆಳವಣಿಗೆಗೆ ತೊಡಕಾಗಿ ಪರಿಣಮಿಸಿದ್ದರು. ಆ “ಸಕ್ಕರೆ ಮೂಟೆ” (ಮಗು)ವಿನ ಪೋಷಕರಿಗೆ ಮಗುವಿನ ಸ್ವತಂತ್ರವನ್ನು ಕೊಡಮಾಡಿ, ಅವನ ಬಾಲ್ಯವನ್ನು ಆನಂದಿಸುವಂತೆ ನೋಡಿಕೊಳ್ಳಿ ಎಂದು ಶಾಲಾ ಶಿಕ್ಷಕರಿಂದ ಸಂದೇಶವನ್ನು ಪಾಸ್ ಮಾಡಿದೆ. ಇನ್ನು , ಇನ್ನೊಂದು ವಿದ್ಯಾರ್ಥಿನಿಯ ಕತೆಯೂ ಇದೆ. ಕೌಟುಂಬಿಕವಾಗಿ ಅಪ್ಪ-ಅಮ್ಮನ ನಡುವೆ ನಿತ್ಯ ಕಾದಾಟವನ್ನು ನೋಡುತ್ತಿದ್ದ ಮಗು ಅದು. ಮನೆಯಲ್ಲಿ ತನ್ನ ಬಾಲ್ಯವನ್ನು ಆನಂದಿಸಲು ಸರಿಯಾದ ವಾತಾವರಣವಿಲ್ಲದೆಯೇ, “ವೊಕಲ್ ಟಿಕ್ಸ್” ಗೆ ಒಳಗಾಗಿತ್ತು. ಈ ಬೆಳವಣಿಗೆಗೆ ಸಂಬಂಧ ಪಟ್ಟ ಖಾಯಿಲೆಗೆ ಒಳಗಾದ ಮಗು, ಸಿಕ್ಕ ಸರಿಯಾದ ವಾತಾವರಣವನ್ನು ಆನಂದಿಸುವ ಹಂಬಲದಿಂದ ಅತಿಯಾಗಿ ಸಂಭಾಷಿಸಿ ಬಿಡುತ್ತದೆ. ಮುಂದೊಂದು ದಿನ ತನ್ನ ವ್ಯಕ್ತಿತ್ವ ವಿಕಸನದಲ್ಲೂ ಸಾಮಾಜಿಕವಾಗಿ ವಿಭಿನ್ನ ಕಾಣುವ ವರ್ತನೆ ಮತ್ತು ವ್ಯಕ್ತಿತ್ವವನ್ನು ತನ್ನಲ್ಲಿ ಬೆಳೆಸಿಕೊಂಡು ಬಿಡುತ್ತದೆ. ಈ ರೀತಿಯಾಗಿ ಇವತ್ತಿನ ತಂದೆ ತಾಯಂದಿರು ತಮ್ಮ ಮಕ್ಕಳನ್ನು ನಿರ್ವಾತದಲ್ಲಿಟ್ಟೋ ಅಥವಾ ಇಂಥವೇ ಆದಂತಹ ಹಲವಾರು ಕಾರಣಗಳಿಂದ ಮಕ್ಕಳ ಸರ್ವತೋಮುಖ ಕುಂಟಿತ ಬೆಳವಣಿಗೆಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಕಾರಣರಾಗಿ ಬಿಡುತ್ತಾರೆ. ಮಗು ಆನಂದಿಸಬೇಕಾದ ಪ್ರಾಕೃತಿಕ ಆನಂದಕ್ಕೆ ಅಡ್ಡಿಯಾಗಿ. ಸೂರ್ಯ, ಚಂದ್ರ, ನೀರು, ಗಾಳಿಯ ಮಹತ್ವನ್ನು ಹೇಳಿಕೊಡವ ವಯೋಮಾನದಲ್ಲಿ ಹೇಳಿಕೊಡದೆಯೇ. ಶಾಲಾ ಪಠ್ಯಪುಸ್ತಕದಲ್ಲಿ ಕೃತಕ ಜ್ಞಾವವನ್ನು ಕೊಡಮಾಡಿ, ನಾಲ್ಕು ಗೋಡೆಗಳ ನಡುವೆ ಕಲಿಯುವಂತೆ ಮಾಡಿಬಿಡುತ್ತಾರೆ. ಶಿಕ್ಷಣದ ಮುಕ್ಕಾಲು ಭಾಗದ ಕಲಿಕೆನ್ನು ಶಾಲಾ ಕೊಠಡಿಯ ಹೊರಗೆ ಮಗು ಕಲಿಯುತ್ತದೆ. ಎಂಬ ಸತ್ಯವನ್ನು ಮರೆತು ನಿರ್ವಾತದಲ್ಲಿ ಕಲಿಸಲು ಹವನಿಸುತ್ತಾರೆ.
ಹೀಗೆ ಮಕ್ಕಳೊಂದಿಗೆ ಒಂದು ಗಂಟೆ ಕಾಲವನ್ನು ಕಳೆದು ಒಂದೆರಡು ಗಂಟೆ ಶಾಲಾ ಸಿಬ್ಬಂದಿ ಜೊತೆಗೆ ಉಭಯ ಕುಶಲೋಪರಿಯಲ್ಲಿ ತೊಡಗಿ ಮತ್ತೊಂದು ಕ್ಲಾಸ್ಗೆ ಹೋದೆ. ಅದು “ ಡಿಪ್ಲೋಮಾ ಇನ್ ಹೆಲ್ತ್ ಇಸ್ಸೆಕ್ಟರ್” ಓದುತ್ತಿದ್ದ ವಿದ್ಯಾರ್ಥಿಗಳ ವರ್ಗ ಕೊಠಡಿ. ಕೈಯಲ್ಲಿ ಯಾವ ಪಠ್ಯವನ್ನು ಹಿಡಿದುಕೊಳ್ಳದೆಯೇ ಒಂದು “ಇನ್ ಫಾರ್ಮಲ್” ಲೆಕ್ಚರರ್ ಕೊಡೋಣ ಅಂದುಕೊಂಡು ಒಳ ಹೋದೆ. ನೋಡಲು ನಾನು ಹೈಸ್ಕೂಲ್ ಓದೊ ಹುಡುಗನಂತೆ ಕಾಣುವ ನನ್ನನ್ನು ನೋಡಿದ ಆ ಗುಜರಾತಿನ ತಿಂದುಂಡು ಕೊಬ್ಬೇರಿದ ಗಜದಂತೆ ಬೆಳೆದಿದ್ದ ಒಂದಿಷ್ಟು ಹುಡುಗರು ಎದ್ದು ನಿಂತು ವಿಶ್ ಮಾಡದೆಯೇ. ಕುಳಿತಲ್ಲಿಯೇ ಮಾತೃ ಬೇರು ಬಿಟ್ಟು ಬೆಳೆದು ನಿಂತ ಆಲದ ಮರದಂತೆ ಗಟ್ಟಿಯಾಗಿ ಕುಳಿತಿದ್ದರು. ಸರ್ವೇ ಸಾಮಾನ್ಯವಾಗಿ ಎಲ್ಲ ವರ್ಗ ಕೊಠಡಿಗಳಲ್ಲಿ ಇಂತಹ ಒಂದಿಷ್ಟು “ಏರೊಗಂಟ್” ಗಳು ಇದ್ದೇ ಇರುತ್ತವೆ ಎಂದರಿತ ನಾನು ಅವರನ್ನು ಲೆಕ್ಕಿಸದೆಯೇ, “ಆಲ್ ಆಫ್ ಯು ಪ್ಲೀಸ್ ಸಿಡ್ ಡೌನ್” ಎಂದೆ. ಅಷ್ಟರಲ್ಲಿ ಜೊತೆಗೆ ಬಂದಿದ್ದ ಆ ಕಾಲೇಜಿನ ಭೋಧಕರೊಬ್ಬರು ನನ್ನನ್ನು ಪರಿಚಯಿಸಿ ಹೊರ ನಡೆದರು.
ಸಿ.ಸಿ ಕ್ಯಾಮಾರಾ ಅಳವಡಿಸಿದ್ದ ವರ್ಗ ಕೊಠಡಿಯದು. ಆ ಕಾಲೇಜಿನ ಸಿಬ್ಬಂದಿ ನನ್ನ ಉಪನ್ಯಾಸವನ್ನು ತಮ್ಮ ಸಿಬ್ಬಂದಿ ಕೊಠಡಿಯಲ್ಲಿ ಕುಳಿತು ಟಿ.ವಿ ಯಲ್ಲಿ ನೋಡುತ್ತಾರೆ ಎಂಬ ಅರಿವು ನನ್ನಲ್ಲಿ ಬಂತು. ಎಥಾ ಪ್ರಕಾರ ಒಂದು “ರೌಂಡ್” ಎಲ್ಲರೂ ಪರಿಚಯಿಸಿಕೊಳ್ಳಬೇಕು ಎಂದು ಆರ್ಡರ್ ಮಾಡಿದೆ. ಮೊದಲ ಸಾಲಿನ ಒಬ್ಬ ವಿದ್ಯಾರ್ಥಿನಿ ಎದ್ದು ನಿಂತು ತನ್ನ ಬಗ್ಗೆ ಪರಿಚಯಿಸಿಕೊಂಡಳು. ಇತ್ತ ಆ ಪುಢಾರಿ ಗುಂಪಿನ ಹುಡುಗರು ತಮ್ಮಲ್ಲಿಯೇ ಮಾತಾನಾಡುತ್ತಾ ಕುಳಿತುಕೊಂಡಿದ್ದರು. ಅದರಲ್ಲಿ ಒಬ್ಬ ಹುಡುಗ ಸ್ವಲ್ಪ ‘ಒವರ್ ಸ್ಮಾರ್ಟ್” ಆಗಿ ನಡೆದುಕೊಂಡ. “ಹೇ ಬಡ್ದೀಸ್ ದೆಖೋ ಚೋಟು ಚಹುತ್ ಚಮಕ್ ದೇ ರಹಾ ಹೈ”..!! ಎಂದ. ಸ್ವಲ್ಪ ಅವರೆಲ್ಲ ನಡೆನುಡಿಗಳ ಬಗ್ಗೆ ಗಮನಕೊಟ್ಟಿದ್ದ ನಾನು. ಆ ಮಾತನ್ನು ತೀಕ್ಷ್ನವಾಗಿ ಕೇಳಿಸಿಕೊಂಡುಬಿಟ್ಟೆ. ಆ ವಿದ್ಯಾರ್ಥಿಯನ್ನು . “ಹಾಯ್ ಡಿಯರ್ ಸ್ಟೂಡೆಂಟ್ ಪ್ಲೀಸ್ ಕ್ಯಾನ ಯು ಕಮ್ ಹಿಯರ್” ಎಂದೆ. ಇಂಗ್ಲೀಷ್ ಎಂದರೆ ಹೆದರಿ ಪುಕ್ಕಲಾಗುವ ಗುಜರಾತಿಗರ ವ್ಯಕ್ತಿತ್ವ ನನಗೆ ಗೊತ್ತಿತ್ತು. ಮೊದ ಮೊದಲು ಆ ಹುಡುಗ ಗುರಾಯಿಸುತ್ತ “ಕ್ಯಾ…ಕ್ಯಾ” ಎಂದ. ಮತ್ತೊಮ್ಮೆ ಕೇಳಿದೆ. “ವಾಟ್ ಯು ಥಿಂಕ್ ಆಫ್ ಟೀಚರ್ ಅ್ಯಂಡ್ ಕಾಲೇಜ್" ಟೀಚರ್ ಇಸ್ ನಾಟ್ ಅ ಜೋಕರ್, ಕ್ಲಾಸ್ ರೂಂ ಇಸ್ ನಾಟ್ ಅ ಸರ್ಕಸ್ ಹಾಲ್. ಇಫ್ ಯು ವಾಂಟ್ ಟು ಬಿ ಹಿಯರ್ ಶಟ್ ಯುವರ್ ಆಲ್ ಡರ್ಟಿ ಮೌತ್ಸ್ ಅ್ಯಂಡ್ ಅಡೆಂಡ್ ದಿ ಕ್ಲಾಸ್ ಇನ್ ಪ್ರಾಪರ್ ವೇ, ಅದರ್ ವೈಸ್ ಗೆಟ್ ಔಟ್ ಆಫ್ ಮೈ ಕ್ಲಾಸ್” ಎಂದೆ. ಈ ಮಾತಿನ ಕೊನೆಯ ಎರಡು ಪದಗಳು ಬಹುಶಃ ಅರ್ಥವಾದವು ಎನ್ನಿಸುತ್ತೆ. ಅವನು ತನ್ನ ಗುಂಪನ್ನು ಕರೆದುಕೊಂಡು ಹೊರನಡೆಯಲು ನಿಂತ.
ಹೊರ ಹೋಗುತ್ತಿರಬೇಕಾದರೆ, ಅದನ್ನು ಸಿ.ಸಿ. ಟಿ.ವಿಯಿಂದ ನೋಡಿದ್ದ ಪ್ರಿನ್ಸಿಪಾಲ್ ರು ಬಂದು ಎಲ್ಲರನ್ನು ತರಾಟೆಗೆ ತೆಗೆದುಕೊಂಡರು. ಆಮೇಲೆ ಆ ವಿದ್ಯಾರ್ಥಿಗಳಿಗೆ ಒಳಗೆ ಕುಳಿತುಕೊಳ್ಳಲು ಪರವಾಣಿಗೆ ಕೊಟ್ಟು, ನನ್ನ ಕ್ಲಾಸನ್ನು ಪ್ರಾರಂಭಿಸಬೇಕು ಎಂದು ಕೊಂಡೆ. ಮೊದ ಮೊದಲು “ಫೂಡ್ ಅಡಲ್ಟ್ರೆಷನ್ ಅ್ಯಂಡ್ ಫೂಡ್ ಫೋರ್ಟಿಫಿಕೇಷನ್” ಬಗ್ಗೆ ಮಾತಾನಾಡೋಣ ಎಂದು ಕೊಂಡೆ. ಆದರೆ ಕಾಡಿನ ಕಲ್ಲಿನಂತೆ ಕುಳಿತಿದ್ದ ಆ ವಿದ್ಯಾರ್ಥಿಗಳನ್ನು ನೋಡಿ ನನ್ನ ಮಾತುಗಳು ಬಂಡೆಗಲ್ಲುಮೇಲೆ ನೀರು ಹಾಕಿದಂತೆ ಎಂದರಿತು. ಒಂದು ಪುಟ್ಟ ಕತೆಯನ್ನು ಹೇಳ ಬೇಕೆನಿಸಿತು.
ಈ ಒಂದು ಕತೆ ನನ್ನ ಅಚ್ಚು ಮೆಚ್ಚಿನ ಕತೆಯಾಗಿ ಉಳಿದು ಬಿಟ್ಟಿದೆ. ನನಗೆ ನನ್ನ ಆಧ್ಯಾತ್ಮ ಗುರುಗಳಾದ “ಶ್ರೀ ಸುವ್ರತಾನಂದ ಸರಸ್ವತಿ” ಸ್ವಾಮಿಗಳು ನನ್ನ ಬಾಲ್ಯದಲ್ಲಿ ಹೇಳಿದ್ದು. ಅವರು ಹೇಳಿದ್ದ ಕತೆ ನನಗಾವತ್ತಿನ ದಿನ ಚೂರು ಅರ್ಥವಾಗಿರಲಿಲ್ಲ. ಆದರೆ, ಅವರು ಹೇಳುವ ಕತೆಗಳನ್ನು ಒಂದು ನೋಟ್ ಬುಕ್ನಲ್ಲಿ ಬರೆದು ಇಟ್ಟುಕೊಳ್ಳುತ್ತಿದ್ದೆ. ಸ್ವಲ್ಪ ಬೆಳೆದು ದೊಡ್ಡವನಾದ ಮೇಲೆ ಆ ಕತೆಯನ್ನು ಓದಿ ಕತೆಗಳ ಸಾರಾಂಶವನ್ನು ತಕ್ಕ ಮಟ್ಟಿಗೆ ತಳಿದುಕೊಂಡಿದ್ದೆ. ಸುವ್ರತಾನಂದ ಸ್ವಾಮಿಗಳು ಒಬ್ಬ ಸನ್ಯಾಸಿ ಸ್ವಾಮಿಗಳು. ನನಗೆ ಎಂಟನೇ ವಯಸ್ಸಿನಲ್ಲಿಯೇ ಆಧ್ಯಾತ್ಮವನ್ನು ಪರಿಚಯಿಸಲು ಪ್ರಯತ್ನಿಸಿದವರು. ಆಗಿನ್ನೂ ಅವರು ಬ್ರಹ್ಮಚಾರಿ ಧೀಕ್ಷೆಯನ್ನು ಪಡೆದುಕೊಂಡು ಧಾರವಾಡದಲ್ಲಿ ಪದವಿ ಓದುತ್ತಿದ್ದರು. ನಂತರ ಶ್ರೀ ಚಿದ್ರುಪಾನಂದ ಮಹಾಸ್ವಾಮಿಗಳಿಂದ ಸನ್ಯಾಸವನ್ನು ಸ್ವೀಕರಿಸಿ ಹಿಮಾಲಯದ ಕಾಸಿ, ಗಂಗೋತ್ರಿ. ಕೇದರನಾಥ್, ಹರಿದ್ವಾರಗಳಲ್ಲಿ ನಾಲ್ಕು ವರ್ಷ ಕಠೋರ ತಪಸ್ಸಿನ ಜೊತೆಗೆ ಅಧ್ಯಾತ್ಮವನ್ನು ಅಧ್ಯಯನ ಮಾಡಿ ಬಂದವರು. ಅವರ ಬಗ್ಗೆ ಬರೆಯುವದು ಬಹಳ ಇದೆ. ಮುಂದೊಂದು ದಿನ ಅವಕಾಶ ಬಂದರೆ ಆ ಮಹಾ ಚೇತನದ ಬಗ್ಗೆ ಬರೆಯುವೆ.
ಆವತ್ತು ನನ್ನ ಪೂಜ್ಯ ಗುರು ಹೇಳಿದ ಕತೆ ಹೇಳಲು ಸಜ್ಜಾದೆ. ಎಲ್ಲರನ್ನು ಕುರಿತು “ಫೂಡ್ ಅಡಲ್ಟ್ರೆಷನ್ ಅ್ಯಂಡ್ ಫೂಡ್ ಫೋರ್ಟಿಫಿಕೇಷನ್” ಬಗ್ಗೆ ಮಾತನಾಡಲೋ ಅಥವಾ ಒಂದು ಕತೆ ಹೇಳಲೋ..! ಎಂದೆ. ಎಲ್ಲರೂ ಕತೆ ಹೇಳಿ, ಕತೆ ಎಂದು ಕೂಗಿದರು. ನನ್ನ ಅಭಿಲಾಷೆಯು ಅದೇ ಆಗಿತ್ತು. ಅಪರಿಚಿತರು ಮೊದಲು ಪರಿಚಿತರಾಗಬೇಕು. ಆಮೇಲೆ ನಾವು ಏನೇ ಹೇಳಿದರು ಉತ್ಸಕತೆಯಿಂದ ಕೇಳುತ್ತಾರೆ ಮತ್ತು ನಮ್ಮ ಮಾತುಗಳಿಗೆ ಬೆಲೆಯನ್ನು ಕೂಡಾ ಸಂದಾಯ ಮಾಡುತ್ತಾರೆ. ಇದು ನನ್ನ ಸಿದ್ಧಾಂತವೂ ಹೌದು!. ಮೊದಲು ಒಂದು ಐ.ಪಿ.ಆರ್ ಬೆಳೆಸಿಕೊಳ್ಳುವ ಹಂಬಲದಿಂದ, ನನ್ನ ಗುರುಗಳು ಹೇಳಿದ ಕತೆಯನ್ನು ಹೇಳಲು ತಯಾರುಗೊಂಡೆ.
****ಕಥೆ****
ಒಂದು ಪುಟ್ಟ ಊರು, ಊರಿನ ಜನರೆಲ್ಲ ಸೇರಿಕೊಂಡು ತಮ್ಮ ಊರಿನ ಜನ ಜೀವನದ ಶಾಂತಿ ಸಮೃದ್ಧಿಯ ಸಂಕೇತವಾಗಿ ತಮ್ಮೂರಲ್ಲೊಂದು ಗಣೇಶನ ದೇವಾಲಯವನ್ನು ಕಟ್ಟಿಸಬೇಕೆಂದು ತಿರ್ಮಾಣ ತೆಗೆದುಕೊಂಡರು. ಸಭೆ ಕರೆದು ಎಲ್ಲರಿಂದಲೂ ದೇಣಿಗೆಯನ್ನು ಸಂಗ್ರಹಿಸಿ , ದೇವಸ್ಥಾನದ ನಿರ್ಮಾಣಕ್ಕೆ ಬೇಕಾದ ಮೂಲ ವಸ್ತುಗಳನ್ನು ತಂದರು. ಮೊಟ್ಟ ಮೊದಲು ಗಣೇಶನ ಮೂರ್ತಿಗೆಂದು ದೊಡ್ಡ ಗಾತ್ರದ ಮೂರು ಬಂಡೆಗಲ್ಲುಗಳನ್ನು ತಂದು, ಒಬ್ಬ ನುರಿತ ಜಾಣ ಶಿಲ್ಪಿಯನ್ನು ಮೂರ್ತಿ ಕೆತ್ತನೆಗೆಂದು ನೇಮಕ ಮಾಡಿದರು.
ಊರ ಹೊರವಲಯದ ಒಂದು ದೊಡ್ಡಾಲದ ಮರದ ಕೆಳಗೆ ಶಿಲ್ಪಿ ತನ್ನ ಕೆತ್ತನೆ ಕಾರ್ಯವನ್ನು ಪ್ರಾರಂಭಿಸಿದ. ಮೊದಲು ಅವನೊಂದು ಬಂಡೆಗಲ್ಲನ್ನು ಆಯ್ದುಕೊಂಡು, ಬಂಡೆಗಲ್ಲಿನ ಮೈಮೇಲೆಲ್ಲ ತನ್ನ ಇಚ್ಛಾಸಕ್ತಿಯಂತೆ ಹರಿತವಾದ ಉಳಿಯಿಂದ ಕುಟ್ಟಲು ಪ್ರಾರಂಭಿಸಿದ. ಒಂದು ದಿನದವರೆಗೆ ಸುಮ್ಮನೆ ಶಾಂತ ಚಿತ್ತವಾಗಿ ಮಲಗಿದ್ದ ಬಂಡೆಗಲ್ಲು, ಮರುದಿನ ಶಿಲ್ಪಿಯನ್ನು ಕರಿತು ಹೇಳಿತು. ಏನಿದು ಅಣ್ಣಯ್ಯ ? “ನಾನು ಇಷ್ಟು ದಿನ ಎಲ್ಲೋ ಒಂದು ಕಾಡಿನ ಪೊಡರಿನೊಳಗೆ ಬೆಚ್ಚಗೆ ಮಲಗಿದ್ದೆ. ಯಾರೋ ಪುಣ್ಯಾತ್ಮರು ನನ್ನನ್ನು ಎತ್ತಿಕೊಂಡು ಬಂದು ನಿನ್ನ ಕೈ ಗೆ ಕೊಟ್ಟರು. ದಯವಿಟ್ಟು ನನ್ನನ್ನು ಬಿಟ್ಟು ಬಿಡು, ನಾನು ಆರಾಮಾಗಿ ಮಲಗಿರುತ್ತೇನೆ”. ಎಂದಿತು. ಮಾರುತ್ತರವನ್ನು ನೀಡದೆಯೇ ಆ ಶಿಲ್ಪಿ ಬಂಡೆಗಲ್ಲನ್ನು ಬಿಟ್ಟು ಮತ್ತೊಂದು ಆಯ್ದುಕೊಂಡ.
ಎರಡು ದಿನದ ವರೆಗೆ ಸಮ್ಮನೆ ತೆಪ್ಪಗೆ ಮಲಗಿದ್ದ ಆ ಎರಡನೇ ಕಲ್ಲು , ಮೂರನೇ ದಿನ ಅದೇ ರಾಗವನ್ನು ಹಾಡಿತು.ಶಿಲ್ಪಿ ಯಾವ ಮಾರುತ್ತರವನ್ನು ನೀಡದೆಯೇ, ಕೊನೆಯ ಬಂಡೆಗಲ್ಲನ್ನು ತೆಗೆದುಕೊಂಡು ತನ್ನ ಕಾಯಕವನ್ನು ಶುರುವಿಟ್ಟುಕೊಂಡ. ಮೂರನೆಯ ಬಂಡೆ, ಯಾವ ನಡು ಪ್ರತಿಕ್ರಿಯೆಯನ್ನು ನೀಡದೇ ಸುಮ್ಮನೆ ಶಾಂತ ಚಿತ್ತವಾಗಿ ಮಲಗಿ ಬಿಟ್ಟಿತ್ತು. ಆ ಬಂಡೆಯ ತಾಳ್ಮೆಯಿಂದ ಅದರಲ್ಲಿಂದ ಶಿವಸುತ ಗಣೇಶ ಹುಟ್ಟಿದ.
ಇನ್ನು ಎರಡು ದಿನವರೆಗೂ ಸುಮ್ಮನಿದ್ದ ಬಂಡೆಯಲ್ಲಿ ದೇವಾಸ್ಥಾನದ ಒಂದು ಕಂಭ ಹುಟ್ಟಿತು. ಇನ್ನು ಒಂದೇ ದಿನಕ್ಕೆ ಶೋಕರಾಗ ಹಾಡಿದ ಬಂಡೆಗಲ್ಲಲಿ, ಮೆಟ್ಟಿಲಿನ ಚಚ್ಚೌಕಾದ ಮೆಟ್ಟಿಲು ಗಲ್ಲು ಹುಟ್ಟಿತು.
ಯಾವಾಗ ದೇವಸ್ಥಾನ ಸಂಪೂರ್ಣವಾಗಿ ತಯಾರುಗೊಂಡು ನಿಂತಿತೋ, ಆವಾಗ ಇವತ್ತು ಬೇರೆ ಬೇರೆ ಅವತಾರಗಳಲ್ಲಿದ್ದ ಒಂದುಕಾಲದ ಬಂಡೆಗಲ್ಲುಗಳು ತಮ್ಮ ತಮ್ಮಲ್ಲಿಯೇ ತಮ್ಮ ಇವತ್ತಿನ ಸ್ಥಾನಮಾನಗಳ ಬಗ್ಗೆ ಮಾತನಾಡಿಕೊಳ್ಳಲಾರಂಭಿಸಿದವು.
ಇಷ್ಟು ಹೇಳಿ, ಕತೆ ಮುಗಿಯಿತು. ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ ಎಂದು, ನಾನು ಹೊರಡಲು ನಿಂತೆ. ಅದರಲ್ಲಿ ಆ ಪುಢಾರಿ ಗುಂಪಿನ ಒಬ್ಬ ಹುಡುಗ ಬಂದು. ಸರ್ “ಹಮ್ಕೋ ಮಾಪ್ ಕಿಜಿಯೇ ಹಮ್ ಆಜ್ ತಕ್ ಹೊ ಪಹೆಲೆ ವಾಲೆ ಪತ್ಥರ್ ಜೈಸಾ ಥಾ. ಆಜ್ ಸೇ ತೀಸರಾ ಪತ್ಥರ ಕಿ ಜೈಸಾ ಬನಾನೆ ಕೆ ಲಿಯೇ ಕೊಶಿಶ್ ಕರ್ತೆ ಹೈ” ಎಂದ.
ಆ ವಿಧ್ಯಾರ್ಥಿಯ ಬೆನ್ನು ತಟ್ಟಿ ಹೊರ ಬಂದೆ. ಆವತ್ತಿನಿಂದ ಆ ಕಾಲೇಜಿಗೆ ಅತಿಥಿ ಉಪನ್ಯಾಸನಾಗಿ ಪಾಠ ಮಾಡಲು ಹೋಗಲು ಶುರುಮಾಡಿದೆ. ಒಳ್ಳೆಯ ಮತ್ತು ಕೆಟ್ಟ ವಿದ್ಯಾರ್ಥಿಗಳೆಂದು ಗುರುತಿಸಿಕೊಂಡೆಲ್ಲ ವಿದ್ಯಾರ್ಥಿಗಳು ನನಗೆ ಆಪ್ತವಿದ್ಯಾರ್ಥಿಗಳಾಗಿ ಹೋದರು.
“ಕೊನೆಗೊಂದು ದಿನ ಎಲ್ಲರಿಗೂ ಹೇಳಿದೆ. “ಮುಂದೆ ಗುರಿಯಿರಲಿ ಹಿಂದೆ ಗುರುವಿರಲಿ ನಡೆಯುವ ದಾರಿಯಲ್ಲಿ ನಿಮ್ಮೊಳಗೆ ಗುರುತರವಾದ ಆತ್ಮ ವಿಶ್ವಾಸವಿರಲಿ” ಅಂತ. ವಿದ್ಯಾರ್ಥಿಗಳು ಸಮ್ಮತಿಸುತ್ತಲೇ ಇನ್ನಷ್ಟು ಹತ್ತಿರವಾದರು.
-ಚಿನ್ಮಯ್ ಮಠಪತಿ
ಕೊನೆಯಲ್ಲಿನ ಕತೆಯ ನೀತಿ ಚೆನ್ನಾಗಿದೆ
ಧನ್ಯವಾದಗಳು ಸರ್……………..
ತುಂಬಾ ಇಷ್ಟವಾಗತೊಡಗಿವೆ ನಿಮ್ಮ ಬರಹಗಳು, ಎಲ್ಲಕ್ಕಿಂತ ಹೆಚ್ಚಾಗಿ ಆರಂಭದ ಎರಡು ಪ್ಯಾರಾಗಳಲ್ಲಿ ನೀವು ಹೇಳುವ ವಿಷಯಗಳಿಗೆ ಸೋತಿದ್ದೇನೆ. ನಮ್ಮೊಳಗಿನ ಪ್ರಪಂಚಕ್ಕೆ ನಿಮ್ಮೊಳಗಿನ ಗುಜರಾತ ತೆರೆದುಕೊಳ್ಳುತ್ತಿದೆ, ಗುಜರಾತಿನ ಗಡಿ ಮೀರಿ ಕೂಡ…
ಧನ್ಯವಾದಗಳು ರಘುನಂದನ್……………………
ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ತಲೆಬರಹ ಮತ್ತು ಲೇಖನ ಒಂದಕ್ಕೊಂದು ಸರಿ ಹೋಗುವುದಿಲ್ಲ ( ಈ ಲೇಖನದಲ್ಲಿ). ಇಲ್ಲಿ ಓದುವ ಮೊದಲು ಗುಜರಾಥಿನ ಬಗೆಗೆ ತಲೆಯಲ್ಲಿ ಇರುತ್ತದೆ. ನೀವು ಬರೆದ ಪ್ರತಿಯೊಂದು ಪಾರಾದಲ್ಲಿರುವುದನ್ನೂ ಒಪ್ಪುವೆ. ಎರಡು ಮಾತುಗಳು ತುಂಬಾ ಮೆಚ್ಚುಗೆ ಆಯಿತುಃ ಕೊನೆಯ ಸಾಲು ಮತ್ತು "ಕೊನೆಯಿರದ ದಾರಿಯ ಪಯಣ ನಮ್ಮ ಜೀವನದ ಬಯಕೆ"
ಮುಂದಿನ ವಾರದ ಲೇಖನಕ್ಕಾಗಿ ಕಾಯುವೆ.
ನಿಮ್ಮ ಮಾತು ನಿಜ ಸರ್..ಸ್ವಲ್ಪ ಮೂಲ ವಿಷಯಕ್ಕೆ ಒತ್ತು ಕೊಟ್ಟು ಬರೆಯುವದನ್ನು ಬಿಟ್ಟು, ಚೂರು ವಿಷಯಮೀರಿ ಸಂಭಾಷಿಸಿದ್ದೇನೆ. ನಿಮ್ಮ ಅಭಿಪ್ರಾಯಕ್ಕೆ ನನ್ನ ಒಮ್ಮತದ ಸಮ್ಮತವಿದೆ . ಮುಂಬರುವ ಲೇಖನ ಮಾಲೆಗಳಲ್ಲಿ ನಿಗಾವಹಿಸುವೆ. ಧನ್ಯವಾದಗಳು ಸರ್………….
ಲೇಖನ ಚೆನ್ನಾಗಿ ಮೂಡಿಬಂದಿದೆ ಸರ್. ಧನ್ಯವಾದಗಳು ಸರ್.
ಧನ್ಯವಾದಗಳು ಮೇಡಮ್. ನಿಮ್ಮ ಅಭಿಪ್ರಾಯ ಮತ್ತು ಪ್ರೋತ್ಸಾಹ ಹೀಗೆಯೇ ಇರಲಿ….
ಕೊನೆಯಲ್ಲಿ ನೀವು ಹೇಳಿದ ಕಥೆ ಬಹಳ ಚೆನ್ನಾಗಿದೆ, ಅದರಿಂದ ಕಲಿಯಬೇಕಾದ ವಿಷಯ ಕೂಡ. ನಿಮ್ಮ ಗುರುಗಳು ಅದನ್ನ ಸರಿಯಾದ ಸಮಯದಲ್ಲಿ ನಿಮಗೆ ಹೇಲಿದ್ದಾರೆ. , ನೀವು ಒಬ್ಬ ಒಳ್ಳೆಯ ಲಕ್ಚರರ್ ಅಂತ ತಿಳಿಯಿತು, ನಿಮ್ಮ ಉಪನ್ಯಾಸ ಒಮ್ಮೆ ಕೇಳಬೇಕು ಅನ್ನಿಸುತ್ತದೆ.