ನನ್ನೊಳಗಿನ ಗುಜರಾತ್ (ಭಾಗ 7): ಸಿ.ಎಸ್. ಮಠಪತಿ

ಗುಜರಾತಿನಲ್ಲಿರುವ ತನಕ ನನ್ನಲ್ಲಿ ಒಂದೇ ಒಂದು ಅಪಸ್ವರವಿದ್ದದ್ದು , ಗುಜರಾತಿನ ತಿಂಡಿ ತಿನಿಸುಗಳ ಬಗ್ಗೆ. ನಮ್ಮೂರು ನಮಗೆ ಅಂದ, ನಮ್ಮೂರ ತಿಂಡಿ ತಿನಿಸುಗಳು ನಮಗೆ ಚೆಂದ ಎಂಬ ಮಾತು ಒಂದು ಕಾರಣವಾಗಿರಬೇಕು. ಮಹಾನಗರಗಳಲ್ಲಿ ಸಿಗುವಂತಹ ಆಹಾರಗಳು ಒಂದು ರೀತಿಯಲ್ಲಿ ನಮ್ಮ ದಕ್ಷಿಣ ಭಾರತೀಯರಿಗೆ ಸ್ವಲ್ಪ ಹಿಡಿಸಬಹುದು . ಆದರೆ, ಗ್ರಾಮೀಣ ಪ್ರದೇಶದ ಆಹಾರಗಳು ಸುತಾರಾಂ ಹಿಡಿಸುವುದೇ ಇಲ್ಲ. ಗ್ರಾಮೀಣ ಪ್ರದೇಶದ ಜನರಿಗೆ ಬೆಳಗಿನ ಒಳ್ಳೆಯ ತಿಂಡಿಯ ಅಭಿರುಚಿಯೂ ಇಲ್ಲ. ಅದರಲ್ಲೂ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಜನರಿಗೆ ಹೆಚ್ಚೆಂದರೆ ಬೆಳಗಿನ ತಿಂಡಿ  ಕೇವಲ ಬಜ್ಜಿ, ಕಮನ್ ಮತ್ತ ನಮ್ಕಿನ್. ಮೂರು ತಿನಿಸುಗಳು ಒಳ್ಳೆಣ್ಣೆಯಲ್ಲಿ ಅದ್ದಿ ತೆಗೆದಂತಹುಗಳು. ನಾವು ಈ ರೀತಿ ತಿಂಡಿಗಳನ್ನು ಸಂಜೆ ಚಹಾ ಜೊತೆಗೆ ಚಪ್ಪರಿಸುತ್ತೇವೆ. ಇಂತಹ ತಿಂಡಿಗಳ ಜೊತೆಗೆ, ಉದ್ದನೆಯ ಒಂದು ಲೋಟ ಚಹಾ ಕುಡಿದು ಬೆಳ್ಳಂಬೆಳಿಗ್ಗೆ ಐದು ಗಂಟೆಗೆ  ರೈತಾಪಿಗಳು ಗದ್ದೆಗೆ ತೆರಳಿ ಬಿಡುತ್ತಾರೆ. ಅದ್ಹೇಗೆ ಅಷ್ಟೊಂದು ನಸುಕಿನಲ್ಲಿ ಈ ತೆರನಾದ ತಿಂಡಿಗಳನ್ನು ಅವರು ತಿನ್ನುತ್ತಾರೋ ಆ ಪರಮಾತ್ಮನಿಗೇ ಗೊತ್ತು.

ಈ ರೀತಿಯಾಗಿ ಎಣ್ಣೆಯಲ್ಲಿ ಬೇಯಿಸಿ ಮಾಡಿದ ತಿಂಡಿಗಳನ್ನು ಚಹಾ ಜೊತೆಗೆ ಬೆಳಗಿನ ಐದು ಗಂಟೆಗೆ ತಿಂದು, ಹೊಲಗದ್ದೆ ಕಡೆಗೆ ಮನೆಯ ಹಿರಿಯರು ಹೋಗುತ್ತಿದ್ದರೆ, ಮನೆಯಲ್ಲಿನ ಸೊಸೆಯಂದಿರು ಮತ್ತು ಹೆಣ್ಣು ಮಕ್ಕಳು ಅವರ ಜೊತೆಗೆ ಎದ್ದು ಅವರಿಗೆ ಬೇಕಾದ ಎಲ್ಲ ಸಹಾಯವನ್ನು ನೀಡುತ್ತಾರೆ. ಮುಖಕ್ಕೆ ಸೀರೆ ಸೆರಗನ್ನು ಹೊದ್ದು ಮುಂಬಾಗಿಲ ಕಸ ತೆಗೆದು, ಅಂಗಳಕ್ಕೆ ನೀರೆರಚಿ ತೊಲೆ ಬಾಗಿಲನ್ನು ಪೂಜಿಸಿ, ಬಾಗಿಲು ತೋಳಿಗೆ ಊದುಬತ್ತಿಯನ್ನು ಬೆಳಗಿ ಅಂಟಿಸುತ್ತಾರೆ, ಪೂರ್ವದಿಕ್ಕಿಗೆ ಇನ್ನೂ ಉದಯಿಸದ ರವಿರಾಯನಿಗೊಂದು ನಮಸ್ಕಾರವನ್ನು ತಿಳಿಸಿ. “ರವಿರಾಜ ಮೂಡಣ ಪರದೆಯ ಸೀಳಿ ಬಾ  ಧರೆಯ ಬೆಳಗಲು, ಜೀವಸಂಕುಲಕ್ಕೆ ಮತ್ತೊಂದು ಚೇತನವನ್ನು ಹೊತ್ತು ಬಾ“ ಎಂದು ಮನಸ್ಸಲ್ಲಿ ನೆನೆಯುತ್ತಾರೆ. ನಂತರ ಮನೆಗೆಲಸದಲ್ಲಿ ತಲ್ಲೀನರಾಗಿ ಬಿಡುತ್ತಾರೆ.

ಬೆಳಗಿನ ಮನೆಗೆಲಸ ಎಂದರೆ, ಮನೆ ಸ್ವಚ್ಚಗೊಳಿಸುವದು, ಆಮೇಲೆ ಗಡದ್ದಾಗಿ ಮುಂಗೈಯಗಲ ಸಜ್ಜೆಯ ರೊಟ್ಟಿಯನ್ನು ತಟ್ಟಿ ಬೇಯಿಸಲು ಸರಿ ಸುಮಾರು ಒಂದೆರಡು ಗಂಟೆಗಳವರೆಗೂ ಕುಳಿತುಕೊಳ್ಳುವುದು. ನಮ್ಮ ಉತ್ತರ ಕರ್ನಾಟಕದಲ್ಲಿ ನಮಗೆ ಹೇಗೆ ತೆಳುವಾಗಿ ತಟ್ಟಿ ಮಾಡುವ ಬೆಳ್ಳನೆಯ ಜೋಳದ ರೊಟ್ಟಿ ಸಿಗುತ್ತವೆಯೋ, ಅದೇ ರೀತಿ ಈ ಸಜ್ಜೆಯ ರೊಟ್ಟಿಯ ಹಾವಳಿ ಗುಜರಾತಿನ ತುಂಬೆಲ್ಲಾ ಇದೆ. ನಮಗೆ ಇಂತಹ ರೊಟ್ಟಿಯನ್ನು ಅಗೆಯಲು ಮತ್ತು ಅರಗಿಸಿಕೊಳ್ಳಲು ನಿಜವಾಗಲೂ  ಹೆಚ್ಚಿನ ಶಕ್ತಿ ಬೇಕು.  ಆ ದಪ್ಪ- ದಪ್ಪನೆಯ ಐದಾರು ರೊಟ್ಟಿಗಳನ್ನು ಒಂದೇ ಬಾರಿಗೆ ಗಂಡಸರು ತಿಂದು ತಟ್ಟೆಯಲ್ಲಿ ಕೈತೊಳೆದು ಎದ್ದೇಳುತ್ತಾರೆ, ವೀರ ಭಕ್ಷಕರಂತೆ ಹೆಮ್ಮೆಯಿಂದ ಹುರಿಮೀಸೆಗಳನ್ನು ಒರೆಸಿಕೊಳ್ಳುತ್ತಾ. ಇನ್ನು ಮಹಿಳೆಯರು ಏನೂ ಕಡಿಮೆ ಅಲ್ಲ. ಅವರು ಸಹ ಮೂರರಿಂದ ನಾಲ್ಕು ಘಣ ರೊಟ್ಟಿಗಳನ್ನು ತಿಂದೇಳುತ್ತಾರೆ. ಆದರೂ ಗುಜರಾತಿಗರ “ನ್ಯೂಟ್ರಿಶನಲ್ ಸ್ಟೇಟಸ್” ತುಂಬಾ ಕ್ಷೀಣ. ಯಾಕೆಂದರೆ, ಅವರು ತಿನ್ನುವ ಹಲವಾರು ಆಹಾರ ಪದಾರ್ಥಗಳು ಅಸಮತೋಲನ  ಪೋಷಕಾಂಶ ಮತ್ತು ಅಪೌಷ್ಟಿಕತೆಯಿಂದ ಕೂಡಿದವುಗಳು. ಇದರಿಂದಾಗಿ ರಕ್ತಹೀನತೆ  ಹೇರಳವಾಗಿ ಕಾಣಬರುತ್ತದೆ.

ಗ್ರಾಮಾಂತರ ಗುಜರಾತಿಗರಿಗೆ ಈ ಸಜ್ಜೆಯ ರೊಟ್ಟಿಯೊಂದು ನಿತ್ಯದ ಸಾಮಾನ್ಯ ಆಹಾರ. ಕೇವಲ ಈ ರೊಟ್ಟಿಯ ಜೊತೆಗೆ ದಿನವನ್ನು ನೂಕುವ ಜನ, ಮನೆಯಲ್ಲಿ ನಿತ್ಯ ಅನ್ನವನ್ನು ಮಾಡುವದಿಲ್ಲ. ಕೇವಲ ಹಬ್ಬ ಹರಿದಿನಗಳಲ್ಲಿ ಮಾತ್ರ ಸಿಹಿ ಭಕ್ಷ್ಯದ ಜೊತೆಗೆ ಹಿಡಿ ಅನ್ನವನ್ನು ಉಣ್ಣುತ್ತಾರೆ. ನಮಗೆಲ್ಲರಿಗೂ ಈ ಅಕ್ಕಿಯ ಅನ್ನವು ಊಟಕ್ಕೆ ಉಪ್ಪಿನಕಾಯಿ ಇದ್ದ ಹಾಗೆ, ಅನ್ನವಿಲ್ಲದೆ ನಮ್ಮ ಊಟ ಅಪೂರ್ಣ. ಈ ರೀತಿಯಾದ ಅಡುಗೆ ವಿಧಾನದಿಂದ ನನಗೆ ತಲೆ ಚಿಟ್ಟುಹಿಡಿದು ನಾನೇ ಅಡುಗೆಯನ್ನು ಮಾಡಿ ಉಣ್ಣಲು ಶುರುವಿಟ್ಟುಕೊಂಡಿದ್ದೆ. ನಮ್ಮ ಕರ್ನಾಟಕದ ಚಹಾದಿಂದ ಹಿಡಿದು ಒಬ್ಬಟ್ಟಿನವರೆಗೂ ಅಲ್ಲಿ ಇದ್ದಾಗ ಮಾಡಿ ತಿಂದಿದ್ದೆ ಮತ್ತು ನನ್ನ ಮೂರ್ನಾಲ್ಕು ಗುಜ್ಜು ಸ್ನೇಹಿತರಿಗೂ ಉಣ ಬಡಿಸಿದ್ದೆ. ಅವರು ನಮ್ಮ ತಿಂಡಿ ತಿನಿಸುಗಳನ್ನು ಬಲವಾಗಿ ಇಷ್ಟ ಪಟ್ಟಿದ್ದರು. ಅಂದ ಹಾಗೆ, ಈ ಅಡುಗೆ ಮಾಡುವುದು ಎಂದರೆ ನನಗೊಂದು ಇಷ್ಟದ ಹವ್ಯಾಸ. ಅಬ್ಬಾ..!! ಈ ರೀತಿಯಾಗಿ ಅಡುಗೆ ಮಾಡಿ -ಮಾಡಿ ಬಡಿಸಿದಾಗ, ಯಾರದರೂ ಆತ್ಮೀಯರು ಅದನ್ನು ಉಣ್ಣುತ್ತಿದ್ದರೆ ನನಗಾಗುವ ಸಂತೋಷಕ್ಕೆ ಮಾತ್ರ ಪಾರವೇ ಇರೋದಿಲ್ಲ. ಅದು ನನ್ನ ಅಚ್ಚು ಮೆಚ್ಚಿನವರಿಗೆ ಬಡಿಸುವಾಗಲಂತು ನಾನೊಬ್ಬ ಜಗತ್ತಿನಲ್ಲಿ ಅತ್ಯಂತ ಸುಖೀ ಜೀವ ಎಂಬ ಅನುಭವವಾಗುತ್ತೆ.

ಇಂತಹ ಅನುಭವಗಳಲ್ಲಿನ ಒಂದು ಸುಂದರ ಅನುಭವವನ್ನು ಹೇಳ ಬಯಸುವೆ. ಅದು ನಮ್ಮೂರಲ್ಲಿನ ಅನುಭವ, ಬಾಲ್ಯದ ಅನುಭವ.! ಬಾಲ್ಯದ  ಶಾಲಾದಿನಗಳಲ್ಲಿ ನನ್ನದೊಂದು ಹತ್ತಿಪ್ಪತ್ತು ಬಾಲ ಕಿಲಾಡಿಗಳಿಂದ ತುಂಬಿದ್ದ  ಗುಂಪೊಂದಿತ್ತು. ಎಲ್ಲರೂ ಒಬ್ಬರನ್ನೊಬ್ಬರು ಹತ್ತಿರದ ಸ್ನೇಹ ನಂಟಿನಿಂದ ಕಾಣುತ್ತಿದ್ದೆವು. ಆ ದಿನಗಳ ಬಹುಪಾಲು ಕಾಲವನ್ನು ಜೊತೆಯಲ್ಲಿಯೇ ಕಳೆಯುತ್ತಿದ್ದೆವು. ತುಂಟಾಟ – ಚೆಲ್ಲಾಟಗಳ ಜೊತೆಗೆ ಸುಂದರ ಕ್ಷಣಗಳನ್ನು ಆಹ್ಲಾದಿಸುತ್ತಿದ್ದೆವು.  ಹೀಗಿರುವಾಗ, ಪ್ರತಿ ಶನಿವಾರ ರಾತ್ರಿ ನಮ್ಮದೇಯಾದ ಒಂದು ಪುಟ್ಟ ಪಾರ್ಟಿಯನ್ನು ಹಮ್ಮಿಕೊಳ್ಳುತ್ತಿದ್ದೆವು. ಅಷ್ಟೊಂದು ಚಿಕ್ಕ ವಯಸ್ಸಿನಲ್ಲಿಯೇ ನಾನು ಒಂದಿಷ್ಟು ತರಹದ ಅಡುಗೆಗಳನ್ನು ಮಾಡಲು ಕಲಿತಿದ್ದೆ, ಆ ಕಲೆ ಇವತ್ತು ನನ್ನಲ್ಲಿ ಬೆಳೆದು “ನಳ” ನಂತೆ ಪ್ರಬುದ್ಧ ಪಾಕಪ್ರವೀಣನಾಗಿ ಬಿಟ್ಟಿದೆ.  ನಮ್ಮ ಊಟದ ಪಾರ್ಟಿಗೆ ಹಲವಾರು ಮಾನದಂಡಗಳನ್ನು ಅಳವಡಿಸಿದ್ದೆವು. ನನ್ನ ಬಾಲ್ಯದ ಆ ಸ್ನೇಹಿತರು ತಮ್ಮ-ತಮ್ಮ ಮನೆಯಿಂದ ಅಡುಗೆ ಮಾಡಲು ಬೇಕಾದ ತರಕಾರಿ, ವಗ್ಗರಣೆ ವಸ್ತು, ಒಳ್ಳೆಣ್ಣೆ ಮತ್ತು ಇತರ ಅವಶ್ಯಕ ವಸ್ತುಗಳನ್ನು ಒಬ್ಬಬ್ಬರೂ ಒಂದೊಂದು ವಸ್ತುವಂತೆ ತರಬೇಕಿತ್ತು. ಈ ರೀತಿಯಾಗಿ ಆ ನನ್ನ ಸ್ನೇಹಿತರು ಸಂಜೆ ಆರು ಗಂಟೆಯಾಗುತ್ತಿದ್ದಂತೆಯೇ ಅಡುಗೆಗೆ ಬೇಕಾದ ಒಂದೊಂದು ವಸ್ತುಗಳನ್ನು ತುಂಡು ಚೆಡ್ಡಿಯ ಉದ್ದನೆಯ ಕಿಸೆಯೊಳಗೆ ಇಳಿಸಿಕೊಂಡು ಬರುತ್ತಿದ್ದರು. ಒಮ್ಮೊಮ್ಮೆ ಅಪ್ಪ-ಅಮ್ಮ ಗೆ ಹೆದರಿ ಕದ್ದುಕೊಂಡ ಬಂದ ಉದಾಹರಣೆಗಳು ಇವೆ. ಸಂಜೆಯ ಆರೇಳು ಗಂಟೆಗೆ ನಾವೆಲ್ಲರು ಊರ ಹೊರಗಿನ ಆಶ್ರಮದ ಅಂಗಳಕ್ಕೆ ಸೇರುತ್ತಿದ್ದೆವು. ನಂತರ ಒಬ್ಬ ಈರುಳ್ಳಿ ಕೂಯ್ದರೆ, ಇನ್ನೊಬ್ಬನದು ಅದೇ ರೀತಿಯಾಗಿ ಮತ್ತೊಂದು ಕೆಲಸ. ನಾಲ್ಕಾರು ಜನ ಸೌದೆಯನ್ನು ಕೊಡಲಿಯಿಂದ ಸೀಳಿ ಉರುವಲನ್ನು ತಯಾರು ಮಾಡುತ್ತಿದ್ದರು. ಇತ್ತ ನಾನು ಮತ್ತು ನನ್ನ ಸಹಾಯಕ ಗೆಳೆಯ "ಮಿಸ್ಟರ್  ಸುರೇಶ್”, ಮೂರು ದೊಡ್ಡದಾದ ಕಲ್ಲುಗಳನ್ನು ಆಯ್ದು ತಂದು ಒಲೆಯನ್ನು ಹೂಡುತ್ತಿದ್ದೆವು. ತದನಂತರ ಉಪ್ಪಿಟ್ಟು, ಕೇಸರಿ ಬಾತ್, ಕಡಲೆ ಬೇಳೆ ಪಾಯಸ, ಪುಲಾವ್, ಹಾಲ್ಹುಗ್ಗಿ (ಹಾಲಿನಲ್ಲಿ ಮಾಡಿದ ಗೋಧಿ ಪಾಯಸ), ಬಜ್ಜಿ, ಮಾವು-ಬಾಳೆ ಹಣ್ಣಿನ ಸೀರಕಣೆ, ಖಡಕ್ ವಿವಿಧ ರೀತಿಯ ಪಲ್ಯ, ಕಿಚಡಿ, ತೊಗರಿ ಬೇಳೆಯ ಖಡಕ್ ಬೆಳ್ಳುಳ್ಳಿ ಸಾಂಬರ್ ಈ ರೀತಿಯಾದ ಹಲವಾರು ಭಕ್ಷ್ಯಗಳನ್ನು ಮಾಡುತ್ತಿದ್ದೆವು. ಹೂಡಿದ ಕಲ್ಲಿನ ಒಲೆಯ ಮೇಲೆ, ಬಟಾಬಯಲು ಅಂಗಳದ ಬೆಳದಿಂಗಳಿರುಳಲಿ ಪ್ರತಿ ಶನಿವಾರ ಇಂತಹ ಮೂರರಿಂದ-ನಾಲ್ಕು ವಿವಿಧ ರೀತಿ ಭಕ್ಷ್ಯಗಳನ್ನು ರಾತ್ರಿ ಒಂಬತ್ತರ ವೇಳೆಗೆ ತಯಾರು ಮಾಡುತ್ತಿದ್ದೆವು. ಆಮೇಲೆ ಅಟ್ಟ ಅಡುಗೆಗೆ ಒಂದು ಚಿಕ್ಕ ಪೂಜೆಯ ಮಾಡಿ, ಎಲ್ಲರೂ ಸಾಲಾಗಿ ಕುಳಿತು ಊಟ ಮಾಡುತ್ತಿದ್ದೆವು. ಜೊತೆಗೆ ಪಕ್ಕದಲ್ಲಿ ಒಂದು ಟೇಪ್ ರಿಕಾರ್ಡರ್ ಹಳೆಯ ಕನ್ನಡ ಚಲನಚಿತ್ರದ ಗೀತೆಗಳನ್ನು ಹಾಡುತ್ತಿರುತ್ತಿತ್ತು. ಅದರಲ್ಲಿ ಡಾ. ರಾಜ್ ಕುಮಾರರ “ಬಾಡಿ ಹೋದ ಬಳ್ಳಿಯಿಂದ ಹೂವು ಅರಳ ಬಲ್ಲದೆ” ಪಿ.ಬಿ. ಶ್ರೀ.ರವರ, “ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ನಕ್ಕು ನೀ ಸೆಳೆದಾಗ  ಸೋತೆ ನಾನಾಗ”, ಎಸ್ .ಪಿ .ಬಿ ರವರ “ಆಕಾಶದಿಂದ  ಕೆಳಗಿಳಿದ ಗೊಂಬೆ ಇವಳೇ ಇವಳೇ ಚಂದನದ ಗೊಂಬೆ” , ಚೈತ್ರದ ಪ್ರೇಮಾಂಜಲಿಯ ಸುಮಧುರ ಗೀತೆಗಳು ಎಂಬಿತ್ಯಾದಿ ಹಾಡುಗಳನ್ನು ಕೇಳುತ್ತಾ ಮೈ ಮರೆಯುತ್ತಿದ್ದೆವು. ಮತ್ತು ಆ ಗೀತೆಗಳು ನಮ್ಮೆಲ್ಲರ ನೆಚ್ಚಿನ ಹಾಡುಗಳಾಗಿದ್ದವು. ಮತ್ತೊಮ್ಮೆ ಊಟದ ಜೊತೆಗೆ ಹರಟುತ್ತ, ಒಬ್ಬರ ತಟ್ಟೆಯಿಂದ ಊಟವನ್ನು ಕಸಿದು ಒಬ್ಬರು ತಿನ್ನುತ್ತಾ ಸಂತೋಷದ ಮೇರೆಯನ್ನು ಮೀರಿ ಆನಂದಿಸುತ್ತಿದ್ದೆವು. ಊಟ ಮುಗಿದ ನಂತರ ಆಶ್ರಮದ ಪ್ರಾಂಗಣದಲ್ಲಿ ದೊಡ್ಡದಾದ ಬಿಚ್ಚು ಹಾಸಿಗೆಯನ್ನು ಹಾಸಿ, ಪ್ರಾಂಗಣದಲ್ಲಿ ಕುಳಿತು ಕೊಳ್ಳುತ್ತಿದ್ದೆವು. ನಂತರ ಆಶ್ರಮದ ಸ್ವಾಮೀಜಿ, ಶ್ರೀ ಸುವ್ರತಾನಂದ ಸರಸ್ವತಿಗಳು ಬಂದು, ಕಥೆಗಳನ್ನು ಹೇಳುತ್ತಿದ್ದರು. ನಾವು ಅವರ ಕಥೆಗಳಿಗೆ ಹ್ಹೂಂ..ಹ್ಹೂಂ ಎನ್ನುತ್ತಲೇ ನಿದ್ರೆಗೆ ಜಾರುತ್ತಿದ್ದೆವು. ಆ ಬಾಲ್ಯದ ಸಿಹಿ ಘಳಿಗೆಗಳು ಬೆಲೆ ಕಟ್ಟಲಾಗದ ಮಾಣಿಕ್ಯ,! ಮತ್ತೊಮ್ಮೆ ಜೀವನದಾಗಸದೊಳು ಉದಯಿಸಿ ಮಿಂಚಿ ಮರೆಯಾಗದ ನಕ್ಷತ್ರ.! ಇವತ್ತು  ನೆನೆದಾಗ, ಮನಸ್ಸು ದುಃಖಿಯಾಗುತ್ತೆ. ಮರುಗಿ ,ಕೊರಗಿ ಆ ಎಲ್ಲ ನಿಷ್ಕಲ್ಮಶ ಮನದ ಗೆಳೆಯರ ಜೊತೆ ಮಾಡಿದ ಬೆಳೆದಿಂಗಳೂಟವನ್ನು ಕಳೆದುಕೊಂಡ ಭೀತಿಯಲ್ಲಿ ಒಳಗೊಳಗೆ ಕಳೆದು ಹೋಗುತ್ತೆ. ಮತ್ತೆ ಆ ದಿನಗಳನ್ನು ಎರಡು ಕೈ ಯನ್ನು ಚಾಚಿ ಕರೆಯುತ್ತೆ. ಆದರೆ, ಮರಳಿ ಬಾರದ ಆ ದಿನಗಳು, ಆ ಕ್ಷಣಗಳು, ಆ ಸುಂದರ ಸಂಜೆಗಳು .! ಎಲ್ಲವೂ ಈಗ ಬರೀ ನೆನಪು.

ಇರಲಿ , ಹೊಂದಾಣಿಕೆಯಾಗದ ಗುಜರಾತಿನ ಗ್ರಾಮೀಣಿಗರ ಊಟದ ಮಾದರಿ ಬಣ್ಣಿಸುತ್ತಲೇ ಒಮ್ಮೆ ಆ ಬಾಲ್ಯದ ದಿನಗಳತ್ತಲೂ ಸುತ್ತಾಡಿಕೊಂಡು ಬಂದಾಯಿತು. ಗುಜರಾತಿನಲ್ಲಿ ಈ ರೀತಿಯಾದ ಜನ ಜೀವನ ಕಾಣಸಿಗುತ್ತದೆ. ಇವತ್ತಿಗೂ ಗುಜರಾತಿನ  ಗ್ರಾಮೀಣ ಪ್ರದೇಶದಲ್ಲಿನ ಕೃಷಿಕರ ಜೀವನ ಎಷ್ಟೊಂದು ಸರಳತೆಯಿಂದ ಕೂಡಿದ್ದು ಅಂದರೆ, ವಿವರಣೆಗೆ ನಿಲುಕದು ಎನ್ನಿಸುತ್ತದೆ, ಅತ್ಯಂತಹ ಸಾಮಾನ್ಯ ಮಾರ್ಗದಲ್ಲಿ ಸುಲಲಿತ ಜೀವನ ಕ್ರಮಕ್ಕೆ ಇವತ್ತಿಗೂ ತಮ್ಮನ್ನು ತಾವು ಕೊಡುಗೆಯಾಗಿಸಿಕೊಂಡಿದ್ದಾರೆ. ರೈತಾಪಿ ಜನರಲ್ಲಿ ನಾವು ನಿಷ್ಲಲ್ಮಷ ಮನಸ್ಥಿತಿಯನ್ನು ಎಲ್ಲೆಂದರಲ್ಲಿ ಕಾಣುತ್ತೇವೆ. ಅದು ನಮ್ಮ ಕರ್ನಾಟದಲ್ಲಿಯೂ ಹೊರತಾಗಿಲ್ಲ. ಆದರೆ, ನಮ್ಮ ರಾಜ್ಯದಲ್ಲಿ ಇವತ್ತಿನ ಕೃಷಿಯ ರೀತಿ ರಿವಾಜು ಸ್ವಲ್ಪ ಬದಲಾಗಿವೆ. ನೈಜ ವ್ಯವಸಾಯ ಪದ್ಧತಿ  ಸ್ವಲ್ಪ ಆಧುನಿಕ ಸಲಕರಣೆಗಳು ಮತ್ತು ತಂತ್ರಜ್ಞಾನ ಬಂದ ತಕ್ಷಣ, ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಹೊಸ ರೂಪ-ಬಣ್ಣಗಳನ್ನು ಪಡೆದುಕೊಂಡಿದ್ದು ನಮಗೆಲ್ಲರಿಗೂ ತಿಳಿದಿರುವ ವಿಚಾರ.

ನಮ್ಮ ಕರ್ಣಾಟಕದ ಗ್ರಾಮೀಣ ರೈತಾಪಿ ಜನರ ಬದುಕು ಈ ಆಧುನಿಕತೆ ಮತ್ತು ನಾಗರೀಕತೆಯಿಂದ ಬದಲಾವಣೆ ಕಂಡಿದೆ, ಹಾಗೂ ಕಾಣುತ್ತಲಿದೆ, ಇವತ್ತು ವ್ಯವಸಾಯದಲ್ಲಿ ರೆಂಟೆ-ಕುಂಟೆ, ಕೂರಿಗೆ-ಸಡ್ಡೆ ಬಟ್ಟಲು, ಚಕ್ಕಡಿ-ನೇಗಿಲು ಮತ್ತು ಇಂತಹ ಹಲವಾರು ಕೃಷಿ ಸಂಬಂಧಿತ ಸಲಕರಣೆಗಳು ಮಾಯವಾಗುತ್ತಿವೆ, ಹೊಲ ಗದ್ದೆಗಳಲ್ಲಿ ರಾಶಿಮಾಡುವ ಸಮಯದಲ್ಲಿ ಮಾಡುತ್ತಿದ್ದ ಸುಗ್ಗಿ ಕಣಗಳಿಲ್ಲ, ಕಣದ ನಡು ಮೇಟಿಯನ್ನು ಕಾಲಲ್ಲಿ ತುಂಬು ಬೆಳೆಯ ಕೂಯ್ಯಿಲನ್ನು ತುಳಿಯುತ್ತ ಹಂತಿ ತುಳಿಯಲು ಸಾಕಷ್ಟು ಜಾನುವಾರುಗಳಿಲ್ಲ. ಅಷ್ಟೇ ಅಲ್ಲ ರೈತನ ತುಂಬು ತೋಳಿನ ಖಾದಿ ಅಂಗಿ, ಧೋತಿ, ತಲೆಗೆ ಪೇಟ, ಹೆಗಲಮೇಲೊಂದು ಹಚ್ಚ ಹಸಿರಿನ ಟವಲ್ ಇಲ್ಲ.  ಹಂತಿ ಪದ, ರಾಸಿಕಣ- ಸುಗ್ಗಿ ಹಾಡು, ಕೇಳಲು ಸಿಗೋಲ್ಲ. ನಮ್ಮ ರೈತರು ತುಸು ಮುಂದುವರೆದ ಜಾಣ ರೈತರಾಗಿ, ಮೂಲ ಕೃಷಿ ಮತ್ತು ಮೂಲ ವ್ಯವಸಾಯದ ಸಾವಯವ ನೈಜ ಜೀವನದಿಂದ ವಿಮುಕ್ತರಾಗುತ್ತಿದ್ದಾರೆ ಎಂಬುದು ಒಪ್ಪಿಕೊಳ್ಳಬೇಕಾದ ಮಾತು.

ಗುಜರಾತಿನಲ್ಲಿ ಇವತ್ತಿಗೂ ಆ ಪ್ರಾಚೀನ ಮಾದರಿಯ ವ್ಯವಸಾಯ ಪದ್ಧತಿ ಜೀವಂತವಾಗಿದೆ. ಹೆಚ್ಚಾಗಿ ಹಳ್ಳಿಗರು ತಮ್ಮ ವ್ಯವಸಾಯ ಕೆಲಸ ಸುಲಲಿತವಾಗಿ ನಡೆಯಲಿ ಎಂದುಕೊಂಡು ಪ್ರಾಯಶಃ ಜನರು ಹೊಲ – ಗದ್ದೆಗಳಲ್ಲಿಯೂ ಒಂದು ಪುಟ್ಟ ಮನೆಯನ್ನು (ಚಪ್ಪರವನ್ನು) ಹಾಕಿಕೊಂಡಿದ್ದಾರೆ. ಹೊಲ ಗದ್ದೆಗಳಲ್ಲಿ ಯಾವಾಗ ಹೆಚ್ಚು ಕೆಲಸವಿರುತ್ತದೆಯೋ, ಆ ಸಮಯದಲ್ಲಿ ತಮ್ಮ ಕುಟುಂಬವನ್ನು ಊರ ಮನೆಯಿಂದ ಗದ್ದೆಯ ಮನೆಗೆ ಸ್ಥಳಾಂತರಿಸಿ ಬಿಡುತ್ತಾರೆ. ಬಿತ್ತನೆ, ಸುಗ್ಗಿ ಕಾಲದಲ್ಲಿ ತಿಂಗಳುಗಟ್ಟಲೇ ಅಲ್ಲಿಯೇ ಬೀಡು ಬಿಡುತ್ತಾರೆ. ಹೇಳಿ ಕೇಳಿ ಗುಜರಾತಿನಲ್ಲಿ ಅತ್ಯಂತ ಬಿಸಿಲು ಧಗೆ. ದಿನದ ಪೂರ್ತಿ ಗದ್ದೆಯಲ್ಲಿ ಕೆಲಸ ಮಾಡಲು ಆಗುವದಿಲ್ಲ. ಆ ಕಾರಣಕ್ಕೋಸ್ಕರ ಅವರ ಕೆಲಸದ ಸಮಯ ಬೆಳಿಗ್ಗೆ ಐದರಿಂದ ಹನ್ನೊಂದರ ವರೆಗೆ ಮತ್ತು ಸಂಜೆ ನಾಲ್ಕರಿಂದ ಹೊತ್ತು ಮುಳುಗಿ ಕತ್ತಲಾಗುವವರೆಗೆ.  

ಹೆಚ್ಚಾಗಿ ಎತ್ತುಗಳಿಂದಲೇ ಭೂಮಿಯನ್ನು ಫಸಲಿಗೋಸ್ಕರ ಊಳಿ ಹದಮಾಡುತ್ತಾರೆ. ಚಿಕ್ಕ- ಚಿಕ್ಕ ಬಡ ರೈತರು  ತಾವೇ ಎತ್ತುಗಳಂತೆ ರೆಂಟೆ-ಕುಂಟೆಗಳ ನೊಗಕ್ಕೆ ಹೆಗಲಕೊಟ್ಟು ಭೂಮಿಯನ್ನು ಉಳುತ್ತಾರೆ. ಹತ್ತಿಪ್ಪತ್ತು ವರ್ಷದ ಹಿಂದೆ ನಮ್ಮ ಕರ್ನಾಟಕಲ್ಲಿ ಇದ್ದಂತಹ ನಾಟಿ  ವ್ಯವಸಾಯ ಪದ್ಧತಿ ಇವತ್ತಿಗೂ ಗುಜರಾತನಲ್ಲಿ ಇದೆ. ರೆಂಟೆ, ಕುಂಟೆ, ಎತ್ತು, ಜೊತೆಗೆ ರೈತರ ವಿವಿಧ ಹಾಡುಗಳು ಜೀವಂತವಾಗಿವೆ. ಒಣ ಬೇಸಾಯವನ್ನು ನಂಬಿಕೊಂಡು ಬದುಕು ಸಾಗಿಸುವ ಗುಜರಾತಿನ ರೈತರ ಜೀವನ ಅತ್ಯಂತ ಕಠಿಣ. ಹತ್ತು- ಹನ್ನೆರಡು ವರ್ಷಗಳಿಂದ ಕ್ರಾಂತಿಕಾರಕ ಬೆಳವಣಿಗೆ ಆಗುತ್ತಿರುವ ಗುಜರಾತಿನಲ್ಲಿ, ನದಿ ಜೋಡನೆ ಮತ್ತು ಕಾಲುವೆಗಳಿಂದ ರಾಜ್ಯ ಸರಕಾರ ವ್ಯವಸಾಯಕ್ಕೆ ನೀರನ್ನು ಒದಗಿಸಿ, ಒಣ ಬೇಸಾಯಿಗರ ಬಾಳಿಗೆ ನೆಮ್ಮದಿಯನ್ನು ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಕ್ಷೀಪ್ರ ಬದಲಾವಣೆಯಿಂದ ಗುಜರಾತ್ ರಾಜ್ಯ ಹೊಸ  ದಿಗಂತದೆಡೆಗೆ ತನ್ನ ಜನ ಜೀವನದ ಬದುಕನ್ನು ಕೊಂಡೊಯ್ಯುತ್ತಿದೆ. ಇದರಲ್ಲಿ ಸಾಮಾಜಿಕ ಮತ್ತು ರಾಜಕೀಯ ಹೊಂದಾಣಿಕೆ ಹಾಗೂ ಸಹಕಾರವು ಅಡಗಿದೆ. ಜಾತಿ- ಪಂಥ, ಮೇಲು-ಕೀಳು, ಪ್ರಾದೇಶಿಕ ತಾರತಮ್ಯ ಎಲ್ಲವನ್ನು ಬದಿಗಿಟ್ಟು ಎಲ್ಲರು ಧನಾತ್ಮಕತೆಯಿಂದ ಮುಂದಡಿಯನ್ನು ಇಡುತ್ತಿದ್ದಾರೆ. ಮುಂದೊಂದು ದಿನ ಅವರು ನಮಗೆಲ್ಲರಿಗೂ ಮಾದರಿ ಸಮುದಾಯವನ್ನು ಕಟ್ಟಿ ತೋರಿಸಬಲ್ಲರು. ವಿಶ್ವಮಾನವತೆ ಮತ್ತು ಒಂದಾಗಿ ಬಾಳುವ ಜೀವನ ನೀತಿಯನ್ನು ಎತ್ತಿ ಹಿಡಿಯಬಲ್ಲರು.

ಗುಜರಾತಿನ ವ್ಯವಸಾಯದಲ್ಲಿ ಸಾಮಾನ್ಯವಾಗಿ ಬೆಳೆಯುವ ಬೆಳೆಗಳು ಎಂದರೆ, ಕಡಲೆ, ಶೇಂಗ, ಗೋವಿನ ಜೋಳ, ಸಜ್ಜೆ, ಹತ್ತಿ ಮತ್ತು ಔಡಲ. ವಾಣಿಜ್ಯ ಬೆಳೆಗಳಾದ ಕಬ್ಬು, ಗೋಧಿ, ಭತ್ತದ ಬೆಳೆಗಳು ಅಲ್ಲಿ ತುಂಬಾ ವಿರಳ. ಏನೇ ಆದರೂ, ತಾವು  ಬೆಳೆದ ಬೆಳೆಗಳಿಗೆ ಭಕ್ತಿ ಭಾವದಿಂದ ಕುಯ್ಯಲು ಮಾಡಿ ಸಂತೋಷದಾಯಕವಾಗಿರುತ್ತಾರೆ. ಹೊಲ ಗದ್ದೆಗಳಲ್ಲಿ ಅಷ್ಟಾಗಿ ಭೋರ್ ವೆಲ್, ಬಾವಿಗಳು ಇಲ್ಲ. ಮಳೆ ಪ್ರಮಾಣವು ಗುಜರಾತಿನಲ್ಲಿ ತುಂಬಾ ಕಡಿಮೆ. ನೀರಾವರಿ ವ್ಯವಸಾಯ ಹೆಚ್ಚಾಗಿ ನಂಬಿಕೊಂಡಿದ್ದು ಕಾಲುವೆಯ ನೀರನ್ನು. ಭೌಗೋಳಿಕವಾಗಿ ಅಲ್ಲಿನ ಭೂಮಿ ಫಲವತ್ತೆತೆಯಿಂದ ಕೂಡಿದ್ದರೂ ಅಂತರ್ಜಲ ನಿಕ್ಷೇಪ ಅಷ್ಟಾಗಿ ಚೆನ್ನಾಗಿರದ್ದರಿಂದ ವ್ಯವಸಾಯಿಗರು ತುಂಬ ಕಷ್ಟದ ಜೊತೆಗೆ ತಮ್ಮ ಜೀವನವನ್ನು ನಡೆಸುತ್ತಾರೆ.

ಅಲ್ಲಿನ ಹೊಲಗದ್ದೆಗಳಲ್ಲಿ ನಿರ್ಮಿಸುವ ಚಿಕ್ಕ-ಚಿಕ್ಕ ಗುಡಿಸಲುಗಳು ತುಂಬಾ ಚೆಂದದ ವಿನ್ಯಾಸದಿಂದ ಮನಸ್ಸನ್ನು ಸೆಳೆಯುತ್ತವೆ. ತುಂಬು ಕಟ್ಟಿಗೆಯಿಂದ ಗುಡಿಸಲಿನ ಸೂರು ಹಾಕಿ ಮುಂದೊಂದು ಜಾರು ಛಾವಣಿಯನ್ನು ಹಾಕಿರುತ್ತಾರೆ. ಅಂತಹ ಚೆಂದದ ಗುಡಿಸಲುಗಳಲ್ಲಿ ಒಂದೊಳ್ಳೆ ಬೆಳದಿಂಗಳೂಟ ಮಾಡಿದರೆ ಮನಸ್ಸು ಪ್ರಪುಲ್ಲಗೊಳ್ಳುತ್ತದೆ. ಅಂತಹ ಒಂದು ಅದೃಷ್ಟದೂಟವನ್ನು ನಾನು ಅಲ್ಲಿದ್ದಾಗ ಸವಿದಿದ್ದೆ. ಒಟ್ಟಾರೆ ಗುಜರಾತಿನ ಅಚ್ಚ ನಾಟಿ ವ್ಯವಸಾಯ ಪದ್ಧತಿ ನನಗೆ ಇಷ್ಟವಾಗಿದ್ದು ಮಾತ್ರ ಸಂತಸವನ್ನು ನೀಡಿ, ನಮ್ಮ ಕರ್ಣಾಟಕದಲ್ಲಿದ್ದ  ಹತ್ತು ಹದಿನೈದು  ವರ್ಷಗಳ ಹಿಂದಿನ ವ್ಯವಸಾಯ ಪದ್ಧತಿ ಮತ್ತು ಕೃಷಿಕರ ಒಕ್ಕಲುತನವನ್ನು ಅವಲೋಕಿಸುವಂತೆ ಮಾಡಿತು.

 ಏನೇ ಆಗಲಿ, ಕೃಷಿ ಪ್ರಧಾನ ರಾಷ್ಟ್ರವಾದ ನಮ್ಮ ದೇಶದ  ಕೃಷಿಕ ಸಮುದಾಯಕ್ಕೆ ನಮನಗಳು. ರೈತ ಯಾವಾಗಲು ಸಂತಸದಿಂದಿರಲಿ. ಅನ್ನದಾತನ ಬದುಕು ನೆಮ್ಮದಿಯಿಂದ ಕೂಡಿರಲಿ. ದೇಶದ ಬೆನ್ನೆಲುಬು ಯಾವಗಲು ಸದೃಢವಾಗಿರಲಿ !

-ಸಿ.ಎಸ್. ಮಠಪತಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago

ಸಣ್ಣ ಸಣ್ಣ ರೈತರು ನೊಗಕ್ಕೆ ತಾವೇ ಹೆಗಲು ಕೊಡುತ್ತಾರೆ ಎಂದು ಓದಿದಾಗ ತುಂಬಾ ನೋವಾಯಿತು. ಇಷ್ಟೆಲ್ಲಾ ಕಷ್ಟ ಪಡುವ ರೈತನಿಗೆ ನಾವು ಕೊಡುವ ಗೌರವ…?
ಉತ್ತರ ಭಾರತಕ್ಕೆ ಹೋಗುವ ನಮಗೆಲ್ಲಾ ಊಟ ತಿಂಡಿಯ ತೊಂದರೆ ಇದ್ದೇ ಇರುತ್ತದೆ. ಬೆಳಿಗ್ಗೆ ಎದ್ದು ಜಿಲೇಬಿ ತಿನ್ನುವ ಅವರನ್ನು ನೋಡಿದಾಗ ಆಶ್ಚರ್ಯ ಆಗುತ್ತದೆ.(ಇಂದೋರ್ ನಲ್ಲಿ)
ನಿಮ್ಮ ಬಾಲ್ಯದ ಸವಿ ನೆನಪುಗಳನ್ನು ಓದುವಾಗ ತುಂಬಾ ಸಂತೋಷವಾಯಿತು. ಅಂತಹ ಸುಂದರ ಅವಕಾಶಗಳು ನನಗಿರಲಿಲ್ಲ. ಲೇಖನ ಚೆನ್ನಾಗಿ ಮೂಡಿ ಬಂದಿದೆ.

ದಿವ್ಯ ಆಂಜನಪ್ಪ

ಲೇಖನ ತುಂಬ ಚೆನ್ನಾಗಿದೆ ಸರ್. ನಿಮ್ಮ ಅನುಭವದ ಜೊತೆಗೆ  ಗುಜರಾತಿನ ಚಿತ್ರಗಳನ್ನೂ ಹಂಚಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸಿತು ಸರ್. ಧನ್ಯವಾದಗಳು.

M.S.Krishna Murthy
M.S.Krishna Murthy
11 years ago

ನನ್ನೊಳಗಿನ ಗುಜರಾತವನ್ನು ನಮ್ಮೊಳಗಿನ ಗುಜರಾತ ಮಾಡುತ್ತಿದ್ದೀರಿ ನಿಮ್ಮ ಸುದೀರ್ಗ ಲೇಖನಗಳಿಂದ. ತುಂಬಾ ಸೆಳೆಯುತ್ತದೆ..ಈ ಎಲ್ಲಾ ಬಾಗಗಳನ್ನು ಸೇರಿಸಿ ಪುಸ್ತಕವನ್ನಾಗಿಸಿ. ಶುಭವಾಗಲಿ

Rukmini Nagannavar
11 years ago

ನಾನು ಮೊದಲಭಾಗ ಓದಿದಾಗ ೩ ಕಂತುಗಳಲ್ಲಿ ಮುಗಿಬಹುದೇನೊ ಅಂದುಕೊಂಡಿದ್ದೆ.. ಇಲ್ಲ, ಸಾಹಿತ್ಯ ಅನ್ನೋದೇ ಹೀಗೆ ನೋಡಿ ಹಿಗ್ಗಿಸಿದಷ್ಟು ಹಿಗ್ಗುತ್ತದೆ, ಕುಗ್ಗಿಸಿದಷ್ಟು ಕುಗ್ಗುತ್ತದೆ. ಹಿತವಾದ ಲೇಖನ. ಗುಜರಾತಿ ಅಭ್ಯರ್ತಿಗಳು ನನ್ನೊಟ್ಟಿಗೆ ಓದುತ್ತಿರುವುದರಿಂದ ನಂಗೆ ಗುಜರಾತ್ ಬಗ್ಗೆ ಚೆನ್ನಾಗಿ ಗೊತ್ತುಂಟು. ಆದರೆ ಹಳ್ಳಿಯ ಜೀವನ ಶೈಲಿ, ರೈತಾಪಿ ಚಿತ್ರಣ ಕೇವಲ ನಿಮ್ಮ ಲೇಖನದಿಂದ ತಿಳಿದುಕೊಂಡೆ. ಗುಡಿಸಲು, ಬೆಳದಿಂಗಳೂಟ ಅಬ್ಬಬ್ಬ..!! ನಮಗೂ ಬೇಕೇ ಬೇಕು ಅನಿಸುತ್ತೆ. ಗುಜರಾತಿನ ಜೊತೆಗೆ ನಮ್ಮನ್ನು ಒಂದು ಒಳ್ಳೆಯ ಸಾಹಿತ್ಯದೌತನಕ್ಕೆ ಕರೆದುಕೊಂಡು ಹೋಗುತ್ತಿರುವಿರಿ.  ಧನ್ಯವಾದಗಳು ಗುರುಗಳೆ… 🙂

Rukmini Nagannavar
11 years ago

ಹಾ, ತಿಂಡಿ ಹಿಡಿಸೋದು ಅಂದ್ರೆ, ಖಾಕ್ರಾ ಮತ್ತೆ ತೆಪ್ಲಾ. ಸಮ್ ಟೈಮ್ಸ್ ದಾಲ್ ಕಿಚಡಿ ನಡಿಯುತ್ತೆ. ಆದ್ರೆ ಕಮನ್, ಹಾಂಡವಾ, ಎಪ್ಪ, ದಪ್ಪಣೆ ರೊಟ್ಟಿ ಅಗಿಯೋಕೂ ಕಷ್ಟ, ಪ್ರತಿ ಡಿಶ್ ನಲ್ಲಿ ಕೊತ್ತಂಬರಿ ಕಾಳು, ಮತ್ತೆ ಬಡೆಸೋಪ್ ಉಪಯೋಗಿಸ್ತಾರೆ. ಅದೆಲ್ಲ ತಿನ್ನಕ್ಕಾಗಲ್ಲ ನೋಡಿ. ಅದು ಅವರವರ ರೂಢಿ ನಾವ್ ಎನ್ ಮಾಡಕಾಗಲ್ಲ ಬೀಡಿ.  ..:)

Rukmini Nagannavar
11 years ago

ಖಾನಾ ನಥಿ ಗಮ್ತು ಪರ್ ಮನ್ನೆ ಗುಜರಾತ್ ಲ್ಯಾಂಗ್ವೇಜ್ ಮಾ ಸರಸ್ ಪ್ರೇಮ್ ಛೇ.. .. 🙂

ಸಿ. ಎಸ್. ಮಠಪತಿ
ಸಿ. ಎಸ್. ಮಠಪತಿ
11 years ago

ಲೇಖನವನ್ನು ಮೆಚ್ಚಿ ನುಡಿ ಹಂಚಿಕೊಂಡ ಎಲ್ಲ ಸಹೃದಯರಿಗೂ ವಂದನೆಗಳು………….

7
0
Would love your thoughts, please comment.x
()
x